Tag: Karnataka Film Distriution

  • KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    KVN ಪ್ರೊಡಕ್ಷನ್ಸ್ ತೆಕ್ಕೆಗೆ ರಾಜಮೌಳಿಯ ‘RRR’ ಕರ್ನಾಟಕ ವಿತರಣೆ ಹಕ್ಕು

    ಭಾರತೀಯ ಚಿತ್ರರಂಗ ಕಂಡ ಯಶಸ್ವಿ ಹಾಗೂ ಜನಪ್ರಿಯ ನಿರ್ದೇಶಕರಲ್ಲಿ ಎಸ್.ಎಸ್. ರಾಜಮೌಳಿ ಕೂಡ ಒಬ್ಬರು. ದಕ್ಷಿಣ ಭಾರತ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿರುವ ರಾಜಮೌಳಿ ಬಾಹುಬಲಿ ಸಿನಿಮಾ ಮೂಲಕ ಪ್ರಖ್ಯಾತಿಗಳಿಸಿಕೊಂಡಿದ್ದಾರೆ. ಬಾಹುಬಲಿ ನಂತರ ಯಾರ ಜೊತೆ ಸಿನಿಮಾ ಮಾಡ್ತಾರೆ ಎನ್ನುವಾಗಲೇ ದಿಗ್ಗಜ ನಟರನ್ನು ಒಂದೆಡೆ ಸೇರಿಸಿ ‘RRR’ ಸಿನಿಮಾ ಮೂಲಕ ಮತ್ತೊಮ್ಮೆ ಘರ್ಜಿಸಲು ಶುರು ಮಾಡಿದವರು ರಾಜಮೌಳಿ.

    RRR ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಜನವರಿ 7ಕ್ಕೆ ಗ್ರ್ಯಾಂಡ್ ರಿಲೀಸ್ ಆಗಲು ಸಜ್ಜಾಗಿರುವ ಈ ಚಿತ್ರತಂಡದಿಂದ ಸಖತ್ ಸುದ್ದಿಯೊಂದು ಹೊರಬಿದ್ದಿದೆ. ಪಂಚ ಭಾಷೆಯಲ್ಲಿ ತೆರೆ ಮೇಲೆ ಅಬ್ಬರಿಸಲಿರುವ ಈ ಚಿತ್ರದ ಕರ್ನಾಟಕದ ವಿತರಣೆ ಹಕ್ಕು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿದೆ. ಈ ಸಂತಸದ ಸುದ್ದಿಯನ್ನು ಕೆವಿಎನ್ ಪ್ರೊಡಕ್ಷನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ.

    ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿತರಣೆ ಹಾಗೂ ನಿರ್ಮಾಣದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಖ್ಯಾತಿ ಗಳಿಸಿದೆ. ಸದ್ಯ ಸಖತ್, ಬೈಟು ಲವ್ ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ. ಇದರ ಜೊತೆಗೆ ‘RRR’ ಚಿತ್ರದ ಕರ್ನಾಟಕದ ಹಂಚಿಕೆ ಕೆವಿಎನ್ ಪ್ರೊಡಕ್ಷನ್ಸ್ ಪಾಲಾಗಿರುವುದು ಹೆಮ್ಮೆಯ ಸಂಗತಿ.

    ದಕ್ಷಿಣ ಭಾರತ ಹಾಗೂ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಭರವಸೆ ಹುಟ್ಟು ಹಾಕಿರುವ ಸಿನಿಮಾ ‘RRR’. ರಾಮ್ ಚರಣ್, ಜ್ಯೂನಿಯರ್ ಎನ್​ಟಿಆರ್ ನಾಯಕ ನಟರಾಗಿ ತೆರೆ ಮೇಲೆ ಅಬ್ಬರಿಸಲಿರುವ ಈ ಸಿನಿಮಾದಲ್ಲಿ ಬಾಹುಬಲಿ ಮಾಂತ್ರಿಕ ಮತ್ತೇನು ಮ್ಯಾಜಿಕ್ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೂ ಸಜ್ಜಾಗಿ ನಿಂತಿರುವ ಚಿತ್ರತಂಡ ಸಿನಿಮಾದ ಒಂದೊಂದೇ ಝಲಕ್ ಬಿಡುಗಡೆ ಮಾಡಿ ಸೋಶಿಯಲ್ ಮೀಡಿಯಾದಲ್ಲೂ ಧೂಳ್ ಎಬ್ಬಿಸುತ್ತಿದೆ. ದಿನದಿಂದ ದಿನಕ್ಕೆ ಸಖತ್ ಕ್ರೇಜ್ ಕ್ರಿಯೇಟ್ ಮಾಡ್ತಿರುವ RRR ಜನವರಿ 7 ರಂದು ತೆರೆಗೆ ಬರ್ತಿದೆ.