Tag: Karnataka Election

  • ಜೆಡಿಎಸ್-ಕೈ ಮೈತ್ರಿಗೆ ಮೊದಲ ಪರೀಕ್ಷೆ – ರಾಜರಾಜೇಶ್ವರಿ ನಗರದಲ್ಲಿ ಯಾರು ರಾಜ..?

    ಜೆಡಿಎಸ್-ಕೈ ಮೈತ್ರಿಗೆ ಮೊದಲ ಪರೀಕ್ಷೆ – ರಾಜರಾಜೇಶ್ವರಿ ನಗರದಲ್ಲಿ ಯಾರು ರಾಜ..?

    ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಇವತ್ತು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ವೋಟರ್ ಐಡಿ ಹಗರಣ ಹಿನ್ನೆಲೆಯಲ್ಲಿ ಮೇ 28ಕ್ಕೆ ಮತದಾನ ಮುಂದೂಡಿಕೆ ಆಗಿತ್ತು.

    ಕ್ಷೇತ್ರದಲ್ಲಿದ್ದ ಒಟ್ಟು 4 ಲಕ್ಷದ 71 ಸಾವಿರದ 900 ಮತದಾರರಲ್ಲಿ ಶೇಕಡಾ 54.20 ರಷ್ಟು ಮಂದಿಯಷ್ಟೇ ಹಕ್ಕು ಚಲಾಯಿಸಿದ್ದರು. ಅಂದಹಾಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದೇ ವಾರಕ್ಕೆ ಸರಿಯಾಗಿ ಮೊದಲ ವಿಧಾನಸಭಾ ಫಲಿತಾಂಶ ಹೊರಬರುತ್ತಿರುವುದು ವಿಶೇಷ.

    ಆರ್ ಆರ್ ನಗರದಲ್ಲಿ ದೋಸ್ತಿಗಳ ನಡುವೆಯೇ ನೇರ ಸ್ಪರ್ಧೆ ಇದ್ದು, ಎರಡೂ ಪಕ್ಷಗಳು ಪ್ರತ್ಯೇಕವಾಗಿ ಪ್ರಚಾರ ಮಾಡಿವೆ. ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ವಿಧಾನಸೌಧಕ್ಕಷ್ಟೇ ಸೀಮಿತ ಅಂತ ಪ್ರಚಾರದ ವೇಳೆ ಘೋಷಿಸಿದ್ದರು. ಕಾಂಗ್ರೆಸ್‍ನಿಂದ ಕಣಕ್ಕಿಳಿದಿರೋ ಮುನಿರತ್ನ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ರೆ, ಜೆಡಿಎಸ್‍ನಿಂದ ಜಿ.ಹೆಚ್.ರಾಮಚಂದ್ರಗೌಡ ಶಾಸಕರಾಗುವ ಉಮೇದಲ್ಲಿದ್ದಾರೆ. ಇವರಿಬ್ಬರ ಕಾದಾಟದಿಂದಾಗುವ ಮತ ವಿಭಜನೆಯ ಲಾಭ ಪಡೆದು ಬಿಜೆಪಿಯ ತುಳಸಿ ಮುನಿರಾಜು ವಿಜಯಿಯಾಗುವ ಲೆಕ್ಕಾಚಾರದಲ್ಲಿದ್ದಾರೆ. ಕಣದಲ್ಲಿ ಒಟ್ಟು 14 ಮಂದಿ ಅಭ್ಯರ್ಥಿಗಳಿದ್ದಾರೆ.

    ಮೇ 15ರಂದು ಹೊರಬಿದ್ದಿದ್ದ 222 ಕ್ಷೇತ್ರಗಳ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37, ಬಿಎಸ್‍ಪಿ 1, ಇಬ್ಬರು ಪಕ್ಷೇತರರು ಶಾಸಕರಾಗಿ ಆಯ್ಕೆ ಆಗಿದ್ರು. ಸದ್ಯ ಜೆಡಿಎಸ್+ಕಾಂಗ್ರೆಸ್ ಮೈತ್ರಿಕೂಟ ಇಬ್ಬರು ಪಕ್ಷೇತರರ ಸಹಾಯದೊಂದಿಗೆ ವಿಧಾನಸಭೆಯಲ್ಲಿ 118 ಶಾಸಕರ ಬಲಾಬಲ ಹೊಂದಿದೆ. ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 111.

  • ರೆಸಾರ್ಟ್, ಹೋಟೆಲ್ ವಾಸ್ತವ್ಯದಿಂದ ಇಂದು ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮುಕ್ತಿ!

    ರೆಸಾರ್ಟ್, ಹೋಟೆಲ್ ವಾಸ್ತವ್ಯದಿಂದ ಇಂದು ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮುಕ್ತಿ!

    ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್, ಹೋಟೆಲ್‍ಗಳಲ್ಲೇ ಕಳೆದ 10 ದಿನದಿಂದ ಬೀಡುಬಿಟ್ಟಿರೋ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಇವತ್ತು ಮುಕ್ತಿ ಸಿಗಲಿದೆ.

    ವಿಶ್ವಾಸಮತ ಸಾಬೀತು ಬಳಿಕ 117 ಶಾಸಕರು ತಮ್ಮ ಸ್ವಕ್ಷೇತ್ರಗಳಿಗೆ ಹಿಂದಿರುಗಬಹುದಾಗಿದೆ. ರಾಹುಕಾಲ ಶುರುವಾಗುವ ಮುನ್ನ, ರೆಸಾರ್ಟ್‍ನಲ್ಲಿರೋ ಜೆಡಿಎಸ್ ಶಾಸಕರು, ಹೋಟೆಲ್‍ನಲ್ಲಿರೋ ಕಾಂಗ್ರೆಸ್ ಶಾಸಕರು ಬಸ್‍ಗಳಲ್ಲಿ ವಿಧಾನಸೌಧದ ಕಡೆ ಹೊರಟಿದ್ದಾರೆ.

    ಶಾಸಕರ ಬಸ್‍ಗಳು ಬರೋ ರಸ್ತೆಯುದ್ದಕ್ಕೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಗೆದ್ದ ದಿನದಿಂದ ಕ್ಷೇತ್ರಗಳಿಂದ ಮಾಯವಾಗಿದ್ದವರು ಈ ದಿನ ಸಂಜೆ ನಾಳೆ ಮತ್ತೆ ತಮ್ಮೂರುಗಳತ್ತ ಮುಖ ಮಾಡಲಿದ್ದಾರೆ.

    ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಹೈಡ್ರಾಮಾವೇ ನಡೆದು ಹೋಗಿತ್ತು. ಇತ್ತ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಬಂದಿತ್ತು. ಆದ್ರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡುತ್ತೇವೆಂದು ಹೇಳಿದಾಗ, ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ಅನುಮತಿ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಯೇ ಬಿಟ್ಟರು. ಈ ಮಧ್ಯೆ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಎರಡೂ ಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಬಿಎಸ್‍ವೈ ಗೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತ್ತು.

    ಇದರಿಂದ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿತ್ತು. ಹೀಗಾಗಿ ಈ ಭೀತಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರುಗಳು ರೆಸಾರ್ಟ್, ಹೋಟೆಲ್ ನಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಿದ್ದರು. ಇಂದು ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಮಾಡಿದ ಬಳಿಕ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಲು ಅನುಮತಿ ನೀಡಲಾಗುತ್ತಿದೆ.

  • ಬೆಟ್ಟಿಂಗ್‍ಗಾಗಿ ಸೋಲ್ತೀನಿ ಎಂದ ಯೋಗೇಶ್ವರ್ ಆಡಿಯೋ ಔಟ್!

    ಬೆಟ್ಟಿಂಗ್‍ಗಾಗಿ ಸೋಲ್ತೀನಿ ಎಂದ ಯೋಗೇಶ್ವರ್ ಆಡಿಯೋ ಔಟ್!

    ರಾಮನಗರ: ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಪಿ ಯೋಗೇಶ್ವರ್ ಬೆಟ್ಟಿಂಗ್ ವಿಚಾರವಾಗಿ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋ ಇದೀಗ ಹೊರಬಿದ್ದಿದೆ.

    ಮತ ಏಣಿಕೆಗೂ ಮುನ್ನ ಗೆಲುವಿನ ಲೆಕ್ಕಾಚಾರದ ಮತಗಳಿಕೆ ಬಗ್ಗೆ ಲೆಕ್ಕಾಚಾರ ಹಾಕಿರುವ ಯೋಗೇಶ್ವರ್ ತಾವು ಇಷ್ಟು ಲೀಡ್ ಗಳಿಸ್ತೇನೆ. ಈಗಾಗಲೇ ಜೆಡಿಎಸ್‍ನವರು ಬೆಟ್ಟಿಂಗ್ ಕಟ್ಟೋಕೆ ರೆಡಿ ಇದ್ದಾರೆ. ಪ್ರೆಸ್‍ಮೀಟ್ ಕರೆದು ತಾನು ಸೋಲುತ್ತೇನೆ. ನೀವು ಬೆಟ್ ಕಟ್ಟಬಹುದು ಎಂದು ಆಡಿಯೋದಲ್ಲಿ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ತಾವು ಜಿಲ್ಲಾ ಪಂಚಾಯತ್‍ಗಳಲ್ಲಿ ಇಷ್ಟಿಷ್ಟು ಲೀಡ್ ಪಡೆದು ಒಟ್ಟು 9 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಎಚ್‍ಡಿ ಕುಮಾರಸ್ವಾಮಿ ವಿರುದ್ಧ 21,530 ಮತಗಳ ಅಂತರದಲ್ಲಿ ಯೋಗೇಶ್ವರ್ ಸೋತಿದ್ದರು. ಕುಮಾರಸ್ವಾಮಿ 87,995 ಮತಗಳನ್ನು ಪಡೆದರೆ ಯೋಗೇಶ್ವರ್ ಅವರಿಗೆ 66,465 ಮತಗಳು ಬಿದ್ದಿತ್ತು.

  • ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!

    ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!

    ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕಪ್ ಅನ್ನು ಕುಮಾರಸ್ವಾಮಿ ಗೆದ್ದುಕೊಂಡರೂ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಮಾಜಿ ಸಚಿವ ಡಿಕೆ ಶಿವಕುಮಾರ್ ಹೊರ ಹೊಮ್ಮಿದ್ದಾರೆ.

    ಆಪರೇಷನ್ ಕಮಲದ ಭೀತಿಗೆ ಒಳಗಾಗಿದ್ದ ಕಾಂಗ್ರೆಸ್ಸನ್ನು ರಕ್ಷಿಸಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆ ಶಿವಕುಮಾರ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಬಿಜೆಪಿ ಕೈ ಶಾಸಕರನ್ನು ಸೆಳೆಯಲು ಮುಂದಾಗುತ್ತಿದೆ ಎನ್ನುವ ಸುಳಿವು ಸಿಕ್ಕ ಕೂಡಲೇ ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ರಕ್ಷಣೆಯನ್ನು ಸರ್ಕಾರ ವಾಪಸ್ ಪಡೆದ ಬಳಿಕ ಇಲ್ಲೂ ಶಾಸಕರನ್ನು ಸೆಳೆಯಬಹುದು ಎನ್ನುವ ಭೀತಿಯಿಂದ ಎಲ್ಲರನ್ನೂ ಹೈದರಾಬಾದ್‍ಗೆ ಡಿಕೆಶಿ ಕರೆದುಕೊಂಡು ಹೋಗಿದ್ದರು.

    ಶನಿವಾರ ನಡೆದ ಸಂಪೂರ್ಣ ಬೆಳವಣಿಗೆಯಲ್ಲೂ ಡಿಕೆಶಿ ಬಹಳ ಮುಖ್ಯ ಪಾತ್ರವಹಿಸಿದ್ದರು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಪಾಟೀಲ್ ಹುಡುಕಾಟ ನಡೆದಿತ್ತು. ಹೋಟೆಲ್ ನಲ್ಲಿ ಪತ್ತೆಯಾದ ವಿಚಾರ ತಿಳಿದ ಡಿಕೆಶಿ ಮಧ್ಯಾಹ್ನ ಸುಮಾರು ಒಂದು ಗಂಟೆ ವಿಧಾನಸೌಧದ ಹೊರಗಡೆಯೇ ಶಾಸಕರಿಗೆ ಕಾದಿದ್ದರು. ಪ್ರತಾಪ್ ಗೌಡ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅವರ ಶರ್ಟ್ ಕಿಸೆಗೆ ಡಿಕೆಶಿ ವಿಪ್ ಹಾಕಿದ್ದರು. ಬಳ್ಳಾರಿಯ ವಿಜಯನಗರ ಶಾಸಕರ ಆನಂದ್ ಸಿಂಗ್ ಅವರನ್ನು ಡಿಕೆಶಿ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ: ಬೇಕಿದ್ರೆ ಬೆಟ್ ಕಟ್ತೀನಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ: ಡಿಕೆ ಶಿವಕುಮಾರ್

    ಬಿಜೆಪಿ ಮ್ಯಾಜಿಕ್ ಸಂಖ್ಯೆಗೆ ತಲುಪುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಡಿಕೆ ಶಿವಕುಮಾರ್ ಫಲಿತಾಂಶ ಬಂದ ದಿನವೇ ಖುದ್ದಾಗಿ ತೆರಳಿ ಮುಳುಬಾಗಿಲು ಪಕ್ಷೇತರ ಶಾಸಕ ನಾಗೇಶ್ ಅವರ ಜೊತೆ ಮಾತನಾಡಿ ನಮ್ಮ ಸರ್ಕಾರಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು.

    ರಾಜ್ಯಪಾಲರು ಬಿಎಸ್‍ವೈಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ 15 ದಿನ ಸಮಯ ನೀಡಿದ ಕೂಡಲೇ ಜೆಡಿಎಸ್ ಶಾಸಕರಿಗಿಂತ ಕಾಂಗ್ರೆಸ್ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಗೊತ್ತಾಯಿತು. ಹೀಗಾಗಿ ರಾಜ್ಯದ ಕೈ ಶಾಸಕರು ಕಮಲಕ್ಕೆ ಹೋಗದಂತೆ ತಡೆಯಲು ಡಿಕೆ ಶಿವಕುಮಾರ್ ಸಹೋದರರ ಹೆಗಲಿಗೆ ಹೈಕಮಾಂಡ್ ಜವಾಬ್ದಾರಿಯನ್ನು ಹಾಕಿತ್ತು.  ಬಹುಮತ ಸಾಬೀತು ಪಡಿಸುವ ದಿನ ಯಾರಾದರೂ ಅಡ್ಡ ಮತದಾನ ಮಾಡಬಹುದು ಎನ್ನುವ ಶಂಕೆ ಇತ್ತು. ಆದರೆ ಕಾಂಗ್ರೆಸ್ಸಿನ ಯಾವೊಬ್ಬ ಶಾಸಕರು ಬಿಜೆಪಿಯ ತೆಕ್ಕೆಗೆ ಬೀಳಲೇ ಇಲ್ಲ. ಈ ಮೂಲಕ ಡಿಕೆಶಿ  ಹೈ ಕಮಾಂಡ್ ಗೆ ನೀಡಿದ ಮಾತನ್ನು ಉಳಿಸಿಕೊಡುವಲ್ಲಿ ಯಶಸ್ವಿಯಾದರು.

    ಈಗಲ್ ಟನ್ ರೆಸಾರ್ಟ್ ಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ಹಿಂದಕ್ಕೆ ಪಡೆದಾಗ ಕನಕಪುರದ ಕಾರ್ಯಕರ್ತರನ್ನು ಕರೆಸಿ ರೆಸಾರ್ಟ್ ಸುತ್ತ ಭದ್ರ ಕಾವಲು ಹಾಕಿಸಿದ್ದರು. ಈ ಹಿಂದೆ ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆಯ ವೇಳೆ ಕೈ ಶಾಸಕರನ್ನು ಇದೇ ಈಗಲ್ ಟನ್ ರೆಸಾರ್ಟ್ ಗೆ ಕರೆ ತಂದು ಅಹ್ಮದ್ ಪಟೇಲ್ ಜಯಗಳಿಸುವಲ್ಲಿ ಬಹಳ ಮುಖ್ಯ ಪಾತ್ರವನ್ನು ಡಿಕೆಶಿ ವಹಿಸಿದ್ದರು.

  • ಬಿಜೆಪಿ ಎಡವಿದ್ದು ಎಲ್ಲಿ? ಪಕ್ಷದ ಮುಂದಿನ ನಡೆ ಏನು?

    ಬಿಜೆಪಿ ಎಡವಿದ್ದು ಎಲ್ಲಿ? ಪಕ್ಷದ ಮುಂದಿನ ನಡೆ ಏನು?

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಬಂತು. ಆದ್ರೆ ಸರ್ಕಾರ ರಚಿಸುವಷ್ಟು ಬಹುಮತ ಮಾತ್ರ ಪಡೆಯಲು ಸಾಧ್ಯವಾಗಲಿಲ್ಲ. ಆದ್ರು ಸರ್ಕಾರ ರಚನೆಗಾಗಿ ರಾಜ್ಯಪಾಲರಿಂದ ಅನುಮತಿ ಪಡೆದುಕೊಂಡು ಮೇ 17ರಂದು ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ರು. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವ ಮುನ್ನವೇ ಸೋಲೊಪ್ಪಿಕೊಂಡ ನೂತನ ಸಿಎಂ ವಿದಾಯದ ಭಾಷಣ ಮಾಡಿ ರಾಜಿನಾಮೆ ಸಲ್ಲಿಸಿದ್ರು.

    ಈ ಎಲ್ಲ ಬೆಳವಣಿಗೆಗಳ ನಡುವೆ ದೊಡ್ಡ ಪಕ್ಷವಾಗಿದ್ದ ಬಿಜೆಪಿ ಸೋತಿದ್ದು ಎಲ್ಲಿ ಎಂಬುದರ ಬಗ್ಗೆ ಚರ್ಚೆಗಳು ಆರಂಭವಾಗಿದೆ.

    * ಬಿಜೆಪಿ ಎಡವಿದ್ದು ಎಲ್ಲಿ…?
    > ಮೈತ್ರಿಯ ಸೂಕ್ಷ್ಮತೆಯನ್ನು ಅರಿಯದೇ ಹೋಗಿದ್ದು
    > ಜೆಡಿಎಸ್, ದೇವೇಗೌಡರ ನಡೆಯ ಬಗ್ಗೆ ಗೊಂದಲಕ್ಕೀಡಾಗಿದ್ದು
    > ರಾಜ್ಯ ಬಿಜೆಪಿ ನಾಯಕರು ಬಿಎಸ್‍ವೈ ಅವರನ್ನ ಒಂಟಿಯಾಗಿಸಿದ್ದು
    > ಅನಂತಕುಮಾರ್, ಡಿವಿಎಸ್, ಈಶ್ವರಪ್ಪ, ಅಶೋಕ್ ಕೈಕಟ್ಟಿ ಕುಳಿತಿದ್ದು
    > ರಾಮುಲು, ಉಮೇಶ್ ಕತ್ತಿ, ಶೋಭಾ ಕರಂದ್ಲಾಜೆ ಮಾತ್ರ ಕಸರತ್ತು ಮಾಡಿದ್ದು
    > ಬಿಜೆಪಿ ರಾಷ್ಟ್ರೀಯ ನಾಯಕರು ಲೇಟ್ ಆಗಿ ಎಂಟ್ರಿ ಕೊಟ್ಟಿದ್ದು
    > ಬಹುಮತ ಸಾಬೀತಿಗೆ 7 ದಿನ ಸಮಯವನ್ನ ಕೇಳದೆ ಹೋಗಿದ್ದು
    > ಅಗತ್ಯ ದಾರಿಗಳ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡದೇ ಹೋಗಿದ್ದು

    ಇತ್ತ ಯಡಿಯೂರಪ್ಪರ ರಾಜಿನಾಮೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ರಚಿಸಿಕೊಂಡು ಸರ್ಕಾರ ರಚನೆಗೆ ಮುಂದಾಗಿವೆ. ಸೋಮವಾರ ಮಧ್ಯಾಹ್ನ 12.30ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರ ರಚಿಸಲು ವಿಫಲವಾದ ಬಿಜೆಪಿಯ ಮುಂದಿನ ನಡೆ ಏನು ಎಂಬುದು ಈ ಕೆಳಗಿನಂತಿದೆ.

    * ಬಿಜೆಪಿ ಮುಂದೇನು…?
    > ಬಹುಮತ ಸಾಬೀತು ವೇಳೆ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನ ದೂರ ಇರುವಂತೆ ನೋಡಿಕೊಳ್ಳುವುದು
    > ಕಾಂಗ್ರೆಸ್, ಜೆಡಿಎಸ್ ವಿರುದ್ಧ ರಾಜ್ಯದಲ್ಲಿ ರಾಜಕೀಯ ಹೋರಾಟ ನಡೆಸುವುದು.
    > ಲಿಂಗಾಯತ ನಾಯಕನನ್ನು ಸಿಎಂ ಆಗಲು ಬಿಡಲಿಲ್ಲ ಅಂತಾ ಬಿಂಬಿಸೋದು.
    > ಸಿಎಂ ಸ್ಥಾನ ತಪ್ಪಿದ ಅನುಕಂಪವನ್ನ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಲು ಪ್ರಯತ್ನ.
    > ಲೋಕಸಭಾ ಚುನಾವಣೆಗೆ ತಯಾರಾಗೋದು, ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ಮಾಡೋದು.
    > ಯಾವಾಗ ಬೇಕಾದ್ರೂ ಚುನಾವಣೆ ನಡೆಯಬಹುದು ಅಂತೇಳಿ ಎಲೆಕ್ಷನ್‍ಗೆ ಸಿದ್ಧವಾಗೋದು.
    > ಬಿಎಸ್‍ವೈ ನೇತೃತ್ವದಲ್ಲೇ ರಾಜ್ಯದಲ್ಲಿ ಪ್ರವಾಸ ಮಾಡೋದು, ಪಕ್ಷ ಸಂಘಟನೆ ಮಾಡೋದು.

  • ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

    ಮತ್ತೆ ನಮ್ಮ ಪಕ್ಷಕ್ಕೆ ಬಾ, ಮಂತ್ರಿ ಮಾಡ್ತೀನಿ: ಬಿ.ಸಿ.ಪಾಟೀಲ್‍ಗೆ ಬಿಎಸ್‍ವೈ ಬಿಗ್ ಆಫರ್

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರ ಬಂದಿದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಆರೋಪಗಳನ್ನು ಕಾಂಗ್ರೆಸ್ ಮಾಡುತ್ತಿದೆ.

    ಇತ್ತ ಕಾಂಗ್ರೆಸ್‍ನ ಕೆಲ ಶಾಸಕರಿಗೆ ಬಿಜೆಪಿ ನಾಯಕರು ಆಫರ್ ಮಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವ್ರಿಗೆ ಆಫರ್ ಕೊಟ್ಟಿರುವ ವಿ.ಎಸ್.ಉಗ್ರಪ್ಪ ಆಡಿಯೋವನ್ನು ಬಿಡುಗಡೆ ಮಾಡಿದ್ರು. ಕೆಲವು ಗಂಟೆಗಳ ಹಿಂದೆಯೇ ಆಫರ್ ಆಡಿಯೋ ಬಿಡುಗಡೆ ಮಾಡ್ತಿದ್ದು, ಬಿಜೆಪಿ ನಾಯಕರು ಅದು ನಮ್ಮ ಧ್ವನಿ ಅಲ್ಲ ಅಂತಾ ಹೇಳಿ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.

    ನನ್ನ ಮೇಲೆ ನಿನಗೆ ವಿಶ್ವಾಸವಿದೆ ತಾನೇ, ಕೊಚ್ಚಿನ್ ಗೆ ಹೋಗುವುದನ್ನು ಬಿಟ್ಟು ಹಿಂದಕ್ಕೆ ಬಾ. ಒಂದು ವೇಳೆ ನೀನು ಕೊಚ್ಚಿನ್ ಗೆ ಹೋದ್ರೆ ನೀನು ನಮ್ಮ ಕೈಗೆ ಸಿಗಲ್ಲ ಅಂತಾ ಬಿಎಸ್ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್ ರಿವೀಲ್ ಮಾಡಿದೆ.

    ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಗೆ ಸಚಿವ ಸ್ಥಾನದ ಆಮಿಷ ಒಡ್ಡುತ್ತಿರುವ ಆಡಿಯೋ ಕ್ಲಿಪ್ ಮತ್ತು ವಿವರ ಇಲ್ಲಿದೆ.

    ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ
    ಬಿಎಸ್ ವೈ: ಹಲೋ?ಹಲೋ..
    ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ ? ಹೇಳಿ? ನಮಸ್ಕಾರ…
    ಬಿಎಸ್ ವೈ: ಹಲೋ? ಹಲೋ?ಎಲ್ಲಿದ್ದೀಯಪ್ಪಾ??
    ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ?. ಕೊಚ್ಚಿನ್ ಗೆ ಹೋಗುತ್ತಿದ್ದೇವೆ? ಬಸ್ ನಲ್ಲಿದ್ದೇನೆ.

    ಬಿಎಸ್‍ವೈ: ಹೋಗಬಾರದಿತ್ತು..! ಬಾರಯ್ಯ ನೀನು ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ? ನಿನಗೇನು ಬೇಕೋ ಅದನ್ನು ಮಾಡುತ್ತೇನೆ.
    ಬಿ.ಸಿ. ಪಾಟೀಲ್: ಆಯಿತು ಅಣ್ಣಾ?ನೀವು ಮೊದಲೇ ಒಂದೂ ಚೂರು ಹೇಳಿದ್ದರೇ?
    ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!
    ಬಿ.ಸಿ. ಪಾಟೀಲ್: ಹೌದು?
    ಬಿ.ಎಸ್.ವೈ: ನೀನು ಹೋಗಬೇಡ? ಬಂದು ಬಿಡು?
    ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..

    ಬಿ.ಎಸ್.ವೈ: ಮನೆವ್ರು? ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!
    ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್ ಅಂತಾ?
    ಬಿ.ಎಸ್. ವೈ: ಯು ವಿಲ್ ಬಿಕಂ ದ ಮಿನಿಸ್ಟರ್ ದಟ್ಸ್ ಆಲ್!
    ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ? ನನ್ನ ಜತೆ ಇಬ್ಬರು ಮೂವರು ಇದ್ದಾರೆ!
    ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ?? ಕರೆದು ಕೊಂಡು ಬಾ
    ಬಿ.ಸಿ. ಪಾಟೀಲ್ : ಖಂಡಿತ? ಖಂಡಿತ
    ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ

    ಬಿ.ಸಿ. ಪಾಟೀಲ್ : ಆಯ್ತಣ್ಣಾ?ಆಯ್ತಣ್ಣಾ!
    ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ
    ಬಿ.ಸಿ. ಪಾಟೀಲ್: ಆಯ್ತಣ್ಣಾ? ಆಯ್ತಣ್ಣಾ?
    ಬಿ.ಎಸ್. ವೈ: ಈಗೇನು ಮಾಡ್ತೀಯಾ? ಹೇಳು
    ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ? ನಾನು ಐದು ನಿಮಿಷದಲ್ಲಿ ಹೇಳ್ತೀನಿ ಅಣ್ಣಾ
    ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು
    ಬಿ.ಸಿ. ಪಾಟೀಲ್: ಆಯ್ತಣ್ಣಾ? ಆಯ್ತಣ್ಣಾ

  • ಆಂಧ್ರದಲ್ಲಿ ಏನಾಯ್ತು ಗೊತ್ತಲ್ಲ, 25 ಕೋಟಿ ಕೊಡ್ತೀನಿ ನಮ್ಮ ಕಡೆ ಬಾ: ಶ್ರೀರಾಮುಲು ಧಮಾಕಾ ಆಫರ್

    ಆಂಧ್ರದಲ್ಲಿ ಏನಾಯ್ತು ಗೊತ್ತಲ್ಲ, 25 ಕೋಟಿ ಕೊಡ್ತೀನಿ ನಮ್ಮ ಕಡೆ ಬಾ: ಶ್ರೀರಾಮುಲು ಧಮಾಕಾ ಆಫರ್

    ಬೆಂಗಳೂರು: ಇದೂವರೆಗೂ ಬಿಜೆಪಿಯ ಜನಾರ್ದನ ರೆಡ್ಡಿ, ಬಿ.ಜೆ.ಪುಟ್ಟಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಆಫರ್ ಕೊಟ್ಟಿರುವ ಆಡಿಯೋಗಳನ್ನು ಕೇಳಿದ್ದಾಯಿತು. ಇದೀಗ ಬಿಜೆಪಿ ಶಾಸಕ ಶ್ರೀರಾಮುಲು ಮತ್ತು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಆಫರ್ ನೀಡಿದ್ದಾರೆ ಎನ್ನಲಾದ ಆಡಿಯೋ ರಿಲೀಸ್ ಆಗಿದೆ.

    ಹಾವೇರಿ ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‍ಗೆ ಆಫರ್ ನೀಡಿರುವ ಆಡಿಯೋವನ್ನ ಕಾಂಗ್ರೆಸ್ ರಿಲೀಸ್ ಮಾಡಿದೆ. ಕೇಂದ್ರದಲ್ಲಿಯೇ ನಮ್ಮ ಸರ್ಕಾರವಿದೆ ಬಂದು ಬಿಡಿ. ಕೇಂದ್ರ ಸರ್ಕಾರ ನಮ್ಮದೇ ಇದೆ ಯಾವುದೇ ಅಮಾನತು ಆಗಲ್ಲ ಎಂದು ಭರವಸೆಯನ್ನು ನೀಡಿದ್ದಾರೆ.

    ಆಡಿಯೋದಲ್ಲಿ ಏನಿದೆ?
    ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..
    ಬಿ.ಸಿ. ಪಾಟೀಲ್: ಹಾ? ನಮಸ್ಕಾರ ಹೇಳಿ ಅಣ್ಣಾ? ಬ್ರದರ್
    ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ ಮಾಡ್ತೀರಾ?
    ಬಿ.ಸಿ.ಪಾಟೀಲ್: `ಸಾಹೇಬ್ರು’ ಹಂಗೆ ಹೇಳಿದ್ರು? ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.
    ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?
    ಬಿ.ಸಿ. ಪಾಟೀಲ್: ನೀವೇ ಹೇಳಬೇಕು.
    ಶ್ರೀರಾಮುಲು: 25 ಅಂತ ಹೇಳಿದ್ದೆ.

    ಬಿ.ಸಿ. ಪಾಟೀಲ್: ನನ್ನ ಜತೆಯಲ್ಲಿ 3-4 ಜನರಿದ್ದಾರೆ? ಅವರಿಗೆ ಕ್ಲಾರಿಫೈ ಮಾಡಬೇಕು
    ಶ್ರೀರಾಮುಲು: ಅವರಿಗೆ 10ರಿಂದ 15 ಕೊಡ್ತೀವಿ
    ಬಿ.ಸಿ. ಪಾಟೀಲ್: ಅಣ್ಣಾ? ಅಣ್ಣಾ?ಅವರ ಪೊಸಿಷನ್ ಏನು?
    ಶ್ರೀರಾಮುಲು: ಅವರನ್ನೂ ಮಂತ್ರಿ ಮಾಡ್ತೀವಿ?
    ಬಿ.ಸಿ. ಪಾಟೀಲ್: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ? ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ??
    ಶ್ರೀರಾಮುಲು: ಡೋಂಟ್ ವರಿ? ಎಲೆಕ್ಶನ್ ಇರುವುದಿಲ್ಲ?ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ? ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ ? ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ? ಅವರಹತ್ತಿರ ಮಾತಾಡಿ?

    ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್?
    ಶ್ರೀರಾಮುಲು: ಇಲ್ಲಾ ಮಾತನಾಡಿ?
    ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್
    ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ?ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು
    ಬಿ.ಸಿ. ಪಾಟೀಲ್: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು? ನೀವು ಒಂದು ಫಿಗರ್ ಹೇಳಿ?
    (ರಾಮುಲು ಮಧ್ಯಪ್ರವೇಶ)
    ಶ್ರೀರಾಮುಲು: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ
    ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ?ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು? ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು? ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು?

    ಬಿ.ಸಿ. ಪಾಟೀಲ್: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್?
    ಮುರಳೀಧರ್ ರಾವ್: ಸಾರ್? ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ? 38 ಹೇಗೆ ಸ್ಟೇಬಲ್ ಆಗುತ್ತದೆ.
    ಬಿ.ಸಿ. ಪಾಟೀಲ್: ಯೆಸ್ ಸಾರ್. ಯೆಸ್ ಸಾರ್?!!

  • ಕೊನೆಯುಸಿರು ಇರೋವರೆಗೂ ನಾನು ರೈತರಿಗಾಗಿ ಹೋರಾಡ್ತೀನಿ: ಬಿಎಸ್‍ವೈ ವಿದಾಯ ಭಾಷಣ

    ಕೊನೆಯುಸಿರು ಇರೋವರೆಗೂ ನಾನು ರೈತರಿಗಾಗಿ ಹೋರಾಡ್ತೀನಿ: ಬಿಎಸ್‍ವೈ ವಿದಾಯ ಭಾಷಣ

    ಬೆಂಗಳೂರು: 56 ಗಂಟೆಗಳ ಕಾಲ ಕರುನಾಡಿನ ರಾಜನಾಗಿದ್ದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    104 ಸದಸ್ಯರ ಹೊಂದಿ ಈ ಬಾರಿ ಅಧಿಕಾರವನ್ನೇ ನಡೆಸಿಯೇ ತೀರುತ್ತೇವೆ ಎಂದಿದ್ದ ಬಿಎಸ್ ಯಡಿಯೂರಪ್ಪ ವಿಶ್ವಾಸ ಮತಯಾಚನೆ ನಡೆಸದೇ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದ್ದಾರೆ.

    ವಿಶ್ವಾಸಮತ ಯಾಚನೆಗೂ ಮುನ್ನವೇ ಯಡಿಯೂರಪ್ಪನವರು ತಮ್ಮ ಸೋಲನ್ನು ಒಪ್ಪಿಕೊಂಡರು. ರಾಜೀನಾಮೆ ನೀಡುವ ಮುನ್ನ ಭಾಷಣ ಮಾಡಿದ ಬಿಎಸ್‍ವೈ, ಏಪ್ರಿಲ್ 14 2016ರಂದು ರಾಜ್ಯಾಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿಯಾಗಿ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದರು. ಪರಿವರ್ತನಾ ಯಾತ್ರೆಯಲ್ಲಿ ಜನರ ಪ್ರೀತಿ ವಿಶ್ವಾಸ ಸಿಕ್ಕಿದ್ದು, ಅಂದು ಸಿಕ್ಕಿರುವ ಬೆಂಬಲವನ್ನು ನಾನು ಜೀವನ ಪೂರ್ತಿ ಮರೆಯುವುದಿಲ್ಲ. ಜನರು ನಮಗೆ 104 ಕ್ಷೇತ್ರಗಳಲ್ಲಿ ಗೆಲ್ಲಿಸಿ ಅಭೂತಪೂರ್ವ ಬೆಂಬಲ ನೀಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ್ನು ತಿರಸ್ಕರಿಸಿದ್ದಾರೆ ಅಂತಾ ಭಾಷಣದ ಆರಂಭದಲ್ಲಿಯೇ ಎರಡೂ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಚುನಾವಣಾ ಪ್ರಚಾರದಲ್ಲಿ ಅವರಪ್ಪಾಣೆ, ನಿಮ್ಮಪ್ಪರಾಣೆ ಸಿಎಂ ಆಗಲ್ಲ ಅಂತಾ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಬಂದವರು ಇಂದು ಒಂದಾಗಿದ್ದಾರೆ. ಹಿಂದಿನ ಸರ್ಕಾರದ ವೈಫಲ್ಯತೆಯಿಂದಾಗಿ ಕರುನಾಡ ಜನರು ಕಾಂಗ್ರೆಸ್‍ನ್ನು ತಿರಸ್ಕರಿಸಿದ್ದಾರೆ. ಜನಾದೇಶದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ನನ್ನ ಕೊನೆಯುಸಿರು ಇರೋವರೆಗೂ ನಾನು ರೈತರಿಗಾಗಿ ಹೋರಾಡುತ್ತಿರುತ್ತೇನೆ. ರಾಜ್ಯದಲ್ಲಿಯ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ರೈತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಲು ನಾನು ತೀರ್ಮಾನಿಸಿದ್ದೆ. ಕಳೆದ 5 ವರ್ಷಗಳಲ್ಲಿ ನಾನು ರಾಜಕೀಯ ಏಳು ಬೀಳುಗಳನ್ನು ಕಂಡಿದ್ದೇನೆ ಅಂತಾ ಹೇಳುವ ಮೂಲಕ ಭಾವುಕರಾದರು.

    ಯಾರ ಹಿಂದೆಯೋ ನಾನು ರಾಜಕೀಯ ಮಾಡಿಲ್ಲ. ರಾಜ್ಯದ ಜನರ ಸೇವೆ ಮಾಡ್ಬೇಕು, ರೈತರನ್ನು ಉಳಿಸಬೇಕು ಎಂಬ ಹಂಬಲ ನನ್ನಲಿದೆ. ಮುಂದಿನ ದಿನಗಳಲ್ಲಿಯೂ ನನ್ನ ಹೋರಾಟ ಮುಂದುವರೆಯುತ್ತದೆ. ನಮ್ಮ ರಾಜ್ಯದಲ್ಲಿ ಎಲ್ಲ ಸಂಪನ್ಮೂಲಗಳು ನಮ್ಮಲಿವೆ. ಆದ್ರೆ ಸದುಪಯೋಗ ಮಾಡಿಕೊಳ್ಳುವರ ಇಲ್ಲ. ಇಂದು ನನ್ನ ಪಾಲಿಗೆ ಅಗ್ನಿ ಪರೀಕ್ಷೆ ಇದ್ದಂತೆ ಕಾಣುತ್ತಿದೆ. ನಾನು ನನ್ನ ಜೀವನದುದ್ದಕ್ಕೂ ಹಲವ ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ ಎಂದರು.

    ರಾಜ್ಯದ ಜನರು 113 ಸ್ಥಾನಗಳನ್ನು ನಿಮಗೆ ನೀಡಿದ್ರೆ ಇಡೀ ಕರ್ನಾಟಕದ ಚಿತ್ರಣವೇ ಬದಲಾಗುತ್ತಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡುಗೆಯನ್ನು ನೀಡುತ್ತೇವೆ. ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಲಿದೆ. ಅಧಿಕಾರದಲ್ಲಿ ಇರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಜನರ ಸೇವೆ ಮಾಡುತ್ತೇನೆ. ರಾಜಭವನಕ್ಕೆ ತೆರಳಿ ನನ್ನ ರಾಜಿನಾಮೆ ಸಲ್ಲಿಸುತ್ತೇನೆ. ಮುಂದಿನ 5 ವರ್ಷಗಳಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

  • ಶನಿವಾರ ಕರ್ನಾಟಕ ಪೊಲಿಟಕಲ್ ಲೀಗ್ ಕ್ಲೈಮ್ಯಾಕ್ಸ್ : ಕಲಾಪ ಹೇಗೆ ನಡೆಯುತ್ತೆ?

    ಶನಿವಾರ ಕರ್ನಾಟಕ ಪೊಲಿಟಕಲ್ ಲೀಗ್ ಕ್ಲೈಮ್ಯಾಕ್ಸ್ : ಕಲಾಪ ಹೇಗೆ ನಡೆಯುತ್ತೆ?

    ಬೆಂಗಳೂರು: ಕರ್ನಾಟಕ ಪೊಲಿಟಿಕಲ್ ಲೀಗ್ ಕ್ಲೈಮ್ಯಾಕ್ಸ್ ಶನಿವಾರ ವಿಧಾನಸಭೆಯಲ್ಲಿ ನಡೆಯಲಿದೆ. ಚುನಾವಣೆ ನಡೆದ ಬಳಿಕ ಬಹುಮತ ಸಾಬೀತು/ ವಿಫಲಗೊಳಿಸಲು ರಾಜಕೀಯ ಪಕ್ಷಗಳು ನಡೆಸಿದ ತಂತ್ರಗಳು ಫಲ ಕೊಡುತ್ತಾ ಎನ್ನುವ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

    ಸುಪ್ರೀಂ ನಿರ್ದೇಶನದಂತೆ ಸಿಎಂ ಬಿಎಸ್‍ವೈ ವಿಶ್ವಾಸ ಮತಯಾಚನೆ ಮಾಡಲಿರುವ ಕಾರಣ ಕಲಾಪ ಹೇಗೆ ನಡೆಯಬಹುದು ಎಂದು ತಿಳಿಯುವ ಕುತೂಹಲ ಬಹಳ ಮಂದಿಯಲ್ಲಿದೆ. ಹೀಗಾಗಿ ನಾಳೆಯ ಕಲಾಪ ಹೇಗೆ ನಡೆಯುತ್ತದೆ ಎನ್ನುವ ವಿವರವನ್ನು ಪಬ್ಲಿಕ್ ಟಿವಿಗೆ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು ನೀಡಿದ್ದಾರೆ.

    14 ನೇ ವಿಧಾನಸಭೆಯನ್ನ ರಾಜ್ಯಪಾಲರು ವಿಸರ್ಜನೆ ಮಾಡಿದ್ದು, 15 ನೇ ವಿಧಾನಸಭೆ ನಾಳೆ ಬೆಳಗ್ಗೆ 11 ಗಂಟೆಗೆ ನಿಗಧಿಯಾಗಿದೆ. ಈ ಬಗ್ಗೆ ರಾಜ್ಯಪಾಲರಿಂದ ಸೂಚನೆ ಬಂದಿದೆ. ಆಯ್ಕೆಯಾದ 222 ಮಂದಿಗೆ ಸಮನ್ಸ್ ಕಳಿಸಲಾಗುತ್ತಿದೆ. ಮೆಸೇಜ್, ವ್ಯಾಟ್ಸ್ ಅಪ್ ಮೇಲ್ ಮೂಲಕ ಸಂದೇಶ ಕಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಇಂದು ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲರು ಸಂಜೆ 3.40 ವೇಳೆಗೆ ಪ್ರಮಾಣ ವಚನ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಹಂಗಾಮಿ ಸ್ಪೀಕರ್ ಅವರು ಸದನವನ್ನು ನಡೆಸಲಿದ್ದಾರೆ. ನಾಳೆ 4 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕು ಎಂಬ ನಿರ್ದೇಶನ ಬಂದಿದೆ. ಅದ್ದರಿಂದ ಆ ವೇಳೆಗೆ ಮೊದಲೇ ಚುನಾವಣೆಯಲ್ಲಿ ಗೆದ್ದ ಮಂದಿಗೆ ಪ್ರಮಾಣ ವಚನ ನೀಡಲಾಗುತ್ತದೆ. ಜನಪ್ರತಿನಿಧಿಗಳು ತನ್ನ ಗುರುತಿನ ಚೀಟಿ ಹಾಗೂ ಚುನಾವಣೆಯಲ್ಲಿ ಗೆದ್ದ ಪ್ರಮಾಣ ಪತ್ರ ತರಬೇಕು.

    ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ವಿಪ್ ಅನ್ವಯ ಆಗುತ್ತೆ. ಸಿಎಂ ಮೊದಲು ಒಂದು ಪ್ರಸ್ತಾವನೆಯನ್ನು ಮಂಡನೆ ಮಾಡುತ್ತಾರೆ. ಬಹುಮತ ನೀಡಬೇಕು ಎಂದು ಮನವಿ ಮಾಡುತ್ತಾರೆ. ಬಳಿಕ ಪ್ರಸ್ತಾವನೆಯನ್ನು ಮತಕ್ಕೆ ಹಾಕಲಾಗುತ್ತದೆ. ಮತಕ್ಕೆ ಹಾಕಿದ ನಂತರ ಪ್ರಸ್ತಾವನೆಯ ಪರ ವಿರೋಧ ಇರುವವರನ್ನು ಎದ್ದು ನಿಲ್ಲಲು ಹೇಳಲಾಗುತ್ತದೆ. ಬಳಿಕ ಅವರನ್ನ ಲೆಕ್ಕ ಹಾಕಲಾಗುತ್ತದೆ. ಇದರ ಆಧಾರದ ಮೇಲೆ ಪ್ರಸ್ತಾವನೆ ಅಂಗೀಕಾರ ಅಥವಾ ತಿರಸ್ಕಾರ ಆಗಿದೆ ಎನ್ನುವುದನ್ನು ಸ್ಪೀಕರ್ ಘೋಷಣೆ ಮಾಡುತ್ತಾರೆ. ಶಾಸನ ಸಭೆಯಲ್ಲಿ ಸಂಖ್ಯಾ ಆಧಾರದಲ್ಲಿ ಬಹುಮತದ ಸಂಖ್ಯೆ ನಿರ್ಧಾರ ಆಗುತ್ತೆ ಎಂದು ಮೂರ್ತಿ ಸವಿವರವಾಗಿ ಮಾಹಿತಿ ನೀಡಿದರು.

  • ಅನರ್ಹತೆ ಭೀತಿಯಿಂದ ಜೆಡಿಎಸ್ ರೆಬೆಲ್ ಶಾಸಕರು ಪಾರು

    ಅನರ್ಹತೆ ಭೀತಿಯಿಂದ ಜೆಡಿಎಸ್ ರೆಬೆಲ್ ಶಾಸಕರು ಪಾರು

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಶಾಸಕರ ಅನರ್ಹತೆ ಕೋರಿ ಅಂದು ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಧಾನಸಭಾ ಸ್ಪೀಕರ್ ಕೋಳಿವಾಡ ವಜಾ ಮಾಡಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರು, 14 ನೇ ವಿಧಾನಸಭೆ ಮೇ 17 ರಂದು ವಿಸರ್ಜನೆ ಆಗಿದೆ. ಹೀಗಾಗಿ ಅನರ್ಹತೆ ಪ್ರಕರಣದ ಅರ್ಜಿಯನ್ನು ಸ್ಪೀಕರ್ ಕೋಳಿವಾಡ ಶುಕ್ರವಾರ ವಜಾ ಮಾಡಿದ್ದಾರೆ. ಹಂಗಾಮಿ ಸ್ಪೀಕರ್ ಅಧಿಕಾರ ವಹಿಸುವವರೆಗೂ ಕೋಳಿವಾಡ ಸ್ಪೀಕರ್ ಆಗಿರುತ್ತಾರೆ. ಹೀಗಾಗಿ ಇಂದು ಶಾಸಕರ ಅನರ್ಹತೆ ಅರ್ಜಿಯನ್ನ ವಜಾ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇಂದು ಹಂಗಾಮಿ ಸ್ಪೀಕರ್ ಆಗಿ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದರು. ಬಿಜೆಪಿ ಶಾಸಕರಾಗಿದ್ದ ಬೋಪಯ್ಯ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿರುವುದರಿಂದ ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಲಾಗುತ್ತದೆ ಎಂಬ ಸುದ್ದಿ ಪ್ರಕಟವಾಗಿತ್ತು. ಆದರೆ ಈ ವೇಳೆ ಕೋಳಿವಾಡ ಅವರು ಅರ್ಜಿಯನ್ನು ವಜಾ ಮಾಡಿರುವುದರಿಂದ ಜೆಡಿಎಸ್ ಶಾಸಕರು ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಹಂಗಾಮಿ ಸ್ಪೀಕರ್ ಅವರಿಗೆ ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇಲ್ಲ. ಅಷ್ಟೇ ಅಲ್ಲದೇ ಇವರು ವಿಚಾರಣೆಯೇ ನಡೆಸಿಲ್ಲ. ವಿಚಾರಣೆ ನಡೆಸದೇ ಅನರ್ಹಗೊಳಿಸಲು ಸಾಧ್ಯವಿಲ್ಲ. ಆದದ್ದು ಆಗಲಿ ಮುಂದೆ ಏನಾಗುತ್ತದೋ? ಎಂದು ಭಾವಿಸಿ ಧೈರ್ಯ ಮಾಡಿ ಅನರ್ಹ ಮಾಡಿದರೆ ಸದನದಲ್ಲಿ ಸಂಖ್ಯಾಬಲ ಕಡಿಮೆಯಾಗುತ್ತದೆ. ಈಗ ಅನರ್ಹ ಮಾಡಿದರೂ ಸ್ಪೀಕರ್ ನಿರ್ಧಾರವನ್ನು ಮುಂದೆ ಪ್ರಶ್ನಿಸಬಹುದು ಎಂದು ತಿಳಿಸಿದರು.

    ಏನಿದು ಪ್ರಕರಣ?
    ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಭೀಮಾ ನಾಯ್ಕ್, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸ್ ಮೂರ್ತಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಇದನ್ನು ಪ್ರಶ್ನಿಸಿ ಜೆಡಿಎಸ್ ಸ್ಪೀಕರ್ ಗೆ ದೂರು ನೀಡಿತ್ತು. ಸ್ಪೀಕರ್ ಕೋಳಿವಾಡ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಚುನಾವಣೆ ದಿನಾಂಕ ಪ್ರಕಟವಾದರೂ ತನ್ನ ತೀರ್ಪನ್ನು ಪ್ರಕಟಿಸದ ಕಾರಣ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 7ರ ಒಳಗಡೆ ತೀರ್ಪು ನೀಡುವಂತೆ ಆದೇಶಿಸಿತ್ತು. ಜೆಡಿಎಸ್ ರೆಬೆಲ್ ಶಾಸಕರಾಗಿ ಬಳಿಕ ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಗೆದ್ದ ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯ್ಕ ಮತ್ತು ಜಮೀರ್ ಅಹ್ಮದ್ ಅವರನ್ನು ಬಹುಮತ ಸಾಬೀತಿಗೂ ಮುನ್ನ ಸ್ಪೀಕರ್ ಅನರ್ಹಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತಿತ್ತು.