Tag: karnataka elections

  • ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

    ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

    ಬೆಂಗಳೂರು: ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಧಾನಸಭಾ ಕ್ಷೇತ್ರದ ಮೇಲೆ ನಟಿ, ಪರಿಷತ್ ಸದಸ್ಯೆ ಜಯಮಾಲಾ ಕಣ್ಣಿಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಒಂದು ವೇಳೆ ಈ ಬಾರಿ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧಿಸದೇ ಇದ್ದರೆ ಸಾಗರ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕೆಂದು ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಚಿವ ಕಾಗೋಡು ತಿಮ್ಮಪ್ಪ ಬದಲಾಗಿ ಅವರ ಪುತ್ರಿಗೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತಿದೆ ಎಂಬ ವದಂತಿಗಳು ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿವೆ. ಈ ವದಂತಿ ನಡುವೆ ಜಯಮಾಲಾ ಸಾಗರ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ.

    ಈ ಕಾರಣಕ್ಕೆ ಟಿಕೆಟ್ ಕೊಡಿ: ಸಾಗರದಲ್ಲಿ ಈಡಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಯಮಾಲಾ ತಾವು ಈಡಿಗ ಸಮುದಾಯದವರಾಗಿದ್ದರಿಂದ ಪ್ರಬಲ ಅಭ್ಯರ್ಥಿಯಾಗುವ ಲಕ್ಷಣಗಳಿವೆ. ಸಾಗರದ ಚುನಾವಣೆಯಲ್ಲಿ ಹವ್ಯಕ ಸಮುದಾಯದ ಜನರ ಮತಗಳು ಕೂಡ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಜಯಮಾಲಾ ಪತಿ ರಾಮಚಂದ್ರ ಹವ್ಯಕ ಸಮುದಾಯಕ್ಕೆ ಸೇರಿದ ಸಾಗರದ ಮೂಲದವರಾಗಿದ್ದಾರೆ. ಈ ಎಲ್ಲ ಕಾರಣಗಳು ನನ್ನ ಗೆಲುವಿಗೆ ಪೂರಕವಾಗಲಿವೆ ಎಂಬುದನ್ನು ಜಯಮಾಲಾ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಕಾಂಗ್ರೆಸ್ ಮಾತ್ರ ಇದೂವರೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿಲ್ಲ. ಎಲ್ಲ ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳ ಟಿಕೆಟ್‍ಗಾಗಿ ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ.

    ಸಾಗರ ಟಿಕೆಟ್‍ಗಾಗಿ ಬಿಜೆಪಿಯಲ್ಲೂ ಪೈಪೋಟಿ: 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

    ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ಕಾಂಗ್ರೆಸ್ ಅಂದ್ರೆ ವಿಭಜನೆ – ಲೋಕಸಭೆಯಲ್ಲಿ ಸಿಎಂ ಸಿದ್ದು ವಿರುದ್ಧ ಮೋದಿ ವಾಗ್ದಾಳಿ

    ಕಾಂಗ್ರೆಸ್ ಅಂದ್ರೆ ವಿಭಜನೆ – ಲೋಕಸಭೆಯಲ್ಲಿ ಸಿಎಂ ಸಿದ್ದು ವಿರುದ್ಧ ಮೋದಿ ವಾಗ್ದಾಳಿ

    – ಖರ್ಗೆ ಓದಿದ ಶಾಯರಿ ಸಾಲನ್ನು ಉದಾಹರಿಸಿ ಸಿಎಂಗೆ ಟಾಂಗ್
    – ಕಲಬುರಗಿ- ಬೀದರ್ ರೈಲ್ವೇ ಯೋಜನೆ ನಮ್ಮದು

    ನವದೆಹಲಿ: ಬೆಂಗಳೂರಿನಲ್ಲಿ ಕಮಿಷನ್ ಸರ್ಕಾರ ಎಂದು ರಾಜ್ಯದ ಕೈ ಸರ್ಕಾರವನ್ನು ಟೀಕಿಸಿದ್ದ ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

    ಚುನಾವಣೆಗೆ ರಣಕಹಳೆ: ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕದಲ್ಲಿ ಅಶಾಂತಿ ಮೂಡಲು ಕಾರಣವಾಗಿದೆ. ಕಾಂಗ್ರೆಸ್ ಮೂಲವೇ ವಿಭಜನೆ. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದಾರೆ ಅಂತಾ ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕೆಗಳ ಸುರಿಮಳೆಗೈದರು.

    ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಅಂದು ದೇಶ ವಿಭಜನೆ ಮಾಡಿದ್ದು, ಅದರ ನೋವು 70 ವರ್ಷವಾದರೂ ದೇಶದ ಜನರು ಅನುಭವಿಸುತ್ತಿದ್ದಾರೆ. ಅಂದು ದೇಶದ ಮೊದಲ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಆಗಿದ್ದರೆ ನಮ್ಮ ಪೂರ್ಣ ಕಾಶ್ಮೀರ ನಮಲ್ಲಿಯೇ ಇರುತ್ತಿತ್ತು. ಕಾಂಗ್ರೆಸ್ ಸರ್ಕಾರದಿಂದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಅನ್ಯಾಯವಾಗಿದೆ. ನಿನ್ನೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶತ್ರುತ್ವ ಆ ಮಟ್ಟಿಗೆ ಮಾಡಿ, ಅದು ಎಂದಾದರೂ ಒಂದು ದಿನ ಸ್ನೇಹಕ್ಕೆ ತಿರುಗಬೇಕು ಎಂದು ಬಶೀರ್ ಭದ್ರಿ ಅವರ ಕವಿತೆ ಓದಿದ್ದರು. ಈ ಸಾಲುಗಳನ್ನು ಖರ್ಗೆ ತಮ್ಮದೇ ಸರ್ಕಾರವಿರುವ ಮುಖ್ಯಮಂತ್ರಿಗಳಿಗೆ ಹೇಳಿದಂತಿದೆ. ಈ ಶಾಯರಿಯನ್ನು ಕರ್ನಾಟಕದ ಸಿಎಂ ಕೇಳಲೇ ಬೇಕು. ಈ ಶಾಯರಿಯನ್ನು ಖರ್ಗೆಯವರು ಓದಿದ ಸ್ವಲ್ಪ ಹಿಂದಿನಿಂದ ಓದಬೇಕಿತ್ತು ಎಂದು ಹೇಳಿ ಟಾಂಗ್ ಕೊಟ್ಟರು.

    ಸಿಎಂ ಸಿದ್ದರಾಮಯ್ಯ ಅವರು ಶಾಂತಿಯ ಸಂದೇಶ ಸಾರುವ ಬದಲು ಶತ್ರುತ್ವದ ಸಂದೇಶ ಸಾರುತ್ತಿದ್ದಾರೆ. ಮುಂದಿನ ಕರ್ನಾಟಕ ಚುನಾವಣೆ ಬಳಿಕ ನೀವು ಲೋಕಸಭೆಯಲ್ಲಿ ಇರುತ್ತೀರೋ ಇಲ್ಲವೋ ಗೊತ್ತಿಲ್ಲ. ನಮಗೆ ಸಲಹೆ ನೀಡುವ ಬದಲು ನಿಮ್ಮದೇ ಸರ್ಕಾರವಿರುವ ಸಿಎಂಗೆ ಬುದ್ಧಿ ಮಾತುಗಳನ್ನು ಹೇಳಿ ಅಂತಾ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.

    ಖರ್ಗೆಗೆ ಟಾಂಗ್: ಖರ್ಗೆಯವರೇ ನೀವು ಕರ್ನಾಟಕದಿಂದ ಬಂದಿದ್ದೀರಿ. ಒಂದು ಪರಿವಾರದ ಮೇಲಿನ ಭಕ್ತಿಗಾಗಿ ಕರ್ನಾಟಕ ಚುನಾವಣೆ ಬಳಿಕ ಲೋಕಸಭೆಯ ನಿಮ್ಮ ಸ್ಥಾನ ಉಳಿಯಲಿ. ಆದರೆ ಜಗತ್ ಗುರು ಬಸವೇಶ್ವರರಿಗೆ ಅವಮಾನ ಮಾಡಬೇಡಿ. ಬಸವೇಶ್ವರರವರು ಆ ದಿನಗಳಲ್ಲಿ ‘ಅನುಭವ ಮಂಟಪ’ದಿಂದ ಊರಿನ ಎಲ್ಲಾ ನಿರ್ಣಯಗಳನ್ನು ಗಣತಂತ್ರ ಮೂಲಕ ಮಾಡುತ್ತಿದ್ದರು. ಆ ಕಾಲದಲ್ಲೇ ನಿರ್ಣಯ ಕೈಗೊಳ್ಳುವಲ್ಲಿ ಮಹಿಳೆಯರ ಪಾತ್ರ ಇತ್ತು. ಸದನಗಳಲ್ಲಿ ಸಭೆಗಳಲ್ಲಿ ಮಹಿಳೆಯರ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿತ್ತು. ಬಸವೇಶ್ವರ ಕಾಲದಲ್ಲಿ ಗಣತಂತ್ರವನ್ನು ಪರಿಚಯಿಸುವ ಕೆಲಸವಾಗಿತ್ತು. ದೇಶದಲ್ಲಿ ಅನುಭವ ಮಂಟಪ ಮೂಲಕ 12ನೇ ಶತಮಾನದಲ್ಲಿಯೇ ಜಗದ್ಗುರು ಬಸವಣ್ಣ ಲೋಕ ತಂತ್ರವನ್ನು ಪರಿಚಯಿಸಿದ್ದಾರೆ. ಗಣತಂತ್ರ ನಮ್ಮ ರಕ್ತ ಮತ್ತು ನರನಾಡಿಗಳಲ್ಲಿ ಪ್ರವಹಿಸುತ್ತಿದ್ದು, ಅದು ನಮ್ಮ ಸಂಸ್ಕೃತಿಯಾಗಿದೆ.

    ಕಲಬುರಗಿ ಮತ್ತು ಬೀದರ್ ರೈಲ್ವೇ ಯೋಜನೆ ನಮ್ಮದು: ಕಾಂಗ್ರೆಸ್ ಇದುವರೆಗೂ ಹೇಳದ ಮಾತನ್ನು ನಾನಿಂದು ಹೇಳುತ್ತಿದ್ದೇನೆ. ಕಲಬುರಗಿ – ಬೀದರ್ ರೈಲ್ವೇ ಯೋಜನೆಗಳಿಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಚಾಲನೆ ನೀಡಿತ್ತು. ಎನ್‍ಡಿಎ ಆಡಳಿತದ ಬಳಿಕ ಬಂದ ಯುಪಿಎ ಸರ್ಕಾರ ರೈಲ್ವೇ ಯೋಜನೆಯನ್ನು ಪೂರ್ಣ ಮಾಡಲು ಮನಸ್ಸು ಮಾಡಲಿಲ್ಲ. ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ಬಂದಾಗ ಕೇಂದ್ರದಿಂದ ಅನುದಾನ ಪಡೆದು ಕಾಮಗಾರಿಯನ್ನು ಆರಂಭಿಸಿದರು. 110 ಕಿಮೀ. ಉದ್ದದ ಕಾಮಗಾರಿಯಲ್ಲಿ ಯುಪಿಎ ಸರ್ಕಾರ ಕೇವಲ 37 ಕಿ.ಮೀ. ರೈಲ್ವೇ ಕಾಮಗಾರಿ ಪೂರ್ಣ ಮಾಡಿದೆ ಎಂದು ಹೇಳಿ ಖರ್ಗೆಗೆ ತಿರುಗೇಟು ನೀಡಿದರು.

    ನಮ್ಮಲ್ಲಿ ಭೇದ ಭಾವವಿಲ್ಲ: ಮಲ್ಲಿಕಾರ್ಜುನ್ ಖರ್ಗೆ ತಾವೇ ರೈಲ್ವೇ ಮಂತ್ರಿಯಾಗಿದ್ದರೂ, ತಮ್ಮ ಸ್ವಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಬಂದ ಬಳಿಕ ಕಲಬುರಗಿ ಮತ್ತು ಬೀದರ್ ರೈಲ್ವೇ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣ ಮಾಡಿದ್ದೇವೆ. ನಾವು ಎಲ್ಲಿಯೂ ಕಲಬುರಗಿ ಮತ್ತು ಬೀದರ್ ನಮ್ಮ ವಿರೋಧ ಪಕ್ಷದ ನಾಯಕರ ಕ್ಷೇತ್ರ ಎಂದು ಭೇದ ಭಾವ ಮಾಡಿಲ್ಲ. ಕಲಬುರಗಿ ಮತ್ತು ಬೀದರ್ ವಿರೋಧ ಪಕ್ಷದ ನಾಯಕರ ಕ್ಷೇತ್ರವಾದ್ರೂ, ದೇಶ ನಮ್ಮದು ಅಂತಾ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. 2017 ಡಿಸೆಂಬರ್ ನಲ್ಲಿ ಬೀದರ್ ರೈಲ್ವೆ ಯೋಜನೆಯನ್ನು ಉದ್ಘಾಟನೆ ಮಾಡಿದ ಖುಷಿ ನನಗಿದೆ ಎಂದರು.

    ದೇಶದ ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರೆ ದೇಶದ ಎಲ್ಲ ರಾಜ್ಯ ಸರ್ಕಾರಗಳ ಪರಿಶ್ರಮ ಮತ್ತು ಹಿಂದಿನ ಕೇಂದ್ರ ಸರ್ಕಾರಗಳ ಪರಿಶ್ರಮವಿದೆ ಎಂದು ಇದುವರೆಗೂ ಯಾವ ಕಾಂಗ್ರೆಸ್ ಪ್ರಧಾನಿಯೂ ಕೆಂಪುಕೋಟೆಯಲ್ಲಿ ಎದೆ ತಟ್ಟಿಕೊಂಡು ಹೇಳಿಲ್ಲ. ಆದ್ರೆ ನಾನು ಪ್ರಧಾನಿ ಆದ ಮೇಲೆ ಈ ಮಾತುಗಳನ್ನು ಹೇಳಿದ್ದೇನೆ. ಆದರೂ ನಮ್ಮ ನಂತರ ಸ್ವತಂತ್ರ ಪಡೆದ ಹಲವು ರಾಷ್ಟ್ರಗಳು ಅಭಿವೃದ್ಧಿಯಲ್ಲಿ ನಮಗಿಂತ ಮುಂದಿವೆ. ಕಾಂಗ್ರೆಸ್ ಸರ್ಕಾರದಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿದ್ದಂತೆ “ಬಂದ್ ಕರೋ.. ಬಂದ್ ಕರೋ, ನಾಟಕ್ ಬಂದ್ ಕರೋ” ಎಂದು ಕೂಗುವ ಮೂಲಕ ಮೋದಿ ಭಾಷಣಕ್ಕೆ ಕೈ ಸಂಸದರು ಅಡ್ಡಿಪಡಿಸಲು ಯತ್ನಿಸಿದರು. ಆದರೆ ವಿಪಕ್ಷಗಳ ವಿರೋಧದ ನಡುವೆಯೂ ಮೋದಿ ಏರುಧ್ವನಿಯಲ್ಲಿ ಮಾತನಾಡಿ ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.

  • ಪಿಎಂ ವರ್ಸಸ್ ಸಿಎಂ: ಮೋದಿಯನ್ನೇ ಅಖಾಡಕ್ಕೆ ಕರೆದ ಸಿದ್ದರಾಮಯ್ಯ

    ಪಿಎಂ ವರ್ಸಸ್ ಸಿಎಂ: ಮೋದಿಯನ್ನೇ ಅಖಾಡಕ್ಕೆ ಕರೆದ ಸಿದ್ದರಾಮಯ್ಯ

    ಬೆಂಗಳೂರು: ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರನ್ನು ‘ವಾಕ್ ದ ಟಾಕ್’ (ಬಹಿರಂಗ ಚರ್ಚೆ)ಗೆ ಆಹ್ವಾನಿಸಿದ್ದಾರೆ.

    ಪರಿವರ್ತನಾ ಯಾತ್ರೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು ಸಂತೋಷದ ವಿಚಾರವಾಗಿದೆ. ನಾನು ಇವಾಗ ನಿಮ್ಮನ್ನು ‘ವಾಕ್ ದ ಟಾಕ್’ಗೆ ಆಹ್ವಾನಿಸುತ್ತಿದ್ದೇನೆ. ಈ ಪ್ರಶ್ನೆಗಳಿಂದಲೇ ಆರಂಭವಾಗಲಿ ಎಂದು ಸವಾಲ್ ಹಾಕಿದ್ದಾರೆ.
    1. ಲೋಕ್ ಪಾಲ್ ನೇಮಕ.
    2. ಜಡ್ಜ್ ಲೋಯಾ ಸಾವಿರ ಪ್ರಕರಣಸ ತನಿಖೆ
    3. ಅಮಿತ್ ಶಾ ಪುತ್ರ ಜೈಶಾ ಆಸ್ತಿ ಹೆಚ್ಚಳ ವಿಚಾರ
    4. ಕಳಂಕರಹಿತ ಸಿಎಂ ಅಭ್ಯರ್ಥಿಗಳ ನೇಮಕ?

    ಮೋದಿ ಅವರು ಪ್ರಧಾನಿ ಸ್ಥಾನದಂತ ಉನ್ನತ ಹುದ್ದೆಯಲ್ಲಿರಲು ನೈತಿಕವಾಗಿ ಅರ್ಹರಲ್ಲ. ದೇಶದ ಪ್ರಧಾನಿಯಾಗಿ ಮಾತನಾಡದೆ ಬಿಎಸ್‍ವೈ ಯಾತ್ರೆಯ ಮುಂದುವರಿದ ಭಾಗದಂತೆ ಸುಳ್ಳು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅಲ್ಲ ಮೋದಿಗೆ ಕೌಂಟ್‍ಡೌನ್ ಶುರುವಾಗಿದೆ ಅಂತ ಮೋದಿ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು.

    ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಟ್ವಿಟ್ಟರ್ ವಾರ್ ಬಿರುಸುಗೊಂಡಿದೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಲೇವಡಿ ಮಾಡಿದ್ದ ಸಿಎಂ ಸಿದ್ದರಾಮಯ್ಯಗೆ ಬಿಎಸ್‍ವೈ ತೀಕ್ಷ್ಣವಾಗಿ ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, 2012ರಲ್ಲಿ ನಾನು ನಿದೋರ್ಷಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಕಾನೂನು ಪದವಿ ಓದಿ ನ್ಯಾಯತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲವೆಂದರೆ ಅದು ನೀವು ಸಂವಿಧಾನಕ್ಕೆ ತೋರುವ ಅಗೌರವ ಅಂತ ಪ್ರತಿಕ್ರಿಯಿಸಿದ್ದಾರೆ. ಪ್ರಚಾರಕ್ಕಾಗಿ ನಿಮ್ಮ ಬೌದ್ಧಿಕ ದಾರಿದ್ರ್ಯವನ್ನು ನಾಡಿನ ಜನತೆ ಮುಂದೆ ನೀವೇ ತೋರುತ್ತಿದ್ದೀರಿ ಅಂತ ಬಿಎಸ್‍ವೈ ವ್ಯಂಗ್ಯ ಮಾಡಿದ್ದಾರೆ.

     

  • ಮಿಷನ್ 150 ದಾಟಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್- ಆ ’40’ ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ನಡೆಯುತ್ತಾ?

    ಮಿಷನ್ 150 ದಾಟಲು ಅಮಿತ್ ಶಾ ಮಾಸ್ಟರ್ ಪ್ಲ್ಯಾನ್- ಆ ’40’ ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ನಡೆಯುತ್ತಾ?

    ಬೆಂಗಳೂರು: ಭಾನುವಾರ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಬಳಿಕ ರಾಜ್ಯದಲ್ಲಿ ಬಿರುಗಾಳಿಯ ರಾಜಕಾರಣ ಆರಂಭವಾಗುವ ಲಕ್ಷಣ ಕಾಣ್ತಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಎಲ್ಲಾ ಪಕ್ಷಗಳು ಸಕ್ರಿಯವಾಗಿವೆ. ಇತ್ತ ಚುನಾವಣಾ ಚಾಣಕ್ಯ ಎಂದು ಕರೆಸಿಕೊಳ್ಳುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಮಿಷನ್ 150 ಪ್ಲಸ್ ದಾಟಲು ಮಾಸ್ಟರ್ ಗೇಮ್ ಮಾಡ್ತಿದ್ದಾರೆ.

    ಏನದು ಮಾಸ್ಟರ್ ಪ್ಲಾನ್?: ಅಮಿತ್ ಶಾ 150 ಕ್ಷೇತ್ರಗಳಲ್ಲಿ ಜಯ ಗಳಿಸಲು ಉತ್ತರ ಪ್ರದೇಶ ಮಾಡೆಲ್ ತಂತ್ರಗಳನ್ನು ಬಳಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಕಾಂಗ್ರೆಸ್ ಮುಸ್ಲಿಂ ಮತಗಳನ್ನು ಒಡೆಯುವ ಪ್ರಾದೇಶಿಕ ಪಕ್ಷ ಜೆಡಿಎಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಿದೆ ಎಂದು ಸುದ್ದಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಮುಸ್ಲಿಂ ಮತಗಳನ್ನು ಛಿದ್ರಗೊಳಿಸಿ ಕಾಂಗ್ರೆಸ್‍ಗೆ ಶಾಕ್ ಕೊಡಲು ಬಿಜೆಪಿ ಚುನಾವಣಾ ತಂತ್ರಗಳನ್ನು ಮಾಡಲು ಯತ್ನಿಸುತ್ತಿದೆ ಎನ್ನಲಾಗಿದೆ.

    ಆ 40 ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣು: ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 120 ಕ್ಷೇತ್ರಗಳಲ್ಲಿ ಗೆಲವು ಪಡೆಯಲಿವೆ ಎಂಬ ಗುಪ್ತಚರ ಮಾಹಿತಿಗಳು ಅಮಿತಾ ಶಾ ಕೈ ತಲುಪಿವೆ. ಆದ್ರೆ ಮಿಷನ್ 150 ಪೂರ್ಣ ಮಾಡಲು ಮುಸ್ಲಿಂ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ. ಉತ್ತರಪ್ರದೇಶ ಚುನಾವಣೆಯಲ್ಲಿ ಬಿಎಸ್‍ಪಿ ಪಕ್ಷದಿಂದ 90 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ರು. ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರ ಈ ನಿರ್ಣಯದಿಂದ ಮುಸ್ಲಿಂ ಮತಗಳ ವಿಂಗಡನೆ ಆಗಿತ್ತು.

    ಮಾಯಾವತಿಯವರ ನಿರ್ಧಾರದಿಂದ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಬಂಪರ್ ಗೆಲವು ಸಿಕ್ಕಿತ್ತು ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ರು. ಜೆಡಿಎಸ್ ಜೊತೆ ಒಳ ಒಪ್ಪಂದ ಮಧ್ಯಸ್ಥಿಕೆಯನ್ನು ಪ್ರಭಾವಿ ಒಕ್ಕಲಿಗರು ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ. ಕರ್ನಾಟಕದಲ್ಲಿಯೂ ಅಮಿತ್ ಶಾ ಇದೇ ರಣತಂತ್ರಗಳನ್ನು ಪ್ರಯೋಗಿಸಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಯೋಚನೆ ಮಾಡುತ್ತಿದ್ದಾರೆ.

    ಹಾಗಾದ್ರೆ ಆ 40 ಕ್ಷೇತ್ರಗಳು ಯಾವವು?: ಈಗಾಗಲೇ ಅಮಿತ್ ಶಾ ಮುಸ್ಲಿಂ ಪ್ರಾಬಲ್ಯವಿರುವ 40 ಕ್ಷೇತ್ರಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ 5 ಕ್ಷೇತ್ರ, ಮೈಸೂರು, ಕಲಬುರಗಿ ಜಿಲ್ಲೆಯಲ್ಲಿ ತಲಾ 2 ಕ್ಷೇತ್ರ, ಬೀದರ್, ಬಳ್ಳಾರಿ, ರಾಯಚೂರು, ಶಿವಮೊಗ್ಗ, ಧಾರವಾಡ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ತಲಾ 1 ಕ್ಷೇತ್ರ ಹೀಗೆ ರಾಜ್ಯಾದ್ಯಂತ ಒಟ್ಟು 40 ಕ್ಷೇತ್ರಗಳ ಪಟ್ಟಿಯನ್ನು ಅಮಿತಾ ಶಾ ರೆಡಿ ಮಾಡಿದ್ದಾರೆ ಎನ್ನಲಾಗಿದೆ.

    ಈ 40 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ಒಪ್ಪಿಕೊಳ್ಳುತ್ತಾ ಅಥವಾ ಕಾಂಗ್ರೆಸ್ ಆರೋಪಿಸುವಂತೆ ಎಂಐಎಂ ಪಕ್ಷದ ಅಸಾವುದ್ದೀನ್ ಓವೈಸಿ ಜೊತೆ ಕೈ ಮಿಲಾಯಿಸುತ್ತದೆಯಾ ಅಥವಾ ಏಕಾಂಗಿಯಾಗಿಯೇ ಚುನಾವಣಾ ರಣರಂಗಕ್ಕೆ ಎಂಟ್ರಿ ನೀಡುತ್ತಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ನಾನು ಚುನಾವಣೆಯಲ್ಲಿ ಸೋತ್ರೆ ಜೆಡಿಎಸ್ ಅಭ್ಯರ್ಥಿ ಮನೆಯಲ್ಲಿ ಜೀತಕ್ಕೆ ಇರ್ತೀನಿ: ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ

    ನಾನು ಚುನಾವಣೆಯಲ್ಲಿ ಸೋತ್ರೆ ಜೆಡಿಎಸ್ ಅಭ್ಯರ್ಥಿ ಮನೆಯಲ್ಲಿ ಜೀತಕ್ಕೆ ಇರ್ತೀನಿ: ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ

    ತುಮಕೂರು: ಮುಂದಿನ ಚುನಾವಣೆಯಲ್ಲಿ ನಾನು ಸೋತರೆ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಮನೆಯಲ್ಲಿ ಜೀತಕ್ಕಿರುತ್ತೇನೆ. ವೀರಭದ್ರಯ್ಯ ಸೋತರೆ ನಮ್ಮ ಮನೆಯಲ್ಲಿ ಜೀತಕ್ಕಿರ್ತಾರಾ ಎಂದು ತುಮಕೂರು ಮಧುಗಿರಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಬಹಿರಂಗ ಸವಾಲು ಹಾಕಿದ್ದಾರೆ.

    ಈ ರೀತಿಯ ಸವಾಲು ಮಾಡಲು ಜನರ ಶಕ್ತಿಯೇ ನನಗೆ ಪ್ರೇರಣೆಯಾಗಿದೆ. ಡಿಸಿಸಿ ಬ್ಯಾಂಕ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದು ವೇಳೆ ಆರೋಪಗಳೆಲ್ಲಾ ಸಾಬೀತಾದರೇ ನಾನು ಜೈಲಿಗೆ ಹೋಗಲು ಸಿದ್ಧನಾಗಿದ್ದೇನೆ. ಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಅಂತಾ ಅಂದ್ರು.

    2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ಎನ್.ರಾಜಣ್ಣ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದ ವೀರಭದ್ರಯ್ಯ ವಿರುದ್ಧ 15 ಸಾವಿರ ಮತಗಳ ಅಂತರದಿಂದ ಗೆಲುವನ್ನು ಪಡೆದುಕೊಂಡಿದ್ದರು. ಈ ಬಾರಿಯು ವೀರಭದ್ರಯ್ಯನವರು ಕೆ.ಎನ್.ರಾಜಣ್ಣವರಿಗೆ ಪ್ರಬಲ ಎದುರಾಳಿ ಆಗಿದ್ದಾರೆ. ಇನ್ನೇನು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷದ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ

  • ಮೋದಿ ಸರ್ಕಾರದ ಬಜೆಟ್‍ನಲ್ಲಿ ಸಿಗಲಿದೆಯಾ ಬಂಪರ್ ಆಫರ್?

    ಮೋದಿ ಸರ್ಕಾರದ ಬಜೆಟ್‍ನಲ್ಲಿ ಸಿಗಲಿದೆಯಾ ಬಂಪರ್ ಆಫರ್?

    ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾಗಲು ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಸರ್ಕಾರದ ಕಡೆಯ ಪೂರ್ಣ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿವೆ. ಕಳೆದ ಮೂರು ಬಜೆಟ್ ಗಿಂತಲೂ ಈ ಬಜೆಟ್ ಪ್ರಾಮುಖ್ಯತೆ ಪಡೆದುಕೊಳ್ಳಲಿದ್ದು ಕಾಮನ್ ಮ್ಯಾನ್ ಗೆ ಹಾಗು ಚುನಾವಣಾ ಹೊಸ್ತಿರಲಿಲ್ಲಿರುವ ಕರ್ನಾಟಕ್ಕೆ ಏನು ಸಿಗಬಹುದು ಇಲ್ಲಿದೆ ಮಾಹಿತಿ.

    ಬಜೆಟ್‍ನಲ್ಲಿ ಸಿಗಲಿದಿಯಾ ಬಂಪರ್ ಆಫರ್…?
    ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪೂರ್ಣಾವಧಿಯ ನಾಲ್ಕನೇ ಬಜೆಟ್ ಇದು ಮುಂದಿನ ವರ್ಷ ಚುನಾವಣೆ ಹಿನ್ನೆಲೆ ಅದು ಕೇವಲ ಚುನಾವಣಾ ಬಜೆಟ್ ಆಗಲಿದೆ. ಹೀಗಾಗಿ ಈ ವರ್ಷದ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ವ್ಯಕ್ತವಾಗುತ್ತಿದೆ. ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಈ ಭಾರಿ ಹಲವು ವಿಶೇಷತೆಗಳು ಬಜೆಟ್‍ನಲ್ಲಿವೆ ಎಂದು ಹೇಳಲಾಗಿದೆ. ಸ್ವತಃ ಅವರೇ ಹೇಳಿದಂತೆ ಗ್ರಾಮೀಣ ಭಾರತದ ಕೃಷಿಕರು, ಕಾರ್ಮಿಕ ವಲಯದ ಬಲವರ್ಧನೆ ಗೆ ಹೆಚ್ಚು ಗಮನಹರಿಸಲಾಗುವುದು. ಕಾಮನ್ ಮ್ಯಾನ್ ನಿರೀಕ್ಷೆ ಗಳನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಆದಾಯ ತೆರಿಗೆ ನಿಯಮ ಸಡಿಲಿಕೆ ಹಾಗು ಆದಾಯ ತೆರಿಗೆ ಮಿತಿ ಹೆಚ್ಚಳ ಸಾಧ್ಯತೆ ಇದ್ದು ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ಇಡಲಿದೆ ಎಂದು ಭಾವಿಸಲಾಗಿದೆ. ಇದನ್ನೂ ಓದಿ: ಹಣಕಾಸು ಸಚಿವರು ಬಜೆಟ್‍ಗೂ ಮುನ್ನ ಈ ಸೂಟ್‍ಕೇಸ್ ತರೋದು ಯಾಕೆ?

    ಬಜೆಟ್ ನಲ್ಲಿ ಇರಬಹುದಾದ ಪ್ರಮುಖ ಅಂಶಗಳೇನು?
    * ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ.
    * ರೈತರ ಸಾಲ ಅಥಾವ ಬಡ್ಡಿ ಮನ್ನಾ ಬದಲಿಗೆ ಸಬ್ಸಡಿ ದರದಲ್ಲಿ ಪೂರಕ ವಸ್ತುಗಳ ಪೂರೈಕೆ ಹಾಗೂ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಒದಗಿಸುವ ಸಾಧ್ಯತೆ.
    * ಸರ್ಕಾರ ನರೇಗಾದಂತ ಯೋಜನೆಗಳ ಮೂಲಕ ಗ್ರಾಮೀಣಾ ಭಾಗದ ನೌಕರರ ಕೂಲಿ ಹೆಚ್ಚಳಕ್ಕೆ ಪ್ರಯತ್ನಿಸಬಹುದು.
    * ಜಿಎಸ್‍ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುವ ಸಾಧ್ಯತೆ.
    * ಉದ್ಯೋಗ ಸೃಷ್ಟಿ ವಿಫಲದಂತ ಆರೋಪ ಎದುರಿಸುತ್ತಿರುವ ಸರ್ಕಾರ ಐಟಿ ಕಾನೂನುಗಳುಗೆ ಬದಲಾವಣೆ ತಂದು ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಕಲ್ಪಿಸಬಹುದು.
    * ಆದಾಯ ತೆರಿಗೆ ವಿಚಾರದಲ್ಲಿ ಭಾರಿ ನಿರೀಕ್ಷೆಗಳಿದ್ದು 2.5 ಲಕ್ಷದ ಮಿತಿಯಿಂದ ಮೂರು ಲಕ್ಷಕ್ಕೆ ಹೆಚ್ಚಳ ಮಾಡಬಹುದು ಮತ್ತು ಆದಾಯ ತೆರಿಗೆ ಸಲ್ಲಿಕೆ ನಿಯಮಗಳನ್ನು ಕೊಂಚ ಸಡಿಸುವ ಸಾಧ್ಯತೆ
    * ದೇಶದ ಪ್ರತಿ ವ್ಯಕ್ತಿಗೂ ಐದು ಲಕ್ಷದ ವರೆಗಿನ ಏಕ ರೂಪದ ವಿಮೆ ಭಾಗ್ಯ ಕಲ್ಪಿಸಬಹುದು.
    * ರೈಲ್ವೆ ವ್ಯವಸ್ಥೆ ಯಲ್ಲಿ ಹೊಸ ಯೋಜನೆ ಗಳನ್ನು ಘೋಷಿಸದೇ ಘೋಷಿತ ಯೋಜನೆಗಳಿಗೆ ಹಣ ಒದಗಿಸುವುದು ನಿಲ್ದಾಣಗಳನ್ನು ಉನ್ನತ ದರ್ಜೆಗೆ ಏರಿಸುವುದು.
    * ಮೂಲಭೂತ ಸೌಕರ್ಯ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಪ್ರೋತ್ಸಾಹ ನೀಡುವುದು.
    * 30% ನಷ್ಟಿರುವ ಕಾರ್ಪೋರೇಟ್ ತೆರಿಗೆಯನ್ನು 25% ಇಳಿಕೆ ಮಾಡಬಹುದು.
    * ನೋಟ್ ಬ್ಯಾನ್ ಹಿನ್ನೆಲೆ ಹಣ ಬ್ಯಾಂಕುಗಳಲ್ಲಿ ಕೇಂದ್ರಕೃತವಾದ ಹಿನ್ನೆಲೆ? ಉಳಿತಾಯ ಹಾಗೂ ಠೇವಣಿಗಳ ಮೇಲೆ ಬಡ್ಡಿ ದರ ಇಳಿಕೆ ಮಾಡಿ ದೀರ್ಘಾವಧಿಯ ಸಾಲಗಳಿಗೆ ಒತ್ತು ನೀಡಬಹುದು.

    ಕಳೆದ ಬಾರಿ ಬಜೆಟ್‍ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 800 ಕೋಟಿ ರೂ.ಗಳಷ್ಟು ಅನುದಾನ ಒದಗಿಸಿ, ವಿವಿಧ ಕಾಮಗಾರಿಗಳಿಗೆ ಬೇರೆ ಬೇರೆ ಮೂಲಗಳಿಂದ ಅನುದಾನ ಲಭ್ಯವಾಗುವಂತೆ ಮಾಡಲಾಗಿತ್ತು. ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಡಬಲ್ ಆಗುವ ನಿರೀಕ್ಷೆಯಲ್ಲಿದ್ದೇವೆ. ರೈಲ್ವೆ ಯೋಜನೆಗಳಿಗೆ ಜಮೀನು, ಹಣದ ಸಹಭಾಗಿತ್ವ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಹೀಗಾಗಿ, ಕೇಂದ್ರ ನಮ್ಮ ಬಗ್ಗೆ ವಿಶೇಷ ಮುತುವರ್ಜಿ ತೋರಬಹುದು ಅಂತಾ ನಿರೀಕ್ಷೆ ಮಾಡಲಾಗಿದೆ. ಒಟ್ನಲ್ಲಿ ಈ ಎಲ್ಲ ನಿರೀಕ್ಷೆಗಳ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

  • ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು: ಪಬ್ಲಿಕ್ ಸಮೀಕ್ಷೆಯಲ್ಲಿ ಜನ ಏನಂತಾರೆ?

    ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು: ಪಬ್ಲಿಕ್ ಸಮೀಕ್ಷೆಯಲ್ಲಿ ಜನ ಏನಂತಾರೆ?

    ಬೆಂಗಳೂರು: 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮೆಗಾ ಸಮೀಕ್ಷೆಯನ್ನು ನಡೆಸಿದ್ದು, ಈ ಸಮೀಕ್ಷೆಯ ಎರಡು ಭಾಗ ಈಗಾಗಲೇ ಪೂರ್ಣಗೊಂಡಿದೆ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಸಿಕ್ಕಿದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

    ಮೆಗಾ ಸಮೀಕ್ಷೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು? ಮೋದಿ/ಅಮಿತ್ ಶಾರನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ? ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು? ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಇತ್ಯಾದಿ ಪ್ರಶ್ನೆಗಳನ್ನೂ ಕೇಳಲಾಗಿದ್ದು, ಈ ಪ್ರಶ್ನೆಗೆ ಜನರು ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗಿದೆ.

    1. ನಿಮ್ಮ ಪ್ರಕಾರ ಮುಂದಿನ ಸಿಎಂ ಯಾರಾಗಬೇಕು?
    ಸಿದ್ದರಾಮಯ್ಯ – 32.13%
    ಮಲ್ಲಿಕಾರ್ಜುನ ಖರ್ಗೆ – 4.32%
    ಜಿ.ಪರಮೇಶ್ವರ್ – 3.02%
    ಬಿಎಸ್ ಯಡಿಯೂರಪ್ಪ – 31.19%
    ಎಚ್.ಡಿ ಕುಮಾರಸ್ವಾಮಿ -22.29%
    ಅನಂತ್ ಕುಮಾರ್ ಹೆಗಡೆ -5.39%
    ಇತರೆ – 1.67%    ಇದನ್ನೂ  ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

     

    2. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗಬೇಕು?
    ಸಿದ್ದರಾಮಯ್ಯ – 41.02%
    ಮಲ್ಲಿಕಾರ್ಜುನ ಖರ್ಗೆ – 16.33%
    ಜಿ.ಪರಮೇಶ್ವರ್ – 15.32%
    ಡಿ.ಕೆ.ಶಿವಕುಮಾರ್ – 10.95%
    ಏನೂ ಹೇಳಲ್ಲ – 15.53%
    ಇತರೆ – 0.85%   ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

    3. ಮೋದಿ/ ಅಮಿತ್ ಶಾರನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ?
    ಖಂಡಿತಾ ಇದೆ – 27.20%
    ಹೌದು – 23.12%
    ಪರವಾಗಿಲ್ಲ – 23.12%
    ಖಂಡಿತಾ ಇಲ್ಲ – 23.15%
    ಏನೂ ಹೇಳಲ್ಲ – 3.41%  ಇದನ್ನೂ  ಓದಿ: :ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ

    4. ಮುಂದಿನ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ?
    ಹೌದು – 45.26%
    ಇಲ್ಲ – 39.21%
    ಏನೂ ಹೇಳಲ್ಲ -15.53%

     

    5. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು?
    ಬಿಜೆಪಿ + ಜೆಡಿಎಸ್ – 39.21%
    ಕಾಂಗ್ರೆಸ್ +ಜೆಡಿಎಸ್ – 47.38%
    ಬಿಜೆಪಿ + ಕಾಂಗ್ರೆಸ್ – 2.04
    ಯಾವುದು ಇಲ್ಲ – 11.37%

    6. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
    ಪೂರ್ಣ ತೃಪ್ತಿ, ಸಂತೋಷ – 41.88%
    ತೃಪ್ತಿ ಇದೆ, ಸಂತೋಷ ಇಲ್ಲ – 33.87%
    ಅತೃಪ್ತಿ ಇದೆ. ಕೋಪ ಇಲ್ಲ – 18.60%
    ಅತೃಪ್ತಿ ಇದೆ, ಕೋಪವೂ ಇದೆ – 5.66%

    7. ಮುಂದಿನ ಚುನಾವಣೆಯಲ್ಲಿ ನಿಮ್ಮ ಶಾಸಕರಿಗೆ ಟಿಕೆಟ್ ಸಿಗಬೇಕು ಎಂದು ಬಯಸುತ್ತೀರಾ?
    ಹೌದು – 54.87%
    ಇಲ್ಲ, ಹೊಸ ಮುಖ ಬೇಕು – 40.35%
    ಏನೂ ಹೇಳಲ್ಲ – 4.78%

  • ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ತಲುಪಲಿದೆ: ಮುದ್ದಹನುಮೇಗೌಡ

    ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ತಲುಪಲಿದೆ: ಮುದ್ದಹನುಮೇಗೌಡ

    ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಮ್ಮ ನಾಯಕರು ಒಗ್ಗಟ್ಟಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರಸ್ ಮ್ಯಾಜಿಕ್ ನಂಬರ್ ತಲುಪಲಿದೆ ಎಂದು ತುಮಕೂರಿನ ಕಾಂಗ್ರೆಸ್ ಸಂಸದ ಎಸ್.ಪಿ ಮುದ್ದಹನುಮೇಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪೈಪೋಟಿ  ನೀಡಲಿದ್ದು ಜೆಡಿಎಸ್ ನಿರ್ಣಾಯಕ ಸ್ಥಾನ ವಹಿಸಲಿದೆ. ಚುನಾವಣೆಗೆ ಇನ್ನು ನಾಲ್ಕು ತಿಂಗಳು ಬಾಕಿ ಇದೆ. ಈ ವೇಳೆಗೆ ಕಾಂಗ್ರೆಸ್ ಮತ್ತಷ್ಟು ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

    ಪಬ್ಲಿಕ್ ಟಿವಿ ಸರ್ವೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಈ ನಾಲ್ಕು ವರ್ಷದಲ್ಲಿ ಸಮರ್ಥ ಆಡಳಿತ ಕಾಂಗ್ರೆಸ್ ನೀಡಿದೆ. ಸಾಕಷ್ಟು ಜನಪರ ಯೋಜನೆಗಳು ಗ್ರಾಮೀಣ ಭಾಗದಲ್ಲಿ ತಲುಪಿದೆ ಎಂದರು. ಇದನ್ನೂ  ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

    ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗಕ್ಕೆ ಸಮಾನ ನ್ಯಾಯ ನೀಡಿದ್ದು, ಹತ್ತು ಹದಿನೈದು ಸ್ಥಾನ ಹೆಚ್ಚು ಮಾಡಿಕೊಳ್ಳುವುದು ಅಸಾಧ್ಯವಲ್ಲ. ಉಳಿದಿರುವ ನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ವೇಗವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದರು.ಇದನ್ನೂ  ಓದಿ: :ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದ

  • ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಯ್ತು, ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಯೋಗಿ

    ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಯ್ತು, ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಯೋಗಿ

    ಬೆಂಗಳೂರು: ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಗಿದ್ದು ಮತ್ತೆ ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಲಿದ್ದಾರೆ.

    ಜನವರಿ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಬೆಂಗಳೂರು ನಗರ ಕೇಂದ್ರಿತ ಪರಿವರ್ತನಾ ಸಮಾವೇಶ ಗೋವಿಂದರಾಜನಗರದಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಷಣ ಮಾಡಲಿದ್ದಾರೆ.

    ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ರಾಜ್ಯದ ಕಾಂಗ್ರೆಸ್ ನಾಯಕರು ಯೋಗಿಯನ್ನು ಟೀಕಿಸಿ ಹೇಳಿಕೆ ನೀಡಿದ್ದರು.

    ಯಾಕೆ ಯೋಗಿಗೆ ಮಣೆ?
    ಬಿಜೆಪಿ ಪಾಳೆಯದಲ್ಲಿ ಯೋಗಿ ಆದಿತ್ಯನಾಥ್ ಈಗ ಸ್ಟಾರ್ ಪ್ರಚಾರಕರಾಗಿದ್ದು ಉತ್ತರ ಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತ್ತು. ಇದಾದ ಬಳಿಕ ಗುಜರಾತ್ ನಲ್ಲಿ ಯೋಗಿ ಭಾಷಣ ಮಾಡಿದ್ದು ಅಲ್ಲೂ ಯಶಸ್ಸು ಸಿಕ್ಕಿತ್ತು.

    ಗುಜರಾತ್ ಚುನಾವಣೆಯ ಒಟ್ಟು 182 ಕ್ಷೇತ್ರಗಳನ್ನು ಬಿಜೆಪಿ ಎ, ಬಿ, ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಿತ್ತು. ಜಯ ಸಿಗುವ ಕ್ಷೇತ್ರಗಳನ್ನು ಎ, ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳನ್ನು ಬಿ, ಗೆಲ್ಲಲು ಸಿಕ್ಕಾಪಟ್ಟೆ ಕಷ್ಟವಿದೆ ಎನ್ನುವ ಕ್ಷೇತ್ರಗಳನ್ನು ಸಿ ಗುಂಪಿಗೆ ಸೇರಿಸಿತ್ತು. ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಈ 35 ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಪರಿಣಾಮ ಬಿ ಮತ್ತು ಸಿ ಗುಂಪಿನಲ್ಲಿದ್ದ ಒಟ್ಟು 35 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಗೆಲುವು ಕಂಡಿತ್ತು. ಈ ಎಲ್ಲ ಕಾರಣಕ್ಕಾಗಿ ಗುಜರಾತ್ ತಂತ್ರವನ್ನೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲೂ ಬಳಸಲು ಮುಂದಾಗುತ್ತಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಮುಂದಾಗಿದೆ ಎನ್ನಲಾಗಿದೆ.

    ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಹೋದ ಬಳಿಕ ಕಾಂಗ್ರೆಸ್ #YogiInsultsKarnataka ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯನ್ನು ಟೀಕಿಸಿತ್ತು.

    https://youtu.be/c5Mb4OAwpa8