Tag: Karnataka Election

  • ಕಾಂಗ್ರೆಸ್ ನಿಯೋಗದಿಂದ ಚುನಾವಣಾ ಆಯೋಗಕ್ಕೆ ದೂರು

    ಕಾಂಗ್ರೆಸ್ ನಿಯೋಗದಿಂದ ಚುನಾವಣಾ ಆಯೋಗಕ್ಕೆ ದೂರು

    ಬೆಂಗಳೂರು: ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವಂತೆ ಕೋರಿ ಸೋಮವಾರ ತಡ ರಾತ್ರಿ ಕಾಂಗ್ರೆಸ್ ನಾಯಕರು ಮುಖ್ಯ ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಚುಣಾವಣೆ ಮುಕ್ತಾಯವಾಗಿದ್ದು, ಇಂದು ಮತ ಎಣಿಕೆ ಇರುವ ಹಿನ್ನೆಲೆ ತಡರಾತ್ರಿ ಕಾಂಗ್ರೆಸ್ ನಾಯಕರು ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿಕೊಂಡಿದ್ದಾರೆ.

    ಕಾಂಗ್ರೆಸ್ ಮುಖಂಡ ಉಗ್ರಪ್ಪ ನೇತೃತ್ವದಲ್ಲಿ ಮನವಿ ಮಾಡಿಕೊಂಡಿದ್ದು, ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್, ಕೃಷ್ಣ ಬೈರೆಗೌಡ ಹಾಗೂ ರಿಜ್ವಾನ್ ಅರ್ಷದ್ ರವರು ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಈಗಾಗಲೇ ಬಿಜೆಪಿ ಪಕ್ಷದ ನಾಯಕ ಜಗದೀಶ್ ಶೆಟ್ಟರ ಇವಿಎಂ ಮಶಿನ್ ಟ್ಯಾಂಪರಿಂಗ್ ಕುರಿತು ಹೇಳಿಕೆ ನೀಡಿದ್ದಾರೆ. ಇದು ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸಿದ್ದು, ಮಂಗಳವಾರ ನಡೆಯುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಶೇ.100ರಷ್ಟು ಹೊಂದಾಣಿಕೆ ಮಾಡುವಂತೆ ಮನವಿ ಮಾಡಿದ್ದೇವೆ.

    ಬದಾಮಿಯಲ್ಲಿನ ಲಾಡ್ಜ್ ವೊಂದರಲ್ಲಿ ಅಂಚೆ ಮತ ಪತ್ರ ಸಿಕ್ಕಿರುವ ಕುರಿತು ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಕೂಡ ನಿಷ್ಪಕ್ಷಪಾತ ತನಿಖೆ ಆಗುವಂತೆ ಕೋರಿದ್ದೇವೆ ಎಂದು ತಿಳಿಸಿದ್ರು.

    ಇದೇ ವೇಳೆ ಮಾತನಾಡಿದ ಚುಣಾವಣಾ ಮುಖ್ಯಾಧಿಕಾರಿ ಸಂಜೀವಕುಮಾರ್, ಬದಾಮಿಯಲ್ಲಿ ಸಿಕ್ಕಿರುವ ಅಂಚೆ ಮತ ಪತ್ರದ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬದಾಮಿಯಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಲಾಡ್ಜ್ ನಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಂಚೆ ಮತ ಪತ್ರ ದ ಕುರಿತು ಮಾಹಿತಿ ಇರುವ ಎರಡು ಪೇಜ್ ಗಳು ಮಾತ್ರ ಲಭ್ಯವಾಗಿದ್ದು, ಯಾವುದೇ ಅಂಚೆ ಮತ ಪತ್ರಗಳು ಲಭ್ಯವಾಗಿಲ್ಲ ಅಂದ್ರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬದಾಮಿ ಪೊಲೀಸರು ಸುದ್ದಿ ಪ್ರಸಾರ ಮಾಡಿದ್ದ ಪತ್ರಕರ್ತರನ್ನ ಪ್ರಶ್ನೆ ಮಾಡಲಾಗಿಯೂ ಕೂಡ ಯಾವುದೇ ಸಮರ್ಪಕ ಉತ್ತರ ಲಭಿಸಿರುವುದಿಲ್ಲ. ಹೀಗಾಗಿ ಇದು ಕೇವಲ ಗಾಳಿ ಸುದ್ದಿಯಾಗಿದ್ದು ಮಂಗಳವಾರ ಮತ ಎಣಿಕೆ ಇರುವುದರಿಂದ ಇಂತಹ ಗಾಳಿ ಸುದ್ದಿಗಳನ್ನ ಹಬ್ಬಿಸಬೇಡಿ. ಇನ್ನು ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವ ಕುರಿತು ಈಗಾಗಲೇ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದು ನಾವು ಪ್ರತಿ ಕ್ಷೇತ್ರದಲ್ಲಿ ರಾಂಡಮ್ ಆಗಿ ಹೊಂದಾಣಿಕೆ ಮಾಡುತ್ತೇವೆ ಎಂದರು.

  • ಕರುನಾಡ ತೀರ್ಪಿಗೆ ಕ್ಷಣಗಣನೆ ಶುರು: ಸಿದ್ಧತೆ ಹೇಗೆ ನಡೆದಿದೆ?

    ಕರುನಾಡ ತೀರ್ಪಿಗೆ ಕ್ಷಣಗಣನೆ ಶುರು: ಸಿದ್ಧತೆ ಹೇಗೆ ನಡೆದಿದೆ?

    ಬೆಂಗಳೂರು: ಕರುನಾಡ ತೀರ್ಪಿಗೆ ಕ್ಷಣಗಣನೆ ಶುರುವಾಗಿದೆ. ಶನಿವಾರದ ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ನಡೆಸಿದೆ.

    ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿರುವ ಮತ ಎಣಿಕೆಗೆ ಆಯೋಗವು ಸಂಪೂರ್ಣವಾಗಿ ಸಿದ್ಧಗೊಂಡಿದೆ. ಬಿಗಿ ಭದ್ರತೆಯಲ್ಲಿ ಮತ ಯಂತ್ರಗಳಿಗೆ ಅಳವಡಿಸಿರುವ ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್‍ಗಳನ್ನು ಮತ ಎಣಿಕೆ ಕೇಂದ್ರಕ್ಕೆ ತಂದು ಎಣಿಕೆ ಮಾಡಲಾಗುತ್ತದೆ.

    222 ಮತಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯಾದ್ಯಂತ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 5 ಕಡೆ, ತುಮಕೂರಿನಲ್ಲಿ 3 ಕಡೆ ಹಾಗೂ ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 2 ಕಡೆಗಳಲ್ಲಿ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಮತ ಎಣಿಕೆ ಕಾರ್ಯ ನಡೆಯಲಿದೆ.

    ಮತ ಎಣಿಕೆ ನಡೆಯುವ ದಿನದಂದು ಸುಗಮವಾಗಿ ಮತ ಎಣಿಕೆ ನಡೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ 222 ಮತಕ್ಷೇತ್ರಗಳಿಗೆ ಪರಿವೀಕ್ಷಕರನ್ನು ನೇಮಿಸಲಾಗಿದೆ. ಹಾಗೆಯೇ, ಹೆಚ್ಚುವರಿಯಾಗಿ ತಲಾ 14 ಮಂದಿಯಂತೆ ಮೈಕ್ರೋ ಅಬ್ಸರ್‍ವರ್ ಗಳನ್ನು ಪ್ರತಿ ಮತಕ್ಷೇತ್ರಕ್ಕೆ ನಿಯೋಜಿಸಲಾಗಿದೆ.

    57,786 ಕಂಟ್ರೋಲ್ ಯೂನಿಟ್‍ಗಳನ್ನು ತೆರೆದು ಮತ ಎಣಿಕೆ ನಡೆಸಲಾಗುವುದು. ಹಾಗೆಯೇ, ಬಳಕೆಯಾದ 57,786 ವಿವಿಪ್ಯಾಟ್‍ಗಳ ಪೈಕಿ ಪ್ರತಿ ಮತಕ್ಷೇತ್ರಕ್ಕೆ ಒಂದರಂತೆ ಒಂದೊಂದು ವಿವಿಪ್ಯಾಟ್‍ಗಳನ್ನು ತೆರೆದು ಎಣಿಕೆ ಮಾಡಿ ಕಂಟ್ರೋಲ್ ಯೂನಿಟ್‍ನೊಂದಿಗಿನ ಫಲಿತಾಂಶವನ್ನು ತಾಳೆ ನೋಡಲಾಗುತ್ತದೆ.

    ಮತ ಎಣಿಕೆ ಕಾರ್ಯಕ್ಕಾಗಿ ಸುಮಾರು 16,662 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 3,410 ಮತ ಎಣಿಕೆ ಮೇಲ್ವಿಚಾರಕರು, 3,410 ಎಣಿಕೆ ಸಹಾಯಕರು ಮತ್ತು 3,410 ಮೈಕ್ರೋ ಅಬ್ಸರ್‍ವರ್ ಗಳು ಇರಲಿದ್ದಾರೆ. ಸುಮಾರು 888 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಇವರುಗಳ ಜೊತೆಗೆ ಹೆಚ್ಚುವರಿಯಾಗಿ 5,544 ಮಂದಿ ಭದ್ರತಾ ಕೊಠಡಿಯಿಂದ ಇವಿಎಂಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರಲು ನಿಯೋಜಿಸಲಾಗಿದೆ.

    ಪ್ರತಿ ಮತ ಕ್ಷೇತ್ರಕ್ಕೆ ಸುಮಾರು 80 ಮಂದಿ ಎಣಿಕೆ ಮಾಡುವವರನ್ನು ನಿಯೋಜಿಸಲಾಗಿದೆ. ಈ ಪೈಕಿ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಎಣಿಕೆ ಸಹಾಯಕರು ಮತ್ತು 14 ಮೈಕ್ರೋ ಅಬ್ಸರ್‍ವರ್ ಗಳ ಕೂಡಿರುವ ತಂಡವಾಗಿ ಇವರು ನಿರ್ವಹಿಸಲಿದ್ದಾರೆ. ಈ ತಂಡದಲ್ಲಿ ಇರುವ ಹೆಚ್ಚುವರಿ 4 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಪ್ರತಿ ಮತಕ್ಷೇತ್ರದಿಂದ 24 ಮಂದಿಯನ್ನು ಭದ್ರತಾ ಕೊಠಡಿಯಿಂದ ಮತ ಎಣಿಕೆ ಕೇಂದ್ರಕ್ಕೆ ಇವಿಎಂಗಳನ್ನು ಸಾಗಿಸಲು ನಿಯೋಜಿಸಲಾಗಿರುತ್ತದೆ.

    ಮತ ಎಣಿಕೆ ನಡೆಯುವ 222 ಮತಕ್ಷೇತ್ರಗಳ ಪೈಕಿ ಸುಮಾರು 217 ಮತಕ್ಷೇತ್ರಗಳ ಮತ ಎಣಿಕೆಯು 14 ಟೇಬಲ್‍ಗಳಿಂದ ಕೂಡಿರುವ ಹಾಲ್‍ಗಳಲ್ಲಿ ನಡೆಯಲಿದೆ. ಇನ್ನುಳಿದ 5 ಮತಕ್ಷೇತ್ರಗಳ ಮತ ಎಣಿಕೆಯು 14 ಕ್ಕೂ ಹೆಚ್ಚು ಟೇಬಲ್‍ಗಳಿಂದ ಕೂಡಿರುವ ಹಾಲ್‍ನಲ್ಲಿ ನಡೆಯಲಿದೆ. ಈ ಮತಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದುದರಿಂದ ಹೆಚ್ಚುವರಿ ಟೇಬಲ್‍ಗಳ ಬಳಕೆಯಾಗುತ್ತಿದೆ.

  • ಬಿಎಸ್‍ವೈ ಸೇರಿ ರಾಜ್ಯ ನಾಯಕರಿಗೆ ಹೈಕಮಾಂಡ್ ನಿಂದ ಕಟ್ಟುನಿಟ್ಟಿನ ಆದೇಶ!

    ಬಿಎಸ್‍ವೈ ಸೇರಿ ರಾಜ್ಯ ನಾಯಕರಿಗೆ ಹೈಕಮಾಂಡ್ ನಿಂದ ಕಟ್ಟುನಿಟ್ಟಿನ ಆದೇಶ!

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಕಟ್ಟು ನಿಟ್ಟಿನ ಆದೇಶವನ್ನು ರವಾನಿಸಿದೆ.

    ಮೈತ್ರಿ ಬಗ್ಗೆ ಯಾರು ಮಾತನಾಡಬೇಡಿ ಮತ್ತು ತಲೆಕೆಡಿಸಿಕೊಳ್ಳಬೇಡಿ. ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಎಲ್ಲಿಯೂ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಮಾಸ್ಟರ್ ಪ್ಲಾನ್‍ಗೆ ಡ್ಯಾಮೇಜ್ ಮಾಡಬೇಡಿ ಅಂತಾ ಖಡಕ್ ಸೂಚನೆಯನ್ನು ಹೈಕಮಾಂಡ್ ರವಾನಿಸಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಒಂದು ವೇಳೆ ಅನಿವಾರ್ಯತೆ ಎದುರಾದ್ರೆ ಮಾತ್ರ ಜೆಡಿಎಸ್ ಜೊತೆಗೆ ಮೈತ್ರಿ. ಡಿಸಿಎಂ ವಿಚಾರದ ಬಗ್ಗೆಯೂ ಯಾರೂ ಪ್ರಸ್ತಾಪಿಸಬಾರದು. ಫಲಿತಾಂಶದ ಬಳಿಕವಷ್ಟೇ ಮುಂದಿನ ನಿರ್ಧಾರಗಳ ಬಗ್ಗೆ ಪಕ್ಷದಲ್ಲಿ ಚರ್ಚೆ ಆಗಲಿದೆ ಅಂತಾ ಸಂದೇಶದಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.

    ಶನಿವಾರ(ಮೇ 12) ರಾಜ್ಯಾದ್ಯಂತ ಮತದಾನವಾಗಿದ್ದು, ರಾಜಕೀಯ ವಲಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈಗಾಗಲೇ 5 ರಾಷ್ಟ್ರೀಯ ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯ ಬಹಿರಂಗಗೊಳಿಸಿವೆ. ಮೂರು ಸಮೀಕ್ಷೆಗಳು ಬಿಜೆಪಿಗೆ ಮುನ್ನಡೆ ಅಂತಾ ಹೇಳಿದ್ರೆ, ಎರಡು ಕಾಂಗ್ರೆಸ್ ಮುನ್ನಡೆ ಎಂದು ತಿಳಿಸಿವೆ. ಆದ್ರೆ ಯಾವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ, ಆದ್ದರಿಂದ ಮೈತ್ರಿ ಅನಿವಾರ್ಯ ಎಂದು ಭವಿಷ್ಯ ನುಡಿದಿವೆ.

  • ಎಲೆಕ್ಷನ್ ರಿಸಲ್ಟ್ ಬಿಸಿಯ ಮಧ್ಯೆ ಕರೆಂಟ್ ಶಾಕ್!

    ಎಲೆಕ್ಷನ್ ರಿಸಲ್ಟ್ ಬಿಸಿಯ ಮಧ್ಯೆ ಕರೆಂಟ್ ಶಾಕ್!

    ಬೆಂಗಳೂರು: ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ. ನಾಳೆ ಹನ್ನೊಂದು ಗಂಟೆಗೆ ಹೊಸ ವಿದ್ಯುತ್ ದರವನ್ನು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಮಂಡಳಿ(ಕೆಇಆರ್ ಸಿ) ಪ್ರಕಟಿಸಲಿದೆ.

    ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಆದರೆ ಮತದಾನದ ಮುನ್ನಾ ದಿನ ದರ ಏರಿಕೆಯಾಗುವುದು ಅಧಿಕೃತವಾಗಿದೆ.

    ಐದು ವಿದ್ಯುತ್ ಸರಬಾರಾಜು ಕಂಪನಿಗಳು 83 ಪೈಸೆಯಿಂದ 1.20 ರೂ. ವರೆಗೆ ದರ ಏರಿಕೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಪ್ರಸ್ತಾಪವನ್ನು ಆಧಾರಿಸಿ ವಿದ್ಯುತ್ ನಿಯಂತ್ರಣ ಆಯೋಗದಿಂದ ಪರಿಷ್ಕೃತ ದರಪಟ್ಟಿಯನ್ನು ಪ್ರಕಟಿಸಲಿದೆ.

  • ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

    ಪತ್ನಿ, ಮಕ್ಕಳಿಗೆ ಚಿಕನ್ ತಯಾರಿಸಿ ಉಣಬಡಿಸಿದ ಕಾರವಾರ ಶಾಸಕ ಸತೀಶ್ ಸೈಲ್

    ಕಾರವಾರ: ಒಂದೆಡೆ ಅಬ್ಬರದ ಪ್ರಚಾರ, ಸದಾ ತುಂಬಿ ತುಳುಕುತಿದ್ದ ಜನರ ಸಂತೆ, ಟೀಕೆ ಟಿಪ್ಪಣಿಗಳ ನಡುವೆ ತಾನು ಗೆಲ್ಲಬೇಕೆಂಬ ಹಂಬಲದಲ್ಲಿ ವಿಧಾನಸಭಾ ಚುನಾವಣೆಯ ರಂಗಿನ ರಣರಂಗದಲ್ಲಿ ಸದಾ ಬಿಸಿಯಾಗಿದ್ದ ಪ್ರತಿಷ್ಠಿತ ಕಣವಾದ ಕಾರವಾರ ವಿಧಾನಸಭಾ ಕ್ಷೇತ್ರದ ಮೂರು ಪಕ್ಷದ ನಾಯಕರು ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

    ಸದಾ ಜನರ ಮಧ್ಯೆ ಇರುವ ನಾಯಕರು ತಮ್ಮ ವೈಯಕ್ತಿಕ ಬದುಕಿಗೆ ಸಮಯ ಕೊಟ್ಟದ್ದು ಅಲ್ಪ ಸಮಯ. ಇದೇ ತಿಂಗಳ 15 ರಂದು ಫಲಿತಾಂಶದ ನಿರೀಕ್ಷೆಯಲ್ಲಿರುವ ಈ ನಾಯಕರು ಇಂದು ತಮ್ಮ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ಅಡುಗೆ ಮಾಡಿ ಕುಟುಂಬವರಿಗೆ ಬಡಿಸಿದ್ದಾರೆ.

    ಕಳೆದ ಎರಡು ತಿಂಗಳ ಚುನಾವಣಾ ಕುರುಕ್ಷೇತ್ರಕ್ಕೆ ಪೂರ್ಣ ವಿರಾಮ ಬಿದ್ದಿದೆ. ಇನ್ನು 15ನೇ ದಿನಾಂಕದಂದು ಜನರ ನಿರ್ಧಾರದ ಫಲಿತಾಂಶ ಬರಬೇಕಿದೆ. ತಾವು ಪಟ್ಟ ಶ್ರಮದ ನಿರೀಕ್ಷೆಯಲ್ಲಿ ನಾಯಕರು ಒತ್ತಡದಲ್ಲಿ ಇರೋದು ಸಹಜವಾಗಿದೆ. ತ್ರಿಕೋನ ಸ್ಪರ್ಧೆ ಇರುವ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್, ಜೆಡಿಎಸ್ ನಿಂದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತು ಬಿಜೆಪಿಯಿಂದ ರೂಪಾಲಿ ನಾಯ್ಕ ಸ್ಪರ್ಧಿಸಿದ್ದರು.

    ಸದ್ಯ ಇಂದು ಮತ್ತು ನಾಳೆ ಮನಸ್ಸಿನಲ್ಲಿ ಅಳುಕು ಮತ್ತು ಒತ್ತಡ ಇದ್ದರು ಮೂವರು ಅಭ್ಯರ್ಥಿಗಳು ಈ ಒತ್ತಡ ಮರೆಯಲು ಹರಸಾಹಸ ಪಡುತಿದ್ದಾರೆ. ಕಳೆದ ಎರಡು ತಿಂಗಳಿಂದ ಕ್ಷೇತ್ರ ಸುತ್ತಿ ಪ್ರಚಾರ ನಡೆಸಿ ದಣಿದಿರುವ ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಗೋವಾಕ್ಕೆ ತೆರಳಿ ರಿಲ್ಯಾಕ್ಸ್ ಮಾಡುತ್ತಿದ್ದು, ಅವರ ಅಧಿಕೃತ ನಿವಾಸ ಜನರಿಲ್ಲದೇ ಬಿಕೋ ಎನ್ನುತಿತ್ತು. ಒತ್ತಡ ಮರೆಯಲು ಜನರಿಂದ ದೂರ ವಿರಲು ಬಯಸಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕಾರವಾರದ ಸೋನಾರವಾಡದಲ್ಲಿರುವ ಮನೆಯ ಮುಂಭಾಗಕ್ಕೆ ಬೀಗ ಹಾಕಿ ಒಳ ಸೇರಿದ್ದಾರೆ. ಮನೆಯ ಬಳಿ ಬಂದ ಜನರ ಸಂಪರ್ಕಕ್ಕೆ ಸಿಗಲಿಲ್ಲ.

    ಇನ್ನು ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಹಾಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ರವರ ಮಾಜಾಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಮನೆ ಕೂಡ ಯಾವುದೇ ಕಾರ್ಯಕರ್ತರ ಸದ್ದಿಲ್ಲದೇ ತಟಸ್ಥವಾಗಿತ್ತು. ಶಾಂತವಾಗಿದ್ದ ಮನೆಯಲ್ಲಿ ಸತೀಶ್ ಸೈಲ್ ಪತ್ನಿ ಕಲ್ಪನಾರೊಂದಿಗೆ ಅಡುಗೆ ಮನೆ ಸೇರಿ ಮಧ್ಯಾಹ್ನದ ಊಟಕ್ಕಾಗಿ ಚಿಕನ್ ತಯಾರಿಸಿದ್ದಾರೆ. ಅವರ ಕುಷಲೋಪರಿ ವಿಚಾರಿಸಲು ಬಂದವರಿಗೆ ತಮ್ಮ ಕೈಯಾರೆ ಟೀ ಮಾಡಿ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ಸಂಸಾರಕ್ಕೆ ಹೆಚ್ಚು ಸಮಯ ಕೊಡಲಾಗುತಿಲ್ಲ. ಮಕ್ಕಳೊಂದಿಗೆ ಬೆರೆಯದೇ ಎಷ್ಟೂ ದಿನಗಳಾಗಿವೆ. ಒಂದು ದಿನವಾದರೂ ನನ್ನ ಒತ್ತಡ ಮರೆತು ಮಕ್ಕಳು ಸಂಸಾರದೊಂದಿಗೆ ಬೆರೆಯಬೇಕೆಂದು ತೀರ್ಮಾನಿಸಿ ಜಂಜಾಟದಿಂದ ರಿಲಾಕ್ಸ್ ಮಾಡುತ್ತಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ನನ್ನ ತಂದೆ ಕ್ಯಾನ್ಸರ್ ನಿಂದ ತೀರಿಕೊಂಡರು. ಆಗ ಅವರಿಗೆ ಕ್ಯಾನ್ಸರ್ ಇದೇ ಎಂದು ತಿಳಿದುಕೊಳ್ಳವ ವೇಳೆ ಅವರು ನಮ್ಮನ್ನು ಅಗಲಿದ್ದರು. ಕಾರವಾರ ಕ್ಷೇತ್ರದಲ್ಲಿ ಕೈಗಾ ಅಣು ಸ್ಥಾವರ, ಆದಿತ್ಯ ಬಿರ್ಲಾ ಕೆಮಿಕಲ್ ಕಾರ್ಖಾನೆಗಳಿವೆ. ಇವುಗಳಿಂದ ಸಾಕಷ್ಟು ಜನರಿಗೆ ಕ್ಯಾನ್ಸರ್ ನಂತಹ ರೋಗಗಳು ಬಂದಿವೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆ ವ್ಯವಸ್ಥೆ ಸರಿಯಾಗಿ ಇಲ್ಲ. ನನ್ನ ಅವಧಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಮಾಡಿಸುವ ಪ್ರಯತ್ನ ಮಾಡಿದ್ದೇನೆ. ಈಗ ಅದು ಸಫಲವಾಗಿದೆ ಎಂದು ತಮ್ಮ ತಂದೆಯನ್ನು ನೆನೆದು ಭಾವುಕರಾದ್ರು.

    ನನ್ನ ಕ್ಷೇತ್ರದ ಜನರಿಗೆ ಉದ್ಯೋಗ ಇಲ್ಲಿಯೇ ಸಿಗುವಂತೆ ಮಾಡಬೇಕು. ಅದಕ್ಕಾಗಿ ಈ ಬಾರಿ ಚುನಾವಣಾ ಕಣದಲ್ಲಿದ್ದೇನೆ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ ಎಂದು ನಾಲ್ಕು ವರ್ಷದ ತಮ್ಮ ಸಾಧನೆಯ ಬಗ್ಗೆ ಮನದ ಮಾತು ಹಂಚಿಕೊಂಡ್ರು. ಕಾರವಾರ ಕ್ಷೇತ್ರದ ಮೂರು ಪಕ್ಷದ ಅಭ್ಯರ್ಥಿಗಳು ಇಂದು ಜನರ, ಕಾರ್ಯಕರ್ತರ ಜಂಜಾಟದಿಂದ ದೂರ ಉಳಿದು ತಮ್ಮ ದಣಿವನ್ನು ನೀಗಿಸಿಕೊಂಡಿದ್ದು, 15ರ ಅಗ್ನಿ ಪರೀಕ್ಷೆಗೆ ರಿಫ್ರೆಶ್ ಆಗುತ್ತಿದ್ದಾರೆ.

  • ಹೈಕಮಾಂಡ್ ದಲಿತರನ್ನ ಸಿಎಂ ಮಾಡಿದ್ರೆ ನನ್ನದೇನೂ ತಕರಾರು ಇಲ್ಲ, ಬಿಟ್ಟು ಕೊಡೋದಕ್ಕೆ ಸಿದ್ಧ: ಸಿಎಂ

    ಹೈಕಮಾಂಡ್ ದಲಿತರನ್ನ ಸಿಎಂ ಮಾಡಿದ್ರೆ ನನ್ನದೇನೂ ತಕರಾರು ಇಲ್ಲ, ಬಿಟ್ಟು ಕೊಡೋದಕ್ಕೆ ಸಿದ್ಧ: ಸಿಎಂ

    ಮೈಸೂರು: ಹೈಕಮಾಂಡ್ ದಲಿತರನ್ನು ಸಿಎಂ ಮಾಡುತ್ತೇವೆ ಎನ್ನುವ ನಿರ್ಧಾರ ತೆಗೆದುಕೊಂಡ್ರೇ ತಗೊಳ್ಳಿ. ಇದ್ರಲ್ಲಿ ನನ್ನದೇನೂ ತಕರಾರು ಇಲ್ಲ. ಎಲ್ಲಾ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಕಾಂಗ್ರೆಸ್‍ಗೆ ದಲಿತ ಸಿಎಂ ಕೂಗು ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನಾದ್ರೂ ದಲಿತ ಸಿಎಂ ಅಂತಾ ಕೇಳಿದ್ರೆ, ನಾನು ಬಿಟ್ಟು ಕೊಡಲು ಸಿದ್ಧ ಎಂದು ಉತ್ತರಿಸಿದ್ದಾರೆ.

    ಕರ್ನಾಟಕದ ಈ ಚುನಾವಣೆ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಲೋಕಸಭೆಗೂ ಮುನ್ನ ಎರಡು ರಾಜ್ಯದ ಚುನಾವಣೆ ಬರುತ್ತೆ. ಅಲ್ಲಿಯೂ ನಾವೇ ಗೆಲ್ಲುತ್ತೇವೆ. ಅದರ ಜೊತೆ ಲೋಕಸಭೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಅಂತ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ರು.

    ನಾನೂ ಬದುಕಿರುವವರೆಗೆ ಜಾತಿವಾದಿಗಳು, ಮತೀಯವಾದಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೇನೆ. ಚುನಾವಣಾ ರಾಜಕೀಯ ನನಗೆ ಸಾಕಾಗಿದೆ. ಆದ್ರೆ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ. ನನ್ನ ಜೊತೆಗಿರುವವರಿಗೆ ಬೆಂಬಲವಾಗಿ ಇರುತ್ತೇನೆ ಅಂದ್ರು.

    ಇದೇ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರುವುದು ಸ್ವಲ್ಪ ಮಟ್ಟಿನ ಸತ್ಯ. ಅದು ಪೂರ್ಣ ಪ್ರಮಾಣದ ಸತ್ಯ ಅಲ್ಲ ಅಂತ ಮತದಾನೋತ್ತರ ಸಮೀಕ್ಷೆ ಕುರಿತು ಸಿಎಂ ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಚಾಮುಂಡೇಶ್ವರಿ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ. ಆದ್ರೆ ಅಂತರ ಕಡಿಮೆಯಾಗಬಹುದು. ಜೆಡಿಎಸ್ ವಿಪರೀತ ಹಣ ಹಂಚಿದ್ರು. ಹಣದಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂದು ಅವರು ಅಂದ್ಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಅವರ ಹಣದಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಬಹುದು ಅಷ್ಟೇ ಅಂದ್ರು.

    ಒಟ್ಟಿನಲ್ಲಿ ಎಲೆಕ್ಷನ್ ಅಖಾಡದ ಕಾರ್ಯ ಮುಗಿಸಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಶನಿವಾರ ವೋಟ್ ಮಾಡಿದ ಬಳಿಕ ಮೈಸೂರಿನ ನಿವಾಸದಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಸಿಎಂ, ಟ್ವೀಟ್ ಮೇಲೆ ಟ್ವೀಟ್ ಮಾಡ್ತಿದ್ದಾರೆ. ಬೆಂಬಲಿಗರೇ, ಕಾರ್ಯಕರ್ತರೇ, ಹಿತೈಷಿಗಳೇ ನಿರಾಳರಾಗಿರಿ. ನಿಮಗೆ ಇನ್ನೆರಡು ದಿನಗಳ ಕಾಲ ಚುನಾವಣೋತ್ತರ ಸಮೀಕ್ಷೆ ಮನೋರಂಜನೆ ನೀಡಲಿದೆ. ಎಕ್ಸಿಟ್ ಪೋಲ್‍ಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಗೆಲ್ಲೋದು ನಾವೇ. ವೀಕೆಂಡ್‍ನ್ನು ಎಂಜಾಯ್ ಮಾಡಿ ಎಂದು ಟ್ವಿಟ್ಟರ್‍ನಲ್ಲಿ ಸಿಎಂ ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ. ಇದರೊಂದಿಗೆ 6+4+2= 4 ಅಂತ ಮಾರ್ಮಿಕವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ದಲಿತರನ್ನು ಕಡೆಗಣಿಸುತ್ತಿದೆ. ಈ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿತ್ತು ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಬೆಂಗಳೂರಿನ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರು ಒಟ್ಟಿಗೆ ಪ್ರಚಾರ ನಡೆಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಮತಗಟ್ಟೆ ಸಮೀಕ್ಷೆಯಲ್ಲಿ ಕೆಲವು ಈ ಬಾರಿ ರಾಜ್ಯದ ಅತಂತ್ರ ಪರಿಸ್ಥಿತಿ ನಿರ್ಮಾಣವವಾಗಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಸಿಎಂ ದಲಿತ ಸಿಎಂ ವಿಚಾರದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ್ದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    https://www.youtube.com/watch?v=h_B_PDUG2Yk

    https://www.youtube.com/watch?v=pFR9WyP41KU