https://youtu.be/_9MC0umw2xU
Tag: Karnataka Election 2018
-

ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
ಬೆಂಗಳೂರು: 2018ರ ಕರ್ನಾಟಕ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್‍ಗೆ ಈ ಭಾರಿ ಕೂಡ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೊಡಿಸೋದಾಗಿ ಭರವಸೆ ನೀಡಿದ್ದ ಆರ್. ಅಶೋಕ್ ಜಯನಗರ ನಿವಾಸದ ಬಳಿ ರಮೇಶ್ ಬೆಂಬಲಿಗರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ರು.

ಅಶೋಕ್ ನಂಬಿಕೆದ್ರೋಹಿ ಎಂದು ಘೋಷಣೆ ಕೂಗಿದ್ರು. ಒಂದುವೇಳೆ ಎನ್.ಆರ್.ರಮೇಶ್‍ಗೆ ಟಿಕೆಟ್ ನೀಡದೇ ಹೋದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪದ್ಮನಾಭ ನಗರದಲ್ಲಿ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂತ ಆರ್.ಅಶೋಕ್ ಗೆ ಸವಾಲ್ ಹಾಕಿದ್ರು. ಚಿಕ್ಕಪೇಟೆಯಿಂದ ಉದ್ಯಮಿ ಗರುಡಾಚಾರ್ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
ಹಾವೇರಿ ಜಿಲ್ಲೆ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲೂ ಭಿನ್ನಮತ ಸ್ಪೋಟಗೊಂಡಿದೆ. ಹಾಲಿ ಶಾಸಕ ಬಸವರಾಜ್ ಬೊಮ್ಮಾಯಿ ಹೆಸರು ಘೋಷಣೆ ಆಗ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವದಾಗಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಯಡಿಯೂರಪ್ಪ ಶಿಷ್ಯ ಬಸವರಾಜ್ ಬೊಮ್ಮಾಯಿ ಸೋಲಿಸಲು ಕೆ.ಎಸ್.ಈಶ್ವರಪ್ಪ ಶಿಷ್ಯ ಸೋಮಣ್ಣ ಬೇವಿನಮರದ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೊಮ್ಮಾಯಿ ಟಾಂಗ್ ನೀಡಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
-

ಬಳ್ಳಾರಿ ಗ್ರಾಮೀಣ ಅಥವಾ ಕೂಡ್ಲಗಿಯಿಂದ ಕಣಕ್ಕಿಳಿಯಲಿದ್ದಾರೆ ಸಂಸದ ಶ್ರೀರಾಮುಲು!
ಬಳ್ಳಾರಿ: ಸಂಸದ ಬಿ.ಶ್ರೀರಾಮುಲು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.
ಬಳ್ಳಾರಿ ಗ್ರಾಮೀಣ, ಕೂಡ್ಲಗಿ ಇಲ್ಲವೇ ಸಂಡೂರಿನಿಂದ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಹೀಗಾಗಿ ರಾಮುಲು ವಿರುದ್ಧ ಕಾಂಗ್ರೆಸ್‍ನಿಂದ ಎದುರಾಳಿಯಾಗಿ ಕಣಕ್ಕೆ ಯಾರು ಇಳಿಯಲಿದ್ದಾರೆ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.
ಶ್ರೀರಾಮುಲು ಅವರನ್ನು ಬಳ್ಳಾರಿ ಗ್ರಾಮೀಣ ಇಲ್ಲವೇ ಕೂಡ್ಲಗಿಯಿಂದ ಕಣಕ್ಕೆ ಇಳಿಸಿದ್ರೆ ರಾಮುಲು ವಿರುದ್ಧ ಕಾಂಗ್ರೆಸ್‍ನಿಂದ ಬಿ.ನಾಗೇಂದ್ರ ಸ್ಪರ್ಧೆ ಮಾಡುವುದು ಖಚಿತ ಎನ್ನುವಂತಾಗಿದೆ. ಶ್ರೀರಾಮುಲು ಬಲಗೈ ಬಂಟನಾಗಿ ಬೆಳೆದ ಕೂಡ್ಲಗಿ ಶಾಸಕ ನಾಗೇಂದ್ರ ಇತ್ತೀಚೆಗಷ್ಟೇ ರೆಡ್ಡಿ- ರಾಮುಲು ಸಂಪರ್ಕ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಹಿನ್ನಲೆಯಲ್ಲಿ ಅವರನ್ನೇ ಕಣಕ್ಕೆ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂದು ಪಕ್ಷ ಮೂಲಗಳಿಂದ ತಿಳಿದುಬಂದಿದೆ.

ಒಂದೇ ಒಂದೂ ಚುನಾವಣೆಯಲ್ಲೂ ಸೋಲು ಕಂಡರಿಯದ ಶ್ರೀರಾಮುಲುಗೆ ಸೆಡ್ಡು ಹೊಡೆಯಲು ನಾಗೇಂದ್ರರೇ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ ಅವರನ್ನೇ ಕಣಕ್ಕೆ ಇಳಿಸಲು ಮುಂದಾಗಿದ್ದು, ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಬಳ್ಳಾರಿಯಲ್ಲಿ ಭಾರೀ ಪೈಪೋಟಿ ನಡೆಯಲಿದೆ ಎಂದು ರಾಜಕೀಯ ವಲಯದಿಂದ ಕೇಳಿಬಂದಿದೆ.
-

ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್‍ಐಆರ್
ಉಡುಪಿ: ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಇದೀಗ ಸಚಿವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಆಸ್ಟ್ರೇಲಿಯಾ ದ ಗೋಲ್ಡ್ ಕೋಸ್ಟ್ ನಲ್ಲಿ ಭಾರತೀಯ ಕ್ರೀಡಾಪಟು ಗುರುರಾಜ್ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವ ಮಧ್ವರಾಜ್, ಗುರುರಾಜ್ ಗೆ ಕ್ರೀಡಾ ಇಲಾಖೆ 25 ಲಕ್ಷ ನಗದು ಮತ್ತು ಸರ್ಕಾರಿ ನೌಕರಿಯನ್ನು ರಾಜ್ಯ ಸರ್ಕಾರ ನೀಡುತ್ತದೆ ಎಂದಿದ್ದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

ಕಾಮನ್‍ವೆಲ್ತ್ ಗೇಮ್ಸ್ ಗೆ ತೆರಳುವ ಮುನ್ನವೇ ಪ್ರಶಸ್ತಿ ಬಗ್ಗೆ ಕ್ರೀಡಾನೀತಿಯಲ್ಲಿ ಉಲ್ಲೇಖವಾಗಿದೆ. ಇದು ಈಗ ಮಾಡುತ್ತಿರುವ ಘೋಷಣೆಯಲ್ಲ ಎಂದೂ ಕೂಡ ಸಚಿವರು ಅದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಸರಿಯಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್
ಕ್ರೀಡಾ ನೀತಿಯ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಹೀಗಾಗಿ ಮತದಾನ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಮತದಾರರನ್ನು ಓಲೈಸುವಂತಾಗುತ್ತದೆ ಅಲ್ಲದೇ ಆಮಿಷ ಒಡ್ಡುವಂತಾಗುತ್ತದೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು ಉಡುಪಿ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.
-

ಚುನಾವಣೆ ಹೊತ್ತಲ್ಲೇ ಐಟಿಯಿಂದ ಕಾಂಗ್ರೆಸ್‍ಗೆ ಬಿಗ್‍ಶಾಕ್
ಬೆಂಗಳೂರು: ರಾಜ್ಯ ಚುನಾವಣೆಯ ಪ್ರಚಾರದಲ್ಲಿರೋ ಕಾಂಗ್ರೆಸ್ ನಾಯಕರಿಗೆ ಐಟಿ ಶಾಕ್ ನೀಡಿದೆ. ಕಂಟ್ರಾಕ್ಟರ್ ಪೇಮೆಂಟ್ ಗೋಲ್ಮಾಲ್ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಹತ್ವದ ಸುಳಿವೊಂದು ಸಿಕ್ಕಿದೆ ಅಂತ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಐಟಿ ಅಧಿಕಾರಿ ಬಾಲಕೃಷ್ಣನ್ ಪತ್ರ ಬರೆದಿದ್ದು, ಮೂರು ತಿಂಗಳ ಅವಧಿಯಲ್ಲಿ ವಿವಿಧ ಇಲಾಖೆಗಳ ಕಂಟ್ರಾಕ್ಟರ್‍ಗಳ ಟೆಂಡರ್ ಮೊತ್ತದ ಬಗ್ಗೆ ದಾಖಲೆ ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಚುನಾವಣೆಗಾಗಿ ಕಂಟ್ರಾಕ್ಟರ್‍ಗಳಿಗೆ ಬಿಗ್ ಪೇಮೆಂಟ್ ನೀಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಜನವರಿಯಿಂದ ಮಾರ್ಚ್‍ವರೆಗೆ ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮೊತ್ತದ ಪೇಮೆಂಟ್ ಬಗ್ಗೆ ಸಂಪೂರ್ಣ ವಿವರ ನೀಡಿ. ವಿದ್ಯುತ್ ಇಲಾಖೆ, ಜಲಸಂಪನ್ಮೂಲ, ಪಶುಪಾಲನಾ, ಮೀನುಗಾರಿಕೆ, ಲೋಕೋಪಯೋಗಿ ಇಲಾಖೆಯ ಟೆಂಡರ್ ಮಾಹಿತಿ ಬೇಗ ನೀಡಿ. 1 ವರ್ಷದಿಂದ ಪದೇಪದೇ ಟೆಂಡರ್ ಪಡೆದ ಕಂಟ್ರಾಕ್ಟರ್‍ಗಳ ಸಂಪೂರ್ಣ ವಿವರ ಕೊಡಿ ಅಂತ ಐಟಿ ಅಧಿಕಾರಿ ಬಾಲಕೃಷ್ಣನ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


-

ಬೆಂಗ್ಳೂರಲ್ಲಿಂದು ರಸ್ತೆಗಿಳಿಯೋ ಮುನ್ನ ಎಚ್ಚರ- ಜನಾಶೀರ್ವಾದಕ್ಕಾಗಿ ನಡೀತಿದೆ ರಾಹುಲ್ ಶೋ
ಬೆಂಗಳೂರು: ಇಂದು ಭಾನುವಾರ ಅಂತ ಮೂವಿಗೆ, ಶಾಪಿಂಗ್ ಹೋಗೋಣ, ಲಾಂಗ್ ಡ್ರೈವ್‍ಗೆ ಹೋಗೋಣ ಅಂತಾ ಬೆಂಗಳೂರು ರಸ್ತೆಗೆ ಇಳಿಯೋ ಮುನ್ನಾ ಅಲರ್ಟ್ ಆಗಿರಿ.
ಯಾಕೆಂದ್ರೆ ರಾಜ್ಯಾದ್ಯಂತ ಐದು ಹಂತದ ಅಬ್ಬರದ ಪ್ರಚಾರ ಯಾತ್ರೆಗಳ ಮೂಲ ಕೈ ಬಲಪಡಿಸಲು ಹೊರಟ ರಾಹುಲ್ ಯಾತ್ರೆ ಇಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ತಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆವರೆಗೂ ನಗರದೆಲ್ಲೆಡೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ಕೆಳಗೆ ಬೀಳುತ್ತಿದ್ದ ಟೋಪಿ ಹಿಡಿದು ಪೊಲೀಸ್ ಪೇದೆಗೆ ತೊಡಿಸಿದ ರಾಹುಲ್ ಗಾಂಧಿ

ಅರಮನೆ ಮೈದಾನದಲ್ಲಿ ನಡೆಯುವ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸುಮಾರು 4-5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಹೆಬ್ಬಾಳ, ಏರ್‍ಪೋರ್ಟ್ ರೋಡ್, ಮೇಖ್ರಿ ಸರ್ಕಲ್, ಕಾರ್ಪೋರೇಷನ್, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಎಲ್ಲಾ ಭಾಗದಲ್ಲೂ ಟ್ರಾಫಿಕ್ ಜಾಮ್ ಆಗಲಿದೆ. ಕಾರ್ಯಕರ್ತರು, ಬಸ್, ಬೈಕ್‍ನಲ್ಲಿ ದೂರದೂರಿಂದ ಬರೋದ್ರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಇಂದಿನ ಕಾರ್ಯಕ್ರಮಗಳು:
* ಬೆಳಗ್ಗೆ 8.30ಕ್ಕೆ ಅಶೋಕ ಹೋಟೆಲ್‍ನಲ್ಲಿ ಮಾಧ್ಯಮದವರ ಜೊತೆ ಸಂವಾದ
* ಬೆಳಗ್ಗೆ 9.30ಕ್ಕೆ ಜಕ್ಕರಾಯನ ಕೆರೆಯಲ್ಲಿ ಸಫಾಯಿ ಕರ್ಮಚಾರಿಗಳ ಜೊತೆ ಸಂವಾದ
* ಬೆಳಗ್ಗೆ 11.30ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳ ಜೊತೆ ಚರ್ಚೆ
* ಮಧ್ಯಾಹ್ನ 12.30ಕ್ಕೆ ಖಾಸಗಿ ಹೋಟೆಲ್‍ನಲ್ಲಿ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರ ಜೊತೆ ಸಂವಾದ
* ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದೆ. -

ಲಿಂಗಾಯತರೆಲ್ಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‍ಗೆ ಮತ ಹಾಕಿ -ಮಾತೆ ಮಹಾದೇವಿ ಕರೆ
ಬೆಂಗಳೂರು: ಚುನಾವಣೆ ಸನೀಹದಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ. ಆ ಪಕ್ಷಕ್ಕೆ ಮತ ನೀಡಿ ಎಂದು ಲಿಂಗಾಯತರಿಕೆ ಕರೆ ನೀಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಕ್ಷೇಪ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ತುರ್ತು ಸಭೆಯಲ್ಲಿ ಮಾತೆ ಮಹಾದೇವಿ ಈ ಘೋಷಣೆ ಹೊರಡಿಸಿದ್ದಾರೆ. ಸ್ವತಂತ್ರ ಧರ್ಮ ಮಾನ್ಯತೆಗೆ ಶ್ರಮಿಸೋ ಪಕ್ಷಕ್ಕೆ ಮತ. ಎಲ್ಲರು ಕಾಂಗ್ರೆಸ್ ಬೆಂಬಲಿಸಬೇಕು ಅಂತಾ ಹೇಳಿದ್ರು.

ಅಮಿತ್ ಶಾ ರಾಜ್ಯದ ಶಿಫಾರಸ್ಸು ನಮಗೆ ತಲುಪಿಯೇ ಇಲ್ಲ ಎನ್ನುತ್ತಿದ್ದಾರೆ. ಈ ರೀತಿಯಾಗಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾ ವಿರುದ್ಧ ಮಾತೆ ಕಿಡಿಕಾರಿದ್ರು. ಮುಂದಿನ ಬಸವ ಜಯಂತಿಯಂದು ನಮಗೆ ಸಿಹಿ ಸುದ್ದಿ ನೀಡಬೇಕು ಅಂತಾ ಕೇಂದ್ರ ಸರ್ಕಾರಕ್ಕೆ ಡೆಡ್‍ಲೈನ್ ನೀಡಿದ್ರು. ಇದೇ ವೇಳೆ ಮಾತನಾಡಿದ ಸಾರಂಗ ಶ್ರೀಗಳು, “ಗಂಡಸು” ಅಂದ್ರ್ರೆ ಸಿದ್ದರಾಮಯ್ಯ ಅಂತಾ ಹೊಗಳಿದ್ರು. ಇನ್ನು ಶೀಘ್ರವೇ ಪ್ರಧಾನಿ ಭೇಟಿಯಾಗಲು ಲಿಂಗಾಯಿತ ಮಹಾಸಭಾ ನಿರ್ಧಾರ ಕೈಗೊಂಡಿದೆ ಅಂತಾ ಸಭೆಯಲ್ಲಿ ತಿಳಿಸಲಾಯಿತು.

-

ಕೆಳಗೆ ಬೀಳುತ್ತಿದ್ದ ಟೋಪಿ ಹಿಡಿದು ಪೊಲೀಸ್ ಪೇದೆಗೆ ತೊಡಿಸಿದ ರಾಹುಲ್ ಗಾಂಧಿ
ಕೋಲಾರ: ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಜ್ಯಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ, ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಕೋಲಾರದ ಮುಳಬಾಗಿಲು ನಗರದಲ್ಲಿ ರೋಡ್ ಶೋ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ರಾಹುಲ್ ಗಾಂಧಿ ಟೋಪಿ ತೊಡಿಸಿದ ಘಟನೆ ನಡೆಯಿತು. ರಾಹುಲ್ ರೋಡ್ ಶೋಗೆ ಬಂದೋಬಸ್ತ್ ಮಾಡುತ್ತಿದ್ದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಪೇದೆಯೊಬ್ಬರ ಟೋಪಿ ಕೆಳಗೆ ಬೀಳುತ್ತಿತ್ತು. ಟೋಪಿ ಕೆಳಗೆ ಬೀಳುತ್ತಿದ್ದಂತೆಯೇ ರಾಹುಲ್ ಅದನ್ನು ಕ್ಯಾಚ್ ಹಿಡಿದು ಪೊಲೀಸ್ ಪೇದೆಯ ತಲೆಗೆ ಇರಿಸಿದ್ದಾರೆ. ಇದನ್ನೂ ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್
ಕೋಲಾರ ಜಿಲ್ಲೆಯ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಜನಾರ್ಶೀವಾದ ಯಾತ್ರೆ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮುಳಬಾಗಿಲಿಗೆ ಆಗಮಿಸಿದ್ದ ರಾಹುಲ್, ಮುಳಬಾಗಿಲು ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ರೋಡ್ ಶೋ ಆರಂಭಿಸಿದ್ದಾರೆ.
ಮುಳಬಾಗಿಲು, ಕೆಜಿಎಫ್ ಬಂಗಾರಪೇಟೆ, ಕೋಲಾರ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮಾಡಿದ್ದು, ಕೋಲಾರ ನಗರದಲ್ಲಿ ಮುಖಂಡರೊಂದಿಗೆ ಕಾರ್ನರ್ ಸಭೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.



