ಬೆಂಗಳೂರು: ಎಲೆಕ್ಷನ್ ಮುಗಿದು ರಿಸಲ್ಟ್ ಬಂದ್ರು ಕರ್ನಾಟಕ ಕುರುಕ್ಷೇತ್ರದಲ್ಲಿ ಯುದ್ಧ ಮಾತ್ರ ಮುಗಿದಂತೆ ಕಾಣ್ತಿಲ್ಲ. ರಾತ್ರೋರಾತ್ರಿ ರಾಜ್ಯ ರಾಜಕಾರಣದ ಹೈಡ್ರಾಮಾ ಸುಪ್ರೀಂಕೋರ್ಟ್ ಮುಂದೆಯೂ ನಡೆಯಿತು. ಬಿಎಸ್ ಯಡಿಯೂರಪ್ಪ ಪ್ರಮಾಣ ವಚನಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ರಾತ್ರೋರಾತ್ರಿ ವಿಚಾರಣೆಗೆ ಸಮ್ಮತಿಸಿತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ನ್ಯಾಯಮೂರ್ತಿಗಳಾದ ಎ.ಕೆಎಸ್.ಸಿಕ್ರಿ, ಅಶೋಕ್ ಭೂಷಣ್, ಎಸ್.ಎ.ಬೊಬ್ಡೆ ನೇತೃತ್ವದ ಪೀಠ ವಿಚಾರಣೆ ನಡೆಸಿತು. ಇನ್ನು ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ರೆ ಕೇಂದ್ರದ ಪರ ಅಟಾರ್ನಿ ಜನರಲ್ ವೇಣುಗೋಪಾಲ್ ವಾದ ಮಂಡಿಸಿದ್ರು
ಹಾಗಾದ್ರೆ ಕೋರ್ಟ್ ಒಳಗೆ ನಡೆದ ಬಿರುಸಿನ ವಾದ ಪ್ರತಿವಾದದ ಡೀಟೈಲ್ಸ್ ಇಲ್ಲಿದೆ.
ಸಿಂಘ್ವಿ- ನ್ಯಾಯಮೂರ್ತಿಗಳ ವಾದ ಪ್ರತಿವಾದ
ಅಭಿಷೇಕ್ ಮನು ಸಿಂಘ್ವಿ- ಮೇ 15ರಂದು 3 ಗಂಟೆಗೆ ಕೆಪಿಸಿಸಿ ಅಧ್ಯಕ್ಷರು ಬೆಂಬಲ ಪತ್ರ ಬರೆದಿದ್ದಾರೆ. ಅಂದೇ 6 ಗಂಟೆಗೆ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಹಾಗಾಗಿ ನಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು. 104 ಶಾಸಕರನ್ನು ಹೊಂದಿರುವ ಬಿಜೆಪಿಗೆ ಅವಕಾಶ ಕೊಟ್ಟಿದ್ದು ತಪ್ಪು. ಹೆಚ್ಚು ಕಾಲಾವಕಾಶ ನೀಡಿರುವುದರಿಂದ ಶಾಸಕರ ವ್ಯಾಪರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದರೂ ಬೆಂಬಲಕ್ಕೆ ಬೇರೆ ಶಾಸಕರಿಲ್ಲ.
ನ್ಯಾಯಮೂರ್ತಿ- ಯಡಿಯೂರಪ್ಪ ಅವರಿಗೆ ಬೆಂಬಲ ಇಲ್ಲ ಅಂತಾ ನಿಮಗೆ ಹೇಗೆ ಗೊತ್ತು..?
ಅಭಿಷೇಕ್ ಮನು ಸಿಂಘ್ವಿ- ಬೇರೆ ಶಾಸಕರ ಬೆಂಬಲ ಇದೆ ಅಂತಾ ಬಿಜೆಪಿ ಹೇಳಿಲ್ಲ. ಯಾವುದೇ ಶಾಸಕರ ಹೆಸರು ಮತ್ತು ಸಹಿಯನ್ನು ರಾಜ್ಯಪಾಲರಿಗೆ ನೀಡಿಲ್ಲ. ಹಾಗಾಗಿ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿ.
ನ್ಯಾಯಮೂರ್ತಿ- ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿದರೆ ಆಡಳಿತ ಯಂತ್ರವೇ ಇಲ್ಲದಂತೆ ಆಗುವುದಿಲ್ಲವೇ..? ರಾಜ್ಯದಲ್ಲಿ ಈಗ ಯಾರ ಸರ್ಕಾರ ಇದೆ ..?
ಅಭಿಷೇಕ್ ಮನು ಸಿಂಘ್ವಿ- ಹಂಗಾಮಿ ಸರ್ಕಾರ ಇದೆ. ಬೇರೆಯವರ ಪ್ರಮಾಣವಚನ ಆಗುವವರೆಗೆ ಉಸ್ತುವಾರಿ ಸರ್ಕಾರವೇ ಇರಲಿದೆ. ಆದರೂ ಸುಪ್ರೀಂಕೋರ್ಟ್ ರಾಜ್ಯಪಾಲರ ಆದೇಶ ಪರಿಶೀಲಿಸಬಹುದು.
ನ್ಯಾಯಮೂರ್ತಿ- ನಮ್ಮ ಸಮಸ್ಯೆ ಆದೇಶ ಪರಿಶೀಲನೆ ನಡೆಸುವುದಲ್ಲ. ರಾಜ್ಯಪಾಲರ ಆದೇಶಕ್ಕೆ ತಡೆ ನೀಡುವುದೇ ತೊಡಕು.
ಅಭಿಷೇಕ್ ಮನು ಸಿಂಘ್ವಿ- ನ್ಯಾಯಾಂಗದ ಹಸ್ತಕ್ಷೇಪದಿಂದ ರಾಜ್ಯಪಾಲರ ಘನತೆಗೆ ಧಕ್ಕೆ ಆಗುವುದಿಲ್ಲ. ಮುಖ್ಯಮಂತ್ರಿಯ ಪ್ರಮಾಣ ವಚನಕ್ಕಾದರೂ 2 ದಿನಗಳ ಮಟ್ಟಿಗೆ ತಡೆ ನೀಡಿ.
ನ್ಯಾಯಮೂರ್ತಿ- ಬಿಜೆಪಿಗೆ ಸಂಖ್ಯಾಬಲ ಇದೆಯೇ..? ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪಟ್ಟಿ ನೀಡಿದೆ. ಆದರೂ ಯಡಿಯೂರಪ್ಪ ಬಹುಮತ ಪಡೆಯಲು ಹೇಗೆ ಸಾಧ್ಯ..?
ಅಟಾರ್ನಿ ಜನರಲ್- ಮೈತ್ರಿಕೂಟದ ಶಾಸಕರು ಹೆಸರನ್ನು ನೀಡಿರಬಹುದು. ಆದರೆ ಬಹುಮತ ಸಾಬೀತಾಗೋದು ವಿಧಾನಸಭೆಯಲ್ಲಿ. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಎಲ್ಲಾ ಶಾಸಕರ ಸಹಿ ಅಸಲಿಯೇ..?
ನ್ಯಾಯಮೂರ್ತಿ- ಹಾಗಾದರೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸುತ್ತಾರಾ..?
ಅಟಾರ್ನಿ ಜನರಲ್- ಗೊತ್ತಿಲ್ಲ. ಬಹುಮತ ಸಾಬೀತು ಪಡಿಸದಿದ್ದರೆ ಮುಂದಿನ ನಡೆ ಕಡೆ ನೋಡಬಹುದು.
ನ್ಯಾಯಮೂರ್ತಿ- ಬಹುಮತ ಸಾಬೀತು ಪಡಿಸಲು 15 ದಿನ ಏಕೆ ಬೇಕು..? ರಾಜ್ಯಪಾಲರ ಆದೇಶವನ್ನು ಮಾರ್ಪಾಟು ಮಾಡಬಹುದಾ…?
ಅಟಾರ್ನಿ ಜನರಲ್- 7 ದಿನಗಳ ಒಳಗೆ ಬಹುಮತ ಸಾಬೀತು ಪಡಿಸಲು ನಾವು ಸಿದ್ಧ.
ಅಭಿಷೇಕ್ ಮನು ಸಿಂಘ್ವಿ- ನಾಳೆ ಸಂಜೆಗೆ ಪ್ರಮಾಣ ವಚನವನ್ನು ಸಂಜೆ 4.30ಕ್ಕೆ ಮುಂದೂಡಿ.
ನ್ಯಾಯಮೂರ್ತಿಗಳು- ರಾಜ್ಯಪಾಲರ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಅವರ ಆದೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲ್ಲ. ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಲು ಸಾಧ್ಯವಿಲ್ಲ.