Tag: karnataka by elections2019

  • ಜೆಡಿಎಸ್ ಮೇಲಿನ ವಿರಸಕ್ಕೆ ಕಾಂಗ್ರೆಸ್‍ನಲ್ಲಿ ವೀಕ್ ಆದ ಸಿದ್ದರಾಮಯ್ಯ!

    ಜೆಡಿಎಸ್ ಮೇಲಿನ ವಿರಸಕ್ಕೆ ಕಾಂಗ್ರೆಸ್‍ನಲ್ಲಿ ವೀಕ್ ಆದ ಸಿದ್ದರಾಮಯ್ಯ!

    ರಾಜ್ಯ ಕಾಂಗ್ರೆಸ್‍ನ ಪ್ರಭಾವಿ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಷದೊಳಗೆ ದುರ್ಬಲರಾಗತೊಡಗಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಪಕ್ಷದ ಹೈಕಮಾಂಡ್ ಜೊತೆಗೆ ಕಮಾಂಡ್ ಹೊಂದಿದ ಸಿದ್ದರಾಮಯ್ಯ ರಾಜ್ಯದಲ್ಲಿ ಪಕ್ಷಕ್ಕಾದ ಹಿನ್ನಡೆಯ ನಂತರ ಅಕ್ಷರಶಃ ವೀಕ್ ಆಗಿದ್ದಾರೆ. ರಾಜ್ಯ ಕಾಂಗ್ರೆಸ್ ವಿಚಾರದಲ್ಲಿ ಹೈಕಮಾಂಡ್ ಏನೇ ನಿರ್ಧಾರ ಮಾಡುವ ಮೊದಲು ಸಿದ್ದು ಮಾತಿಗೆ ಹೆಚ್ಚು ಮನ್ನಣೆ ನೀಡುತ್ತಿತ್ತು. ತಮಗೆ ಬೇಕಾದ ಹಾಗೆ ಕೋಟೆ ಕಟ್ಟಿಕೊಳ್ಳಲು ಇದನ್ನು ಸಿದ್ದರಾಮಯ್ಯ ಬಳಸಿಕೊಂಡಿದ್ದೂ ಉಂಟು. ತನ್ನ ಆಪ್ತರು, ಬಳಗವನ್ನೇ ಹೆಚ್ಚು ಮುನ್ನೆಲೆಗೆ ತರಲು, ತಮ್ಮ ಮೂಗಿನ ನೇರಕ್ಕೆ ಸೂತ್ರ ಹೆಣೆಯುತ್ತಿದ್ದ ಅವರು ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು.

    ಟಿಕೆಟ್ ಹಂಚಿಕೆ, ಪರಿಷತ್‍ಗೆ ಆಯ್ಕೆ, ನಿಗಮ ಮಂಡಳಿ ನಾಮನಿರ್ದೇಶನ, ಪಕ್ಷದ ಪದಾಧಿಕಾರಿಗಳ ಆಯ್ಕೆ ಮೊದಲಾದ ಎಲ್ಲಾ ಪ್ರಕ್ರಿಯೆಗಳಲ್ಲಿ ಸಿದ್ದು ಮೇಲುಗೈ ಸಾಧಿಸುತ್ತಿದ್ದರು. ಪಕ್ಷದೊಳಗಿನ ಎದುರಾಳಿಗಳನ್ನು ಅಕ್ಷರಶಃ ಮೂಲೆಗುಂಪು ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆ ಸಿದ್ದರಾಮಯ್ಯ ಅವರ ಏಕಚಕ್ರಾಧಿಪತ್ಯವನ್ನು ಮುರಿಯಿತು ಎಂದೇ ಹೇಳಬೇಕು. ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದು, ತಮ್ಮ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಅತಂತ್ರ ಸ್ಥಿತಿ ನಿರ್ಮಾಣವಾದಾಗ ರಾಜಕೀಯ ಎದುರಾಳಿ ಜೆಡಿಎಸ್ ಕುಟುಂಬದ ಮುಂದೆ ಕೈಕಟ್ಟಿ ನಿಲ್ಲುವಂತಾಗಿದ್ದು ಇತಿಹಾಸ. ಒಲ್ಲದ ಮನಸ್ಸಿನಿಂದ ಜೆಡಿಎಸ್ ಮೈತ್ರಿ, ಸಮನ್ವಯ ಸಮಿತಿ ನೇತೃತ್ವ ವಹಿಸಿ ಸರ್ಕಾರ ನಿಯಂತ್ರಿಸಲು ನೋಡಿದ್ದು, ಜೆಡಿಎಸ್ ಅಧಿಕಾರ ಕೊನೆಗಾಣಿಸಲು ಒಳಗೊಳಗೇ ತಂತ್ರ ರೂಪಿಸಿದ್ದು ಗುಟ್ಟಾಗಿ ಉಳಿದಿಲ್ಲ. ತಮ್ಮ ಬೆಂಬಲಿಗರನ್ನೇ ಜೆಡಿಎಸ್ ವಿರುದ್ಧ ಎತ್ತಿಕಟ್ಟಿದ್ದು, ಆ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದು ಕೂಡಾ ಹೌದು.

    ಬಿಜೆಪಿಯನ್ನು ಅಧಿಕಾರದಿಂದ ದೂರ ಉಳಿಸಬೇಕೆಂಬ ಒಂದೇ ಕಾರಣಕ್ಕೆ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಪಕ್ಷದ ಹೈಕಮಾಂಡ್ ಜೆಡಿಎಸ್ ಜೊತೆ ಸರ್ಕಾರ ರಚಿಸಲು ನಿರ್ಧರಿಸಿತ್ತು. ಅದನ್ನು ಸರಿಯಾಗಿ ನಿರ್ವಹಿಸಬೇಕಾದ ಸಿದ್ದರಾಮಯ್ಯ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಾ ಸಮನ್ವಯತೆ ಸಾಧಿಸುವ ಬದಲು, ಕೆಡಿಸುವ ಪ್ರಯತ್ನ ಮಾಡಿದ್ದಾರೆಂಬುದೇ ಕಾಂಗ್ರೆಸ್ ಹೈಕಮಾಂಡ್ ಬಳಿಯಿರುವ ಮಾಹಿತಿ. ಇನ್ನೊಂದು ಪ್ರಮುಖ ಅಂಶ ಏನೆಂದರೆ, ತಮ್ಮ ಆಪ್ತರನ್ನೇ ಪಕ್ಷ ಬಿಡುವಂತೆ ಮಾಡಿ, ಸರ್ಕಾರ ಕೆಡವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪರೋಕ್ಷ ಕಾರಣರಾದರು ಎಂಬ ಹಣೆಪಟ್ಟಿ ಕೂಡಾ ಅವರ ಮೇಲೆ ಇದೆ. ಅವರು ಏನೇ ಸಮಜಾಯಿಷಿ ನೀಡಿದ್ರೂ ಒಪ್ಪುವ ಸ್ಥಿತಿಯಲ್ಲಿ ಕಾಂಗ್ರೆಸ್ ವರಿಷ್ಠರು ಇಲ್ಲ. ಹೀಗಾಗಿಯೇ ದಿನದಿಂದ ದಿನಕ್ಕೆ ಸಿದ್ದರಾಮಯ್ಯ ಹೈಕಮಾಂಡ್ ವಿಶ್ವಾಸ ಕಳೆದುಕೊಂಡಿದ್ದು.

    ಶಾಸಕರ ವಲಸೆಯ ಪರಿಣಾಮ ನಡೆದ ಉಪಚುನಾವಣೆ ಕೂಡಾ ಸಿದ್ದರಾಮಯ್ಯ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದಂತೂ ನಿಜ. ಯಾಕೆಂದರೆ ಹಿಂದಿನ ತಪ್ಪನ್ನು ಮರೆಮಾಚಲು ಹೈಕಮಾಂಡನ್ನು ಮೋಡಿ ಮಾಡಿದ ಅವರು, ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿ ರಿಸ್ಕ್ ತೆಗೆದುಕೊಂಡರು. ಹಳಬರು, ಹೊಸಬರು, ಹಿರಿಯರು ಸೇರಿ ಪಕ್ಷದೊಳಗಿನ ಯಾವುದೇ ಪ್ರಭಾವಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹುಂಬತನ ತೋರಿದ ಸಿದ್ದರಾಮಯ್ಯಗೆ ಪಕ್ಷದೊಳಗಿನ ಹಿತಶತ್ರುಗಳೇ ಪಾಠ ಕಲಿಸಲು ಪಣ ತೊಟ್ಟರು. ಸೋಲು ಗೆಲುವಿನ ಕೀರ್ತಿ ಸಿದ್ದರಾಮಯ್ಯ ತೆಗೆದುಕೊಳ್ಳಲಿ ಎಂದು ಎಲ್ಲರೂ ಚುನಾವಣೆಯಿಂದ ದೂರ ಉಳಿದರು. ಫಲಿತಾಂಶ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಪಕ್ಷದೊಳಗಿನ ಸಿದ್ದರಾಮಯ್ಯ ವಿರೋಧಿ ಪಡೆ ಪರಿಣಾಮಕಾರಿಯಾಗಿ ಹೈಕಮಾಂಡ್‍ಗೆ ವರದಿ ಒಪ್ಪಿಸಿದರು. ಸಿದ್ದರಾಮಯ್ಯ ಹಿಂದಿನ ಹಾಗಿಲ್ಲ. ಅವರೊಬ್ಬರನ್ನೇ ನಂಬಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಮನವರಿಕೆ ಮಾಡಿಕೊಡುವಲ್ಲಿ ಎಲ್ಲ ವಿರೋಧಿಗಳೂ ಒಗ್ಗಟ್ಟಾಗಿ ಯಶಸ್ವಿಯಾಗಿದ್ದಾರೆ.

    ಇದರ ಪರಿಣಾಮವೇ, ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ವೀಕ್ ಆಗುವಂತಾಯಿತು. ಪಕ್ಷದ ಸೋಲಿನ ಹೊಣೆಹೊತ್ತು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಹೈಕಮಾಂಡ್ ಅವರು ನಿರೀಕ್ಷಿಸಿದಷ್ಟು ತಲೆಕೆಡಿಸಿಕೊಳ್ಳಲಿಲ್ಲ. ಕೆಪಿಸಿಸಿ ಅಧ್ಯಕ್ಷ ಮತ್ತು ಸಿಎಲ್‍ಪಿ ನಾಯಕನ ಆಯ್ಕೆ ಬಗ್ಗೆ ಸಿದ್ದರಾಮಯ್ಯ ಬಯಸಿದಷ್ಟು ಸುಲಭವಾಗಿ ಪ್ರಕ್ರಿಯೆ ನಡೆಸಲಿಲ್ಲ. ಸೋನಿಯಾ ಗಾಂಧಿ ಒಂದು ನಿಲುವು ತಾಳಿದರೆ, ರಾಹುಲ್ ಮತ್ತೊಂದು ರೀತಿಯಲ್ಲಿ ಯೋಚಿಸುತ್ತಿದ್ದಾರೆ ಅನ್ನೋದು ಸ್ಪಷ್ಟ.

    ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಾನು ಹೇಳಿದವರನ್ನು ನೇಮಕ ಮಾಡಬೇಕೆನ್ನುವ ಸಿದ್ದರಾಮಯ್ಯ ಬೇಡಿಕೆ ಅಷ್ಟು ಸುಲಭವಾಗಿ ಕೈಗೂಡುವಂತೆ ಕಾಣುತ್ತಿಲ್ಲ. ನನ್ನ ಬೆಂಬಲಿಗರಿಗೆ ಕೊಡದಿದ್ರೂ ಪರವಾಗಿಲ್ಲ, ಡಿಕೆಶಿವಕುಮಾರ್ ಅವರನ್ನು ನೇಮಕ ಮಾಡುವುದಕ್ಕೆ ಅಡ್ಡಗಾಲು ಹಾಕಿರುವ ಸಿದ್ದರಾಮಯ್ಯ ನಡೆ ಮೂಲ ಕಾಂಗ್ರೆಸಿಗರನ್ನು ಕೆರಳಿಸಿದೆ. ಒಂದು ವೇಳೆ ತಾನು ಹೇಳಿದವರನ್ನೇ ನೇಮಕ ಮಾಡಬೇಕೆಂಬ ಹಠಕ್ಕೆ ಹೈಕಮಾಂಡ್ ಒಪ್ಪಿದರೂ, ಇದು ಸಿದ್ದರಾಮಯ್ಯ ಪಾಲಿಗೆ ಕೊನೆಯ ಅವಕಾಶವಾಗುವುದಂತೂ ನಿಜ. ಮತ್ತೆ ಸಿದ್ದರಾಮಯ್ಯ ಚಕ್ರಾಧಿಪತ್ಯವನ್ನು ಮುರಿಯಲು ನಿಂತಿರುವ ವಿರೋಧಿ ಪಡೆ ತೊಡೆ ತಟ್ಟಿ ಸವಾಲು ಹಾಕಿ ನಿಲ್ಲುವುದಂತೂ ಖಂಡಿತ.

    ಮತ್ತೊಂದು ಕಡೆ ವಿರೋಧ ಪಕ್ಷ ನಾಯಕನ ಹುದ್ದೆಯನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಕಾರಣ, ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ ಅವರಿಂದ ಬಂದ ಪ್ರತಿಕ್ರಿಯೆ ಸಿದ್ದರಾಮಯ್ಯ ಅವರನ್ನು ಅಕ್ಷರಶಃ ಕಂಗಾಲಾಗಿಸಿದೆ. ಸಿಎಲ್‍ಪಿ ನಾಯಕ ಮತ್ತು ವಿರೋಧ ಪಕ್ಷ ನಾಯಕ ಹುದ್ದೆ ಪ್ರತ್ಯೇಕಿಸುವ ಮಾತನಾಡಿರುವುದು ಅಚ್ಚರಿ ಮೂಡಿಸಿದೆ. ಹುದ್ದೆ ಪ್ರತ್ಯೇಕಿಸಿದರೆ ಸಿದ್ದರಾಮಯ್ಯ ಮುಂದುವರಿಯುವ ಸಾಧ್ಯತೆ ಕಡಿಮೆ. ಹಾಗೊಂದು ವೇಳೆ ಹಾಗಾದರೂ ಪಕ್ಷದೊಳಗಿನ ಅಧಿಕಾರಕ್ಕೆ ಕತ್ತರಿ ಖಂಡಿತ.

    ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್‍ನಲ್ಲಿ ಏಕಾಧಿಪತ್ಯ ಮೆರೆದು ಪ್ರಭಾವಿ ಎನಿಸಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿಡಿತ ಸಡಿಲವಾಗುತ್ತಿರುವುದಂತೂ ಸತ್ಯ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತು ವಿರೋಧ ಪಕ್ಷ ನಾಯಕನ ನೇಮಕ ಇವೆಲ್ಲವೂ ಸಿದ್ದರಾಮಯ್ಯ ಭವಿಷ್ಯವನ್ನು ನಿರ್ಧರಿಸಲಿದೆ. ಸಿದ್ದು ವೀಕ್ ಆಗ್ತಾರಾ..? ಮತ್ತೆ ಪಕ್ಷದೊಳಗೆ ಹಿಡಿತ ಸಾಧಿಸಲು ಯಶಸ್ವಿಯಾಗುತ್ತಾರಾ ಅನ್ನೋದೇ ಸದ್ಯದ ಕುತೂಹಲ.

  • ಸ್ವಪಕ್ಷೀಯರಿಂದ್ಲೂ ಕ್ಲಾಸ್, ಹಳೆ ಪಕ್ಷದವ್ರಿಂದ್ಲೂ ಕ್ಲಾಸ್ – ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಕಕ್ಕಾಬಿಕ್ಕಿ

    ಸ್ವಪಕ್ಷೀಯರಿಂದ್ಲೂ ಕ್ಲಾಸ್, ಹಳೆ ಪಕ್ಷದವ್ರಿಂದ್ಲೂ ಕ್ಲಾಸ್ – ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಕಕ್ಕಾಬಿಕ್ಕಿ

    ಕಾರವಾರ: ಸ್ವಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್‍ಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದದಿಂದ ಬೈದು ನೂಕಾಡಿ ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಘಟನೆ ಬನವಾಸಿಯ ಅಜ್ಜರಣಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನೀವೇ ಕಾರಣರಾದವರು. ಈ ಹಿಂದೆ ಬಿಜೆಪಿ ತೆಗಳಿ ಈಗ ಆಡಿದ ಮಾತು ಉಳಿಸಿಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರು ಜರೆದ್ರು. ಇತ್ತ ಕಾಂಗ್ರೆಸ್ ಕಾರ್ಯಕರ್ತರೇನು ಸುಮ್ನೆ ಇರಲಿಲ್ಲ. ಬಿಜೆಪಿಗೆ ಹೋದ ನಿಮಗೆ ಹೇಗೆ ವೋಟ್ ಕೊಡೋದು ಎಂದು ತರಾಟೆ ತೆಗೆದುಕೊಂಡರು.

    ಕಳೆದ ಬಾರಿ ಕಾಂಗ್ರೆಸ್ಸಿನಲ್ಲಿದ್ದಾಗ ಬಿಜೆಪಿಯವರ ಬಗ್ಗೆ ಏನೂಂತ ಭಾಷಣ ಮಾಡಿದ್ದೀರಿ. ಇಂದು ಅದನ್ನು ಉಳಿಸಿಕೊಳ್ಳೋದನ್ನು ಕಲಿತುಕೊಳ್ಳಿ. ನಿಮ್ಮ ಸ್ವಾರ್ಥಕ್ಕೋಸ್ಕರ ನೀವು ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಮಾಧಾನ ಪಡಿಸಲು ಹೆಬ್ಬಾರ್ ಯತ್ನಿಸಿ ಕೊನೆಗೆ ಪರಿಸ್ಥಿತಿಯ ತೀವ್ರತೆ ಅರಿತು ಗ್ರಾಮದಿಂದ ಹೊರ ನಡೆದಿದ್ದಾರೆ.

    ಹೆಬ್ಬಾರ್ ಹೇಳಿದ್ದೇನು?
    ಯಲ್ಲಾಪುರ ಕ್ಷೇತ್ರದ ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿ ಸಿದ್ದರಾಮಯ್ಯ ಹಾಗೂ ದೇಶಪಾಂಡೆ ಅವರು ಹೆಬ್ಬಾರ್ ನಾಲಾಯಕ್ ಎಂದ ಹೇಳಿಕೆಯನ್ನು ಪ್ರಸ್ತಾಪಿಸಿ, ಹಿರಿಯ ನಾಯಕರಾದವರಿಗೆ ನಾಲಿಗೆ ಮೇಲೆ ಹಿಡಿತವಿರಬೇಕು, ನೀವು ನಿಮ್ಮ ನಾಲಿಗೆಯನ್ನ ಹರಿಬಿಟ್ಟರೇ ನಾನು ನನ್ನ ನಾಲಿಗೆಯನ್ನ ಹರಿಬಿಡುತ್ತೇನೆ. ಪಕ್ಷಾಂತರದ ಬಗ್ಗೆ ದೇಶಪಾಂಡೆ, ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ದೇಶಪಾಂಡೆ ಇಡೀ ಜಿಲ್ಲೆಯ ಜನರ ಕ್ಷಮೆ ಕೇಳಬೇಕು. ಕಳೆದ ಬಾರಿ ಸತೀಶ್ ಸೈಲ್, ಶಾರದ ಶೆಟ್ಟಿ, ಮಂಕಾಳು ವೈದ್ಯ ಯಾಕೆ ಸೋತರು ಅನ್ನೋದು ಗೊತ್ತು, ಅಧಿಕಾರಿಗಳನ್ನ ಇಟ್ಟುಕೊಂಡು ದೇಶಪಾಂಡೆ ದಬ್ಬಾಳಿಕೆ ಮಾಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಮೈಸೂರಲ್ಲಿ ಬರ್ತ್ ಡೇ ಪಾಲಿಟಿಕ್ಸ್ ಜೋರು – ಜಿಟಿಡಿ ಮನವೊಲಿಕೆಗೆ ಪ್ರಜ್ವಲ್ ರೇವಣ್ಣ ಶತ ಪ್ರಯತ್ನ

    ಮೈಸೂರಲ್ಲಿ ಬರ್ತ್ ಡೇ ಪಾಲಿಟಿಕ್ಸ್ ಜೋರು – ಜಿಟಿಡಿ ಮನವೊಲಿಕೆಗೆ ಪ್ರಜ್ವಲ್ ರೇವಣ್ಣ ಶತ ಪ್ರಯತ್ನ

    ಮೈಸೂರು: ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಗಮನ ಸೆಳೆದಿರೋದು ಹುಣಸೂರು ಕ್ಷೇತ್ರ. ಹುಣಸೂರು ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸರಿಸಮನಾಗಿ ಪ್ರಯತ್ನ ಪಡುತ್ತಿವೆ. ಹುಣಸೂರಲ್ಲಿ ಮೊದಲಿಂದ ಒಂದಷ್ಟು ಹಿಡಿತ ಹೊಂದಿರುವ ಮಾಜಿ ಸಚಿವ ಜಿಟಿ ದೇವೇಗೌಡರು ಸದ್ಯದ ಚುನಾವಣೆಯಲ್ಲಿ ತಟಸ್ಥ ನಿಲುವು ಹೊಂದಿದ್ದಾರೆ. ಜೆಡಿಎಸ್‍ನಿಂದ ಒಂದು ಕಾಲು ಹೊರಗಿಟ್ಟು ಬಿಜೆಪಿ ಕಡೆ ಆಸೆಗಣ್ಣಿಂದ ನೋಡುತ್ತಿರುವ ಜಿಟಿಡಿ ಬೆಂಬಲ ಪಡೆಯಲು ಮೂರು ಪಕ್ಷಗಳು ಪ್ರಯತ್ನ ನಡೆಸ್ತಿರೋದು ಗುಟ್ಟಾಗಿ ಉಳಿದಿಲ್ಲ.

    ಕೈಯಲ್ಲಿದ್ದ ಜಿಟಿಡಿ ಎಂಬ ಲಡ್ಡುವನ್ನು ತಾವೇ ಕೈಯಾರೆ ಜಾರಿ ಬಿಟ್ಟಿದ್ದ ದಳಪತಿಗಳಿಗೆ ಈಗ ಹುಣಸೂರು ಉಪಸಮರದ ಹಿನ್ನೆಲೆಯಲ್ಲಿ ಜಿಟಿಡಿ ಮಹತ್ವ ಗೊತ್ತಾಗಿದೆ. ಹೀಗಾಗಿ ತಮ್ಮಿಂದ ದೂರ ಸರಿದ ಜಿಟಿ ದೇವೇಗೌಡರ ಹತ್ತಿರ ಮಾಡಿಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಈ ಬಾರಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಂಧಾನಕ್ಕೆ ಬಂದಿದ್ದಾರೆ.

    ಸೋಮವಾರ ಜನ್ಮದಿನ ಆಚರಿಸಿಕೊಂಡ ಜಿಟಿಡಿಗೆ ಬರ್ತ್‍ಡೆ ವಿಶ್ ಮಾಡೋ ನೆಪದಲ್ಲಿ ಸಂಜೆ ಪ್ರಜ್ವಲ್ ರೇವಣ್ಣ ಭೇಟಿ ಯತ್ನಿಸಿದರು. ನೇರ ಜಿಟಿಡಿ ಮನೆಗೆ ಹೋಗಿದ್ರು. ಆದ್ರೆ ಜಿಟಿಡಿ ಅಲ್ಲಿ ಇರಲೇ ಇಲ್ಲ. ಎಷ್ಟು ಹೊತ್ತು ಕಾದರೂ ಜಿಟಿಡಿ ಬರಲೇ ಇಲ್ಲ. ಅಷ್ಟರಲ್ಲಿ ಜಿಟಿಡಿ ಪತ್ನಿ ತಂದಿಟ್ಟಿದ್ದ ಲಡ್ಡು ಬಾಯಿಗೆ ಹಾಕಿಕೊಂಡು ಜಿಟಿಡಿಗೆ ಫೋನಾಯಿಸಿ, ಎಲ್ಲಿದ್ದೀರಿ ಅಣ್ಣಾ.. ನಾನೇ ಬರ್ತೀನಿ ಅಂತ ಕೇಳಿದ್ರು.

    ಕೊನೆಗೆ ಜಿಟಿ ದೇವೇಗೌಡರಿದ್ದ ಜಾಗಕ್ಕೆ ಖುದ್ದು ಸಂಸದ ಪ್ರಜ್ವಲ್ ರೇವಣ್ಣ ಹೋಗಿ ಮುನಿಸಿಕೊಂಡಿರುವ ನಾಯಕನ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ರು. ಹುಣಸೂರಲ್ಲಿ ತಮ್ಮ ಬೆಂಬಲ ಬೇಕು ಕೊಡಿ, ಜೊತೆಗೆ ಪ್ರಚಾರಕ್ಕೆ ಬನ್ನಿ ಅಂತ ಸುಮಾರು ಒಂದೂವರೆ ಗಂಟೆ ಕಾಲ ಓಲೈಸೋ ಪ್ರಯತ್ನ ನಡೆಸಿದರು. ಆದರೆ ಇದಕ್ಕೆಲ್ಲಾ ಜಿಟಿಡಿ ಮಣಿಯಲೇ ಇಲ್ಲ. ಕೊನೆಗೆ ನಿಮ್ಮ ಮಗನನ್ನಾದ್ರೂ ಕಳಿಸಿಕೊಡಿ ಎಂದು ಜಿಟಿಡಿಗೆ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ರು. ಜಿಟಿ ದೇವೇಗೌಡರು ಇದಕ್ಕೂ ಒಪ್ಪಲಿಲ್ಲ. ಆಗ ಹರೀಶ್ ಗೌಡ ಕೂಡ ಇದ್ದರು. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಪ್ರಜ್ವಲ್ ರೇವಣ್ಣ ಪೆಚ್ಚು ಮೊರೆ ಹಾಕಿಕೊಂಡು ನಿರ್ಗಮಿಸಿದ್ರು.

    ಆದರೆ ಜಿಟಿಡಿ ಸೆಳೆಯೋ ಸಂಧಾನ ವಿಫಲ ಆದ್ರೂ ಸಂಸದ ಪ್ರಜ್ವಲ್ ರೇವಣ್ಣ ಏನನ್ನೂ ತೋರಿಸಿಕೊಳ್ಳಲಿಲ್ಲ. ಕೆಳಗೆ ಬಿದ್ದು ಮೀಸೆ ಮಣ್ಣಾದ್ರೂ ಏನೂ ಆಗಿಲ್ಲ ಎಂಬಂತೆ ತೋರಿಸಿಕೊಂಡ್ರು. ನಾನು ಬಂದಿದ್ದು ಸಂಧಾನಕ್ಕೆ ಅಲ್ಲ, ಜಿಟಿಡಿ ಬರ್ತ್‍ಡೇ ಅಲ್ವಾ..? ಹಾಗೆ ವಿಶ್ ಮಾಡಿ ಆರೋಗ್ಯ ವಿಚಾರಿಸೋಣ ಅಂತ ಬಂದಿದ್ದೇನೆ. ಜಿಟಿಡಿ ಕೈ ಪೆಟ್ಟಾಗಿದೆ. ಜೊತೆಗೆ ಕಾಲು ನೋವು ಇದೆ ಪಾಪ.. ಹೀಗಾಗಿ ಪ್ರಚಾರಕ್ಕೆ ಬನ್ನಿ ಅಂತ ನಾವು ಕರೆಯಲಿಲ್ಲ ಹೇಳಿದರು.

  • ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗುಡುಗಿದ್ದಾರೆ.

    ಶನಿವಾರ ರಾತ್ರಿ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳ. 2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೆಯವರು, ಸುಸಂಸ್ಕೃತರು ಇದ್ದಾರೆ ಅಂದುಕೊಂಡಿದ್ದೆವು. ಆದರೆ ಅವರು ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಪಕ್ಷವೆನ್ನುವ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಇವತ್ತು ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನು ಇವರು ವಿಷ ಕುಡಿದವರು ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾರೆ. ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಮಂತ್ರಿಗಳ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.

    ಹೆಣ್ಣು ಮಗಳಾಗಿ 12 ನೂರು ಕೋಟಿ ಅನುದಾನ ತಂದಿದ್ದೇನೆ ಅಂದ್ರೆ ನೀವು ಗಂಡಸರಾಗಿ ತರೋಕೆ ಆಗಲಿಲ್ವಾ? ಇನ್ನೊಬ್ಬರು ಊಟ ಮಾಡಿದ್ದಾರೆ ಅಂತ ನಾವು ಉಪವಾಸ ಇರೋದು ತಪ್ಪು. ಇನ್ನೊಬ್ಬರ ದುಡಿದು ಊಟ ಮಾಡಿದಾರೆ ಅಂದ್ರೆ ನಾವು ದುಡಿದು ಊಟ ಮಾಡಬೇಕೆನ್ನುವುದು ಗಂಡಸ್ಥನ. ಅದನ್ನು ಬಿಟ್ಟು ಮಳ್ಳನಂಗ ಸೋಗು ಹಾಕುವುದು ಕೈ ಮುಗಿಯೋದು ಮಾಡುತ್ತಾರೆ. ಆದರೆ ಇವರದ್ದು ಅತೀ ವಿನಯಂ ಚೋರ್ ಲಕ್ಷಣಂ. ನನ್ನ ಮಾತು ಬಿರುಸು, ಗುಂಡು ಹೊಡೆದಂಗೆ ಇರಬಹುದು. ಆದರೆ ಯಾವತ್ತಿಗೂ ಸತ್ಯಕ್ಕೆ ತಲೆಬಾಗುವೆ. ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ದರೂ ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸ್ತೀನಿ ಎಂದು ಸವಾಲು ಹಾಕಿದ್ದಾರೆ.

  • ಕೆ.ಆರ್.ಪೇಟೆ ಕಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಿಂದ `ಒಕ್ಕಲಿಗ’ ವ್ಯೂಹ!

    ಕೆ.ಆರ್.ಪೇಟೆ ಕಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿಯಿಂದ `ಒಕ್ಕಲಿಗ’ ವ್ಯೂಹ!

    ಮಂಡ್ಯ: ಉಪ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಕೆ.ಆರ್ ಪೇಟೆಯೂ ಒಂದು. ಈಗ ಇಲ್ಲಿ ಎಲ್ಲರೂ ಡಿಫರೆಂಟ್ ಸ್ಟ್ರಾಟಜಿಯಲ್ಲಿ ತೊಡಗಿದ್ದಾರೆ.

    ಮಂಡ್ಯ ರಣಕಣದಲ್ಲಿ ತೆನೆ ಕಾಳು ಕಟ್ಟಿದ್ದೇ ಹೆಚ್ಚು. ಈಗ ಕೆ.ಆರ್.ಪೇಟೆ ಬೈಎಲೆಕ್ಷನ್ ಬಂದಿದ್ದು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಡಿಫರೆಂಟ್ ಪ್ಲಾನ್ ಮಾಡುತ್ತಿದ್ದಾರೆ. ಜೆಡಿಎಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಸ್ ಮಾಡುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ ಗೆಲ್ಲುವ ಮೂಲಕ ಮತ್ತೆ ಕೆಆರ್‍ಪೇಟೆಯನ್ನು ತಮ್ಮ ವಶಪಡಿಕೊಳ್ಳಬೇಕೆಂಬ ಹಂಬಲವಿದೆ. ಮತ್ತೊಂದು ಕಡೆ ಬಿಜೆಪಿ ಕೆಆರ್‍ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಂಡ್ಯದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಬೇಕೆಂಬ ಕನಸು ಕಾಣುತ್ತಿದೆ. ಈ ಎಲ್ಲಾ ಸರ್ಕಸ್, ಹಂಬಲ ಮತ್ತು ಕನಸುಗಳನ್ನು ನನಸು ಮಾಡಿಕೊಳ್ಳಲು ಮೂರು ಪಕ್ಷಗಳು ರೂಪಿಸ್ತಿರೋದು ಒಂದೇ ಸ್ಟ್ರಾಟಜಿ. ಅದುವೇ ಜಾತಿ ಮತಗಳನ್ನು ಸೆಳೆಯುವುದು.

    ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿವೆ. ಈ ಕ್ಷೇತ್ರದಲ್ಲಿ 90 ಸಾವಿರ ಮತಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಮತಗಳನ್ನು ಕಬಳಿಸಲು ಜೆಡಿಎಸ್, ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಂದ ಮತಬೇಟೆಗೆ ಶುರುಮಾಡಿದೆ. ಉಳಿದಂತೆ ಬಿಜೆಪಿ ತನ್ನ ಸಚಿವ ಸಂಪುಟದಲ್ಲಿ ಅಶ್ವಥ್ ನಾರಾಯಣ್ ಹಾಗೂ ಆರ್.ಅಶೋಕ್‍ಗೆ ಪ್ರಮುಖ ಹುದ್ದೆ ನೀಡಿದೆ. ಜೊತೆ ಕೆ.ಆರ್ ಪೇಟೆ ಚುನಾವಣೆಯ ಉಸ್ತುವಾರಿಯಾಗಿ ಮಾಧುಸ್ವಾಮಿಗೆ ಕೊಕ್ ಕೊಟ್ಟು ಅಶ್ವಥ್ ನಾರಾಯಣ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಬಿಜೆಪಿ ಒಕ್ಕಲಿಗರ ಮತಗಳನ್ನು ಕಬಳಿಸುವ ತಂತ್ರವನ್ನು ಬಿಜೆಪಿ ಮಾಡಿದೆ.

    ಇಷ್ಟು ಮಾತ್ರವಲ್ಲದೇ ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗಾಯತರ ವೋಟ್‍ಗೂ ಕಣ್ಣಾಕಿದೆ. ಸ್ವತಃ ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿಯಾಗಿರೋ ವಿಜಯೇಂದ್ರರೇ ರಣಕಣಕ್ಕಿಳಿದು ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ಒಟ್ಟಾರೆ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ಮೂರು ಪಕ್ಷಗಳು ಒಕ್ಕಲಿಗರನ್ನು ಸೆಳೆಯಲು ತಮ್ಮದೇ ಸ್ಟ್ರಾಟರ್ಜಿ ಮಾಡ್ತಾ ಇದ್ದಾರೆ.

  • ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

    ಮೈಸೂರಲ್ಲಿ ಮತಬೇಟೆಗೆ ಇಳಿದ ಶ್ರೀರಾಮುಲು- ಹುಣಸೂರಲ್ಲಿ ರೀಪಿಟ್ ಆಗ್ತಿದೆ ಬಾದಾಮಿ ಫೈಟ್

    ಮೈಸೂರು: ಸಚಿವ ಶ್ರೀರಾಮುಲು ಹುಣಸೂರು ಬೈ ಎಲೆಕ್ಷನ್‍ನಲ್ಲಿ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಸಿದ್ದರಾಮಯ್ಯ ಅಖಾಡದಲ್ಲೇ ರಾಮುಲು ಮತಬೇಟೆಯಾಡ್ತಿದ್ದಾರೆ. ಹಾಗಾಗಿ ಮೈಸೂರಲ್ಲಿ ಬಾದಾಮಿ ಫೈಟ್ ಪಕ್ಕಾ ಆಗಿದೆ. ಬಾದಾಮಿಯಲ್ಲಿ ಚುನಾವಣೆ ಬಳಿಕ ಸಿದ್ದರಾಮಯ್ಯ ವಿರುದ್ಧ ರಾಮುಲು ಸೋಲನುಭವಿಸಿದ್ದರು. ಅಂದಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಾಮುಲು ಈಗ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದಾರೆ.

    ಸಚಿವ ಶ್ರೀರಾಮುಲು ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಗೆಲ್ಲಿಸಲು ಹೋರಾಟಕ್ಕೆ ಇಳಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪರಮ ಶಿಷ್ಯ ಎಚ್.ಪಿ. ಮಂಜುನಾಥ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ನಡುವೆ ಇವರಿಬ್ಬರೂ ಹುಣಸೂರನ್ನು ಬಾದಾಮಿ ಅಂದುಕೊಂಡಂತೆ ಕಾಣುತ್ತಿದೆ. ಏಕೆಂದರೆ ಬಾದಾಮಿಯಲ್ಲಿ ಸಿದ್ದರಾಮಯ್ಯ 1,696 ಮತಗಳಿಂದ ಗೆದ್ದು ನಿಟ್ಟುಸಿರು ಬಿಟ್ಟಿದ್ದರು. ರಾಮುಲುಗೆ ಆ ಸೋಲಿನ ಸಿಟ್ಟು ಕಡಿಮೆ ಆದಂತೆ ಕಾಣುತ್ತಿಲ್ಲ. ಹೀಗಾಗಿ, ಇಬ್ಬರು ಇಲ್ಲಿ ಮತ್ತೆ ತಾವೇ ಅಭ್ಯರ್ಥಿಗಳು ಎಂಬಂತೆ ಕಾದಾಟಕ್ಕೆ ಇಳಿದಿದ್ದಾರೆ.

    ಹುಣಸೂರಿನಲ್ಲೇ ಬೀಡುಬಿಟ್ಟಿರುವ ರಾಮುಲು ತಮ್ಮ ಸಮುದಾಯದ ಮತಗಳ ಸೆಳೆಯುತ್ತಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಸುಮಾರು 35 ಸಾವಿರ ಮತಗಳಿವೆ. ಈ ಮತಗಳಲ್ಲಿ ಬಹುಪಾಲು ಮತಗಳು ಬಿಜೆಪಿಗೆ ಬಂದರೆ ಅದು ಬಿಜೆಪಿ ಅಭ್ಯರ್ಥಿಗೆ ದೊಡ್ಡ ಶಕ್ತಿ. ತಮ್ಮ ಸಮುದಾಯದ ಮತಗಳ ಸೆಳೆಯುವ ಮೂಲಕ ರಾಮುಲು ತಮ್ಮ ಅಭ್ಯರ್ಥಿ ಗೆಲುವಿನ ಹಾದಿ ಹಿಡಿಯುವಂತೆ ಮಾಡಿ ತಾವು ನಾಯಕ ಸಮುದಾಯದ ದೊಡ್ಡ ನಾಯಕ ಅಂತ ಮತ್ತೆ ಸಾಬೀತು ಮಾಡಲು ಮುಂದಾಗಿದ್ದಾರೆ.

    ಹೀಗಾಗಿ, ಶ್ರೀರಾಮುಲು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಶಕ್ತಿ ಇದ್ದರೆ ಮತ್ತೆ ಚುನಾವಣೆಗೆ ಬನ್ನಿ ಅಂತಾ ಸವಾಲ್ ಹಾಕುತ್ತಿದ್ದಾರೆ. ಒಂದರ್ಥದಲ್ಲಿ ಇವರಿಬ್ಬರು ಟೀಕೆ – ಪ್ರತಿ ಟೀಕೆ ನೋಡಿದರೆ ಜನರು ಕೂಡ ಬಾದಾಮಿ ಚುನಾವಣೆಯನ್ನು ಕಣ್ಮುಂದೆ ತಂದುಕೊಳ್ತಿದ್ದಾರೆ. ಶ್ರೀರಾಮುಲು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಾದಾಮಿ ಸೇಡು ತೀರಿಸಿ ಕೊಳ್ತಾರಾ? ಅಥವಾ ಸಿದ್ದರಾಮಯ್ಯ ತಮ್ಮ ಶಿಷ್ಯನನ್ನು ಗೆಲ್ಲಿಸೋ ಮೂಲಕ ಶ್ರೀರಾಮುಲುಗೆ ಮತ್ತೆ ಮುಖ ಭಂಗ ಮಾಡ್ತಾರಾ ಕಾದು ನೋಡಬೇಕಿದೆ.