Tag: Karnataka Election 2018

  • ಮಂಡ್ಯದ ಜನರಲ್ಲಿ ಕ್ಷಮೆ ಕೇಳಿದ ಅಮಿತ್ ಶಾ

    ಮಂಡ್ಯದ ಜನರಲ್ಲಿ ಕ್ಷಮೆ ಕೇಳಿದ ಅಮಿತ್ ಶಾ

    ಮಂಡ್ಯ: ಸಂವಾದ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗಿಲ್ಲ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಈ ಮೂಲಕ ನೆರೆದ ಜನರ ಮೆಚ್ಚುಗೆಗೆ ಪಾತ್ರರಾದ್ರು.

    ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ನಗರದ ವಿಶ್ವೇಶರಯ್ಯ ಕ್ರೀಡಾಂಗಣದಲ್ಲಿ ಸಾವಯವ ಕೃಷಿಕರು, ರೈತ ಮಹಿಳೆಯರ ಜೊತೆ ಅಮಿತ್ ಶಾ ಅವರ ಸಂವಾದವನ್ನು ಏರ್ಪಡಿಸಲಾಗಿತ್ತು. ಆದ್ರೆ ಈ ಕಾರ್ಯಕ್ರಮಕ್ಕೆ ಶಾ ತಡವಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಜನರಲ್ಲಿ ಕ್ಷಮೆ ಕೇಳಿದ್ದಾರೆ.

    ಸಾವಯವ ಕೃಷಿಗೆ ಮೋದಿ ಸರ್ಕಾರ ಸಾಕಷ್ಟು ಹಣ ಮೀಸಲಿಟ್ಟಿದೆ. ಯುಪಿಎ ಸರ್ಕಾರಕ್ಕಿಂತ 75% ರಷ್ಟು ಹೆಚ್ಚು ಹಣವನ್ನು ಬಿಜೆಪಿ ಸರ್ಕಾರ ಖರ್ಚು ಮಾಡುತ್ತಿದೆ. ಜಗತ್ತಿನಲ್ಲಿಯೇ ಜೈವಿಕ ಕೃಷಿಕರ ದೇಶ ಭಾರತ ಅಂತ ಹೆಮ್ಮೆಯಿಂದ ಹೇಳಬೇಕು. ಸಾವಿರಾರು ವರ್ಷದಿಂದ ದೇಶದಲ್ಲಿ ಅವೈಜ್ಞಾನಿಕವಾಗಿ ಸಾವಯವ ಕೃಷಿ ಮಾಡಲಾಗುತ್ತಿದೆ ಅಂತ ವಿದೇಶಿಗರು ಹೇಳ್ತಾರೆ. ಆದ್ರೆ ವೈಜ್ಞಾನಿಕವಾಗಿ ದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಮೂರೂವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಪರಂಪರಾಗತ ಕೃಷಿ ಯೋಜನೆಯಡಿ 7.50 ಲಕ್ಷ ಹೆಕ್ಟೆರ್ ಅಭಿವೃದ್ಧಿಗೊಳಿಸಿದೆ. ಬೆಟ್ಟ ಗುಡ್ಡಗಳ ಪ್ರದೇಶಗಳಲ್ಲಿಯೂ ಸಾವಯವ ಕೃಷಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಸಿಕ್ಕಿಂನ್ನು ಸಂಪೂರ್ಣವಾಗಿ ಸಾವಯವ ಕೃಷಿ ರಾಜ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಅಂತ ಅಮಿತ್ ಶಾ ಸಂವಾದದಲ್ಲಿ ತಿಳಿಸಿದ್ರು.

    ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಾವಯವ ಕೃಷಿಯಲ್ಲಿ ಕ್ರಾಂತಿ ಮಾಡಿರುವ ರೈತರಿಗೆ ಇನ್ನಷ್ಟು ಉತ್ತೇಜನ ನೀಡಲಾಗುವುದು. ಮಾದರಿ ರೈತರನ್ನು ಇಸ್ರೇಲ್ ಗೆ ಕಳುಹಿಸ್ತೇವೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವ ರೀತಿ ನಾವು ಮಾಡ್ತೇವೆ. ಸಿದ್ದರಾಮಯ್ಯ ಏನೂ ಮಾಡಿಲ್ಲ, ಸಾವಯವ ಕೃಷಿ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ರಾಜ್ಯದಲ್ಲಿ ನಿರಂತರವಾಗಿ ಗೋಹತ್ಯೆ ನಡೆಯುತ್ತಿದೆ. ಗೋ ಹತ್ಯೆಯನ್ನು ನಿಲ್ಲಿಸಬೇಕಿದೆ. ಗೋವುಗಳಿಂದ ಬರುವ ಉತ್ಪನ್ನಗಳ ಬಳಕೆ ಸೂಕ್ತ ರೀತಿಯಲ್ಲಿ ನಡೆಯಬೇಕಿದೆ. ಈಗಾಗಲೇ ಕೇಂದ್ರ ಸರ್ಕಾರ ಗೋವಿಗೆ ವಿಮೆ ಸೌಲಭ್ಯ ನೀಡಿದೆ ಅಂತ ಹೇಳಿದ್ರು.

    ಕಾರ್ಯಕ್ರಮದ ಬಳಿಕ ಅಮಿತ್ ಶಾ, ರೈತ ಮಹಿಳೆಯರೊಂದಿಗೆ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಸಂವಾದ ಕಾರ್ಯಕ್ರಮದ ಮುಂಭಾಗದಲ್ಲಿ ಸಾಕಷ್ಟು ಖುರ್ಚಿಗಳು ಖಾಲಿ ಇದ್ದಿದ್ದು, ನಾಯಕರಿಗೆ ಮುಜುಗರವನ್ನು ತರಿಸಿದ ಘಟನೆಯೂ ನಡೆಯಿತು.

     

  • ನೀತಿಸಂಹಿತೆ ಉಲ್ಲಂಘನೆಯಡಿ ಜಪ್ತಿಯಾಗೋ ಬಾಡೂಟ, ಆಹಾರ ಏನಾಗುತ್ತೆ ಗೊತ್ತಾ?

    ನೀತಿಸಂಹಿತೆ ಉಲ್ಲಂಘನೆಯಡಿ ಜಪ್ತಿಯಾಗೋ ಬಾಡೂಟ, ಆಹಾರ ಏನಾಗುತ್ತೆ ಗೊತ್ತಾ?

    ಚಿಕ್ಕಬಳ್ಳಾಪುರ: ಹಣ-ಹೆಂಡ ಇಲ್ಲದೆ ಚುನಾವಣೆಗಳು ನಡೆಯೋದಿಲ್ಲ. ಅದರ ಜೊತೆಗೆ ಈಗ ಬಾಡೂಟ ಇಲ್ಲದೆ ಕೂಡ ಚುನಾವಣೆಗಳು ನಡೆಯೋದಿಲ್ಲ. ಮತದಾರರ ಮನಗೆಲ್ಲೋಕೆ ಎಲ್ಲೆಂದರಲ್ಲಿ ಭರ್ಜರಿಯಾಗಿ ಬಾಡೂಟಗಳ ಆಯೋಜನೆಗಳು ಸರ್ವೆ ಸಾಮಾನ್ಯ ಎಂಬಂತಾಗಿದೆ.

    ಇಂತಹ ಸಂದರ್ಭಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಚುನಾವಣಾಧಿಕಾರಿಗಳು ವಶಪಡಿಸಿಕೊಳ್ಳೋ ಬಾಡೂಟ ಯಾರ ಹೊಟ್ಟೆಯೂ ಸೇರದೆ ಭೂ ತಾಯಿಯ ಮಡಿಲು ಸೇರುತ್ತಿದೆ. ಅಂದ್ರೆ ಮಣ್ಣುಪಾಲಾಗ್ತಿದೆ.

    ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗಿದೆ. ಮತದಾರರ ಮನಗೆಲ್ಲೋಕೆ ಅಂತ ರಾಜಕೀಯ ನಾಯಕರು ನಾನಾ ಕಸರತ್ತುಗಳನ್ನ ಮಾಡುತ್ತಿದ್ದಾರೆ. ಇಷ್ಟು ದಿನ ಹಣ, ಸೀರೆ, ಅದು, ಇದು ಅಂತ ನಾನಾ ಅಮಿಷಗಳನ್ನ ಒಡ್ಡಿದ ರಾಜಕೀಯ ನಾಯಕರು ಭರ್ಜರಿ ಬಾಡೂಟವನ್ನ ಹಾಕಿಸಿದ್ರು. ಆದ್ರೆ ಈಗ ಚುನಾವಣಾ ನೀತಿ ಸಂಹಿತೆ ಇರೋದ್ರಿಂದ ಬಾಡೂಟ ಸೇರಿದಂತೆ ಯಾವುದೇ ತೆರನಾದ ಅಮಿಷಗಳನ್ನ ಒಡ್ಡೋದು ಕಾನೂನುಬಾಹಿರವಾಗಿದೆ.

    ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಂದೇ ಚಿಕ್ಕಬಳ್ಳಾಪುರದ ಮಾಜಿ ಜೆಡಿಎಸ್ ನಾಯಕ, ಸಿಎಂ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಸಂತೋಷದಲ್ಲಿ ಮತದಾರರಿಗೆ ಭರ್ಜರಿ ಬಾಡೂಟವನ್ನು ಉಣಬಡಿಸಿದ್ರು. ಹೀಗಾಗಿ ಮಾಹಿತಿ ತಿಳಿದು ದಾಳಿ ನಡೆಸಿದ ಅಧಿಕಾರಿಗಳು, ಬಾಡೂಟವನ್ನು ಸವಿಯುತ್ತಿದ್ದವರನ್ನು ಅರ್ಧದಲ್ಲೇ ಎಬ್ಬಿಸಿ, ಅಳಿದುಳಿದ ಬಾಡೂಟವನ್ನೇ ಸೀಜ್ ಮಾಡಿ ಕೇಸ್ ದಾಖಲಿಸಿದ್ರು. ಜಪ್ತಿ ಮಾಡಿದ ಬಾಡೂಟವನ್ನು ನ್ಯಾಯಾಲಯದ ಆದೇಶದಂತೆ ಮಣ್ಣಿನಲ್ಲಿ ಹೂತು ಹಾಕಿ ನಾಶಪಡಿಸಿರುವುದಾಗಿ ಎಸ್ ಪಿ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಹೊರಡುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಬಾಡೂಟ ಸೀಜ್

    ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತದಾರರಿಗೆ ಯಾವುದೇ ತೆರನಾದ ಅಮಿಷ ಒಡ್ಡುವ ಆಗಿಲ್ಲ. ಇನ್ನೂ ಚುನಾವಣಾ ಸಮಯದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳೋ ಮತದಾರರಿಗೆ ಕನಿಷ್ಠ ಕುಡಿಯುವ ನೀರು ಹೊರತುಪಡಿಸಿ ಬೇರೆ ಏನನ್ನೂ ಕೊಡುವ ಆಗಿಲ್ಲ ಅನ್ನೋದು ಕಾನೂನು. ಆದ್ರೆ ಇದೆಲ್ಲವನ್ನೂ ಮೀರಿ ಹಲವು ಕಡೆ ಕದ್ದು ಮುಚ್ಚಿ ಬಾಡೂಟ ಸೇರಿದಂತ ಕೆಲ ಅಮಿಷಗಳನ್ನ ಒಡ್ಡೋದು ಕೂಡ ಮಾಮೂಲಿ. ಇನ್ನೂ ನೀತಿ ಸಂಹಿತೆ ಉಲ್ಲಂಘನೆಯಡಿ, ಆಹಾರವಾದ್ರೂ ಸರಿ ಮಣ್ಣುಪಾಲು ಮಾಡಲೇಬೇಕು.

    ಪ್ರತಿ ಬಾರಿ ಚುನಾವಣೆ ನಡೆದಾಗಲೂ ನೀತಿ ಸಂಹಿತೆ ಉಲ್ಲಂಘನೆಯಡಿ ಇಂತಹ ನೂರಾರು ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಕಳೆದ ಬಾರಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ದಾಖಲಾದ 100 ಕ್ಕೂ ಹೆಚ್ಚು ಪ್ರಕರಣಗಲ್ಲಿ ಕೇವಲ 7-8 ಪ್ರಕರಣಗಳಲ್ಲೇ ಅಷ್ಟೇ ಶಿಕ್ಷೆ ಪ್ರಕಟವಾಗಿದೆ. ಅದು ಕೇವಲ 100, 200 ರೂಪಾಯಿ ದಂಡವಷ್ಟೇ. ಉಳಿದೆಲ್ಲವೂ ಮತ್ತೊಂದು ಚುನಾವಣೆ ಬಂದ್ರೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

  • ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    ಬೆಂಗಳೂರು: ಯಾರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಹೋದರಿ ಶೋಭಕ್ಕ ಅವರಿಗೆ ಸಂಬಂಧ ಕಲ್ಪಿಸಿ ಹೀನಾಮಾನವಾಗಿ ಬೈದಿದ್ದಾರೋ ಅವರಿಗೆ ಸೀಟು ನೀಡುತ್ತಿದ್ದಾರೆ ಅಂತ ಮಾಜಿ ಸಚಿವ ಹರತಾಳು ಹಾಲಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

    ಬಸವೇಶ್ವರನಗರದ ತಮ್ಮ ನಿವಾಸದಲ್ಲಿ ಇಂದು ಕುಟುಂಬ ಸಮೇತರಾಗಿ ಸಂಕಷ್ಟಹರ ಪೂಜೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಾ ನನ್ನ ಸಹೋದರಿ ಸಮಾನರಾದ್ರೆ, ಭಾರತಿ ಶೆಟ್ಟಿ ನನ್ನ ತಾಯಿ ಸಮಾನರಾಗಿದ್ದಾರೆ. ಇವರಿಬ್ಬರಿಗೂ ನಮ್ಮ ನಾಯಕರಿಗೂ ಸಂಬಂಧ ಕಲ್ಪಿಸಿದ್ದಾರೆ. ಆದ್ರೆ ಇದೀಗ ಸಂಬಂಧ ಕಲ್ಪಿಸಿದವರಿಗೂ ಟಿಕೆಟ್ ಕೊಡ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇನ್ನು ಈಶ್ವರಪ್ಪ ಅವರ ಮುಖ ನೋಡಿದ್ರೆ ಮೂರು ಓಟು ಬರೋದಿಲ್ಲ. ಆರ್‍ಎಸ್‍ಎಸ್ ನವರು 200 ಕೋಟಿ ತಂದ್ರು ಎಂದ ಗೋಪಾಲಕೃಷ್ಣ ಅವರಿಗೆ ಸೀಟು ಕೊಡ್ತಾರಂತಾದ್ರೆ ಇದಕ್ಕೆ ನಾನು ಏನ್ ಹೇಳ್ಬೇಕು. ಇದರಿಂದ ಸಹಜವಾಗಿಯೇ ನನಗೆ ಬೇಸರ ಆಗಿದೆ ಅಂತ ಹೇಳಿದ್ರು.

    ನನಗೆ ಸೀಟು ಸಿಗಬಹುದೆಂಬ ನಂಬಿಕೆ ಇದೆ. ಅದು ನಿಜವಾಗುತ್ತೋ ಇಲ್ಲವೋ ಗೊತ್ತಿಲ್ಲ. ವೆಂಕಯ್ಯ ನಾಯ್ಡು ಅವರಿಗೆ ಬೈದೋರಿಗೂ ಟಿಕೆಟ್ ನೀಡ್ತಿದ್ದಾರೆ. ಆಯನೂರ್ ಮಂಜಣ್ಣ ಬೂಟ್ ನೆಕ್ಕೋನು, ಬಸ್ ಸ್ಟ್ಯಾಂಡ್ ರಾಘು ಅಂತ ಬೈದಿದ್ರು. ವಿಕಾಸ್ ಸೌಧ ವಿಜಯೇಂದ್ರರಿಗೆ, ವಿಧಾನಸೌಧ ರಾಘವೇಂದ್ರ ಅವರಿಗೆ ಬರೆದು ಕೊಡ್ತಾರೆ ಅಂತ ಒಬ್ರು ಹೇಳಿದ್ರು. ಅವರಿಗೂ ಟಿಕೆಟ್ ನೀಡ್ತಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.

    ಇರ್ಲಿ ಬಿಡಿ ಇನ್ನೇನು ಜೀವನ. ನನ್ನಂತೋರು ಸತ್ತ ದಿನ ಮಾಜಿ ಸಚಿವ ಹಾಲಪ್ಪ ನಿಧನ ಅಂತ ಬರೀತೀರಿ. ಅದನ್ನಂತೂ ತಪ್ಪಿಸಲು ಸಾಧ್ಯವಿಲ್ಲ ಅಲ್ವ. ಏನೇ ಆಗಲಿ ನಾವಿನ್ನು ಸುಮ್ಮನಿರುವ ಪ್ರಶ್ನೆಯಿಲ್ಲ. ನಾವು ಸುಮ್ನಿರುತ್ತೇವೆ ಅಂದಿದ್ದೀಕೆ ಹಿಂಗೆ ಮಾಡಿದ್ರು ಅಂತ ಅವರು ಟಾಂಗ್ ನೀಡಿದ್ರು.

  • ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

    ಮಂಗ್ಳೂರಲ್ಲಿ ದೈವಸ್ಥಾನಕ್ಕೆ ಹೋಗಿ ನಿಂದನೆಗೊಳಗಾದ ಶಾಸಕ ಮೊಯ್ದೀನ್ ಬಾವಾ

    ಮಂಗಳೂರು: ವಿಧಾನಸಭಾ ಚುನಾವಣೆ ಘೋಷಣೆ ಮಧ್ಯೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ದೈವಸ್ಥಾನಕ್ಕೆ ಭೇಟಿ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ಸುರತ್ಕಲ್ ಬಳಿಯ ಹೊಸಬೆಟ್ಟು ಎಂಬಲ್ಲಿರುವ ಕೋರ್ದಬ್ಬು ದೈವಸ್ಥಾನಕ್ಕೆ ಮೊಯ್ದೀನ್ ಬಾವಾ ಭೇಟಿ ನೀಡಿದ್ದರು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ದೈವಸ್ಥಾನದವರ ಆಮಂತ್ರಣದ ಮೇರೆಗೆ ಶಾಸಕರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಚುನಾವಣೆ ಸಂದರ್ಭದಲ್ಲಿ ಶಾಸಕ ಮೊಯ್ದೀನ್ ಬಾವ, ಹಿಂದೂಗಳ ಮತ ಸೆಳೆಯಲು ದೈವಸ್ಥಾನಕ್ಕೆ ಭೇಟಿ ನೀಡಿದ್ದಾಗಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆದರೆ ವಿಡಿಯೋದಲ್ಲಿ ಮೊಯ್ದೀನ್ ಬಾವಾ ಎಂದಿನಂತೆ ದೇವಸ್ಥಾನಕ್ಕೆ ತೆರಳಿ ಹಿಂದಿರುಗಿದ್ದಾರೆ.

    ಓಲೈಕೆಯ ರಾಜಕಾರಣವೇ ಆಗಿದ್ದರೂ, ಮೂಲಭೂತವಾದಿ ಮುಸ್ಲಿಮರು ಮಾತ್ರ ಈ ವಿಡಿಯೋವನ್ನು ವೈರಲ್ ಮಾಡಿದ್ದಲ್ಲದೆ, ಶಾಸಕರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮತಗಳನ್ನು ಪಡೆಯಲು ಶಾಸಕ ಬಾವಾ ಈ ರೀತಿಯ ನಾಟಕವಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿದೆ. ಆದರೆ ಶಾಸಕ ಬಾವಾ ಮಾತ್ರ, ಪ್ರತೀವರ್ಷದಂತೆ ಈ ಬಾರಿಯೂ ಭೇಟಿ ನೀಡಿದ್ದೇನೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

  • ರಿಲ್ಯಾಕ್ಸ್ ಹೆಸ್ರಲ್ಲಿ ಸಿದ್ದರಾಮಯ್ಯ ರಣತಂತ್ರ- ಇಂದೂ ರೆಸಾರ್ಟ್‍ನಲ್ಲಿ ಆಪ್ತರೊಂದಿಗೆ ಸಭೆ

    ರಿಲ್ಯಾಕ್ಸ್ ಹೆಸ್ರಲ್ಲಿ ಸಿದ್ದರಾಮಯ್ಯ ರಣತಂತ್ರ- ಇಂದೂ ರೆಸಾರ್ಟ್‍ನಲ್ಲಿ ಆಪ್ತರೊಂದಿಗೆ ಸಭೆ

    ಚಾಮರಾಜನಗರ: ರಿಲ್ಯಾಕ್ಸ್ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದೂ ಕೂಡ ತಮ್ಮ ರೆಸಾರ್ಟ್ ರಾಜಕೀಯ ಮುಂದುವರೆಸಲಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೆರಾಯ್ ರೆಸಾರ್ಟ್‍ನಲ್ಲಿ ಸಿಎಂ ಅವರು ರಿಲ್ಯಾಕ್ಸ್ ಮಾಡುವ ನೆಪದಲ್ಲಿ ಶುಕ್ರವಾರ ಇಡೀ ದಿನ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಮುಖಂಡರೊಂದಿಗೆ ಚುನಾವಣೆ ಬಗ್ಗೆ ರಣತಂತ್ರ ರೂಪಿಸಿದ್ದರು. ಸಚಿವ ಮಹದೇವಪ್ಪ, ಪಿರಿಯಾಪಟ್ಟಣದ ಶಾಸಕ ವೆಂಕಟೇಶ್, ಮರಿಗೌಡ, ಚೆನ್ನಾರೆಡ್ಡಿ, ಪ್ರಭಾಕರ್ ಕೆ.ವಿ, ಕೆಪಿಸಿಸಿ ಸದಸ್ಯ ನಂಜಪ್ಪ ಅವರೊಂದಿಗೆ ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೊದಲ ಹಂತದ ಸಭೆ ನಡೆಸಿದ್ದರು. ಬಳಿಕ ಮತ್ತೆ ಸಂಜೆ 6 ಗಂಟೆಗೆ 2ನೇ ಹಂತದ ಸಭೆ ನಡೆಸಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ನಿನ್ನೆ ಮೊದಲ ಹಂತ ಹಾಗೂ ಎರಡನೆಯ ಹಂತದ ಸಭೆಗಳಲ್ಲಿ ಪಾಲ್ಗೊಂಡಿದ್ದ ಮುಖಂಡರನ್ನು ಇಂದು ಒಟ್ಟಿಗೆ ಸೇರಿಸಿ ಸಭೆ ನಡೆಸಲಿದ್ದಾರೆ. ನಂತರ ಈ ಸಭೆಗಳನ್ನು ಆಧರಿಸಿ ತಮ್ಮ ಆತ್ಯಾಪ್ತರೊಂದಿಗೆ ಸಭೆ ನಡೆಸಲಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಂತರ ಸಿಎಂ ಮೈಸೂರಿನತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡ ರೆಬೆಲ್ ಸ್ಟಾರ್!

    ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡ ರೆಬೆಲ್ ಸ್ಟಾರ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ನಾಯಕತ್ವದ ಜೊತೆಗೆ ಟಿಕೆಟ್ ಹಂಚಿಕೆಯಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬುದೇ ಅಂಬರೀಶ್ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.

    ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಜಿಲ್ಲೆಯಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂಬ ವರಸೆ ಅಂಬರೀಶ್ ರದ್ದು. ಆದರೆ ಈ ಬಾರಿ ಅಂಬರೀಶ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಹೊರತುಪಡಿಸಿ ಮತ್ತೆಲ್ಲ ಟಿಕೆಟ್ ಹಂಚಿಕೆಯು ಕೆಪಿಸಿಸಿ ಸರ್ವೇ ಆಧರಿಸಿಯೇ ನೀಡಲಾಗುತ್ತೆ. ಇದರ ಸುಳಿವು ತಿಳಿದ ಅಂಬರೀಶ್ ಮಂಡ್ಯದಿಂದ ಟಿಕೆಟ್ ಬೇಕು ಎಂದು ಕೆಪಿಸಿಸಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಮಂಡ್ಯದ ಟಿಕೆಟ್ ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ ಬಿಡ್ರೋ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ರಮ್ಯಾ, ಎಸ್‍ಎಂ.ಕೃಷ್ಣ ಯಾರೇ ಸ್ಪರ್ಧಿಸಿದ್ರೂ ನನ್ನ ಸ್ಪರ್ಧೆ ಖಚಿತ – ಅಂಬರೀಶ್

    ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ರಾಜ್ಯದ ಯಾವ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಂಡ್ಯ ಟಿಕೆಟ್ ಅಂಬರೀಶ್ ಗೆ ಅಂತಿಮಪಡಿಸಿ ಮಂಡ್ಯದ ಇತರೆ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮನ್ನು ಸಚಿವ ಸ್ಥಾನದಿಂದ ತೆಗೆದ ನಂತರ ರಾಜ್ಯ ನಾಯಕರೊಂದಿಗೆ ಒಂದು ಹಂತದ ಅಂತರ ಕಾಯ್ದುಕೊಂಡಿದ್ದ ಅಂಬರೀಶ್ ಈಗಲು ಅದೇ ವರಸೆ ಮುಂದುವರಿಸಿದ್ದಾರೆ. ಬೇಕಾದರೆ ಮಂಡ್ಯ ಟಿಕೆಟನ್ನ ನನ್ನ ಮನೆಗೆ ತಂದುಕೊಡಲಿ ಆಗ ಸ್ಪರ್ಧೆ ಮಾಡ್ತೀನಿ ಎಂಬಂತೆ ಮಾತನಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ರಮ್ಯಾ, ಸೌಮ್ಯಾ, ಸುಮಾ ಯಾರೇ ಬಂದು ಸ್ಪರ್ಧೆ ಮಾಡಿದ್ರೂ ಓಕೆ: ಅಂಬರೀಶ್

    ಸ್ಟಾರ್ ಕ್ಯಾಂಪೇನರ್ ಕೂಡ ಆಗಿರುವ ಅಂಬರೀಶ್ ವರಸೆ ಕಾಂಗ್ರೆಸ್ ನಾಯಕರಿಗೂ ತಲೇ ನೋವು ತಂದಿದ್ದು. ರಾಜ್ಯ ಕಾಂಗ್ರೆಸ್ ನಾಯಕರು ಸಹಾ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಎಲೆಕ್ಷನ್, ಎಕ್ಸಾಂ ಎಫೆಕ್ಟ್- ಒಂದೇ ತಿಂಗ್ಳಲ್ಲಿ ಬನಶಂಕರಿ ದೇವಿಗೆ ಹರಿದುಬಂತು 30ಲಕ್ಷ ರೂ.!

    ಎಲೆಕ್ಷನ್, ಎಕ್ಸಾಂ ಎಫೆಕ್ಟ್- ಒಂದೇ ತಿಂಗ್ಳಲ್ಲಿ ಬನಶಂಕರಿ ದೇವಿಗೆ ಹರಿದುಬಂತು 30ಲಕ್ಷ ರೂ.!

    ಬೆಂಗಳೂರು: ಎಲೆಕ್ಷನ್ ಕಾವು ಒದೆಡೆಯಾದ್ರೆ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಎಕ್ಸಾಂ. ಇದರಿಂದ ರಾಜ್ಯದ ದೇವರುಗಳೆಲ್ಲಾ ದಿಢೀರ್ ಶ್ರೀಮಂತವಾಗುತ್ತಿವೆ.

    ಮಹಾಸಮರಕ್ಕೆ ಅಖಾಡ ರೆಡಿಯಾಗುತ್ತಿದ್ದಂತೆ ರಾಜಕೀಯ ನಾಯಕರುಗಳು ಮತದಾರರ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಇರೋ ಬರೋ ದೇವರ ಹುಂಡಿಗೆ ಜೈ.. ಜೈ ಅಂತ ದುಡ್ಡು ಹಾಕುತ್ತಿದ್ದಾರೆ. ಇನ್ನೊಂದು ಕಡೆ ಪರೀಕ್ಷೆ ಸೀಸನ್, ಮಕ್ಕಳು, ಪೋಷಕರು ಹರಕೆ ಹೊತ್ತು ಮಕ್ಕಳನ್ನು ಪಾಸ್ ಮಾಡಪ್ಪ ಎಂದು ದೇವರ ಹುಂಡಿಗೆ ಲಂಚದ ರೂಪದಲ್ಲಿ ಕಾಣಿಕೆ ಹಾಕಿದ್ದಾರೆ. ಇದರ ಎಫೆಕ್ಟ್ ಬನಶಂಕರಿಯಮ್ಮನ ಹುಂಡಿ ತುಂಬಿದ್ದು, ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದೆ.

    ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಹುಂಡಿ ತೆರೆಯೋದು ಸಾಮಾನ್ಯ. ಆದರೆ ಮಾರ್ಚ್ ಇಯರ್ ಎಂಡ್ ಎಂದು ಒಂದೇ ತಿಂಗಳ ಅಂತರದಲ್ಲಿ ಹುಂಡಿ ತೆರೆದಾಗ ಬರೋಬ್ಬರಿ 30 ಲಕ್ಷ ಸಂಗ್ರಹವಾಗಿದೆ. ಸಾಮಾನ್ಯವಾಗಿ ಎರಡು ತಿಂಗಳಲ್ಲಿ 20 ರಿಂದ 25 ಲಕ್ಷ ದುಡ್ಡು ಸಂಗ್ರಹವಾಗುತ್ತಿದ್ದು, ಈ ಬಾರಿ ದಿಢೀರ್ ಅಂತ 30 ಲಕ್ಷ ರೂ. ಸಂಗ್ರವಾಗಿರುವುದಕ್ಕೆ ಅಧಿಕಾರಿಗಳು ಫುಲ್ ಖುಷಿಯಾಗಿದ್ದಾರೆ. ದುಡ್ಡಿನ ಜೊತೆಗೆ ಚಿನ್ನ ಬೆಳ್ಳಿಯೂ ದಾಖಲೆಯ ಮಟ್ಟದಲ್ಲಿ ಹುಂಡಿಗೆ ಬಿದ್ದಿದೆ.

    ಇನ್ನು ಪರೀಕ್ಷೆಗೆ ಮಕ್ಕಳು ಓದೇ ಇಲ್ಲ, ನೀನೇ ಕಾಪಾಡಬೇಕು ಪಾಸು ಮಾಡಿಸು ಎಂದು ಬೇಡಿಕೊಂಡು ಲೆಕ್ಕವಿಲ್ಲದಷ್ಟು ಪತ್ರ ಹುಂಡಿಗೆ ಬಿದ್ದಿದೆಯಂತೆ. ರಾಜಕೀಯ ಉನ್ನತಿ, ಶೈಕ್ಷಣಿಕ, ಮನೆ ಸಮಸ್ಯೆ ಏನೇ ಇದ್ದರೂ ಇಲ್ಲಿ ಹರಕೆ ಹೊತ್ತಿದರೆ ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಿಗಿದೆ.

    ಎಲೆಕ್ಷನ್ ಪ್ರಾರಂಭದಲ್ಲಿಯೇ ಹಣ ದಾಖಲೆಯ ಮಟ್ಟ ಏರಿದೆ, ಮುಂದಿನ ತಿಂಗಳು ಇನ್ನು ಹೆಚ್ಚು ಹುಂಡಿ ದರ ಸಂಗ್ರಹವಾಗಬಹುದು ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

     

  • ಚುನಾವಣಾ ನೀತಿ ಸಂಹಿತೆಯಿಂದ ಪಾರಾಗಲು ಡಿಕೆಶಿ ಆಪ್ತ ಮಾಸ್ಟರ್ ಪ್ಲಾನ್

    ಚುನಾವಣಾ ನೀತಿ ಸಂಹಿತೆಯಿಂದ ಪಾರಾಗಲು ಡಿಕೆಶಿ ಆಪ್ತ ಮಾಸ್ಟರ್ ಪ್ಲಾನ್

    ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆದ್ರೂ ಕೆಲ ರಾಜಕೀಯ ಮುಖಂಡರು ಮತ್ತು ಆಪ್ತರು ಸರ್ಕಾರ ನೀಡಿರುವ ಸೌಲಭ್ಯಗಳನ್ನು ಮಾತ್ರ ಹಿಂದಕ್ಕೆ ನೀಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಸರ್ಕಾರಿ ವಾಹನಗಳನ್ನು ಬಿಟ್ಟು, ಖಾಸಗಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಶೇಷಾದ್ರಿ ಈಗಲೂ ಸರ್ಕಾರಿ ವಾಹನವನ್ನೇ ಬಳಕೆ ಮಾಡ್ತಿದ್ದಾರೆ. ಆದ್ರೆ ಚುನಾವಣಾ ಅಧಿಕಾರಿಗಳಿಗೆ ತಿಳಿಯದಂತೆ ಸರ್ಕಾರಿ ವಾಹನವನ್ನು ಮಾರ್ಪಾಡು ಮಾಡಿಕೊಂಡಿದ್ದಾರೆ.

    ಏನದು ಮಾರ್ಪಾಡು?: ಸರ್ಕಾರಿ ವಾಹನ ಅಂತ ಇರೋ ಸ್ಟಿಕ್ಕರ್ ಗಳನ್ನ ತೆಗೆದು, ನಂಬರ್ ಪ್ಲೇಟ್ ನ್ನೂ ಕಿತ್ತು ಹಾಕಿ ರಾಜಾರೋಷವಾಗಿ ಓಡಾಡ್ತಿದ್ದಾರೆ. ಸ್ಟಿಕ್ಕರ್ ಗಳನ್ನು ಕಿತ್ತು ಹಾಕಿ ಸರ್ಕಾರಿ ವಾಹನದಲ್ಲಿ ಶೇಷಾದ್ರಿ ಅವರು ಪ್ರಯಾಣಿಸುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

  • ಚುನಾವಣಾ ಅಖಾಡಕ್ಕಿಳಿಯಲು ಚಿಕ್ಕರಾಯಪ್ಪ ಪ್ಲಾನ್ – ಸಿಎಂ ಮಾತ್ರ ಹೀಗಂದ್ರು

    ಚುನಾವಣಾ ಅಖಾಡಕ್ಕಿಳಿಯಲು ಚಿಕ್ಕರಾಯಪ್ಪ ಪ್ಲಾನ್ – ಸಿಎಂ ಮಾತ್ರ ಹೀಗಂದ್ರು

    ಬೆಂಗಳೂರು: 500 ಮತ್ತು 1 ಸಾವಿರ ರೂ. ನೋಟು ನಿಷೇಧದ ಬಳಿಕ ಐಟಿ ದಾಳಿಗೆ ಒಳಗಾಗಿದ್ದ ಸಿಎಂ ಆಪ್ತ ಚಿಕ್ಕರಾಯಪ್ಪ ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಲು ಪ್ಲಾನ್ ಮಾಡಿದ್ದಾರೆ.

    ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಚಿಕ್ಕರಾಯಪ್ಪ ಇಚ್ಛಿಸಿದ್ದರು ಎನ್ನಲಾಗುತ್ತಿದ್ದು, ಈ ಸಂಬಂಧ ಮಂಗಳವಾರ ಸಂಜೆ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಈ ವೇಳೆ ಚಿಕ್ಕರಾಯಪ್ಪ ತಾವು ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಸಿಎಂ ಮುಂದೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಹಾಗಾದ್ರೆ ಸಿಎಂ ಹೇಳಿದ್ದೇನು?: ನಿನ್ನ ವಿರುದ್ಧ ಎಸಿಬಿ, ಇಡಿ ವಿಚಾರಣೆ ಬಾಕಿ ಇದೆ. ಹೀಗಿರುವಾಗ ಯಾರು ನಿನ್ನ ರಾಜೀನಾಮೆಯನ್ನು ಅಂಗೀಕರಿಸುತ್ತಾರೆ? ರಾಜಕೀಯಕ್ಕೆ ಬರಲು ನಿಮಗೆ ಐಡಿಯಾ ಕೊಟ್ಟವರಾರು? ರಾಜಕೀಯ ಅಂದ್ರೆ ಒಂದು ಕಪ್ ಟೀ ಕುಡಿದಂತಲ್ಲ ಅಂತಾ ಸಿಎಂ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಕಚೇರಿಗೆ ಹೋಗಿ ಕೆಲಸ ಮಾಡು, ವಿಚಾರಣೆ ಎದುರಿಸಿ, ಆರೋಪ ಮುಕ್ತ ಆಗೋದು ಹೇಗೆ ಎಂಬುದರ ಬಗ್ಗೆ ಗಮನಹರಿಸು ಅದು ಬಿಟ್ಟು ರಾಜಕೀಯದತ್ತ ಬರಬೇಡ ಅಂತಾ ಸಿಎಂ ಗುಡುಗಿದ್ದಾರೆ ಎನ್ನಲಾಗಿದೆ.

  • ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಚುನಾವಣಾ ಚಾಣಕ್ಯ

    ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಚುನಾವಣಾ ಚಾಣಕ್ಯ

    – ಈ ಬಾರಿ ಅಮಿತ್ ಶಾ ಟೂರ್ ಎಲ್ಲೆಲ್ಲಿ..?

    ಬೆಂಗಳೂರು: ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮಾರ್ಚ್ 30, 31 ರಂದು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಅಮಿತ್ ಶಾ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.

    ಪ್ರಮುಖವಾಗಿ ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಆಶ್ರಮ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ, ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನಗಳಿಗೆ ಪ್ರವಾಸ ಕೈಗೊಳ್ಳಲಿದ್ದು, ಪಕ್ಷ ಸಂಘಟನೆಯ ಸಮಾವೇಶಗಳಲ್ಲೂ ಭಾಗವಹಿಸಲಿದ್ದಾರೆ. ಅಲ್ಲದೆ ಪ್ರಮುಖವಾಗಿ ಮೈಸೂರು ಅರಮನೆಗೆ ಭೇಟಿ ನೀಡಲಿದ್ದು, ಪ್ರಮೋದಾದೇವಿ ಒಡೆಯರ್, ಯದುವೀರ್ ಒಡೆಯರ್ ಅವರನ್ನ ಭೇಟಿ ಮಾಡಲಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಎಲ್ಲೆಲ್ಲಿ ಹೋಗ್ತಾರೆ ಅಮಿತ್ ಶಾ, ಇಲ್ಲಿದೆ ವೇಳಾಪಟ್ಟಿ:

    * ಇಂದು ರಾತ್ರಿ ಮೈಸೂರಿಗೆ ಆಗಮಿಸಿ ವಾಸ್ತವ್ಯ.
    * 30ರಂದು ಬೆಳಗ್ಗೆ 9 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ
    * 10.30ಕ್ಕೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಭೇಟಿ
    * ಕ್ಯಾತಮಾರನಹಳ್ಳಿಯಲ್ಲಿ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ರಾಜು ನಿವಾಸಕ್ಕೆ ಭೇಟಿ
    * ಮೈಸೂರಿನಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ನವಶಕ್ತಿ ಸಮಾವೇಶದಲ್ಲಿ ಭಾಗಿ
    * ಮಧ್ಯಾಹ್ನ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ದಲಿತ ಮುಖಂಡರ ಜೊತೆ ಸಂವಾದ ಮತ್ತು ಭೋಜನ
    * ಸಂಜೆ ಕೊಳ್ಳೇಗಾಲದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ನವಶಕ್ತಿ ಸಮಾವೇಶದಲ್ಲಿ ಭಾಗಿ
    * ಸಂಜೆ ಚಾಮರಾಜನಗರದಲ್ಲಿ ಎಸ್ ಟಿ ಸಮಾವೇಶ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗಿ
    * ರಾತ್ರಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ
    * ಮಾರ್ಚ್ 31ರಂದು ಬೆಳಗ್ಗೆ ಮಂಡ್ಯ ಪ್ರವಾಸ
    * ಶ್ರೀರಂಗಪಟ್ಟಣದ ಚಿನ್ನೇನಹಳ್ಳಿಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ ರಾಜೇಂದ್ರಪ್ಪ ನಿವಾಸಕ್ಕೆ ಭೇಟಿ
    * ಬೆಳಗ್ಗೆ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ
    * ಮಧ್ಯಾಹ್ನ ಮಂಡ್ಯದಲ್ಲಿ ಸಾವಯವ ಕೃಷಿಕರು ಹಾಗು ಮಹಿಳೆಯರೊಂದಿಗೆ ಸಂವಾದ ಮತ್ತು ರೈತರೊಂದಿಗೆ ಭೋಜನ
    * ಮಧ್ಯಾಹ್ನ ಮಂಡ್ಯದಲ್ಲಿ 5 ಜಿಲ್ಲೆಗಳ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶ
    * ಸಂಜೆ ಚನ್ನಪಟ್ಟಣದ ಗೊಂಬೆ ಕಾರ್ಖಾನೆಗೆ ಭೇಟಿ
    * ಸಂಜೆ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ಉದ್ದಿಮೆದಾರರ ಜೊತೆ ಸಂವಾದ
    * ರಾತ್ರಿ ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ
    * 31ರಂದು ರಾತ್ರಿ ಮೈಸೂರಿನಿಂದ ದೆಹಲಿಗೆ ವಾಪಸ್