Tag: Karnataka Election 2018

  • ಪರಿಶೀಲನೆಯ ನೆಪದಲ್ಲಿ ವ್ಯಾಪಾರಸ್ಥರಿಂದ 8 ಸಾವಿರ ರೂ. ಲಪಟಾಯಿಸಿದ್ರಾ ಚುನಾವಣಾಧಿಕಾರಿ?

    ಪರಿಶೀಲನೆಯ ನೆಪದಲ್ಲಿ ವ್ಯಾಪಾರಸ್ಥರಿಂದ 8 ಸಾವಿರ ರೂ. ಲಪಟಾಯಿಸಿದ್ರಾ ಚುನಾವಣಾಧಿಕಾರಿ?

    ದಾವಣಗೆರೆ: ವ್ಯಾಪಾರಿಗಳಿಂದ ಹಣವನ್ನು ಚುನಾವಣಾ ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂದು ಆರೋಪವೊಂದು ಜಿಲ್ಲೆಯಲ್ಲಿ ಕೇಳಿಬಂದಿದೆ.

    ಶಾಬೂ ಹಾಗೂ ತಾಜ್ ಎಂಬಿಬ್ಬರು ವ್ಯಾಪಾರಿಗಳು ಹಾವೇರಿ ಜಿಲ್ಲೆಯ ಮಾರುಕಟ್ಟೆಗೆ ಮೆಕ್ಕೆಜೋಳ ವ್ಯಾಪಾರ ಮಾಡಿ ದಾವಣಗೆರೆಗೆ ವಾಪಸ್ ಆಗುತ್ತಿರುವಾಗ ಕುಂದವಾಡದ ಬಳಿ ಇರುವ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿ ಶಿವಕುಮಾರ್ ಎಂಬವರು ಮೆಕ್ಕೆಜೋಳ ವ್ಯಾಪಾರ ಮಾಡಿ ಬಂದಿದ್ದ 48 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

    ವ್ಯಾಪಾರಸ್ಥರ ಬಳಿ ದಾಖಲೆಗಳು ಸರಿ ಇದ್ದ ಕಾರಣ ಹಣ ವಾಪಸ್ ಕೊಡುವಾಗ ಕೇವಲ 40 ಸಾವಿರ ಮಾತ್ರ ಕೊಟ್ಟು, ಉಳಿದ 8 ಸಾವಿರವನ್ನು ಅಧಿಕಾರಿ ಶಿವಕುಮಾರ್ ಲಪಟಾಯಿಸಿದ್ದಾರೆ ಎಂದು ವ್ಯಾಪಾರಸ್ಥರು ಅರೋಪ ಮಾಡುತ್ತಿದ್ದಾರೆ.

    ಚುನಾವಣಾ ಅಧಿಕಾರಿಗಳು ಮಾತ್ರ ನಾವು ಹಣ ಲಪಟಾಯಿಸಿಲ್ಲ ಸುಮ್ಮನೆ ನಮ್ಮ ಮೇಲೆ ವ್ಯಾಪಾರಸ್ಥರು ಅರೋಪ ಮಾಡುತ್ತಿದ್ದಾರೆ. ನಾವು ಪರಿಶೀಲನೆ ಮಾಡಿ ಹಾಗೇ ವಾಪಸ್ ಕಳಿಸಿದ್ದೇವೆ. ಬೇಕಾದರೆ ಸಿಸಿ ಕ್ಯಾಮೆರಾಗಳು ಇವೆ ಪರಿಶೀಲನೆ ನಡೆಸಲಿ ಎಂದು ಚುನಾವಣಾ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವ್ಯಾಪಾರಸ್ಥರು ಮಾತ್ರ ತಮ್ಮ ಹಣವನ್ನು ಚುನಾವಣಾ ಅಧಿಕಾರಿಗಳೇ ಲಪಟಾಯಿಸಿದ್ದಾರೆ ಎಂದು ಅರೋಪ ಮಾಡುತ್ತಿದ್ದಾರೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಚುನಾವಣಾ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

  • ಟಿಕೆಟ್ ಕೈತಪ್ಪಿದ ಬಳಿಕ ವಿಜಯೇಂದ್ರ ಅಖಾಡಕ್ಕೆ- ಚಾಮರಾಜನಗರದ ಮೂರು ಕ್ಷೇತ್ರಗಳಲ್ಲಿ ಪ್ರಚಾರ

    ಟಿಕೆಟ್ ಕೈತಪ್ಪಿದ ಬಳಿಕ ವಿಜಯೇಂದ್ರ ಅಖಾಡಕ್ಕೆ- ಚಾಮರಾಜನಗರದ ಮೂರು ಕ್ಷೇತ್ರಗಳಲ್ಲಿ ಪ್ರಚಾರ

    ಮೈಸೂರು: ವರುಣಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬಳಿಕ ಮೊದಲ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಇಂದು ಅಖಾಡಕ್ಕೆ ಇಳಿದಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ವಿಜಯೇಂದ್ರ ಪ್ರಚಾರ ಕೈಗೊಂಡಿದ್ದಾರೆ. ಕೊಳ್ಳೆಗಾಲ, ಹನೂರು, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ವಿಜಯೇಂದ್ರ ಪ್ರಚಾರ ನಡೆಸುತ್ತಿದ್ದಾರೆ.

    ವರುಣ ಟಿಕೆಟ್ ತಪ್ಪಿದ ಮೇಲೆ ಕಾರ್ಯಕರ್ತರ ಜೊತೆ ಕಾಣಿಸಿಕೊಳ್ಳದ ವಿಜೆಯೇಂದ್ರ, ಬೆಂಗಳೂರು ಕಡೆ ತೆರಳಿದ್ದರು. ಮೈಸೂರಿನಲ್ಲಿದ್ದರೆ ಕಾರ್ಯಕರ್ತರು, ಮುಖಂಡರು ಒತ್ತಡ ಹೇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಟಿಕೆಟ್ ಕೈ ತಪ್ಪಿದ್ರೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವುದಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಇದನ್ನೂ ಓದಿ: ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

    ತೋಟದ ಬಸವರಾಜು ಅವರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಂತ ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಿ.ಫಾರಂ ಸಲ್ಲಿಸದೆ ಕೇವಲ ಬಿಜೆಪಿ ಅಭ್ಯರ್ಥಿ ಅಂತ ನಾಮಪತ್ರ ಸಲ್ಲಿಕೆ ಮಾಡಿದ್ದರು. ಏ.22 ರಂದು ವಿಜಯೇಂದ್ರ ಪರವಾಗಿಯೇ ಮತಯಾಚನೆ ಮಾಡಿದ್ದರು. ಆದ್ರೆ ಏ.23ರಂದು ವಿಜಯೇಂದ್ರಗೆ ಟಿಕೆಟ್ ಮಿಸ್ ಆಯಿತು. ಏ.24ರಂದು ತೋಟದ ಬಸವರಾಜರೇ ಅಧಿಕೃತ ಬಿಜೆಪಿ ಅಭ್ಯರ್ಥಿಯಾಗಿ ಬಿ.ಫಾರಂ ಸಲ್ಲಿಕೆ ಮಾಡಲಾಗಿತ್ತು. ಇದನ್ನೂ ಓದಿ: ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ನಾಳೆ ನೋಟಾ ಅಭಿಯಾನ: ಇತ್ತ ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳ ಆಕ್ರೋಶ ಇನ್ನೂ ಶಮನವಾಗಿಲ್ಲ. ವರುಣಾದಲ್ಲಿ ಇನ್ನೂ ನೋಟಾ ಅಭಿಯಾನ ಮುಂದುವರೆದಿದ್ದು, ಭಾನುವಾರ ನೋಟಾ ಬೆಂಬಲಿಸಿ ಬೈಕ್ ಜಾಥಾ ನಡೆಯಲಿದೆ. ಟಿ.ನರಸೀಪುರದಿಂದ ವರುಣಾದವರೆಗೆ ಬೈಕ್ ಜಾಥಾ ನಡೆಯಲಿದ್ದು, ಈ ಮೂಲಕ ನೋಟಾಗೆ ಮತ ಹಾಕುವಂತೆ ಪ್ರಚಾರ ಕೈಗೊಳ್ಳಲಾಗುತ್ತದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಈ ಬಾರಿ ಉಡುಪಿ – ಮಂಗಳೂರಲ್ಲಿ ಬಿಜೆಪಿ ಒಂದೂ ಸೀಟ್ ಗೆಲ್ಲಲ್ಲ: ಸಿಎಂ

    ಈ ಬಾರಿ ಉಡುಪಿ – ಮಂಗಳೂರಲ್ಲಿ ಬಿಜೆಪಿ ಒಂದೂ ಸೀಟ್ ಗೆಲ್ಲಲ್ಲ: ಸಿಎಂ

    ಮಂಗಳೂರು: ಈ ಬಾರಿ ಉಡುಪಿ, ಮಂಗಳೂರಲ್ಲಿ ಬಿಜೆಪಿಗೆ ಒಂದೂ ಸೀಟು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರಾವಳಿ ಬಿಜೆಪಿಯ ಕೋಮುವಾದವನ್ನು ಮೆಟ್ಟಿ ನಿಂತಿದ್ದು ಇಲ್ಲಿಯ ಜನ ಮತ್ತೊಮ್ಮೆ ನಮ್ಮ ಕೈ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ನಾಯಕರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. ಚುನಾವಣೆ ಘೋಷಣೆಯಾದ ಕೂಡಲೇ 2008 ರ ಲೂಟಿ ಕೋರರು ಮತ್ತೆ ಒಂದಾಗಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಟೀಂ ವಿರುದ್ಧ ಸಿಎಂ ಆಕ್ರೋಷ ವ್ಯಕ್ತಪಡಿಸಿದರು.

    ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ಶ್ರೀರಾಮುಲು, ಬಿಎಸ್‍ವೈ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಶೋಭಾ ಕರಂದ್ಲಾಜೆ ದೊಡ್ಡ ಲೂಟಿಕೋರರು. 5 ವರ್ಷದಲ್ಲಿ 1 ಲಕ್ಷ ಕೋಟಿ ಲೂಟಿಯಾಗಿದೆ ಎಂದು ಸಿಎಂ ಗಂಭೀರ ಆರೋಪ ಮಾಡಿದರು.

    ಬಳ್ಳಾರಿಯ ಭಯದ ವಾತಾವರಣ ಮತ್ತೆ ಈಗ ಒಂದಾಗಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಅಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕರೆದಿದ್ದರು. ನಾನು ಒಬ್ಬಂಟಿಯಾಗಿ ರೆಡ್ಡಿಯ ರಿಪಬ್ಲಿಕ್ ಆಫ್ ಬಳ್ಳಾರಿಗೆ ಹೋಗಿದ್ದೇನೆ. ರೆಡ್ಡಿ ಬ್ರದರ್ಸ್ ದು ಗೂಂಡಾ ಗ್ಯಾಂಗ್, ಆಗ ಜೈಲಿಗೆ ಹೋದವರೆಲ್ಲಾ ಈಗ ಬೇಲ್ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿಎಂ ಟಾಂಗ್ ಕೊಟ್ಟರು.

  • ಬಿಎಸ್‍ವೈ ಸಿಎಂ ಆಗೋದಕ್ಕೆ ತ್ರಿಮೂರ್ತಿಗಳು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್

    ಬಿಎಸ್‍ವೈ ಸಿಎಂ ಆಗೋದಕ್ಕೆ ತ್ರಿಮೂರ್ತಿಗಳು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್

    ವಿಜಯಪುರ: ಯಾವುದೇ ಕಾಲಕ್ಕೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ. ಅವರ ಆಗಬೇಕೆಂದರೂ ತ್ರಿಮೂರ್ತಿಗಳಾದ ಅನಂತಕುಮಾರ್ ಹೆಗ್ಡೆ, ಅನಂತಕುಮಾರ್ ಮತ್ತು ಸಂತೋಷ್ ಬಿಡಲ್ಲ ಎಂದು ಪಕ್ಷದ ಆಂತರಿಕ ಒಳಜಗಳವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಟೀಕಿಸಿದ್ರು.

    ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಸಿಎಂ ಸಿದ್ದರಾಮಯ್ಯ ಮೂರ್ಖರು ಅಲ್ಲ, ಯಡಿಯೂರಪ್ಪರ ಹೇಳಿಕೆ ಮೂರ್ಖತನವಾದದ್ದು. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಮುಖ್ಯಮಂತ್ರಿ ಆಗಲ್ಲ. ಅವರ ಮಗನಿಗೂ ಟಿಕೆಟ್ ಸಿಕ್ಕಿಲ್ಲ, ಪಕ್ಷದಲ್ಲಿ ತಮ್ಮ ಸ್ಥಾನ ಏನು ಎನ್ನುವುದು ಅವರಿಗೆ ಗೊತ್ತಾಗಿದೆ ಅಂತಾ ವ್ಯಂಗ್ಯ ಮಾಡಿದ್ರು.

    ಬಿಜೆಪಿ ಸಿಎಂ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು. ಅವರಂತೂ ಮುಖ್ಯಮಂತ್ರಿ ಆಗಲ್ಲ, ಆದ್ರೆ ಅವರನ್ನ ಏನು ಮಾಡ್ಬೇಕು ಎನ್ನುವುದು ಆರ್‍ಎಸ್‍ಎಸ್ ಗೊತ್ತಿದೆ ಅಂತಾ ಲೇವಡಿ ಮಾಡಿದ್ದಾರೆ.

    ಬದಾಮಿ ಕ್ಷೇತ್ರದಲ್ಲಿ ಬಿಎಸ್‍ವೈ ಮತದಾರರನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಅಲ್ಲಿಯ ಜನತೆಯ ಆರ್ಶಿರ್ವಾದ ಸಿದ್ದರಾಮಯ್ಯ ಅವರಿಗಿದ್ದು, ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದಾರೆ. ಇತ್ತ ನನಗೂ ಬಬಲೇಶ್ವರ ಕ್ಷೇತ್ರದ ಜನತೆಯ ಆಶೀರ್ವಾದವಿದೆ ಗೆಲುವು ನನ್ನದೇ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

  • ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ಮಂಗಳೂರು: ಮುಂದಿನ ಐದು ವರ್ಷಗಳಿಗೆ ಕಾಂಗ್ರೆಸ್ ನ ಭರವಸೆ ಮತ್ತು ಮುನ್ನೋಟಗಳನ್ನು ಇಂದು ನಗರದ ಟಿಎಂಎಪೈ ಹಾಲ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕರು ಸೇರಿ ಪ್ರಣಾಳಿಕೆ ಬಿಡುಗಡೆ ಮಾಡಿದ್ರು.
    2013ರ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದ ಶೇಕಡಾ 95ರಷ್ಟು ಕೆಲಸಗಳನ್ನು ಮಾಡಿದ್ದೇವೆ. ಎಲ್ಲ ಪಕ್ಷಗಳು ಕೂಡ ಚುನಾವಣೆ ಪೂರ್ವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಆದ್ರೆ ಎಲ್ಲ ಪಕ್ಷಗಳಿಗಿಂತೂ ಕಾಂಗ್ರೆಸ್ ಸಂಪೂರ್ಣ ಭಿನ್ನವಾಗಿದೆ. ನಾವು ಬಜೆಟ್ ಮಂಡಿಸುವಾಗ ಪ್ರಣಾಳಿಕೆಯನ್ನು ಪಕ್ಕದಲ್ಲಿಟ್ಟುಕೊಂಡು ರಚಿಸುತ್ತೇವೆ. ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಪ್ರಣಾಳಿಕೆಯನ್ನು ಕಸದ ಬುಟ್ಟಿಗೆ ಹಾಕುತ್ತವೆ ಅಂತಹ ಘಟನೆಗಳನ್ನು ನಾನು ನೋಡಿದ್ದೇನೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ರು.
    ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶಗಳು:
    1. ಪ್ರತಿ ಮೂರು ಜಿಲ್ಲೆಗೂಂದು  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
    2. ಮುಂದಿನ 5 ವರ್ಷಗಳಲ್ಲಿ ಕೃಷಿಗೆ 1.25 ಕೋಟಿ ಹಣ ಮೀಸಲು.
    3. ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ.
    4. 75 ಟಿಎಂಸಿ ಕಾವೇರಿ ನೀರು ಸದ್ಬಳಕೆಗೆ ನೀಲ ನಕ್ಷೆ ರಚನೆ.
    5. ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಒತ್ತು.
     6. 2 ಸಾವಿರ ಜನಸಂಖ್ಯೆಯುಳ್ಳ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ.
    7. ತಾಲೂಕು, ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲಿ ಹೆಚ್ಚಿನ ಅನುದಾನ ಮೀಸಲು.
    8. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ.
    9. ಪ್ರತಿ ಹಳ್ಳಿಗೂ 24 ಗಂಟೆ ವಿದ್ಯುತ್ ಪೂರೈಕೆಯ ಭರವಸೆ.
     10. ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ,ಪುನರ್ವಸತಿ ಭರವಸೆ.
    11. ಮುಂದಿನ 10 ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲಿ 10 ಲಕ್ಷ ಮನೆಗಳ ನಿರ್ಮಾಣದ ಗುರಿ.
    12. 2025ರೊಳಗೆ ನವಕರ್ನಾಟಕ ನಿರ್ಮಾಣಕ್ಕೆ ಒತ್ತು.
    13. ತಮಿಳುನಾಡು ಮಾದರಿಯಲ್ಲಿಯೇ ಕನ್ನಡಿಗರಿಗೆ ಉಚಿತ ಮಾಂಗಲ್ಯ ಭಾಗ್ಯ.
    14. ಚುನಾವಣೆಯಲ್ಲಿ ಗೆದ್ದರೆ 18 ವರ್ಷಗಳ ಕಾಲ ಉಚಿತ ಶಿಕ್ಷಣ ಭಾಗ್ಯ, ಈ ಮೊದಲು 10 ವರ್ಷಗಳಿಗೆ ಮಾತ್ರ ಆಗಿತ್ತು.
    15. ರಾಜ್ಯದಲ್ಲಿ  ಕೃಷಿ ಕಾರಿಡಾರ್ ನಿರ್ಮಾಣ
  • ರಕ್ತ ನಿಧಿಗಳಿಗೂ ತಟ್ಟಿದೆ ವಿಧಾನಸಭಾ ಚುನಾವಣೆಯ ಎಫೆಕ್ಟ್

    ರಕ್ತ ನಿಧಿಗಳಿಗೂ ತಟ್ಟಿದೆ ವಿಧಾನಸಭಾ ಚುನಾವಣೆಯ ಎಫೆಕ್ಟ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಕಡೆ ಅದರ ಬಿಸಿ ತಟ್ಟಿದೆ. ಈಗ ಈ ಚುನಾವಣೆಯ ಪರಿಣಾಮ ರಕ್ತ ನಿಧಿಗಳಿಗೂ ತಟ್ಟಿದೆ.

    ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದಾಗಿ ರಕ್ತದ ಕೊರತೆ ಉಂಟಾಗಿದ್ದು, ರಾಜ್ಯದಲ್ಲಿ ರಕ್ತ ನಿಧಿಗಳಲ್ಲಿ ರಕ್ತವೇ ಸಿಗುತ್ತಿಲ್ಲ. ಇದರಿಂದ ರಾಜ್ಯಾದ್ಯಂತ ಶೇಕಡಾ 80% ಜನ ರಕ್ತದ ಸಿಗದೇ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಚುನಾವಣೆಯಿಂದ ರಾಜಕೀಯ ನಾಯಕರು, ಗಣ್ಯರು, ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಗಣ್ಯರು ತಮ್ಮ ಹುಟ್ಟುಹಬ್ಬದ ಹೆಸರಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುತ್ತಿದ್ದರು. ಈಗ ಈ ನೀತಿ ಸಂಹಿತೆಯಿಂದ ಗಣ್ಯರ ಹುಟ್ಟು ಹಬ್ಬಕ್ಕೂ ತಡೆಬಿದ್ದಿದ್ದು, ರಕ್ತದಾನ ಶಿಬಿರ ಆಯೋಜನೆಗೆ ನೀತಿ ಸಂಹಿತೆ ಅಡ್ಡಿ ಪಡಿಸಿದೆ. ಇದರಿಂದ ರೋಗಿಗಳು ರಕ್ತ ಸಿಗದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಇನ್ನು ಸಿನಿಮಾ ನಟ-ನಟಿಯರು ಕೂಡ ಚುನಾವಣಾ ಪ್ರಚಾರಕ್ಕಾಗಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಸಂಘ ಸಂಸ್ಥೆಗಳು ಹಾಗೂ ಕಾರ್ಯಕರ್ತರು ಕೂಡ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ರಕ್ತದಾನ ಶಿಬಿರ ಆಯೋಜನೆಯಾಗುತ್ತಿಲ್ಲ. ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ ತಿಂಗಳಿಗೆ ಸರಾಸರಿ 7 ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೆ ಏಪ್ರಿಲ್‍ನಲ್ಲಿ ಕೇವಲ 2 ಸಾವಿರ ಯೂನಿಟ್ ರಕ್ತ ಸಂಗ್ರಹವಾಗಿದೆ.

  • ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ನಾನು ಬಿಜೆಪಿಗೆ ಮತ್ತೆ ಸೇರಲ್ಲ, ಇದೆಲ್ಲಾ ಬಳ್ಳಾರಿಯವರ ತಂತ್ರ: ಶಾಸಕ ತಿಪ್ಪೇಸ್ವಾಮಿ ಗರಂ

    ಚಿತ್ರದುರ್ಗ: ನನ್ನನ್ನು ಇದುವರೆಗೂ ಯಾರು ಸಂಪರ್ಕಿಸಿಲ್ಲ ಮತ್ತು ನಾನು ಬಿಜೆಪಿಗೆ ಮತ್ತೆ ಸೇರಲ್ಲ. ಬಳ್ಳಾರಿಯವರ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿದೆ. ಆದ್ರೆ ಇವರ ಆಟ ಇಲ್ಲಿ ನಡೆಯಲ್ಲ ಅಂತಾ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.

    ಸಂಸದ ಶ್ರೀರಾಮುಲು ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ, ಕಣದಿಂದ ಹಿಂದೆ ಸರಿಯುವಂತೆ ತಿಪ್ಪೇಸ್ವಾಮಿ ಅವರ ಮನವೊಲಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ತಮ್ಮ ಬಗ್ಗೆ ಹುಟ್ಟಿಕೊಂಡಿರುವ ಮಾತುಗಳಿಗೆ ಸ್ಪಷ್ಟನೆ ನೀಡಿದ ತಿಪ್ಪೇಸ್ವಾಮಿ, ನನ್ನ ಬೆಂಬಲಿಗರು ಮತ್ತು ಮತದಾರರಲ್ಲಿ ಗೊಂದಲ ಮೂಡಿಸಲು ಈ ರೀತಿಯ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಈ ಕೆಲಸವನ್ನು ಬಳ್ಳಾರಿಯವ್ರೆ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಇದನ್ನೂ ಓದಿ:  ಮಾತು ಕೊಟ್ಟು ಮೋಸ ಮಾಡಿದ್ರು ಶ್ರೀರಾಮುಲು-ತಿಪ್ಪೇಸ್ವಾಮಿ ಬೆಂಬಲಿಗರ ಆಕ್ರೋಶ: ನೀವೇ ವಿಡಿಯೋ ನೋಡಿ

  • ನಟ ನಿಖಿಲ್‍ಗಾಗಿ ರಾತ್ರೋರಾತ್ರಿ ಮದ್ದೂರಲ್ಲಿ ಪ್ರತಿಭಟನೆ!

    ನಟ ನಿಖಿಲ್‍ಗಾಗಿ ರಾತ್ರೋರಾತ್ರಿ ಮದ್ದೂರಲ್ಲಿ ಪ್ರತಿಭಟನೆ!

    ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಆಗಮನದ ನಿರೀಕ್ಷೆ ಹುಸಿಯಾಗಿದ್ದರಿಂದ ಶಾಸಕ ಡಿ.ಸಿ. ತಮ್ಮಣ್ಣ ಅವರ ಮಗ ಸಂತೋಷ್ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಲ್ಲಿ ನಡೆದಿದೆ.

    ಮದ್ದೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರ ಪ್ರಚಾರ ಮಾಡಲು ನಿಖಿಲ್ ಬರುತ್ತಾರೆ ಎಂದು ಗುರುವಾರ ಸಂಜೆ 6 ಗಂಟೆಯಿಂದ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕಾರಣಾಂತರಗಳಿಂದ ನಿಖಿಲ್ ಪ್ರಚಾರಕ್ಕೆ ಬರಲು ಆಗಿಲ್ಲ. ಇದರಿಂದ ಸಂಜೆ ಆರು ಗಂಟೆಯಿಂದ ರಾತ್ರಿ ಸುಮಾರು 10 ಗಂಟೆವರೆಗೆ ಕಾದುಕುಳಿತಿದ್ದ ಅಭಿಮಾನಿಗಳು ಸಿಟ್ಟಿನಿಂದ ಶಾಸಕ ಡಿ.ಸಿ.ತಮ್ಮಣ್ಣನ ಮಗ ಸಂತೋಷ್ ಕಾರಿಗೆ ಘೆರಾವ್ ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ನಿಖಿಲ್ ಆಗಮಿಸದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದಿಲ್ಲ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

  • ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!

    ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸಹೋದರರ ವಿರುದ್ಧ ಈ ಹಿಂದೆ ಆಂಬುಲೆನ್ಸ್ ನಲ್ಲಿ ಹಣ ಸಾಗಾಟ ಮಾಡಿದ ಆರೋಪ ಕೇಳಿ ಬಂದಿತ್ತು. ಹೀಗಾಗಿಯೇ ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗ ರೆಡ್ಡಿ- ರಾಮುಲು ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶ್ರೀರಾಮುಲು ಅವರನ್ನು ಗೆಲ್ಲಿಸುವ ಸಂಪೂರ್ಣ ಹೊಣೆ ಹೊತ್ತಿರುವ ಜನಾರ್ದನ ರೆಡ್ಡಿ, ಚುನಾವಣೆಯಲ್ಲಿ ಅಕ್ರಮ ಮಾಡದಂತೆ ಚುನಾವಣಾ ಆಯೋಗ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಇದಕ್ಕಾಗಿಯೇ ರೆಡ್ಡಿ ವಾಸವಿರುವ ಮೊಳಕಾಲ್ಮೂರು ತಾಲೂಕಿನ ಮೇಗಲಹಟ್ಟಿ ಮನೆಯ ಮುಂದೆಯೇ ಇದೀಗ ಚೆಕ್ ಪೋಸ್ಟ್ ನಿರ್ಮಿಸಿದೆ.

    ಈ ಮೂಲಕ ಜನಾರ್ದನ ರೆಡ್ಡಿ ಮನೆಗೆ ಬಂದು ಹೋಗುವ ಎಲ್ಲ ವಾಹನಗಳನ್ನು ಚುನಾವಣಾಧಿಕಾರಿಗಳು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೇ ರೆಡ್ಡಿ ಮನೆಗೆ ಬಂದೂ ಹೋಗುವ ವ್ಯಕ್ತಿಗಳ ಮೇಲೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ನಡೆಯದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.

    ಸದ್ಯ ರೆಡ್ಡಿಗೆ ಇದೀಗ ಮನೆಯ ಮುಂದೆಯೇ ಚೆಕ್ ಪೋಸ್ಟ್ ನಿರ್ಮಿಸಿರುವುದು ದೊಡ್ಡ ತಲೆನೋವಾಗಿ ಪರಿಗಣಿಸಿದೆ.

     

  • ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಐಟಿ ದಾಳಿ ವೇಳೆ ಸಿಎಂ ಆಪ್ತನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಲೋಕೋಪಯೋಗಿ ಸಚಿವ ಮಹಾದೇವಪ್ಪ ಆಪ್ತ ಗುತ್ತಿಗೆದಾರ ಮರಿಸ್ವಾಮಿ ಮನೆಯಲ್ಲಿ ಕೋಟಿ ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

    ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ 10 ಮಂದಿ ಪಿಡಬ್ಲ್ಯೂಡಿ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮೈಸೂರಿನಲ್ಲಿ ಮರಿಸ್ವಾಮಿ ಮನೆಯ ಮೇಲೆ ನಡೆದ ದಾಳಿಯ ವೇಳೆ 6.76 ಕೋಟಿ ರೂ. ನಗದು ಹಣ ಸಿಕ್ಕಿದೆ.

    ಪತ್ತೆಯಾಗಿರುವ ಎಲ್ಲ ನೋಟುಗಳು 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳು ಆಗಿದ್ದು. ಎಲ್ಲವೂ ಬೇನಾಮಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಎಲ್ಲ ಕಡೆ ದಾಳಿ ನಡೆಸಿದಾಗ ಒಟ್ಟು 10.62 ಕೋಟಿ ರೂ. ನಗದು ಸಿಕ್ಕಿದ್ದು, 1.33 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

    ಕೆಲ ದಿನಗಳಿಂದ ರಾಜ್ಯ ಮತ್ತು ರಾಷ್ಟ್ರದ ಹಲವು ಕಡೆ ನಗದಿನ ಕೊರತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದಾಗ ಕರ್ನಾಟಕ ರಾಜ್ಯದ ಗುತ್ತಿಗೆದಾರರ ಬಳಿ ಭಾರೀ ಪ್ರಮಾಣದ ಹಣ ಇರುವ ಅಂಶ ದೃಢಪಟ್ಟಿದೆ ಎಂದು ಐಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಹಲವು ಗುತ್ತಿಗೆದಾರರು 500 ಮತ್ತು 2 ಸಾವಿರ ರೂ. ಮೌಲ್ಯದ ಭಾರೀ ಪ್ರಮಾಣದ ಹಣವನ್ನು ಹೊಂದಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ದಾಳಿಯಲ್ಲಿ ಪತ್ತೆಯಾದ ಹಣಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ, ದಾಳಿ ಮುಂದುವರಿದಿದೆ ಎಂದು ಐಟಿ ತಿಳಿಸಿದೆ.

    ಮರಿಸ್ವಾಮಿ ಸ್ಪಷ್ಟನೆ: ಸಿಎಂ ಜೊತೆಗಿರುವ ಫೋಟೋ ಪ್ರಕಟವಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ನನ್ನ ಮನೆ ಮೇಲೆ ಐಟಿ ದಾಳಿ ಆಗಿಲ್ಲ. ನಾನು ಬೆಸಿಕಲಿ ಕೃಷಿಕ, ನಾನು ಕಂಟ್ರ್ಯಾಕ್ಟರ್ ಅಲ್ಲ. ಸುಖಸುಮ್ಮನೆ ನನ್ನ ಹೆಸರು ಇಲ್ಲಿಗೆ ತಗಲಿ ಕೊಂಡಿದೆ. ನಾನು ಯಾವ ವ್ಯವಹಾರ ಮಾಡಿಲ್ಲ. ಸಿಎಂ ಜೊತೆಗಿನ ಸಂಬಂಧ ಪವಿತ್ರ ಸ್ನೇಹ ಅಷ್ಟೇ. ಯಾವ ವ್ಯವಹಾರವೂ ಇಲ್ಲ. ಯಾವ ವಿಚಾರಣೆಯನ್ನು ನಾನು ಎದುರಿಸಿಲ್ಲ. ಐಟಿ ಅಧಿಕಾರಿಗಳು ಯಾವ ನೋಟಿಸ್ ಕೊಟ್ಟಿಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಮರಿಸ್ವಾಮಿ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.