Tag: Karnataka Election

  • ಬಡತನದಲ್ಲಿ ಉಳಿದವ್ರು ನಿಯತ್ತು ಇಲ್ದೆ ಇರೋರು, ಬಡವರು ಮೋಸಗಾರರು-ಬಿಜೆಪಿ ಕಾರ್ಪೋರೇಟರ್

    ಬಡತನದಲ್ಲಿ ಉಳಿದವ್ರು ನಿಯತ್ತು ಇಲ್ದೆ ಇರೋರು, ಬಡವರು ಮೋಸಗಾರರು-ಬಿಜೆಪಿ ಕಾರ್ಪೋರೇಟರ್

    ಬೆಂಗಳೂರು: ನೀವು ಬಡವರೆಲ್ಲ ಕಾಂಗ್ರೆಸ್‍ಗೆ ವೋಟ್ ಹಾಕ್ತೀರಾ ನಾವು ನಿಮಗೆ ಯಾಕೆ ಅಭಿವೃದ್ಧಿ ಮಾಡಬೇಕು. ನಮ್ಮ ವಾರ್ಡ್ ನಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲೇ ಬಡವರೇ ಮೋಸಗಾರರು. ನಿಯತ್ತೇ ಇಲ್ದೆ ಇರೋರೆಲ್ಲ ಬಡತನದಲ್ಲೇ ಉಳಿದಿದ್ದಾರಾ ಎಂದು ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಎಂಎಲ್‍ಎ ಮುನಿರಾಜ್ ಶಿಷ್ಯ ಮಲ್ಲಸಂದ್ರ ಕಾರ್ಪೊರೇಟರ್ ಲೊಕೇಶ್ ಹೇಳಿದ್ದಾರೆ.

    ಶ್ರೀಮಂತರಿರುವ ಬೂತ್ ಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಅಂತ ಲೊಕೇಶ್ ಲೆಕ್ಕ ಕೊಟ್ಟಿದ್ದಾರೆ. ದಾಸರಹಳ್ಳಿ ಕ್ಷೇತ್ರದ ಕಲ್ಯಾಣ ನಗರ, ಪ್ರಶಾಂತ್ ನಗರ, ಬಿಎಚ್‍ಎಂ ಲೇಔಟ್‍ಗಳಲ್ಲಿ ಆಫೀಷಿಯಲ್‍ಗಳು ಇದ್ದಾರೆ ಯಾರಿಗೂ ದುಡ್ಡು ಕೊಟ್ಟಿಲ್ಲ ಆದ್ರೂ ಆ ಎಲ್ಲ ಬೂತ್‍ಗಳಲ್ಲಿ ಬಿಜೆಪಿ ಲೀಡ್ ಬಂದಿದೆ.

    ಫ್ರೀ ಮನೆ ಕೊಟ್ರು ಕಾಂಗ್ರೆಸ್‍ಗೆ ವೋಟ್ ಹಾಕೋ ನಿಮ್ಗೆ ನಾವ್ಯಾಕೆ ಅಭಿವೃದ್ಧಿ ಮಾಡ್ಬೇಕು ಅನ್ನೋದಾಗಿ ಮತ ನೀಡಿದ ಜನರಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಆ ಆಡಿಯೋ ಪಬ್ಲಿಕ್‍ಟಿವಿಗೆ ಲಭ್ಯವಾಗಿದೆ. ಸ್ಥಳೀಯರು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದು ದೂರು ಸಹ ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಆಡಿಯೋ ಕ್ಲಿಪ್:

    ಲೋಕೇಶ್ – ನಿಮಗೆಲ್ಲ ಮನೆ ಕೊಟ್ಟಿಲ್ಲ ಅಂತಾ ಬೈಯ್ಕೋಬೇಡ ನೀವೆಲ್ಲ ಬಡವರು, ಮನೆಕೊಟ್ರೆ ಯಾರು ವೋಟ್ ಹಾಕಲ್ಲ, ನೀವೇ ಅಲ್ಲ ಯಾರು ವೋಟ್ ಹಾಕಲ್ಲ, ಮೇಲಗಡೆ ಇದ್ದಾರಲ್ಲ ಸ್ಲಂ ಅವರು ಎಲ್ಲಾ ಕಾಂಗ್ರೆಸ್‍ಗೆ ವೋಟ್ ಹಾಕ್ತಾರೆ.. ಬಡವರಿಗೆ ಹೆಲ್ಪ್ ಮಾಡಿದ್ರೆ ಯಾವುದು ಶಾಶ್ವತ ಅಲ್ಲ, ಇವತ್ತಿನ ಪರಿಸ್ಥಿತಿ ಅಲ್ಲಿ, ಮನೆ ಕೊಟ್ರಲ್ಲ ಎಂಎಲ್‍ಎ, ಎಂಎಲ್‍ಎ ಗೊತ್ತಿಟ್ಟುಕೊಂಡು ಅವರಿಗೆ ವೋಟ್ ಹಾಕ್ತಾರೆ
    ಸಾರ್ವಜನಿಕ – ವಿಜಯಲಕ್ಷ್ಮೀ ಲೇಔಟ್‍ನಲ್ಲಿ ಅಂತಾ ಕೆಲಸ ಆಗಿಲ್ಲ
    ಲೋಕೇಶ್ – ವಿಜಯಲಕ್ಷ್ಮೀ ಲೇಔಟ್ ನಿನಗೆ ಬರಲ್ಲ ಬಿಡು, ವಿಜಯಲಕ್ಷ್ಮೀ ಲೇಔಟ್ ಬರಲ್ಲ, ಅಕಡೆ ಬರೋದು, ಏಕಾ ಫ್ರೀ ಮನೆಗಳು ಯಾವುದು ವೋಟ್ ಬರಲ್ಲ,
    ಸಾರ್ವಜನಿಕ – ಬಡವರು, ಬಗ್ಗರು ವೋಟ್ ಹಾಕ್ತಾರೆ..
    ಲೋಕೇಶ್ – ಧರ್ಮಸ್ಥಳ ಮಂಜುನಾಥಸ್ವಾಮಿ ಆಣೆಗೂ ಬಡವ ವೋಟ್ ಹಾಕಲ್ಲ ತಿರುಪತಿ ವೆಂಕಟರಮಣಸ್ವಾಮಿ ಆಣೆಗೂ ಬಡವರಿಂದ ಯಾವುದೇ ವೋಟ್ ಬರಲ್ಲ, ಬಡವನೇ ದೊಡ್ಡ ಮೋಸ ಆಫ್ ಗಾಡ್… ಬಡವನೇ ಮೋಸ.. ಬಡವರು ಕಾಂಗ್ರೆಸ್ ಲೀಡ್, ಕಲ್ಯಾಣನಗರ ಅಫೀಷಿಯಲ್ ಬಿಜೆಪಿ ಲೀಡ್, ನಮ್ ಮನೆ ಮುಂದೇಗಡೆ ಅಫಿಷಿಯಲ್ ಬಿಜೆಪಿ ಲೀಡ್.. ಎಲ್ಲೆಲ್ಲಿ ಬಡವರು ಇದ್ದಾರೋ ಅಲ್ಲೆಲ್ಲ ಕಾಂಗ್ರೆಸ್‍ಗೆ ಕೊಡ್ತಾರೆ.

  • ಎಲೆಕ್ಷನ್ ಹೊತ್ತಲ್ಲಿ ಶಿರಸಿ ಕಾಂಗ್ರೆಸ್ ಅಭ್ಯರ್ಥಿಗೆ ಐಟಿ ಶಾಕ್

    ಎಲೆಕ್ಷನ್ ಹೊತ್ತಲ್ಲಿ ಶಿರಸಿ ಕಾಂಗ್ರೆಸ್ ಅಭ್ಯರ್ಥಿಗೆ ಐಟಿ ಶಾಕ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅವರ ಆಪ್ತರಿಗೆ ಐ.ಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಆರ್.ವಿ ದೇಶಪಾಂಡೆಯವರ ಆಪ್ತ ಹಾಗೂ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೀಮಣ್ಣ ನಾಯ್ಕರವರ ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳವಾರ ರಾತ್ರಿ ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

    ಬೀಮಣ್ಣ ನಾಯ್ಕ್ ರವರು ಕೃಷಿಕರಾಗಿರುವುದಲ್ಲದೇ ಬಾರ್ ಆಂಡ್ ರೆಸ್ಟೋರೆಂಟ್ ಸೇರಿದಂತೆ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದರು. ಇನ್ನು ಕಳೆದ ಮೂರು ದಿನಗಳ ಹಿಂದೆ ಕೂಡ ಐಟಿ ಅಧಿಕಾರಿಗಳು ಆರ್.ವಿ.ದೇಶಪಾಂಡೆಯವರ ಆಪ್ತ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉದ್ಯಮಿ ಸುಭಾಷ್ ಕೂರವೇಕರ್ ಎಂಬವವರ ಮನೆಯ ಮೇಲೆ ಸಹ ಐ.ಟಿ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿದ್ದ ಹಾಗೂ ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಬೀಮಣ್ಣ ನಾಯ್ಕ ರವರ ಮನೆಯ ಮೇಲೆ ದಾಳಿ ನಡೆಸಿರುವುದು ಅನೇಕ ಕುತೂಹಲಕ್ಕೆ ಕಾರಣವಾಗಿದೆ.

  • ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

    ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ್ಬೇಡ-ನಾನ್ ಹೇಳೊದನ್ನ ಮೊದಲು ಕಿವಿಗೆ ಹಾಕ್ಕೊಳ್ಳಿ: ಸಚಿವ ಕೃಷ್ಣಬೈರೇಗೌಡ

    ಬೆಂಗಳೂರು: ಆಗಿರೋದನ್ನು ಕೇಳಮ್ಮ, ಆಗದೇ ಇರೋದನೆಲ್ಲಾ ಕೇಳಬೇಡ. ಆಗಬೇಕಾಗಿರುವ ಕೆಲಸಗಳ ಬಗ್ಗೆ ಮುಂದೆ ಮಾತನಾಡೋಣ ನಾನ್ ಹೇಳದನ್ನ ಮೊದಲು ಕಿವಿಗೆ ಹಾಕ್ಕೊಳಿ ಅಂತಾ ಚುನಾವಣಾ ಪ್ರಚಾರದಲ್ಲಿ ಪ್ರಶ್ನಿಸಿದ ಮಹಿಳೆಗೆ ಸಚಿವ ಕೃಷ್ಣ ಬೈರೇಗೌಡ ಹೇಳಿದ ಮಾತಿದು.

    ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಕೃಷ್ಣ ಬೈರೇಗೌಡ್ರು ಚುನಾವಣಾ ಪ್ರಚಾರದಲ್ಲಿ ಮಾತನಾಡುವಾಗ, ಮತದಾರರು ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಏರಿಯಾದಲ್ಲಿ ಬಸ್ ಬರೋದಿಲ್ಲ ಸಾಹೇಬ್ರೆ ಅಂತ ಪ್ರಶ್ನಿಸಿದ್ದಕ್ಕೆ ಗರಂ ಅದ ಸಚಿವರು, ಆಗಿರೋದನ್ನ ಕೇಳಮ್ಮ ಆಗದೇ ಇರೋದನ್ನೆಲ್ಲ ಕೇಳ ಬೀಡ ನೀನು ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಹಿಳೆಯ ಬಾಯಿ ಮುಚ್ಚಿಸಿದ್ದಾರೆ.

    ಪತಿ ಕೃಷ್ಣ ಬೈರೇಗೌಡ ಪರ ಮತಯಾಚನೆ ಮಾಡಲು ಹೋದ ಸಚಿವರ ಪತ್ನಿ ಮೀನಾಕ್ಷಿ ಕೃಷ್ಣ ಬೈರೇಗೌಡ ಮತದಾರರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮತದಾರರ ಪ್ರಶ್ನೆಯಿಂದ ಕೆರಳಿದ ಮೀನಾಕ್ಷಿ ಕೃಷ್ಣ ಭೈರೇಗೌಡ ಯು ನೋ ರಿಯಾಲಿಟಿ..? ಗೊತ್ತಿಲ್ಲದೆ ಮಾತನಾಡ ಬೇಡಿ ಅಂತ ಗದರಿಸಿ ಮೀನಾಕ್ಷಿ ಕೃಷ್ಣ ಬೈರೇಗೌಡ ಕೋಪಗೊಂಡು ಹೊರ ಬಂದಿದ್ದಾರೆ.

  • 86ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ

    86ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು 86ನೇ ವಂಸತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಕೃಷ್ಣ ಮತ್ತು ಅವರು ಕುಟುಂಬಸ್ಥರು ಮುಂಬೈನಲ್ಲಿದ್ದು ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಮೇ 3 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ ಆಯೋಜನೆಗೊಂಡಿದೆ. ಈ ಸಮಾವೇಶದಲ್ಲಿ ಎಸ್.ಎಂ.ಕೃಷ್ಣ ಅವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬುಧವಾರ ಸಂಜೆ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ.

    ಎಸ್.ಎಂ. ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ಭಾಗಿಯಾಗುವಂತೆ ಬಿಜೆಪಿಯಿಂದ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ ಭಾಷಣವನ್ನು ಕೂಡ ಕೃಷ್ಣ ಅವರು ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತೀಚೆಗೆ ಎಸ್‍.ಎಂ.ಕೆ ಪಾತ್ರ ಕಡೆಗಣನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಎಸ್.ಎಂ.ಕೃಷ್ಣ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡುವಂತೆ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಆದರೆ ಬಿಜೆಪಿ ನಾಯಕರು ಅವರು ಹೇಳಿದ್ದ 6 ಮಂದಿಯ ಪೈಕಿ ಮೂವರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಬಿಜೆಪಿ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಿಗಿಸಿಕೊಳ್ಳುವಂತೆ ಕೃಷ್ಣ ಅವರಿಗೆ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದರು. ಬಿಜೆಪಿ ರಾಜ್ಯ ನಾಯಕರು ನೀಡಿರುವ ಆಹ್ವಾನವನ್ನು ಮನ್ನಿಸಿ ಎಸ್.ಎಂ.ಕೃಷ್ಣ ಪ್ರಚಾರಕ್ಕೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

  • ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಚಾಮರಾಜನಗರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ 15 ನಿಮಿಷ ಚೀಟಿ ಇಟ್ಟುಕೊಳ್ಳದೇ ಭಾಷಣ ಮಾಡಲು ಸಾಧ್ಯವೇ? 5  ಬಾರಿ ವಿಶ್ವೇಶ್ವರಯ್ಯ ಹೆಸರನ್ನು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಇಂದು ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಆಗಮಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕನ್ನಡದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತ್ ಮತಾಕೀ, ಇಲ್ಲಿ ನೆರೆದಿರುವ ಕನ್ನಡ ನಾಡಿನ ಜನರಿಗೆ ನನ್ನ ನಮಸ್ಕಾರ. ಚಾಮರಾಜ ಒಡೆಯರ್ ಮತ್ತು ಡಾ. ರಾಜ್‍ಕುಮಾರ್ ಅವರಿಗೆ ನನ್ನ ನಮಸ್ಕಾರಗಳು ಎಂದರು.

    ಮಾಜಿ ಶಾಸಕ ನಂಜುಂಡಸ್ವಾಮಿ ಪ್ರಧಾನಿಗೆ ಸನ್ಮಾನ ಮಾಡಿದ್ದು, ಗದೆ ನೀಡಿದರು. ಆದರೆ ಮೋದಿ ಶಾಲು, ಹಾರ ಸ್ವೀಕರಿಸಿದ್ದು, ಆದ್ರೆ  ಬೆಳ್ಳಿ ಗದೆಯನ್ನು ನಿರಾಕರಣೆ ಮಾಡಿದ್ದಾರೆ. ಬಿಎಸ್‍ವೈಗೆ ಕಮಲದ ಹೂ ನೀಡಿ ಶುಭ ಕೋರಿದ್ದಾರೆ. ಮಂಟೇಸ್ವಾಮಿ, ಬಿಳಿಗಿರಿ ರಂಗ ಸ್ವಾಮಿ, ಹಿಮವದ್ ಗೋಪಾಲ ಸ್ವಾಮಿ, ಚಾಮರಾಜೇಶ್ವರ ದೇವರಿಗೆ ನಮನ ಅರ್ಪಿಸಿದರು. ಅಷ್ಟೇ ಅಲ್ಲದೇ ಸುತ್ತೂರು ಮಠ, ಕನಕಗಿರಿ, ಸಾಲೂರು ಮಠಕ್ಕೂ ನಮನ ಸಲ್ಲಿಸಿ ಭಾಷಣ ಮಾಡಿದರು. ಮೋದಿ ಭಾಷಣದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    https://www.youtube.com/watch?v=hE7SrGlvAGM

    ಮುಖ್ಯಾಂಶಗಳು:
    * ನೀವು ನಾವು ರಾಜ್ಯಕ್ಕೆ ಏನ್ ಮಾಡಿದ್ದೇವೆ ಅಂತಾ ಕೇಳುತ್ತೀರಾ. ಕರ್ನಾಟಕದಲ್ಲಿ 39 ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. ನಮ್ಮ ಸರಕಾರದ ಯೋಜನೆಯಿಂದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಬಂದಿದೆ.

    * ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತು ನೀವು ಕೇಳಲ್ಲ. ಅದು ಬೇಡ ನಿಮ್ಮ ತಾಯಿಯ ಮಾತನ್ನಾದರೂ ನಡೆಸಿಕೊಡಿ. 2009 ರ ಒಳಗೆ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಕೊಡುತ್ತೇವೆ ಅಂತಾ ಹೇಳಿದರು. ಸ್ವಲ್ಪ ಕೇಳಿಸಿಕೊಳ್ಳಿ ರಾಹುಲ್ ಗಾಂಧಿ.

    * ವಂದೇ ಮಾತರಂ ಗೀತೆಗೆ ಗೌರವ ಕೊಡುವುದು ಗೊತ್ತಿಲ್ಲ. ಈ ದೇಶದ ಇತಿಹಾಸದ ಬಗ್ಗೆ ಗೊತ್ತಿಲ್ಲ. ಅದಿರಲಿ ಅವರ ಪಕ್ಷದ ಸರಕಾರದ ಆಡಳಿತದ ಬಗ್ಗೆಯೂ ಗೊತ್ತಿಲ್ಲ.

    * 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ. ಇದನ್ನು ಕಾಂಗ್ರೆಸ್ ಶ್ಲಾಘಿಸುವುದಿಲ್ಲ. ಅವರ ಕೆಲಸ ಮಾಡುವವರು ಅಲ್ಲ. ಬರೀ ಹೆಸರು ಬೇಕು ಎನ್ನುವ ಜನ. 70 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಮಾಡಿದ್ದೇನು? ಇನ್ನೂ ಯಾಕೆ ಜನ ವಿದ್ಯುತ್ ಸಂಪರ್ಕ ಇಲ್ಲದೆ ಬದುಕುತ್ತಿದ್ದಾರೆ.

    * ದೇಶದ 18 ಸಾವಿರ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ನೀಡಿದೆ. ಇದು ನಮ್ಮ ಕಾರ್ಮಿಕರ ಹೆಮ್ಮೆಯ ಕೆಲಸ. ಅವರನ್ನು ಇಂದು ನೆನಪಿಸಿಕೊಳ್ಳುತ್ತೇನೆ. ಮಣಿಪುರದ ಕೊನೆ ಹಳ್ಳಿಗೆ ವಿದ್ಯುತ್ ತಲುಪಿಸಿದೆ. ದೆಹಲಿಯಲ್ಲಿ ನಾವು ಕೇಳುತ್ತಿದ್ದೇವೆ. ಕರ್ನಾಟದಲ್ಲಿ ಬದಲಾವಣೆ ಅಲೆ ಇದೆ ಅಂತಾ ನಾನು ಇಲ್ಲಿ ಬಂದು ನೋಡಿದ ಮೇಲೆ ಇಲ್ಲಿ ಅಲೆಯ ಬಿರುಗಾಳಿ ಬೀಸುತ್ತಿದೆ.

    * ಇಂದು ಮೇ1 ಕಾರ್ಮಿಕರ ದಿನ. ಕಾರ್ಮಿಕ ವರ್ಗದವರು ದೇಶವನ್ನು ಮುಂದೆ ತರುವಲ್ಲಿ ಬೆವರು ಸುರಿಸಿದ್ದಾರೆ. ಅವರಿಗೆ ಈ ದಿನವನ್ನು ಅರ್ಪಿಸುತ್ತೇನೆ

    * ಚಾಮರಾಜನಗರದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಆದ್ರೆ ಇಲ್ಲಿ ಅಭಿವೃದ್ಧಿ ಕುಂಠಿತವಾಗಿರೋದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆ. ಕೇಂದ್ರ ಸರ್ಕಾರ ಚಾಮರಾಜನಗರಕ್ಕೆ ರೈಲು ಮಂಜೂರು ಮಾಡಿದೆ, ಹಣವನ್ನೂ ಬಿಡುಗಡೆ ಗೊಳಿಸಿದೆ. ಆದರೆ ಇಲ್ಲಿನ ಸರ್ಕಾರ ಭೂಮಿಯನ್ನು ಮಂಜೂರು ಮಾಡಿಲ್ಲ

    * ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಲೋಕಾಯುಕ್ತರಿಗೂ ಸರಿಯಾಗಿ ರಕ್ಷಣೆ ಇಲ್ಲ, ಇನ್ನೂ ಸಾಮಾನ್ಯ ಜನರ ಹೇಗಿರಬೇಕು. ಇದು ಕಾಂಗ್ರೆಸ್ ಆಡಳಿತ ವೈಖರಿ. ಈ ದುಸ್ಥಿತಿಗೆ ಕಾರಣರಾದವರನ್ನು ನಾವು ಬದಲಿಸಬೇಕಿದೆ.

    * ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾಗದೇ ಇರುವ ಯಾವ ರಾಜಕಾರಣಿಯೂ ಈ ಸರ್ಕಾರದಲ್ಲಿಲ್ಲ. ಪ್ರತಿ ಒಬ್ಬರ ಮೇಲೆ ಕನಿಷ್ಟ ಒಂದಾದರೂ ಭ್ರಷ್ಟಾಚಾರದ ಪ್ರಕರಣ ದಾಖಲಾಗಿವೆ.

     

    * ಕರ್ನಾಟಕದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳಿಗೆ 2+1 ಫಾರ್ಮುಲಾ ಇದ್ರೆ, ಇತರೆ ಮಂತ್ರಿಗಳು 1 + 1 ಫಾರ್ಮುಲದಡಿ ಅವರಿಗೆ ಮತ್ತು ಅವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ?.

    * ಮೇ 12 ರಂದು, ಕೇವಲ ಮತ ಚಲಾವಣೆ ಮಾಡುವುದಷ್ಟೇ ಅಲ್ಲ. ಕರ್ನಾಟಕದ ಭವಿಷ್ಯ ಬದಲಾಯಿಸುವ ದಿನವೂ ಹೌದು. ಅಂದಿನ ದಿನ ಬಿಜೆಪಿಗೆ ಮತ ನೀಡಿ ಇಲ್ಲಿನ 10% ಕಮಿಷನ್ ಸರ್ಕಾರವನ್ನು ಕಿತ್ತೆಸೆಯಿರಿ.

    * ಯಾವಾಗಲೋ ಒಮ್ಮೊಮ್ಮೆ ಎಚ್ಚರದಲ್ಲಿರುವ, ಅತೀ ಹೆಚ್ಚು ಸಮಯವನ್ನು ನಿದ್ದೆಯಲ್ಲಿಯೇ ಕಳೆಯುವ ಮುಖ್ಯಮಂತ್ರಿಗಳು, ತಾವು ಸೋಲುವದಲ್ಲದೇ, ತಮ್ಮ ಮಗನನ್ನು ಕೂಡಾ ಬಲಿ ಕೊಡುತ್ತಿದ್ದಾರೆ. ತಾವು 2 ಕ್ಷೇತ್ರದಲ್ಲಿ ಹಾಗೂ ತಮ್ಮ ಮಗನ 1 ಕ್ಷೇತ್ರದಲ್ಲೂ ಸೋಲುವುದು ನಿಶ್ಚಿತ.

    * ರಾಹುಲ್ ಗಾಂಧಿ ಅವರು ತಮಗೆ ಬೇಕಾದ ಭಾಷೆಯಲ್ಲಿ, ಹಿಂದಿ ಆಗಿರಲಿ ಅಥವಾ ತಮ್ಮ ಮಾತಾಜಿ ಅವರ ಹುಟ್ಟು ಭಾಷೆಯಾಗಿರಲಿ, ಕೇವಲ 15 ನಿಮಿಷ ಕರ್ನಾಟಕ ಸರ್ಕಾರದ ಸಾಧನೆಗಳನ್ನು, ಯಾವುದೇ ಕಾಗದ ನೋಡಿಕೊಳ್ಳದೆ ಹೇಳಲಿ, ಅವರ ಸಾಮಥ್ರ್ಯ ಗೊತ್ತಾಗುತ್ತೆ.

    * ಸೋನಿಯ ಗಾಂಧಿ 2005ರಲ್ಲಿ 2009ರ ಒಳಗೆ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ನಾವು ಅಧಿಕಾರಕ್ಕೆ ಬರುವವರೆಗೂ ಇದು ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ.

     

  • ಸುವ್ಯವಸ್ಥಿತ ಚುನಾವಣೆಗಾಗಿ ಕ್ರಿಮಿನಲ್‍ಗಳ ಆಟಕ್ಕೆ ಬ್ರೇಕ್

    ಸುವ್ಯವಸ್ಥಿತ ಚುನಾವಣೆಗಾಗಿ ಕ್ರಿಮಿನಲ್‍ಗಳ ಆಟಕ್ಕೆ ಬ್ರೇಕ್

    ಬೆಂಗಳೂರು: ಕರ್ನಾಟಕದಲ್ಲಿ ಸುವ್ಯವಸ್ಥಿತ ಚುನಾವಣೆಗಾಗಿ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್‍ಗಳ ಮಟ್ಟ ಹಾಕಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಸುವ್ಯವಸ್ಥಿತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾದ ರೌಡಿಗಳ ಮೇಲೆ ಗೂಂಡಾ ಕಾಯಿದೆ ಅಸ್ತ್ರವನ್ನು ಪೊಲೀಸರು ಪ್ರಯೋಗಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕ್ರಿಮಿನಲ್‍ಗಳನ್ನ ಗೂಂಡಾ ಕಾಯ್ದೆ ಅಡಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆಯೇ ರೌಡಿ ಶೀಟರ್ ವೆಂಕಟೇಶ್, ರವಿಕುಮಾರ್ ಅಲಿಯಾಸ್ ಗುಂಡ ರವಿ, ಶಕ್ತಿಪ್ರಸಾದ್ ಅಲಿಯಾಸ್ ಶಕ್ತಿ ಸೇರಿದಂತೆ ಹಲವು ರೌಡಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನು ಹೊರಗಡೆ ಉಳಿದಿರುವ ಪುಡಿರೌಡಿಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆ ಆದೇಶಿಸಿದೆ.

  • ನೀವು ನಿಜಕ್ಕೂ ಕನ್ನಡಿಗರಾ – ಸಿದ್ದರಾಮಯ್ಯರಿಂದ ಮೋದಿಗೆ ಐದು ಸವಾಲು

    ನೀವು ನಿಜಕ್ಕೂ ಕನ್ನಡಿಗರಾ – ಸಿದ್ದರಾಮಯ್ಯರಿಂದ ಮೋದಿಗೆ ಐದು ಸವಾಲು

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಸವಾಲ್ ಹಾಕಿದ್ದಾರೆ.

    `ನೀವು ಕನ್ನಡಿಗರಾ’ ಎಂದು ಪ್ರಶ್ನಿಸಿದ ಸಿಎಂ, ಪ್ರಧಾನಿ ಮೋದಿಗೆ ನೀವು ಕನ್ನಡಿಗರಾದರೆ ಈ ಐದು ಕೆಲಸ ಮಾಡಿ ತೋರಿಸಿ ಅಂತ ಸವಾಲೊಡ್ಡಿದ್ದಾರೆ.

    ಸವಾಲ್‍ಗಳೇನು?:
    1. ನಾಡಭಾಷೆ, ನಾಡಧ್ವಜ, ನಾಡಗೀತೆ ಒಪ್ಪಿಕೊಳ್ಳಿ. ನಾಡಧ್ವಜಕ್ಕೆ ಅಂಗೀಕಾರ ನೀಡಿ.
    2. ಹಿಂದಿ ಹೇರಿಕೆ ಕೈ ಬಿಡಿ, ಕನ್ನಡಕ್ಕೆ ಪ್ರಾಮುಖ್ಯತೆ ಕೊಡಿ.
    3. ಮಹದಾಯಿ ಸಮಸ್ಯೆ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆಯಿರಿ.
    4. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿ.
    5. ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‍ಗೆ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ?

    ಪ್ರಶ್ನೆ:
    1 ಕನ್ನಡಿಗನಾಗುವುದೆಂದರೆ…
    ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು ಗೌರವಿಸುವುದು. ಒಬ್ಬನೇ ಒಬ್ಬ ಮುಸ್ಲಿಮ್, ಕ್ರಿಶ್ಚಿಯನ್‍ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ? ಎಂದು ಮೊದಲನೇ ಸವಾಲ್ ಹಾಕಿದ್ದಾರೆ.

    2. ಕನ್ನಡಿಗನಾಗುವುದೆಂದರೆ….
    ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕನ್ನಡಿಗರಾಗುವಿರಾ?

    3. ಕನ್ನಡಿಗನಾಗುವುದೆಂದರೆ…
    ನೆಲ,ಜಲ,ಭಾಷೆಯ ರಕ್ಷಣೆಗೆ ಬದ್ಧವಾಗಿರುವುದು. ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?

    4. ಕನ್ನಡಿಗನಾಗುವುದೆಂದರೆ…
    ಬಲತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು. ಕನ್ನಡಿಗರಾಗಲು ಸಿದ್ಧರಿದ್ದೀರಾ?

    5. ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ. ಕನ್ನಡಿಗನಾಗುವುದೆಂದರೆ….
    ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ, ನಿಜವಾದ ಕನ್ನಡಿಗರಾಗುವಿರಾ? ಎಂದು ಐದು ಸವಾಲ್ ಹಾಕಿದ್ದು, ಪ್ರಶ್ನೆ ಮಾಡಿದ್ದಾರೆ.

    ಈ ರೀತಿ ಸವಾಲ್ ಹಾಕಿ, ಪ್ರಶ್ನಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರತೀ ಟ್ವೀಟ್ ನಲ್ಲೂ #AnswerMadiModi ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  • ಬೆಳ್ಳಂಬೆಳಗ್ಗೆ 85 ಲಕ್ಷ ರೂ. ಹಣ ಜಪ್ತಿ ಮಾಡಿದ ಐಟಿ ಅಧಿಕಾರಿಗಳು

    ಬೆಳ್ಳಂಬೆಳಗ್ಗೆ 85 ಲಕ್ಷ ರೂ. ಹಣ ಜಪ್ತಿ ಮಾಡಿದ ಐಟಿ ಅಧಿಕಾರಿಗಳು

    ಬೆಂಗಳೂರು: ದಾಖಲೆಯಿಲ್ಲದೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ಹಣವನ್ನ ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರು ಹೊರವಲಯ ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದ ಜಾಸ್ ಟೋಲ್ ಬಳಿ ನಡೆದಿದ್ದು, ಇಂದು ಬೆಳ್ಳಂಬೆಳಗ್ಗೆ ಖಚಿತ ಮಾಹಿತಿಯ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಗ ಮಹಿಂದ್ರಾ ಎಕ್ಸ್ ಯುವಿ ಕಾರಿನಲ್ಲಿದ್ದ ಬರೋಬ್ಬರಿ 85 ಲಕ್ಷ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ, ಶಿವಮೊಗ್ಗ ಜಿಲ್ಲೆಗೆ ಈ ಕಾರು ಹೋಗುತ್ತಿತ್ತು ಎನ್ನಲಾಗಿದೆ. ಆದಾಯ ತೆರಿಗೆಗೆ ವಂಚಿಸಿ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಕಾರು ಹಾಗೂ ಚಾಲಕನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.