Tag: Karnataka Elections 2018

  • ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ

    ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ

    ಮಡಿಕೇರಿ: ಹಾಡಿಯಲ್ಲಿ ವಾಸ್ತವ್ಯ ಮಾಡಿ, ಹಾಡಿ ಜನರ ಸಮಸ್ಯೆ ಆಲಿಸುವ ಮೂಲಕ ಜೆಡಿಎಸ್ ಸ್ಟಾರ್ ಪ್ರಚಾರಕಿ ಪೂಜಾ ಗಾಂಧಿ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದರು.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆಸುವಿನಕೆರೆ ಹಾಡಿಗೆ ಭೇಟಿ ನೀಡಿದ ಮುಂಗಾರು ಮಳೆ ಬೆಡಗಿ, ಹಾಡಿ ಜನರ ಸಮಸ್ಯೆ ಆಲಿಸಿ ಕೆಲಕ್ಷಣ ಗದ್ಗದಿತರಾದ್ರು. ಅವರ ಕಷ್ಟಗಳನ್ನು ಕೇಳಿ ಮರುಗಿದ ಪೂಜಾಗಾಂಧಿ ಸಮಸ್ಯೆ ಬಗೆಹರಿಸಿ ಹಾಡಿ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು.

    ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಬಾರಿ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದ್ದು, ಇಂತಹ ಜನರ ಬದುಕಿಗೆ ಬೆಳಕಾಗುವ ಕಾರ್ಯ ಮಾಡುತ್ತೇನೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಕಷ್ಟಸಾಧ್ಯ. ಏನು ಮಾಡ್ಬೇಕು ಅಂದ್ರೂ ರಾಷ್ಟ್ರೀಯ ಪಕ್ಷಗಳ ನಾಯಕರುಗಳಿಗೆ ದೆಹಲಿಯಿಂದ ಅನುಮತಿ ಬೇಕು. ಅದೇ ಜೆಡಿಎಸ್ ನಂತಹ ಪ್ರಾದೇಶಿಕ ಪಕ್ಷಕ್ಕೆ ಅದ್ರ ಅಗತ್ಯವಿಲ್ಲ. ಜನರ ಸಮಸ್ಯೆ ನೂರಿದ್ದು, ಅವುಗಳನ್ನು ಬಗೆಹರಿಸಲು ಕುಮಾರಸ್ವಾಮಿ ಗೆದ್ದು ಬರುತ್ತಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೆಡಿಎಸ್ ಪರ ಪ್ರಚಾರವನ್ನು ನಡೆಸಿದ್ದು, ಜೆಡಿಎಸ್ ನತ್ತ ಜನರ ಒಲವು ಇದೆ ಎಂದು ಪೂಜಾ ಗಾಂಧಿ ಹೇಳಿದ್ರು.

    ವಿರಾಜಪೇಟೆ ಪಟ್ಟಣದ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಪೂಜಾ ಗಾಂಧಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋಕೆ ಜನ ಮುಗಿಬಿದ್ದರು. ಜೆಡಿಎಸ್‍ಗೆ ಒಂದು ಚಾನ್ಸ್ ಕೊಟ್ಟು ನೋಡಿ ಎಂದು ಪ್ರಚಾರ ನಡೆಸ್ತಿರೋ ಮುಂಗಾರು ಮಳೆ ಹುಡುಗಿ ಸೆಲ್ಫಿ ಕೊಟ್ಟು ಓಟು ಕೇಳಿದ್ರು. ರಸ್ತೆಯಲ್ಲಿ ತೆರಳ್ತಿದ್ದ ವಾಹನಗಳನ್ನು ತಡೆದು ಜೆಡಿಎಸ್ ಗೆ ಓಟು ಮಾಡಿ ಎಂದು ಪೂಜಾ ಗಾಂಧಿ ಮನವಿ ಮಾಡಿದ್ರು.

    ಹಾಡಿ ಜನರು ತಯಾರಿಸಿದ ಅಕ್ಕಿರೊಟ್ಟಿ, ಸೊಪ್ಪಿನ ಪಲ್ಯ, ಅನ್ನ, ತರಕಾರಿ ಸಾಂಬಾರು ಸವಿದು ಅಲ್ಲೇ ರಾತ್ರಿ ಕಳೆದ್ರು. ಬೆಳಗ್ಗಿನಿಂದಲೇ ವಿರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ಮಾಡಿದ ಪೂಜಾ ರಾತ್ರಿ ಕೂಡಾ ಜನರ ಸಮಸ್ಯೆ ಆಲಿಸಿ ಅವರೊಂದಿಗೆ ಬೆರೆತು ಹಾಡಿ ವಾಸ್ತವ್ಯ ಮಾಡುವ ಮೂಲಕ ಮತಯಾಚನೆ ಮಾಡಿ ಗಮನ ಸೆಳೆದ್ರು. ಈ ವೇಳೆ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಉಪಸ್ಥಿತರಿದ್ದರು.

  • ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್

    ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್

    ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಸ್ಟಾರ್ ಕ್ಯಾಂಪೇನರ್ ಹಾಗೂ ಎಚ್.ಡಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆ ಪರ ಮತಯಾಚನೆ ನಡೆಸಿದ್ದಾರೆ.

    ರಾಮನಗರ ತಾಲೂಕಿನ ಮಾಯಗಾನಹಳ್ಳಿಯಿಂದ ಪ್ರಚಾರ ಆರಂಭಿಸಿರುವ ನಿಖಿಲ್, ತಮ್ಮ ತಂದೆಯ ಪರ ಮತಯಾಚನೆ ಮಾಡಿದ್ದಾರೆ. ಪ್ರತಿ ಗ್ರಾಮಗಳಿಗೆ ತೆರಳಿದ ನಿಖಿಲ್‍ಗೆ ಅಭೂತಪೂರ್ವ ಸ್ವಾಗತ ಸಹ ಸಿಕ್ಕಿದ್ದು, ಅವರಿಗೆ ಆರತಿ ಎತ್ತಿ ಮಹಿಳೆಯರು ಸ್ವಾಗತ ಮಾಡಿದ್ದಾರೆ.

    ಇದೇ ವೇಳೆ ಮಾತನಾಡಿದ ಅವರು, ಸಮಯದ ಅಭಾವದಿಂದ ತಮ್ಮ ತಂದೆಯವರು ಬರಲಾಗುತ್ತಿಲ್ಲ. ನಾನು ಕೂಡಾ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕೂಡ ತಂದೆಯವರ ಪರ ಪ್ರಚಾರ ನಡೆಸಿ ಮತಯಾಚನೆ ನಡೆಸುತ್ತೇನೆ. ಎರಡೂ ಕ್ಷೇತ್ರಗಳಲ್ಲಿ ತಂದೆಯವರು ಗೆಲುವು ಸಾಧಿಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿಯವರು ತಿಳಿಸಿದ್ದಾರೆ.

    ನಮ್ಮದು ರಾಜಕೀಯ ಕುಟುಂಬ, ರಾಜಕೀಯ ವಾತಾವರಣದಲ್ಲೇ ಬೆಳೆದವನು. ನನಗೆ ನಮ್ಮ ತಂದೆಯೇ ಮೊದಲ ಸ್ಪೂರ್ತಿಯಾಗಿದ್ದು, ಅವರ ಹಾದಿಯಲ್ಲಿಯೇ ನಡೆಯಲಿದ್ದೇನೆ. ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಆಲೋಚನೆ ಇಲ್ಲವೆಂದು ತಿಳಿಸಿದ್ದಾರೆ.

  • ಕರ್ನಾಟಕ ಕುರುಕ್ಷೇತ್ರ ಅಖಾಡಕ್ಕೆ ಸಿದ್ಧ- ಚುನಾವಣಾ ಕಣದಲ್ಲಿದ್ದಾರೆ 2,655 ಮಂದಿ ಅಭ್ಯರ್ಥಿಗಳು

    ಕರ್ನಾಟಕ ಕುರುಕ್ಷೇತ್ರ ಅಖಾಡಕ್ಕೆ ಸಿದ್ಧ- ಚುನಾವಣಾ ಕಣದಲ್ಲಿದ್ದಾರೆ 2,655 ಮಂದಿ ಅಭ್ಯರ್ಥಿಗಳು

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಅಖಾಡಕ್ಕೆ ಅಂತಿಮವಾಗಿದೆ. ಚುನಾವಣಾ ಕಣದಲ್ಲಿ ಒಟ್ಟು 2,655 ಅಭ್ಯರ್ಥಿಗಳಿದ್ದು, ವಿಧಾನಸಭಾ ಚುನಾವಣೆಗಾಗಿ 224 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 3,509 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

    ಈ ಪೈಕಿ 271 ಮಂದಿ ನಾಮಪತ್ರ ತಿರಸ್ಕೃತಗೊಂಡ ಬಳಿಕ ಇದ್ದ ಒಟ್ಟು 3,238 ಮಂದಿ ಅಭ್ಯರ್ಥಿಗಳ ಪೈಕಿ 583 ಮಂದಿ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಒಟ್ಟು 2,655 ಮಂದಿ ಚುನಾವಣಾ ಕಣದಲ್ಲಿದ್ದಾರೆ.

    ಬಿಜೆಪಿ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್ 222 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್ (201) ಮತ್ತು ಬಿಎಸ್ಪಿ (18) ಸೇರಿ 219 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

    ಮುಳಬಾಗಿಲಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡ್ರೆ, ಮೇಲುಕೋಟೆಯಲ್ಲಿ ಕೆ ಎಸ್ ಪುಟ್ಟಣಯ್ಯ ಪುತ್ರ ದರ್ಶನ್‍ರನ್ನು ಕೈ ಬೆಂಬಲಿಸಿದೆ. 1,155 ಪಕ್ಷೇತರು, 800 ಮಂದಿ ಇತರೆ ಪಕ್ಷಗಳಿಂದ ಸ್ಪರ್ಧಿಸ್ತಿದ್ದಾರೆ. 2,436 ಮಂದಿ ಪುರುಷ ಮತ್ತು 219 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.

  • ಪೊಲೀಸರು ತೊಂದ್ರೆ ಕೊಟ್ರೆ ಫೋನ್ ಮಾಡಿ- ನನ್ನ ನಂಬರ್ ತಗೊಳ್ಳಿ ಅಂದ್ರು ಶಾ

    ಪೊಲೀಸರು ತೊಂದ್ರೆ ಕೊಟ್ರೆ ಫೋನ್ ಮಾಡಿ- ನನ್ನ ನಂಬರ್ ತಗೊಳ್ಳಿ ಅಂದ್ರು ಶಾ

    ಕೊಪ್ಪಳ: ನನ್ನ ನಂಬರ್ ತಗೊಳ್ಳಿ, ಪೊಲೀಸ್ ಅಧಿಕಾರಿಗಳು ತೊಂದ್ರೆ ಕೊಟ್ರೆ ನನ್ನ ನಂಬರ್‍ಗೆ ಫೋನ್ ಮಾಡಿ. ಚುನಾವಣಾಧಿಕಾರಿಯಾಗಿರೋ ಜಿಲ್ಲಾಧಿಕಾರಿ ನಿಯಮ ಉಲ್ಲಂಘಿಸಿ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ನಿಮಗೆ ಅಡ್ಡಿಪಡಿಸಿದ್ರೆ ನಮಗೆ ದೂರು ಕೊಡಿ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಕರ್ನಾಟಕ ಗೆಲ್ಲಲು ವರ್ಷಕ್ಕೂ ಮೊದಲೇ ತಂತ್ರಗಾರಿಕೆಗೆ ಇಳಿದಿದ್ದ ಶಾ, ಶುಕ್ರವಾರ ಕೊಪ್ಪಳದಲ್ಲಿ ನಡೆದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ರು, ಈ ವೇಳೆ ನೀವು ದೂರು ನೀಡಿದ್ರೆ ನಾವು ಚುನಾವಣಾ ಆಯೋಗಕ್ಕೆ ತಿಳಿಸಿ ಅವರ ವರ್ಗಾವಣೆಗೆ ಪ್ರಯತ್ನ ಮಾಡ್ತೇವೆ ಅಂತ ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಫುಲ್ ಕ್ಲಾಸ್

    ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಚುನಾವಣಾ ಕಣ ರಂಗೇರಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಸಂಘಟನಾ ಸಭೆಗಳನ್ನು ನಡೆಸುವ ಮೂಲಕ ಚುನಾವಣಾ ತಂತ್ರವನ್ನು ಹೆಣೆದಿದ್ದಾರೆ. ಅಲ್ಲದೆ, ಬಿಜೆಪಿಗರಿಗೆ ಗೆಲುವಿನ ಪಾಠ ಮಾಡಿದ್ದಾರೆ. ಕೊಪ್ಪಳ ತಾಲೂಕಿನ ಬಸಾಪುರ ಬಳಿಯ ಎಂಎಸ್‍ಪಿಎಲ್ ಖಾಸಗಿ ಏರ್ ಪೋರ್ಟ್‍ಗೆ ಆಗಮಿಸಿದ ಅಮಿತ್ ಷಾ ಅವರು ನಗರದ ಶಿವಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಗವಿಸಿದ್ದೇಶ್ವರ ಮಠದ ಕತೃಗದ್ದುಗೆಯ ದರ್ಶನವನ್ನು ಪಡೆದುಕೊಂಡರು. ಅಲ್ಲದೆ, ಶ್ರೀಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದರ್ಶನ ಆಶೀರ್ವಾದ ಪಡೆದುಕೊಂಡಿದ್ದರು.

  • ಬಸವಣ್ಣನ ವಚನಗಳ ಪುಸ್ತಕ ಓದುವಂತೆ ಪ್ರಧಾನಿಗೆ ರಾಹುಲ್ ಗಾಂಧಿ ಸಲಹೆ

    ಬಸವಣ್ಣನ ವಚನಗಳ ಪುಸ್ತಕ ಓದುವಂತೆ ಪ್ರಧಾನಿಗೆ ರಾಹುಲ್ ಗಾಂಧಿ ಸಲಹೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಬಸವಣ್ಣನ ವಚನವನ್ನು ಭಾಷಣದುದ್ದಕ್ಕೂ ಉಲ್ಲೇಖಿಸುತ್ತಾ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರಿಗೆ ಕುಟುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಸವಣ್ಣನ ವಚನಗಳ ಪುಸ್ತಕ ಓದಬೇಕು. ಅದನ್ನು ಮೈಗೂಡಿಸಿಕೊಳ್ಳಬೇಕು. ಭ್ರಷ್ಟಾಚಾರ ರಹಿತ ಅಂತ ಭಾಷಣ ಮಾಡುವ ಮೋದಿ, ರೆಡ್ಡಿ ಬ್ರದರ್ಸ್ ಗೆ 8 ಟಿಕೆಟ್ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಜನಾರ್ದನ ರೆಡ್ಡಿ, ಯಡಿಯೂರಪ್ಪ, ಜೈಲಿಗೆ ಹೋದವರು. ಎಲ್ಲಾಕಡೆ ಭ್ರಷ್ಟಾಚಾರ ವಿರೋಧಿಯಂತೆ ಮೋದಿ ಮಾತನಾಡುತ್ತಾರೆ. ಪ್ರಧಾನಿ ಮೋದಿ ಜೈಲಿಗೆ ಹೋದವರ ಜೊತೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸೆಂಟ್ರಲ್ ಬ್ಯೂರೋ ಆಫ್ ಇಲ್ಲಿಗಲ್ ಮೈನಿಂಗ್ ಅಂತ ಸಿಬಿಐಯನ್ನು ಬಣ್ಣಿಸಿದರು.

    ರೆಡ್ಡಿ ಬ್ರದರ್ಸ್ ಇಡೀ ಕರ್ನಾಟಕವನ್ನು ಲೂಟಿ ಮಾಡಿದ್ದಾರೆ. ದೇಶದ ರೈತರಿಗೆ ಯುಪಿಎ ಸರ್ಕಾರ ಕೊಟ್ಟ ಹಣದ ಮೊತ್ತದಷ್ಟನ್ನು ರೆಡ್ಡಿ ಗ್ಯಾಂಗ್ ಲೂಟಿ ಮಾಡಿದೆ. ದೇಶದಲ್ಲಿ ಎಲ್ ಪಿ ಜಿ, ಪೆಟ್ರೋಲ್ ಲೂಟಿಯಾಗುತ್ತಿದೆ. ಲೂಟಿ ಮಾಡಿದ ಹಣ ಮೋದಿ ಆಪ್ತರ ಕಿಸೆಗೆ ಹೋಗುತ್ತದೆ ಎಂದು ಆರೋಪಿಸಿದರು.

    ಮೋದಿ ಭೇಟಿ ಬಚಾವೋ ಭೇಟಿ ಪಡಾವೋ ಅಂತಾರೆ. ಬಿಜೆಪಿ ನಾಯಕರಿಂದಲೇ ಭೇಟಿ ಬಚಾವ್ ಮಾಡಬೇಕಾಗಿದೆ. ಅತ್ಯಾಚಾರ ನಡೆದರೂ ಮೋದಿ ತುಟಿ ಬಿಚ್ಚುವುದಿಲ್ಲ. ಡೋಕ್ಲಾಂ ನಲ್ಲಿ ಚೀನ ಅಟ್ಟಹಾಸ ಮಾಡುತ್ತಿದೆ. ನಮ್ಮ ಪ್ರಧಾನಿ ಚೀನಾ ಪ್ರವಾಸ ಮಾಡಿ ಅಲ್ಲಿನ ಪ್ರಧಾನಿ ಜೊತೆ ಜೋಕಾಲಿ ಆಡ್ತಾರೆ ಅಂತ ಕಟುವಾಗಿ ಟೀಕಿಸಿದರು.

  • ಸ್ನೇಹಿತರ ಗೆಲುವಿಗಾಗಿ ಫೀಲ್ಡ್ ಗಿಳಿದ ಜನಾರ್ದನ ರೆಡ್ಡಿಗೆ ಬ್ರೇಕ್!

    ಸ್ನೇಹಿತರ ಗೆಲುವಿಗಾಗಿ ಫೀಲ್ಡ್ ಗಿಳಿದ ಜನಾರ್ದನ ರೆಡ್ಡಿಗೆ ಬ್ರೇಕ್!

    ಬೆಂಗಳೂರು: ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲ್ಲಿಸಲು ಪ್ಲಾನ್ ಮಾಡುತ್ತಿರೋ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಗೆ ಬಿಜೆಪಿ ಹೈಕಮಾಂಡ್ ಕಡಿವಾಣ ಹಾಕಿದೆ.

    ರಾಜಕೀಯ ಎಂಟ್ರಿ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರ ಪ್ರಚಾರದ ವಿಚಾರದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ರೆಡ್ಡಿಯನ್ನು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕಿದ ಬಿಜೆಪಿ, ಶ್ರೀರಾಮುಲು ಗೆಲುವಿಗಾಗಿ ಬಹಿರಂಗ ಪ್ರಚಾರಕ್ಕೆ ಮುಂದಾಗಿರೋದಕ್ಕೆ ಬ್ರೇಕ್ ಹಾಕಿದೆ.

    ಪಕ್ಷದ ಸೂಚನೆಯನ್ನು ಪಾಲಿಸುತ್ತೇನೆ. ಅನಗತ್ಯ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದಾಗಿ ರೆಡ್ಡಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    `ಲೋ ಪ್ರೊಫೈಲ್ ಮೆಂಟೇನ್ ಮಾಡಿ’, ಮಾಧ್ಯಮಗಳಿಂದ ಅಂತರ ಕಾಪಾಡಿಕೊಳ್ಳಿ ಅಂತ ಹೈಕಮಾಂಡ್ ಖಡಕ್ ಸೂಚನೆ ರವಾನಿಸಿದೆ. ಬಾಹ್ಯ ಪ್ರಚಾರಕ್ಕೆ ಬದಲಾಗಿ ಆಂತರಿಕ ಪ್ರಚಾರಕ್ಕೆ ಮುಂದಾಗಬೇಕು. ಪ್ರಚಾರದ ವೇಳೆ ವಿವಾದಿತ ಅಭಿಪ್ರಾಯಗಳನ್ನು ನೀಡಬೇಡಿ. ವ್ಯಕ್ತಿ, ಜಾತಿಯಾಧಾರಿತ ಹೇಳಿಕೆಗಳನ್ನು ನೀಡೋದಕ್ಕೆ ಬ್ರೇಕ್ ಹಾಕಿ. ಪಾಸಿಟಿವ್ ಪ್ರಚಾರದ ಮೂಲಕ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚನೆ ನೀಡಿದ್ದು ರೆಡ್ಡಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಒಟ್ಟಿನಲ್ಲಿ ಕಾಂಗ್ರೆಸ್ ಟೀಕೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡುತ್ತಿದೆಯಾ ಎಂಬ ಪ್ರಶ್ನೆ ಎದ್ದಿದ್ದು, ಬದಾಮಿ, ಮೊಳಕಾಲ್ಮೂರು ಕ್ಷೇತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರೆಡ್ಡಿಗೆ ಬ್ರೇಕ್ ಹಾಕೋ ಪಕ್ಷದ ತೀರ್ಮಾನದಿಂದ ಬಿಜೆಪಿ ವಲಯದಲ್ಲಿ ಕುತೂಹಲ ಹೆಚ್ಚಿದೆ.

  • ಚುನಾವಣೆಯಿಂದ ಹಿಂದೆ ಸರಿದ್ರೂ, ಮಂಡ್ಯ ರಾಜಕಾರಣದಲ್ಲಿ ಅಂಬಿಗೆ ಭರ್ಜರಿ ಡಿಮ್ಯಾಂಡ್!

    ಚುನಾವಣೆಯಿಂದ ಹಿಂದೆ ಸರಿದ್ರೂ, ಮಂಡ್ಯ ರಾಜಕಾರಣದಲ್ಲಿ ಅಂಬಿಗೆ ಭರ್ಜರಿ ಡಿಮ್ಯಾಂಡ್!

    ಮಂಡ್ಯ: ಶಾಸಕ ಅಂಬರೀಶ್ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದರೂ ಚುನಾವಣಾ ಪ್ರಚಾರದಲ್ಲಿ ಅವರನ್ನು ಬಳಸಿಕೊಳ್ಳಲು ಮಂಡ್ಯ ರಾಜಕಾರಣದಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಶುರುವಾಗಿದೆ.

    ಈಗಾಗಲೇ ಚುನಾವಣೆಯಲ್ಲಿ ಅಂಬರೀಶ್ ಸಹಕಾರ ಕೇಳಲು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಮುಂದಾಗಿದ್ದು, ಅದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಫೋನ್‍ನಲ್ಲಿ ಮಾತನಾಡಿ ಸಹಕಾರ ಕೇಳುವುದು ಸೌಜನ್ಯವಲ್ಲ. ಹೀಗಾಗಿ ಅಂಬರೀಶ್ ಅವರನ್ನು ನೇರವಾಗಿ ಭೇಟಿ ಮಾಡಿ ಸಹಕಾರ ಕೇಳುತ್ತೇನೆ ಎಂದು ಮಾಜಿ ಶಾಸಕ, ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಹೇಳಿದ್ದಾರೆ. ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ ಅಂಬಿ ಆಪ್ತ – ರಮ್ಯಾಗೆ ಎಂಪಿ ಟಿಕೆಟ್ ಸಿಕ್ಕ ಗುಟ್ಟು ಬಹಿರಂಗಗೊಳಿಸಿದ್ರು!

    ಕಳೆದ ಬಾರಿ ಎಂ.ಶ್ರೀನಿವಾಸ್ ಅವರು ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸುಮಾರು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ರು. ಈಗ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎಂ.ಶ್ರೀನಿವಾಸ್ ಈ ಬಾರಿ ಅಂಬರೀಶ್ ಅವರ ಸಹಕಾರ ಕೇಳಲು ಮುಂದಾಗಿದ್ದಾರೆ. ಅಂಬರೀಶ್ ಅವರು ಸೇರಿದಂತೆ ಎಲ್ಲರ ಸಹಕಾರ ಕೇಳುವುದು ಮುಖ್ಯವಾಗಿದೆ. ಸದ್ಯದಲ್ಲೇ ಅಂಬರೀಶ್ ಅವರ ಸಹಕಾರ ಕೇಳಲಾಗುವುದು ಅಂತ ಹೇಳಿದ್ದಾರೆ. ಇದನ್ನೂ ಓದಿ: ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ

    ಆದ್ರೆ ಕಳೆದ ಬಾರಿ ತಮ್ಮ ಎದುರಾಳಿಯಾಗಿದ್ದ ಶ್ರೀನಿವಾಸ್‍ಗೆ ಅಂಬರೀಶ್ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವ ಕುತೂಹಲ ಮಂಡ್ಯ ಕ್ಷೇತ್ರದಲ್ಲಿ ಮೂಡಿದೆ. ಇನ್ನು ನಾಳೆಯಿಂದ ಮಂಡ್ಯ ಕ್ಷೇತ್ರದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷದ ಚುನಾವಣಾ ಪ್ರಚಾರ ಆರಂಭಿಸಲಿರುವ ಎಂ.ಶ್ರೀನಿವಾಸ್ ಪರ ಪ್ರಚಾರ ಮಾಡಲು, ಸ್ವತಃ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಆಗಮಿಸಲಿದ್ದು, ಮಂಡ್ಯ ಕ್ಷೇತ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ. ಇದನ್ನೂ ಓದಿ: ಅಂಬರೀಶ್ ಅವರನ್ನು ನಾನು ನಂಬಿದ್ದೆ, ಆದ್ರೂ ಟಿಕೆಟ್ ತಪ್ತು: ಭಾವುಕರಾದ ಅಮರಾವತಿ ಚಂದ್ರಶೇಖರ್

  • ಇದ್ದಕ್ಕಿದ್ದಂತೆ ಜನಾರ್ದನ ಪೂಜಾರಿ ಮೇಲೆ ಪ್ರೀತಿ – ಕಾಲಿಗೆ ಬಿದ್ದ ಕೈ ನಾಯಕರು!

    ಇದ್ದಕ್ಕಿದ್ದಂತೆ ಜನಾರ್ದನ ಪೂಜಾರಿ ಮೇಲೆ ಪ್ರೀತಿ – ಕಾಲಿಗೆ ಬಿದ್ದ ಕೈ ನಾಯಕರು!

    ಮಂಗಳೂರು: ಕೈ ನಾಯಕರ ವಿರುದ್ಧ ನೇರವಾಗಿ ಗುಡುಗುತ್ತಿದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಮೇಲೆ ಕಾಂಗ್ರೆಸ್ ನಾಯಕರಿಗೆ ಈಗ ಪ್ರೀತಿ ಉಕ್ಕಿ ಹರಿದಿದೆ.

    ನಗರದ ಟಿಎಂಎಪೈ ಹಾಲ್ ನಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ವೇಳೆ ಆಗಮಿಸಿದ್ದ ಪೂಜಾರಿ ಅವರ ಕಾಲು ಮುಟ್ಟಿ ಮುಖಂಡರು ನಮಸ್ಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟಿದೆಯಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಇದೀಗ ಉದ್ಭವಿಸಿದೆ.

    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಪೂಜಾರಿ ಕಾಲಿಗೆ ಬಿದ್ದರು. ಇನ್ನು ರಾಹುಲ್ ಗಾಂಧಿ ಕೂಡ ಕಾರ್ಯಕ್ರಮ ಮುಗಿಯೋವರೆಗೂ ಪೂಜಾರಿ ಜೊತೆಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ಸರಣಿ ಟೀಕೆಗಳ ಪರಿಣಾಮವಾಗಿ ಪಕ್ಷದ ಚಟುವಟಿಕೆಗಳಿಂದಲೇ ಹಿರಿಯ ನಾಯಕ ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ನಾಯಕರು ದೂರ ಇರಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಪ್ರೆಸ್‍ಮೀಟ್‍ಗೆ ಬಳಸಿಕೊಳ್ಳಲು ಸಹ ಅವಕಾಶ ನೀಡಿರಲಿಲ್ಲ. ಆದ್ರೆ ಈಗ ಚುನಾವಣೆ ಬಂದ ಕಾರಣ ಕಾಂಗ್ರೆಸ್ ನಾಯಕರು ಪೂಜಾರಿಗೆ ಎಲ್ಲಿಲ್ಲದ ಗೌರವ ನೀಡಿದ್ದು ವಿಶೇಷವಾಗಿತ್ತು.

  • ಕನ್ನಡಿಗರ ಸಂಪತ್ತನ್ನು ಲೂಟಿ ಹೊಡೆದವರನ್ನ ಕ್ಷಮಿಸಿದ್ದೀರಾ: ಬಿಎಸ್‍ವೈಗೆ ಸಿಎಂ ಪ್ರಶ್ನೆ

    ಕನ್ನಡಿಗರ ಸಂಪತ್ತನ್ನು ಲೂಟಿ ಹೊಡೆದವರನ್ನ ಕ್ಷಮಿಸಿದ್ದೀರಾ: ಬಿಎಸ್‍ವೈಗೆ ಸಿಎಂ ಪ್ರಶ್ನೆ

    ಬೆಂಗಳೂರು: ಕರ್ನಾಟಕ ರಾಜ್ಯದ ಹಿತಕ್ಕಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಕ್ಷಮಿಸಿದ್ದೇನೆ ಎಂದು ಮಾಜಿ ಸಿಎಂ ಸಿಎಂ ಬಿ.ಎಸ್.ಯಡಿಯೂರಪ್ಪ ಸಂದರ್ಶನದಲ್ಲಿ ಹೇಳಿದ್ದನ್ನು ಸಿಎ ಸಿದ್ದರಾಮಯ್ಯ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂಗ್ಲಿಷ್ ಪತ್ರಿಕೆಗೆ ನೀಡಿದ್ದ ಸಂದರ್ಶದನಲ್ಲಿ ಯಡಿಯೂರಪ್ಪ, ನಾನು ಸಿಎಂ ಆಗಿದ್ದಾಗ ರೆಡ್ಡಿ ಸಂಕಷ್ಟದಲ್ಲಿದ್ದರು. ಈಗ ರಾಜ್ಯದ ಹಿತಕ್ಕಾಗಿ ಎಲ್ಲವನ್ನು ಮರೆತು ಕ್ಷಮಿಸಿದ್ದೇವೆ. ರೆಡ್ಡಿ ಒಬ್ಬರೇ ಅಲ್ಲ, ಬಹಳ ಜನರು ಸಂಕಷ್ಟದಲ್ಲಿದ್ದರು. ಎಲ್ಲರನ್ನು ಕ್ಷಮಿಸಿದ್ದೇವೆ. ಇನ್ನೂ ಸಂಸದ ಶ್ರೀ ರಾಮುಲು ಒಬ್ಬ ಎಸ್‍ಟಿ ಸಮುದಾಯದ ಪ್ರಬಲ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮುಲುರನ್ನು ಡಿಸಿಎಂ ಮಾಡೋ ಸುದ್ದಿ ಕೇವಲ ಊಹಾಪೋಹ ಎಂದು ತಿಳಿಸಿದ್ದರು.

    ಬಿಎಸ್‍ವೈ ನೀಡಿದ ಸಂದರ್ಶನವನ್ನೇ ಟಾರ್ಗೆಟ್ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೆ ರೆಡ್ಡಿಯನ್ನ ಕ್ಷಮಿಸಿದ್ದೀರಿ? ಕನ್ನಡಿಗರ ಸಂಪತ್ತನ್ನು ಲೂಟಿ ಹೊಡೆದವರನ್ನ ಕ್ಷಮಿಸಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಕೂಡ ಸಿಬಿಐಗೆ ನಿರ್ದೇಶನ ನೀಡಿ ರೆಡ್ಡಿಯನ್ನ ಕ್ಷಮಿಸಿದ್ದಾರಾ ಎಂದು ಪ್ರಶ್ನೆಯನ್ನು ಟ್ವಿಟ್ಟರ್ ನಲ್ಲಿ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • ಬಿಜೆಪಿಯವರದ್ದು ಸಾವಿನ ರಾಜಕಾರಣ- ಟ್ವಿಟ್ಟರ್ ನಲ್ಲಿ ಸಿಎಂ ಕೆಂಡಾಮಂಡಲ

    ಬಿಜೆಪಿಯವರದ್ದು ಸಾವಿನ ರಾಜಕಾರಣ- ಟ್ವಿಟ್ಟರ್ ನಲ್ಲಿ ಸಿಎಂ ಕೆಂಡಾಮಂಡಲ

    ಬೆಂಗಳೂರು: ಬಿಜೆಪಿ ನಾಯಕರಿಗೆ ಜನ ನೆಮ್ಮದಿಯಿಂದ ಬದುಕುವುದು ಬೇಕಿಲ್ಲ. ಅವರಿಗೆ ಜನ ಹೊಡೆಯಬೇಕು, ಕಡಿಯಬೇಕು, ಬೆಂಕಿ ಇಡಬೇಕು, ಅಮಾಯಕರು ಸಾಯುವ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು. ಇದು ಸಾವಿನ ರಾಜಕಾರಣ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ, ಜಾತ್ಯಾತೀತರು ನಮ್ಮಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಕೋಮುವಾದಿಗಳ ಸಂಖ್ಯೆ ಸಣ್ಣದು. ಕೋಮುವಾದದ ಹುಟ್ಟಡಗಿಸಬೇಕಾದರೆ ಜಾತ್ಯಾತೀತವಾದಿಗಳು ಸಂಘಟಿತರಾಗಿ ದನಿ ಎತ್ತಬೇಕು. ಒಡೆಯುವ ಪ್ರಯತ್ನ ನಡೆದಾಗ ಕಟ್ಟುವ ಕೈಗಳೆಲ್ಲ ಒಂದಾಗಬೇಕು. ಮನುಷ್ಯಪರವಾದ ಸಮಾಜವನ್ನು ಕಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಸಂವಿಧಾನ ವಿರೋಧಿಗಳು ಮಾತ್ರವಲ್ಲ, ಮನುಷ್ಯ ವಿರೋಧಿಯಾಗಿರುವ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಜನ ತಪ್ಪು ಮಾಡಿಬಿಟ್ಟರು. ಈ ಬಾರಿ ಮೈಮರೆತು ತಪ್ಪುಮಾಡಬೇಡಿ. ಬಿಜೆಪಿನಾಯಕರಿಗೆ ಜನ ನೆಮ್ಮದಿಯಿಂದ ಬದುಕುವುದು ಬೇಕಿಲ್ಲ. ಅವರಿಗೆ ಜನ ಹೊಡೆಯಬೇಕು, ಕಡಿಯಬೇಕು, ಬೆಂಕಿ ಇಡಬೇಕು, ಅಮಾಯಕರು ಸಾಯುವ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು, ಇದು ಸಾವಿನ ರಾಜಕಾರಣ  ಅಂತಾ ಟಾಂಗ್ ಕೊಟ್ಟಿದ್ದಾರೆ.

    ದಕ್ಷಿಣ ಕನ್ನಡದ ಏಳು ಕಾಂಗ್ರೆಸ್ ಶಾಸಕರಲ್ಲಿ ಇಬ್ಬರು ಮುಸ್ಲಿಮರು, ಒಬ್ಬರು ಕ್ರಿಶ್ಚಿಯನ್ ಮತ್ತು ಒಬ್ಬರು ಜೈನ, ನಾಲ್ವರೂ ಅಲ್ಪಸಂಖ್ಯಾತ ಸಮುದಾಯದವರು. ಬಹುಸಂಖ್ಯಾತ ಹಿಂದೂಗಳು ಕೋಮುವಾದಿಗಳಾಗಿದ್ದರೆ ಇದು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ. `ಕರಾವಳಿಯಲ್ಲಿ ಉಗ್ರಗಾಮಿಗಳಿದ್ದಾರೆ’ `ಜೆಹಾದಿಗಳಿದ್ದಾರೆ’ ಎಂದು ಬಿಜೆಪಿ ನಾಯಕರು ತಮ್ಮದೇ ಊರಿನ, ರಾಜ್ಯದ ಮಾನ ಕಳೆಯುತ್ತಿದ್ದಾರೆ. ಇದು ಊರಿಗೆ, ಜನತೆಗೆ ಮಾಡುವ ಅವಮಾನ. ಜನ ಸೌಹಾರ್ದಪ್ರಿಯರು ಜಾತ್ಯತೀತರು ಮತ್ತು ದೇಶಪ್ರೇಮಿಗಳು. ಇಲ್ಲಿ ಇಂದು ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಕಳೆದ ಚುನಾವಣಾ ಪ್ರಚಾರದ ಕಾಲದಲ್ಲಿ ನರೇಂದ್ರ ಮೋದಿಯವರೇ ಕರಾವಳಿ ಭಾಗಕ್ಕೆ ಬಂದು ಕೋಮುಭಾವನೆಯ ಬೆಂಕಿ ಉಗುಳುವ ಭಾಷಣ ಮಾಡಿ ಹೋಗಿದ್ದರು. ಆದರೆ ಮೂರೂ ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿರುವುದು ಕೇವಲ ನಾಲ್ಕು ಸ್ಥಾನ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯ 19 ಕ್ಷೇತ್ರಗಳಲ್ಲಿ 13 ರಲ್ಲಿ ಕಾಂಗ್ರೆಸ್ ಗೆದ್ದಿದೆ. ದಕ್ಷಿಣಕನ್ನಡದಲ್ಲಿ 7(8), ಉಡುಪಿಯಲ್ಲಿ 3(5) ಮತ್ತು ಉತ್ತರಕನ್ನಡದಲ್ಲಿ 3(6). ಉ.ಕನ್ನಡದ ಇಬ್ಬರು ಪಕ್ಷೇತರ ಶಾಸಕರು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕರಾವಳಿ ಜಾತ್ಯಾತೀತರ ನೆಲೆ. ಮತ್ತೊಮ್ಮೆ ಕಾಂಗ್ರೆಸ್ ಎಂದಿದ್ದಾರೆ.