Tag: karnataka elction 2018

  • ರಾಹುಲ್ ಬಾರದ ಕೃಷ್ಣಮಠಕ್ಕೆ ಮೋದಿ ಭೇಟಿ – ಮೇ 1 ರಂದು ಉಡುಪಿಗೆ ಪ್ರಧಾನಿ

    ರಾಹುಲ್ ಬಾರದ ಕೃಷ್ಣಮಠಕ್ಕೆ ಮೋದಿ ಭೇಟಿ – ಮೇ 1 ರಂದು ಉಡುಪಿಗೆ ಪ್ರಧಾನಿ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮೇ 1 ರಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ನಂತರ ಮೊದಲ ಬಾರಿಗೆ ಉಡುಪಿಗೆ ಬರುತ್ತಿರುವ ಮೋದಿ, ಮೊದಲು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಪ್ರಾಣ ದೇವರ ದರ್ಶನಗೈಯ್ಯಲಿದ್ದಾರೆ.

    ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪಲಿಮಾರುಶ್ರೀ, ಮತ್ತು ಪೇಜಾವರ ಶ್ರೀಗಳ ಆಶೀರ್ವಾದ ಪಡೆದು ಮಾತುಕತೆ ಮಾಡಲಿದ್ದಾರೆ. ನಂತರ ಎಂಜಿಎಂ ಕಾಲೇಜಿನ ಮೈದಾನದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ 1 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 20 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಮತ್ತು ಮತದಾರರನ್ನು ಸೆಳೆಯುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ.

    ಉಡುಪಿಯಲ್ಲಿ ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾಹಿತಿ ನೀಡಿದ್ದಾರೆ. ತಿಂಗಳ ಹಿಂದೆ ಜನಾಶೀರ್ವಾದ ಯಾತ್ರೆ ಮಾಡಿದ್ದ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಉಡುಪಿಗೆ ಬಂದ್ರೂ ಮಠದಿಂದ ದೂರವಿದ್ದರು. ಕಾಪು ತಾಲೂಕಿಗೆ ಭೇಟಿ ಕೊಟ್ಟಿದ್ದ ರಾಹುಲ್ ಗಾಂಧಿ, ಕೃಷ್ಣಮಠಕ್ಕೆ ಬಂದಿರಲಿಲ್ಲ. ರಾಹುಲ್ ಭೇಟಿಯನ್ನು ಸಿಎಂ ಸಿದ್ದರಾಮಯ್ಯ ತಪ್ಪಿಸಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಠಕ್ಕೆ ಈ ಹಿಂದೆಯೇ ಬಂದಿದ್ದಾರೆ. ಈ ಬಾರಿ ಮೋದಿ ಮಠಕ್ಕೆ ಭೇಟಿ ನೀಡಿ ಗೆಲುವಿನ ಚುನಾವಣಾ ಪ್ರಚಾರಕ್ಕೆ ಇಲ್ಲಿಂದಲೇ ಚಾಲನೆ ಕೊಡಲಿದ್ದಾರೆ ಎಂದರು.

     

    ಮೊಗವೀರ ಮುಖಂಡ ಯಶ್ ಪಾಲ್ ಸುವರ್ಣ ಮಾತನಾಡಿ, ಈ ಬಾರಿ ಧರ್ಮದ ಮತ್ತು ಅಧರ್ಮದ ನಡುವಿನ ಯುದ್ಧ. ನಾವು ಧರ್ಮದ ಪರವಾಗಿದ್ದೇವೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧರ್ಮದ ಪರವಾಗಿದ್ದಾರೆ. ಉಡುಪಿಗೆ ಆರು ಬಾರಿ ಬಂದರೂ ಮಠಕ್ಕೆ ಬಾರದ ಸಿದ್ದರಾಮಯ್ಯ ನೇತೃತ್ವದ ಪಕ್ಷಕ್ಕೆ ರಾಜ್ಯದಲ್ಲೇ ಗೆಲುವು ಸಿಗುವುದಿಲ್ಲ ಎಂದರು.

    ಈ ಮೂಲಕ ಕಾಂಗ್ರೆಸ್ ಗೆ ಟಾಂಗ್ ಕೊಡಲು ಬಿಜೆಪಿ ಸಿದ್ಧತೆ ಮಾಡಿದೆ. ಮಠದ ಭಕ್ತರ, ಕರಾವಳಿಯ ಮತದಾರರ ಸೆಳೆಯಲು ಬಿಜೆಪಿ ಪ್ಲಾನ್ ರೂಪಿಸಿದೆ. ತಿಂಗಳ ಹಿಂದೆ ಕೃಷ್ಣಮಠಕ್ಕೆ ಅಮಿತ್ ಶಾ ಬಂದಿದ್ದರು. ಸಿದ್ದರಾಮಯ್ಯ, ರಾಹುಲ್ ಗಾಂಧಿ ಉಡುಪಿಗೆ ಬಂದಿದ್ದರೂ ಕೃಷ್ಣಮಠಕ್ಕೆ ಭೇಟಿ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಮಠ ಭೇಟಿ ಬಿಜೆಪಿಗೆ ಪ್ಲಸ್ ಆಗಬಹುದು ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

  • ಐ ಟಾರ್ಗೆಟ್ ಓನ್ಲಿ ಸಿದ್ದು, ನಾಯಿ ಕುನ್ನಿಗೆ ಬಿಸ್ಕೆಟ್ ಹಾಕುವ ರೀತಿ ನಡೆಸಿಕೊಂಡ್ರು- ಸಿಎಂ ವಿರುದ್ಧ ರೇವಣಸಿದ್ದಯ್ಯ ಗರಂ

    ಐ ಟಾರ್ಗೆಟ್ ಓನ್ಲಿ ಸಿದ್ದು, ನಾಯಿ ಕುನ್ನಿಗೆ ಬಿಸ್ಕೆಟ್ ಹಾಕುವ ರೀತಿ ನಡೆಸಿಕೊಂಡ್ರು- ಸಿಎಂ ವಿರುದ್ಧ ರೇವಣಸಿದ್ದಯ್ಯ ಗರಂ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನಡೆದಿದ್ದು, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿರುವ ರೇವಣಸಿದ್ದಯ್ಯ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿನ್ನೆಯೇ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೇನೆ ಅಂತ ಹೇಳುವ ಮೂಲಕ ಸಿಎಂ ಮೈಸೂರಿಗೆ ಬರುವ ದಿನವೇ ಶಾಕ್ ನೀಡಿದ್ದಾರೆ.

    ನಾನು ಸ್ವಂತತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆ. ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೆಗೌಡರನ್ನ ಬೆಂಬಲಿಸುತ್ತೇನೆ. ವರುಣಾದಲ್ಲಿ ಇನ್ನು ನಾಮಪತ್ರಗಳು ಮುಗಿದಿಲ್ಲ. ಹಾಗಾಗಿ ಸಮರ್ಥ ಅಭ್ಯರ್ಥಿ ಬೆಂಬಲಿಸುತ್ತೇನೆ. ಸಿದ್ದರಾಮಯ್ಯರನ್ನ ಸೋಲಿಸುವುದೇ ನನ್ನ ಗುರಿ. ಹಾಗಾಗಿ ಅವರ ವಿರುದ್ಧ ಅಭ್ಯರ್ಥಿಗಳಿಗೆ ಬಹಿರಂಗ ಬೆಂಬಲ ನೀಡುತ್ತೇನೆ. ಕಾಂಗ್ರೆಸ್ ಮೇಲೆ ನನಗೆ ಗೌರವ ಇದೆ. ಆದ್ರೆ ಸಿದ್ದರಾಮಯ್ಯ ನಡೆದುಕೊಂಡ ರೀತಿ ನನಗೆ ಬೆಸರ ಇದೆ. ನಾಯಿ ಕುನ್ನಿಗೆ ಬಿಸ್ಕೆಟ್ ಹಾಕುವ ರೀತಿ ನಡೆದುಕೊಂಡರು. ನಾನು ಒಳ್ಳೆ ಭಾಷೆಯಲ್ಲಿ ಹೇಳಿದ್ದೇನೆ ಅಷ್ಟೇ. ವರುಣಾ, ಚಾಮುಂಡೇಶ್ವರಿಯಲ್ಲಿ ಇರೋದು ಒಂದೇ ಬೇರು. ಆ ಬೇರು ಕಿತ್ತುಹಾಕೋದೆ ನನ್ನ ಗುರಿ ಅಂತ ಅವರು ಹೇಳಿದ್ರು.

    ಸಿಎಂ ನನ್ನ ಮೂಗಿಗೆ ತುಪ್ಪ ಸವರುವ ರೀತಿ ಮಾತಾಡುತ್ತಲೇ ಇಷ್ಟು ದಿನ ಬಂದ್ರು. ಸರ್ಕಾರದಲ್ಲಿ ಯಾವುದೇ ಅವಕಾಶ ಸಿಗದೇ ಇದ್ದರೂ ಐದು ವರ್ಷ ಅವರ ಜೊತೆಯಲ್ಲಿ ಇದ್ದೆ. ಈಗ ನನ್ನನ್ನೂ ಸಂಪೂರ್ಣ ಕಡೆಗಣಿಸಿ ಬಿಟ್ಟರು. ನನಗೆ ಆದ ಎಲ್ಲಾ ಅಸಮಾಧಾನವನ್ನು ಸಿಎಂ ಮಗನಿಗೆ ವಿವರಿಸಿದ್ದೆ. ನಂತರ ಸಿಎಂ ಭೇಟಿ ಮಾಡಿದ್ದೆ. ಆಗ ಸಿಎಂ ಸಾಕು ಪ್ರಾಣಿಯನ್ನು ಮುದ್ದು ಮಾಡುವಂತೆ ನನ್ನ ಜೊತೆ ಮುದ್ದಾಗಿ ಮಾತಾಡಿದ್ದರು ಅಷ್ಟೇ. ನಾನು ಕಾಂಗ್ರೆಸ್ ನಲ್ಲಿ ಇದ್ದರೂ ಅವರ ನಾಮಪತ್ರ ಸಲ್ಲಿಕೆಗೆ ಮತ್ತು ಅವರ ಮಗನ ನಾಮಪತ್ರ ಸಲ್ಲಿಕೆಗೆ ನನ್ನನ್ನು ಆಹ್ವಾನಿಸಲಿಲ್ಲ. ಇದು ನನಗೆ ಹೆಚ್ಚು ಬೇಸರ ಮೂಡಿಸಿದೆ. ವೀರಶೈವ ಲಿಂಗಾಯತರಿಗೆ ಸಿಎಂ ಕೊಡುಗೆ ಶೂನ್ಯ. ವ್ಯಕ್ತಿ ಸಾಮಥ್ರ್ಯ ಹೆಚ್ಚಾಗಿ ಪಕ್ಷದ ಬಲ ಕುಸಿದ ಕಾರಣ ಬೇಸತ್ತು ರಾಜೀನಾಮೆ ನೀಡಿದ್ದೇನೆ ಅಂತ ಅವರು ಸ್ಪಷ್ಟಪಡಿಸಿದ್ದಾರೆ.

    ಲಿಂಗಾಯತರ ಒಡೆದು ರಾಜಕೀಯ ಮಾಡುವ ಪಿತೂರಿ ನಡೆದಿದೆ. ಇದು ಕ್ಷುದ್ರ ರಾಜನೀತಿ. ಈ ರಾಜನೀತಿ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು. ನಾನು ಯಾವ ಪಕ್ಷಕ್ಕೂ ಸೇರದೇ ಯಾರು ಉತ್ತಮರೋ ಅವರ ಗೆಲುವಿಗೆ ಪ್ರತ್ಯೇಕವಾಗಿ ಕೆಲಸ ಮಾಡುತ್ತೇನೆ. ನಾನೇ ರಾಜ, ನನ್ನ ಬಿಟ್ಟರೆ ಯಾರು ಇಲ್ಲ ಎನ್ನುವವರಿಗೆ ಪಾಠ ಕಲಿಸಬೇಕು ಅಂತ ಅವರು ಹೇಳಿದ್ದಾರೆ.

    2004, 2008ರಲ್ಲಿ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರೇವಣಸಿದ್ದಯ್ಯ ಸೋತಿದ್ದರು. ಇದಾದ ಬಳಿಕ ಕಾಂಗ್ರೆಸ್ ಸೇರಿ 2013ರಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ್ದರು. ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಕಡೆಗಣಿಸಲಾಗಿತ್ತು. ಜಿಲ್ಲಾ ಹಾಗೂ ತಾಲೂಕು ಪಂಚಾತ್ ಚುನಾವಣೆಗಳಲ್ಲಿ ರೇವಣಸಿದ್ದಯ್ಯ ಅವರ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಿಲಾಗಿತ್ತು. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ನೆರವಾಗುವಾಗ ತಾರತಮ್ಯ ಮಾಡಿದ್ದಕ್ಕೆ ರೇವಣಸಿದ್ದಯ್ಯ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

  • ಕಾರ್ಕಳ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ- ವೀರಪ್ಪ ಮೊಯ್ಲಿ ವಿರುದ್ಧ ಅಸಮಾಧಾನ

    ಕಾರ್ಕಳ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ- ವೀರಪ್ಪ ಮೊಯ್ಲಿ ವಿರುದ್ಧ ಅಸಮಾಧಾನ

    ಉಡುಪಿ: ಕಾರ್ಕಳದಲ್ಲಿ ಕಾಂಗ್ರೆಸ್ ಭಿನ್ನಮತ ಭುಗಿಲೆದ್ದಿದೆ. ಕಾರ್ಕಳದಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಬೆಂಬಲಿಗರು ಸಿಡಿದೆದ್ದಿದ್ದಾರೆ.

    ಎಐಸಿಸಿ ಪಟ್ಟಿಯಲ್ಲಿ ಕಾರ್ಕಳದಿಂದ ಗೋಪಾಲ ಭಂಡಾರಿಗೆ ಟಿಕೆಟ್ ಘೋಷಣೆಯಾಗಿದೆ. ಮುನಿಯಾಲು ಉದಯ ಶೆಟ್ಟಿ ಬೆಂಬಲಿಗರು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

    ಕಾರ್ಕಳದ ತಾಲೂಕು ಕಚೇರಿಯಲ್ಲಿ ಶೆಟ್ಟಿ ಬೆಂಬಲಿಗರು ಮೊಯ್ಲಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದೆ ತೀರ್ಮಾನ ಮಾಡುವುದಾಗಿ ಉದಯಕುಮಾರ್ ಶೆಟ್ಟಿ ಮುನಿಯಾಲು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

    ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ಶೆಟ್ಟಿ ಬೆಂಬಲಿಗರು ಒತ್ತಾಯಿಸಿದ್ದಾರೆ. ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಮೊಯ್ಲಿ ತನ್ನ ಪವರ್ ಬಳಸಿ ಉದಯ ಶೆಟ್ಟಿಗೆ ಟಿಕೆಟ್ ತಪ್ಪಿಸಿ ತಮ್ಮ ಶಿಷ್ಯ ಗೋಪಾಲ ಭಂಡಾರಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬೂದು ಸದ್ಯದ ಆರೋಪವಾಗಿದೆ.