Tag: Karnataka By Elections

  • ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

    ಗೆಲುವಿಗಾಗಿ ಸ್ವಾಮೀಜಿಗಳ ಮೊರೆ ಹೋದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ

    ಕಾರವಾರ: ಉಪ ಚುನಾವಣೆ ಮತದಾನಕ್ಕೆ ಎರಡೇ ದಿನ ಬಾಕಿ ಉಳಿದಿದೆ. ಬಿಜೆಪಿ ಸೇರಿದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್‍ರನ್ನು ಸೋಲಿಸಲು ಕಾಂಗ್ರೆಸ್ ಪಣ ತೊಟ್ಟಿದ್ದು, ಮತ ಬೇಟೆಗೆ ಭರ್ಜರಿ ತಂತ್ರ ಹೆಣೆದಿದೆ. ಇದರಿಂದಾಗಿ ಹೆದರಿದ ಹೆಬ್ಬಾರ್, ಜಾತಿ ಮತ ಭೇಟೆಗಾಗಿ ಮಠಗಳ ಮೊರೆ ಹೋಗಿದ್ದಾರೆ.

    ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಶಿವರಾಮ್ ಹೆಬ್ಬಾರ್ ಅವರಿಗೆ ಗೆಲ್ಲುವ ಅನಿವಾರ್ಯತೆಯಿದೆ. ಇತ್ತ ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಕಣಕ್ಕಿಳಿಸಿದ್ದು, ಖುದ್ದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಳತ್ವ ವಹಿಸಿದ್ದಾರೆ. ಹೀಗಾಗಿ ಹೆಬ್ಬಾರ್ ಪರ ಇದ್ದ ಮತದಾರರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಕಾಂಗ್ರೆಸ್ ತಂತ್ರಗಾರಿಕೆಯಿಂದ ಹೆದರಿರುವ ಹೆಬ್ಬಾರ್, ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರೆನಿಸಿರುವ ಬ್ರಾಹ್ಮಣ ಹಾಗೂ ಹಿಂದುಳಿದ ಮತಗಳ ಓಲೈಕೆಗೆ ಇಳಿದಿದ್ದಾರೆ. ರಾತ್ರೋರಾತ್ರಿ ಬ್ರಾಹ್ಮಣ ಜನಾಂಗದ ಮಠಾಧೀಶರರಾದ ಸ್ವರ್ಣವಳ್ಳಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಮೊರೆ ಹೋಗಿ, ತಮ್ಮ ಪರ ಇರುವಂತೆ ಕೇಳಿಕೊಂಡಿದ್ದಾರೆ. ತನ್ನ ಹೆಸರು ಬಳಸಿ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕೇಳುತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಆರೋಪಿಸಿದ್ದಾರೆ.

    ಕಾಂಗ್ರೆಸ್‍ಗೆ ದ್ರೋಹ ಬಗೆದ ಹೆಬ್ಬಾರ್‍ರನ್ನು ಸೋಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಖುದ್ದು ಕ್ಷೇತ್ರದ ತುಂಬಾ ಓಡಾಡಿ, ದಲಿತ ಮತ್ತು ಅಹಿಂದ ಮತಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಇದು ಕಾಂಗ್ರೆಸ್‍ನ ಭರವಸೆಯನ್ನು ಹೆಚ್ಚಿಸಿದೆ. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಕ್ಷೇತ್ರದಲ್ಲಿ ಎರಡನೇ ಅತಿಹೆಚ್ಚು ಮತದಾರರಾಗಿರುವ ನಾಯಕ ಜನಾಂಗದವರಾಗಿದ್ದು, ನಾಯಕ ಜನಾಂಗ ಇವರ ಪರ ನಿಂತಿದೆ.

  • ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಗೋಕಾಕ್‍ನಲ್ಲಿ ರಂಗೇರಿದ ಮಿನಿ ಕದನ-ಇಂದು ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ

    ಬೆಳಗಾವಿ: ಕುಂದಾ ನಗರಿಯ ಗೋಕಾಕ್ ಉಪ ಸಮರ ಕಾವೇರಿದೆ. ಬಿಜೆಪಿ ಸೇರಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇವತ್ತು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಗೊಂದಲ ಮುಂದುವರಿದಿದೆ. ರಮೇಶ್ ವಿರುದ್ಧ ಅಖಾಡ ಸಿದ್ಧಗೊಳಿಸಿಕೊಂಡಿರುವ ಲಖನ್ ಮತ್ತು ಕಾಂಗ್ರೆಸ್ ಟಿಕೆಟ್‍ಗಾಗಿ ಕಾದಿರೋ ಬಿಜೆಪಿಯ ಅಶೋಕ್ ಪೂಜಾರಿಗೆ ಇಲ್ಲೂ ಟಿಕೆಟ್ ತಪ್ಪಿದ ಟೆನ್ಷನ್. ಹಾಗಾಗಿ ಇಬ್ಬರು ನಾಯಕರು ಸಭೆಗಳನ್ನು ನಡೆಸುತ್ತಿದ್ದಾರೆ.

    ಇಂದು ಗೋಕಾಕ್‍ನ ಕೇಸರಿ ಕಾರ್ಯಕರ್ತರು ರಮೇಶ್ ಜಾರಕಿಹೊಳಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಮನೆ ಮುಂಭಾಗ ಮೈದಾನದಲ್ಲಿ ಸಂಕಲ್ಪ ಸಮಾವೇಶ ಆಯೋಜಿಸಿದ್ದಾರೆ. ಇದಕ್ಕಾಗಿ ಎಲ್ಲಾ ಗ್ರಾಮದ ಪಂಚಾಯಿತಿ ಸದಸ್ಯರು ತಲಾ 10ರಿಂದ 15 ಸಾವಿರ ಕಾರ್ಯಕರ್ತರನ್ನು ಸೇರಿಸುವ ಹೊಣೆ ಒಪ್ಪಿಸಿದ್ದಾರೆ.

    ಬಿಜೆಪಿಯಲ್ಲಿ ಅಭ್ಯರ್ಥಿ ಘೋಷಣೆಯಾದ್ರೆ, ಕಾಂಗ್ರೆಸ್‍ನಲ್ಲಿ ಇನ್ನೂ ಟಿಕೆಟ್ ಗೊಂದಲ ಮಾತ್ರ ಬಗೆ ಹರಿಯುತ್ತಿಲ್ಲ. ಅಶೋಕ್ ಪೂಜಾರಿಗೆ ಟಿಕೆಟ್ ಕೈತಪ್ಪಿದ್ದು ಈ ಕಾರಣಕ್ಕಾಗಿ ದಿಢೀರನೇ ಶನಿವಾರ ಕಾರ್ಯಕರ್ತರ ಸಭೆ ಕರೆದಿದ್ದಾರೆ.

    ಅಶೋಕ್ ಪೂಜಾರಿಗೆ ಟಿಕೆಟ್ ಕೊಡದಂತೆ ಈಗಾಗಲೇ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವರಿಷ್ಠರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ,, ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡೋದು ಬೇಡ ಡಿಕೆಶಿ-ಲಕ್ಷ್ಮಿ ಹೆಬ್ಬಾಳ್ಕರ್ ಅಂಡ್ ಟೀಮ್ ವಿರೋಧ ಮಾಡುತ್ತಿದೆದೆ. ಸಿದ್ದರಾಮಯ್ಯರನ್ನು ಭೇಟಿಯಾಗಿರೋ ಸತೀಶ್‍ ಸಹೋದರ ಲಖನ್‍ಗೆ ಟಿಕೆಟ್ ಕನ್ಫರ್ಮ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

  • ಕರ್ನಾಟಕದಲ್ಲಿ ಡಿ.5ಕ್ಕೆ ಉಪಚುನಾವಣೆ. ಡಿ.9 ರಂದು ಮತ ಎಣಿಕೆ

    ಕರ್ನಾಟಕದಲ್ಲಿ ಡಿ.5ಕ್ಕೆ ಉಪಚುನಾವಣೆ. ಡಿ.9 ರಂದು ಮತ ಎಣಿಕೆ

    ನವದೆಹಲಿ: ಸುಪ್ರೀಂ ಕೋರ್ಟ್ ವಿಚಾರಣೆಯಿಂದ ಮುಂದೂಡಲ್ಪಟ್ಟಿದ್ದ ಕರ್ನಾಟಕ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ.

    ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, 15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.

    ನ.11ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ನ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನ.18ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು ನ.21 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಗಣನೆ ಆಗಲಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ. ಹೀಗಾಗಿ ಆಯೋಗ ಇಂದು ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.

    ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಚುನಾವಣಾ ಆಯೋಗ ಪರ ವಕೀಲ ರಾಕೇಶ್ ದ್ವಿವೇದಿ ಹಾಜರಾಗಿ, ಖಾಲಿ ಇರುವ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುವುದು ನಮ್ಮ ಕೆಲಸ. ಸ್ಪೀಕರ್ ಆದೇಶದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಈಗ ಚುನಾವಣೆ ನಿಲ್ಲಿಸಿದ್ರೆ ಜನಪ್ರತಿನಿಧಿಗಳು ಇಲ್ಲದಂತಾಗುತ್ತದೆ. ಈಗ ಚುನಾವಣೆಗೆ ತಡೆ ನೀಡಬೇಡಿ, ನಾವೇ ಮುಂದೂಡುತ್ತೇವೆ ಎಂದು ತಿಳಿಸಿದ್ದರು. ಚುನಾವಣಾ ಆಯೋಗದಿಂದ ಈ ಅಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಅನರ್ಹರ ಶಾಸಕರ ಅರ್ಜಿ ವಿಚಾರಣೆಯನ್ನು ತ್ರಿಸದಸ್ಯ ಪೀಠ ಅಕ್ಟೋಬರ್ 22ಕ್ಕೆ ಮುಂದೂಡಿದೆ.

    ಈ ಮೊದಲು ಮುಂದೂಡಲ್ಪಟ್ಟ ಕ್ಷೇತ್ರಗಳಿಗೆ ಅ.21 ರಂದು ಉಪಚುನಾವಣೆ ನಡೆಸಿ ಅ.24 ರಂದು ಮತ ಎಣಿಕೆ ನಡೆಸಲಾಗುವುದು ಚುನಾವಣಾ ಆಯೋಗ ತಿಳಿಸಿತ್ತು.

  • ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    ಬೆಂಗಳೂರು: ಜಿದ್ದಾಜಿದ್ದಿನ ಕ್ಷೇತ್ರಗಳಾದ ಮಂಡ್ಯ, ರಾಮನಗರ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಮನಗರದಲ್ಲಿ ಯುದ್ಧಕ್ಕೂ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ. ಮಂಡ್ಯದಲ್ಲಿ ಬದ್ಧ ವೈರಿಗಳೇ ದೋಸ್ತಿಗಳಾಗಿರೋದ್ರಿಂದ ಮತದಾರರು ಯಾರ ಕೈ ಹಿಡಿದಿದ್ದಾರೆ. ಇಬ್ಬರ ಜಗಳದಲ್ಲಿ ಲಾಭ ಮೂರನೇಯವರಿಗೆ ಸಿಗುತ್ತಾ? ಎಲ್ಲಕ್ಕೂ ಉತ್ತರ ಇಂದಿನ ಫಲಿತಾಂಶ

    ರಾಮನಗರದಲ್ಲಿ ಉಪ ಸಮರ ರಂಗೇರಿದ ಅನ್ನುವ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದ್ರೆ, ಕಾಂಗ್ರೆಸ್‍ನಿಂದ ವಲಸೆ ಬಂದ ಮುಖಂಡನನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿ ಟಾಂಗ್ ಕೊಟ್ಟಿದ್ದೇವೆ ಅಂತ ಬೀಗುತ್ತಿದ್ದ ಯಡಿಯೂರಪ್ಪ-ಯೋಗೇಶ್ವರ್ ದಂಡಿಗೆ ಮತದಾನಕ್ಕೆ ಎರಡು ದಿನಗಳ ಹಿಂದೆ ಗರ್ವಭಂಗ ಆಯ್ತು. ಡಿಕೆಶಿ ಬ್ರದರ್ಸ್ ಆಡಿದ ಕಡೇ ಕ್ಷಣದ ಆಟದಲ್ಲಿ ಎದುರಾಳಿಯೇ ಇಲ್ಲದೇ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವ್ರದ್ದೇ ಆಟವಾಗಿ ಮಾರ್ಪಟ್ಟಿತ್ತು. ಪತಿ ಖಾಲಿ ಮಾಡಿದ್ದ ಕ್ಷೇತ್ರಕ್ಕೆ ಪತ್ನಿಯೇ ಅಧಿಪತಿ ಆಗ್ತಾರಾ ಅನ್ನೋದಕ್ಕೆ ಕೆಲವೇ ಹೊತ್ತಲ್ಲಿ ಉತ್ತರ ಸಿಗಲಿದೆ.

    ರಾಮಗರದಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಎಲ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗಿದ್ದರು. ಆದ್ರೆ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ರಾಮನಗರದಲ್ಲಿ ಯಾರ ನಡುವೆ ಪೈಪೋಟಿ..?
    1. ಜೆಡಿಎಸ್+ಕಾಂಗ್ರೆಸ್ ಮೈತ್ರಿಕೂಟ – ಅನಿತಾ ಕುಮಾರಸ್ವಾಮಿ
    2. ಎಲ್.ಚಂದ್ರಶೇಖರ್ – ಬಿಜೆಪಿ ( ಚುನಾವಣೆಯಿಂದ ಹಿಂದಕ್ಕೆ)

    ರಾಮನಗರ ವಿಧಾನಸಭಾ ಕ್ಷೇತ್ರದ ಚಿತ್ರಣ:
    ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,07,005 ಇದೆ. ಅದರಲ್ಲಿ ಪುರುಷರ ಸಂಖ್ಯೆ 1,02,948 ಇದ್ದು, 1,04,032 ಮಹಿಳಾ ಮತದಾರರಿದ್ದಾರೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಒಕ್ಕಲಿಗರು- 99,572, ಎಸ್ಸಿ/ ಎಸ್ಟಿ- 45,953, ಮುಸ್ಲಿಂ- 35,990, ಲಿಂಗಾಯತರು- 16,900 ಹಾಗೂ ಇತರ 8190 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.

    ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 04 ಹೋಬಳಿಗಳು ಹಾಗೂ 20 ಗ್ರಾಮ ಪಂಚಾಯತ್‍ಗಳಿವೆ. ಅದರಲ್ಲಿ 123 ಜನವಸತಿ ಇರುವ ಗ್ರಾಮಗಳಿದ್ದು, ಕ್ಷೇತ್ರದಲ್ಲಿ 2,85,466 ಜನರಿದ್ದಾರೆ. ಇದರಲ್ಲಿ ಪುರುಷರು- 1,45,187 ಹಾಗೂ 1,40,279 ಮಹಿಳಾ ಮತದಾರರಿದ್ದಾರೆ.

    ರಾಮನಗರ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸಿ, 92,926 ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕಾಂಗ್ರೆಸ್ ನಿಂದ ಇಕ್ಭಾಲ್ ಹುಸೇನ್ ಅವರು ಸ್ಪರ್ಧಿಸಿದ್ದು 69,990 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಎಚ್‍ಡಿ ಕುಮಾರಸ್ವಾಮಿಯವರು 22,289 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣ ಬಲದಿಂದ ಏನ್ ಬೇಕಾದ್ರೂ ಮಾಡ್ಬಹುದು: ಜೆಡಿಎಸ್ ವಿರುದ್ಧ ಬಿ.ವೈ.ರಾಘವೇಂದ್ರ ಕಿಡಿ

    ಹಣ ಬಲದಿಂದ ಏನ್ ಬೇಕಾದ್ರೂ ಮಾಡ್ಬಹುದು: ಜೆಡಿಎಸ್ ವಿರುದ್ಧ ಬಿ.ವೈ.ರಾಘವೇಂದ್ರ ಕಿಡಿ

    ಶಿವಮೊಗ್ಗ: ಹಣ ಬಲದಿಂದ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ಆಗಿರುವುದು ಉದಾಹರಣೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

    ರಾಮನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಬಿ.ವೈ.ರಾಘವೇಂದ್ರ, ಈ ಹಿಂದೆ ಜೆಡಿಎಸ್ ನಾಯಕರು ಶಿವಮೊಗ್ಗಕ್ಕೆ ಬಂದಾಗ ಕೊನೆ ಗಳಿಗೆ ಏನು ಮಾಡ್ತೀವಿ ಅಂತಾ ಹೇಳಿ, ಈಗ ಅದೇ ರೀತಿ ನಡೆದುಕೊಂಡಿದ್ದಾರೆ. ಇದು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಾಠವಾಗಲಿದೆ ಎಂದು ತಿಳಿಸಿದ್ರು.

    ಶಿಕಾರಿಪುರ, ಸೊರಬ, ಸಾಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಲಿದ್ದೇವೆ. ಜೆಡಿಎಸ್ ಮುಖಂಡರು ಹಣ ಮತ್ತು ತೋಳ್ ಬಲದಿಂದ ನಮ್ಮ ಕಾರ್ಯಕರ್ತರನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ನಾಡಿನ ಜನತೆ ಎಲ್ಲವನ್ನು ಗಮನಿಸಿ ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

    ಈ ಮೊದಲು ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಸಚಿವ ಡಿಕೆ ಶಿವಕುಮಾರ್ ಸಹೋದರರು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಆದರೆ ರಾಮನಗರ ಅಭ್ಯರ್ಥಿ ಬಿಜೆಪಿ ಸೇರ್ಪಡೆ ಆಗಿರುವುದು ಪಕ್ಷದ ಮೇಲೆ ಹಾಗೂ ಉಪಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಗರಂ ಆದ ಬಿಎಸ್‍ವೈ ಉತ್ತರಿಸದೇ ಮೈಕ್ ತಳ್ಳಿ ಹೋದರು.

    https://www.youtube.com/watch?v=SUz3348T4QA

  • ಉಪಚುನಾವಣೆಗೆ ಸ್ಫೋಟಕ ಟ್ವಿಸ್ಟ್-ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

    ಉಪಚುನಾವಣೆಗೆ ಸ್ಫೋಟಕ ಟ್ವಿಸ್ಟ್-ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ

    ಬೆಂಗಳೂರು: ಕರ್ನಾಟಕ ಉಪ ಚುನಾವಣೆಗೆ ಸ್ಫೋಟಕ ತಿರುವು ಸಿಕ್ಕಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಎಲ್. ಚಂದ್ರಶೇಖರ್ ಚುನಾವಣೆ ಹಿಂದೆ ಸರಿಯುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಈ ವೇಳೆ ಮಾತನಾಡಿದ ಎಲ್.ಚಂದ್ರಶೇಖರ್, ನಾನು ಪಕ್ಷದ ಅಭ್ಯರ್ಥಿಯಾಗಿದ್ದರೂ, ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ. ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಮನಗರದ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಜನ ಹಿತಕ್ಕಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೆ. ಚುನಾವಣಾ ವೆಚ್ಚವನ್ನು ಪಕ್ಷವೇ ನೋಡಿಕೊಳ್ಳುತ್ತೇವೆ. ನೀವು ಅಭ್ಯರ್ಥಿಯಾಗಿ ಸಾಕು, ನಮ್ಮ ಎಲ್ಲ ನಾಯಕರು ನಿಮ್ಮ ಪರವಾಗಿ ಬಂದು ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದರು. ನಾನು ಫೋನ್ ಮಾಡಿದ್ರೆ ಕಾಲ್ ರಿಸೀವ್ ಮಾಡಲ್ಲ ಅಂದ್ರೆ ನನ್ನನ್ನು ಎಷ್ಟು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುವುದು ಗೊತ್ತಾಯಿತು. ಹಾಗಾಗಿ ಪಕ್ಷದಿಂದ ಹೊರ ಬಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದು ಎಲ್.ಚಂದ್ರಶೇಖರ್ ಹೇಳಿದರು.

    ಇಂದು ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಎಲ್.ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿಂದೆ ಸರಿದ ಕಾರಣ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಆಯ್ಕೆಯಾಗುವದು ಬಹುತೇಕ ಖಚಿತವಾಗಿದೆ. ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿದ್ದು, ಬೇರೆ ಕ್ಷೇತ್ರಗಳ ಮೇಲೆಯೂ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿ ಲೋಕಸಭೆ ಬೈ ಎಲೆಕ್ಷನ್‍ನಲ್ಲಿ ಬಲಭೀಮರ ವಾರ್ ಟೀಂ ಹೀಗಿದೆ

    ಬಳ್ಳಾರಿ ಲೋಕಸಭೆ ಬೈ ಎಲೆಕ್ಷನ್‍ನಲ್ಲಿ ಬಲಭೀಮರ ವಾರ್ ಟೀಂ ಹೀಗಿದೆ

    ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯ ರಾಜಕಾರಣದ ಕೇಂದ್ರ ಬಿಂದುವಾಗಿ ಬದಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿದ್ದರಿಂದ ರಾಜ್ಯ ನಾಯಕರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದರೆ, ಬಿಜೆಪಿ ನಾಯಕತ್ವವನ್ನು ಶಾಸಕ ಶ್ರೀರಾಮುಲು ಪಡೆದಿದ್ದಾರೆ. ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳಿಗಿಂತ ನಾಯಕರ ನಡುವಿನ ಬಿಗ್ ಫೈಟ್ ಅಂತಾನೇ ಕರೆಯಲಾಗುತ್ತಿದೆ.

    ಇಬ್ಬರು ನಾಯಕರು ಚುನಾವಣೆಗಾಗಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಚುನಾವಣೆ ಚದುರಂಗದಾಟಕ್ಕೆ ಇಳಿದಿದ್ದಾರೆ. ಅಕ್ಟೋಬರ್ 21ರಿಂದ ಎರಡೂ ಪಕ್ಷಗಳ ವಾರ್ ಟೀಂ ಚುನಾವಣೆ ಮೈದನಾವನ್ನು ಪ್ರವೇಶಿಸಲಿದೆ. ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆಯೂ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದರು.

    ಡಿಕೆಶಿ ವಾರ್ ಟೀಂ ಹೀಗಿದೆ:
    * 200 ಜನರ ಶಾಶ್ವತ ವಾರ್ ಟೀಂನ್ನು ಡಿಕೆ ಶಿವಕುಮಾರ್ ರಚನೆ ಮಾಡಿದ್ದಾರೆ.
    * ವಾರ್ ಟೀಂನಲ್ಲಿ ಕನಕಪುರ, ಬೆಂಗಳೂರು, ಮೈಸೂರಿನ ಭಾಗದವರನೇ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.
    * ಎಲೆಕ್ಷನ್‍ಗೆ 12 ದಿನ ಮೊದಲು ಕ್ಷೇತ್ರಗಳಲ್ಲಿ ಟೀಂ ವಾಸ್ತವ್ಯ ಹೂಡಲಿದೆ.
    * ತಂಡವನ್ನು ಎರಡು ಗುಂಪುಗಳಾಗಿ ವಿಂಗಡನೆ
    1. ವಿರೋಧಿಗಳ ತಂತ್ರಗಾರಿಕೆಯ ಮೇಲೆ ಕಣ್ಣಿಡಲು ಒಂದು ಗುಂಪು
    2. ತಮ್ಮ ತಂತ್ರಗಾರಿಕೆಯನ್ನ ಅನುಷ್ಠಾನಗೊಳಿಸಲು ಇನ್ನೊಂದು ಗುಂಪು

    ಶ್ರೀರಾಮುಲು ವಾರ್ ಟೀಂ ಹೀಗಿದೆ:
    * 150 ಜನರು ಉಳ್ಳು ಟೀಂ ರಚನೆ
    * ಈ ತಂಡ ಪ್ರತಿ ಚುನಾವಣೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದೆ.
    * ತಂಡದಲ್ಲಿ ಆಂಧ್ರ ಮತ್ತು ರಾಯಲ ಸೀಮೆಯವರನ್ನು ನೇಮಕ ಮಾಡಲಾಗಿದೆ
    * ಬೆಂಗಳೂರು, ರಾಯಚೂರು, ಗದಗ್ ಯುವಕರು ವಾರ್ ಟೀಂನಲ್ಲಿ ಸಕ್ರಿಯ
    * ಪಕ್ಷ ವೀಕ್ ಇರುವ ಕ್ಷೇತ್ರಗಳಲ್ಲೇ ಹೆಚ್ಚು ಕೆಲಸ ಮಾಡುವ ತಂತ್ರಗಾರಿಕೆ
    * ಎಲೆಕ್ಷನ್‍ಗೆ 12 ದಿನ ಮೊದಲು ಆ ಕ್ಷೇತ್ರಗಳಲ್ಲಿ ಬೀಡು ಬಿಡುವ ಟೀಂ

    ಶಾಸಕ ಶ್ರೀರಾಮುಲು ಜಾತಿ ಅಸ್ತ್ರಕ್ಕೆ ಸಚಿವ ಡಿಕೆಶಿಯಿಂದ ಯಾರು ನಿರೀಕ್ಷೆ ಮಾಡದ ಅಣ್ಣಾಸ್ತ್ರ ಪ್ರಯೋಗ ಮಾಡುತ್ತಿದ್ದು, ನಾಯಕ ವರ್ಸಸ್ ಗೌಡ ಎಂದು ಬಿಂಬಿಸಿ ಸಿಂಪತಿ ಗಿಟ್ಟಿಸುವ ರಾಮುಲು ಯತ್ನಕ್ಕೆ `ಅಣ್ಣ’ ಪ್ರತ್ಯಸ್ತ್ರ ಮಾಡುತ್ತಿದ್ದಾರೆ ಎಂದು ಪಕ್ಷದ ಮೂಲದಿಂದ ತಿಳಿದು ಬಂದಿದೆ.

    ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.

  • ಬಳ್ಳಾರಿ, ಶಿವಮೊಗ್ಗ ಗೆಲುವಿಗಾಗಿ ಪಕ್ಷಗಳು ಹರಿಸಲಿವೆ ಹಣದ ಹೊಳೆ

    ಬಳ್ಳಾರಿ, ಶಿವಮೊಗ್ಗ ಗೆಲುವಿಗಾಗಿ ಪಕ್ಷಗಳು ಹರಿಸಲಿವೆ ಹಣದ ಹೊಳೆ

    ಬೆಂಗಳೂರು: ಕರ್ನಾಟಕದಲ್ಲಿ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು. ಚುನಾವಣಾ ಅಖಾಡ ರಣರಂಗವಾಗುತ್ತಿದೆ. ಮೈತ್ರಿ ಸರ್ಕಾರ ವರ್ಸಸ್ ಬಿಜೆಪಿ ಅಂತಾ ಆಗಿರುವ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಆದ್ರೆ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳ ಜಿದ್ದಾಜಿದ್ದಿನ ಆಟ ರಾಜಕೀಯದಲ್ಲಿ ರಣಕಹಳೆಯನ್ನು ಮೊಳಗಿಸುತ್ತಿದೆ.

    ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.

    ಇತ್ತ ಶಿವಮೊಗ್ಗವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿ ಸರ್ಕಾರ ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ಬಿ.ವೈ.ರಾಘವೇಂದ್ರರನ್ನು ಸೋಲಿಸಿ ಬಿಜೆಪಿಗೆ ಮುಖಭಂಗ ಮಾಡಲು ರಾಜಕೀಯ ರೂಪರೇಷಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ರೂಪಿಸುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾತಾಗಿದ್ದು, ನಾಲ್ವರು ಘಟಾನುಘಟಿಗಳ ನಡುವಿನ ಪ್ರತಿಷ್ಠೆಯ ಸಮರ ಎಂದೇ ಉಪಕದನವನ್ನು ವರ್ಣಿಸಲಾಗುತ್ತಿದೆ. ನಾಯಕರಿಗೆ 4 ತಿಂಗಳ ಆಧಿಕಾರವಧಿಗಿಂತ ಪ್ರತಿಷ್ಠೆ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಹಣದ ಹೊಳೆಯೇ ಹರಿಸಲು ಮುಂದಾಗಿದೆಯಂತೆ.

    ಬಳ್ಳಾರಿಗಾಗಿ ಬರೋಬ್ಬರಿ 200 ಕೋಟಿ!
    ಬಳ್ಳಾರಿ ಲೋಕಸಭಾ ಕ್ಷೇತ್ರದ ಗೆಲುವಿಗಾಗಿ ಕಾಂಗ್ರೆಸ್ ಬರೋಬ್ಬರಿ 300 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆಯಂತೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪರಿಗೆ ಡಿ.ಕೆ.ಶಿವಕುಮಾರ್ ಮನಿ ಟ್ರೀ (ಹಣದ ಮೂಲ) ಆದ್ರೆ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾರ ಪರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸೋದರ ಶ್ರೀರಾಮುಲು ಹಣದ ಹೊಳೆ ಹರಿಸಲಿದ್ದಾರೆ ಎಂಬ ಮಾತುಗಳು ಬಳ್ಳಾರಿ ರಾಜಕಾರಣದಲ್ಲಿ ಕೇಳಿ ಬರುತ್ತಿರುವೆ. ಬಳ್ಳಾರಿ 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 25 ಕೋಟಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಖರ್ಚು ಮಾಡಲಿದೆಯಂತೆ.

    ಶಿವಮೊಗ್ಗಕ್ಕಾಗಿ 100 ಕೋಟಿ!
    ಒಂದು ವೇಳೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋತರೆ ಯಡಿಯೂರಪ್ಪರಿಗೆ ಭಾರೀ ಮುಖಭಂಗವಾಗಲಿದೆ. ಇತ್ತು ಜೆಡಿಎಸ್ ನಿಂದ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಬಿಜೆಪಿಯ ಎದುರಾಳಿ ಆಗಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಸಿಎಂ ಕುಮಾರಸ್ವಾಮಿ ಮನಿ ಟ್ರೀ ಆದ್ರೆ, ಬಿ.ವೈ.ರಾಘವೇಂದ್ರರಿಗೆ ತಂದೆ ಬಿ.ಎಸ್.ಯಡಿಯೂರಪ್ಪ ಮನಿ ಟ್ರೀ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 12.50 ಕೋಟಿ ಖರ್ಚಿಗೆ ಬಿಜೆಪಿ ಮತ್ತು ಜೆಡಿಎಸ್ ಪ್ಲಾನ್ ಮಾಡಿದೆಯಂತೆ. ಒಟ್ಟು 8 ಕ್ಷೇತ್ರಗಳಿಗೆ 100 ಕೋಟಿ ರೂ.ಖರ್ಚು ಆಗಲಿದೆ ಎಂಬ ಸುದ್ದಿಯೂ ಶಿವಮೊಗ್ಗ ರಾಜಕೀಯದ ಪಡಸಾಲೆಯನ್ನು ಹರಿದಾಡುತ್ತಿವೆ.

    ನಾಲ್ಕು ತಿಂಗಳ ಅವಧಿಗಿಂತ ಪ್ರತಿಷ್ಠೆಯ ಕಣವಾಗಿ ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಏರ್ಪಟ್ಟಿವೆ. ಕರ್ನಾಟಕ ಉಪ ಚುನಾವಣೆಯನ್ನು 2019ರ ಎಲೆಕ್ಷನ್ ಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

    ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

    – ಬಳ್ಳಾರಿ ಅಭ್ಯರ್ಥಿ ಆಯ್ಕೆ ಇನ್ನು ಕಗ್ಗಂಟು

    ಬೆಂಗಳೂರು: ಎರಡು ವಿಧಾನಸಭಾ, ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಕದನ ಇಂದಿನಿಂದ ರಂಗೇರಲಿದೆ. ತೀರ ಪ್ರಯಾಸದಿಂದ ಮೂರು ಪಕ್ಷಗಳು ಮಂಡ್ಯ, ಶಿವಮೊಗ್ಗ, ರಾಮನಗರ, ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಇಂದು ಕೆಲ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

    ಗಣಿದಣಿಗಳ ಕೋಟೆ ಬಳ್ಳಾರಿಯಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಆಯ್ಕೆ ಆಗಿಲ್ಲ. ಸಿದ್ದರಾಮಯ್ಯ ಒಲವು ವಿಎಸ್ ಉಗ್ರಪ್ಪ ಪರ ಇದ್ದರೆ, ನಾಗೇಂದ್ರ ತಮ್ಮ ಸೋದರ ವೆಂಕಟೇಶ್ ಪ್ರಸಾದ್‍ಗೆ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿದ್ದಾರೆ. ಇತ್ತ ಜಾರಕಿಹೊಳಿ ಬ್ರದರ್ಸ್ ಒಲವು ಸಂಬಂಧಿ ದೇವೇಂದ್ರಪ್ಪ ಪರ ಇದೆ. ಯಾವುದೇ ಕ್ಷಣದಲ್ಲಿ ಕೈ ಅಭ್ಯರ್ಥಿ ಹೆಸರು ಘೋಷಣೆ ಆಗೋ ಸಾಧ್ಯತೆ ಇದೆ.

    ಇತ್ತ ಬಳ್ಳಾರಿ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜೆ ಶಾಂತಾ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದು, ಟಿಕೆಟ್ ಆಕ್ಷಾಂಕಿಯಾಗಿದ್ದ ಡಾ. ಶ್ರೀನಿವಾಸ್ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂಬವುದು ಈ ಕೆಳಗಿನಂತಿದೆ.

    * ರಾಮನಗರ ವಿಧಾನಸಭಾ ಕ್ಷೇತ್ರ
    ಅನಿತಾ ಕುಮಾರಸ್ವಾಮಿ, ಜೆಡಿಎಸ್ V/S ಎಲ್.ಚಂದ್ರಶೇಖರ್, ಬಿಜೆಪಿ

    * ಶಿವಮೊಗ್ಗ ಲೋಕಸಭಾ ಕ್ಷೇತ್ರ
    ಮಧು ಬಂಗಾರಪ್ಪ, ಜೆಡಿಎಸ್ V/S ಬಿ.ವೈ ರಾಘವೇಂದ್ರ, ಬಿಜೆಪಿ

    * ಮಂಡ್ಯ ಲೋಕಸಭಾ ಕ್ಷೇತ್ರ
    ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ V/S ಡಾ.ಸಿದ್ದರಾಮಯ್ಯ, ಬಿಜೆಪಿ

    * ಜಮಖಂಡಿ ವಿಧಾನಸಭಾ ಕ್ಷೇತ್ರ
    ಆನಂದ ನ್ಯಾಮಗೌಡ, ಕಾಂಗ್ರೆಸ್ V/S ಶ್ರೀಕಾಂತ್ ಕುಲಕರ್ಣಿ, ಬಿಜೆಪಿ

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ತಮ್ಮ ಪತಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಜೊತೆ ಆಗಮಿಸಿ, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 1.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಜೆಪಿಯ ಚಂದ್ರಶೇಖರ್ ಬೆಳಗ್ಗೆ 10 ಗಂಟೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ಮಾಜಿ ಡಿಸಿಎಂ ಅಶೋಕ್, ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಾಥ್ ನೀಡಲಿದ್ದಾರೆ.

    ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬಿ. ವೈ. ರಾಘವೇಂದ್ರ ಬೆಳಗ್ಗೆ 9.15ಕ್ಕೆ ಹರಕೆರೆಥಿ ಶ್ರೀರಾಮೇಶ್ವರ ದೇವಸ್ಥಾನ, ಬೆಳಗ್ಗೆ 9.30ಕ್ಕೆ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ, ಬೆಳಗ್ಗೆ 9.45ಕ್ಕೆ ತಿಪ್ಪಾಜೋಯ್ಸ್ ಕಲೋನಿಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ. ಮಧು ಬಂಗಾರಪ್ಪ ಕೂಡ ಮಧ್ಯಾಹ್ನ 12 ಗಂಟೆ ಸುಮಾರಿಗೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಇದೆ.

    ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯದಲ್ಲಿ ಜೆಡಿಎಸ್‍ನ ಶಿವರಾಮೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವರಾಮೇಗೌಡ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv