Tag: karnataka elections2018

  • ರೈತರ ಸಾಲಮನ್ನಾ ಘೋಷಿಸಿರುವ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

    ರೈತರ ಸಾಲಮನ್ನಾ ಘೋಷಿಸಿರುವ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

    ಬೆಂಗಳೂರು: ನಗರದ ಖಾಸಗಿ ಹೊಟೇಲ್‍ನಲ್ಲಿ `ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಹೆಸರಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.

    ರೈತರ ಸಾಲಮನ್ನಾ ಘೋಷಣೆ ಮಾಡಿರುವ ಪ್ರಣಾಳಿಕೆಯಲ್ಲಿ ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಹಲವು ವಲಯಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆ ಮುಖ್ಯಾಂಶಗಳು ಇಂತಿವೆ. ಇದನ್ನೂ ಓದಿ; ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ

    ಬೆಂಗಳೂರಿಗೆ:
    * ಬೆಂಗಳೂರಿಗರ ಅಗತ್ಯ ಪೂರೈಸಲು ನವ ಬೆಂಗಳೂರು ಕಾಯ್ದೆ ಹೊಸ ಕಾನೂನು
    * ನಗರದ ಎಲ್ಲಾ ಭಾಗಕ್ಕೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ
    * ಉಪನಗರ ರೈಲ್ವೆ ಜಾಲ ಪೂರ್ಣಗೊಳಿಸಲು ಬಿ- ರೈಡ್ ಸ್ಥಾಪನೆ
    * ಮಹಿಳೆಯರ ತೊಂದರೆಗೆ ಸ್ಪಂದಿಸಲು ಕಿತ್ತೂರು ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ರಚನೆ
    * ಕೆಂಪೇಗೌಡ ನಿಧಿಯಡಿ ಕೆರೆ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕೆ 2500 ಕೋಟಿ ರೂ.

    ರೈತರ ಕಲ್ಯಾಣ:
    * ರೈತರ 1 ಲಕ್ಷದವರೆಗಿನ ಬೆಳ ಸಾಲ ಮನ್ನಾ
    * ನೇಗಿಲಯೋಗಿ ಯೋಜನೆಯಡಿ 20 ಲಕ್ಷ ರೈತರಿಗೆ 10 ಸಾವಿರ ಆರ್ಥಿಕ ನೆರವು
    * ರೈತಬಂಧು ಆವರ್ತ ನಿಧಿಯಡಿ ಬೆಂಬಲ ಬೆಲೆ ನೀಡಲು 5 ಸಾವಿರ ಕೋಟಿ ಮೀಸಲು
    * ಸಿಎಂ ರೈತ ಸುರಕ್ಷಾ ವಿಮಾ ಯೋಜನೆಯಡಿ 2 ಲಕ್ಷ ರೂ.ಗಳ ರೆಗೆ ಉಚಿತ ಅಪಘಾತ ವಿಮೆ
    * ನೀರಾವರಿ ಯೋಜನೆಗಳು 1.5 ಲಕ್ಷ ಕೋಟಿ ಮೀಸಲು
    * ರೈತರ ಪಂಪ್ ಸೆಟ್ ಗೆ 10 ಗಂಟೆ ತ್ರೀ ಫೇಸ್ ವಿದ್ಯುತ್
    * ರೈತ ಬಂಧು ವಿದ್ಯಾರ್ಥಿ ವೇತನದಡಿ 100 ಕೋಟಿ
    * ಸಿಎಂ ಕೃಷಿ ಫೆಲೋಶಿಪ್ ಅಡಿ ಸಾವಿರ ರೈತರಿಗೆ ಇಸ್ರೇಲ್,ಚೀನಾ ಪ್ರವಾಸ
    * ಗೋಹತ್ಯ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 2012ಕ್ಕೆ ಮರುಚಾಲನೆ
    * ರೈತ ಬಂಧು ಕಚೇರಿ ಸ್ಥಾಪನೆ
    * ನೀರಾವರಿ ಯೋಜನೆ ಪೂರ್ಣಗೊಳಿಸಲು ಒಂದೂವರೆ ಲಕ್ಷ ಕೋಟಿ ಅನುದಾನ
    * ರೈತರಿಗೆ ಚೀನಾ, ಇಸ್ರೇಲ್ ಪ್ರವಾಸ

    ಮಹಿಳಾ ಸಬಲೀಕರಣ:
    * ಸ್ತ್ರೀ ಉನ್ನತಿ ನಿಧಿಯಡಿ 10 ಸಾವಿರ ಕೋಟಿ ಮೀಸಲು
    * ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳೆಯರಿಗೆ ಶೇ.1 ರ ಬಡ್ಡಿದರದಲ್ಲಿ 2 ಲಕ್ಷ ಸಾಲ ಸೌಲಭ್ಯ
    * ಹೈನುಗಾರಿಕೆ ಕ್ಷೇತ್ರದಲ್ಲಿ 100 ಕೋಟಿ
    * ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸಿಎಂ ಸ್ಮಾರ್ಟ್ ಫೋನ್ ಯೋಜನೆಯಡಿ ಉಚಿತ ಸ್ಮಾರ್ಟ್ ಫೋನ್ ನೀಡಿಕೆ
    * ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು ವಿದ್ಯಾರ್ಥಿನಿಯರಿಗೆ ಉಚಿತ ಹಾಗು ಉಳಿದವರಿಗೆ 1 ರೂ.ಗೆ ಸ್ಯಾನಿಟರಿ ನ್ಯಾಪ್ ಕಿನ್ ನೀಡಿಕೆ
    * ಭಾಗ್ಯಲಕ್ಷ್ಮೀ ಯೋಜನೆ ಮೊತ್ತ 3 ಲಕ್ಷಕ್ಕೆ ಹೆಚ್ಚಳ
    * ವಿವಾಹ ಮಂಗಳ ಯೋಜನೆಯಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ 25 ಸಾವಿರ ನಗದು, 3 ಗ್ರಾಂ ಚಿನ್ನದ ತಾಳಿ

    ಯುವಜನತೆಗೆ:
    ಸಿಎಂ ಲ್ಯಾಪ್ ಟಾಪ್ ಯೋಜನೆಯಡಿ ಕಾಲೇಜು ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ

    ಎಲ್ಲರ ವಿಕಾಸ:
    * 300 ಕ್ಕೂ ಹೆಚ್ಚು ಸಿಎಂ ಅನ್ನಪೂರ್ಣ ಕ್ಯಾಂಟೀನ್ ಆರಂಭ
    * ಮದಕರಿ ನಾಯಕ ವಸತಿ ಯೋಜನೆಯಡಿ ಎಸ್ಟಿ ಸಮುದಾಯಗಳ ವಸತಿ ನಿರ್ಮಿಸಲು 6500 ಕೋಟಿ
    * 8,500 ರೂ. ವೆಚ್ಚದಲ್ಲಿ ಮಾದಾರ ಚನ್ನಯ್ಯ ವಸತಿ ಯೋಜನೆಯಡಿ ಎಸ್ಸಿ ಸಮುದಾಯದವರಿಗೆ ಆಧುನಿಕ ಮನೆ ನಿರ್ಮಾಣ
    * ನೇಕಾರರ 1 ಲಕ್ಷ ಸಾಲ ಮನ್ನಾ
    * ಅಮರಶಿಲ್ಪಿ ಜಕಣಾಚಾರಿ ಜಯಂತಿ

    ಬಿಜೆಪಿ ಪ್ರಣಾಳಿಕೆಯ ಪಿಡಿಎಫ್ ಕಾಪಿಯನ್ನು ಓದಲು ಕ್ಲಿಕ್ ಮಾಡಿ: BJP Karnataka 2018 Manifesto Kannada

     ದಕ್ಷ ಆಡಳಿತಕ್ಕೆ:
    * ಜ್ಞಾನ ಆಯೋಗ ಮತ್ತು ಯೋಜನಾ ಮಂಡಳಿ ಬದಲಿಸಿ ಕೀರ್ತಿ ಆಯೋಗ ಸ್ಥಾಪನೆ
    * ಸಕಾಲ ಕಾಯ್ದೆ ಸರ್ಕಾರದ ಎಲ್ಲಾ ಸೇವೆಗಳಿಗೆ ವಿಸ್ತರಣೆ
    * ಲೋಕಾಯುಕ್ತ ಸಂಸ್ಥೆಯನ್ನು ಸಂಪೂರ್ಣ ಅಧಿಕಾರದೊಂದಿಗೆ ಮರುಸ್ಥಾಪನೆ
    * ಮರಳು, ಭೂ ಮತ್ತು ಕಾನೂನು ಬಾಹಿರ ಗಣಿಗಾರಿಕೆ ಮಾಫಿಯಾ ಕೊನೆಗೊಳಿಸಲು ಶಾಶ್ವತ ವಿಶೇಷ ಕಾರ್ಯಪಡೆ ರಚನೆ
    * ಪಿಎಫ್‍ಐ ಕೆಎಫ್ ಡಿ ಮುಂತಾದ ಗುಂಪು ನಿಷೇಧಕ್ಕೆ ಕೇಂದ್ರಕ್ಕೆ ಶಿಫಾರಸ್ಸು

    ಶಿಕ್ಷಣ:
    * ಶುಲ್ಕ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ
    * 1300 ಕೋಟಿ ವೆಚ್ಚದಲ್ಲಿ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ
    * ಕುವೆಂಪು ಜ್ಞಾನ ಯೋಜನೆಯಡಿ 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿ ತಮಾಣ ಹಾಗು ಇರುವ ಕಾಲೇಜು ಮೇಲ್ದರ್ಜೆಗೆ 3 ಸಾವಿರ ಕೋಟಿ
    * ವೃತ್ತಿಪರ ಕೋರ್ಸ್ ಹೊರತುಪಡಿಸಿ ಎಲ್ಲರಿಗೂ ಪದವಿ ಮಟ್ಟದವರೆಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ

    ಆರೋಗ್ಯ:
    * ದೆಹಲಿಯ ಏಮ್ಸ್ ಮಾದರಿ ಎರಡು ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆ
    * ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪನೆ
    * ಆಯುಷ್ಮಾನ್ ಕರ್ನಾಟಕ ಯೋಜನೆಯಡಿ ಬಡ ದುರ್ಬಲರ ಚಿಕಿತ್ಸೆಗೆ 5 ಲಕ್ಷ ವಿಮೆ
    * ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಗುರಿ

    ಮೂಲಸೌಕರ್ಯ:
    * ಸೌಭಾಗ್ಯ ಯೋಜನೆಯಡಿ ಮನೆಗಳಿಗೆ ದಿನವಿಡೀ ವಿದ್ಯುತ್
    * 20 ಸಾವಿರ ಮೆಗಾವ್ಯಾಟ್ ಗೆ ವಿದ್ಯುತ್ ಉತ್ಪಾದನಾ ಸಾಮಥ್ರ್ಯ ಹೆಚ್ಚಳ, ಸೌರಶಕ್ತಿ 4 ಸಾವಿರ ಹೆಚ್ಚುವರಿ ಉತ್ಪಾದನೆ ಕ್ರಮ
    * ಎಲ್ಲಾ ಜಿಲ್ಲೆ ಸಂಪರ್ಕಿಸುವ ಷಟ್ಪಥ ಯೋಜನೆ ಕರ್ನಾಟಕ ಮಾಲಾ ಹೆದ್ದಾರಿ ಯೋಜನೆಯಡಿ ಅನುಷ್ಠಾನ
    * 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳಿಗೆ ಕೊಳವೆ ಮೂಲಕ ಅನಿಲ ಪೂರೈಕೆ ಸೌಕರ್ಯ
    * ಇಂದಿರಾ ಕ್ಯಾಂಟೀನ್ ಬದಲು ಅನ್ನಪೂರ್ಣ ಕ್ಯಾಂಟೀನ್
    * ಜಿಲ್ಲೆಗೆ ಮೂರು, ತಾಲೂಕಿಗೆ ಒಂದು ಕ್ಯಾಂಟೀನ್

    ಕಾರ್ಯಕ್ರಮಕ್ಕೂ ಮೊದಲು ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಮತ್ತಿರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

  • ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ

    ಬಿಜೆಪಿ ಪ್ರಣಾಳಿಕೆ ರಿಲೀಸ್: ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಘೋಷಣೆ

    ಬೆಂಗಳೂರು: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ 1 ಲಕ್ಷ ರೂ.ಗಳ ಸಾಲ ಮನ್ನಾ ಹಾಗು ಸಹಕಾರಿ ಸಂಘಗಳಲ್ಲಿನ ಸಾಲಮನ್ನಾವನ್ನು 50 ಸಾವಿರದಿಂದ 1 ಲಕ್ಷಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಗೆ ಸುರೇಶ್ ಕುಮಾರ್ ನೇತೃತ್ವದ ಸಮಿತಿ ರಚಿಸಿರುವ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಬಿಎಸ್‍ವೈ, ಸಹಕಾರಿ ಸಂಘದಲ್ಲಿನ ರೈತರ 50 ಸಾವಿರ ರೂ.ಗಳವರೆಗಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡುವಂತೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕ ಆಗ್ರಹಿಸಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರದ ಕಡೆ ನೋಡದೇ ರಾಷ್ಟ್ರೀಕೃತ ಬ್ಯಾಂಕ್ ಗಳ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡುಸುತ್ತೇನೆ. ಜೊತೆಗೆ ಸಹಕಾರಿ ಸಂಘದ ಸಾಲ ಮನ್ನಾವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಳ ಮಾಡುತ್ತೇನೆ. ಜೊತೆಗೆ ಮೂರು ತಿಂಗಳ ಒಳಗೆ ನೇಕಾರರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ರಾಜ್ಯ ಪ್ರವಾಸದ ವೇಳೆ ಕಂಡುಬಂದ 224 ಕ್ಷೇತ್ರಗಳ ಸಮಸ್ಯೆಗಳನ್ನು ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ. ಅದನ್ನು ಗೌರವದಿಂದ ನಾಡಿನ ಜನತೆಗೆ ಅರ್ಪಣೆ ಮಾಡುತ್ತಿದ್ದೇವೆ. ಮುಂದಿನ 5 ವರ್ಷ ರಾಜ್ಯದ ಅಭಿವೃದ್ಧಿಗೆ ಪೂರಕ ರೀತಿಯಲ್ಲಿ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಜನರ ಆಶೋತ್ತರ ತಿಳಿದು ಪ್ರಣಾಳಿಕೆ ಸಿದ್ಧ ಪಡಿಸಲಾಗಿದೆ. ಮೋದಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮಾರ್ಗಸೂಚಿ ಇದಾಗಿದೆ ಎಂದು ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡರು.

    ಈಡೇರಿಸಲಾಗದ ಭರವಸೆಯ ಪಟ್ಟಿ ಇದಲ್ಲ, ನಮ್ಮನ್ನು ಅಧಿಕಾರಕ್ಕೆ ತರುವುದು ಖಚಿತ ಹಾಗಾಗಿ ಹಣಕಾಸು ವಿವರ. ಕರ್ನಾಟಕದ ಯುವ ಜನತೆ ಭವಿಷ್ಯ, ಸರ್ವರಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯ, ಮಕ್ಕಳ ಶಿಕ್ಷಣಕ್ಕೆ ಕಾಯಕಲ್ಪ, ಆರೋಗ್ಯ ಕರ್ನಾಟಕ, ಮೂಲಸೌಕರ್ಯ ವಿಸ್ತರಣೆ, ಆರ್ಥಿಕ ಔದ್ಯೋಗಿಕ ವಿಸ್ತರಣೆ, ನವ ಭಾರತಕ್ಕಾಗಿ ನವ ಬೆಂಗಳೂರು ಸೇರಿದಂತೆ ಹತ್ತು ಹಲವು ಅಂಶ ಒಳಗೊಂಡ ಪ್ರಣಾಳಿಕೆ ಇದಾಗಿದೆ ಸರ್ಕಾರದ ಬದಲಿಸಿ ಬಿಜೆಪಿ ಗೆಲ್ಲಿಸಿ ಉದ್ದೇಶದೊಂದಿಗೆ ಪ್ರಣಾಳಿಕೆ ರಚಿಸಲಾಗಿದೆ ಎಂದರು.

    ಕಾರ್ಯಕ್ರಮಕ್ಕೂ ಮೊದಲು ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸುರೇಶ್ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದ ಪಿ.ಸಿ ಮೋಹನ್ ಮತ್ತಿರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

    ಬಿಜೆಪಿ ಪ್ರಣಾಳಿಕೆಯ ಪಿಡಿಎಫ್ ಕಾಪಿಯನ್ನು ಓದಲು ಕ್ಲಿಕ್ ಮಾಡಿ: BJP Karnataka 2018 Manifesto Kannada

  • ನಾನೂ ಕೂಡ ಸಿಎಂ ಅಭ್ಯರ್ಥಿಯೆಂದು ಮನದಾಳದ ಆಸೆಯನ್ನು ಬಿಚ್ಚಿಟ್ಟ ಡಿಕೆಶಿ

    ನಾನೂ ಕೂಡ ಸಿಎಂ ಅಭ್ಯರ್ಥಿಯೆಂದು ಮನದಾಳದ ಆಸೆಯನ್ನು ಬಿಚ್ಚಿಟ್ಟ ಡಿಕೆಶಿ

    ಮಂಡ್ಯ: ನಾನೂ ಕೂಡ ಸಿಎಂ ಅಭ್ಯರ್ಥಿ ಎಂದು ಹೇಳುವ ಮೂಲಕ ಸಾವಿರಾರು ಜನ ಕಾರ್ಯಕರ್ತರೆದುರು ಇಂಧನ ಸಚಿವ ಡಿಕೆ.ಶಿವಕುಮಾರ್ ತಮ್ಮ ಮನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಮಂಡ್ಯದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಮಧುಮಾದೇಗೌಡ ಪರ ರೋಡ್ ಶೋ ನಡೆಸುತ್ತಾ ಮಾತನಾಡಿದ ಇಂಧನ ಸಚಿವ ಡಿಕೆ.ಶಿವಕುಮಾರ್, ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಓಟ್ ಹಾಕಿ ಅಂತಾರೆ. ಹಾಗಾದ್ರೆ ನಾನೇನಿಲ್ವಾ? ಎಂದು ಕಾರ್ಯಕರ್ತರನ್ನು ಪ್ರಶ್ನಿಸುವ ಮೂಲಕ ನಾನು ಕೂಡ ಸಿಎಂ ಅಭ್ಯರ್ಥಿ ಎಂಬ ಗುಟ್ಟು ರಟ್ಟು ಮಾಡಿದ್ದಾರೆ. ಡಿಕೆಶಿ ಮಾತಿಗೆ ಓ ಎಂದು ಕೂಗುವ ಮೂಲಕ ಕಾರ್ಯಕರ್ತರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ದೇವೇಗೌಡರು, ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ ಡಿಕೆಶಿ, ಸಿಎಂ ಆಗಿದ್ದರು, ಪ್ರಧಾನಿ ಆಗಿದ್ರು. ಮಂಡ್ಯಕ್ಕೆ ಏನು ಮಾಡಿದ್ದಾರೆ ಹೇಳ್ಬೇಕಲ್ವಾ ಇದೇನು ಪಂಚಾಯಿತಿ ಕೆಟ್ಟೋಯ್ತಾ? ನಾನೇ ಮುಂದಿನ ಮುಖ್ಯಮಂತ್ರಿ ಅಂದ್ರೆ ಜನ ದಡ್ಡರ? ಇವೆಲ್ಲ ಆಗದಿರೋ ಕಥೆ. ತಮ್ಮಣ್ಣಂಗೆ ಈ ಬಾರಿ ರೆಸ್ಟ್ ಕೊಡಿ. ಮಧುನ ಈ ಬಾರಿ ಗೆಲ್ಸಿ ಎಂದು ಡಿಕೆಶಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ತಮ್ಮ ಮಗ ಮಧುಮಾದೇಗೌಡ ಪರ ಪ್ರಚಾರಕ್ಕೆ ಬಂದಿದ್ದ ಜಿ.ಮಾದೇಗೌಡ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿ ಡಿಕೆ.ಶಿವಕುಮಾರ್ ಆಶೀರ್ವಾದ ಪಡೆದಿದ್ದಾರೆ.

  • ಕಾಂಗ್ರೆಸ್ ವಿರುದ್ಧ ಕಮ್ಯೂನಲ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ

    ಕಾಂಗ್ರೆಸ್ ವಿರುದ್ಧ ಕಮ್ಯೂನಲ್ ಅಸ್ತ್ರ ಪ್ರಯೋಗಿಸಿದ ಬಿಜೆಪಿ

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ಮತದಾನಕ್ಕೆ ಇರೋದು ಇನ್ನು ಕೇವಲ 9 ದಿನ. ಈ ಹೊತ್ತಲ್ಲಿ ಮತಗಳ ಧೃವೀಕರಣಕ್ಕಾಗಿಯೇ ಏನೋ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಮ್ಯೂನಲ್ ಕಾರ್ಡ್ ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ.

    ಕಾಂಗ್ರೆಸ್ ನಾಯಕರು, ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿ ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

    ನಿತಿನ್ ಗಡ್ಕರಿ ನೇತೃತ್ವದ ಕೇಂದ್ರ ಸಚಿವರ ನಿಯೋಗ ಬುಧವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರುಗಳ ಸುರಿಮಳೆ ಸುರಿಸಿದೆ. ಅಧಿಕಾರ ದುರುಪಯೋಗ, ಮಾಧ್ಯಮಗಳ ಮೇಲೆ ಒತ್ತಡ ಹೇರುವಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದೆ.

    ಕಾಂಗ್ರೆಸ್ ವಿರುದ್ಧ ಬಿಜೆಪಿ ನೀಡಿರುವ ದೂರಿನ ಪ್ರಮುಖಾಂಶಗಳು ಇಂತಿವೆ:
    * ಇಸ್ಲಾಂ ಹೆಸರಲ್ಲಿ ಕಾಂಗ್ರೆಸ್‍ಗೆ ವೋಟ್ ಮಾಡುವಂತೆ ಖರ್ಗೆ, ಗುಲಾಂ ನಬಿ ಆಜಾದ್ ಪ್ರಚಾರ
    * ನೀವು ಕಾಂಗ್ರೆಸ್‍ಗೆ ವೋಟ್ ಹಾಕಿದರೆ ಅದು ಅಲ್ಲಾಹುವಿನ ಸೇವೆ ಆಗುತ್ತೆ ಅಂತಾ ಪ್ರಚಾರ
    * ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಧರ್ಮದ ಆಧಾರದಲ್ಲಿ ಮತ ಕೇಳುವುದು ಪ್ರಜಾ ಪ್ರತಿನಿಧಿ ಕಾಯ್ದೆಗೆ ವಿರುದ್ಧ

    * ಸಿದ್ದರಾಮಯ್ಯ ಸರ್ಕಾರದ ಕೈಗೊಂಬೆಯಾಗಿದೆ ರಾಜ್ಯ ಚುನಾವಣಾ ಆಯೋಗ
    * ಕೇವಲ ಬಿಜೆಪಿಯವರ ಮೇಲೆ ಮಾತ್ರ ಕೇಸ್ ಹಾಕಲಾಗುತ್ತಿದ್ದು, ಹಣ ಸೀಜ್ ಮಾಡಲಾಗುತ್ತಿದೆ
    * ಕಾಂಗ್ರೆಸ್ ನಾಯಕರ ಪ್ರಚಾರ ವಾಹನಗಳ ಸಂಚಾರಕ್ಕೆ ಅಧಿಕಾರಿಗಳು ಮುಕ್ತ ಅವಕಾಶ ನೀಡಿದ್ದಾರೆ

    * ಮತ ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸಿಕ್ಕಾಪಟ್ಟೆ ಹಣ ಚೆಲ್ಲುತ್ತಿದ್ದು, ಇದನ್ನು ನೋಡಿಯೂ ಅಧಿಕಾರಿಗಳು ಸುಮ್ಮನಿದ್ದಾರೆ
    * ಬಿಜೆಪಿ ವಿರುದ್ಧದ ಸುದ್ದಿಗಳನ್ನು ಮಾತ್ರ ಬಿತ್ತರಿಸುವಂತೆ ಮಾಧ್ಯಮಗಳ ಮೇಲೆ ಕಾಂಗ್ರೆಸ್ ಒತ್ತಡ ಹಾಕುತ್ತಿದೆ
    * ಅಧಿಕಾರಿಗಳನ್ನು ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ
    * ಕಾಂಗ್ರೆಸ್ ನಿರ್ದೇಶನದ ಮೇರೆಗೆ ಉಡುಪಿಯಲ್ಲಿ ದೇವಾಲಯಗಳ ಮೇಲಿನ ಕೇಸರಿ ಧ್ವಜಗಳನ್ನು ಬಲವಂತವಾಗಿ ತೆಗೆಸಿದ್ದಾರೆ

  • ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ನಡೆದಿದೆ.

    ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕ ಹಾಗೂ ಸಚಿವ ತನ್ವೀರ್ ಸೇಠ್ ಮತದಾರನಿಂದ ತರಾಟೆಗೆ ಒಳಗಾಗಿದ್ದಾರೆ. ಮತದಾರ ರಸ್ತೆಯಲ್ಲಿ ಏಕಾಂಗಿಯಾಗಿ ನಿಂತು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ತಡೆಯಲು ಬಂದ ಸಚಿವರ ಆಪ್ತ ಕಾರ್ಯದರ್ಶಿಯನ್ನು ಲೆಕ್ಕಿಸದೆ ಅವಾಜ್ ಹಾಕಿದ್ದಾರೆ.

    ಮೈಸೂರಿನ ಕನ್ನಡಪರ ಹೋರಾಟಗಾರ ಪರಮೇಶ್, ತನ್ವೀರ್ ಸೇಠ್ ಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ. ಎನ್.ಆರ್. ಕ್ಷೇತ್ರದ ರಾಘವೇಂದ್ರ ನಗರದಲ್ಲಿ ಮತಯಾಚನೆಗಾಗಿ ತನ್ವೀರ್ ಸೇಠ್ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಎದುರಾದ ಮತದಾರ ಪರಮೇಶ್, ತನ್ವೀರ್ ಸೇಠ್‍ಗೆ ಹಲವು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆಗೈದರು.

    ರಸ್ತೆ ರೀಪೇರಿ ಮಾಡಿಸಿಲ್ಲ. ನಾನು ಅಂದಿನಿಂದಲೂ ನಿಮಗೆ ನಿಮ್ಮ ತಂದೆ ಹಾಗೂ ನಿಮಗೆ ಮತ ಹಾಕ್ತಿದ್ದೀವಿ. ಆದ್ರೆ ಮನೆ ಬಳಿ ಕೆಲಸ ಮಾಡಿಕೊಡಿ ಅಂತ ಬಂದ್ರೆ ಕ್ಯಾರೇ ಅನ್ನೊಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯನಂತಿರುವ ರಾವಣನ ಸಂಹಾರಕ್ಕೆ ಶ್ರೀರಾಮುಲು ಸದಾ ಸಿದ್ಧ: ಜನಾರ್ದನ ರೆಡ್ಡಿ

    ಸಿದ್ದರಾಮಯ್ಯನಂತಿರುವ ರಾವಣನ ಸಂಹಾರಕ್ಕೆ ಶ್ರೀರಾಮುಲು ಸದಾ ಸಿದ್ಧ: ಜನಾರ್ದನ ರೆಡ್ಡಿ

    ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಮೋಸಗಾರ, ಸುಳ್ಳುಗಾರ. ಸಿದ್ದರಾಮಯ್ಯನಂತಿರುವ ರಾವಣನ ಸಂಹಾರಕ್ಕೆ ರಾಮನಂತಿರುವ ಶ್ರೀರಾಮಲು ಬಂದಿದ್ದಾರೆಂದು ಮೊಣಕಾಲ್ಮೂರು ಕ್ಷೇತ್ರದ ಕೋನಾಪುರದಲ್ಲಿ ಪ್ರಚಾರದ ವೇಳೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

    ಸಿಎಂ ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು. ನಿಮಗೆ ಚಾಮುಂಡೇಶ್ವರಿ ಅಥವಾ ಬನಶಂಕರಿ ತಾಯಿಯ ಇಬ್ಬರ ಆಶೀರ್ವಾದ ಮಾಡಲ್ಲ. ನಿಮ್ಮ ಸಂಹಾರಕ್ಕೆ ಶ್ರೀರಾಮುಲು ಬಂದಿದ್ದಾರೆ. ಬದಾಮಿ ವಿಧಾನಸಭಾ ಕ್ಷೇತ್ರದ ಜನರು ಶ್ರೀರಾಮುಲು ಅವರನ್ನು ಬಹುಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಅಂತಾ ಅಂದ್ರು.

    ಜನಾರ್ದನ ರೆಡ್ಡಿ 1 ಲಕ್ಷ ಕೋಟಿ ಲೂಟಿ ಮಾಡಿದ್ದಾನೆ ಅಂತಾ ಸುಳ್ಳು ಹೇಳಿ ಪ್ರಚಾರ ಮಾಡಿದ ಸಿಎಂಗೆ, ನನ್ನಿಂದ 1 ರೂಪಾಯಿಯನ್ನು ವಸೂಲಿ ಮಾಡಲು ಆಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಶ್ರೀರಾಮುಲು ಮತ್ತು ವಿಜಯೇಂದ್ರ ಇಬ್ಬರು ಮಕ್ಕಳಿದ್ದಂತೆ. ನನ್ನ ಸ್ನೇಹಿತನಿಗಾಗಿ ಏನು ಬೇಕಾದರು ಮಾಡಲು ನಾನು ಸಿದ್ಧ ಎಂದು ರೆಡ್ಡಿ ಅಂತಾ ಹೇಳಿದ್ರು.

  • ದಕ್ಷಿಣ ಕನ್ನಡದಲ್ಲಿ ಎಸ್‍ಡಿಪಿಐ ಜೊತೆಗೆ ಕಾಂಗ್ರೆಸ್ ಮೈತ್ರಿ!

    ದಕ್ಷಿಣ ಕನ್ನಡದಲ್ಲಿ ಎಸ್‍ಡಿಪಿಐ ಜೊತೆಗೆ ಕಾಂಗ್ರೆಸ್ ಮೈತ್ರಿ!

    ಮಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ, ಮಂಗಳೂರು ಉತ್ತರ, ಸುಳ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತ ವಿಭಜನೆಯಾಗದಂತೆ ತಡೆಯಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಎಸ್‍ಡಿಪಿಐ ಅಭ್ಯರ್ಥಿಗಳನ್ನು ಈ ಬಾರಿ ಚುನಾವಣಾ ಕಣಕ್ಕಿಳಿಸದಂತೆ ಕಾಂಗ್ರೆಸ್ ತಂತ್ರ ಹೂಡಿದೆ.

    ಸಚಿವ ರಮಾನಾಥ ರೈ ಪ್ರತಿನಿಧಿಸುವ ಬಂಟ್ವಾಳ ಕ್ಷೇತ್ರದಲ್ಲಿ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಈಗ ಎಸ್‍ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡರು, ರಿಯಾಜ್ ನಾಮಪತ್ರ ಹಿಂದೆಗೆಸಲು ಮುಂದಾಗಿದ್ದಾರೆ. ಈ ವಿಚಾರವನ್ನು ಎಸ್‍ಡಿಪಿಐ ನಾಯಕರು ಒಪ್ಪಿಕೊಂಡಿದ್ದು ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸದಂತೆ ತಡೆಯಲು ಈ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕರಾವಳಿಯ ಕ್ಷೇತ್ರಗಳಲ್ಲಿ ಈ ಬಾರಿ ನೆಕ್ ಟು ನೆಕ್ ಫೈಟ್ ಸಾಧ್ಯತೆಯಿದೆ. ಎಸ್‍ಡಿಪಿಐ ಈ ನಿರ್ಧಾರದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಟೀಕೆಗೆ ಗುರಿಯಾಗಿದೆ.

  • ಅಕ್ಕನ ಆಶೀರ್ವಾದ ಸಿಗಲ್ಲ ಎಂದ ಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗುತ್ತೆ: ಸಿಟಿ ರವಿ

    ಅಕ್ಕನ ಆಶೀರ್ವಾದ ಸಿಗಲ್ಲ ಎಂದ ಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗುತ್ತೆ: ಸಿಟಿ ರವಿ

    ಹಾಸನ: ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂಬುದು ಜನರ ಭಾವನೆಯಾಗಿತ್ತು. ಆದರೆ ಅವರಿಗೆ ಟಿಕೆಟ್ ನೀಡದೇ ಇರುವುದು ಪಕ್ಷದ ತೀರ್ಮಾನ. ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಚ್ಚಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

    ಜಿಲ್ಲೆಯ ಬೇಲೂರಿನಲ್ಲಿ ಮಾತನಾಡಿದ ಅವರು, ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೆಲುವು ಬಾದಾಮಿ ತಿಂದಷ್ಟು ಸುಲಭವಲ್ಲ. ಚಾಮುಂಡೇಶ್ವರಿಯಲ್ಲಿ ಚಾಮುಂಡಿ ಆಶೀರ್ವಾದ ಸಿಗದು ಎಂಬ ಕಾರಣದಿಂದ ಬದಾಮಿಯ ಬನಶಂಕರಿ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಆದರೆ ಅವರಿಬ್ಬರು ಅಕ್ಕ-ತಂಗಿಯರು. ಅಕ್ಕನ ಆಶೀರ್ವಾದ ಸಿಗಲ್ಲ ಎಂದಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗಲಿದೆ. ಬದಾಮಿ ಕಾಂಗ್ರೆಸ್ ಗೆ ಕಬ್ಬಿಣದ ಕಡಲೆಯಾಗುವುದು ನಿಶ್ಚಿತ ಎಂದರು. ಇದನ್ನೂ ಓದಿ: ಬಾದಾಮಿಯಾದ್ರು ಹುಡುಕಿಕೊಂಡು ಹೋಗಲಿ, ಗೋಡಂಬಿಯಾದ್ರೂ ಹುಡುಕಿಕೊಂಡು ಹೋಗಲಿ ಸೋಲು ಖಚಿತ: ಎಚ್‍ಡಿಕೆ

    ಪಕ್ಷ ಕೈಗೊಂಡಿರುವ ತೀರ್ಮಾನದ ಕುರಿತು ನಾನು ಏನನ್ನೂ ಮಾತನಾಡಲಾರೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆಯೇ ಎಂಬ ಪ್ರಶ್ನೆಗೆ ಅದೆಲ್ಲಾ ಚುನಾವಣೆ ಗೆಲ್ಲುವ ಯುದ್ಧ ನೀತಿ. ಫಲಿತಾಂಶ ಹೊರ ಬರುವವರೆಗೂ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.