ನವದೆಹಲಿ: ಅರಮನೆ ಮೈದಾನ (Palace Ground) ಭೂಮಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ 3,400 ಕೋಟಿಯ ಟಿಡಿಆರ್ (TDR) ಅನ್ನು ಮೈಸೂರು ರಾಜಮನೆತನಕ್ಕೆ ನೀಡಲು ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ.
ನ್ಯಾ. ಅರವಿಂದ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ 3,400 ಕೋಟಿಯ ಟಿಡಿಆರ್ (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು) ಅನ್ನು ಈ ಕೂಡಲೇ ನೀಡಬೇಕು ಎಂದು ಸುಪ್ರೀಂ ಸೂಚಿಸಿದೆ. ಇದನ್ನೂ ಓದಿ: ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ
ಒಂದು ವಾರದೊಳಗೆ ಟಿಡಿಆರ್ ಠೇವಣಿ ಇಡಬೇಕು ಎಂದು ಈ ಹಿಂದೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ನಲ್ಲಿ 3,400 ಕೋಟಿಯ ಟಿಡಿಆರ್ ಅನ್ನು ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಅದನ್ನು ರಾಜವಂಶಸ್ಥರಿಗೆ ಹಸ್ತಾಂತರಿಸಬಾರದು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು.
ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್‌ನಲ್ಲಿ ಟಿಡಿಆರ್ ಇಡಲಾಗಿತ್ತು. ಇದನ್ನು ರಾಜಮನೆತನ ಪರ ವಕೀಲರು ವಿರೋಧಿಸಿದ್ದರು. ರಿಜಿಸ್ಟ್ರಾರ್‌ನಲ್ಲಿ ಇರಬೇಕು ಎಂದು ಸರ್ಕಾರ ವಾದಿಸಿತ್ತು. ಈಗ ಅಂತಿಮವಾಗಿ ರಾಜ್ಯ ಮನೆತನಕ್ಕೆ ಟಿಡಿಆರ್ ನೀಡಲು ಸೂಚಿಸಲಾಗಿದೆ. ಇದನ್ನೂ ಓದಿ: ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ
ಈ ಭೂಮಿಯ ಮೇಲೆ ರಾಜಮನೆತನದ ಹಕ್ಕಿಲ್ಲ ಎನ್ನುವ ರಾಜ್ಯ ಸರ್ಕಾರದ ಅರ್ಜಿ ಇನ್ನೂ ಬಾಕಿ ಇದೆ. ಅಂತಿಮ ಆದೇಶಕ್ಕೆ ಒಳಪಟ್ಟು ಟಿಡಿಆರ್ ಸ್ವೀಕರಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರು: ರಾಷ್ಟ್ರದ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಎಲ್ಲಾ 17 ಅಣೆಕಟ್ಟೆಗಳಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಹೆಚ್ಚಿನ ಭದ್ರತೆ ಒದಗಿಸಲು ಸರ್ಕಾರ ಆದೇಶಿಸಿದೆ. ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟೆಗಳಿಗೆ ಭದ್ರತೆ ನೀಡಲು ಸೂಚನೆ ನೀಡಿದೆ.
ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೇ ಹೊಣೆಗಾರರು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಯಾವ್ಯಾವ ಅಣೆಕಟ್ಟೆಗಳು?
ಕಾವೇರಿ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕರ್ನಾಟಕ ನೀರಾವರಿ ನಿಗಮ ನಿಯಮಿತ- ಬೆಂಗಳೂರು, ಕೃಷ್ಣ ಭಾಗ್ಯ ಜಲನಿಗಮ ನಿಯಮಿತ- ಬೆಂಗಳೂರು, ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ- ಬೆಂಗಳೂರು, ಮುಖ್ಯ ಎಂಜಿನಿಯರ್ ನೀರಾವರಿ ದಕ್ಷಿಣ- ಮೈಸೂರು, ಹೇಮಾವತಿ ನಾಲಾವಲಯ- ತುಮಕೂರು, ಹೇಮಾವತಿ ಯೋಜನೆ- ಗೊರೂರು, ನೀರಾವರಿ ಉತ್ತರ- ಬೆಳಗಾವಿ, ತುಂಗಾ ಮೇಲ್ದಂಡೆ- ಶಿವಮೊಗ್ಗ, ಮಲಪ್ರಭಾ ಯೋಜನಾ ವಲಯ- ಧಾರವಾಡ, ಮುನಿರಾಬಾದ್ ನೀರಾವರಿ ಕೇಂದ್ರ ವಲಯ, ನೀರಾವರಿ ಯೋಜನಾ ವಲಯ- ಕಲಬುರಗಿ, ಭದ್ರಾ ಮೇಲ್ದಂಡೆ ಯೋಜನೆ- ಚಿತ್ರದುರ್ಗ, ಆಲಮಟ್ಟಿ ಅಣೆಕಟ್ಟು ವಲಯ, ಕಾಲುವೆ 1 ಭೀಮರಾಯನಗುಡಿ, ಕಾಲುವೆ 2- ರಾಂಪುರ, ನಾರಾಯಣಪುರ ಅಣೆಕಟ್ಟು
ಬೆಂಗಳೂರು: ಜಾತಿಗಣತಿಗೆ (Caste Census) ಸಾಕಷ್ಟು ಆಕ್ಷೇಪ, ವಿರೋಧ ಎದ್ದಿದೆ. ಮತ್ತೊಂದು ಕಡೆ ಅವೈಜ್ಞಾನಿಕ, ಮನೆ ಮನೆಗೆ ಭೇಟಿ ಕೊಟ್ಟಿಲ್ಲ ಎನ್ನುವ ದೊಡ್ಡ ಆರೋಪ ಇದೆ. ‘ಪಬ್ಲಿಕ್ ಟಿವಿ’ (Public TV) ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿದೆ. ಜಾತಿಗಣತಿ ಸರ್ವೆಗೆ ಮನೆ ಮನೆಗೆ ಬಂದಿದ್ದರಾ ಎಂಬ ಬಗ್ಗೆ ಜನರು ಏನು ಹೇಳಿದ್ದಾರೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.
ಮೂರು ವರ್ಷಗಳ ಹಿಂದೆ ಮನೆಗೆ ಬಂದು ಸರ್ವೆ ಮಾಡಿದ್ದರು. 10 ವರ್ಷಗಳ ಹಿಂದೊಮ್ಮೆ ನಾವು ಪಬ್ಲಿಕ್‌ನಲ್ಲಿದ್ದಾಗ ಬಂದು ಸರ್ವೆ ಮಾಡಿದ್ದರು ಎಂದು ಸರ್ವೆ ಆಗಿರುವ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಮ್ಮ ಮನೆಗೆ ಸರ್ವೆಗೆ ಯಾರೂ ಬಂದೇ ಇಲ್ಲ. ನಮ್ಮ ಜಾತಿಯೇ ಲೆಕ್ಕಕ್ಕೆ ಬಂದಿಲ್ಲ. ಕ್ಷತ್ರಿಯರು ಅನ್ನೋದೆ ಬಂದಿಲ್ಲ. ಯಾವ್ಯಾವ್ದೋ ಜಾತಿ ಲೆಕ್ಕ ಎಲ್ಲಾ ಹೇಳ್ತಾರೆ. ಹಾಗಾದ್ರೆ, ನಮ್ಮ ಜಾತಿಯೇ ಇಲ್ವಾ? ಇವರು ಜಾತಿಗಣತಿ ಮಾಡಿರೋದೆ ಗೊತ್ತಿಲ್ಲ ಎಂದು ಮಲ್ಲೇಶ್ವರಂನ ಮಹಿಳೆಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಯಾರನ್ನೋ ಕೂರಿಸಿ ಬರೆಸಿದಂತೆ ಇದೆ: ಸೂರಜ್ ರೇವಣ್ಣ ಕಿಡಿ
ಯಾರು ಕೂಡ ಬಂದಿಲ್ಲ. ಬಂದಿದ್ದರೆ ಅಲ್ವಾ ನೆನಪಿರೋದು. ಜಾತಿಗಣತಿ ಬಗ್ಗೆ ಚರ್ಚೆ ಆಗುತ್ತಿರುವುದು ಬೇಡದಿರುವ ಕೆಲಸ. ನಿಜ ಆಗಿದ್ದರೆ ಒಪ್ಪಿಕೊಳ್ಳಬಹುದು. ಎಲ್ಲರಿಗೂ ಗೊತ್ತು ಅದು ಸುಳ್ಳು ಅಂತಾ. ಯಾವುದೋ ನಂಬರ್ ಕೊಟ್ಟಿದ್ದಾರೆ. ಎಷ್ಟು ಕಾಗೆ ಇತ್ತು ಅನ್ನೋ ಬೀರ್‌ಬಲ್ ಕಥೆ ಥರ ಆಯ್ತು ಇದು ಎಂದು ಜಯನಗರ ನಿವಾಸಿಯೊಬ್ಬರು ಮಾತನಾಡಿದ್ದಾರೆ.
10 ವರ್ಷಗಳ ಹಿಂದೆ ಸರ್ವೆ ಮಾಡೋದಕ್ಕೆ ಬಂದಿದ್ದರು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ? ನಿಮ್ಮ ಜಾತಿ ಯಾವುದು ಅಂತಾ ಕೇಳಿದ್ದರು. ಅದು ಬಿಟ್ಟು ಬೇರೆ ಏನೂ ಕೇಳಿರಲಿಲ್ಲ ಎಂದು ಹಿಂದೆ ಜಾತಿಗಣತಿಗೆ ಬಂದಿದ್ದರೆಂದು ದಾವಣಗೆರೆ ಮಹಿಳೆಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?
ನಮ್ಮ ಮನೆಗೆ ಯಾರೂ ಬಂದಿಲ್ಲ. ಅದರ ಬಗ್ಗೆ ಗೊತ್ತು. ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ಇದು. ರಾಜಕೀಯವಾಗಿ ಮಾಡುತ್ತಿರುವ ತಂತ್ರವಿದು. ನಮ್ಮ ಸ್ನೇಹಿತರ ವಲಯದಲ್ಲೂ ಯಾರ ಮನೆಗೂ ಹೋಗಿಲ್ಲ ಅಂತಾನೇ ಹೇಳ್ತಿದ್ದಾರೆ. ಇವರ ಉದ್ದೇಶ ಏನು ಅಂತಾನೂ ಅರ್ಥ ಆಗ್ತಿಲ್ಲ ಎಂದು ಮತ್ತೊಬ್ಬ ಜಯನಗರ ನಿವಾಸಿ ಜಾತಿಗಣತಿ ಸರ್ವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಒಬ್ಬರ ಮನೆಗೂ ಇಲ್ಲಿ ವಿಸಿಟ್ ಕೊಟ್ಟಿಲ್ಲ. ಸರ್ಕಾರದಿಂದ ಜಾತಿಗಣತಿ ಪ್ರಕಟ ಆದರೆ ಉಗ್ರ ಹೋರಾಟ ಆಗಬಹುದು. ಸರ್ಕಾರ ಇದನ್ನು ವಾಪಸ್ ತೆಗೆದುಕೊಳ್ಳಬೇಕು. ಸರ್ಕಾರ ತಮ್ಮ ಪರವಾಗಿ ಇರಲಿ ಅಂತಾ ಜಾತಿಗಣತಿ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ರಾಮನಗರ ನಿವಾಸಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಮಂಡ್ಯ, ಕೋಲಾರ, ಧಾರವಾಡ, ರಾಯಚೂರು, ಉಡುಪಿ ಹೀಗೆ ಅನೇಕ ಜಿಲ್ಲೆಗಳಲ್ಲಿ ಜಾತಿಗಣತಿ ಸರ್ವೆ ಆಗಿದೆಯಾ ಅಥವಾ ಇಲ್ಲವಾ ಎಂದು ‘ಪಬ್ಲಿಕ್ ಟಿವಿ’ ರಿಯಾಲಿಟಿ ಚೆಕ್ ಮಾಡಿದೆ. ಕೆಲವರು ಸರ್ವೆಗೆ ಬಂದಿದ್ದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಬಂದಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು: ಪ್ರತಿ ವರ್ಷ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಆರೋಪಗಳು ಹೆಚ್ಚಾಗುತ್ತಿವೆ. ಎಲ್ಲಾ ನೌಕರರೂ ಚರಾಸ್ತಿ-ಸ್ಥಿರಾಸ್ತಿಗಳನ್ನು ವೆಬ್‌ಸೈಟ್‌ನಲ್ಲಿ ಘೋಷಿಸಬೇಕು ಎಂದು ಲೋಕಾಯುಕ್ತ ಹೇಳಿತ್ತು. ಆದರೆ, ಇದಕ್ಕೆ ಸರ್ಕಾರಿ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹೊತ್ತಲ್ಲಿ ಸರ್ಕಾರ ಜಾಣನಡೆ ಅನುಸರಿಸಿದೆ.
ಪ್ರತಿಯೊಬ್ಬ ಸರ್ಕಾರಿ ನೌಕರರು ಸರ್ಕಾರಿ ಸೇವೆಗೆ ಸೇರುವಾಗ ಹಾಗೂ ಪ್ರತಿ ವರ್ಷ ನೌಕರರ ಹಾಗೂ ಕುಟುಂಬದ ಆಸ್ತಿ ವಿವರ ಸಲ್ಲಿಸೋದು ಈಗಾಗಲೇ ಕಡ್ಡಾಯವಾಗಿದೆ. ಅದರಂತೆ ಲೋಕಾಯಕ್ತದವರು ಯಾವ ಅಧಿಕಾರಿಗಳ ಬಗ್ಗೆ ಆಸ್ತಿ ವಿವರ ಕೇಳುತ್ತಾರೋ ವಿಳಂಬವಿಲ್ಲದೇ ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸೂಚನೆಗಳನ್ನು ಪಾಲಿಸದಿದ್ದರೆ ಇಲಾಖಾ ಮುಖ್ಯಸ್ಥರು ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತೆ ಅಂತಾ ಸರ್ಕಾರ ಎಚ್ಚರಿಕೆ ನೀಡಿದೆ.
ಬೆಂಗಳೂರು: ಲೇವಾದೇವಿದಾರರ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡನೆಗೆ ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಇನ್ಮುಂದೆ ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್, ಯಾವುದೇ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ತರುವ ಕರ್ನಾಟಕ ಅಧಿಕ ಬಡ್ಡಿ ನಿಷೇಧ (ತಿದ್ದುಪಡಿ) ವಿಧೇಯಕ – 2025ಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಮಾರ್ಚ್ 3 ರಿಂದ ಆರಂಭವಾಗುವ ಅದಿವೇಶನದಲ್ಲಿ ಈ ಬಾರಿ ತಿದ್ದುಪಡಿ ವಿಧೇಯಕ ಮಂಡನೆಗೆ ತೀರ್ಮಾನಿಸಲಾಗಿದೆ. ಮಿತಿ ಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರು, ಪಾನ್ ಬ್ರೋಕರ್ಸ್ ಸೇರಿ ಇತರ ಸಹಕಾರ ಸಂಘಗಳ ಮೇಲೆ ನಿಯಂತ್ರಣ ಹೇರಲು ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004 ಕಾಯ್ದೆ ಜಾರಿಯಲ್ಲಿದೆ. ಇದರಡಿ ಮಿತಿ ಮೀರಿ ಬಡ್ಡಿ ವಿಧಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಸಹಕಾರ ಇಲಾಖೆ ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ 2004 ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿತ್ತು.
ಈಗಿರುವ ಗರಿಷ್ಠ 3 ವರ್ಷ ಶಿಕ್ಷೆ ಪ್ರಮಾಣವನ್ನು ತಿದ್ದುಪಡಿ ತಂದು ಗರಿಷ್ಠ 10 ವರ್ಷ ವರೆಗೆ ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಅಧಿಕ ಬಡ್ಡಿ ವಿಧಿಸುವ ಲೇವಾದೇವಿದಾರರಿಗೆ ಇರುವ ದಂಡ ಪ್ರಮಾಣವನ್ನು 30,000ದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗುವುದು.
ಉಡುಪಿ: ಕರ್ನಾಟಕ ಕರಾವಳಿ ಭದ್ರತೆಗೆ ರಾಜ್ಯ ಸರ್ಕಾರ ಇಂಧನ ಕಡಿತ ಆದೇಶ ಹೊಡೆತ ನೀಡಿದೆ. ರಾಜ್ಯದ ಗಡಿ ಕಾಯುವ ಕರಾವಳಿ ಕಾವಲು ಪೊಲೀಸ್ (Coastal Guard Udupi) ಇಲಾಖೆಗೆ ಪೂರೈಸಲಾಗುತ್ತಿದ್ದ ಇಂಧನ ಪ್ರಮಾಣವನ್ನ ಕಡಿತಗೊಳಿಸಿದೆ. ಅರ್ಧಕ್ಕಿಂತ ಜಾಸ್ತಿ ಇಂಧನ ಪ್ರಮಾಣ ಇಳಿಸಿದ್ದು, ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಕರ್ನಾಟಕದ ಭದ್ರತೆಯ ವಿಚಾರದಲ್ಲಿ ಸರ್ಕಾರದ ಜಿಪುಣತನ ಸರಿಯಾ ಎನ್ನುವ ಪ್ರಶ್ನೆ ಎದುರಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆ ರಾಜ್ಯ ಕರಾವಳಿ ತೀರದ ಮೂರು ಜಿಲ್ಲೆಯ ಗಡಿಯನ್ನು ಕಾಯುವ ಕೆಲಸ ಮಾಡುತ್ತದೆ. ಸಮುದ್ರದ ಮೂಲಕ ನಡೆಯಬಹುದಾದ ಸಂಭಾವ್ಯ ಅನಾಹುತ ತಡೆಯೋದು ಇಲಾಖೆಯ ಕೆಲಸ. ಅಕ್ರಮ ನಡೆಯದಂತೆ, ಕಾನೂನು ಬಾಹಿರ ಕೃತ್ಯಗಳು ಸಮುದ್ರ ಮುಖೇನ ಘಟಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೇರಳ ಗಡಿಯಿಂದ ಗೋವಾ ಗಡಿವರೆಗೆ ಜವಾಬ್ದಾರಿ ಇದೆ. ಸರ್ಕಾರದ ಹೊಸ ಆದೇಶ ಕರಾವಳಿ ಕಾವಲು ಪಡೆ ಬಳಸೋ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣವನ್ನ ಕಡಿತಗೊಳಿಸಿದೆ. ಬೋಟ್‌ಗೆ ಮಾಸಿಕ 600 ಲೀಟರ್ ಇಂಧನ ಪೂರೈಕೆ ಮಾಡಲಾಗುತ್ತಿತ್ತು. ಈ ಪ್ರಮಾಣವನ್ನ ಇದೀಗ ಕೇವಲ 250 ಲೀಟರ್ ಮಾತ್ರ ಸೀಮಿತಗೊಳಿಸಲಾಗಿದೆ.
ಈ ಇಂಧನ ಕಡಿತದಿಂದ ದಿನಕ್ಕೆ 10 ತಾಸಿನವರೆಗೂ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸರು ಈಗ ಕೇವಲ ಒಂದು ಗಂಟೆ ಸಮುದ್ರದಲ್ಲಿ ಗಸ್ತು ತಿರುಗೋ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕಾರವಾರದಲ್ಲಿ ಕಾರ್ಯಚರಿಸುವ ಎಲ್ಲಾ ಇಲಾಖೆಯ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಪ್ರಮಾಣದಲ್ಲಿ ಶೇಕಡ 50 ಲೀಟರ್ ಕಡಿತಗೊಳಿಸಲಾಗಿದೆ. ಮೂರು ಜಿಲ್ಲೆಯಲ್ಲಿ 9 ಸ್ಟೇಷನ್‌ಗಳಿದ್ದು, ಸಮುದ್ರದಲ್ಲಿ 15 ಬೋಟ್‌ಗಳಲ್ಲಿ ಗಸ್ತಿನಲ್ಲಿವೆ. ಹವಾಮಾನ ವೈಪರಿತ್ಯ, ಮಳೆಗಾಲ ನಿಯಮಬಾಹಿರ ಚಟುವಟಿಕೆಯನ್ನು ತಡೆಯುವುದು ಪೊಲೀಸರ ಕೆಲಸ. ಸರ್ಕಾರದ ಹೊಸ ಆದೇಶದಿಂದ ಮೀನುಗಾರರ ಮಾಹಿತಿಯನ್ನು ಪೊಲೀಸರು ಅವಲಂಬಿಸಬೇಕಾಗಿದೆ.
ರಾಜ್ಯದ ಭದ್ರತೆಯ ದೃಷ್ಟಿಕೋನದಿಂದ ಸರ್ಕಾರ ನಿರ್ಧಾರ ಸರಿಯಲ್ಲ. ಪುನರ್ ಪರಿಶೀಲನೆ ನಡೆಸಬೇಕಾದ ಅಗತ್ಯತೆ ಇದೆ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಏಕೆ ಎದುರಾಗಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಬೆಂಗಳೂರು: ಮೀಟರ್ ಬಡ್ಡಿ ಸಂಗ್ರಹದ ದೂರುಗಳ ಕುರಿತು ಕೈಗೊಂಡ ಕ್ರಮದ ವಿಷಯದಲ್ಲಿ ರಾಜ್ಯ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, 7 ಲಕ್ಷದ 80 ಸಾವಿರಕ್ಕೂ ಹೆಚ್ಚು ದೂರುಗಳು ಬರುವವರೆಗೂ ನೀವು ಬಾಳೆಹಣ್ಣು ತಿನ್ನುತ್ತಾ ಇದ್ರಾ? ಎಷ್ಟು ಕ್ರಮ ಕೈಗೊಂಡಿದ್ದೀರಿ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು.
ಬೆಳಗಾವಿ ಒಂದೇ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 2,71,466 ದೂರುಗಳು, ಬಾಗಲಕೋಟೆ ಜಿಲ್ಲೆಯಲ್ಲಿ 89,087, ಬಿಜಾಪುರ-75 ಸಾವಿರ, ಮಂಡ್ಯ ಜಿಲ್ಲೆಯಲ್ಲಿ 42,500,- ಹೀಗೆ ಕರ್ನಾಟಕದಾದ್ಯಂತ ಜನರು ನಮ್ಮನ್ನು ಶೋಷಿಸುತ್ತಿದ್ದಾರೆ. ದೌರ್ಜನ್ಯ ನಡೆದಿದೆ ಎಂದು ದೂರು ಕೊಟ್ಟಿದ್ದಾರೆ. ಮನೆ ಖಾಲಿ ಮಾಡಿಸಿದ, ಮನೆಗೆ ಬೀಗ ಹಾಕಿದ ದೂರುಗಳೂ ಇವೆ ಎಂದು ವಿವರಿಸಿದರು. ಮೀಟರ್ ಬಡ್ಡಿ ಹಾವಳಿಯಿಂದ ಬಡವರು ಮನೆಗಳು, ಹಳ್ಳಿಗಳನ್ನು ಖಾಲಿ ಮಾಡಿ ತೆರಳುತ್ತಿದ್ದಾರೆ. ಬಡ್ಡಿ ವ್ಯವಹಾರ ಮಾಡುವವರು ದೌರ್ಜನ್ಯ ಮಾಡಿ, ಬಾರುಕೋಲಿನಿಂದ ಹೊಡೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಶೋಷಣೆ ವಿಚಾರದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಅವರೂ ಶಾಮೀಲಾಗಿದ್ದಾರೆ ಎಂದು ರವಿಕುಮಾರ್ ಆಕ್ಷೇಪಿಸಿದರು.
ಸಮರ್ಪಕ ಕ್ರಮ ಕೈಗೊಳ್ಳದೆ ಇದ್ದರೆ ಎರಡ್ಮೂರು ದಿನಗಳಲ್ಲಿ ರಾಜ್ಯದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಪ್ರಶ್ನೆಗೆ ಉತ್ತರಿಸಿದ ಅವರು, ಅಂಬೇಡ್ಕರರ ವಿಚಾರಗಳನ್ನು ಜಾರಿ ಮಾಡುತ್ತೇವೆ. ಬಾಪೂ ಭಾರತ ಕಟ್ಟುತ್ತೇವೆ ಎಂದಿದ್ದಾರೆ. ಇದು ಬಾಪು ಭಾರತವೇ ಎಂದು ಕೇಳಿದರು.
ಮಹಿಳೆಯರು ನಿಮಗೆ ತಾಳಿ ಕಳಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ರಾಜ್ಯದ ಸಚಿವರಿಗೆ ನಾಚಿಕೆ ಆಗಬೇಕಲ್ಲವೇ? ಏನು ಕ್ರಮ ತೆಗೆದುಕೊಂಡಿದ್ದೀರಿ? ಬಡ್ಡಿ, ಮೀಟರ್ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಒಂದೆಡೆ ಆಗಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವು, ಸಾವಿರಾರು ಮಕ್ಕಳ ಸಾವು ಸಂಭವಿಸುತ್ತಿದೆ. ಆಸ್ಪತ್ರೆಗಳು ಸರಿ ಇಲ್ಲ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸರಿ ಇಲ್ಲ. ಬ್ಯಾಂಕ್‍ಗಳು ಲೂಟಿ ಆಗುತ್ತಿವೆ. ಈ ಸರ್ಕಾರಕ್ಕೆ ಜೀವವೇ ಇಲ್ಲ ಎಂದು ಟೀಕಿಸಿದರು.
ಈ ಸರ್ಕಾರಕ್ಕೆ ಆಮ್ಲಜನಕ ನೀಡಬೇಕಿದೆ. ಒಂದು ರೀತಿಯ ಶವದ ವ್ಯವಸ್ಥೆಯಲ್ಲಿ ಈ ಸರಕಾರ ಇದೆ ಎಂದು ಆರೋಪಿಸಿದರು. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಛೀಮಾರಿ ಹಾಕಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‍ಗಳ ಹಾವಳಿಯು ಸಂಪೂರ್ಣ ಹಳಿ ತಪ್ಪಿದೆ. ಪರಿಣಾಮವಾಗಿ ರಾಜ್ಯದಲ್ಲಿ ಸಾಲ ತೆಗೆದುಕೊಳ್ಳುವ ಬಡವರ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಸಂಪುಟ ಸಭೆ ನಡೆಯುತ್ತಿದೆ. ಬೆಳಗಾವಿ, ಕಲಬುರಗಿ ನಂತರ ಇದೀಗಾ ಚಾಮರಾಜನಗರ ಜಿಲ್ಲೆಯಲ್ಲಿ ಕ್ಯಾಬಿನೆಟ್ ಮೀಟಿಂಗ್ ನಿಕ್ಕಿಯಾಗಿದೆ. ಗಿರಿಜನರಿಗೆ ವಸತಿ ಸೇರಿದಂತೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ.
ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕ್ಯಾಬಿನೆಟ್ ಮೀಟಿಂಗ್‌ಗೆ ಜಿಲ್ಲಾಡಳಿತದಿಂದ ಸಿದ್ದತೆ ಆರಂಭವಾಗಿದೆ. ಹನೂರು ಶಾಸಕ ಮಂಜುನಾಥ್ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಯಾರನ್ನು ಯಾವಾಗ ಏನ್ ಬೇಕಾದ್ರು ಮಾಡ್ತಾರೆ: ಹೆಚ್‌ಡಿಕೆ
ಬೆಂಗಳೂರು: ಬಾಣಂತಿಯರ ಸರಣಿ ಸಾವು ಬಳಿಕ ಆಹಾರ ಸುರಕ್ಷತಾ ಇಲಾಖೆ (Food Safety Department) ಹಾಗೂ ಔಷಧ ನಿಯಂತ್ರಣ ಇಲಾಖೆಯನ್ನು (Drug Control Department) ಸರ್ಕಾರ ವಿಲೀನಗೊಳಿಸಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯದ ಜನರಿಗೆ ಆರೋಗ್ಯ ಸೇವೆಗಾಗಿ, ಹೆಚ್ಚು ಚಿಕಿತ್ಸಾ ವೆಚ್ಚ ಇರುವ ಕಾಯಿಲೆಗಳಿಗೆ ಹಾಗೂ ವಿರಳ ಆರೋಗ್ಯ ಸೇವೆ ಒದಗಿಸಲು ಕಾರ್ಫಸ್ ಫಂಡ್. ಒಟ್ಟು 45 ಕೋಟಿಯನ್ನು ಸರ್ಕಾರ ಮೀಸಲಿಟ್ಟಿದೆ.
ಬಳ್ಳಾರಿ ಹಾಗೂ ಬೆಳಗಾವಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೆಳಗಾವಿಯ ಕುಂದಾನಗರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಆರು ತಿಂಗಳಲ್ಲಿ 322 ಶಿಶುಗಳು ಮತ್ತು 29 ಬಾಣಂತಿಯರು ಮೃತಪಟ್ಟಿದ್ದಾರೆ. ಅಲ್ಲದೇ, ರಾಯಚೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಆಯ್ತು ಈಗ ರಾಯಚೂರು – ಅಕ್ಟೋಬರ್‌ನಲ್ಲಿ ನಾಲ್ವರು ಬಾಣಂತಿಯರು ಸಾವು
– ಮುಸ್ಲಿಂ ಮೀಸಲಾತಿ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಿಎಂ ಕಚೇರಿ ಸ್ಪಷ್ಟನೆ
ಬೆಂಗಳೂರು: ಮುಸ್ಲಿಂ ಸಮುದಾಯದವರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ವಿಚಾರ ಮುನ್ನಲೆಗೆ ಬಂದಿದೆ. 4% ಮೀಸಲಾತಿ ನೀಡುವಂತೆ ಮುಸ್ಲಿಂ ನಾಯಕರು ಬರೆದ ಪತ್ರ ಸರ್ಕಾರದ ಮುಂದಿದೆ. ಆದರೆ, ಮುಸ್ಲಿಂ ಮೀಸಲಾತಿ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ಅಂದಹಾಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಗುತ್ತಿಗೆ ಮೀಸಲಾತಿಗೆ ಬೇಡಿಕೆ ಕೇಳಿಬಂದಿದೆ. ಪ್ರವರ್ಗ 2 ಬಿಗೆ ಸೇರುವ ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಇಲ್ಲ. ಆದರೆ, ಈಗಾಗಲೇ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ 24% ಗುತ್ತಿಗೆ ಮೀಸಲಾತಿ ಇದೆ. ಹಾಗಾಗಿ, ಅದೇ ಸೌಲಭ್ಯವನ್ನು ಅಲ್ಪಸಂಖ್ಯಾತ ಸಮುದಾಯಕ್ಕೂ ವಿಸ್ತರಿಸಬೇಕೆಂಬ ಕೂಗು ವ್ಯಕ್ತವಾಗಿದೆ. ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿಗೆ ಕರಿಯ ಎಂದಿದ್ದಕ್ಕೆ ಕ್ಷಮೆಯಾಚಿಸಿದ ಜಮೀರ್
ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ನೀಡಬೇಕು ಎಂದು ಮುಸ್ಲಿಂ ಸಚಿವರು, ಶಾಸಕರ ನಿಯೋಗ ಮನವಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2024ರ ಆ.24 ರಂದು ಪತ್ರ ಬರೆದು ಬೇಡಿಕೆ ಮುಂದಿಟ್ಟಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಲೆಟರ್ ಹೆಡ್‌ನಲ್ಲಿ ಬರೆದಿರುವ ಪತ್ರಕ್ಕೆ, ಸಚಿವ ಜಮೀರ್ ಅಹ್ಮದ್, ರಹೀಂ ಖಾನ್ ಸೇರಿದಂತೆ ಮುಸ್ಲಿಂ ಸಮುದಾಯದ ಶಾಸಕರು, ಪರಿಷತ್ ಸದಸ್ಯರು ಸಹಿ ಹಾಕಿದ್ದಾರೆ. ಇದೇ ವೇಳೆ ಕಡತ ಮಂಡಿಸುವುದು ಎಂದು ಸಿಎಂ ಸಿದ್ದರಾಮಯ್ಯ ಸಹಿ ಹಾಕಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಕಚೇರಿ ಅಧಿಕೃತ ಸ್ಪಷ್ಟನೆ ನೀಡಿದ್ದು, ಬೇಡಿಕೆ ಬಂದಿರುವುದು ನಿಜ. ಆದರೆ, ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಈಗ ಬಿಜೆಪಿಯನ್ನು ನಾಯಿ ಮಾಡುವ ಸಮಯ ಬಂದಿದೆ: ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ವಾಗ್ದಾಳಿ