– ಸೂಕ್ಷ್ಮ-ಸಣ್ಣ ಕೈಗಾರಿಕಾ ವಲಯಕ್ಕೆ ಪ್ರತ್ಯೇಕ ನೀತಿ ರೂಪಿಸುವಂತೆ ಮನವಿ ಸಲ್ಲಿಸಲು ನಿರ್ಧಾರ
– 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ
ಮಡಿಕೇರಿ: ಉದ್ಯಮ ವಲಯವನ್ನು (Industry sector) ಕಾಡುತ್ತಿರುವ ಸಮಸ್ಯೆಗಳನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಮೂಲಸೌಕರ್ಯಗಳ ಕೊರತೆಯೂ ಸೇರಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (FKCCI)ಯ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದರು.
ತಮ್ಮ ‘ವಿಷನ್ ಸ್ಟೇಟ್‌ಮೆಂಟ್ 2025–26’ನ್ನು ಇಲ್ಲಿನ ಕ್ಲಬ್ ಮಹೀಂದ್ರ ಹೋಟೆಲ್‌ನಲ್ಲಿ ಶನಿವಾರ ಬಿಡುಗಡೆ ಮಾಡಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಎಫ್‌ಕೆಸಿಸಿಐ ಸಂಸ್ಥೆಯು ಉದ್ಯಮಿಗಳು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಇತ್ತೀಚೆಗೆ ರಸ್ತೆಗುಂಡಿ ಸಮಸ್ಯೆಗಳನ್ನ ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಅವರು ಉನ್ನತಮಟ್ಟದ ಸಭೆ ನಡೆಸಿದರು. ಹೀಗೆ, ಅನೇಕ ಸಮಸ್ಯೆಗಳನ್ನ ಗಮನಕ್ಕೆ ತರಲಾಗುತ್ತಿದೆ ಎಂದರು.
ನಾನು ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡ ವಲಯಕ್ಕೆ ಭೇಟಿ ನೀಡಿದ್ದೇನೆ. ಇಲ್ಲಿನ ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
10 ಲಕ್ಷ ಉದ್ಯಮಿಗಳನ್ನ ರೂಪಿಸುವ ಗುರಿ
ರಾಜ್ಯದಲ್ಲಿ 10 ಲಕ್ಷ ಉದ್ಯಮಿಗಳನ್ನು ರೂಪಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡಲು ವಿದ್ಯಾರ್ಥಿಗಳಿಂದ ‘ಬಿಸಿನೆಸ್ ಪ್ಲ್ಯಾನ್’ ಅನ್ನು ಆಹ್ವಾನಿಸಿ, ಅದರಲ್ಲಿ ಉತ್ತಮ ಯೋಜನೆಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನೂ ಮುಂಬರುವ ದಿನಗಳಲ್ಲಿ ಜಾರಿಗೆ ತರಲಾಗುವುದು. ಇದರಿಂದ ಉದ್ಯಮ ವಲಯಕ್ಕೆ ಯುವ ಸಮುದಾಯ ಸೆಳೆಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ನ.19ರಂದು ಮಹಿಳಾ ಉದ್ಯಮಿಗಳ ದಿನಾಚರಣೆ
ನ.19ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸರ್‌ಎಂವಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನಾಚರಣೆ ಏರ್ಪಡಿಸಲಾಗಿದೆ. ಯಶಸ್ವಿ ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ, ಸಂವಾದಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿರುವ ಉದ್ಯಮಿಗಳ ಪೈಕಿ ಶೇ.90ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯದವರೇ ಇದ್ದಾರೆ. ಇವರಿಗಾಗಿಯೇ ಪ್ರತ್ಯೇಕ ನೀತಿಯನ್ನು ರೂಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಗಿರೀಶ್ ಗಣಪತಿ ಭಾಗವಹಿಸಿದ್ದರು.
ಬೆಂಗಳೂರು: ಸಾರ್ವಜನಿಕ ವಲಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು (KSDL) 2024-25ನೇ ಸಾಲಿನ ಲಾಭದಲ್ಲಿ 135 ಕೋಟಿ ರೂಪಾಯಿಗಳನ್ನು ಶುಕ್ರವಾರ ಸರ್ಕಾರಕ್ಕೆ ಹಸ್ತಾಂತರಿಸಿತು.
ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಮತ್ತು ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ (Appaji Nadagouda) ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು. ಈ ಕಾರ್ಯಕ್ರಮವು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಸಚಿವ ಪಾಟೀಲ್ ಮಾತನಾಡಿ, ಕೆಎಸ್‌ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭ ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ ಎಂದಿದ್ದಾರೆ.
2022-23ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ 54 ಕೋಟಿ ರೂಪಾಯಿ ಡಿವಿಡೆಂಡ್ (ಲಾಭಾಂಶ) ಕೊಡಲಾಗಿತ್ತು. 2023-24ರಲ್ಲಿ 108 ಕೋಟಿ ರೂ. ಲಾಭಾಂಶ ಹಸ್ತಾಂತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಲಾಭಾಂಶದಲ್ಲಿ ಈಗ 27 ಕೋಟಿ ರೂ. ಹೆಚ್ಚಳವಾಗಿದೆ. ಮುಂಬರುವ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ಅವರು ನುಡಿದಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ.ಎಂ.ಸಿ ಸುಧಾಕರ್, ಸಂತೋಷ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ ಪ್ರಶಾಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು: ಇನ್ಮುಂದೆ ಸರ್ಕಾರದ ಸಭೆ, ಸಮಾರಂಭಗಳಲ್ಲಿ (Government Programs) ಜನಪ್ರತಿನಿಧಿಗಳ ಆಹ್ವಾನಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ. 2019ರ ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನ (New Guidelines) ಮಾರ್ಪಾಡು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ರಾಜ್ಯ ಮಟ್ಟದ ಕಾರ್ಯಕ್ರಮ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮ, ರಾಜ್ಯದಲ್ಲಿ ನಡೆಯೋ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ. ಅದರ ಅನ್ವಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಶಿಷ್ಟಾಚಾರ ಪಾಲನೆ ಮಾಡಬೇಕಾಗಿ ಸೂಚಿಸಿದೆ. ಮಾರ್ಗಸೂಚಿಯಲ್ಲಿ ಏನಿದೆ ಅನ್ನೋದನ್ನ ಮುಂದೆ ನೋಡೋಣ…
ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಮಾರ್ಗಸೂಚಿ
> ಸಿಎಂ, ಡಿಸಿಎಂ, ಸಂಬಂಧ ಪಟ್ಟ ಇಲಾಖೆ ಸಚಿವರು, ಇಲಾಖಾ ಸಚಿವರು ಸೂಚಿಸುವ ಯಾವುದೇ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಬಹುದು.
> ಸಿಎಂ, ಡಿಸಿಎಂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಸಂಬಂಧ ಪಟ್ಟ ಇಲಾಖೆ ಸಚಿವರು ಅಧ್ಯಕ್ಷತೆ ವಹಿಸುತ್ತಾರೆ.
> ಇಲಾಖಾ ಸಚಿವರು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಸ್ಥಳೀಯ ಶಾಸಕರು ಅಧ್ಯಕ್ಷತೆ ವಹಿಸುವುದು.
> ಇತರೆ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಯಾರು ಅಧ್ಯಕ್ಷತೆವಹಿಸಬೇಕು ಅಂತ ಇಲಾಖೆ ಸಚಿವರು ನಿರ್ಧಾರ ಮಾಡುತ್ತಾರೆ.
> ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗು ಗಣ್ಯರ ಹೆಸರು 9 ಸಂಖ್ಯೆ ಮೀರದಂತೆ ಹಾಗೂ ಅನಿವಾರ್ಯ ಸಮಯದಲ್ಲಿ 13 ಸಂಖ್ಯೆ ಮೀರದಂತೆ ಆಯ್ಕೆ ಮಾಡುವುದು. ಸ್ಥಳೀಯ ಶಾಸಕರ ಹೆಸರು ಕಡ್ಡಾಯ ಸೇರಿಸುವುದು.
> ವಿಧಾನಸೌಧ, ವಿಕಾಸಸೌಧದಲ್ಲಿ ನಡೆಯೊ ಕಾರ್ಯಕ್ರಮದಲ್ಲಿ ಇಲಾಖೆ ಸಚಿವರು ಸಭಾಪತಿ, ಸಭಾಧ್ಯಕ್ಷರ ಸಹಮತಿ ಪಡೆದು ಯಾರು ವೇದಿಕೆ ಆಸೀನರಾಗೋ ಗಣ್ಯರ ಅಯ್ಕೆ ಮಾಡುವುದು.
ಇಲಾಖೆಗಳು ಆಯೋಜಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು
> ಸಿಎಂ, ಡಿಸಿಎಂ, ಸಂಬಂಧ ಪಟ್ಟ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಇಲಾಖಾ ಸಚಿವರು ಸೂಚಿಸುವ ಯಾವುದೇ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಬಹುದು.
> ಸಿಎಂ, ಡಿಸಿಎಂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಸಂಬಂಧಪಟ್ಟ ಇಲಾಖೆ ಸಚಿವರು ಅಧ್ಯಕ್ಷತೆವಹಿಸುತ್ತಾರೆ.
> ಇಲಾಖಾ ಸಚಿವರು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷತೆವಹಿಸುವುದು.
> ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಸ್ಥಳೀಯ ಶಾಸಕರು ಅಧ್ಯಕ್ಷತೆವಹಿಸುವುದು.
> ಇತರೆ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಯಾರು ಅಧ್ಯಕ್ಷತೆವಹಿಸಬೇಕು ಅಂತ ಇಲಾಖೆ ಸಚಿವರು ನಿರ್ಧಾರ ಮಾಡುತ್ತಾರೆ.
> ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಹೆಸರು 9 ಸಂಖ್ಯೆ ಮೀರದಂತೆ ಹಾಗೂ ಅನಿವಾರ್ಯ ಸಮಯದಲ್ಲಿ 13 ಸಂಖ್ಯೆ ಮೀರದಂತೆ ಆಯ್ಕೆ ಮಾಡುವುದು. ಸ್ಥಳೀಯ ಶಾಸಕರ ಹೆಸರು ಕಡ್ಡಾಯ ಸೇರಿಸುವುದು.
ಜಿಲ್ಲಾಡಳಿತ ಆಯೋಜಿಸುವ ಜಿಲ್ಲಾಮಟ್ಟದ ಕಾರ್ಯಕ್ರಮಗಳು
> ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಇತರೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದಿಸುವ ಇತರೆ ಗಣ್ಯರು ಉದ್ಘಾಟನೆ ಮಾಡ್ತಾರೆ.
> ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡಿದರೆ ಸ್ಥಳೀಯ ಶಾಸಕರು ಅಧ್ಯಕ್ಷತೆವಹಿಸಬೇಕು.
> ಜಿಲ್ಲೆಯ ಇತರೆ ಸಚಿವರು ಉದ್ಘಾಟನೆ ಮಾಡಿದರೆ ಶಾಸಕರು ಅಧ್ಯಕ್ಷತೆ ವಹಿಸಬೇಕು.
> ಇತರೇ ಗಣ್ಯರು ಉದ್ಘಾಟನೆ ಮಾಡಿದರೆ ಯಾರು ಅಧ್ಯಕ್ಷತೆ ವಹಿಸಬೇಕು ಅಂತ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧಾರ ಮಾಡುತ್ತಾರೆ.
> ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗು ಗಣ್ಯರ ಹೆಸರು 9 ಸಂಖ್ಯೆ ಮೀರದಂತೆ ಹಾಗೂ ಅನಿವಾರ್ಯ ಸಮಯದಲ್ಲಿ 13 ಸಂಖ್ಯೆ ಮೀರದಂತೆ ಆಯ್ಕೆ ಮಾಡುವುದು. ಸ್ಥಳೀಯ ಶಾಸಕರ ಹೆಸರು ಕಡ್ಡಾಯ ಸೇರಿಸುವುದು.
ರಾಜ್ಯದಲ್ಲಿ ಆಯೋಜನೆ ಮಾಡುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳು
> ರಾಜ್ಯಪಾಲರು, ಸಿಎಂ, ಡಿಸಿಎಂ ಕೇಂದ್ರ ಕ್ಯಾಬಿನೆಟ್ ಸಚಿವರು, ಇಲಾಖೆ ಸಚಿವರು, ಅಥವಾ ಸಿಎಂ ಸೂಚಿಸುವ ಗಣ್ಯರು ಕಾರ್ಯಕ್ರಮ ಉದ್ಘಾಟನೆ ಮಾಡುತ್ತಾರೆ.
ಅಧ್ಯಕ್ಷತೆ
> ರಾಜ್ಯಪಾಲರು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರೆ ಸಿಎಂ, ಕೇಂದ್ರ ಸಚಿವರು, ಡಿಸಿಎಂ ಅಧ್ಯಕ್ಷತೆ
> ಸಿಎಂ ,ಡಿಸಿಎಂ, ಕೇಂದ್ರ ಸಚಿವರು ಉದ್ಘಾಟನೆ ಮಾಡಿದ್ರೆ ಇಲಾಖೆ ಸಚಿವರು ಅಧ್ಯಕ್ಷತೆ
> ಇಲಾಖೆ ಸಚಿವರು ಉದ್ಘಾಟನೆ ಮಾಡಿದ್ರೆ ಸ್ಥಳೀಯ ಶಾಸಕರು ಅಧ್ಯಕ್ಷತೆ
> ಗಣ್ಯರು ಉದ್ಘಾಟನೆ ಮಾಡಿದರೆ ಯಾರು ಅಧ್ಯಕ್ಷತೆ ಅಂತ ಸಿಎಂರಿಂದ ನಿರ್ಧಾರ
> ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಹೆಸರು 9 ಸಂಖ್ಯೆ ಮೀರದಂತೆ ಹಾಗೂ ಅನಿವಾರ್ಯ ಸಮಯದಲ್ಲಿ 13 ಸಂಖ್ಯೆ ಮೀರದಂತೆ ಆಯ್ಕೆ ಮಾಡುವುದು. ಸ್ಥಳೀಯ ಶಾಸಕರು, ಸಂಸದರು ಹೆಸರು ಕಡ್ಡಾಯ ಸೇರಿಸುವುದು. ವಿಧಾನಸೌಧ, ವಿಕಾಸಸೌಧದಲ್ಲಿ ಕಾರ್ಯಕ್ರಮ ನಡೆದರೆ ಸಭಾಪತಿ, ಸಭಾಧ್ಯಕ್ಷರ ಸಹಮತಿ ಪಡೆದು ಅತಿಥಿಗಳ ಆಹ್ವಾನ ಮಾಡುವುದು.
ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ಗಣ್ಯರ ಜೇಷ್ಠತಾ ಪಟ್ಟಿ
1. ರಾಜ್ಯಪಾಲರು
2. ಮುಖ್ಯಮಂತ್ರಿಗಳು
3. ಕೇಂದ್ರ ಸಚಿವ ಸಂಪುಟ ದರ್ಜೆಯ ಸಚಿವರು
4. ಉಪಮುಖ್ಯಮಂತ್ರಿಗಳು
5. ಕೇಂದ್ರ ರಾಜ್ಯ ಸಚಿವರು
6. ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು
7. ಸಭಾಧ್ಯಕ್ಷರು, ಕರ್ನಾಟಕ ವಿಧಾನ ಸಭೆ
8. ರಾಜ್ಯ ಸಚಿವ ಸಂಪುಟ ದರ್ಜೆಯ ಸಚಿವರುಗಳು
9. ವಿರೋಧ ಪಕ್ಷದ ನಾಯಕರುಗಳು, ವಿಧಾನ ಸಭೆ ಮತ್ತು ವಿಧಾನ ಪರಿಷತ್ತು
10. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಧೀಶರು
11. ಅಡ್ವಕೇಟ್ ಜನರಲ್
12. ಉಪ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು
13. ಉಪ ಸಭಾಧ್ಯಕ್ಷರು, ಕರ್ನಾಟಕ ವಿಧಾನ ಸಭೆ
14. ಸರ್ಕಾರಿ ಮುಖ್ಯ ಸಚೇತಕರು, ವಿಧಾನ ಸಭೆ ಮತ್ತು ವಿಧಾನ ಪರಿಷತ್ತು.
15. ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಗಣ್ಯರು
16. ಸಂಸದರು, ಲೋಕಸಭೆ
17. ಸಂಸದರು, ರಾಜ್ಯಸಭೆ
18. ರಾಜ್ಯ ಸಚಿವರ ದರ್ಜೆಯ ಸ್ಥಾನಮಾನ ಹೊಂದಿರುವ ಗಣ್ಯರು
19. ವಿಧಾನ ಸಭೆಯ ಶಾಸಕರುಗಳು
20. ವಿಧಾನ ಪರಿಷತ್ತಿನ ಶಾಸಕರುಗಳು
21. ಮಂಡಳಿಗಳು, ನಿಗಮಗಳು, ಆಯೋಗಗಳು, ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಪ್ರಾಧಿಕಾರಗಳ ಅಕಾಡೆಮಿಗಳು ಮತ್ತು ಇನ್ನಿತರೇ ಸರ್ಕಾರಿ ಅಂಗ ಸಂಸ್ಥೆ ಅಧ್ಯಕ್ಷರುಗಳು, ಸದಸ್ಯರು
22. (i) ಇಲಾಖೆ ಮಟ್ಟದ ಕಾರ್ಯಕ್ರಮಗಳಾಗಿದ್ದಲ್ಲಿ ಮುಖ್ಯ ಕಾರ್ಯದರ್ಶಿಗಳು, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು.
(ii) ಜಿಲ್ಲಾ ಮಟ್ಟದ ಕಾರ್ಯಕ್ರಮಗಳಾಗಿದ್ದಲ್ಲಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು, ಎಸ್ಪಿ ಮತ್ತು ಇಲಾಖಾ ಮುಖ್ಯಸ್ಥರು.
23. ಸ್ವಾತಂತ್ರ ಹೋರಾಟಗಾರರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಇತರೆ ಪ್ರಶಸ್ತಿ ಪುರಸ್ಕೃತರು, ಕಲಾವಿದರು ಪರಿಣಿತರು, ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಲೇಖಕರು, ವಿಜ್ಞಾನಿಗಳು, ಕ್ರೀಡಾಪಟುಗಳು, ರೈತ ಪ್ರತಿನಿಧಿಗಳು, ಸಮಾಜಸೇವಕರು, ಹಿರಿಯ ನ್ಯಾಯವಾದಿಗಳು.
ಬೆಂಗಳೂರು: ಋತುಚಕ್ರ ರಜೆಯನ್ನು (Period Leave) ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದ್ರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ (Santosh Lad) ಅವರು ಹೇಳಿದರು.
ಋತುಚಕ್ರ ರಜೆ ನೀತಿ ಜಾರಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಸರ್ಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೇಬೇಕು. ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೇ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಈ ರಜೆ ನೀತಿ ಜಾರಿ ಸಂಬಂಧ ಸ್ವಲ್ವ ದಿನದಲ್ಲಿ ಇನ್ನಷ್ಟು ಚರ್ಚೆ ಮಾಡಲಾಗುವುದು. ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್; 4ನೇ ಸ್ಟೇಜ್‌ನಲ್ಲಿ ಕಾಯಿಲೆ
ಋತುಚಕ್ರ ರಜೆ ಕೊಡಬೇಕು ಎಂಬ ಕಾರಣಕ್ಕೆ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು (Women Employee) ಕೆಲಸಕ್ಕೆ ಹೆಚ್ಚು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಮ್ಮೆ ಜಾರಿ ಜಾರಿ ಮಾಡಿ ಅದರ ಸಾಧಕ ಬಾಧಕ ನೋಡೊಣ. ಹಾಗೆ ನೋಡಿದರೆ ಈ ರಜೆ ನೀತಿಯನ್ನು ಹಲವು ಕಂಪನಿಗಳು ಪಾಲಿಸುತ್ತೀವೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಾಂತಾರ’ಕ್ಕೆ ವಿಶೇಷ ಸ್ಥಾನ: ಸುಮಲತಾ ಬಣ್ಣನೆ
ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ರಜೆ ಕೊಟ್ಟರೆ ಸಮಸ್ಯೆಯಾಗುತ್ತದೆ ಎಂಬ ದೂರುಗಳು ಬರತೊಡಗಿದರೆ ಅದನ್ನು ಪರಿಗಣಿಸಿ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ
ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರು ಮನೆಗಳಲ್ಲಿ ದುಡಿಯುತ್ತಾರೆ, ಹೊರಗಡೆ ಕೆಲಸಕ್ಕೂ ಹೋಗುತ್ತಾರೆ. ಅವರ ಮೇಲೆ ಮಾನಸಿಕ ಒತ್ತಡ ಇರುತ್ತದೆ. ಮಧ್ಯಮ ವರ್ಗದ ದುಡಿಯುವ ಮಹಿಳೆಯರ ಸಮಸ್ಯೆ ಸಾಕಷ್ಟು ಇರುತ್ತವೆ. ಸಾಹುಕಾರರ ಮನೆಯಲ್ಲಿನ ಮಹಿಳೆಯರು ಕೆಲಸಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಾರೆ. ಒಂದು ದಿನ ರಜೆ ಸಿಕ್ಕರೆ ಅವರು ಮಾರನೇ ದಿನ ಇನ್ನಷ್ಟು ದಕ್ಷವಾಗಿ ಕೆಲಸ ಮಾಡಬಲ್ಲರು ಎಂದರು.
ಋತುಚಕ್ರ ರಜೆ ನೀತಿ ಕುರಿತು ಅಧ್ಯಯನ ನಡೆಸಿದ್ದ ಸಮಿತಿಯ ಅಧ್ಯಕ್ಷೆ ಕ್ರೈಸ್ಟ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಡೀನ್ ಮಾತನಾಡಿ, ಋತುಚಕ್ರ ರಜೆ ನೀತಿಗೆ ಶಿಫಾರಸು ಮಾಡಲು ಸಾಕಷ್ಟು ಅಧ್ಯಯನ ನಡೆಸಿದ್ದೆವು. ಎಲ್ಲಾ ಮಾನದಂಡಗಳನ್ನು ಅಧ್ಯಯನ ಮಾಡಿಯೇ ಶಿಫಾರಸು ಮಾಡಿದ್ದೆವು ಎಂದು ಹೇಳಿದರು.
– ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ವೇಳೆ ಸಮೀಕ್ಷಕರ ಸಮಸ್ಯೆ ಅನಾವರಣ
ಮಡಿಕೇರಿ: ರಾಜ್ಯಾದ್ಯಂತ ಆರಂಭಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ 4ನೇ ದಿನವೂ ಸರ್ವರ್ ಸಮಸ್ಯೆಯ ತಲೆನೋವಾಗಿದೆ. ಸಮೀಕ್ಷೆ ಶುರುವಾಗಿ 4ನೇ ದಿನಕ್ಕೆ ಕಾಲಿಟ್ಟರೂ ಸರ್ವರ್ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಕರು ಪ್ರತಿ ಮನೆಮನೆಗೆ ತೆರಳಿ ಗಂಟೆಗಟ್ಟಲೇ ಓಟಿಪಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್ ನಡೆಸಿದಾಗ ಸಮೀಕ್ಷಕರ ಪರದಾಟಗಳು ಅನಾವರಣಗೊಂಡಿದೆ.
15 ದಿನಗಳಲ್ಲಿ ಜಾತಿ ಜನಗಣತಿ ಕಾರ್ಯ ಮುಗಿಸಬೇಕೆಂದು ಈಗಾಗಲೇ ಶಿಕ್ಷಕರಿಗೆ ಸೂಚನೆ ಕೊಟ್ಟಿದೆ. ದಸರಾ ರಜೆ ಕೂಡ ಇರೋದ್ರಿಂದ ಶಿಕ್ಷಕರು ನಿತ್ಯ ಸಮೀಕ್ಷಾ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ರೆ ಕೊಡಗಿನಲ್ಲಿ ಸರ್ವರ್ ಸಮಸ್ಯೆ ಇರೋದ್ರಿಂದ ಸಮೀಕ್ಷಾ ಮಾಹಿತಿಯನ್ನ ಮೊಬೈಲ್ ಆ್ಯಪ್‌ನಲ್ಲಿ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್
2-3 ಗಂಟೆ ಒಂದೇ ಮನೆಯಲ್ಲಿ ಠಿಕಾಣಿ
ಹೇಗೋ ಹರಸಾಹಸ ಮಾಡಿ ಎಲ್ಲಾ ಮಾಹಿತಿಯನ್ನ ಆ್ಯಪ್‌ನಲ್ಲಿ ದಾಖಲಿಸಿದ್ರೆ ಓಟಿಪಿ ಹಾಕುವ ಸಂದರ್ಭದಲ್ಲೇ ಕೈಕೊಡುತ್ತಿದೆ. ಹೀಗಾಗಿ ಶಾಲಾ ಶಿಕ್ಷಕರು ಓಟಿಪಿಗಾಗಿ ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ. ಸರ್ವೇ ನಡೆಸಲು ಎರಡು ಮೂರು ಗಂಟೆಗಳ ಕಾಲ ಶಿಕ್ಷಕರು ಒಂದೇ ಮನೆ ಬಳಿ ಕುಳಿತಿರುತ್ತಾರೆ. ಇದರಿಂದ ಮಾಹಿತಿ ನೀಡುತ್ತಿರುವ ಜನಸಾಮಾನ್ಯರಿಗೂ ಕಿರಿಕಿರಿ ಉಂಟಾಗುತ್ತಿದೆ. ಇದನ್ನೂ ಓದಿ: ಜಾತಿ ಜನಗಣತಿ ವಿರೋಧಿಸಿ ಅರ್ಜಿ – ಕೇಂದ್ರ , ರಾಜ್ಯ, ಸೆನ್ಸಸ್ ಮಂಡಳಿ, ಹಿಂದುಳಿದ ಆಯೋಗಕ್ಕೆ ನೋಟಿಸ್ ಜಾರಿ
ಸಂಜೆಯಾದ್ರೆ ಆನೆಕಾಟ, ಬೆಳಗ್ಗೆ ನೆಟ್‌ವರ್ಕ್ ಸಮಸ್ಯೆ
ಇನ್ನೂ ಕೊಡಗು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಗಣತಿದಾರರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಮನೆಯ ಪೂರ್ಣ ವಿವರ ದಾಖಲಿಸಿ ಅಪ್‌ಲೋಡ್ ಮಾಡಿದ ನಂತರ ಮತ್ತೊಂದು ಮನೆ ಗಣತಿ ನಡೆಸಬೇಕು. ಆದ್ರೆ ಇಲ್ಲಿನ ಜನರ ಬಳಿ ಬಹುತೇಕ 4ಜಿ ಮೊಬೈಲ್‌ಗಳಿವೆ ನೆಟ್‌ವರ್ಕ್ ಸಮಸ್ಯೆ ಕೂಡ ಕಾಡುತ್ತಿರೋದ್ರಿಂದ, ಆ್ಯಪ್ ಡೌನ್‌ಲೋಡ್ ಮಾಡೋದು ಕೂಡ ಸಮಸ್ಯೆಯಾಗ್ತಿದೆ. ಸಾರ್ವಜನಿಕರ ಮನೆಗಳ ಲೊಕೆಷನ್ ಮಾಹಿತಿಯೂ ನೆಟ್‌ವರ್ಕ್ ಸಮಸ್ಯೆಯಿಂದ ಸರಿಯಾಗಿ ನಮೂದಾಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಸಂಜೆ 5 ಗಂಟೆ ನಂತರವೇ ಮನೆಗೆ ಬರ್ತಾರೆ. ಆದ್ರೆ ಸಂಜೆಯಾಗ್ತಿದ್ದಂತೆ ಕಾಡಾನೆಗಳ ಕಾಡ ಶುರುವಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು 1,38,112 ಸಮೀಕ್ಷೆ ಮಾಡಲು ಗುರಿ ನೀಡಲಾಗಿದೆ. ಆದ್ರೆ ಕಳೆದ 3-4 ದಿನಗಳಲ್ಲಿ ಕೇವಲ 1,133 ಮನೆಗಳು ಮಾತ್ರ ಗಣತಿಯಾಗಿದೆ. ಈ ಬಗ್ಗೆ ವಕ್ಫ್ ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ರಾಜ್ಯದಲ್ಲಿ ಈ ರೀತಿಯ ಸಮಸ್ಯೆಯಾಗಿದೆ. ಪ್ರತಿನಿತ್ಯ ಇದರ ಬಗ್ಗೆ ಜಮೀರ್ ಅಹ್ಮದ್ ಅಹಮದ್ ಮಾಹಿತಿ ಪಡೆಯುತ್ತಿದ್ದಾರೆ. ಸರ್ವರ್ ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ವಿವಾದದ ನಡುವೆಯೇ ನಾಳೆಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಾರಂಭ ಆಗಲಿದೆ. ಕ್ರಿಶ್ಚಿಯನ್‌ಗೆ ಮತಾಂತರ ಆದ ಜಾತಿಗಳ (Caste) ಬಗೆಗಿನ ವಿವಾದ ಬೆನ್ನಲ್ಲೇ ಎಚ್ಚೆತ್ತಿರೋ ಹಿಂದುಳಿದ ವರ್ಗಗಳ ಆಯೋಗ ವಿವಾದದ 33 ಜಾತಿಗಳನ್ನ ಕೈಬಿಟ್ಟು ಸಮೀಕ್ಷೆ ನಡೆಸಲು ನಿರ್ಧಾರ ಮಾಡಿದೆ.
ಭಾರೀ ವಿವಾದಕ್ಕೆ ಕಾರಣವಾಗಿರೋ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಾಳೆಯಿಂದ ಪ್ರಾರಂಭವಾಗಲಿದೆ. ಮತಾಂತರವಾದ ಜಾತಿಗಳ ಗೊಂದಲದ ನಡುವೆಯೇ ಸಮೀಕ್ಷೆಗೆ (Caste Census) ಹಿಂದುಳಿದ ವರ್ಗಗಳ ಆಯೋಗ ಸಿದ್ದತೆ ಮಾಡಿಕೊಂಡಿದೆ. ಇದೇ ವೇಳೆ ಗೊಂದಲಕ್ಕೆ ಕಾರಣವಾದ 33 ಜಾತಿಗಳನ್ನ ಸರ್ಕಾರದ (Karnataka Government) ಸಲಹೆ ಮೇರೆಗೆ ಆಯೋಗ ಕೈ ಬಿಟ್ಟಿದೆ. ಪಟ್ಟಿಯಲ್ಲಿ ಅ ಜಾತಿ ಹೆಸರು ಇರೋದಿಲ್ಲ. ಆದರೆ ಜನರ ಇಚ್ಚೆ ಇದ್ದರೆ ಪಟ್ಟಿಯಿಂದ ಕೈಬಿಟ್ಟಿರೋ ಧರ್ಮ ಮತ್ತು ಜಾತಿ ಹೆಸರು ಬರೆಸಬಹುದು ಅಂತ ಆಯೋಗ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್
ಮತಾಂತರ ಆದವರಿಗೆ ಆ ಧರ್ಮವೇ ಫಿಕ್ಸ್
ಮತಾಂತರವಾದ ಜಾತಿಗಳ ಇನ್ನಷ್ಟು ಗೊಂದಲಗಳಿಗೆ ಆಯೋಗ ಸ್ಪಷ್ಟನೆ ನೀಡಿದೆ. ಮತಾಂತರವಾದ ಜಾತಿಗಳಿಗೆ ಮೂಲ ಜಾತಿ ಬಿಟ್ಟು ಮತಾಂತರವಾದ ಧರ್ಮವೇ ಅನ್ವಯವಾಗಲಿದೆ. ಮೂಲ ಜಾತಿ ಅವರಿಗೆ ಅನ್ವಯ ಆಗೋದಿಲ್ಲ ಅಂತ ಸ್ಪಷ್ಟಪಡಿಸಿದೆ. ಅಲ್ಲದೇ ಸಮೀಕ್ಷೆ ಆದ ನಂತರ ಯಾವ ಯಾವ ಜಾತಿ ಯಾವ ಯಾವ ಕ್ಯಾಟಗರಿ ಬರುತ್ತದೆ ಅಂತ ತಜ್ಞರ ಟೀಂ ನಿರ್ಧಾರ ಮಾಡಿಲಿದೆ ಅಂತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯಕ್ (Madhusudan R Naik) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಶಾಲಾ ಅವಧಿ ಬದಲು ರಜೆ ವೇಳೆ ಸರ್ವೆಗೆ ಶಿಕ್ಷಕರ ಬಳಕೆ: ಮಧು ಬಂಗಾರಪ್ಪ
ನಾಳೆ ಬೆಂಗಳೂರಲ್ಲಿ ನಡೆಯಲ್ಲ ಸಮೀಕ್ಷೆ
ನಾಳೆಯಿಂದಲೇ ರಾಜ್ಯಾದ್ಯಂತ ಸಮೀಕ್ಷೆ ಶುರುವಾದರು ಬೆಂಗಳೂರಿನಲ್ಲಿ 2-3 ದಿನ ತಡವಾಗಿ ಸಮೀಕ್ಷೆ ಪ್ರಾರಂಭವಾಗಲಿದೆ. ಜಿಬಿಎ ಆಡಳಿತ ಬಂದ ಹಿನ್ನಲೆ ಮತ್ತು ತರಬೇತಿ ತಡವಾಗಿ ಆಗಿರೋದ್ರೀಂದ 2-3 ದಿನ ತಡವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭ ಆಗಲಿದೆ. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನ ಕೇಳಲಾಗಿದೆ. ಆಧಾರ್ ಕಾರ್ಡ್, ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿ ಕೊಡಬೇಕಾಗಿದೆ. ಆನ್ ಲೈನ್ ನಲ್ಲೂ ಮಾಹಿತಿ ನೀಡಲು ಆಯೋಗ ಅವಕಾಶ ಮಾಡಿದೆ.
ಬೆಂಗಳೂರು: ಕುರುಬ ಸಮುದಾಯವನ್ನು (Kuruba Community) ಎಸ್‌ಟಿಗೆ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಶೀಘ್ರದಲ್ಲೇ ನೆರವೇರುವ ಸಾಧ್ಯತೆಗಳು ಕಂಡುಬಂದಿದೆ. ಎಸ್‌ಟಿ ಸಮುದಾಯಕ್ಕೆ ಸೇರಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ತೀವ್ರಗೊಳಿಸಿದೆ.
ಸದ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಿಎಂ (Chief Minister) ಬಳಿಯೇ ಇದೆ. ಹೀಗಾಗಿ ಸಿಎಂ ಸೂಚನೆ ಮೇರೆಗೆ ನಾಳೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಭೆ ಕರೆದಿದೆ. ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಎಂಎಸ್ ಬಿಲ್ಡಿಂಗ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಗೆ ಅಗತ್ಯ ದಾಖಲೆಗಳನ್ನ ತರುವಂತೆ ನಾಲ್ಕು ಇಲಾಖೆಗಳಿಗೆ ಪತ್ರದ ಮುಖೇನ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಸುಳಿವು ನೀಡಿದ್ರಾ ಸಿಎಂ?
ಸೂಚನಾ ಪತ್ರದಲ್ಲಿ 2 ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಮೊದಲಿಗೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ (ST Community) ವಿಚಾರ ಮತ್ತೊಂದು ಮೂರು ಜಿಲ್ಲೆಗಳಲ್ಲಿ ಮೂರು ಜಿಲ್ಲೆಗಳಲ್ಲಿ ಕುರುಬ ಸಮುದಾಯದ ಬೆಳವಣಿಗೆಗಳ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಈ ಮೂಲಕ ಮತ್ತೊಂದು ರಾಜಕೀಯ ಗುದ್ದಾಟಕ್ಕೆ ವೇದಿಕೆ ಸಿದ್ಧ ಮಾಡಿದ್ರಾ ಸಿಎಂ? ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇದನ್ನೂ ಓದಿ: ಜಾತಿಗಣತಿ ಕಾಲಂನಲ್ಲಿ ಮತಾಂತರ ಜಾತಿಗೂ ಜಾಗ – ಸರ್ಕಾರದ ವಿರುದ್ಧ ಬಿಜೆಪಿ, ಕನಕ ಶ್ರೀ ಕಿಡಿ
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಸಮುದಾಯದ ಮುಖಂಡರು ಹೋರಾಟ ನಡೆಸುತ್ತಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಕುರುಬರನ್ನ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಸದ್ಯ ಕಾಡು ಕುರುಬರು ಮತ್ತು ಜೇನು ಕುರುಬರು ಮಾತ್ರ ಎಸ್‌ಟಿ ವರ್ಗದಲ್ಲಿದ್ದಾರೆ. ಉಳಿದ ಕುರುಬ ಸಮುದಾಯದ ಒಳ ಪಂಗಡಗಳನ್ನೂ ಎಸ್‌ಟಿಗೆ ಸೇರಿಸಬೇಕೆಂದು ಭಾರೀ ಒತ್ತಾಯ ಕೇಳಿಬರುತ್ತಲೇ ಇದೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರ – ಇಂದು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳ ವಿಚಾರಣೆ
ರಾಜ್ಯ ಸರ್ಕಾರ 2023 ರಲ್ಲೇ ಕ್ಯಾಬಿನೆಟ್ ಸಭೆಯಲ್ಲಿ ಕುರುಬರನ್ನು ಎಸ್‌ಟಿಗೆ ಸೇರಿಸುವ ತೀರ್ಮಾನ ಕೈಗೊಂಡಿತ್ತು. ಅದರಂತೆ 2023ರ ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೂ ಎಸ್‌ಟಿಗೆ ಸೇರಿಸುವಂತೆ ಶಿಫಾರಸು ಮಾಡಿತ್ತು. ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಕುರುಬ ಸಮುದಾಯದ ಜನಾಂಗೀಯ ಅಧ್ಯಯನ ನಡೆಸಿದ ವರದಿಯನ್ನೂ ಕಳುಹಿಸಲಾಗಿತ್ತು. ಇದೀಗ ಈವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಇಲಾಖೆ ಹಾಗೂ ಬೈಕ್ ಟ್ಯಾಕ್ಸಿ (Bike Taxi) ಚಾಲಕರ ಜಟಾಪಟಿ ಮುಂದುವರೆದಿದ್ದು, ಇದೇ 22ಕ್ಕೆ ಬೈಕ್ ಟ್ಯಾಕ್ಸಿ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಕಾರ್ಯಾಚರಣೆ ಬಗ್ಗೆ ತನ್ನ ನಿಲುವು ತಿಳಿಸಲು ಹೈಕೋರ್ಟ್ ಸರ್ಕಾರಕ್ಕೆ (Karnataka government) ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಬೈಕ್ ಟ್ಯಾಕ್ಸಿ ಸಾಧಕ-ಭಾದಕಗಳ ಬಗ್ಗೆ ವರದಿ ಸಲ್ಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ. ಈ ಕಮಿಟಿಯನ್ನು ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಒಟ್ಟು 11 ಜನ ಈ ಕಮಿಟಿಯ ಸದಸ್ಯರಿದ್ದಾರೆ.
ಉನ್ನತ ಮಟ್ಟದ ಕಮಿಟಿಯಲ್ಲಿ ಯಾರಿದ್ದಾರೆ?
* ಬೆಂಗಳೂರು ನಗರ ಭೂ ಸಾರಿಗೆ ಅಭಿವೃದ್ಧಿ ಇಲಾಖೆ ಆಯುಕ್ತರು
* ಕಾರ್ಮಿಕ ಇಲಾಖೆ ಆಯುಕ್ತರು
* ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು
* ಬಿಎಂಟಿಸಿ ಎಂಡಿ
* ಬೆಂಗಳೂರು ಜಂಟಿ ಸಂಚಾರ ಪೋಲಿಸ್ ಆಯುಕ್ತರು
* ಬೆಂಗಳೂರು ನಗರ ಜಂಟಿ ಪೋಲಿಸ್ ಆಯುಕ್ತರು
* ಬಿಎಂಆರ್‌ಸಿಎಲ್‌ನ ಹಿರಿಯ ಪ್ರತಿನಿಧಿ
* ಬೃಹತ್ ಬೆಂಗಳೂರು ಪ್ರಾಧಿಕಾರದ ಹಿರಿಯ ಪ್ರತಿನಿಧಿ
* ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ
* ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಗಳು
ಈ ಕಮಿಟಿಯಲ್ಲಿ ಬೆಂಗಳೂರು ನಗರ ಭೂಸಾರಿಗೆ ಅಭಿವೃದ್ಧಿ ಇಲಾಖೆ (ಡಲ್ಟ್)ನ ಆಯುಕ್ತರು, ಕಾರ್ಮಿಕ ಇಲಾಖೆ ಆಯುಕ್ತರು, ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು, ಬಿಎಂಟಿಸಿ ಎಂಡಿ, ಬೆಂಗಳೂರು ಜಂಟಿ ಸಂಚಾರ ಪೋಲಿಸ್ ಆಯುಕ್ತರು, ಬೆಂಗಳೂರು ನಗರ ಜಂಟಿ ಪೋಲಿಸ್ ಆಯುಕ್ತರು, ಬಿಎಂಆರ್‌ಸಿಎಲ್‌ನ ಹಿರಿಯ ಪ್ರತಿನಿಧಿ, ಬೃಹತ್ ಬೆಂಗಳೂರು ಪ್ರಾಧಿಕಾರದ ಹಿರಿಯ ಪ್ರತಿನಿಧಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ, ಸಾರಿಗೆ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 11 ಜನರ ಕಮಿಟಿ ರಚಿಸಲಾಗಿದೆ.
ಈ ಕಮಿಟಿಯು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯ ಸಾಧಕ-ಭಾದಕಗಳ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಈ ವರದಿಯ ಆಧಾರದ ಮೇಲೆ ಸಾರಿಗೆ ಇಲಾಖೆ ಅಥವಾ ಸರ್ಕಾರ ಸೆಪ್ಟೆಂಬರ್ 22ರಂದು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಬಗ್ಗೆ ನಿಯಮ ರೂಪಿಸಿ ತನ್ನ ನಿಲುವು ಪ್ರಕಟಿಸಲಿದೆ.
ಒಂದು ಅಂದಾಜಿನಂತೆ ಬೆಂಗಳೂರಲ್ಲಿ ಸುಮಾರು 1.20 ಲಕ್ಷ ಖಾಸಗಿ ಬೈಕ್ ಸವಾರರು ಬೈಕ್ ಟ್ಯಾಕ್ಸಿ ಮಾಡುತ್ತಿದ್ದಾರೆ.
ಬೆಂಗಳೂರು: ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ (Multiplex Theatre) ನಡೆಯುತ್ತಿದ್ದ ಲೂಟಿಗೆ ಕೊನೆಗೂ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದು, ಸಿನಿಮಾ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ ಮಾಡಿ ರಾಜ್ಯ ಸರ್ಕಾರ (Karnataka Government) ಇಂದು ಅಧಿಸೂಚನೆ ಹೊರಡಿಸಿದೆ.
ಟಿಕೆಟ್ ದರ ಎಷ್ಟು?
ಇನ್ಮುಂದೆ ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿಗಳಲ್ಲಿ, ಎಲ್ಲಾ ಭಾಷಯ ಚಿತ್ರಗಳಿಗೆ ಹಾಗೂ ಎಲ್ಲಾ ಪ್ರದರ್ಶನಕ್ಕೆ ಎಲ್ಲಾ ರೀತಿಯ ತೆರಿಗೆ ಹೊರತುಪಡಿಸಿ ಟಿಕೆಟ್ ದರ (Cinema Ticket Price) 200 ರೂ. ಮೀರದಂತೆ ಆದೇಶದಲ್ಲಿ ತಿಳಿಸಿದೆ. 75 ಆಸನಗಳು ಅಥವಾ ಅದಕ್ಕಿಂತ ಕಡಿಮೆ ಆಸನಗಳ ಪ್ರಿಮಿಯಂ ಸೌಲಭ್ಯವಿರುವ ಬಹುಪರದೆ ಚಿತ್ರ ಮಂದಿರಗಳನ್ನು ನಿಗದಿಪಡಿಸಿರುವ 200 ರೂ.ಗಳ ಗರಿಷ್ಠ ಟಿಕೆಟ್ ದರ ಮಿತಿಯಿಂದ ಹೊರಗಿಟ್ಟಿದೆ.
ದರ ಕಡಿಮೆಯಾಗಿದ್ದು ಯಾಕೆ?
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ. ಒಂದೊಂದು ಮಾಲ್ ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನ ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್, ಆಂಧ್ರಪ್ರದೇಶದಲ್ಲಿ ಗರಿಷ್ಠ 150 ರೂ. ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.
ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.
ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ಹಿನ್ನೆಲೆ ಏಕರೂಪ ದರ ನಿಗಡಿಮಾಡಿ ರಾಜ್ಯ ಸರ್ಕಾರ ಆದೇಶ ಹೊಡಿಸಿದೆ.
– ಕನ್ನಡಿಗರಿಂದ ಪ್ರವಾಸಿ ಮಂದಿರಕ್ಕೆ ಉದ್ರಿಕ್ತರಿಂದ ಬೆಂಕಿ
– ಕಠ್ಮಂಡು ನಗರ ಸುತ್ತುವರಿದ ಸೇನೆ, ಕರ್ಫ್ಯೂ ಜಾರಿ
ಬೆಂಗಳೂರು: ನೇಪಾಳದಲ್ಲಿ (Nepal) ಭುಗಿಲೆದ್ದ ಪ್ರತಿಭಟನೆಯಿಂದ ದೇಶಾದ್ಯಂತ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ (Shalini Rajneesh) ಅವರಿಗೆ ಸೂಚನೆ ನೀಡಿದ್ದಾರೆ.
ನೇಪಾಳದಲ್ಲಿ ವಿದ್ಯಾರ್ಥಿ – ಯುವಜನರ ಕ್ಷಿಪ್ರ ಬೃಹತ್ ಪ್ರತಿಭಟನೆ ಕಾರಣಕ್ಕೆ ದೇಶಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ @siddaramaiah ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್…
ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ವಹಿಸಿದ್ದಾರೆ. ಸದ್ಯ ಕನ್ನಡಿಗರು ನೇಪಾಳದಲ್ಲಿ ಸಿಲುಕಿರುವ ಸುರಕ್ಷಿತವಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ (Kannadigas) ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಕಚೇರಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಸೇನೆಯಿಂದ ಕರ್ಫ್ಯೂ ಜಾರಿ
ನೇಪಾಳದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೇನೆ ಕಾರ್ಯಾಚರಣೆಗೆ ಇಳಿದಿದೆ. ಕಠ್ಮಂಡು ನಗರವನ್ನ ನೇಪಾಳಿ ಸೇನೆ (Nepali Army) ಸುತ್ತುವರಿದಿದ್ದು, ರಾಜಧಾನಿಯಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ. ನಾಳೆ ಬೆಳಗ್ಗೆ 6 ಗಂಟೆವರೆಗೆ ಜನರು ರಸ್ತೆಗಿಳಿಯದಂತೆ ಸೂಚನೆ ನೀಡಿದೆ. ಜೊತೆಗೆ ಪ್ರವಾಸಿಗರು ಉಳಿದುಕೊಂಡಿರುವ ಹೊಟೇಲ್, ಲಾಡ್ಜ್ ಆವರಣದ ಗೇಟ್‌ಗಳನ್ನ ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದೆ. ಇದರೊಂದಿಗೆ ಹಿಂದೂ ದೇವಾಲಯದ ಬಳಿಯೂ ಬಿಗಿ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು
ಆನೇಕಲ್‌ನಿಂದ ಪ್ರವಾಸ ಹೊರಟಿದ್ದ ಕನ್ನಡಿಗರಿಗೆ ಸಂಕಷ್ಟ
ಆನೇಕಲ್ ಸೇರಿದಂತೆ ಬೇರೆ ಬೇರೆ ಏರಿಯಾಗಳಿಂದ ಹೊರಟ್ಟಿದ್ದ 27 ಜನರ ಕನ್ನಡಿಗರ ತಂಡವೂ ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಟ್ರಾವೆಲ್ಸ್ ಮೂಲಕ ಪ್ರವಾಸ ಹೊರಟಿದ್ದ ತಂಡ ಶನಿವಾರ ವಾಪಸ್ ಬರುವ ನಿರೀಕ್ಷೆಯಲ್ಲಿದೆ, ಫ್ಲೈಟ್ ಕೂಡ ಬುಕಿಂಗ್ ಮಾಡಲಾಗಿದೆ. ಆದ್ರೆ ಸೇನೆಯಿಂದ ಕರ್ಫ್ಯೂ ಜಾರಿಯಾದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಣಕ್ಕೆ ಬರೋವರೆಗೆ ಅಲ್ಲಿಂದ ಹೊರಡುವುದು ಕಷ್ಟಸಾಧ್ಯವಾಗುತ್ತದೆ ಎಂದು ಕನ್ನಡಿಗರು ಗೋಳಿಟ್ಟಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು
ಭುಗಿಲೆದ್ದ ಪ್ರವಾಸಿಗರು ಉಳಿದುಕೊಂಡಿದ್ದ ಬಿಲ್ಡಿಂಗ್‌ಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸುತ್ತಮುತ್ತ ನಾಲ್ಕು ಕಡೆ ಬೆಂಕಿ ಹಚ್ಚಿರೋದ್ರಿಂದ ಕನ್ನಡಿಗರು ಜೀವ ಭಯದಲ್ಲಿದ್ದಾರೆ. ಸದ್ಯ ಈ ಪ್ರವಾಸಿ ತಂಡದೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿ ಕರೆತರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.