Tag: Karnataka Government

  • ಇಡೀ ಬೆಂಗಳೂರಿಗೆ ನಾಳೆ ರೆಡ್ ಅಲರ್ಟ್ – ವಿಧಾನಸೌಧ, ರಾಜಭವನದ ಬಳಿ ಹೈ ಸೆಕ್ಯುರಿಟಿ

    ಇಡೀ ಬೆಂಗಳೂರಿಗೆ ನಾಳೆ ರೆಡ್ ಅಲರ್ಟ್ – ವಿಧಾನಸೌಧ, ರಾಜಭವನದ ಬಳಿ ಹೈ ಸೆಕ್ಯುರಿಟಿ

    ಬೆಂಗಳೂರು: ದೋಸ್ತಿ ಸರ್ಕಾರದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸರ್ಕಾರ ಉರುಳಿದರೆ ಏನಾಗುತ್ತೋ? ಉಳಿಯದಿದ್ದರೆ ಇನ್ನೇನೂ ಆಗುತ್ತೋ ಎನ್ನುವ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಇಡೀ ಬೆಂಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದ್ದು, ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಧಾನಸೌದ ಸುತ್ತಮುತ್ತ, ರಾಜಭವನದ ಸುತ್ತಮುತ್ತ ಬರೋಬ್ಬರಿ ಐದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಿದ್ದು ಎಚ್ಚರಿಕೆ ವಹಿಸಲಾಗಿದೆ.

    ಬೆಂಗಳೂರು ನಗರದ ಎಲ್ಲಾ ಪೊಲೀಸರು, ಬೆಂಗಳೂರು ಹೊರವಲಯದ ಪೊಲೀಸರು, 15 ಪೆಟ್ಲೋನ್  ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ಎಲ್ಲಾ ಪ್ರಮುಖ ರಾಜಕಾರಣಿಗಳ ಮನೆಗೆ ಬಂದೋಬಸ್ತ್ ಮಾಡಲಾಗಿದೆ.

    ಅದರಲ್ಲೂ ಅತೃಪ್ತ ಶಾಸಕರ ಮನೆಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸೌದದ ಸುತ್ತ ನಿಷೇಧಾಜ್ಞೆ ಹೇರುವ ಸಾಧ್ಯತೆಯಿದೆ.

  • ನಮೋ ಹಾಡಿ ಹೊಗಳಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ತೇಜಸ್ವಿ

    ನಮೋ ಹಾಡಿ ಹೊಗಳಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ತೇಜಸ್ವಿ

    – ಮೊದಲ ಭಾಷಣದಲ್ಲಿಯೇ ‘ಕೈ’ ವಿರುದ್ಧ ಕಿಡಿ
    – ದಿನದ 24 ಗಂಟೆ ಮೋದಿ ಕೆಲಸ ಮಾಡ್ತಾರೆ

    ನವದೆಹಲಿ: ಸಂಸತ್ ಅಧಿವೇಶದ ತಮ್ಮ ಮೊದಲ ಭಾಷಣದಲ್ಲಿಯೇ ಬೆಂಗಳೂರು ದಕ್ಷಿಣದ ಯುವ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಜಕಾರಣ ಒಂದು ಕುಟುಂಬಕ್ಕೆ ಸೀಮಿತವಲ್ಲ ಎಂದು ಚಾಯ್ ವಾಲಾ ಮೋಜಿ ಜೀ ತಿಳಿಸಿಕೊಟ್ಟರು. ಸ್ವಂತ ಸಾಮಥ್ರ್ಯದ ಮೂಲಕ ಎರಡು ಬಾರಿ ಪ್ರಧಾನಿಯಾದರು ಹಾಗೂ ನಮ್ಮಂತ ಯುವಕರಿಗೆ ಅವಕಾಶ ನೀಡಿದರು. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಂಸತ್ ಪ್ರವೇಶ ಮಾಡಿದ್ದಾರೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಯುವಕರಿಗೆ ಅವಕಾಶವೇ ಸಿಗಲಿಲ್ಲ ಎಂದು ಆರೋಪಿಸಿದರು.

    ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಪರ ಪ್ರಚಾರ ಮಾಡಲು ಕರಪತ್ರಗಳನ್ನು ಹಂಚುತ್ತಿದ್ದೆ. ಗೋಡೆಗಳ ಮೇಲೆ ಘೋಷಣೆಗಳನ್ನು ಬರೆಯುತ್ತಿದ್ದೆ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಷಣ ಮಾಡುತ್ತಿದ್ದೆ. ನಾನು ಸಂಸತ್ ಪ್ರವೇಶ ಮಾಡುತ್ತೇನೆ ಅಂತ ಊಹೆ ಕೂಡ ಮಾಡಿಕೊಂಡಿರಲಿಲ್ಲ. ಆದರೆ ಇಂದು ಇಲ್ಲಿ ನಿಂತು ಭಾಷಣ ಮಾಡುತ್ತಿದ್ದೇನೆ. ಇದು ಬಿಜೆಪಿ ಯುವಕರಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಜಿಎಸ್‍ಟಿ ಸೇರಿದಂತೆ ಅನೇಕ ಬದಲಾವಣೆಗಳನ್ನು ಮೋದಿ ಜೀ ಜಾರಿಗೆ ತಂದರು. ಇದು ದೇಶದ ಅಭಿವೃದ್ಧಿಗೆ ಭಾರೀ ಅನುಕೂಲವಾಗಿದೆ. ಮೋದಿ ಅವರ ಕಾರ್ಯಗಳನ್ನು ಮೆಚ್ಚಿದ ಆಟೋ ಚಾಲಕ, ಟೆಕ್ಕಿ, ಎನ್‍ಆರ್ ಐ ಸೇರಿದಂತೆ ಅನೇಕರು ನಮೋ ಅಗೇನ್ ಎಂದು ಪ್ರಚಾರ ಮಾಡಿದರು ಎಂದರು.

    ಮೋದಿ ಅವರಿಂದ ಹಿಂದುತ್ವಕ್ಕೆ ಮತ್ತಷ್ಟು ಬಲ ಬಂದಿದೆ. ನಾನು ಹಿಂದೂ ಎಂದು ಹೇಳಿಕೊಳ್ಳಲು ಅನೇಕರು ಹೆಮ್ಮೆ ಪಡುತ್ತಾರೆ. ಮುಂದಿನ 5 ವರ್ಷದಲ್ಲಿ ದೇಶವು ಮತ್ತಷ್ಟು ಪ್ರಗತಿ ಹೊಂದಲಿದೆ. ಆದರೆ ಕೆಲ ವಿಪಕ್ಷ ನಾಯಕರು ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರು. ಫಲಿತಾಂಶದ ಬಳಿಕ ಹಾಗೂ ಈಗಲೂ ಇವಿಎಂ ಯಂತ್ರದಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅವರು ಹೀಗೆ ಮುಂದುವರಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 545 ಸ್ಥಾನಗಳಲ್ಲಿಯೂ ಗೆಲುವು ಸಾಧಿಸುತ್ತದೆ ಎಂದು ಹೇಳಿದರು.

    ದೇಶವೇ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ರಾಜ್ಯ ಮಾತ್ರ ಹಿಂದೆ ಉಳಿಯುತ್ತಿದೆ. ಕರ್ನಾಟಕಕ್ಕೆ ತನ್ನದೆಯಾದ ವಿಶೇಷ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕ, ಕೃಷ್ಣದೇವರಾಯ, ಮೈಸೂರು ಮಹಾರಾಜ ಮನೆತನ ಅನೇಕ ರಾಜರು ಆಳ್ವಿಕೆ ನಡೆಸಿದ್ದಾರೆ. ಆದರೆ ಈಗ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಹೊರ ಬೀಳುತ್ತಿರುವ ಹಗರಣಗಳಲ್ಲಿ ಆಡಳಿತ ಪಕ್ಷದ ನಾಯಕರು ಹೆಸರುಗಳು ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತಿಲ್ಲ ಎಂದು ದೂರಿದರು.

    ನಮ್ಮ ಆಸೆ, ಅನುಭಗಳನ್ನು ಈಡೇರಿಸಲು ಬರುವಂತಹ ನವ ಸರ್ಕಾರದ ಕಡೆಗೆ ನಾವೆಲ್ಲರೂ ಒಲವು ತೋರಬೇಕಿದೆ. ಹೊಸ ಕರ್ನಾಟಕದ ಉದಯ ಯುವಕರ ಮೇಲಿದೆ ಎಂದು ತೇಜಸ್ವಿ ಸೂರ್ಯ ಅವರು ಸಂಸತ್‍ನಲ್ಲಿ ಕನ್ನಡದ ಕಹಳೆ ಮೊಳಗಿಸಿದರು.

  • ಆದಾಯದಲ್ಲಿ ದಾಖಲೆ ಬರೆದ ಸಾರಿಗೆ ಇಲಾಖೆ: ಯಾವ ವರ್ಷ ಎಷ್ಟೆಷ್ಟು ಆದಾಯ ಸಂಗ್ರಹ?

    ಆದಾಯದಲ್ಲಿ ದಾಖಲೆ ಬರೆದ ಸಾರಿಗೆ ಇಲಾಖೆ: ಯಾವ ವರ್ಷ ಎಷ್ಟೆಷ್ಟು ಆದಾಯ ಸಂಗ್ರಹ?

    ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು 2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿ ಇತಿಹಾಸ ಸೃಷ್ಟಿಸಿದೆ.

    ಹೌದು, 2017-18 ರ ಸಾಲಿನಲ್ಲಿ ಸಾರಿಗೆ ಇಲಾಖೆಯು ಒಟ್ಟಾರೆ 5,954 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಮೂಲಕ ವಾರ್ಷಿಕ ಗುರಿಗಿಂತ ಶೇ.7ರಷ್ಟು ಹೆಚ್ಚಿನ ಆದಾಯವನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.

    ಸಾರಿಗೆ ಇಲಾಖೆಯು ವರ್ಷದಿಂದ ವರ್ಷಕ್ಕೆ ನಿಗದಿತ ಆದಾಯದ ಗುರಿಯನ್ನು ಹಾಕಿಕೊಳ್ಳುತ್ತದೆ. 2017-18ನೇ ಸಾಲಿನಲ್ಲಿ ಒಟ್ಟಾರೆ 5,516.6 ಕೋಟಿ ರೂಪಾಯಿಯನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಈ ಗುರಿಯನ್ನು ದಾಟಿ ಬರೋಬ್ಬರಿ 5,954 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಮೊದಲು 2016-17 ನೇ ಸಾಲಿನಲ್ಲಿ 5,262.4 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು, ಆ ವರ್ಷ 5,026 ಕೋಟಿ ರೂಪಾಯಿ ಗುರಿಯನ್ನು ಹಾಕಿಕೊಂಡಿತ್ತು.

    ಯಾವ ವರ್ಷ ಎಷ್ಟು ಆದಾಯ?
    2009-10 ನೇ ಸಾಲಿನಲ್ಲಿ 1,892 ಕೋಟಿ ರೂಪಾಯಿ, 2010-11 ರಲ್ಲಿ 2,511 ಕೋಟಿ ರೂಪಾಯಿ, 2011-12ರಲ್ಲಿ 2,985 ಕೋಟಿ, 2012-13ರಲ್ಲಿ 3,566 ಕೋಟಿ, 2013-14 ರಲ್ಲಿ 3,671 ಕೋಟಿ, 2014-15ರಲ್ಲಿ 4,145 ಕೋಟಿ, 2015-16ರಲ್ಲಿ 4,608 ಕೋಟಿ, 2016-17ರಲ್ಲಿ 5,262 ಕೋಟಿ, 2017-18ರಲ್ಲಿ 5,954 ಕೋಟಿ ರೂಪಾಯಿ ಆದಾಯ ಗಳಿಸಿದೆ.

    ಸಾರಿಗೆ ಇಲಾಖೆಯು ರಸ್ತೆ ತೆರಿಗೆ, ಹೊಸ ವಾಹನಗಳ ನೋಂದಣಿ ಶುಲ್ಕ, ಪರವಾನಿಗೆ ಶುಲ್ಕ, ಬಾಕಿ ಇರುವ ತೆರಿಗೆ ವಸೂಲಿ, ಚಾಲನಾ ಪರವಾನಿಗೆ ಶುಲ್ಕ, ವಾಹನಗಳ ಪರಿಶೀಲನೆ ಹಾಗೂ ರಾಜ್ಯಗಡಿಗಳಲ್ಲಿ ಚೆಕ್‍ಪೋಸ್ಟ್ ಮೂಲಕ ಒಟ್ಟಾರೆ ಆದಾಯವನ್ನು ಗಳಿಸುತ್ತಿದೆ. ಈ ಬಾರಿಯ ವಿಶೇಷವೇನೆಂದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರು ನಗರ ಈ ಬಾರಿ ಅತಿಹೆಚ್ಚು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿಗಳ ಪ್ರಕಾರ ರಾಜಧಾನಿಯಲ್ಲಿ ಒಟ್ಟು 76 ಲಕ್ಷ ವಾಹನಗಳು ನೋಂದಣಿಯಾಗುವ ಮೂಲಕ ಆದಾಯ ಹೆಚ್ಚಿದೆ.

    ಕರ್ನಾಟಕ ಸರ್ಕಾರಕ್ಕೆ ಸಾರಿಗೆ ಇಲಾಖೆಯು ನಾಲ್ಕನೇ ಅತಿದೊಡ್ಡ ಆದಾಯ ನೀಡುವ ಸಂಸ್ಥೆಯಾಗಿದೆ. ಇದಲ್ಲದೇ ವಾಣಿಜ್ಯ ತೆರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಅಬಕಾರಿ ಇಲಾಖೆಗಳು ಸರ್ಕಾರದ ಆದಾಯದ ಪ್ರಮುಖ ಮೂಲಗಳಾಗಿವೆ. ಕಳೆದ 9 ವರ್ಷಗಳಿಂದಲೂ ಸಾರಿಗೆ ಇಲಾಖೆ ವರ್ಷದಿಂದ ವರ್ಷಕ್ಕೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡೇ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೇಕೆದಾಟು ಯೋಜನೆಗೆ ಅನುಮತಿ ನೀಡ್ಬೇಡಿ: ಕೇಂದ್ರಕ್ಕೆ ತಮಿಳುನಾಡು ಕ್ಯಾತೆ

    ಮೇಕೆದಾಟು ಯೋಜನೆಗೆ ಅನುಮತಿ ನೀಡ್ಬೇಡಿ: ಕೇಂದ್ರಕ್ಕೆ ತಮಿಳುನಾಡು ಕ್ಯಾತೆ

    ಬೆಂಗಳೂರು: ರಾಜ್ಯದ ಯೋಜನೆ ವಿಚಾರದಲ್ಲಿ ಮತ್ತೆ ತಮಿಳುನಾಡು ಕಾಲು ಕೆದರಿಕೊಂಡು ಜಗಳಕ್ಕೆ ಬಂದಿದೆ. ಕರ್ನಾಟಕದ ಮೇಕೆದಾಟು ಯೋಜನೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಅಡ್ಡಗಾಲು ಹಾಕಿದೆ.

    ಕರ್ನಾಟಕ ರಾಜ್ಯ ಕಾವೇರಿ ನದಿಗೆ ರೂಪಿಸಲು ಹೊರಟಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಅವಕಾಶ ನೀಡಬಾರದೆಂದು ತಮಿಳುನಾಡು ಮುಖ್ಯಮಂತ್ರಿ ಸಿಎಂ ಯಡಪ್ಪಾಡಿ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಎರಡು ಪುಟಗಳ ಪತ್ರ ಬರೆದಿರುವ ಅವರು, ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕ ಮಾಡಿರುವ ಮನವಿಯನ್ನು ತಿರಸ್ಕರಿಸಬೇಕು. ಹೊಸ ಯೋಜನೆಗಳಿಗೂ ಮುನ್ನ ಹಂಚಿಕೆಯಾಗಿರುವ ನೀರನ್ನು ಸಮಗ್ರವಾಗಿ ಹರಿಯುವಂತೆ ಮಾಡಬೇಕೆಂದು ಪತ್ರದಲ್ಲಿ ಬರೆದಿದ್ದಾರೆ.

     

    ಮೇಕೆದಾಟು ಯೋಜನೆ ಮೂಲಕ ಕಾವೇರಿ ನದಿಯ ನೈಸರ್ಗಿಕ ಹರಿವಿಗೆ ಕರ್ನಾಟಕ ಅಡ್ಡಗಾಲು ಹಾಕುತ್ತಿದೆ. ಈ ಯೋಜನೆಯಿಂದ ಲಕ್ಷಾಂತರ ತಮಿಳುನಾಡಿನ ರೈತರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯೋಜನೆಯ ಮನವಿಯನ್ನು ತಿರಸ್ಕರಿಸುವಂತೆ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ನಿರ್ದೇಶಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಕರ್ನಾಟಕದ ಮೇಕೆದಾಟು ಯೋಜನೆಗೆ ಪ್ರಾರಂಭದಲ್ಲೇ ತಮಿಳುನಾಡು ಖ್ಯಾತೆ ತೆಗೆದಿದ್ದು, ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಮನವಿಯನ್ನು ಹೇಗೆ ಬಗೆಹರಿಸುತ್ತದೆ ಎಂಬುದು ಸದ್ಯದ ಕುತೂಹಲಕಾರಿ ವಿಷಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ

    ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ

    ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಶುಕ್ರವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಜೊತೆಗೆ ಆಗಸ್ಟ್ 16 ರಿಂದ 22ರವರೆಗೆ ರಾಜ್ಯದಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

    ಗುರುವಾರದಿಂದ 7 ದಿನಗಳ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಸರ್ಕಾರ ಪ್ರಕಟಿಸಿದೆ.

    ರಾಜ್ಯದ ಹಲವೆಡೆ ಪ್ರವಾಹ ಎದುರಾಗಿದ್ದು, ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಹೊರತು ಪಡಿಸಿ, ಉಳಿದವರಿಗೆ ಅನ್ವಯಿಸುವಂತೆ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಸ್ಟ್ 17ರಂದು ಒಂದು ದಿನ ರಜೆ ಘೋಷಿಸಲಾಗಿದೆ.

    ಕೌನ್ಸೆಲಿಂಗ್ ಮುಂದೂಡಿಕೆ:
    ಆ.17 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ನಿಕಾಯದ ಕೌನ್ಸೆಲಿಂಗ್ ಮುಂದೂಡಲಾಗಿದೆ. ಮುಂದೂಡಿದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಹುಲ್ ಗಾಂಧಿಯ ಟ್ರೋಲ್‍ಗೆ ಕರ್ನಾಟಕವನ್ನು ಉದಾಹರಿಸಿ ಟಾಂಗ್ ಕೊಟ್ಟ ಬಿಜೆಪಿ!

    ರಾಹುಲ್ ಗಾಂಧಿಯ ಟ್ರೋಲ್‍ಗೆ ಕರ್ನಾಟಕವನ್ನು ಉದಾಹರಿಸಿ ಟಾಂಗ್ ಕೊಟ್ಟ ಬಿಜೆಪಿ!

    ನವದೆಹಲಿ: ಬಿಜೆಪಿಯನ್ನು ಗುರಿ ಮಾಡಿ ಕಾಲೆಳೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ಕರ್ನಾಟಕ ಸರ್ಕಾರ ವಸ್ತು ಸ್ಥಿತಿಯನ್ನು ಉದಾಹಣೆ ನೀಡಿ ಟಾಂಗ್ ಕೊಟ್ಟಿದೆ.

    ಸದ್ಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ತಪಾಸಣೆ ಮೇರೆಗೆ ತಾಯಿಯೊಂದಿಗೆ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಅವರು, ಸದ್ಯ ವಿದೇಶಕ್ಕೆ ತೆರಳುತ್ತಿದ್ದು, ಬಿಜೆಪಿ ಟ್ರೋಲ್ ಸ್ನೇಹಿತರೇ ತಾನು ಭಾರತದಲ್ಲಿ ಇಲ್ಲ ಎಂದು ತುಂಬಾ ಕೆಲಸ ಮಾಡಬೇಡಿ. ನಾನು ಶೀಘ್ರದಲ್ಲಿಯೇ ಹಿಂತಿರುಗುತ್ತೇನೆ ಎಂದು ಹೇಳಿ ಕಾಲೆಳೆದಿದ್ದರು.

    ಸದ್ಯ ರಾಹುಲ್ ಟ್ವೀಟ್ ಟಾಂಗ್ ನೀಡಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ನಾವು ಸೋನಿಯಾ ಗಾಂಧಿ ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಬಯಸುತ್ತೇವೆ. ಆದರೆ ಕರ್ನಾಟಕದ ಹೆಣ್ಣು ಮಕ್ಕಳು ಸರ್ಕಾರದ ರಚನೆ ಕುರಿತು ಎದುರು ನೋಡುತ್ತಿದ್ದು, ಅವರಿಗೆ ರಾಜ್ಯ ಸರ್ಕಾರ ತನ್ನ ಸೇವೆಯನ್ನು ಆರಂಭಿಸಲಿದೆಯೇ? ನೀವು ವಿದೇಶಕ್ಕೆ ತೆರಳುವ ಮುನ್ನ ಕರ್ನಾಟಕ ಸರ್ಕಾರ ರಚನೆ ಸಾಧ್ಯವೇ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲದೇ ನೀವು ಅಲ್ಲಿಂದಲೇ ನಮಗೆ ಮನರಂಜನೆ ನೀಡುತ್ತೀರಿ ಎಂದು ಸೋಷಿಯಲ್ ಮೀಡಿಯಾದಲ್ಲಿರುವ ಪ್ರತಿಯೊಬ್ಬರು ನಂಬಿಕೆ ಇಟ್ಟಿದ್ದಾರೆ ಎಂದು ಬರೆದು ಕಾಲೆಳೆದಿದೆ.

    ಸೋನಿಯಾ ಗಾಂಧಿ ಅವರ ವೈದ್ಯಕೀಯ ಪರೀಕ್ಷೆಗೆ ರಾಹುಲ್ ಗಾಂಧಿ ಅವರು ಸೇರಿ ಭಾನುವಾರ ರಾತ್ರಿ ವಿದೇಶಕ್ಕೆ ತೆರಳಿದ್ದಾರೆ. 2011 ರಲ್ಲಿ ಸರ್ಜರಿ ಒಳಗಾಗಿದ್ದ ಸೋನಿಯಾ ಗಾಂಧಿ ಅವರು ಸದ್ಯ ಸಾಮಾನ್ಯ ಚಿಕಿತ್ಸೆಗಾಗಿ ತೆರಳಿದ್ದಾರೆ. ಒಂದು ವಾರದಲ್ಲಿ ರಾಹುಲ್ ಗಾಂಧಿ ಹಿಂದಿರುಗುವ ಸಾಧ್ಯತೆ ಇದ್ದು, ಸೋನಿಯಾ ಗಾಂಧಿ ಅವರು ಕೆಲ ದಿನಗಳ ಕಾಲ ವಿದೇಶದಲ್ಲೇ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ರಾಹುಲ್ ವಿದೇಶಕ್ಕೆ ತೆರಳಿದ ಕಾರಣ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ತಡವಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದು, ಸಂಪುಟ ರಚನೆ ಪ್ರಹಸನ ಮುಂದುವರಿಯಲು ಕಾರಣವಾಗಿದೆ ಎಂಬ ಮಾಹಿತಿ ಲಭಿಸಿದೆ.

  • ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

    ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

    ಬೆಂಗಳೂರು: ಮೈಸೂರ್ ಪಾಕ್  ಭೌಗೋಳಿಕ ಸೂಚ್ಯಂಕಕ್ಕಾಗಿ(ಜಿಐ) ಕರ್ನಾಟಕ ಮತ್ತು ತಮಿಳುನಾಡು ಮಂದಿ ಈಗ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಚರ್ಚೆ ನಡೆಸುತ್ತಿದ್ದರೆ, ರಾಜ್ಯ ಸರ್ಕಾರ ಸದ್ದಿಲ್ಲದೇ ನಿಂಬೆಹಣ್ಣಿನ ಜಿಯೋಗ್ರಫಿಕಲ್ ಐಡೆಂಟಿಫಿಕೇಷನ್ ಪಡೆಯಲು ಸಿದ್ಧತೆ ನಡೆಸುತ್ತಿದೆ.

    ಹೌದು, ಕರ್ನಾಟಕ ಸರ್ಕಾರ ವಿಜಯಪುರದ ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ವಿಶೇಷ ನಿಂಬೆಹಣ್ಣಿನ ಜಿಐ ಮಾನ್ಯತೆ ಪಡೆಯಲು ಸಿದ್ಧತೆ ನಡೆಸುತ್ತಿದೆ. ಒಂದು ವೇಳೆ ಈ ಪ್ರಯತ್ನ ಸಫಲವಾದರೆ ಮಣಿಪುರದ ಕಚಯ್ ಬಳಿಕ ನಿಂಬೆಹಣ್ಣಿನ ಜಿಐ ಪಡೆದ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

    ತೋಟಗಾರಿಕಾ ವಿಜ್ಞಾನಿಗಳು, ಸಸ್ಯಶಾಸ್ತ್ರಜ್ಞರು, ಹಣ್ಣಿನ ತಜ್ಞರ ತಂಡವೊಂದು ನಿಂಬೆ ಹಣ್ಣು ಮತ್ತು ಅದರಲ್ಲಿನ ಅಪರೂಪದ ಗುಣಗಳನ್ನು ಈಗ ಅಧ್ಯಯನ ಮಾಡಲು ಸಿದ್ಧತೆ ನಡೆಸುತ್ತಿದೆ.

    ಇಂಡಿ ನಿಂಬೆಹಣ್ಣಿನ ವಿಶೇಷತೆ ಏನು?
    ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣಲ್ಲಿ ರಸ ಹೆಚ್ಚು. ವಾರಗಟ್ಟಲೆ ಇಟ್ಟರೂ ಒಣಗುವುದಿಲ್ಲ ಮತ್ತು ಹಾಳಾಗುವುದಿಲ್ಲ. ಈ ನಿಂಬೆಯನ್ನು ಬೇರೆ ಕಡೆ ಬೆಳೆದರೂ ಇಲ್ಲಿನ ಗುಣಮಟ್ಟ, ವಿಶೇಷತೆ ಇರುವುದಿಲ್ಲ. ಈ ಪರಿಸರದ ಮಣ್ಣು ಮತ್ತು ಹವಾಗುಣದಿಂದ ಗುಣಮಟ್ಟದ ನಿಂಬೆ ಬೆಳೆಯಲಾಗುತ್ತಿದ್ದು, ಈ ವಿಶೇಷತೆಯನ್ನು ಇಟ್ಟುಕೊಂಡು ಸರ್ಕಾರ ಈಗ ಜಿಐ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುತ್ತಿದೆ.

    ಭಾರತ ನಿಂಬೆ ಉತ್ಪಾದನೆಯಲ್ಲಿ ವಿಶ್ವದಲ್ಲೇ 3ನೇ ಸ್ಥಾನ ಪಡೆದಿದ್ದು, 25 ದೇಶಗಳಿಗೆ ರಫ್ತಾಗುತ್ತಿದೆ. ಕರ್ನಾಟಕದ ಒಟ್ಟು 12,357 ಹೆಕ್ಟೇರ್ ನಿಂಬೆ ಪ್ರದೇಶದಲ್ಲಿ ವಿಜಯಪುರ ಜಿಲ್ಲೆಯಲ್ಲೇ 6,814 ಹೆಕ್ಟೇರ್ (ರಾಜ್ಯ ವಿಸ್ತೀರ್ಣದ ಶೇ.55ರಷ್ಟು) ಇದೆ. ಜಿಲ್ಲೆಯ ಇಂಡಿ ತಾಲೂಕಿನಲ್ಲಿ 3,994 ಹೆಕ್ಟೇರ್, ಸಿಂದಗಿ 1,056 ಹೆಕ್ಟೇರ್, ವಿಜಯಪುರದಲ್ಲಿ 1,055 ಹೆಕ್ಟೇರ್, ಬಸವನಬಾಗೇವಾಡಿ 741 ಹೆಕ್ಟೇರ್, ಮುದ್ದೇಬಿಹಾಳ ತಾಲೂಕಲ್ಲಿ 13 ಹೆಕ್ಟೇರ್ ನಲ್ಲಿ ನಿಂಬೆ ಬೆಳೆಯಿದೆ.

    ಇಂಡಿಯಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ತೋಟಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಒಟ್ಟ ಇಂಡಿ ತಾಲೂಕು ಒಂದರಲ್ಲೇ ಪ್ರತಿ ವರ್ಷ ಹತ್ತಿರ ಹತ್ತಿರ 2 ಲಕ್ಷ ಟನ್ ನಿಂಬೆಹಣ್ಣನ್ನು ಬೆಳೆಯಲಾಗುತ್ತಿದೆ. ಪ್ರತಿ ವಾರ ಇಂಡಿಯಿಂದ 80 ರಿಂದ 100 ಟನ್ ನಿಂಬೆ ಹಣ್ಣನ್ನು ಮಧ್ಯಪೂರ್ವ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಜಮ್ಮು ಕಾಶ್ಮೀರಕ್ಕೆ ಇಂಡಿ ನಿಂಬೆ ಹಣ್ಣು ರಫ್ತು ಆಗುತ್ತದೆ.

    ಕರ್ನಾಟಕದಲ್ಲಿ ಯಾವುದಕ್ಕೆ ಜಿಐ ಸಿಕ್ಕಿದೆ?
    ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು, ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದ ಎಲೆ, ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಮೊಳಕಾಲ್ಮುರು ಸೀರೆಗಳು, ಮಲಬಾರ್ ಅರಾಬಿಕಾ ಕಾಫಿ, ಮಲಬಾರ್ ರೋಬಸ್ಟಾ ಕಾಫಿ, ಕೊಡಗು ಹಸಿರು ಏಲಕ್ಕಿ, ಧಾರವಾಡ ಪೇಡಾ, ದೇವನಹಳ್ಳಿ ಚಕ್ಕೊತ್ತಾ, ಅಪ್ಪೆಮಿಡಿ ಮಾವು, ಕಮಲಾಪುರ ಕೆಂಪು ಬಾಳೆಹಣ್ಣು, ಚನ್ನಪಟ್ಟಣದ ಗೊಂಬೆ, ಇಳಕಲ್ ಸೀರೆಗಳು ಸೇರಿದಂತೆ ರಾಜ್ಯದ 40 ಉತ್ಪನ್ನಗಳಿಗೆ  ಜಿಐ ಮಾನ್ಯತೆ ಸಿಕ್ಕಿದೆ.

    ಅತಿ ಹೆಚ್ಚು ಜಿಐ ಮಾನ್ಯತೆ ಪಡೆದ ರಾಜ್ಯಗಳು?
    ರಾಜ್ಯಗಳ ಪ್ರಸ್ತಾಪವನ್ನು ಒಪ್ಪಿ ಕೇಂದ್ರ ಸರ್ಕಾರ ಜಿಯೋಗ್ರಫಿಕಲ್ ಐಡೆಂಟಿಫಿಕೇಷನ್ ಮಾನ್ಯತೆಯನ್ನು ನೀಡುತ್ತದೆ. ಪಟ್ಟಿಯಲ್ಲಿ 40 ಉತ್ಪನ್ನಗಳಿಗೆ ಮಾನ್ಯತೆ ಪಡೆಯುವ ಮೂಲಕ ಅತಿ ಹೆಚ್ಚು ಜಿಐ ಸಂಪಾದಿಸಿದ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದುಕೊಂಡಿದೆ. ರಾಜ್ಯಕ್ಕೆ ಸಿಕ್ಕಿರುವ 40ರಲ್ಲಿ 13 ಮೈಸೂರಿನಿಂದ ಬಂದಿರುವ ಉತ್ಪನಗಳು ಎನ್ನುವುದು ವಿಶೇಷ.

    ಕರ್ನಾಟಕದ ಬಳಿಕ ಮಹಾರಾಷ್ಟ್ರ(30), ಕೇರಳ(27), ಉತ್ತರ ಪ್ರದೇಶ(24), ಆಂಧ್ರಪ್ರದೇಶ(18), ಪಶ್ಚಿಮ ಬಂಗಾಳ(15), ಒಡಿಶಾ(14), ರಾಜಸ್ಥಾನ(14), ಗುಜರಾತ್(13), ಬಿಹಾರ(11), ತೆಲಂಗಾಣ(11), ಅಸ್ಸಾಂ(8), ಮಧ್ಯಪ್ರದೇಶ(8), ಜಮ್ಮು ಕಾಶ್ಮೀರ(8) ರಾಜ್ಯಗಳ ಉತ್ಪನ್ನಗಳಿಗೆ ಜಿಐ ಸಿಕ್ಕಿದೆ.

    ಇದನ್ನೂ ಓದಿ: ಮೈಸೂರು ಪಾಕ್ ಯಾರಿಗೆ ಸೇರಿದ್ದು? ಕನ್ನಡಿಗರು- ತಮಿಳಿಗರ ಮಧ್ಯೆ ಚರ್ಚೆ ಆರಂಭ

     

  • ವಿದ್ಯಾರ್ಥಿಗಳೇ ಗಮನಿಸಿ, SSLC & PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧ – ಪರೀಕ್ಷೆ ಬರೆಯೋಕೆ ರೆಡಿಯಾಗಿ

    ವಿದ್ಯಾರ್ಥಿಗಳೇ ಗಮನಿಸಿ, SSLC & PUC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಸಿದ್ಧ – ಪರೀಕ್ಷೆ ಬರೆಯೋಕೆ ರೆಡಿಯಾಗಿ

    ಬೆಂಗಳೂರು: 2017-18 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿಯು ಪ್ರಕಟ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಏಪ್ರಿಲ್ 4ರವರೆಗಿನ ಅವಧಿಯೊಳಗೆ ನಡೆಯಲಿವೆ ಎಂದು ತಿಳಿಸಿದೆ.

    ಮಾರ್ಚ್ 1 ರಿಂದ ಮಾರ್ಚ್ 16ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ. ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.

    ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಈ ಕೆಳಗಿನ ದಿನಾಂಕದಂದು ನಡೆಯಲಿವೆ:
    ಮಾರ್ಚ್ 23 – ಪ್ರಥಮ ಭಾಷೆ, ಮಾರ್ಚ್ 26 – ಗಣಿತ, ಮಾರ್ಚ್ 28 – ದ್ವಿತೀಯ ಭಾಷೆ, ಮಾರ್ಚ್ 31 – ವಿಜ್ಞಾನ, ಏಪ್ರಿಲ್ 2 – ತೃತೀಯ ಭಾಷೆ, ಏಪ್ರಿಲ್ 4 – ಸಮಾಜ ವಿಜ್ಞಾನ

    ಪಿಯುಸಿ ಪರೀಕ್ಷೆಯು ಈ ಕೆಳಗಿನ ದಿನಾಂಕದಂದು ನಡೆಯಲಿವೆ:
    ಮಾರ್ಚ್ 1 – ಅರ್ಥಶಾಸ್ತ್ರ, ಭೌತಶಾಸ್ತ್ರ, ಮಾರ್ಚ್ 2 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 3 – ಹಿಂದಿ, ತೆಲುಗು, ಮರಾಠಿ, ಫ್ರೆಂಚ್, ಮಾರ್ಚ್ 5 – ಬ್ಯುಸಿನೆಸ್ ಸ್ಟಡೀಸ್, ಜೀವಶಾಸ್ತ್ರ, ಮಾರ್ಚ್ 6 – ರಾಜ್ಯಶಾಸ್ತ್ರ, ಮಾರ್ಚ್ 7- ಮಾಹಿತಿ ತಂತ್ರಜ್ಞಾನ, ಹೆಲ್ತ್ ಕೇರ್, ಮಾರ್ಚ್ 8 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಕೆಮಿಸ್ಟ್ರಿ, ಮಾರ್ಚ್ 9- ಲಾಜಿಕ್, ಲೆಕ್ಕಶಾಸ್ತ್ರ, ಎಜುಕೇಷನ್, ಮಾರ್ಚ್ 10- ಇತಿಹಾಸ, ಗೃಹ ವಿಜ್ಞಾನ, ಮಾರ್ಚ್ 12- ಸಮಾಜಶಾಸ್ತ್ರ, ಗಣಿತ, ಬೇಸಿಕ್ ಗಣಿತ, ಮಾರ್ಚ್ 13- ಉರ್ದು, ಸಂಸ್ಕೃತ, ಮಾಚ್ 14- ಇಂಗ್ಲಿಷ್, ಮಾರ್ಚ್ 15 ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನ ಸಂಗೀತ, ಪ್ರಾಣಿಶಾಸ್ತ್ರ, ಮಾರ್ಚ್ 16- ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್.