Tag: karnataka elections

  • ಸಿಎಂ ಬಿಎಸ್‍ವೈಯಿಂದ ಗೂಂಡಾಗಿರಿ: ಡಿಕೆ ಶಿವಕುಮಾರ್

    ಸಿಎಂ ಬಿಎಸ್‍ವೈಯಿಂದ ಗೂಂಡಾಗಿರಿ: ಡಿಕೆ ಶಿವಕುಮಾರ್

    ಬೆಂಗಳೂರು: ಪೊಲೀಸ್ ಭದ್ರತೆಯನ್ನು ವಾಪಸ್ ಪಡೆದ ಬೆನ್ನಲ್ಲೇ ಈಗಲ್‍ಟನ್ ರೆಸಾರ್ಟ್ ನಲ್ಲಿದ್ದ ಶಾಸಕರು ಬೇರೆ ಸ್ಥಳಕ್ಕೆ ಶಿಫ್ಟ್ ಆಗುತ್ತಿದ್ದಾರೆ.

    ಬಿಡದಿಯ ಈಗಲ್‍ಟನ್ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ಮಾಜಿ ಸಚಿವ ಜನಾರ್ದನ ರೆಡ್ಡಿ ನಮ್ಮ ಶಾಸಕರಿಗೆ ಕರೆ ಮಾಡುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಬಿಜೆಪಿಯವರು ರೆಡ್ಡಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಹೇಳುತ್ತಾರೆ. ಆದರೆ ಅವರೇ ನಮ್ಮ ಶಾಸಕರಿಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದರು.

    ಶಾಸಕರನ್ನು ಒತ್ತೆಯಿಟ್ಟು ಕಾಂಗ್ರೆಸ್, ಜೆಡಿಎಸ್ ಗುಂಡಾಗಿರಿ ಮಾಡುತ್ತಿದ್ದಾರೆ ಎನ್ನುವ ಬಿಎಸ್‍ವೈ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರ ಸಿಕ್ಕಿದ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ರಾಮನಗರದ ಎಸ್‍ಪಿಯನ್ನು ವರ್ಗಾವಣೆ ಮಾಡಿದ್ದಾರೆ. 100 ಜನ ಶಾಸಕರಿದ್ದು ನಮ್ಮ ರಕ್ಷಣೆಗಿದ್ದ ಪೊಲೀಸರನ್ನು ವಾಪಸ್ ಮಾಡಲಾಗಿದೆ. ಈ ರೀತಿ ಮಾಡುವುದು ಗುಂಡಾಗಿರಿ ಎಂದು ತಿರುಗೇಟು ನೀಡಿದರು.

    ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರು ನಿಮ್ಮ ಜೊತೆ ಇಲ್ಲ ಎಂದು ಕೇಳಿದ್ದಕ್ಕೆ ಯಾರು ನಮ್ಮ ಪಕ್ಷವನ್ನು ಬಿಡಲ್ಲ. 24 ಗಂಟೆಯ ಒಳಗಡೆ ಅವರು ನಮ್ಮ ಜೊತೆ ಇರಲಿದ್ದಾರೆ. ಒಂದು ವೇಳೆ ಅವರು ನಮ್ಮ ಪಕ್ಷವನ್ನು ಬಿಟ್ಟರೆ ಅಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ದಂಗೆ ಏಳುತ್ತಾರೆ ಎಂದು ತಿಳಿಸಿದರು.

    ಕೊಚ್ಚಿಗೆ ಹೋಗುತ್ತಿರಾ ಎಂದು ಕೇಳಿದ್ದಕ್ಕೆ, ಕೇರಳ, ತಮಿಳುನಾಡು, ಗೋವಾ, ವಿಶಾಖಪಟ್ಟಣಂಗೆ ಹೋಗಬಹುದು. ಆದರೆ ಎಲ್ಲಿಗೆ ಹೋಗಬೇಕು ಎನ್ನುವ ಬಗ್ಗೆ ಇನ್ನು ನಿರ್ಧಾರ ಆಗಿಲ್ಲ. ಸಭೆ ನಡೆಸಿ ನಾವು ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದರು.

  • ದೆಹಲಿಯಲ್ಲಿ ಶಾ ರಣತಂತ್ರ: ಏನಿದು ಆಪರೇಷನ್ 10 ಸ್ಟಾರ್ ಟಾರ್ಗೆಟ್? ಇಲ್ಲಿದೆ ಇನ್ ಸೈಡ್ ಸ್ಟೋರಿ

    ದೆಹಲಿಯಲ್ಲಿ ಶಾ ರಣತಂತ್ರ: ಏನಿದು ಆಪರೇಷನ್ 10 ಸ್ಟಾರ್ ಟಾರ್ಗೆಟ್? ಇಲ್ಲಿದೆ ಇನ್ ಸೈಡ್ ಸ್ಟೋರಿ

    ಬೆಂಗಳೂರು: ಸಂಖ್ಯಾಬಲದ ಕೊರತೆಯ ನಡುವೆಯೂ ಸರ್ಕಾರ ರಚನೆ ಮಾಡಿಯೇ ಸಿದ್ಧ ಎಂದು ಮುನ್ನುಗ್ಗುತ್ತಿರುವ ಬಿಜೆಪಿ ಈಗ `ಆಪರೇಷನ್ 10 ಸ್ಟಾರ್’ ಟಾರ್ಗೆಟ್ ಮಾಡಿದೆ.

    ದೆಹಲಿಯಿಂದಲೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ಲಾನ್ ರೂಪಿಸಿದ್ದು, ಈ ಕುರಿತು ರಾಜ್ಯದ ಕೆಲ ಬೆರಳೆಣಿಕೆ ನಾಯಕರಿಗಷ್ಟೇ ನಿರ್ದೇಶನ ನೀಡಿದ್ದಾರೆ. ಬಿಜೆಪಿ ಬಹುಮತ ಸಾಬೀತು ಪಡಿಸುವ ಅಗತ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಏನಿದು ಆಪರೇಷನ್ 10?
    ಬಹುಮತ ಸಾಬೀತು ಪಡಿಸಲು ಕನಿಷ್ಠ ಅಗತ್ಯವಿರುವ ಶಾಸಕರ ಸಂಖ್ಯೆಗಿಂತಲೂ ಹೆಚ್ಚಿನ ಶಾಸಕರನ್ನು ಪಕ್ಷಕ್ಕೆ ಸೆಳೆಯವುದು. ಅದರಲ್ಲಿ ಪ್ರಮುಖ 10 ಶಾಸಕರನ್ನು ಆಯ್ಕೆ ಮಾಡಬೇಕು. ಹಿರಿಯ ನಾಯಕರಿಂದ ಕಡೆಗಣನೆಗೆ ಒಳಗಾಗಿ ಬೇಸರದಲ್ಲಿರುವ ಶಾಸಕರನ್ನು ಸೆಳೆಯಬೇಕು. ಪ್ರಮುಖವಾಗಿ ಮೈಸೂರು ಭಾಗದ ಅತೃಪ್ತರ ಮನವೊಲಿಸಬೇಕು. ಇದರ ಭಾಗವಾಗಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಅವರ ಜೊತೆಗೆ ಈಶ್ವರಪ್ಪ ಮಾತುಕತೆ ನಡೆಸಿದ್ದು, 2ನೇ ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎನ್ನಲಾಗಿದೆ.

    ಹೈದರಾಬಾದ್ ಕರ್ನಾಟಕ ಭಾಗದ ಜೆಡಿಎಸ್ ಆತೃಪ್ತ ನಾಯಕರ ಮನವೊಲಿಸಬೇಕು. ಈ ವೇಳೆ ಕಾಂಗ್ರೆಸ್ ವಿರುದ್ಧ ಗೆದ್ದು ಅವರೊಂದಿಗೆ ಅಧಿಕಾರ ಹಂಚಿಕೆ ಹೇಗೆ ಎಂಬ ಅಂಶ ಮುಂದಿಟ್ಟು ಚರ್ಚಿಸಬೇಕು. ಬಿಎಸ್‍ವೈ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಲಿಂಗಾಯತ ಶಾಸಕರನ್ನು ಸೆಳೆಯಲು ಯತ್ನಿಸಬೇಕು. ಇದರ ಭಾಗವಾಗಿ ಈಗಾಗಲೇ 21 ಲಿಂಗಾಯತ ಶಾಸಕರಿಗೆ ಕರೆ ಮಾಡಿ ಸೆಳೆಯುವ ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ.

    ಬಳ್ಳಾರಿ ಹಳೆಯ ನಾಯಕರನ್ನು ಸೆಳೆಯಬೇಕು. ಶ್ರೀ ರಾಮುಲು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ಈಗಾಗಲೇ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಬಿಟ್ಟು ಹೋದ ಮುಖಂಡರಿಗೂ ಮತ್ತೆ ಘರ್ ಪಾಪ್ಸಿ ಆಫರ್ ನೀಡಲಾಗಿದೆ. ಈ ಸಂಬಂಧ ಪಾವಗಡದ ವೆಂಕಟರಮಣಪ್ಪ ಅವರೊಂದಿಗೆ ಶ್ರೀ ರಾಮುಲು ಮಾತುಕತೆ ನಡೆಸಬೇಕು. ಅದೇ ರೀತಿಯಾಗಿ ಕುಷ್ಟಗಿಯ ಅಮರೇಗೌಡ ಬಯ್ಯಾಪುರ ಅವರ ಮನವೊಲಿಸಬೇಕು. ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ನೀಡುವ ಬಗ್ಗೆಯೂ ಆಶ್ವಾಸನೆ ನೀಡುವ ಕುರಿತು ಭರವಸೆ ನೀಡಿ ಎರಡು ಪಕ್ಷದಲ್ಲಿ ಇರುವ ಶಾಸಕಿಯರನ್ನು ಸೆಳೆಯಲು ಯತ್ನಿಸಬೇಕು.

    ಈ ತಂತ್ರದ ಪ್ರಮುಖ ಭಾಗವನ್ನು ಕೇಂದ್ರದ ನಾಯಕರೇ ನೇರವಾಗಿ ನಡೆಸುತ್ತಿದ್ದು, ರಾಜ್ಯ ನಾಯಕರಾದ ಶ್ರೀರಾಮುಲು, ಬಿಎಎಸ್‍ವೈ, ಆರ್ ಆಶೋಕ್ ಸೇರಿದಂತೆ ಕೆಲ ನಾಯಕರಿಗೆ ಮಾತ್ರ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ. ಈಗಾಗಲೇ ಬಿಎಸ್‍ವೈ ಅವರ ಜೆಡಿಎಸ್‍ನ ಕೆಲ ಅತೃಪ್ತ ಶಾಸಕರ ಸಂಪರ್ಕ ಬೆಳೆಸಿ ಮನವೊಲಿಸುವ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ.

    ಒಂದು ವೇಳೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೇ ಇದ್ದರೆ ಸಾಬೀತು ಪಡಿಸುವ ವೇಳೆ ಸದನಕ್ಕೆ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಬರದಂತೆ ತಡೆಯಬೇಕು. ಇದು ಕೊನೆಯ ಅಸ್ತ್ರವಾಗಿದ್ದು, ಕನಿಷ್ಠ 10 ರಿಂದ 15 ಶಾಸಕರು ಗೈರು ಹಾಜರಾಗುವಂತೆ ನೋಡಿಕೊಂಡರೆ ಬಹುಮತ ಸಾಬೀತು ಪಡಿಸಬಹುದು ಎನ್ನುವ ಪ್ಲಾನ್ ಬಿಜೆಪಿ ಹಾಕಿಕೊಂಡಿದೆ.

  • ಕೈ, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತಿದ್ದು ನಾವು ಏನು ಮಾಡೋಣ: ಪ್ರಕಾಶ್ ರೈ ಪ್ರಶ್ನೆ

    ಕೈ, ಬಿಜೆಪಿ, ಜೆಡಿಎಸ್ ಎದುರು ಕೊನೆಗೂ ಸೋತಿದ್ದು ನಾವು ಏನು ಮಾಡೋಣ: ಪ್ರಕಾಶ್ ರೈ ಪ್ರಶ್ನೆ

    ಬೆಂಗಳೂರು:ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷದ ವಿರುದ್ಧ ಕೋಮುವಾದಿ ಪಕ್ಷ ಎಂದು ಆರೋಪಿಸಿ ಪ್ರಚಾರ ನಡೆಸಿದ್ದ ಬಹು ಭಾಷಾ ನಟ ಪ್ರಕಾಶ್ ರೈ, ಇಂದಿನ ರಾಜಕೀಯ ನೇತರಾರರ ನಡೆ ಕಂಡು ಏನು ಮಾಡೋಣ ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಸ್ಟ್ ಮಾಡಿರುವ ಪ್ರಕಾಶ್ ರೈ, ನಮ್ಮ ಕ್ಷೇತ್ರದ ಪ್ರತಿನಿಧಿಗಳ ಮೇಲೆ ನಾವಿಟ್ಟ ನಂಬಿಕೆಯನ್ನು, ಇವರು ಇನ್ಯಾರಿಗೋ ಮಾರಿಕೊಳ್ಳುವುದನ್ನು ಬೇರೆ ದಾರಿಯಿಲ್ಲದೇ ಈ ರಾಜಕಾರಣಿಗಳ ಆಟವನ್ನು ನಾವು ಒಪ್ಪಿಕೊಳ್ಳವಂತೆ ಮಾಡಿದೆ. ಸದ್ಯ ನಮ್ಮ ಮೇಲೆ ಅಭಿಪ್ರಾಯ ಹೇರುವುದು ನಾವು ಪ್ರಶ್ನಿಸದಿದ್ದರೆ, ನಮ್ಮ ಈ ಅಸಹಾಯಕತೆಗೆ ಹಾಗೂ ಅಮಾಯಕತೆಯ ದುರುಪಯೋಗಕ್ಕೆ ಯಾರು ಕಾರಣವೆಂದು ನಾವು ಬೇಗ ಗೊತ್ತು ಮಾಡಿಕೊಳ್ಳದಿದ್ದರೆ ಮತ್ತೊಮ್ಮೆ ಸೋಲುವುದು ನಾವೇ ಎಂದು ಬರೆದುಕೊಂಡಿದ್ದಾರೆ.

    ಕರ್ನಾಟಕದ ಸಂವಿಧಾನಿಕ ಸರ್ಕಾರದ ರಚನೆಯ ಕಸರತ್ತು ಆರಂಭವಾಗಿದೆ. ಪ್ರಜೆಗಳಿಗೆ ಈ ಕುರಿತು ಸುದ್ದಿ ನೀಡಬೇಕಾಗುವುದರ ಬದಲು ಯಾರು, ಯಾವ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಪಡೆಯುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

    ಯಾರಿಗೂ ಬಹುಮತ ಬರದ ಚುನಾವಣೆಯ ಫಲಿತಾಂಶದ ನಂತರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಬ್ಬರನ್ನೊಬ್ಬರು ಕೊಳ್ಳುವ ಮಾರುವ ವ್ಯಾಪಾರಕ್ಕಿಳಿಯುತ್ತಾರೆ. ನಮ್ಮ ಅನುಮತಿಯಿಲ್ಲದೆ, ತಮ್ಮ ಶಕ್ತ್ಯಾನುಸಾರ ದಕ್ಕಿದ್ದನ್ನು ಹಂಚಿಕೊಂಡು, ಭಿನ್ನಾಭಿಪ್ರಾಯ ಮರೆತು, ವಿಧಾನಸೌಧದೊಳಗೆ ಒಂದಾಗಿ ಓಡಾಡುತ್ತ ಮುಂದಿನ ಚುನಾವಣೆಯವರೆಗೆ ಆರಾಮಾಗಿರುತ್ತಾರೆ ಎಂದು ಟೀಕೆ ಮಾಡಿದ್ದಾರೆ.

    ರಾಜ್ಯ ರಾಜಕಾರಣದ ಕುರಿತು ನಿರಂತರವಾಗಿ ಟೀಕೆ ಮಾಡುತ್ತಿರುವ ಪ್ರಕಾಶ್ ರೈ, ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ನಡೆಗಳ ಕುರಿತು ಹ್ಯಾಪಿ ವಿವೀಂಗ್ ಎಂಬ ಹೆಸರಿನೊಂದಿಗೆ ವ್ಯಂಗ್ಯವಾಡಿ ಟೀಕೆ ಮಾಡುತ್ತಿದ್ದಾರೆ.

    ಚುನಾವಣೆಗೂ ಮೊದಲು ಬಿಜೆಪಿ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿ ಬಿಜೆಪಿಗೆ ಮತ ನೀಡದಂತೆ ಪ್ರಕಾಶ್ ರೈ ಮನವಿ ಮಾಡಿದ್ದರು. ತಾವು ಯಾವುದೇ ಪಕ್ಷದ ಪರ ಪ್ರಚಾರ ನಡೆಸುತ್ತಿಲ್ಲ ಆದರೆ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತಿರುವುದಾಗಿ ತಿಳಿಸಿದ್ದರು. ಈ ವೇಳೆ ಮುಂದಿನ ಸರ್ಕಾರದ ರಚನೆ ಬಳಿಕವೂ ತಾವು ವಿರೋಧಿ ಸ್ಥಾನದಲ್ಲಿ ನಿಂತು ಜನರಿಗೆ ಪ್ರಶ್ನೆ ಕೇಳಲು ಪ್ರೇರಣೆ ನೀಡುವುದಾಗಿ ಹಾಗೂ ನಿರಂತರ ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು.

  • ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ: ರಾಹುಲ್ ಗಾಂಧಿ

    ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿದೆ: ರಾಹುಲ್ ಗಾಂಧಿ

    ನವದೆಹಲಿ: ಕರ್ನಾಟಕ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

    ಛತ್ತೀಸ್‍ಗಢದ ರಾಯಪುರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶಾಸಕರು ಒಂದೆಡೆ ನಿಂತಿದ್ದರೆ, ರಾಜ್ಯಪಾಲರೇ ಒಂದೆಡೆ ನಿಂತಿದ್ದಾರೆ. ಈಗಾಗಲೇ ತನ್ನ ಶಾಸಕರಿಗೆ 100 ಕೋಟಿ ರೂ. ಆಫರ್ ನೀಡಲಾಗುತ್ತಿದೆ ಎಂದು ಜೆಡಿಎಸ್ ಹೇಳಿದೆ. ಈ ಮೂಲಕ ಇಂದು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗಿದೆ ಹೇಳಿದರು.

    ಇದೇ ವೇಳೆ ಆರ್ ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ರಾಷ್ಟ್ರದಲ್ಲಿರುವ ಎಲ್ಲಾ ಉನ್ನತ ಸಂಸ್ಥೆಗಳಿಗೆ ಆರ್ ಎಸ್‍ಎಸ್ ಎಂಟ್ರಿ ಕೊಡುತ್ತಿದೆ. ಪಾಕಿಸ್ತಾನದ ಹಾಗೇ ಇಲ್ಲಿಯೂ ಸರ್ವಾಧಿಕಾರ ನಡೆಯುತ್ತಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಇಲ್ಲದೇ ಇದ್ದರೂ ಸಹ ಬಿಜೆಪಿ ಪಕ್ಷ ಸರ್ಕಾರ ರಚಿಸಲು ಮುಂದಾಗಿದೆ. ಇದು ವಿವೇಚನಾ ರಹಿತ ಕಾರ್ಯವಾಗಿದ್ದು, ಈ ನಡೆ ಸಂವಿಧಾನದಕ್ಕೆ ಅಪಾಯಕಾರಿ. ಇಂದು ಬೆಳಗ್ಗೆ ಬಿಜೆಪಿ ಪಕ್ಷ ತನ್ನ ಜಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಭಾರತ ಮಾತ್ರ ಪ್ರಜಾಪ್ರಭುತ್ವದ ಸೋಲಿನಿಂದ ದುಃಖಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

    ಬಿಜೆಪಿಗೆ ಸ್ಪಷ್ಟ ಬಹುಮತವಿಲ್ಲದೇ ಇದ್ದರೂ ಸಹ ಬಿಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದನ್ನು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಬಿಜೆಪಿ ರಾಜ್ಯಪಾಲರಿಗೆ ಸಲ್ಲಿಸಿದ ಪತ್ರದಲ್ಲಿ ತನ್ನ ಶಾಸಕರ ಸಂಖ್ಯೆಯನ್ನು 104ಕ್ಕಿಂತ ಹೆಚ್ಚಿದೆ ಎಂದು ನಮೂದಿಸಿಲ್ಲ. ಆಲ್ಲದೇ ಗೌವರ್ನರ್ ಅವರ ಆಮಂತ್ರಣ ಪತ್ರದಲ್ಲೂ ಯಾವುದೇ ಸಂಖ್ಯೆ ನಮೂದಿಸಿಲ್ಲ ಎಂದು ಬರೆದು ಕೊಂಡಿದ್ದು, ಬಿಎಸ್‍ವೈ ಅವರಿಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬುದನ್ನು ನಮೂದಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

  • ಸಿಎಂ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಬಿಎಸ್‍ವೈಯಿಂದ ರೈತರಿಗೆ ಗುಡ್ ನ್ಯೂಸ್!

    ಸಿಎಂ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಬಿಎಸ್‍ವೈಯಿಂದ ರೈತರಿಗೆ ಗುಡ್ ನ್ಯೂಸ್!

    ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ 9 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.

    ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಿನ ರೈತ ಸಮೂಹಕ್ಕೊಂದು ಭರವಸೆ ನೀಡಿದ್ದೆ. ಮುಖ್ಯಮಂತ್ರಿಯಾದ ತಕ್ಷಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ಸಾಲಮನ್ನಾ ಹಾಗೆಯೇ ಸಹಕಾರಿ ಸಂಘದ ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದೆ. ಈ ವಿಷಯದ ಬಗ್ಗೆ ಈಗಾಗಲೇ ಸಂಬಂಧಪಟ್ಟವರಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ಅವರು ಅಂಕಿ-ಅಂಶಗಳನ್ನು ನೋಡಿ ಸಂಜೆಯೊಳಗೆ ಅಥವಾ ನಾಳೆ ಬೆಳಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಹೇಳಿದ್ರು.

    ಜನರ ಬೆಂಬಲ ನನ್ನಪರ ಇದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೈತಿಕವಾಗಿ ಚುನಾವಣಾ ಫಲಿತಾಂಶದ ನಂತರ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಜನರ ಬೆಂಬಲ ನನ್ನ ಹಾಗೂ ಪಕ್ಷದ ಪರ ಇದೆ. ಈ ವಿಚಾರದಲ್ಲಿ ನಾನು ನೂರಕ್ಕೆ ನೂರು ಯಶಸ್ಸನ್ನು ಕಾಣುತ್ತೇನೆಂಬ ವಿಶ್ವಾಸ ನನಗಿದೆ ಎಂದರು.

    ಬಿಜೆಪಿ ಸರ್ಕಾರ ರಚಿಸಬೇಕು ಎಂಬ ಜನಾದೇಶವನ್ನು ಒಪ್ಪುವ ಬಹಳಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಇದ್ದಾರೆ. ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ತಮಗೆ ಬೆಂಬಲವನ್ನು ಕೊಡಬೇಕು ಅಂತ ವಿನಂತಿಸುತ್ತೇನೆ. ಅಲ್ಲದೇ ಅವರು ಆತ್ಮಸಾಕ್ಷಿಯಾಗಿ ಬಿಜೆಪಿಗೆ ತಮ್ಮ ಮತವನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

    ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಬಹುಮತ ಇಲ್ಲದಾಗ ಆತ್ಮಸಾಕ್ಷಿಯಂತೆ ಮತ ನೀಡಿ ಅಂತ ವಿನಂತಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಗೆದ್ದು ಯಶಸ್ಸು ಕಂಡಿದ್ದರು ಎಂಬುದು ಈ ದೇಶದ ಜನರಿಗೆ ಗೊತ್ತಿರುವ ವಿಚಾರವಾಗಿದೆ. ಹೀಗಾಗಿ 224 ಶಾಸಕರು ಕೂಡ ತಮ್ಮ ಆತ್ಮಸಾಕ್ಷಿಯಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ನನಗಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

    ಸರ್ವೋಚ್ಛ ನ್ಯಾಯಾಲಯದಲ್ಲಿ ಈ ವಿಚಾರ ಇರುವುದರಿಂದ ವಿಶ್ವಾಸ ಮತದ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕ. ಹೀಗಾಗಿ ರಾಜ್ಯದ ಎಲ್ಲಾ ಜನತೆಗೆ ಹಾಗೂ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಿದ್ರು.

  • ಬಿಎಸ್‍ವೈ ನಿವಾಸದಲ್ಲಿ ಪೂಜೆ ಪುನಸ್ಕಾರ – ಸಿಎಂ ಆಗುವ ಬಿಎಸ್‍ವೈ ಗೆ ಮಗನಿಂದ ಗಿಫ್ಟ್

    ಬಿಎಸ್‍ವೈ ನಿವಾಸದಲ್ಲಿ ಪೂಜೆ ಪುನಸ್ಕಾರ – ಸಿಎಂ ಆಗುವ ಬಿಎಸ್‍ವೈ ಗೆ ಮಗನಿಂದ ಗಿಫ್ಟ್

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಇಂದು ಸುಮಾರು ಬೆಳಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದು, ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿದ್ದಾರೆ.

    ಯಡಿಯೂರಪ್ಪ ನಿವಾಸದಲ್ಲಿ ಹಲವು ಆತಂಕಗಳ ನಡುವೆಯೂ ಸಂಭ್ರಮ ಮನೆ ಮಾಡಿತ್ತು. ಇಂದು ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಬೆಂಬಲಿಗರು, ಕುಟುಂಬದವರಿಂದ ತುಂಬಿ ತುಳುಕಿದೆ. ಅಷ್ಟೇ ಅಲ್ಲದೇ ಸ್ವಾಮೀಜಿಗಳೂ ಕೂಡ ಧವಳಗಿರಿಗೆ ಬಂದು ನಿಮಗೇನು ಆಗಲ್ಲ. ನೀವೇ ಸಿಎಂ ಎಂದು ಆಶೀರ್ವಾದಿಸಿ ಬಿಎಸ್‍ವೈಗೆ ಧೈರ್ಯ ತುಂಬಿದ್ದಾರೆ.

    ಅಷ್ಟೇ ಅಲ್ಲದೇ ಬಿಎಸ್‍ವೈ ನಿವಾಸದಲ್ಲಿ ವಿಶೇಷ ಪೂಜೆಗಳು ನಡೆದಿವೆ. ಬುಧವಾರ ಕೂಡ ಮಲ್ಲೇಶ್ವರಂ ನಲ್ಲಿರು ಬಿಜೆಪಿಯ ಕಚೇರಿಯಲ್ಲೂ ಕೂಡ ಪೂಜೆ-ಹೋಮ ನೆರವೇರಿದೆ. ಈ ವೇಳೆ ಯಡಿಯೂರಪ್ಪ ಮಗ ವಿಜಯೇಂದ್ರ ಅಪ್ಪನಿಗಾಗಿ ಹೊಸ ಡ್ರೆಸ್ ನೀಡಿದ್ದಾರೆ. ಮಲ್ಲೇಶ್ವರಂನ ವಿಜಯೇಂದ್ರ ತಮ್ಮ ಮನೆಯಿಂದ ಬಿಳಿ ಬಣ್ಣದ ಸೂಟ್ ತಂದು ಕೊಟ್ಟಿದ್ದಾರೆ.

    ಸದ್ಯಕ್ಕೆ ಯಡಿಯೂರಪ್ಪ ಸಂಜಯ್ ನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರಾಜಭವನಕ್ಕೆ ತೆರಳಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • ರಾಜಭವನದಲ್ಲಿ ಮನೆ ಮಾಡಿದ ಸಂಭ್ರಮ – 16,000 ಪೊಲೀಸ್ ಭದ್ರತೆ

    ರಾಜಭವನದಲ್ಲಿ ಮನೆ ಮಾಡಿದ ಸಂಭ್ರಮ – 16,000 ಪೊಲೀಸ್ ಭದ್ರತೆ

    ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜ್ಯದ 27ನೇ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ರಾಜಭನದಲ್ಲಿ ಬಿಎಸ್‍ವೈ ಪ್ರಮಾಣ ವಚನ ಸ್ವೀಕಾರಮಾಡಲಿದ್ದು, ಇದಕ್ಕಾಗಿ ರಾಜಭವನದಲ್ಲಿ ಸಲಕ ಸಿದ್ಧತೆ ಕೂಡ ನಡೆದಿದೆ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರದ ಪ್ರಯುಕ್ತ ವೀರಗಾಸೆ ನೃತ್ಯ ಮತ್ತು ಇತರೆ ಸಾಂಸ್ಕೃತಿಕ ಕಲಾಪ್ರಕಾರಗಳ ವೈಭವ ಏರ್ಪಟ್ಟಿದ್ದು, ರಾಜಭವನದ ಬಳಿ ಒಂದು ರೀತಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

    ಇತ್ತ ಇನ್ನೊಂದು ಕಡೆ ಮುಂಜಾಗೃತ ಕ್ರಮವಾಗಿ ರಾಜಭವನದಲ್ಲಿ 16 ಸಾವಿರ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ರಾಜಭವನದ ಸುಮಾರು 500 ಮೀಟರ್ ದೂರದಿಂದಲೂ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ರಾಜಭವನದ ಸುತ್ತಮುತ್ತಾ ಪೊಲೀಸ್ ಭದ್ರತೆ ಆಯೋಜಿಸಲಾಗಿದೆ.

    ಯಡಿಯೂರಪ್ಪ ಮನೆಯಿಂದ ಸುಮಾರು 8.30 ಕ್ಕೆ ಹೊರಡಲಿದ್ದು, ಬಿಎಸ್‍ವೈ ಜೊತೆ ಸುಮಾರು 500-1000 ಶಾಸಕರನ್ನು ರಾಜಭವನದ ಒಳಗೆ ಬಿಡುವ ಸಾಧ್ಯತೆ ಇದೆ. ಯಡಿಯೂರಪ್ಪ ಜೊತೆಗೆ 4 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶ್ರೀರಾಮುಲು, ಗೋವಿಂದ ಕಾರಜೋಳ, ಈಶ್ವರಪ್ಪ, ಆರ್.ಅಶೋಕ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕೂಡ ರಾಜಭವನದ ಬಳಿ ಬಂದು ಪ್ರತಿಭಟನೆ ಮಾಡುವ ಸಾಧ್ಯತೆ ಇರುವ ಕಾರಣ ಪೊಲೀಸರು ಎಲ್ಲದಕ್ಕೂ ಸಿದ್ಧರಾಗಿದ್ದಾರೆ.

  • ಮೋದಿ ಅಶ್ವಮೇಧ ಯಾಗದ ಕುದುರೆಯನ್ನ ಜೆಡಿಎಸ್ ಕಟ್ಟಿ ಹಾಕಿದೆ: ಎಚ್‍ಡಿಕೆ

    ಮೋದಿ ಅಶ್ವಮೇಧ ಯಾಗದ ಕುದುರೆಯನ್ನ ಜೆಡಿಎಸ್ ಕಟ್ಟಿ ಹಾಕಿದೆ: ಎಚ್‍ಡಿಕೆ

    ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅಶ್ವಮೇಧ ಯಾಗದ ಕುದುರೆಯನ್ನ ಜೆಡಿಎಸ್ ಕಟ್ಟಿ ಹಾಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ತಾನು ಹೋದ ಕಡೆಯಲೆಲ್ಲಾ ಗೆಲುವು ಸಾಧಿಸುತ್ತೇನೆ ಎಂದುಕೊಂಡಿದ್ದರು. ಗುಜರಾತ್ ಸೇರಿದಂತೆ ರಾಜ್ಯದ ಕೆಲವು ಕಡೆ ಗೆಲುವು ಸಾಧಿಸಿ ಕರ್ನಾಟಕವನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಈ ಹಿಂದೆಯೇ ನಾನು ಮೋದಿ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕುತ್ತೇನೆ ಎಂದು ಹೇಳಿದ್ದೆ. ಅದು ಇಂದು ಸತ್ಯವಾಗಿದೆ. ಇನ್ನು ಮಂಡ್ಯ ಜನತೆಗೆ, ರಾಮನಗರ, ಚನ್ನಪಟ್ಟಣ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಕೊನೆ ಉಸಿರಿರೋವರೆಗೂ ಅವಳಿ ನಗರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ವ್ಯವಸ್ಥೆ ರಕ್ಷಣೆ ಮಾಡುತ್ತಿಲ್ಲ. ಆಪರೇಷನ್ ಕಮಲ ಮಾಡಿದ್ದವರು ಬಿಜೆಪಿ ಅವರು. ಈಗ ಮತ್ತೆ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನತೆ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಎಲ್ಲಿ ಎಷ್ಟು ಸ್ಥಾನ ಗೆದ್ದಿದೆ?
    ಒಟ್ಟು 38 ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿದೆ. ಮಂಡ್ಯದ ಎಲ್ಲ 7 ಕ್ಷೇತ್ರಗಳನ್ನು ಗೆದ್ದ ಜೆಡಿಎಸ್ ಹಾಸನದ 7 ಕ್ಷೇತ್ರಗಳಲ್ಲಿ 6ನ್ನು ಗೆದ್ದುಕೊಂಡಿದೆ. ರಾಮನಗರದ 4 ಕ್ಷೇತ್ರದಲ್ಲಿ 3ರಲ್ಲಿ ಜಯ ಸಾಧಿಸಿದೆ. ತುಮಕೂರಿನ 11 ಕ್ಷೇತ್ರಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದರೆ, ಮೈಸೂರಿನ 11 ಕ್ಷೇತ್ರಗಳಲ್ಲಿ 5ರಲ್ಲಿ ಜಯ ಸಾಧಿಸಿದೆ. ವಿಜಯ ಪುರ ಮತ್ತು ಬೆಂಗಳೂರಿನಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಯಚೂರು, ಕೋಲಾರ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಬೀದರ್ ನಲ್ಲಿ 1 ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಂಡಿದೆ.

  • ಮೊದಲ ಶಾಸಕಾಂಗ ಸಭೆಯಲ್ಲೇ ಕೈ ನಾಯಕರ ಅಸಮಾಧಾನ ಸ್ಫೋಟ!

    ಮೊದಲ ಶಾಸಕಾಂಗ ಸಭೆಯಲ್ಲೇ ಕೈ ನಾಯಕರ ಅಸಮಾಧಾನ ಸ್ಫೋಟ!

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೊದಲ ಶಾಸಕಾಂಗ ಸಭೆಯಲ್ಲೇ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. ಕೆಲ ಕಾಂಗ್ರೆಸ್ ಮುಖಂಡರು ಪಕ್ಷದ ನಾಯಕರ ನಿರ್ಧಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಚುನಾವಣೆಯ ಬಳಿಕ ಜೆಡಿಎಸ್ ನೊಂದಿಗೆ ಮೈತ್ರಿ ರಾಜಕಾರಣಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಇಂದು ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಿತು. ಈ ವೇಳೆ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ಬಂದಾಗ ಕೆಲ ಶಾಸಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಕೆಲ ಕಡೆ ಗೆಲ್ಲುವ ಅಭ್ಯರ್ಥಿಗಳಿದ್ದರೂ ಅಂತಹವರಿಗೆ ಟಿಕೆಟ್ ನೀಡಿಲ್ಲ. ಕೇವಲ ಪ್ರಭಾವಿ ನಾಯಕರ ಹಿಂಬಾಲಕರಿಗೆ ಟಿಕೆಟ್ ನೀಡಲಾಗಿತ್ತು ಎಂದು ಶಾಸಕರು ಆರೋಪಿಸಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ದೊಡ್ಡ ತಪ್ಪಾಗಿದ್ದು, ಇದರಿಂದಾಗಿಯೇ ಪಕ್ಷಕ್ಕೆ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನು ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಕಣ್ಣೀರು!

    ಸಭೆಯಲ್ಲಿ ಪಕ್ಷಕ್ಕೆ ಬಹುಮತ ತರಲು ವಿಫಲರಾಗಿ ಸಿಎಂ ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದ್ದ ವೇಳೆಯೇ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದ ಹಲವು ಸಚಿವರು ಚುನಾವಣೆಯಲ್ಲಿ ಈ ಬಾರಿ ಗೆಲುವು ಪಡೆಯುವಲ್ಲಿ ವಿಫಲರಾಗಿದ್ದಾರೆ.

    ಪ್ರಮುಖವಾಗಿ ಸಚಿವೆ ಉಮಾಶ್ರೀ(ತೇರದಾಳ), ಎಚ್ ಎಂ ರೇವಣ್ಣ(ಚನ್ನಪಟ್ಟಣ), ಎಚ್ ಆಂಜನೇಯ (ಹೊಳಲ್ಕೆರೆ), ಎಚ್‍ಚಿ ಮಹದೇವಪ್ಪ (ಟಿ.ನರಸಿಪುರ), ಸಂತೋಷ್ ಲಾಡ್(ಕಲಘಟಗಿ), ವಿನಯ್ ಕುಲಕರ್ಣಿ (ಧಾರವಾಡ), ಗೀತಾಮಹದೇವ ಪ್ರಸಾದ್ (ಗುಂಡ್ಲುಪೇಟೆ), ರಮಾನಾಥ ರೈ (ಬಂಟ್ವಾಳ), ರುದ್ರಪ್ಪ ಲಮಾಣಿ (ಹಾವೇರಿ), ಪ್ರಮೋದ್ ಮಧ್ವರಾಜ್ (ಉಡುಪಿ), ಎ ಮಂಜು(ಅರಕಲಗೂಡು), ಟಿಬಿ ಜಯಚಂದ್ರ (ಶಿರಾ), ಶರಣ ಪ್ರಕಾಶ್ ಪಾಟೀಲ್ (ಸೇಡಂ), ಕಾಗೋಡು ತಿಮ್ಮಪ್ಪ (ಸಾಗರ), ಕೆಬಿ ಕೋಳಿವಾಡ (ರಾಣೆಬೆನ್ನೂರು), ಎಸ್ ಎಸ್ ಮಲ್ಲಿಕಾರ್ಜನ (ದಾವಣಗೆರೆ ಉತ್ತರ), ಬಸವರಾಯ ರೆಡ್ಡಿ (ಯಲಬುರ್ಗಾ) ಸೇರಿದಂತೆ ಒಟ್ಟು 17 ಸಚಿವರು ಈ ಬಾರಿ ಸೋಲಪ್ಪಿಕೊಂಡಿದ್ದಾರೆ. ಇದನ್ನು ಓದಿ: ಜೆಡಿಎಸ್ ಶಾಸಕರಿಗೆ 100 ಕೋಟಿ, ಸಚಿವ ಸ್ಥಾನದ ಆಫರ್ ಬಿಜೆಪಿ ಕೊಟ್ಟಿದೆ: ಕುಮಾರಸ್ವಾಮಿ

  • ಜೆಡಿಎಸ್ ಶಾಸಕರಿಗೆ 100 ಕೋಟಿ, ಸಚಿವ ಸ್ಥಾನದ ಆಫರ್ ಬಿಜೆಪಿ ಕೊಟ್ಟಿದೆ: ಕುಮಾರಸ್ವಾಮಿ

    ಜೆಡಿಎಸ್ ಶಾಸಕರಿಗೆ 100 ಕೋಟಿ, ಸಚಿವ ಸ್ಥಾನದ ಆಫರ್ ಬಿಜೆಪಿ ಕೊಟ್ಟಿದೆ: ಕುಮಾರಸ್ವಾಮಿ

    ಬೆಂಗಳೂರು: ನಮ್ಮ ಪಕ್ಷದ ಶಾಸಕರಿಗೆ ಬಿಜೆಪಿ 100 ಕೋಟಿ ಮತ್ತು ಸಚಿವ ಸ್ಥಾನದ ಆಫರ್ ನೀಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‍ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

    ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಶಾಸಕರೆಲ್ಲಾ ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟು ಮುರಿಯಲು ಬಿಜೆಪಿಯಿಂದ ಸಾಧ್ಯವಿಲ್ಲ. ಕಪ್ಪು ಹಣ ಕೊಡುತ್ತಾರೋ ಅಥವಾ ಬಿಳಿ ಹಣ ಕೊಡುತ್ತಾರೋ ಹೇಳಬೇಕು. ಕಪ್ಪು ಹಣವನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಸಂವಿಧಾನದ ಸಂಸ್ಥೆಗಳನ್ನು ಬಿಜೆಪಿ ತನ್ನ ಕೈಯಲ್ಲಿ ಇಟ್ಟುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ವ್ಯವಸ್ಥೆ ರಕ್ಷಣೆ ಮಾಡುತ್ತಿಲ್ಲ. ಆಪರೇಷನ್ ಕಮಲ ಮಾಡಿದ್ದವರು ಬಿಜೆಪಿ ಅವರು. ಈಗ ಮತ್ತೆ ಕುದುರೇ ವ್ಯಾಪಾರಕ್ಕೆ ಮುಂದಾಗಿದ್ದಾರೆ. ರಾಜ್ಯದ ಜನತೆ ಈ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

    10 ದಿನಗಳಿಂದ ಮಾಧ್ಯಮಗಳಿಗೆ ತೊಂದರೆ ಆಗಿರುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ. ನಾಡಿನ ಜನತೆಗೆ, ಪಕ್ಷದ ನಾಯಕರು, ಕಾರ್ಯಕರ್ತರು, ಬಿಎಸ್‍ವೈ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಫಲಿತಾಂಶ ನನಗೆ ಸಂತೋಷ ತಂದಿಲ್ಲ. ನಾಡಿನ ಅಭಿವೃದ್ಧಿಗೆ ಜನ ಉತ್ತಮ ನಿರ್ಧಾರ ಮಾಡಿಲ್ಲ ಅನ್ನೋ ಕೊರಗಿದೆ ಎಂದರು.

    ಕೆಲವು ಕೃತಕ ವಿಷಯ ಸೃಷ್ಟಿಸಿದ್ದರಿಂದ ಈ ಫಲಿತಾಂಶ ಬಂದಿದೆ. ಕೆಲವರು ಜೆಡಿಎಸ್ ನ ಮುಗಿಸಲು ಹೋಗಿ ಬಿಜೆಪಿಗೆ 104 ಸ್ಥಾನ ಬಂದಿದೆ. ಸರಿಯಾಗಿ ಇದ್ದಿದ್ದರೆ ಬಿಜೆಪಿಗೆ 80 ಸ್ಥಾನ ಬರುತ್ತಿರಲಿಲ್ಲ. ಮೋದಿ ಅವರು ಬಹುಮತ ಇಲ್ಲದೇ ಇದ್ದರೂ ಸರ್ಕಾರ ಮಾಡಬಾರದು ಅಂತ ಮುಂದಾಗಿದ್ದಾರೆ. ಮೋದಿ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮೋದಿ ಅವರ ಸ್ಥಾನಕ್ಕೆ ಅದು ಶೋಭೆ ತರಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್ ನಮ್ಮನ್ನು ಬೆಂಬಲಿಸಿರುವುದಕ್ಕೆ ವೈಯಕ್ತಿಕ ಕೃತಜ್ಞತೆ ಸಲ್ಲಿಸುತ್ತೇನೆ. ಅಧಿಕಾರ ಹಿಡಿಯುವ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ. ಈ ರೀತಿ ಮುಖ್ಯಮಂತ್ರಿ ಆಗುವ ತೀರ್ಪನ್ನು ಜನ ನೀಡಿದ್ದಾರೆ. ಬಿಜೆಪಿಯವರು ಅಧಿಕಾರ ಹಿಡಿಯಲು ಹೋಗುತ್ತಿದ್ದಾರೆ. ಬಿಜೆಪಿಗೆ 9 ಸ್ಥಾನ ಕೊರತೆ ಇದೆ. ನಾವು 116 ಸ್ಥಾನ ಪಡೆದಿದ್ದೇವೆ. ಜೆಡಿಎಸ್-ಕಾಂಗ್ರೆಸ್ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ರಾಜ್ಯಪಾಲರಿಗೆ ನಾಗಲ್ಯಾಂಡ್, ಮಣಿಪುರಿಯ ಚಿತ್ರಣ ನೀಡಿದ್ದೇವೆ. ಅಲ್ಲಿ ಬಿಜೆಪಿ ಕಡಿಮೆ ಇದ್ದರೂ ಅಧಿಕಾರ ಹಿಡಿದಿದೆ. ಅಲ್ಲಿ ಅವರು ಅಧಿಕಾರ ಪಡೆಯಬಹುದು. ನಾವು ಪಡೆಯಬಾರದಾ ಎಂದು ಪ್ರಶ್ನಿಸಿದರು.

    ಪ್ರಧಾನ ಮಂತ್ರಿಯನ್ನ ಸುಲಭವಾಗಿ ಬಿಟ್ಟು ಬಂದ ಕುಟುಂಬ ನಮ್ಮದು. ನನ್ನ ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜೊತೆ ಹೊಂದಾಣಿಕೆ ಹಿಂದೆ ಮಾಡಿಕೊಂಡಿದ್ದೆ. ಆಗ ಯಡಿಯೂರಪ್ಪ ಸೇರಿದಂತೆ 40 ಶಾಸಕರು ಕಾಂಗ್ರೆಸ್, ಜೆಡಿಎಸ್ ಸೇರೋಕೆ ಮುಂದಾಗಿದ್ದರು. ಆದರೆ ನಾನು ಅವತ್ತು ಯಡಿಯೂರಪ್ಪರನ್ನ ದಾರಿ ತಪ್ಪಿಸಿಲ್ಲ. ಆದರೆ ಅವತ್ತು ತಂದೆಯವರ ಮಾತಿಗೆ ವಿರುದ್ಧವಾಗಿ ಹೋದೆ. ನಮ್ಮ ತಂದೆಯವರಿಗೆ ಕಪ್ಪು ಚುಕ್ಕಿ ತಂದಿದ್ದೇನೆ. ಶಾಸಕರ ಅಭಿಪ್ರಾಯದ ಮೇರೆಗೆ ಕಾಂಗ್ರೆಸ್ ಜೊತೆ ಹೋಗಲು ತೀರ್ಮಾನ ಮಾಡಿದ್ದೇನೆ. ಎರಡು-ಮೂರು ಶಾಸಕರು ಇನ್ನು ಬರಬೇಕು. ಎರಡು ಪಕ್ಷದ ಕಡೆಯಿಂದ ನನಗೆ ಆಫರ್ ಇದೆ. ಆದರೆ ನನ್ನಿಂದ ಆಗಿರುವ ಕಪ್ಪು ಚುಕ್ಕಿ ತೊಡೆದು ಹಾಕಲು ನಾನು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದೇನೆ ಎಂದು ಹೇಳಿದರು.

    ಕರ್ನಾಟಕದಲ್ಲಿ ನಾನೇನು ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆಯಿಲ್ಲ. 2006 ರಲ್ಲಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. 20 ತಿಂಗಳು ಅಧಿಕಾರ ಮಾಡಿದ್ದೇನೆ. ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿ ಆಗಿದ್ದೇನೆ. ಜನರಿಂದ ಆದ ಮುಖ್ಯಮಂತ್ರಿ ಅಲ್ಲ ಅನ್ನೋ ನೋವಿದೆ. ನಾವು ಅಧಿಕಾರಕ್ಕಾಗಿ ಹಿಂದೆ ಹೋದವರಲ್ಲ ಎಂದು ಮೋದಿ ಅವರಿಗೆ ಪ್ರಶ್ನಿಸಿದರು.

    ಶೃಂಗೇರಿ ತಾಯಿಯ ಆಶೀರ್ವಾದದಿಂದ ಮತ್ತೆ ಅವಕಾಶ ಬಂದಿದೆ. ದೇವೇಗೌಡರ ಜಾತ್ಯಾತೀತ ನಿಲುವಿಗೆ ಕಪ್ಪು ಚುಕ್ಕಿ ಹೊಡೆದು ಹಾಕಲು ಈ ನಿರ್ಧಾರ ಮಾಡಿದ್ದೇನೆ. ತೃತೀಯ ರಂಗದ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಹೇಳಿದ್ದಾರೆ. ಮಾನಸಿಕವಾಗಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಜನರ ಜಾತಿ ವ್ಯಾಮೋಹದಿಂದ ಈ ರಿಸಲ್ಟ್ ಬಂದಿದೆ. ಜನರ ಈ ನಿರ್ಧಾರ ನನ್ನ ವಿಷನ್ ಸಂಪೂರ್ಣ ಮಾಡುವುದಕ್ಕೆ ಆಗುತ್ತೊ ಇಲ್ಲವೋ ಗೊತ್ತಿಲ್ಲ ಎಂದರು.