Tag: karnataka byelections2019

  • ‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

    ‘ಸಾಹುಕಾರ’ನ ಕೋಟೆಗಿಂದು ‘ಕನಕಪುರ ಬಂಡೆ’ ಎಂಟ್ರಿ

    ಬೆಳಗಾವಿ: ಉಪಚುನಾವಣೆಯ ಕಣದಲ್ಲಿ ಗೋಕಾಕ್ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಒಂದೇ ಮನೆತನದ ಇಬ್ಬರು ಸಹೋದರರ ಎರಡು ಪಕ್ಷಗಳ ಸ್ಪರ್ಧೆಯಿಂದ ಈ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಈ ಅಖಾಡಕ್ಕೆ ಇಂದು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಎಂಟ್ರಿ ಕೊಡುತ್ತಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಡಿಕೆಶಿ ಮಾತಿನ ವರಸೆ ಕೇಳಲು ಕ್ಷೇತ್ರದ ಜನತೆ ಕಾತುರರಾಗಿದ್ದಾರೆ.

    ಕುಂದಾನಗರಿ ಬೆಳಗಾವಿ ಗಡಿ ವಿಷಯಕ್ಕೆ ಸುದ್ದಿಯಲ್ಲಿದ್ದರೆ, ಗೋಕಾಕ್ ಕ್ಷೇತ್ರ ರಮೇಶ್ ಜಾರಕಿಹೂಳಿ ರಾಜೀನಾಮೆಯಿಂದ ಉಪಚುನಾವಣೆ ಕಣದ ಭಾರೀ ಹೈವೋಲ್ಟೇಜ್ ಕದನ ಕಣವಾಗಿದೆ. ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ಡಿ.ಕೆ ಶಿವಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಈಗ ವೈರಿಗಳಾಗಿದ್ದಾರೆ. ಕೈ ಪಕ್ಷದ ಅಭ್ಯರ್ಥಿ ಲಖನ್ ಪರ ಪ್ರಚಾರಕ್ಕೆ ಇಂದು ಡಿಕೆಶಿ ಆಗಮಿಸ್ತಿದ್ದು, ತಮ್ಮ ಬತ್ತಳಿಕೆಯಲ್ಲಿರುವ ಯಾವ ಬಾಣಗಳನ್ನು ರಮೇಶ್ ವಿರುದ್ಧ ಬಿಡುತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

    ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ನನ್ನ ವಿರುದ್ಧ ವೈಯಕ್ತಿಕ ಟೀಕೆ ನಿಲ್ಲಿಸದಿದ್ದರೆ ಎಲ್ಲವೂ ಬಹಿರಂಗ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ರಮೇಶ್, ಮೈಸೂರು ಭಾಗದವರ ಆಟ ಇಲ್ಲಿ ನಡೆಯುವುದಿಲ್ಲ. ಅಲ್ಲಿಯ ರಾಜಕೀಯವೇ ಬೇರೆ ಇಲ್ಲಿಯ ರಾಜಕೀಯ ಬೇರೆಯೆಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್‍ಗೂ ಎಚ್ಚರಿಕೆ ನೀಡಿದರು. ಈಗ ಡಿಕೆಶಿ ಎಂಟ್ರಿಯಾಗುತ್ತಿರೋದ್ರಿಂದ ಸಾಹುಕಾರ ಮತ್ತಷ್ಟು ಅಲರ್ಟ್ ಆಗುವ ಸಾಧ್ಯತೆ ಇದೆ. ಡಿಕೆಶಿಗೆ ಸರಿಸಮನಾಗಿ ಪ್ರಚಾರಕ್ಕೆ ತಯಾರಿ ನಡೆಸಿದ್ದಾರೆ.

  • ಶರತ್ ಬಚ್ಚೇಗೌಡ ಖರೀದಿಗೆ ಮುಂದಾದ ಎಂಟಿಬಿ

    ಶರತ್ ಬಚ್ಚೇಗೌಡ ಖರೀದಿಗೆ ಮುಂದಾದ ಎಂಟಿಬಿ

    ಬೆಂಗಳೂರು: ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ಹೊಸಕೋಟೆಯ ಬೈಲನರಸಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶರತ್, ಡಿಸೆಂಬರ್ 5ರಂದು ತಾಲೂಕಿನ ಇತಿಹಾಸದಲ್ಲೇ ಮೊದಲನೇ ಬಾರಿ ಉಪಚುನಾವಣೆ ಬಂದಿದೆ. ಎಂಟಿಬಿ ನಾಗರಾಜ್ ಅವರಿಗೆ ಐಟಿ ಅಥವಾ ಇಡಿ ಇಲಾಖೆಯ ಭಯ ಬಂತೋ ಗೊತ್ತಿಲ್ಲ. ತಾವು ಮಾಡಿದ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದ ರಾಜೀನಾಮೆ ಕೊಟ್ಟು ಉಪಚುನಾವಣೆ ಬರುವಂತೆ ಮಾಡಿದ್ದಾರೆ.

    ಎಂಟಿಬಿ ನಾಗರಾಜ್ ಅವರು ಬಂದಿದ್ದು ರಿಯಲ್ ಎಸ್ಟೆಟ್ ನಿಂದಾಗಿ ಎಂದು ಎಲ್ಲರಿಗೂ ಗೊತ್ತಿದೆ. ರಿಯಲ್ ಎಸ್ಟೇಟ್ ಅಂದ್ರೆ ಭೂಮಿಗಳಿಗೆ ಬೆಲೆ ಕಟ್ಟೋದು. ನಾವೆಲ್ಲರೂ ರೈತರು. ಹಾಗಾಗಿ ಭೂಮಿ ತಾಯಿಗೆ ಪೂಜೆ ಮಾಡುತ್ತೇವೆ. ಆದರೆ ಅವರು ಭೂಮಿತಾಯಿಯನ್ನು ವ್ಯಾಪಾರ ಮಾಡುತ್ತಾರೆ. ಪ್ರತಿಯೊಂದಕ್ಕೂ ಬೆಲೆ ಕಟ್ಟುತ್ತಾರೆ. ಇದರಲ್ಲಿ ಏಜೆಂಟುಗಳು ಕೂಡ ಇರುತ್ತಾರೆ. ಹೀಗೆ ರಿಯಲ್ ಎಸ್ಟೇಟ್ ನಲ್ಲಿ ಏಜೆಂಟ್ ಗಳನ್ನು ನೋಡಿದ್ದೇವೆ. ಇದೀಗ ರಾಜಕೀಯದಲ್ಲೂ ಎಜೆಂಟ್ ಗಳು ಇದ್ದಾರೆ. ಅವರ ಕೆಲಸವೇನೆಂದರೆ, ಇವನು ಗ್ರಾಮ ಪಂಚಾಯ್ತಿ ಸದಸ್ಯ. ಇವನ ಬೆಲೆ 2 ಲಕ್ಷ, ತಾಲೂಕು ಮಟ್ಟದಲ್ಲಿ ಓಡಾಡುವವನಿಗೆ 5-6 ಲಕ್ಷ, ಜಿಲ್ಲಾ ಪಂಚಾಯ್ತಿ ಸದಸ್ಯನಿಗೆ 75 ಲಕ್ಷ ಎಂದು ಹೇಳುವುದಾಗಿದೆ. ಹೀಗೆ ಎಲ್ಲರಿಗೂ ಬೆಲೆ ಕಟ್ಟಿ ನನಗೂ ಒಂದು ಬೆಲೆ ಕಟ್ಟಿದ್ದಾರೆ. ನನ್ನ ಬೆಲೆ 120 ಕೋಟಿ ಅಂತೆ. ಎಂಟಿಬಿ ನಾಗರಾಜ್ ಅವರೇ ನೀವು 120 ಕೋಟಿ ಅಲ್ಲ, ನಿಮ್ಮ ಇಡೀ ಆಸ್ತಿ ಕೊಟ್ರೂ ನಾನು ನಿಮ್ಮ ಆಮಿಷಕ್ಕೆ ಒಳಗಾಗಲ್ಲ. ನಾನು ಮಾರಾಟಕ್ಕಿಲ್ಲ, ಸ್ವಾಭಿಮಾನನಾ ಖರೀದಿ ಮಾಡಲು ಸಾಧ್ಯವೇ ಇಲ್ಲ. ಸ್ವಾಭಿಮಾನಕ್ಕಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಕ್ಷೇತ್ರದ ಜನರಿಗಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

    ಇದೇ ವೇಳೆ ಶರತ್ ಬಚ್ಚೇಗೌಡ ಎಂಟಿಬಿ ನಾಗರಾಜು ಒಂದೇ ನಾಣ್ಯದ ಎರಡು ಮುಖಗಳು ಎಂಬ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ಕೊಟ್ಟ ಶರತ್, ನಾನು ಯಾವುದೇ ಕಾರಣಕ್ಕೂ ಎಂಟಿಬಿ ನಾಗರಾಜು ಆಗಲು ಸಾಧ್ಯವಿಲ್ಲ. ಅವರ ಸಿದ್ಧಾಂತಗಳೇ ಬೇರೆ ನಮ್ಮ ಸಿದ್ಧಾಂತಗಳೆ ಬೇರೆ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಅವರು ಒಂದೇ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ನಾನು ಇವತ್ತು ಪಕ್ಷೇತರ ಅಭ್ಯರ್ಥಿಯಾಗಿರುವುದು ಎಂಟಿಬಿ ನಾಗರಾಜು ಬಿಜೆಪಿಗೆ ಬಂದರು ಎಂದಲ್ಲ. ಈ ಭಾಗದಲ್ಲಿ ನಮ್ಮ ಮೂರು ತಲೆ ಮಾರಿನ ನಾಯಕತ್ವದ ಪ್ರಶ್ನೆ. ಈ ಭಾಗದ ಜನರೊಂದಿಗೆ ನಮಗೆ ಇರುವ ಅವಿನಾಭಾವಕ್ಕೆ ಬೆಲೆ ಕೊಟ್ಟು ನಾನು ಪಕ್ಷೇತರ ಅಭ್ಯರ್ಥಿ ಆಗಿದ್ದೇನೆ ಎಂದರು.

  • ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಇವತ್ತೆಲ್ಲಾ ಟೈಮ್ ತಗೊಳಿ, ನಾಳೆ ಬೆಳಗ್ಗೆ ಫೈನಲ್ ಆಗ್ಬೇಕು- ಬಿಎಸ್‍ವೈ ವಾರ್ನಿಂಗ್

    ಬೆಂಗಳೂರು: ಇಂದು ಇಡೀ ದಿನ ಟೈಮ್ ತೆಗೆದುಕೊಳ್ಳಿ ನಾಳೆ ಬೆಳಗ್ಗೆ ಫೈನಲ್ ಆಗಬೇಕು. ಸೋಮವಾರ ನೀವು ಪ್ರಚಾರಕ್ಕೆ ಇಳಿಯಲೇಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರಿಗೆ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಾರ್ನ್ ಮಾಡಿದ್ದಾರೆ.

    ಬಚ್ಚೇಗೌಡರ ಜೊತೆ ಕೊನೆಯ ಬಾರಿ ಮಾತುಕತೆ ನಡೆಸಿದ ಯಡಿಯೂರಪ್ಪ, ದಿನಕ್ಕೆ ಎರಡು `ಹೊಸ’ ಕಡೆ ಪ್ರಚಾರ ಮಾಡ್ಲೇಬೇಕು. ಸೋಮವಾರದೊಳಗೆ ಪ್ರಚಾರಕ್ಕೆ ಇಳಿಯಬೇಕು. ಇಲ್ಲದಿದ್ದರೆ ಪಕ್ಷ ವಿಧಿಸೋ ಕ್ರಮವನ್ನು ಎದುರಿಸಿ. ನಿಮ್ಮ ವಿಚಾರವನ್ನ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದಿನಕ್ಕೆ ಎರಡು ಕಡೆಯಾದ್ರೂ ಚಿಕ್ಕಬಳ್ಳಾಪುರ, ಹೊಸಕೋಟೆಯಲ್ಲಿ ಪ್ರಚಾರ ಮಾಡಿ. ಇನ್ನೆರಡು ದಿನವಾದ್ರೂ ಟೈಮ್ ತೆಗೆದುಕೊಂಡು ಪ್ರಚಾರಕ್ಕೆ ಬನ್ನಿ ಎಂದು ಸಂದೇಶ ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಒಟ್ಟಿನಲ್ಲಿ ಬಿಜೆಪಿ, ಸಿಎಂ ಬಿಎಸ್‍ವೈ ವಾರ್ನಿಂಗ್‍ಗೆ ಬಚ್ಚೇಗೌಡರು ಮಣೀತಾರಾ ಅಥವಾ ಡೋಂಟ್ ಕೇರ್ ಎಂದು ಮಗನ ಪರ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

  • ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

    ಮಗನ `ಕುಕ್ಕರ್’ನಲ್ಲಿ ಅಪ್ಪ ವಿಲವಿಲ!

    ಬೆಂಗಳೂರು: ಬಿಜೆಪಿ ಬಿಡುವಂಗಿಲ್ಲ, ಕಟ್ಟಿಕೊಳ್ಳುವಂಗಿಲ್ಲ ಎಂಬತಹ ಧರ್ಮಸಂಕಟದಲ್ಲಿ ಸಂಸದ ಬಚ್ಚೇಗೌಡ ಸಿಕ್ಕಿಹಾಕಿಕೊಂಡಿದ್ದಾರೆ. ತಮ್ಮ ಪಕ್ಷದ ಚಿಹ್ನೆ ಕಮಲ ಆದರೆ ಮಗ ಶರತ್ ಬಚ್ಚೇಗೌಡರ ಪಕ್ಷೇತರ ಚಿಹ್ನೆ ಕುಕ್ಕರ್ ಆಗಿರುವುದರಿಂದ ಬಚ್ಚೇಗೌಡರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಬರೀ 10 ದಿನ ಮಾತ್ರ ಉಳಿದಿದೆ. ಆದರೆ ಬಚ್ಚೆಗೌಡರು ಮಾತ್ರ ನಾಪತ್ತೆಯಾಗಿದ್ದಾರೆ. ಬಿಜೆಪಿ ಉಸ್ತುವಾರಿ ಹಾಕಿದ್ದರೂ ಕ್ಯಾರೇ ಎನ್ನದೇ ಪ್ರಚಾರಕ್ಕೂ ಹೋಗದೆ ಬಚ್ಚೇಗೌಡರು ಸೈಲೆಂಟ್ ಆಗಿದ್ದಾರೆ. ಒಬ್ಬ ಹಿರಿಯ ನಾಯಕ, ಪಕ್ಷದ ಸಂಸದ ಆಗಿದ್ದರೂ ಕೈಕಟ್ಟಿಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಈ ಮೂಲಕ ರಹಸ್ಯವಾಗಿ ರಾಜಕೀಯ ಚದುರಂಗದಾಟಕ್ಕೆ ಇಳಿದು ಬಿಟ್ಟರಾ ಬಚ್ಚೇಗೌಡರು ಎನ್ನುವ ಪ್ರಶ್ನೆ ಕೂಡ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಬಚ್ಚೇಗೌಡರ ಮನವೊಲಿಕೆ ಪ್ರಯತ್ನವನ್ನು ಸಿಎಂ ಯಡಿಯೂರಪ್ಪ ಕೈಬಿಟ್ಟಿದ್ದು, ಬಚ್ಚೇಗೌಡರ ಜತೆ ಬಿಜೆಪಿ ನಾಯಕರು ಕೂಡ ದೂರ ಸರಿದಿದ್ದಾರೆ. ಹೀಗಾಗಿ ಉಪಚುನಾವಣೆಗೂ ಮುನ್ನವೇ ಬಚ್ಚೇಗೌಡರ ಮೇಲೆ ಕ್ರಮನಾ ಅಥವಾ ಮುಗಿದ ಮೇಲೆ ಬಚ್ಚೇಗೌಡರ ಮೇಲೆ ಕ್ರಮನಾ ಎನ್ನುವ ಪ್ರಶ್ನೆ ಕಾಡುತ್ತಿದ್ದು, ಬಿಜೆಪಿಯ ಹೆಜ್ಜೆ, ಬಚ್ಚೇಗೌಡರ ರಹಸ್ಯ ಕುತೂಹಲ ಸೃಷ್ಟಿಸಿದೆ.

  • ಅಥಣಿ ಬೇಗುದಿ ಇಂದಾದ್ರೂ ಶಮನವಾಗುತ್ತಾ?- ಕುಮಟಳ್ಳಿ ಪರ ಪ್ರಚಾರಕ್ಕಿಳಿದ ಬಿಎಸ್‍ವೈ

    ಅಥಣಿ ಬೇಗುದಿ ಇಂದಾದ್ರೂ ಶಮನವಾಗುತ್ತಾ?- ಕುಮಟಳ್ಳಿ ಪರ ಪ್ರಚಾರಕ್ಕಿಳಿದ ಬಿಎಸ್‍ವೈ

    ವಿಜಯಪುರ: ಅಥಣಿ ರಣಕಣದಲ್ಲಿ ಮೇಲ್ನೋಟಕ್ಕೆ ಬಂಡಾಯದ ಬೇಗುದಿ ಮುಗಿದಿದ್ರೂ ಒಳಗೊಳಗೆ ಕುದಿಯುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಬೇಗುದಿ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಇಂದು ಬಿಎಸ್‍ವೈ ಅಥಣಿಗೆ ಆಗಮಿಸುತ್ತಿದ್ದಾರೆ.

    ಅಥಣಿಯಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಎದ್ದಿರೋ ಬಂಡಾಯ ಇನ್ನೂ ತಣ್ಣಗಾಗಲಿಲ್ಲ. ಬಿಜೆಪಿ ಮುಖಂಡರು ಅಸಮಾಧಾನ, ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ರೂ ಏನೂ ವರ್ಕೌಟ್ ಆಗಿದ್ದಂತೆ ಕಾಣುತ್ತಿಲ್ಲ. ಟಿಕೆಟ್ ಕೈ ತಪ್ಪಿರೋ ಸವದಿಗೆ ಅಸಮಾಧಾನ ಮೇಲ್ನೋಟಕ್ಕೆ ತೋರಿಸದೇ ಇದ್ದರೂ ಒಳಗೊಳಗೆ ಇನ್ನು ಜ್ವಾಲೆಯಂತೆ ಉರಿಯುತ್ತಲೆ ಇದೆ.

    ಅಥಣಿಯಲ್ಲಿ ಒಳಬೇಗುದಿ ಇನ್ನೂ ಮುಂದುವರಿದಿದ್ದು ಅದಕ್ಕಾಗಿಯೇ ಸವದಿ ಆಪ್ತರು, ಬೆಂಬಲಿಗರು ಒಂದಿಲ್ಲೊಂದು ಕ್ಯಾತೆ, ಬಂಡಾಯವನ್ನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಸಿಎಂಗೆ ಅಥಣಿ, ಕಾಗವಾಡ, ಗೋಕಾಕೇ ದೊಡ್ಡ ಸವಾಲಾಗಿತ್ತು. ಈಗ ಸ್ವತಃ ಸಿಎಂ ಯಡಿಯೂರಪ್ಪನವರೇ ಅಖಾಡಕ್ಕೆ ಇಳಿಯುತ್ತಿದ್ದು ಇಂದಿನಿಂದ ಅಥಣಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಸಿಎಂ ಬಿಎಸ್‍ವೈ ಬಿಜೆಪಿ ಕಾರ್ಯಕರ್ತರ ಸಭೆ ಕೂಡ ನಡೆಸಲಿದ್ದಾರೆ.

    ಕುಮಟಳ್ಳಿಗೆ ಟಿಕೆಟ್ ಘೋಷಣೆ ಆದ ಮೇಲೆ ಇದೇ ಮೊದಲ ಬಾರಿಗೆ ಅಥಣಿಗೆ ಸಿಎಂ ಆಗಮಿಸುತ್ತಿದ್ದಾರೆ. ಈ ವೇಳೆ ಬಿಎಸ್‍ವೈ ಮುಂದೆ ಮತ್ತೆ ಸವದಿ ಬೆಂಬಲಿಗರು ಅಸಮಾಧಾನ ಹೊರಹಾಕೋ ಸಾಧ್ಯತೆ ಇದೆ. ಒಂದೆಡೆ ಸಿಎಂ ಬಿಎಸ್‍ವೈ ಸ್ವಾಗತಕ್ಕೆ ಮಹೇಶ್ ಕುಮಟಳ್ಳಿ ಹಾಗೂ ಟೀಮ್ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಎಸ್‍ವೈಗೆ ಬಿಸಿ ತಟ್ಟಿಸಲು ಸವದಿ ಅಭಿಮಾನಿಗಳು ರೆಡಿ ಆಗಿರೋ ಮಾತುಗಳು ಕೇಳಿಬರುತ್ತಿದೆ.

    ಇದರ ನಡುವೆ ತನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲ ಇದೆ. ಅದನ್ನು ಸರಿ ಪಡಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಅಂತ ಸವದಿ ಹೇಳಿದ್ದಾರೆ.

    ಒಟ್ಟಿನಲ್ಲಿ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯೋ ಬಿಜೆಪಿ ಸಭೆ ಎಲ್ಲರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೆ ಈ ಎಲ್ಲಾ ಅಸಮಾಧಾನಗಳಿಗೆ ಸಿಎಂ ಹೇಗೆ ಇತಿಶ್ರೀ ಹಾಡ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.