Tag: karnataka elections

  • ವಿಜಯೇಂದ್ರ ಯಾಕೆ, ಅವರ ಅಪ್ಪ ಯಡಿಯೂರಪ್ಪ ಬಂದು ನಿಲ್ಲಲಿ: ಸಿಎಂ ಸಿದ್ದರಾಮಯ್ಯ

    ವಿಜಯೇಂದ್ರ ಯಾಕೆ, ಅವರ ಅಪ್ಪ ಯಡಿಯೂರಪ್ಪ ಬಂದು ನಿಲ್ಲಲಿ: ಸಿಎಂ ಸಿದ್ದರಾಮಯ್ಯ

    ಮೈಸೂರು: ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಯಾಕೆ ಅವರಪ್ಪ ಯಡಿಯೂರಪ್ಪ ಬೇಕಾದ್ರೆ ಬಂದು ಸ್ಪರ್ಧೆ ಮಾಡಲಿ ಅಂತಾ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

    ಯಡಿಯೂರಪ್ಪಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಅವರು ಬಂದ ತಕ್ಷಣ ಜನರು ಓಡೋಡಿ ಬರುವದಿಲ್ಲ. ನನ್ನ ಮಗ ಬಂದು ಚುನಾವಣೆಗೂ ನಿಂತರೂ ಸಿಎಂ ಮಗ ಅಂತಾ ವೋಟ್ ಹಾಕಲ್ಲ. ಸಿಎಂ ಆಗಿ ನಾನು ಈ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದ್ದೇನೆ. ಈ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರೋದು ನಾನೇ ಹೊರತು ಯಡಿಯೂರಪ್ಪ ಅಲ್ಲ. ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋಲ್ಲ. ಜನರಿಗೆ ಯಾರಿಗೆ ವೋಟ್ ಹಾಕಬೇಕು ಅಂತ ಗೊತ್ತಿದೆ. ಆ ರೀತಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳು ನಿಂತು ಗೆಲ್ಲೋದಾಗಿದ್ರೆ ಯಾರು ಬೇಕಾದ್ರು ಎಲ್ಲೆಲ್ಲೋ ನಿಲ್ತಿದ್ರು ಅಂತಾ ಅಂದ್ರು.

    ಚಾಮುಂಡೇಶ್ವರಿ ಕ್ಷೇತ್ರದ ಜನ ಈಗಾಗಲೇ ನಿರ್ಧಾರ ಮಾಡಿದ್ದಾರೆ. ಈ ಕ್ಷೇತ್ರದ ಜನರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವರೆಲ್ಲ ನನಗೆ ಮತ ಹಾಕ್ತಾರೆ ಅಂತ ನನಗೆ ವಿಶ್ವಾಸವಿದೆ. ಕ್ಷೇತ್ರದಲ್ಲಿ 5 ದಿನ ಪ್ರಚಾರ ನಡೆಸಿದ್ದೇನೆ. ನಾನು ಯಾವತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ದೂರ ಉಳಿದಿಲ್ಲ. ಮೈಸೂರಿಗೆ ಬಂದಾಗಲೆಲ್ಲಾ ಚಾಮುಂಡೇಶ್ವರಿ ಕ್ಷೇತ್ರದ ಜನರೇ ನನ್ನನ್ನ ಜಾಸ್ತಿ ಭೇಟಿ ಮಾಡ್ತಿದ್ದೆ. ಹಾಗಾಗಿ ಗೆಲ್ಲುವ ವಿಶ್ವಾಸ ನನಗಿದೆ ಅಂತಾ ಸಿಎಂ ಹೇಳಿದರು.

    ನಾಳೆಯಿಂದ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡ್ತಿನಿ. ಮೈಸೂರು ಪ್ರವಾಸ ನಂತರ ರಾಜ್ಯ ಪ್ರವಾಸ ಕೈಗೊಳ್ಳುವುದರ ಜೊತೆಗೆ ವರುಣಾ ಕ್ಷೇತ್ರದ ಪ್ರಚಾರಕ್ಕೆ ಬರ್ತಿನಿ. ನಾಳೆಯಿಂದ ದಾವಣಗೆರೆ ಸೇರಿದಂತೆ ಹಲವೆಡೆ ಪ್ರಚಾರ ಮಾಡ್ತಿನಿ. 8ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

  • ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕುಸ್ತಿ- ಆದ್ರೆ ಹೊರಗೆ ಮಾತ್ರ ಒಳ್ಳೆ ದೋಸ್ತಿ!

    ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕುಸ್ತಿ- ಆದ್ರೆ ಹೊರಗೆ ಮಾತ್ರ ಒಳ್ಳೆ ದೋಸ್ತಿ!

    – ಕುತೂಹಲ ಮೂಡಿಸಿದೆ ರಮ್ಯಾ-ಅಮಿತ್ ನಡೆ

    ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿರುವ ರಮ್ಯಾ ಹಾಗು ಅಮಿತ್ ಮಾಳವೀಯ ಚುನಾವಣಾ ರಾಜಕೀಯದ ರಣರಂಗದಲ್ಲಿ ಯಾವಾಗಲೂ ಕಾದಾಡುತ್ತಿರುತ್ತಾರೆ. ಪ್ರತಿದಿನ ಸಹ ಇಬ್ಬರು ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಿರುತ್ತಾರೆ.

    ಸೋಶಿಯಲ್ ಮೀಡಿಯಾದಲ್ಲಿ ಕಾದಾಟ ನಡೆಸುವ ರಮ್ಯಾ ಮತ್ತು ಅಮಿತ್ ಮಾಳವೀಯಾ ಮಾತ್ರ ಖಾಸಗಿ ಜೀವನದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಭೇಟಿಯಾದ ಇಬ್ಬರೂ ಜೊತೆ ಜೊತೆಯಾಗಿ ನಗುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ.

    ಸದ್ಯ ಇಬ್ಬರ ನಡೆಯ ಮೇಲೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ಸಹ ನಡೆಯುತ್ತೀವೆ. ಕೆಲವು ದಿನಗಳ ಹಿಂದೆ ಖಾಸಗಿ ಚಾನೆಲ್‍ಗೆ ಫೋನ್ ನಲ್ಲಿ ನೇರ ಸಂಪರ್ಕಕ್ಕೆ ಬಂದಿದ್ದ ಇಬ್ಬರೂ ಒಬ್ಬರ ಮೇಲೋಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು.

  • ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

    ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್

    – ಪಬ್ಲಿಕ್ ಟಿವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶೇಷ ಸಂದರ್ಶನ

    ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಕಣದಲ್ಲಿ ರಾಜಕೀಯ ನಾಯಕರು ತಂತ್ರ-ರಣತಂತ್ರಗಳನ್ನು ಹೂಡುತ್ತಿದ್ದಾರೆ. ಸದ್ಯ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ನಡೆಸಿದ ಸಂದರ್ಶನದಲ್ಲಿ ಅಮಿತ್ ಶಾ ಏನೇನ್ ಹೇಳಿದ್ರು..? ಬಿಜೆಪಿ ಅಧಿಕಾರಕ್ಕೇರಲು ಅಮಿತ್ ಶಾ ಪ್ಲ್ಯಾನ್ ಏನು.? ಕೈ ಸರ್ಕಾರ ವಿರುದ್ಧ ಯಾವ ರಣತಂತ್ರ ಹೆಣೆಯುತ್ತಿದ್ದಾರೆ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಆಗುತ್ತಾ ಎಂಬುದನ್ನು ವಿವರಿಸಿದರು.

    ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ವಿಚಾರಧಾರೆಯಲ್ಲಿ ಬದುಕುತ್ತೇನೆ. ಹಾಗೇ ನನ್ನ ವಿಚಾರಧಾರೆಯನ್ನ ದೇಶದ ತುಂಬಾ ಮುಟ್ಟಿಸಬೇಕು ಮತ್ತು ರಾಜಕಾರಣದಲ್ಲಿ ಇದ್ದರೂ ದೇಶದ ಬದಲಾವಣೆಗೆ ಕೆಲಸ ಮಾಡುತ್ತೇನೆ. ನಾನು ಹಾಕಿಕೊಂಡಿರುವ ಗುರಿಯನ್ನು ಮುಟ್ಟಬೇಕೆಂದರೆ ಜೀವನಪೂರ್ತಿ ಕೆಲಸ ಮಾಡಿದ್ರೂ ಕಡಿಮೆ ಅಂತಾ ಎಂಬುವುದು ನನ್ನ ಭಾವನೆ. ಇದನ್ನೂ ಓದಿ: ಮಂಡ್ಯದ ಜನರಲ್ಲಿ ಕ್ಷಮೆ ಕೇಳಿದ ಅಮಿತ್ ಶಾ

    ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿದೆ: ಈ ಹಿಂದೆ ಕರ್ನಾಟಕದ ಜನತೆ ಒಂದು ಸಲ ನಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದರು. ಕೆಲವು ಘಟನೆಗಳನ್ನ ನಮಗೆ ನಿಭಾಯಿಸಲು ಆಗಲಿಲ್ಲ. ಈಗ ಬಿಜೆಪಿ ಬೇರೆಯದೇ ರೀತಿಯಲ್ಲಿ ಇಷ್ಟು ವರ್ಷಗಳಲ್ಲಿ ಅನುಭವ ಪಡೆದುಕೊಂಡಿದೆ. ಯಡಿಯೂರಪ್ಪ ಸರ್ಕಾರ ಪತನ ಆದ ನಂತರ ಬಿಜೆಪಿಯಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಸಾಕಷ್ಟು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದೇವೆ. ಪ್ರತಿ 3 ತಿಂಗಳಿಗೊಮ್ಮೆ ಪಾರ್ಟಿ ಮುಖ್ಯ ಕಚೇರಿಯಲ್ಲಿ ಸಭೆ ನಡೆಯುತ್ತೆ. ಗುರಿಗಳನ್ನು ನಿರ್ಧರಿಸಲಾಗುತ್ತೆ. ಗುರಿಗಳ ವಿಮರ್ಶೆ ಆಗುತ್ತೆ. ಸರ್ಕಾರದ ಬಗ್ಗೆ ಜನರಲ್ಲಿ ಪತ್ರಿಕೆಯಲ್ಲಿ ಬರುವ ವಿಮರ್ಶೆಗಳ ಬಗ್ಗೆ ಕೂಡ ಚರ್ಚೆ ಮಾಡುತ್ತೇವೆ. ಇದರ ಆಧಾರದ ಮೇಲೆ ನಮ್ಮ ಸರ್ಕಾರದ ಆಡಳಿತವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತದೆ. ನನ್ನ ಪ್ರಕಾರ ಈಗ ಸಾಕಷ್ಟು ಬದಲಾವಣೆ ಆಗಿವೆ. ಈ ಬಾರಿ ನಾವು ಕರ್ನಾಟಕ ಜನತೆಯ ವಿಶ್ವಾಸಗಳಿಸಿ ಕರ್ನಾಟಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ. ಇದರೊಂದಿಗೆ ಕರ್ನಾಟಕದಲ್ಲಿ ಒಂದು ದೊಡ್ಡ ಮಟ್ಟದ ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ದಕ್ಷಿಣದಲ್ಲಿ ಬಿಜೆಪಿಗೆ ಒಳ್ಳೆಯ ಆಡಳಿತ ನಡೆಸಲು ವೇದಿಕೆಯಾಗಲಿದೆ. ಇದನ್ನೂ ಓದಿ: ಅಮಿತ್ ಶಾ ಸಂದರ್ಶನ: ಕೇಂದ್ರ ಸರ್ಕಾರ ಮಹದಾಯಿ ಸಭೆಯನ್ನು ಯಾಕೆ ಕರೆಯಲಿಲ್ಲ?

    ಮಿಷನ್ 150 ಸಾಧ್ಯವಾಗುತ್ತಾ?: ನಾವು ಯಾವತ್ತೂ ಮ್ಯಾಜಿಕ್ ನಂಬರ್ 150 ಹೇಳಿಲ್ಲ. ನಾನು ಇಲ್ಲಿಯವರೆಗೆ ಹೆಚ್ಚು ಕಡಿಮೆ 140 ಕ್ಷೇತ್ರಗಳನ್ನು ಸುತ್ತಿದ್ದೇನೆ. ಏಪ್ರಿಲ್ 15-16ರ ಹೊತ್ತಿಗೆ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಗೊತ್ತಾಗುತ್ತೆ. ನಾನು ಹೋದಲ್ಲೆಲ್ಲಾ ಜನರ ಸ್ವಾಗತ, ಉತ್ಸಾಹ ನೋಡಿದ್ರೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಡಕೆ ಬೆಳಗಾರರಿರಬಹುದು, ತೆಂಗು ಬೆಳೆಗಾರರಿರಬಹುದು, ಕಾಫಿ ಬೆಳೆಗಾರರಿಬಹುದು, ದಲಿತ-ಹಿಂದುಳಿದವರಿಂದ ಹಿಡಿದು ಗ್ರಾಮೀಣ ಮತ್ತು ಪಟ್ಟಣ ಮತದಾರರು ಒಂದು ಬದಲಾವಣೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತದೆ. ಜನರು ಬದಲಾವಣೆ ಬಯಸಿದಲ್ಲಿ ಬಿಜೆಪಿ ಸರ್ಕಾರ ಬರೋದು ನಿಶ್ಚಿತ.

    ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ಸರ್ಕಾರ ಕಳೆದ ಐದು ವರ್ಷಗಳಲ್ಲಿ ಸಂಪೂರ್ಣ ವಿಫಲವಾಗಿದೆ. ಓಲೈಕೆ ರಾಜಕಾರಣ ಮಾಡಲು ಹೊರಟಾಗ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಇಷ್ಟೊಂದು ಸಂಪನ್ಮೂಲ ಇದ್ದರೂ ಕೂಡ ಗ್ರಾಮೀಣ ಭಾಗದ ಅಭಿವೃದ್ಧಿ ಮಾಡಿಲ್ಲ. ಈಗಲೂ ಬಿಜೆಪಿ ಇರುವ 9 ರಾಜ್ಯಗಳಲ್ಲಿ 24 ಗಂಟೆ ವಿದ್ಯುತ್ ಇದೆ. ಮಧ್ಯಪ್ರದೇಶ, ಛತ್ತೀಸ್‍ಘಢ 24 ಗಂಟೆ ವಿದ್ಯುತ್ ಕೊಡುತ್ತೆ. ಹಾಗಾದ್ರೆ ಇದು ಕರ್ನಾಟಕದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಂತ ದೊಡ್ಡ ನಗರದಲ್ಲಿ ಇಷ್ಟು ಆದಾಯ ಇದ್ದರೂ, ಬೇರೆ ಬೇರೆ ದೇಶಗಳ ಸಂಪರ್ಕ ಇದ್ದರೂ ಈ ಆದಾಯಗಳು ಹಳ್ಳಿಗಳ ಅಭಿವೃದ್ಧಿಗೆ ಏಕೆ ಬಳಕೆಯಾಗಲ್ಲಿಲ್ಲ. ಹಾಗಿದ್ದರೆ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರವೇನು..? ಆದಾಯ ಮತ್ತು ಹಣದ ಸರಿಯಾದ ಪ್ರಮಾಣದ ಹಂಚಿಕೆ ಮಾಡಿ ಸರ್ವರಿಗೂ ಅಭಿವೃದ್ಧಿ ತಲುಪುವ ರೀತಿಯಲ್ಲಿ ಕೆಲಸ ಮಾಡುವುದೇ ಸರ್ಕಾರದ ಮುಖ್ಯ ಕರ್ತವ್ಯ. ಕರ್ನಾಟಕ ಮುಖ್ಯಮಂತ್ರಿ ನಮ್ಮ ಹತ್ತಿರ ದುಡ್ಡಿಲ್ಲ ಅಂತ ಹೇಳೋಕೆ ಸಾಧ್ಯವಿಲ್ಲ ಅಂತಾ ಅಂದ್ರು.

    ಜೆಡಿಎಸ್ ಜೊತೆ ನಾವು ಚುನಾವಣಾ ಹೊಂದಾಣಿಕೆಯನ್ನು ಮಾಡಿಲ್ಲ. ನಾವು ಪ್ರತಿಕ್ಷೇತ್ರ ಗೆಲ್ಲಲೇಬೇಕೆಂದು ಚುನಾವಣೆ ಎದುರಿಸಿ ಪೂರ್ಣಪ್ರಮಾಣದ ಸರ್ಕಾರವನ್ನು ರಚಿಸುತ್ತೇವೆ. ಒಂದೇ ಪಕ್ಷದ 24 ಕಾರ್ಯಕರ್ತರಲ್ಲಿ 22 ಕಾರ್ಯಕರ್ತರನ್ನು ಒಂದೇ ರೀತಿ ಹತ್ಯೆ ಮಾಡಿದ್ರೂ ಈವರೆಗೂ ಒಬ್ಬರಿಗೂ ಶಿಕ್ಷೆಯಾಗಿಲ್ಲ. ಇದು ಕೂಡ ದೇಶದ ರಾಜಕಾರಣದಲ್ಲಿ ಹಿಂದೆಂದೂ ನಡೆಯದ ಘಟನೆ. ನನ್ನ ಪ್ರಕಾರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಧರ್ಮದ ಕುತಂತ್ರವನ್ನು ಮಾಡಿದ್ದಾರೆ. ಈ ಶಿಫಾರಸನ್ನು 2013ರಲ್ಲೂ ಯುಪಿಎ ಸರ್ಕಾರ ತಿರಸ್ಕರಿಸಿತ್ತು. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕರೂ ಲಿಂಗಾಯತ ದಲಿತರಿಗೆ ಮೀಸಲಾತಿ ಕೂಡ ಇರುವುದಿಲ್ಲ. ಇದನ್ನು ಸಿದ್ದರಾಮಯ್ಯ ಮರೆತಂತೆ ಕಾಣಿಸುತ್ತದೆ ಅಂತ ವ್ಯಂಗ್ಯ ಮಾಡಿದ್ರು. ಇದನ್ನೂ ಓದಿ: ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಹೇಗೆ ನೀಡಲಾಗುತ್ತೆ: ಅಮಿತ್ ಶಾ ತಿಳಿಸಿದ್ರು

    ನೋಟ್‍ಬ್ಯಾನ್: ನೋಟ್‍ಬ್ಯಾನ್ ವಿಚಾರವನ್ನು ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಂಗ್ರೆಸ್ ಕಪ್ಪುಹಣದ ವಿರುದ್ಧವಾಗಿತ್ತು. 1967ರ ನಂತರ ಕಾಂಗ್ರೆಸ್ ದೇಶದ ರಾಜಕೀಯದಲ್ಲಿ ಕಪ್ಪುಹಣದ ಪರವಾಗಿತ್ತು. ಹಾಗಾಗಿ ಕಾಂಗ್ರೆಸ್ ಯಾವತ್ತಿಗೂ ಕಪ್ಪುಹಣದ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜಿಎಸ್‍ಟಿ ಅವರ ಅಧಿಕಾರಾವಧಿಯಲ್ಲೇ ಇತ್ತು. ಆದ್ರೆ ಅದಕ್ಕೆ ಸರ್ವಾನುಮತ ತರೋದ್ರಲ್ಲಿ ವಿಫಲವಾಗಿತ್ತು. ನಾವು ಸರ್ವಾನುಮತದಿಂದ ಅಂಗೀಕಾರಗೊಳಿಸಿದ್ದೇವೆ. ಜನರಿಗೆ ಅವರ ಮೇಲೆ ವಿಶ್ವಾಸ ಇರ್ಲಿಲ್ಲ. ಮೊದಲು 4% ಸಿಎಸ್‍ಟಿ ಇತ್ತು. ಅದನ್ನ ಇಳಿಸಿ 2% ಮಾಡಿದ್ರೂ ಆಗಿನ ಹಣಕಾಸು ಮಂತ್ರಿ ಚಿದಂಬರಂ ರಾಜ್ಯಗಳಿಗಾಗುವ ನಷ್ಟಗಳನ್ನು ಕೇಂದ್ರದಿಂದ ತುಂಬಿಕೊಡುತ್ತೇವೆ ಅಂತ ಮಾತು ಕೊಟ್ಟಿದ್ದರು. ಆದ್ರೆ ನಷ್ಟವನ್ನು ಭರಿಸುವ ಪ್ರಯತ್ನವನ್ನೂ ನಡೆಸಿಲ್ಲ. ನಾವು ಅದನ್ನ ಆಕ್ಟ್‍ನಲ್ಲಿ ಸೇರಿಸಿದೆವು. ಈಗ ಎಲ್ಲಾ ರಾಜ್ಯಗಳಿಗೆ ನಷ್ಟದ ಪ್ರಮಾಣ ಕೇಂದ್ರದಿಂದ ಹೋಗುತ್ತಿದೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?

    ತ್ರಿವಳಿ ತಲಾಖ್: ನಾವು ಚುನಾವಣೆಗೋಸ್ಕರ ತಲಾಖ್ ವಿಚಾರವನ್ನು ತೆಗೆದುಕೊಂಡಿಲ್ಲ. ಇದು ಈ ದೇಶದ ಮುಸ್ಲಿಂ ಸೋದರಿಯರ ಅಧಿಕಾರ. ಸಂವಿಧಾನದಲ್ಲಿ ಸಮಾನತೆಯ ಅವಕಾಶ ಇದೆ. ಆದ್ರೆ ಇಷ್ಟು ವರ್ಷ ಅದನ್ನು ತುಳಿಯಲಾಗಿತ್ತು. ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಒಂದು ಸ್ಪಷ್ಟ ವಿಚಾರವನ್ನು ಇಟ್ಟಿತ್ತು. ನಾವು ಓಲೈಕೆ ರಾಜಕಾರಣ ಮಾಡಲ್ಲ. ಇದು ಮುಸ್ಲಿಂ ಮಹಿಳೆಯರ ಅಧಿಕಾರ. ಇದ್ರಲ್ಲಿ ನಾವು ಹೋರಾಡಿ ಗೆಲುವು ಸಾಧಿಸಿದ್ದೇವೆ.

    ಗೌರಿ, ಕಲ್ಬುರ್ಗಿ ಹಂತಕರನ್ನು ಬಂಧಿಸುವಲ್ಲಿ ವಿಫಲ: ಕೃಷಿ ಪ್ರಗತಿ ಮಧ್ಯಪ್ರದೇಶದಲ್ಲಿ 16% ಇದೆ. ಗುಜರಾತ್‍ನಲ್ಲಿ 13% ಇದೆ. ರಾಜಸ್ಥಾನದಲ್ಲಿ 10% ಇದೆ. ಕರ್ನಾಟಕದಲ್ಲಿ ಕೃಷಿ ಪ್ರಗತಿ ಎಷ್ಟಿದೆ..? ಕೇವಲ 4%ಗಿಂತಲೂ ಕಡಿಮೆ. ನಾನು ಯಾವಾಗಲೂ ಸಕ್ರ್ಯೂಟ್ ಹೌಸ್‍ನಲ್ಲಿರುತ್ತಿದ್ದೆ. ಐದು ದಿನಗಳ ಹಿಂದೆ ನೀತಿ ಸಂಹಿತೆ ಇರ್ಲಿಲ್ಲ. ತಾಜ್‍ನಲ್ಲಿ ನಮ್ಮ ರಾಜ್ಯ ಘಟಕ ರೂಮ್ ವ್ಯವಸ್ಥೆ ಮಾಡಿತು. ಏಕೆ ಅಂತ ವಿಚಾರಿಸಿದಾಗ ಅಲ್ಲಿಂದ ಬಂದ್ರೆ 2 ಗಂಟೆ ತಡವಾಗುತ್ತೆ ಅನ್ನೋ ವಿಚಾರ ತಿಳೀತು. ಬೆಂಗಳೂರಿನ ಟ್ರಾಫಿಕ್ ಸ್ಥಿತಿ ಹೀಗಿದೆ. ಕಾನೂನು ಸುವ್ಯವಸ್ಥೆ ಹೇಗಿದೆ.? ಒಂದೇ ಪಕ್ಷದ 24 ಕಾರ್ಯಕರ್ತರ ಕೊಲೆ ಆಗಿದೆ. ಕಲ್ಬುರ್ಗಿ ಹತ್ಯೆಯಾಯ್ತು, ಗೌರಿ ಹತ್ಯೆಯಾಯ್ತು, ಇನ್ನೂ ಕೊಲೆಗಡುಕರನ್ನ ಹಿಡಿಯಲು ಸಾಧ್ಯವಾಗಿಲ್ಲ. ಇಂತಹ ದುರಾಡಳಿತ ಇರುವಂತ ರಾಜ್ಯವನ್ನು ನನ್ನ ಜೀವನದಲ್ಲೇ ನೋಡಿರ್ಲಿಲ್ಲ. ನನ್ನ ಹೇಳಿಕೆಯಲ್ಲಿ ಸ್ವಲ್ಪ ತಪ್ಪಾದರು ಇಲ್ಲಿಯ ನಾಯಕರು ತುಂಬಾ ಖುಷಿಪಡ್ತಾರೆ. ಮಂತ್ರಿಗಳು ಖುಷಿಯಾಗ್ತಾರೆ. ರಾಹುಲ್ ಟ್ವೀಟ್‍ಗಳನ್ನೂ ಮಾಡ್ತಾರೆ. ಕರ್ನಾಟಕದ ಸರ್ಕಾರದ ಭ್ರಷ್ಟಾಚಾರದ ವಿಚಾರ ಜನಸಾಮಾನ್ಯರ ಬಾಯಲ್ಲಿದೆ. ಭಾಷಣದಲ್ಲಿ ನಾನು ಭ್ರಷ್ಟಾಚಾರದ ಲಿಸ್ಟ್ ಹೇಳ್ತೇನೆ. ಕೆಲವೊಂದು ಭ್ರಷ್ಟಾಚಾರಗಳನ್ನು ಬಿಟ್ಟಿದ್ದೀರಿ ಅಂತ ನನಗೆ ವಾಟ್ಸಪ್ ಬರುತ್ತೆ ಅಂತಾ ಅಂದ್ರು. ಇದನ್ನೂ ಓದಿ: ಅಮಿತ್ ಶಾ ರಿಂದ ನೀತಿ ಸಂಹಿತೆ ಉಲ್ಲಂಘನೆ – ಗಡಿಪಾರಿಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್

    ದೇಶದಲ್ಲಿ 4 ಪ್ರಕಾರದ ಸರ್ಕಾರಗಳು: ಈ ದೇಶದಲ್ಲಿ 4 ಪ್ರಕಾರದ ಸರ್ಕಾರಗಳು ಇವೆ. ಒಂದು ಸಾಕಷ್ಟು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ನಡೆಸಿದೆ. ಎರಡನೆಯದ್ದು ಕಮ್ಯುನಿಸ್ಟ್ ಸರ್ಕಾರ. ಮೂರನೆಯದು ಪ್ರಾದೇಶಿಕ ಪಕ್ಷಗಳ ಸರ್ಕಾರ. ನಾಲ್ಕನೆಯದು ಬಿಜೆಪಿ ಸರ್ಕಾರ. ಸಾಕಷ್ಟು ರಾಜ್ಯಗಳಲ್ಲಿ ಸರ್ಕಾರ ನಡೆಸಿದ್ದೇವೆ. ನಿಮ್ಮ ಚಾನೆಲ್‍ನಿಂದ ಒಂದು ರಿಸರ್ಚ್ ಮಾಡಿಸಿ ನೋಡಿ. ನಮ್ಮ ಸರ್ಕಾರ 300% ಎಲ್ಲಾ ಸರ್ಕಾರಗಳಿಗಿಂತಲೂ ಉತ್ತಮ ಸರ್ಕಾರ ಅನ್ನೋ ಅಭಿಪ್ರಾಯ ಬರುತ್ತದೆ. ಆಡಳಿತಾತ್ಮಕ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ 20 ಅಂಶಗಳ ಕಾರ್ಯಕ್ರಮದ ಸ್ಪರ್ಧೆ ಇತ್ತು. ಅದನ್ನು ನಿಲ್ಲಿಸಲಾಯ್ತು. ಯಾಕಂದ್ರೆ ಮೊದಲ ಏಳೂ ರಾಜ್ಯಗಳು ಬಿಜೆಪಿ ಆಡಳಿತದ ರಾಜ್ಯಗಳಾಗಿರ್ತಿದ್ದವು ಅಂತಾ ತಿಳಿಸಿದ್ರು. ಇದನ್ನೂ ಓದಿ : ಚುನಾವಣೆ ಸಮಯದಲ್ಲಿ ರಾಜ್ಯಕ್ಕೆ ಅಮಿತ್ ಶಾ ಆಗಮನಕ್ಕೆ ನಿಷೇಧ?

    ಕೊನೆಗೆ ಈ ಬಾರಿ ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ 5 ವರ್ಷದ ಆಡಳಿತದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ರಾಜ್ಯದ ಜನತೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಇಷ್ಟಪಡುತ್ತಿದ್ದಾರೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

  • ಅಮಿತ್ ಶಾ ಸಂದರ್ಶನ: ಜೆಡಿಎಸ್ ಬಗ್ಗೆ ಬಿಜೆಪಿ ಮೃದು ಧೋರಣೆಯ ಹಿಂದಿನ ರಹಸ್ಯವೇನು?

    ಅಮಿತ್ ಶಾ ಸಂದರ್ಶನ: ಜೆಡಿಎಸ್ ಬಗ್ಗೆ ಬಿಜೆಪಿ ಮೃದು ಧೋರಣೆಯ ಹಿಂದಿನ ರಹಸ್ಯವೇನು?

    ಬೆಂಗಳೂರು: ಚುನಾವಣಾ ಚಾಣಕ್ಯ ಎಂದೇ ಬಿಂಬಿತವಾಗಿರುವ ಅಮಿತ್ ಶಾ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಕೇಳಿದ ಪ್ರಶ್ನೆಗೆ ಖಡಕ್ ಉತ್ತರಗಳನ್ನು ನೀಡಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಬಿಜೆಪಿ ಸಾಕಷ್ಟು ಮೃದು ಧೋರಣೆಯನ್ನು ತೋರಿಸುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ್ರೆ ಮೈತ್ರಿ ಸರಳವಾಗಿರಲೆಂದು ಬಿಜೆಪಿ ಈಗಲೇ ಪ್ಲಾನ್ ಮಾಡಿಕೊಂಡಿದೆ ಅಂತಾ ಸುದ್ದಿಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅಮಿತ್ ಶಾ ಈ ರೀತಿಯಾಗಿ ಉತ್ತರ ನೀಡಿದ್ರು.

    ಜೆಡಿಎಸ್ ಜೊತೆ ನಾವು ಚುನಾವಣಾ ಹೊಂದಾಣಿಕೆಯನ್ನು ಮಾಡಿಲ್ಲ. ನಾವು ಪ್ರತಿಕ್ಷೇತ್ರ ಗೆಲ್ಲಲೇಬೇಕೆಂದು ಚುನಾವಣೆ ಎದುರಿಸಿ ಪೂರ್ಣಪ್ರಮಾಣದ ಸರ್ಕಾರವನ್ನು ರಚಿಸುತ್ತೇವೆ. ನಾನು ಮೊದಲಿನಿಂದಲೂ 300 ಸ್ಥಾನ ಗೆಲ್ಲುತ್ತೇವೆ ಅಂತ ಹೇಳುತ್ತಿದ್ದೆ. ತ್ರಿಪುರಾದಲ್ಲಿ 38-42 ಅಂತ ಅಂದುಕೊಂಡಿದ್ದೆವು. 43 ಸ್ಥಾನ ಗೆದ್ದೆವು. ಜೆಡಿಎಸ್ ಈಗ ಅಧಿಕಾರದಲ್ಲಿಲ್ಲ. ಜೆಡಿಎಸ್ ವಿರುದ್ಧ ಹೋರಾಡುವ ಪ್ರಶ್ನೆನೇ ಉದ್ಭವಿಸುವುದಿಲ್ಲ. 5 ವರ್ಷದ ದುರಾಡಳಿತ ನಡೆಸಿದ್ದು ಕಾಂಗ್ರೆಸ್. ಜೆಡಿಎಸ್‍ನಿಂದ ಕಾಂಗ್ರೆಸನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ಜೆಡಿಎಸ್‍ಗೆ ಮತ ಹಾಕಿದರೆ ಅದು ವ್ಯರ್ಥ. ಜೆಡಿಎಸ್ ಸರ್ಕಾರ ರಚಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕೆಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಅಂತಾ ಉತ್ತರಿಸಿದ್ರು.

  • ಬಿಎಸ್‍ವೈ, ಈಶ್ವರಪ್ಪ ನಡುವಿನ ಶೀತಲ ಸಮರ ಅಂತ್ಯ- ಅಮಿತ್ ಶಾ ನೇತೃತ್ವದ ಸಂಧಾನ ಸಭೆ ಸಕ್ಸಸ್

    ಬಿಎಸ್‍ವೈ, ಈಶ್ವರಪ್ಪ ನಡುವಿನ ಶೀತಲ ಸಮರ ಅಂತ್ಯ- ಅಮಿತ್ ಶಾ ನೇತೃತ್ವದ ಸಂಧಾನ ಸಭೆ ಸಕ್ಸಸ್

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಇಬ್ಬರ ನಡುವಿನ ಶೀತಲ ಸಮರಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪೂರ್ಣ ವಿರಾಮ ಹಾಕಿದ್ದಾರೆ. ಕೆಎಸ್ ಈಶ್ವರಪ್ಪ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆಯಲ್ಲಿ ಅಮಿತ್ ಶಾ ಇಬ್ಬರು ನಾಯಕರ ಮನವೊಲಿಸಿದ್ದಾರೆ ಅಂತಾ ಎನ್ನಲಾಗುತ್ತಿದೆ.

    ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ, ಈಶ್ವರಪ್ಪ ಮತ್ತು ಬಿಎಸ್ ಯಡಿಯೂರಪ್ಪ ಕೈ ಎತ್ತಿ ಹಿಡಿದ ಅಮಿತ್ ಶಾ ಇಬ್ಬರೂ ಹೀಗೆ ಒಟ್ಟಾಗಿ ಚುನಾವಣೆಗೆ ಹೋಗ್ತಾರೆ. ಅಲ್ಲದೆ ಯಡಿಯೂರಪ್ಪ ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ. ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸ್ತೀವಿ. ಅಲ್ಲದೆ ಈಗ ಏನು ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಅದು ಚುನಾವಣೆ ಘೋಷಣೆ ಬಳಿಕ ಸುನಾಮಿಯಾಗಿ ಭಾರತೀಯ ಜನತಾ ಪಕ್ಷ ಪ್ರಚಂಡ ಬಹುಮತದೊಂದಿಗೆ ಗೆದ್ದು ಸರ್ಕಾರ ರಚಿಸುತ್ತದೆ ಅಂತ ಹೇಳಿದ್ರು.

    ಈಶ್ವರಪ್ಪ ಮತ್ತು ಯಡಿಯೂರಪ್ಪರ ನಡುವಿನ ಮುನಿಸಿನ ಬಗ್ಗೆ ಮಾಧ್ಯಮಗಳು ಅಮಿತ್ ಶಾರನ್ನು ಪ್ರಶ್ನೆ ಮಾಡಿದಾಗ, ಮತ್ತೊಮ್ಮೆ ಇಬ್ಬರ ಕೈ ಯನ್ನು ಮೇಲಕ್ಕೆತ್ತಿ ಇದೇ ನನ್ನ ಉತ್ತರ ಅಂತಾ ಅಂದ್ರು.

  • ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ: ರಾಹುಲ್ ಪ್ರಶ್ನೆಗೆ ಒಬ್ಬೊಬ್ಬರದ್ದು ಒಂದೊಂದು ಲೆಕ್ಕ!

    ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ: ರಾಹುಲ್ ಪ್ರಶ್ನೆಗೆ ಒಬ್ಬೊಬ್ಬರದ್ದು ಒಂದೊಂದು ಲೆಕ್ಕ!

    ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಆದರೆ ಎಷ್ಟು ಸ್ಥಾನ ಗೆಲ್ಲುತ್ತೀರಿ ಎನ್ನುವ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಒಬ್ಬೊಬ್ಬ ನಾಯಕರು ಒಂದೊಂದು ಉತ್ತರ ನೀಡಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ದೆಹಲಿಯಲ್ಲಿ ಎಐಸಿಸಿ ಅಧಿವೇಶನದಲ್ಲಿ ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ಕೈ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ದಾರೆ. ಈ ವೇಳೆ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ ಎಂದು ಕ್ವಿಜ್ ಮಾದರಿಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

    ಈ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಮಗೆ 100 ಸೀಟ್ ಸಿಗಲಿದೆ ಎಂದು ಹೇಳಿದರೆ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ 90 ಸೀಟ್ ಸಿಗಬಹುದು ಎಂದು ಉತ್ತರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ 80 ಸೀಟ್ ಸಿಗಬಹುದು ಎಂದಿದ್ದಾರೆ.

     

    ಕಾಂಗ್ರೆಸ್‍ಗೆ ಬಹುಮತ ಸಿಗುವುದು ಕಷ್ಟ ಎನ್ನುವ ಅಭಿಪ್ರಾಯಕ್ಕೆ ರಾಜ್ಯ ನಾಯಕರು ಬಂದಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ನಮಗೆ ಪಕ್ಕಾ 128 ಸ್ಥಾನ ಸಿಗುತ್ತೆ ಎಂದು ಉತ್ತರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತಿಗೆ ರಾಹುಲ್ ಗಾಂಧಿ ಫುಲ್ ಖುಷ್ ಆಗಿ, ನೋಡಿ ಸಿದ್ದರಾಮಯ್ಯನವರೇ ನೀವು ಒಬ್ಬರೇ ವಿಶ್ವಾಸದಿಂದ ಇದ್ದೀರಿ. ಉಳಿದವರೆಲ್ಲ ಮೈತ್ರಿ ಸರ್ಕಾರದ ಮೇಲೆ ಕಣ್ಣಿಟ್ಟು ಕುರ್ಚಿ ಆಸೆಪಟ್ಟಿದ್ದಾರೆ. ನೀವು ಒಬ್ಬರೇ ನಮ್ಮದು ಸ್ವತಂತ್ರ ಸರ್ಕಾರ ಬರುತ್ತೆ ಎಂದು ಹೇಳಿ ಶಹಬ್ಬಾಸ್ ಎಂದಿದ್ದಾರೆ.

    ನಂತರ 128 ಸ್ಥಾನ ಬಂದೇ ಬರುತ್ತೆ ಎಂದು ಪಕ್ಕಾ ಹೇಗೆ ಹೇಳುತ್ತೀರಿ ಎಂದು ರಾಹುಲ್ ಗಾಂಧಿ ಸಿದ್ದರಾಮಯ್ಯನವರಿಗೆ ಮರುಪ್ರಶ್ನೆ ಹಾಕಿದ್ದಾರೆ. ಇದಕ್ಕೆ, ನೋಡಿ ನಾನು ಎಂಟು ಹಿಂದಿನ ಸರ್ಕಾರಗಳನ್ನು ನೋಡಿದ್ದೇನೆ. ಚುನಾವಣೆಗೆ ಹೋಗಿರುವ ಸನ್ನಿವೇಶಗಳನ್ನ ನೋಡಿದ್ದೇನೆ. ಹಿಂದಿನ ಸರ್ಕಾರಗಳಂತೆ ನಮ್ಮ ಸರ್ಕಾರದ ಆಡಳಿತಕ್ಕೆ ಅಷ್ಟೊಂದು ವಿರೋಧ ಬಂದಿಲ್ಲ. ನಮ್ಮ ಅಭಿವೃದ್ಧಿ ಯೋಜನೆಗಳು, ಅನ್ನಭಾಗ್ಯದಂತಹ ಜನಪರ ಯೋಜನೆಗಳಿವೆ. ಹೀಗಾಗಿ ನಮ್ಮ ಸರ್ಕಾರ ಬಂದೇ ಬರುತ್ತೆ. ಡೋಂಟ್‍ವರಿ ಎಂದು ಸಿಎಂ ತನ್ನ ಉತ್ತರಕ್ಕೆ ಸಮರ್ಥನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

  • ಕಮಲ ಅರಳಿಸಲು ಕೈ ಘಟಾನುಘಟಿ ನಾಯಕರ ಕ್ಷೇತ್ರಕ್ಕೆ ಇಳಿಯಲಿದ್ದಾರೆ ಶಾ ನಂಬಿಕಸ್ಥ ಆಪ್ತರು!

    ಕಮಲ ಅರಳಿಸಲು ಕೈ ಘಟಾನುಘಟಿ ನಾಯಕರ ಕ್ಷೇತ್ರಕ್ಕೆ ಇಳಿಯಲಿದ್ದಾರೆ ಶಾ ನಂಬಿಕಸ್ಥ ಆಪ್ತರು!

    ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ ಮೊದಲ ವಾರದಲ್ಲೇ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಮುಂದಿನ ವಾರವೇ ದಿನಾಂಕ ಪ್ರಕಟವಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಮುಂದಿನ ಸೋಮವಾರದ ಒಳಗೆ ನಿಮ್ಮ ಕ್ಷೇತ್ರಗಳಲ್ಲಿನ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಿ ಎಂದು ಬಿಜೆಪಿ ಶಾಸಕರಿಗೆ ವರಿಷ್ಠರು ಸೂಚಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಇದರ ಜೊತೆಗೆ, ಮುಂದಿನ ವಿಧಾನಸಭಾ ಚುನಾವಣೆ ಯಾವ ಟಿ-20 ಕ್ರಿಕೆಟ್ ಮ್ಯಾಚಿಗೂ ಕಮ್ಮಿ ಇಲ್ಲದಂತೆ ರೋಚಕದತ್ತ ಸಾಗುತ್ತಿದೆ. ಕಾಂಗ್ರೆಸ್, ಜೆಡಿಎಸ್‍ಗೆ ಹೋಲಿಸಿದರೆ ಬಿಜೆಪಿ ಕೆಲ ದಿನಗಳಿಂದ ತಳಮಟ್ಟದಲ್ಲಿ ಜಾಸ್ತಿ ಕೆಲಸ ಮಾಡುತ್ತಿರುವುದು ಗೋಚರಿಸುತ್ತಿದೆ.

    ಎಲೆಕ್ಷನ್ ಘೋಷಣೆಗೂ ಮುನ್ನವೇ ಘಟಾನುಘಟಿಗಳು ಫೀಲ್ಡಿಗಿಳಿದಿದ್ದು ಸಮರಕ್ಕೆ ಅಣಿಯಾಗಿದ್ದಾರೆ. ಅದರಲ್ಲೂ ರಾಜಕೀಯ ಚಾಣಕ್ಯನೆಂದೇ ಹೆಸರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ತಮ್ಮ ನಂಬಿಕಸ್ಥ ಭಂಟರನ್ನು ರಣಾಂಗಣಕ್ಕಿಳಿಸಿದ್ದಾರೆ. ಸ್ಥಳೀಯ ನಾಯಕರಿಗೆ ಕ್ಷೇತ್ರದ ಹೊಣೆಯನ್ನು ನೀಡುವ ಬದಲು  ಬಿಜೆಪಿಯ ರಣನೀತಿ ತಜ್ಞರನ್ನು ಬಿಗ್‍ಫೈಟ್‍ಗೆ ಬಳಸಿಕೊಂಡಿದ್ದಾರೆ.

    ಅದರಲ್ಲೂ, ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಟಿಎಂ ಲೇಔಟ್‍ನಿಂದ ಕಣಕ್ಕಿಳಿಯುತ್ತಿರುವ ರಾಮಲಿಂಗಾರೆಡ್ಡಿ ಹಾಗೂ ಪುತ್ರನ ಪುಂಡಾಟಿಕೆಯಿಂದ ವರ್ಚಸ್ಸು ಕಳೆದುಕೊಂಡಿರುವ ಶಾಂತಿನಗರ ಶಾಸಕ ಹ್ಯಾರಿಸ್ ಕ್ಷೇತ್ರ ಸೇರಿದಂತೆ, ಹಲವು ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ತಂತ್ರಗಾರಿಕೆ ರೂಪಿಸಲಾಗಿದೆ.  ಉಸ್ತುವಾರಿಯಾಗಿ ನಿಯೋಜನೆಗೊಂಡ ಹಿನ್ನೆಲೆಯಲ್ಲಿ  ಬಿಟಿಎಂ ಲೇಔಟ್ ವಿಧಾನಸಭೆ ಉಸ್ತುವಾರಿಯನ್ನು ಹೊತ್ತಿರುವ ರಾಜಸ್ಥಾನದ ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್  ಶುಕ್ರವಾರ ರಾತ್ರಿ ಆ ಕ್ಷೇತ್ರದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದ್ದರು.

    ಯಾವ ಕ್ಷೇತ್ರದಲ್ಲಿ ಯಾರು ಉಸ್ತುವಾರಿ?
    ಟಾರ್ಗೆಟ್ 1: ಸಿದ್ದರಾಮಯ್ಯ, ಮುಖ್ಯಮಂತ್ರಿ
    ಸಿದ್ದರಾಮಯ್ಯನವರ ಚಾಮುಂಡೇಶ್ವರಿ ವಿಧಾನಸಭೆಯ ಉಸ್ತುವಾರಿಯಾಗಿ ಉತ್ತರಪ್ರದೇಶದ ಮೀರತ್ ಸಂಸದ ರಾಜೇಂದ್ರ ಅಗರವಾಲ್ ನೇಮಕವಾಗಿದ್ದಾರೆ.

    ಟಾರ್ಗೆಟ್ 2: ಯತೀಂದ್ರ, ಸಿದ್ದರಾಮಯ್ಯ ಪುತ್ರ
    ಈ ಚುನಾವಣೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿ ಕಣಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿರುವ ಯತೀಂದ್ರ ಅವರನ್ನು ಸೋಲಿಸಲು ಎಸ್ಸಿ ಆಯೋಗದ ಅಧ್ಯಕ್ಷ, ಸಂಸದ ರಾಮ್ ಶಂಕರ್ ಕಟೇರಿಯಾ ಅವರನ್ನು ನಿಯೋಜಿಸಲಾಗಿದೆ.

    ಟಾರ್ಗೆಟ್ 3: ರಾಮಲಿಂಗಾರೆಡ್ಡಿ, ಗೃಹ ಸಚಿವ
    ಬಿಟಿಎಂ ಲೇಔಟ್ ವಿಧಾನಸಭೆ ಉಸ್ತುವಾರಿಯನ್ನು ರಾಜಸ್ಥಾನದ ರಾಜ್ಯಸಭಾ ಸದಸ್ಯ ಭೂಪೇಂದ್ರ ಯಾದವ್ ನೋಡಿಕೊಳ್ಳಲಿದ್ದಾರೆ.

    ಟಾರ್ಗೆಟ್ 4: ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
    ಜಮ್ಮು-ಕಾಶ್ಮೀರದ ಉಸ್ತುವಾರಿಯಾಗಿರುವ ಅವಿನಾಶ್ ರೈ ಖನ್ನಾ ಅವರಿಗೆ ಶಾ ಕೊರಟಗೆರೆ ವಿಧಾನಸಭೆಯ ಉಸ್ತುವಾರಿಯನ್ನು ಕೊಟ್ಟಿದ್ದಾರೆ.

    ಟಾರ್ಗೆಟ್ 5: ಎಚ್.ಸಿ. ಮಹದೇವಪ್ಪ, ಸಚಿವ
    ಲೋಕೋಪಯೊಗಿ ಸಚಿವ ಎಚ್‍ಸಿ ಮಹದೇವಪ್ಪನವರ ಟಿ. ನರಸೀಪುರ ಕ್ಷೇತ್ರದ ಉಸ್ತುವಾರಿಯನ್ನಾಗಿ ಸಂಸದ, ಎಸ್ಸಿ ಆಯೋಗದ ಅಧ್ಯಕ್ಷ ರಾಮ್ ಶಂಕರ್ ಕಟೇರಿಯಾ ಅವರನ್ನು ನಿಯೋಜಿಸಲಾಗಿದೆ.

    ಟಾರ್ಗೆಟ್ 6: ಎನ್.ಎ ಹ್ಯಾರಿಸ್, ಶಾಸಕ
    ಶಾಂತಿನಗರ ವಿಧಾನಸಭೆಯ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಲಾ. ಗಣೇಶನ್ ನೇಮಕವಾಗಿದ್ದಾರೆ.

  • ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸೂಚನೆ ರವಾನೆ

    ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸೂಚನೆ ರವಾನೆ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ರಾಜಕೀಯ ತಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರೆ ಕಾಂಗ್ರೆಸ್ ಗೆ ಭಾರೀ ಮುಖಭಂಗ ಆಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಮಹತ್ವದ ಸೂಚನೆಯನ್ನು ರವಾನೆ ಮಾಡಲಾಗಿದ ಎನ್ನಲಾಗಿದೆ.

    ಮಾರ್ಚ್ 10 ರಂದು ಮೈಸೂರಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸರ್ಕಾರದ ಕೊಡುಗೆಗಳನ್ನು ತಿಳಿಸಿದ್ದರು. ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ನಮ್ಮ ಸರ್ಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸಿಎಂ ಅವರ ಇದೇ ಮಾತುಗಳನ್ನು ಅಸ್ತ್ರವಾಗಿ ಬಳಸಿಕೊಂಡು ಮಹಾರಾಜರ ಕಾಲದ ಕೆಸಲಕ್ಕೆ ಸಿದ್ದು ಸರ್ಕಾರದ ಕೆಲಸ ಹೋಲಿಕೆ ಮಾಡಿ ವಾಗ್ದಾಳಿ ನಡೆಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

     

    ಸಿಎಂ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಅನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಜನರಿಗೆ ಎಲ್ಲವೂ ಗೊತ್ತಿದೆ. ರಾಜರು ನೀಡಿದ ಕೊಡುಗೆಯನ್ನು ಜನರು ಯಾವತ್ತು ಮರೆಯುವುದಿಲ್ಲ. ಮೈಸೂರು ಸಂಸ್ಥಾನ ಕೊಡುಗೆ ಎಲ್ಲರಿಗೂ ಗೊತ್ತಿದೆ ಅಂತ ಮೈಸೂರು ಮಹರಾಜ ಯದುವೀರ್ ಒಡೆಯರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.

    ಯದುವೀರ್ ಸಿಎಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಂತೆ ಬಿಜೆಪಿ ಸಖತ್ ಪ್ಲಾನ್ ರೂಪಿಸಿಕೊಂಡಿದೆ. ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿರುವ ಯದುವೀರ್ ಒಡೆಯರ್ ಅವರನ್ನು ಲೋಕಸಭೆ ಚುನಾವಣೆ ಒಳಗಾಗಿಯಾದ್ರೂ ಬಿಜೆಪಿಗೆ ಸೆಳೆಯುವಂತೆ ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ.

  • ಕಾಂಗ್ರೆಸ್, ಬಿಜೆಪಿ ನಡುವೆ ಮೆಗಾ ಟ್ವೀಟ್ ವಾರ್- ‘ನ’ಮಗೆ ‘ಮೋ’ಸ ಅಂತಾ 10 ಸವಾಲ್ ಎಸೆದ ಕಾಂಗ್ರೆಸ್

    ಕಾಂಗ್ರೆಸ್, ಬಿಜೆಪಿ ನಡುವೆ ಮೆಗಾ ಟ್ವೀಟ್ ವಾರ್- ‘ನ’ಮಗೆ ‘ಮೋ’ಸ ಅಂತಾ 10 ಸವಾಲ್ ಎಸೆದ ಕಾಂಗ್ರೆಸ್

    ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾರ್ ನಡೆಯುತ್ತಿದೆ. ರಾಜಕೀಯ ನಾಯಕರು ಟ್ವಿಟ್ಟರ್ ಮೂಲಕ ತಮ್ಮ ವಿರೋಧಿಗಳ ಕಾಲನ್ನು ಎಳೆಯುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಟ್ವಿಟ್ಟರ್ ನಲ್ಲಿ ಟ್ವೀಟ್ ವಾರ್ ನಡೆಸುತ್ತಿವೆ. ಎರಡು ಪಕ್ಷಗಳು ಅಧಿಕೃತ ಟ್ವಟ್ಟರ್ ಖಾತೆ ಮೂಲಕ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿವೆ.

    ಕರ್ನಾಟಕ ಕಾಂಗ್ರೆಸ್ ಈ ಬಾರಿ ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಬಹಿರಂಗವಾಗಿ 10 ಸವಾಲಗಳನ್ನು ಹಾಕಿದೆ. ‘ನ’ಮಗೆ ‘ಮೋ’ಸ (ನಮೋ) ಎಂಬ ಶೀರ್ಷಿಕೆಯಲ್ಲಿ ಕಾಂಗ್ರೆಸ್, ಕರ್ನಾಟಕ ವಿರೋಧಿ ಬಿಜೆಪಿ ಎಂಬ ಹ್ಯಾಶ್ ಟ್ಯಾಗ್ ಬಳಸಿಕೊಂಡಿದೆ. ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಕೇಳಿದ ಪ್ರಶ್ನೆಗಳು ಹೀಗಿವೆ.

    ಪ್ರಶ್ನೆ 1. ಕನ್ನಡ ಹಿತಾಸಕ್ತಿ: ಬಿಜೆಪಿ ನಿರಂತರವಾಗಿ ಕನ್ನಡೇತರ ಅಭ್ಯರ್ಥಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಿದೆ. ಕನ್ನಡೇತರ ನಾಯಕರು ಸಂಸತ್ತಿನಲ್ಲಿ ಕರ್ನಾಟಕದ ಹಿತಾಸಕ್ತಿಗೆ ನ್ಯಾಯ ಒದಗಿಸಿಕೊಡುವರೇ?

    ಪ್ರಶ್ನೆ 2. ಮಹದಾಯಿ: ರಾಜ್ಯ ಸರ್ಕಾರ ಮಹದಾಯಿ ಜಲವಿವಾದ ಬಗೆಹರಿಸುವಂತೆ ಮೋದಿ ಬಳಿ ಮನವಿ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಮೂರು ರಾಜ್ಯ ಸರ್ಕಾರಗಳ ಜಂಟಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಮೋದಿಯವರಿಗೆ ಮನವಿ ಕೊಟ್ಟಿದ್ದು ಆಗಿದೆ. ಆದ್ರೆ ಮೋದಿ ಸರ್ಕಾರ ಕೀಳು ಮಟ್ಟದ ರಾಜಕಾರಣ ಮಾಡ್ತಿದೆ.

    ಪ್ರಶ್ನೆ 3. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಮೋಸ: ಭಾರತದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯನ್ನು ತಂದಿದ್ದು, ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್/ಹಿಂದಿಯಲ್ಲಿ ಬರೆಯುವ ಅವಕಾಶ ನೀಡಿ ಕನ್ನಡ ಮಾಧ್ಯಮವನ್ನು ನಿರ್ಬಂಧಿಸಿದೆ.

    ಪ್ರಶ್ನೆ 4. ಬರ ಪರಿಹಾರದಲ್ಲಿ ಮೋಸ: ಕೊಟ್ಟ ಬರ ಪರಿಹಾರ ಕೇವಲ 1,435.95 ಕೋಟಿ ರೂ. ಆದ್ರೆ ಬಿಜೆಪಿ ಆಳ್ವಿಕೆಯ ರಾಜ್ಯಗಳು ಮೋದಿ ಕೃಪಕಟಾಕ್ಷದಿಂದ ಅತ್ಯಧಿಕ ಬರ ಪರಿಹಾರ ಪಡೆದಿವೆ. ಮಹಾರಾಷ್ಟ್ರ-8.195 ಕೋಟಿ. ಗುಜರಾತ್- 3,894 ಕೋಟಿ, ರಾಜಸ್ಥಾನ-2,153 ಕೋಟಿ.

    ಪ್ರಶ್ನೆ 5. ಸಿಆರ್ ಪಿಎಫ್: ಮೋದಿ ಸರ್ಕಾರ ನಗರದ ಹೊರವಲಯದ ತರಳು ಗ್ರಾಮದಲ್ಲಿದ್ದ ಸಿಆರ್ ಪಿಎಫ್ ಕಚೇರಿಯನ್ನು ಉತ್ತರಪ್ರದೇಶದಲ್ಲಿರುವ ರಾಜನಾಥ್ ಸಿಂಗ್ ತವರು ಪ್ರದೇಶ ಚಾಂದೌಅಗೆ ಎತ್ತಂಗಡಿ ಮಾಡಿದೆ.

    ಪ್ರಶ್ನೆ 6. ಕರ್ನಾಟಕ ಬಾವುಟ: ರಾಜ್ಯ ಸರ್ಕಾರವು ಕನ್ನಡದ ಕಂಪನ್ನು ಪಸರಿಸುವ ನಾಡಧ್ವಜಕ್ಕೆ ಹೊಸ ರೂಪು ನೀಡಿ ಕನ್ನಡದ ಮೆರುಗನ್ನು ಹೆಚ್ಚಿಸಿದೆ. ಪ್ರತ್ಯೇಕ ಕನ್ನಡ ಬಾವುಟಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕನ್ನಡ ವಿರೋಧಿ ಧೋರಣೆ ತಾಳಿದ್ದಾರೆ.

    ಪ್ರಶ್ನೆ 7. ರಫಾಲ್ ಹೆಚ್‍ಎಎಲ್: ಕೇಂದ್ರ ಬಿಜೆಪಿ ಸರ್ಕಾರದ ಹೊಸ ವಿಮಾನದ ಗುತ್ತಿಗೆಯನ್ನು ದೇಶದ ಹೆಮ್ಮೆಯ ಹೆಚ್‍ಎಎಲ್ ಗೆ ನೀಡದೇ ಮೋದಿ ಮಿತ್ರ ಅನಿಲ್ ಅಂಬಾನಿ ಸಂಸ್ಥೆಗೆ ನೀಡಿ ನಾಡಿನ ಯುವಜನತೆಯ ಉದ್ಯೋಗಗಳಿಗೆ ಕಲ್ಲು ಹಾಕಿದೆ.

    ಪ್ರಶ್ನೆ 8. ಸಾಲ ಮನ್ನಾ ವಿರೋಧಿ ಸರ್ಕಾರ: ರಾಷ್ಟ್ರೀಕೃತ ಹಾಗು ವಾಣಿಜ್ಯ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಾಗ ಯಾವುದೇ ಸಹಕಾರ ನೀಡದೇ ಮೋದಿ ಸರ್ಕಾರವು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದೆ.

    ಪ್ರಶ್ನೆ 9. ಬಲವಂತವಾಗಿ ಹಿಂದಿ ಹೇರಿಕೆ: ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರುತ್ತಿದೆ (ಉದಾಹರಣೆ ನಮ್ಮ ಮೆಟ್ರೊ ಪ್ರದರ್ಶನ ಫಲಕಗಳಲ್ಲಿ ಹಿಂದಿ ಭಾಷೆ). ಈ ನಿಲುವು ಕೆಚ್ಚೆದೆಯ ಕನ್ನಡಿಗರನ್ನು ಕೆರಳಿಸಿದ್ದು ರಾಜ್ಯ ಸರ್ಕಾರವು ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ಸಂರಕ್ಷಣೆಗೆ ಬದ್ಧವಾಗಿದೆ.

    ಪ್ರಶ್ನೆ 10. ಕಾವೇರಿ: 2016ನೇ ಸಾಲಿನಲ್ಲಿ ಕಾವೇರಿ ನೀರಿನ ಸಮಸ್ಯೆ ರಾಜ್ಯದಲ್ಲಿ ಸ್ಫೋಟಗೊಂಡಿತ್ತು. ಆಗಲೇ ಸಿಎಂ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಕೊಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದರು. ಆದ್ರೆ ಸಿಎಂ ಪತ್ರಕ್ಕೆ ಮೋದಿ ಉತ್ತರ ನೀಡಲಿಲ್ಲ. ಈ ವಿಚಾರ ಬಗೆಹರಿಸುವ ಕುರಿತು ಸರ್ವಪಕ್ಷ ಸಭೆ ಕರೆದರೂ ಬಿಜೆಪಿ ಸಂಸದರು ಹಾಗು ಕೇಂದ್ರ ಸಚಿವರು ಬರಲಿಲ್ಲ.

    ಕಾಂಗ್ರೆಸ್ ನ ಈ 10 ಪ್ರಶ್ನೆಗಳಿಗೂ ಬಿಜೆಪಿ ತಿರುಗೇಟು ನೀಡಿದೆ. ಕೇರಳ ಮೂಲದ ಶಾಸಕ ಹ್ಯಾರಿಸ್ ಗೆ ಟಿಕೆಟ್ ನೀಡಿದ್ದೀರಿ, ಬಿಜೆಪಿ ಸರ್ಕಾರ ರೈಲ್ವೆ ಟಿಕೆಟ್ ಗಳಲ್ಲಿ ಕನ್ನಡ ಮುದ್ರಣಕ್ಕೆ ಚಾಲನೆ ನೀಡಿದೆ. ನೀಟ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶವನ್ನ ನೀಡಿದೆ ಅಂತಾ ತಿರುಗೇಟು ನೀಡಿದೆ.