Tag: Karnataka Election

  • ಚುನಾವಣಾ ಸಮಯದಲ್ಲಿ ಕರ್ನಾಟಕದ ಪ್ರತಿಭೆಯ ಬಗ್ಗೆ ರಮ್ಯಾ ಮೆಚ್ಚುಗೆ

    ಚುನಾವಣಾ ಸಮಯದಲ್ಲಿ ಕರ್ನಾಟಕದ ಪ್ರತಿಭೆಯ ಬಗ್ಗೆ ರಮ್ಯಾ ಮೆಚ್ಚುಗೆ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೂರದಿಂದಲೇ ಗುರಿಯಿಟ್ಟು ಕೊರಳಿಗೆ ಹೂವಿನ ಹಾರ ಎಸೆದ ಅಭಿಮಾನಿಯನ್ನು ಮೆಚ್ಚಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

    ಹಾರ ಎಸೆದ ಅಭಿಮಾನಿಯನ್ನು ರಮ್ಯಾ”Karnataka’s got talent!”  ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಈ ರೀತಿ ಹೂವಿನ ಹಾರ ಎಸೆದಿರುವುದನ್ನು ಖಂಡಿಸಿದ್ದಾರೆ. ರಾಹುಲ್‍ಗೆ ಒದಗಿಸಿದ್ದ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿ ರಾಜೀವ್ ಗಾಂಧಿ ಸಾವನ್ನು ನೆನಪಿಸಿಕೊಂಡಿದ್ದಾರೆ.

    ಇನ್ನು ಕೆಲವರು ವ್ಯಕ್ತಿಯ ಪ್ರತಿಭೆಯನ್ನು ಮೆಚ್ಚಿದರೆ, ಕೆಲವರು ಎಂತಹ ಕೈ ಚಳಕ ಎಂದು ಹೊಗಳಿದ್ದಾರೆ. ಕೆಲವರು ಅವರ ನಾಯಕನಿಗೆ ಹಾರ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಆದರೆ ರಾಹುಲ್ ಗಾಂಧಿಯವರಲ್ಲಿ ಪ್ರತಿಭೆಯಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಪ್ರತಿಭೆ ಹೌದು. ಆದರೆ ಭವಿಷ್ಯದ ಭಾರತದ ಪ್ರಧಾನಿಯ ಭದ್ರತೆಯ ಬಗ್ಗೆ ಹೆದರಿಕೆ ಉಂಟಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಬುಧವಾರ ತುಮಕೂರಿನ ಬಿಎಚ್ ರಸ್ತೆಯ ರೋಡ್ ಶೋ ವೇಳೆ ಈ ಘಟನೆ ನಡೆದಿದೆ. ಅಭಿಮಾನಿ ಹಾರ ಎಸೆದ ದೃಶ್ಯವನ್ನು ಆತನ ಹಿಂದುಗಡೆಯಿದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಹುಲ್ ಗಾಂಧಿಯವರು ವಾಹನದ ಮೇಲೇರಿ ಜನಸಾಮಾನ್ಯರತ್ತ ಕೈ ಬೀಸಿ ಬರುತ್ತಿದ್ದಂತೆಯೇ ರಸ್ತೆಬದಿ ನಿಂತಿದ್ದ ಅಭಿಮಾನಿ ರಾಹಲ್ ಅವರತ್ತ ಹೂವಿನ ಹಾರ ಎಸೆದಿದ್ದಾರೆ. ಈ ಹಾರ ನೇರವಾಗಿ ರಾಹುಲ್ ಅವರ ಕೊರಳಿಗೆ ಬಿದ್ದಿದೆ. ಕೂಡಲೇ ಅವರು ಕೊರಳಿಂದ ಹಾರ ತೆಗೆದು ತನ್ನ ಭದ್ರತಾ ಸಿಬ್ಬಂದಿ ಕೈಗೆ ನೀಡಿದ್ದಾರೆ.

    ಭದ್ರತೆಯ ದೃಷ್ಟಿಯಿಂದ ಎಸ್‍ಪಿಜಿ ರಾಹುಲ್ ಗಾಂಧಿಯವರಿಗೆ ಹಾರ ಹಾಕಲು ಗಣ್ಯರಿಗೂ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿ ಕಾರ್ಯಕರ್ತನೋರ್ವ ದೂರದಿಂದಲೇ ರಾಹುಲ್ ಕೊರಳಿಗೆ ಹಾರ ಎಸೆಯುವ ಮೂಲಕ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

     

  • ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

    ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

    ಬಳ್ಳಾರಿ: ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ವಿರೋಧಿಗಳನ್ನು ಸೋಲಿಸಲು ನಾಯಕರು ರಾಜಕೀಯ ತಂತ್ರ-ರಣತಂತ್ರಗಳನ್ನು ರಚಿಸುತ್ತಿದ್ದಾರೆ. ಬಳ್ಳಾರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನಾರ್ದನ ರೆಡ್ಡಿ, ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಅಂತ ಅಚ್ಚರಿಯ ಹೇಳಿಕೆ ನೀಡಿದ್ದರು. ಅಮಿತ್ ಶಾ ಹೇಳಿಕೆಯ ನಂತರ ಬಳ್ಳಾರಿ ರಾಜಕಾರಣದಲ್ಲಿ ಭಾರೀ ಸಂಚಲನವೇ ಸೃಷ್ಟಿಯಾಗಿತ್ತು. ಆದ್ರೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವಶ್ಯಕತೆ, ಅವರ ಶಕ್ತಿ, ತಂತ್ರ ಪ್ರತಿ-ತಂತ್ರಗಳ ಮಾಸ್ಟರ್ ಪ್ಲಾನ್ ಬಗ್ಗೆ ಚುನಾವಣಾ ಚಾಣಕ್ಯ ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಶ್ರೀರಾಮುಲು ಮೂಲಕ ಮನವರಿಕೆ ಮಾಡಿಕೊಡುವಲ್ಲಿ ಯಶ್ವಸಿಯಾಗಿದ್ದಾರೆ ಅಂತ ತಿಳಿದು ಬಂದಿದೆ.

    ಜನಾರ್ದನ ರೆಡ್ಡಿ ಅವರ ತಂತ್ರಗಾರಿಕೆ ಮೂಲಕವೇ ಚುನಾವಣೆಯನ್ನು ಎದುರಿಸುತ್ತೇವೆ. ಅಲ್ಲದೇ ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇರ್ತಾರೆ ಅಂತ ಶ್ರೀರಾಮುಲು ಹೇಳಿದ್ದಾರೆ. ಶ್ರೀರಾಮುಲು ಸಂಸದರಾಗಿದ್ದರು ಅವರನ್ನು ಕೂಡ್ಲಿಗಿ ಅಥವಾ ಸಂಡೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಬಳ್ಳಾರಿ ನಗರದಿಂದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಕಂಪ್ಲಿಯಿಂದ ಸುರೇಶಬಾಬು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ಸಹೋದರ ಸಣ್ಣ ಫಕ್ಕೀರಪ್ಪ ಇಲ್ಲವೇ ಸಹೋದರಿ ಜೆ ಶಾಂತಾರನ್ನು ಕಣಕ್ಕೆ ಇಳಿಸಲು ಯೋಚಿಸಿದ್ದಾರೆ. ಇತ್ತ ಹಡಗಲಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೂಚಿಸಿದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಹೇಳಲಾಗಿದೆ.

    ಒಟ್ಟಿನಲ್ಲಿ ನೇರವಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳದಿದ್ದರೂ ಜನಾರ್ದನ ರೆಡ್ಡಿ ಅವರ ಅನತಿಯಂತೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಳ್ಳಾರಿಯಲ್ಲಿ ಸೋಲಿಸಲು ಜರ್ನಾದನ ರೆಡ್ಡಿ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಗೇಮ್ ಪ್ಲಾನ್-`ಕೈ’ಗೆ ಆಪರೇಷನ್!

    ಮೈಸೂರು: ಈ ಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಸಖತ್ ಗೇಮ್ ಪ್ಲಾನ್ ಮಾಡಿದೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕ ಜಿ.ಟಿ.ದೇವೇಗೌಡ ಆಪರೇಷನ್ ಕಾಂಗ್ರೆಸ್ ಗೆ ಮುಂದಾಗಿದ್ದಾರೆ.

    ಈಗಾಗಲೇ ಸಿಎಂ ಸಿದ್ದರಾಮಯ್ಯರ ಆಪ್ತರಾಗಿದ್ದ ದಿ.ಕಂಪಿರಂಗೇಗೌಡ ಪುತ್ರ ಉಮಾಶಂಕರ್ ಸೇರಿದಂತೆ 25ಕ್ಕೂ ಹೆಚ್ಚು ಸ್ಥಳೀಯ ಪ್ರಬಲ ಕಾಂಗ್ರೆಸ್ ಮುಖಂಡರನ್ನು ಜೆಡಿಎಸ್ ನತ್ತ ಸೆಳೆಯುವಲ್ಲಿ ಜಿ.ಟಿ.ದೇವೇಗೌಡರು ಯಶ್ವಸಿಯಾಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಜಿ.ಟಿ.ದೇವೇಗೌಡರು ಸಿಎಂರನ್ನು ಸೋಲಿಸಲು ಎಲ್ಲ ರೀತಿಯಲ್ಲಿ ಸನ್ನದ್ಧರಾಗುತ್ತಿದ್ದಾರೆ.

    ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ 35ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರಲಿದ್ದಾರೆ ಎಂಬುದನ್ನು ಖಚಿತ ಪಡಿಸಿದ್ದಾರೆ. ಸಿದ್ದರಾಮಯ್ಯರ ಆಪ್ತರಲ್ಲಿ ಒಬ್ಬರಾಗಿದ್ದ ಕಂಪಿರಂಗೇಗೌಡರ ಪುತ್ರ ಉಮಾಶಂಕರ್ ಜೆಡಿಎಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್‍ಗೆ ಪರೋಕ್ಷವಾಗಿ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

  • ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿ ಹಿಂದುತ್ವ ಬಳಕೆ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿ ಹಿಂದುತ್ವ ಬಳಕೆ ಮಾಡ್ತಿದೆ: ಪ್ರಮೋದ್ ಮುತಾಲಿಕ್

    ಚಿಕ್ಕಮಗಳೂರು: ಬಿಜೆಪಿ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಬಳಕೆ ಮಾಡುತ್ತಿದೆ. ಗೋರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಅಂತ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಗೆ ಶಿವಸೇನೆ ಜೊತೆ ಶ್ರೀರಾಮಸೇನೆ ಕಣಕ್ಕಿಳಿಯಲಿದೆ. ಒಟ್ಟು 60 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇವೆ. ನಾನು ಶೃಂಗೇರಿ ಅಥವಾ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಅಂತಿಮವಾಗುವ ಸಾಧ್ಯತೆಗಳಿವೆ ಅಂತ ಅಂದ್ರು.

    ಇತ್ತ ಜೇವರ್ಗಿ ಕ್ಷೇತ್ರದಿಂದ ಸಿದ್ದಲಿಂಗಸ್ವಾಮೀಜಿ ಸ್ಪರ್ಧೆ ಮಾಡ್ತಿದ್ದಾರೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿಯನ್ನು ಮುಂಬೈಗೆ ಕಳುಹಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ರೂ, ಗೋ ಮಾಂಸ ರಫ್ತು ಮಾಡುವ ನಂ.1 ದೇಶವಾಗಿದೆ. ಬಿಜೆಪಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಬೆಂಬಲ ನೀಡುವುದಿಲ್ಲ. ಕಾರಣ ಶಿವಸೇನೆಯದ್ದು ಕೂಡ ಹಿಂದುತ್ವ ಪ್ರಮುಖ ಅಜೆಂಡವಾಗಿದೆ ಎಂದು ಮುತಾಲಿಕ್ ಹೇಳಿದ್ರು.

  • ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಗುಡ್ ಲಕ್ ಹೇಳಿಕೊಂಡ ಸಿಎಂ-ಬಿಎಸ್‍ವೈ

    ಟ್ವಿಟ್ಟರ್ ನಲ್ಲಿ ಒಬ್ಬರಿಗೊಬ್ಬರು ಗುಡ್ ಲಕ್ ಹೇಳಿಕೊಂಡ ಸಿಎಂ-ಬಿಎಸ್‍ವೈ

    ಬೆಂಗಳೂರು: ಚುನಾವಣೆ ಬದ್ಧ ವೈರಿಗಳೆಂದು ಬಿಂಬಿತರಾಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಬ್ಬರೂ ಒಬ್ಬರಿಗೊಬ್ಬರು ಟ್ವಿಟ್ಟರ್ ನಲ್ಲಿ ಗುಡ್ ಲಕ್ ಅಂತಾ ಹೇಳಿಕೊಂಡಿದ್ದಾರೆ.

    ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ರಾಜಕೀಯ ನಾಯಕರುಗಳು ತಮ್ಮ ಕ್ಷೇತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ವಿರೋಧಿ ನಾಯಕರಿಗೆ ತಮ್ಮ ಮೊನಚು ಮಾತುಗಳಿಂದ ವ್ಯಂಗ್ಯ ಮಾಡುತ್ತಿದ್ದಾರೆ.

    ಸಿಎಂ ಟ್ವೀಟ್: ಬಿಜೆಪಿಯ ಮಿಷನ್ 150, ಮಿಷನ್ 50ಗೆ ಇಳಿದು ಈಗ ಅದು ಮಿಷನ್ 1+1 ಗೆ ಬಂದು ತಲುಪಿದೆ. ಇಡೀ ರಾಜ್ಯ ಸೋತರೂ ಅವರಿಗೆ ಚಾಮುಂಡೇಶ್ವರಿ ಮತ್ತು ವರುಣಾ ಗೆಲ್ಲಬೇಕಂತೆ. ಸೋಲನ್ನು ಅವರೇ ಒಪ್ಪಿಕೊಂಡ ನಂತರ ಹೇಳೋದೇನಿದೆ. Good Luck..

    ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುತ್ತಿದ್ದಂತೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
    ಮುಖ್ಯಮಂತ್ರಿಯವರೇ ನಿಮ್ಮ ಲೆಕ್ಕಾಚಾರ ತಪ್ಪಾಗಿದೆ. ಬಿಜೆಪಿಯ ಮಿಷನ್ 150 ಇಲ್ಲಿಯ ತನಕ ನಿಶ್ಚಿತವಾಗಿತ್ತು. ಈಗ ಇದಕ್ಕೆ 1+1 ಸೇರಿ, ನಮ್ಮ ಮಿಷನ್ 152ಗೆ ಏರಿದೆ. ರಾಜ್ಯದ ಜನತೆ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ. Good Luck.

    ಇತ್ತ ಕೇಂದ್ರ ಸಚಿವ ಸದಾನಂದ ಗೌಡ ಸಹ ಟ್ವಿಟ್ಟರ್ ಸಿಎಂ ಕಾಲೆಳೆದಿದ್ದಾರೆ. ಮಾನ್ಯ ಶ್ರೀ ಸಿದ್ದರಾಮಯ್ಯನವರೆ ನಿಮ್ಮಂತ ಹೋರಾಟಗಾರರು ಯುದ್ಧ ಶುರುವಾಗುವ ಮೊದಲೇ ಶಸ್ತ್ರ ತ್ಯಾಗ ಮಾಡಲು ಹೊರಟಿರುವುದು ಒಳ್ಳೆಯದಲ್ಲ. ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರವನ್ನು ಈಗಲೇ ನಿರಾಶೆಯಿಂದ ಕೈ ಚೆಲ್ಲಬೇಡಿ. ಅದೇ ರೀತಿ ನಿಮ್ಮ ವ್ಯಂಗ್ಯ ನಿಮಗೆ ತಿರುಗುಬಾಣವಾಗುವಾಗ ಸಮಯ ಮಿಂಚಿರುತ್ತದೆ ಅಂತಾ ಟ್ವೀಟ್ ಮಾಡಿದ್ದಾರೆ.

  • ತಾಲೂಕಿನಲ್ಲಿ ದುಷ್ಟ ರಾಕ್ಷಸರಿದ್ದಾರೆ, ಕೋಣದ ರೀತಿ ಶಾಸಕನನ್ನು ಕಡೀಬೇಕು: ಮಾಲೀಕಯ್ಯ ವಿರುದ್ಧ ಎಂ.ವೈ.ಪಾಟೀಲ್ ಪುತ್ರ ಗುಡುಗು

    ತಾಲೂಕಿನಲ್ಲಿ ದುಷ್ಟ ರಾಕ್ಷಸರಿದ್ದಾರೆ, ಕೋಣದ ರೀತಿ ಶಾಸಕನನ್ನು ಕಡೀಬೇಕು: ಮಾಲೀಕಯ್ಯ ವಿರುದ್ಧ ಎಂ.ವೈ.ಪಾಟೀಲ್ ಪುತ್ರ ಗುಡುಗು

    ಕಲಬುರಗಿ: ಸರಣಿ ಕೊಲೆಗಳನ್ನು ಮಾಡಿಸಿ ಜೈಲಿನಲ್ಲಿ ಇರಬೇಕಾದ ಕೋಣ ಇವತ್ತು ನಮ್ಮ ಶಾಸಕನಾಗಿದ್ದಾನೆ. ಆ ಈಳಿಗೆರ್ ಕೋಣವನ್ನು ನಾವು ಕಡಿಯಲೇಬೇಕು ಅಂತಾ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ವಿರುದ್ಧ ಮಾಜಿ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ ಪಾಟೀಲ್ ಕಾರ್ಯಕರ್ತರ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.

    ತಮ್ಮ ಭಾಷಣದಲ್ಲಿ ಆ ಈಳೀಗನ ಶರ್ಟ್ ಹಿಡಿದು ಬಾರಿಸುವ ತನಕ ಸಮಾಧಾನವಿಲ್ಲ. ಆ ಈಳಿಗೇರ ಕೋಣ ಮುಂದೆ ಬರಬಾರದು. ಐದು ಬಾರಿ ಶಾಸಕನಾದ ಇವನು ನಮ್ಮ ತಂದೆಗೆ ಎಂಎಲ್‍ಸಿ ಆಗುವಂತೆ ಹೇಳ್ತಾನೆ. ಹಾಗಾಗಿ ನೀವೆಲ್ಲರೂ ನಮ್ಮ ತಂದೆಗೆ ಮತ ನೀಡಬೇಕು ಅಂತಾ ಕಾರ್ಯಕರ್ತರ ಸಭೆಯಲ್ಲಿ ಅರುಣ್ ಪಾಟೀಲ್ ಗುಡುಗಿದ್ದಾರೆ.

    ಅಫ್‍ಜಲ್‍ಪುರ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೆದಾರ್ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇತ್ತ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ವೈ.ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರ ಮಧ್ಯೆ ಚುನಾವಣಾ ಯುದ್ಧ ಆರಂಭವಾಗಿದೆ.

  • ರಾಜ್ಯದಲ್ಲಿ ಮತದಾನ ಜಾಗೃತಿಗೆ ಭಟ್ಟರ ತಾಳ-ಮೇಳ..!

    ರಾಜ್ಯದಲ್ಲಿ ಮತದಾನ ಜಾಗೃತಿಗೆ ಭಟ್ಟರ ತಾಳ-ಮೇಳ..!

    – ಚುನಾವಣಾ ಗೀತೆಯ ಚಿತ್ರೀಕರಣದಲ್ಲಿ ಯೋಗರಾಜ್ ಭಟ್ ಮತ್ತು ತಂಡ ಬ್ಯುಸಿ

    ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯುವಂತೆ ಮಾಡಲು ಮತ್ತು ಮತದಾರರನ್ನು ಜಾಗೃತಿಗೊಳಿಸುವ ಸಲುವಾಗಿ ಚುನಾವಣಾ ಆಯೋಗ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬಹಳ ಸುಲಭವಾಗಿ ಸಾಮಾನ್ಯ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಯೋಗರಾಜ್ ಭಟ್ಟರ ಗೀತೆಯ ಮೊರೆ ಹೋಗಿದೆ.

    ಹೌದು. ಕನ್ನಡದ ಚಿತ್ರರಂಗದ ಜನಪ್ರಿಯ ನಿರ್ದೇಶಕ, ತಮ್ಮ ಸಾಲುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಬಲ್ಲ ಪ್ರಸಿದ್ಧ ಗೀತ ಸಾಹಿತಿ ಯೋಗರಾಜ್ ಭಟ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಹೊಸ ಹಾಡೊಂದನ್ನು ರಚಿಸಿದ್ದಾರೆ. ಈ ಮೂಲಕ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಿದ ಖ್ಯಾತಿಗೆ ಪಾತ್ರವಾಗಲಿದೆ.

    ಯೋಗರಾಜ್ ಭಟ್ ಬರೆದ ಈ ಚುನಾವಣಾ ಗೀತೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮಾಡಲಿದ್ದು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ಇತರ ಗಾಯಕರು ಹಾಡಲಿದ್ದಾರೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಈ ಚುನಾವಣಾ ಗೀತೆಯನ್ನು ಕಳೆದ ಐದು ದಿನಗಳಿಂದ ರಾಜ್ಯದಾದ್ಯಂತ ಚಿತ್ರೀಕರಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಕಂಠೀರವ ಸ್ಟೇಡಿಯಂ, ವಿಧಾನಸೌಧ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ ಹೀಗೆ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸುವ ನೂರಾರು ಸಾಂಸ್ಕೃತಿಕ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

    ಇನ್ನು ಈ ಚುನಾವಣಾ ಗೀತೆಯ ಬಗ್ಗೆ ಮಾತನಾಡಿರುವ ಯೋಗರಾಜ್ ಭಟ್, `ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರ ಪ್ರಯತ್ನದಿಂದ ಈ ಗೀತೆ ಮೂಡಿಬರುತ್ತಿದೆ. ಇದರ ಹಿಂದಿನ ಕೀರ್ತಿ ಅವರಿಗೆ ಸಲ್ಲಬೇಕು. ಅವರು ಈ ಚುನಾವಣಾ ಗೀತೆ ಸಿದ್ಧಪಡಿಸಲು ಉತ್ಸಾಹ ತೋರಿಸಿದ್ದರಿಂದ ನಾವು ಮಾಡಲು ಮುಂದಾದೆವು. ಇದರ ಚಿತ್ರೀಕರಣಕ್ಕೆ ವಿಕಲಚೇತನರು, ಆದಿವಾಸಿಗಳು, ತೃತೀಯ ಲಿಂಗಿಗಳು ಮತ್ತು ಯುವ ಮತದಾರರನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಪ್ರಾಜೆಕ್ಟ್ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಹಲವು ವರ್ಷಗಳಿಂದ ನಾನು ಸಮಾಜಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಹೊಂದಿದ್ದಾರೆ. ಈ ಚುನಾವಣಾ ಗೀತೆ ಅದನ್ನು ಈಡೇರಿಸಿದೆ. ಈ ಗೀತೆ ವಿಶಿಷ್ಟ ಪರಿಕಲ್ಪನೆಯಾಗಿದ್ದು ಜನರಿಗೆ ನೇರ ಭಾಷಣದ ಮೂಲಕ ನೀಡಲಾಗದ ಉತ್ತೇಜನವನ್ನು ಈ ಗೀತೆ ನೀಡುತ್ತದೆ. ಗೀತೆಗಳು ಸದಾ ಗ್ರಹಿಸಲು ಸುಲಭ ಮತ್ತು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯುವುದರಿಂದ ಇದು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಚಿತ್ರಗೀತೆಗಳನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಚುನಾವಣಾ ಗೀತೆ ಪ್ರತಿಯೊಬ್ಬರ ಮನದಲ್ಲೂ ಉಳಿದು ಅವರಿಗೆ ಪಾರದರ್ಶಕ ಚುನಾವಣೆಗಳ ಕುರಿತು ಅರಿವು ಮೂಡಿಸುತ್ತದೆ’ ಎಂದರು.

    ಈ ಗೀತೆಯ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ ಆಯೋಗದ ಧ್ಯೇಯ- ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆಗಳ ಅನುಸಾರ ಇದೆ. ಈ ಯೋಜನೆ ಕುರಿತು ನಾವು ಬಹಳ ಕಾಲ ಸಂಶೋಧನೆ ನಡೆಸಿದ್ದೇವೆ. ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಲಿದೆ ಮತ್ತು ಇದು ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ. ಈ ಗೀತೆಯನ್ನು ರೇಡಿಯೊ, ಟೀವಿ, ಚಲನಚಿತ್ರಗಳು ಮತ್ತಿತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಿದ್ದೇವೆ ಎಂದರು.

    ಒಟ್ಟಾರೆ ಯೋಗರಾಜ್ ಭಟ್ಟರ ಈ ಚುನಾವಣಾ ಗೀತೆಯಲ್ಲಿ ಹೊಸ ಥರದ ಧಮ್, ರಿದಮ್ ಎರಡೂ ಇದ್ದು ಭಟ್ಟರ ಇತರೆ ಗೀತೆಗಳಂತೆ ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ. ಈ ಚುನಾವಣಾ ಗೀತೆ ಮತದಾರರ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂಬುದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

     

  • ಅಮಿತ್ ಶಾ ಸಂದರ್ಶನ: ಕೇಂದ್ರ ಸರ್ಕಾರ ಮಹದಾಯಿ ಸಭೆಯನ್ನು ಯಾಕೆ ಕರೆಯಲಿಲ್ಲ?

    ಅಮಿತ್ ಶಾ ಸಂದರ್ಶನ: ಕೇಂದ್ರ ಸರ್ಕಾರ ಮಹದಾಯಿ ಸಭೆಯನ್ನು ಯಾಕೆ ಕರೆಯಲಿಲ್ಲ?

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದು, ರಾಜ್ಯ ವ್ಯಾಪಿ ಚರ್ಚೆಯಾಗಿದ್ದ ಮಹದಾಯಿ ವಿವಾದದ ಬಗ್ಗೆ ಅಮಿತ್ ಶಾ ಸ್ಪಷ್ಟನೆಯನ್ನು ನೀಡಿದ್ದಾರೆ.

    ರಾಜ್ಯ ಸರ್ಕಾರ ಮಹದಾಯಿ ವಿವಾದ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯುವಂತೆ ಮನವಿ ಮಾಡಿ ಪತ್ರ ಬರೆದಿತ್ತು. ಮಹದಾಯಿ ವಿವಾದವನ್ನು ಪ್ರಧಾನಿ ಮೋದಿ ಮಧ್ಯಸ್ಥಿಕೆಯಲ್ಲಿ ಬಗೆಹರಿಸಬೇಕೆಂದು ಕರ್ನಾಟಕ ಸರ್ಕಾರ ಮನವಿಯನ್ನು ಮಾಡಿಕೊಂಡಿತ್ತು. ಆದ್ರೆ ಕೇಂದ್ರ ಸರ್ಕಾರ ಸಭೆ ಕರೆಯದನ್ನೇ ದಾಳವಾಗಿ ಬಳಸಿಕೊಂಡ ಸಿದ್ದರಾಮಯ್ಯ ಸರ್ಕಾರ ಮೋದಿಜೀ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆಯನ್ನು ತೋರುತ್ತಿದೆ ಅಂತಾ ಆರೋಪಿಸಿತ್ತು. ಈ ಸಂಬಂಧ ಸಂದರ್ಶನದಲ್ಲಿ ಮಹದಾಯಿ ವಿವಾದದ ಬಗ್ಗೆ ಅಮಿತ್ ಶಾರನ್ನು ಕೆಲವು ಪ್ರಶ್ನೆಗಳನ್ನು ಸಹ ಕೇಳಲಾಗಿತ್ತು. ಅವುಗಳು ಈ ಕೆಳಗಿನಂತಿವೆ.

    ಹೆಚ್.ಆರ್.ರಂಗನಾಥ್ : ಮೋದಿಜೀ ಸಭೆಯನ್ನೇ ಕರೆಯಲಿಲ್ಲ….?
    ಅಮಿತ್ ಶಾ: ನಾವು ಕರ್ನಾಟಕ ಸರ್ಕಾರಕ್ಕಾಗ್ಲಿ, ಜನತೆಗಾಗ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಮೊದಲು ತಾರತಮ್ಯ ಆಗ್ತಿತ್ತು. ನಾವು ಅದನ್ನು ನಿಲ್ಲಿಸಿದೆವು. ನಾವು ಯಾವತ್ತೂ ಕರ್ನಾಟಕಕ್ಕೆ ಉಪಕಾರ ಮಾಡ್ತಿದ್ದೇವೆ ಅಂತ ಹೇಳಿಲ್ಲ. ಆದ್ರೆ ಸಿದ್ದರಾಮಯ್ಯ ಇದನ್ನು ತಿರುಚುತ್ತಿದ್ದಾರೆ.

    ಹೆಚ್.ಆರ್.ರಂಗನಾಥ್ : ಎಲೆಕ್ಷನ್ ಆದ್ಮೇಲೆ ಬಗೆಹರಿಸುತ್ತೀರಾ..?
    ಅಮಿತ್ ಶಾ: ಮಹದಾಯಿ ವಿಚಾರವನ್ನು ಯಡಿಯೂರಪ್ಪ ಸರ್ಕಾರ ರಚನೆಯಾದ ತಕ್ಷಣ ಬಗೆಹರಿಸುತ್ತೇವೆ.

    ಹೆಚ್.ಆರ್.ರಂಗನಾಥ್ : ಸಿದ್ದರಾಮಯ್ಯ ಹೇಳ್ತಾರೆ ಮೋದಿ ಸಭೆ ಕರೆದು ಚರ್ಚಿಸಿದ್ದಿದ್ರೆ ಮಹದಾಯಿ ವಿವಾದ ಬಗೆಹರಿಯುತ್ತಿತ್ತು ಅಂತ..?
    ಅಮಿತ್ ಶಾ: ಮಹದಾಯಿ ವಿವಾದ ಒಂದೇ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಇದು ಎರಡು ರಾಜ್ಯಕ್ಕೆ ಸಂಬಂಧಿಸಿದ್ದು. ಇದು ಕೇವಲ ಗೋವಾ ಸರ್ಕಾರದಿಂದ ಆಗುವುದಿಲ್ಲ. ಇಲ್ಲಿರುವ ಸರ್ಕಾರ ಧ್ವಜ, ಲಿಂಗಾಯ, ಮಹದಾಯಿ ವಿಚಾರವನ್ನು ಮತಬ್ಯಾಂಕ್ ಆಗಿ ನೋಡ್ತಿದೆ. ಹಾಗೆ ನೋಡಿದ್ರೆ ಈ ಸಮಸ್ಯೆಗಳು ಬಗೆಹರಿಯೋಕೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ರಚನೆಯಾದ್ರೆ ಆರೇ ತಿಂಗಳಲ್ಲಿ ಕರ್ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸ್ತೇವೆ.

    ಸಂದರ್ಶನದಲ್ಲಿ ಮುಂದಿನ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದ 6 ತಿಂಗಳಲ್ಲಿ ಮಹದಾಯಿ ವಿವಾದವನ್ನು ಇತ್ಯರ್ಥ ಮಾಡಲಾಗುವುದು ಎಂಬ ಭರವಸೆಯನ್ನು ನಾಡಿನ ಜನತೆಗೆ ನೀಡಿದ್ದಾರೆ.

  • ಕಾಂಗ್ರೆಸ್‍ಗೆ ಮಾಲೀಕಯ್ಯ ಗುತ್ತೇದಾರ್ ಗುಡ್‍ಬೈ- ಬಿಜೆಪಿ ಸೇರ್ಪಡೆ ಬಹುತೇಕ ಖಚಿತ

    ಕಾಂಗ್ರೆಸ್‍ಗೆ ಮಾಲೀಕಯ್ಯ ಗುತ್ತೇದಾರ್ ಗುಡ್‍ಬೈ- ಬಿಜೆಪಿ ಸೇರ್ಪಡೆ ಬಹುತೇಕ ಖಚಿತ

    ಬೆಂಗಳೂರು: ಉತ್ತರ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ಮುಖಂಡ, ಶಾಸಕ ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ತಾರಾ ಎಂಬ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈಗಾಗಲೇ ಮಾಲೀಕಯ್ಯ ಗುತ್ತೆದಾರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಮಲ ಹಿಡಿತಾರಾ ಅಥವಾ ತೆನೆ ಹೊರೆ ಹೊರಲು ಸಿದ್ಧರಾಗ್ತಾರಾ ಎಂಬುವುದು ಇನ್ನೇರೆಡು ದಿನಗಳಲ್ಲಿ ತಿಳಿಯಲಿದೆ.

    ಈಗಾಗಲೇ ಬೆಂಗಳೂರಿನಲ್ಲಿ ಮಾಲೀಕಯ್ಯ ಗುತ್ತೇದಾರ್ ಒಂದು ಬಾರಿ ಸಿಎಂ ಸಿದ್ದರಾಮಯ್ಯ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ವಿಫಲವಾಗಿದೆ ಅಂತಾ ಹೇಳಲಾಗುತ್ತಿದೆ. ಇತ್ತ ಬಿಜೆಪಿ ಯ ಮುಖಂಡರು ಜೊತೆ ಶಾಸಕರು ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

    ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆ ಬಹುತೇಕ ಖಚಿತವಾಗಿದೆ. ಇನ್ನೆರಡು ದಿನಗಳಲ್ಲಿ ಮಾಲೀಕಯ್ಯ ಗುತ್ತೇದಾರ್ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸಲಿದ್ದಾರೆ. ಈಗಾಗಲೇ ಬಿಜೆಪಿ ಚುನಾವಣೆಗೆ ಸ್ಪರ್ಧಿಸುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪಟ್ಟಿಯಲ್ಲಿ ಅಫಜಲ್‍ಪುರ ಮತಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಇನೂ ಬಿಜೆಪಿ ರಿವೀಲ್ ಮಾಡಿಲ್ಲ.

    ಒಂದು ವೇಳೆ ಮಾಲೀಕಯ್ಯ ಗುತ್ತೇದಾರ ಬಿಜೆಪಿ ಸೇರ್ಪಡೆಗೊಂಡರೆ ಟಿಕೆಟ್ ಸಿಗುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಈಗಾಗಲೇ ಅಫಜಲ್‍ಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಆರು ಬಾರಿ ಶಾಸಕರಾಗಿ ಮಾಲೀಕಯ್ಯ ಗುತ್ತೇದಾರ್ ಆಯ್ಕೆಗೊಂಡಿದ್ದಾರೆ.

  • ವೋಟ್ ಹಾಕಿದ್ರೆ ಇನ್ಯಾರಿಗೋ ವೋಟ್ ಬಿದ್ದಿದೆ ಎಂದು ತೋರಿಸಿತು ವಿವಿಪ್ಯಾಟ್!

    ವೋಟ್ ಹಾಕಿದ್ರೆ ಇನ್ಯಾರಿಗೋ ವೋಟ್ ಬಿದ್ದಿದೆ ಎಂದು ತೋರಿಸಿತು ವಿವಿಪ್ಯಾಟ್!

    ರಾಯಚೂರು: ಪ್ರಾತ್ಯಕ್ಷಿಕೆ ನೀಡುವ ವೇಳೆ ಮತಯಂತ್ರಗಳಲ್ಲಿ ದೋಷವಿರುವುದು ಕಂಡು ಬಂದಿದ್ದು, ಯಾವುದೋ ಅಭ್ಯರ್ಥಿಗೆ ವೋಟ್ ಹಾಕಿದ್ದರೆ ವಿವಿಪ್ಯಾಟ್‍ನಲ್ಲಿ ಇನ್ಯಾರಿಗೋ ಮತ ಬಿದ್ದಿದೆ.

    ರಾಯಚೂರಿನ ಕ್ರಾಫ್ಟ್ ಹಾಲ್‍ನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತ್ತು ಮಾಧ್ಯಮಗಳಿಗೆ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ವಿವಿಪ್ಯಾಟ್‍ನಲ್ಲಿ ದೋಷಗಳು ಕಂಡುಬಂದಿವೆ. ಈ ದೋಷಕ್ಕೆ ಇವಿಎಂ ಯಂತ್ರದ ಬ್ಯಾಟರಿ ಕಡಿಮೆಯಿರುವುದು ಅಥವಾ ಪ್ರಿಂಟರ್ ಸಮಸ್ಯೆಯಿಂದ ಹೀಗೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

    ಆಗಿದ್ದು ಏನು?
    ಪ್ರಾತ್ಯಕ್ಷಿಕೆ ವೇಳೆಯಲ್ಲಿ ಆರಂಭದಲ್ಲಿ ಬ್ಯಾಲೆಟ್ ಬಾಕ್ಸ್ ಮೂಲಕ 2 ಮತ ಹಾಕಲಾಯಿತು. ಆದರೆ ವಿವಿಪ್ಯಾಟ್ ನಲ್ಲಿ ಯಾವ ಸಂಖ್ಯೆ ಮತ ಹಾಕಲಾಗಿದೆಯೋ ಆ ಸಂಖ್ಯೆ ಕಾಣಿಸದೇ ಬೇರೆ ಸಂಖ್ಯೆ ಕಾಣಿಸಿದೆ. ಈ ದೋಷ ಕಂಡುಬಂದ ಕೂಡಲೇ ವಿವಿಪ್ಯಾಟ್ ಬದಲಿಸಿ ಬೇರೊಂದು ವಿವಿಪ್ಯಾಟ್ ತಂದು ಪ್ರಾತ್ಯಕ್ಷಿಕೆ ನಡೆಸಲಾಯಿತು. ಒಟ್ಟು 27 ಮತಗಳನ್ನು ಚಲಾವಣೆ ಮಾಡಿದ್ದು ವಿವಿಪ್ಯಾಟ್ ನಲ್ಲಿ ಸರಿಯಾಗಿ ತೋರಿಸಿದೆ. ಕೊನೆಗೆ ಎಲ್ಲ ಮತಗಳನ್ನು ಎಣಿಕೆ ಮಾಡಿದ್ದು ಎಲ್ಲ ಮತಗಳು ಸರಿಯಾಗಿ ಬಿದ್ದಿದೆ.

    ಮತಯಂತ್ರಗಳಲ್ಲಿ ದೋಷಕಂಡುಬಂದಿರುವುದಕ್ಕೆ ವಿವಿಧ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಕ್ರಾಫ್ಟ್ ರೂಂನಲ್ಲಿ ಉತ್ತರಪ್ರದೇಶದಿಂದ ಬಂದಿರುವ ಇವಿಎಂ ವಿವಿ ಪ್ಯಾಟ್ ಮತಯಂತ್ರಗಳನ್ನ ಭದ್ರವಾಗಿ ಇಡಲಾಗಿದೆ.

    ಕಳೆದ ಚುನಾವಣೆಯಲ್ಲಿ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಮಾತ್ರ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮತದಾರರ ಮತ ಖಾತ್ರಿಪಡಿಸುವ ಸಲುವಾಗಿ ವಿವಿಪ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ.

    ವಿವಿಪಿಎಟಿ ಅಂದ್ರೇನು?: ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತದೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರ್ ಅನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ಮತದಾರ ತಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ 2016ರಲ್ಲಿ ಸಲಹೆ ನೀಡಿತ್ತು.