Tag: Karnataka By Elections 2018

  • ರಾಮುಲು ಅಣ್ಣ ಎಲೆಕ್ಷನ್ ಶಾಂತಿಯುತವಾಗಿ ನಡೆಸಿಕೊಟ್ಟಿದ್ದಾರೆ- 3 ಜನರಿಗೆ ಡಿಕೆಶಿಯಿಂದ ಥ್ಯಾಂಕ್ಸ್

    ರಾಮುಲು ಅಣ್ಣ ಎಲೆಕ್ಷನ್ ಶಾಂತಿಯುತವಾಗಿ ನಡೆಸಿಕೊಟ್ಟಿದ್ದಾರೆ- 3 ಜನರಿಗೆ ಡಿಕೆಶಿಯಿಂದ ಥ್ಯಾಂಕ್ಸ್

    ಬೆಂಗಳೂರು: ಬಳ್ಳಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನನಗೆ ಜವಾಬ್ದಾರಿ ವಹಿಸಿತ್ತು. ಈ ಸಂದರ್ಭದಲ್ಲಿ ಕೆಲವರು ಅಭಿನಂದಿಸಿದ್ರು, ಇನ್ನು ಕೆಲವರು ಟೀಕೆ ಟಿಪ್ಪಣಿಗಳನ್ನು ಮಾಡಿದ್ರು. ಇವುಗಳನ್ನೆಲ್ಲಾ ನಾನು ಬಹಳ ಸಂತೋಷದಿಂದಲೇ ಸ್ವೀಕರಿಸಿದ್ದೆ. ನಾನು ಈ ಚುನಾವಣೆಯಲ್ಲಿ 3 ಜನಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಬಳ್ಳಾರಿ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲನೆಯದಾಗಿ ಶ್ರೀರಾಮುಲು ಅಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ. ಶ್ರೀರಾಮುಲು ಅಣ್ಣನವರು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹಳ ಶಾಂತ ರೀತಿಯಿಂದ ಚುನಾವಣೆಯನ್ನು ನಡೆಯಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಯಾವ ಸಣ್ಣ ಕಾರ್ಯಕರ್ತರಲ್ಲಿ ಘರ್ಷಣೆಯನ್ನು ಉಂಟು ಮಾಡದೇ ಇದ್ದು, ಒಟ್ಟಿನಲ್ಲಿ ಈ ಚುನಾವಣೆ ಸುಲಲಿತವಾಗಿ ನಡೆಸಿಕೊಡಲು ಸಹಕಾರ ಮಾಡಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದಿರಬೋದು ಅಥವಾ ಸೋತಿರಬಹುದು. ಸೋಲು-ಗೆಲುವು ಇಲ್ಲಿ ಮುಖ್ಯವಲ್ಲ. ಬದಲಾಗಿ ನಮ್ಮಿಂದ ಯಾವುದೇ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನೋವಾಗಬಾರದು ಅಂತ ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಅಂತ ಟಾಂಗ್ ನೀಡಿದ್ರು.

    ಬಿಜೆಪಿ ಅಭ್ಯರ್ಥಿ ಶಾಂತ ಅವರು ಶಾಂತ ಸ್ವಾಭವದವರು. ನಮ್ಮ ಮತಯಾಚನೆಯ ವೇಳೆ ಎಲ್ಲಿಯೂ ಅಡ್ಡಿಪಡಿಸಲಿಲ್ಲ. ಉಗ್ರಪ್ಪನವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದಾಗ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ. ಜೊತೆಯಲ್ಲಿ ಈ ಬಾರಿ ನಮ್ಮನ್ನು ಕೈ ಹಿಡಿದ ಜನತೆಗೆ ಹಾಗೂ ಬಳ್ಳಾರಿಯ ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ಪಕ್ಷ-ಭೇದ, ಜಾತಿ-ಧರ್ಮ ಇವನ್ನೆಲ್ಲಾ ಬಿಟ್ಟು ಒಗ್ಗಟ್ಟಿನಿಂದ ಮತದಾರರು ಬಳ್ಳಾರಿಗೆ ಇಂದು ಧ್ವನಿಯಾಗಿರಬೇಕು, ಉಗ್ರಪ್ಪನವರು ನಮ್ಮ ವಿಚಾರವನ್ನು ಕರ್ನಾಟಕ ಸರ್ಕಾರದಲ್ಲಿ ಹೋರಾಟ ಹಾಗೂ ಪಾರ್ಲಿಮೆಂಟಿನಲ್ಲಿ ಧ್ವನಿಯೆತ್ತುವ ಭರವಸೆ ನೀಡಿದ್ದರು. ಹೀಗಾಗಿ ಮತದಾರರು ಅವರಿಗೆ ಮತ ಹಾಕಿ ಆ ಅವಕಾಶವನ್ನು ಉಗ್ರಪ್ಪ ಅವರಿಗೆ ನೀಡಿದ್ದಾರೆ ಎಂದರು.

    ಯೋಗಕ್ಕಿಂತ ಯೋಗಕ್ಷೇಮ ಮುಖ್ಯ:
    ಆದ್ರೆ ಇಲ್ಲಿ ನಾನು ಗೆದ್ದುಬಿಟ್ಟಿದ್ದೀನಿ ಅಂತ ಹಿಗ್ಗಲು ತಯಾರಿಲ್ಲ. ಯಾಕಂದ್ರೆ ಯೋಗಕ್ಕಿಂತ ಯೋಗಕ್ಷೇಮ ಬಹಳ ಮುಖ್ಯವಾಗುತ್ತದೆ. ಐದೂವರೆ ತಿಂಗಳ ಚುನಾವಣೆಗೆ ನಾನು ವೋಟ್ ಕೇಳಿಲ್ಲ. ಡಿಕೆಶಿ ಅವರು ಇಂದು ಬಾಂಬ್ ಸಿಡಿಸುತ್ತಾರೆ ಅಂತ ಮಾಧ್ಯಮ ಮಿತ್ರರು ಹೇಳಿದ್ದರು. ನನ್ನ ಬಾಂಬ್ ಇಂದು ಬಳ್ಳಾರಿಯ ಅಭಿವೃದ್ಧಿಗೆ ಸಿಡಿಸ್ತೀನಿ. ನನ್ನ ಕಾರ್ಯಕ್ರಮ, ಯೋಜನೆ ಹಾಗೂ ಆಚಾರ-ವಿಚಾರ ಮತ್ತು ಮಾಡಿದಂತಹ ಪ್ರಚಾರ ಎಲ್ಲವೂ ಬಳ್ಳಾರಿಯ ಜನತೆಗೆ ಸರಿಯಾದ ರೀತಿಯ ನ್ಯಾಯವನ್ನು ಒದಗಿಸಿಕೊಡಬೇಕಾಗಿದೆ. ಅಲ್ಲಿರುವಂತಹ ಧೂಳನ್ನು ತೆಗೆಯುವಂತದ್ದು, ಉದ್ಯೋಗ ಸೃಷ್ಟಿ, ವಲಸೆ ಹೋಗುತ್ತಿರುವ ಯುವಕರಿಗೆ ಉದ್ಯೋಗ, ಕುಡಿಯುವ ನೀರು, ರಸ್ತೆ ಒದಗಿಸುವಂತಹ ಬಹಳ ದೊಡ್ಡ ಸವಾಲಿದೆ. ಈ ಸವಾಲನ್ನು ಚುನಾವಣೆಯ ಗೆಲುವು ಹೆಚ್ಚಿನ ಜವಾಬ್ದಾರಿಯನ್ನು ಹೊರಿಸಿದೆ ಅಂದ್ರು.

    ಜನಾರ್ದನ ಅಣ್ಣನವರು ಕೂಡ ಸಾಕಷ್ಟು ಸವಾಲುಗಳನ್ನು ಎಸೆದಿದ್ದಾರೆ. ಮಾಧ್ಯಮ ಹಾಗೂ ವಿರೋಧ ಪಕ್ಷದವರ ಸವಾಲುಗಳನ್ನೆಲ್ಲಾ ಬಹಳ ಸಂತೋಷದಿಂದಲೇ ಸ್ವೀಕಾರ ಮಾಡಿದ್ದೇವೆ ಅಂತ ಹೇಳಿದ್ರು.

    ಸಾವು, ಸೋಲಿಗೆ ಹೆದರುವವನಲ್ಲ:
    ಇದೇ ವೇಳೆ ಪಬ್ಲಿಕ್ ಟಿವಿಯಲ್ಲಿ ಶ್ರೀರಾಮುಲು ಹಾಗೂ ಡಿಕೆಶಿಯ ಪಂಥಾಹ್ವಾನ ಪ್ರಸ್ತಾಪಿಸಿದ ಡಿಕೆಶಿ, ನಾನು ಚರ್ಚೆಗೆ ಬರಲು ಸಿದ್ಧನಿದ್ದೆ, ಆದ್ರೆ ರಾಮುಲು ಅಣ್ಣ ಬರಲಿಲ್ಲ. ನಾನು ಪಲಾಯನ ಮಾಡಿಲ್ಲ. ಚುನಾವಣೆಯಲ್ಲಿ ನಿಂತವರೆಲ್ಲ ಗೆಲ್ಲಲು ಸಾಧ್ಯವಿಲ್ಲ. ಹುಟ್ಟಿದವರೆಲ್ಲ ನಿರಂತರವಾಗಿ ಬದುಕಲು ಸಾಧ್ಯವಿಲ್ಲ. ಯಾವತ್ತಾದರೂ ಒಂದು ದಿನ ಸಾಯಲೇಬೇಕು. ಹೀಗಾಗಿ ಈ ಸಾವು ಹಾಗೂ ಸೋಲಿಗೆ ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುವವನು ಈ ಡಿಕೆಶಿವಕುಮಾರ್ ಅಲ್ಲ ಅಂತ ತಿಳಿಸಿದ್ರು.

    ಬಳ್ಳಾರಿಗೆ ಹೋಗುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ:
    ಇವತ್ತು ದೀಪಾವಳಿ. ಈ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಮಹಾಜನತೆಗೆ ನನ್ನ ವೈಯಕ್ತಿಕವಾಗಿ, ಸರ್ಕಾರದ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಬಳ್ಳಾರಿಗೆ ಹೋಗುವ ಬಗ್ಗೆ ಇಂದು ನಾನು ನಿರ್ಧಾರ ಮಾಡಿಲ್ಲ. 5 ಕ್ಷೇತ್ರದಲ್ಲೂ ಚುನಾವಣಾ ಫಲಿತಾಂಶ ಹೊರಬಿದ್ದಿಲ್ಲ. ಇನ್ನೂ ಮತ ಎಣಿಕೆ ನಡೀತಾ ಇದೆ. ಹೀಗಾಗಿ ಕೊನೆಯ ಸುತ್ತಿನಲ್ಲಿ ರಾಜಕಾರಣದಲ್ಲಿ ಏನ್ ಬೇಕಾದ್ರೂ ಆಗಬಹುದು. ಇದರ ಅನುಭವ ನಮಗಿದೆ. ಲೀಡ್ ನಲ್ಲಿದ್ದವರು ಒಂದೇ ಬಾರಿಗೆ ಕೆಳಗಿಳಿದ ಅನೇಕ ಉದಾಹರಣೆಗಳು ಇವೆ ಅಂತ ಡಿಕೆಶಿ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?

    ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?

    ಬಳ್ಳಾರಿ: ಎರಡೂ ರಾಷ್ಟ್ರೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮರೆಯಾಗಿ ಬಿಜೆಪಿ ನಾಯಕ ಶ್ರೀರಾಮುಲು ಮತ್ತು ಕಾಂಗ್ರೆಸ್ ದಂಡಿನ ಡಿಕೆಶಿ ನಡುವಿನ ಮಹಾ ಭಾರತವಾಗಿ ಮಾರ್ಪಟ್ಟ ಬಳ್ಳಾರಿ ಉಪಚುನಾವಣೆಯಿದು. ಜೆ ಶಾಂತಾ ಮತ್ತು ಉಗ್ರಪ್ಪ ಎಂಬ ಇಬ್ಬರು ಸ್ಪರ್ಧಿಗಳು ನೆಪಮಾತ್ರವಾಗಿ, ಒಂದು ಕಾಲದಲ್ಲಿ ಗಣಿಧಣಿಗಳ ಕೋಟೆಗೆ ಪಾದಯಾತ್ರೆ ಮೂಲಕ ದಂಡಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ ಸೇನೆ ಮತ್ತು ರಾಮುಲು ಹಾಗೂ ಜನಾರ್ದನ ರೆಡ್ಡಿಯೆಂಬ ಕುಚುಕು ದೋಸ್ತ್‍ಗಳ ಜೋಡಿಯ ನಡುವಿನ ರಣಾಂಗಣವಾಗಿ ಮಾರ್ಪಟ್ಟ ಕದನವಿದು.

    ಯಾರು ನಿಜವಾದ ಕನ್ನಡಿಗರು, ಯಾರು ಮೂಲ ಬಳ್ಳಾರಿಯವರು, ವಾಲ್ಮೀಕಿ ಸಮುದಾಯಕ್ಕೆ ಸಿದ್ದರಾಮಯ್ಯರಿಂದ ಅವಮಾನ, ಸಿದ್ದರಾಮಯ್ಯ ಮಗನ ಸಾವನ್ನ ಸಂಭ್ರಮಿಸಿ ರೆಡ್ಡಿ ಕೊಟ್ಟ ಶ್ರವಣಕುಮಾರನ ಉದಾಹರಣೆ, ರೆಡ್ಡಿಗಳ ವಿರುದ್ಧ ಗಣಿ ಲೂಟಿ ಆರೋಪ, ಸಂಸತ್ತಿಗೆ ಯಾರು ಕಾಲಿಟ್ಟರೆ ಬಳ್ಳಾರಿ ಜನ ಬಾಳು ಬಂಗಾರ ಆಗುತ್ತೆ ಅನ್ನೋ ವಾಗ್ವಾದಗಳ ಹೊಳೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆಲ್ಲೋರು ಯಾರು ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

    ಬಳ್ಳಾರಿಯಲ್ಲಿ ಯಾರ ನಡುವೆ ಪೈಪೋಟಿ?
    – ಬಿಜೆಪಿಯಿಂದ ಜೆ.ಶಾಂತಾ
    – ಕಾಂಗ್ರೆಸ್-ಜೆಡಿಎಸ್ ಕೂಟದಿಂದ ವಿ ಎಸ್ ಉಗ್ರಪ್ಪ

    ಬಳ್ಳಾರಿ ಚಿತ್ರಣ:
    ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,13,354 ಮತದಾರರಿದ್ದು, ಇದರಲ್ಲಿ ಪುರುಷರು 8,55,194 ಹಾಗೂ ಮಹಿಳೆಯರು 8,57,944 ಆಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ವಾಲ್ಮೀಕಿ (ನಾಯಕ) 3 ಲಕ್ಷ, ಲಿಂಗಾಯತ 3 ಲಕ್ಷ, ಎಸ್‍ಸಿ (ಲಂಬಾಣಿ) 2.5 ಲಕ್ಷ, ಕುರುಬ 2.5 ಲಕ್ಷ, ಮುಸ್ಲಿಂ 2 ಲಕ್ಷ, ಗೊಲ್ಲ 1 ಲಕ್ಷ, ಗಂಗಾಮತ 70 ಸಾವಿರ, ಬಲಿಜ 70 ಸಾವಿರ, ರೆಡ್ಡಿ-ಕಮ್ಮ 40 ಸಾವಿರ ಹಾಗೂ ಉಪ್ಪಾರ ಸಮುದಾಯದ 35 ಸಾವಿರ ಮತದಾರರಿದ್ದಾರೆ. ಇದರಲ್ಲಿ ವಾಲ್ಮೀಕಿ, ಲಿಂಗಾಯಿತ, ಲಂಬಾಣಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಮತಗಳು

    ಸದ್ಯದ ಬಳ್ಳಾರಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ರಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ರೆಡ್ಡಿ, ಶ್ರೀರಾಮುಲು ಹಾಗೂ ಡಿಕೆಶಿವಕುಮಾರ್, ಸಿಎಂ ಕುಮಾರಸ್ವಾಮಿ ನಡುವೆ ನೇರ ಹಣಾಹಣಿಯಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗಿತ್ತು?
    ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು 5,34,406 ಮತಗಳನ್ನು ಪಡೆದು, 85,144 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಕಾಂಗ್ರೆಸ್ಸಿನ ಎನ್.ವೈ.ಹನುಮಂತಪ್ಪ 4,49,262 ಮತಗಳನ್ನು ಪಡೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಂಚ ಫಲಿತಾಂಶದತ್ತ ಎಲ್ಲರ ಚಿತ್ತ – ಗೆಲುವು ಬಿಜೆಪಿಗೋ, ಮೈತ್ರಿಕೂಟಕ್ಕೋ?

    ಪಂಚ ಫಲಿತಾಂಶದತ್ತ ಎಲ್ಲರ ಚಿತ್ತ – ಗೆಲುವು ಬಿಜೆಪಿಗೋ, ಮೈತ್ರಿಕೂಟಕ್ಕೋ?

    ಬೆಂಗಳೂರು: ಇಂದಿನಿಂದ ದೀಪಾವಳಿ ಆರಂಭ. ಮೊದಲ ದಿನವಾದ ಇವತ್ತು ನರಕ ಚರ್ತುದರ್ಶಿ. ರಾಕ್ಷಸ ನರಕಾಸುರನನ್ನ ಮಹಾಕಾಳಿ ವಧೆಗೈದು ಧರ್ಮ ಎತ್ತಿ ಹಿಡಿದ ದಿನ. ಒಂದು ಕಡೆ ಅಗತ್ಯವೇ ಇಲ್ಲದ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಮತ್ತು ಅನಿವಾರ್ಯವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇನ್ನೊಂದು ಗಂಟೆಯಲ್ಲಿ ಹೊರಬೀಳಲಿದೆ.

    ಎರಡು-ಮೂರು ಗಂಟೆಗಳಲ್ಲಿ ಗಣಿ ನಾಡಿಗೆ ಯಾರು ಧಣಿ, ಶಿವಮೊಗ್ಗದ ಮನೆ ಮಗ ಯಾರು..? ಮಂಡ್ಯದಲ್ಲಿ ಯಾರ ಬಾಯಿಗೆ ಸಕ್ಕರೆ, ವಿರೋಧಿಗಳೇ ಇಲ್ಲದ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಎಷ್ಟು ವೋಟ್‍ನಿಂದ ಗೆಲ್ಲಬಹುದು ಮತ್ತು ಜಮಖಂಡಿಯಲ್ಲಿ ಸಿದ್ದರಾಮಯ್ಯ ವರ್ಚಸ್ಸು ವರ್ಕೌಟ್ ಆಯ್ತಾ ಅನ್ನೋ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ.

    ಐದೂ ಕ್ಷೇತ್ರಗಳಲ್ಲಿರುವ ನಮ್ಮ ಪ್ರತಿನಿಧಿಗಳು ಕ್ಷಣ ಕ್ಷಣದ ಇಂಚಿಂಚೂ ಮಾಹಿತಿಯನ್ನ ನಿಮಗೆ ಕೊಡಲಿದ್ದಾರೆ. ಯಾರಿಗೆ ಎಷ್ಟು ವೋಟ್, ಯಾರಿಗೆ ಎಷ್ಟರ ಲೀಡ್ ಅನ್ನೋ ಕ್ಷಣಕ್ಷಣದ ಬೆಳವಣಿಗೆಯ ವಿವರಣೆಯನ್ನ ನಿಮ್ಮ ಪಬ್ಲಿಕ್ ಟಿವಿ ಪ್ರಸಾರ ಮಾಡುತ್ತದೆ.

    ಏಳು ತಿಂಗಳ ಹಿಂದೆಯಷ್ಟೇ ಮುಗಿದಿರೋ ಅಸೆಂಬ್ಲಿ ಚುನಾವಣೆ ಮತ್ತು ಇನ್ನೇಳು ತಿಂಗಳಲ್ಲಿ ನಡೆಯೋ ಲೋಕಸಭಾ ಮಹಾ ಚುನಾವಣೆಯ ಹೊಸ್ತಿಲಲ್ಲಿ ನಡೆದಿರೋ ಉಪ ಚುನಾವಣಾ ಫಲಿತಾಂಶ ತನ್ನದೇ ರಾಜಕೀಯ ಪರಿಣಾಮಗಳನ್ನ ಹೊಂದಿದೆ.

    ಉಪಕದನದ ಫಲಿತಾಂಶದ ಎಫೆಕ್ಟ್ ಏನ್ ಆಗಬಹುದು?
    – ಈ ಪಂಚ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರದ ಇಮೇಜ್ ನಿರ್ಧಾರ
    – ಸಾಲಮನ್ನಾ ಸೇರಿದಂತೆ ಸಮ್ಮಿಶ್ರ ಸರ್ಕಾರದ ನಿರ್ಧಾರಗಳಿಗೆ ಜನೋತ್ತರ
    – ಏಳು ತಿಂಗಳ ಹರೆಯದ ಸಮ್ಮಿಶ್ರ ಸರ್ಕಾರದ ಬಗ್ಗೆ ಜನಾಭಿಪ್ರಾಯ
    – 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಹಣೆಬರಹ ನಿರ್ಧಾರ
    – ಮಹಾ ಚುನಾವಣೆಗೂ ಈ ಉಪ ಚುನಾವಣಾ ಫಲಿತಾಂಶವೇ ಮುನ್ನುಡಿ
    – ಬಿಜೆಪಿ ಪಾಲಿಗೆ ನಿರ್ಣಾಯಕ, ಬಿಜೆಪಿಯಲ್ಲಿ ಈ ಫಲಿತಾಂಶದಿಂದ ನಾಯಕತ್ವ ನಿರ್ಧಾರ
    – ಬಿಜೆಪಿಯ ದಕ್ಷಿಣದ ಬಾಗಿಲು ಮುಚ್ಚಿಹೋಗುತ್ತಾ, ತೆರೆಯುತ್ತಾ ಅನ್ನೋದು ತೀರ್ಮಾನ

    ಚುನಾವಣೆಯ ಕ್ಷಣ ಕ್ಷಣ ಮಾಹಿತಿಗಾಗಿ ಪಬ್ಲಿಕ್ ಟಿವಿ ನೋಡಲು ಇಲ್ಲಿ ಕ್ಲಿಕ್ ಮಾಡಿ… https://publictv.in/live

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv