Tag: Karnataka Election 2018

  • ಮೇ 4ರಿಂದ ಜೆಡಿಎಸ್ ಪರ ಅಸಾವುದ್ದೀನ್ ಓವೈಸಿ ಪ್ರಚಾರ

    ಮೇ 4ರಿಂದ ಜೆಡಿಎಸ್ ಪರ ಅಸಾವುದ್ದೀನ್ ಓವೈಸಿ ಪ್ರಚಾರ

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಅಖಾಡಕ್ಕಿಳಿದಿರುವ ಜೆಡಿಎಸ್ ಗೆ ಮತ್ತೊಂದು ಬೆಂಬಲದ ರಕ್ಷೆ ಸಿಕ್ಕಿದೆ. ಈಗಾಗಲೇ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ.

    ಈಗ ಬಿಎಸ್‍ಪಿ ಜೊತೆ ಎಂಐಎಂ ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬೆಂಬಲವು ಜೆಡಿಎಸ್ ಗೆ ಸಿಕ್ಕಿದ್ದು, ಮೇ 4ರಿಂದ ಓವೈಸಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಜೆಡಿಎಸ್ ಗೆ ಬೆಂಬಲ ನೀಡಲು ಒಪ್ಪಿರುವ ಓವೈಸಿ, ಜೆಡಿಎಸ್ ಪರವಾಗಿ ಮೇ 4 ರಿಂದ ಮುರ್ನಾಲ್ಕು ದಿನ ಮುಸ್ಲಿಂ ಮತಗಳಿರುವ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಸ್ಲಿಂಮರು ಹೆಚ್ವು ಇರುವ ಕಡೆ ಓವೈಸಿಯಿಂದ ಪ್ರಚಾರ ಮಾಡಿಸಲು ಜೆಡಿಎಸ್ ಸಿದ್ಧತೆ ಮಾಡಿದೆ. ಅಲ್ಲದೆ ರೆಬೆಲ್ ಶಾಸಕ ಜಮೀರ್ ಅಹಮದ್ ಕ್ಷೇತ್ರವಾದ ಚಾಮರಾಜಪೇಟೆ ಹೆಚ್ಚು ಪ್ರಚಾರ ಮಾಡಿಸಿ ಜಮೀರ್‍ಗೆ ಪಾಠ ಕಲಿಸಲು ದೊಡ್ಡ ಗೌಡ್ರು ಪ್ಲಾನ್ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲೂ ಓವೈಸಿ ಪ್ರಚಾರಕ್ಕೆ ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎಂಬುದಾಗಿ ಪಕ್ಷದ ಮೂಲದಿಂದ ತಿಳಿದುಬಂದಿದೆ.

  • ಸೋದರ ಮಧು ಬಂಗಾರಪ್ಪ ಪರ ಪ್ರಚಾರಕ್ಕಿಳಿದ ಗೀತಾ ಶಿವರಾಜ್‍ಕುಮಾರ್

    ಸೋದರ ಮಧು ಬಂಗಾರಪ್ಪ ಪರ ಪ್ರಚಾರಕ್ಕಿಳಿದ ಗೀತಾ ಶಿವರಾಜ್‍ಕುಮಾರ್

    ಶಿವಮೊಗ್ಗ: ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

    ಶಿವಮೊಗ್ಗ ಪ್ರವಾಸ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೌಟುಂಬಿಕ ಕಾರಣಗಳಿಂದಾಗಿ ಕೆಲ ದಿನ ಸಕ್ರಿಯ ರಾಜಕಾರಣದಿಂದ ದೂರ ಇದ್ದೆ. ಈಗ ಪುನಃ ಸಂಪೂರ್ಣವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದೇನೆ ಎಂದು ಗೀತಾ ಶಿವರಾಜ್‍ಕುಮಾರ್ ಹೇಳಿದರು.

    ಸಹೋದರ ಮಧು ಬಂಗಾರಪ್ಪ ಪರ ಸೊರಬದಲ್ಲಿ ಪ್ರಚಾರ ನಡೆಸಲಿರುವ ಗೀತಾ ಶಿವರಾಜ್‍ಕುಮಾರ್, ನಂತರ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಹಾಗೂ ಚಿಕ್ಕಮಗಳೂರು, ಕಾರವಾರ ಜಿಲ್ಲೆಗಳಲ್ಲೂ ಚುನಾವಣಾ ಪ್ರಚಾರ ನಡೆಸುವುದಾಗಿ ಘೋಷಿಸಿದರು.

  • ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ರಾಕಿಂಗ್ ಸ್ಟಾರ್!

    ಎರಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ರಾಕಿಂಗ್ ಸ್ಟಾರ್!

    ಮೈಸೂರು: ಇಂದು ನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ತವರೂರಿನಲ್ಲಿ ಸ್ನೇಹ ಪೂರ್ವಕವಾಗಿ ಎರಡು ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

    ಇಂದು ಬೆಳಗ್ಗೆ 10 ಗಂಟೆಗೆ ಕೆ.ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ಪರ ಪ್ರಚಾರ ನಡೆಸಲಿದ್ದಾರೆ. 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಯಶ್ ರೋಡ್ ಶೋ ನಡೆಸಿ ಸಾ.ರಾ. ಮಹೇಶ್ ಪರ ಮತಯಾಚಿಸಲಿದ್ದಾರೆ.

    ಸಂಜೆ 6ಕ್ಕೆ ಮೈಸೂರಿನ ಕೆ.ಆರ್. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ರಾಮದಾಸ್ ಪರ ಯಶ್ ಪ್ರಚಾರ ನಡೆಸಲಿದ್ದಾರೆ. ಗನ್ ಹೌಸ್ ವೃತ್ತದಿಂದ ರಾಮದಾಸ್ ಪರ ರೋಡ್ ಶೋ ನಡೆಸಲಿದ್ದಾರೆ.

    ಸ್ನೇಹಪೂರ್ವಕವಾಗಿ ಯಶ್ ಇವರಿಬ್ಬರ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಇದುವರೆಗೂ ಯಶ್ ಯಾವ ಅಭ್ಯರ್ಥಿ ಅಥವಾ ಪಕ್ಷದ ಪರ ಪ್ರಚಾರ ನಡೆಸಿಲ್ಲ. ಇದೇ ಮೊದಲಿಗೆ ಈ ರೀತಿ ಸ್ನೇಹಪೂರ್ವಕವಾಗಿ ಪರ ಪ್ರಚಾರ ಮಾಡುತ್ತಿದ್ದಾರೆ.

    ಯಶ್ ಸ್ಯಾಂಡಲ್ ವುಡ್‍ನ ಖ್ಯಾತ ನಟ ಜೊತೆಗೆ ಮೈಸೂರಿನವರೇ ಆಗಿರುವ ಕಾರಣ ಅವರನ್ನು ಅಭ್ಯರ್ಥಿಗಳು ಪ್ರಚಾರಕ್ಕೆ ಕರೆ ತರುತ್ತಿದ್ದಾರೆ.

  • ಹಣ, ಎಣ್ಣೆ, ಸೀರೆ, ಕುಕ್ಕರ್ ಆಯ್ತು ಈಗ ಚುನಾವಣಾ ಅಧಿಕಾರಿಗಳಿಂದ ಬಿರಿಯಾನಿ ವಶ!

    ಹಣ, ಎಣ್ಣೆ, ಸೀರೆ, ಕುಕ್ಕರ್ ಆಯ್ತು ಈಗ ಚುನಾವಣಾ ಅಧಿಕಾರಿಗಳಿಂದ ಬಿರಿಯಾನಿ ವಶ!

    ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆ ಫೋಷಣೆಯಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಚುನಾವಣಾ ಅಧಿಕಾರಿಗಳು ಭರ್ಜರಿಯಾಗಿ ಕಾರ್ಯಚರಣೆ ಮಾಡುತ್ತಿದ್ದಾರೆ.

    ಚುನಾವಣಾ ಅಧಿಕಾರಿಗಳು ಇಲ್ಲಿಯವರೆಗೆ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ, ಬಂಗಾರ, ಬೆಳ್ಳಿ, ಮದ್ಯ, ಸೀರೆ ಮತ್ತು ಕುಕ್ಕರ್ ಗಳನ್ನು ವಶಕ್ಕೆ ಪಡೆಯುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಚುಣಾವಣಾ ಅಧಿಕಾರಿಗಳು ಬಿರಿಯಾನಿಯನ್ನು ವಶಕ್ಕೆ ಪಡೆದಿದ್ದಾರೆ.

    ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಆರ್.ಎಂ.ಸಿಯಲ್ಲಿ ತಯಾರಿಸಲಾಗಿದ್ದ ಬಿರಿಯಾನಿಯನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಆಗಮನದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಬಿರಿಯಾನಿಯನ್ನು ತಯಾರಿಸಲಾಗಿತ್ತು.

    ಖಚಿತ ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಬಿರಿಯಾನಿಯನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿಗೆ ಈ ಬಿರಿಯಾನಿಯನ್ನ ತಯಾರಿಸಲಾಗಿತ್ತು.

  • ನಾನು ಮುಸ್ಲಿಂ ದ್ವೇಷಿಯಲ್ಲ, ಕಾಂಗ್ರೆಸ್ಸನ್ನು ಅಟ್ಟಾಡಿಸಿಕೊಂಡು ಬಡಿಯುತ್ತೇವೆ: ಸಚಿವ ಅನಂತ್ ಕುಮಾರ್ ಹೆಗ್ಡೆ

    ನಾನು ಮುಸ್ಲಿಂ ದ್ವೇಷಿಯಲ್ಲ, ಕಾಂಗ್ರೆಸ್ಸನ್ನು ಅಟ್ಟಾಡಿಸಿಕೊಂಡು ಬಡಿಯುತ್ತೇವೆ: ಸಚಿವ ಅನಂತ್ ಕುಮಾರ್ ಹೆಗ್ಡೆ

    ಕಾರವಾರ: ಕಾಂಗ್ರೆಸ್ ಅನ್ನು ಅಟ್ಟಾಡಿಸಿಕೊಂಡು ಬಡಿಯುತ್ತೇವೆ. ಕಾಂಗ್ರೆಸ್ ಇದ್ದರೆ ರೋಗವಿದ್ದಂತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಇಂದು ಕಾರವಾರದ ಶೇಜಾವಾಡದ ಸದಾನಂದ ಸಭಾ ಭವನದಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಲ್ಲಿ ನೀವು ಹಿಂದುಳಿದವರು, ದಲಿತರು ಎಂದು ಬೇರ್ಪಡಿಸಿ ಹಿಂದುಳಿದ ರೋಗವನ್ನು ಕೊಟ್ಟವರು ಕಾಂಗ್ರೆಸ್ಸಿನವರು ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಅನ್ನು ಶಾಶ್ವತವಾಗಿ ಮನೆಗೆ ಕಳುಹಿಸಬೇಕು, 70 ವರ್ಷಗಳಿಂದ ಕಾಂಗ್ರೆಸ್ ನಮ್ಮ ಧರ್ಮವನ್ನು ಅವಹೇಳನ ಮಾಡಿದೆ. ನಮ್ಮ ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದಲ್ಲಿ ನಾಲ್ಕೂ ಐದೋ ಶೇಕಡಾ ಮುಸ್ಲಿಮರಿದ್ದರು. ಆದರೆ ಅನಧಿಕೃತವಾಗಿ 30% ಮುಸ್ಲೀಮರಾಗಿದ್ದಾರೆ. ಎಲ್ಲಿ 30% ಮುಸಲ್ಮಾನರಾಗುತ್ತಾರೋ ಆ ದೇಶ ಮುಸ್ಲಿಂ ರಾಷ್ಟ್ರವಾಗುತ್ತೆ ಇದಕ್ಕೆ ಇತಿಹಾಸ ಸಾಕ್ಷಿ ಎಂದರು.

    ನಾನು ಮುಸ್ಲಿಂ ದ್ವೇಷಿಯಲ್ಲ. ಇನ್ನೂಂದು ಧರ್ಮವನ್ನು ತುಳಿದು ನಾಶಮಾಡಿ ಬದುಕುವ ಸಂಸ್ಕøತಿ ನಮ್ಮದಲ್ಲ. ಆದರೆ ಈ ಕಾಂಗ್ರೇಸ್ ಅಲ್ಪಸಂಖ್ಯಾತರ ತುಷ್ಟೀಕರಣದ ಹೆಸರಿನಲ್ಲಿ ಭಯೋತ್ಪಾದಕರ ಜೊತೆ ರಾಜಿ ಮಾಡಿಕೊಳ್ಳುತ್ತಿದೆ. ದೇಶಭಕ್ತರನ್ನು ಧಮನಿಸುತ್ತಿದೆ. ಯಾರು ಭಯೋತ್ಪಾದಕರು ಕೊಲೆಗಡುಕರು ಇದ್ದಾರೋ ಅವರು ಮುಖ್ಯಮಂತ್ರಿ ಜೊತೆ ಕುಳಿತು ಮೀಟಿಂಗ್ ಮಾಡುತಿದ್ದಾರೆ ಎಂದು ಕಿಡಿಕಾರಿದರು.

  • 86ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ

    86ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಎಸ್ ಎಂ ಕೃಷ್ಣ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು 86ನೇ ವಂಸತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಕೃಷ್ಣ ಮತ್ತು ಅವರು ಕುಟುಂಬಸ್ಥರು ಮುಂಬೈನಲ್ಲಿದ್ದು ಅಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಮೇ 3 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಮಾವೇಶ ಆಯೋಜನೆಗೊಂಡಿದೆ. ಈ ಸಮಾವೇಶದಲ್ಲಿ ಎಸ್.ಎಂ.ಕೃಷ್ಣ ಅವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಬುಧವಾರ ಸಂಜೆ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ.

    ಎಸ್.ಎಂ. ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರ ಸಮಾವೇಶದಲ್ಲಿ ಭಾಗಿಯಾಗುವಂತೆ ಬಿಜೆಪಿಯಿಂದ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಿ ಭಾಷಣವನ್ನು ಕೂಡ ಕೃಷ್ಣ ಅವರು ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತೀಚೆಗೆ ಎಸ್‍.ಎಂ.ಕೆ ಪಾತ್ರ ಕಡೆಗಣನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಎಸ್.ಎಂ.ಕೃಷ್ಣ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡುವಂತೆ ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಆದರೆ ಬಿಜೆಪಿ ನಾಯಕರು ಅವರು ಹೇಳಿದ್ದ 6 ಮಂದಿಯ ಪೈಕಿ ಮೂವರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ. ಆದ್ದರಿಂದ ಬಿಜೆಪಿ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಿಗಿಸಿಕೊಳ್ಳುವಂತೆ ಕೃಷ್ಣ ಅವರಿಗೆ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದರು. ಬಿಜೆಪಿ ರಾಜ್ಯ ನಾಯಕರು ನೀಡಿರುವ ಆಹ್ವಾನವನ್ನು ಮನ್ನಿಸಿ ಎಸ್.ಎಂ.ಕೃಷ್ಣ ಪ್ರಚಾರಕ್ಕೂ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

  • ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಸಿಎಂಗೆ 2+1 ಫಾರ್ಮುಲಾ, ಇತರೆ ಮಂತ್ರಿಗಳಿಗೆ 1+1 ಫಾರ್ಮುಲಾ: ಮೋದಿ ವಾಗ್ದಾಳಿ

    ಚಾಮರಾಜನಗರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ 15 ನಿಮಿಷ ಚೀಟಿ ಇಟ್ಟುಕೊಳ್ಳದೇ ಭಾಷಣ ಮಾಡಲು ಸಾಧ್ಯವೇ? 5  ಬಾರಿ ವಿಶ್ವೇಶ್ವರಯ್ಯ ಹೆಸರನ್ನು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಇಂದು ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಆಗಮಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕನ್ನಡದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಭಾರತ್ ಮತಾಕೀ, ಇಲ್ಲಿ ನೆರೆದಿರುವ ಕನ್ನಡ ನಾಡಿನ ಜನರಿಗೆ ನನ್ನ ನಮಸ್ಕಾರ. ಚಾಮರಾಜ ಒಡೆಯರ್ ಮತ್ತು ಡಾ. ರಾಜ್‍ಕುಮಾರ್ ಅವರಿಗೆ ನನ್ನ ನಮಸ್ಕಾರಗಳು ಎಂದರು.

    ಮಾಜಿ ಶಾಸಕ ನಂಜುಂಡಸ್ವಾಮಿ ಪ್ರಧಾನಿಗೆ ಸನ್ಮಾನ ಮಾಡಿದ್ದು, ಗದೆ ನೀಡಿದರು. ಆದರೆ ಮೋದಿ ಶಾಲು, ಹಾರ ಸ್ವೀಕರಿಸಿದ್ದು, ಆದ್ರೆ  ಬೆಳ್ಳಿ ಗದೆಯನ್ನು ನಿರಾಕರಣೆ ಮಾಡಿದ್ದಾರೆ. ಬಿಎಸ್‍ವೈಗೆ ಕಮಲದ ಹೂ ನೀಡಿ ಶುಭ ಕೋರಿದ್ದಾರೆ. ಮಂಟೇಸ್ವಾಮಿ, ಬಿಳಿಗಿರಿ ರಂಗ ಸ್ವಾಮಿ, ಹಿಮವದ್ ಗೋಪಾಲ ಸ್ವಾಮಿ, ಚಾಮರಾಜೇಶ್ವರ ದೇವರಿಗೆ ನಮನ ಅರ್ಪಿಸಿದರು. ಅಷ್ಟೇ ಅಲ್ಲದೇ ಸುತ್ತೂರು ಮಠ, ಕನಕಗಿರಿ, ಸಾಲೂರು ಮಠಕ್ಕೂ ನಮನ ಸಲ್ಲಿಸಿ ಭಾಷಣ ಮಾಡಿದರು. ಮೋದಿ ಭಾಷಣದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    https://www.youtube.com/watch?v=hE7SrGlvAGM

    ಮುಖ್ಯಾಂಶಗಳು:
    * ನೀವು ನಾವು ರಾಜ್ಯಕ್ಕೆ ಏನ್ ಮಾಡಿದ್ದೇವೆ ಅಂತಾ ಕೇಳುತ್ತೀರಾ. ಕರ್ನಾಟಕದಲ್ಲಿ 39 ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. ನಮ್ಮ ಸರಕಾರದ ಯೋಜನೆಯಿಂದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಬಂದಿದೆ.

    * ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತು ನೀವು ಕೇಳಲ್ಲ. ಅದು ಬೇಡ ನಿಮ್ಮ ತಾಯಿಯ ಮಾತನ್ನಾದರೂ ನಡೆಸಿಕೊಡಿ. 2009 ರ ಒಳಗೆ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಕೊಡುತ್ತೇವೆ ಅಂತಾ ಹೇಳಿದರು. ಸ್ವಲ್ಪ ಕೇಳಿಸಿಕೊಳ್ಳಿ ರಾಹುಲ್ ಗಾಂಧಿ.

    * ವಂದೇ ಮಾತರಂ ಗೀತೆಗೆ ಗೌರವ ಕೊಡುವುದು ಗೊತ್ತಿಲ್ಲ. ಈ ದೇಶದ ಇತಿಹಾಸದ ಬಗ್ಗೆ ಗೊತ್ತಿಲ್ಲ. ಅದಿರಲಿ ಅವರ ಪಕ್ಷದ ಸರಕಾರದ ಆಡಳಿತದ ಬಗ್ಗೆಯೂ ಗೊತ್ತಿಲ್ಲ.

    * 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ. ಇದನ್ನು ಕಾಂಗ್ರೆಸ್ ಶ್ಲಾಘಿಸುವುದಿಲ್ಲ. ಅವರ ಕೆಲಸ ಮಾಡುವವರು ಅಲ್ಲ. ಬರೀ ಹೆಸರು ಬೇಕು ಎನ್ನುವ ಜನ. 70 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಮಾಡಿದ್ದೇನು? ಇನ್ನೂ ಯಾಕೆ ಜನ ವಿದ್ಯುತ್ ಸಂಪರ್ಕ ಇಲ್ಲದೆ ಬದುಕುತ್ತಿದ್ದಾರೆ.

    * ದೇಶದ 18 ಸಾವಿರ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ನೀಡಿದೆ. ಇದು ನಮ್ಮ ಕಾರ್ಮಿಕರ ಹೆಮ್ಮೆಯ ಕೆಲಸ. ಅವರನ್ನು ಇಂದು ನೆನಪಿಸಿಕೊಳ್ಳುತ್ತೇನೆ. ಮಣಿಪುರದ ಕೊನೆ ಹಳ್ಳಿಗೆ ವಿದ್ಯುತ್ ತಲುಪಿಸಿದೆ. ದೆಹಲಿಯಲ್ಲಿ ನಾವು ಕೇಳುತ್ತಿದ್ದೇವೆ. ಕರ್ನಾಟದಲ್ಲಿ ಬದಲಾವಣೆ ಅಲೆ ಇದೆ ಅಂತಾ ನಾನು ಇಲ್ಲಿ ಬಂದು ನೋಡಿದ ಮೇಲೆ ಇಲ್ಲಿ ಅಲೆಯ ಬಿರುಗಾಳಿ ಬೀಸುತ್ತಿದೆ.

    * ಇಂದು ಮೇ1 ಕಾರ್ಮಿಕರ ದಿನ. ಕಾರ್ಮಿಕ ವರ್ಗದವರು ದೇಶವನ್ನು ಮುಂದೆ ತರುವಲ್ಲಿ ಬೆವರು ಸುರಿಸಿದ್ದಾರೆ. ಅವರಿಗೆ ಈ ದಿನವನ್ನು ಅರ್ಪಿಸುತ್ತೇನೆ

    * ಚಾಮರಾಜನಗರದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಆದ್ರೆ ಇಲ್ಲಿ ಅಭಿವೃದ್ಧಿ ಕುಂಠಿತವಾಗಿರೋದಕ್ಕೆ ಕಾಂಗ್ರೆಸ್ ಸರ್ಕಾರ ನೇರ ಹೊಣೆ. ಕೇಂದ್ರ ಸರ್ಕಾರ ಚಾಮರಾಜನಗರಕ್ಕೆ ರೈಲು ಮಂಜೂರು ಮಾಡಿದೆ, ಹಣವನ್ನೂ ಬಿಡುಗಡೆ ಗೊಳಿಸಿದೆ. ಆದರೆ ಇಲ್ಲಿನ ಸರ್ಕಾರ ಭೂಮಿಯನ್ನು ಮಂಜೂರು ಮಾಡಿಲ್ಲ

    * ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಲೋಕಾಯುಕ್ತರಿಗೂ ಸರಿಯಾಗಿ ರಕ್ಷಣೆ ಇಲ್ಲ, ಇನ್ನೂ ಸಾಮಾನ್ಯ ಜನರ ಹೇಗಿರಬೇಕು. ಇದು ಕಾಂಗ್ರೆಸ್ ಆಡಳಿತ ವೈಖರಿ. ಈ ದುಸ್ಥಿತಿಗೆ ಕಾರಣರಾದವರನ್ನು ನಾವು ಬದಲಿಸಬೇಕಿದೆ.

    * ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭಾಗಿಯಾಗದೇ ಇರುವ ಯಾವ ರಾಜಕಾರಣಿಯೂ ಈ ಸರ್ಕಾರದಲ್ಲಿಲ್ಲ. ಪ್ರತಿ ಒಬ್ಬರ ಮೇಲೆ ಕನಿಷ್ಟ ಒಂದಾದರೂ ಭ್ರಷ್ಟಾಚಾರದ ಪ್ರಕರಣ ದಾಖಲಾಗಿವೆ.

     

    * ಕರ್ನಾಟಕದಲ್ಲಿ ಕಾಂಗ್ರೆಸ್ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಮುಖ್ಯಮಂತ್ರಿಗಳಿಗೆ 2+1 ಫಾರ್ಮುಲಾ ಇದ್ರೆ, ಇತರೆ ಮಂತ್ರಿಗಳು 1 + 1 ಫಾರ್ಮುಲದಡಿ ಅವರಿಗೆ ಮತ್ತು ಅವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ?.

    * ಮೇ 12 ರಂದು, ಕೇವಲ ಮತ ಚಲಾವಣೆ ಮಾಡುವುದಷ್ಟೇ ಅಲ್ಲ. ಕರ್ನಾಟಕದ ಭವಿಷ್ಯ ಬದಲಾಯಿಸುವ ದಿನವೂ ಹೌದು. ಅಂದಿನ ದಿನ ಬಿಜೆಪಿಗೆ ಮತ ನೀಡಿ ಇಲ್ಲಿನ 10% ಕಮಿಷನ್ ಸರ್ಕಾರವನ್ನು ಕಿತ್ತೆಸೆಯಿರಿ.

    * ಯಾವಾಗಲೋ ಒಮ್ಮೊಮ್ಮೆ ಎಚ್ಚರದಲ್ಲಿರುವ, ಅತೀ ಹೆಚ್ಚು ಸಮಯವನ್ನು ನಿದ್ದೆಯಲ್ಲಿಯೇ ಕಳೆಯುವ ಮುಖ್ಯಮಂತ್ರಿಗಳು, ತಾವು ಸೋಲುವದಲ್ಲದೇ, ತಮ್ಮ ಮಗನನ್ನು ಕೂಡಾ ಬಲಿ ಕೊಡುತ್ತಿದ್ದಾರೆ. ತಾವು 2 ಕ್ಷೇತ್ರದಲ್ಲಿ ಹಾಗೂ ತಮ್ಮ ಮಗನ 1 ಕ್ಷೇತ್ರದಲ್ಲೂ ಸೋಲುವುದು ನಿಶ್ಚಿತ.

    * ರಾಹುಲ್ ಗಾಂಧಿ ಅವರು ತಮಗೆ ಬೇಕಾದ ಭಾಷೆಯಲ್ಲಿ, ಹಿಂದಿ ಆಗಿರಲಿ ಅಥವಾ ತಮ್ಮ ಮಾತಾಜಿ ಅವರ ಹುಟ್ಟು ಭಾಷೆಯಾಗಿರಲಿ, ಕೇವಲ 15 ನಿಮಿಷ ಕರ್ನಾಟಕ ಸರ್ಕಾರದ ಸಾಧನೆಗಳನ್ನು, ಯಾವುದೇ ಕಾಗದ ನೋಡಿಕೊಳ್ಳದೆ ಹೇಳಲಿ, ಅವರ ಸಾಮಥ್ರ್ಯ ಗೊತ್ತಾಗುತ್ತೆ.

    * ಸೋನಿಯ ಗಾಂಧಿ 2005ರಲ್ಲಿ 2009ರ ಒಳಗೆ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ನಾವು ಅಧಿಕಾರಕ್ಕೆ ಬರುವವರೆಗೂ ಇದು ಆಗಲಿಲ್ಲ ಅಂದ್ರೆ ಕಾಂಗ್ರೆಸ್ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ.

     

  • ಎಚ್‍ಡಿಕೆ 2006ರಲ್ಲಿ ಬಿಜೆಪಿ ಜೊತೆ ಹೋದಾಗ ಮನೆಯಿಂದ ಹೊರ ಹಾಕಿಲ್ಲ ಯಾಕೆ: ಸಿಎಂ ಪ್ರಶ್ನೆ

    ಎಚ್‍ಡಿಕೆ 2006ರಲ್ಲಿ ಬಿಜೆಪಿ ಜೊತೆ ಹೋದಾಗ ಮನೆಯಿಂದ ಹೊರ ಹಾಕಿಲ್ಲ ಯಾಕೆ: ಸಿಎಂ ಪ್ರಶ್ನೆ

    ಕಲಬುರಗಿ: ಬಿಜೆಪಿ ಪ್ರಬಲ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್ ಸಮರ್ಥ ಅಭ್ಯರ್ಥಿಗಳನ್ನು ಹಾಕಿಲ್ಲ. ಜೆಡಿಎಸ್ ಪ್ರಬಲ ಅಭ್ಯರ್ಥಿ ಇರುವ ಕಡೆ ಬಿಜೆಪಿ ಸಮರ್ಥ ಅಭ್ಯರ್ಥಿಯನ್ನು ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಆರೋಪ ಮಾಡಿದ್ದಾರೆ.

    ಕಾಂಗ್ರೆಸ್ ಸೋಲಿಸಲು ಬಿಜೆಪಿ ಜೆಡಿಎಸ್ ಒಪ್ಪಂದ ಮಾಡಿಕೊಂಡಿದೆ. ಕೆಲವು ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಅಲ್ಪಸಂಖ್ಯಾತರ ಮತಗಳು ತಪ್ಪಬಾರದು ಅಂತಾ ಬಿಜೆಪಿ ಜೊತೆ ಹೋದಲ್ಲಿ ಮನೆಯಿಂದ ಹೊರಹಾಕುತ್ತೇನೆ ಎಂದು ದೇವೇಗೌಡರು ಹೇಳುತ್ತಾರೆ. ಈ ಹಿಂದೆ ಸಹ ಹೀಗೆ ಹೇಳಿದ್ದರು. 2006ರಲ್ಲಿ ಎಚ್‍ಡಿ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಹೋದಾಗ ಅವರನ್ನು ಮನೆಯಿಂದ ಹೊರ ಹಾಕಿದ್ದಾರಾ ಎಂದು ಪ್ರಶ್ನಿಸಿದರು.

    ನಾನು ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಬಿಎಸ್‍ವೈ ಹೇಳಿಕೆಗೆ, ನಾನು ಯಾವುದೇ ಅಪರಾಧ ಮಾಡಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸುಳ್ಳು. ಮತ್ತೆ ನಾನೇ ಸಿಎಂ ಆಗುವ ಎಲ್ಲ ಸಾಧ್ಯತೆಯಿದೆ. ಸಮೀಕ್ಷಾ ವರದಿಗಳೇ ಅಂತಿಮವಲ್ಲ ಎಂದು ಹೇಳಿದರು.

    ಬಿಜೆಪಿಯವರು ಕೇಂದ್ರದಲ್ಲಿ 4 ವರ್ಷ ಅಧಿಕಾರದಲ್ಲಿದ್ದು ಲೋಕಪಾಲವನ್ನು ಜಾರಿಗೆ ತಂದಿಲ್ಲ. ಇನ್ನು ಲೋಕಾಯುಕ್ತದ ಬಗ್ಗೆ ಪ್ರಶ್ನೆ ಮಾಡಲು ಯಾವ ನೈತಿಕ ಹಕ್ಕು ಇದೆ. ಅವರ ಅಧಿಕಾರ ಅವಧಿಯಲ್ಲಿ ಒಂದು ಪ್ರಕರಣವನ್ನು ಸಿಬಿಐ ಗೆ ಕೊಟ್ಟಿರಲಿಲ್ಲ ಎಂದು ತಿರುಗೇಟು ನೀಡಿದರು.

  • ಸುವ್ಯವಸ್ಥಿತ ಚುನಾವಣೆಗಾಗಿ ಕ್ರಿಮಿನಲ್‍ಗಳ ಆಟಕ್ಕೆ ಬ್ರೇಕ್

    ಸುವ್ಯವಸ್ಥಿತ ಚುನಾವಣೆಗಾಗಿ ಕ್ರಿಮಿನಲ್‍ಗಳ ಆಟಕ್ಕೆ ಬ್ರೇಕ್

    ಬೆಂಗಳೂರು: ಕರ್ನಾಟಕದಲ್ಲಿ ಸುವ್ಯವಸ್ಥಿತ ಚುನಾವಣೆಗಾಗಿ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಕ್ರಿಮಿನಲ್‍ಗಳ ಮಟ್ಟ ಹಾಕಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಸುವ್ಯವಸ್ಥಿತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾದ ರೌಡಿಗಳ ಮೇಲೆ ಗೂಂಡಾ ಕಾಯಿದೆ ಅಸ್ತ್ರವನ್ನು ಪೊಲೀಸರು ಪ್ರಯೋಗಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕ್ರಿಮಿನಲ್‍ಗಳನ್ನ ಗೂಂಡಾ ಕಾಯ್ದೆ ಅಡಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.

    ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಆಗುತ್ತಿದ್ದಂತೆಯೇ ರೌಡಿ ಶೀಟರ್ ವೆಂಕಟೇಶ್, ರವಿಕುಮಾರ್ ಅಲಿಯಾಸ್ ಗುಂಡ ರವಿ, ಶಕ್ತಿಪ್ರಸಾದ್ ಅಲಿಯಾಸ್ ಶಕ್ತಿ ಸೇರಿದಂತೆ ಹಲವು ರೌಡಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನು ಹೊರಗಡೆ ಉಳಿದಿರುವ ಪುಡಿರೌಡಿಗಳ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆ ಆದೇಶಿಸಿದೆ.

  • ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!

    ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!

    ಮೈಸೂರು: ಮತದಾನದ ಕುರಿತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಜಾಗೃತಿ ಮೂಡಿಸುತ್ತಿದ್ದಾರೆ.

    ಮತದಾನ ಮಾಡಿದವರೇ ನಿಜವಾದ ಬಿಗ್‍ಬಾಸ್ ಎಂದು ನಿವೇದಿತಾ ಗೌಡ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿರುವ ಮತ ಜಾಗೃತಿ ಕಾರ್ಯಕ್ರಮಕ್ಕೆ ನಿವೇದಿತಾ ಗೌಡ ರಾಯಭಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಮಾಡುವಂತೆ ಮನವಿಯ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ನಾವು ನೀವು ಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಒಂದು ನಿಯಮವನ್ನು ಪಾಲಿಸಬೇಕು. ನಮ್ಮದ್ದು ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪಭ್ರುಗಳು. ಇದನ್ನು ಯಶಸ್ಸು ಗಳಿಸಲು ಪ್ರಜೆಗಳಾದ ನಮ್ಮೆಲರ ಕರ್ತವ್ಯ. ಅದಕ್ಕಾಗಿ ನಾವು ನಮ್ಮ ಮತವನ್ನು ಮತಗಟ್ಟೆಗೆ ಬಂದು ಚಲಾಯಿಸಬೇಕು ಎಂದು ನಿವೇದಿತಾ ಹೇಳಿದ್ದಾರೆ.

    ಚುನಾವಣೆ ದಿನ ಮತಗಟ್ಟೆಗೆ ಹೋಗಿ ನಾನು ನನ್ನ ಮತವನ್ನು ಹಾಕುತ್ತಿದ್ದಿನಿ. ನೀವು ಕೂಡ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಚಲಾಯಿಸಿ. ನಾವು ನಮ್ಮ ನರೆಹೊರೆಯವರ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಹಾಗೂ ಕಡ್ಡಾಯವಾಗಿ ಅವರು ಸಹ ಮತ ಹಾಕುವಂತೆ ಮಾಡೋಣ ಎಂದು ತಿಳಿಸಿದ್ದಾರೆ.

    ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ಮತದಾನ ಮಾಡುವ ಮತದಾರರೇ ನಿಜವಾದ ಬಿಗ್ ಬಾಸ್ ಎಂದು ಹೇಳುವ ಮೂಲಕ ಬಿಗ್ ಬಾಸ್-5ರ ಸ್ಪರ್ಧಿ ನಿವೇದಿತಾ ಗೌಡ ಮತದಾನದ ಜಾಗೃತಿ ಮೂಡಿಸಿದ್ದಾರೆ.