Tag: Karnataka govt

  • ಮುಡಾ ಹಗರಣ: ತನಿಖೆಗೆ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ!

    ಮುಡಾ ಹಗರಣ: ತನಿಖೆಗೆ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶ!

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ (MUDA Scam) ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ (Inquiry Commission) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನಾ ದಿನವೇ ನಿವೃತ್ತ ನ್ಯಾಯಾಧೀಶರಾದ ಪಿ.ಎನ್‌ ದೇಸಾಯಿ (PN Desai) ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ ಸರ್ಕಾರ ಆದೇಶಿಸಿದೆ. ಅಲ್ಲದೇ ಸಂಪೂರ್ಣಾ ತನಿಖಾ ವರದಿಯನ್ನು 6 ತಿಂಗಳ ಒಳಗೆ ಸಲ್ಲಿಸುವಂತೆ ವಿಚಾರಣಾ ಆಯೋಗಕ್ಕೆ ಸರ್ಕಾರ (Karnataka Govt) ಗಡುವು ನೀಡಿದೆ.

    ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೇ, ಈ ಕುರಿತು ದಿನ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission Of Inquiry Act, 1952ರ (ವಿಚಾರಣಾ ಆಯೋಗ ಕಾಯ್ದೆ 1952) ನಿಮಯು 3ರ ಉಪನಿಯಮ (1) ಅನ್ವಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗ ರಚಿಸಲು ಸರ್ಕಾರ ತೀರ್ಮಾನಿಸಿದೆ.

    ಈ ಹಿನ್ನೆಲೆಯಲ್ಲಿ ಆರೋಪಗಳ ಬಗ್ಗೆ, ವಿಚಾರಣೆಯನ್ನು ನಡೆಸಲು Commission Of Inquiry Act, 1952ರ ನಿಮಯು 3ರ ಉಪನಿಯಮ (1) ಅನ್ವಯ ಪ್ರದತ್ತವಾದ ಅಧಿಕಾರದನ್ವಯ ಸರ್ಕಾರವು ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ, ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ.

    ಸದರಿ ವಿಚಾರಣಾ ಆಯೋಗವು Commission Of Inquiry Act, 1952 ಹಾಗೂ Code Of Civil Procedure (ಸಿವಿಲ್ ಪ್ರೊಸೀಜರ್ ಕೋಡ್ 1952) ನಲ್ಲಿನ ಅವಕಾಶದ ಅಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರ ಹೊಂದಿರುತ್ತದೆ. ತನಿಖೆಯನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕೆಂದು ಸರ್ಕಾರವು ಅಪೇಕ್ಷಿಸುತ್ತದೆ. ವಿಚಾರಣಾ ಆಯೋಗದ ಉಲ್ಲೇಖ ನಿಯಮಗಳನ್ನು ಪ್ರತ್ಯೇಕವಾಗಿ ಹೊರಡಿಲಾಗುತ್ತದೆ.

    ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ / ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸತಕ್ಕದ್ದು. ವಿಚಾರಣಾ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ ದಾಖಲಾತಿಗಳು/ ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು ಎಂದು ಆದೇಶ ಪ್ರತಿಯಲ್ಲಿ ತಿಳಿಸಿದೆ.

  • ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ: ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗಕ್ಕೆ ಸಜ್ಜು!

    ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ: ಸದನದಲ್ಲಿ ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಪ್ರಯೋಗಕ್ಕೆ ಸಜ್ಜು!

    – ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ಆಗಿದೆ ಎಂದ ಹೆಚ್‌ಡಿಕೆ
    – ಕಾಂಗ್ರೆಸ್ ಭ್ರಷ್ಟಾಚಾರ ಬಟಾಬಯಲು ಮಾಡುತ್ತೇವೆಂದ ಅಶೋಕ್

    ಬೆಂಗಳೂರು: ಇದೇ ಜು.15 ರಿಂದ ವಿಧಾನ ಮಂಡಲ ಅಧಿವೇಶನ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿಂದು ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಸಲಾಯಿತು.

    ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ, ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ, ಸುರೇಶ್ ಬಾಬು, ಶಾರದಾ ಪೂರ್ಯಾ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಕೆ.ಎಸ್ ನವೀನ್ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಈ ಸಂದರ್ಭದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಜಂಟಿ ಹೋರಾಟದ ಬಗ್ಗೆ ಹಾಗೂ ಹೋರಾಟಕ್ಕೆ ಸಿದ್ದಪಡಿಸಬೇಕಾದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್, ಅಧಿವೇಶನದಲ್ಲಿ ಮೊದಲ ಬಾರಿಗೆ ಎನ್‌ಡಿಎ ಆಗಿ ಜಂಟಿಯಾಗಿ ಸರ್ಕಾರದ ವಿರುದ್ಧ ಬಿಸಿ ಮುಟ್ಟುವ ಕೆಲಸ ಮಾಡಬೇಕಿದೆ. ಎಲ್ಲಾ ವಿಚಾರಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಶಕ್ತಿ ಸಿಕ್ಕಿದೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿರುವುದರಿಂದ ಇದು ದೇಶದ ವಿಚಾರವಾಗಿದೆ. ಸಿಎಂ 10 ವರ್ಷ ನಾನು ಜಮೀನೇ ನೋಡಿಲ್ಲ ಅನ್ನೋದು ಸಂಶಯಾಸ್ಪದವಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರ ಬಟಾಬಯಲು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಇನ್ನೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ಆಗಿದೆ. 62 ಕೋಟಿ ರೂ. ಪರಿಹಾರ ಯಾವ ಆಧಾರದಲ್ಲಿ ಕೇಳಿದರು? ಎಷ್ಟು ಜನ ಭೂಮಿ ಕಳೆದುಕೊಂಡವರಿಗೆ ಇವರ ಸರ್ಕಾರದಲ್ಲಿ ಪರಿಹಾರ ಕೊಟ್ಟಿದ್ದಾರೆ? ಅರ್ಕಾವತಿ ರೀಡೂ ಮಾಡಿದ ಆಧಾರದಲ್ಲಿ 62 ಕೋಟಿ ರೂ. ಕೇಳಿರಬೇಕು ಅಂತಾ ನನ್ನ ಭಾವನೆ. ಇತರ ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲು ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಸರ್ಕಾರದ ನಡವಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕುಸಿತ ಅಂತಾ ಅರ್ಥಿಕ ತಜ್ಞ ರಾಯರೆಡ್ಡಿ ಹೇಳಿದ್ದಾರೆ. ಅಶೋಕ್ ನೇತೃತ್ವದಲ್ಲಿ ನಮ್ಮ ಎಲ್ಲಾ ಶಾಸಕರು ಚರ್ಚೆ ಮಾಡಿದ್ದೇವೆ. ಎರಡೂ ಸದನದಲ್ಲಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ.

  • MUDA Scam | ಸರ್ಕಾರದ ವಿರುದ್ಧ ಸಮರ ಸಾರಿದ ವಿಜಯೇಂದ್ರ – ಶುಕ್ರವಾರ ಮೈಸೂರಲ್ಲಿ ಬೃಹತ್‌ ಪ್ರತಿಭಟನೆಗೆ ಕರೆ!

    MUDA Scam | ಸರ್ಕಾರದ ವಿರುದ್ಧ ಸಮರ ಸಾರಿದ ವಿಜಯೇಂದ್ರ – ಶುಕ್ರವಾರ ಮೈಸೂರಲ್ಲಿ ಬೃಹತ್‌ ಪ್ರತಿಭಟನೆಗೆ ಕರೆ!

    – ಬಡ ಹೆಣ್ಮಕ್ಕಳಿಗೆ 2,000 ಕೊಟ್ಟು, ತಮ್ಮ ಪತ್ನಿಗೆ 2 ಕೋಟಿಗೂ ಅಧಿಕ ಮೌಲ್ಯದ ನಿವೇಶನ ಕೊಟ್ಟಿದ್ದಾರೆ
    – ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು – ವಿಜಯೇಂದ್ರ ಆಗ್ರಹ

    ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದ ಅಕ್ರಮವನ್ನು ಖಂಡಿಸಿ ಬಿಜೆಪಿ ವತಿಯಿಂದ ಇದೇ ಜು.12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಬೆಂಗಳೂರು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನಬಂದಂತೆ ನಿವೇಶನ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಹಗರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಜು.12ರಂದು ನಾನು, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಬಿಜೆಪಿ ಶಾಸಕರು, ಕಾರ್ಯಕರ್ತರು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

    ಮುಖ್ಯಮಂತ್ರಿಗಳು ಬಡವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಬಡವರಿಗೆ ನಿವೇಶನ ಹಂಚಬೇಕು. ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಸಿಎಂ, ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‍ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ. ಈ ಬಾರಿ ಹಗರಣದ ಸಮಗ್ರ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಇದನ್ನೂ ಓದಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು: ಸುಪ್ರೀಂ ಮಹತ್ವದ ತೀರ್ಪು

    ಶಾಸಕರು, ಸಿಎಂ ಪರಮಾಪ್ತರು ಬುಧವಾರ ಪ್ರೆಸ್‌ಮೀಟ್‌ ಮಾಡಿದ್ದಾರೆ. 1992ರಲ್ಲಿ ಭೂ ವಶಕ್ಕೆ ಪಡೆಯುವ ಕೆಲಸ ಶುರುವಾಗಿದೆ. 2004ರಲ್ಲಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿ ಮಾಡಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ಖರೀದಿ ಮಾಡಿದ್ದು ಹೇಗೆ? 2009 – 10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಸಹ ಈ ಜಾಗವು ಮೂಡಾ ಆರ್‌ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಕನ್ವರ್ಷನ್ ಆಗಿತ್ತು. ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ. ಇದು ಕೂಡ ತಪ್ಪು ಮಾಹಿತಿ ಎಂದು ವಿಜಯೇಂದ್ರ ಮಾಹಿತಿ ನೀಡಿದರು.

    2 ನಿವೇಶನಕ್ಕೆ ಅರ್ಹತೆ – 14 ನಿವೇಶನ ಹಂಚಿಕೆ:
    2022ರ ಜನವರಿ 12ರಂದು ಕ್ರಯಪತ್ರ ಆಗಿದ್ದು, ಇದರಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಮೂಡಾ ಪ್ರೋತ್ಸಾಹದಾಯಕ ಯೋಜನೆಯಡಿಯಲ್ಲಿ ನಿಯಮಗಳು 1991ರ ಮೇರೆಗೆ ಎಂದು ಉಲ್ಲೇಖಿಸಿ 14 ಸೈಟ್ ಕೊಟ್ಟಿದ್ದಾರೆ. ಇದು ಕ್ರಯಪತ್ರದಲ್ಲಿ ಉಲ್ಲೇಖವಾಗಿದೆ. ಆದರೆ, 1991ರ ಕಾನೂನು ಪ್ರಕಾರ ಅವರಿಗೆ 1 ಎಕರೆ ಮೀರಿದ ಜಮೀನಾದರೆ 40-60 ಒಂದೇ ನಿವೇಶನ ಕೊಡಬೇಕು. 3ರಿಂದ 4 ಎಕರೆ ಆಗಿದ್ದರೆ 4,800 ಅಡಿಯ ನಿವೇಶನ (40-60ರ 2 ನಿವೇಶನ) ಕೊಡಬೇಕಿತ್ತು. ಮುಖ್ಯಮಂತ್ರಿಯವರ ಧರ್ಮಪತ್ನಿ ಪಾರ್ವತಮ್ಮ ಅವರಿಗೆ 2 ನಿವೇಶನ ಮಾತ್ರ ಕೊಡಬೇಕಿತ್ತು. 2 ನಿವೇಶನದ ಬದಲು 14 ನಿವೇಶನ ಕೊಟ್ಟಿದ್ದು, ಇದು ಸಂಪೂರ್ಣ ಕಾನೂನುಬಾಹಿರ ಎಂದು ವಿಜಯೇಂದ್ರ ಅವರು ವಿಜಯೇಂದ್ರ ಆಕ್ಷೇಪಿಸಿದರು.

    ಮೈಸೂರಿನದ್ದು ಲ್ಯಾಂಡ್ ಸ್ಕ್ಯಾಮ್:
    ಮುಡಾ ಪ್ರಾಧಿಕಾರದ ಭೂಮಿ ಸಂಬಂಧ ದೊಡ್ಡ ಹಗರಣ ಅಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಅನೇಕ ತಪ್ಪು ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಮುಖವಾಡ ಕಳಚಿಬಿದ್ದಿದೆ. ಹೇಗಾದರೂ ಬೆಲೆಬಾಳುವ ನಿವೇಶನ ಕಬಳಿಸಬೇಕು ಎಂದುಕೊಂಡು ನಿಯಮ ಗಾಳಿಗೆ ತೂರಿ ಅಕ್ರಮ ನಡೆಸಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಜನತೆಗೆ ಉತ್ತರಿಸಬೇಕು. ಈ ಹಗರಣಕ್ಕೆ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

    ಮಹದೇವಪ್ಪನವರೇ ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಎಂದ ಸಿಎಂ, ಬಡ ಹೆಣ್ಮಕ್ಕಳಿಗೆ 2 ಸಾವಿರ ಕೊಟ್ಟರೆ, ತಮ್ಮ ಪತ್ನಿಗೆ 2 ಕೋಟಿಗೂ ಹೆಚ್ಚು ಮೌಲ್ಯದ 14 ನಿವೇಶನಗಳನ್ನು ಪಡೆದಿದ್ದಾರೆ. 63-64 ಕೋಟಿಗೂ ಹೆಚ್ಚು ಬೆಲೆಯ ನಿವೇಶನ ಪಡೆದುದನ್ನು ರಾಜ್ಯದ ಜನರೂ ಪ್ರಶ್ನೆ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: ಮಳೆಯಿಂದ ಜೀವಕಳೆ, ಕಬಿನಿ ಡ್ಯಾಂ ಭರ್ತಿಗೆ ಎರಡೇ ಅಡಿ ಬಾಕಿ – ಯಾವ್ಯಾವ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

    ಅವ್ಯವಹರಿಸಿ ಪರಿಹಾರ ಕೇಳಿದ ಮೊದಲ ಸಿಎಂ ಇವರೇ:
    ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ, ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಇವರು. ಮೈಸೂರಿನ ಕೆಸರೇ ಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ ತಮ್ಮ ಪತ್ನಿಗೆ 14 ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ಅದರ ಬೆಲೆ 62 ಕೋಟಿ ರೂ. ಬರಬೇಕಿದ್ದು, 18 ಕೋಟಿಯ ನಿವೇಶನ ಪಡೆದುದ್ದಾಗಿ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿಗಳು 2013ರ ಚುನಾವಣಾ ಅಫಿಡವಿಟ್‍ನಲ್ಲಿ 3.16 ಎಕರೆ ಭೂಮಿಯನ್ನು ಉಲ್ಲೇಖಿಸಿಲ್ಲ. ಇದು ಚುನಾವಣೆ ನಿಯಮಗಳ ಉಲ್ಲಂಘನೆ. ಇದೆಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡುವ ಕುರಿತು ನಿರ್ಧರಿಸುತ್ತೇವೆ ಎಂದು ಬಿ.ವೈ ವಿಜಯೇಂದ್ರ ಅವರು ತಿಳಿಸಿದರು.

    18 ಕೋಟಿ ರೂ. ನಿವೇಶನ ಲಭಿಸಿದೆ. ಆದರೆ, 62 ಕೋಟಿ ರೂ. ಮೌಲ್ಯದ ನಿವೇಶನಗಳು ಸಿಗಬೇಕಿತ್ತು ಎಂದು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಮೂಡಾ ಹಗರಣದಲ್ಲಿ 2 ಪ್ರಕರಣಗಳಿವೆ. ಸಿಎಂ ಧರ್ಮಪತ್ನಿಗೆ ಕೊಟ್ಟ 14 ನಿವೇಶನಗಳದ್ದು ಒಂದು ಪ್ರಕರಣ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಓಡೋಡಿ ತರಾತುರಿಯಲ್ಲಿ ಮೈಸೂರಿಗೆ ಹೋಗಿ ಮುಡಾ ಅಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಮಾಹಿತಿ ಪಡೆದು ಎಲ್ಲ ಅಧಿಕಾರಿಗಳನ್ನೂ ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು.

    ಇದು ಅತಿದೊಡ್ಡ ಭ್ರಷ್ಟಾಚಾರ ಹಗರಣ:
    5 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಹಗರಣದಲ್ಲಿ ಭಾಗಿಯಾದವರನ್ನು ಶಿಕ್ಷಿಸುವುದನ್ನು ತಪ್ಪಿಸಲು ಹಾಗೂ ರಕ್ಷಿಸಲು ಭೈರತಿ ಸುರೇಶ್ ಮುಂದಾಗಿದ್ದಾರೆ. ಮೂಡಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ವರದಿ ಕೊಟ್ಟ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಭೈರತಿ ಸುರೇಶ್ ಅವರು ಈ ಹಗರಣ ಮುಚ್ಚಿ ಹಾಕಲು ಎಲ್ಲ ಕಡತಗಳನ್ನು ಬೆಂಗಳೂರಿಗೆ ಒಯ್ದಿದ್ದಾರೆ. ಹಗರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಸಿಎಂ ಕೂಡ ಮೈಸೂರು ಜಿಲ್ಲೆಯವರು. ಅತಿ ದೊಡ್ಡ ಭ್ರಷ್ಟಾಚಾರ ಹಗರಣವಿದು. ಎಲ್ಲ ಕಡತ ಮುಚ್ಚಿಡಲು ಭೈರತಿ ಸುರೇಶ್ ಮುಂದಾಗಿದ್ದಾರೆ ಎಂದ ಅವರು, ದೇವನೂರು ಜಮೀನಿನ ಬೆಲೆ ಬಗ್ಗೆ ಸಿಎಂ ಮಾತನಾಡುತ್ತಾರೆ. ಗೈಡ್‍ಲೈನ್ ಮೌಲ್ಯ 1,300 ರೂ. ಇದ್ದರೆ 9 ಸಾವಿರ ಮಾರುಕಟ್ಟೆ ಮೌಲ್ಯ ಇದೆ. 2 ಸೈಟಿಗೆ ಮಾತ್ರ ಅವರು ಅರ್ಹರಾಗಿದ್ದರು ಎಂದು ಪುನರುಚ್ಚರಿಸಿದರು.

    ಮೂಡಾ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳ ವರದಿಯ ಬಳಿಕವೂ 15-6-2024ರಲ್ಲಿ ಸುಮಾರು 42 ಸೈಟ್‍ಗಳನ್ನು ಒಬ್ಬರಿಗೆ ಬದಲಿಯಾಗಿ ಕೊಟ್ಟಿದ್ದಾರೆ. ಇಂಥ ಸಾವಿರಾರು ನಿವೇಶನಗಳನ್ನು ಈ ಸರ್ಕಾರ ಕಾನೂನುಬಾಹಿರವಾಗಿ ಕೊಟ್ಟಿದೆ. ಬಡವರು, ದಲಿತರು, ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ನಿವೇಶನಗಳನ್ನು ತಮಗೆ ಬೇಕಾದಂತೆ ಹಂಚಿದ್ದಾರೆ. ಸಿಬಿಐ ತನಿಖೆ ಮಾತ್ರವಲ್ಲದೇ ಮುಖ್ಯಮಂತ್ರಿಗಳು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರಲ್ಲದೇ ಸದನದಲ್ಲೂ ಈ ವಿಚಾರ ಕೈಗೆತ್ತಿಕೊಳ್ಳುತ್ತೇವೆ. ಸದನದ ಹೊರಗೆ ಕೂಡ ಈ ಸಂಬಂಧ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

    ವಾಲ್ಮೀಕಿ ನಿಗಮದ ಹಗರಣ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರಿಗೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ. ದದ್ದಲ್, ನಾಗೇಂದ್ರರನ್ನು ಎಸ್‍ಐಟಿ ತನಿಖೆಗೆ ಕರೆಯಲು ಬಿಜೆಪಿ ಪ್ರತಿಭಟನೆಯೇ ಕಾರಣ. ಆದರೂ, ಇದು ತಿಪ್ಪೆ ಸಾರಿಸುವ ಕೆಲಸ. ಇಡಿ ಇವತ್ತು ದಾಳಿ ಮಾಡಿದ್ದನ್ನು ನಾವು ಸ್ವಾಗತಿಸುತ್ತೇವೆ. ಎಸ್‍ಐಟಿ ನಿಧಾನವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರವು ಸಚಿವರು, ಶಾಸಕರನ್ನು ರಕ್ಷಿಸಲು ಮುಂದಾಗಿತ್ತು ಎಂದು ದೂರಿದರು.

    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪತ್ರದ ಬಳಿಕ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಒಂದೆಡೆ ಎಸ್‍ಐಟಿ ತನಿಖೆ ನಡೆದರೆ, ಇಡಿ ದಾಳಿಯೂ ಆಗಿದೆ. ಇತಿಹಾಸದಲ್ಲಿ ಕಂಡು ಕೇಳರಿಯದ ಹಗರಣ ಇದಾಗಿದೆ. ದಲಿತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿ, ಹೊರರಾಜ್ಯಕ್ಕೆ ವರ್ಗಾವಣೆ ಮಾಡಿ, ಚುನಾವಣೆಗಳಿಗೆ ಹಣ ದುರ್ಬಳಕೆ ಮಾಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು. ಇದನ್ನೂ ಓದಿ: ಆ್ಯಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಊರ್ವಶಿ ರೌಟೇಲಾಗೆ ಏಟು- ಆಸ್ಪತ್ರೆಗೆ ದಾಖಲು 

  • Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?

    Karnataka Rain Alert: ಬೆಂಗ್ಳೂರಲ್ಲಿ ಬಿಟ್ಟೂಬಿಡದ ಮಳೆ – ಬೋಟ್‌ಗಳಲ್ಲಿ ಜನ, ಸಾಕುಪ್ರಾಣಿಗಳ ರಕ್ಷಣೆ; ಎಲ್ಲೆಲ್ಲಿ ಏನಾಯ್ತು?

    ಬೆಂಗಳೂರು: ಜುಲೈ ಮೊದಲ ವಾರದಲ್ಲೇ ರಾಜ್ಯದಲ್ಲಿ ಭರ್ಜರಿ ಮುಂಗಾರು ಮಳೆಯ (Mansoon) ಆರ್ಭಟ ಜೋರಾಗಿದೆ. ಸಾಮಾನ್ಯವಾಗಿ 58 ಮಿಲಿಮೀಟರ್‌ ಮಲೆಯಾಗುತ್ತಿದ್ದ ಜುಲೈ ಮೊದಲವಾರದಲ್ಲಿ ಈ ಬಾರಿ 78 ಮಿಲಿಮೀಟರ್‌ ಮಳೆಯಾಗಿದೆ (Karnaraka Rains). ಇದು ಹಿಂದಿನ ಪ್ರಮಾಣಕ್ಕಿಂತ ಶೇ.25ಕ್ಕೂ ಹೆಚ್ಚಾಗಿದೆ.

    ಅದರಲ್ಲೂ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದಿದೆ. ಕಳೆದ ಭಾನುವಾರ ಅಂತೂ, ರಾಜ್ಯದ ಕರಾವಳಿಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡದಲ್ಲಿ 264 ಮಿಲಿಮೀಟರ್, ಉಡುಪಿಯಲ್ಲಿ 210 ಮಿಲಿಮೀಟರ್, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ 168 ಮಿಲಿಮೀಟರ್ ಮಳೆಯಾಗಿದೆ. ಪರಿಣಾಮ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ನದಿ ತೊರೆಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಸಾಕಷ್ಟು ಅವಾಂತರಗಳು ಉಂಟಾಗಿವೆ. ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಪ್ರಕಟಿಸಲಾಗಿದ್ದು, ಹಲವು ತಾಲೂಕುಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

    ಎಲ್ಲೆಲ್ಲಿ ಏನಾಯ್ತು?
    * ಉಡುಪಿ ನಗರ ಜಲಾವೃತ: ಉಡುಪಿ ನಗರ ಜಲಾವೃತವಾಗಿದೆ. ಇಂದ್ರಾಣಿ ತೀರ್ಥ ನದಿ ಹರಿಯುವಲ್ಲೆಲ್ಲಾ ಜನಜೀವನ ಅಸ್ತವ್ಯಸ್ತವಾಗಿದೆ. ಮಗು, ವೃದ್ಧೆ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕೃಷ್ಣ ಮಠ ಪಾರ್ಕಿಂಗ್ ಏರಿಯಾ ಜಲಾವೃತವಾಗಿದೆ.
    * ರಸ್ತೆಗೆ ನುಗ್ಗಿದ ಮಳೆ ನೀರು: ಉಡುಪಿಯ ಮೂಡುಬೆಟ್ಟು-ಕೊಡವೂರು ರಸ್ತೆ ಜಲಾವೃತವಾಗಿದೆ. ಭಾರೀ ಮಳೆ ನೀರಿನ ನಡುವೆ ಖಾಸಗಿ ಬಸ್ಸು ಓಡಾಟ ನಡೆಸಿದೆ.
    * ಹೊಟೆಲ್, ದೇಗುಲ ಜಲಾವೃತ: ಉಡುಪಿಯ ಕಡಿಯಾಳಿಯಲ್ಲಿರುವ ಹೋಟೆಲ್ ಒಳಗೆಲ್ಲಾ ನೀರು ನುಗ್ಗಿದೆ, ಮಠದ ಬೆಟ್ಟು ವ್ಯಾಪ್ತಿಯ ಬನ್ನಂಜೆ ಶನೇಶ್ವರ ಮಂದಿರ ಜಲಾವೃತವಾಗಿದೆ.
    * ಬೋಟ್‌ಗಳಲ್ಲಿ ರಕ್ಷಣೆ: ಉಡುಪಿಯ ಚಕ್ರತೀರ್ಥ-ಸಗ್ರಿ-ಗುಂಡಿಬೈಲು-ಕಲ್ಸಂಕ ವ್ಯಾಪ್ತಿಯಲ್ಲಿ ಪ್ರವಾಹ ಸ್ಥಿತಿಯಿದೆ. ಬೋಟ್‌ಗಳ ಮೂಲಕ ಜನರ ರಕ್ಷಣೆ ಮಾಡಲಾಗ್ತಿದೆ. ಜನರ ಜೊತೆ ನಾಯಿ ಬೆಕ್ಕುಗಳನ್ನು ಕಾಪಾಡಲಾಗ್ತಿದೆ.
    * ಮಣಿಪಾಲ ಜಲಾವೃತ: ಉಡುಪಿಯ ಮಣಿಪಾಲದ ರಸ್ತೆಗಳಲ್ಲಿ ನದಿಯಂತೆ ನೀರು ಹರಿದಿದೆ. ಹಲವು ಲೇಔಟ್‌ಗಳು ಜಲಾವೃತವಾಗಿವೆ.
    * ಗುಂಡಬಾಳ ಪ್ರವಾಹ: ಹೊನ್ನಾವರದ ಗುಂಡಬಾಳ ನದಿ ಉಕ್ಕೇರಿದ್ದು, ನದಿಪಾತ್ರದ ತೋಟ-ಮನೆಗಳಿಗೆ ನೀರು ನುಗ್ಗಿದೆ.. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗ್ತಿದ್ದು, ಗುಡ್ಡೆಬಾಳೆ ಗ್ರಾಮದ ಜನ ಆತಂಕದಲ್ಲಿದ್ದಾರೆ.
    * ರಕ್ಕಸ ಅಲೆಗಳಿಗೆ ಆಹುತಿ: ಅರಬ್ಬಿ ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಹೆಚ್ಚಿದ್ದು, ಅಂಕೋಲದ ತರಂಗಮೇಟ್ ಭಾಗದಲ್ಲಿ ಕಡಲ ಕೊರೆತದಿಂದ ತೆಂಗಿನ ಮರಗಳು ಉರುಳಿವೆ. ತಡೆಗೋಡೆ ಕೊಚ್ಚಿಹೋಗಿದೆ.
    * ಕದ್ರಾ ಡ್ಯಾಂನಿಂದ ನೀರು ರಿಲೀಸ್: ಉತ್ತರ ಕನ್ನಡದ ಕದ್ರಾ ಡ್ಯಾಂ ಬಹುತೇಕ ಭರ್ತಿಯಾಗಿದ್ದು, 4 ಕ್ರಸ್ಟ್ ಗೇಟ್‌ಗಳ ಮೂಲಕ 10,600 ಕ್ಯೂಸೆಕ್ ನೀರನ್ನು ರಿಲೀಸ್ ಮಾಡಲಾಗ್ತಿದೆ.

    ಮಲೆನಾಡಿನಲ್ಲೂ ನಿಲ್ಲದ ಮಳೆ:
    ಬರೀ ಕರಾವಳಿ ಮಾತ್ರವಲ್ಲ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಹಲವೆಡೆ ಉತ್ತಮ ಮಳೆ ಬೀಳ್ತಿದೆ. ಶಿವಮೊಗ್ಗದಲ್ಲಿ 118 ಮಿಲಿಮೀಟರ್, ವಿಜಯಪುರದಲ್ಲಿ 89 ಮಿಲಿಮೀಟರ್, ಬೆಳಗಾವಿಯಲ್ಲಿ 87.5 ಮಿಲಿಮೀಟರ್, ಚಿಕ್ಕಮಗಳೂರಿನಲ್ಲಿ 67.5 ಮಿಲಿಮೀಟರ್, ಕೊಡಗಿನಲ್ಲಿ 58.5 ಮಿಲಿಮೀಟರ್ ಮಳೆಯಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಹಾರಂಗಿ ಜಲಾಶಯದ 4 ಕ್ರಸ್ಟ್ ಗೇಟ್ ಓಪನ್ ಮಾಡಿ, 1 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.

    ಇನ್ನೂ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಕಾರಣ ನದಿಗಳ ಒಳ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲೆ ಯಕ್ಸಾಂಬಾ ಬಳಿಯ ಮುಲ್ಲಾಣಕಿ ದರ್ಗಾಗೆ ದೂದ್‌ಗಂಗಾ ನೀರು ನುಗ್ಗಿದೆ. ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ ಸೇರಿ 5 ಸೇತುವೆಗಳು ಮುಳುಗಡೆಯಾಗಿದೆ. ಹಾಸನ, ಚಿಕ್ಕಮಗಳೂರಲ್ಲಿ ಧಾರಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿವೆ. ದಾವಣಗೆರೆಯಲ್ಲೂ ಮಳೆಯಾಗಿದೆ. ಇತ್ತ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಆಗ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

  • ನಾನು ಉಸ್ತುವಾರಿ ಸಚಿವನಿದ್ದಾಗಲೇ ಮುಡಾದಲ್ಲಿ ಅವ್ಯವಹಾರ ನಡೆದಿತ್ತು – ಎಸ್‌ಟಿಎಸ್‌ ಬಾಂಬ್‌

    ನಾನು ಉಸ್ತುವಾರಿ ಸಚಿವನಿದ್ದಾಗಲೇ ಮುಡಾದಲ್ಲಿ ಅವ್ಯವಹಾರ ನಡೆದಿತ್ತು – ಎಸ್‌ಟಿಎಸ್‌ ಬಾಂಬ್‌

    – ಮುಡಾ ಸಭೆಯಲ್ಲಿ ಶಾಸಕರ ಫೈಲ್‌ಗಳೇ ಇರುತ್ತಿತ್ತು ಎಂದ ಶಾಸಕ

    ಮೈಸೂರು: ನಾನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ಅವ್ಯವಹಾರದ ವಿಚಾರ ನನ್ನ ಗಮನಕ್ಕೆ ಬಂದಿತ್ತು ಎಂದು ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಬಾಂಬ್‌ ಸಿಡಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವರಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೆಯೇ ಸೈಟ್‌ಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಯಲ್ಲಿ ಚರ್ಚೆಗೆ ತಂದು ಕೊಡಬೇಕು. ಆದ್ರೆ ಈ ನಿಯಮಗಳನ್ನು ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಅಂದಿನ ಆಯುಕ್ತರನ್ನ ಬದಲಾಯಿಸುವಂತೆ ಸರ್ಕಾರಕ್ಕೆ (Karnataka Govt) ಹೇಳಿದ್ದೆ. ಆದರೆ ಜಾತಿಯ ಪ್ರಭಾವದಿಂದ ಅವರು ಉಳಿದುಕೊಂಡರು. ಅವತ್ತಿನ ದಿನ ಸರಿಯಾದ ಕ್ರಮ ಆಗಿದ್ದರೇ ಇಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ, ಈಗಲಾದರೂ ಈ ಬಗ್ಗೆ ವ್ಯವಸ್ಥಿತವಾಗಿ ತನಿಖೆಯಾಗಲಿ ಎಂದು ಮನವಿ ಮಾಡಿದ್ದಾರೆ. ಇದನ್ನೂ  ಓದಿ: ಸಿಎಂ ಸರ್ಕಾರಕ್ಕೆ ಸೈಟ್ ವಾಪಸ್ ಕೊಡದಿದ್ದರೆ‌ ಭ್ರಷ್ಟಾಚಾರ ಚಿರಸ್ಥಾಯಿಯಾಗಿ ಉಳಿಯುತ್ತೆ: ಹೆಚ್. ವಿಶ್ವನಾಥ್

    ನನ್ನ ಹೆಸರಲ್ಲಿ ಸೈಟಿದ್ದರೆ ರಾಜೀನಾಮೆ:
    ಅನಗತ್ಯವಾಗಿ ಮುಡಾ ಹಗರಣ (MUDA Scam) ವಿಚಾರದಲ್ಲಿ ನನ್ನ ಹೆಸರು ತರಬೇಡಿ. ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಒಂದೇ ಒಂದು ನಿವೇಶನ ನನ್ನ ಹೆಸರಿನಲ್ಲಿ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಯಾವುದೇ ನಿವೇಶನ ತೆಗದುಕೊಂಡಿಲ್ಲ. ಯಾರಿಗೂ ನಾನು ಒತ್ತಡ ಹೇರಿ ನಿವೇಶನ ಕೊಡಿಸಿಲ್ಲ. ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದು ಹೇಳಿದ್ದಾರೆ. ಇದನ್ನೂ  ಓದಿ: ಮುಡಾ ಹಗರಣ – ಸರ್ಕಾರಕ್ಕೆ 1,000 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ; ಸ್ಫೋಟಕ ಮಾಹಿತಿ ಲಭ್ಯ!

    ಶಾಸಕರ ಫೈಲ್‌ಗಳೇ ಇರುತ್ತಿತ್ತು:
    ಮುಡಾದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್‌ಗಳೇ ಇರುತ್ತಿತ್ತು. ಶಾಸಕರ ಹೆಸರಿನ ಫೈಲ್‌ಗಳು ಚರ್ಚೆಯಾಗದೇ ಪಾಸ್‌ ಆಗುತ್ತಿತ್ತು. ಮುಡಾ ಸಭೆಯ ಬಹುತೇಕ ಫೈಲ್‌ಗಳು ಶಾಸಕರಿಗೇ ಸೇರಿದ್ದವು. ಅದಕ್ಕಾಗಿಯೇ ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನ ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರಗಳು ಲಾಭಿ ಮಾಡುತ್ತಾರೆ. ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ. ಆದರೆ ಇಲ್ಲಿ ಆಗುತ್ತಿರುವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಸೋಮಶೇಖರ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ  ಓದಿ: MUDA Scam| ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ, ಬರೀ ಬೊಗಳೆ ಬಿಡ್ತಾನೆ: ಹೆಚ್‌ವಿಶ್ವನಾಥ್‌

  • ಮುಡಾ ಹಗರಣ – ಸರ್ಕಾರಕ್ಕೆ 1,000 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ; ಸ್ಫೋಟಕ ಮಾಹಿತಿ ಲಭ್ಯ!

    ಮುಡಾ ಹಗರಣ – ಸರ್ಕಾರಕ್ಕೆ 1,000 ಕೋಟಿಗೂ ಹೆಚ್ಚು ಆರ್ಥಿಕ ನಷ್ಟ; ಸ್ಫೋಟಕ ಮಾಹಿತಿ ಲಭ್ಯ!

    – ಹಗರಣ ಕುರಿತು ರಾಜ್ಯಪಾಲರು, ಹೈಕೋರ್ಟ್‌ ನ್ಯಾಯಾಧೀಶರಿಗೆ ಪತ್ರ: ಬಿಜೆಪಿ ಶಾಸಕ

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. 50:50 ಅನುಪಾತದಲ್ಲಿ ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಮಾಡಲಾಗಿದೆ. ಇದರಿಂದ ಮುಡಾಗೆ 1,000 ಕೋಟಿ ರೂ.ಗಿಂತಲೂ ಹೆಚ್ಚು ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

    ಮೈಸೂರಿನ ನಿರ್ಗಮಿತ ಡಿಸಿ ಡಾ.ಕೆ.ವಿ.ರಾಜೇಂದ್ರ ಮುಡಾ ಹಗರಣದ ಬಗ್ಗೆ ಕಳೆದ ನವೆಂಬರ್‌ನಲ್ಲೇ ರಾಜ್ಯ ಸರ್ಕಾರಕ್ಕೆ ಬರೆದಿದ್ದ ಪತ್ರ ಈಗ ಬೆಳಕಿಗೆ ಬಂದಿದೆ. ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಮಾಡಿರುವುದರಿಂದ ಸರ್ಕಾರಕ್ಕೆ 1,000 ಕೋಟಿ ರೂ. ಗಿಂತಲೂ ಹೆಚ್ಚು ಆರ್ಥಿಕ ನಷ್ಟವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: T20 ಏಷ್ಯಾಕಪ್‌ ಟೂರ್ನಿಗೆ ಭಾರತ ಮಹಿಳಾ ತಂಡ ಪ್ರಕಟ – ಕನ್ನಡತಿ ಶ್ರೇಯಾಂಕಾಗೆ ಸ್ಥಾನ!

    ಪತ್ರದಲ್ಲಿ ಏನಿದೆ?
    ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಸುಧೀರ್ಘ ಪತ್ರದಲ್ಲಿ `ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವಾರು ಪ್ರಕರಣಗಳಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು, ಬದಲಿಯಾಗಿ ಅಭಿವೃದ್ಧಿ ಹೊಂದಿದ ಜಾಗದಲ್ಲಿ ಬೆಲೆಬಾಳುವ ಆಸ್ತಿಗಳನ್ನು ನೀಡಲಾಗಿದೆ. ನಿಯಮ ಬಾಹಿರವಾಗಿ 50:50 ಅನುಪಾತದಲ್ಲಿ ಕಾನೂನು ಬಾಹಿರವಾಗಿ ಸೈಟು ಹಂಚಿಕೆ ಮಾಡಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ಹಾಗೂ ಸರ್ಕಾರಕ್ಕೆ ಸುಮಾರು 1,000 ಕೋಟಿ ರೂ.ಗಿಂತಲೂ ಹೆಚ್ಚು ಆರ್ಥಿಕ ನಷ್ಟವುಂಟಾಗಿದೆ. ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಯಶಸ್ವಿನಿ ಸೋಮಶೇಖರ್, ಹಿಂದಿನ ಆಯುಕ್ತರಾದ ಡಿ.ಬಿ ನಟೇಶ್, ಹಾಲಿ ಆಯುಕ್ತರಾದ ಜಿ.ಟಿ ದಿನೇಶ್ ಕುಮಾರ್, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಹರ್ಷವರ್ಧನ್, ವಿಷ್ಣುವರ್ಧನ ರೆಡ್ಡಿ ಮತ್ತು ಸಂಭಂಧ ಪಟ್ಟ ವಿಶೇಷ ತಹಶೀಲ್ದಾರರು ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ರಾಜ್ಯಪಾಲರು, ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ:
    ಮುಡಾ ಹಗರಣದ ಕುರಿತು ಬಿಜೆಪಿ ಶಾಸಕ ಶ್ರೀವತ್ಸ ಅವರು ರಾಜ್ಯಪಾಲರಿಗೆ ಹಾಗೂ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಸಾವಿರಾರು ಕೋಟಿ ಹಗರಣ ನಡೆದಿದೆ. ಕೂಡಲೇ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ತನಿಖೆ ಮಾಡುವಂತೆ ಪತ್ರ ಬರೆದು ಒತ್ತಾಯಿಸುತ್ತೇನೆ. ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಆಗ್ರಹಿಸುತ್ತೇನೆ. ಪತ್ರದೊಂದಿಗೆ ಹಗರಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನೂ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಳಪೆ ಬ್ಯಾಟಿಂಗ್‌ಗೆ ಬೆಲೆತೆತ್ತ ʻಯಂಗ್‌ ಇಂಡಿಯಾʼ – ಜಿಂಬಾಬ್ವೆಗೆ 13 ರನ್‌ಗಳ ರೋಚಕ ಗೆಲುವು!

    ಪ್ರಹ್ಲಾದ್ ಜೋಶಿ ಆರೋಪ:
    ಮುಡಾ ನಿವೇಶನ ಹಗರಣ ರಾಜಕಿಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಕೂಡ ಅಖಾಡಕ್ಕಿಳಿದಿದೆ. ಬಿಜೆಪಿ ಅವಧಿಯಲ್ಲಿ ಏನೆಲ್ಲಾ ಆಗಿತ್ತು? ಎಷ್ಟು ನಿವೇಶನ ಹಂಚಲಾಗಿದೆ. ಮಾಹಿತಿ ಕೊಡಿ ಎಂದು ಕೇಳಿದೆ. ಇನ್ನು, ಸಿಎಂ ಮತ್ತು ಅವರ ಪುತ್ರನ ಅನುಮತಿ ಇಲ್ಲದೇ ಇದೆಲ್ಲಾ ನಡೆಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಇದನ್ನೂ ಓದಿ: ಅಂದುಕೊಂಡಷ್ಟು ಮಳೆಯಾಗಿಲ್ಲ, ಕೃಷಿಗೆ ಸದ್ಯಕ್ಕೆ ನೀರು ಹರಿಸೋದಿಲ್ಲ: ಸಚಿವ ಚಲುವರಾಯಸ್ವಾಮಿ

  • ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

    ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ – ರೈತರಿಂದ ಭಾರೀ ಆಕ್ರೋಶ!

    – ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ – ರೈತರ ಆತಂಕ

    ಮಂಡ್ಯ: ಬೇಬಿಬೆಟ್ಟದಲ್ಲಿ ಸದ್ದಿಲ್ಲದೇ ಟ್ರಯಲ್ ಬ್ಲಾಸ್ಟ್‌ಗೆ (Bebi Trial Blast) ಸರ್ಕಾರ ಸಿದ್ಧತೆ ನಡೆಸಿದೆ. ಪ್ರಾಯೋಗಿಕ ಪರೀಕ್ಷೆಗೆ ಮುಂದಿನ ವಾರವೇ ವಿಜ್ಞಾನಿಗಳನ್ನು ಕರೆಸಲು ಮುಂದಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಇದರಿಂದ ರೈತರು (Farmers) ಗರಂ ಆಗಿದ್ದು, ಪ್ರತಿಭಟನೆ ನಡೆಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವು ರೈತ ಮುಖಂಡರು, ಕಾರ್ಯಕರ್ತರು ಕೆಆರ್‌ಎಸ್‌ (KRS) ಬಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ರೈತರು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. `ಟ್ರಯಲ್ ಬ್ಲಾಸ್ಟ್ ಬೇಡ ಬೇಡ’ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು

    ಬಳಿಕ ಮಾತನಾಡಿದ ಪ್ರತಿಭಟನಾನಿರತ ರೈತರು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ ಇದೆ. ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಸದ್ಯ ಗಣಿಗಾರಿಕೆ ನಿಷೇಧಿಸಲಾಗಿದೆ. ಈಗ ಮತ್ತೆ ಸರ್ಕಾರವೇ ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿದೆ. ಅದಕ್ಕಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಟ್ರಯಲ್ ಬ್ಲಾಸ್ಟ್ ಮಾಡಿ ಡ್ಯಾಂಗೆ ಯಾವುದೇ ಅಪಾಯವಿಲ್ಲ ಅಂತ ವರದಿ ತರಿಸಿಕೊಳ್ಳಲು ಹುನ್ನಾರ ನಡೆಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಮ್ ಮುಖ್ಯದ್ವಾರ, ನೀರಾವರಿ ನಿಯಮದ ಕಚೇರಿ ಬಳಿ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

  • ಕಲ್ಲಲ್ಲೂ ಕಲೆ ಅರಳಿಸುವ ಶಿಲ್ಪಕಲಾವಿದ ಲೋಕಣ್ಣ ಬಡಿಗೇರಗೆ ಬೇಕಿದೆ ನೆರವು!

    ಕಲ್ಲಲ್ಲೂ ಕಲೆ ಅರಳಿಸುವ ಶಿಲ್ಪಕಲಾವಿದ ಲೋಕಣ್ಣ ಬಡಿಗೇರಗೆ ಬೇಕಿದೆ ನೆರವು!

    ಬಾಗಲಕೋಟೆ: ಬೆಳ್ಳಂಬೆಳಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೇ ಅವರ ನಿತ್ಯದ ಕಾಯಕ. ಕಲ್ಲು ತಂದು ಅದಕ್ಕೊಂದು ರೂಪ ಕೊಟ್ಟು ಶಿಲ್ಪಗಳನ್ನು ತಯಾರಿಸುತ್ತಾರೆ. ಲಲಿತಕಲಾ ಸೇವೆಗೆ ನೀಡುವ ಯಾವುದೇ ಸವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಯಾರಿರಬಹುದು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆಯಾ? ಅವರೇ ಬಾಗಲಕೋಟೆ (Bagalakote) ಜಿಲ್ಲೆ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದ ಲೋಕಣ್ಣ ಬಡಿಗೇರ (Lokanna Badigera).

    ಮೂರ್ತಿ ಕೆತ್ತನೆಗೆ ಆಸಕ್ತಿ, ತಾಳ್ಮೆ, ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮ ಸಂಪೂರ್ಣ ವ್ಯರ್ಥ. ಆದರೂ ಕಲೆಯನ್ನೇ (Art) ನಂಬಿ ಜೀವನ ನಡೆಸುತ್ತಿದೆ ಲೋಕಣ್ಣ ಬಡಿಗೇರ ಕುಟುಂಬ. ತಾತ-ಮುತ್ತಾತಂದಿರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯ ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಲ್ಪಕಲಾ ಅಕಾಡೆಮಿಗಳಿಂದ ಸಹಾಯ ಕೋರಿದ್ದಾರೆ.

    ನೋಡುಗರ ಕಣ್ಣಿಗೆ ಬರೀ ಕಲ್ಲು ಕಂಡರೆ, ಶಿಲ್ಪಿಯ (Sculptor) ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನು ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಕಲ್ಲನ್ನು ಕೆತ್ತಿ ಸುಂದರ ಶಿಲ್ಪವನ್ನು ರೂಪಿಸುತ್ತಾರೆ.

    ದಿನಕ್ಕೆ 2 ತಾಸು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತಾರೆ. 1 ಮೂರ್ತಿ ರೂಪುಗೊಳ್ಳಲು ಎರಡರಿಂದ ನಾಲ್ಕು ತಿಂಗಳು ಸಮಯ ಹಿಡಿಯುತ್ತದೆ. 2 ಇಂಚಿನ ಮೂರ್ತಿಯಿಂದ, 9 ಅಡಿ ಉದ್ದದ ಮೂರ್ತಿಯವರೆಗೂ ಶಿಲ್ಪ ಕೆತ್ತನೆ ಮಾಡುತ್ತಾರೆ.

    ಕಲಾವಿದ ಲೋಕಣ್ಣ ಬಡಿಗೇರ ಅವರ ಕಲಾಕುಸುರಿಯಿಂದ ಶಿವ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ, ವಾಲ್ಮೀಕಿ ಮೂರ್ತಿಗಳು, ಸಿದ್ಧಾರೊಢ, ಶಿವಾಜಿ, ವೀರಭದ್ರೇಶ್ವರ, ಗಣಪತಿ, ಬುದ್ಧ, ಬಸವ ಸೇರಿದಂತೆ ದೇವಸ್ಥಾನದ ದ್ವಾರಗಳು ಸಿದ್ಧಗೊಂಡಿವೆ. ಇವರ ಕೈಯಿಂದ ಅರಳಿದ ಕಲಾಕೃತಿಗಳು ಹೈದರಾಬಾದ್, ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಮಾರಾಟವಾಗಿವೆ. ಮುಂಗಡವಾಗಿ ಬೇಡಿಕೆ ಸಲ್ಲಿಸಿ ಜನರು ಮೂರ್ತಿಗಳನ್ನು ಕೆತ್ತಿಸಿಕೊಳ್ಳಬಹುದಾಗಿದೆ.

    ಈ ಬಗ್ಗೆ ಮಾತನಾಡಿರುವ ವಿಶ್ವಕರ್ಮ ಶಿಲ್ಪಕಲಾವಿದ ಲೋಕಣ್ಣ ಬಡಿಗೇರ, ತನಗೆ ಶಿಲ್ಪಕಲೆ ಬಿಟ್ಟು ನನಗೆ ಬೇರೆ ಗೊತ್ತಿಲ್ಲ. ಈ ಕಲೆಯೇ ಜೀವನಾಧಾರ. 20 ವರ್ಷಗಳಿಂದ ನಾನು ಶಿಲ್ಪಕಲೆ ಮತ್ತು ಕ್ಲೇ ಮೋಡ್ಲಿಂಗ್ (ಮಣ್ಣಿನ ಮೂರ್ತಿ) ಮಾಡುತ್ತಿದ್ದೇನೆ. ಈ ಶಿಲ್ಪಕಲೆ ನಮ್ಮ ಅಜ್ಜಿ ಮುತ್ತಜ್ಜನ ಕಾಲದಿಂದಲೂ ತಂದೆ ಮಾಡಿಕೊಂಡು ಬರುತ್ತಿದ್ದ ಕೆಲಸ ಮುಂದುವರಿಸಿಕೊಂಡು ಬಂದಿದ್ದೇವೆ. 20 ವರ್ಷದಲ್ಲಿ ಸಾವಿರಾರು ಮೂರ್ತಿ ಕೆತ್ತನೆ ಮಾಡುವುದರ ಮೂಲಕ ಜನಮನ ಗಳಿಸಿದ್ದೇನೆ. ಜನರು ಬಂದು ತಮ್ಮಿಷ್ಟದ ಮೂರ್ತಿ ಮಾಡಿಸಿಕೊಂಡು ಹೋಗ್ತಾರೆ. ಆದ್ರೆ, ಇಷ್ಟೇ ಹಣ ಕೊಡಬೇಕು ಎಂದು ಯಾರಿಗೂ ಒತ್ತಾಯಿಸುವುದಿಲ್ಲ. ಅವರು ನೀಡುವ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಆದರೀಗ ಕಲ್ಲಲ್ಲಿ ಕಲೆಯನ್ನು ಅರಳಿಸುವ‌ ಕಲಾವಿದನಿಗೆ ಸರ್ಕಾರದ ನೆರವು ಬೇಕಿದೆ. ಲೋಕಣ್ಣ ಬಡಿಗೇರ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂಬುದು ಕಲಾಪ್ರಿಯರ ಒತ್ತಾಸೆ.

  • ಉತ್ತರ ಭಾರತಕ್ಕೆ ಹೋಲಿಸಿದ್ರೆ ದಕ್ಷಿಣ ಭಾರತದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ

    ಉತ್ತರ ಭಾರತಕ್ಕೆ ಹೋಲಿಸಿದ್ರೆ ದಕ್ಷಿಣ ಭಾರತದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ

    ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ (Petrol Diesel Price Hike) ಮಾಡಿ ವಾಹನ ಸವಾರರಿಗೆ ಶಾಕ್ ಕೊಟ್ಟಿದ್ದೆ. ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್ ಸೇಲ್ಸ್ ಟ್ಯಾಕ್ಸ್ ದರ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದೆ. ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತಕ್ಕೆ (North India) ಹೋಲಿಸಿದರೆ ದಕ್ಷಿಣ ಭಾರತದಲ್ಲೇ (South India) ತೈಲ ಬೆಲೆ ಏರಿಕೆ ಗಗನಕ್ಕೆ ಏರಿಕೆಯಾಗಿದೆ. ಹಾಗಾದರೆ ಯಾವ ರಾಜ್ಯಗಳ ನಗರಗಳಲ್ಲಿ? ಪೆಟ್ರೋಲ್‌, ಡೀಸೆಲ್‌ ದರ ಹೇಗಿದೆ ಎಂಬುದನ್ನ ನೋಡೋಣ…

    ನಗರ – ಪೆಟ್ರೋಲ್ – ಡಿಸೇಲ್ ( ಬೆಲೆ ರೂ.ಗಳಲ್ಲಿ)

    ನವದೆಹಲಿ – 94.72 – 87.62
    ಕೋಲ್ಕತ್ತಾ – 103.94 – 90.76
    ಮುಂಬೈ – 104.21 – 92.15
    ಚೆನ್ನೈ – 100.75 – 92.34
    ಗುರ್ಗಾಂವ್ – 94.90 – 87.76
    ನೋಯ್ಡಾ – 94.72 – 87.83
    ಭುವನೇಶ್ವರ್ – 100.97 – 92.55
    ಚಂಡೀಗಢ – 94.24 – 82.40
    ಹೈದರಾಬಾದ್ – 107.41 – 95.65
    ಜೈಪುರ – 104.86 – 90.33
    ಲಕ್ನೋ – 94.56 – 87.66
    ಪಾಟ್ನಾ – 105.18 – 92.04
    ತಿರುವನಂತಪುರ – 107.56 – 96.43
    ಬೆಂಗಳೂರು – 102.85- 88.93

    ತೆರಿಗೆ ದರ ಹೆಚ್ಚಳ ವಿವರ

    ಪೆಟ್ರೋಲ್
    ಹಿಂದಿನ ದರ – 25.92%
    ಹೆಚ್ಚಳ ದರ – 29.84%
    ಏರಿಕೆ – 3.9%

    ಡಿಸೇಲ್
    ಹಿಂದಿನ ದರ – 14.34%
    ಹೆಚ್ಚಳದ ದರ – 18.44%
    ಏರಿಕೆ – 4.1%

    ಟ್ಯಾಕ್ಸ್ ಏರಿಕೆ ಬಳಿಕ ತೈಲದರ ಎಷ್ಟು?

    ಪೆಟ್ರೋಲ್ ( ಪ್ರತಿ ಲೀಟರ್‌ಗೆ)
    ಇವತ್ತಿನ ದರ – 99.54 ರೂ
    ಏರಿಕೆ ಬಳಿಕ ದರ – 102 ರೂ

    ಡಿಸೇಲ್ (ಪ್ರತಿ ಲೀಟರ್)
    ಇವತ್ತಿನ ದರ – 85.93 ರೂ
    ಏರಿಕೆ ಬಳಿಕ ದರ – 89.43 ರೂ

  • ನನ್ನನ್ನೂ ಜೈಲಿಗೆ ಕಳಿಸುವ ಪ್ರಯತ್ನ ನಡೆಯುತ್ತಿದೆ – ಕೇಂದ್ರ ಸಚಿವ ಹೆಚ್‌ಡಿಕೆ ಕಳವಳ

    ನನ್ನನ್ನೂ ಜೈಲಿಗೆ ಕಳಿಸುವ ಪ್ರಯತ್ನ ನಡೆಯುತ್ತಿದೆ – ಕೇಂದ್ರ ಸಚಿವ ಹೆಚ್‌ಡಿಕೆ ಕಳವಳ

    – ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ ಎಂದು ಆರೋಪ
    – ದರ್ಶನ್‌ ಕೇಸ್‌ – ಇದೊಂದು ಘಟನೆ ಬಗ್ಗೆ ಯಾಕೆ ಮಾತಾಡ್ಬೇಕು? ಎಂದ ಹೆಚ್‌ಡಿಕೆ

    ಬೆಂಗಳೂರು: ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನು ಭೇಟಿಯಾದರು. ಬೆಂಗಳೂರಿನ ರಾಜಭವನದಲ್ಲಿ ಸೌಹಾರ್ದಯುತ ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡುವುದಾಗಿಯೂ ಅವರು ತಿಳಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ನನ್ನ ವಿರುದ್ಧ ಏನೇನು ನಡೆಯುತ್ತಿದೆ ಅನ್ನೋದು ಗೊತ್ತಿದೆ. ನಾನು ಕೇಂದ್ರ ಮಂತ್ರಿ (Central Minister) ಆಗಿರೋದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ನನ್ನನ್ನು ಜೈಲಿಗೆ ಹಾಕಿಸಬೇಕು ಅಂತ ಕಷ್ಟಪಡುತ್ತಿದ್ದಾರೆ. ಸರ್ಕಾರದವರು ಬಿಡದಿ ಜಮೀನು ದಾಖಲೆ ಹುಡುಕುತ್ತಿದ್ದಾರೆ. ಇದರಲ್ಲಿ ಎಲ್ಲರೂ ಸೇರಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ದರ್ಶನ್‌ ಒಂದು ಘಟನೆ ಯಾಕೆ ಮಾತಾಡಬೇಕು?:
    ಇದೇ ವೇಳೆ ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ದರ್ಶನ್ ಪ್ರಕರಣದ ಬಗ್ಗೆ ನಾನು ಚರ್ಚೆ ಮಾಡಲ್ಲ. ಇವತ್ತು ಆ ರೀತಿಯ ಘಟನೆಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ದರ್ಶನ್ ಘಟನೆ ಒಂದು ಭಾಗ ಅಷ್ಟೇ. ಈ ಸರ್ಕಾರ ಬಂದ ನಂತರ ಪ್ರತಿದಿನ ಮಾನುಷ್ಯನ ಜೀವನದ ಬಗ್ಗೆ, ಜೀವ ತೆಗೆಯೋದ್ರಲ್ಲಿ ಭಯ ಭಕ್ತಿ ಹೊರಟು ಹೋಗಿದೆ. ಅದಕ್ಕೆ ಕಾರಣ ಈ ಸರ್ಕಾರದ ಆಡಳಿತ. ಒಂದು ಘಟನೆಯನ್ನು ಯಾಕೆ ಮಾತಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ

    ಪೊಲೀಸರೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ:
    ವೈಯಕ್ತಿಕ ಕಾರಣದಿಂದ ಕೊಲೆ ಮಾಡುವುದು ರಾಜ್ಯದಲ್ಲಿ ಎಷ್ಟು ಸುಲಭವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನಡೆಯೇ ಕಾರಣ. ಪೊಲೀಸ್ ಅಧಿಕಾರಿಗಳೇ ಹಣದ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಬರುವಾಗ ಕೊಟ್ಟು ಬಂದಿದ್ದನ್ನ ಸಂಪಾದನೆ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದಿದೆ. ಶಾಮಿಯಾನ ಹಾಕೋ ಘಟನೆ ಇತಿಹಾದಲ್ಲಿ ಆಗಿರಲಿಲ್ಲ. ಯಥಾ ರಾಜಾ ತಥಾ ಪ್ರಜೆ ರೀತಿ ಈ ಸರ್ಕಾರದ ನಡವಳಿಕೆ ಆಗಿದೆ. ಈ ಸರ್ಕಾರಕ್ಕೆ ಏನಾದ್ರು ಕಿಂಚಿತ್ತೂ ಗೌರವ ಇದ್ದರೆ ಆಡಳಿತದಲ್ಲಿ ಸರಿಪಡಿಸಿಕೊಳ್ಳಲಿ ಎಂದು ತಿವಿದಿದ್ದಾರೆ.

    ಬಿಎಸ್‌ವೈ ಪ್ರಕರಣದ ಕುರಿತು ಮಾತನಾಡಿ, ಸರ್ಕಾರ 4 ತಿಂಗಳ ನಡವಳಿಕೆ ಅನುಮಾನ ಇದೆ. ರಾಜ್ಯದ ಜನರೇ ಅನುಮಾನ ಪಡ್ತಿದ್ದಾರೆ. ಕಾನೂನು ಅರಿವು ಇರೋರು ಬಹಳ ಜನ ಈ ರಾಜ್ಯದಲ್ಲಿ ಇದ್ದಾರೆ. ಸಿಎಂ ಕೂಡ ವಕೀಲರಿದ್ದಾರೆ. ಆದರೂ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಇವರಿಗೆ ಯಾವ ನೈತಿಕ ಇದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮನೆಯ ಮೇಲೆ ಗುಂಡಿನ ದಾಳಿ- ಸಲ್ಮಾನ್ ಹೇಳಿಕೆ ದಾಖಲಿಸಿಕೊಂಡ ಮುಂಬೈ ಪೊಲೀಸರು