Tag: Karnataka Election

  • ರಂಗೋಲಿ ಮೂಲಕ ಮತದಾನದ ಜಾಗೃತಿ

    ರಂಗೋಲಿ ಮೂಲಕ ಮತದಾನದ ಜಾಗೃತಿ

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿವಿಧ ರೀತಿಯಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಯಾದಗಿರಿ ಜಿಲ್ಲಾಡಳಿತವು ರಂಗೋಲಿ ಹಾಕಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದೆ.

    ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾಡಳಿತವು ವಿವಿಧ ತರದ ರಂಗೋಲಿ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಚಿತ್ತಾರದ ರಂಗೋಲಿ ಬಿಡಿಸಿ ಸಂಭ್ರಮಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. ಈ ಮೂಲಕ ಪ್ರತಿಯೊಬ್ಬರು ಮತದಾನ ಮಾಡುವುದು ಅತ್ಯವಶ್ಯಕ. ಮತದಾನ ನಮ್ಮ ಹಕ್ಕು ಎಂಬ ಬರಹ ಕಾಣುತ್ತಿತ್ತು.

  • ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

    ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

    ಬೆಂಗಳೂರು: ವೋಟ್ ಹಾಕಿ ಅಂತ ವಿಧ ವಿಧವಾಗಿ ಪ್ರಚಾರ ಮಾಡಿದರೂ ಜನ ವೋಟ್ ಹಾಕೋದೆ ಇಲ್ಲ. ಮತದಾನಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಜನ ವರ್ತನೆ ಮಾಡುತ್ತಾರೆ. ಆದರೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಹೋಟೆಲ್ ಮತದಾನದ ದಿನ ಕಾಫಿ ಫ್ರೀ ಅಂತ ಬೋರ್ಡ್ ಹಾಕಿದೆ.

    ಬೆಂಗಳೂರಿನ ಹೃದಯ ಭಾಗ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ಚುನಾವಣೆಯಲ್ಲಿ ಎಲ್ಲರೂ ತಮ್ಮ ಹಕ್ಕನ್ನ ಚಲಾಯಿಸಲಿ ಅನ್ನೊ ದೃಷ್ಟಿಯಿಂದ ಮತದಾನದ ದಿನ ಫ್ರೀ ಕಾಫಿ ನೀಡಲು ನಿರ್ಧರಿಸಿದೆ.

    ವೋಟ್ ಹಾಕಿ ಬಂದು ಶಾಯಿಯನ್ನ ತೊರಿಸಿ ಫ್ರೀ ಕಾಫಿ ಕುಡಿಬಹುದು. ಹೋಟೆಲ್ ಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಚರ್ಚೆ ಮಾಡುತ್ತಾರೆ. ಆದರೆ ವೋಟ್ ಹಾಕುವ ವಿಚಾರ ಬಂದ್ರೆ ಯಾರ್ ಹಾಕುತ್ತಾರೆ ಹೋಗಿ ಅಂತಾರೆ. ಅದಕ್ಕೆ ಮತದಾನದ ಜಾಗೃತಿ ಮೂಡಿಸಲು ಈ ರೀತಿ ಕಾಫಿ ಫ್ರೀ ಅಂತ ಅರಿವು ಮೂಡಿಸುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರಾದ ಕೃಷ್ಣ ಕುಮಾರ್ ಹೇಳಿದ್ದಾರೆ.

    ಈ ಬಗ್ಗೆ ಗ್ರಾಹಕರು ಖುಷಿ ವ್ಯಕ್ತಪಡಿಸಿದ್ದು, ಹೋಟೆಲ್ ನಲ್ಲಿ ಈ ರೀತಿ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು, ಈ ಹೋಟೆಲಿಗೆ ನಾನು ರೆಗ್ಯುಲರ್ ಆಗಿ ಬರುತ್ತಿದ್ದೆ. ಈಗ ವೋಟ್ ಹಾಕಿ ಫ್ಯಾಮಿಲಿ ಸಮೇತ ಬಂದು ಫ್ರೀ ಕಾಫಿ ಕುಡಿರಿ ಅಂತ ಮಾಲೀಕರು ಹೇಳುತ್ತಿದ್ದಾರೆ ಎಂದು ಗ್ರಾಹಕರು ಹೇಳಿದ್ದಾರೆ.

  • ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ಚಿತ್ರದುರ್ಗ: ನಟ ಕಿಚ್ಚ ಸುದೀಪ್ ಹಾಗೂ ಗಣಿದಣಿ ಜನಾರ್ದನ ರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ನಾಯಕನಟ್ಟಿಯಲ್ಲಿ ನಟ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗಾಗಿ ಆಗಮಿಸಿದ್ದಕ್ಕಾಗಿ ಆಕ್ರೋಶಗೊಂಡ ತಿಪ್ಪೇಸ್ವಾಮಿ, ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು. ನಾನು ಇವರಿಗಿಂತ ಮೊದಲೇ ಬಣ್ಣ ಹಚ್ಚಿದ ಕಲಾವಿದ. ಹೀಗಾಗಿ ಇವರೆಲ್ಲಾ ಬಂದು ಪ್ರಚಾರ ಮಾಡಿದರೆ ನಮ್ ಜನ ಮರಳಾಗಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀ ರಾಮುಲು ಈ ಗೆಲ್ಲಲ್ಲ. ಅಂತ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ.

    ಬಳ್ಳಾರಿಯವರ ಅಟ ಇಲ್ಲಿ ನಡೆಯಲ್ಲ. ಆ ಜನಾರ್ದನ ರೆಡ್ಡಿಗೆ ನಾಚಿಕೆಯಾಗಬೇಕು. ಅವರಿಗೆ ಬಿಜೆಪಿಯೊಂದಿಗೆ ಬರಬೇಡ ಅಂದರೂ ನಾಚಿಕೆ ಇಲ್ಲದೇ ಬರುತ್ತಾರೆ. ಕದ್ದು ಮುಚ್ಚಿ ಪ್ರಚಾರ ಮಾಡುತ್ತಾರೆ. ನಾಚಿಕೆಯಾಗಲ್ವಾ ಅವರಿಗೆ ಅಂತ ಪ್ರಶ್ನಿಸಿದ್ರು.

    ತಿಪ್ಪೇಸ್ವಾಮಿ ಒಲವು ಸಿಎಂ ಸಿದ್ದರಾಮಯ್ಯ ಕಡೆ ವಾಲಿದ್ದೂ, ಬದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಶ್ರೀರಾಮುಲು ಸೋಲುತ್ತಾರೆ. ಆದರೆ ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂದಿದ್ದ ನಟ ಸುದೀಪ್, ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾಕೆ ಬಂದ್ರು ಅಂತ ಕಿಡಿಕಾರಿದ್ದಾರೆ.

    ಜೊತೆಗೆ ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಸುದೀಪ್ ರೋಡ್ ಶೋ ವೇಳೆಯೇ ದೇಗುಲದ ಆವರಣದಲ್ಲಿ ಬಂಡಾಯ ಶಾಸಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದೂ, ಅವರ ಗುರುತಾದ ನೂರಾರು ಟ್ರಾಕ್ಟರ್ ಗಳಲ್ಲಿ ಅಪಾರ ಜನಸ್ತೋಮವನ್ನು ಸೇರಿಸಿ ಬಹಿರಂಗ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಆನಂದ್‍ಸಿಂಗ್ ಮತಯಾಚನೆ ವೇಳೆ ಮೋದಿ ಘೋಷಣೆ- ಸಿಎಂ ಸಂಸದೀಯ ಕಾರ್ಯದರ್ಶಿಗೆ ಪೊರಕೆ ತೋರಿಸಿದ ಮಹಿಳೆಯರು

    ಆನಂದ್‍ಸಿಂಗ್ ಮತಯಾಚನೆ ವೇಳೆ ಮೋದಿ ಘೋಷಣೆ- ಸಿಎಂ ಸಂಸದೀಯ ಕಾರ್ಯದರ್ಶಿಗೆ ಪೊರಕೆ ತೋರಿಸಿದ ಮಹಿಳೆಯರು

    ಬಳ್ಳಾರಿ: ಕ್ಷೇತ್ರದಲ್ಲಿ ಮತದಾರರ ಆಕ್ರೋಶ ಭುಗಿಲೆದ್ದಿದ್ದು, ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಇಬ್ಬರು ಶಾಸಕರಿಗೆ ಮತದಾರರು ಇಂದು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.

    ಹೊಸಪೇಟೆಯ ಕೌಲಪೇಟೆ ಯಲ್ಲಿ ಮತಯಾಚನೆಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿ ಆನಂದ್‍ಸಿಂಗ್ ಅವರಿಗೆ ಮತಯಾಚನೆಗೂ ಅವಕಾಶ ಕೊಡದೇ ಮರಳಿ ಕಳಿಸಿದರು. ಇನ್ನೂ ಚಿಕ್ಕಾಅಂತಾಪುರರಲ್ಲಿ ಪ್ರಚಾರಕ್ಕೆ ತೆರಳಿದ ಸಂಡೂರು ಶಾಸಕ, ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ಅವರಿಗೆ ಮಹಿಳೆಯರು ಪೊರಕೆ ತೋರಿಸಿ ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ಬಿಸಿ ಮುಟ್ಟಿಸಿದರು.

    ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆನಂದ್‍ಸಿಂಗ್ ಅವರು ಕ್ಷೇತ್ರದ ಕೌಲಪೇಟೆಯ ಕುರುಬರ ಓಣಿಯಲ್ಲಿ ಮತಯಾಚನೆಗೆ ತೆರಳಿದ್ದ ವೇಳೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನಿಮ್ಮ ಹತ್ತು ವರ್ಷಗಳ ಅಧಿಕಾರ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದರು ಪ್ರಶ್ನಿಸಿದರು. ಅಲ್ಲದೇ ಆನಂದಸಿಂಗ್ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದರು. ಇದರಿಂದ ಮುಜಗರಕ್ಕೆ ಒಳಗಾದ ಆನಂದ್‍ಸಿಂಗ್ ವಾಪಸ್ ಮರಳಿದರು.

    ಸಂಡೂರಿನ ಚಿಕ್ಕಅಂತಾಪುರದಲ್ಲಿ ಕಾರ್ಮಿಕನೊಬ್ಬನ ಸಾವಿನ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಕೇಸ್ ದಾಖಲಿಸಿದ ವೇಳೆ ಪ್ರಶ್ನೆ ಮಾಡದ ಶಾಸಕರು ಇದೀಗ ಮತ ಕೇಳಲು ಬಂದಿದ್ದೀರಾ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡರು, ಅಲ್ಲದೇ ಕೆಲ ಮಹಿಳೆಯರು ಪೊರಕೆ ಪ್ರದರ್ಶನ ಮಾಡಿದರು. ಈ ವೇಳೆ ಗ್ರಾಮಸ್ಥರು ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ಜಟಾಪಟಿ ಸಹ ನಡೆಯಿತು.

  • ಮಾನಪ್ಪ ವಜ್ಜಲ್ ಪರ ಪ್ರಚಾರ – ಬದಾಮಿಗೆ ನಾನು ಹೋಗಲ್ಲ: ನಟ ಯಶ್

    ಮಾನಪ್ಪ ವಜ್ಜಲ್ ಪರ ಪ್ರಚಾರ – ಬದಾಮಿಗೆ ನಾನು ಹೋಗಲ್ಲ: ನಟ ಯಶ್

    ರಾಯಚೂರು: ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ನಟ ಯಶ್ ಭರ್ಜರಿ ಪ್ರಚಾರ ನಡೆಸಿದ್ದಾರೆ.

    ಲಿಂಗಸುಗೂರು ಹಾಗೂ ಮುದಗಲ್ ನಲ್ಲಿ ಯಶ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ ನನ್ನ ಸ್ನೇಹಿತರು, ಅವರ ವ್ಯಕ್ತಿತ್ವಕ್ಕೆ ಬಂದು ಪ್ರಚಾರ ಮಾಡುತ್ತಿದ್ದೇನೆ. ಆದರೆ ಬದಾಮಿಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

    ನಾನು ನನ್ನ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇನೆ. ಈ ಭಾಗದಲ್ಲಿ ಯಶೋಮಾರ್ಗದ ಕೆಲಸ ವಾಗಬೇಕಾಗಿದೆ. ಅದಕ್ಕಾಗಿ ನಾನು ಸ್ನೇಹಿತರ ಪರ ಕೆಲಸ ಮಾಡುತ್ತಿದ್ದೇನೆ. ನಾನು ಜಾತಿ, ಧರ್ಮ ನೋಡಿ ಪ್ರಚಾರ ಮಾಡುವುದಿಲ್ಲ. ನಟರು ಸಮಾಜಕ್ಕೆ ಏನೂ ಮಾಡಲ್ಲ ಎಂದು ಜನ ಹೇಳುತ್ತಿದ್ದರು ಹೀಗಾಗಿ ಸುಮ್ಮನೆ ಇದ್ದವರನ್ನ ಹೋರಾಟ ಹಾಗೂ ಸಮಾಜ ಕೆಲಸಕ್ಕೆ ಹಚ್ಚಿದ್ದಾರೆ. ರಾಜಕೀಯಕ್ಕೆ ಮೊದಲಿನಿಂದಲೂ ನನಗೆ ಸಂಪರ್ಕವಿದೆ. ಯಶೋಮಾರ್ಗದಿಂದ ಅದನ್ನ ಮಾಡಿ ತೋರಿಸುತ್ತೇನೆ ಎಂದರು.

    ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೋಗುವುದಿಲ್ಲ. ಸ್ನೇಹಿತರು ಕರೆದರೆ ಮಾತ್ರ ಹೋಗುತ್ತೇನೆ. ಬದಾಮಿಗೆ ನಾನು ಹೋಗುವುದಿಲ್ಲ. ನಾನು ಬಂದ ತಕ್ಷಣ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವುದಿಲ್ಲ. ಪ್ರೀತಿ ವಿಶ್ವಾಸದಿಂದ ಇದ್ದವರಿಗೆ ಕೆಲಸ ಮಾಡುತ್ತೇನೆ ಅಂತ ನಟ ಯಶ್ ಹೇಳಿದರು.

  • ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ರಾಜು ಕಾಗೆ ಅವರ ಭಾಷಣದ ಮಧ್ಯೆ ಗ್ರಾಮಸ್ಥರು ಕಾಂಗ್ರೆಸ್‍ಗೆ ಜೈ ಅಂತಾ ಘೋಷಣೆ ಕೂಗಿದ್ದಾರೆ.

    ರಾಜು ಕಾಗೆ ಅವರು ಜಿಲ್ಲೆಯ ಅಥಣಿ ತಾಲೂಕಿನ ಶಿರೂರು ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ ಮುಜುಗರಕ್ಕೆ ಒಳಗಾಗಿದ್ದಾರೆ. ಶಾಸಕರು ಭಾಷಣ ಮಾಡುತ್ತಿದ್ದಂತೆ ಕೆಲ ಗ್ರಾಮುಸ್ಥರು ಅಡ್ಡಿಪಡಿಸಿದ್ರು. ನಮ್ಮ ಊರಿಗೆ ಯಾಕೆ ಬಂದಿದ್ದೀರಿ? 15 ವರ್ಷಗಳಲ್ಲಿ ನಮ್ಮೂರಲ್ಲಿ ಏನು ಮಾಡಿದ್ರಿ ಅಂತಾ ರಾಜು ಕಾಗ ಅವ್ರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ರು.

    ಒಂದು ಕಡೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದರೆ, ಕೆಲ ಬಿಜೆಪಿಗೆ ಜೈ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಕೂಡಲೇ ಪ್ರಶ್ನೆ ಕೇಳುತ್ತಿದ್ದ ಗ್ರಾಮಸ್ಥರು ಅವರ ವಿರುದ್ಧವಾಗಿ ಕಾಂಗ್ರೆಸ್‍ಗೆ ಜೈ ಅಂತಾ ಕೂಗುವ ಮೂಲಕ ತಿರುಗೇಟು ನೀಡಿದ್ರು.

    ಇದೇ ಮೊದಲೇನಲ್ಲ: ನಾಲ್ಕು ದಿನಗಳ ಹಿಂದೆ ಚಮಕೇರಿ ಗ್ರಾಮಕ್ಕೆ ತೆರಳಿದಾಗಲೂ ರಾಜು ಕಾಗೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನಾಲ್ಕು ಬಾರಿ ಕಾಗವಾಡ ಕ್ಷೇತ್ರದಿಂದ ಶಾಸಕರಾದ್ರೂ ಗ್ರಾಮಗಳ ಅಭಿವೃದ್ಧಿ ಆಗಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

    ರಾಜು ಕಾಗೆ ಒಟ್ಟು ನಾಲ್ಕು ಬಾರಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2000ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಯು ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು. ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದ ರಾಜು ಕಾಗೆ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಶಾಸಕರಾಗಿದ್ದಾರೆ.

  • ಕೂಡಲ ಸಂಗಮ, ಕುಂಡಾಲಾ ಸಂಗಮವಲ್ಲ: ಮೋದಿಗೆ ಸಿಎಂ ಕನ್ನಡ ಕ್ಲಾಸ್- ವಿಡಿಯೋ

    ಕೂಡಲ ಸಂಗಮ, ಕುಂಡಾಲಾ ಸಂಗಮವಲ್ಲ: ಮೋದಿಗೆ ಸಿಎಂ ಕನ್ನಡ ಕ್ಲಾಸ್- ವಿಡಿಯೋ

    ಬೆಂಗಳೂರು: ಪ್ರಧಾನಿ ಮೋದಿಯವರು ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತಮ್ಮ ಭಾಷಣದ ಆರಂಭದಲ್ಲಿ ಕನ್ನಡ ಮಾತಾಡುತ್ತಾರೆ. ಮೋದಿಯವರ ಕನ್ನಡ ಮಾತನಾಡುವುದನ್ನೇ ಎನ್‍ಕ್ಯಾಶ್ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಾಲೆಳೆದಿದ್ದಾರೆ.

    ಕೂಡಲ ಸಂಗಮ ಪದದ ಉಚ್ಚಾರಣೆಯನ್ನು ತಪ್ಪಾಗಿ ಉಚ್ಛರಿಸಿದಕ್ಕೆ ಸಿಎಂ ಸಿದ್ದರಾಮಯ್ಯ ನೇರವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೂಡಲ ಸಂಗಮವನ್ನು ಕುಂಡಾಲಾ ಸಂಗಮ ಎಂದು ಬಸವಣ್ಣ ಮತ್ತು ಲಿಂಗಾಯತರಿಗೆ ಅಪಮಾನ ಮಾಡಿದ ಮೋದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಈ ಬಗ್ಗೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ. “ಶ್ರೀ ನರೇಂದ್ರ ಮೋದಿ ಅವರೆ, ಇದು ಕೂಡಲ ಸಂಗಮ, ಕುಂಡಲ ಸಂಗಮವಲ್ಲ. ಕನ್ನಡ ಪದವನ್ನು ತಪ್ಪಾಗಿ ಉಚ್ಚರಿಸುವುದು ದೊಡ್ಡ ತಪ್ಪು. ಕನ್ನಡಿಗರು ಉದಾತ್ತ ಮನಸ್ಸಿನವರು. ಅವರು ನಿಮ್ಮನ್ನು ಕ್ಷಮಿಸುತ್ತಿದ್ದಾರೆ. ಆದರೆ ನೀವು ಕನ್ನಡಿಗರ ಮನಸ್ಸನ್ನು ಹೊಂದಿಲ್ಲ ಎಂದು ವಿಷಾದಿಸುತ್ತೇನೆ. ಇತರರ ಭಾಷಣ ಮಾಡುವಾಗ ನೀವು ನಗುವುದು” ಎಂದು ಟ್ವೀಟ್ ಮಾಡಿದ್ದಾರೆ.

  • ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ

    ಪ್ರಧಾನಿ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟ್ ಹಾಕ್ತೀನಿ- ಚಂದ್ರಕಾಂತ ಮೆಹರವಾಡಿ

    ಹುಬ್ಬಳ್ಳಿ: ನಾನು ಈ ಬಾರಿ ವೋಟು ಹಾಕೋದು ಬೇಡ ಅಂತ ತೀರ್ಮಾನ ಮಾಡಿದ್ದೆ, ಆದರೆ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟು ಹಾಕ್ತೀನಿ ಎಂದು ಚಂದ್ರಕಾಂತ ಮೆಹರವಾಡಿ ಹೇಳಿದ್ದಾರೆ.

    ಭಾನುವಾರ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಕಾಂತ ಮೆಹರವಾಡಿ ಹೆಸರನ್ನ ಪ್ರಸ್ತಾಪಿಸಿ, ಹುಬ್ಬಳ್ಳಿಗೂ ನನಗೂ ಅವಿನಾಭಾವ ಸಂಬಂಧ ಇದೆ ಅಂತ ಹೇಳಿದ್ದರು. ಗುಜರಾತ್ ಸಿಎಂ ಆಗಿದ್ದಾಗ ಚಂದ್ರಕಾಂತ ನನ್ನನ್ನು ಭೇಟಿಯಾಗಿದ್ದರು. ಅವರ ಪತ್ನಿ ಗರ್ಭಿಣಿ ಕಷ್ಟದಲ್ಲಿದ್ದಾರೆ ಅಂತ ತಿಳಿದು ಸಹಾಯ ಮಾಡಿದೆ. ಇದೀಗ ಆ ಕುಟುಂಬ ನೆಮ್ಮದಿಯಿಂದ ಜೀವನ ಮಾಡುತ್ತಿದೆ ಎಂದು ಪ್ರಸ್ತಾಪ ಮಾಡಿದ್ದರು.

    ಈ ಬಗ್ಗೆ ಚಂದ್ರಕಾಂತ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೋದಿಯನ್ನು ಹೊಗಳಿ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಟೈಲರಿಂಗ್ ಮಷಿನ್ ಕೂಡ ಇಲ್ಲ. ಇಲ್ಲಿನ ಜನಪ್ರತಿನಿಧಿಗಳು ಬರೀ ಸುಳ್ಳು ಭರವಸೆ ಕೊಟ್ಟರು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

    ಯಾರು ಈ ಚಂದ್ರಕಾಂತ್ ಮೆಹರವಾಡಿ?
    ಚಂದ್ರಕಾಂತ್ ಮೆಹರವಾಡಿ ಹುಬ್ಬಳ್ಳಿಯ. ನೇಕಾರ ನಗರ ನಿವಾಸಿ. 20 ವರ್ಷ ಹಿಂದೆ ದುಡಿಮೆಗಾಗಿ ಪತ್ನಿ ಶೋಭಾ ಜೊತೆ ಗುಜರಾತ್ ಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಶೋಭಾ ಅವರನ್ನ ಆಸ್ಪತ್ರೆಗೆ ದಾಖಲಿಸಿದಾಗ ಹೆಣ್ಣು ಮಗು ಜನನವಾಯಿತು.

    ಆಗ ಆಸ್ಪತ್ರೆ ಬಿಲ್ ಕಟ್ಟುವಷ್ಟು ಹಣ ಚಂದ್ರಕಾಂತ್ ಅವರ ಬಳಿ ಇರಲಿಲ್ಲ. ಆಗ ಸೆಕ್ಯೂರಿಟಿ ಸೂಚನೆ ಮೇರೆಗೆ ಮೋದಿ ಅವರ ಮನೆಗೆ ಚಂದ್ರಕಾಂತ್ ಹೋದಾಗ ಗುಜರಾತ್ ಸಿಎಂ ಆಗಿದ್ದ ಮೋದಿ ಮನೆಯಲ್ಲಿದ್ದರು. ಮೋದಿ ಬಳಿ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟ ಚಂದ್ರಕಾಂತ್ ಅವರಿಗೆ ಒಂದು ಪತ್ರವನ್ನ ಮೋದಿ ನೀಡುತ್ತಾರೆ. ಆ ಪತ್ರದ ಸಹಾಯದಿಂದ ಉಚಿತವಾಗಿ ಆಸ್ಪತ್ರೆಯ ಎಲ್ಲಾ ಸೌಲಭ್ಯ ಸಿಕ್ಕಿತ್ತು.

  • ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

    ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

    ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಎಲ್ಲ ಪಕ್ಷಗಳು ತಾವು ಗೆದ್ದರೆ ತಮ್ಮ ಮುಂದಿನ ಐದು ವರ್ಷಗಳಲ್ಲಿ ಮಾಡುವ ಕೆಲಸಗಳನ್ನು ಪ್ರಣಾಳಿಕೆಯ ರೂಪದಲ್ಲಿ ನೀಡುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದವು. ಇಂದು ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

    ನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದ್ರು. ‘ಜನತಾ ಪ್ರಣಾಳಿಕೆ, ಜನರದ್ದೇ ಆಳ್ವಿಕೆ’ ಅನ್ನೋ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಚುನಾವಣೆಯಲ್ಲಿ ಗೆದ್ದ ನಂತರವೂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮತ್ತೆ ಪ್ರಾರಂಭಿಸಲಾಗುವುದು ಅಂತಾ ತಿಳಿಸಿದ್ದಾರೆ.

    ಪ್ರಣಾಳಿಕೆಯ ಪ್ರಮುಖಾಂಶಗಳು:
    – ಡಾ.ವಿಷ್ಣುವರ್ಧನ್ ಸ್ಥಳ ವಿವಾದ ಬಗೆಹರಿಸಲು ಒತ್ತು
    – ರೈತರ ರಾಷ್ಟ್ರೀಕೃತ, ಸಹಕಾರಿ ಸಂಘಗಳ ಸಾಲ ಸಂಪೂರ್ಣ ಮನ್ನಾ
    – 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 6 ಸಾವಿರ ಮಾಸಾಶನ
    – ಲೋಕಾಯುಕ್ತ ಬಲವರ್ಧನೆ, ಎಸಿಬಿ ನಿರ್ಮೂಲನೆ
    – ಲೋಕಾಯುಕ್ತಕ್ಕೆ ಪ್ರತ್ಯೇಕ ಪೊಲೀಸ್ ವ್ಯವಸ್ಥೆ
    – ಮಾಗಡಿಯಲ್ಲಿ ಕೆಂಪೇಗೌಡ ವಿವಿ ಸ್ಥಾಪನೆ
    – ಗ್ರಾಮೀಣ ಪ್ರದೇಶ ಯುವಕರಿಗೆ ಮಾಸಿಕ 7-8 ಸಾವಿರ ವೇತನ ನೀಡಿ ಸರ್ಕಾರಿ ಜಮೀನುಗಳಲ್ಲಿ ಅರಣ್ಯ ಬೆಳೆಸುವ ಜವಾಬ್ದಾರಿ
    – ಬಡ ಮಹಿಳೆಯರಿಗೆ 2 ಸಾವಿರ ಕುಟುಂಬ ನಿರ್ವಹಣೆ ವೆಚ್ಚ ನೀಡಿಕೆ
    – ರೈತರ ಸಮಸ್ಯೆ ಆಲಿಸಲು ಪ್ರತಿ ತಿಂಗಳು ವಿಧಾನಸೌಧದಲ್ಲಿ ರೈತರ ಜೊತೆ ಸಂವಾದ
    – ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೂ ಉಚಿತ ಶಿಕ್ಷಣ
    – ರೇಷ್ಮೆ, ಕಬ್ಬು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಾರರ ಅಭಿವೃದ್ಧಿಗೆ ಯೋಜನೆ
    – ಉದ್ಯೋಗ ತರಬೇತಿ ನೀಡಲು ವಿಶೇಷ ವಿಶ್ವವಿದ್ಯಾಲಯ ಸ್ಥಾಪನೆ
    – ವಕೀಲರ ಸಂಘಕ್ಕೆ 100 ಕೋಟಿ ಬಿಡುಗಡೆ. ವಕೀಲರಿಗೆ 5 ಸಾವಿರ ಸ್ಟೇ ಫಂಡ್
    – ಸರ್ಕಾರಿ ಶಾಲೆಗಳು ಮೇಲ್ದರ್ಜೆಗೆ, ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿಗೆ ಮುಕ್ತಿ

     

  • ಅಣ್ಣನ ಪರ ಮತ ಕೇಳಲು ಬಂದ ಕಾಂಗ್ರೆಸ್ ಅಭ್ಯರ್ಥಿ ಸಹೋದರನಿಗೆ ಯುವಕರು ತರಾಟೆ

    ಅಣ್ಣನ ಪರ ಮತ ಕೇಳಲು ಬಂದ ಕಾಂಗ್ರೆಸ್ ಅಭ್ಯರ್ಥಿ ಸಹೋದರನಿಗೆ ಯುವಕರು ತರಾಟೆ

    ಮಂಡ್ಯ: ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ರಮೇಶ್‍ಬಾಬು ಬಂಡಿಸಿದ್ದೇಗೌಡ ಪರ ಮತ ಕೇಳಲು ಬಂದ ಅವರ ಸಹೋದರ ಹರ್ಷ ಬಂಡಿಸಿದ್ದೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದಲ್ಲಿ ಹರ್ಷ ಬಂಡಿಸಿದ್ದೇಗೌಡ ಅವರಿಗೆ, ದೇವೇಗೌಡರ ಮನೆಯವರು ನಿಮಗೆ ಏನು ಅನ್ಯಾಯ ಮಾಡಿದ್ದರು ಎಂದು ಯುವಕರು ಪ್ರಶ್ನೆ ಕೇಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ದೂರು

    ಜೆಡಿಎಸ್ ಪಕ್ಷದಿಂದ ಸತತ ಎರಡು ಬಾರಿ ಗೆದ್ದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ರಮೇಶ್‍ಬಾಬು ಬಂಡಿಸಿದ್ದೇಗೌಡ ಚುನಾವಣೆಗೆ ಕೆಲವೇ ದಿನಗಳಿರುವಂತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

    ಹೀಗಾಗಿ ರಮೇಶ್‍ಬಾಬು ಬಂಡಿಸಿದ್ದೇಗೌಡ ಪರ ಮತ ಕೇಳಲು ಅವರ ಸಹೋದರ ಹರ್ಷ ಬಂಡಿಸಿದ್ದೇಗೌಡ ಮೇಳಾಪುರ ಗ್ರಾಮಕ್ಕೆ ಹೋಗಿದ್ದಾರೆ. ಆದರೆ ಕಳೆದ ಬಾರಿ ರಮೇಶ್‍ಬಾಬು ಬಂಡಿಸಿದ್ದೇಗೌಡ ಪರ ಕೆಲಸ ಮಾಡಿದ್ದ ಯುವಕರು, ಸಹೋದರನ ಪರ ಮತ ಕೇಳಲು ಬಂದ ಹರ್ಷ ಬಂಡಿಸಿದ್ದೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ದೇವೇಗೌಡರ ಮನೆಯವರು ಏನ್ ಅನ್ಯಾಯ ಮಾಡಿದ್ರು ನಿಮಗೆ. ನಾವು ಹಿಂದಿನಿಂದಲೂ ಪಕ್ಕಾ ಜೆಡಿಎಸ್. ಕಳೆದ ಬಾರಿ ಬಾಬಣ್ಣನಿಗೆ ಓಟ್ ಹಾಕಿದ್ದೇವೆ. ಈ ಸಲ ನಮ್ಮ ಪಕ್ಷ ಬಿಟ್ಟು ಹೋಗಲು ಏನು ಕಾರಣ. ಏನು ಅನ್ಯಾಯ ಮಾಡಿದ್ರು ನಮ್ಮ ದೇವೇಗೌಡ್ರು ಎಂದು ಯುವಕರು ಕಿಡಿಕಾರಿದ್ದಾರೆ.

    ಯುವಕರ ಮಾತಿಗೆ ಹರ್ಷ ಬಂಡಿಸಿದ್ದೇಗೌಡ ಉತ್ತರ ನೀಡಿದ್ದು, ದೇವೇಗೌಡರ ಮನೆಯವರ ತಾತ್ಸಾರ ಮನೋಭಾವ, ಚುಚ್ಚು ನುಡಿಗಳು ಪಕ್ಷ ಬಿಡಲು ಕಾರಣ ಎಂದಿದ್ದಾರೆ. ಆದರೆ ಅವರ ಮಾತನ್ನು ಒಪ್ಪದ ಯುವಕರು ದೇವೇಗೌಡರು, ಕುಮಾರಸ್ವಾಮಿ ಪರ ಜೈಕಾರ ಕೂಗುತ್ತಾ ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ವಿಧಿಯಿಲ್ಲದೆ ಮತವನ್ನು ಕೂಡ ಕೇಳದೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ಸಹೋದರ ಹರ್ಷ ಬಂಡಿಸಿದ್ದೇಗೌಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.