Tag: karnataka elections

  • ಕಾಂಗ್ರೆಸ್‍ನಿಂದ ಎಬಿಸಿ ಪ್ಲಾನ್: ರಾಜ್ಯ ರಾಜಕಾರಣದಲ್ಲಿ ಮೂಡಿಸಿದೆ ಸಂಚಲನ

    ಕಾಂಗ್ರೆಸ್‍ನಿಂದ ಎಬಿಸಿ ಪ್ಲಾನ್: ರಾಜ್ಯ ರಾಜಕಾರಣದಲ್ಲಿ ಮೂಡಿಸಿದೆ ಸಂಚಲನ

    ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನದ ಹೊಸ್ತಿಲಲ್ಲಿರುವ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಶತಾಯಗತಾಯ ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದು, ಈ ವೇಳೆ ಬಹುಮತ ಪಡೆದು ಅಧಿಕಾರ ಸ್ಥಾಪಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಬಿಸಿ ಪ್ಲಾನ್ ಜಾರಿಗೆ ತರಲು ಮುಂದಾಗಿದೆ.

    ಏನಿದು ಎಬಿಸಿ ಪ್ಲಾನ್?
    ಸದ್ಯ ದೇಶದ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗಬಲ್ಲ ಚುನಾವಣೆ ಎಂದು ರಾಜಕೀಯ ವಿಶ್ಲೇಷಕರು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಕರೆಯುತ್ತಿದ್ದಾರೆ. ಆದರೆ ಚುನಾವಣೆಯ ಪೂರ್ವ ನಡೆದ ಹಲವು ಸಮೀಕ್ಷೆಗಳು ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಫಲಿತಾಂಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಮ್ಮ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ತೀರ್ಮಾನಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಬಿಸಿ ಪ್ಲಾನ್ ರಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಪ್ಲಾನ್ ಎ – ಈ ಪ್ಲಾನ್ ಅನ್ವಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಳ ಬಹುಮತವನ್ನು ಪಡೆಯಬೇಕಿದೆ. ಹೀಗಾಗಿ 112 ಸ್ಥಾನಗಳನ್ನು ಗೆಲ್ಲಬೇಕು. ಈ ಸ್ಥಾನಗಳನ್ನು ಗೆಲ್ಲಲು ಪಕ್ಷದ ಎಲ್ಲಾ ನಾಯಕರು ಎಲ್ಲಾ ರೀತಿಯ ಶ್ರಮವಹಿಸಬೇಕು.

    ಪ್ಲಾನ್ ಬಿ – ಒಂದು ವೇಳೆ ಪಕ್ಷ ಸರಳ ಬಹುಮತ ಪಡೆಯಲು ವಿಫಲವಾದರೆ, ಪ್ಲಾನ್ ಬಿ ಜಾರಿಗೆ ಬರುತ್ತದೆ. ಅಂದರೆ ಚುನಾವಣೆಯಲ್ಲಿ ಪಕ್ಷವು 100 ಆಸುಪಾಸು ಸ್ಥಾನ ಗೆದ್ದರೆ ಈ ವೇಳೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆಯುವುದು. ಪ್ಲಾನ್ ಬಿ ಜಾರಿಗೆ ಹೊಣೆಯನ್ನು ರಾಹುಲ್ ಗಾಂಧಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ.

    ಪ್ಲಾನ್ ಸಿ – ಪ್ಲಾನ್ ಬಿ ಅನ್ವಯ ಸರಳ ಬಹುಮತ ಪಡೆಯಲು ವಿಫಲವಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲ ಪಡೆಯುವುದು. ಆದರೆ ಸದ್ಯ ರಾಜ್ಯ ನಾಯಕರಿಗೆ ಪ್ಲಾನ್ ಸಿ ಬಗೆ ತಲೆ ಕೆಡಿಸಿಕೊಳ್ಳದಿರಲು ಹೈಕಮಾಂಡ್ ಸೂಚನೆ ನೀಡಿದೆ.

    ರಾಹುಲ್ ಗಾಂಧಿ ಸದ್ಯ ರಾಜ್ಯ ನಾಯಕರಿಗೆ ತಮ್ಮ ಎಸಿಬಿ ಪ್ಲಾನ್ ಕುರಿತು ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು, ಚುನಾವಣೆ ಮುಗಿರುವ ವರೆಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

     

     

  • ವಿಜಯಪುರ ಜಿಲ್ಲೆಗೆ ಆಗಮಿಸ್ತಿರೋ ಮೋದಿಯನ್ನು ಸ್ವಾಗತಿಸಿದ್ರು ಸಚಿವ ಎಂ.ಬಿ.ಪಾಟೀಲ್

    ವಿಜಯಪುರ ಜಿಲ್ಲೆಗೆ ಆಗಮಿಸ್ತಿರೋ ಮೋದಿಯನ್ನು ಸ್ವಾಗತಿಸಿದ್ರು ಸಚಿವ ಎಂ.ಬಿ.ಪಾಟೀಲ್

    ಬೆಂಗಳೂರು: ಇಂದು ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ, ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಟ್ವಿಟ್ಟರ್ ನಲ್ಲಿ ಸ್ವಾಗತ ಕೋರಿ ಟಾಂಗ್ ಕೊಟ್ಟಿದ್ದಾರೆ.

    `ವಿಜಯಪುರ ಜಿಲ್ಲೆಗೆ ಆಗಮಿಸುತ್ತಿರುವ ಪ್ರಧಾನಿಗಳಿಗೆ ಸ್ವಾಗತ. ನಮ್ಮ ಸರ್ಕಾರ 3,500ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದು, ಲಕ್ಷಾಂತರ ಕೃಷಿ ಹೊಂಡಗಳನ್ನು ನಿರ್ಮಿಸಿದೆ. ಮಹಿಳೆಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ಬಸವಣ್ಣ ಅವರ ಅನುಯಾಯಿಗಳನ್ನು ಒಗ್ಗೂಡಿಸಿದೆ. ನಿಮ್ಮ 3 ಜನ ಸಿಎಂ ಏನು ಮಾಡಿದ್ದಾರೆ? ಎಂದು ಟ್ವಿಟ್ಟರ್‍ನಲ್ಲಿ ಪ್ರಧಾನಿಗೆ ಎಂ.ಬಿ.ಪಾಟೀಲ್ ಪ್ರಶ್ನೆ ಹಾಕಿದ್ದಾರೆ.

    ಜಿದ್ದಾಜಿದ್ದಿನ ಕಣವಾಗಿರುವ ಬಸವಣ್ಣನ ನಾಡು ವಿಜಯಪುರದಲ್ಲಿಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೃಹತ್ ಪ್ರಚಾರ ಸಮಾವೇಶ ನಡೆಸಲಿದ್ದಾರೆ. ಬಬಲೇಶ್ವರದ ಸಾರಗಾಡ ಗ್ರಾಮದಲ್ಲಿ ಬೆಳಗ್ಗೆ 10.30ಕ್ಕೆ ಪ್ರಧಾನಿ ಮೋದಿ ಅಬ್ಬರಿಸಿದ್ರೆ, ಇಲ್ಲಿಂದ ಕೇವಲ 30 ಕಿ.ಮೀ ಅಂತರದಲ್ಲಿರುವ ವಿಜಯಪುರ ನಗರದ ಬಿಎಲ್‍ಡಿಇ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸೋನಿಯಾ ಗಾಂಧಿ ಆರ್ಭಟಿಸಲಿದ್ದಾರೆ.

    ಸೋನಿಯಾ ಗಾಂಧಿ ಎರಡು ವರ್ಷಗಳ ಬಳಿಕ ಚುನಾವಣಾ ಪ್ರಚಾರಕ್ಕಿಳಿಯುತ್ತಿದ್ದು, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಗುಲಾಂ ನಬಿ ಆಜಾದ್, ಸಿಎಂ ಸಿದ್ದರಾಮಯ್ಯ ಭಾಗಿಯಾಗ್ತಿದ್ದಾರೆ. ಎರಡು ಸಮಾವೇಶದಲ್ಲೂ ಲಕ್ಷಾಂತರ ಜನ ಭಾಗಿಯಾಗುವ ನಿರೀಕ್ಷೆ ಇದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    https://twitter.com/reachmbp/status/993450677618839552

  • ಮೋದಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಕೇಸ್!

    ಮೋದಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಕೇಸ್!

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರವನ್ನು 10% ಸರ್ಕಾರ ಎಂದು ಆರೋಪಿಸಿದ್ದ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮಾನನಷ್ಟ ಕೇಸ್ ಹಾಕಲು ಸಿಎಂ ಮುಂದಾಗಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನಾಯಕ ಉಗ್ರಪ್ಪ ಈ ನಾಯಕರು ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ 100 ಕೋಟಿ ರೂ. ಮಾನಷ್ಟ ಕೇಸ್ ಹಾಕಲಾಗುವುದು ಎಂದು ತಿಳಿಸಿದರು.

    ಮೋದಿ, ಬಿಎಸ್‍ವೈ, ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಿಜೆಪಿ ನಾಯಕರು ಹೇಳಿಕೆಯಿಂದ ಪಕ್ಷ ಹಾಗೂ ತಮಗೇ ತೀವ್ರ ನಷ್ಟ ಉಂಟುಮಾಡಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ನೋಟಿಸ್ ಗೆ ಉತ್ತರಿಸದೇ ಇದ್ದರೆ ಕ್ರಿಮಿನಲ್ ಹಾಗೂ ಸಿವಿಲ್ ಮಾನನಷ್ಟ ಕೇಸ್ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಬಿಎಸ್‍ವೈ ಪಕ್ಷದ ಹಾಗೂ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. `ನಂಗಾ ನಾಚ್’ ಸರ್ಕಾರ, `10% ಸರ್ಕಾರ’ ಹಾಗೂ ರಾಜ್ಯದ ಮಂಗಳೂರು ಭಾಗದಲ್ಲಿ ನಡೆದ ಹತ್ಯೆಗಳನ್ನು ಕಾಂಗ್ರೆಸ್ ಪ್ರೇರಿತ ಎಂದು ಆರೋಪಿಸಿದ್ದಾರೆ. ಈ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಸೂಚಿಸಿದ್ದಾರೆ.

  • ನಾನೇ ಮುಂದಿನ ಮುಖ್ಯಮಂತ್ರಿ – ಎಲೆಕ್ಷನ್‍ಗೂ ಮೊದಲೇ ಮಂತ್ರಿಯನ್ನು ಘೋಷಿಸಿದ ಬಿಎಸ್‍ವೈ

    ನಾನೇ ಮುಂದಿನ ಮುಖ್ಯಮಂತ್ರಿ – ಎಲೆಕ್ಷನ್‍ಗೂ ಮೊದಲೇ ಮಂತ್ರಿಯನ್ನು ಘೋಷಿಸಿದ ಬಿಎಸ್‍ವೈ

    ವಿಜಯಪುರ: ನಾನೇ ಮುಂದಿನ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿ ಚುನಾವಣಾ ಪ್ರಚಾರ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ಇಂದು ಇನ್ನು ಒಂದು ಹೆಜ್ಜೆ ಮುಂಡಿಟ್ಟು ಬಸವರಾಜ್ ಯತ್ನಾಳ್ ಅವರಿಗೆ ಮಂತ್ರಿ ಸ್ಥಾನ ನೀಡುವುದಾಗಿ ಘೋಷಿಸಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೇ ಮುಂದಿನ ಮುಂಖ್ಯಮಂತ್ರಿ ಆಗಲಿದ್ದು, ಮೇ 17 ರ ಗುರುವಾರ ನನಗೆ ಶುಭದಿನ ಪ್ರಧಾನಿಗಳ ಸಮ್ಮುಖದಲ್ಲಿ ನಾನು ಸಿಎಂ ಆಗಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲು ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇದ್ದರೆ ಚಾಮುಂಡೇಶ್ವರಿಯಲ್ಲಿ ಮಾತ್ರ ನಿಲ್ಲಬೇಕಿತ್ತು. ಆದರೆ, ಬಾದಾಮಿಗೆ ಯಾಕೆ ಬಂದು ಚುನಾವಣೆಗೆ ನಿಂತಿದ್ದಾರೆ. ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲು ಖಚಿತ ಎಂದು ಹೇಳಿದ್ದಾರೆ.

    ನಾನು ಗೆಲ್ಲುತ್ತೇನೆ, ನಾನೇ ದಂಡನಾಯಕ ಎಂದು ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ. ಜಿ. ಪರಮೇಶ್ವರ್ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳಲಿ. ಆಮೇಲೆ ಗೆಲುವಿನ ಕುರಿತು ಮಾತನಾಡಲಿ. ಅವರು ಇನ್ನು ಆರು ದಿನದಲ್ಲಿ ಮನೆಗೆ ಹೋಗುತ್ತಾರೆ ಎಂದು ಹೇಳಿದರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿದೂಷಕರಿದ್ದಂತೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ ತಿರುಗೇಟು ನೀಡಿದ ಬಿಎಸ್‍ವೈ ಈ ಬಾರಿ 20 ಸ್ಥಾನದಲ್ಲಿಯೂ ಗೆಲ್ಲದವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

    ತಮ್ಮ ಭಾಷಣ ಉದಕ್ಕೂ ಆಶ್ವಾಸನೆಗಳನ್ನು ತಿಳಿಸಿದ ಬಿಎಸ್‍ವೈ, ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನ 1 ಲಕ್ಷ ಸಾಲ ಮನ್ನಾ, ಕೃಷಿ ಉತ್ತೇಜನ, ಕೆರೆಗಳ ಪುನಶ್ಚೇತನಕ್ಕೆ ರೈತ ಕಲ್ಯಾಣ ಯೋಜನೆ, ಹೈನುಗಾರಿಕೆಗೆ ಉತ್ತೇಜನ, ಪ್ರವಾಸೋದ್ಯಮಕ್ಕೆ ಆದ್ಯತೆ, 1.5 ಲಕ್ಷ ಕೋಟಿ ನೀರಾವರಿಗೆ ಮೀಸಲಿಡುವುದಾಗಿ ತಿಳಿಸಿದರು.

  • ಇಂಧನ ಬೆಲೆ ಏರಿಕೆ – ಸೈಕಲ್ ತುಳಿದು ಕೋಲಾರದಲ್ಲಿ ರಾಗಾ ಪ್ರತಿಭಟನೆ

    ಇಂಧನ ಬೆಲೆ ಏರಿಕೆ – ಸೈಕಲ್ ತುಳಿದು ಕೋಲಾರದಲ್ಲಿ ರಾಗಾ ಪ್ರತಿಭಟನೆ

    ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಇಂಧನ ಬೆಲೆ ಏರಿಕೆ ಕುರಿತು ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು.

    ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೋಲಾರದ ಮಾಲೂರಿನಲ್ಲಿ ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು. ಸಾವಿರಾರು ಕಾರ್ಯಕರ್ತರ ನಡುವೆ ಸೈಕಲ್ ತುಳಿದ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಅನುಸರಣೆ ಮಾಡುತ್ತಿದೆ. ಇಂಧನ ಬೆಲೆ ಹೆಚ್ಚಳ ಮಾಡುವ ಮೂಲಕ ಬಾರಿ ಪ್ರಮಾಣದ ಆದಾಯ ಗಳಿಸುತ್ತಿರುವ ಕೇಂದ್ರ ಸರ್ಕಾರ ಈ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿ, ನಿಮಗೇ ಸಾಧ್ಯವಿದ್ದರೆ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಎಂದು ಸವಾಲು ಎಸೆದರು.

    ಬಳಿಕ ರೋಡ್ ಶೋ ವೇಳೆ ಸಿಲಿಂಡರ್ ಹಿಡಿದು ಕೇಂದ್ರ ವಿರುದ್ಧ ಪ್ರತಿಭಟನೆ ಮಾಡಿದರು. ಈ ವೇಳೆ ಎತ್ತಿನ ಗಾಡಿ ಮೇಲೆ ನಿಂತು ಭಾಷಣ ಮಾಡಿದ ಅವರು, ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮಂದುವರೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಆದ್ರೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅರೋಪಿಸುತ್ತೀರಾ ಸದ್ಯ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರಿದೆ. ಇದನ್ನೂ ಜಿಎಸ್‍ಟಿ ವ್ಯಾಪ್ತಿಗೆ ಏಕೆ ಒಳಪಡಿಸಿಲ್ಲ. ಈ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

    ಬಡವರಿಗಾಗಿ ಬಿಜೆಪಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಲ್ಲ. ರೈತರ ಸಾಲ ನನ್ನ ಮಾಡಿಲ್ಲ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿದೆ ಆದರೆ ಕೇಂದ್ರದಲ್ಲಿ ಯಾಕೆ ಸಾಲ ಮನ್ನಾ ಮಾಡಿಲ್ಲ. ಲೋಕಸಭೆ ಚುನಾವಣೆಗೆ ಒಂದು ವರ್ಷ ಉಳಿದಿದೆ. 2019 ರಲ್ಲಿ ನಮ್ಮ ಸರ್ಕಾರ ಬಂದಾಗ ಸಾಲ ಮನ್ನಾ ಮಾಡುತ್ತೇವೆ ಎಂದರು.

    ಗುಜರಾತ್ ನಲ್ಲಿ ನರೇಂದ್ರ ಮೋದಿ ಎಲ್ಲಾ ಸಂಸ್ಥೆಗಳನ್ನ ಖಾಸಗೀಕರಣ ಮಾಡಿದ್ದಾರೆ. ರಾಜ್ಯದಲ್ಲಿ ಉಚಿತ ಅಕ್ಕಿ, ಶಿಕ್ಷಣ, ಇಂದಿರಾ ಕ್ಯಾಂಟೀನ್ ಮೂಲಕ ಊಟ ನೀಡುತ್ತಿದ್ದೇವೆ. ಮೋದಿಯವರೆ ಯಾವುದಾದರೂ ಒಂದು ಬಡವರ ಪರವಾದ ಕಾರ್ಯಕ್ರಮ ಹೇಳಿ. ರಾಜ್ಯದ ಬಿಜೆಪಿ ನಾಯಕ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದವರು. ಯಾವ ಆಧಾರದ ಮೇಲೆ ಅವರನ್ನು ಮುಖ್ಯಮಂತ್ರಿ ಅಭಯರ್ಥಿಯನ್ನಾಗಿ ಘೋಷಣೆ ಮಾಡಿದ್ದೀರಿ. ದೇಶದಲ್ಲಿ ಆರ್‍ಎಸ್‍ಎಸ್ ಮತ್ತು ಮಹಾತ್ಮಗಾಂಧಿ ಆದರ್ಶಗಳ ನಡುವೆ ಇಂದು ಸಂಘರ್ಷ ನಡೆಯುತ್ತಿದೆ ಎಂದು ಆರೋಪಿಸಿದರು.

  • ನಟ ಸುದೀಪ್ ರೋಡ್ ಶೋ ರದ್ದು

    ನಟ ಸುದೀಪ್ ರೋಡ್ ಶೋ ರದ್ದು

    ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಟಾರ್ ಗಳ ದಂಡೇ ಪ್ರಚಾರವನ್ನು ಮಾಡುತ್ತಿದ್ದು, ಇಂದು ನಟ ಸುದೀಪ್ ಬಳ್ಳಾರಿಯ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದ್ದಾರೆ.

    ಚುನಾವಣಾ ಅಧಿಕಾರಿಗಳು ನಟ ಸುದೀಪ್ ರೋಡ್ ಶೋವನ್ನು ರದ್ದು ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳ ಅನುಮತಿ ಸಿಗದ ಹಿನ್ನೆಲೆಯಲ್ಲಿ ನಟ ಸುದೀಪ್ ನ ನಾಯಕನಟ್ಟಿ ಪ್ರಚಾರ ಸಭೆಯನ್ನು ರದ್ದು ಮಾಡಿದ್ದಾರೆ. ಇದನ್ನೂ ಓದಿ: ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ಸುದೀಪ್ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ನಂತರ ಕೊಂಡ್ಲಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ದೇಗುಲದ ಆವರಣದಲ್ಲಿ ಚುನಾವಣಾ ಅಧಿಕಾರಿಗಳು ಅನುಮತಿ ನೀಡದ ಕಾರಣ ನಾಯಕನಟ್ಟಿಯಲ್ಲಿ ರೋಡ್ ಶೋ ರದ್ದು ಮಾಡಿದ್ದಾರೆ. ಆದರೆ ಕಾಲೇಜು ಆವರಣದಲ್ಲಿ ಸಭೆಗೆ ಮಾತ್ರ ಅನುಮತಿ ನೀಡಿದ್ದಾರೆ.

    ಚುನಾವಣಾ ಅಧಿಕಾರಿಗಳಿಂದ ಸುದೀಪ್ ವೀಕ್ಷಿಸಲು ಬೆಳಿಗ್ಗೆಯಿಂದ ಬಿಸಿಲಲ್ಲಿ ಕಾದಿದ್ದ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ಆಗಿದೆ. ದೇಗುಲದ ಆವರಣದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ತಿಪ್ಪೇಸ್ವಾಮಿ ಪ್ರಚಾರದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುದೀಪ್ ರೋಡ್ ಶೋಗೆ ಅನುಮತಿ ನೀಡಲಿಲ್ಲ.

  • ಮತದಾರರ ಪಟ್ಟಿಯಿಂದ ತಾ.ಪಂ ಸದಸ್ಯೆ ಹೆಸರು ನಾಪತ್ತೆ

    ಮತದಾರರ ಪಟ್ಟಿಯಿಂದ ತಾ.ಪಂ ಸದಸ್ಯೆ ಹೆಸರು ನಾಪತ್ತೆ

    ಮೈಸೂರು: ಮತದಾರರ ಪಟ್ಟಿಯಿಂದ ತಾಲೂಕು ಪಂಚಾಯ್ತಿ ಸದಸ್ಯೆ ಹೆಸರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತಾ.ಪಂ ಸದಸ್ಯೆ ರಾಣಿ ಸತೀಶ್ ಹೆಸರು ನಾಪತ್ತೆಯಾಗಿದೆ. ಇವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೂರ್ಗಳ್ಳಿ ತಾ.ಪಂ ಸದಸ್ಯೆ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಇವರ ಹೆಸರು ನಾಪತ್ತೆಯಾಗಿದೆ. ರಾಣಿ ಸತೀಶ್ ಕುಟುಂಬದ ಎಲ್ಲರ ಹೆಸರು ಇದೆ. ಇವರ ಹೆಸರು ಮಾತ್ರ ಇಲ್ಲ.

    ಕಾಂಗ್ರೆಸ್ ಪಕ್ಷದವರು ಉದ್ದೇಶ ಪೂರ್ವವಕವಾಗಿ ಈ ರೀತಿ ಮಾಡಿದ್ದಾರೆ. ಜಿ.ಟಿ ದೇವೇಗೌಡರು ಗೆಲ್ಲಬಾರದೆಂದು ಕುತಂತ್ರ ಮಾಡಿದ್ದಾರೆ ಎಂದು ರಾಣಿ ಸತೀಶ್ ಆರೋಪಿಸಿದ್ದಾರೆ. ಈ ಬಗ್ಗೆ ರಾಣಿ ಸತೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

  • ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

    ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

    ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ- ಏಕವಚನದಲ್ಲೇ ಗ್ರಾಮಸ್ಥರಿಂದ ಸಂತೋಷ್ ಲಾಡ್ ಗೆ ಪ್ರಶ್ನೆ

    ಬೆಂಗಳೂರು: ಸಚಿವ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದ ಪ್ರಚಾರಕ್ಕೆ ಹೋದಾಗಲೆಲ್ಲಾ ತೀವ್ರ ಮುಖಭಂಗ ಅನುಭವಿಸ್ತಿದ್ದಾರೆ. ಗ್ರಾಮದ ಸಮಸ್ಯೆಗಳನ್ನ ಇತ್ಯಥ್ರ್ಯ ಮಾಡಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮೋದಿ ಮೋದಿ ಅಂತ ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಲಾಡ್, ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ ಎಂದು ಏಕವಚನದಲ್ಲೇ ಪ್ರಶ್ನಿಸಿದ್ರು. ಈ ವೇಳೆ ಲಾಡ್ ಹಾಗೂ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

    ಮೈಸೂರಿನಲ್ಲಿ ರೋಡ್‍ಶೋ ನಡೆಸುತ್ತಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಸ್ಥಳೀಯ ದಲಿತ ಮುಖಂಡರು ಪ್ರಶ್ನೆಗಳ ಸುರಿಮಳೆಗೈದ್ರು. ಎಲ್ಲಾ ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್‍ಗೆ ವೋಟ್ ಹಾಕ್ತೀವಿ. ಆದ್ರೆ ಪರಮೇಶ್ವರ್ ಕ್ಷೇತ್ರದಲ್ಲಿ ಸಿಎಂ ಸಮುದಾಯದವರು ಯಾಕೆ ಕಾಂಗ್ರೆಸ್‍ಗೆ ವೋಟ್ ಹಾಕಲ್ಲ ಅಂತ ಪ್ರಶ್ನಿಸಿದ್ರು. ಅಶೋಕಪುರಂನಲ್ಲಿ ಖರ್ಗೆ ಪ್ರಚಾರ ವಾಹನ ತಡೆದ ಯುವಕನೊಬ್ಬ ದಲಿತ ಮುಖ್ಯಮಂತ್ರಿಗಾಗಿ ಆಗ್ರಹಿಸಿದ್ರು.

    ಇತ್ತ ಬೆಂಗಳೂರಿನ ಸಿವಿ ರಾಮನ್‍ನಗರದಲ್ಲಿ ವೋಟ್ ಕೇಳಲು ಹೋದ ಬಿಜೆಪಿ ಅಭ್ಯರ್ಥಿ, ಶಾಸಕ ರಘು ಅವರಿಗೆ ಜನ ಚಳಿ ಬಿಡಿಸಿದ್ರು. ಎಲೆಕ್ಷನ್ ಟೈಂನಲ್ಲಿ ಮನೆ ಹುಡ್ಕೊಂಡು ಬರ್ತೀರಾ, ಬೇರೆ ಟೈಂನಲ್ಲಿ ಕೈಗೆ ಸಿಗಲ್ಲ ಅಂತಾ ಜನ ಗರಂ ಆದ್ರು. ಈ ವೇಳೆ ಶಾಸಕರು ಬಾಯ್ತಪ್ಪಿ ವೋಟು ಬೇಡ ಹೋಗ್ರಿ ಅಂದಿದ್ದಾರೆ. ಕೊನೆಗೆ ಜನ್ರ ಆಕ್ರೋಶಕ್ಕೆ ಬೆದರಿದ ಶಾಸಕರು ಸ್ಥಳದಿಂದ ಕಾಲ್ಕಿತ್ತರು.

  • ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪಕ್ಷೇತರ ಅಭ್ಯರ್ಥಿ ಬೆಂಬಲಿಗರಿಗೆ ಚಾಕು ಇರಿತ!

    ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಪಕ್ಷೇತರ ಅಭ್ಯರ್ಥಿ ಬೆಂಬಲಿಗರಿಗೆ ಚಾಕು ಇರಿತ!

    ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಹೋದಾಗ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ಗಲಾಟೆ ನಡೆದು ಓರ್ವ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಹೊರವಲಯದ ಮಹದೇವಪುರದಲ್ಲಿ ನಡೆದಿದೆ.

    ಶನಿವಾರ ರಾತ್ರಿ ಪೊಲೀಸರ ಸಮ್ಮುಖದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಡುವೆ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದ್ದು, ಸ್ಥಳೀಯರ ಗುಂಪಿನಿಂದ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ.

    ತಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಮಹದೇವಪುರ ಪಕ್ಷೇತರ ಅಭ್ಯರ್ಥಿ ನಲ್ಲೂರಹಳ್ಳಿ ನಾಗೇಶ್ ಶನಿವಾರ ರಾತ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ 10.30ರ ಸುಮಾರಿಗೆ ಮಹದೇವಪುರದ ಭೈರತಿ ಬಳಿ ಪ್ರಚಾರದ ವೇಳೆ ಗಲಾಟೆ ನಡೆದಿದ್ದು, ತಮ್ಮ ಬೆಂಬಲಿಗ ಮಾರುತೇಶ್‍ಗೆ ಕಾಂಗ್ರೆಸ್ ಕಾರ್ಯಕರ್ತರು ಚೂರಿ ಇರಿದಿದ್ದಾರೆ ಅಂತ ನಾಗೇಶ್ ಆರೋಪಿಸಿದ್ದಾರೆ.

    ನನ್ನ ಏಳಿಗೆ ಸಹಿಸದ ಈ ರೀತಿ ಮಾಡಿದ್ದು, ಕೂಡಲೇ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿ ಪ್ರತಿಭಟನೆ ನಡೆಸಿದ್ದಾರೆ. ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

    ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

    ಬಾಗಲಕೋಟೆ: ರಾಜಕೀಯದಿಂದ ದೂರ ಉಳಿದಿರುವ ಮಾಜಿ ಸಚಿವ ಅಂಬರೀಶ್‍ರನ್ನು ಶನಿವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದರು. ಈ ಕುರಿತು ಪ್ರತಿಕಿಯಿಸಿರುವ ಸಿಎಂ ಸಿದ್ದರಾಮಯ್ಯ, ಪಾಪ ಭೇಟಿಯಾಗ್ಲಿ ಬಿಡಿ ಯಾರು ಬೇಡ ಅಂದೋರು ಅಂತಾ ಹೇಳಿದ್ದಾರೆ.

    ಬಾದಾಮಿಯಲ್ಲಿ ಸುದ್ದಿಗಾರರಿಗೆ ಈ ಕುರಿತು ಗರಂ ಆದ ಸಿಎಂ, ಕುಮಾರಸ್ವಾಮಿ ಯಾವ ಕಾರಣಕ್ಕಾಗಿ ಭೇಟಿಯಾಗಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಯಾರನ್ನೋ ಭೇಟಿಯಾದ್ರೆ ನಾನೇನು ಹೇಳಲಿ. ಭೇಟಿಯಾಗಿದ್ದಾರೆ ಭೇಟಿಯಾಗಿದ್ದಾರೆ ಅಷ್ಟೇ ಮತ್ತೇನಿಲ್ಲ. ಯಾತಕ್ಕಾಗಿ ಭೇಟಿಯಾಗಿದ್ದಾರೆ ಏನ್ ಮಾತನಾಡಿಕೊಂಡಿದ್ದಾರೆ ಗೊತ್ತಿಲ್ಲ. ಬೇರೆ ಪಕ್ಷದವರನ್ನ ಭೇಟಿಯಾಗಬಾರದು ಅಂತ ಕಾನೂನು ಏನಾದ್ರು ಇದೆಯಾ ಅಂತಾ ಸಿಎಂ ಪ್ರಶ್ನಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಶನಿವಾರ ರಾತ್ರಿ ಬೆಂಗಳೂರಿನ ಗಾಲ್ಫ್ ಕ್ಲಬ್‍ನಲ್ಲಿರುವ ಅಂಬಿ ಮನೆಗೆ ಕುಮಾರಸ್ವಾಮಿ ತೆರಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ ಅಂತ ಹೆಚ್ ಡಿಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಅಂಬಿ ಕಾಂಗ್ರೆಸ್‍ನಲ್ಲಿ ನನಗೆ ಅವಮಾನ ಮಾಡಿದ್ದಾರೆ. ಹೇಳದೇ ಕೇಳದೇ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅದೇ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಬಗ್ಗೆ ಅಂಬಿ ಹೊಗಳಿದ್ದರು. ಆದರೆ ಈಗ ಜೆಡಿಎಸ್ ಸೇರ್ಪಡೆ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೀನಿ ಎಂದು ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಇದನ್ನೂ ಓದಿ: ಆರೋಗ್ಯ ಸರಿಯಿಲ್ಲ, ವಯಸ್ಸು ಸಹಕರಿಸ್ತಿಲ್ಲ, ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ- ಅಂಬರೀಶ್

    ಇದನ್ನೂ ಓದಿ: ಅಂಬರೀಶ್, ನಾನು ಅಣ್ಣ-ತಮ್ಮಂದಿರಿದ್ದಂತೆ: ಕುಮಾರಸ್ವಾಮಿ

    ಇದನ್ನೂ ಓದಿ:  ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್