ಹಾಸನ/ರಾಮನಗರ: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ಆದ್ರೆ ಚುನಾವಣೆ ಹಾಕಿರೋದು 50 ರಿಂದ 60 ಸೀಟ್ ಮಾತ್ರ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ಹಾಸನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 50 ರಿಂದ 60 ಸ್ವಂತ ಅಭ್ಯರ್ಥಿಗಳನ್ನು ಮಾತ್ರ ಕಣ್ಕಕೀಳಿಸಿದೆ. ಇನ್ನು ಉಳಿದಂತೆ ಕಾಂಗ್ರೆಸ್ ಹಾಗು ಬಿಜೆಪಿ ಟಿಕೆಟ್ ವಂಚಿತ ನಾಯಕರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಬೇಕೆಂದು ಹಾಕಿದೆ. ಮಾತಿಗೋಸ್ಕರ ನಾನು ರೈತನ ಮಗ, ಮಣ್ಣಿನ ಮಗ ಅಂತಾ ಹೇಳಿ ಕೊಳ್ಳಬಾರದು. ರಾಜ್ಯದ ರೈತರಿಗಾಗಿ ಕೆಲಸ ಮಾಡಬೇಕು. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ ಅಂತಾ ಹೇಳಿದ್ರು.
ಇತ್ತ ರಾಮನಗರದ ಚನ್ನಪಟ್ಟಣದಲ್ಲಿ ಅಮಿತ್ ಶಾ ಜೊತೆಗೆ ಹೆಚ್‍ಡಿಕೆ ಒಂದೇ ವಿಮಾನದಲ್ಲಿ ಪ್ರಯಾಣಿಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಜೊತೆಗಿರುವ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ. ಅವರಿಗೆ ಜವಬ್ದಾರಿ ಏನಾದ್ರೂ ಇದ್ರೆ ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಅಲ್ಲದೇ ಅಮಿತ್ ಶಾ ಭೇಟಿ ಮಾಡಲು ನನಗೆ ಏನು ಸಂಬಂಧ ಅವರೇನೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ ಪ್ರವಾಸ ಮಾಡೋಕೆ ಅವರ ಜೊತೆಗೆ ವಿಮಾನದಲ್ಲಿ ಎಲ್ಲಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ರು. ಅಲ್ಲದೇ ಹೀಗೆ ಹೇಳಿದ್ರೆ ಸಿಎಂ ಕುಡಿದು ಮಾತನಾಡುತ್ತಿದ್ದಾರೆ ಅಂತಾ ಜನ ಕಾಮೆಂಟ್ಸ್ ಮಾಡ್ತಾರೆ ಎಂದು ಕಿಡಿಕಾರಿದ್ರು.
ಬೀದರ್: ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಮತ್ತೆ ಮತದಾರ ಪ್ರಭು ಕಾರಿಗೆ ಮುತ್ತಿಗೆ ಹಾಕಿ ಬೆವರಿಳಿಸಿದ ಘಟನೆ ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ನಡೆದಿದೆ.
ನನಗೆ ಮತ ನೀಡಿ ಎಂದು ಕೇಳಲು ಹೋಗಿದ್ದ ಖೇಣಿ ಅವರಿಗೆ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡದಕ್ಕೆ ಗ್ರಾಮಸ್ಥರು ಪ್ರಶ್ನೆಗಳ ಸುರಿ ಮಳೆ ಹಾಕಿ ವಿರುದ್ಧ ಘೋಷಣೆ ಕೂಗಿದ್ದಾರೆ. ಎರಡನೇಯ ಬಾರಿಗೆ ಗ್ರಾಮದಲ್ಲಿ ತರಾಟೆ ತೆಗೆದುಕೊಂಡಿದರಿಂದ ಕಕ್ಕಾಬಿಕ್ಕಿಯಾದ ಅಶೋಕ್ ಖೇಣಿ ಕಾರಿನಿಂದ ಕೆಳಗಿಳಿಯದೆ ಮೌನಕ್ಕೆ ಶರಣಾದ್ರು.
ಬೀದರ್ ದಕ್ಷಿಣ ಕ್ಷೇತ್ರವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಹೇಳಿದ್ದ ಖೇಣಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರು ಮುತ್ತಿಗೆ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ಇದರಿಂದ ಖೇಣಿ ಅವರಿಗೆ ಚುನಾವಣಾ ಭಯ ಶುರುವಾಗಿದ್ದು 5 ವರ್ಷಗಳ ನಂತರ ಮತದಾರ ಪ್ರಭು ಶಾಸಕರಿಗೆ ತರಾಟೆ ತೆಗೆದುಕೊಂಡು ಪ್ರಶ್ನೆ ಮಾಡುತ್ತಿದ್ದಾರೆ.
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬದಲಾಗಿದ್ದಾರೆ. ಈ ಮಾತು ಯಾಕೆಂದರೆ ಎರಡು ವಾರ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆ ಹೋಗುವುದಕ್ಕೆ ರಾಹುಲ್ ಗಾಂಧಿ ಕಾರ್ಯಕರ್ತರ ಅನುಮತಿ ಕೇಳಿದ್ದಾರೆ.
ಈ ಹಿಂದೆ ವಿದೇಶಕ್ಕೆ ಸೈಲೆಂಟಾಗಿ ವಾರಗಟ್ಟಲೇ ಹೋಗಿ ಬರುತ್ತಿದ್ದ ರಾಹುಲ್ ವಿವಾದಕ್ಕೆ ತುತ್ತಾಗ್ತಿದ್ದರು. ಭಾನುವಾರ ದೆಹಲಿಯಲ್ಲಿ ನಡೆದ ಜನಾಕ್ರೋಶ ಸಮಾವೇಶದಲ್ಲಿ ರಾಹುಲ್ ಜನರ ಅನುಮತಿ ಕೇಳಿದ್ದು, ನಾಲ್ಕೈದು ದಿನಗಳ ಹಿಂದೆ ಹುಬ್ಬಳ್ಳಿಗೆ ತೆರಳುವಾಗ ವಿಶೇಷ ವಿಮಾನದಲ್ಲಿ ಜೀವಭಯ ಎದುರಿಸಿದ ಬಗ್ಗೆ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?
ವಿಮಾನ ಹಠಾತ್ತನೇ 8 ಸಾವಿರ ಅಡಿ ಕೆಳಗೆ ಕುಸಿದಾಗ ಎಲ್ಲಾ ಮುಗಿದು ಹೋಯ್ತು ಅಂದುಕೊಂಡೆ. ಆ ಕ್ಷಣದಲ್ಲೇ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಗೆ ನಿರ್ಧರಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಯಾತ್ರೆ ಹೋಗುತ್ತೀನಿ ಎಂದು ಅನುಮತಿ ಕೊಡಿ ಅಂತಾ ಕೇಳಿಕೊಂಡಿದ್ದಾರೆ.
ಇದೇ ಗುರುವಾರ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಕರಾವಳಿ ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸಿದ್ದರು. ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತ್ತು. ವೇಗವಾಗಿ ಆಗಸದಿಂದ ಕೆಳಗಿಳಿಯುತ್ತಿರುವಂತೆ ತೊಂದರೆ ಉಂಟಾಗಿತ್ತು.
ಹಾಸನ: ಮತದಾನಕ್ಕೆ 12 ದಿನ ಇರುವಾಗ ಹೊಳೇನರಸೀಪುರ ವಿಧಾನಾಸಭಾ ಕ್ಷೇತ್ರ ರಣಾಂಗಣವಾಗಿದೆ. ಜಿದ್ದಾ ಜಿದ್ದಿನ ಕ್ಷೇತ್ರ ಹೊಳೇನರಸೀಪುರದಲ್ಲಿ ಭಾನುವಾರ ರಾತ್ರಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಹೊಡೆದಾಡಿಕೊಂಡಿದ್ದಾರೆ.
ಎ. ಕಾಳೇನಹಳ್ಳಿಯಲ್ಲಿ ಚುನಾವಣಾ ಪ್ರಚಾರ ನಡೆಸುವ ವಿಚಾರದಲ್ಲಿ ಆರಂಭವಾದ ಗಲಾಟೆ, ಕಲ್ಲು ತೂರಾಟದಲ್ಲಿ ಅಂತ್ಯವಾಗಿದೆ. ಗ್ರಾಮದಲ್ಲಿ ಪ್ರಚಾರ ನಡೆಸಬಾರದು ಎಂದು ಕಾಂಗ್ರೆಸ್‍ನವರ ವಿರುದ್ಧ ಜೆಡಿಎಸ್ ಗಲಾಟೆ ಮಾಡಿದ್ದಾರೆ.
ಕಾಂಗ್ರೆಸ್ ಜಿ.ಪಂ ಸದಸ್ಯ ಶ್ರೇಯಸ್ ಪಟೇಲ್ ಕಾರ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಾರ್ ಗಾಜುಗಳು ಪುಡಿ ಪುಡಿಯಾಗಿವೆ. ಉಮೇಶ್ ಎಂಬವರ ಮನೆ ಮೇಲೆಯೂ ಕಲ್ಲು ತೂರಾಟ ನಡೆದಿದೆ.
ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಸ್ಥಳಕ್ಕೆ ಎಸ್‍ಪಿ ಭೇಟಿ, ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ, ಅನುಪಮಾ ಮಹೇಶ್ ಭೇಟಿ ನೀಡಿದ್ದಾರೆ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಅರೆಸೇನಾ ಪಡೆಯ ತುಕಡಿಯೊಂದನ್ನು ಗ್ರಾಮಕ್ಕೆ ರವಾನಿಸಲಾಗಿದೆ.
ಅಂದಹಾಗೇ ಗಲಾಟೆ ವೇಳೆ ಎ. ಕಾಳೇನಹಳ್ಳಿಯಲ್ಲೇ ಇದ್ದ ಹೆಚ್.ಡಿ.ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ ಕೂಡ ಇದ್ದರು ಎನ್ನಲಾಗಿದೆ.
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್‍ಗೆ ಡಿಮ್ಯಾಂಡ್ ಕಡಿಮೆಯೇ ಆಗಿಲ್ಲ. ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರೋ ರೆಬೆಲ್ ಸ್ಟಾರ್ ಹಿಂದೆ ಕಾಂಗ್ರೆಸ್ ಬಿದ್ದಿದೆ.
ಮಂಡ್ಯ ಬಿ ಫಾರಂ ಕೊಟ್ಟರೂ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಅಂಬರೀಶ್‍ಗೆ, ಪಕ್ಷದ ಪರ ಪ್ರಚಾರಕ್ಕಾದರೂ ಬನ್ನಿ ಎಂದು ಕೆಪಿಸಿಸಿ ನಾಯಕರು ಕೇಳಿಕೊಂಡಿದ್ದಾರೆ. ಆದರೆ ಅಂಬಿ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಎಲ್ಲಾ ಸರಿ ಇದ್ದಿದ್ದರೆ ಎಲೆಕ್ಷನ್‍ಗೆ ಕಂಟೆಸ್ಟ್ ಮಾಡುತ್ತಿರಲಿಲ್ವಾ. ಆರೋಗ್ಯ ಸರಿ ಇಲ್ಲಾ. ವಯಸ್ಸು ಸಹಕರಿಸುತ್ತಿಲ್ಲ. ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ ಎಂದು ಅಂಬಿ ಕೈ ಎತ್ತಿದ್ದಾರೆ ಎನ್ನಲಾಗಿದೆ.
ಕೈ ಪಡೆ ಮಾತ್ರ ತನ್ನ ಪ್ರಯತ್ನ ಬಿಟ್ಟಿಲ್ಲ. ಅಂದಹಾಗೇ ಕಾಂಗ್ರೆಸ್ ಸ್ಟಾರ್ ಕ್ಯಾಂಪೆನರ್ ಗಳ ಪೈಕಿ ಸಿಎಂ, ಡಿ.ಕೆ.ಶಿವಕುಮಾರ್ ಬಿಟ್ಟರೆ ಅತಿ ಹೆಚ್ಚು ಬೇಡಿಕೆ ಇರುವುದು ಅಂಬರೀಶ್‍ಗೆ. ಅದರಲ್ಲೂ ವಿಶೇಷವಾಗಿ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಉತ್ತರ ಕರ್ನಾಟಕದ ಕೆಲವು ಅಭ್ಯರ್ಥಿಗಳು ಅಂಬರೀಶ್‍ರನ್ನು ಕರೆತಂದು ಪ್ರಚಾರ ಮಾಡಿಸಿ ಎಂದು ಕೆಪಿಸಿಸಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು ತಾವೇ ಅಂಬರೀಶ್ ಸಂಪರ್ಕಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಸ್ಟಾರ್ ಕ್ಯಾಂಪೇನರ್ ಲಿಸ್ಟ್ ನಲ್ಲಿರುವ ಮಾಜಿ ಸಂಸದೆ ರಮ್ಯಾ ಸಹ ಚುನಾವಣಾ ಪ್ರಚಾರಕ್ಕೆ ಆಗಮಿಸಿಲ್ಲ.
ಚಿತ್ರದುರ್ಗ: ನೀವು ಬಿಟ್ಟರೂ ನಾನು ಮಾತ್ರ ಬಿಡಲ್ಲ. ಬಹಿರಂಗವಾಗಿ ಬರಲ್ಲ. ಆದ್ರೆ ಒಳಗಡೆಯಿಂದ ಬಿಡಲ್ಲ ಅನ್ನೋ ಮಂತ್ರವನ್ನು ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳಗ ಜಪಿಸುತ್ತಿದೆ. ಕಾಂಗ್ರೆಸ್ ಪಕ್ಷ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದ ಬೆನ್ನಲ್ಲೇ, ಅಮಿತ್ ಶಾ ಅಬ್ಬರದ ಪ್ರಚಾರಕ್ಕೆ ಬ್ರೇಕ್ ಹಾಕಿಕೊಳ್ಳುವಂತೆ ತಾಕೀತು ಮಾಡಿದ್ರು.
ಹೈಕಮಾಂಡ್ ಆದೇಶಕ್ಕೆ ಓಕೆ ಅಂದಿರುವ ಜನಾರ್ದನ ರೆಡ್ಡಿ, ಸಂಸದ ಶ್ರೀರಾಮುಲು ಮೂಲಕ ಹೈಕಮಾಂಡ್‍ಗೆ ಮತ್ತೊಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಭಾನುವಾರ ಮತ್ತೆ ಮೊಳಕಾಲ್ಮೂರಿಗೆ ಶಿಫ್ಟ್ ಆಗಿರುವ ಜನಾರ್ದನ ರೆಡ್ಡಿ, ನಾನು ಬಹಿರಂಗವಾಗಿ ಅಖಾಡಕ್ಕೆ ಇಳಿಯಲ್ಲ, ಆದ್ರೆ ಒಳಗೆ ಕೆಲಸ ಮಾಡ್ತೀನಿ. 10 ರಿಂದ 12 ಸೀಟುಗಳನ್ನು ಬಿಜೆಪಿಗೆ ಗೆಲ್ಲಿಸಿ ಕೊಡೋದು ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದಾರಂತೆ.
ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ರಾಯಚೂರಿನಲ್ಲಿ ನಮ್ಮದೇ ಹವಾ. ನನ್ನ ಮೊದಲ ಟಾರ್ಗೆಟ್ ಸಿಎಂ ಸಿದ್ದರಾಮಯ್ಯ, ಅವ್ರನ್ನ ಬದಾಮಿಯಲ್ಲಿ ಸೋಲಿಸಿ, ಶ್ರೀರಾಮುಲು ಗೆಲ್ಲಿಸಿಕೊಂಡು ಬರ್ತೀನಿ ಅಂತಾ ರೆಡ್ಡಿ ಬಿಜೆಪಿ ಹೈಕಮಾಂಡ್‍ಗೆ ಸಂದೇಶ ಕಳುಹಿಸಿದ್ದು, ಅಲ್ಲಿಂದಲೂ ಅನುಮತಿ ದೊರತಿದೆ ಎನ್ನಲಾಗಿದೆ.
ಕೊಪ್ಪಳ: ನಿಮ್ಮೂರಿನಲ್ಲಿ ನನಗೆ ವೋಟ್ ಬಂದಿಲ್ಲ. ಹದಿನೈದಿಪ್ಪತ್ತು ವೋಟ್ ಬಂದ್ರೆ ಕೆಲಸ ಮಾಡಲು ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ಕೈ ನಾಯಕ ಇಕ್ಬಾಲ್ ಅನ್ಸಾರಿ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ.
ಗಂಗಾವತಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಬಾಯಿಂದಲೇ ಇಂಥ ಸಂವಿಧಾನ ವಿರೋಧಿ ಹೇಳಿಕೆ ಹೊರ ಬಿದ್ದಿದೆ. ನನಗೆ ವೋಟ್ ಹಾಕದ ಗ್ರಾಮಕ್ಕೆ ಅಭಿವೃದ್ಧಿಗಾಗಿ ಅನುದಾನ ನೀಡಲ್ಲ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ.
ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಇಂದಿರಾನಗರ ಗ್ರಾಮದಲ್ಲಿ ಶನಿವಾರ ಅನ್ಸಾರಿ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಜನ, ಕಳೆದ ಬಾರಿ ಬಂದಾಗ ಮಸೀದಿ ಅಭಿವೃದ್ಧಿಗೆ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆದರೆ ಇದೂವರೆಗೆ ಹಣ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಪ್ರಶ್ನೆಗೆ ಅನ್ಸಾರಿ, 2013ರಲ್ಲಿ ನನಗೆ ನಿಮ್ಮ ಗ್ರಾಮದವರು ಎಷ್ಟು ಮತ ನೀಡಿದ್ದೀರಿ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ ನಿಮ್ಮೂರಲ್ಲಿ ಕೇವಲ 15 ರಿಂದ 20 ವೋಟ್ ಮಾತ್ರ ಬಂದಿವೆ. ಇಷ್ಟು ವೋಟ್ ಹಾಕಿದ್ರೆ ಕೆಲಸ ಮಾಡಲು ಆಗುತ್ತಾ ಎಂದು ಉತ್ತರಿಸಿದ್ದಾರೆ. ಕೊನೆಗೆ ಈ ಸಲ ನನ್ನ ಜೊತೆ ಇರಿ ಎಲ್ಲ ಮಾಡೋಣ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬೆಂಗಳೂರು: ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮೊದಲ ಗುರಿ. ನಾನು ಯಾವುದೇ ಒತ್ತಡ, ದಾಳಿಗೆ ಹೆದರುವುದಿಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪಬ್ಲಿಕ್ ಟಿವಿ ಹಾಟ್ ಸೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನೇರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಶ್ನೆ: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗಳ ಹೆಸರಲ್ಲಿ 100 ಕೋಟಿ ರೂ. ಆಸ್ತಿ ಹೇಗೆ ಬಂತು?
ನನ್ನ ಮಗಳ ಹೆಸರಿನಲ್ಲಿ 100 ಕೋಟಿ ಆಸ್ತಿ ಇರುವುದು ನನ್ನ ಸ್ವ ಸಂಪಾದನೆ. ನನ್ನ ಮಗಳು ಈಗಾಗಲೇ ಪದವಿ ಪೂರ್ಣಗೊಳಿಸಿದ್ದು ನನ್ನ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾಳೆ. ಅವಳ ಹೆಸರಿನಲ್ಲಿ ತಂದೆಯಾಗಿ ಆಸ್ತಿ ಮಾಡಿದ್ದೇನೆ. ನನ್ನ ಕರ್ತವ್ಯ ಮಾಡಿದ್ದೇನೆ. ನನ್ನ ಮಗಳ ಹೆಸರಿನಲ್ಲಿ ಇರುವ ಎಲ್ಲಾ ಆಸ್ತಿಗೂ ಲೆಕ್ಕ ನೀಡಿದ್ದೇನೆ.
ಪ್ರಶ್ನೆ: ಐಟಿ ದಾಳಿ ನಿಮ್ಮ ರಾಜಕೀಯ ಅಬ್ಬರದ ಮೇಲೆ ಪ್ರಭಾವ ಉಂಟುಮಾಡಿದೆಯಾ?
ಐಟಿ ದಾಳಿಯಿಂದ ನನ್ನ ರಾಜಕೀಯ ಮೇಲೆ ಜೀವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೆ ನನ್ನ ಬೆಂಬಲಕ್ಕೆ ನಿಂತಿರುವ ಕಾರ್ಯಕರ್ತರ, ಜನರ, ಸ್ನೇಹಿತರ ಸೇವೆ ಮಾಡಲು ಕಷ್ಟವಾಯಿತು. ಐಟಿ ದಾಳಿಯ ವೇಳೆ ಅದರ ಪ್ರಕಿಯೆಯಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಯಿತು.
ಪ್ರಶ್ನೆ: ನಿಮ್ಮ ನಿವಾಸದಲ್ಲಿ ಹಣ ಸಿಕ್ಕಿದೆ, ಫೋಟೋಗಳು ಪ್ರಕಟವಾಗಿದೆಯಲ್ಲ?
ನನ್ನ ಮೇಲೆ ದಾಳಿ ನಡೆಸಿದ ವೇಳೆ ಪ್ರಸಾರ ಮಾಡಲಾದ ಫೋಟೋ, ವಿಡಿಯೋಗಳು ನಕಲಿ ಎಂದು ಐಟಿ ವಿಭಾಗವೇ ಸ್ಪಷ್ಟಪಡಿಸಿದೆ. ಈ ಕುರಿತು ಜನರಿಗೆ ಅರಿವಿದೆ. ನಾನು 90% ಸಾಲ ಮಾಡಿದ್ದೇನೆ. ನನ್ನ ಪ್ರತಿ ಹಣಕ್ಕೆ ಲೆಕ್ಕ ಇದೆ.
ಪ್ರಶ್ನೆ: ಐಟಿ ದಾಳಿ ವೇಳೆ ಬಿಜೆಪಿ ಅಫರ್ ಬಂದಿತ್ತಾ?
ಈ ಕುರಿತು ಉತ್ತರಿಸಲು ನನಗೆ ಇನ್ನೂ ಸೂಕ್ತ ಸಮಯ ಸಿಕ್ಕಿಲ್ಲ. ಯಾವುದೇ ಒಂದು ವಿಷಯದ ಬಗ್ಗೆ ಸ್ಪಷ್ಟಪಡಿಸಲು ಸೂಕ್ತ ಸಮಯ ಹಾಗೂ ಅವುಗಳಿಗೆ ಬೇಕಾದ ಸಾಕ್ಷ್ಯಧಾರಗಳ ಅವಶ್ಯಕತೆ ಇರುತ್ತದೆ.
ಪ್ರಶ್ನೆ: ಮುಂದಿನ ಬಾರಿ ರಾಜ್ಯದಲ್ಲಿ ಸಿಎಂ ಯಾರು ಆಗುತ್ತಾರೆ?
ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮೊದಲ ಗುರಿ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ. ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಎಂದು ನಮ್ಮ ನಾಯಕರು ಈಗಾಗಲೇ ಹೇಳಿದ್ದಾರೆ.
ಪ್ರಶ್ನೆ: ರಾಜ್ಯದಲ್ಲಿ ಒಕ್ಕಲಿಗ ಜನರನ್ನು ಸೆಳೆಯುವಲ್ಲಿ ಜೆಡಿಎಸ್, ಬಿಜೆಪಿ ಯಶಸ್ವಿಯಾಗಿದೆ. ನೀವು ಇನ್ನು ಒಕ್ಕಲಿಗ ನಾಯಕನಾಗಿಲ್ಲ?
ಇಲ್ಲ ಈ ಮಾತನ್ನು ನಾನು ಒಪ್ಪಲ್ಲ. ಮೈಸೂರು, ಹಾಸನ, ರಾಮನಗರದಲ್ಲಿ ಒಕ್ಕಲಿಗರು ಕಾಂಗ್ರೆಸ್ ಬೆಂಬಲಿಸುತ್ತಾರೆ. ನಾನು ಹುಟ್ಟಿನಿಂದಲೇ ಒಕ್ಕಲಿಗ. ಒಕ್ಕಲಿಗ ಎಂದು ಹೇಳಿಕೊಳ್ಳುವ ಅಗತ್ಯ ನನಗಿಲ್ಲ.
ಪ್ರಶ್ನೆ: ರಾಮನಗರದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಾ?
ನಾನು ಆರಂಭದಿಂದಲೂ ಮಾಜಿ ಪ್ರಧಾನಿ ದೇವೇಗೌಡ ಅವರ ಮೇಲೆ ಹೋರಾಟ ನಡೆಸಿದ್ದೇನೆ. ಕುಮಾರಸ್ವಾಮಿಯವರ ಮೇಲೆಯೂ ನಾನು ಹೋರಾಟ ನಡೆಸಿದ್ದೇನೆ. ಆದರೆ ಅನಿತಾ ಕುಮಾರಸ್ವಾಮಿ ಅವರಿಗೆ ಗೌರವ ನೀಡಿದ್ದೇನೆ. ನಮ್ಮ ಮನೆಯ ಮಗಳಿಗೆ ನೀಡಿದ ಗೌರವ ಮಾತ್ರ ನೀಡಿದ್ದೇನೆ ಅಷ್ಟೇ ಇದರಲ್ಲಿ ಯಾವುದೇ ಉದ್ದೇಶ ಇಲ್ಲ ಎಂದರು.
ಈ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣದಲ್ಲಿ ಸೇರಿದಂತೆ ಮೂರು ಕೇತ್ರದಲ್ಲಿ ಗೆಲುವು ಪಡೆಯುತ್ತೇವೆ. ಆದರೆ ಕೆಲವರು ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದರಿಂದ ಆರಂಭದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಚೆನ್ನಪಟ್ಟಣದಲ್ಲಿ ನಾವು ದೊಡ್ಡ ನಾಯಕನನ್ನು ಬೆಳೆಸದ ಕಾರಣ ಹಿನ್ನಡೆಯಾಗಿದೆ. ಆದರೆ ಈ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಕಾಂಗ್ರೆಸ್ ನೀಡಿದ ಕೊಡುಗೆಯನ್ನು ಯೋಗೇಶ್ವರ್ ಮರೆತಿದ್ದಾರೆ.
ಪ್ರಶ್ನೆ: ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ಮೂಲೆ ಗುಂಪು ಮಾಡಲಾಗುತ್ತಿದೆ?
ಪಕ್ಷ ನನಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ನಾಯಕರು ನನ್ನನ್ನು ಸೇವೆಯನ್ನು ಗುರುತಿಸಿದ ಮೇಲೆ ನನಗೆ ಯಾವ ಸ್ಥಾನ ನೀಡಬೇಕೆಂದು ನಿರ್ಧರಿಸುತ್ತಾರೆ.
ಪ್ರಶ್ನೆ: ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಯಾವಾಗ?
ನನಗೆ ಈಗ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ಇದೆ. ದೇವೇಗೌಡರು ಯಾವ ವಯಸ್ಸಿನಲ್ಲಿ ಆಗಿದ್ದು? ಸಿದ್ದರಾಮಯ್ಯನವರು ಯಾವ ವಯಸ್ಸಿನಲ್ಲಿ ಆಗಿದ್ದು? ನನಗೆ ಈಗ ವಯಸ್ಸು ಕಡಿಮೆ ಇದೆ. ಎಲ್ಲವೂ ಸಮಯ ಬಂದಾಗ ನಿರ್ಧಾರ ಆಗುತ್ತದೆ. ನನಗೆ ಸಿಎಂ ಆಗುವ ವಯಸ್ಸು ಇನ್ನು ಇದೇ ಬಿಡ್ರಿ.
ಪ್ರಶ್ನೆ: ಎಲ್ಲ ಸಮೀಕ್ಷೆಗಳಲ್ಲಿ ಯಾರಿಗೂ ಬಹುಮತ ಬರಲ್ಲ ಎನ್ನುವ ಫಲಿತಾಂಶ ಬರುತ್ತಿದೆ. ಈ ಕಾರಣಕ್ಕೆ ನೀವು ಕುಮಾರಸ್ವಾಮಿ ಜೊತೆ ಮೃದು ಧೋರಣೆ ತೋರಿಸುತ್ತಿದ್ದೀರಿ?
ನಾನು ಹಿಂದೆಯೇ ದೇವೇಗೌಡರ ವಿರುದ್ಧ ಕಣಕ್ಕೆ ನಿಂತಿದ್ದೇನೆ. ಮೃದು ಧೋರಣೆ ಇಲ್ಲವೇ ಇಲ್ಲ. ನಿಮ್ಮ ಸಮೀಕ್ಷೆಯಲ್ಲಿ ಬಹುಮತ ಬಾರದೇ ಇರಬಹುದು. ಆದರೆ ನಮ್ಮ ಸಮೀಕ್ಷೆ ಪ್ರಕಾರ ನಮಗೆ 132 ಸ್ಥಾನ ಸಿಗುತ್ತದೆ. ಇದರಲ್ಲಿ ನಂಬಿಕೆ ಇದ್ದು ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ.
ಪ್ರಶ್ನೆ: 2013ರಲ್ಲಿ ಬಿಜೆಪಿ ಆಂತರಿಕ ಗಲಾಟೆ, ರೆಸಾರ್ಟ್ ಪಾಲಿಟಿಕ್ಸ್ ನಿಂದ ಜನ ಬದಲಾವಣೆ ಬಯಸಿದ್ರು. ಆದರೆ ಈಗ ಈ ಪರಿಸ್ಥಿತಿ ಇಲ್ಲ?
ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಯಾರು ಏನು ಬೇಕಾದರೂ ಹೇಳಲಿ ಮತ್ತೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ.
ಪ್ರಶ್ನೆ: ನೀವು ಈಗಾಗಲೇ ಹಲವು ರಾಜ್ಯಗಳನ್ನು ಕಳೆದುಕೊಂಡಿದ್ದೀರಿ. ಬಿಜೆಪಿಗೆ ಕೇಂದ್ರದಲ್ಲಿ ಮೋದಿ ಇದ್ದಾರೆ. ಹೀಗಿರುವಾಗಲೂ ನೀವು ಕರ್ನಾಟಕದಲ್ಲಿ ಗೆಲ್ಲುತ್ತಿರಾ?
ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಗೆಲುವು ಅಷ್ಟು ಸುಲಭವಲ್ಲ, ಆಂಧ್ರದಲ್ಲಿ ಆಗಿಲ್ಲ. ಕರ್ನಾಟಕ ಸಿಗಲ್ಲ. ಜನರಲ್ಲಿ ಹಣ ಎಲ್ಲಿದೆ. ಲಕ್ಷ್ಮಿಯನ್ನು ಫೋಟೋದಲ್ಲಿ ನೋಡಬಾರದು. ಕೈಯಲ್ಲಿ ನೋಡಬೇಕು. ಈ ಬಾರಿ ಜನ ನಮ್ಮ ಕೈಯನ್ನು ಹಿಡಿಯುತ್ತಾರೆ. ಕಾಂಗ್ರೆಸ್ ಒಂದೇ ಜಾತ್ಯಾತೀತ ಪಕ್ಷ. ನಮ್ಮಲ್ಲಿ ಎಲ್ಲರಿಗೂ ಗೌರವವಿದೆ.
ಪ್ರಶ್ನೆ: ಹಾಗಾದ್ರೆ ನೀವು ಈ ಬಾರಿ ಅಧಿಕಾರ ಏರುವುದು ನಿಶ್ಚಿತ?
ಖಂಡಿತ ಜನ ನಮಗೆ ಆಶೀರ್ವಾದ ಮಾಡುತ್ತಾರೆ. ರಾಜ್ಯದ ಜನ ಮುಂದಿನ ಅವಧಿಯಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುವುದು ಅವರೇ ನಿರ್ಧಾರ ಮಾಡುತ್ತಾರೆ. ಸುಳ್ಳು ಭರವಸೆಗಳಿಗೆ ಜನ ಮರಳಾಗುವುದಿಲ್ಲ. ಕರ್ನಾಟಕದಲ್ಲಿ 75% ರಷ್ಟು ಯುವ ಜನರಿದ್ದಾರೆ. ಅವರು ತುಂಬಾ ಬುದ್ಧಿವಂತರು ಅವರೇ ತೀರ್ಮಾನಿಸುತ್ತಾರೆ.
ತುಮಕೂರು: ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಹಿರಿಯ ಪತ್ರಕರ್ತ, ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಸಿಡಿಮಿಡಿಗೊಂಡ ಘಟನೆ ನಡೆಯಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕರಾವಳಿಯಲ್ಲಿನ ಕೋಮುಗಲಭೆ ಹೆಚ್ಚಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ ಎಂಬ ಆರೋಪ ಇದೆ ಎಂಬ ಪ್ರಶ್ನೆಗೆ ಆಕ್ರೋಶ ಭರಿತರಾದ ಸಿದ್ದಲಿಂಗಯ್ಯ ಹಾಗೂ ದಿನೇಶ್ ಅಮಿನ್ ಮಟ್ಟು, ಆರೋಪಗಳನ್ನು ಪ್ರಶ್ನಿಸಬೇಡಿ, ದಾಖಲೆ ಸಹಿತ ತೋರಿಸಿ ಎಂದು ಪತ್ರಕರ್ತರನ್ನು ಬಾಯಿ ಮುಚ್ಚಿಸಲು ಯತ್ನಿಸಿದರು.
ಎಸ್ ಜಿ ಸಿದ್ದರಾಮಯ್ಯ ಅವರು ಚಿಕ್ಕನಾಯಕನ ಹಳ್ಳಿ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಅವರನ್ನು ಬೆಂಬಲಿಸುತ್ತಿರಿ ಎನ್ನುವ ಆರೋಪದ ಪ್ರಶ್ನೆ ಕೇಳಿದಾಗ ಸಿದ್ದರಾಮಯ್ಯ ಕೆಂಡಾಮಂಡಲವಾಗಿ ಯಾವ ಮೂರ್ಖರು ಹಾಗಂತ ಹೇಳಿದ್ದು? ಎಂದು ಏರು ಧ್ವನಿಯಲ್ಲಿ ಮಾತನಾಡಿ ಮಾಧ್ಯಮದವರ ಬಾಯಿ ಮುಚ್ಚಿಸುವ ಯತ್ನಮಾಡಿದರು.
ಸುದ್ದಿಗೋಷ್ಠಿ ನಡೆಸಲು ಬಂದಿದ್ದ ದಿನೇಶ್ ಅಮಿನ್ ಮಟ್ಟು ಹಾಗೂ ಸಿದ್ದರಾಮಯ್ಯರ ಧೋರಣೆ ಖಂಡಿಸಿ ಪತ್ರಕರ್ತರು ಪ್ರತಿದಾಳಿ ನಡೆಸಿದಾಗ ಸುಮ್ಮನಾಗಿ ಉತ್ತರ ನೀಡತೊಡಗಿದರು.
ಚಿಕ್ಕಮಗಳೂರು: ಮೂಡಿಗೆರೆ ಕಾಂಗ್ರೆಸ್ ಅಭ್ಯರ್ಥಿ ಪರ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಮೂಡಿಗೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಬುಲೆಟ್ ಬೈಕ್ ಏರಿ, ಹೆಲ್ಮೆಟ್ ಧರಿಸಿ ತಾವೇ ಬೈಕ್ ಓಡಿಸಿ ರ‍್ಯಾಲಿ ಮಾಡಿದ್ದು, ತಮ್ಮ ಅಭ್ಯರ್ಥಿ ಪರ ಮತಬೇಟೆಯಾಡಿದ್ದಾರೆ. ಡಿಕೆಶಿಯ ಬೈಕ್ ರ‍್ಯಾಲಿಗೆ ಸಾವಿರಾರು ಯುವಕರು ಭಾಗಿಯಾಗಿದ್ದು, ಸಾಥ್ ನೀಡಿದ್ದಾರೆ. ಹೊಯ್ಸಳ ಮೈದಾನದಿಂದ ಅಡ್ಯಂತಾಯ ರಂಗ ಮಂದಿರದ ವರೆಗೆ ಡಿ.ಕೆ.ಶಿವಕುಮಾರ್ ಬೈಕ್ ರ‍್ಯಾಲಿ ಮಾಡಿದ್ದಾರೆ.
ಇದೇ ವೇಳೆ ರಾಹುಲ್ ರಾಜ್ಯಕ್ಕೆ ಬಂದ ಕೂಡಲೇ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದಿದ್ದ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ದೇವೇಗೌಡರ ಮಗನ ಸಮಾನ. ದೇವೇಗೌಡರು ಮೊದಲಿಂದಲೂ ಪಕ್ಷದ ಅಧ್ಯಕ್ಷರಾಗಿದ್ದಾರೆ. ರಾಜಕಾರಣದಲ್ಲಿ ಅನುಭವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಗಾಂಧೀ ಕುಟುಂಬ ದೇಶದ ಹಿತಕ್ಕೊಸ್ಕರ ದೊಡ್ಡ ತ್ಯಾಗ ಮಾಡಿದ ಕುಟುಂಬವಾಗಿದೆ. ಆ ಕುಟುಂಬದ ಕುಡಿ ರಾಹುಲ್ ಗಾಂಧಿ. ಅವರಿಗೆ ಜನ ತೋರಿಸುತ್ತಿರುವ ಅಭಿಮಾನ ಮತ್ತು ಪ್ರೀತಿ ನಮಗೆ ಗೊತ್ತಿದೆ. ದೇವೇಗೌಡರು ತುಂಬಾ ಹಿರಿಯರು, ಅವರು ಏನಾದರೂ ಹೇಳಿಕೊಳ್ಳಲಿ ನಮಗೇನೂ ತೊಂದರೆ ಇಲ್ಲ ಎಂದ್ರು.