Tag: karnataka floods 2019

  • ಮಹಾಮಳೆಗೆ ಹಾಸನದಲ್ಲಿ ಮೂವರು ಬಲಿ

    ಮಹಾಮಳೆಗೆ ಹಾಸನದಲ್ಲಿ ಮೂವರು ಬಲಿ

    ಹಾಸನ: ಮಹಾಮಳೆಗೆ ಹಾಸನ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.  ಮೃತರನ್ನು ರಂಗಮ್ಮ (60), ಪುಷ್ಪಾ(40) ಹಾಗೂ ಪ್ರಕಾಶ್(61) ಎಂದು ಗುರುತಿಸಲಾಗಿದೆ.

    ಹಾಸನ ತಾಲೂಕಿನ ಕೌಶಿಕ ಗ್ರಾಮದಲ್ಲಿ ಆಗಸ್ಟ್ 9 ರಂದು ಮನೆ ಕುಸಿದಿತ್ತು. ಮನೆಯ ಅವಶೇಷಗಳಡಿ ರಂಗಮ್ಮ ಸಿಲುಕಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಅಗಸ್ಟ್ 9 ರಿಂದ ನಾಪತ್ತೆಯಾಗಿದ್ದ ಆಲೂರು ತಾಲೂಕಿನ ಮತ್ತೋರ್ವ ಮಹಿಳೆ ಪುಷ್ಪಾ, ಶಂಕುತೀರ್ಥ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದರು. ನಿನ್ನೆ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಅವರ ಮೃತದಹ ಪತ್ತೆಯಾಗಿದೆ.

    ಸಕಲೇಶಪುರ ತಾಲೂಕಿನ ಹುರಡಿಯ ಪ್ರಕಾಶ್ ಕೂಡ ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಈವರೆಗೆ ಮೂವರು ಮಹಾಮಳೆಗೆ ಬಲಿಯಾಗಿದ್ದಾರೆ.

  • ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು?

    ಐವರು ರಕ್ಷಣಾ ಸಿಬ್ಬಂದಿಯೇ ನೀರುಪಾಲು?

    – ಜೀವ ಉಳಿಸಿದವರಿಗಾಗಿ ಹುಡುಕಾಟ

    ಕೊಪ್ಪಳ: ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ರಕ್ಷಣೆ ಮಾಡುತ್ತಿರುವ ರಕ್ಷಣಾ ಸಿಬ್ಬಂದಿಯೇ ನೀರುಪಾಲಾದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ನಡೆದಿದೆ.

    ತುಂಗಭದ್ರಾ ನದಿ ಪ್ರವಾಹದಲ್ಲಿ ಬೋಟ್ ಮುಳುಗಿ ಐವರು ರಕ್ಷಣಾ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಎನ್‍ಡಿಆರ್‍ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರುಪಾಲಾಗಿದ್ದಾರೆ.

    ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಸಿಬ್ಬಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಕಳೆದ 10 ದಿನಗಳಿಂದ ಎನ್‍ಡಿಆರ್ ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.

  • ದಶ ದಿನಗಳ ಪ್ರಳಯಕ್ಕೆ 17 ಜಿಲ್ಲೆ ತತ್ತರ – 40 ಸಾವಿರ ಕೋಟಿ ರೂ. ನಷ್ಟ

    ದಶ ದಿನಗಳ ಪ್ರಳಯಕ್ಕೆ 17 ಜಿಲ್ಲೆ ತತ್ತರ – 40 ಸಾವಿರ ಕೋಟಿ ರೂ. ನಷ್ಟ

    – ತುರ್ತಾಗಿ 10 ಸಾವಿರ ಕೋಟಿಗೆ ಕೇಂದ್ರಕ್ಕೆ ಮನವಿ
    – ಕರಾವಳಿಯಲ್ಲಿಂದು ಬಿಎಸ್‍ವೈ ಪ್ರವಾಸ

    ಬೆಂಗಳೂರು: 10 ದಿನಗಳ ಕಾಲ ಸುರಿದ ಭಾರೀ ಮಳೆ ಕರ್ನಾಟಕವನ್ನೇ ಮುಳುಗಿಸಿದ್ದ ಪ್ರವಾಹದಿಂದ ಉಂಟಾಗಿರುವ ನಷ್ಟ ಬರೋಬ್ಬರೀ 30 ರಿಂದ 40 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಉತ್ತರ ಕರ್ನಾಟಕ, ಹೈದಾರಾಬಾದ್ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ 17 ಜಿಲ್ಲೆಗಳಲ್ಲಿ ಪ್ರಳಯಕ್ಕೆ ಇದುವರೆಗೂ ಆಹುತಿ ಆದವರ ಸಂಖ್ಯೆ 40 ತಲುಪಿದೆ. 14 ಮಂದಿ ಇನ್ನೂ ಕಣ್ಮರೆ ಆಗಿದ್ದಾರೆ. 136 ಪ್ರಮುಖ ಹೆದ್ದಾರಿಗಳು ಹಾಳಾಗಿದ್ದು, 5 ಲಕ್ಷದ 81 ಸಾವಿರ ಮಂದಿಯನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

    ಬೆಳಗಾವಿ ಒಂದರಲ್ಲೇ 3 ಲಕ್ಷದ 45 ಸಾವಿರ ಮಂದಿಯನ್ನ ಶಿಫ್ಟ್ ಮಾಡಲಾಗಿದೆ. ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ ತುರ್ತಾಗಿ 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ.

    ಆಗಸ್ಟ್ 1ರಿಂದ ಸುರಿದಿದ್ದ ಕುಂಭದ್ರೋಣ ಮಳೆ ಉತ್ತರ ಕರ್ನಾಟಕ ಭಾಗದಲ್ಲಿ ತಗ್ಗಿದೆ. ಆದರೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಇನ್ನೂ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರದಲ್ಲಿ ಧಾರಾಕಾರ ಮಳೆ ಆಗುವ ಸಾಧ್ಯತೆ ಇದೆ.

    ಇತ್ತ ಉತ್ತರ ಕರ್ನಾಟಕದಲ್ಲಿ ಪ್ರವಾಹ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಿಎಂ ಯಡಿಯೂರಪ್ಪ ಇಂದು ಕರಾವಳಿಗೆ ಹೋಗುತ್ತಿದ್ದಾರೆ. ಬೆಳಗ್ಗೆ 11.30ರಿಂದ ಮಂಗಳೂರು, ಧರ್ಮಸ್ಥಳ, ಬೆಳ್ತಂಗಡಿ, ಬಂಟ್ವಾಳದಲ್ಲಿ ಪ್ರವಾಹ ಹಾನಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅದಾದ ಬಳಿಕ ಸಂಜೆ 6.15ಕ್ಕೆ ನಂಜನಗೂಡು, ಮೈಸೂರಿಗೂ ಭೇಟಿ ನೀಡಲಿದ್ದಾರೆ. ರಾತ್ರಿ 9.15ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.