Tag: karnataka elections

  • ಹೇಗೆ ಬದಲಾವಣೆ, ಯಾರಿಂದ ಬದಲಾವಣೆ, ಯಾಕೆ ಬದಲಾವಣೆ? ಅಂತಾ ಬೆಂಗ್ಳೂರು ಜನರನ್ನು ಪ್ರಶ್ನಿಸಿದ ಜಗ್ಗೇಶ್

    ಹೇಗೆ ಬದಲಾವಣೆ, ಯಾರಿಂದ ಬದಲಾವಣೆ, ಯಾಕೆ ಬದಲಾವಣೆ? ಅಂತಾ ಬೆಂಗ್ಳೂರು ಜನರನ್ನು ಪ್ರಶ್ನಿಸಿದ ಜಗ್ಗೇಶ್

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರ ಪ್ರಚಾರ, ಮತದಾನ ಎಲ್ಲವೂ ಮುಗಿದಿದೆ. ಇನ್ನೇನು ಚುನಾವಣಾ ಫಲಿತಾಂಶಕ್ಕಾಗಿ ಎಲ್ಲ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿಯೇ ಅತಿ ಕಡಿಮೆ ಮತದಾನವಾಗಿದ್ದಕ್ಕೆ ನಟ, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ಟ್ವಿಟ್ಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ‘ಏನ್ ವೋಟ್ ಹಾಕಿದ್ದಾರೆ ಸಿಟಿ ಜನಗಳೇ, ಶಹಬಾಷ್ ಜೈ ಬೆಂಗಳೂರಿನ ವಾಸಿಗಳೆ!, ಏನು ಬದ್ಧತೆ, ಏನು ಪ್ರೇಮ, ಏನು ಸ್ವಾಭಿಮಾನ? ಅಂತರಾಷ್ಟ್ರದ ಗುಣಮಟ್ಟ ಬೇಕು ಅಂತಾ ಕೇಳ್ತಿರಿ. ಟಿವಿ ಕಂಡರೆ ಸಾಕು ಏನು ವಾದ ಮಂಡನೆ.. ಮೆಚ್ಚಬೇಕು. ಹಳ್ಳಿಯಲ್ಲಿ ದುಡ್ಡಿಗೆ ವೋಟ್. ಸಿಟಿಯಲ್ಲಿ ಬೂತ್ ಕಡೆನೂ ತಿರುಗಿ ಸಹ ನೋಡಲ್ಲ. ಹೇಗೆ ಬದಲಾವಣೆ.. ಯಾರಿಂದ ಬದಲಾವಣೆ…ಯಾಕೆ ಬದಲಾವಣೆ…. ನಗೆ ಬರುತ್ತಿದೆ ಅಂತಾ ಬರೆದುಕೊಂಡು ಬೆಂಗಳೂರು ಕೇತ್ರಗಳಲ್ಲಿ ಮತದಾನದ ಶೇಕಡಾವಾರು ಮಾಹಿತಿಯುಳ್ಳ ಫೋಟೋ ಹಾಕಿಕೊಂಡು ಟ್ವೀಟ್ ಮಾಡಿದ್ದಾರೆ.

    ರಾಮನಗರದಲ್ಲಿ ಅತೀ ಹೆಚ್ಚು ಶೇ.84 ಮತದಾನವಾದರೆ ಬೆಂಗಳೂರಿನಲ್ಲೇ ಅತೀ ಕಡಿಮೆ ಶೇ.50 ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಮತದಾನವು ಬೆಂಗಳೂರು ನಗರದಲ್ಲಿ ಆಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ. 2 ದಿನ ರಜಾ ಹಿನ್ನೆಲೆ ಎಲ್ಲರೂ ಟ್ರಿಪ್ ಅಂತಾ ತೆರಳಿದ್ರು. ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟದಿರುವುದು ವಿಷಾದನೀಯ.

  • ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಮತಯಂತ್ರಗಳನ್ನ 3 ಕಿ.ಮೀ ಹೊತ್ತುಕೊಂಡೇ ಹೋದ್ರು!

    ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಮುಗಿದಿದೆ. ಆದರೆ ಎಲೆಕ್ಷನ್ ಡ್ಯೂಟಿ ಮುಗಿಸಿ ಏಕಕಾಲಕ್ಕೆ ಹೊರಟಿದ್ದರಿಂದ ಬೆಳಗಾವಿಯ ರಾಯಬಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ತಾಲೂಕಿನ ವಿವಿಧೆಡೆಗಳಿಂದ ಚುನಾವಣೆ ಕರ್ತವ್ಯ ಮುಗಿಸಿ ಏಕಕಾಲಕ್ಕೆ ಬಂದಿದ್ದರಿಂದ ಬಸ್ ಹಾಗೂ ವಾಹನಗಳಿಂದ ಸಂಚಾರ ದಟ್ಟಣೆಯುಂಟಾಗಿತ್ತು. ಆದ್ದರಿಂದ ಕುಡಚಿ ಹಾಗೂ ರಾಯಬಾಗ ಕ್ಷೇತ್ರಗಳಲ್ಲಿ ಕರ್ತವ್ಯ ಮುಗಿಸಿ ಬಂದ ಚುನಾವಣಾ ಸಿಬ್ಬಂದಿ ಮತ ಯಂತ್ರಗಳನ್ನು ಹಸ್ತಾಂತರಿಸಲು ವಿಳಂಬವಾಗಿದ್ದು, ಸಂಚಾರ ದಟ್ಟಣೆಯಿಂದ ಚುನಾವಣಾ ಸಿಬ್ಬಂದಿ ಹೈರಾಣಾಗಿದ್ದಾರೆ.

    ಟ್ರಾಫಿಕ್ ಜಾಮ್‍ನಿಂದ ಸಿಬ್ಬಂದಿ ಪಟ್ಟಣದ ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜುವರೆಗೆ ನಡೆದುಕೊಂಡು ಹೋಗಿದ್ದಾರೆ. ಸುಮಾರು ಮೂರು ಕಿಲೋಮೀಟರ್  ವರೆಗೆ ಮತಯಂತ್ರಗಳನ್ನು ಹೊತ್ತುಕೊಂಡೇ ಹೋಗಿದ್ದಾರೆ.

    ಟ್ರಾಫಿಕ್ ಜಾಮ್ ಸರಿಪಡಿಸಲು ಪೊಲೀಸರು ಸತತ 3 ಗಂಟೆಗಳ ಕಾಲ ಹರಸಾಹಸಪಟ್ಟರು.

  • ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

    ನಡುಗಡ್ಡೆಯಲ್ಲಿ ಸಿಲುಕಿದ ಚುನಾವಣಾ ಅಧಿಕಾರಿಗಳು

    ರಾಯಚೂರು: ಜಿಲ್ಲೆಯಲ್ಲಿ ಕೃಷ್ಣ ನದಿ ನೀರಿನಿಂದ ನಡುಗಡ್ಡೆಗಳಾಗಿರುವ ಗ್ರಾಮಗಳಲ್ಲಿ ಮತದಾನ ಕಾರ್ಯಕ್ಕೆ ತೆರಳಿದ್ದ ಚುನಾವಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪರದಾಡಿದರು.

    ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುರ್ವಕುಲ ಹಾಗು ಕುರ್ವಕುರ್ದಾಕ್ಕೆ ತೆರಳಿದ್ದ ಸಿಬ್ಬಂದಿ ವಾಪಸ್ ಬರಲು ತೆಪ್ಪ ಇಲ್ಲದೆ ಸುಮಾರು ಹೊತ್ತು ನದಿದಂಡೆಯಲ್ಲೇ ಪರದಾಡಬೇಕಾಯಿತು. ತೆಪ್ಪ ನಡೆಸುವ ಅಂಬಿಗರಿಲ್ಲದೆ ಚುನಾವಣಾ ಸಿಬ್ಬಂದಿ ಆತಂಕಕ್ಕೊಳಗಾಗಿದ್ದರು.

    ಕೃಷ್ಣಾ ನದಿಗೆ ಜುರಾಲಾ ಆಣೆಕಟ್ಟೆ ಕಟ್ಟಿದ ನಂತರ ಈ ಗ್ರಾಮಗಳು ನಡುಗಡ್ಡೆಯಾಗಿದ್ದು ಸೇತುವೆ ಕಾರ್ಯ ಅಪೂರ್ಣವಾಗಿರುವುದರಿಂದ ನದಿ ದಾಟಲು ಪರದಾಡುವಂತಾಗಿದೆ.

  • ರಾಮನಗರದಲ್ಲಿ ಅತೀ ಹೆಚ್ಚು ವೋಟಿಂಗ್- ಮತದಾನದಲ್ಲಿ ಬೆಂಗಳೂರಿಗರೇ ಹಿಂದೆ

    ರಾಮನಗರದಲ್ಲಿ ಅತೀ ಹೆಚ್ಚು ವೋಟಿಂಗ್- ಮತದಾನದಲ್ಲಿ ಬೆಂಗಳೂರಿಗರೇ ಹಿಂದೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಶನಿವಾರ ಮತದಾನ ನಡೆದಿದೆ. ಈ ಬಾರಿ ರಾಜ್ಯದಲ್ಲಿ ದಾಖಲೆಯ ಶೇ.74.87ರಷ್ಟು ದಾಖಲೆಯ ಮತದಾನವಾಗಿದೆ.

    ರಾಮನಗರದಲ್ಲಿ ಅತೀ ಹೆಚ್ಚು ಮತದಾನವಾದರೆ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಬೆಂಗಳೂರು ನಗರದಲ್ಲಿ ಮತದಾನವಾಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ.

    ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರು ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟಲಿಲ್ಲ. ಇನ್ನು ಜಿಲ್ಲಾವಾರು ಮತದಾನ ಹೀಗಿದೆ.

    ಜಿಲ್ಲಾವಾರು ಮತದಾನ

    ಜಿಲ್ಲೆ   -ಶೇಕಡಾವಾರು

    ಬೆಳಗಾವಿ – ಶೇ.76.18
    ಬಾಗಲಕೋಟೆ- ಶೇ.72
    ಬಿಜಾಪುರ- ಶೇ.65
    ಗುಲ್ಬರ್ಗಾ- ಶೇ.63.01
    ಬೀದರ್- ಶೇ.65
    ರಾಯಚೂರು- ಶೇ.64.24
    ಕೊಪ್ಪಳ- ಶೇ.76.10
    ಗದಗ- ಶೇ.74.46
    ಧಾರವಾಡ- ಶೇ.70.64
    ಉತ್ತರ ಕನ್ನಡ- ಶೇ.77.78
    ಹಾವೇರಿ- ಶೇ.78.32
    ಬಳ್ಳಾರಿ -ಶೇ.71
    ಚಿತ್ರದುರ್ಗ-ಶೇ.79
    ದಾವಣಗೆರೆ-ಶೇ.75.59
    ಶಿವಮೊಗ್ಗ -ಶೇ.78
    ಉಡುಪಿ-ಶೇ.78.87
    ಚಿಕ್ಕಮಗಳೂರು -ಶೇ.79.06
    ತುಮಕೂರು- ಶೇ.73
    ಚಿಕ್ಕಬಳ್ಳಾಪುರ- ಶೇ.83.88
    ಕೋಲಾರ- ಶೇ.79.59
    ಬೆಂ. ಗ್ರಾಮಾಂತರ- ಶೇ.82
    ರಾಮನಗರ- ಶೇ.84
    ಮಂಡ್ಯ -ಶೇ.83.28
    ಹಾಸನ -ಶೇ.81.47
    ದಕ್ಷಿಣ ಕನ್ನಡ- ಶೇ.77.63
    ಕೊಡಗು- ಶೇ.75
    ಮೈಸೂರು- ಶೇ.74.60
    ಚಾಮರಾಜನಗರ -ಶೇ.78
    ಬೆಂಗಳೂರು ನಗರ- ಶೇ.50
    ಯಾದಗಿರಿ -ಶೇ.69

  • ವೋಟ್ ಮಾಡಿದ ಕಿಚ್ಚನಿಗೆ ಸಿಕ್ತು ಗಿಫ್ಟ್

    ವೋಟ್ ಮಾಡಿದ ಕಿಚ್ಚನಿಗೆ ಸಿಕ್ತು ಗಿಫ್ಟ್

    ಬೆಂಗಳೂರು: ಸಿನಿಮಾ ಕಲಾವಿದರು ತಮ್ಮ ಹಕ್ಕನ್ನು ಚಲಾಯಿಸಲು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಬಂದಿದ್ದು, ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಮತಚಲಾವಣೆ ಮಾಡಿದ್ದಾರೆ. ಬೊಮ್ಮನಹಳ್ಳಿಯ ಮತಗಟ್ಟೆ ಸಂಖ್ಯೆ 175 ಕೇಂದ್ರಕ್ಕೆ ಹೋಗಿ ಮತದಾನ ಮಾಡಿದ್ದಾರೆ.

    ಮತದಾನ ಮಾಡಿ ಮಾತನಾಡಿದ ಕಿಚ್ಚ ಎಲ್ಲೆಡೆ ಮತದಾನ ಕಡಿಮೆಯಾಗಿದೆ ಎಂದು ಕೇಳಬೇಡಿ. ನಾನು ಪತ್ನಿ ಜೊತೆ ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ದೂರಬೇಡಿ. ಇಂದೇ ಮತ ಚಲಾಯಿಸಿ, ಅಭಿವೃದ್ಧಿಗೆ ನಾಂದಿ ಹಾಡಿ ಎಂದು ಹೇಳಿದ್ದಾರೆ.

    ಇದೇ ವೇಳೆ ಅವರ ಅಭಿಮಾನಿಗಳ ಬಂದು ಮತದಾನ ಮಾಡಿದ ಕಿಚ್ಚನಿಗೆ ತುಳಸಿ ಗಿಡ ಕೊಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರು ರಾಜಕೀಯ ಕ್ರೀಯಾ ಸಮಿತಿ(ಬಿಪ್ಯಾಕ್) ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೂ ಹಾಗೂ ಹಿರಿಯ ನಾಗರಿಕರಿಗೆ ಗಿಡಗಳನ್ನು ನೀಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿತು.

  • ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

    ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ

    ಹುಬ್ಬಳ್ಳಿ/ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುವ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಕುಸಿದು ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮತದಾನ ನಡೆಯುತ್ತಿತ್ತು. ಈ ವೇಳೆ ಸಾವಿತ್ರಿ ಕಿರೇಸೂರ ಗರ್ಭಿಣಿ ಮತದಾನ ಮಾಡಲು ಆಗಮಿಸಿದ್ದರು. ಆದರೆ ಮತ ಚಲಾಯಿಸುತ್ತಿದಂತೆ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.

    ಮತದಾನ ಕೇಂದ್ರದಲ್ಲಿದ್ದ ಚುನಾವಣಾ ಸಿಬ್ಬಂದಿ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಸಮೀಪದ ಕುಂದಗೋಳ ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

    ಇನ್ನು ಯಾದಗಿರಿಯ ಜಿಲ್ಕೆ ಸುರಪುರ ತಾಲೂಕಿನ ಕೊಡೆಕಲ್ ವ್ಯಾಪ್ತಿಯ ಬೈಲುಕುಂಟೆ ಗ್ರಾಮದಲ್ಲಿ, ಗರ್ಭಿಣಿಯೊಬ್ಬರು ಹೆರಿಗೆ ನೋವಿನ ಮಧ್ಯೆಯೂ ಮತದಾನ ಮಾಡಿದ್ದಾರೆ. ನಂತರ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  • ಸಪ್ತಪದಿ ತುಳಿದು ನವದಂಪತಿಯಿಂದ ಮತದಾನ

    ಸಪ್ತಪದಿ ತುಳಿದು ನವದಂಪತಿಯಿಂದ ಮತದಾನ

    ಧಾರವಾಡ/ಬೆಂಗಳೂರು: ರಾಜ್ಯದ ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದ್ದು, ನಗರದ ನವ ದಂಪತಿ ನೇರವಾಗಿ ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.

    ಧಾರವಾಡ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿಂದು ಮಲ್ಲಿಕಾರ್ಜುನ ಮತ್ತು ನಿಖಿತಾ ಮದುವೆ ನಿಶ್ಚಯವಾಗಿತ್ತು. ಈ ದಂಪತಿ ಸಪ್ತಪದಿ ತುಳಿದ ನಂತರ ನೇರವಾಗಿ ನಗರದ ಕಾಮನಕಟ್ಟಿ ಬುತ್ ನಂಬರ್ 191 ರ ಮತಗಟ್ಟೆಗೆ ತೆರಳಿ ಮತಚಲಾಯಿಸಿದ್ದಾರೆ.

    ಈ ವೇಳೆ ವರ ಮಲ್ಲಿಕಾರ್ಜುನ ಮತ್ತು ನಿಖಿತಾಗೆ ಮತಗಟ್ಟೆ ಬಳಿ ಇದ್ದ ಮತದಾರರು ಶುಭ ಕೋರಿದ್ದಾರೆ. ಇನ್ನು ವರ ಮಲ್ಲಿಕಾರ್ಜುನ, ಎಲ್ಲರು ಮತ ಚಲಾಯಿಸಿ ಮತದಾನ ಮಾಡುವುದು ನಮ್ಮ ಹಕ್ಕು. ನಮ್ಮ ರಾಜ್ಯಕ್ಕಾಗಿ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.

    ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ರಾತ್ರಿ ಸುರಿದ ಮಳೆಯ ಪರಿಣಾಮ ಬೆಂಗಳೂರಿನ ಸಿ.ವಿ.ರಾಮನ್ ನಗರದ ಬೂತ್ ನಂಬರ್ 122 ರ ಮತಗಟ್ಟೆ ತುಂಬಾ ನೀರು ತುಂಬಿದೆ. ಇದರಿಂದ ಚುನಾವಣಾ ಸಿಬ್ಬಂದಿ ನೀರು ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಇನ್ನು ಮತದಾನ ಮಾಡಲು ಬರುವ ಮತದಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಳಗಿನ ಅವಧಿಯಲ್ಲೇ ಬಿರುಸಿನ ಮತದಾನ ನಡೆದಿದೆ.

  • ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಬಿಗ್ ಬಾಸ್ ಸೀಸನ್ 5ನ ಕಾರ್ಯಕ್ರಮದ ಸ್ಪರ್ಧಿ ನಿವೇದಿತಾ ಗೌಡ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 192ರಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ಮೈಸೂರಿನ ದಟ್ಟಗಳ್ಳಿ ಕನಕದಾಸ ನಗರದಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ಪೋಷಕರ ಜೊತೆ ಹೋಗಿ ನಿವೇದಿತಾ ಗೌಡ ಮತದಾನ ಮಾಡಿದ್ದಾರೆ. ಇಂದು ನಿವೇದಿತಾ ಗೌಡ ಹುಟ್ಟಿದ ದಿನವಾಗಿದೆ. ಇಂದೇ ಮೊದಲ ಬಾರಿ ಮತದಾನ ಮಾಡಿದ್ದಾರೆ. ತಾನು ಹುಟ್ಟಿದ ದಿನದಂದೇ ಮೊದಲ ಮತದಾನ ಮಾಡಿದ್ದ ಖುಷಿಯಲ್ಲಿದ್ದು, ತುಂಬಾ ಸಂತಸವಾಗಿದೆ. ಇದೇ ಮೊದಲ ಬಾರಿಗೆ ನಾನು ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಅವರ ತಾಯಿ ಮತ್ತು ನಿವೇದಿತಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.

    https://www.instagram.com/p/Biqkvm8hxZN/?hl=en&taken-by=chandanshettyofficial

  • ಮತದಾರರನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ!

    ಮತದಾರರನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ!

    ಹಾಸನ: ವೋಟ್ ಹಾಕಲೆಂದು ಮತದಾರರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗೆ ಲಾರಿ ಡಿಕ್ಕಿಯಾದ ಘಟನೆ ಸಂಭವಿಸಿದೆ.

    ಈ ಘಟನೆ ಬೇಲೂರು ರಸ್ತೆ ರಾಮೇನಹಳ್ಳಿ ಗೇಟ್ ಬಳಿ ಇಂದು ನಡೆದಿದೆ. ಘಟನೆಯಲ್ಲಿ 46 ವರ್ಷದ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ ಮತ್ತೋರ್ವ ಮಹಿಳೆಗೆ ಗಂಭೀರ ಗಾಯಗಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

    ಘಟನೆಯಿಂದಾಗಿ ಸುಮಾರು 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ. ಕೂಡಲೇ ಗಾಯಾಳುಗಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನೊಂದು ಪ್ರಕರಣದಲ್ಲಿ ಹೊಳೇನರಸೀಪುರ ದ ಸಂಕನಹಳ್ಳಿ ಬಳಿ 40 ವರ್ಷದ ಈರಾಜು ಮತದಾನಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಹಸುವಿಗೆ ಡಿಕ್ಕಿಯಾಗಿ ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಈರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಮತ ಚಲಾಯಿಸಲು ಬೂತ್‍ ಗೆ ಆಗಮಿಸಿದ್ದ ಮಹಿಳೆಗೆ ಬಿಗ್ ಶಾಕ್!

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆದ ಮತದಾನ ಭರ್ಜರಿಯಿಂದ ಸಾಗುತ್ತಿದ್ದು, ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಯಾದಗಿರಿಯ ಕೋಳಿವಾಡ ಮತಗಟ್ಟೆ 38ರಲ್ಲಿ ಎಡವಟ್ಟು ಆಗಿದ್ದು, ಮತ ಚಲಾಯಿಸಲು ಬಂದ ಮಹಿಳೆಗೆ ನಿಮ್ಮ ವೋಟ್ ಹಾಕಲಾಗಿದೆ ಎಂದ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಮಹಿಳೆ ಗಾಬರಿಗೊಂಡಿದ್ದಾರೆ.

    ಇಂದು ಮತದಾನ ಮಾತದಾನ ಮಾಡಲು ಬಸ್ಸಮ್ಮ ಕೊಳಿವಾಡನ ಮತಗಟ್ಟೆ 38 ರ ಕೇಂದ್ರಕ್ಕೆ ಬಂದಿದ್ದಾರೆ. ಆಗ ಚುನಾವಣಾಧಿಕಾರಿಗಳು ನಿಮ್ಮ ಮತಚಲಾಯಿಸಿದೆ ಎಂದು ಹೇಳಿದ್ದಾರೆ. ಮತದಾನದಿಂದ ವಂಚಿತಳಾದ ಬಸ್ಸಮ್ಮ ಚುನಾವಣೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಬಸ್ಸಮ್ಮ ಹೆಸರಿನಲ್ಲಿ ಯಾರು ಮತಚಲಾಯಿಸದ್ದಾರೆಂಬ ಅನುಮಾನ ಮೂಡಿದೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ನಿರ್ಧರಿಸಲಿದ್ದಾರೆ.