Tag: Karnataka Election

  • ಎಣ್ಣೆ ಕೊಳ್ಳಲು ವೈನ್ ಶಾಪ್‍ ಗಳ ಮುಂದೆ ಮುಗಿಬಿದ್ದ ಜನ!

    ಎಣ್ಣೆ ಕೊಳ್ಳಲು ವೈನ್ ಶಾಪ್‍ ಗಳ ಮುಂದೆ ಮುಗಿಬಿದ್ದ ಜನ!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 2 ಗಂಟೆಗಳಲ್ಲಿ ಬ್ರೇಕ್ ಬೀಳಲಿದ್ದು, ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದ ಮದ್ಯ ಖರೀದಿಸಲು ವೈನ್ ಶಾಪ್‍ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ.

    ಶನಿವಾರ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದರು. ಇದನ್ನೂ ಓದಿ:  ಇಂದು ಸಂಜೆಯಿಂದ ಎರಡು ದಿನ ರಾಜ್ಯಾದ್ಯಂತ ಮದ್ಯದಂಗಡಿ ಬಂದ್

    ಚುನಾವಣಾ ಆಯೋಗದ ಸೂಚನೆಯಂತೆ ಇಂದು ಸಂಜೆ 5 ಗಂಟೆಗೆ ವೈನ್ ಶಾಪ್‍ ಗಳ ಮುಚ್ಚುವುದರಿಂದ ವೈನ್ ಶಾಪ್ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ. ಮದ್ಯ ಪ್ರಿಯರು ಇನ್ನು ಮತ್ತೆ ಚುನಾವಣೆ ಮುಗಿಯುವವರೆಗೂ ಮದ್ಯೆ ಸಿಗುವುದಿಲ್ಲ ಎಂದು ಎಲ್ಲರೂ ಬಾರ್, ವೈನ್ ಶಾಪ್ ಗಳಿಗೆ ಹೋಗಿ  ಮದ್ಯ ಖರೀದಿಸುತ್ತಿದ್ದಾರೆ.

    ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಚುನಾವಣಾ ಆಯೋಗ ಶಾಕ್ ನೀಡಿದ್ದು, ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ.

  • ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು – ರಾಹುಲ್ ಗಾಂಧಿ

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು – ರಾಹುಲ್ ಗಾಂಧಿ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹೇಳಿದ್ದಾರೆ.

    ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಕಂಠೀರವ ಸ್ಟೂಡಿಯೋಗೆ ಹೋಗಿ ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿ ಬಂದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ರಾಜ್ ಕುಮಾರ್ ಅವರ ಸಮಾಧಿಗೆ ಹೋಗಿ ಪುಷ್ಪಾರ್ಚನೆ ಸಲ್ಲಿಸಿದ್ದು, ಆ ಫೋಟೋವನ್ನು ಹಾಕಿ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂದು ಬರೆದ ಟ್ವೀಟ್ ಮಾಡಿದ್ದಾರೆ. ಜೊತೆಗೆ `ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಮರ್ಪಿಸಿ ನನ್ನ ಗೌರವ ನಮನವನ್ನು ಸಲ್ಲಿಸಿದೆನು. ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿದಾಯಕ’ ಎಂದು ಬರೆದುಕೊಂಡಿದ್ದಾರೆ.

    ರಾಹುಲ್ ಗಾಂಧಿ ಅವರು ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

  • ಎಚ್‍ಡಿಕೆಗೆ ಜ್ವರ- ಮಾಧ್ಯಮ ಸಂವಾದ ರದ್ದು

    ಎಚ್‍ಡಿಕೆಗೆ ಜ್ವರ- ಮಾಧ್ಯಮ ಸಂವಾದ ರದ್ದು

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜ್ವರದಿಂದ ಬಳಲುತ್ತಿದ್ದಾರೆ.

    ನಿನ್ನೆ ಶಾಂತಿನಗರ ವಿಧಾನಸಭಾಕ್ಷೇತ್ರದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿದ್ದರು. ಪಟಾಕಿ ಹೊಗೆಯಿಂದ ಎಚ್‍ಡಿಕೆಗೆ ಅಲರ್ಜಿಯಾಗಿದ್ದು ಮಾತನಾಡುವುದು ಕಷ್ಟವಾಗಿದೆ. ಗಂಟಲುನೋವು ಬಂದಿದ್ದು, ಅತಿಯಾದ ಓಡಾಟದಿಂದ ಸುಸ್ತಾದ ಪರಿಣಾಮ ಈಗ ಜ್ವರದಿಂದ ಎಚ್‍ಡಿಕೆ ಬಳಲುತ್ತಿದ್ದಾರೆ.

    ಇಂದು ಎಚ್‍ಡಿ ಕುಮಾರಸ್ವಾಮಿಯವರ ಮಾಧ್ಯಮ ಸಂವಾದ ನಡೆಯಬೇಕಿತ್ತು. ಆದರೆ ಜ್ವರದಿಂದಾಗಿ ಈ ಕಾರ್ಯಕ್ರಮ ರದ್ದಾಗಿದೆ.

     

  • ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

    ಅಳುವ ಗಂಡಸನ್ನು ನಗುವ ಹೆಂಗಸನ್ನು ನಂಬಬಾರದು: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ವ್ಯಂಗ್ಯ

    ರಾಮನಗರ: ಅಳುವ ಗಂಡಸನ್ನ, ನಗುವ ಹೆಂಗಸನ್ನ ನಂಬಬಾರದು ಕಣ್ರೀ. ಗಂಡಸಾದವನು ಎಂತಹ ಸಂದರ್ಭದಲ್ಲೂ ಧೈರ್ಯ, ಶಕ್ತಿ ತುಂಬಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಎಚ್.ಡಿ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ವಿರುದ್ಧ ಎಚ್.ಸಿ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ, ಒಳ್ಳೆಯ ಎಂಎಲ್‍ಎ ನನ್ನು ಕರ್ಕೊಂಡ್ ಹೋಗ್ಬಿಟ್ರಿ ಅಂತಾ ಜೆಡಿಎಸ್‍ನವರು ಹೇಳಿದ್ರೆ, ಅಲ್ಲಿನ ಕೆಲವರು ಹಲ್ಲು ಹಲ್ಲು ಕಡಿದುಕೊಂಡು ಕೂತವರೇ ಎಂದು ತಿಳಿಸಿದ್ರು.

    ಜೆಡಿಎಸ್‍ನಲ್ಲಿ ಟಿಕೆಟ್ ಗೊಂದಲದ ಬಗ್ಗೆ ಮಾತನಾಡಿದ ಅವರು, ಇದು ರಾಜಕಾರಣ ಏನ್ರೀ? ಇಂತಹ ರಾಜಕಾರಣದ ಅವಶ್ಯಕತೆ ಇದೆಯೇನ್ರೀ. ಶಿಡ್ಲಘಟ್ಟದಲ್ಲಿ ಟಿಕೆಟ್ ತಗೊಂಡು ನಿಂತಿರುವವರ ಮನೆ ಹಾಳಾಗೋದಿಲ್ವೆನ್ರೀ. ದೇವನಹಳ್ಳಿಯಲ್ಲಿ ಒಬ್ಬನಿಗೆ ಬಿ ಫಾರಂ ಕೊಡ್ತಾರೆ, ಇನ್ನೊಬ್ಬನಿಗೆ ಸಿ ಫಾರಂ ಕೊಡ್ತಾರೆ. ಅವರ ಕುಟುಂಬದವರು ಸೂಸೈಡ್ ಮಾಡ್ಕೊಬೇಕೇನ್ರೀ? ಇವರನ್ನ ನಂಬಿಕೊಂಡು ಸಾಯಂಕಾಲ ಬರ್ತಾರೆ ನಿಮ್ಮ ಮುಂದೆ ಕಣ್ಣೀರು ಹಾಕ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ರು.

  • ಗುಜರಿ ವ್ಯಾಪಾರದಿಂದ್ಲೇ ಕೋಟ್ಯಾಧೀಶ- ಎಂಎಲ್‍ಎ ಆಗ್ಬೇಕು ಅಂತ ಅಖಾಡಕ್ಕಿಳಿದ್ರು ಶಿವಸೇನಾ ಅಭ್ಯರ್ಥಿ!

    ಗುಜರಿ ವ್ಯಾಪಾರದಿಂದ್ಲೇ ಕೋಟ್ಯಾಧೀಶ- ಎಂಎಲ್‍ಎ ಆಗ್ಬೇಕು ಅಂತ ಅಖಾಡಕ್ಕಿಳಿದ್ರು ಶಿವಸೇನಾ ಅಭ್ಯರ್ಥಿ!

    ತುಮಕೂರು: ವ್ಯಕ್ತಿಯೊಬ್ಬರು ಗುಜರಿ ವ್ಯಾಪಾರದಿಂದಲೇ ಕೋಟ್ಯಾಧೀಶನಾಗಿದ್ದು, ಇದರ ಜೊತೆಗೆ ತಾನು ಎಂಎಲ್‍ಎ ಆಗಬೇಕು ಎಂದು ಕನಸು ಕಂಡು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

    ಜಿಲ್ಲೆಯ ತಿಪಟೂರಿನ ಸಂತೋಷ್ ಭೈರಾಟೆ ಶಿವಸೇನಾ ಅಭ್ಯರ್ಥಿಯಾಗಿ ತಿಪಟೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ. ಹಿಂದುತ್ವದ ಅಜೆಂಡಾ ಹಿಡಿದುಕೊಂಡು ಮತಬೇಟೆ ಮಾಡುತ್ತಿದ್ದಾರೆ. ತಮ್ಮದೆ ಆದ ಯುವಕರ ತಂಡ ಕಟ್ಟಿಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

    ಸಂತೋಷ್ ಭೈರಾಟೆ ಕಳೆದ ಹತ್ತು ವರ್ಷಗಳಿಂದ ಗುಜರಿ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಈ ವ್ಯಾಪಾರದಿಂದಲೇ ಕೋಟಿ ಕೋಟಿ ಹಣ ಸಂಪಾದನೆ ಮಾಡಿ ರಾಜಕೀಯಕ್ಕೆ ಧುಮುಕಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಸ್ಥಿರ ಹಾಗೂ ಚರಾಸ್ಥಿಯನ್ನು 1.2 ಕೋಟಿ ರೂ. ಎಂದು ಘೋಷಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಂತೋಷ್ ಭೈರಾಟೆ, ಈ ಬಾರಿ ತಿಪಟೂರಿನ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನಾ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಚಹಾ ಮಾರಿ ಪ್ರಧಾನಿ ಆಗಿದ್ದಾರೆ ಅಂದರೆ ನಾನು ಗುಜರಿ ವ್ಯಾಪಾರ ಮಾಡಿ ಮೇಲೆ ಬಂದಿದ್ದೇನೆ. ಆದ್ದರಿಂದ ಈ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ತಮ್ಮ ತಂಡದ ಅಭ್ಯರ್ಥಿಗಳೇ ಸ್ಫೂರ್ತಿಯಾಗಿದ್ದಾರೆ. ನಮ್ಮ ತಂಡದ ಯುವಕರಿಗೆ ಬೆಂಬಲಿಸಿ ಅಂತ ಹೇಳಿ ಮತದಾರರ ಬಳಿ ಮನವಿ ಮಾಡಿಕೊಂಡಿದ್ದಾರೆ ಅಂತ ಹೇಳಿದ್ರು.

  • ಇತಿಹಾಸ ಹೇಳುವುದರ ಮೂಲಕ ಚಾಮುಂಡಿ ಬೆಟ್ಟದ ಮೇಲೆ ಮತದಾನದ ಜಾಗೃತಿ ಮೂಡಿಸಿದ ಯದುವೀರ್ ಒಡೆಯರ್

    ಇತಿಹಾಸ ಹೇಳುವುದರ ಮೂಲಕ ಚಾಮುಂಡಿ ಬೆಟ್ಟದ ಮೇಲೆ ಮತದಾನದ ಜಾಗೃತಿ ಮೂಡಿಸಿದ ಯದುವೀರ್ ಒಡೆಯರ್

    ಮೈಸೂರು: ಕರ್ನಾಟಕ ವಿಧಾನಸಭಾ ಚುನವಾಣೆ ಇನ್ನೇನು ಹತ್ತಿರ ಬರುತ್ತಿದ್ದಂತೆ ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡುವಂತೆ ಮಹಾರಾಜ ಯದುವೀರ್ ಒಡೆಯರ್ ಮನವಿ ಮಾಡಿದ್ದು, ಆ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಹಾಗೂ ಇನ್ಸ್ ಸ್ಟಾಗ್ರಾಂ ನಲ್ಲಿ  ಪೋಸ್ಟ್ ಮಾಡಿದ್ದಾರೆ.

    “ನಮ್ಮ ಪೂರ್ವಜರ ಮಹೋನ್ನತ ಆದರ್ಶಗಳನ್ನು ಒಳಗೂಡಿಸಿಕೊಂಡು ನಮ್ಮ ನಾಡನ್ನು ಸ್ಥಾಪಿಸಿದ್ದಾರೆ. ಅವರ ಆಕಾಂಕ್ಷೆಗಳಂತೆ ನಮ್ಮ ರಾಜ್ಯ ಕಲೆ, ಸಾಹಿತ್ಯ, ವಾಸ್ತುಶಿಲ್ಪ, ವಿಜ್ಞಾನ, ಪ್ರಕೃತಿಯ ಸಂರಕ್ಷಣೆ, ಸ್ವಶ್ಚತೆ ಹಾಗು ಹುತಾತ್ಮಕರ ಯೋಜನೆಗಳು ಇವುಗಳೆಲ್ಲ ನಮ್ಮ ಅಭಿವೃದ್ಧಿ ಬಿಂದು. ಸಂಸ್ಕೃತಿ ರಾಜ್ಯದ ರಾಯಭಾರಿಗಳಾಗಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಅವುಗಳನ್ನು ರಕ್ಷಿಸಬೇಕು.

    ನಮ್ಮ ಹಿರಿಯರ ಆಕಾಂಕ್ಷೆಗಳನ್ನು ಎತ್ತಿ ಹಿಡಿಯಬೇಕು. ನಮ್ಮ ಊರಿನ ಅನನ್ಯತೆ ಹಾಗೂ ಅಭಿವೃದ್ಧಿಗೆ ಪ್ರಜಾಪ್ರಭುತ್ವ ನೀಡಿರುವ ಮಾರ್ಗವೇ ಮತದಾನ. ಹೀಗಾಗಿ ಇದೇ ಮೇ 12ರಂದು ತಪ್ಪದೇ ಮತ ಚಲಾಯಿಸಿ ನಮ್ಮ ಪೂರ್ವಜರ ಆಕಾಂಕ್ಷೆಗಳನ್ನು ಎತ್ತಿಹಿಡಿಯಬೇಕೆಂದು ಹಾರೈಸುತ್ತೇನೆ ಎಂದು ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.

    https://www.instagram.com/p/Bijg7JrAk1-/?hl=en&taken-by=ykcwadiyar

  • ಪ್ರಧಾನಿ ಮೋದಿ ಬೇಕಾಬಿಟ್ಟಿಯಾಗಿ ಮಾತನಾಡೋದನ್ನ ಬಿಡ್ಬೇಕು: ಮಲ್ಲಿಕಾರ್ಜುನ್ ಖರ್ಗೆ

    ಪ್ರಧಾನಿ ಮೋದಿ ಬೇಕಾಬಿಟ್ಟಿಯಾಗಿ ಮಾತನಾಡೋದನ್ನ ಬಿಡ್ಬೇಕು: ಮಲ್ಲಿಕಾರ್ಜುನ್ ಖರ್ಗೆ

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಬೇಕಾಬಿಟ್ಟಿಯಾಗಿ ಮಾತನಾಡೋದನ್ನು ಬಿಡಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

    ಕಲಬುರಗಿ ಗಂಗಾ ನಗರದಲ್ಲಿ ದಕ್ಷಿಣ ಹಾಗೂ ಉತ್ತರ ಮತಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಖರ್ಗೆ, ಮೋದಿ ತಾವೊಬ್ಬರೇ ಬುದ್ಧಿವಂತ ಅಂತ ಅಂದುಕೊಂಡಿದ್ದಾರೆ. ಅವರಿಗಿಂತ ಬುದ್ಧಿವಂತರು ದೇಶದಲ್ಲಿ ಕೋಟ್ಯಾಂತರ ಜನರಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಮೋದಿ ಸಾಕಷ್ಟು ಕಲಿಯಬೇಕಾಗಿದೆ ಅಂತ ಸಲಹೆ ನೀಡಿದ್ರು.

    ಇದೇ ವೇಳೆ ಕಾಂಗ್ರೆಸ್ ಡೀಲ್ ಪಕ್ಷವೆಂಬ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್ ಖರ್ಗೆ, ವಿಜಯ್ ಮಲ್ಯ, ನೀರವ್ ಮೋದಿ ಅಂತವರು ದೇಶವನ್ನು ಕೊಳ್ಳೆ ಹೊಡೆದು ಹೋಗಿದ್ದಾರೆ. ದೇಶವನ್ನು ಲೂಟಿ ಮಾಡಿದವರಿಗೆಲ್ಲ ಮೋದಿ ಸಹಾಯ ಮಾಡಿದ್ದಾರೆ ಅಂತಾ ಆರೋಪಿಸಿದ್ರು.

  • ಸಿದ್ದರಾಮಯ್ಯ ಹಿಂದೆ ನಾನೇ ಇದ್ದೀನಿ: ಡಿ.ಕೆ ಶಿವಕುಮಾರ್

    ಸಿದ್ದರಾಮಯ್ಯ ಹಿಂದೆ ನಾನೇ ಇದ್ದೀನಿ: ಡಿ.ಕೆ ಶಿವಕುಮಾರ್

    ರಾಯಚೂರು: ನಾನೇನಾದರೂ ಆಗಬೇಕಲ್ವಾ, ಹೊರಗಡೆಯಿಂದ ಬಂದವರಿಗೆಲ್ಲ ಸಹಾಯ ಮಾಡಿದ್ದೀನಿ. ಸಿಎಂ ಸಿದ್ದರಾಮಯ್ಯನವರದ್ದು ಮುಗಿಯಲಿ ಅವರ ಹಿಂದೆ ನಾನಿದ್ದೇನೆ ಎಂದು ಸಿಎಂ ಆಗುವ ಆಸೆಯನ್ನ ಇಂಧನ ಸಚಿವ ಡಿ.ಕೆ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿಯ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಸಿ ಬಾಲಕೃಷ್ಣ ಪರವಾಗಿ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, 45 ಸ್ಥಾನ ಪಡೆದಿರುವ ಬಿಜೆಪಿ 150 ಸ್ಥಾನ ಪಡೆಯುವುದಾಗಿ ಹೇಳುತ್ತಿದ್ದಾರೆ. ಆದರೆ 30 ಸ್ಥಾನ ಪಡೆದಿರುವ ಜೆಡಿಎಸ್ ಸಹ 115 ಸ್ಥಾನ ಗಳಿಸುವುದಾಗಿ ಹೇಳುತ್ತಿದೆ. ತಾವು ಪ್ರವಾಸ ಮಾಡಿದ್ದು, ಜೆಡಿಎಸ್ 30 ರಲ್ಲಿ 10 ಸ್ಥಾನ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

    ಶಿಡ್ಲಘಟ್ಟ, ದೇವನಹಳ್ಳಿ, ಮಾಲೂರು, ಕೆಆರ್ ಪೇಟೆನಲ್ಲಿ ಗೆಲ್ಲುವುದಿಲ್ಲ. ಅಲ್ಲೂ ಸಿ ಫಾರಂ, ಬಿ ಫಾರಂ ಗೊಂದಲ ಇದೆ. ಅಲ್ಲದೇ ಎಚ್‍ಡಿಕೆ ಮುಖ್ಯಮಂತ್ರಿ ಆಗುತ್ತೀನಿ ಅಂದ್ರೆ ಎಂಎಲ್‍ಎ ಗಳು ಬೇಕಲ್ವಾ. ಎಚ್.ಡಿ ಕುಮಾರಸ್ವಾಮಿಯವರನ್ನ ಎಂಪಿ ಮಾಡಿದ್ದೀರಿ, ಸಿಎಂ ಮಾಡಿದ್ದೀರಿ. ದೇವೇಗೌಡರನ್ನ ಸಿಎಂ ಮಾಡಿ, ಪ್ರಧಾನಿಯಾಗಿಯೂ ಮಾಡಿದ್ದೀರಿ. ಅಧಿಕಾರದಲ್ಲಿದ್ದಾಗ ಏನಾದರೂ ಶಾಶ್ವತವಾಗಿರುವಂತಹದ್ದು ಮಾಡಬೇಕಲ್ವಾ ಎಂದ್ರು.

    ಮಾಗಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ರನ್ನ ಗಂಡು ಮಾಡಿದ್ದು ನಾನು, ನನ್ನ ಸಹೋದರ ಸುರೇಶ್. ನೂರು ಮಂಜರನ್ನ ತಯಾರು ಮಾಡಬಹುದು. ಬಾಲಕೃಷ್ಣರಂತಹವರನ್ನ ಸೃಷ್ಟಿ ಮಾಡಲಾಗಲ್ಲ ಅವರು ರೆಡಿಮೆಡ್ ಗಂಡು. ಮಂಜು ಸ್ವಿಚ್ ಆಫ್ ಮಂಜು ಎಂದು ವ್ಯಂಗ್ಯವಾಡಿದರು.

  • ನನ್ನ ವಿರುದ್ಧ ಪ್ರಚಾರ ನಡೆಸಲು ಪ್ರಧಾನಿ ಮೋದಿ ಬರಬೇಕಿತ್ತು: ಕಾಂಗ್ರೆಸ್ ಅಭ್ಯರ್ಥಿ

    ನನ್ನ ವಿರುದ್ಧ ಪ್ರಚಾರ ನಡೆಸಲು ಪ್ರಧಾನಿ ಮೋದಿ ಬರಬೇಕಿತ್ತು: ಕಾಂಗ್ರೆಸ್ ಅಭ್ಯರ್ಥಿ

    ಬಳ್ಳಾರಿ: ಜಿಲ್ಲೆಯ ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಯಾಕಂದ್ರೆ ನನ್ನನ್ನೂ ಸೋಲಿಸಲು ಪ್ರಧಾನಿ ಬಂದಿದ್ರೂ ಅನ್ನೋ ಇತಿಹಾಸವಾದ್ರೂ ನಿರ್ಮಾಣವಾಗುತ್ತಿತ್ತು ಅಂತಾ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ಲೇವಡಿ ಮಾಡಿದ್ದಾರೆ.

    ಬುಧವಾರ ಹೊಸಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಆನಂದ್ ಸಿಂಗ್, ಪ್ರಧಾನಿ ಮೋದಿ ಬರುವ ಬದಲು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಂದೂ ಪ್ರಚಾರ ಮಾಡಿದ್ದಾರೆ. ಇದ್ರಿಂದ ಏನೂ ಬದಲಾವಣೆ ಆಗಲ್ಲ ಅಂತ ಕಿಡಿಕಾರಿದ್ದಾರೆ.

    ನನ್ನ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದ್ದು, ನನ್ನ ಹಿಂದೆ ಕೆಲ ತೋಳಗಳು ಕೆಲಸ ಮಾಡುತ್ತಿವೆ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಈ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಮುಂದಿನ 2019ರಲ್ಲಿ ಕೆಂಪುಕೋಟೆ ಮೇಲೆ ಕಾಂಗ್ರೆಸ್ ಬಾವುಟ ಏರಿಸುತ್ತೆವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹೊಸಪೇಟೆಯನ್ನು ಜಿಲ್ಲೆಯನ್ನಾಗಿ ಮಾಡಲಾಗುವುದೆಂದು ಆನಂದಸಿಂಗ್ ಘೋಷಣೆ ಮಾಡಿದ್ರು.

  • ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಬಿಜೆಪಿ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿ ನಗೆಪಾಟಲಿಗೀಡಾದ ಮಂಗಳೂರು ಕೈ ಶಾಸಕ ಲೋಬೋ

    ಮಂಗಳೂರು: ಬಿಜೆಪಿ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆಯೆಂದು ಬಿಂಬಿಸಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜೆಆರ್ ಲೋಬೋ ಮತ್ತೆ ನಗೆಪಾಟಲಿಗೀಡಾಗಿದ್ದಾರೆ.

    ಚುನಾವಣಾ ಹಿನ್ನೆಲೆಯಲ್ಲಿ ಸಾಧನೆಯ ಹಾದಿಯಲ್ಲಿ ಎಂಬ ಅಭಿವೃದ್ಧಿ ಯೋಜನೆಗಳ ಕುರಿತ ಪುಸ್ತಕವನ್ನು ಜೆಆರ್ ಲೋಬೋ ಬಿಡುಗಡೆ ಮಾಡಿದ್ದು, ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಕಾಲಾವಧಿಯಲ್ಲಿ ಆದಂತಹ ಯೋಜನೆಗಳನ್ನು ಸೇರಿಸಿಕೊಂಡಿದ್ದಾರೆ.

    ಮಂಗಳೂರಿನ ಬಿಜೈ ಮಾರ್ಕೆಟ್ ನಿರ್ಮಾಣ, ಪಂಪ್ವಲ್ ಜಂಕ್ಷನ್ ಬಳಿ ಸೇತುವೆ ನಿರ್ಮಾಣ, ಗಣಪತಿ ಹೈ ಸ್ಕೂಲ್ ರಸ್ತೆ ಅಭಿವೃದ್ಧಿ, ಮಿನಿವಿಧಾನಸೌಧ ಕಟ್ಟಡ ರಚನೆ, ಲೋಕಾಯುಕ್ತ ಕಚೇರಿ ಉದ್ಘಾಟನೆ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ಅನುಷ್ಠಾನಗೊಂಡ ಯೋಜನೆಗಳನ್ನು ಪುಸ್ತಕದಲ್ಲಿ ಅಳವಡಿಸಿದ್ದಾರೆ.

    ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ ಲೋಬೋ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದು, ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಜೆಆರ್ ಲೋಬೋ ಸುಳ್ಳಿನ ಮಾರ್ಗವನ್ನು ಹಿಡಿದಿದ್ದಾರೆ. ಈ ಮೂಲಕ ಜನರ ಮನಗೆಲ್ಲಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.