Tag: Karnataka Election 2018

  • ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

    ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

    ಉಡುಪಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿ 24 ಗಂಟೆ ಆಗುವುದರೊಳಗೆ ಜಿಲ್ಲಾಡಳಿತದ ಅಧಿಕಾರಿಗಳು ಬೇಟೆ ಶುರು ಮಾಡಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನದ ಮೇಲೆ ಚುನಾವಣಾಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

    ನಗರದ ಪ್ರವಾಸಿ ಬಂಗಲೆಯಿಂದ ಪ್ರಚಾರಕ್ಕೆಂದು ಹೊರಟ ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪರವಾನಿಗೆಗೆ ಪತ್ರ ರವಾನಿಸಲಾಗಿತ್ತು. ಆದ್ರೆ ಪ್ರಚಾರದ ಸ್ಥಳ, ಸಮಯವನ್ನು ನಿಗದಿಪಡಿಸಿರಲಿಲ್ಲ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪದಡಿಯಲ್ಲಿ ನಗರ ಸಂಚಾರಿ ಪೊಲೀಸರು ವಾಹನವನ್ನು ಸೀಜ್ ಮಾಡಿ ನಗರ ಠಾಣೆಗೆ ಕೊಂಡೊಯ್ದಿದ್ದಾರೆ.

    ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಕೈ ಚಿಹ್ನೆ ಹಾಕಿಸಿದ್ದರು. ಪ್ರೊಬೆಶನರಿ ಐಎಎಸ್ ಅಧಿಕಾರಿ ಪೂವಿತಾ ನೇತೃತ್ವದಲ್ಲಿ ಇಂದು ದಾಳಿಯಾಗಿದ್ದು, ತಹಶಿಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿದ್ದರು.

    ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ: ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಾರೆ ಎಂಬ ಊಹಾಪೋಹಗಳಿಗೆ ಸಚಿವರು ಮೊದಲ ಬಾರಿಗೆ ಬಹಿರಂಗವಾಗಿಯೇ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮೌನ ಮುರಿದಿದ್ದಾರೆ.

    ಸಚಿವ ಮಧ್ವರಾಜ್ ಬಿಜೆಪಿ ಸೇರೋ ಬಗ್ಗೆ ಕಳೆದ ಹಲವು ದಿನಗಳಿಂದ ಭಾರೀ ಚರ್ಚೆ ಆಗುತ್ತಿತ್ತು. ಈ ಬಗ್ಗೆ ಮಧ್ವರಾಜ್ ಕೂಡ ಬಿಜೆಪಿ ಸೇರಲ್ಲ ಎಂದು ಮಾಧ್ಯಮಗಳ ಮುಂದೆ ಬಹಳ ಕೂಲ್ ಆಗಿ ಸ್ಪಷ್ಟನೆ ನೀಡುತ್ತಾ ಬಂದಿದ್ರು. ಕೆಲ ದಿನಗಳ ಹಿಂದೆ ಬಿಜೆಪಿ ಗೇಟು ಮುಚ್ಚಿದೆ. ಗೇಟು ಮುಚ್ಚಿರೋದ್ರಿಂದ ಹೋಗೋ ಪರಿಸ್ಥಿತಿ ಬರಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟು ಮಾತಾಡಿದ್ರು.

    ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯೂ ಹರಡಿದ್ದು, ಇದಕ್ಕೆ ಪ್ರಮೋದ್ ಮಧ್ವರಾಜ್ ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಅದೆಷ್ಟೋ ಬಾರಿ ಹೇಳಿದ್ದೇನೆ ನಾನು ಯಾವ ಪಕ್ಷಕ್ಕೂ ಸೇರಲ್ಲ ಎಂದು ಈಗಲೂ ಹೇಳುತ್ತೇನೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

    https://twitter.com/PMadhwaraj/status/978873976641478656

  • ರಾಜಮಾತೆ ಪ್ರಮೋದಾದೇವಿಯವ್ರಿಗೆ ಬಿಜೆಪಿ ಟಿಕೆಟ್ ಸಿಗುತ್ತಾ: ಗುಟ್ಟು ಬಿಚ್ಚಿಟ್ರು ಪ್ರತಾಪ್ ಸಿಂಹ

    ರಾಜಮಾತೆ ಪ್ರಮೋದಾದೇವಿಯವ್ರಿಗೆ ಬಿಜೆಪಿ ಟಿಕೆಟ್ ಸಿಗುತ್ತಾ: ಗುಟ್ಟು ಬಿಚ್ಚಿಟ್ರು ಪ್ರತಾಪ್ ಸಿಂಹ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4 ಬಿಲ್ಡಿಂಗ್ ಕಟ್ಟಿ ನಾನೇ ಮಹಾರಾಜ ಅಂದ್ಕೊತಾರೆ. ಸಿಎಂ ಅವರಿಗೆ ನಾವು ಉತ್ತರ ಕೊಡಬೇಕಿಲ್ಲ, ಜನರೇ ಉತ್ತರ ಕೊಡ್ತಾರೆ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಮೋರ್ಚಾದಿಂದ ಯಾರಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಯಾರೋ ಒಬ್ಬ ನಾಯಕನ ಮಗ ಅನ್ನುವ ಕಾರಣಕ್ಕಾಗಿ ನಮ್ಮಲ್ಲಿ ಟಿಕೆಟ್ ನೀಡುವುದಿಲ್ಲ. ನಮ್ಮ ನಾಯಕರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಆದಾಗ ನಾನು ಅಲ್ಲಿನ ಅಭ್ಯರ್ಥಿಯಾಗೋದಕ್ಕೋಸ್ಕರ ಹೊಡೆದಾಡುತ್ತಿದ್ದೇನೆ ಅಂತ ಕೆಲವರು ಹೇಳಿದ್ದರು. ಪ್ರಧಾನಿ ಮೋದಿ ಮೈಸೂರಿಗೆ ಬಂದಾಗ ನನ್ನ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದ್ರೆ ಎರಡು ದಿನಗಳ ಬಳಿಕ ಪತ್ರಿಕೆಗಳಲ್ಲಿ ಪ್ರಮೋದಾದೇವಿ ಅವರಿಗೆ ಟಿಕೆಟ್ ಸಿಗುತ್ತಾ? ಅಂತ ವರದಿಯಾಗಿತ್ತು. ಅದರೆ ಅಲ್ಲೊಬ್ಬ ಹಾಲಿ ಎಂಪಿ ಇದ್ದಾನೆ, ಸಾಕಷ್ಟು ಕೆಲಸ ಮಾಡಿದ್ದಾನೆ ಅಂತ ಯೋಚನೆ ಮಾಡಲಿಲ್ಲ. ಕೆಲವರು ಮನಸ್ಸಿನಲ್ಲಿ ಇರುವ ಕಸವನ್ನು ಈ ರೀತಿ ಬರೆಯುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಅಂತ ಪ್ರತಾಪ್ ಸಿಂಹ ನುಡಿದ್ರು. ಇದನ್ನೂ ಓದಿ: ಪ್ರತಾಪ್ ಸಿಂಹ ಕಾರ್ಯ ವೈಖರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ

    ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ ಎಂಬ ಚುನಾವಣಾ ಆಯುಕ್ತರ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸತ್ಯ ಕೆಲವರಿಗೆ ಅಪಥ್ಯವಾಗಿರುತ್ತದೆ, ಆಗ ಅದು ಪ್ರಚೋದನಾಕಾರಿಯಾಗಿ ಗೋಚರಿಸುತ್ತದೆ. ನನ್ನ ಪ್ರಕಾರ ಅನಂತ್ ಕುಮಾರ್ ಹೆಗ್ಡೆ ಸತ್ಯವನ್ನೇ ಮಾತಾಡುತ್ತಾರೆ. ಸತ್ಯವನ್ನು ಹೇಳಿದಾಗ ಅದು ಪ್ರಚೋದನಾಕಾರಿ ರೀತಿ ಅನ್ನಿಸುತ್ತದೆ ಅಂತ ಟಾಂಗ್ ನೀಡಿದ್ರು.

    ದೇಶವನ್ನು ಹಿಂದುತ್ವ ಮತ್ತು ರಾಷ್ಟ್ರೀಯತೆಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆ ಅಂತ ಹಿಂದೂ ಧರ್ಮ ಮಾತ್ರ ಹೇಳುತ್ತದೆ. ಬೇರೆ ಧರ್ಮದಲ್ಲಿ ಬೇರೆ ದೇವರನ್ನು ಒಪ್ಪಿಕೊಳ್ಳುವುದೇ ಇಲ್ಲ. ನಾವು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವವರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸೂಚನೆ ರವಾನೆ

    ಜೆಡಿಎಸ್ ಜತೆ ಕಾಂಗ್ರೆಸ್ ಸೇರಿಕೊಂಡು ಗುಂಡ್ಲುಪೇಟೆ, ನಂಜನಗೂಡು ಎಲೆಕ್ಷನ್ ನಲ್ಲಿ, ಬಿಬಿಎಂಪಿಯಲ್ಲಿ ಏನೇನ್ ಮಾಡಿದ್ರು ಅನ್ನೋದು ಜನರಿಗೆ ಗೊತ್ತಿದೆ. ಜೆಡಿಎಸ್ ಬಿಜೆಪಿ ಟೀಂ ಅಂತಾರೆ ಈಗ, ಅವರು ಜೆಡಿಎಸ್ ಜತೆ ಯಾವಾಗ ಹೇಗೆ ಇರ್ತಾರೆ ಅನ್ನೋದು ಗೊತ್ತು ಅಂತ ಹೇಳಿದ್ದಾರೆ.

    ನಾಳೆಯಿಂದ ಅಭಿಯಾನ: ಗುರುವಾರದಿಂದ ಏಪ್ರಿಲ್ 5 ರ ತನಕ ಬಿಜೆಪಿ ಯುವಮೋರ್ಚಾದಿಂದ ಕರುನಾಡ ಜಾಗೃತಿ ಯಾತ್ರೆ ನಡೆಯಲಿದೆ. ರಾಜ್ಯದಲ್ಲಿ 55 ಸಾವಿರ ಬೂತ್ ಗಳಿವೆ. ಪ್ರತಿ ಬೂತ್ ನಿಂದ 3 ಬೈಕ್ ಗಳ ಜಾಥಾ ನಡೆಯಲಿದೆ. ಈ ಮೂಲಕ ಮನೆ ಮನೆಗಳಿಗೆ ತೆರಳಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ತಿಳಿಪಡಿಸಲಾಗುತ್ತದೆ. 8 ದಿನಗಳ ಕಾಲ ಪ್ರತಿ ಬೂತ್ ನಲ್ಲಿ ಅಭಿಯಾನ ನಡೆಯಲಿದೆ. ಪ್ರತಿ ಬೂತ್ ನಲ್ಲಿ ಮೂರು ಬೈಕ್ ನಂತೆ ಕರುನಾಡು ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಪಿಎಫ್ ಐ ಮತ್ತು ಕೆಎಫ್ ಡಿ ವಿರುದ್ಧ ಪ್ರಕರಣ ಹಿಂಪಡೆದ ಸರ್ಕಾರದ ಧೋರಣೆ ಕುರಿತು ಅಭಿಯಾನ ನಡೆಸಲಿದ್ದೇವೆ. ಸರ್ಕಾರದ ಹಗರಣಗಳ ಕುರಿತು ಕರಪತ್ರದಲ್ಲಿ ಉಲ್ಲೇಖ ಮಾಡಲಾಗುವುದು. ಸರ್ಕಾರದ ವೈಫಲ್ಯಗಳನ್ನು ಪ್ರತಿ ಗ್ರಾಮಕ್ಕೂ ಮುಟ್ಟಿಸುವ ಕೆಲಸ ಮಾಡಲಾಗುವುದು ಅಂತ ಅವರು ವಿವರಿಸಿದ್ರು. ಇದನ್ನೂ ಓದಿ: ಯಾರ ಆಡಳಿತ ಹೇಗಿತ್ತು ಅನ್ನೋದು ಜನ ತೀರ್ಮಾನ ಮಾಡ್ತಾರೆ: ಪ್ರಮೋದಾ ದೇವಿ

  • ಚುನಾವಣೆ ಗೆಲ್ಲಲು ಹಿರಿಯ ನಾಯಕರ ಸಲಹೆ, ಆಶೀರ್ವಾದ ಪಡೆಯಲು ಮುಂದಾದ್ರಾ ರಾಹುಲ್ ಗಾಂಧಿ?

    ಚುನಾವಣೆ ಗೆಲ್ಲಲು ಹಿರಿಯ ನಾಯಕರ ಸಲಹೆ, ಆಶೀರ್ವಾದ ಪಡೆಯಲು ಮುಂದಾದ್ರಾ ರಾಹುಲ್ ಗಾಂಧಿ?

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿಯ ಚುನಾವಣೆ ಗೆಲ್ಲಲು ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕರ ಸಲಹೆ ಮತ್ತು ಆಶೀರ್ವಾದ ಪಡೆಯೋಕೆ ಮುಂದಾದ್ರಾ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯವಲಯದಲ್ಲಿ ಎದ್ದಿದೆ.

    ರಾಹುಲ್ ಗಾಂಧಿಯವರು ರಾಜ್ಯದ ಎಲ್ಲಾ ಹಿರಿಯ ನಾಯಕರನ್ನು ಮಾತನಾಡಿಸಿ ಸಮಾಧಾನಪಡಿಸಿ ಅಂತ ತಂಡವೊಂದನ್ನು ರಚಿಸಿದ್ದಾರೆ ಎಂಬ ಮಾಹಿತಿಯೊಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ, ಹಾಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಹೆಗಲಿಗೆ ಹಿರಿಯರನ್ನು ಮಾತನಾಡಿಸಿ ಸಮಾಧಾನಪಡಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಟಿಕೆಟ್ ಹಂಚಿಕೆ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆಯೂ ಹಿರಿಯರ ಸಲಹೆ ಪಡೆದು ಅದನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ; ಬಿಜೆಪಿ ಹಿಂದುತ್ವ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ – ಜನಾರ್ದನ ಪೂಜಾರಿ ಸದ್ಬಳಕೆಗೆ ಮೆಗಾ ಪ್ಲಾನ್

    ಈ ಹಿನ್ನೆಲೆಯಲ್ಲಿ ಜಾಫರ್ ಶರೀಫ್, ಜನಾರ್ದನ ಪೂಜಾರಿ, ಎಂ.ವಿ.ರಾಜಶೇಖರನ್, ಹನುಮಂತಪ್ಪ, ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರನ್ನು ರಾಜ್ಯ ಭೇಟಿ ಸಂದರ್ಭದಲ್ಲಿ ಮಾತನಾಡಿಸಲು ಮಧುಸೂದನ್ ಮಿಸ್ತ್ರಿ ಮುಂದಾಗಿದ್ದಾರೆ. ಮಿಸ್ತ್ರಿಗೆ ರಾಜ್ಯದ ಹಿರಿಯ ನಾಯಕರೊಂದಿಗೆ ಆತ್ಮೀಯ ಒಡನಾಟವಿದ್ದು, ಪಕ್ಷದ ಪರವಾಗಿ ಹಿರಿಯರ ಮನವೊಲಿಕೆ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

    ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಹಾಗೂ ಹಿರಿಯರ ವಿವಾದಾತ್ಮಕ ಹೇಳಿಕೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮುಳುವಾಗಬಹುದು. ಆದ್ದರಿಂದ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥರನ್ನೇ ಹಿರಿಯ ನಾಯಕರ ಸಮಾಧಾನಕ್ಕಾಗಿ ಫೀಲ್ಡಿಗಿಳಿಸಲು ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

  • ಚಾಮುಂಡೇಶ್ವರಿಯಲ್ಲಿ ಸ್ಫರ್ಧಿಸಿ ಸಿಎಂರನ್ನು ಸೋಲಿಸುತ್ತೇನೆ – ಸಿದ್ದರಾಮಯ್ಯಗೆ ಸಿಟಿ ರವಿ ಸವಾಲ್

    ಚಾಮುಂಡೇಶ್ವರಿಯಲ್ಲಿ ಸ್ಫರ್ಧಿಸಿ ಸಿಎಂರನ್ನು ಸೋಲಿಸುತ್ತೇನೆ – ಸಿದ್ದರಾಮಯ್ಯಗೆ ಸಿಟಿ ರವಿ ಸವಾಲ್

    ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಎದುರಿಸಲು ನಾನು ಸಿದ್ಧ. ಪಕ್ಷ ಅವಕಾಶ ನೀಡಿದ್ರೆ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುತ್ತೇನೆ ಎಂದು ಮಾಜಿ ಸಚಿವ ಬಿಜೆಪಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

    ಸಿಎಂ ಅವರು ಚಿಕ್ಕಮಗಳೂರಿಗೆ ಸಿಎಂ ಬಂದಿದ್ದ ಸಂದರ್ಭದಲ್ಲಿ ನನ್ನ ಹೆಸರು ಸಿಟಿ ರವಿ ಅಲ್ಲ, ಲೂಟಿ ರವಿ ಎಂದು ಆರೋಪ ಮಾಡಿದ್ರು. ಯಾರು ಲೂಟಿ ಹೊಡೆದಿದ್ದಾರೆಂದು ಸಾಬೀತುಪಡಿಸಲು ಮಾ.26 ರಂದು ಚಾಮುಂಡಿ ಬೆಟ್ಟಕ್ಕೆ ಬರುವುದಾಗಿ ಸವಾಲು ಹಾಕಿದ್ದೆ. ಅದರಂತೆ ಇಂದು ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿಗೆ ಪೂಜೆ ಮಾಡಿದ್ದೇನೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ. ನನ್ನ ಸವಾಲನ್ನು ಅವರು ಸ್ವೀಕರಿಸಲಿ ಎಂದು ಸಿಎಂಗೆ ಬಹಿರಂಗ ಸವಾಲೆಸೆದ್ರು.

    ಚಾಮುಂಡಿ ಆಣೆಗೆ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ಹೈಕಮಾಂಡ್ ನ ಎಲ್ಲರೂ ಈಗ ಚುನಾವಣೆಗಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಚುನಾವಣೆ ಮುಗಿಯಲಿ. ಕಾಂಗ್ರೆಸ್‍ನವರೇ ಸಿಎಂ ಸಿದ್ದರಾಮಯ್ಯ ಮೇಲೆ ಚಪ್ಪಡಿ ಕಲ್ಲು ಎತ್ತಾಕುತ್ತಾರೆ. ಇದು ಸಿದ್ದರಾಮಯ್ಯನವರಿಗೆ ಗೊತ್ತಾಗಬೇಕು ಎಂದು ವಾಗ್ದಾಳಿ ನಡೆಸಿದರು.

    ರಾಹುಲ್ ಗಾಂಧಿ ಬಿಜೆಪಿ ಅವರು ಭ್ರಷ್ಟರು ಅಂತ ಭಾಷಣ ಮಾಡ್ತಾರೆ. ಹೆರಾಲ್ಡ್ ಹಗರಣದಲ್ಲಿ ಅವರು ಜಾಮೀನಿನಲ್ಲಿದ್ದಾರೆ. ಜಾಮೀನು ರದ್ದಾದರೆ, ಜೈಲಿಗೆ ಹೋಗ್ತಾರೆ. ಅಂತವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಮೈತ್ರಿ ರಾಜಕಾರಣ ಮಾಡುವವರು ಯಾರೆಂದು ಜನರಿಗೆ ಗೊತ್ತು. ಬಿಬಿಎಂಪಿ ಚುನಾವಣೆಯಲ್ಲಿ ನಂಜನಗೂಡು- ಗುಂಡ್ಲುಪೇಟೆ ಯಲ್ಲಿ ಮೈತ್ರಿ ರಾಜಕಾರಣ ಮಾಡಿದವರು ಯಾರು ಎಂದು ಅವರು ಪ್ರಶ್ನಿಸಿದರು.

    ಕೋಮುವಾದ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್. ಕಿತ್ತೂರು ರಾಣಿಯನ್ನು ಕೊಂದವರನ್ನು ವೈಭವಿಕರಿಸದವರು ಯಾರು? ಮೈಸೂರು ರಾಜಮನೆತನದವರನ್ನು ಅಪಮಾನ ಮಾಡಿದವರು ಯಾರು? ಶಾದಿ ಭಾಗ್ಯ ಒಂದೇ ವರ್ಗಕ್ಕೆ ಸೀಮೀತಗೊಳಿಸಿದವರು ಯಾರು ಎಂದು ಸಿಎಂ ಅವರನ್ನು ಪ್ರಶ್ನಿಸಿದರು.

  • ರಾಹುಲ್ ಗಾಂಧಿ ಬಳ್ಳಾರಿಗೆ ಬಂದು ಹೋಗ್ತಿದ್ದಂತೆಯೇ ಜನಾರ್ದನ ರೆಡ್ಡಿ ಮಾಸ್ಟರ್ ಪ್ಲಾನ್

    ರಾಹುಲ್ ಗಾಂಧಿ ಬಳ್ಳಾರಿಗೆ ಬಂದು ಹೋಗ್ತಿದ್ದಂತೆಯೇ ಜನಾರ್ದನ ರೆಡ್ಡಿ ಮಾಸ್ಟರ್ ಪ್ಲಾನ್

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುವ ಹಾಗಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಬಳ್ಳಾರಿ, ಅನಂತಪುರ, ಕಡಪ ಜಿಲ್ಲೆಗಳ ಪ್ರವೇಶ ಮಾಡುವಾಂಗಿಲ್ಲ ಅಂತ ಸುಪ್ರೀಂಕೋರ್ಟ್ ಆದೇಶ ನೀಡಿದೆ.

    ಹೀಗಾಗಿ ಬಳ್ಳಾರಿಗೆ ಬರದೇ ಜನಾರ್ದನ ರೆಡ್ಡಿ ಹೇಗೆ ರಾಜಕೀಯ ಮಾಡ್ತಾರೆ ಅನ್ನೋ ಕುತೂಹಲ ಸಾಕಷ್ಟು ಜನರಿಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಳ್ಳಾರಿಗೆ ಬಂದು ಹೋಗುತ್ತಿದ್ದಂತೆಯೇ ಜಿಲ್ಲೆಗೆ ಎಂಟ್ರಿ ಕೊಡದೇ ರಾಜಕಾರಣ ಮಾಡಲು ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಸ್ಟರ್ ಪ್ಲಾನ್ ವೊಂದನ್ನ ಮಾಡಿದ್ದಾರೆ.

    ಜನಾರ್ದನ ರೆಡ್ಡಿಯವರು ರಾಜಕೀಯ ಜೀವನ ಆರಂಭಿಸಿದ ದಿನದಿಂದಲೂ ಒಂದಿಲ್ಲಾ ಒಂದು ರೀತಿ ಸೆನ್ಸಷೇನಲ್ ಸುದ್ದಿ ಕ್ರಿಯೇಟ್ ಮಾಡುತ್ತಾ ಬಂದಿದ್ದಾರೆ. ಇದೀಗ ಬಳ್ಳಾರಿಗೆ ಬರದೇನೆ ಜಿಲ್ಲೆಯ ರಾಜಕಾರಣ ಮಾಡಲು ಹೊರಟಿದ್ದಾರೆ. ಅದಕ್ಕಾಗಿಯೇ ಬಳ್ಳಾರಿಯ ಗಡಿಭಾಗದ ಗ್ರಾಮದಲ್ಲಿ ಮನೆಯೊಂದನ್ನು ಖರೀದಿ ಮಾಡಿರುವ ಮಾಜಿ ಸಚಿವರು ಅಲ್ಲಿಂದಲೇ ರಾಜಕಾರಣ ಮಾಡಲು ಹೊರಟಿದ್ದಾರೆ.

    ಬಳ್ಳಾರಿಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ರಾಂಪುರ ಹಾಗೂ ತಮ್ಮೇನಹಳ್ಳಿಯಲ್ಲಿ ಮೂರು ಮನೆ ಖರೀದಿ ಮಾಡಿದ್ದಾರೆ. ಬಳ್ಳಾರಿಯಿಂದ ಕೇವಲ 30 ಕೀಲೋ ಮೀಟರ್ ದೂರದಲ್ಲಿರುವ ಗಡಿಭಾಗಕ್ಕೆ ಹೊಂದಿಕೊಂಡಿರುವ ರಾಂಪುರ ಹಾಗೂ ತಮ್ಮೇನಹಳ್ಳಿಯಲ್ಲಿ ಮನೆ ಖರೀದಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಇದೀಗ ಅಲ್ಲಿಂದಲೇ ಜಿಲ್ಲೆಯ ರಾಜಕಾರಣದಲ್ಲಿ ಅಧಿಪತ್ಯ ಸಾಧಿಸಲು ನಿರ್ಧರಿಸಿದ್ದಾರೆ.

    ತಮ್ಮೇನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರ ಭೇಟಿಗಾಗಿ 5 ಎಕರೆ ವಿಸ್ತಾರದ ತೋಟದೊಂದಿಗೆ ಮನೆಯನ್ನು ಖರೀದಿ ಮಾಡಿದ್ರೆ, ರಾಂಪುರದಲ್ಲಿ ವಾಸವಿರಲು 2 ಪ್ರತ್ಯೇಕವಾಗಿ ಮನೆಗಳನ್ನು ಖರೀದಿ ಮಾಡಲಾಗಿದೆ. ಈ ಮೂಲಕ ಗಡಿಭಾಗದಲ್ಲಿದ್ದುಕೊಂಡೇ ಜನಾರ್ದನರೆಡ್ಡಿ ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಚುನಾವಣಾ ತಂತ್ರಗಳನ್ನು ರೂಪಿಸಲಿದ್ದಾರೆ. ಜನಾರ್ದನ ರೆಡ್ಡಿ ಗಡಿಭಾಗದಲ್ಲಿದ್ದುಕೊಂಡು ರಾಜಕಾರಣಕ್ಕೆ ಎಂಟ್ರಿ ಕೊಡಲು ಮುಂದಾಗಿರುವುದು ಇದೀಗ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಮತ್ತಷ್ಟೂ ಆತ್ಮವಿಶ್ವಾಸ ತುಂಬಿದಂತಾಗಿದೆ.