Tag: Karnataka by-election result

  • ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅರಳಿದ ಕಮಲ – ನೆಲಕಚ್ಚಿದ ಕೈ-ತೆನೆ

    ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅರಳಿದ ಕಮಲ – ನೆಲಕಚ್ಚಿದ ಕೈ-ತೆನೆ

    ಬೆಂಗಳೂರು: ಜೆಡಿಎಸ್‍ನ ಭದ್ರಕೋಟೆಯಾಗಿರುವ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಈ ಬಾರಿ ಉಪಸಮರದಲ್ಲಿ ಕಮಲ ಅರಳಿದ್ದು, ಕೈ- ತೆನೆ ನೆಲಕಚ್ಚಿದೆ. ಬಿಜೆಪಿ ಗೆಲುವಿನೊಂದಿಗೆ ಕಾರ್ಯಕರ್ತರಲ್ಲಿ ಹೊಸ ಮಂದಹಾಸ, ಚೈತನ್ಯ ಮೂಡಿದೆ.

    ಜೆಡಿಎಸ್‍ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗೆಲುವಿನ ನಾಗಲೋಟವನ್ನ ಮುಂದುವರೆಸಿದ್ದಾರೆ. ಫಲಿತಾಂಶದ ಬಳಿಕ ಮಾತನಾಡಿದ ಗೋಪಾಲಯ್ಯ, ಕ್ಷೇತ್ರದ ಜನರ ಸಹಕಾರ, ಬೆಂಬಲದಿಂದ ಗೆಲುವು ಸಿಕ್ಕಿದೆ. ಈ ಚುನಾವಣೆಯಲ್ಲಿ ಮತದಾರರು ನನ್ನ ಕೈ ಹಿಡಿತಾರೆ ಎನ್ನುವ ವಿಶ್ವಾಸವಿತ್ತು. ವಿಶ್ವಾಸಕ್ಕೆ ತಕ್ಕಂತೆ ಗೆಲುವು ಸಿಕ್ಕಿದೆ. ಯಾವ ಮಂತ್ರಿ ಸ್ಥಾನವನ್ನ ಕೊಟ್ಟರು ನಿಭಾಯಿಸುತ್ತೇನೆ ಎಂದು ಖುಷಿ ಹಂಚಿಕೊಂಡರು.

    ತೆನೆ ಬಿಟ್ಟು ಕಮಲ ಹಿಡಿದು, ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಗೋಪಾಲಯ್ಯಗೆ, ತಮ್ಮ ಪತ್ನಿ ಹೇಮಲತಾರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಹೇಮಾಲತಾ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯೆರಾಗಿದ್ದರೂ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಪತಿಗೆ ಬೆಂಬಲವನ್ನ ಕೊಟ್ಟು, ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಜೆಡಿಎಸ್ ಪಕ್ಷದ ನಾಯಕರ ಎಚ್ಚರಿಕೆಗೂ ಜಗ್ಗದೆ ಪ್ರಚಾರ ಸಮಾರಂಭಗಳಲ್ಲಿ ಭಾಗಿಯಾಗಿ ಹಗಲಿರುಳು ಶ್ರಮಿಸಿದ್ದರು. ಇದು ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ, ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಹೇಮಲತಾರನ್ನ ಜೆಡಿಎಸ್‍ನಿಂದ ಉಚ್ಛಾಟಿಸಲಾಯಿತು. ಆದರೂ ತಮ್ಮ ಪತಿಯ ಬೆನ್ನಿಗೆ ನಿಂತು ಚುನಾವಣೆಯಲ್ಲಿ ವಾರ್ಡ್ ಮಟ್ಟದಲ್ಲಿ ಸಂಚರಿಸಿ, ಪತಿಯ ಗೆಲುವಿಗೆ ಕಾರಣರಾದರು.

  • ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ

    ಬೆಂಗಳೂರು: ಅಭಿಮಾನಿಗಳ ದೃಷ್ಟಿಯಲ್ಲಿ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ ಎಂದು ಸಚಿವ ಸಿಟಿ ರವಿ ಅವರು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಟಾಂಗ್ ಕೊಟ್ಟಿದ್ದಾರೆ.

    ಇಂದು ಉಪಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಮತ ಏಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, 1 ಕ್ಷೇತ್ರದಲ್ಲಿ ಭಾರೀ ಅಂತರದಲ್ಲಿ ಗೆಲವು ಸಾಧಿಸಿದೆ. ಇದೇ ಬೆನ್ನಲ್ಲೇ ಸಿಟಿ ರವಿ ಅವರು ಟ್ವೀಟ್ ಮಾಡಿ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಪ್ರಚಾರದ ವೇಳೆ ಉಪಚುನಾವಣೆಯಲ್ಲಿ ಗೆಲವು ನಮ್ಮದೇ ಎಂದು ಹೇಳುತ್ತಿದ್ದ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆ ಅಭಿಮಾನಿಗಳ ದೃಷ್ಟಿಯಲ್ಲಿ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ ಎಂದು ಸಿಟಿ ರವಿ ಟೀಕಿಸಿದ್ದಾರೆ.

    ಇತ್ತೀಚೆಗಷ್ಟೇ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ `ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ `ಹೌದು ಹುಲಿಯಾ’ ಎಂದಿದ್ದರು. ಸದ್ಯ ಕುಡುಕನ `ಹೌದು ಹುಲಿಯಾ’ ಡೈಲಾಗ್ ಈಗ ಸಖತ್ ಟ್ರೆಂಡ್ ಆಗಿದೆ.

    ಇದೇ ಡೈಲಾಗ್ ಇಟ್ಟುಕೊಂಡು ಸಿಟಿ ರವಿ ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಟ್ವೀಟ್ ಮಾಡಿ ಸಚಿವರು ಟಾಂಗ್ ಕೊಟ್ಟಿದ್ದಾರೆ.

  • ಕೆಆರ್ ಪೇಟೆಯಲ್ಲಿ ಹಾವು ಏಣಿ ಆಟ – ನಾರಾಯಣ ಗೌಡಗೆ ಅಲ್ಪ ಮುನ್ನಡೆ

    ಕೆಆರ್ ಪೇಟೆಯಲ್ಲಿ ಹಾವು ಏಣಿ ಆಟ – ನಾರಾಯಣ ಗೌಡಗೆ ಅಲ್ಪ ಮುನ್ನಡೆ

    ಮಂಡ್ಯ: ಜೆಡಿಎಸ್ ಕೋಟೆಯಾಗಿರುವ ಕೆ.ಆರ್ ಪೇಟೆಯಲ್ಲಿ ಹಾವು ಏಣಿ ಆಟ ಆರಂಭವಾಗಿದೆ.

    ಆರಂಭದಲ್ಲಿ ಒಂದು ಗಂಟೆ ಜೆಡಿಎಸ್ ದೇವರಾಜ್ ಮುನ್ನಡೆ ಸಾಧಿಸಿದ್ದರೆ ನಂತರ ಬಿಜೆಪಿಯ ನಾರಾಯಣ ಗೌಡ ಮುನ್ನಡೆ ಸಾಧಿಸಿದ್ದಾರೆ.

    ಐದನೇ ಸುತ್ತಿನಲ್ಲಿ ನಾರಾಯಣ ಗೌಡ 295 ಮತಗಳ ಮುನ್ನಡೆ ಸಾಧಿಸಿದ್ದರು. ದೇವರಾಜ್ 15,607 ಮತಗಳನ್ನು ಪಡೆದರೆ ಬಿಜೆಪಿಯ ನಾರಾಯಣ ಗೌಡ 15,902 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಚಂದ್ರಶೇಖರ್ 10,271 ಮತಗಳನ್ನು ಪಡೆದಿದ್ದರು.

    ಏಳನೇ ಸುತ್ತಿನಲ್ಲಿ ನಾರಾಯಣ ಗೌಡ 1,403 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ 23,352 ಮತಗಳನ್ನು ಪಡೆದರೆ ಜೆಡಿಎಸ್ 21,949 ಮತಗಳನ್ನು ಪಡೆದಿದೆ. ಕಾಂಗ್ರೆಸ್ 16,086 ಮತಗಳನ್ನು ಪಡೆದಿದೆ.

    ಯಲ್ಲಾಪುರ, ಕಾಗವಾಡ, ಅಥಣಿ, ಗೋಕಾಕ್, ಕೆಆರ್ ಪುರಂ, ಚಿಕ್ಕಬಳ್ಳಾಪುರ, ಹಿರೇಕೆರೂರು, ಮಹಾಲಕ್ಷ್ಮಿ ಲೇಔಟ್, ರಾಣೇಬೆನ್ನೂರು, ಕೆಆರ್ ಪೇಟೆ, ವಿಜಯನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

    ಶಿವಾಜಿನಗರ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್, ಯಶವಂತಪುರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುನ್ನಡೆ ಸಾಧಿಸಿದ್ದಾರೆ.