Tag: karnataka elections

  • ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಸಿಎಂ ಸಿದ್ದರಾಮಯ್ಯ!

    ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಲು ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಸಿಎಂ ಸಿದ್ದರಾಮಯ್ಯ!

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಎಲ್ಲ ಪಕ್ಷದ ನಾಯಕರು ಗೆಲುವಿಗಾಗಿ ನಾನಾ ರಾಜಕೀಯ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಪಡೆದುಕೊಂಡಿದ್ದು, ರಾಜ್ಯದ ಚುನಾವಣೆಯ ಮೇಲೆ ಪ್ರಭಾವ ಬೀರುತ್ತಾ ಎಂಬ ಭಯವೊಂದು ಕಾಂಗ್ರೆಸ್ ಪಾಳಯದಲ್ಲಿ ಹುಟ್ಟಿಕೊಂಡಿದೆ ಎನ್ನಲಾಗಿದೆ.

    ರಾಜ್ಯದಲ್ಲಿ ಕಾಂಗ್ರೆಸ್‍ನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ಶತಾಗತಯ ಪ್ರಯತ್ನ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ತ್ರಿಪುರ, ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಅನುಸರಿದ ತಂತ್ರ ಅನುಕರಣೆ ಮಾಡಲು ಮುಂದಾಗುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

    ಈಗಾಗಲೇ ಬಿಜೆಪಿಯ ಪ್ರಬಲ ನಾಯಕರನ್ನು ಎನ್ನಲಾದ ಆನಂದ್ ಸಿಂಗ್, ಬಿ.ನಾಗೇಂದ್ರ ಮತ್ತು ಅಶೋಕ್ ಖೇಣಿ ಅವರನ್ನು ಕಾಂಗ್ರೆಸ್ ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯಾಗಿ ಬೆಳಗಾವಿ ವಿಭಾಗದ ಪ್ರಮುಖ ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಖುದ್ದು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಬಲ ಅಭ್ಯರ್ಥಿಗಳು ಕಾಂಗ್ರೆಸ್ ನತ್ತ ವಲಸೆ ಹೋಗುವುದನ್ನು ತಪ್ಪಿಸಲು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗೊಡೆಗೊಳಿಸಲು ನಿರ್ಧರಿಸಿದೆ ಅಂತಾ ಎನ್ನಲಾಗುತ್ತಿದೆ.


    ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. 2013ರ ಚುನಾವಣೆಯಲ್ಲಿ ಉಮೇಶ್ ಕತ್ತಿ, ತಮ್ಮ ಪ್ರತಿ ಸ್ಪರ್ಧಿಯಾಗಿದ್ದ ಕಾಂಗ್ರೆಸ್‍ನ ರವಿ ಬಸವರಾಜ್ ಕರಲೆ ಅವರನ್ನು 57 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿ ಗೆಲುವನ್ನು ಸಾಧಿಸಿದ್ದರು. ಹೀಗಾಗಿ ಕಾಂಗ್ರೆಸ್ ಶಾಸಕ ಉಮೇಶ್ ಕತ್ತಿ ಅವರನ್ನು ಸೆಳೆಯುವ ತಂತ್ರವನ್ನು ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಇನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಹ ಬೆಳಗಾವಿಯ ಅರಭಾವಿ ವಿಧಾನಸಭಾ ಕ್ಷೇತ್ರದ ಪ್ರಬಲ ನಾಯಕರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಶಾಸಕರಾಗಿದ್ದಾರೆ. 2004 ಮತ್ತು 2008ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರೆ, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು 75,221 ಮತಗಳ ಅಂತರದಿಂದ ಸೋಲಿಸಿ ವಿಜಯ ಮಾಲೆ ಧರಿಸಿದ್ದರು.

  • ಕೆಪಿಜೆಪಿಯಲ್ಲಿ ಏನ್ ಆಗ್ತಿದೆ? ಗೊಂದಲ ಆಗಿದ್ದು ಎಲ್ಲಿ? – ಉಪ್ಪಿ ಮಾತಲ್ಲಿ ಕೇಳಿ

    ಕೆಪಿಜೆಪಿಯಲ್ಲಿ ಏನ್ ಆಗ್ತಿದೆ? ಗೊಂದಲ ಆಗಿದ್ದು ಎಲ್ಲಿ? – ಉಪ್ಪಿ ಮಾತಲ್ಲಿ ಕೇಳಿ

    ಬೆಂಗಳೂರು: ನನ್ನ ಮತ್ತು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ(ಕೆಪಿಜೆಪಿ) ನಾಯಕರ ಮಧ್ಯೆ ಗೊಂದಲ ಇರುವುದು ನಿಜ ಎಂದು ರಿಯಲ್ ಸ್ಟಾರ್ ಉಪೇಂದ್ರ ಒಪ್ಪಿಕೊಂಡಿದ್ದಾರೆ.

    ಮಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಆರಂಭದಲ್ಲೇ ನಮಗೆ ನಾಯಕರು ಬೇಡ, ಕಾರ್ಮಿಕರು ಬೇಕು ಎಂದು ಹೇಳಿದ್ದೆ. ಹೀಗಾಗಿ ಬಹಳಷ್ಟು ಜನ ಅಭ್ಯರ್ಥಿಗಳು ಕ್ಷೇತ್ರದ ಬಗ್ಗೆ ತಿಳಿದುಕೊಂಡು ಸಂದರ್ಶನಕ್ಕೆ ಹಾಜರಾಗಿದ್ದರು. ಆದರೆ ಈ ಮಧ್ಯೆ ಪಕ್ಷದ ಹಿರಿಯು ಕೆಲ ಮಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಿದರು. ಈ ವಿಚಾರ ನನಗೆ ಸರಿ ಕಾಣಲಿಲ್ಲ ಎಂದು ತಿಳಿಸಿದರು.

    ಕೆಲವರಿಗೆ ಲೆಟರ್ ನೀಡಿದ್ದ ವಿಚಾರ ತಿಳಿದು ಸಂದರ್ಶನಕ್ಕೆ ಹಾಜರಾದ ವ್ಯಕ್ತಿಗಳು ಇದು ಏನು ಎಂದು ನನ್ನಲ್ಲಿ ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಮುಂದೆ ಚುನಾವಣೆ ವೇಳೆ ಸಂದರ್ಶನದಲ್ಲಿ ಆಯ್ಕೆಯಾಗದ ವ್ಯಕ್ತಿಗಳನ್ನು ಹೊರತು ಪಡಿಸಿ ಬೇರೆಯವರಿಗೆ ಬಿ ಫಾರಂ ನೀಡಿದರೆ ಏನು ಎನ್ನುವ ಪ್ರಶ್ನೆಯೂ ಮೂಡಿತು. ಎಲ್ಲರಿಗೂ ನಾನು ಉತ್ತರ ನೀಡಬೇಕಾದ ವ್ಯಕ್ತಿಯಾದ ಕಾರಣ ಈ ನಿರ್ಧಾರಕ್ಕೆ ಆಕ್ಷೇಪಿಸಿದ್ದಕ್ಕೆ ನಮ್ಮ ನಡುವೆ ಸಣ್ಣ ಗೊಂದಲ ಇದೆ ಎಂದು ವಿವರಿಸಿದರು.

    ಈಗ ಭಿನ್ನಮತ ಸ್ಫೋಟಗೊಂಡಿದ್ದು ಹೇಗೆ ಎನ್ನುವ ಪ್ರಶ್ನೆಗೆ, ಆರಂಭದ ಎರಡು ತಿಂಗಳು ಚೆನ್ನಾಗಿಯೇ ನಡೆದಿತ್ತು. ಆದರೆ ನಂತರದ ದಿನಗಳಲ್ಲಿ ಈ ಬೆಳವಣಿಗೆ ಆಯ್ತು. ಮುಂದೆ ಇದೆಲ್ಲ ಸರಿ ಹೋಗಬಹುದು ಎನ್ನುವ ಆಶಾವಾದವನ್ನು ನಾನು ಇಟ್ಟುಕೊಂಡಿದ್ದೆ. ಆದರೆ ನಮ್ಮ ನಾಯಕರು ದಿಢೀರ್ ಆಗಿ ಮಾಧ್ಯಮಗಳ ಮುಂದೆ ಹೋಗಿದ್ದರಿಂದ ವಿಚಾರ ಇವತ್ತು ಬಹಿರಂಗವಾಗಿದೆ ಎಂದು ತಿಳಿಸಿದರು.

    ಪಕ್ಷದಲ್ಲಿನ ಗೊಂದಲದ ವಿಚಾರದ ಬಗ್ಗೆ ಭಾನುವಾರ ಸಭೆ ನಡೆದಿತ್ತು. ಈ ವೇಳೆ ನಮ್ಮ ಪರವಾಗಿ ನಾಲ್ಕು ಮಂದಿ ಭಾಗವಹಿಸಿದ್ದರು. ಇಲ್ಲೂ ಸರಿಯಾದ ನಿರ್ಧಾರಕ್ಕೆ ಬರಲಾಗಲಿಲ್ಲ. ಹೀಗಾಗಿ ಮಂಗಳವಾರ ಮತ್ತೊಂದು ಸಭೆ ನಡೆಸಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ನೀವು ಬಿಜೆಪಿ ಸೇರುತ್ತೀರಾ ಎಂದು ಕೇಳಿದ್ದಕ್ಕೆ, ಅಯ್ಯಯ್ಯೋ ಅಂಥಹದ್ದು ಏನಿಲ್ಲ ಎಂದು ಹೇಳಿ ಕೈ ಮುಗಿದು ಸುದ್ದಿಗೋಷ್ಠಿಯಿಂದ ಎದ್ದು ಹೋದರು. ಇದನ್ನೂ ಓದಿ:ಪಕ್ಷ ಕಟ್ಟಿದ ಉಪ್ಪಿಗೆ ಕೆಪಿಜೆಪಿಯಿಂದ ಗೇಟ್‍ಪಾಸ್?

     

  • ಪಕ್ಷ ಕಟ್ಟಿದ ಉಪ್ಪಿಗೆ ಕೆಪಿಜೆಪಿಯಿಂದ ಗೇಟ್‍ಪಾಸ್?

    ಪಕ್ಷ ಕಟ್ಟಿದ ಉಪ್ಪಿಗೆ ಕೆಪಿಜೆಪಿಯಿಂದ ಗೇಟ್‍ಪಾಸ್?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪಕ್ಷದಿಂದ ಉಪೇಂದ್ರ ಹೊರ ನಡೆಯುವ ಸಾಧ್ಯತೆಯಿದೆ.

    ಹೌದು. ಕೆಪಿಜೆಪಿ ಸಹ ಸಂಸ್ಥಾಪಕ ಮಹೇಶ್ ಗೌಡ ಜೊತೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ ಬಂದ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನವೇ ಕೆಪಿಜೆಪಿ ಪಕ್ಷವನ್ನು ತ್ಯಜಿಸುತ್ತಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಮಹೇಶ್ ಗೌಡ ಹೆಸರಿನಲ್ಲಿ ಕೆಪಿಜಿಪಿ ನೊಂದಣಿಯಾಗಿದ್ದು, ಭಾನುವಾರ ಪಕ್ಷದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಮಹೇಶ್ ಗೌಡ ಇರಿಸಿದ ಬೇಡಿಕೆಗಳಿಗೆ ಉಪೇಂದ್ರ ಸಮ್ಮತಿ ನೀಡದ ಹಿನ್ನೆಲೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಒಂದು ವೇಳೆ ನನ್ನ ಬೇಡಿಕೆಗೆ ಒಪ್ಪಿಗೆ ನೀಡದೇ ಇದ್ದರೆ ಉಪೇಂದ್ರ ಅವರನ್ನು ಪಕ್ಷದಿಂದಲೇ ಉಚ್ಛಾಟಿಸುವುದಾಗಿ ಮಹೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

    ಗೊಂದಲ ಮೂಡಿದ ಹಿನ್ನೆಲೆಯಲ್ಲಿ ಮಂಗಳವಾರ ಪಕ್ಷದ ಸಭೆ ಕರೆಯುವುದಾಗಿ ಉಪೇಂದ್ರ ತಿಳಿಸಿದ್ದಾರೆ.

    https://youtu.be/T49yoBbh_Vk

    https://www.youtube.com/watch?v=oFdyrl5xSTg

  • ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು?

    ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು?

    ನವದೆಹಲಿ: ನಿನ್ನೆಯ ಹೋಳಿ ಹಬ್ಬಕ್ಕೆ ಹಲವು ಬಣ್ಣಗಳಿತ್ತು. ಇವತ್ತು ಒಂದೇ ಬಣ್ಣ ಅದೇ ಕೇಸರಿ. ಮುಳುಗುವ ಸೂರ್ಯನೂ ಕೇಸರಿಯಾಗಿದ್ದಾನೆ ಎಂದು ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಗೆಲುವನ್ನು ಬಣ್ಣಿಸಿದ್ದಾರೆ.

    ಸಂಜೆ ದೆಹಲಿಯ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮಾತನಾಡಿದ ಮೋದಿ, ಈ ವಿಜಯಯಾತ್ರೆಯ ಶಿಲ್ಪಿ ಅಮಿತ್‍ಶಾ ಎಂದು ಬಣ್ಣಿಸಿದರು. ಈ ಮಧ್ಯೆ ಆಜಾನ್ ಕೇಳಿ ಕೆಲ ನಿಮಿಷ ಮಾತು ನಿಲ್ಲಿಸಿದರು. ನಂತರ ಮಾತು ಆರಂಭಿಸಿ, ವಾಸ್ತು ಪ್ರಕಾರ ಈಶಾನ್ಯ ದಿಕ್ಕಿಗೆ ಮಹತ್ವ ಹೆಚ್ಚಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಈಶಾನ್ಯ ರಾಜ್ಯಗಳ ಗೆಲುವು ರಾಜ್ಯಗಳು ಪ್ರಮುಖವಾದವು. ಈ ಗೆಲುವು ಹುಮ್ಮಸ್ಸು ತುಂಬಿದೆ. ಹಿಂಸಾಚಾರದಲ್ಲಿ ಮಡಿದ ಕಾರ್ಯಕರ್ತರಿಗೆ ಗೆಲುವನ್ನು ಅರ್ಪಿಸುತ್ತೇನೆ ಎಂದರು.

    ಕರ್ನಾಟಕದಲ್ಲಿ 6 ತಿಂಗಳಲ್ಲಿ 2 ಡಜನ್ ಕಾರ್ಯಕರ್ತರ ಕೊಲೆಯಾಗಿದೆ. ಕೇರಳ, ಪಶ್ಚಿಮ ಬಂಗಾಳದಲ್ಲಿ ನಮ್ಮ ಕಾರ್ಯಕರ್ತರ ಕಗ್ಗೊಲೆ ಆಗುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಗೆಲುವನ್ನು ಹರಡುತ್ತಲೇ ಇದ್ದಾರೆ. ಕಾಂಗ್ರೆಸ್‍ಗೆ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಛೇಡಿಸಿದರು.

    ಕರ್ನಾಟಕದಲ್ಲಿಯೂ ಗೆಲುವು ನಮ್ಮದೆ:
    ಈಶಾನ್ಯ ರಾಜ್ಯಗಳಲ್ಲಿ ಸಾಧಿಸಿರುವ ಗೆಲುವಿನ ಸಂತಸದಲ್ಲಿರುವ ಅಮಿತ್ ಶಾ ಕರ್ನಾಟಕ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಉತ್ಸಾಹದಿಂದ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತ್ರಿವಳಿ ರಾಜ್ಯಗಳಲ್ಲಿ ಸಿಕ್ಕ ಭರ್ಜರಿ ಫಲಿತಾಂಶದಿಂದ ಕರ್ನಾಟಕದ ಮೇಲೆ ನಮ್ಮ ವಿಶ್ವಾಸ ಹೆಚ್ಚಾಗಿದೆ. ಇದೇ ಉತ್ಸಾಹದಿಂದ ವಿಜಯ ಪತಾಕೆಯನ್ನ ಹಾರಿಸಲು ಕರ್ನಾಟಕದ ಕಡೆಗೆ ಸಾಗುತ್ತೇವೆ ಎಂದರು.

    ಕರ್ನಾಟಕ ಸೇರಿದಂತೆ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ನಮ್ಮ ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲಿದ್ದು, ತ್ರಿಪುರಾದಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೂ ನಮ್ಮ ಇತರ ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲಿದ್ದೇವೆ. 25 ವರ್ಷಗಳ ನಂತರ ಸಿಪಿಎಂ ಕಮ್ಯೂನಿಸ್ಟ್ ಸರ್ಕಾರದ ಆಡಳಿತ ಈಗ ಅಂತ್ಯವಾಗಿದ್ದು, ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ತನ್ನ ಶಕ್ತಿಯನ್ನು ಇಡೀ ದೇಶಕ್ಕೆ ತೋರಿಸುತ್ತಿದೆ ಎಂದರು.

    ತ್ರಿಪುರಾದಲ್ಲಿ ನಡೆದ ರಾಜಕೀಯ ಹಿಂಸಾಚಾರದಲ್ಲಿ ಬಿಜೆಪಿಯ 9 ಕಾರ್ಯಕರ್ತರು ದುರ್ಮರಣ ಹೊಂದಿದ್ದರು. ಇದರ ವಿರುದ್ಧ ಸಿಡಿದ ಅಮಿತ್ ಶಾ, ಎಡಪಕ್ಷಗಳ ಆಳ್ವಿಕೆ ಭಾರತಕ್ಕೆ ಯಾವತ್ತು ಒಳ್ಳೆಯದಾಗಿಲ್ಲ. ಇಂತಹವರು ಯಾರಿಗೂ ಬೇಡ. ಕಾಂಗ್ರೆಸ್ ಪಕ್ಷವು ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಯಾವುದೇ ಸ್ಥಾನಗಳನ್ನ ಗೆದ್ದಿಲ್ಲ ಎಂದು ಹೇಳಿದರು.

    ಬಿಜೆಪಿಯು ಹಣ ಮತ್ತು ಕಾರ್ಯಕರ್ತರ ಶ್ರಮವನ್ನ ದುರುಪಯೋಗ ಪಡಿಸಿಕೊಂಡಿದೆ ಎನ್ನುವ ವಿರೋಧಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾ, ಇಲ್ಲಿಯವರೆಗೂ ಎಡಪಕ್ಷಗಳು ಆಳಿದ ರಾಜ್ಯಗಳು ಯಾವುದೇ ಅಭಿವೃದ್ಧಿಯನ್ನು ಹೊಂದದೆ ಬಡತನದಿಂದ ಬಳಲಿತ್ತು. ಈಗ ಮೋದಿಯವರು ಈ ಕೆಟ್ಟ ರಾಜಕೀಯಕ್ಕೆ ಬ್ರೇಕ್ ಹಾಕಿ ತಮ್ಮ ರಾಜಕೀಯ ಶಕ್ತಿಯನ್ನು ತೋರಿಸಲಿದ್ದಾರೆ. ಮುಂಬರುವ ಕೇರಳ, ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿ ಒಡಿಶಾವನ್ನು ಗೆದ್ದಾಗಲಷ್ಟೇ ನಮ್ಮ ಸುವರ್ಣಯುಗ ಆರಂಭವಾಗಲಿದೆ ಎಂದು ತಿಳಿಸಿದರು.

    ಬಿಜೆಪಿಯ ಮುಂದಿನ ಟಾರ್ಗೆಟ್ ಕರ್ನಾಟಕ!
    * ತ್ರಿಪುರಾ ಗೆಲುವಿನಿಂದ ಬಿಜೆಪಿಗೆ ಮತ್ತಷ್ಟು ಆನೆ ಬಲ
    * ಮೋದಿ ಅಲೆ ಒಪ್ಪಿಕೊಂಡಿದ್ದಾರೆ ಅನ್ನೋ ಆತ್ಮ ಬಲ
    * ಕಾಂಗ್ರೆಸ್ ಮುಕ್ತ ಭಾರತ ಹೋರಾಟಕ್ಕೆ ಮತ್ತಷ್ಟು ಶಕ್ತಿ
    * ತ್ರಿಪುರಾದಲ್ಲಿ ಅನುಸರಿಸಿದ ತಂತ್ರವೇ ಇಲ್ಲೂ ಅನುಕರಣೆ
    * 3 ಫಲಿತಾಂಶ ಮುಂದಿಟ್ಟುಕೊಂಡು ಮತಪ್ರಭುಗಳ ಒಲೈಕೆ
    * ಬಿಜೆಪಿ ತಂತ್ರಗಾರರನ್ನು ಮತ್ತಷ್ಟು ಯಶಸ್ವಿಯಾಗಿ ಬಳಕೆ
    * ರಾಜಕೀಯ ವಿರೋಧಿಗಳನ್ನು ಅಸ್ತ್ರವಾಗಿ ಬಳಕೆ

    ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಫಲಿತಾಂಶದಿಂದ ಆಶ್ಚರ್ಯವೇನಿಲ್ಲ, ಜನರು ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲೂ ಇದೇ ಫಲಿತಾಂಶ ಬರುತ್ತದೆ ಎಂದು ಹೇಳಿದರು.

  • ಸಿಎಂ V/s ಪಿಎಂ: ವಾಕ್, ಟ್ವಿಟರ್ ಸಮರ ಆಯ್ತು, ಈಗ ಕಾರ್ಟೂನ್ ಸಂಘರ್ಷ

    ಸಿಎಂ V/s ಪಿಎಂ: ವಾಕ್, ಟ್ವಿಟರ್ ಸಮರ ಆಯ್ತು, ಈಗ ಕಾರ್ಟೂನ್ ಸಂಘರ್ಷ

    ಬೆಂಗಳೂರು: ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ವಾಕ್‍ಸಮರ, ಟ್ವಿಟರ್ ಸಮರ ನಡೆದಾಯ್ತು. ಈಗ ಕಾರ್ಟೂನ್ ಸಂಘರ್ಷದ ಸರದಿ. ಟ್ವಿಟರ್‍ನಲ್ಲಿ 3 ಕಾರ್ಟೂನ್‍ಗಳನ್ನ ಹರಿಬಿಟ್ಟಿರೋ ಸಿದ್ದರಾಮಯ್ಯ ಮೋದಿಯನ್ನ ಲೇವಡಿ ಮಾಡಿದ್ದಾರೆ.

    ಕಾರ್ಟೂನ್ 1: ಲೂಟಿಕೋರರನ್ನ ಅರೆಸ್ಟ್ ಮಾಡಲು ಆಗದ ಮೋದಿ, ಲಂಡನ್‍ನಿಂದ ವಾಪಸ್ ಬರ್ತಿದ್ದ ಕಾರ್ತಿ ಚಿದಂಬರಂ ಅವರನ್ನ ಬಂಧಿಸಿದ್ದಾರೆ.

    ಕಾರ್ಟೂನ್ 2: ಭ್ರಷ್ಟಾಚಾರದ ವಿಷಯದಲ್ಲಿ ಬಿಎಸ್‍ವೈ ನನ್ನ ದೂರುತ್ತಾರೆ. ನೀರವ್ ಮೋದಿ ಪ್ರಕರಣಕ್ಕೆ ಬ್ಯಾಂಕ್ & ಆಡಿಟರ್ ಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೂರಿದ್ದಾರೆ. ಆದರೆ ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡಿದ್ದಕ್ಕೆ ಮೋದಿ ಈಗ ಇಂದಿರಾಗಾಂಧಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಾಪಿಸಿದ ಲಾಲ್‍ಲಜಪತ್‍ರಾಯ್ ಅವರನ್ನು ದೂರಲಾ ಅಂತ ಯೋಚಿಸುತ್ತಿರಬೇಕು.

    ಕಾರ್ಟೂನ್ 3: ನೋಟು ನಿಷೇಧ ಹೊತ್ತಲ್ಲಿ ದುಡ್ಡು ಜಮೆಗೆ ಸಾಮಾನ್ಯ ಗ್ರಾಹಕರು ಸರತಿ ಸಾಲಲ್ಲಿ ನಿಲ್ಬೇಕು. ಆದ್ರೆ ಇನ್ನೊಂದು ಕಡೆ ಕಾವಲುಗಾರನ ಅವತಾರದಲ್ಲಿರೋ ಮೋದಿಯೇ ಲೂಟಿಕೋರರರಾದ ನೀರವ್ ಮೋದಿ ಮತ್ತು ಮಲ್ಯನನ್ನು ದುಡ್ಡಿನ ಮೂಟೆಯೊಂದಿಗೆ ಕಳುಹಿಸಿ ಕೊಡುತ್ತಾರೆ. ಅಂತ ಮೂರು ಕಾರ್ಟೂನ್ ಮಾಡಿ ಮೋದಿಯನ್ನ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

    ಇದನ್ನೂ ಓದಿ: 4 ಪ್ರಶ್ನೆಗಳನ್ನು ಕೇಳಿ ಪ್ರಧಾನಿ ಮೋದಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ

    ಈ ಹಿಂದೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪದ ಸಮಾವೇಶದಲ್ಲಿ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬಳಿಕ ಸಿಎಂ ಸಿದ್ದರಾಮಯ್ಯನವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಮೋದಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ನಾಯಕರು ನಾವು ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರ್ತೀವಿ ಅಂತಾ ಪ್ರತಿ ಸವಾಲು ಹಾಕಿದ್ದರು.

  • ಅಮಿತ್ ಶಾ ಸೂಚನೆಯಂತೆ ಬಿಜೆಪಿ ಚಾರ್ಜ್ ಶೀಟ್- 22 ಪುಟಗಳ ಆರೋಪ ಪಟ್ಟಿ ಬಿಡುಗಡೆ

    ಅಮಿತ್ ಶಾ ಸೂಚನೆಯಂತೆ ಬಿಜೆಪಿ ಚಾರ್ಜ್ ಶೀಟ್- 22 ಪುಟಗಳ ಆರೋಪ ಪಟ್ಟಿ ಬಿಡುಗಡೆ

    – ಸಿದ್ದರಾಮಯ್ಯ ಸರ್ಕಾರಕ್ಕೆ ಉರುಳಾಗುತ್ತಾ ಚಾರ್ಜ್ ಶೀಟ್?

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಜ್ಯ ಬಿಜೆಪಿ ಚಾರ್ಜ್ ಶೀಟ್ ತಯಾರಿಸಿದೆ. ಇವತ್ತು ಬಿಬಿಎಂಪಿ ಆಡಳಿತಕ್ಕೆ ಸಂಬಂಧಿಸಿದಂತೆ 22 ಪುಟಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದೆ.

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇವತ್ತು ಮಧ್ಯಾಹ್ನ 12.30ಕ್ಕೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದ್ದಾರೆ. ವ್ಯಕ್ತಿ ಆಧಾರಿತ ಚಾರ್ಜ್ ಶೀಟ್ ಕೈ ಬಿಟ್ಟು, ವಿಷಯಾಧಾರಿತ ಚಾರ್ಜ್ ಶೀಟ್ ತಯಾರಿಸಿದೆ ಎನ್ನಲಾಗಿದೆ.

    ಕಾಮಗಾರಿಗಳಲ್ಲಿನ ಅವ್ಯವಹಾರ, ಕಸದ ಸಮಸ್ಯೆ, ವೈಟ್ ಟ್ಯಾಪಿಂಗ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ಇವತ್ತು ಬಿಡುಗಡೆಯಾಗುವ ಚಾರ್ಜ್ ಶೀಟ್ ಸಿದ್ದರಾಮಯ್ಯ ಸರ್ಕಾರಕ್ಕೆ ಚಾರ್ಜ್ ಆಗುವ ತರಹ ಇರುತ್ತಾ…? ಅನ್ನೋದನ್ನ ಕಾದುನೋಡಬೇಕಿದೆ.

  • ಕರ್ನಾಟಕ ಎಲೆಕ್ಷನ್‍ಗೆ ಗುಜರಾತ್‍ನಿಂದ ಇವಿಎಂ – 5 ಲಾರಿಗಳಲ್ಲಿ ಬಂತು ವೋಟಿಂಗ್ ಮೆಷೀನ್

    ಕರ್ನಾಟಕ ಎಲೆಕ್ಷನ್‍ಗೆ ಗುಜರಾತ್‍ನಿಂದ ಇವಿಎಂ – 5 ಲಾರಿಗಳಲ್ಲಿ ಬಂತು ವೋಟಿಂಗ್ ಮೆಷೀನ್

    ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸರ್ವ ಸಿದ್ಧತೆಯಲ್ಲಿ ತೊಡಗಿದೆ. ಚುನಾವಣೆಗೆ ಅಗತ್ಯವಿರುವ ವೋಟಿಂಗ್ ಮೆಷೀನ್‍ಗಳನ್ನು ಚುನಾವಣಾ ಆಯೋಗ ಗುಜರಾತ್‍ನಿಂದ ತರಿಸಿಕೊಂಡಿದೆ.

    ಬೆಂಗಳೂರಿನ ಕಂದಾಯ ಭವನಕ್ಕೆ ಇವಿಎಂ ಯಂತ್ರಗಳನ್ನು ತರಿಸಲಾಗಿದೆ. ಒಟ್ಟು 3860 ಯಂತ್ರಗಳನ್ನು ತರಿಸಲಾಗಿದ್ದು, ಗುಜರಾತ್‍ನಿಂದ ಬೆಂಗಳೂರಿಗೆ ಒಟ್ಟು 5 ಲಾರಿಗಳ ಮೂಲಕ ಭಾನುವಾರ ರಾತ್ರಿ ಇವಿಎಂ ಯಂತ್ರಗಳನ್ನು ತೆಗೆದುಕೊಂಡು ಬರಲಾಗಿದೆ.

    ಬೆಂಗಳೂರಿನ ಕಂದಾಯ ಭವನದಲ್ಲಿ ಇವಿಎಂ ಯಂತ್ರಗಳನ್ನ ಇರಿಸಲಾಗಿದ್ದು, 7 ಕ್ಷೇತ್ರಗಳಿಗೆ ಬಳಕೆಯಾಗಲಿರುವ ಈ ಯಂತ್ರಗಳನ್ನು ಇಂದು ಆರ್‍ಎಂಸಿ ಯಾರ್ಡ್ ನಲ್ಲಿ ಡಿಸಿ ನೇತೃತ್ವದಲ್ಲಿ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

    ಈ ಬಗ್ಗೆ ಅಪರ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, 2018ರ ಚುನಾವಣೆ ಪ್ರಯುಕ್ತ ಇವಿಎಂ ಯಂತ್ರಗಳನ್ನ ತರಲಾಗಿದೆ. ಗುಜರಾತ್‍ನ ಮೂರು ಜಿಲ್ಲೆಗಳಿಂದ ಯಂತ್ರಗಳು ಆಗಮಿಸಿವೆ. 3,090 ಬ್ಯಾಲೆಟ್ ಯುನಿಟ್ಸ್, 770 ಕಂಟ್ರೋಲ್ ಯುನಿಟ್ ಬಂದಿವೆ. ಬಂದಿರೋ ಯಂತ್ರಗಳನ್ನ ಸ್ಟ್ರಾಂಗ್ ರೂಮ್‍ನಲ್ಲಿಡಲಾಗಿದೆ. ಭದ್ರತೆಗಾಗಿ ಆರು ಸಿಸಿಟಿವಿ ಕ್ಯಾಮೆರಾಗಳ ಜೊತೆ ರೌಂಡ್ ಕ್ಲಾಕ್ ಸೆಕ್ಯೂರಿಟಿ ನೇಮಿಸಲಾಗಿದೆ ಅಂತ ಹೇಳಿದ್ರು.

    ಇಂದು ಎಲ್ಲಾ ಪಕ್ಷಗಳ ಮುಖಂಡರು ಹಾಗು ಏಜೆಂಟ್‍ಗಳ ನೇತೃತ್ವದಲ್ಲಿ ಕೊಠಡಿ ತೆರೆಯಲಾಗುತ್ತೆ. ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ, ಯಲಹಂಕ, ಯಶವಂತಪುರ, ಬ್ಯಾಟರಾಯನಪುರ, ಆನೇಕಲ್ ಕ್ಷೇತ್ರಗಳಿಗೆ ಇವಿಎಂ ಆಗಮಿಸಿದೆ. 3 ಸಾವಿರ ಕಂಟ್ರೋಲ್ ಯುನಿಟ್‍ಗಳನ್ನ ಬಿಇಎಲ್‍ನಿಂದ ತರಿಸಲಾಗಿದೆ. ಉಳಿದ ಕ್ಷೇತ್ರಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಲಾಗಿದೆ ಅಂತ ತಿಳಿಸಿದ್ರು.

    ಜಿಲ್ಲಾಧಿಕಾರಿ ಶಂಕರ್ ಮಾತನಾಡಿ, ಕಂಟ್ರೋಲ್ ರೂಮ್ ಉತ್ತಮವಾಗಿದೆ. ಪೊಲೀಸ್ ಹಾಗೂ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಬಿಬಿಎಂಪಿ ಆಯುಕ್ತರು ಜಿಲ್ಲಾ ಚುನಾವಣಾ ಉಸ್ತುವಾರಿ ವಹಿಸಿರುತ್ತಾರೆ. ನಾಳೆ ಎಫ್.ಎಲ್.ಸಿ ಇದೆ. ಎಲ್ಲಾ ಪಕ್ಷದ ಮುಖಂಡರನ್ನ ಬರಲು ಸೂಚಿಸಿದ್ದೇವೆ. ಇವಿಎಂ ಬಗ್ಗೆ ಅನುಮಾನಗಳಿದ್ದಲ್ಲಿ ನಾಳೆ ಪರಿಶೀಲನೆ ಮಾಡಿಸುತ್ತೇವೆ. ಬಳಿಕ ಸ್ಟ್ರಾಂಗ್ ರೂಮ್‍ನಿಂದ ನಿರ್ಮಿಸಲಾಗುವುದು. ಆ ಬಳಿಕ ಯಾರನ್ನೂ ಬಿಡಲಾಗುವುದಿಲ್ಲ ಎಂದು ಹೇಳಿದ್ರು.

  • ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಚಿಕ್ಕಪೇಟೆಗೆ ವಿಸಿಟ್ ಕೊಡ್ತಿರೋದ್ಯಾಕೆ?

    ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಚಿಕ್ಕಪೇಟೆಗೆ ವಿಸಿಟ್ ಕೊಡ್ತಿರೋದ್ಯಾಕೆ?

    ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಗೆ ಇನ್ನು ಎರಡು ತಿಂಗಳು ಮಾತ್ರವಿದೆ. ಈಗಾಗಲೇ ರಾಜಕೀಯ ನಾಯಕರೆಲ್ಲ ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಯಕರೆಲ್ಲ ಚಿಕ್ಕಪೇಟೆಗೆ ಸಿಕ್ಕಾಪಟ್ಟೆ ವಿಸಿಟ್ ಕೊಡ್ತಾ ಇದ್ದಾರೆ ಎನ್ನಲಾಗಿದೆ.

    ನೋಟ್ ಬ್ಯಾನ್‍ನಿಂದ ಮಂಕು ಕವಿದಿದ್ದ ಚಿಕ್ಕಪೇಟೆ ಸೀರೆಯಂಗಡಿ ವ್ಯಾಪಾರಿಗಳ ಮುಖದಲ್ಲಿ ಈಗ ಎಲೆಕ್ಷನ್ ವ್ಯಾಪಾರದ ನಗು ಮೂಡಿದೆ. ವೋಟು ಹಾಕಿಸಿಕೊಳ್ಳೋಕೆ, ಮಹಿಳಾ ಮತಗಳನ್ನು ಓಲೈಸೋಕೆ ಈಗ ಸೀರೆ ರಾಜಕಾರಣಕ್ಕೆ ನಾಯಕರು ಮುಂದಾಗುತ್ತಿದ್ದಾರೆ.

    ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಿಂದಲೂ ರಾಜಕೀಯ ನಾಯಕರು ಚಿಕ್ಕಪೇಟೆಯಲ್ಲಿ ಎಲೆಕ್ಷನ್ ಸೀರೆ ಖರೀದಿ ಮಾಡ್ತಾರಂತೆ. ಸೀರೆ ಜೊತೆಗೆ ಮೂಗುತಿ, ವೀಳ್ಯೆ ಕೊಟ್ಟು ಮರುಳು ಮಾಡೋ ಟ್ರೆಂಡ್ ಈವಾಗಲೂ ಬದಲಾಗಿಲ್ಲ. ಚಿಕ್ಕಪೇಟೆ ವ್ಯಾಪಾರಿಗಳು ಎಲೆಕ್ಷನ್ ಸೀರೆಯನ್ನು ಬಾಂಬೆಯಿಂದ ಲೋಡ್‍ಗಟ್ಟಲೇ ತರುತ್ತಿದ್ದಾರೆ.

    ಈಗಾಗಲೇ ಸೀರೆ ವಿಚಾರ ಸದನದಲ್ಲಿ ಸದ್ದು ಮಾಡುತ್ತಿದೆ. ಆದ್ರೇ ಗಲಾಟೆ ಮಾಡೋರು ಸೇರಿದಂತೆ ಸೀರೆಗೆ ನಾಯಕರು ಬಹುತೇಕ ಜೋತು ಬಿದ್ದಿದ್ದಾರೆ ಅನ್ನೋದು ಅಷ್ಟೇ ಸತ್ಯ.

  • ಸಿದ್ದರಾಮಯ್ಯ ತವರಲ್ಲಿ ಮೋದಿ ರಣಕಹಳೆ-ಪಿಎಂ ವೇಳಾಪಟ್ಟಿ ಹೀಗಿದೆ

    ಸಿದ್ದರಾಮಯ್ಯ ತವರಲ್ಲಿ ಮೋದಿ ರಣಕಹಳೆ-ಪಿಎಂ ವೇಳಾಪಟ್ಟಿ ಹೀಗಿದೆ

    ಬೆಂಗಳೂರು: ಹಮ್ ಸಫರ್ ರೈಲು ಮತ್ತು ಹಲವು ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದಾರೆ. ಭಾನುವಾರ ತಡರಾತ್ರಿ 11 ಗಂಟೆಗೆ ಮೋದಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು.

    ಈ ವೇಳೆ ಸಿಎಂ ಸಿದ್ದರಾಮಯ್ಯ ಶಿಷ್ಠಾಚಾರದ ಅನ್ವಯ ಸ್ವಾಗತ ಕೋರಿದ್ರು. ರಾಜ್ಯಪಾಲ ವಜುಭಾಯಿ ವಾಲಾ ಕೂಡ ಮೋದಿಗೆ ಸ್ವಾಗತ ಕೋರಿದ್ರು. ಬಳಿಕ ಮೋದಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ರು. ಮೋದಿ ಆಗಮನಕ್ಕೆ ಕಾಯುತ್ತಿದ್ದ ನೂರಾರು ಅಭಿಮಾನಿಗಳು ಮೋದಿ ಆಗಮಿಸ್ತಿದ್ದಂತೆ ಜಯಘೋಷ ಕೂಗಿದರು. ಮೋದಿ ವಿಮಾನ ನಿಲ್ದಾಣದಿಂದ ನಿರ್ಗಮಿಸ್ತಿದ್ದಂತೆ ಸಿಎಂ ಕೂಡ ತೆರಳಲು ವಿಮಾನ ನಿಲ್ದಾಣದಿಂದ ಹೊರ ಬಂದರು. ಆಗಲೂ ಎಲ್ಲರು ಮೋದಿ ಮೋದಿ ಎಂದು ಘೋಷಣೆ ಕೂಗಿದರು.

    ಮೋದಿ ವೇಳಾಪಟ್ಟಿ:
    * ಬೆಳಗ್ಗೆ 8.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ
    * ಬೆಳಗ್ಗೆ 10.30ಕ್ಕೆ ಲಲಿತ್ ಮಹಲ್ ಹೆಲಿಪ್ಯಾಡ್‍ನಿಂದ ಶ್ರವಣಬೆಳಗೊಳಕ್ಕೆ ಪ್ರಯಾಣ
    * ಬೆಳಗ್ಗೆ 10.30ರಿಂದ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದಲ್ಲಿ ಭಾಗಿ
    * ಮಧ್ಯಾಹ್ನ 2.45ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರಿನ ಮಹಾರಾಜ ಹೆಲಿಪ್ಯಾಡ್‍ಗೆ ಆಗಮನ
    * ಮಧ್ಯಾಹ್ನ 3 ಗಂಟೆಗೆ ರಸ್ತೆ ಮಾರ್ಗವಾಗಿ ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಆಗಮನ
    * ರೈಲು ನಿಲ್ದಾಣದಿಂದಲೇ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ
    * 3.45ಕ್ಕೆ ಮಹಾರಾಜ ಮೈದಾನಕ್ಕೆ ರಸ್ತೆ ಮಾರ್ಗವಾಗಿ ಆಗಮನ
    * 4 ಗಂಟೆಗೆ ಮಹಾರಾಜ ಕಾಲೇಜಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿ
    * 5 ಗಂಟೆಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
    * ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮನ

  • ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

    ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಇಂದು ರಣಕಹಳೆಯನ್ನು ಮೊಳಗಿಸಿದೆ. ಈ ಬಾರಿಯ ಚುನಾವಣೆಗೆ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿ ಮಾಡಿಕೊಂಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇಂದು ಜೆಡಿಎಸ್ ನಗರದ ಯಲಹಂಕದ ಮೈದಾನದಲ್ಲಿ ವಿಕಾಸ ಪರ್ವವನ್ನು ಹಮ್ಮಿಕೊಂಡಿದ್ದು, ಬಿಎಸ್‍ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸಹ ಭಾಗಿಯಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಮುಖವನ್ನು ಹೊಂದಿರುವ ಪಕ್ಷಗಳಾಗಿವೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಕಲಿಸಬೇಕಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ದಲಿತ ನಾಯಕರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿತ್ತು. ಆದ್ರೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ತನ್ನ ಮಾತನ್ನು ಮರೆತು ಮೋಸ ಮಾಡಿತು. ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಲಕ್ಷ ದಲಿತರ ವೋಟ್‍ಗಳನ್ನ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದೆ. ಆದ್ರೆ ಕಾಂಗ್ರಸ್ ಇಲ್ಲಿವರೆಗೆ ದಲಿತರಿಗೆ ಸರಿಯಾದ ಸೌಲಭ್ಯಗಳನ್ನು ನೀಡದೇ ಕಡೆಗಣನೆ ಮಾಡಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಆದರ್ಶವಾಗಿ ಕಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಲಾಗಿತ್ತು. ಭಾರತರತ್ನ ಕೊಡುವಲ್ಲಿ ಅಂದಿನ ಕೇಂದ್ರ ಸರ್ಕಾರ ನೀಡಲು ಅಲ್ಲಗೆಳದಿತ್ತು ಎಂದು ಕಾಂಗ್ರೆಸ್ ವಿರುದ್ಧ ಮಾಯಾವತಿ ಕಿಡಿಕಾರಿದ್ರು.

    ಆರ್‍ಎಸ್‍ಎಸ್ ಕೈಯಲ್ಲಿ ಬಿಜೆಪಿ: ಆರ್‍ಎಸ್‍ಎಸ್ ಮುಷ್ಟಿಯಲ್ಲಿ ಬಿಜೆಪಿ ಇದೆ. ಬಿಜೆಪಿ ಸಹ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ. ಯುವಕರು ಉದ್ಯೋಗ ನೀಡಿ ಅಂತಾ ಕೇಳಿದ್ರೆ ಪ್ರಧಾನಿ ಮೋದಿ ಪಕೋಡಾ ಮಾರಿ ಅಂತಾ ಸಲಹೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಕಪ್ಪು ಹಣ ತರುತ್ತೇವೆ ಅಂತಾ ಹೇಳಿದವರು ಇದೂವರೆಗೂ ಒಂದು ರೂಪಾಯಿಯನ್ನು ಸಹ ತಂದಿಲ್ಲ. ಇನ್ನು ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನಾನುಕೂಲಕರವಾಗಿವೆ. ಬಿಜೆಪಿ ಉತ್ತರ ಪ್ರದೇಶ ಮತ್ತು ಗುಜರಾತ್ ಮಾದರಿಯಲ್ಲಿ ಧರ್ಮ ಸಂಘರ್ಷದ ಮೂಲಕ ಚುನಾವಣೆ ಗೆಲ್ಲಲ್ಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಕರ್ನಾಟಕದ ಜನರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮೈತ್ರಿಗೆ ತಮ್ಮ ಮತವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಮುಂದಿನ ಚುನಾವಣೆಯ ಬಳಿಕೆ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ರೈತರು, ದಲಿತರು ಬಡವರ ಮೇಲೆ ಪ್ರೀತಿ ವಿಶ್ವಾಸ ಇಲ್ಲ. ಇಂದು ಜೆಡಿಎಸ್ ಜೊತೆ ಬಿಎಸ್ಪಿ ಹೊಂದಾಣಿಕೆ ಮಾಡಿಕೊಂಡಿದೆ. ಲಕ್ಷಾಂತರ ಜನ ಇವತ್ತು ಆಗಮಿಸಿದ್ದೀರಿ ನಿಮ್ಮನ್ನೆಲ್ಲ ನೋಡಿದ್ದು ನನಗೆ ಖುಷಿ ನೀಡಿದೆ. ಕನ್ನಡ ನಾಡಿನ ಜನತೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ, ದಲಿತರು, ರೈತರು, ಹಿಂದುಳಿದ ವರ್ಗದ ಹಿತಕ್ಕಾಗಿ ಜೆಡಿಎಸ್ ಗೆಲ್ಲಿಸಿ ಬೇಕಿದೆ ಎಂದು ಮನವಿ ಮಾಡಿಕೊಂಡರು.

    ಸಮಾರಂಭದ ವೇದಿಕೆಯಲ್ಲಿ ಮಯಾವತಿ ಅವರಿಗಾಗಿಯೇ ಬಿಎಸ್‍ಪಿ ಚಿಹ್ನೆಯುಳ್ಳ ಭಾಷಣದ ಟೇಬಲ್ ಸಿದ್ಧತೆ ಮಾಡಲಾಗಿತ್ತು. ಇತ್ತ ಜೆಡಿಎಸ್ ನಾಯಕರು ಮಾತನಾಡಲು ಪ್ರತ್ಯೇಕ ಭಾಷಣದ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು.