ಬೆಂಗಳೂರು: ಬಿಜೆಪಿ ನಾಯಕರಿಗೆ ಜನ ನೆಮ್ಮದಿಯಿಂದ ಬದುಕುವುದು ಬೇಕಿಲ್ಲ. ಅವರಿಗೆ ಜನ ಹೊಡೆಯಬೇಕು, ಕಡಿಯಬೇಕು, ಬೆಂಕಿ ಇಡಬೇಕು, ಅಮಾಯಕರು ಸಾಯುವ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು. ಇದು ಸಾವಿನ ರಾಜಕಾರಣ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ, ಜಾತ್ಯಾತೀತರು ನಮ್ಮಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಕೋಮುವಾದಿಗಳ ಸಂಖ್ಯೆ ಸಣ್ಣದು. ಕೋಮುವಾದದ ಹುಟ್ಟಡಗಿಸಬೇಕಾದರೆ ಜಾತ್ಯಾತೀತವಾದಿಗಳು ಸಂಘಟಿತರಾಗಿ ದನಿ ಎತ್ತಬೇಕು. ಒಡೆಯುವ ಪ್ರಯತ್ನ ನಡೆದಾಗ ಕಟ್ಟುವ ಕೈಗಳೆಲ್ಲ ಒಂದಾಗಬೇಕು. ಮನುಷ್ಯಪರವಾದ ಸಮಾಜವನ್ನು ಕಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಮನುಷ್ಯ ವಿರೋಧಿಯಾಗಿರುವ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಜನ ತಪ್ಪು ಮಾಡಿಬಿಟ್ಟರು. ಈ ಬಾರಿ ಮೈಮರೆತು ತಪ್ಪುಮಾಡಬೇಡಿ. ಬಿಜೆಪಿನಾಯಕರಿಗೆ ಜನ ನೆಮ್ಮದಿಯಿಂದ ಬದುಕುವುದು ಬೇಕಿಲ್ಲ. ಅವರಿಗೆ ಜನ ಹೊಡೆಯಬೇಕು, ಕಡಿಯಬೇಕು, ಬೆಂಕಿ ಇಡಬೇಕು, ಅಮಾಯಕರು ಸಾಯುವ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು, ಇದು ಸಾವಿನ ರಾಜಕಾರಣ ಅಂತಾ ಟಾಂಗ್ ಕೊಟ್ಟಿದ್ದಾರೆ.

ದಕ್ಷಿಣ ಕನ್ನಡದ ಏಳು ಕಾಂಗ್ರೆಸ್ ಶಾಸಕರಲ್ಲಿ ಇಬ್ಬರು ಮುಸ್ಲಿಮರು, ಒಬ್ಬರು ಕ್ರಿಶ್ಚಿಯನ್ ಮತ್ತು ಒಬ್ಬರು ಜೈನ, ನಾಲ್ವರೂ ಅಲ್ಪಸಂಖ್ಯಾತ ಸಮುದಾಯದವರು. ಬಹುಸಂಖ್ಯಾತ ಹಿಂದೂಗಳು ಕೋಮುವಾದಿಗಳಾಗಿದ್ದರೆ ಇದು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ. `ಕರಾವಳಿಯಲ್ಲಿ ಉಗ್ರಗಾಮಿಗಳಿದ್ದಾರೆ’ `ಜೆಹಾದಿಗಳಿದ್ದಾರೆ’ ಎಂದು ಬಿಜೆಪಿ ನಾಯಕರು ತಮ್ಮದೇ ಊರಿನ, ರಾಜ್ಯದ ಮಾನ ಕಳೆಯುತ್ತಿದ್ದಾರೆ. ಇದು ಊರಿಗೆ, ಜನತೆಗೆ ಮಾಡುವ ಅವಮಾನ. ಜನ ಸೌಹಾರ್ದಪ್ರಿಯರು ಜಾತ್ಯತೀತರು ಮತ್ತು ದೇಶಪ್ರೇಮಿಗಳು. ಇಲ್ಲಿ ಇಂದು ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಚುನಾವಣಾ ಪ್ರಚಾರದ ಕಾಲದಲ್ಲಿ ನರೇಂದ್ರ ಮೋದಿಯವರೇ ಕರಾವಳಿ ಭಾಗಕ್ಕೆ ಬಂದು ಕೋಮುಭಾವನೆಯ ಬೆಂಕಿ ಉಗುಳುವ ಭಾಷಣ ಮಾಡಿ ಹೋಗಿದ್ದರು. ಆದರೆ ಮೂರೂ ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿರುವುದು ಕೇವಲ ನಾಲ್ಕು ಸ್ಥಾನ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯ 19 ಕ್ಷೇತ್ರಗಳಲ್ಲಿ 13 ರಲ್ಲಿ ಕಾಂಗ್ರೆಸ್ ಗೆದ್ದಿದೆ. ದಕ್ಷಿಣಕನ್ನಡದಲ್ಲಿ 7(8), ಉಡುಪಿಯಲ್ಲಿ 3(5) ಮತ್ತು ಉತ್ತರಕನ್ನಡದಲ್ಲಿ 3(6). ಉ.ಕನ್ನಡದ ಇಬ್ಬರು ಪಕ್ಷೇತರ ಶಾಸಕರು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕರಾವಳಿ ಜಾತ್ಯಾತೀತರ ನೆಲೆ. ಮತ್ತೊಮ್ಮೆ ಕಾಂಗ್ರೆಸ್ ಎಂದಿದ್ದಾರೆ.