Tag: karnataka elections

  • ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು!

    ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು!

    ಗದಗ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆದಿದೆ.

    ಕಾಂಗ್ರೆಸ್ ಕಾರ್ಯಕರ್ತರಾದ ವಿನಾಯಕ ಜಂತ್ಲಿ, ಪ್ರಕಾಶ ಜಂತ್ಲಿ, ಶಿವು ಜಂತ್ಲಿ, ಸಂತೋಷ ಶಟ್ಟಿಕೇರಿ ಮತ್ತು ಬಿಜೆಪಿ ಕಾರ್ಯಕರ್ತರಾದ ಶರಣಪ್ಪ ಮತ್ತು ಹಾಗೂ ಮಂಜು ಹೊಡೆದಾಡಿಕೊಂಡಿದ್ದಾರೆ

    ಮತದಾನದಂದು ಸಂಜೆ ಮತಗಟ್ಟೆಗೆ ಬಿಜೆಪಿ ಕಾರ್ಯಕರ್ತರಾದ ಶರಣಪ್ಪ ಮತ್ತು ಮಂಜು ಹೋಗಿದ್ದರು. ಆದರೆ ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಾದ ವಿನಾಯಕ ಜಂತ್ಲಿ ಮತ್ತು ಪ್ರಕಾಶ ಜಂತ್ಲಿ ಸಮಯ ಮೀರಿದೆ ಅಂತ ವಾದಿಸಿದ್ದರು. ಈ ವೇಳೆ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿತ್ತು. ಇದೇ ದ್ವೇಷ ಭಾನುವಾರವೂ ಮುಂದುವರೆದು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಓಣಿಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಈ ಘಟನೆ ಗದಗನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ ಮೇಲುಗೈ – ಎರಡೂ ಕ್ಷೇತ್ರದಲ್ಲಿ ಗೆಲ್ತಾರಂತೆ ಸಿದ್ದರಾಮಯ್ಯ!

    ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ ಮೇಲುಗೈ – ಎರಡೂ ಕ್ಷೇತ್ರದಲ್ಲಿ ಗೆಲ್ತಾರಂತೆ ಸಿದ್ದರಾಮಯ್ಯ!

    ಬೆಂಗಳೂರು: ಕರ್ನಾಟಕ ರಾಜಕೀಯ ಭವಿಷ್ಯ ನಾಳೆ ಬಯಲಾಗಲಿದ್ದು, ಈಗಾಗಲೇ ಬಂದಿರೋ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಇತ್ತ ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ ಜಯದ ಪತಾಕೆ ಹಾರಿಸಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಕೇಂದ್ರ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್ 95 ರಿಂದ 102 ಸ್ಥಾನಗಳನ್ನು ಗೆಲ್ಲೋ ನಿರೀಕ್ಷೆ ಇದ್ಯಂತೆ. ಬಿಜೆಪಿಗೆ 80 ರಿಂದ 85 ಸ್ಥಾನಗಳು ಸಿಗಲಿದ್ಯಂತೆ. ಜೆಡಿಎಸ್ 35 ರಿಂದ 40 ಸೀಟುಗಳಲ್ಲಿ ಜಯಿಸಲಿದೆ ಅಂತಾ ಊಹಿಸಲಾಗಿದೆ.

    ರಾಜ್ಯ ಗುಪ್ತಚರ ವರದಿಯಲ್ಲಿ ಕಾಂಗ್ರೆಸ್‍ಗೆ 102 ಸ್ಥಾನ, ಬಿಜೆಪಿ 70, ಜೆಡಿಎಸ್‍ಗೆ 28 ಸ್ಥಾನ ಸಿಗಲಿದೆ. 20 ಕ್ಷೇತ್ರಗಳಲ್ಲಿ 10ರಲ್ಲಿ ಜೆಡಿಎಸ್, 10 ಕ್ಷೇತ್ರಗಳಲ್ಲಿ ಬಿಜೆಪಿ ನಡುವೆ ಕಾಂಗ್ರೆಸ್‍ಗೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳಿವೆ. 30 ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಇದೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಲಾಗಿದೆ.

    ಈ ಬಾರಿ ಬದಾಮಿ ಹಾಗು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದು, ಎರಡೂ ಕ್ಷೇತ್ರಗಳಲ್ಲಿ ಸಿಎಂ ಗೆಲ್ಲಲಿದ್ದಾರೆ ಅಂತಾ ವರದಿಗಳು ಹೇಳ್ತಿವೆ. ಚಾಮುಂಡೇಶ್ವರಿಯಲ್ಲಿ ಕಡಿಮೆ ಮತಗಳ ಅಂತರದಿಂದ ಜಯ ಸಾಧಿಸಿದ್ರೆ, ಬದಾಮಿಯಲ್ಲಿ ಬಹುಮತಗಳ ಅಂತರದಿಂದ ಸಿಎಂ ಜಯ ಸಾಧಿಸಲಿದ್ದಾರೆ ಅಂತಾ ಕೇಂದ್ರ ಮತ್ತು ರಾಜ್ಯ ಗುಪ್ತಚರ ವರದಿಗಳು ಭವಿಷ್ಯ ನುಡಿದಿವೆ.

  • ಕರ್ನಾಟಕ ಮತದಾನದ ಬೆನ್ನಲ್ಲೇ ಶಾಕ್ – ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಶುರು

    ಕರ್ನಾಟಕ ಮತದಾನದ ಬೆನ್ನಲ್ಲೇ ಶಾಕ್ – ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಶುರು

    ಬೆಂಗಳೂರು: ಕರ್ನಾಟಕದಲ್ಲಿ ಮತದಾನ ಮುಗಿಯುತ್ತಿದ್ದಂತೆ ನಿರೀಕ್ಷೆಯಂತೆ ಪೆಟ್ರೋಲ್, ಡೀಸೆಲ್ ಬೆಲೆಗಳು ಹೆಚ್ಚಳವಾಗಿವೆ.

    ತೈಲ ಕಂಪನಿಗಳು ಲೀಟರ್ ಪೆಟ್ರೋಲ್‍ಗೆ 17 ಪೈಸೆ, ಡೀಸೆಲ್‍ಗೆ 21 ಪೈಸೆಯಷ್ಟು ಹೆಚ್ಚಿಸಿವೆ. ದಿನಂಪ್ರತಿ ಬೆಲೆ ಏರಿಳಿಕೆ ಮಾಡೋ ನಿಯಮವಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದುಬಾರಿ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದ್ದರೂ ಏಪ್ರಿಲ್ 24ರಿಂದ ಭಾನುವಾರದವರೆಗೆ ದರ ಏರಿಕೆ ಮಾಡಿರಲಿಲ್ಲ. ಇದನ್ನೂ ಓದಿ: ಎಲೆಕ್ಷನ್ ರಿಸಲ್ಟ್ ಬಿಸಿಯ ಮಧ್ಯೆ ಕರೆಂಟ್ ಶಾಕ್!

    ಗುಜರಾತ್ ಚುನಾವಣೆ ವೇಳೆಯೂ ಇದೇ ತಂತ್ರ ಅನುಸರಿಸಲಾಗಿತ್ತು. ಮೂಲಗಳ ಪ್ರಕಾರ ಪೆಟ್ರೋಲ್ ಲೀಟರ್‍ಗೆ 3 ರೂಪಾಯಿಯಷ್ಟು, ಡೀಸೆಲ್ 1 ರೂಪಾಯಿ 50 ಪೈಸೆಯಷ್ಟು ದುಬಾರಿಯಾಗಲಿದೆ. ವಿಚಿತ್ರ ಅಂದ್ರೆ ಆಗಸ್ಟ್ 1, 2013ರಂದು ಪೆಟ್ರೋಲ್ ಬೆಲೆ 74 ರೂಪಾಯಿ 10 ಪೈಸೆ, ಡೀಸೆಲ್ ಬೆಲೆ ಮೇ 13, 2014ರಂದು 56 ರೂಪಾಯಿ 71 ಪೈಸೆಯಷ್ಟಿತ್ತು. ಇಂದು ಪ್ರತಿ ಲೀಟರ್ ಗೆ 76.01 ಇದೆ.

  • ಇಂದು ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ- ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ

    ಇಂದು ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ- ಮತ ಎಣಿಕೆಗೆ ಆಯೋಗದಿಂದ ಸಕಲ ಸಿದ್ಧತೆ

    ಬೆಂಗಳೂರು: ತಾಂತ್ರಿಕ ದೋಷದಿಂದಾಗಿ ಸ್ಥಗಿತ ಗೊಂಡಿದ್ದ ಹೆಬ್ಬಾಳದ ಲೊಟ್ಟೆಗೊಲ್ಲಹಳ್ಳಿ ಹಾಗು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಇಂದು ಮರು ಮತದಾನ ನಡೆಯಲಿದೆ.

    ಮೇ 12ರಂದು ಲೊಟ್ಟೆಗೊಲ್ಲಹಳ್ಳಿಯ ಪೊಲಿಂಗ್ ಬೂತ್ 2ರಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಉಂಟಾಗಿದರಿಂದ ಮತದಾನವನ್ನು ಸ್ಥಗಿತ ಮಾಡಲಾಗಿತ್ತು. ಅಲ್ಲದೆ ಕುಷ್ಟಗಿಯ ಬೂತ್ ನಂಬರ್ 20ರಲ್ಲಿ ಮತಗಟ್ಟೆ ಕೇಂದ್ರ ಬದಲಾಗಿದರಿಂದ ಅಲ್ಲಿನ 21 ಮತಗಟ್ಟೆಯ ಮತದಾರರು 20 ನಂಬರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ರು. ಇದರಿಂದ ಈ ಮತಗಟ್ಟೆ ಕೇಂದ್ರದಲ್ಲಿನ ಮತದಾನವನ್ನು ಸ್ಥಗಿತ ಮಾಡಲಾಗಿತ್ತು.

    ಎರಡು ಮತಗಟ್ಟೆ ಕೇಂದ್ರಗಳಲ್ಲೂ ಇಂದು ಮರು ಮತದಾನ ನಡೆಸುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ತಾಂತ್ರಿಕ ದೋಷಗಳಿಂದಾಗಿ ಸ್ಥಗಿತಗೊಂಡಿರುವ ಲೊಟ್ಟೆಗೊಲ್ಲಹಳ್ಳಿಯ ಬೂತ್ ನಂಬರ್ 2 ಹಾಗು ಕೊಪ್ಪಳದ ಕುಷ್ಟಗಿಯ 21 ನಂಬರಿನ ಮತಗಟ್ಟೆ ಕೇಂದ್ರದಲ್ಲಿ ಇಂದು ಮರು ಮತದಾನ ನಡೆಸಲು ತೀರ್ಮಾನಿಸಲಾಗಿದೆ ಅಂತಾ ತಿಳಿಸಿದ್ರು.

    ಇಂದು ನಡೆಯುವ ಮರು ಮತದಾನಕ್ಕೆ ಎಲ್ಲಾ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, ಮರು ಮತದಾನ ಮಾಡುವರಿಗೆ ಎಡಗೈ ತೋರುಬೆರಳು ಬದಲು ಮಧ್ಯದ ಬೆರಳಿಗೆ ಶಾಹಿಯನ್ನು ಹಾಕಲಾಗುವುದು. ಇನ್ನು ಕುಷ್ಟಗಿಯ ಮತಗಟ್ಟೆ ಕೇಂದ್ರಗಳಲ್ಲಿ ಉದ್ದೇಶಪೂರ್ವಕಾಗಿ ಅಧಿಕಾರಿಗಳು ತಪ್ಪು ಎಸಗಿದ್ರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಇಂದು ಮರುಮತದಾನ ನಡೆಯುವ ಸರ್ಕಾರಿ ಹಾಗು ಖಾಸಗಿ ಕಂಪನಿಯ ನೌಕರರಿಗೆ ರಜೆ ಕೊಡಲಾಗಿದ್ದು, ತಪ್ಪದೇ ಮತದಾನ ಮಾಡುವಂತೆ ಸಂಜೀವ್ ಕುಮಾರ್ ಹೇಳಿದ್ದಾರೆ.

    ರಾಜ್ಯದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಸಕಲ ಸಿದ್ದತೆ ಮುಗಿದಿದ್ದು, ಪ್ರತಿಯೊಂದು ಜಿಲ್ಲೆಯಲ್ಲೂ ಮತ ಎಣಿಕೆ ಕೇಂದ್ರ ಮಾಡಲಾಗಿದೆ. ಚಿತ್ರದುರ್ಗ -2, ದಕ್ಷಿಣ ಕನ್ನಡ – 2, ಮೈಸೂರು – 2, ತುಮಕೂರಿನಲ್ಲಿ -3ಕಡೆ ಮತ್ತು ಬೆಂಗಳೂರಲ್ಲಿ ನಾಲ್ಕು ಕಡೆ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕಾರ್ಯಕ್ಕೆ 11,160 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಶನಿವಾರ ನಡೆದ ಮತದಾನದಲ್ಲಿ ಶೇ 72.13 ರಷ್ಟು ದಾಖಲೆಯ ಮತದಾನವಾಗಿದ್ದು, ಹೋಸಕೊಟೆಯಲ್ಲಿ ಅತಿಹೆಚ್ಚು ಅಂದ್ರೇ ಶೇ.89 ರಷ್ಟು ಮತದಾನವಾಗಿದ್ದು, ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ.

  • ಕರ್ನಾಟಕ ಚುನಾವಣೆ: ಅತಿ ಹೆಚ್ಚು ಮತದಾನವಾಗಿರುವ ಟಾಪ್ – 20 ಕ್ಷೇತ್ರಗಳು

    ಕರ್ನಾಟಕ ಚುನಾವಣೆ: ಅತಿ ಹೆಚ್ಚು ಮತದಾನವಾಗಿರುವ ಟಾಪ್ – 20 ಕ್ಷೇತ್ರಗಳು

    ಬೆಂಗಳೂರು: ರಾಜ್ಯದ ಒಟ್ಟು 222 ಮತಕ್ಷೇತ್ರ ಚುನಾವಣೆ ಮುಕ್ತಾಯವಾಗಿದ್ದು ಕೆಲ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಮತದಾನವಾಗಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನವಾಗಿರುವ ಟಾಪ್ -20 ಕ್ಷೇತ್ರಗಳ ಮಾಹಿತಿ ಇಲ್ಲಿದೆ

    ವಿಜಯಪುರ ಜಿಲ್ಲೆಯ ಬಬಲೇಶ್ವರವು ಸಾಮಾನ್ಯ ವರ್ಗದ ಮತಕ್ಷೇತ್ರವಾಗಿದ್ದು 2013ರಲ್ಲಿ 73.00% ಹಾಗೂ ಈ ಬಾರಿ 80.46% ರಷ್ಟು ಮತದಾನವಾಗಿದೆ. ಒಟ್ಟು 7.46% ರಷ್ಟು ಏರಿಕೆಯಾಗಿದೆ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ್ ಜಯಗಳಿಸಿದ್ದು, ಈ ಬಾರಿಯೂ ಸ್ಪರ್ಧೆಯಲ್ಲಿದ್ದಾರೆ.

    ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಹುಬ್ಬಳ್ಳಿ-ಧಾರವಾಡ ಪೂರ್ವ ಮತಕ್ಷೇತ್ರದಿಂದ 2013ರಲ್ಲಿ 62.60% ಹಾಗೂ ಈ ಬಾರಿ 70.02% ರಷ್ಟು ಮತದಾನವಾಗಿದ್ದು, 7.42% ಹೆಚ್ಚಳವಾಗಿದೆ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಸ್ಥಾನ ಪಡೆದಿದ್ದು, ಮತ್ತೇ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವರ್ಗದ ಮೈಸೂರಿನ ನರಸಿಂಹರಾಜ ಮತಕ್ಷೇತ್ರದಲ್ಲಿ ಈ ಬಾರಿ 6.73% ಮತದಾನ ಜಾಸ್ತಿಯಾಗಿದೆ. 2013ರಲ್ಲಿ 54.70% ಮತ್ತು 2018ರಲ್ಲಿ 61.43% ರಷ್ಟು ಮತದಾನವಾಗಿದೆ. ಕಳೆದ ಬಾರಿ ಕಾಂಗ್ರೆಸ್‍ನಿಂದ ತನ್ವೀರ್ ಸೇಠ್ ಅವರು ಜಯಗಳಿಸಿದ್ದು, ಮತ್ತೇ ಕಣದಲ್ಲಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ 2013ರಲ್ಲಿ 74.20% ಆಗಿದ್ದರೆ ಈ ಬಾರಿ 80.33% ಮತದಾನವಾಗಿದೆ. ಸಾಮಾನ್ಯ ಕ್ಷೇತ್ರವಾಗಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ್ ಶೆಟ್ಟಿ ಆಯ್ಕೆಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ 75.50% ಮತ್ತು ಈ ಬಾರಿ 81.50% ಮತದಾನವಾಗಿದ್ದು, 6.00% ಹೆಚ್ಚಳವಾಗಿದೆ.

    ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ 2013ರಲ್ಲಿ 71.00% ಮತ್ತು ಈ ಬಾರಿ 76.95% ಮತದಾನವಾಗಿದ್ದು, 5.95% ಹೆಚ್ಚಳವಾಗಿದೆ. 2013ರಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮಂಡ್ಯದ ಮಳವಳ್ಳಿ ಮತಕ್ಷೇತ್ರದಲ್ಲಿ, ಕಳೆದ ವಾರಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ 74.90% ಮತ್ತು 2018ರಲ್ಲಿ 80.74% ಮತದಾನವಾಗಿದೆ. ಒಟ್ಟು ಈ ಬಾರಿ 5.84% ರಷ್ಟು ಏರಿಕೆಯಾಗಿದೆ.

    ಮಂಡ್ಯ ಜಿಲ್ಲೆಯ ನಾಗಮಂಗಲವು 2013ರಲ್ಲಿ 81.50% ಮತದಾನವಾಗಿತ್ತು. ಈ ಬಾರಿ ಅದಕ್ಕೆ 5.61% ಸೇರಿಕೊಂಡು ಒಟ್ಟು 87.11% ಆಗಿದೆ. 2013ರಲ್ಲಿ ಇಲ್ಲಿ ಜೆಡಿಎಸ್ ಜಯಗಳಿಸಿತ್ತು. ಚಾಮರಾಜನಗರದ ಹಾನೂರಿನಲ್ಲಿ 2013ರಲ್ಲಿ 76.10% ಮತ್ತು ಈ ಬಾರಿ 81.61% ಮತದಾನವಾಗಿದ್ದು, 5.51% ರಷ್ಟು ಹೆಚ್ಚಳ ಕಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಗೆದ್ದಿತ್ತು.

    ಚಿತ್ರದುರ್ಗ ಜಿಲ್ಲೆಯ ಸಾಮಾನ್ಯ ವರ್ಗದ ಕ್ಷೇತ್ರವಾದ ಹೊಸದುರ್ಗದಲ್ಲಿ, ಈ ಬಾರಿ ಮತದಾನವು 5.48% ರಷ್ಟು ಹೆಚ್ಚಳವಾಗಿದೆ. 2013ರಲ್ಲಿ 79.80% ಮತ್ತು 2018ರಲ್ಲಿ 85.28% ಮತದಾನವಾಗಿತ್ತು. 201ರಲ್ಲಿ ಕಾಂಗ್ರೆಸ್ ಜಯಸಾಧಿಸಿತ್ತು. ವಿಜಯಪುರ ನಗರ ಕ್ಷೇತ್ರದಲ್ಲಿ 5.38% ಹೆಚ್ಚು ಮತದಾನ ದಾಖಲಾಗಿದೆ. 2013ರಲ್ಲಿ 55.90% ಹಾಗೂ ಈ ಬಾರಿ 61.28% ಮತ ಚಲಾವಣೆಯಾಗಿದೆ. 2013ರಲ್ಲಿ ಕಾಂಗ್ರೆಸ್ ಗೆದ್ದುಕೊಂಡಿತ್ತು.

    ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕೊಪ್ಪಳದ ಕನಕಗಿರಿಯಲ್ಲಿ 2013ರಲ್ಲಿ 73.60% ಮತದಾನವಾಗಿತ್ತು. ಆದರೆ, ಈ ಬಾರಿ 78.98% ಮತ ಚುಲಾವಣೆಯಾಗುವ ಮೂಲಕ 5.38% ರಷ್ಟು ಏರಿಕೆಯಾಗಿದೆ. 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ತುಮಕೂರು ಜಿಲ್ಲೆಯ ಶಿರಾ ಸಾಮಾನ್ಯ ವರ್ಗದ ಕ್ಷೇತ್ರವಾಗಿದೆ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ವರ್ಷ 79.10% ಮತದಾನವಾಗಿದ್ದರೆ, 2018ರಲ್ಲಿ 84.41% ಮತದಾನವಾಗಿದೆ. 5.31% ರಷ್ಟು ಹೆಚ್ಚಳ ಕಂಡಿದೆ. 2013 ಕಾಂಗ್ರೆಸ್‍ನಿಂದ ಟಿಬಿ ಜಯಚಂದ್ರ ಜಯಗಳಿಸಿದ್ದರು.

    ಉಡುಪಿಯ ಕಾಪು ಕ್ಷೇತ್ರ ಸಾಮಾನ್ಯ ವರ್ಗ ತೆರೆದಿದ್ದು, 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ ಹಾಗೂ 2018ರಲ್ಲಿ ಕ್ರಮವಾಗಿ 73.30% ಮತ್ತು 78.51% ರಷ್ಟು ಮತದಾನವಾಗಿತ್ತು. ಹೀಗಾಗಿ 5.21% ರಷ್ಟು ಏರಿಕೆಯನ್ನು ಕಂಡಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಲ್ಲಿ ಕಳೆದ ಬಾರಿಗಿಂತ 5.18% ಮತದಾನ ಹೆಚ್ಚಳವಾಗಿದೆ. 2013ರಲ್ಲಿ 74.20% ಮತದಾನ ನಡೆದಿದ್ದರೆ ಈ ಬಾರಿ 79.38% ಮತದಾನವಾಗಿದೆ. 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

    ಉತ್ತರ ಕನ್ನಡ ಜಿಲ್ಲೆಯ ಶಿರಶಿಯಲ್ಲಿ 2013ರಲ್ಲಿ 75.30% ಹಾಗೂ 2018ರಲ್ಲಿ 80.45% ಮತದಾನವಾಗಿದ್ದು, 5.15% ಹೆಚ್ಚಳವಾಗಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದರು. ಸಾಮಾನ್ಯ ವರ್ಗದ ಹುಬ್ಬಳ್ಳಿ-ಧಾರವಾಡ ಕೇಂದ್ರ ಮತಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಜಯಗಳಿಸಿತ್ತು. ಆ ವರ್ಷ ಕೇವಲ 55.30% ಮತದಾನವಾಗಿತ್ತು. ಆದರೆ, 2018ರಲ್ಲಿ 60.17% ಗೆ ಏರಿಕೆಯಾಗಿದೆ. ಇದನ್ನು ಓದಿ : ಕರ್ನಾಟಕ ಚುನಾವಣೆ – ಕಡಿಮೆ ಮತದಾನವಾಗಿರುವ ಟಾಪ್-20 ಕ್ಷೇತ್ರಗಳು

    ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ 2013 ಹಾಗೂ 2018ರಲ್ಲಿ ಕ್ರಮವಾಗಿ 79.60% ಮತ್ತು 84.43% ಮತದಾನವಾಗಿದೆ. ಕಳೆದ ಬಾರಿಗಿಂತ 4.83% ರಷ್ಟು ಏರಿಕೆಯಾಗಿದೆ. 2013ರಲ್ಲಿ ಜೆಡಿಎಸ್ ಇಲ್ಲಿ ಗೆದ್ದುಕೊಂಡಿತ್ತು. ತುಮಕೂರಿನ ಮಧುಗಿರಿಯಲ್ಲಿ ಈ ಬಾರಿಗಿಂದ ಈ ಬಾರಿ 4.81% ರಷ್ಟು ಜಾಸ್ತಿ ಮತದಾನವಾಗಿದೆ. 2013ರಲ್ಲಿ 80.70% ಆಗಿದ್ದರೆ 2018ರಲ್ಲಿ 85.51% ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.

    ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಲಬುರ್ಗಿ ಜಿಲ್ಲೆಯ ಸುರಪುರದಲ್ಲಿ 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ 66.40% ಹಾಗೂ 2018ರಲ್ಲಿ 71.20% ಮತದಾನವಾಗಿದ್ದು, ಈ ಬಾರಿ 4.80% ರಷ್ಟು ಏರಿಕೆಯಾಗಿದೆ.

     

  • ಕರ್ನಾಟಕ ಚುನಾವಣೆ – ಕಡಿಮೆ ಮತದಾನವಾಗಿರುವ ಟಾಪ್-20 ಕ್ಷೇತ್ರಗಳು

    ಕರ್ನಾಟಕ ಚುನಾವಣೆ – ಕಡಿಮೆ ಮತದಾನವಾಗಿರುವ ಟಾಪ್-20 ಕ್ಷೇತ್ರಗಳು

    ಬೆಂಗಳೂರು: ಶನಿವಾರ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಶೇ.72.13 ರಷ್ಟು ಆಗಿದ್ದು, ಈ ಹಿಂದೆ ನಡೆದಿದ್ದ ಮತದಾನದ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಹೀಗಾಗಿ ಇಲ್ಲಿ ಕಳೆದ ಬಾರಿ ನಡೆದ ಮತದಾನಕ್ಕಿಂತ ಕಡಿಮೆ ಮತದಾನವಾಗಿರುವ ಟಾಪ್ 20 ಕ್ಷೇತ್ರಗಳನ್ನು ನೀಡಲಾಗಿದೆ.

    ಕೋಲಾರ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಈ ಬಾರಿ ಅತಿ ಕಡಿಮೆ ಮತದಾನವಾಗಿದೆ. 2013 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.83.30 ಮತದಾನ ನಡೆದಿತ್ತು. ಆದರೆ ಈ ಬಾರಿ ಶೇ.71.22 ರಷ್ಟು ಮತದಾನ ಮಾತ್ರ ನಡೆದಿದೆ. ಈ ಮೂಲಕ ಶೇ. 12.08 ರಷ್ಟು ಮತದಾನ ಕಡಿಮೆ ದಾಖಲಾಗಿದೆ. ಇನ್ನು ಕಲಬುರಗಿ ಜಿಲ್ಲೆಯ ಶಹಪೂರ ಎರಡನೇ ಸ್ಥಾನ ಪಡೆದಿದ್ದು, 2013ರಲ್ಲಿ ಶೇ. 67.60 ಮತದಾನ ನಡೆದಿತ್ತು. ಈ ಬಾರಿ ಶೇ.59.04 ರಷ್ಟು ಮಾತ್ರ ನಡೆದಿದೆ. ಅಂದರೆ ಶೇ.8.56 ಕಡಿಮೆ ಮತದಾನ ದಾಖಲಾಗಿದೆ.

    ಇನ್ನುಳಿದಂತೆ ಪಟ್ಟಿಯಲ್ಲಿ ಬೆಂಗಳೂರಿನ 14 ಕ್ಷೇತ್ರಗಳಲ್ಲಿ ಕಡಿಮೆ ಮತದಾನ ದಾಖಲಾಗಿದೆ. ದಾಸರಹಳ್ಳಿಯಲ್ಲಿ 2013ರಲ್ಲಿ ಶೇ. 55.40 ಮತದಾನವಾಗಿತ್ತು. ಈ ಬಾರಿ ಶೇ.48.03 ರಷ್ಟು ಮತದಾನ ದಾಖಲಾಗಿದೆ. ಅಂದರೆ ಕಳೆದ ಬಾರಿಗಿಂತ ಈ ಬಾರಿ ಶೇ.7.37 ರಷ್ಟು ಕಡಿಮೆಯಾಗಿದೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಜಯ ಸಾಧಿಸಿತ್ತು. ನಗರದ ಮೀಸಲು ಕ್ಷೇತ್ರವಾಗಿರುವ ಮಹದೇವಪುರದಲ್ಲಿ ಕಳೆದ ಬಾರಿ ಶೇ.61.60 ಮತದಾನ ನಡೆದಿತ್ತು. ಈ ಬಾರಿ ಕೇವಲ ಶೇ.55.00 ಮತದಾನ ನಡೆದಿದ್ದು, ಶೇ.6.60 ಕಡಿಮೆ ಮತದಾನ ದಾಖಲಾಗಿದೆ.

    ತೀವ್ರ ಕುತೂಹಲ ಮೂಡಿಸಿದ್ದ ಯಶವಂತಪುರ ಕ್ಷೇತ್ರದಲ್ಲಿ ಈ ಬಾರಿ ಶೇ.60.19 ದಾಖಲಾಗಿದೆ. ಕಳೆದ ಬಾರಿಗಿಂತ ಶೇ.6.01 ರಷ್ಟು ಕಡಿಮೆ ಮತದಾನವಾಗಿದ್ದು, 2013 ರಲ್ಲಿ ಶೇ.66.20 ಮತದಾನ ನಡೆದಿತ್ತು. ಕಳೆದ ಬಾರಿ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು. ಈ ಬಾರಿ ನಟ ಜಗ್ಗೇಶ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇನ್ನು ಮಲ್ಲೇಶ್ವರಂ ಕ್ಷೇತ್ರದಲ್ಲಿ ಈ ಬಾರಿ ಶೇ.56.29 ರಷ್ಟು ಮತದಾನ ನಡೆದಿದೆ. 2013 ರಲ್ಲಿ ಶೇ.62.30 ಮತದಾನ ನಡೆದಿತ್ತು. ಈ ಕ್ಷೇತ್ರದಲ್ಲೂ ಶೇ.6.01 ರಷ್ಟು ಮತದಾನ ಕಡಿಮೆ ದಾಖಲಾಗಿದೆ. ಕೆ.ಆರ್.ಪುರ ಕ್ಷೇತ್ರದಲ್ಲಿ 2013 ರಲ್ಲಿ ಶೇ. 58.90 ಮತದಾನ ನಡೆದಿತ್ತು. ಆದರೆ ಈ ಬಾರಿ ಕೇವಲ ಶೇ. 53.08 ರಷ್ಟು ಮಾತ್ರ ಮತದಾನ ನಡೆದಿದೆ. ಶೇ. 5.82 ರಷ್ಟು ಮತದಾನ ಪ್ರಮಾಣ ಕಡಿಮೆ ದಾಖಲಾಗಿದೆ.

    ಕಲಬುರಗಿಯ ಜೇವರ್ಗಿ ಕ್ಷೇತ್ರದಿಂದ 2013 ರಲ್ಲಿ ಶೇ.73.30 ಮತದಾನ ನಡೆದಿತ್ತು. ಈ ಬಾರಿ ಶೇ.67.57 ಮತದಾನ ನಡೆದಿದೆ. ಅಂದರೆ ಶೇ.5.73 ರಷ್ಟು ಕಡಿಮೆ ಮತದಾನ ನಡೆದಿದೆ. 2013 ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು.

    2013 ರಲ್ಲಿ ಜೆಡಿಎಸ್ ಅಭ್ಯರ್ಥಿ ಜಯಗಳಿಸಿದ್ದ ಮಹಾಲಕ್ಷೀ ಲೇಔಟ್ ಕ್ಷೇತ್ರದಲ್ಲಿ ಶೇ.60.20 ಮತದಾನ ದಾಖಲಾಗಿತ್ತು. ಈ ಬಾರಿ ಶೇ.5.48 ರಷ್ಟು ಮತದಾನ ಕಡಿಮೆ ನಡೆದಿದ್ದು, ಶೇ. 54.72 ರಷ್ಟು ಮತದಾನ ನಡೆದಿದೆ. ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಗೆಲುವುವಿಗಾಗಿ ಕಾಯ್ದು ನೋಡುತ್ತಿರುವ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರದಲ್ಲೂ ಶೇ.5.71 ರಷ್ಟು ಕಡಿಮೆ ಮತದಾನ ದಾಖಲಾಗಿದ್ದು, ಶೇ.57.39 ಮತದಾನ ನಡೆದಿದೆ. 2013 ರಲ್ಲಿ ಶೇ. 63.10 ಮತದಾನ ನಡೆದಿತ್ತು.

    2013 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದ ಪದ್ಮನಾಭನಗರ ಕ್ಷೇತ್ರದಲ್ಲಿ ಶೇ. 58.40 ಮತದಾನ ನಡೆದಿತ್ತು. ಈ ಬಾರಿ ಶೇ. 53.00 ರಷ್ಟು ಮತದಾನ ನಡೆದಿದೆ. ಶೇ.5.40 ಪ್ರಮಾಣ ಕಡಿಮೆ ಮತದಾನ ನಡೆದಿದೆ.

    ಬೆಂಗಳೂರಿನ ಪ್ರಮುಖ ಎಸ್‍ಸಿ ಮೀಸಲು ಕ್ಷೇತ್ರಗಳಾದ ಸಿವಿ ರಾಮನ್‍ನಗರದ ಹಾಗೂ ಆನೇಕಲ್ ನಲ್ಲಿ ಕ್ಷೇತ್ರಗಳಲ್ಲಿ ಕ್ರಮವಾಗಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜಯಗಳಿಸಿತ್ತು. ಸಿವಿ ರಾಮನ್ ನಗರದಲ್ಲಿ 2013 ರಲ್ಲಿ ಶೇ.54.10 ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ. 5.12 ರಷ್ಟು ಕಡಿಮೆ ಮತದಾನ ದಾಖಲಾಗಿ ಕೇವಲ ಶೇ. 48.98 ರಷ್ಟು ಮತದಾನ ನಡೆದಿದೆ. ಬೆಂಗಳೂರು ಗ್ರಾಮಾಂತರ ಆನೇಕಲ್ ಕ್ಷೇತ್ರದಲ್ಲಿ ಕಳೆದ ಬಾರಿ ಶೇ.68.90 ಮತದಾನ ನಡೆದಿತ್ತು. ಈ ಬಾರಿ 63.99 ರಷ್ಟು ನಡೆದು ಶೇ.4.91 ರಷ್ಟು ಮತದಾನ ಕಡಿಮೆಯಾಗಿದೆ.

    ಈ ಬಾರಿ ಕಡಿಮೆ ಮತದಾನ ನಡೆದ ಕಲಬುರಗಿಯ 3ನೇ ಕ್ಷೇತ್ರ ಚಿತ್ತಾಪುರ. ಈ ಕ್ಷೇತ್ರದಲ್ಲಿ 2013ರಲ್ಲಿ ಶೇ.65.00 ಮತದಾನ ನಡೆದಿತ್ತು. ಈಗ ಶೇ.60.34 ಮತದಾನ ನಡೆದಿದ್ದು, ಶೇ. 4.66 ರಷ್ಟು ಮತದಾನ ಕಡಿಮೆಯಾಗಿದೆ. ಜೆಡಿಎಸ್ ನಿಂದ ಬಂಡಾಯವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಮೀರ್ ಅಹ್ಮದ್ ಮೂಲಕ ರಾಜ್ಯದ ಗಮನ ಸೆಳೆದಿದ್ದ ಚಾಮರಾಜಪೇಟೆ ಕ್ಷೇತ್ರದಲ್ಲೂ ಶೇ.4.47 ರಷ್ಟು ಕಡಿಮೆ ಮತದಾನ ದಾಖಲಾಗಿದೆ. 2013 ರಲ್ಲಿ ಕ್ಷೇತ್ರದಲ್ಲಿ ಶೇ.58.80 ಮತದಾನ ನಡೆದಿತ್ತು. ಈ ಬಾರಿ 54.33 ರಷ್ಟು ಮತದಾನ ನಡೆದಿದೆ.

    2013 ರಲ್ಲಿ ಬಿಜೆಪಿಯಿಂದ ಜಯಗಳಿಸಿದ್ದ ಸುರೇಶ್ ಕುಮಾರ್ ಕ್ಷೇತ್ರವಾದ ರಾಜಾಜೀನಗರದಲ್ಲೂ ಈ ಬಾರಿ ಶೇ.4.10 ರಷ್ಟು ಕಡಿಮೆ ಮತದಾನ ದಾಖಲಾಗಿದೆ. 2013 ರಲ್ಲಿ ಶೇ. 61.20 ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ.57.20 ಮತದಾನ ನಡೆದಿದೆ. ಇನ್ನು ಬಿಜೆಪಿ ಜಯದ ತೆಕ್ಕೆಯಲ್ಲಿದ್ದ ಯಲಹಂಕ ಕ್ಷೇತದಲ್ಲೂ ಶೇ. 3.89 ರಷ್ಟು ಕಡಿಮೆ ಮತದಾನ ದಾಖಲಾಗಿದೆ. ಈ ಬಾರಿ ಶೇ.63.01 ರಷ್ಟು ಮತದಾನ ನಡೆದಿದೆ. 2013 ರಲ್ಲಿ ಶೇ. 66.90 ರಷ್ಟು ಮತದಾನ ನಡೆದಿತ್ತು.

    ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಸ್ಪರ್ಧಿಸಿರುವ ಮೈಸೂರಿನ ವರುಣಾ ಕ್ಷೇತ್ರದಲ್ಲಿಯೂ ಶೇ.3.81 ರಷ್ಟು ಕಡಿಮೆ ಮತದಾನ ನಡೆದಿದ್ದು, ಒಟ್ಟಾರೆ ಈ ಬಾರಿ ಶೇ.78.59 ರಷ್ಟು ಮತದಾನ ನಡೆದಿದೆ. ವರುಣಾದಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ಅವರ ಸ್ಪರ್ಧೆಯ ವೇಳೆ ಶೇ.82.40 ರಷ್ಟು ಮತದಾನ ದಾಖಲಾಗಿತ್ತು. ರಾಯಚೂರಿನ ಸಿಂಧನೂರು ಕ್ಷೇತ್ರದಲ್ಲೂ ಶೇ. 3.24 ರಷ್ಟು ಕಡಿಮೆ ಮತದಾನ ನಡೆದಿದ್ದು, ಈ ಬಾರಿ ಶೇ. 69.36 ರಷ್ಟು ಮತದಾನ ನಡೆದಿದೆ. 2013 ರಲ್ಲಿ ಶೇ. 72.60 ಮತದಾನ ನಡೆದಿತ್ತು.

    ಟಾಪ್ 20 ಕಡಿಮೆ ಮತದಾನ ನಡೆದ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ಬೆಂಗಳೂರಿನ ಬಿಟಿಎಂ ಲೇಔಟ್ ಶೇ.3.21 ರಷ್ಟು ಕಡಿಮೆ ಮತದಾನ ದಾಖಲಾಗಿದೆ. 2013 ರಲ್ಲಿ ಶೇ.53.60 ರಷ್ಟು ಮತದಾನ ನಡೆದಿತ್ತು. ಈ ಬಾರಿ 50.09 ರಷ್ಟು ಮತದಾನ ನಡೆದಿದೆ.

  • ಲಾಠಿ ಹಿಡಿದ ಎಸಿ ಗಾರ್ಗಿ ಜೈನ್ – ದೃಶ್ಯ ಚಿತ್ರೀಕರಣಕ್ಕೆ ಮುಂದಾದವರಿಗೆ ಅವಾಜ್

    ಲಾಠಿ ಹಿಡಿದ ಎಸಿ ಗಾರ್ಗಿ ಜೈನ್ – ದೃಶ್ಯ ಚಿತ್ರೀಕರಣಕ್ಕೆ ಮುಂದಾದವರಿಗೆ ಅವಾಜ್

    ಬಳ್ಳಾರಿ: ಚುನಾವಣಾ ಮತಗಟ್ಟೆಯ ಮುಂಭಾಗದಲ್ಲಿ ಸೇರಿದ್ದ ಜನರನ್ನ ಚದುರಿಸಲು ಕೈಯಲ್ಲಿ ಲಾಠಿ ಹಿಡಿದಿದ್ದ ದೃಶ್ಯವನ್ನು ಚಿತ್ರೀಕರಿಸಿದ್ದಕ್ಕೆ ಮಾಧ್ಯಮದವರ ವಿರುದ್ಧ ಹೊಸಪೇಟೆ ಚುನಾವಣಾ ಅಧಿಕಾರಿ ಗಾರ್ಗಿ ಜೈನ್ ದರ್ಪ ಮೆರೆದಿದ್ದಾರೆ.

    ಮೊಬೈಲ್‍ ನಲ್ಲಿ ಸೆರೆ ಹಿಡಿದ ದೃಶ್ಯಗಳು ಚಾನೆಲ್‍ ನಲ್ಲಿ ಪ್ರಸಾರ ಮಾಡಿದರೆ ಚಾನೆಲ್ ಬಂದ್ ಮಾಡಿಸುವ ಬೆದರಿಕೆಯನ್ನ ಕೂಡ ಹಾಕಿದ್ದಾರೆ. ಶನಿವಾರ ಸಂಜೆ ಆರು ಗಂಟೆಯ ಸುಮಾರಿಗೆ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿನ ಪಿಂಕ್ ಮತಗಟ್ಟೆ ಸಂಖ್ಯೆ 9ರ ಮುಂಭಾಗದಲ್ಲಿ ತಡವಾಗಿ ಮತದಾನಕ್ಕೆ ಸುಮಾರು ಎರಡು ನೂರಕ್ಕೂ ಹೆಚ್ಚು ಜನ ಸೇರಿದ್ದರು.

    ಈ ವೇಳೆ ಸೇರಿದ್ದ ಜನರನ್ನು ನಿಯಂತ್ರಿಸುವುದಕ್ಕಾಗಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಟಿ ಹಿಡಿದು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಲಾಟಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಖಾಸಗಿ ವಾಹಿನಿಯ ವರದಿಗಾರ ಎಸಿ ಗಾರ್ಗಿ ಜೈನ್ ಲಾಟಿದು ರಸ್ತೆಯಲ್ಲಿ ಓಡಾಡುವುದುನ್ನ ಚಿತ್ರೀಕರಿಸಿ ಸುದ್ದಿಮಾಡಲು ಮುಂದಾಗಿದ್ದಾರೆ. ಆಗ ಎಸಿ ಗಾರ್ಗಿ ಜೈನ್ ನನ್ನ ವೀಡಿಯೋ ಯಾಕೆ ಚಿತ್ರೀಕರಣ ಮಾಡುತ್ತಿದ್ದೀರಿ? ವಿಡಿಯೋ ಡಿಲೀಟ್ ಮಾಡಿ ಅಂತಾ ಧಮ್ಕಿ ಹಾಕಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿರುವ ವೇಳೆಯಲ್ಲಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಠಿ ಹಿಡಿದು ದರ್ಪ ಮೆರೆದಿದ್ದು ಸರಿಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

  • ಬಾರ್ ಓಪನ್ ಆಗ್ತಿದ್ದಂತೆ ಮುಗಿಬಿದ್ದ ಜನ – ಎಣ್ಣೆಗಾಗಿ ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು

    ಬಾರ್ ಓಪನ್ ಆಗ್ತಿದ್ದಂತೆ ಮುಗಿಬಿದ್ದ ಜನ – ಎಣ್ಣೆಗಾಗಿ ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು

    ಬೆಂಗಳೂರು: ಚುನಾವಣೆ ನಿಮಿತ್ತ ಎರಡು ದಿನಗಳ ಕಾಲ ರಾಜ್ಯಾದ್ಯಂತ ಬಾರ್ ಗಳನ್ನು ಬಂದ್ ಮಾಡಲಾಗಿದ್ದು, ಎಣ್ಣೆ ಪ್ರಿಯರು ಎಣ್ಣೆ ಸಿಗದೆ ಪರದಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.

    ಶನಿವಾರ ಮತದಾನ ಮುಗಿದು ಇಂದು ಬೆಳಿಗ್ಗೆ ಬಾರ್ ಗಳು ಓಪನ್ ಆಗುತ್ತಿದ್ದಂತೆ ಮದ್ಯಕ್ಕಾಗಿ ಜನ ಮುಗಿಬಿದ್ದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಥಳಿ ರಸ್ತೆಯಲ್ಲಿರುವ ಬಾರ್ ವೊಂದರಲ್ಲಿ ಜನ ಮದ್ಯಕ್ಕಾಗಿ ಕಿತ್ತಾಡುತ್ತಿದ್ದ ಘಟನೆ ನಡೆದಿದೆ.

    ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಪಡೆಯುತ್ತಿರುವುಸು ಕಂಡು ಬಂದಿದೆ. ಇನ್ನು ಮಹಿಳೆಯರು ಕೂಡ ಎಣ್ಣೆಗಾಗಿ ಬಾರ್ ಗೆ ಎಡತಾಕಿದ್ದು, ಗಂಡಸರಿಗಿಂತ ತಾವೇನು ಕಡಿಮೆ ಎಂಬಂತೆ ಸಾಲಿನಲ್ಲಿ ನಿಂತು ಮದ್ಯ ಪಡೆದಿರುವುದು ವಿಶೇಷವಾಗಿತ್ತು.

    ಇನ್ನು ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಮಾತನಾಡಿ ಇಂದು ಬಾರ್ ಮುಂದೆ ನಿಂತಿರುವ ಜನರನ್ನು ನೋಡಿದರೆ ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡಿದಾಗ ಜನ ಬ್ಯಾಂಕ್ ಮುಂದೆ ನಿಂತು ನೋಟ್ ಬದಲಾಯಿಸಲು ಜನ ಪರದಾಡುತ್ತಿದ್ದ ಕಣ್ಣ ಮುಂದೆ ಹದುಹೋಯ್ತು ಎಂದು ತಿಳಿಸಿದ್ದಾರೆ.

  • ಮತದಾನ ಮಾಡದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

    ಮತದಾನ ಮಾಡದ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ತರಾಟೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದೆ. ಮತದಾನದ ದಿನ ಹಲವು ಮಂದಿ ಮತದಾನ ಮಾಡಿಲ್ಲ. ಅದ್ರಲ್ಲಿ ನಟಿ, ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಕೂಡ ಒಬ್ಬರಾಗಿದ್ದಾರೆ.

    ಮಂಡ್ಯದ ಕೆ.ಆರ್ ರಸ್ತೆಯ ಪಿಎಲ್‍ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಅವರು ಮತದಾನ ಮಾಡಬೇಕಾಗಿತ್ತು. ಆದರೆ ಇದೀಗ ಅವರು ಮತದಾನ ಮಾಡದೆ ದೂರು ಉಳಿದಿದ್ದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ವೋಟು ಮಾಡದವರಿಗೆ ರಾಜಕೀಯ ಮಾತಾನಾಡುವ ನೈತಿಕತೆ ಎಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದು, ನಂಬರ್ ಒನ್ ಸಿಟಿಜನ್ ಅಂತ ಲೇವಡಿ ಮಾಡಿದ್ದಾರೆ. ರಮ್ಯಾ ಮತ್ತು ಬಹುಭಾಷಾ ನಟ ಪ್ರಕಾಶ್ ರೈ ಅವರು ಪೃಧಾನಿ ಮೋದಿ ಬಗ್ಗೆ ಮಾತನಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಮ್ಯಾ ವೋಟು ಮಾಡಿಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗೋಕೆ ಹೇಳಿ ಅಂತಾ ಜನರು ಕಿಡಿ ಕಾರಿದ್ದು, ಮೊದಲು ವೋಟ್ ಮಾಡಿ ಜವಾಬ್ದಾರಿ ಕಲಿಯಿರಿ ರಮ್ಯಾ ಅವರಿಗೆ ಅಂತಾ ಟಾಂಗ್ ಕೊಟ್ಟಿದ್ದಾರೆ.