Tag: karnataka elections

  • 2018ರ ಕರ್ನಾಟಕದ ಟಾಪ್ ಸುದ್ದಿಗಳು

    2018ರ ಕರ್ನಾಟಕದ ಟಾಪ್ ಸುದ್ದಿಗಳು

    ಬೆಂಗಳೂರು: ಈ ಬಾರಿ ಕರ್ನಾಟಕ ಚುನಾವಣೆ ದೇಶದ ಗಮನ ಸೆಳೆದಿತ್ತು. ಚುನಾವಣೆಯ ಇದ್ದ ಕಾರಣ ಜನವರಿಯಿಂದ ಮೇ ವರೆಗೆ ಚುನಾವಣಾ ಸುದ್ದಿಗಳು ಪ್ರಾಮುಖ್ಯತೆ ಪಡೆದಿದ್ದರೆ ನಂತರ ಸರ್ಕಾರದ ಭಿನ್ನಮತ, ಸಂಪುಟ ವಿಸ್ತರಣೆ ಕಸರತ್ತು ಸುದ್ದಿಗಳು ಹೆಚ್ಚು ಚರ್ಚೆಯಾಗುತಿತ್ತು. ಇದರ ಜೊತೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ದುರಂತ ನಡೆದು ಸಾವಿರಾರು ಮಂದಿ ಸಂತ್ರಸ್ತರಾದರು. ಹೀಗಾಗಿ ಇಲ್ಲಿ ಈ ವರ್ಷ ಕರ್ನಾಟಕದಲ್ಲಿ ನಡೆದ ಟಾಪ್ ಸುದ್ದಿಗಳ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.

    ಕರ್ನಾಟಕ ಚುನಾವಣೆ:
    2018 ರಾಜ್ಯ ವಿಧಾನಸಭಾ ಚುನಾವಣೆ ಈ ಬಾರಿ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ದೇಶದ ಪ್ರಮುಖ ರಾಜ್ಯಗಳಲ್ಲಿ ಸತತವಾಗಿ ಗೆಲುವು ಪಡೆದಿದ್ದ ಬಿಜೆಪಿಗೆ ದಕ್ಷಿಣ ಭಾರತವನ್ನು ಪ್ರವೇಶ ಮಾಡಲು ಇದ್ದ ಏಕೈಕ ರಾಜ್ಯ ಕರ್ನಾಟಕವಾಗಿದ್ದ ಕಾರಣ ಪ್ರತಿಷ್ಠೆಯ ಕಣವಾಗಿದ್ದರೆ, ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‍ಗೆ ರಾಜ್ಯವನ್ನು ಉಳಿಸಿಕೊಳ್ಳುವ ಮೂಲಕ ಮತ್ತೆ ರಾಷ್ಟ್ರದಲ್ಲಿ `ಮಹಾಘಟ ಬಂಧನ್’ಗೆ ಶಕ್ತಿ ತುಂಬುವ ಕೇಂದ್ರವಾಗಿತ್ತು. ಇದರ ಪರಿಣಾಮವಾಗಿ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಮಾವೇಶಗಳನ್ನು ನಡೆಸಿ ಪಕ್ಷದ ಪರ ಪ್ರಚಾರ ಕೈಗೊಂಡಿದ್ದರು. ಚುನಾವಣೆಯ ಅಂತಿಮ ಫಲಿತಾಂಶ ಬಂದಾಗ ಆಡಳಿತ ಪಕ್ಷವಾದ ಕಾಂಗ್ರೆಸ್ ಕೇವಲ 78 ಸ್ಥಾನ ಪಡೆದಿದ್ದರೆ, ಬಿಜೆಪಿ 104 ಹಾಗೂ ಜೆಡಿಎಸ್ 37 ಸ್ಥಾನ, ಬಿಎಸ್‍ಪಿ 1 ಸ್ಥಾನ ಪಡೆಯುವ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು.

    ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದಂತೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪವರು ಸರ್ಕಾರ ರಚನೆ ಮಾಡಲು ಅವಕಾಶ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದರೆ, ಇತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಬಹಿರಂಗ ಬೆಂಬಲ ನೀಡುವ ಮೂಲಕ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾಯಿತು.

    ರಾಜ್ಯಪಾಲರು 15 ದಿನಗಳ ಕಾಲ ಬಿಜೆಪಿಗೆ ಕಾಲಾವಕಾಶ ನೀಡಿದರೆ, ಇತ್ತ ಇದನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ರಾಜ್ಯಪಾಲರ ಆದೇಶದ ಸಮಯವನ್ನು ಕಡಿಮೆ ಮಾಡಿದರು. ಇದರ ನಡುವೆಯೇ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದ ಯಡಿಯೂರಪ್ಪ ಅವರು ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್, ಹೋಟೆಲ್‍ಗಳಲ್ಲಿ ತಂಗುವಂತೆ ಮಾಡಿ ಆಪರೇಷನ್ ಕಮಲ ವಿಫಲ ಮಾಡಿದರು. ಅಂತಿಮವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡಿಸುವ ಮೂಲಕ ಸರ್ಕಾರ ರಚನೆ ಮಾಡಿತು.

    ಸುಳ್ವಾಡಿ ದುರಂತ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಡಿಸೆಂಬರ್ 14 ರ ಶುಕ್ರವಾರ ಗೋಪುರದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿತ್ತು. ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದ ಬಳಿಕ, ಭಕ್ತರು ಪ್ರಸಾದದ ರೂಪದಲ್ಲಿ ರೈಸ್ ಬಾತ್ ಸೇವಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ರೈಸ್ ಬಾತ್ ಸೇವಿಸಿದ್ದ 100 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಿದ್ದರು. ಪ್ರಸಾದದಲ್ಲಿ ಆರ್ಗಾನ್ ಪಾಸ್ಫರಸ್ ಕಾಂಪೌಂಡ್ ಮೋನೋಕ್ರೋಟೋಫೋಸ್ ಎಂಬ ಕ್ರಿಮಿನಾಶಕ ಮಿಶ್ರಣವಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು. ಈ ಕ್ರಿಮಿನಾಶಕ ಮಿಶ್ರಣ ಮಾಡಿದ್ದ ಪ್ರಸಾದ ಸೇವಿಸಿದ್ದರ ಪರಿಣಾಮ ಇದುವರೆಗೂ 16 ಮಂದಿ ಮೃತಪಟ್ಟಿದ್ದರು. ಘಟನೆ ನಡೆದ 6 ದಿನಗಳ ಬಳಿಕ ಪ್ರಕರಣಕ್ಕೆ ಕಾರಣರಾಗಿದ್ದ ಪ್ರಮುಖ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕನಗನಮರಡಿ ಬಸ್ ದುರಂತ: ಜಿಲ್ಲೆಯ ಪಾಂಡವಪುರದ ಕನಗನಮರಡಿಯಲ್ಲಿ ನವೆಂಬರ್ 24 ರಂದು ನಡೆದ ಬಸ್ ದುರಂತ ಪ್ರಕರಣ 30 ಮಂದಿಯನ್ನು ಬಲಿ ಪಡೆಯಿತು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಕನಗನಮರಡಿ ವಿಸಿ ನಾಲೆಗೆ ಉರುಳಿತ್ತು. ಇದರಿಂದ ಬಸ್ಸಿನಲ್ಲಿದ್ದ 30 ಮಂದಿ ಜಲಸಮಾಧಿಯಾದರು. ಬಸ್ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರು ಮಾತ್ರ ಜೀವ ರಕ್ಷಿಸಿಕೊಂಡಿದ್ದರು. ನಾಲೆಗೆ ತಡೆಗೋಡೆ ಇಲ್ಲದೆ ಇರುವುದು ಹಾಗೂ ಬಸ್ ಸೇವೆಗೆ ಯೋಗ್ಯವಲ್ಲದೇ ಇರುವುದು ದುರಂತಕ್ಕೆ ಪ್ರಮುಖ ಕಾರಣವಾಗಿತ್ತು.

    ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆಗೆ ಜನವರಿ 16 ರಂದು ರಾಜ್ಯ ಸರ್ಕಾರ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು. ಈ ಯೋಜನೆ ಮುಂದುವರಿಸಲು ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿತ್ತು. ಕೇಂದ್ರ ಸರ್ಕಾರ ಅನುಮತಿ ನೀಡಿದ್ದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿ ಈಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕರ್ನಾಟಕ ಸಂಸದರು ಡಿಸೆಂಬರ್ ನಲ್ಲಿ ದೆಹಲಿಯ ಡಿವಿಎಸ್ ನಿವಾಸದಲ್ಲಿ ಸಭೆ ನಡೆಸಿ ಒಗ್ಗಟ್ಟಿನಿಂದ ಹೋರಾಟ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.

    ಲಿಂಗಾಯತ ಧರ್ಮ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದ್ದ ಲಿಂಗಾಯತ ಧರ್ಮ ಹೋರಾಟ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಬೃಹತ್ ಮಟ್ಟದಲ್ಲಿ ನಡೆಯಿತು. ರಾಜ್ಯ ಸರ್ಕಾರವೂ ಈ ಕುರಿತು ಸಮಿತಿ ನೇಮಕ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಕಾಂಗ್ರೆಸ್ ಪಕ್ಷ ಕೆಲ ನಾಯಕರು ಪ್ರತ್ಯೇಕ ಧರ್ಮ ರಚನೆ ಮುಂದಾಳತ್ವ ವಹಿಸಿ ಚುನಾವಣೆ ಎದುರಿಸಿದ್ದರು, ಇದರದಲ್ಲಿ ಅಂದಿನ ಜಲಸಂಪ್ಮೂಲ ಸಚಿವ ಎಂ ಬಿ ಪಾಟೀಲ್ ಬಿಟ್ಟು ಉಳಿದ ಎಲ್ಲಾ ನಾಯಕರು ಸೋಲುಂಡಿದ್ದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತ್ಯೇಕ ಧರ್ಮ ವಿಚಾರವಾಗಿ ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಂತೆ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಮಡಿಕೇರಿ ಜಲ ಪ್ರಳಯ: ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿದ್ದ ಕೊಡಗು ಈ ಬಾರಿ ಮಹಾ ಮಳೆಯ ಹೊಡೆತಕ್ಕೆ ತತ್ತರಿಸಿತ್ತು. ಕಾಡು ಕಡಿದು ರೆಸಾರ್ಟ್ ನಿರ್ಮಾಣ, ಭೂಮಿಯ ಬಳಕೆಯಲ್ಲಾಗಿರುವ ಬದಲಾವಣೆ, ಅವೈಜ್ಞಾನಿಕವಾಗಿ ಹೋಂ ಸ್ಟೇಗಳ ನಿರ್ಮಾಣ, ನಿರಂತರವಾಗಿ ಸುರಿದ ಭಾರೀ ಮಳೆ, ಅರಣ್ಯ ನಾಶ ಮೊದಲಾದ ಕಾರಣಗಳಿಂದ ಕೊಡಗಿನಲ್ಲಿ ಭೂಕುಸಿತ ಉಂಟಾಗಿ ಜಲ ಪ್ರಳಯ ಸೃಷ್ಟಿಯಾಗಿತ್ತು. ಕೊಡಗಿನ ನೋವಿಗೆ ಮೀಡಿದ ಕನ್ನಡ ಹೃದಯಗಳು ಸಹಾಯ ಹಸ್ತವನ್ನು ಚಾಚಿ ಜನರಿಗೆ ನೆರವು ನೀಡಿದ್ದರು. ಹಲವು ಸಂಘ ಸಂಸ್ಥೆಗಳು ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವೂ ಕೂಡ ಪ್ರವಾಹ ಸಂತ್ರಸ್ತರ ನೆರವು ಘೋಷಿಸಿತ್ತು. ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆ 87 ವರ್ಷದ ಹಿಂದಿನ ದಾಖಲೆಯನ್ನು ಅಳಿಸಿಹಾಕಿತ್ತು. 1931ರಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,559 ಮಿ.ಮೀ ಮಳೆಯಾಗಿದ್ದರೆ ಆಗಸ್ಟ್ ನಲ್ಲಿ 1,675 ಮಿ.ಮೀ(ಆಗಸ್ಟ್ 21ರ ಅಂತ್ಯಕ್ಕೆ) ಮಳೆಯಾಗಿತ್ತು ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮಾಹಿತಿ ನೀಡಿತ್ತು.

    ದೀಪಕ್ ರಾವ್ ಹತ್ಯೆ: ವರ್ಷದ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ, ಇದರ ಬೆನ್ನಲ್ಲೇ ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಮಂಗಳೂರಿನಲ್ಲಿ ಬಶೀರ್ ಅವರನ್ನು ಕೊಲೆ ಮಾಡಲಾಗಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ ವಿಚಾರವನ್ನು ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಆಸ್ತ್ರವನ್ನಾಗಿ ಪ್ರಯೋಗಿಸಿ ಪ್ರಚಾರ ನಡೆಸಿತ್ತು. ಹಿಂದೂ ಕಾರ್ಯಕರ್ತರ ಹತ್ಯೆಯನ್ನು ತಡೆಯಲು ಸಿದ್ದರಾಮಯ್ಯ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಸೋತಿದೆ ಎನ್ನುವ ವಿಶ್ಲೇಷಣೆ ಕೇಳಿ ಫಲಿತಾಂಶ ಬಳಿಕ ಕೇಳಿ ಬಂದಿತ್ತು.

    ಗೌರಿ ಲಂಕೇಶ್ ಆರೋಪಿಗಳ ಬಂಧನ: ಯಾವುದೇ ಸಾಕ್ಷ್ಯಗಳು ಸಿಗದೇ ಪ್ಲಾನ್ ಮಾಡಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೊನೆಗೂ ಎಸ್‍ಐಟಿ ಬಂಧಿಸಿತ್ತು. ಕೋಕಾ ಅಡಿ ಪ್ರಕರಣ ದಾಖಲಿಸಿದ್ದ ಎಸ್‍ಐಟಿ ಒಟ್ಟು 18 ಮಂದಿಗಳನ್ನು ಬಂಧಿಸಿ 9,235 ಪುಟಗಳಿರುವ ಚಾರ್ಜ್ ಶೀಟನ್ನು ಕೋಕಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಪ್ರಧಾನ ಸಂಚುಕೋರ ಅಮುಲ್ ಕಾಳೆ ಎ1 ಆರೋಪಿಯಾಗಿದ್ದರೆ, ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಎ2 ಆರೋಪಿಯಾಗಿದ್ದಾನೆ.

    ಮಹದಾಯಿ ಐತೀರ್ಪು: ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಆಗಸ್ಟ್ 14 ರಂದು ನ್ಯಾ. ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಾಧಿಕರಣ ಐತೀರ್ಪು ಪ್ರಕಟಿಸಿತ್ತು. ಕುಡಿಯುವ ನೀರಿಗಾಗಿ ಕೇವಲ 5.5 ಟಿಎಂಸಿ ಸೇರಿದಂತೆ ಒಟ್ಟು ಕರ್ನಾಟಕಕ್ಕೆ ಒಟ್ಟು 13.7 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದೆ.

    ಮಹದಾಯಿ ನದಿಯಲ್ಲಿ ವಾರ್ಷಿಕವಾಗಿ ಲಭ್ಯವಿರುವ 188.06 ಟಿಎಂಸಿ ನೀರಿನಲ್ಲಿ 147 ಟಿಎಂಸಿ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗಲು ಬಿಟ್ಟಿರುವ ಮಹದಾಯಿ ಜಲವಿವಾದ ನ್ಯಾಯಾಧಿಕರಣ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ದೂರಿದೆ. ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ನದಿಯ ನೀರನ್ನು ನದಿಪಾತ್ರದ ರಾಜ್ಯಗಳಿಗೆ ಹಂಚಿಕೆ ಮಾಡುವಾಗ ಅನುಸರಿಸಬೇಕಾದ ‘ನ್ಯಾಯಸಮ್ಮತ ಹಂಚಿಕೆ’ ಸೂತ್ರವನ್ನು ಮಹದಾಯಿ ಜಲವಿವಾದ ನ್ಯಾಯಾಧಿಕರಣ ಅನುಸರಿಸಿಲ್ಲ ಎನ್ನುವುದನ್ನು ಕರ್ನಾಟಕ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಲಿಂಕನ್ ಹೇಳಿಕೆ ಬಳಸಿ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್

    ಲಿಂಕನ್ ಹೇಳಿಕೆ ಬಳಸಿ ಎಚ್‍ಡಿಕೆಗೆ ಬಿಎಸ್‍ವೈ ಟಾಂಗ್

    ಬೆಂಗಳೂರು: ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರ ಹೇಳಿಕೆಯನ್ನು ಬಳಸಿ ಮಾಜಿ ಸಿಎಂ ಯಡಿಯೂರಪ್ಪನವರು ಸಿಎಂ ಎಚ್‍ಡಿ ಕುಮಾರಸ್ವಾಮಿಯವರಿಗೆ ಟಾಂಗ್ ಕೊಟ್ಟಿದ್ದಾರೆ.

    ಭಾನುವಾರ ಕುಮಾರಸ್ವಾಮಿಯವರು ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ನಾನು ನಾಡಿನ ಜನತೆಯ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಎಸ್‍ವೈ ಟಿಟ್ಟರ್ ನಲ್ಲಿ ಲಿಂಕನ್ ಹೇಳಿಕೆಯನ್ನು ಬಳಸಿ ಎಚ್‍ಡಿಕೆಯ ಕಾಲೆಳಿದ್ದಾರೆ.

    ಮನುಷ್ಯನ ನಿಜವಾದ ವ್ಯಕ್ತಿತ್ವ ಪರೀಕ್ಷಿಸಬೇಕೆಂದರೆ ಅವನಿಗೆ ಅಧಿಕಾರ ಕೊಟ್ಟು ನೋಡಿ ಎಂದು ಅಬ್ರಹಾಂ ಲಿಂಕನ್ ಹೇಳಿದ್ದರು. ಕುಮಾರಸ್ವಾಮಿಯವರು ತಾನು ಬದುಕಬೇಕಿದ್ದರೆ ತನಗೆ ಅಧಿಕಾರ ಕೊಡಿ ಎಂದು ಕೇಳಿದ್ದು ನಾಡಿನ ಜನತೆ ಮುಂದೆ. ಅಧಿಕಾರ ಸಿಕ್ಕ ಮೇಲೆ ತಾನು ನಾಡಿನ ಜನತೆ ಮುಲಾಜಿನಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೀನಿ ಎನ್ನುವಾಗ ಲಿಂಕನ್ ನೆನಪಾದರು ಎಂದು ಬಿಎಸ್‍ವೈ ಬರೆದುಕೊಂಡಿದ್ದಾರೆ.

    ಇದು ನನ್ನ ಸ್ವತಂತ್ರ ಸರ್ಕಾರ ಅಲ್ಲ, ನಾನು ನಿಮ್ಮ ಮುಲಾಜಿನಲ್ಲಿಯೇ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಜನತೆಗೆ ಕೇಳಿ ಕೊಂಡಿದ್ದೆ. ಆದರೆ ಜನತೆ ತಿರಸ್ಕಾರ ಮಾಡಿದ್ದರು. ರೈತರ ಸಾಲಮನ್ನಾ ಮಾಡಿ, ಇಲ್ಲದಿದ್ದರೇ ರಾಜೀನಾಮೆ ನೀಡಿ ಎಂದು ಯಾರು ಒತ್ತಾಯ ಮಾಡುವ ಅಗತ್ಯವಿಲ್ಲ. ಮಾತಿಗೆ ತಪ್ಪಿನಡೆದರೆ ನಾನೇ ರಾಜೀನಾಮೆ ನೀಡುತ್ತೇನೆ. ನನಗೆ ಸ್ವತಂತ್ರ ಬೆಂಬಲವಿಲ್ಲ, ಹೀಗಾಗಿ ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿ ಇರುವೆ, ಸಾಲಮನ್ನಾ ಕುರಿತು ಚರ್ಚೆ ಮಾಡಲಾಗುತ್ತಿದೆ. ಒಂದು ವಾರ ಕಾಲಾವಕಾಶ ನೀಡಿ, ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಎಚ್‍ಡಿಕೆ ಮನವಿ ಮಾಡಿದ್ದರು.

  • ಸ್ಪೀಕರ್ ಚುನಾವಣೆ: ಬಿಜೆಪಿಯಿಂದ ಸುರೇಶ್ ಕುಮಾರ್ ಕಣಕ್ಕೆ

    ಸ್ಪೀಕರ್ ಚುನಾವಣೆ: ಬಿಜೆಪಿಯಿಂದ ಸುರೇಶ್ ಕುಮಾರ್ ಕಣಕ್ಕೆ

    ಬೆಂಗಳೂರು: ವಿಧಾನಸಭಾ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ನಿಂದ ರಮೇಶ್ ಕುಮಾರ್ ಕಣದಲ್ಲಿದ್ದರೆ, ಬಿಜೆಪಿ ಸುರೇಶ್ ಕುಮಾರ್ ಅವರನ್ನು ನಿಲ್ಲಿಸಿದೆ.

    ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೊಂಡ ಹಿನ್ನೆಲೆಯಲ್ಲಿ ಸಂಖ್ಯಾಬಲ ಇರುವ ಕಾರಣ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆ ಆಗಬಹುದು. ಬಿಜೆಪಿ ಸದನದಲ್ಲಿ ಬಹುಮತ ಸಾಬೀತು ಪಡಿಸದ ಕಾರಣ ಸ್ಪೀಕರ್ ಹುದ್ದೆಗೆ ಸ್ಪರ್ಧಿಸುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಸುರೇಶ್ ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದು, ಕುತೂಹಲ ಹೆಚ್ಚಾಗಿದೆ.

    ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ಇರುವ ಕಾರಣ ಸುರೇಶ್ ಕುಮಾರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.

    ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಮತ್ತಿತರ ಹಿರಿಯರ ಸೂಚನೆಯ ಮೇರೆಗೆ ಅಭ್ಯರ್ಥಿಯಾಗಿ ನಾನು ಇಂದು ನಾಮಪತ್ರ ಸಲ್ಲಿಸಿದೆ. ನಾಮಪತ್ರಕ್ಕೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಹಾಗೂ ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ರವರು ಸಹಿ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

     

  • 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

    2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

    ಬೆಂಗಳೂರು: ದೊಡ್ಡ ಮಟ್ಟದ ರಾಜಕೀಯ ಮನ್ವಂತರಕ್ಕೆ ಕರ್ನಾಟಕ ಭೂಮಿಕೆಯಾಗಲಿದೆ ಅಂತ ಕಳೆದ ವಾರದವರೆಗೂ ಯಾರೊಬ್ಬರೂ ಊಹಿಸಿರಲಿಲ್ಲ. ಹೌದು, ರಾಷ್ಟ್ರ ರಾಜಕಾರಣದ ಸಂಭಾವ್ಯ ಬದಲಾವಣೆಗೆ ಮುನ್ನುಡಿ ಬರೆಯಲು ಕರ್ನಾಟಕ ಹೊರಟಿದೆ.
    ಕರ್ನಾಟಕದ ವರ್ತಮಾನದ ರಾಜಕೀಯ ವಿದ್ಯಮಾನವನ್ನೇ ಆಧಾರವಾಗಿಟ್ಟುಕೊಂಡು, ಮೋದಿ ವಿರುದ್ಧ ಮುನ್ನುಗ್ಗಲೇಬೇಕು ಎಂಬ ಛಲದಿಂದ ದೇಶದ ಬಿಜೆಪಿಯೇತರ ಮುಂಚೂಣಿ ನಾಯಕರೆಲ್ಲಾ ದೋಸ್ತಿ ಮಂತ್ರ ಜಪಿಸುತ್ತಾ ಬಿಗ್ ದಂಗಲ್ ಅಖಾಡಕ್ಕಿಳಿದಿದ್ದಾರೆ ಅಂತಾ ಹೇಳಲಾಗ್ತಿದೆ.
    ಕರ್ನಾಟಕವೂ ಸೇರಿದಂತೆ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಹಾಘಟ ಬಂಧನ ಏರ್ಪಡುವ ಸಾಧ್ಯತೆ ನಿಚ್ಛಳವಾದಂತಿದೆ. ಬುಧವಾರ ಹೆಚ್.ಡಿ.ಕುಮಾರಸ್ವಾಮಿ ಪದಗ್ರಹಣ ಸಮಾರಂಭ ಕೇವಲ ಅಧಿಕಾರ ಹಿಡಿಯುವ ಕಾರ್ಯಕ್ರಮಕ್ಕೆ ಸೀಮಿತವಾಗದೇ ಮೋದಿ ವಿರುದ್ಧ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಡಲಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೋದಿಯ ಎದುರಾಳಿಗಳೆಲ್ಲಾ ಈ ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿದ್ದಾರೆ.
    ಈ ಮೂಲಕ 2019ರ ಕುರುಕ್ಷೇತ್ರಕ್ಕೆ ಬೆಂಗಳೂರಿನಿಂದಲೇ ಪಾಂಚಜನ್ಯ ಮೊಳಗಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಹಾಗಾದ್ರೆ ಈ ಮಹಾಮೈತ್ರಿ ಮೋದಿಗೆ ಯಾಕೆ ಎಚ್ಚರಿಕೆಯ ಗಂಟೆ..? ಇದು ಮೋದಿಗೆ ಯಾವ ಸಂದೇಶ ರವಾನಿಸಲಿದೆ..? ಯಾರೆಲ್ಲಾ ಮೋದಿ ವಿರುದ್ಧ ನಿಂತಿದ್ದಾರೆ..? ತ್ರಿಶೂಲ ವ್ಯೂಹದ ಒಳಸುಳಿ ಏನು..? ಎಂಬವುದು ಈ ಕೆಳಗಿನಂತಿದೆ.
    ತ್ರಿಶೂಲ ವ್ಯೂಹ..! 
    1. ತ್ರಿಶೂಲ ವ್ಯೂಹ – ಹೆಚ್.ಡಿ.ದೇವೇಗೌಡ
    ಕರ್ನಾಟಕ – ಕಾಂಗ್ರೆಸ್ + ಜೆಡಿಎಸ್
    ಲೋಕಸಭಾ ಸ್ಥಾನ – 28
    2. ತ್ರಿಶೂಲ ವ್ಯೂಹ – ಮಾಯಾವತಿ – ಅಖಿಲೇಶ್ ಯಾದವ್ 
    ಉತ್ತರ ಪ್ರದೇಶ -ಕಾಂಗ್ರೆಸ್ + ಎಸ್‍ಪಿ+ ಬಿಎಸ್‍ಪಿ
    ಲೋಕಸಭಾ ಸ್ಥಾನ – 80
    3. ತ್ರಿಶೂಲ ವ್ಯೂಹ – ಮಮತಾ ಬ್ಯಾನರ್ಜಿ
    ಪಶ್ಚಿಮ ಬಂಗಾಳ – ಕಾಂಗ್ರೆಸ್ + ತೃಣಮೂಲ ಕಾಂಗ್ರೆಸ್
    ಲೋಕಸಭಾ ಸ್ಥಾನ – 42
    4. ತ್ರಿಶೂಲ ವ್ಯೂಹ – ತೇಜಸ್ವಿ ಯಾದವ್
    ಬಿಹಾರ – ಕಾಂಗ್ರೆಸ್ + ಆರ್ ಜೆಡಿ
    ಲೋಕಸಭಾ ಸ್ಥಾನ – 40
    5. ತ್ರಿಶೂಲ ವ್ಯೂಹ – ಚಂದ್ರಬಾಬು ನಾಯ್ಡು
    ಆಂಧ್ರಪ್ರದೇಶ – ಕಾಂಗ್ರೆಸ್ + ಟಿಡಿಪಿ
    ಲೋಕಸಭಾ ಸ್ಥಾನ – 25
    6. ತ್ರಿಶೂಲ ವ್ಯೂಹ – ಚಂದ್ರಶೇಖರ್ ರಾವ್
    ತೆಲಂಗಾಣ – ಕಾಂಗ್ರೆಸ್ + ಟಿಆರ್‍ಎಸ್
    ಲೋಕಸಭಾ ಸ್ಥಾನ – 17
    7. ತ್ರಿಶೂಲ ವ್ಯೂಹ – ಸ್ಟಾಲಿನ್
    ತಮಿಳುನಾಡು – ಕಾಂಗ್ರೆಸ್ + ಡಿಎಂಕೆ
    ಲೋಕಸಭಾ ಸ್ಥಾನ – 39
    8. ತ್ರಿಶೂಲ ವ್ಯೂಹ   – ಪಿಣರಾಯಿ ವಿಜಯನ್
    ಕೇರಳ – ಯುಡಿಎಫ್ + ಎಲ್‍ಡಿಎಫ್
    ಲೋಕಸಭಾ ಸ್ಥಾನ – 20
    9. ತ್ರಿಶೂಲ ವ್ಯೂಹ – ಅರವಿಂದ್ ಕೇಜ್ರಿವಾಲ್
    ದೆಹಲಿ – ಕಾಂಗ್ರೆಸ್ + ಆಪ್
    ಲೋಕಸಭಾ ಸ್ಥಾನ – 07
    10. ತ್ರಿಶೂಲ ವ್ಯೂಹ   – ಶರದ್ ಪವಾರ್
    ಮಹಾರಾಷ್ಟ್ರ – ಕಾಂಗ್ರೆಸ್ + ಎನ್‍ಸಿಪಿ + ಶಿವಸೇನೆ
    ಲೋಕಸಭಾ ಸ್ಥಾನ – 48
    11. ತ್ರಿಶೂಲ ವ್ಯೂಹ   – ಹೇಮಂತ್ ಸೊರೇನ್
    ಜಾರ್ಖಂಡ್ – ಕಾಂಗ್ರೆಸ್ + ಜೆಎಂಎಂ
    ಲೋಕಸಭಾ ಸ್ಥಾನ – 14
    12. ತ್ರಿಶೂಲ ವ್ಯೂಹ – ಅಭಯ್ ಸಿಂಗ್ ಚೌಟಾಲ
    ಹರಿಯಾಣ – ಕಾಂಗ್ರೆಸ್ + ಲೋಕದಳ
    ಲೋಕಸಭಾ ಸ್ಥಾನ – 10
    13. ತ್ರಿಶೂಲ ವ್ಯೂಹ – ಕ್ಯಾಪ್ಟನ್ ಅಮರೇಂದರ್ ಸಿಂಗ್
    ಪಂಜಾಬ್ – ಕಾಂಗ್ರೆಸ್ + ಆಮ್ ಆದ್ಮಿ
    ಲೋಕಸಭಾ ಸ್ಥಾನ – 13
    14. ತ್ರಿಶೂಲ ವ್ಯೂಹ – ನವೀನ್ ಪಟ್ನಾಯಕ್
    ಒಡಿಶಾ – ಕಾಂಗ್ರೆಸ್ + ಬಿಜು ಜನತಾದಳ
    ಲೋಕಸಭಾ ಸ್ಥಾನ – 21
    15. ತ್ರಿಶೂಲ ವ್ಯೂಹ   – ಮೌಲಾನಾ ಬದ್ರುದ್ದೀನ್ ಅಜ್ಮಲ್
    ಅಸ್ಸಾಂ – ಕಾಂಗ್ರೆಸ್ + ಎಐಯುಡಿಎಫ್
    ಲೋಕಸಭಾ ಸ್ಥಾನ – 14
    16. ತ್ರಿಶೂಲ ವ್ಯೂಹ – ಓಮರ್ ಅಬ್ದುಲ್ಲಾ
    ಜಮ್ಮು ಕಾಶ್ಮೀರ – ಕಾಂಗ್ರೆಸ್ + ಜೆಎನ್‍ಸಿ
    ಲೋಕಸಭಾ ಸ್ಥಾನ – 06
    ತ್ರಿಶೂಲ ವ್ಯೂಹ  – ಮೋದಿ ಸೋಲಿಸಲು ಮಹಾ ಸ್ಕೆಚ್..!
    ಮಹಾಮೈತ್ರಿ – 424 ಸ್ಥಾನ
    ಒಟ್ಟು ಲೋಕಸಭೆ ಸ್ಥಾನ – 543
  • ಅಪವಿತ್ರ ಮೈತ್ರಿ ಎಂದು ಟೀಕಿಸಿದ್ದ ಅಮಿತ್ ಶಾಗೆ ತಿರುಗೇಟು ನೀಡಿದ ಹೆಚ್‍ಡಿಕೆ

    ಅಪವಿತ್ರ ಮೈತ್ರಿ ಎಂದು ಟೀಕಿಸಿದ್ದ ಅಮಿತ್ ಶಾಗೆ ತಿರುಗೇಟು ನೀಡಿದ ಹೆಚ್‍ಡಿಕೆ

    ಬೆಂಗಳೂರು: ಚುನಾವಣೆ ಬಳಿಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಪವಿತ್ರ ಎಂದು ಟೀಕೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನಿಯೋಜಿತ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಟ್ವೀಟ್ 1: ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಕೂಟ ಅಪವಿತ್ರ ಎಂಬುದು ಅಮಿತ್ ಶಾ ಅವರ ವಾದ. ಹಾಗಾದರೆ ಪವಿತ್ರವಾದದ್ದು ಯಾವುದು? ನಮ್ಮ ಪಕ್ಷಗಳ ಚಿಹ್ನೆಯಿಂದ ಆಯ್ಕೆಯಾದವರನ್ನು ಖರೀದಿಸಲು ಮುಂದಾಗಿದ್ದು, ಅವರ ಮೂಲಕ ರಾಜೀನಾಮೆ ಕೊಡಿಸಲು ಪ್ರಯತ್ನಿಸಿದ್ದು ಪವಿತ್ರ ಕಾರ್ಯವೇ ಎಂದು ಪ್ರಶ್ನಿಸಿದ್ದಾರೆ.

    ಟ್ವೀಟ್ 2: ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಯಾವ ಕಾರಣಕ್ಕೆ ಸಂಭ್ರಮಿಸುತ್ತಿವೆ ಎಂದು ಅಮಿತ್ ಶಾ ಅವರು ಇಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಜಾತ್ಯತೀತ ಸರ್ಕಾರವೊಂದನ್ನು ರಚಿಸುತ್ತಿರುವ ಕಾರಣಕ್ಕೆ, ಕೋಮುವಾದಿ ಪಕ್ಷವೊಂದನ್ನು ಅಧಿಕಾರದಿಂದ ದೂರವಿಟ್ಟ ಕಾರಣಕ್ಕಾಗಿ ನಾವು ಸಂಭ್ರಮಿಸುತ್ತಿದ್ದೇವೆ ಅಮಿತ್ ಶಾ ಅವರೇ.

    ಟ್ವೀಟ್ 3: ರಾಜ್ಯದಲ್ಲಿ ಯಾರಿಗೂ ಬಹುಮತ ಬಂದಿಲ್ಲ. ಬಿಜೆಪಿಗೂ ಕೂಡ. ಹಾಗಾಗಿಯೇ ಜಾತ್ಯತೀತ ತತ್ವದಡಿ ಜೆಡಿಎಸ್-ಕಾಂಗ್ರೆಸ್ ಒಂದಾಗಿವೆ. ಈ ಮೈತ್ರಿಗೆ ಒಂದು ನೆಲೆ ಇದೆ. ಸರ್ವರ ಹಿತ ಕಾಯುವ, ಎಲ್ಲರೊಂದಿಗೆ ಪ್ರಗತಿ ಕಡೆಗೆ ಹೆಜ್ಜೆ ಹಾಕುವುದು ಈ ಮೈತ್ರಿಯ ಮೂಲ ನೆಲೆ. ಅದನ್ನು ಅಪವಿತ್ರ ಎನ್ನುತ್ತಿರುವ ನಿಮ್ಮ ಅಭಿಪ್ರಾಯ ಅಪವಿತ್ರ.

    ಟ್ವೀಟ್4: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂವಿಧಾನದ ಅಡಿಯಲ್ಲಿ ಬಹುಮತ ಇರುವವರು ಸರ್ಕಾರ ರಚಿಸುತ್ತಾರೆ. ಏಕೈಕ ದೊಡ್ಡ ಪಕ್ಷವೆಂದು ಬಹುಮತವಿಲ್ಲದಿದ್ದರೂ ಸರ್ಕಾರ ಮಾಡಲಾಗದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ 2.25 ಕೋಟಿ ಮತ ಪಡೆದಿದೆ. ಬಿಜೆಪಿ ಪಡೆದಿರುವುದು 1.31 ಕೋಟಿ ಮತ. ಯಾರಿಗೆ ಬಹುಮತ ಇದೆ? ಎಂಬುದನ್ನು ಅಮಿತ್ ಶಾ ಅರಿಯಲಿ  ಇದನ್ನೂ ಓದಿ: ನಾವು ಮೊದಲು ಕಾಂಗ್ರೆಸ್‍ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ: ಹೆಚ್‍ಡಿಡಿ

    ಇದಕ್ಕೂ ಮುನ್ನ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅಮಿತ್ ಶಾ ಅವರು, ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇ 17ರಂದು ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಅನುಮತಿ ಪಡೆದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ರು. ರಾಜ್ಯಪಾಲ ವಜೂಭಾಯಿ ವಾಲಾ ಬಹುಮತ ಸಾಬೀತಿಗೆ 15 ದಿನದ ಕಾಲಾವಕಾಶ ನೀಡಿದ್ದರು. ಆದ್ರೆ ಸುಪ್ರೀಂ ಕೋರ್ಟ್ ಅದೇಶದನ್ವಯ ಪ್ರಮಾಣ ವಚನದ ಮರುದಿನವೇ ಬಹುಮತ ಸಾಬೀತು ಮಾಡಬೇಕಾಗಿ ಬಂತು. ಸಹಜವಾಗಿ ನಮ್ಮ ಬಳಿ ಬಹುಮತವಿರದ ಕಾರಣ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು ಅಂತಾ ಹೇಳಿದ್ರು.

    ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ್ದ ಅವರು, ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವನ್ನು ಪಡೆದುಕೊಂಡಿದೆ. 104 ಸೀಟ್‍ಗಳೇನು ಕಡಿಮೆ ಸಂಖ್ಯೆಯೇನಲ್ಲ. ನಾವು ಕುದುರೆ ವ್ಯಾಪಾರ ಮಾಡುಲು ಮುಂದಾಗಿದ್ದೇವೆ ಅಂತಾ ಆರೋಪಿಸುತ್ತಿತ್ತು. ಆದ್ರೆ ತಾವೇ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ರೆಸಾರ್ಟ್ ನಲ್ಲಿ ಇರಿಸಿತ್ತು ಎಂದು ಲೇವಡಿ ಮಾಡಿದ್ರು. ಅಲ್ಲದೇ ಸಂಸದೆ ಶೋಭಾ ಕರಂದ್ಲಾಜೆ, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಆರೋಪಿಸಿದ್ದರು.

  • ನಾವು ಮೊದಲು ಕಾಂಗ್ರೆಸ್‍ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ: ಹೆಚ್‍ಡಿಡಿ

    ನಾವು ಮೊದಲು ಕಾಂಗ್ರೆಸ್‍ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ: ಹೆಚ್‍ಡಿಡಿ

    ಬೆಂಗಳೂರು: ಕರ್ನಾಟಕ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಜೊತೆಗಿನ ಮೈತ್ರಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಮೊದಲು ಅವರಿಗೆ ಬಿಟ್ಟುಕೊಡಲಾಗಿತ್ತು. ಆದ್ರೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅಧ್ಯಕ್ಷ ರಾಹುಲ್ ಗಾಂದಿ ಅವರೇ ಸಿಎಂ ಸ್ಥಾನ ಬೇಡವೆಂದು ಹೇಳಿದ್ದಾರೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಕೇಂದ್ರದಲ್ಲಿ ಬಿಜೆಪಿ ಆಡಳಿತ ದೇಶದ ವಾತಾವರಣವನ್ನು ಹಾಳು ಮಾಡಿದೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಎಲ್ಲರೂ ನಮ್ಮ ನಡೆಯನ್ನು ಸ್ವಾಗತಿಸಿದ್ದಾರೆ.

    ಮೈತ್ರಿ ಒಪ್ಪಿಕೊಂಡಿದ್ದು ಯಾಕೆ?
    ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಮ್ಮನ್ನು ಬಿಜೆಪಿಯ ಬಿ-ಟೀಂ ಅಂತಾ ಕರೆದಾಗ ಸಹಜವಾಗಿ ನೋವಾಗಿತ್ತು. ಆದ್ರೆ ಈ ಬಾರಿ ಚುನಾವಣೆಯಲ್ಲಿ ಎಲ್ಲ ನಾಯಕರು ಕನಿಷ್ಟ ನೈತಿಕ ಗುಣಮಟ್ಟವನ್ನು ಸಹ ನೋಡದೇ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ರು. ಬೇರೆ ನಾಯಕರ ಆರೋಪಗಳಿಗೆ ನಮ್ಮವರು ಸಹ ತಿರುಗೇಟು ನೀಡಿದ್ರು. ಚುನಾವಣಾ ಪ್ರಚಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಹೊಗಳಿದ್ರು, ಮರುದಿನವೇ ನನ್ನ ವಿರುದ್ಧ ಮಾತನಾಡಿದಾಗ ಬೇಸರ ಉಂಟಾಯಿತು. ಜಾತ್ಯಾತೀತ ರಾಷ್ಟ್ರ ಮತ್ತು ನಾಡಿನ ರೈತರ ಒಳಿತಿಗಾಗಿ ಮೈತ್ರಿಯನ್ನು ಒಪ್ಪಿಕೊಂಡಿದ್ದೇವೆ ಅಂತಾ ಸ್ಪಷ್ಟಪಡಿಸಿದ್ರು.

    ಸೋನಿಯಾ ಮತ್ತು ರಾಹುಲ್ ಗಾಂಧಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
    1997ರಲ್ಲಿ ನಾನು ಪ್ರಧಾನಿ ಆದಾಗ ನಾನು ಎಂದೂ ಸೋನಿಯಾ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿಲ್ಲ. ಇನ್ನು ರಾಹುಲ್ ಗಾಂಧಿ 1997ರಲ್ಲಿ ಇನ್ನೂ ಚಿಕ್ಕ ಹುಡಗ. ಹಾಗಾಗಿ ನನ್ನ ರಾಜಕೀಯ ಇತಿಹಾಸ ತಿಳಿಯದೇ ನಮ್ಮನ್ನು ಸಂಘ ಪರಿವಾರ ಬಿ-ಟೀಂ ಅಂತಾ ಕರೆದ್ರು. ರಾಜ್ಯದ ಕೆಲ ನಾಯಕರ ಹೇಳಿದಂತೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ನಮ್ಮ ಬಗ್ಗೆ ಆರೋಪಗಳನ್ನು ಮಾಡಿದ್ರು.

    78 ಸೀಟ್ ಕಾಂಗ್ರೆಸ್ ಹೊಂದಿದ್ದು, ನಿಮ್ಮದು ಕೇವಲ 37 ಸೀಟ್‍ಗಳಿದ್ರೂ ಸರ್ಕಾರ ನೀವು ರಚನೆ ಮಾಡ್ತೀರೋದು ಹೇಗೆ?
    ಕುಮಾರಸ್ವಾಮಿ ಸಿಎಂ ಆಗೋದು ನನ್ನ ನಿರ್ಣಯವಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೇ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಬೇಕೆಂದು ಕೇಳಿಕೊಂಡ್ರು. ಕುಮಾರಸ್ವಾಮಿ ಒಬ್ಬರೇ ತಮ್ಮ ಮುಂದಾಳತ್ವದಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವ್ರಿಗೆ ಸಿಎಂ ಸ್ಥಾನ ಒಲಿದು ಬಂದಿದೆ. ರಾಜ್ಯದ ಜನರ ಆಸೆಯೂ ಸಹ ಅದೇ ಆಗಿತ್ತು.

    ಲೋಕಸಭಾ ಚುನಾವಣೆಗೂ ಮೈತ್ರಿ ಮುಂದುವರೆಯುತ್ತಾ?
    ಮಮತಾ ಬ್ಯಾನರ್ಜಿ ಅವರು ಮೊದಲಿನಿಂದಲೂ ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಹಾಗೆಯೇ ಮಾಯಾವತಿ, ಚಂದ್ರಶೇಖರ್ ರಾವ್, ಚಂದ್ರಬಾಬು ನಾಯ್ಡು ಎಲ್ಲರೂ ಮೂಲಭೂತ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಹ ಇದೇ ಗುರಿಯನ್ನು ಹೊಂದಿದೆ ಅಂತಾ ತಿಳಿಸಿದ್ರು.

  • ಶಾಸಕರು ಒಂದು ದಿನದ ಮಟ್ಟಿಗೆ ಕ್ಷೇತ್ರಗಳಿಗೆ ಹೋಗಿ ಬರೋದು ಬೇಡ, ಇಲ್ಲೇ ಇರಲಿ : ಡಿಕೆಶಿ

    ಶಾಸಕರು ಒಂದು ದಿನದ ಮಟ್ಟಿಗೆ ಕ್ಷೇತ್ರಗಳಿಗೆ ಹೋಗಿ ಬರೋದು ಬೇಡ, ಇಲ್ಲೇ ಇರಲಿ : ಡಿಕೆಶಿ

    ಬೆಂಗಳೂರು: ಶಾಸಕರು ಒಂದು ದಿನದ ಮಟ್ಟಿಗೆ ತಮ್ಮ ಸ್ವಕ್ಷೇತ್ರಗಳಿಗೆ ಹೋಗಿ ಬರೋದು ಬೇಡ ಅಂತಾ ತೀರ್ಮಾನ ಮಾಡಲಾಗಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

    ಸೋಮವಾರ ನಗರದಲ್ಲಿ ಕಾಂಗ್ರೆಸ್ ಸಭೆ ಇರಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರೂ ಬೆಂಗಳೂರಿನಲ್ಲಿಯೇ ಇರಲಿದ್ದಾರೆ. ಇನ್ನು ಬುಧವಾರ ಎಚ್.ಡಿ.ಕುಮಾರಸ್ವಾಮಿ ಜೊತೆಯಲ್ಲಿ ಯಾರು ಪ್ರಮಾಣ ವಚನ ಸ್ವೀಕರಿಸುತ್ತಾರೆ? ಯಾರಿಗೆಲ್ಲಾ ಡಿಸಿಎಂ ಪಟ್ಟ ಒದಗಿ ಬರಲಿ ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಜಯನಗರ ಮತ್ತು ಆರ್.ಆರ್.ನಗರ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಜೊತೆ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗವುದು ಅಂತಾ ಸ್ಪಷ್ಟಪಡಿಸಿದ್ರು.

    ಸಚಿವ ಖಾತೆಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಸುಳ್ಳು. ಇನ್ನೂ ಅದರ ಬಗ್ಗೆ ಯಾವುದೇ ಚರ್ಚೆಗಳು ಸಹ ನಡೆದಿಲ್ಲ. ಎಲ್ಲ ಶಾಸಕರು ಬೆಂಗಳೂರಿನಲ್ಲಿಯೇ ಇರಲಿದ್ದು, ನಾಳೆ ನಡೆಯುವ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆಗಳು ನಡೆಯಲಿವೆ. ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆಯಲ್ಲಿ ಚರ್ಚೆಗಳು ನಡೆದ ಬಳಿಕವೇ ಡಿಸಿಎಂ ಸ್ಥಾನ ಮತ್ತು ಕುಮಾರಸ್ವಾಮಿ ಜೊತೆ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಗೊತ್ತಾಗಲಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

  • ಹೋರಾಟ ಮುಂದುವರೆಯುತ್ತೇ – ಫೇಸ್‍ಬುಕ್ ಲೈವ್‍ನಲ್ಲಿ ಭಾವುಕರಾದ ಪ್ರತಾಪ್ ಸಿಂಹ

    ಹೋರಾಟ ಮುಂದುವರೆಯುತ್ತೇ – ಫೇಸ್‍ಬುಕ್ ಲೈವ್‍ನಲ್ಲಿ ಭಾವುಕರಾದ ಪ್ರತಾಪ್ ಸಿಂಹ

    ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತಯಾಚಿಸದೆ ಸಿಎಂ ಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ವೇಳೆ ಭಾವುಕರಾಗಿದ್ದಾರೆ.

    ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಏಕಾಂಗಿಯಾಗಿ ಕಾರಿನಲ್ಲಿ ಕುಳಿತು ಫೇಸ್‍ಬುಕ್ ಲೈವ್ ಮಾಡಿದ ಸಂಸದ ಪ್ರತಾಪ್‍ಸಿಂಹ. ಬಿಎಸ್‍ವೈ ಅವರು ಅಧಿಕಾರ ಕಳೆದುಕೊಂಡರು ಎಂದು ಅವರಿಗೆ ನೋವಾಗಿಲ್ಲ. ಆದರೆ ರಾಜ್ಯದ ಜನರ ಬಗ್ಗೆ ಕಂಡಿದ್ದ ಕನಸು ನುಚ್ಚು ನೂರಾಯ್ತು ಎಂಬ ನೋವಿದೆ ಎಂದು ಹೇಳಿದರು.

    ಇಷ್ಟಾದರೂ ಬಿಎಸ್‍ವೈ ಅವರು ಸಮಚಿತ್ತ ಕಾಯ್ದುಕೊಂಡು, ಕಣ್ಣಲ್ಲಿ ನೀರು ಬಂದರೂ ಕಣ್ಣಿರಿಡದೆ ಸದನದಿಂದ ಹೊರ ನಡೆದರು. ಇಂದಿನ ಯಡಿಯೂರಪ್ಪ ಅವರ ಭಾಷಣ ಅಂದಿನ ವಾಜಪೇಯಿ ಅವರ ಭಾಷಣದಂತಿತ್ತು. ತಮ್ಮ ಭಾಷಣದ ಉದ್ದಕ್ಕೂ ಬಿಎಸ್‍ವೈ ಪ್ರಧಾನಿ ಮೋದಿ ಹಾಗೂ ರೈತರ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕಾರಣಾಂತರಗಳಿಂದ ನಾವು ಸರ್ಕಾರ ಉಳಿಸಿಕೊಂಡಿಲ್ಲ. ಆದರೆ ಈ ಮೈತ್ರಿ ಸರ್ಕಾರ 6 ತಿಂಗಳು ಇರುವುದಿಲ್ಲ. ಆಗ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಎಎಸ್‍ವೈ ಮತ್ತೆ ಸಿಎಂ ಆಗುತ್ತಾರೆ. ಅಲ್ಲಿಯವರೆಗೂ ನಾವೆಲ್ಲರು ಬಿಎಸ್‍ವೈ ಅವರಿಗೆ ಬೆಂಬಲಿಸೋಣ ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡ್ರು.

  • ನಾಳೆ ಬಿಎಸ್‍ವೈ ವಿಶ್ವಾಸಮತ ಯಾಚನೆ: ಕೋರ್ಟ್ ಕಲಾಪದ ಕಂಪ್ಲೀಟ್ ವಿವರಣೆ ಇಲ್ಲಿದೆ

    ನಾಳೆ ಬಿಎಸ್‍ವೈ ವಿಶ್ವಾಸಮತ ಯಾಚನೆ: ಕೋರ್ಟ್ ಕಲಾಪದ ಕಂಪ್ಲೀಟ್ ವಿವರಣೆ ಇಲ್ಲಿದೆ

    ನವದೆಹಲಿ: ಶನಿವಾರ ಸಂಜೆ 4 ಗಂಟೆಗೆ ಸುಪ್ರೀಂ ಕೋರ್ಟ್ ಬಿಎಸ್ ಯಡಿಯೂರಪ್ಪನವರಿಗೆ ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡಿದೆ.

    ರಾಜ್ಯಪಾಲರು ಬಿಎಸ್‍ವೈಗೆ 15 ದಿನಗಳ ಒಳಗಡೆ ಬಹುಮತ ಸಾಬೀತು ಪಡಿಸಲು ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ಎರಡು ಪಕ್ಷಗಳ ಪರ ಹಾಜರಿದ್ದ ವಕೀಲರು ಬಲವಾಗಿ ವಾದ ಮಂಡಿಸಿದರು. ಕುರಿತು ಕಾನೂನಿನ ಅಂಶಗಳನ್ನು ಉದಾಹರಣೆ ನೀಡಿ ಸಮರ್ಥನೆ ನೀಡಿದ್ದರು. ಆದ್ರೆ ಎರಡು ಕಡೆಯ ವಾದ, ಪ್ರತಿವಾದ ಅಲಿಸಿದ ನ್ಯಾಯಾಲಯ ಸಿಎಂ ಬಿಎಸ್‍ವೈಗೆ ನಾಳೆ ಸಂಜೆ 4 ಗಂಟೆ ವೇಳೆಗೆ ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡಿತು.

    ವಾದ ಹೀಗಿತ್ತು:
    ಆರಂಭದಲ್ಲಿ ಯಡಿಯೂರಪ್ಪ ಪರ ವಕೀಲ ಮುಕುಲ್ ರೋಹ್ಟಗಿ, ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡಿದೆ. ನಮ್ಮ ಬಳಿ ಬಿಎಸ್‍ವೈ ನೀಡಿರುವ ಬಹುಮತದ ಪತ್ರವಿದೆ. ವಿಧಾನಸಭಾ ಚುನಾವಣಾ ಪೂರ್ವ ಯಾವುದೇ ಮೈತ್ರಿ ಇರಲಿಲ್ಲ. ಆದರೆ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಅಲ್ಲದೇ ಈ ವೇಳೆ ಶಾಸಕರನ್ನು ಹೆದರಿಸಿ ರೆಸಾರ್ಟ್‍ಗೆ ಕರೆದೊಯ್ಯಲಾಗಿದೆ. ಕೂಡಲೇ ಶಾಸಕರನ್ನ ಮುಕ್ತಗೊಳಿಸಿ. ನಾವು ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧ ಎಂದು ತಮ್ಮ ವಾದ ಮಂಡಿಸಿದರು.

    ಈ ವಾದಕ್ಕೆ ನ್ಯಾಯಮೂರ್ತಿ ಸಿಕ್ರಿ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಇರುವ ಪತ್ರವನ್ನು ನೀಡಿದೆ. ಮತ್ತೊಂದೆಡೆ ಬಿಎಸ್ ಯಡಿಯೂರಪ್ಪ ಅವರು ನನಗೆ ಬಹುಮತವಿದೆ ಎಂದು ಹೇಳಿದ್ದಾರೆ. ಯಾವ ಆಧಾರದಲ್ಲಿ ರಾಜ್ಯಪಾಲರು ಯಡಿಯೂರಪ್ಪಗೆ ಅವಕಾಶ ನೀಡಿದ್ದಾರೆ ಎಂದು ಪ್ರಶ್ನಿಸಿದರು.

    ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಮುಕುಲ್ ರೋಹ್ಟಗಿ, ಈ ನಿರ್ಧಾರ ರಾಜ್ಯಪಾಲರ ವಿವೇಚನೆಗೆ ಬಿಟ್ಟಿದ್ದು. ಯಾರು ಸ್ಥಿರ ಮತ್ತು ಜನಪ್ರಿಯ ಸರ್ಕಾರ ನೀಡುತ್ತಾರೆ ಎಂಬುದನ್ನು ವಿವೇಚಿಸಿ ರಾಜ್ಯಪಾಲರು ಅವಕಾಶ ನೀಡುತ್ತಾರೆ. ಅಲ್ಲದೇ ರಾಜ್ಯಪಾಲರು ಸರ್ಕಾರಿಯಾ ಆಯೋಗದ ನಿಯಮಾವಳಿಯನ್ನು ಅನುಸರಿಸಿದ್ದಾರೆ. ನಮ್ಮದು ಅತಿ ದೊಡ್ಡ ಪಕ್ಷ ಜೊತೆಗೆ ನಮಗೆ ಇತರರ ಬೆಂಬಲವೂ ಇದೆ. ಕಾಂಗ್ರೆಸ್ ಪತ್ರದಲ್ಲಿ ಕೆಲ ಶಾಸಕರ ಸಹಿ ಇಲ್ಲ. ಕಾಂಗ್ರೆಸ್ ನಿಂದ ಆಯ್ಕೆ ಆಗಿರುವ ಶಾಸಕ ಆನಂದ್ ಸಿಂಗ್ ಸಹಿ ಇಲ್ಲ ಎಂದು ಉದಾಹರಣೆ ನೀಡಿದರು.

    ಬಿಜೆಪಿ ಪರ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಅಂತಿಮವಾಗಿ ಇದು ನಂಬರ್ ಗೇಮ್. ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು. ಯಾರಿಗೂ ಸಮಯ ಕೊಡಲು ಸಾಧ್ಯವಿಲ್ಲ. ನಾವು ಯಾವುದೇ ಪಕ್ಷದ ಪರವೂ ಇಲ್ಲ. ಯಾರಿಗೂ ಸಮಯ ನೀಡಲ್ಲ. ಮೊದಲು ವಿಶ್ವಾಸಮತ ಯಾಚನೆ ಆಗಲಿ. ಆಮೇಲೆ ಕಾನೂನಿನ ಅನ್ವಯ ತೀರ್ಮಾನ ಮಾಡೋಣ ಎಂದರು.

    ನ್ಯಾಯ ಮೂರ್ತಿಗಳ ನಂಬರ್ ಗೇಮ್ ಗೆ ಉತ್ತರಿಸಿದ ಮುಕುಲ್, ಹೌದು ಅದು ನಿಜ. ವಿಧಾನಸಭೆಯಲ್ಲಿ ನಾವು ಬಹುಮತ ಸಾಬೀತು ಮಾಡುತ್ತೇವೆ ಎಂದರು.

    ಈ ವೇಳೆ ಮಧ್ಯ ಪ್ರವೇಶಿದ ಕಾಂಗ್ರೆಸ್- ಜೆಡಿಎಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಚುನಾವಣಾ ಆಯೋಗ ಸಂಪೂರ್ಣ ಫಲಿತಾಂಶ ಘೋಷಣೆಗೂ ಮುನ್ನವೇ ಬಿಎಸ್ ಯಡಿಯೂರಪ್ಪ ಅವರು ನಮ್ಮದು ದೊಡ್ಡ ಪಕ್ಷ ಎಂದು ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ. ಇದು ಹೇಗೆ ಆಗುತ್ತದೆ? ಕಾಂಗ್ರೆಸ್, ಜೆಡಿಎಸ್ ಎಲ್ಲಾ 117 ಶಾಸಕರ ವಿವರ ನೀಡಿದೆ. ತಕ್ಷಣ ಮೊದಲು ವಿಶ್ವಾಸ ಮತಯಾಚನೆಗೆ ಅವಕಾಶ ನೀಡಿ. ಆದರೆ ಯಾವುದೇ ಹೆಸರುಗಳಿಲ್ಲದೇ ಬಿಎಸ್‍ವೈ ಬಹುಮತ ಇದೆ ಎನ್ನುತ್ತಿದ್ದಾರೆ. 78 ಶಾಸಕರ ಸಹಿ ಉಳ್ಳ ಬೆಂಬಲವಿರುವ ಯಾವುದೇ ಪತ್ರ ರಾಜ್ಯಪಾಲರಿಗೆ ಸಿಕ್ಕಿಲ್ಲ. ಕೇವಲ ಚುನಾವಣಾ ಆಯೋಗದಿಂದ ಡೌನ್‍ಲೋಡ್ ಮಾಡಿದ ಪಟ್ಟಿ ನೀಡಿದ್ದಾರೆ. ನ್ಯಾಯಾಲಯದ ನಿರ್ಧಾರದಂತೆ ನಾಳೆ ವಿಶ್ವಾಸಮತ ಯಾಚನೆಗೆ ನಮ್ಮ ಸಮ್ಮತವಿದೆ ಎಂದು ಸ್ಪಷ್ಟಪಡಿಸಿದರು.

    ನ್ಯಾಯಾಲಯದ ಕ್ರಮವನ್ನು ಆಕ್ಷೇಪಿಸಿದ ವಕೀಲ ಮುಕುಲ್ ರೋಹ್ಟಗಿ, ಸುಪ್ರೀಂಕೋರ್ಟ್ ಏಕೆ ಬಹುಮತ ತೋರಿಸಬೇಕು. ಬಹುಮತವನ್ನು ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸುತ್ತೇವೆ. ನಾಳೆ ವಿಶ್ವಾಸಮತಯಾಚನೆ ಕಷ್ಟವಾಗುತ್ತೆ. ಸದ್ಯ ಹಂಗಾಮಿ ಸ್ಪೀಕರ್ ನೇಮಕ ಸಹ ನಡೆದಿಲ್ಲ ಎಂದು ಹೇಳಿದರು.

    ಮುಕುಲ್ ರೋಹ್ಟಗಿ ವಾದಕ್ಕೆ ಸಹಮತ ನೀಡಲು ನಿರಾಕರಿಸಿದ ನ್ಯಾಯಾಮೂರ್ತಿಗಳು ನಾವು ಡಿಜಿಪಿಗೆ ಸೂಚನೆ ನೀಡುತ್ತೇವೆ. ಎಲ್ಲಾ ಶಾಸಕರು ಸದನದಲ್ಲಿ ಹಾಜರು ಇರುವಂತೆ ನೋಡಿಕೊಳ್ಳಿ. ಅವರ ಸುರಕ್ಷತೆ ನಿಮ್ಮ ಹೊಣೆ. ವಿಶ್ವಾಸಮತ ಯಾಚನೆ ಮಾಡುವವರೆಗೆ ಆಂಗ್ಲೋ ಇಂಡಿಯನ್ ಸದಸ್ಯನ ನಾಮ ನಿರ್ದೇಶನ ಮಾಡಬೇಡಿ. ನಾಳೆ ಸಂಜೆ 4 ಗಂಟೆಗೆ ವೇಳೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸದನದಲ್ಲಿ ವಿಶ್ವಾಸಮತಯಾಚನೆ ಮಾಡಬೇಕು ಎಂದು ತೀರ್ಪು ಪ್ರಕಟಿಸಿದರು.

  • ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ತಿರುವನಂತಪುರಂ: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಶಾಸಕರಿಗೆ ಸುಂದರ, ಸುರಕ್ಷಿತ ಸ್ಥಳಗಳ ನೀಡುವುದಾಗಿ ಆಫರ್ ನೀಡಿದೆ.

    ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಕೇರಳ ಪ್ರವಾಸೋದ್ಯಮ, ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಬಳಿಕ ನಾವು ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ, ಸುರಕ್ಷಿತ ಹಾಗೂ ಸುಂದರ ರೆಸಾರ್ಟ್ ಗೆ ಬನ್ನಿ ಎಂದು ಟ್ವೀಟ್ ಮಾಡಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ನಡೆಯಬಹುದು ಎನ್ನುವ ಊಹೆಯ ಮೇರೆಗೆ ಕೇರಳ ಪ್ರವಾಸೋದ್ಯಮ ಇಲಾಖೆ ಫಲಿತಾಂಶ ಪ್ರಕಟವಾದ ಮೇ 15 ರ ಸಂಜೆ 5.48ಕ್ಕೆ ಟ್ವೀಟ್ ಮಾಡಿತ್ತು. ಕೇರಳ ಪ್ರವಾಸೋದ್ಯಮದ ಪೋಸ್ಟ್ ಅನ್ನು ಸಚಿವ ಸುರೇಂದ್ರನ್ ಶೇರ್ ಮಾಡಿದ್ದರು ಆದ್ರೆ  ಬಳಿಕ ಇಲಾಖೆ ಆಫರ್ ನೀಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

    ಈ ಟ್ವೀಟ್‍ಗೆ ಹಲವಾರು ಕಮೆಂಟ್ ಗಳು ಬಂದಿತ್ತು. ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದು ಹೇಗೆ ಎನ್ನುವುದು ಕೇರಳವನ್ನು ನೋಡಿ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಬೆಸ್ಟ್ ಎಡ್ಮಿನ್ ಈ ರೀತಿ ಟ್ರೋಲ್ ಮಾಡಿದ್ದನ್ನು ಇದೂವರೆಗೂ ನಾವು ನೋಡಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಕರ್ನಾಟಕ ರಾಜ್ಯಪಾಲ ವಜುಬಾಯಿವಾಲ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿ 15 ದಿನಗಳ ಕಾಲಾವಕಾಶ ನೀಡಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕ ರಕ್ಷಣೆಗೆ ರೆಸಾರ್ಟ್ ಗಳ ಮೇರೆ ಹೋಗಲು ನಿರ್ಧರಿಸಿದ್ದಾರೆ. ಕೇರಳ ಅಲೆಪ್ಪಿಯಲ್ಲಿರುವ ರೆಸಾರ್ಟ್ ಒಂದರಲ್ಲಿ ಕರ್ನಾಟಕದ ಶಾಸಕರಿಗಾಗಿ 120 ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.