Tag: Karnataka By Election

  • ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಸದ್ದು- ಹೂಡಿಕೆದಾರರಿಂದ ಅಸ್ತ್ರ ಪ್ರಯೋಗ

    ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಸದ್ದು- ಹೂಡಿಕೆದಾರರಿಂದ ಅಸ್ತ್ರ ಪ್ರಯೋಗ

    ಬೆಂಗಳೂರು: ಶಿವಾಜಿನಗರ ಉಪ ಚುನಾವಣೆಯಲ್ಲಿ ಐಎಂಎ ಹಗರಣ ಸದ್ದು ಮಾಡುತ್ತಿದ್ದು, ಹೂಡಿಕೆದಾರರು ಎಲೆಕ್ಷನ್ ನಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.

    ಎಲ್ಲಾ ಪಕ್ಷಗಳ ಮುಖಂಡರುಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ. ಉಪಚುನಾವಣೆ ರಂಗು ಪಡೆದುಕೊಂಡಿರುವ ಶಿವಾಜಿ ನಗರದಲ್ಲಿ ಜನರ ಆಕ್ರೋಶ ಕಟ್ಟೆಯೊಡೆದಿದ್ದು, ಅಭ್ಯರ್ಥಿಗಳ ವಿರುದ್ಧ ಸಿಡಿದೆದಿದ್ದಾರೆ. ಕಳೆದ ಆರೇಳು ತಿಂಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಐಎಂಎ ಪ್ರಕರಣ ಈಗ ಮತ್ತೆ ಸದ್ದು ಮಾಡುತ್ತಿದೆ.

    ಈ ಪ್ರಕರಣದಲ್ಲಿ ಮೋಸಕ್ಕೆ ಒಳಗಾದ ಹೂಡಿಕೆದಾರರಿಗೆ ಇದುವರೆಗೂ ಯಾವ ಸರ್ಕಾರ ಹಾಗೂ ಯಾವೊಬ್ಬ ಅಭ್ಯರ್ಥಿಗಳು ನ್ಯಾಯ ಕೊಡಿಸಿಲ್ಲ. ನಮಗೆ ಅನ್ಯಾಯವಾಗಿದೆ. ಹೀಗಾಗಿ ಕೆಲ ಮತದಾರರು ಈ ಸಲ ನಮ್ಮ ವೋಟ್ ನೋಟಾಗೆ ಅಂದರೆ, ಮತ್ತೇ ಕೆಲವರು ನಮಗೆ ಎಲೆಕ್ಷನ್ ಬೇಡ ಯಾರಿಗೂ ವೋಟ್ ಹಾಕಲ್ಲ ಎಂದು ಹೇಳುತ್ತಿದ್ದಾರೆ.

    ಐಎಂಎನಲ್ಲಿ ಸುಮಾರು 63 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿದ್ದು, ಇವರಲ್ಲಿ ಅತಿ ಹೆಚ್ಚು ಶಿವಾಜಿನಗರದ ಸ್ಥಳೀಯರೇ ಇದ್ದಾರೆ. ಅದರಲ್ಲೂ ಶೇಕಡ 60 ರಿಂದ 70ರಷ್ಟು ಮುಸ್ಲಿಂ ಸಮುದಾಯದವರೇ ಹೆಚ್ಚು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಶಿವಾಜಿನಗರದ ಅಭ್ಯರ್ಥಿಗಳಿಗೆ ಐಎಂಎ ದೊಡ್ಡ ತಲೆ ಬಿಸಿಯಾಗಿದೆ. ಇನ್ನೂ ಕೆಲವರು ಐಎಂಎ ಆಸ್ತ್ರವನ್ನ ಪ್ರಣಾಳಿಕೆಯನ್ನಾಗಿಸಿಕೊಂಡು ಮತ ಪಡೆಯಲು ಮುಂದಾಗಿದ್ದಾರೆ. ಉಪಚುನಾವಣೆಯ ಮತದಾನಕ್ಕೆ ಎರಡು ದಿನಗಳಿವೆ. ಈ ಬೆನ್ನಲ್ಲೆ ಐಎಂಎ ನಲ್ಲಿ ಹಣ ಹೂಡಿದ ಜನರು ಚುನಾವಣೆಯಲ್ಲಿ ‘ನೋಟಾ’ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

  • ಕೆ.ಆರ್ ಪೇಟೆಯಲ್ಲಿ ‘ಒಕ್ಕಲಿಗ’ ಮತಗಳತ್ತ ಎಲ್ಲರ ಚಿತ್ತ

    ಕೆ.ಆರ್ ಪೇಟೆಯಲ್ಲಿ ‘ಒಕ್ಕಲಿಗ’ ಮತಗಳತ್ತ ಎಲ್ಲರ ಚಿತ್ತ

    -ಬಿಜೆಪಿಯಿಂದ ಪ್ರತಿ ಜಾತಿಗೊಂದು ಸಮಾವೇಶ

    ಮಂಡ್ಯ: ಉಪಚುನಾವಣೆ ನಡೆಯುತ್ತಿರುವ ಕೆ.ಆರ್.ಪೇಟೆಯಲ್ಲಿ ಒಕ್ಕಲಿಗರ ಪ್ರ್ರಾಬಲ್ಯ ಹೆಚ್ಚಿದೆ. ಹೀಗಾಗಿ ರಾಜಕೀಯ ಪಕ್ಷಗಳು ಒಕ್ಕಲಿಗರ ಮತಗಳ ಬೇಟೆಗೆ ಮುಂದಾಗಿವೆ. ಆದರೆ ಬಿಜೆಪಿ ಒಕ್ಕಲಿಗರ ಜೊತೆ ಜೊತೆಗೆ ಸಣ್ಣ ಸಮುದಾಯದ ಮತಗಳನ್ನು ಸೆಳೆಯಲು ಪ್ರಯತ್ನ ಮಾಡುತ್ತಿದೆ.

    ಉಪಚುನಾವಣೆಗೆ ಇವತ್ತು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳುತ್ತಿದ್ದು, ಎಲ್ಲಾ 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಕೊನೆ ಕಸರತ್ತು ಜೋರಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ರಣಕಣದಲ್ಲಿ ಮೂರು ಪಕ್ಷಗಳು ತಮ್ಮ ಅಭ್ಯರ್ಥಿ ಗೆಲುವಿಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಿವೆ. ಅತೀ ಹೆಚ್ಚು ಅಂದ್ರೆ 95 ಸಾವಿರ ಇರುವ ಒಕ್ಕಲಿಗ ಮತಗಳ ಮೇಲೆ ಎಲ್ಲರ ಕಣ್ಣು ಇದೆ. ಈ ಸಮುದಾಯದ ಮತಗಳನ್ನು ಪಡೆಯಬೇಕೆಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪೈಪೋಟಿಗೆ ಬಿದ್ದು ಒಕ್ಕಲಿಗ ಸಮುದಾಯದ ಮತಗಳ ಬೇಟೆಗೆ ನಿಂತಿವೆ.

    ಈ ಎರಡು ಪಕ್ಷಗಳಿಗಿಂತ ವಿಭಿನ್ನ ಎಂಬಂತೆ ಬಿಜೆಪಿ ಒಕ್ಕಲಿಗ ಸಮುದಾಯದ ಜೊತೆ ಈ ಕ್ಷೇತ್ರದಲ್ಲಿ ಇರುವ ಕುರುಬ, ಕುಂಬಾರ, ದಲಿತ, ಈಡಿಗ, ಲಿಂಗಾಯಿತ, ಬ್ರಾಹ್ಮಣ, ಮಡಿವಾಳ, ಶೆಟ್ಟರು, ವಿಶ್ವಕರ್ಮ ಅಲ್ಲದೇ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮ ಸೇರಿದಂತೆ ಇತರೆ ಸಣ್ಣ ಸಮುದಾಯದ ಮತಗಳನ್ನು ಸಂಪೂರ್ಣವಾಗಿ ತಮ್ಮ ಕಡೆ ಸೆಳೆಯಬೇಕೆಂದು ತಂತ್ರಗಾರಿಕೆ ರಚಿಸಿಕೊಂಡಿವೆ.

    ಒಕ್ಕಲಿಗ ಸಮುದಾಯದ ಮತಗಳನ್ನು ಶೇಕಡ 20ರಷ್ಟು ಪಡೆಯುವುದರ ಜೊತೆ ಸಣ್ಣ ಸಮುದಾಯದ ಎಲ್ಲಾ ಮತಗಳನ್ನು ಪಡೆದರೆ ಗೆಲುವು ನಿಶ್ಚಿತ ಎಂಬುವುದು ಬಿಜೆಪಿಯ ಲೆಕ್ಕಾಚಾರ. ಇದರ ಜೊತೆ ಒಕ್ಕಲಿಗ ಸಮುದಾಯದಲ್ಲಿ ಇರುವ ಉಪ ಜಾತಿಗಳ ಮತಗಳನ್ನು ಪಡೆಯುವುದು ಬಿಜೆಪಿಯ ಮೊದಲ ಆದ್ಯತೆ ಆಗಿದೆ. ಹೀಗಾಗಿ ಬಿಜೆಪಿ ಪ್ರತಿನಿತ್ಯ ಆಯಾ ಜಾತಿಗಳ ಮುಖಂಡರನ್ನು ಕರೆಸಿ, ಸಣ್ಣ ಸಣ್ಣ ಸಮುದಾಯಗಳ ಸಮಾವೇಶ ನಡೆಸಿ ಅವರುಗಳನ್ನು ಬಿಜೆಪಿ ಕಡೆ ವಾಲುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಆಯಾ ಜಾತಿಗಳ ನಾಯಕರುಗಳು ಕ್ಷೇತ್ರದಲ್ಲಿ ಆಯಾ ಸಮುದಾಯದ ಜನರನ್ನು ನಾರಾಯಣಗೌಡ ಅವರಿಗೆ ಮತ ಹಾಕುವಂತೆ ಅಬ್ಬರದ ಪ್ರಚಾರ ನಡೆಸಿದ್ದಾರೆ.

    ಒಟ್ಟಾರೆ ಬಿಜೆಪಿ ಒಕ್ಕಲಿಗರ ಸಮುದಾಯದ ಮತಗಳ ಜೊತೆಗೆ ಇತರೆ ಸಣ್ಣ ಜಾತಿ-ಧರ್ಮಗಳ ಮತಗಳನ್ನು ಸೆಳೆಯುವ ಮೂಲಕ, ಜೆಡಿಎಸ್-ಕಾಂಗ್ರೆಸ್ ಭದ್ರ ಕೋಟೆಯನ್ನು ಭೇದಿಸಲು ಮಾಸ್ಟರ್‍ಪ್ಲಾನ್ ಮಾಡಿದೆ. ಈ ಸ್ಟಾಟರ್ಜಿ ಬಿಜೆಪಿಗೆ ಎಷ್ಟರ ಮಟ್ಟಿಗೆ ವರದಾನವಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

  • ಕೈ ಪಡೆ ಪ್ಲ್ಯಾನ್-ವೈರಿಗಳ ವೈರಿಗಳನ್ನು ಮಿತ್ರರನ್ನಾಗಿಸಿಕೊಂಡ ಕಾಂಗ್ರೆಸ್

    ಕೈ ಪಡೆ ಪ್ಲ್ಯಾನ್-ವೈರಿಗಳ ವೈರಿಗಳನ್ನು ಮಿತ್ರರನ್ನಾಗಿಸಿಕೊಂಡ ಕಾಂಗ್ರೆಸ್

    -ಆನಂದ್ ಸಿಂಗ್‍ಗೆ ಮುಳುವಾಗ್ತಾರಾ ರೆಡ್ಡಿ & ಟೀಂ?

    ಬಳ್ಳಾರಿ: ವಿಜಯನಗರ ಉಪ ಕದನ ದಿನೇ ದಿನೇ ರಂಗೇರುತ್ತೆ ಇಂದು ಒಂದು ದಿನಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶ ಇದೆ. ಹೀಗಾಗಿ ಇಂದು ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರಕ್ಕೆ ಮುಂದಾಗಿವೆ. ಆನಂದ್ ಸಿಂಗ್ ಅವರನ್ನು ಕಟ್ಟಿ ಹಾಕಲು ಕೈ ಪಡೆ ವೈರಿಗಳ ವೈರಿಗಳು ಮಿತ್ರರು ಎನ್ನುವ ಪ್ಲ್ಯಾನ್ ಗೆ ಕಾಂಗ್ರೆಸ್ ಕೈ ಹಾಕಿದೆ.

    ಹದಿನೈದು ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಉಪ ಕದನದಲ್ಲಿ ವಿಜಯನಗರ ಕ್ಷೇತ್ರ ಕೊಂಚ ಭಿನ್ನವಾಗಿದೆ. ಯಾಕಂದ್ರೆ ಆನಂದ್ ಸಿಂಗ್ ವಿರುದ್ಧ ಹೋರಾಡಲು ಕಾಂಗ್ರೆಸ್ ಬಳಿ ಕದನ ಕಲಿಗಳೇ ಸಿಗಲಿಲ್ಲ. ಹೀಗಾಗಿ ಅವರು ಹೊಸಪೇಟೆಯ ಪಕ್ಕದ ಸಂಡೂರು ರಾಜಮನೆತನದ ವೆಂಕಟರಾಮ್ ಘೋರ್ಪಡೆ ಅವರನ್ನು ಕಣಕ್ಕೆ ಇಳಿಸಿದೆ. ಹೀಗಾಗಿ, ಕಾಂಗ್ರೆಸ್ ವೈರಿಗಳ, ವೈರಿಗಳನ್ನು ಮಿತ್ರರನ್ನಾಗಿ ಮಾಡಿಕೊಂಡು ಚುನಾವಣಾ ರಣತಂತ್ರ ರೂಪಿಸಿದೆ.

    ಆನಂದ್ ಸಿಂಗ್ ಜೊತೆಯಲ್ಲಿ ಕಾಂಗ್ರೆಸ್ ಬಿಟ್ಟು ಕಮಲ ಮುಡಿಯಲು ಮುಂದಾಗಿದ್ದ ಅನಿಲ್ ಲಾಡ್‍ರನ್ನು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್‍ಗೆ ಸೆಳೆದು ಆನಂದ್ ಸಿಂಗ್ ವಿರುದ್ಧ ಪ್ರಚಾರಕ್ಕೆ ಇಳಿಸಿದೆ. ಆನಂದ್ ಸಿಂಗ್ ಅವರು ನನಗೆ ಮೋಸ ಮಾಡಿದ್ರು ಅವರನ್ನು ನಂಬಿ ನಾ ಕೆಟ್ಟೆ ಎನ್ನುವ ರೀತಿಯಲ್ಲಿ ಅನಿಲ್ ಲಾಡ್ ತಮ್ಮ ಹತಾಶ ಮಾತುಗಳನ್ನು ಆಡಿದ್ದಾರೆ. ಮೂರು ಚುನಾವಣೆಯಲ್ಲಿ ಆನಂದ್ ಸಿಂಗ್ ವಿರುದ್ಧ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ದೀಪಕ್ ಸಿಂಗ್ ಅವರನ್ನು ಕಾಂಗ್ರೆಸ್ ತನ್ನತ್ತ ಸೆಳೆದಿದೆ. ಜೊತೆಗೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಆನಂದ್ ಸಿಂಗ್ ವಿರುದ್ಧ ಪ್ರಚಾರ ಮಾಡಿಸಿದೆ.

    ಇತ್ತ ಬಳ್ಳಾರಿ ಜಿಲ್ಲಾ ವಿಭಜನೆ ವಿಷಯವಾಗಿ ರೆಡ್ಡಿ ಅಂಡ್ ಟೀಂಗೂ ಆನಂದ್ ಸಿಂಗ್ ಅವರಿಗೂ ಮೊದಲಿನಿಂದಲೂ ವಿರೋಧ ಇದೆ. ಹೀಗಾಗಿ ಆನಂದ್ ಸಿಂಗ್ ಪರ ರೆಡ್ಡಿ ಅಂಡ್ ಟೀಮ್ ಕೆಲಸ ಮಾಡ್ತಿಲ್ಲ. ಇನ್ನು ಆನಂದ್ ಸಿಂಗ್‍ಗೆ ಟಿಕೆಟ್ ನೀಡಿದ್ದಕ್ಕೆ ಜಿಲ್ಲೆಯ ಕೆಲ ಬಿಜೆಪಿ ನಾಯಕರು ಬಹಿರಂಗವಾಗಿ ತಮ್ಮ ಅಭಿಪ್ರಾಯ ಹೇಳದೆ ಇದ್ರು ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಜೊತೆಗೆ ಕಳೆದ ಸಾರಿ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿ, ಕೇವಲ 8 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಕ್ಷೇತ್ರದ ಮತ್ತೊಬ್ಬ ಪ್ರಭಾವಿ ನಾಯಕ ಗವಿಯಪ್ಪಾ ಅವರು ಪ್ರಚಾರದಿಂದ ದೂರವೇ ಇದ್ದಾರೆ.

    ಆನಂದ್ ಸಿಂಗ್ ಸಹೋದರಿ ಸಂಯುಕ್ತ ರಾಣಿ ಸಹ, ಅಸಮಾಧಾನ ಹೊರಹಾಕಿದ್ದು ಪ್ರಚಾರದಿಂದ ದೂರವೇ ಇದ್ದಾರೆ. ಹೀಗಾಗಿ ಆನಂದ್ ಸಿಂಗ್‍ಗೆ ಕೇವಲ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯಲ್ಲಿಯೂ ಗೆಲುವು ಬಯಸದೇ ಇರುವವರು ಇದ್ದಾರೆ ಎನ್ನಲಾಗುತ್ತಿದೆ.

  • ಸುಧಾಕರ್ ಊಸರವಳ್ಳಿ, ನಯವಂಚಕನಿಗೆ ಟಿಕೆಟ್ ನೀಡಿ ತಪ್ಪು ಮಾಡಿದೆ: ಸಿದ್ದರಾಮಯ್ಯ

    ಸುಧಾಕರ್ ಊಸರವಳ್ಳಿ, ನಯವಂಚಕನಿಗೆ ಟಿಕೆಟ್ ನೀಡಿ ತಪ್ಪು ಮಾಡಿದೆ: ಸಿದ್ದರಾಮಯ್ಯ

    ಬೆಂಗಳೂರು: ಬಿಜೆಪಿ ಅಭ್ಯರ್ಥಿ ಸುಧಾಕರ್ ಊಸರವಳ್ಳಿಯಾಗಿದ್ದು, ಇಂತಹ ನಯವಂಚಕನಿಗೆ ಟಿಕೆಟ್ ನೀಡಿ ತಪ್ಪು ಮಾಡಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಉಪಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ವಾಕ್ಸಮರ ಜೋರಾಗಿದೆ. ಬಹಿರಂಗ ಸಮಾವೇಶ ಮತ್ತು ರೋಡ್ ಶೋಗಳ ಮೂಲಕ ಎದುರಾಳಿಗಳನ್ನು ಟೀಕಿಸುತ್ತಿದ್ದಾರೆ. ಸಾಲು ಸಾಲು ಟ್ವೀಟ್‍ಗಳನ್ನು ಮಾಡುವ ಮೂಲಕ ಸುಧಾಕರ್ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್: 
    2013ರಲ್ಲಿ ಆಂಜನಪ್ಪನವರಿಗೆ ಟಿಕೆಟ್ ನೀಡುವ ಬದಲು ಸುಧಾಕರ್‍ಗೆ ನೀಡಿದ್ದೆ, ಒಂದುವೇಳೆ ಆಗಲೇ ಆಂಜನಪ್ಪಂಗೆ ಟಿಕೆಟ್ ನೀಡಿದ್ದರೆ ಅವರು ಶಾಸಕರೂ ಆಗಿರುತ್ತಿದ್ದರು ಮತ್ತು ಕ್ಷೇತ್ರ ಇಂದು ಉಪಚುನಾವಣೆ ಎದುರಿಸುವಂತಹ ಸ್ಥಿತಿಯೂ ಬರುತ್ತಿರಲಿಲ್ಲ. ಎಂಥಾ ನಯವಂಚಕನಿಗೆ ಟಿಕೆಟ್ ನೀಡಿದೆನಲ್ಲಾ ಅಂತ ಈಗ ಪಶ್ಚಾತಾಪವಾಗುತ್ತಿದೆ. ಸುಧಾಕರ್ ಒಂಥರ ಊಸರವಳ್ಳಿ ಇದ್ದಂಗೆ. ಜಾತ್ಯಾತೀತರ ಜೊತೆ ಇದ್ದಾಗ ಅವರಂತೆ, ಕೋಮುವಾದಿಗಳ ಜೊತೆಯಿದ್ದಾಗ ಅವರಂತೆ ಬಣ್ಣ ಬದಲಾಯಿಸುತ್ತಾರೆ. ಇವತ್ತೇನಾದರೂ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಿದ್ದರೆ ಅದರ ಕಿಂಗ್‍ಪಿನ್ ಈ ಸುಧಾಕರ್. ‘ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತ್ತಂತೆ’ ಹಾಗೆ ಇದು.

    ಬೆಳಗ್ಗೆ 9 ಗಂಟೆಗೆ ರಾಜೀನಾಮೆ ವಾಪಾಸು ತಗೋತೀನಿ ಅಂತ ರಾತ್ರಿ ನನಗೆ ಮಾತು ಕೊಟ್ಟು, ಮುಂಜಾನೆ 6 ಗಂಟೆಗೆ ಕದ್ದು ಮುಂಬೈ ಓಡಿಹೋದ ಆಸಾಮಿ ಈ ಸುಧಾಕರ್. ಇಂಥವರನ್ನು ನಯಾಪೈಸೆಗೂ ನಂಬಬೇಡಿ. ಸದಾ ಇವರ ಒಳ್ಳೆಯದನ್ನೇ ಬಯಸಿದ ನಮ್ಮ ಬೆನ್ನಿಗೇ ಚೂರಿ ಹಾಕಿದವರು ಇನ್ನು ಕ್ಷೇತ್ರದ ಅಮಾಯಕ ಜನರನ್ನು ಬಿಟ್ಟಾರೆಯೇ? 2016-17ರ ಬಜೆಟ್‍ನಲ್ಲಿ ರಾಜ್ಯದ ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದ್ದು ನಮ್ಮ ಸರ್ಕಾರ. ಹಾಗಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗುತ್ತಿದೆ. ಅಂದಿನ ಬಜೆಟ್ ಮಂಡಿಸಿದ್ದು ನಾನು, ಆರ್ಥಿಕ ಸಚಿವ ನಾನು, ಮುಖ್ಯಮಂತ್ರಿ ನಾನು. ಇದರಲ್ಲಿ ನಿಮ್ಮ ಸಾಧನೆ ಏನಿದೆ ಮಿಸ್ಟರ್ ಸುಧಾಕರ್?

    ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ. ನಾನು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯ್ಲಿ, ಶಿವಶಂಕರ್ ರೆಡ್ಡಿ ಇವರೆಲ್ಲರ ಸಹಕಾರದಿಂದ ಯೋಜನೆ ಜಾರಿ ಮಾಡಿದ್ದೆ. ಕುಡಿಯಲು ನೀರು ಕೊಟ್ಟವರಿಗೆ ಮೋಸಮಾಡಿ, ಯೋಜನೆಗೆ ವಿರೋಧ ಮಾಡಿದ್ದ ಬಿಜೆಪಿ ಜೊತೆ ಈಗ ಸುಧಾಕರ್ ಕೈಜೋಡಿಸಿದ್ದಾರೆ.

  • ನಂದಿ ಚೆಕ್‍ಪೋಸ್ಟ್ ಬಳಿ ಸಿದ್ದರಾಮಯ್ಯ ಕಾರ್ ತಪಾಸಣೆ

    ನಂದಿ ಚೆಕ್‍ಪೋಸ್ಟ್ ಬಳಿ ಸಿದ್ದರಾಮಯ್ಯ ಕಾರ್ ತಪಾಸಣೆ

    -ಇಲ್ಲೇನಿದೆ ಮಣ್ಣಂಗಟ್ಟಿ, ಅಲ್ಲಿ ಹೋಗಿ ಹಿಡಿರಿ

    ಚಿಕ್ಕಬಳ್ಳಾಪುರ: ಚುನಾವಣಾ ಅಧಿಕಾರಿಗಳು ನಂದಿ ಚೆಕ್‍ಪೋಸ್ಟ್ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರ್ ತಪಾಸಣೆ ನಡೆಸಿದರು.

    ಚಿಕ್ಕಬಳ್ಳಾಪುರ ಉಪಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಆಗಮಿಸಿದ್ದರು. ಚೆಕ್‍ಪೋಸ್ಟ್ ಬಳಿ ಅಧಿಕಾರಿಗಳು ತಡೆದು ಕಾರ್ ಪರಿಶೀಲನೆ ನಡೆಸಬೇಕೆಂದು ಹೇಳಿದರು. ಇದೇ ರೀತಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಕಾರ್ ಚೆಕ್ ಮಾಡಿದ್ದೀರಾ, ಯಾವುದಾದ್ರೂ ಹಣ ಸಿಕ್ಕಿದೆಯಾ ಎಂದು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಮತ್ತು ಚುನಾವಣಾಧಿಕಾರಿ ನಡುವೆ ನಡೆದ ಸಂಭಾಷಣೆ ಹೀಗಿದೆ.

    ಚುನಾವಣಾಧಿಕಾರಿ:  ಸರ್ ಎಲೆಕ್ಷನ್ ಡ್ಯೂಟಿ.. ತಪಾಸಣೆ ಮಾಡ್ಬೇಕು.
    ಸಿದ್ದರಾಮಯ್ಯ: ಅಯ್ಯೋ ಮಾಡೋ ಮಾರಾಯ.. ಏಯ್ ಮಾಡ್ರೀ.
    ಸಿದ್ದರಾಮಯ್ಯ: ಯಾರದ್ದಾದ್ರೂ ಹಿಡಿದಿದ್ದೀರಾ ಇದಕ್ಕೂ ಮುಂಚೆ..?
    ಚುನಾವಣಾಧಿಕಾರಿ: ಹೌದು ಸರ್ 5 ಲಕ್ಷ ರೂಪಾಯಿ ಮೊನ್ನೆ ಸೀಜ್ ಮಾಡಿದ್ದೀವಿ..
    ಸಿದ್ದರಾಮಯ್ಯ: ಯಾರದು?
    ಚುನಾವಣಾಧಿಕಾರಿ: ಯಾರೋ ಗ್ರಾನೈಟ್ ಅವರದ್ದು ಸರ್.. ತಗೊಂಡು ಹೋಗ್ತಿದ್ರು.
    ಸಿದ್ದರಾಮಯ್ಯ: ಅಂಥವರದ್ದು ಹಿಡಿದ್ರೇ ಏನ್ ಪ್ರಯೋಜನ ರೀ.. ಸುಧಾಕರ್‍ದು ಯಾವಾದಾದ್ರೂ ಹಿಡಿದಿದ್ದೀರಾ..?
    ಚುನಾವಣಾಧಿಕಾರಿ: ಇಲ್ಲ ಸರ್. ಅಂಥದ್ದು ಯಾವುದು ಬಂದಿಲ್ಲ ಸರ್..
    ಸಿದ್ದರಾಮಯ್ಯ: ಅಲ್ಲಿ ಹಿಡೀರಿ ಹೋಗಿ ಅಂದ್ರೆ ಇಲ್ಲಿ ಬಂದಿದ್ದೀರಿ.. ನಡಿ ನಡಿ.. ಇಲ್ಲಿ ಏನ್ ಇದ್ದದ್ದು.. ಮಣ್ಣಂಗಟ್ಟಿ.

    ತದನಂತರ ಮಂಚನಬಲೆ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಪರ ಮತಯಾಚಿಸಿದರು. ಮಂಚನಬಲೆ ಗ್ರಾಮಸ್ಥರು ಸಿದ್ದರಾಮಯ್ಯರಿಗೆ ಹೂ ಮಳೆ ಸುರಿಸುವ ಮೂಲಕ ಬರಮಾಡಿಕೊಂಡು, ಕುರಿಯನ್ನು ಕಾಣಿಕೆಯಾಗಿ ನೀಡಿದರು.

  • ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್-ಮೈತ್ರಿಯ ಸುಳಿವು ನೀಡಿದ ಖರ್ಗೆ

    ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್-ಮೈತ್ರಿಯ ಸುಳಿವು ನೀಡಿದ ಖರ್ಗೆ

    ಬೆಂಗಳೂರು: ಡಿಸೆಂಬರ್ 9ರ ಬಳಿಕ ಗುಡ್‍ನ್ಯೂಸ್ ನೀಡುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೈತ್ರಿಯ ಸುಳಿವು ನೀಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ. ಇತ್ತೀಚೆಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರದ ದುರುಪಯೋಗ ನಡೆದಿದೆ. ಪ್ರತಿಯೊಂದು ಚುನಾವಣೆಗಳಲ್ಲಿ ಅಧಿಕಾರವನ್ನ ದುರುಪಯೋಗ ಮಾಡಿಕೊಂಡು ಅಭ್ಯರ್ಥಿಗಳಿಗೆ ಹೆದರಿಸಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಹೋಗಿರುವ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಸೋಲುತ್ತಾರೆ. ಅನರ್ಹರಿಗೆ ರಾಜ್ಯದ ಜನರು ಬುದ್ಧಿ ಕಲಿಸಲಿದ್ದಾರೆ. ಎನ್‍ಸಿಪಿ ಮತ್ತು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಸ್ಪರ್ಧೆ ಮಾಡಿದ್ದ ಶೇ.79ರಷ್ಟು ಅಭ್ಯರ್ಥಿಗಳು ಸೋತಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿಯೂ ಪಕ್ಷಾಂತರಿಗಳಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

    ಉಪಚುನಾವಣೆ ಕರ್ನಾಟಕಕ್ಕೆ ಮಾತ್ರವಲ್ಲ, ಬೇರೆ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಕ್ಷುಲ್ಲಕ ಕಾರಣಗಳಿಗಾಗಿ ಪಕ್ಷ ಬಿಟ್ಟು ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹೆಚ್ಚಿನ ಕೆಲಸ ಪಡೆದವರೇ ಈ ರೀತಿ ಕೆಲಸ ಆಗಿಲ್ಲ ಅಂತಾ ಮಾತನಾಡಿ ಹೋಗಿದ್ದಾರೆ. ಅದಕ್ಕೆ ಏನ್ ಹೇಳಬೇಕು ಹೇಳಿ. ನಾನು ಕೂಡ ಇನ್ನೆರಡ್ಮೂರು ದಿನ ಪ್ರಚಾರ ಮಾಡ್ತೀನಿ, ಸತ್ಯವನ್ನ ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

    ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಪ್ರಶ್ನಿಸಿದಾಗ ಡಿಸೆಂಬರ್ 9ರವರೆಗೂ ತಾಳ್ಮೆಯಿಂದಿರಿ. ನಂತರ ಗುಡ್‍ನ್ಯೂಸ್ ನೀಡುತ್ತೇವೆ. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಪ್ರಚಾರ ವಿಚಾರದ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಮುಂದೆ ಸಿಎಂ ಯಾರು? ನಾಯಕತ್ವದ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ. ಈಗ ಕಾಂಗ್ರೆಸ್ ರಿಯಾಲಿಟಿ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದೆ. ಪ್ರತಿ ಸಾರಿ ನಾನು ಸಿಎಂ, ಎಐಸಿಸಿ ಅಧ್ಯಕ್ಷ ಎಂದು ಹೇಳಿಯೇ ನನ್ನ ಹೀಗೆ ಮಾಡಿ ಕೂರಿಸಿದ್ದೀರಾ ಎಂದು ಖರ್ಗೆ ಹಾಸ್ಯ ಚಟಾಕಿ ಹಾರಿಸಿದರು.

    ಹಣ ಬಲದ ಮೇಲೆ ಬಿಜೆಪಿ ಚುನಾವಣೆ ಗೆಲ್ಲುವ ಪ್ರಯತ್ನ ಸಾಕಷ್ಟು ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ಕೆಲವು ಸಹ ಯಶಸ್ವಿಯಾಗಿದ್ದಾರೆ. ಹಣ ನಡೆಯಲಿಲ್ಲ ಅಂದ್ರೆ ಧರ್ಮ ಜಾತಿ ಮಾತುಗಳನ್ನಾಡಿ ಜನರನ್ನ ಭಾವುಕರನ್ನಾಗಿ ಮಾಡಿ ಸಿಂಪಥಿ ಮೂಲಕ ಮತ ಪಡೆಯಲು ಮುಂದಾಗುತ್ತಾರೆ. ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಹಣದ ಹೊಳೆ ಹರಿಯುತ್ತೆ ಎಂದು ಬಿಜೆಪಿಯವರು ಪ್ರಚಾರ ಮಾಡಿದರು. ನೆರೆ ಹಾನಿಗೆ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಪ್ರಧಾನಿಗಳಾದ ಮೋದಿ ಅವರು ಕರ್ನಾಟಕಕ್ಕೇ ಬರಲಿಲ್ಲ. ಕರ್ನಾಟಕವನ್ನು ಮೂಸಿಯೂ ನೋಡಲಿಲ್ಲ. ಪ್ರಧಾನಿಗಳು ಯಡಿಯೂರಪ್ಪರ ಮೇಲಿನ ಸಿಟ್ಟನ್ನು ಕರ್ನಾಟಕದ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಪ್ರವಾಹಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಹಣ ತರಲು ರಾಜ್ಯದ ಬಿಜೆಪಿ ನಾಯಕರು ಪ್ರಯತ್ನಿಸಲಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಬರೀ ಸರ್ಕಾರವನ್ನ ಹೇಗೆ ಉಳಿಸಿಕೊಳ್ಳಬೇಕು ಅನ್ನೋದ್ರಲ್ಲೇ ತೊಡಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಂವಿಧಾನ ಉಳಿಸುವುದಕ್ಕೋಸ್ಕರ ಮೈತ್ರಿ ಪಕ್ಷಗಳ ಜತೆ ಮಾತುಕತೆಗೆ ಸಿದ್ಧವಾಗಿದ್ದೇವೆ. ಮಹಾರಾಷ್ಟ್ರದಲ್ಲಿ ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆ ಹೊಂದಾಣಿಕೆಗೆ ನಮ್ಮ ಅಧ್ಯಕ್ಷರಿಗೆ ಇಷ್ಟ ಇರಲಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದ್ದರು. ಆದರೆ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕೆಂದು ಬಹುತೇಕ ಪಕ್ಷಗಳು ಮನವಿ ಮಾಡಿದ್ದವು. ಸಂವಿಧಾನ ಉಳಿವಿವಾಗಿ ಯುಪಿಎ ಮೈತ್ರಿಕೂಟದ ಪಕ್ಷಗಳು ಒಟ್ಟಾಗಿ ಹೋಗುತ್ತೇವೆ ಎಂದು ತಿಳಿಸಿದರು.

    https://www.youtube.com/watch?v=_U7Ge3cF018

  • ಗೋಕಾಕ್ ಅಖಾಡಕ್ಕೆ ಡಿಕೆಶಿ ಎಂಟ್ರಿ ಆಗ್ತಾರಾ? ಹೆಬ್ಬಾಳ್ಕರ್ ಉತ್ತರ

    ಗೋಕಾಕ್ ಅಖಾಡಕ್ಕೆ ಡಿಕೆಶಿ ಎಂಟ್ರಿ ಆಗ್ತಾರಾ? ಹೆಬ್ಬಾಳ್ಕರ್ ಉತ್ತರ

    ಬೆಳಗಾವಿ: ಉಪಚುನಾವಣೆ ಕಾವು ಜೋರಾಗಿದ್ದು, ಗೋಕಾಕ್ ಅಖಾಡಕ್ಕೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಯಾಕೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೋ ಕಮೆಂಟ್ಸ್ ಎಂದು ಜಾರಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಏನೇ ಪ್ರಶ್ನೆ ಕೇಳಿದರೂ ನಾನು ಈ ಬಗ್ಗೆ ಈಗ ಪ್ರತಿಕ್ರಿಯಿಸಲ್ಲ, ಮುಂದೆ ಮಾತನಾಡಬಹುದು, ಈಗ ಚುನಾವಣೆ ಸಮಯ ಹೀಗಾಗಿ ನಾನು ಮಾತನಾಡಲು ಇಷ್ಟಪಡಲ್ಲ ಎಂದು ಜಾಣತನದ ಉತ್ತರ ಕೊಟ್ಟಿದ್ದಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಶಿಸ್ತಿನ ಸಿಪಾಯಿಗಳ ರೀತಿ ಪಕ್ಷದ ಮಾತನ್ನು ಕೇಳಬೇಕು ಎಂದಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂದು ಪಣತೊಟ್ಟಿ ನಿಂತಿದ್ದ ನೀವು ಗೋಕಾಕ್ ಬಿಟ್ಟು ಅಥಣಿಯಲ್ಲಿ ಯಾಕೆ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಕ್ಕೆ, ನನಗೆ ಪಕ್ಷ ಇಲ್ಲಿ ಪ್ರಚಾರ ನಡೆಸಲು ಜವಾಬ್ದಾರಿ ನೀಡಿದೆ. ಹೀಗಾಗಿ ಅಥಣಿಗೆ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.

    ಗೋಕಾಕ್‍ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಪಣತೊಟ್ಟಿದೆ. ಆದ್ರೆ ಯಾಕೆ ಡಿಕೆಶಿ ಅವರು ಇನ್ನೂ ಗೋಕಾಕ್ ಕಣಕ್ಕೆ ಬಂದಿಲ್ಲ ಎಂದು ಕೇಳಿದಾಗ, ಈ ಬಗ್ಗೆ ನೀವು ಡಿಕೆಶಿ ಅವರನ್ನೇ ಕೇಳಿದರೆ ಉತ್ತಮ. ನಾನು ಅವರ ಪಿಆರ್‍ಓ ಅಲ್ಲ ಎಂದು ಹೇಳಿದ್ದಾರೆ. ಜೊತೆಗೆ ಜಾರಕಿಹೊಳಿ ಬ್ರದರ್ಸ್ ಹೊಂದಾಣಿಕೆ ಪಾಲಿಟಿಕ್ಸ್ ಬಗ್ಗೆ ಮಾತನಾಡಿ, ಸದ್ಯಕ್ಕೆ ನೋ ಕಮೆಂಟ್ಸ್. ಮುಂದೆ ನಾನು ಈ ಬಗ್ಗೆ ಮಾತನಾಡಬಹುದು. ಆದ್ರೆ ಚುನಾವಣೆ ಸಮಯವಾಗಿರುವುದರಿಂದ ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡಲ್ಲ ಎಂದು ಹೇಳಿದರು.

    ಗೋಕಾಕ್ ಬಗ್ಗೆ ಹೆಚ್ಚು ಆಸಕ್ತಿ ಇತ್ತಾ ಎಂದು ಕೇಳಿದಾಗಲೂ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ ಎಂದು ಕಾಲಾಯ ತಸ್ಮೈ ನಮಃ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ. ಎಷ್ಟು ಲೀಡ್‍ನಲ್ಲಿ, ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ನಾನು ಭವಿಷ್ಯ ಹೇಳಲ್ಲ. ನಾನು ಭವಿಷ್ಯಗಾರ್ತಿ ಅಲ್ಲ ಎನ್ನುವ ಮೂಲಕ ಚುನಾವಣೆ ಇರುವುದಕ್ಕೆ ಸದ್ಯ ನಾನು ಮೌನವಾಗಿರುತ್ತೇನೆ ಯಾವುದಕ್ಕೂ ಪ್ರತಿಕ್ರಿಯಿಸಲ್ಲ ಎನ್ನುವ ಹಾಗೆ ಲಕ್ಷ್ಮೀ ಅವರು ಎಲ್ಲದಕ್ಕೂ ನೋ ಕಮೆಂಟ್ಸ್ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ.

  • ಕೆ.ಆರ್.ಪೇಟೆಯಲ್ಲಿ ಪ್ರಚಾರ ಮಾಡ್ತಾರಾ ಯಶ್, ದರ್ಶನ್?

    ಕೆ.ಆರ್.ಪೇಟೆಯಲ್ಲಿ ಪ್ರಚಾರ ಮಾಡ್ತಾರಾ ಯಶ್, ದರ್ಶನ್?

    ಮಂಡ್ಯ: ಸ್ವಾಭಿಮಾನದ ಮಂತ್ರ ಜಪಿಸಿ ಮಂಡ್ಯ ಜನರ ಮನ ಗೆದ್ದಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್-ಬಿಜೆಪಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿವೆ. ಆದರೆ ಸುಮಲತಾ ಯಾರ ಪ್ರಚಾರಕ್ಕೆ ತೆರಳದೇ ತಟಸ್ಥ ನಿಲುವು ತೋರಿದ್ದಾರೆ. ನೀವು ಬರದಿದ್ದರೂ ಪರವಾಗಿಲ್ಲ, ನಟರಾದ ಯಶ್ ಮತ್ತು ದರ್ಶನ್ ಅವರನ್ನು ಪ್ರಚಾರಕ್ಕೆ ಕಳಿಸುವಂತೆ ಪಕ್ಷಗಳು ದುಂಬಾಲು ಬಿದ್ದಿವೆ ಎನ್ನಲಾಗಿದೆ.

    ಕೆ.ಆರ್. ಪೇಟೆ ವಿಧಾನಸಭೆಯ ಉಪ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಜೊತೆ ಜೊತೆಗೆ ಹೊಸ ಹೊಸ ತಿರುವು ಸಹ ಪಡೆದುಕೊಳ್ಳುತ್ತಿದೆ. ಬಿಜೆಪಿಯವರು ಸಿಎಂ ಬಿಎಸ್ ಯಡಿಯೂರಪ್ಪ ತವರು ಕ್ಷೇತ್ರ ಕೆಆರ್ ಪೇಟೆಯಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇತ್ತ ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಸಿದ್ಧಗೊಂಡಿದೆ.

    ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿಯವರು ಸುಮಲತಾರಿಂದ ತಮ್ಮ ಪರ ಪ್ರಚಾರ ಮಾಡಿಸಬೇಕು. ಈ ಮೂಲಕ ಒಂದಷ್ಟು ವೋಟುಗಳನ್ನ ಸೆಳೆಯಬೇಕು ಎಂದು ಪ್ರಯತ್ನ ಪಟ್ಟಿದ್ದರು ಇದೀಗ ಬಿಜೆಪಿ ಜೋಡೆತ್ತುಗಳಿಗೆ ಗಾಳ ಹಾಕಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

  • ಉಪಸಮರದಲ್ಲಿ ಬೆಟ್ಟಿಂಗ್ ಮೇನಿಯಾ!

    ಉಪಸಮರದಲ್ಲಿ ಬೆಟ್ಟಿಂಗ್ ಮೇನಿಯಾ!

    ಬೆಂಗಳೂರು: ಹದಿನೈದು ಕ್ಷೇತ್ರಗಳಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಈಗ ಇದರ ಜೊತೆಗೆ ಎಲೆಕ್ಷನ್ ಅಖಾಡದಲ್ಲಿ ಬೆಟ್ಟಿಂಗ್ ಮೇನಿಯಾ ಸದ್ದು ಮಾಡುತ್ತಿದೆ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ತೆರೆಮರೆಯಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ದಂಧೆ ನಡೆದಿತ್ತು. 15ರ ಪೈಕಿ ನಾಲ್ಕು ಕ್ಷೇತ್ರಗಳು ಬೆಟ್ಟಿಂಗ್ ಕಟ್ಟೋರ ಹಾಟ್ ಸ್ಪಾಟ್ ಆಗಿದೆ.

    ಕೆಆರ್ ಪೇಟೆ, ಹೊಸಕೋಟೆ, ಗೋಕಾಕ್ ಮತ್ತು ಹುಣಸೂರಿನ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದ್ದು, ದುಡ್ಡು, ಆಸ್ತಿ, ಕೋಳಿ, ಕುರಿ ಒಡೆವೆಗಳ ಬೆಟ್ಟಿಂಗ್ ಶುರುವಾಗಿದೆ ಎನ್ನಲಾಗಿದೆ. ಮಹಿಳೆಯರಿಗೂ ಬೆಟ್ಟಿಂಗ್ ಕ್ರೇಜ್ ಹೆಚ್ಚಾಗಿದ್ದು, ಒಡವೆ, ಒಲೆ, ಮೂಗುತಿ, ಸೀರೆ ಇತ್ಯಾದಿ ವಸ್ತುಗಳನ್ನು ಒತ್ತೆ ಇಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಪ್ರಚಾರಕ್ಕೆ ತೆರಳುವ ಮಹಿಳೆಯರಲ್ಲಿ ಬೆಟ್ಟಿಂಗ್ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

    ಬೆಟ್ಟಿಂಗ್ ಕಟ್ಟೋದು ಒಳ್ಳೆಯದಲ್ಲ, ಇದು ಕಾನೂನು ಬಾಹಿರ ಕೂಡ. ರಾಜಕೀಯ ಅನ್ನೋದು ಅಭಿವೃದ್ಧಿಯ ಮಂತ್ರವಾಗಿರಬೇಕೆ ಹೊರತು ಈ ರೀತಿಯ ಬೆಟ್ಟಿಂಗ್ ಕಟ್ಟೋದು ಸಮಾಜಕ್ಕೆ ಮಾರಕ ಎಂದು ಹಿರಿಯ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಹುಣಸೂರು ಫಲಿತಾಂಶದ ಮೇಲೆ ಬಿಜೆಪಿಯ ನಾಯಕರಿಬ್ಬರ ಭವಿಷ್ಯ

    ಹುಣಸೂರು ಫಲಿತಾಂಶದ ಮೇಲೆ ಬಿಜೆಪಿಯ ನಾಯಕರಿಬ್ಬರ ಭವಿಷ್ಯ

    ಮೈಸೂರು: ಹುಣಸೂರು ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಅವರ ರಾಜಕೀಯ ಭವಿಷ್ಯ, ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಅವರ ರಾಜಕೀಯ ಮರು ಜನ್ಮ ಅಡಗಿರೋದು ಎಲ್ಲರಿಗೂ ಗೊತ್ತಿದೆ. ಇವರಿಬ್ಬರೂ ಮಾತ್ರವಲ್ಲ ಬಿಜೆಪಿಯ ಇನ್ನಿಬ್ಬರ ರಾಜಕೀಯ ಭವಿಷ್ಯವೂ ಈ ಫಲಿತಾಂಶದಲ್ಲಿ ಅಡಗಿದೆ.

    ಹುಣಸೂರು ಉಪಚುನಾವಣೆ ಹಲವರ ರಾಜಕೀಯ ಭವಿಷ್ಯವನ್ನು ನೇರವಾಗಿ ಮತ್ತು ಪರೋಕ್ಷ ನಿರ್ಧರಿಸಲಿದೆ. ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‍ರನ್ನು ಗೆಲ್ಲಿಸಲು ಇಬ್ಬರು ಮುಖಂಡರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಒಬ್ಬರು ಸಚಿವ ಶ್ರೀರಾಮುಲು ಮತ್ತೊಬ್ಬರು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್. ಇವರಿಬ್ಬರೂ ಈ ಚುನಾವಣೆಯಲ್ಲಿ ಹೀಗೆ ಓಡಾಡುವುದಕ್ಕೆ ಕಾರಣವಿದೆ. ಈ ಫಲಿತಾಂಶದ ಮೇಲೆಯೆ ಇವರಿಬ್ಬರ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲವೂ ಆಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

    ಶ್ರೀರಾಮುಲು ಬಿಜೆಪಿಯೊಳಗೆ ತಮ್ಮ ಹಿಡಿತ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಮತ್ತು ಡಿಸಿಎಂ ಸ್ಥಾನದ ಹತ್ತಿರಕ್ಕೆ ಹೋಗಲು ಈ ಫಲಿತಾಂಶ ಬಹಳ ಮುಖ್ಯ. ಹುಣಸೂರು ಕ್ಷೇತ್ರದಲ್ಲಿ ನಾಯಕ ಸಮುದಾಯದ ಮತಗಳು ಹೆಚ್ಚಿವೆ. ಇವು ಇಲ್ಲಿ ಫಲಿತಾಂಶದ ದಿಕ್ಕನ್ನೆ ಬದಲಾಯಿಸುವ ಶಕ್ತಿ ಹೊಂದಿವೆ. ಇಂತಹ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಅದರ ಕ್ರೆಡಿಟ್ ಶ್ರೀರಾಮುಲುಗೆ ಬರುತ್ತದೆ. ನಾಯಕ ಸಮುದಾಯ ಬಿಜೆಪಿ ಜೊತೆ ಸದಾ ಇರಬೇಕಾದರೆ ಶ್ರೀರಾಮುಲುಗೆ ಪಟ್ಟ ಕಟ್ಟುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗುತ್ತೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಇಲ್ಲಿ ಗೆಲ್ಲದಿದ್ದರೆ ನಾಯಕ ಸಮುದಾಯದಲ್ಲಿ ಶ್ರೀರಾಮುಲು ಗೆ ದೊಡ್ಡ ಹಿಡಿತವಿಲ್ಲ ಎಂಬ ಸಂದೇಶ ರವಾನೆ ಆಗುತ್ತೆ. ಅದರಲ್ಲೂ ಈಗ ನಾಯಕ ಸಮುದಾಯದ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿರುವ ಕಾರಣ ಶ್ರೀರಾಮುಲು ಪಕ್ಷದಲ್ಲಿ ಆಗ ಸೈಡ್ ಲೈನ್ ಆಗುವ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರಗಳು ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ.

    ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಸಚಿವರಾಗಬೇಕು ಎಂಬ ಪ್ಲಾನ್ ಮಾಡಿದ್ದ ಯೋಗೇಶ್ವರ್ ಗೆ ಟಿಕೆಟ್ ಸಿಗದೇ ನಿರಾಸೆ ಆಗಿತ್ತು. ಆದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಯೋಗೇಶ್ವರ್, ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೋರಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ರಾಜಕೀಯ ಭವಿಷ್ಯ. ವಿಶ್ವನಾಥ್ ಗೆಲ್ಲಿಸಿಕೊಂಡು ಬಂದರೆ ಪರಿಷತ್ ಸದಸ್ಯರಾಗಿ ಮಾಡಿ ಸಚಿವ ಸ್ಥಾನ ಕೊಡುವ ಭರವಸೆ ಯೋಗೇಶ್ವರ್‍ಗೆ ಬಿಜೆಪಿಯಿಂದ ಸಿಕ್ಕಿದೆ ಎನ್ನಲಾಗುತ್ತಿದೆ. ಒಂದು ವೇಳೆ ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲದೆ ಹೋದ್ರೆ ಯೋಗೇಶ್ವರ್ ರಾಜಕೀಯ ಭವಿಷ್ಯ ಮಂಕಾಗುವ ಸಾಧ್ಯತೆಗಳಿವೆ.

    ಈ ಕಾರಣಗಳಿಂದಾಗಿಯೇ ಈ ಇಬ್ಬರು ನಾಯಕರು ಒಂದು ದಿನವೂ ಕ್ಷೇತ್ರದಿಂದ ಹೊರ ಹೋಗದೆ ಪ್ರಚಾರ ಮಾಡುತ್ತಿದ್ದಾರೆ. ಅಭ್ಯರ್ಥಿಯಷ್ಟೆ ಇವರಿಗೂ ಈ ಫಲಿತಾಂಶ ಮುಖ್ಯವಾಗಿದೆ.