Tag: Karnataka Election

  • ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ಚಿತ್ರದುರ್ಗ: ನನ್ನನ್ನು ಇದುವರೆಗೂ ಯಾರು ಸಂಪರ್ಕಿಸಿಲ್ಲ ಮತ್ತು ನಾನು ಬಿಜೆಪಿಗೆ ಮತ್ತೆ ಸೇರಲ್ಲ. ಬಳ್ಳಾರಿಯವರ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿದೆ. ಆದ್ರೆ ಇವರ ಆಟ ಇಲ್ಲಿ ನಡೆಯಲ್ಲ ಅಂತಾ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.

    ಸಂಸದ ಶ್ರೀರಾಮುಲು ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ, ಕಣದಿಂದ ಹಿಂದೆ ಸರಿಯುವಂತೆ ತಿಪ್ಪೇಸ್ವಾಮಿ ಅವರ ಮನವೊಲಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ತಮ್ಮ ಬಗ್ಗೆ ಹುಟ್ಟಿಕೊಂಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದ ತಿಪ್ಪೇಸ್ವಾಮಿ, ನನ್ನ ಬೆಂಬಲಿಗರು ಮತ್ತು ಮತದಾರರಲ್ಲಿ ಗೊಂದಲ ಮೂಡಿಸಲು ಈ ರೀತಿಯ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಕೆಲಸವನ್ನು ಬಳ್ಳಾರಿಯವ್ರೆ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಇದನ್ನೂ ಓದಿ:  ಮಾತು ಕೊಟ್ಟು ಮೋಸ ಮಾಡಿದ್ರು ಶ್ರೀರಾಮುಲು-ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ: ನೀವೇ ವಿಡಿಯೋ ನೋಡಿ

  • ನಟ ನಿಖಿಲ್‍ಗಾಗಿ ರಾತ್ರೋರಾತ್ರಿ ಮದ್ದೂರಲ್ಲಿ ಪ್ರತಿಭಟನೆ!

    ನಟ ನಿಖಿಲ್‍ಗಾಗಿ ರಾತ್ರೋರಾತ್ರಿ ಮದ್ದೂರಲ್ಲಿ ಪ್ರತಿಭಟನೆ!

    ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಆಗಮನದ ನಿರೀಕ್ಷೆ ಹುಸಿಯಾಗಿದ್ದರಿಂದ ಶಾಸಕ ಡಿ.ಸಿ. ತಮ್ಮಣ್ಣ ಅವರ ಮಗ ಸಂತೋಷ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಲ್ಲಿ ನಡೆದಿದೆ.

    ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರ ಪ್ರಚಾರ ಮಾಡಲು ನಿಖಿಲ್ ಬರುತ್ತಾರೆ ಎಂದು ಗುರುವಾರ ಸಂಜೆ 6 ಗಂಟೆಯಿಂದ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕಾರಣಾಂತರಗಳಿಂದ ನಿಖಿಲ್ ಪ್ರಚಾರಕ್ಕೆ ಬರಲು ಆಗಿಲ್ಲ. ಇದರಿಂದ ಸಂಜೆ ಆರು ಗಂಟೆಯಿಂದ ರಾತ್ರಿ ಸುಮಾರು 10 ಗಂಟೆವರೆಗೆ ಕಾದುಕುಳಿತಿದ್ದ ಅಭಿಮಾನಿಗಳು ಸಿಟ್ಟಿನಿಂದ ಶಾಸಕ ಡಿ.ಸಿ.ತಮ್ಮಣ್ಣನ ಮಗ ಸಂತೋಷ್ ಕಾರಿಗೆ ಘೆರಾವ್ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ನಿಖಿಲ್ ಆಗಮಿಸದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಿಲ್ಲ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

  • ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಹೋದರರ ವಿರುದ್ಧ ಈ ಹಿಂದೆ ಆಂಬುಲೆನ್ಸ್ ನಲ್ಲಿ ಹಣ ಸಾಗಾಟ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗ ರೆಡ್ಡಿ- ರಾಮುಲು ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀರಾಮುಲು ಅವರನ್ನು ಗೆಲ್ಲಿಸುವ ಸಂಪೂರ್ಣ ಹೊಣೆ ಹೊತ್ತಿರುವ ಜನಾರ್ದನ ರೆಡ್ಡಿ, ಚುನಾವಣೆಯಲ್ಲಿ ಅಕ್ರಮ ಮಾಡದಂತೆ ಚುನಾವಣಾ ಆಯೋಗ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಇದಕ್ಕಾಗಿಯೇ ರೆಡ್ಡಿ ವಾಸವಿರುವ ಮೊಳಕಾಲ್ಮೂರು ತಾಲೂಕಿನ ಮೇಗಲಹಟ್ಟಿ ಮನೆಯ ಮುಂದೆಯೇ ಇದೀಗ ಚೆಕ್ ಪೋಸ್ಟ್ ನಿರ್ಮಿಸಿದೆ.

    ಈ ಮೂಲಕ ಜನಾರ್ದನ ರೆಡ್ಡಿ ಮನೆಗೆ ಬಂದು ಹೋಗುವ ಎಲ್ಲ ವಾಹನಗಳನ್ನು ಚುನಾವಣಾಧಿಕಾರಿಗಳು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೇ ರೆಡ್ಡಿ ಮನೆಗೆ ಬಂದೂ ಹೋಗುವ ವ್ಯಕ್ತಿಗಳ ಮೇಲೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ನಡೆಯದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.

    ಸದ್ಯ ರೆಡ್ಡಿಗೆ ಇದೀಗ ಮನೆಯ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿರುವುದು ದೊಡ್ಡ ತಲೆನೋವಾಗಿ ಪರಿಗಣಿಸಿದೆ.

     

  • ಬಿಜೆಪಿ ನಾಯಕರು ಫೀಲ್ಡಿಗೆ ಇಳಿಯದೇ 100 ರನ್ ಹೊಡೆದವರಂತೆ ಪ್ರಚಾರ: ಅಜರುದ್ದೀನ್ ಲೇವಡಿ

    ಬಿಜೆಪಿ ನಾಯಕರು ಫೀಲ್ಡಿಗೆ ಇಳಿಯದೇ 100 ರನ್ ಹೊಡೆದವರಂತೆ ಪ್ರಚಾರ: ಅಜರುದ್ದೀನ್ ಲೇವಡಿ

    ಬೆಂಗಳೂರು: ಬಿಜೆಪಿ ನಾಯಕರು ಕುಳಿತಕೊಂಡು ಸ್ಕೋರ್ ಬೋರ್ಡ್‍ನಲ್ಲಿ ಲೆಕ್ಕ ತೋರಿಸುತ್ತಿದ್ದಾರೆ ಎಂದು ಟೀಂ ಇಂಡಿಯ ಮಾಜಿ ನಾಯಕ, ಕಾಂಗ್ರೆಸ್ ತಾರಾ ಪ್ರಚಾರಕ ಮೊಹಮ್ಮದ್ ಅಜರುದ್ದೀನ್ ವ್ಯಂಗ್ಯ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೀಲ್ಡ್ ಗೆ ಇಳಿದು ನಾವು ಕೆಲಸ ಮಾಡಿದ್ದೇವೆ ಎಂದು ತೋರಿಸಬೇಕು. ಆದರೆ ಬಿಜೆಪಿ ನಾಯಕರು ಫಿಲ್ಡ್‍ಗೆ ಇಳಿಯದೇ 100 ರನ್ ಮಾಡಿದ್ದೇವೆ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

    ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿ ಕೋಮುವಾದ ಸೃಷ್ಟಿಸಲು ಹವಣಿಸುತ್ತಿದ್ದಾರೆ. ಕರ್ನಾಟಕ ಈಗಾಗಲೇ ಅಭಿವೃದ್ಧಿಯಲ್ಲಿದೆ. ಕೇಂದ್ರ ಅಭಿವೃದ್ಧಿಯ ಬಗ್ಗೆ ಗಮನಹರಿಸಲಿ ಎಂದು ತಿರುಗೇಟು ನೀಡಿದರು.

    ಬಿಜೆಪಿ ರಾಜ್ಯಗಳ ಆಡಳಿತದಲ್ಲಿ ಏನಿದೆ ಎನ್ನುವುದನ್ನು ನೋಡಲಿ. ಅದನ್ನು ಬಿಟ್ಟು ಅಭಿವೃದ್ಧಿ ವಿಚಾರ ಮುಂದಿಟ್ಟು ದಾರಿತಪ್ಪಿಸುವುದು ಸರಿಯಲ್ಲ. ದೇಶದ ಶಾಂತಿಯನ್ನ ಕದಡುವುದು ಬೇಡ. ಕುಳಿತುಕೊಂಡು ಸುಳ್ಳು ಹೇಳುವ ಬದಲು ಗ್ರೌಂಡ್‍ಗೆ ಹೋಗಿ ಅಲ್ಲಿನ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿ. ಅದು ಬಿಟ್ಟು ಸುಳ್ಳನ್ನೇ ಎತ್ತಿ ಎತ್ತಿ ತೋರಿಸಬೇಡಿ ಎಂದು ವಾಗ್ದಾಳಿ ನಡೆಸಿದರು.

  • ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಮಹಾದೇವಪ್ಪ ಆಪ್ತ ಗುತ್ತಿಗೆದಾರ ಮರಿಸ್ವಾಮಿ ಮನೆಯಲ್ಲಿ ಕೋಟಿ ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

    ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ 10 ಮಂದಿ ಪಿಡಬ್ಲ್ಯೂಡಿ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈಸೂರಿನಲ್ಲಿ ಮರಿಸ್ವಾಮಿ ಮನೆಯ ಮೇಲೆ ನಡೆದ ದಾಳಿಯ ವೇಳೆ 6.76 ಕೋಟಿ ರೂ. ನಗದು ಹಣ ಸಿಕ್ಕಿದೆ.

    ಪತ್ತೆಯಾಗಿರುವ ಎಲ್ಲ ನೋಟುಗಳು 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳು ಆಗಿದ್ದು. ಎಲ್ಲವೂ ಬೇನಾಮಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಎಲ್ಲ ಕಡೆ ದಾಳಿ ನಡೆಸಿದಾಗ ಒಟ್ಟು 10.62 ಕೋಟಿ ರೂ. ನಗದು ಸಿಕ್ಕಿದ್ದು, 1.33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

    ಕೆಲ ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಹಲವು ಕಡೆ ನಗದಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಹಣ ಇರುವ ಅಂಶ ದೃಢಪಟ್ಟಿದೆ ಎಂದು ಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಹಲವು ಗುತ್ತಿಗೆದಾರರು 500 ಮತ್ತು 2 ಸಾವಿರ ರೂ. ಮೌಲ್ಯದ ಭಾರೀ ಪ್ರಮಾಣದ ಹಣವನ್ನು ಹೊಂದಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ದಾಳಿಯಲ್ಲಿ ಪತ್ತೆಯಾದ ಹಣಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ, ದಾಳಿ ಮುಂದುವರಿದಿದೆ ಎಂದು ಐಟಿ ತಿಳಿಸಿದೆ.

    ಮರಿಸ್ವಾಮಿ ಸ್ಪಷ್ಟನೆ: ಸಿಎಂ ಜೊತೆಗಿರುವ ಫೋಟೋ ಪ್ರಕಟವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ನನ್ನ ಮನೆ ಮೇಲೆ ಐಟಿ ದಾಳಿ ಆಗಿಲ್ಲ. ನಾನು ಬೆಸಿಕಲಿ ಕೃಷಿಕ, ನಾನು ಕಂಟ್ರ್ಯಾಕ್ಟರ್ ಅಲ್ಲ. ಸುಖಸುಮ್ಮನೆ ನನ್ನ ಹೆಸರು ಇಲ್ಲಿಗೆ ತಗಲಿ ಕೊಂಡಿದೆ. ನಾನು ಯಾವ ವ್ಯವಹಾರ ಮಾಡಿಲ್ಲ. ಸಿಎಂ ಜೊತೆಗಿನ ಸಂಬಂಧ ಪವಿತ್ರ ಸ್ನೇಹ ಅಷ್ಟೇ. ಯಾವ ವ್ಯವಹಾರವೂ ಇಲ್ಲ. ಯಾವ ವಿಚಾರಣೆಯನ್ನು ನಾನು ಎದುರಿಸಿಲ್ಲ. ಐಟಿ ಅಧಿಕಾರಿಗಳು ಯಾವ ನೋಟಿಸ್ ಕೊಟ್ಟಿಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಮರಿಸ್ವಾಮಿ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

     

  • ಅಶೋಕ್ ಖೇಣಿಗೆ ಬಿಗ್ ರಿಲೀಫ್- ನಾಮಪತ್ರ ಅಂಗೀಕಾರ

    ಅಶೋಕ್ ಖೇಣಿಗೆ ಬಿಗ್ ರಿಲೀಫ್- ನಾಮಪತ್ರ ಅಂಗೀಕಾರ

    ಬೀದರ್: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ರಿಲೀಫ್ ಸಿಕ್ಕಿದ್ದು, ಚುನಾವಣಾ ಅಧಿಕಾರಿಗಳು ನಾಮಪತ್ರವನ್ನು ಅಂಗೀಕಾರಿಸಿದ್ದಾರೆ.

    ಅಶೋಕ್ ಖೇಣಿ ಅಮೆರಿಕದ ಪೌರತ್ವ ಹೊಂದಿದ್ದಾರೆ. ಬೇರೆ ದೇಶಗಳಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಸಿ ನೊಂದಣಿ ಮಾಡಿಕೊಂಡಿದ್ದಾರೆ. ಸರ್ಕಾರದ ಕಾಮಗಾರಿಗಳಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ದಾಖಲಾದ ನಂತರ ಖೇಣಿ ಪರ ವಕೀಲರು ಪೂರಕ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ಕೇಳಿದ್ದರು.

    ಇಂದು ಬೆಳಗ್ಗೆ 11 ಘಂಟೆಗೆ ಖೇಣಿಯವರ ಪಾಸ್ ಪೋರ್ಟ್ ಮತ್ತು ಆದಾಯ ತೆರಿಗೆ ಇಲಾಖೆಗೆ ಕಟ್ಟಿರುವ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಖೇಣಿ ಪರ ವಕೀಲರು ಸಲ್ಲಿಸಿದರು. ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಮತದಾರರ ಪಟ್ಟಿಯ ಅಕ್ರಮ ನೊಂದಣಿ ವಿಚಾರಣೆ ನಮ್ಮ ಪರಿಧಿಯಲ್ಲಿ ಬರುವುದಿಲ್ಲ ಈ ಕುರಿತು ಕೇಂದ್ರ ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರದಲ್ಲಿ ದೂರನ್ನು ಸಲ್ಲಿಸಬಹುದು. ಸರ್ಕಾರದ ಕಾಮಗಾರಿಗಳಲ್ಲಿ ನೈಸ್ ಕಂಪನಿ ಒಪ್ಪಂದ ಮಾಡಿಕೊಂಡಿದೆಯೇ ವಿನಃ ಖೇಣಿ ಹೆಸರಿನಲ್ಲಿ ಆಗಿಲ್ಲ ಎಂದು 2103ರಲ್ಲೇ ನ್ಯಾಯಾಲಯ ದೂರು ಅರ್ಜಿಯನ್ನು ವಜಾ ಮಾಡಿದೆ ಎಂದು ತಿಳಿಸಿ ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

    ಆಯೋಗದ ನಿರ್ಧಾರದ ಬಳಿಕ ಪ್ರತಿಕ್ರಿಯಿಸಿದ ಅಬ್ರಹಾಂ, ಅರ್ಜಿಯಲ್ಲಿರುವ ಆಕ್ಷೇಪಣೆಗಳ ವಿಚಾರ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಆಯೋಗ ತಿಳಿಸಿದೆ. ಹೀಗಾಗಿ ನ್ಯಾಯಾಲಯದಲ್ಲಿ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

    2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆದ್ದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ವೋಟ್ ಹಾಕಿದ್ದ ಖೇಣಿ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

  • ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ

    ದಾವಣಗೆರೆ: ಮೂಲ ಸೌಕರ್ಯ ಕಲ್ಪಿಸದ ಮಹಾನಗರ ಪಾಲಿಕೆ ವಿರುದ್ಧ ನಗರದ ಸ್ಮಾರ್ಟ್ ಸಿಟಿಯಲ್ಲಿನ ನಿವಾಸಿಗಳು ಕೋಪಗೊಂಡಿದ್ದು, ದಯವಿಟ್ಟು ಮತ ಕೇಳಲು ಬರಬೇಡಿ ಎಂದು ಮತದಾನ ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ.

    ಮಹಾನಗರ ಪಾಲಿಕೆಯ 18 ನೇ ವಾರ್ಡ್ ವಿನಾಯಕ ನಗರದ “ಎ” ಬ್ಲಾಕ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ 100 ಕ್ಕೂ ಹೆಚ್ಚು ಮನೆಗಳ ಮುಂದೆ ಜನ ಮತದಾನ ಬಹಿಷ್ಕಾರದ ಪೋಸ್ಟರ್ ಹಾಕಿದ್ದಾರೆ.

    20 ದಿನಗಳಿಗೊಮ್ಮೆ ಕುಡಿಯೋಕೆ ನೀರು ಬಿಡ್ತಾರೆ. ಅಲ್ಲದೇ ರಾತ್ರಿ ಬೀದಿ ದೀಪದ ವ್ಯವಸ್ಥೆ ಇಲ್ಲ, ರಸ್ತೆ ಗುಂಡಿಮಯವಾಗಿವೆ. ಹಾಗೂ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ. ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೆಲಸ ಆಗದ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಿವಾಸಿಗಳು ಹೇಳಿದ್ದಾರೆ.

    ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿದರೂ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಸಮಸ್ಯೆ ಆಲಿಸದೇ ಅತ್ತ ತಿರುಗಿಯೂ ಕೂಡ ನೋಡುತ್ತಿಲ್ಲ. ಹಾಗಾಗಿ ಮೂಲ ಸೌಕರ್ಯ ಒದಗಿಸದ ಹೊರತು ಮತದಾನ ಮಾಡೋದಿಲ್ಲ ಅಂತ ಪಟ್ಟು ಹಿಡಿದು ನಿವಾಸಿಗಳು ಮತದಾನ ಬಹಿಷ್ಕಾರ ಅಭಿಯಾನವನ್ನು ಕೈಗೊಂಡಿದ್ದಾರೆ.

  • ಯತೀಂದ್ರ ಸಿಎಂ ಮಗ ಅನ್ನೋದು ಬಿಟ್ರೆ ಬೇರೆ ಯಾವುದರಲ್ಲೂ ನನಗೆ ಸರಿಸಮಾನನಿಲ್ಲ-ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಯತೀಂದ್ರ ಸಿಎಂ ಮಗ ಅನ್ನೋದು ಬಿಟ್ರೆ ಬೇರೆ ಯಾವುದರಲ್ಲೂ ನನಗೆ ಸರಿಸಮಾನನಿಲ್ಲ-ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಬೆಂಗಳೂರು: ಯತೀಂದ್ರ ಸಿಎಂ ಸಿದ್ದರಾಮಯ್ಯರ ಮಗ ಅನ್ನೋದು ಬಿಟ್ಟರೆ, ಬೇರೆ ಯಾವುದರಲ್ಲೂ ನನಗೆ ಸರಿ ಸಮಾನನಿಲ್ಲ ಅಂತಾ ವರುಣಾ ಕೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜು ಹೇಳಿದ್ದಾರೆ.

    ನಗರದ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿದ ಬಳಿಕ ನೀಡಿದ ಮಾತನಾಡಿದ ಬಸವರಾಜು, ನೂರಕ್ಕೆ ನೂರರಷ್ಟು ವರುಣಾದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಸದ್ಯ ವರುಣಾದಲ್ಲಿ ಪರಿಸ್ಥಿತಿ ಸರಿ ಇಲ್ಲ, ಆದ್ರೆ ಇನ್ನೆರೆಡು ದಿನ ಬಿಟ್ಟು ಕ್ಷೇತ್ರದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರು ಬಂದು ಪ್ರಚಾರ ಮಾಡಲಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಬಿಜೆಪಿ ಶಕ್ತಿ ಏನು ಅನ್ನೋದನ್ನ ತೋರಿಸುವುದಕ್ಕೆ ಮುಂದಾಗಿದೆ ಅಂತಾ ಹೇಳಿದ್ರು. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಯಾರೋ ಕೆಲ ಕಿಡಿಗೇಡಿಗಳು ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾ ಅಭಿಯಾನ ಮಾಡ್ತಿದ್ದಾರೆ. ಆದ್ರೆ ಅವರು ಯಾರು ಬಿಜೆಪಿ ಕಾರ್ಯಕರ್ತರಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಅಂತಹ ಕೆಲಸ ಮಾಡಲ್ಲ ಅಂತಾ ಸ್ಪಷ್ಟನೆ ನೀಡಿದ್ರು.

  • ಮತ ಕೇಳಲು ಹೋದ ಕಾನೂನು ಸಚಿವರಿಗೆ ವಕೀಲರಿಂದ ಫುಲ್ ಕ್ಲಾಸ್!

    ಮತ ಕೇಳಲು ಹೋದ ಕಾನೂನು ಸಚಿವರಿಗೆ ವಕೀಲರಿಂದ ಫುಲ್ ಕ್ಲಾಸ್!

    ತುಮಕೂರು: ವಕೀಲರ ಮತ ಕೇಳಲು ಹೋದ ಕಾನೂನು ಸಚಿವ ಟಿಬಿ ಜಯಚಂದ್ರ ಅವರಿಗೆ ಶಿರಾ ವಕೀಲರ ಸಂಘ ತರಾಟೆಗೆ ತೆಗೆದುಕೊಂಡಿದೆ.

    ಗುಬ್ಬಿಯಲ್ಲಿ ಮೂರು ಜನ ಇದ್ದರೆ, 15 ವರ್ಷ ದಿಂದ ಶಿರಾ ಕೋರ್ಟ್‍ನಲ್ಲಿ ಸಾರ್ವಜನಿಕ ಅಭಿಯೋಜಕರಿಲ್ಲ. ಅಷ್ಟೇ ಅಲ್ಲದೇ ಎ.ಸಿ.ಕೋರ್ಟ್ ಅನ್ನು ತಿಂಗಳಲ್ಲಿ ಒಂದು ದಿನ ಶಿರಾದಲ್ಲಿ ನಡೆಸುವಂತೆ ವಕೀಲರ ಸಂಘ ಈ ಹಿಂದೆ ಜಯಚಂದ್ರ ಅವರಲ್ಲಿ ಮನವಿ ಮಾಡಿತ್ತು.

    ವಕೀಲರ ಸಂಘ ಮನವಿ ಮಾಡಿದ ಸಂದರ್ಭದಲ್ಲಿ ಭರವಸೆ ನೀಡಿದ್ದ ಜಯಚಂದ್ರ ನಂತರ ಮರೆತಿದ್ದರು. ಈಗ ಜಯಚಂದ್ರ ಅವರು ವಕೀಲರ ಬಳಿ ಮತ ಕೇಳಲು ಬಂದಿದ್ದಾರೆ. ಸಚಿವರು ಬಂದ ಹಿನ್ನೆಲೆಯಲ್ಲಿ ವಕೀಲರು ಹಿಂದೆ ನೀಡಿದ್ದ ಭರವಸೆ ಏನಾಯ್ತು ಎಂದು ಪ್ರಶ್ನಿಸಿ ಜಯಚಂದ್ರ ಅವರನ್ನು ಇಂದು ತರಾಟೆಗೆ ತೆಗೆದುಕೊಂಡರು.

    ಗೃಹ ಇಲಾಖೆ ಮತ್ತು ಕನೂನು ಸಚಿವಾಲಯಕ್ಕೆ ಬಹಳಷ್ಟು ಸಲ ವಕೀಲರ ಸಂಘದಿಂದ ಮನವಿಯನ್ನು ಸಲ್ಲಿಸಿದ್ದೇವೆ. ನಮ್ಮ ಕಕ್ಷೀದಾರರೇ ನಿಮ್ಮ ಮತದಾರರು ಅನ್ನುವುದನ್ನು ಮರೆಯಬಾರದು. ಕಾನೂನು ಸಚಿವರಾಗಿ ನೀವೇ ಮಾಡಿಲ್ಲ ಅಂದರೆ ಏನರ್ಥ? ಮತ ಕೇಳಲು ನಿಮಗೆ ಹೇಗೆ ಹಕ್ಕಿದೆಯೋ ಅದೇ ರೀತಿಯಾಗಿ ನಮ್ಮ ಬೇಡಿಕೆ ಈಡೇರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಪ್ರಶ್ನಿಸಿ ಸಚಿವರಿಗೆ ವಕೀಲರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

  • ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ: ಜಾವಡೇಕರ್

    ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ: ಜಾವಡೇಕರ್

    ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೊದಲು ಅವರ ಮುಖವನ್ನೇ ನೋಡಿಕೊಳ್ಳಲಿ ಎಂದು ಕೇಂದ್ರ ಸಚಿವ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ.

    8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಮೋದಿ ಕರೆದುಕೊಂಡು ಬರುತ್ತಿದ್ದಾರೆ ಎನ್ನುವ ರಾಹುಲ್ ಗಾಂಧಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರು ಜಾಮೀನು ಪಡೆಯುವ ಮೂಲಕ ಹೊರಗೆ ಇದ್ದಾರೆ. ಮೊದಲು ಅವರ ಮುಖವನ್ನು ಅವರು ನೋಡಿಕೊಳ್ಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: 8 ಮಂದಿಯನ್ನು ಜೈಲಿನಿಂದ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ ಮೋದಿ- ರಾಹುಲ್ ಲೇವಡಿ

    ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ನಮ್ಮ ತಾರಾ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ. ಆದರೆ ಅವರು ತಮ್ಮ ಆಪ್ತ ಕೆಲ ಅಭ್ಯರ್ಥಿಗಳ ಪರಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಎಂದು ತಿಳಿಸಿದರು.

    ನಾವು ಬೇರೆ ಪಕ್ಷದ ಜೊತೆ ಎಂದೂ ಜಗಳಕ್ಕೆ ಇಳಿಯಲ್ಲ. ದೇಶದ ಅಭಿವೃದ್ಧಿಗಷ್ಟೇ ಪ್ರಯಾಸ ಪಡುತ್ತಿದ್ದೇವೆ. ಕಾಂಗ್ರೆಸ್ ಅಭಿವೃದ್ಧಿ ವಿಚಾರವನ್ನು ಬಿಟ್ಟು ಬೇರೆ ಎಲ್ಲ ಮಾತುಗಳನ್ನು ಆಡುತ್ತಿದೆ. ರೈತರ ಆತ್ಮಹತ್ಯೆ ಸೇರಿದಂತೆ ಅನಂತ್ ಕುಮಾರ್ ಅವರು ನಿನ್ನೆ ಐದು ಪ್ರಶ್ನೆ ಗಳನ್ನು ಕೇಳಿದ್ದಾರೆ ಅದಕ್ಕೆ ಉತ್ತರ ಕೊಡಲಿ.

    ಮೋದಿ ಅಭ್ಯರ್ಥಿ ಗಳ ಜೊತೆ ಸಂವಾದ ಮಾಡಿರುವುದು ಸ್ಫೂರ್ತಿದಾಯಕ ಹಾಗೂ ಇಂದು ಇತಿಹಾಸ ಸೃಷ್ಟಿಸಿದೆ. ಚುನಾವಣೆಗೆ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಜನರ ಮನಸನ್ನು ಗೆಲ್ಲಿ, ಅಭಿವೃದ್ಧಿ ಕೆಲಸ ಮಾಡಿ ಅನ್ನುವ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ತಿಳಿಸಿದರು.

    ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಕಾರ್ಯಕರ್ತರೆಲ್ಲರೂ ಬಹಳ ಖುಷಿಯಾಗಿದ್ದಾರೆ. ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರ ಮನಸ್ಸನ್ನ ಗೆಲ್ಲುವಂತೆ ಪ್ರೇರೇಪಿಸಿದ್ದಾರೆ. ರಾಜ್ಯದ ರೈತರ ಸಮಸ್ಯೆ, ನಗರಗಳ ಸಮಸ್ಯೆ ಹಾಗೂ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಏನೇ ಸಮಸ್ಯೆ ಇರಲಿ ಅಭಿವೃದ್ಧಿಯೇ ನಮ್ಮ ಗುರಿ ಎಂದು ತಿಳಿಸಿದ್ದಾರೆ ಎಂದರು.

    ಕಾಂಗ್ರೆಸ್ ಬೇರೆ ರಾಜ್ಯಗಳನ್ನ ಉದಾಹರಣೆಯಾಗಿ ತೋರಿಸುತ್ತದೆ. ಬೇರೆ ರಾಜ್ಯಗಳನ್ನ ಬಿಟ್ಟು ಕರ್ನಾಟಕದ ಬಗ್ಗೆ ಮಾತನಾಡಲಿ. ಆದರೆ ನಾವು ನೇರವಾಗಿ ಕನ್ನಡಿಗರ ಬಗ್ಗೆ ಮಾತನಾಡುತ್ತೇವೆ. ಚಾಮುಂಡೇಶ್ವರಿಯಿಂದ ಬಾದಾಮಿಯ ವರೆಗಿನ ಪ್ರವಾಸದ ವೇಳೆ ಜನ ಗೋ ಬಾಕ್ ಸಿದ್ದರಾಮಯ್ಯ ಅಂತ ಹೇಳುತ್ತಾ ಇದ್ದಾರೆ. ನಿನ್ನೆ ಸಿಎಂಗೆ ದಲಿತ ಮತದಾರನೊಬ್ಬ ಬೆವರಿಳಿಸಿದ್ದು ಜನರ ಮನಸ್ಥಿತಿಯನ್ನು ತಿಳಿಸುತ್ತೆ. ಜನರು ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ಹೇಳಿದರು.

    ರಾಜ್ಯದಲ್ಲಿ ಹಲವಡೆ ನಕಲಿ ಮತದಾರರು ಹುಟ್ಟಿಕೊಂಡಿದ್ದಾರೆ. ತುಮಕೂರು ಸೇರಿದಂತೆ ಅನೇಕ ಭಾಗದಲ್ಲಿ ನಕಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ನಾವು ಚಾಮುಂಡೇಶ್ವರಿಯಲ್ಲಿ ಮೈತ್ರಿ ಮಾಡಿಕೊಂಡಿಲ್ಲ. ಲಿಂಗಾಯಿತ ವೀರಶೈವ ಮಠವನ್ನು ಟಾರ್ಗೆಟ್ ಮಾಡಿಕೊಂಡು ಹೋಗಿಲ್ಲ. ಅಲ್ಲೂ ಅಭ್ಯರ್ಥಿ ಇದ್ದಾರೆ. ಎಲ್ಲಾ ಕಡೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇವೆ ಎಂದು ತಿಳಿಸಿದರು.