ಬೆಂಗಳೂರು: ವಿಶ್ವಾಸಮತ ಯಾಚನೆಗೂ ಮುನ್ನ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಿರಿಯ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ನೂತನ ಸ್ಪೀಕರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಈ ಸ್ಥಾನಕ್ಕೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ತಲೆ ನೋವು ತಂದಿದೆ. ಮಧ್ಯಾಹ್ನ ಸುಮಾರು 12.15ಕ್ಕೆ ಸದನ ಆರಂಭವಾಗಲಿದ್ದು, ಸದನದ ನೇತೃತ್ವವನ್ನು ಹಂಗಾಮಿ ಸ್ಪೀಕರ್ ಕೆ.ಜೆ ಬೋಪಯ್ಯ ವಹಿಸಿಕೊಳ್ಳಲಿದ್ದಾರೆ.
ಇಬ್ಬರು ಸದಸ್ಯರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವುದರಿಂದ ಇಬ್ಬರಲ್ಲಿ ಒಬ್ಬರ ನಾಮಪತ್ರ ವಾಪಾಸ್ ಗೆ ಕಾಲಾವಕಾಶ ನೀಡುವ ಸಾಧ್ಯತೆ ಇದೆ. ಇಬ್ಬರೂ ವಾಪಸ್ ಪಡೆಯದಿದ್ದರೆ, ಸದನದಲ್ಲಿ ಸ್ಪೀಕರ್ ಆಯ್ಕೆ ಸಂಬಂಧ ಚುನಾವಣೆ ನಡೆಯಲಿದೆ.
ಸದನದ ಸದಸ್ಯರು ಎದ್ದು ನಿಲ್ಲುವ ಮೂಲಕ ಅಥವಾ ಕೈ ಎತ್ತುವ ಮೂಲಕ ಸ್ಪೀಕರ್ ಚುನಾವಣೆಯಲ್ಲಿ ಸ್ಪೀಕರ್ ಆಯ್ಕೆಯಾಗಿರುತ್ತಾರೆ.
ಬೆಂಗಳೂರು: ಎಐಸಿಸಿ ಖಜಾನೆಯಲ್ಲಿ ಈಗ ದುಡ್ಡಿಲ್ಲ ಎಂದು ವರದಿಯಾಗಿದ್ದರೆ ಇತ್ತ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಸ್ಥಾಪನೆಗೆ ಕಾಂಗ್ರೆಸ್ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದೆ.
ಹೌದು. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕಾಂಗ್ರೆಸ್ ಶಾಸಕರು ರೆಸಾರ್ಟ್ ಮತ್ತು ಹೋಟೆಲ್ ನಲ್ಲಿ ತಂಗಿದ್ದು, ಒಟ್ಟು 8 ದಿನಗಳ ಕಾಲ ಕಾಂಗ್ರೆಸ್ ಶಾಸಕರ ಖರ್ಚು ಬರೋಬ್ಬರಿ 4 ಕೋಟಿ 90 ಲಕ್ಷ ಆಗಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್ ಖಜಾನೆಯಲ್ಲಿ ಈಗ ದುಡ್ಡಿಲ್ಲ- ಲೋಕ ಚುನಾವಣೆಯ ವೇಳೆ ಸಂಕಷ್ಟ!
ಓರ್ವ ಶಾಸಕನಿಗೆ 6.3 ಲಕ್ಷ ರೂ. ಖರ್ಚು ಮಾಡಿದ್ದು 8 ದಿನಗಳು ಬರೋಬ್ಬರಿ 4 ಕೋಟಿ 90 ಲಕ್ಷ ಹಣ ಖರ್ಚಾಗಿದೆ. ಕೈ ಶಾಸಕರು 8 ದಿನಗಳಲ್ಲಿ ಮೂರು ಕಡೆ ತಂಗಿದ್ದು, ಇವರ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಸಹೋದರು ವಹಿಸಿದ್ದರು. ಆದರೆ ಇಷ್ಟು ಮೊತ್ತದ ಹಣವನ್ನು ಖರ್ಚು ಮಾಡಿದ್ದು ಯಾರು ಎಂದು ಇನ್ನು ತಿಳಿದು ಬಂದಿಲ್ಲ. ಆದರೆ ಈ ಹಣವನ್ನು ಅವರೇ ಪಾವತಿ ಮಾಡಿದ್ದಾರಾ ಅಥವಾ ಬೇರೆ ಸಚಿವರು ಕೊಟ್ಟಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ.
ಆರಂಭದಲ್ಲಿ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಹೋಗಿದ್ದ ಶಾಸಕರು ಬಳಿಕ ಬಸ್ ಮಾರ್ಗವಾಗಿ ಹೈದರಾಬಾದ್ ಹೋಟೆಲ್ ಗೆ ತೆರಳಿದ್ದರು. ಬಿಎಸ್‍ವೈ ಬಹುಮತ ಸಾಬೀತು ಪಡಿಸುವ ದಿನವಾದ ಶನಿವಾರ ಬೆಳಗ್ಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಎಂಬೆಸಿ ಗಾಲ್ಫ್ ಬಿಸಿನೆಸ್ ಹೋಟೆಲ್ ಗೆ ಬಂದು ವಿಶ್ರಾಂತಿ ಪಡೆದಿದ್ದು, ಪ್ರಸ್ತುತ ಈ ಹೋಟೆಲ್ ನಲ್ಲಿ ತಂಗಿದ್ದಾರೆ.
ಒಬ್ಬರಿಗೆ ಒಂದು ದಿನದ ಖರ್ಚು ಎಷ್ಟು?
ಬೆಳಗ್ಗೆಯ ತಿಂಡಿ 1,300 ರೂ., ಮಧ್ಯಾಹ್ನದ ಊಟ 1,600 ರೂ., ರಾತ್ರಿ ಊಟ 1,800 ರೂ., ಸಿಂಗಲ್ ಬೆಡ್ ರೂಂ 7 ಸಾವಿರ ರೂ. ಡಬಲ್ ಬೆಡ್ ರೂಂ 14 ಸಾವಿರ ರೂ., ಆಗಿದ್ದು, ಒಬ್ಬರಿಗೆ ದಿನವೊಂದಕ್ಕೆ 20 ರಿಂದ 25 ಸಾವಿರ ರೂ. ಖರ್ಚಾಗಿದೆ. ಶಾಸಕರು ತಂಗಿದ್ದ ಹೋಟೆಲ್ ಗಳು ಎಲ್ಲವೂ ಅಂತಾರಾಷ್ಟ್ರೀಯ ಗುಣಮುಟ್ಟದಾಗಿರುವುದು ವಿಶೇಷ. ಇನ್ನೂ ತಂಗಿದ್ದ ಹೋಟೆಲ್ ನಲ್ಲಿ ಸಭೆ ನಡೆಸಲು ದೊಡ್ಡ ಹಾಲ್ ಬುಕ್ ಮಾಡಿದ್ದ ಕಾರಣ ಬಿಲ್ 4.90 ಕೋಟಿ ರೂ. ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ: ಪ್ರಣಾಳಿಕೆಯಲ್ಲಿ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ ಇಂದು ಮಾತು ಬದಲಿಸಿದ್ದಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇವೆ ಎಂದಿದ್ದ ಎಚ್‍ಡಿಕೆ ಈಗ ಪೂರ್ಣ ಪ್ರಮಾಣದ ಬಹುಮತ ಬಂದಲ್ಲಿ ಮಾತ್ರ ಮನ್ನಾ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದು ರಾಜ್ಯದ ರೈತರಿಗೆ ಅಘಾತಕಾರಿ ಸುದ್ದಿ ಎಂದಿದ್ದಾರೆ.
ರೈತರಿಗೆ ದ್ರೋಹ ಮಾಡಿದರೆ ರಾಜ್ಯಕ್ಕೇ ದ್ರೋಹ ಮಾಡಿದಂತೆ ಎಂದಿದ್ದ ಕುಮಾರಸ್ವಾಮಿ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು. ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ತಕ್ಷಣ ಈ ಸಾಲ ಮನ್ನಾ ಮಾಡುವ ಹೇಳಿಕೆ ನೀಡಬೇಕು. ಇಲ್ಲವಾದಲ್ಲಿ ರೈತರ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ ಎಂದು ಆರೋಪಿಸಿದರು.
ಇಡೀ ಚುನಾವಣಾ ಪ್ರಚಾರ, ಪ್ರಣಾಳಿಕೆ ಬೋಗಸ್ ಎಂದು ಒಪ್ಪಿಕೊಳ್ಳಿ. ಲಾಟರಿ ಹೊಡೆದು ಸಿಎಂ ಆಗಿದ್ದೀರಿ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ. ಈ ಮೈತ್ರಿ ಅಪವಿತ್ರ. ಇಂತಹ ಸರ್ಕಾರ ಆರು ತಿಂಗಳಲ್ಲಿ ಬೀಳಲಿದೆ. ಯಾವುದೇ ಕ್ಷಣದಲ್ಲಿ ರಾಜ್ಯದಲ್ಲಿ ಮತ್ತೆ ಚುನಾವಣಾ ಬರಲಿದೆ ಎಂದು ಅವರು ಭವಿಷ್ಯ ನುಡಿದರು.
ಹೆಚ್‍ಡಿಕೆ ಕಳೆದ ಬಾರಿ ಬಿಜೆಪಿ ಬೆಂಬಲ ಪಡೆದೇ ಸಿಎಂ ಆಗಿದ್ದಾರೆ. ಆಗ ಬಿಜೆಪಿ ಕೋಮುವಾದಿ ಎಂದು ಇವರಿಗೆ ತಿಳಿದಿರಲಿಲ್ವೇ ಎಂದು ಪ್ರಶ್ನಿಸಿದ್ದಾರೆ. ಸಾಲ ಮನ್ನಾ ಭರವಸೆ ನೀಡಿ ಈಗ ಸಾಲ ಮನ್ನಾ ಮಾಡೊಲ್ಲ ಎಂದು ಹೆಚ್‍ಡಿಕೆ ಹೇಳುತ್ತಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರುವ ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರಾಮನಗರ: ಇಂದು ನೂತನ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಎಚ್‍ಡಿಕೆಯವರ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಹಿ ಹಂಚಲು ಮಾಜಿ ತಾಲೂಕು ಪಂಚಾಯ್ತಿ ಸದಸ್ಯರೊಬ್ಬರು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಬರೋಬ್ಬರಿ 10 ಸಾವಿರ ಲಡ್ಡುಗಳನ್ನ ಸಾರ್ವಜನಿಕರಿಗೆ ವಿತರಿಸಲು ಬೇವೂರು ಗ್ರಾಮದಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಬೇವೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಸಿಹಿ ಹಂಚಲು ತಯಾರಿ ಮಾಡಿಕೊಳ್ಳಲಾಗಿದೆ. ಮನೆಯೊಂದರಲ್ಲಿ ಲಡ್ಡು ವಿತರಣೆಗೆ ಈಗಾಗಲೇ ಲಡ್ಡು ತಯಾರಿಸಿದ್ದು, ಇಂದು ಲಡ್ಡು ವಿತರಿಸಿ ಸಂಭ್ರಮಾಚರಣೆ ನಡೆಸಲು ಜೆಡಿಎಸ್ ಕಾರ್ಯಕರ್ತರು ಮುಂದಾಗಿದ್ದಾರೆ.
ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದಕ್ಕೆ ತೆರೆಬಿದ್ದಿದೆ. ಆದರೆ, ನಮಗೆ ಟೀಕೆಟ್ ನೀಡಬೇಕು ಎಂದು ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದಾರೆ.
ಬಿಜೆಪಿಯಿಂದ ಮಾಜಿ ಶಾಸಕ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರ ಹೆಸರು ಪ್ರಕಟವಾಗಿದೆ. ಈ ಬೆನ್ನಲ್ಲೆ, ಪಟ್ಟಾಭಿರಾಮನಗರದ ಮಾಜಿ ಕಾರ್ಪೋರೆಟರ್ ಸಿ.ಕೆ.ರಾಮಮೂರ್ತಿ, ಬಿಬಿಎಂಪಿ ಮಾಜಿ ಮೇಯರ್ ಎಸ್.ಕೆ.ನಟರಾಜ್ ಹಾಗೂ ಬೈರಸಂದ್ರದ ವಾರ್ಡ್ ಬಿಬಿಎಂಪಿ ಸದಸ್ಯ ನಾಗರಾಜ್ ಅವರು ನಮ್ಮ ಮೂರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಇಂದು ಸಂಜೆ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ಅನಂತ್ ಕುಮಾರ್ ಅವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಸ್ಥಳೀಯರನ್ನು ಹೊರತುಪಡಿಸಿ ಬೇರೆಯವರಿಗೆ ಆದ್ಯತೆ ನೀಡಿದರೆ ಚುನಾವಣೆ ಕೆಲಸಕ್ಕೆ ಬೆಂಬಲ ಸಿಗಲ್ಲ. 30 ವರ್ಷದಿಂದಲೂ ಪಕ್ಷದಲ್ಲಿ ಸೇವೆ ಸಲ್ಲಿಸಿರುವೆ. ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವೆ. ಪಕ್ಷದಲ್ಲಿ ಕೆಲಸ ಮಾಡದವರಿಗೆ ಟಿಕೆಟ್ ಕೊಟ್ಟರೆ ಠೇವಣಿ ಕೂಡಾ ಮರಳುವುದಿಲ್ಲ. ನನಗೆ ಒಂದು ಅವಕಾಶ ಮಾಡಿಕೊಡುವಂತೆ ನಮ್ಮ ನಾಯಕರಿಗೆ ಮನವಿ ಸಲ್ಲಿಸಿರುವೆ ಎಂದು ಬಿಬಿಎಂಪಿ ಸದಸ್ಯ ಎನ್ ನಾಗರಾಜ್ ಹೇಳಿದ್ದಾರೆ.
ಜಯನಗರ ಮಾಜಿ ಕಾರ್ಪೋರೇಟರ್ ಸಿ.ಕೆ.ರಾಮಮೂರ್ತಿ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಕಾರ್ಯಕರ್ತರೇ ವಿಜಯ್ ಕುಮಾರ್ ಅವರ ಕುಟುಂಬವಾಗಿದ್ದರು. ಅವರ ಮನೆಯಲ್ಲಿ ಯಾರು ಪಕ್ಷಕ್ಕಾಗಿ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿ ಸರ್ವೇ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ. ಆದರೆ ಹೊಸ ಮುಖಗಳಿಗಿಂತ, ಕಾರ್ಪೋರೇಟರ್ ಗಳಿಗೆ ಅವಕಾಶ ನೀಡುವುದು ಒಳಿತು ಎಂದು ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯ ರಾಮಮೂರ್ತಿ ಹೇಳಿದ್ದಾರೆ.
ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರು ಜಯನಗರ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದರು. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯ್ ಕುಮಾರ್ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಮೇ 3 ರಂದು ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಕರೆತರುವಾಗಲೇ ಅವರ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದರು.
ಮೈಸೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಅಲ್ಪಾವಧಿ ಸರ್ಕಾರ. ಇದೊಂದು ಪ್ರಕೃತಿ ವಿರುದ್ಧವಾದ ಪ್ರಕ್ರಿಯೆಯಾಗಿದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಈ ಸರ್ಕಾರ ಇರುತ್ತಾ ಅನ್ನೋ ಅನುಮಾನ ಇದೆ. ಒಂದೊಂದು ಬಾರಿ ಎರಡೆರಡು ತಲೆ, ನಾಲ್ಕು ನಾಲ್ಕು ಕೈ ಇರುವ ಮಕ್ಕಳು ಹುಟ್ಟುತ್ತವೆ. ಅಂತಹ ಮಕ್ಕಳು ಬಹಳ ದಿನ ಬದುಕೋಲ್ಲ. ಈ ಸರ್ಕಾರದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಇನ್ನು ಮೂರು ತಿಂಗಳು ಮಾತ್ರ ಈ ಮೈತ್ರಿಯ ಆಯುಷ್ಯ ಅಂತ ಭವಿಷ್ಯ ನುಡಿದರು.
ನಾವೇನು ಆಪರೇಷನ್ ಕಮಲ ನಡೆಸೋಲ್ಲ. ಮೋದಿ ಅಭಿವೃದ್ಧಿ ಮೆಚ್ಚಿ ಬರುವವರನ್ನ ನಾವು ಸ್ವಾಗತ ಮಾಡುತ್ತೇವೆ. ಸಿದ್ದರಾಮಯ್ಯರನ್ನ ಕಾಂಗ್ರೆಸ್ ಯೂಸ್ ಮಾಡಿಕೊಳ್ಳುತ್ತಿದೇಯಾ ಅಂತ ಅವರನ್ನೆ ಕೇಳಿ ಎಂದರು.
ಈಗಲಾದರೂ ಸಿದ್ದರಾಮಯ್ಯ ತಮ್ಮ ಭಾಷೆ ನಡವಳಿಕೆ ಬದಲಾಯಿಸಿಕೊಳ್ಳಲಿ. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಅವರು ಬೇರೆ ಪಕ್ಷದಲ್ಲಿದ್ದುಕೊಂಡು ವಾಗ್ದಾಳಿ ನಡೆಸಿದ್ದರು. ಆದರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಯಾವಾಗಲೂ ಬೈದಾಡಿಕೊಂಡು ಈಗ ಒಂದಾದರೇ ಏನರ್ಥ ಎಂದು ಪ್ರಶ್ನಿಸಿದರು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಗೊಂದಲ, ಕುತೂಹಲ ಏರ್ಪಟ್ಟಿತ್ತು. ಇದುವರೆಗೂ ಕಾಂಗ್ರೆಸ್ ತಮ್ಮ ತಮ್ಮ ಶಾಸಕರನ್ನು ಭದ್ರ ಪಡಿಸಿಕೊಳ್ಳುವ ಟೆನ್ಷನ್ ನಲ್ಲಿ ಇತ್ತು. ಈಗ ಕಾಂಗ್ರೆಸ್ ಗೆ ಮತ್ತೊಂದು ಟೆನ್ಷನ್ ಎದುರಾಗಿದೆ.
ಕರ್ನಾಟಕ ರಾಜಕೀಯದಲ್ಲಿ ಈಗ ಮೈತ್ರಿ ಸರ್ಕಾರ ಶುರುವಾದ ಹಾದಿಯಲ್ಲೇ ಕಾಂಗ್ರೆಸ್ ಗೆ ಮತ್ತೊಂದು ತಲೆನೋವು ಶುರುವಾಗಿದೆ. ಕಾಂಗ್ರೆಸ್ ನಾಯಕರಿಗೆ ಲಿಂಗಾಯತ ಸಮುದಾಯದವರು ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವನೆಯಲ್ಲಿ 47 ಲಿಂಗಾಯತ ಅಭ್ಯರ್ಥಿಗಳ ಪೈಕಿ 17 ಮಂದಿ ಶಾಸಕರು ಗೆಲುವು ಸಾಧಿಸಿದ್ದಾರೆ. ಆದರೆ 46 ಒಕ್ಕಲಿಗ ಅಭ್ಯರ್ಥಿಗಳ ಪೈಕಿ 14 ಮಂದಿ ಮಾತ್ರ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯ ಡಿಸಿಎಂ ಹುದ್ದೆಗೆ ಲೆಕ್ಕಾಚಾರದ ಬೇಡಿಕೆಯಿಟ್ಟಿದೆ.
ಈಗಾಗಲೇ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಪಟ್ಟ ಕೊಡಲೇಬೇಕು. ಇಲ್ಲ ಎಂದರೆ ಕಾಂಗ್ರೆಸ್ ನಿಂದ ಲಿಂಗಾಯತರು ಶಾಶ್ವತವಾಗಿ ದೂರ ಆಗುತ್ತಾರೆ. ಜೊತೆಗೆ ಬಿ.ಎಸ್ ಯಡಿಯೂರಪ್ಪರನ್ನು ಇಳಿಸಿದ ಅಪಕೀರ್ತಿಗೆ ಕಾಂಗ್ರೆಸ್ ತುತ್ತಾಗುತ್ತೆ ಎಂದು ಲಿಂಗಾಯುತ ಸಮುದಾಯ ಹೇಳುತ್ತಿದೆ.
ಅಪಕೀರ್ತಿಯನ್ನು ಸರಿದೂಗಿಸಲು ಶಾಮನೂರು ಶಿವಶಂಕರಪ್ಪ ಅಥವಾ ಎಂಬಿ ಪಾಟೀಲ್ ಇಬ್ಬರಲ್ಲಿ ಒಬ್ಬರನ್ನ ಡಿಸಿಎಂ ಮಾಡಬೇಕು. ದಲಿತ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಲಿಂಗಾಯತ ಸಮುದಾಯ ಬೇಡಿಕೆ ಇಟ್ಟಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಯಾವ ತಿರ್ಮಾನಕ್ಕೂ ಬಂದಿಲ್ಲ. ಈಗಾಗಲೇ ಸಚಿವ ಸ್ಥಾನಕ್ಕೆ ಚರ್ಚೆ ನಡೆದಿದ್ದು, ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಲಿಂಗಾಯತ ಸಮುದಾಯ ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಸಲಹೆ ಕೊಟ್ಟಿದೆ. ಇನ್ನು ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಈ ವಿಚಾರದ ಬಗ್ಗೆ ಸ್ಪಷ್ಟನೆ ದೊರೆಯುತ್ತದೆ.
ರಾಮನಗರ: ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಎಚ್.ಡಿ ಕುಮಾರಸ್ವಾಮಿ ತಮ್ಮ ರಾಜಕೀಯ ಕರ್ಮಭೂಮಿ ರಾಮನಗರವನ್ನ ಬಿಟ್ಟು ಚನ್ನಪಟ್ಟಣದ ಕೈ ಹಿಡಿದಿದ್ದಾರೆ.
ಎಚ್‍ಡಿಕೆ ರಾಮನಗರವನ್ನು ಬಿಟ್ಟರೂ ಕ್ಷೇತ್ರಕ್ಕೆ ಯಾವುದೇ ನಷ್ಟವಿಲ್ಲವಂತೆ. ಕ್ಷೇತ್ರದಲ್ಲಿ ಸಣ್ಣ ಕಾರ್ಯಕರ್ತರನ್ನ ಕುಮಾರಸ್ವಾಮಿಯವರು ನಿಲ್ಲಿಸಿದರೂ ಗೆಲ್ಲುತ್ತಾರೆ ಎಂದು ಜೆಡಿಎಸ್ ಮುಖಂಡರು ಹೇಳಿದ್ದಾರೆ.
ಆದರೆ ಸ್ಥಳೀಯರು ಕುಮಾರಸ್ವಾಮಿಯವರ ನಡೆಯಿಂದ ಬೇಜಾರಾಗಿದ್ದು, ತಮ್ಮ ಕರ್ಮಭೂಮಿಗೆ ಕೈ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಎಚ್.ಡಿ ದೇವೇಗೌಡರ ಕುಟುಂಬದವರೇ ಉಪ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅಂತ ಒತ್ತಾಯಿಸಿದ್ದಾರೆ. ಹೀಗಾಗಿ ಅನಿತಾ ಕುಮಾರಸ್ವಾಮಿಯವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಯೋಗೇಶ್ವರ್ ಕಣಕ್ಕಿಳಿಯುತ್ತಾರೆ ಎನ್ನಲಾಗಿದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿರುವ ಕಾರಣ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಇದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ವಿರುದ್ಧ 6,464 ಮತಗಳ ಅಂತರಿಂದ ಗೆದ್ದಿದ್ದರು. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರಿಗೆ 80,099 ಮತಗಳು ಬಿದ್ದಿದ್ದರೆ, ಅನಿತಾ ಕುಮಾರಸ್ವಾಮಿ ಅವರಿಗೆ 73,635 ಮತಗಳು ಬಿದ್ದಿತ್ತು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸದತ್ ಅಲಿ ಖಾನ್ ಅವರಿಗೆ 8,134 ಮತಗಳು ಸಿಕ್ಕಿತ್ತು.
ಬೆಂಗಳೂರು: ಸದನದಲ್ಲಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿ ಹೊರನಡೆಯುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ರಾಹಲ್ ಗಾಂಧಿ, ಸೋನಿಯಾ ಗಾಂಧಿ, ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಡಿಕೆಶಿ ಪರ ಕೈ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಈ ವೇಳೆ ಮಹಿಳೆಯರು ಕುಣಿದು ಕುಪ್ಪಳಿಸಿದ್ದಾರೆ.
ಇದೇ ವೇಳೆ ರಾಜ್ಯಪಾಲರ ವಿರುದ್ಧ ಕುಮಾರಸ್ವಾಮಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರು ತೊಲಗಲಿ ಎಂದು ಘೋಷಣೆ ಕೂಗಿದ್ದಾರೆ. ದೆಹಲಿಯಲ್ಲೂ ಎಐಸಿಸಿ ಕಚೇರಿಯೆದುರು ಡೋಲು ಬಾರಿಸಿ ಸಿಹಿ ಹಂಚುವ ಮೂಲಕ ಕಾರ್ಯಕರ್ತರು ಖುಷಿ ಪಟ್ಟಿದ್ದಾರೆ.
ಚಿತ್ರದುರ್ಗ, ಆನೇಕಲ್, ಹಾವೇರಿ, ಹಾಸನ, ಮಂಡ್ಯ, ಹುಬ್ಬಳ್ಳಿ, ರಾಮನಗರ, ಕಾರವಾರ, ಮಂಗಳೂರು, ಯಾದಗಿರಿ ಹೀಗೆ ಎಲ್ಲಾ ಕಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ, ಬಣ್ಣ ಎರಚಿಕೊಂಡು ವಿಜಯೋತ್ಸವ ಆಚರಿಸಿದ್ದಾರೆ.
ಬೆಂಗಳೂರು: ಒಂದು ಕಡೆ ವಿಧಾನ ಸಭೆಯಲ್ಲಿ ಶಾಸಕರಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದರೆ, ಇನ್ನೊಂದು ಕಡೆ ವಿಧಾನಸೌಧದ ಹೊರಗಡೆ ಬಿಜೆಪಿ ಆಪರೇಷನ್ ಫ್ಲವರ್ ರನ್ನು ಶುರುಮಾಡಿದೆ.
ಕಳೆದ ದಿನ ಜನಾರ್ದನ ರೆಡ್ಡಿ ಆಮಿಷ ಒಡ್ಡಿರುವ ಆಡಿಯೋವನ್ನು ಕಾಂಗ್ರೆಸ್ ರಿಲೀಸ್ ಮಾಡಿತ್ತು. ಈಗ ವಿಧಾನ ಸೌಧದಲ್ಲಿ ಆಪರೇಷನ್ ಕಮಲದ ಮತ್ತೊಂದು ಆಡಿಯೋವನ್ನು ಕಾಂಗ್ರೆಸ್ ನಾಯಕ ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ. ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ಪತ್ನಿಗೆ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿಯವರು ಕರೆ ಮಾಡಿ ಕೋಟಿ ಕೋಟಿ ಆಫರ್ ನೀಡಿ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಬಿಎಸ್‍ವೈ ಆಪ್ತ ಎಂಎಲ್‍ಸಿ ಪುಟ್ಟಸ್ವಾಮಿ ಕಾಂಗ್ರೆಸ್ ಶಾಸಕರ ಪತ್ನಿಗೆ ಕರೆ ಮಾಡಿ ಆಫರ್ ಕೊಟ್ಟಿದ್ದಾರೆ. 15 ಕೋಟಿ ರೂ. ಮತ್ತು ಮಂತ್ರಿ ಸ್ಥಾನದ ಆಫರ್ ಕೊಡುತ್ತೇವೆ ಎಂದು ಆಡಿಯೋದಲ್ಲಿ ಹೇಳಿದ್ದಾರೆ ಎಂದು ಉಗ್ರಪ್ಪ ಆರೋಪಿಸಿದರು.
ಆಡಿಯೋದಲ್ಲಿ ಏನಿದೆ?: ಮೊದಲಿಗೆ ಪುಟ್ಟಸ್ವಾಮಿ ಹೆಬ್ಬಾರ್ ಪತ್ನಿಗೆ ಕರೆ ಮಾಡಿದ್ದಾರೆ. ಅದರಲ್ಲಿ 15 ಕೋಟಿ ರೂ. ಮತ್ತು ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ನಂತರ ಅವರ ಮಗನ ಗಣಿಗಾರಿಕೆಯ ಕೇಸ್ ನ್ನು ಕ್ಲೋಸ್ ಮಾಡಿಸುತ್ತೇನೆ. ನೀವು ಕೇಳಿದ ಇಲಾಖೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕರೆ ಮಾಡಿದ್ದು, ಸರ್ಕಾರ ನಮ್ಮ ಕೈಯಲ್ಲಿದೆ. ನಾವು ಮೋಸ ಮಾಡುವುದಿಲ್ಲ. ಸರ್ಕಾರ ಇರುವುದರಿಂದ ಒಬ್ಬರ ಭವಿಷ್ಯ ಹಾಳು ಮಾಡಿ. ನಮ್ಮ ಭವಿಷ್ಯವನ್ನು ನೋಡಿಕೊಳ್ಳುವುದಿಲ್ಲ. ಶಿವಾರಂ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಮೇಲೆ ಗಣಿಗಾರಿಕೆ ಕೇಸ್ ಇದೆ. ನಮ್ಮ ಪರವಾಗಿ ಬಂದರೆ ನಿಮ್ಮ ಮೇಲಿರುವ ಕೇಸ್ ಕ್ಲೋಸ್ ಮಾಡುತ್ತೇವೆ ಎಂದು ಆಮಿಷ ಒಡ್ಡಲಾಗಿದೆ.
ನನ್ನ ಧ್ವನಿಯಲ್ಲ: ಆಡಿಯೋ ಬಿಡುಗಡೆಯಾದ ಬಳಿಕ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ಪುಟ್ಟಸ್ವಾಮಿ, ಆಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ. ನಾನು ಯಾರಿಗೂ ಕರೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನೊಂದು ಕಡೆ ಬಿಜೆಪಿ ಶಾಸಕರಾದ ಶ್ರೀರಾಮುಲು, ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ಮತಯಾಚನೆಗಳಿಸಲು ಕೊನೆ ಕ್ಷಣದ ರಣತಂತ್ರ ಹೆಣೆಯುತ್ತಿದ್ದಾರೆ.
ಉಗ್ರಪ್ಪನವರು ಮಾತನಾಡಿ, ಶ್ರೀರಾಮುಲು ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ಆಫರ್ ನೀಡಿದ್ದು, ಈ ಆಡಿಯೋವನ್ನು ಮಧ್ಯಾಹ್ನ ನಂತರ ಬಿಡುಗಡೆ ಮಾಡುತ್ತೇವೆ. ಅಷ್ಟೇ ಅಲ್ಲದೇ ಸ್ವತಃ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಆಮಿಷ ಒಡ್ಡಿ ಮಾತನಾಡಿರುವ ಆಡಿಯೋ ಇದೆ. ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.