Tag: Karnataka film chamber

  • ಸಾಲುಮರದ ತಿಮ್ಮಕ್ಕ ಬಯೋಪಿಕ್ ಗಲಾಟೆ – 25 ಲಕ್ಷ ಹಣ, ಇನ್ನೋವಾ ಕಾರ್ ಬೇಡಿಕೆ?

    ಸಾಲುಮರದ ತಿಮ್ಮಕ್ಕ ಬಯೋಪಿಕ್ ಗಲಾಟೆ – 25 ಲಕ್ಷ ಹಣ, ಇನ್ನೋವಾ ಕಾರ್ ಬೇಡಿಕೆ?

    `ವೃಕ್ಷಮಾತೆ’ (Vruksha maate) ಹೆಸರಿನಲ್ಲಿ ತಮ್ಮದೇ ಜೀವನಾಧಾರಿತ ಕಥೆಗೆ ಅನುಮತಿ ಕೊಟ್ಟಿದ್ದ ಸಾಲುಮರದ ತಿಮ್ಮಕ್ಕ (Salumarada Thimmakka) ಇದೀಗ ಚಿತ್ರೀಕರಣಕ್ಕೆ ತಡೆ ಕೋರಿ ದೂರು ಕೊಟ್ಟಿದ್ದಾರೆ. ಕುದೂರಿನ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದ ತಿಮ್ಮಕ್ಕನ ಸಾಕು ಮಗ ಉಮೇಶ್ ಇದೀಗ ತಿಮ್ಮಕ್ಕನ ಜೊತೆಗೂಡಿ ಕರ್ನಾಟಕ ಫಿಲ್ಮ್ ಚೇಂಬರ್ (Karnataka Film Chamber) ಮೆಟ್ಟಿಲೇರಿದ್ದಾರೆ. ಚಿತ್ರೀಕರಣವನ್ನು ನಿಲ್ಲಿಸುವಂತೆ ಕೋರಿ ಚಿತ್ರತಂಡಕ್ಕೆ ವಾಣಿಜ್ಯ ಮಂಡಳಿ ನಿರ್ದೇಶನ ಕೊಡುವಂತೆ ದೂರುಪತ್ರ ಕೊಟ್ಟಿದ್ದಾರೆ.

    ಪರಿಸರ ಪೋಷಣೆಗೆ ಜೀವನ ಮುಡಿಪಾಗಿಟ್ಟಿರುವ ತಿಮ್ಮಕ್ಕನ ನಿಜಜೀವನ ಆಧಾರಿತ `ವೃಕ್ಷಮಾತೆ’ ಸಿನಿಮಾ ತಂಡಕ್ಕೆ ಆರಂಭದಲ್ಲೇ ಅಡ್ಡಿ ಎದುರಾಗಿದೆ. ಸ್ವತಃ ತಿಮ್ಮಕ್ಕ ಅವರೇ ವಿರೋಧ ವ್ಯಕ್ತಪಡಿಸಿದ್ದು, ಚಿತ್ರೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ದಿನದೊಳಗೆ ಉತ್ತರಿಸಿ – ಕಾಂತಾರ ತಂಡಕ್ಕೆ ನೋಟಿಸ್

    ಈಗಾಗಲೇ ವೃಕ್ಷಮಾತೆ ಚಿತ್ರ ಸೆಟ್ಟೇರಿ 2 ದಿನ ಚಿತ್ರೀಕರಣವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಲಕ್ಷ್ಮೀವೆಂಕಟೇಶ್ವರ ಪಿಕ್ಚರ್ಸ್‌ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಒರಟ ಖ್ಯಾತಿಯ ಶ್ರೀ ನಿರ್ದೇಶನ ಮಾಡುತ್ತಿದ್ದರು. ಸಿದ್ದೇಶ್ ಅವರು ಬರೆದಿರುವ ಸಾಲುಮರದ ತಿಮ್ಮಕ್ಕ ಕೃತಿ ಆಧರಿಸಿ ಚಿತ್ರ ತಯಾರಾಗುತ್ತಿತ್ತು. ಇದೀಗ ಸ್ವತಃ ತಿಮ್ಮಕ್ಕ ಅವರೇ ತಮ್ಮ ಜೀವನಾಧಾರಿತ ಕಥೆಯ ಚಿತ್ರ ಮಾಡದಂತೆ ತಡೆದಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ತಿಮ್ಮಕ್ಕನ ಆರೋಪವೇನು?
    ನಿರ್ಮಾಪಕ ದಿಲೀಪ್ ಅವರು ಬಂದು ಸಿನಿಮಾ ಮಾಡ್ತೀವಿ ಅಂದ್ರು ಬೇಡ ಎಂದೇ ಹೇಳಿದ್ವಿ. ಕೃತಿಯಾಧಾರಿತ ಚಿತ್ರ ಅಂತ ಹೇಳ್ತಾರೆ. ಕೃತಿಯೇ ಸರಿ ಇಲ್ಲ. ಅದಲ್ಲದೇ ಚಿತ್ರೀಕರಣಕ್ಕಾಗಿ ಮರಗಳನ್ನೇ ಕಡಿದಿದ್ದಾರೆ. ಈವರೆಗೆ ಎಷ್ಟೇ ಬೇಡಿಕೆ ಬಂದಿದ್ದರೂ ಅನುಮತಿ ಕೊಟ್ಟಿಲ್ಲ. ಈಗಲೂ ಕೊಟ್ಟಿಲ್ಲ ಅನ್ನೋದಾಗಿ ತಿಮ್ಮಕ್ಕ ಅವರ ಸಾಕು ಮಗ ಉಮೇಶ್, ಫಿಲ್ಮ್ ಚೇಂಬರ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    ತಿಮ್ಮಕ್ಕನ ಮೇಲೆ ಆರೋಪವೇನು?
    ತಿಮ್ಮಕ್ಕನ ವಿರುದ್ಧ ಚಿತ್ರತಂಡದಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿಬಂದಿದೆ. ಚಿತ್ರತಂಡದಿಂದ 25 ಲಕ್ಷ ರೂ. ಹಣದ ಬೇಡಿಕೆ ಜೊತೆಗೆ ಇನ್ನೋವಾ ಕಾರ್ ನೀಡುವಂತೆ ಒತ್ತಡ ಹಾಕಿದ್ದಾರೆ ಅನ್ನೋದು ಸಿನಿಮಾ ಟೀಮ್ ಆರೋಪವಾಗಿದೆ. ಈ ಆರೋಪವನ್ನ ತಿಮ್ಮಕ್ಕನ ಸಾಕುಮಗ ಉಮೇಶ್ ತಳ್ಳಿಹಾಕಿದ್ದಾರೆ.

  • ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು

    ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು

    – ಕ್ಷಮೇ ಕೇಳಿಸುವ ಪ್ರಯತ್ನ ಮಾಡ್ತೀವಿ ಎಂದ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ನರಸಿಂಹಲು

    ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಕೊಟ್ಟ ಉದ್ಧಟತನದ ಹೇಳಿಕೆ ಇಡೀ ರಾಜ್ಯದ ಜನರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದೆ. ರಾಜ್ಯದಲ್ಲಿ ಕಮಲ್‌ ಸಿನಿಮಾಗಳನ್ನ ಬ್ಯಾನ್‌ ಮಾಡುವಂತೆ ಕನ್ನಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ನಡುವೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಸಭೆ ನಡೆಸಿದ್ದು, ಕ್ಷಮೆ ಕೇಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದೆ.

    ಸಭೆಯಲ್ಲಿ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇವತ್ತು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ರೆ ಖಂಡನೆ ಮಾಡ್ತೀವಿ. ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ ಅಂತ ಎಚ್ಚೆರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

    ಇನ್ನೂ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ನರಸಿಂಹಲು ಮಾತನಾಡಿ, ಕನ್ನಡ ರಕ್ಷಣಾ ವೇದಿಕೆಯವರು, ಹಲವಾರು ಸಂಘ ಸಂಸ್ಥೆಗಳು ಖಂಡಿಸಿದ್ದಾರೆ. ಸಿನಿಮಾ ಬ್ಯಾನ್ ಮಾಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳ್ಬೇಕು ಅಂತಾ ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಮಾಡಿರುವ ತಪ್ಪನ್ನ ಮನವರಿಕೆ ಮಾಡಿಸಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ

    ಫಿಲ್ಮ್‌ ಚೇಂಬರ್‌ ಮುತ್ತಿಗೆಗೆ ಯತ್ನ:
    ಕಮಲ್‌ ಹಾಸನ್‌ ಚಲನಚಿತ್ರಗಳನ್ನ ಬ್ಯಾನ್‌ಗೆ ಒತ್ತಾಯ ಹೆಚ್ಚಾದಂತೆ ಕರ್ನಾಟಕ ಸಿನಿಮಾ ವಿತರಕ ಕಮಲಾಕರ್ ಅವರ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಫಿಲ್ಮ್‌ ಚೇಂಬರ್‌ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಥಾಮಸ್ ಡಿಸೋಜಾ ಭಾಗಿ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು. ಸಭೆ ನಡೆಯುತ್ತಿದ್ದಾಗಲೇ ಕೆಲ ಕನ್ನಡಪರ ಹೋರಾಟಗಾರರು ಮುತ್ತಿಗೆಗೆ ಉತ್ನಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್

  • ಫಿಲ್ಮ್‌ ಚೇಂಬರ್‌ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ – ಶಾಶ್ವತ ಪರಿಹಾರದ ಭರವಸೆ!

    ಫಿಲ್ಮ್‌ ಚೇಂಬರ್‌ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ – ಶಾಶ್ವತ ಪರಿಹಾರದ ಭರವಸೆ!

    – ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ ಎಂದ ಸಾ.ರಾ ಗೋವಿಂದು
    – ದರ್ಶನ್ ಬ್ಯಾನ್ ಬಗ್ಗೆ ಫಿಲ್ಮ್ ಚೆಂಬರ್ ಹೇಳಿದ್ದೇನು?

    ಚಿತ್ರದುರ್ಗ: ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರ ನಿವಾಸಕ್ಕಿಂದು ಫಿಲ್ಮ್ ಚೆಂಬರ್ (Karnataka Film Chamber) ತಂಡ ಭೇಟಿ ನೀಡಿತ್ತು. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಧೈರ್ಯತುಂಬಿ, ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯಿತು. ಮುಂದೆ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬೇಕು ಅನ್ನೋದನ್ನ ನೋಡಿಕೊಂಡು ಶಾಶ್ವತ ಪರಿಹಾರ ಕೊಡಿಸುವ ಭರವಸೆಯನ್ನೂ ಚೇಂಬರ್‌ ಅಧ್ಯಕ್ಷರು ನೀಡಿದರು.

    ಬಳಿಕ ಫಿಲ್ಮ್ ಚೇಂಬರ್‌ನಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು (Sa Ra Govindu), ತಪ್ಪು ಮಾಡುವುದು ಮನುಷ್ಯನ ಸಹಜ ಗುಣ ಆದ್ರೆ ಈ ರೀತಿ ಮಾಡಬಾರದಿತ್ತು. ಇದಕ್ಕೆ ಚಿತ್ರರಂಗ ಹೊಣೆ ಅಲ್ಲ ಅವರೊಬ್ಬರಿಂದ ನಾವೆಲ್ಲ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ:
    ಜನರು ಸಿನಿಮಾ ಅಂದ್ರೆ ಅದಕ್ಕೆ ಕೂಡುವ ಗೌರವವೇ ಬೇರೆ ಇತ್ತು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಅವರ ಹೆಸರಿಗೂ ಅಷ್ಟೇ ಗೌರವ ಕೊಡುತ್ತಿದ್ದರು. ಆದ್ರೆ ಇತ್ತೀಚೆಗೆ ಯುವ ನಟರಿಂದ ಚಿತ್ರರಂಗ ದಾರಿ ತಪ್ಪುತ್ತಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡಿಸುತ್ತಿದೆ ಎಂದು ಶ್ಲಾಘಿಸಿದರು. ನಾವು ಯಾರ ಪರವಾಗಿಯೂ ಬಂದಿಲ್ಲ. ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದಿದ್ದೇವೆ. ಆ ತಾಯಿಯನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಆ ತಾಯಿ ಕೇಳಿಕೊಳ್ಳುತ್ತಿರೋದು ಒಂದೇ ತಪ್ಪು ಮಾಡಿವರಿಗೆ ಶಿಕ್ಷೆ ನೀಡಬೇಕು ಅಂತ. ಖಂಡಿತ ಅದು ಆಗುತ್ತದೆ ಎಂದರು.

    ಫಿಲ್ಮ್ ಚೆಂಬರ್ ಅಧ್ಯಕ್ಷ ಎನ್.ಎಂ ಸುರೇಶ್ (NM Suresh) ಮಾತನಾಡಿ, ಯಾರೇ ಮಾಡಿದ್ರೂ ತಪ್ಪು ತಪ್ಪೆ. ವಾಣಿಜ್ಯ ಮಂಡಳಿ ಇಂತಹ ತಪ್ಪುಗಳನ್ನು ಖಂಡಿಸಿದೆ. ಮೃತನ ತಂದೆ-ತಾಯಿ ಕಣ್ಣಿರು ನೋಡಿ ನಮಗೂ ಕಣ್ಣಿರು ಬಂತು ಎಂದು ಭಾವುಕರಾದರು.

    ಇದೇ ವೇಳೆ ದರ್ಶನ್ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಿರ್ಧಾರ ನಾವು ಮಾಡೊಕೆ ಆಗಲ್ಲ. ಕಲಾವಿದರ ಸಂಘ ನಿರ್ಮಾಪಕರ ಸಂಘ ಕೂಡ ಇದೆ. ಅಲ್ಲಿ ಸಭೆ ಮಾಡಿದ ನಂತರ ನಿರ್ಧಾರ ಮಾಡುತ್ತೆ. ಈ ಹಿಂದೆಯೂ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂಬರೀಶ್‌ ಅವರಿಗೂ ಫ್ಯಾನ್ಸ್ ಇದ್ದರು. ಆದ್ರೆ ಇತ್ತೀಚಿನ ಫ್ಯಾನ್ಸ್ ಪ್ರಚೋದನೆ ಒಳಗಾಗುತ್ತಿದ್ದಾರೆ. ಪ್ರಚೋದನೆಗೆ ಒಳಗಾಗಿಗೇ ಈ ರೀತಿ ಘಟನೆ ನಡೆದಿದೆ. ಅಭಿಮಾನಿಗಳು ಸಹ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.

  • ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾ.ರಾ ಗೋವಿಂದ್

    ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾ.ರಾ ಗೋವಿಂದ್

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮೇ 28ರಂದು ಫಿಲ್ಮ್ ಚೇಂಬರ್ ಎಲೆಕ್ಷನ್ ನಡೆಯಲಿದ್ದು, ಇದೀಗ ಅಧ್ಯಕ್ಷ ಸ್ಥಾನಕ್ಕೆ ಸಾ.ರಾ ಗೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಮೇ 28ಕ್ಕೆ ಫಿಲ್ಮ್ ಚೇಂಬರ್ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಸದ್ಯ ಅಧ್ಯಕ್ಷ ಸ್ಥಾನಕ್ಕೆ ಸಾ.ರಾ ಗೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಎರಡು ವರ್ಷಕ್ಕೊಮ್ಮೆ ವಾಣಿಜ್ಯ ಮಂಡಳಿ ಚುನಾವಣೆ ನಡೆಯುತ್ತದೆ. ಆದರೆ ಕೊರೊನಾ ಕಾರಣದಿಂದ ಪದೇ ಪದೇ ಚುನಾವಣೆ ಮುಂದೂಡಿಕೆ ಆಗುತ್ತಿತ್ತು. ಹಾಗಾಗಿ ಅಧ್ಯಕ್ಷ ಸ್ಥಾನದಲ್ಲಿ ಜೈರಾಜ್ ಅವರೇ ಮುಂದುವರಿದಿದ್ದರು. ಇದನ್ನೂ ಓದಿ: ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬಾಲಿವುಡ್‌ಗೆ ಎಂಟ್ರಿ: ಶುಭ ಹಾರೈಸಿದ ಬಿಗ್ ಬಿ

    ಮೊನ್ನೆಯಷ್ಟೇ ಫಿಲ್ಮಂ ಚೇಂಬರ್ ನಾಮಿನೇಷನ್‌ಗೆ ಪ್ರಕ್ರಿಯೆ ಶುರುವಾಗಿದ್ದು, ಸರ್ಕಾರದ ಆದೇಶದಂತೆ ಮೇ 28ಕ್ಕೆ ಫಿಲ್ಮ್ ಚೇಂಬರ್ ಎಲೆಕ್ಷನ್ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಮೊದಲ ಅಭ್ಯರ್ಥಿಯಾಗಿ ನಿರ್ಮಾಪಕ ಭಾ.ಹರೀಶ್ ನಾಮಪತ್ರ ಸಲ್ಲಿಸಿದ್ರೆ, 2ನೇ ಅಭ್ಯರ್ಥಿಯಾಗಿ ಸಾ.ರಾ ಗೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಕನ್ನಡ ಸಿನಿಮಾಗಳ ಶೀರ್ಷಿಕೆ ನೋಂದಣಿ ಸೇರಿದಂತೆ ಅನೇಕ ಕಾರ್ಯಗಳನ್ನು ಫಿಲ್ಮ್ ಚೇಂಬರ್ ಮಾಡುತ್ತದೆ. ಈ ಎಲ್ಲಾ ಕಾರಣದಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಾಮುಖ್ಯತೆ ಪಡೆದುಕೊಂಡಿದೆ.

  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗಿದೆ.

    ಮಂಡಳಿಯ ಅನ್ಯಾಯದಿಂದ ನೊಂದ ಸದಸ್ಯರು ಸ್ವಂತ ಒಂದು ಬೀಗ ತಂದು ವಾಣಿಜ್ಯ ಮಂಡಳಿಗೆ ಬೀಗ ಹಾಕಿದ್ದಾರೆ. ಒಂದು ಪಕ್ಷಕ್ಕೆ ಸೀಮಿತವಾಗಿರುವ ವಾಣಿಜ್ಯ ಮಂಡಳಿಯ ನಡೆಯನ್ನು ಖಂಡಿಸಿದ್ದಾರೆ.

    ವಾಣಿಜ್ಯ ಮಂಡಳಿ ಸದಸ್ಯ ಶ್ರೀನಿವಾಸ್ ಮೇಕೆದಾಟು ಪಾದಯಾತ್ರೆ ಮತ್ತು ವಾಣಿಜ್ಯ ಮಂಡಳಿಯು ಒಂದು ಪಕ್ಷಕ್ಕೆ ಸೀಮಿತವಾಗಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. ಉಚ್ಛಾಟನೆ ಮಾಡಿದ್ದನ್ನು ಖಂಡಿಸಿ ಶ್ರೀನಿವಾಸ್, ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಮಂದಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

    ಸದಸ್ಯತ್ವದಿಂದ ಉಚ್ಛಾಟನೆಗೊಂಡಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಕ್ರಮ ಅವ್ಯವಹಾರ ನಡೆಯುತ್ತಿದೆ. ಯಾವುದೋ ಒಬ್ಬ ವ್ಯಕ್ತಿಯ ಕಪಿಮುಷ್ಟಿಗೆ ಸಿಲುಕಿ ಸದಸ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ವಾಣಿಜ್ಯ ಮಂಡಳಿ ಕಲಾವಿದರ ಸಮಸ್ಯೆಗೆ ಸ್ಪಂದಿಸಬೇಕು. ಅದು ಬಿಟ್ಟು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗುವುದಲ್ಲ. ಇದನ್ನ ಪ್ರಶ್ನೆ ಮಾಡಿದ ಎಷ್ಟೋ ಸದಸ್ಯರನ್ನ ಉಚ್ಛಾಟನೆ ಮಾಡಿದ್ದಾರೆ. ಉಚ್ಛಾಟನೆ ಮಾಡೋದು ಎಷ್ಟು ಸರಿ? ದೊಡ್ಡ ಅವ್ಯವಹಾರ ನಡೆಯುತ್ತಾ ಇದೆ. ಅನ್ಯಾಯ ಆಗಿದೆ ನ್ಯಾಯ ಸಿಗಬೇಕು. ಹೀಗಾಗಿ ವಾಣಿಜ್ಯ ಮಂಡಳಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ಪ್ರತಿಭಟನೆ ವೇಳೆ ಹೈ ಗ್ರೌಂಡ್ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದೆ. ಹೈ ಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬೀಗ ತೆಗೆಯಿರೀ ಅಂತಾ ಹೇಳಿದ್ದು, ಪ್ರತಿಭಟನಕಾರರು ವಾಣಿಜ್ಯ ಮಂಡಳಿಗೆ ಹಾಕಿದ್ದ ಬೀಗ ತೆಗೆದಿದ್ದಾರೆ.

  • ಕರ್ನಾಟಕದ ಮಧ್ಯ ಭಾಗದಲ್ಲಿ ಪುನೀತ್ ಅಭಿಮಾನಿಗಳಿಗೆ ಕಾರ್ಯಕ್ರಮ

    ಕರ್ನಾಟಕದ ಮಧ್ಯ ಭಾಗದಲ್ಲಿ ಪುನೀತ್ ಅಭಿಮಾನಿಗಳಿಗೆ ಕಾರ್ಯಕ್ರಮ

    ಬೆಂಗಳೂರು: ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಬಾರಿ ಕರ್ನಾಟಕದ ಮಧ್ಯದ ಭಾಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಗಣೇಶ್ ಅವರು ತಿಳಿಸಿದ್ದಾರೆ.

    ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 19ನೇ ದಿನ. ಅಪ್ಪು ನೆನಪಿನಾರ್ಥ ಇಂದು ಫಿಲಂ ಚೇಂಬರ್ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ `ಪುನೀತ ನಮನ’ ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನೂ ಓದಿ: ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ

    ಈ ಕಾರ್ಯಕ್ರದಲ್ಲಿ ಸುಮಾರು 2,000 ಸಾವಿರ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕನ್ನಡದ 150 ಕಲಾವಿದರು, ದಕ್ಷಿಣ ಭಾರತದ ನಾಲ್ಕು ರಾಜ್ಯದ ಖ್ಯಾತ ನಟರು, ಕ್ರೀಡಾ, ಸಾಹಿತ್ಯ ಕ್ಷೇತ್ರದ ಗಣ್ಯರಿಗೆ ಆಹ್ವಾನ ಕೊಡಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗಣೇಶ್ ಅವರು, ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಾರಾ ಗೋವಿಂದ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 2,000 ಮಂದಿಗೆ ಆಹ್ವಾನಿಸಲಾಗಿದೆ. ಕರ್ನಾಟಕದಿಂದ 150 ಮಂದಿ ಕಲಾವಿದರು ಈ ಕಾರ್ಯಕ್ರದಲ್ಲಿ ಭಾಗವಹಿಸಬಹುದಾಗಿದೆ. ಸುಮಾರು 10-11 ಮಂದಿ ಹೊರಗಿನಿಂದ ಬರಬಹುದು ಎಂಬ ನಿರೀಕ್ಷೆ ಇದೆ. ಸೌತ್ ಇಂಡಿಯಾ ಫಿಲ್ಮ್ ಚೇಂಬರ್ ಫೇಡರೇಷನ್ ಆಫ್ ಇಂಡಿಯಾ, ಕೇರಳ ಫಿಲ್ಮ್ ಚೇಂಬರ್, ಆಂದ್ರ ಫಿಲ್ಮ್ ಚೇಂಬರ್, ತೆಲಂಗಾಣ ಫಿಲ್ಮ್ ಚೇಂಬರ್, ತಮಿಳುನಾಡು ಫಿಲ್ಮ್ ಚೇಂಬರ್ ನ ನಿರ್ಮಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಡೀ ಚಿತ್ರರಂಗದಲ್ಲಿರುವ ಎಲ್ಲ ಅಂಗ ಸಂಸ್ಥೆಗಳು ಈ ಕಾರ್ಯಕ್ರದಲ್ಲಿ ಭಾಗವಹಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ ನಮನ ಕಾರ್ಯಕ್ರಮ – ಯಾರೆಲ್ಲ ಗಣ್ಯರು ಬರುತ್ತಿದ್ದಾರೆ?

    ಇದೇ ವೇಳೆ ಕೋವಿಡ್-19 ಹಿನ್ನೆಲೆ ಮತ್ತು ಸಮಯ ಅಭಾವ ಇರುವುದರಿಂದ ಈ ಕಾರ್ಯಕ್ರಮಕ್ಕೆ ಕೇವಲ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿದೆ. ಮುಂದಿನ ಬಾರಿ ಸುಮಾರು 1 ಲಕ್ಷ ಅಭಿಮಾನಿಗಳನ್ನು ಸೇರಿಸಿ ಕರ್ನಾಟಕದ ಮದ್ಯದ ಭಾಗದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಸಾರಾ ಗೋವಿಂದ್ ಅವರು ಮತ್ತು ಎಲ್ಲಾ ಪಾದಾಧಿಕಾರಿಗಳು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಅದ್ಭುತವಾದಂತಹ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ನೇರವಾಗಿ ನೋಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ರಿಚ್ಚಿ ಟೈಟಲ್ ವಿವಾದ – ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು

    ರಿಚ್ಚಿ ಟೈಟಲ್ ವಿವಾದ – ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು

    ಬೆಂಗಳೂರು: ರಿಚ್ಚಿ ಸಿನಿಮಾ ಟೈಟಲ್ ವಿವಾದದ ವಿಚಾರವಾಗಿ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.

    ನಿರ್ದೇಶಕ ಹೇಮಂತ್ ಎಂಬುವವರು ದೂರು ನೀಡಿದ್ದು, ರಿಚ್ಚಿ ಎಂಬ ಹೆಸರಿನಲ್ಲಿ ರಕ್ಷಿತ್ ಶೆಟ್ಟಿಗೂ ಮೊದಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಎರಡು ವರ್ಷದ ಮೊದಲೇ ಚಿತ್ರದ ಟೈಟಲ್ ನೋಂದಣಿ ಮಾಡಲಾಗಿದೆ. ಟೈಟಲ್ ರಿನಿವಲ್ ಕೂಡ ಆಗಿದೆ. ಆದರೆ ರಕ್ಷಿತ್ ಶೆಟ್ಟಿ ಕೂಡ ರಿಚ್ಚಿ ಟೈಟಲ್‍ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಈ ಹಿಂದೆಯೇ ಈ ವಿಚಾರವಾಗಿ ದೂರು ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ಇಂದು ಮತ್ತೆ ಚೇಂಬರ್ ನಲ್ಲಿ ಮನವಿ ಸಲ್ಲಿಕೆ ಮಾಡಿದ್ದೇನೆ. ರಿಚ್ಚಿ ಟೈಟಲ್ ನನ್ನ ಬಳಿ ಇದೆ. ಆದರೆ ರಕ್ಷಿತ್ ಶೆಟ್ಟಿ ಶೀರ್ಷಿಕೆ ಬಳಕೆ ಮಾಡುತ್ತಿದ್ದಾರೆ. ಈ ಶೀರ್ಷಿಕೆಯನ್ನು ಮೊದಲು ರಿಜಿಸ್ಟರ್ ಮಾಡಿದ್ದು ನಾನು. ಈಗಾಗಲೇ ನಮ್ಮ ರಿಚ್ಚಿ ಸಿನಿಮಾದ 70% ಚಿತ್ರೀಕರಣ ಮುಗಿದಿದೆ. ಆದರೆ ರಿಚ್ಚಿ ಅಂದ್ರೆ ರಕ್ಷಿತ್ ಸಿನಿಮಾನೇ ಅನ್ನೋ ಹಾಗಾಗಿದೆ ಎಂದು ನಿರ್ದೇಶಕ ಹೇಮಂತ್ ತಿಳಿಸಿದ್ದಾರೆ.

    ರಕ್ಷಿತ್ ಅವರಿಗೆ ಗೊತ್ತಿಲ್ಲದೆ ಟೈಟಲ್ ಅನೌನ್ಸ್ ಮಾಡಿರಬಹುದು. ಆದರೆ ಈಗಲಾದರೂ ಅವರು ಟೈಟಲ್ ವಾಪಸ್ ತೆಗೆದುಕೊಳ್ಳಬೇಕು ಎಂದು ಚೇಂಬರ್ ಮೂಲಕ ಮನವಿ ಮಾಡಿದ್ದೇವೆ. ರಕ್ಷಿತ್ ಅವರು ದೊಡ್ಡವರು, ನಾವು ಅವರಿಗೆ ಏನು ಹೇಳೋಕಾಗಲ್ಲ. ಅವರೇ ಅರ್ಥ ಮಾಡಿಕೊಳ್ಳಬೇಕು. ನಮ್ಮ ಬಳಿ ಟೈಟಲ್ ರಿಜಿಸ್ಟರ್ ಆಗಿರುವ ಎಲ್ಲಾ ದಾಖಲೆಗಳು ಸರಿಯಾಗಿದೆ. ಕಡೆ ಕ್ಷಣದಲ್ಲಿ ನಮಗೆ ಈ ರೀತಿ ಸಂಕಷ್ಟ ಬಂದರೆ, ತುಂಬಾ ತೊಂದರೆ ಆಗುತ್ತೆ ಎಂದು ಹೇಮಂತ್ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.

  • ರಶ್ಮಿಕಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

    ರಶ್ಮಿಕಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

    ಬೆಂಗಳೂರು: ನನಗೆ ಕನ್ನಡ ಮಾತನಾಡಲು ಕಷ್ಟ ಎಂದಿದ್ದ ಕಿರಿಕ್ ಬ್ಯೂಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.

    ಕನ್ನಡ ಮಾತನಾಡಲು ತುಂಬಾ ಕಷ್ಟ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆಂದು ಕನ್ನಡ ಪರ ಹೋರಾಟಗಾರ ನಾಗೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

     

    ಕೆಲ ದಿನಗಳ ಹಿಂದೆ ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದು ತೆಲಗು ತಮಿಳಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಎಂದು ಹೇಳಿದ್ದಾರೆ. ಅದ್ದರಿಂದ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದೆಂದು ಫಿಲ್ಮ್ ಚೇಂಬರ್‍ ಗೆ ಮನವಿ ಮಾಡಿದ್ದಾರೆ.

    ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ರಶ್ಮಿಕಾ ಆಂಗ್ಲ ಭಾಷೆ ಬಳಸುತ್ತಿದ್ದರು. ನನಗೆ ಕನ್ನಡ ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಟಾಲಿವುಡ್‍ನಲ್ಲಿ ಒಂದು ಸಿನಿಮಾ ತೆರೆಕಾಣುವುದರೊಳಗೆ ಅವರು ಸ್ವಚ್ಛವಾಗಿ ತೆಲುಗು ಮಾತನಾಡಲು ಆರಂಭಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಕನ್ನಡ ವಿರೋಧಿ ಎಂದು ಅನೇಕರು ಪೋಸ್ಟ್ ಹಾಕಿದ್ದಾರೆ.

  • ಎಲ್ಲಿದ್ದೀಯಪ್ಪಾ, ಜೋಡೆತ್ತು, ಕಳ್ಳೆತ್ತು ಟೈಟಲ್‍ಗೆ ಚಿತ್ರಮಂಡಳಿ ಅಸ್ತು

    ಎಲ್ಲಿದ್ದೀಯಪ್ಪಾ, ಜೋಡೆತ್ತು, ಕಳ್ಳೆತ್ತು ಟೈಟಲ್‍ಗೆ ಚಿತ್ರಮಂಡಳಿ ಅಸ್ತು

    ಬೆಂಗಳೂರು: ಎಲ್ಲಿದ್ದೀಯಪ್ಪಾ?, ಜೋಡೆತ್ತು ಹಾಗೂ ಕಳ್ಳೆತ್ತು ಲೋಕಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದವು. ಈ ಬೆನ್ನಲ್ಲೇ ಮೂರೂ ಟೈಟಲ್‍ಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿವೆ.

    ‘ಎಲ್ಲಿದ್ದೀಯಪ್ಪಾ?’ ಟೈಟಲ್ ನಿರ್ಮಾಪಕ ಎ.ಗಣೇಶ್ ಅವರ ಪಾಲಾಗಿದೆ. ಅವರು ಶ್ರೀಚಾಮುಂಡೇಶ್ವರಿ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕ ವಿಜಯ್ ಕುಮಾರ್ ಅವರು ‘ಕಳ್ಳೆತ್ತು’ ಟೈಟಲ್‍ಗೆ ನೋಂದಣಿ ಮಾಡಿಸಿದ್ದಾರೆ.

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರದ ವೇಳೆ ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂಬ ಡೈಲಾಗ್ ಬಹು ಜನಪ್ರಿಯವಾಗಿತ್ತು. ಬಳಿಕ ಇದು ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗಿ, ವಿದೇಶಗಳಲ್ಲಿಯೂ ಸದ್ದುಮಾಡಿತ್ತು. ಈ ಹೆಸರಿನ ಚಿತ್ರದ ನಿರ್ಮಾಣಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಅನೇಕರು ಮುಂದಾಗಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಇತ್ತೀಚೆಗಷ್ಟೇ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರು, ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಸಿನಿಮಾಗೆ ನಾನೇ ಹೀರೋ, ಸಚಿವ ಸಿ.ಎಸ್.ಪುಟ್ಟರಾಜು ಅವರೇ ಪ್ರೊಡ್ಯೂಸರ್. ಈ ಟೈಟಲ್ ಅನ್ನು ಯಾರಿಗೂ ಕೊಡದಂತೆ ಚಿತ್ರಮಂಡಳಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು.

    ನಿಖಿಲ್ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ನಿರ್ಮಾಪಕ ಎ ಗಣೇಶ್ ಅವರು, ಈಗಾಗಲೇ ‘ಎಲ್ಲಿದ್ದೀಯಪ್ಪಾ’ ಟೈಟಲ್ ಅಪ್ರೂವ್ ಆಗಿದೆ. ಹೀಗಾಗಿ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಟೈಟಲ್‍ಗೆ ಅನುಮತಿ ನೀಡುವುದು ಬೇಡ. ಒಂದು ಅಪ್ರೂವ್ ಮಾಡಿದರೆ ನಮ್ಮ ಸಿನಿಮಾದ ಮೇಲೆ ಪರಿಣಾಮ ಬೀರುತ್ತದೆ ಎಂದು ಫಿಲ್ಮ್ ಛೇಂಬರ್ ಗೆ ಮನವಿ ಮಾಡಿಕೊಂಡಿದ್ದರು.