Tag: Karnataka by-election 2019

  • ಚಾಕಲೇಟ್ ಹಂಚಿ ಮತದಾನ ಮಾಡಿದ ಅಜ್ಜಿ – ಚಾಕಲೇಟ್ ಹಿಂದೆ ಇದೆ ಕಥೆ

    ಚಾಕಲೇಟ್ ಹಂಚಿ ಮತದಾನ ಮಾಡಿದ ಅಜ್ಜಿ – ಚಾಕಲೇಟ್ ಹಿಂದೆ ಇದೆ ಕಥೆ

    ಚಿಕ್ಕಬಳ್ಳಾಪುರ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಮತಗಟ್ಟೆಯಲ್ಲಿ ಅಜ್ಜಿಯೊಬ್ಬರು ಚುನಾವಣಾ ಸಿಬ್ಬಂದಿಗೆ ಚಾಕಲೇಟ್ ನೀಡಿ ಬಳಿಕ ಮತದಾನ ಮಾಡಿದ್ದಾರೆ.

    ನಗರದ ಮತಗಟ್ಟೆ ಸಂಖ್ಯೆ 164ರಲ್ಲಿ ನಿವೃತ್ತ ಶಿಕ್ಷಕಿ ರಾಜಮ್ಮ(82) ಅವರು ಪ್ರತಿ ಬಾರಿ ಮತದಾನ ಮಾಡುವಾಗ ಸಿಬ್ಬಂದಿಗೆ ಚಾಕಲೇಟ್ ಕೊಟ್ಟು ಖುಷಿಪಡುತ್ತಾರೆ. ಮತದಾನಕ್ಕೆ ಬಂದಾಗ ಯಾಕೆ ಚಾಕಲೇಟ್ ಹಂಚುತ್ತೀರಾ ಎಂದು ಪ್ರಶ್ನಿಸಿದಾಗ, ಭದ್ರತಾ ನಿರತ ಪೊಲೀಸರು, ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಚಾಕಲೇಟ್ ಹಂಚುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ಮತದಾನದ ದಿನ ಸಿಬ್ಬಂದಿ ಶ್ರಮಪಟ್ಟು ಕೆಲಸ ಮಾಡುತ್ತಾರೆ ಅವರಿಗೆ ಚಾಕಲೇಟ್ ಕೊಟ್ಟರೆ ನನಗೆ ಖುಷಿಯಾಗುತ್ತದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಗನಿಗೆ ಮತಗಟ್ಟೆ ತೋರಿಸಿ ಬರ್ತ್ ಡೇ ಗಿಫ್ಟ್ ಕೊಟ್ಟ ಪೋಷಕರು

    ಹಿಂದೆ ನಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಚುನಾವಣಾ ಕೆಲಸಕ್ಕೆ ಹೋಗುತ್ತಿದ್ದೆ. ಸಿಬ್ಬಂದಿ ಪಡುವ ಕಷ್ಟ ನನಗೂ ಗೊತ್ತು. ಅದಕ್ಕೆ ಪ್ರತಿ ಬಾರಿ ಮತದಾನಕ್ಕೆ ಬಂದಾಗಲೂ ಚಾಕಲೇಟ್ ಹಂಚುತ್ತೇನೆ ಎಂದು ರಾಜಮ್ಮ ಅವರು ತಿಳಿಸಿದರು. ಇದನ್ನೂ ಓದಿ: ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ಮತಗಟ್ಟೆಯಲ್ಲಿದ್ದ ಸಿಬ್ಬಂದಿಗೆ ರಾಜಮ್ಮ ಅವರು ಚಾಕಲೇಟ್ ಹಂಚಿರುವುದು ಎಲ್ಲರ ಗಮನ ಸೆಳೆದಿದ್ದು, ಸಿಬ್ಬಂದಿ ಕೂಡ ಖುಷಿಪಟ್ಟಿದ್ದಾರೆ. ಇಳಿ ವಯಸ್ಸಿನಲ್ಲೂ ರಾಜಮ್ಮ ಅವರು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಲ್ಲದೆ ಪ್ರೀತಿಯಿಂದ ಸಿಬ್ಬಂದಿಗೆ ಚಾಕಲೇಟ್ ಹಂಚಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  • ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ವಾಸ್ತು ಪ್ರಕಾರ ಮತಯಂತ್ರ ತಿರುಗಿಸಿ ಮತ ಹಾಕಿದ ಜೆಡಿಎಸ್ ಅಭ್ಯರ್ಥಿ

    ಮಂಡ್ಯ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಕೆ.ಆರ್ ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರು ವಾಸ್ತುಪ್ರಕಾರ ಮತಯಂತ್ರ ತಿರುಗಿಸಿಟ್ಟು ವೋಟ್ ಮಾಡಿದ್ದಾರೆ.

    ಕೆ.ಆರ್ ಪೇಟೆ ತಾಲೂಕಿನ ಬಂಡಿಹೊಳೆ ಮತಗಟ್ಟೆ ಸಂಖ್ಯೆ 151ರಲ್ಲಿ ಮತದಾನ ಮಾಡಿದ ದೇವರಾಜು, ಚುನಾವಣಾ ಸಿಬ್ಬಂದಿ ಮತಯಂತ್ರವಿಟ್ಟಿದ್ದ ವಾಸ್ತು ಸರಿಯಿಲ್ಲವೆಂದು, ಸಿಬ್ಬಂದಿ ಕರೆದು ಇವಿಎಂ ತಿರುಗಿಸಿದ ನಂತರವೇ ವೋಟ್ ಮಾಡಿದರು. ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದ ವೋಟ್ ಹಾಕಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿ ಆಗಬೇಕೆಂದು ಮನವಿ ಮಾಡಿಕೊಂಡರು.

    ಇತ್ತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ಮತಯಂತ್ರದ ಬಳಿ ಚಪ್ಪಲಿ ಬಿಟ್ಟು ನಂತರ ಮತದಾನ ಮಾಡಿದರು. ಕೆ.ಆರ್ ಪೇಟೆ ಪಟ್ಟಣದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತಗಟ್ಟೆಯಲ್ಲಿ ನಾರಾಯಣಗೌಡರು ಕುಟುಂಬದ ಜೊತೆ ಬಂದು ಮತದಾನ ಮಾಡಿದರು.

    ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಅನರ್ಹ ಶಾಸಕ ನಾರಾಯಣಗೌಡರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಕೆ.ಬಿ.ಚಂದ್ರಶೇಖರ್ ಕಣದಲ್ಲಿದ್ದಾರೆ.

  • ಉಪಚುನಾವಣೆ ಅಬ್ಬರದಲ್ಲಿ ಜಪ್ತಿಯಾದ ವಸ್ತುಗಳ ಅಂಕಿಅಂಶ

    ಉಪಚುನಾವಣೆ ಅಬ್ಬರದಲ್ಲಿ ಜಪ್ತಿಯಾದ ವಸ್ತುಗಳ ಅಂಕಿಅಂಶ

    ಬೆಂಗಳೂರು: ಗುರುವಾರದ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ. ಉಪಚುನಾವಣೆ ನಡೆಯೋ 15 ಕ್ಷೇತ್ರಗಳಲ್ಲಿ ರಜೆ ಘೋಷಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 15 ಕ್ಷೇತ್ರಗಳ ಮತದಾರರು, ಭದ್ರತಾ ಸಿಬ್ಬಂದಿ, ಎಷ್ಟು ಕೋಟಿ ಹಣ ಸೀಜ್ ಮಾಡಲಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ.

    15 ಕ್ಷೇತ್ರದ ಅಂಕಿಅಂಶಗಳು:
    ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರದಲ್ಲಿ ಒಟ್ಟು 165 ಮಂದಿ ಸ್ಪರ್ಧೆಯಲ್ಲಿದ್ದಾರೆ. ಇದರಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿಯೇ 19 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. 15 ಕ್ಷೇತ್ರಗಳಲ್ಲಿ ಒಟ್ಟು 37,82,681 ಮತದಾರರು ಇದ್ದಾರೆ. ಅದರಲ್ಲಿ 18,52,027 ಪುರುಷ ಮತದಾರರು, 19,25,529 ಮಹಿಳಾ ಮತದಾರರು ಇದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 4,185 ಮತಗಟ್ಟೆಗಳಿವೆ. ಸುಮಾರು 42,509 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ 11,241 ಪೊಲೀಸರು, 2,511 ಸಿಆರ್‌ಪಿಎಫ್‌ ಸಿಬ್ಬಂದಿ, 900 ಸೂಕ್ಷ್ಮ ವೀಕ್ಷಕರ ನಿಯೋಜನೆ ಮಾಡಲಾಗಿದೆ.

    ಜಪ್ತಿಯಾದ ವಸ್ತು, ನಗದು ಎಷ್ಟು?
    ಎಲ್ಲಾ ಕ್ಷೇತ್ರಗಳನ್ನು ಸೇರಿಸಿ ಒಟ್ಟು 10.70 ಕೋಟಿ ರೂ. ಮೌಲ್ಯದ ಅಕ್ರಮ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರೊಂದಿಗೆ 4.16 ಕೋಟಿ ರೂ. ನಗದು, 4.58 ಕೋಟಿ ಮೌಲ್ಯದ ಮದ್ಯ, 1.96 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಹಾಗೆಯೇ ಸುಮಾರು 4,950 ರೂ. ಮೌಲ್ಯದ ಡ್ರಗ್ಸ್ ಕೂಡ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂಬಂಧ 197 ನೀತಿ ಸಂಹಿತೆ ಎಫ್‍ಐಆರ್ ದಾಖಲಿಸಲಾಗಿದೆ.

    ಕೆ.ಆರ್ ಪೇಟೆ, ರಾಣೇಬೆನ್ನೂರು, ಹಿರೇಕೆರೂರು, ಗೋಕಾಕ್, ವಿಜಯನಗರ, ಚಿಕ್ಕಬಳ್ಳಾಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ.ಆರ್ ಪುರಂ, ಹುಣಸೂರು, ಕಾಗವಾಡ, ಅಥಣಿ, ಯಲ್ಲಾಪುರ, ಹೊಸಕೋಟೆಯಲ್ಲಿ ಗುರುವಾರ ಈ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಡಿ. 9ಕ್ಕೆ ಫಲಿತಾಂಶ ಹೊರಬೀಳಲಿದೆ.

  • ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆಯೊಂದಿಗೆ ಸಜ್ಜಾದ ಖಾಕಿ ಪಡೆ

    ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆಯೊಂದಿಗೆ ಸಜ್ಜಾದ ಖಾಕಿ ಪಡೆ

    ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್ ಚುನಾವಣೆ ನಡೆಯುತ್ತಿದೆ. ಇಡೀ ರಾಜ್ಯವೇ ಕುತೂಹಲದಿಂದ ನೋಡುತ್ತಿರುವ ಕ್ಷೇತ್ರ ಅಂದರೆ ಅದು ಹೊಸಕೋಟೆ ಕ್ಷೇತ್ರ, ಇಲ್ಲಿ ಅಭ್ಯರ್ಥಿಗಳು ಹಾಗೂ ಸ್ಟಾರ್ ನಾಯಕರ ಕ್ಯಾಂಪೇನ್‍ಗಳ ಬಿರುಸಿನ ಪ್ರಚಾರ ಆರೋಪ ಪ್ರತ್ಯಾರೋಪಗಳ ವಾಕ್ ಸಮರದಿಂದ ರಣರಂಗವಾಗಿದೆ. ಮತದಾನಕ್ಕೆ ಇನ್ನು ಕೇವಲ ಒಂದೇ ದಿನ ಬಾಕಿ ಉಳಿದಿದ್ದು, ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ನಡೆಯಲು ಈಗಾಗಲೇ ಬೆಂಗಳೂರು ಗ್ರಾಮಾಂತರ ಪೋಲಿಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಹೊಸಕೋಟೆ ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದು ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದ ರೀತಿಯಲ್ಲಿ ಇಲ್ಲಿ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಬಿಜೆಪಿ ಅಭ್ಯರ್ಥಿಯ ಪರ ಕ್ಷೇತ್ರದಲ್ಲಿ ಪಕ್ಷದ ಘಟಾನುಘಟಿ ನಾಯಕರಾದ ಸಿಎಂ ಯಡಿಯೂರಪ್ಪ, ಆರ್ ಆಶೋಕ್ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದರೆ. ಕಾಂಗ್ರೆಸ್ ವತಿಯಿಂದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಬಿರುಸಿನ ಪ್ರಚಾರಗಳನ್ನು ನಡೆಸಿದ್ದಾರೆ. ಮಂಗಳವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅಭ್ಯರ್ಥಿಗಳು ಚುನಾವಣೆಯ ಕೊನೆಯ ದಿನಗಳ ಕಸರತ್ತನ್ನು ನಡೆಸುತ್ತಿದ್ದಾರೆ.

    ಇಂತಹ ಪರಿಸ್ಥಿತಿಯಲ್ಲಿ ಹೊಸಕೋಟೆ ಕ್ಷೇತ್ರದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಹಾಗೂ ಪ್ಯಾರ ಮಿಲಿಟರಿ ಪಡೆ, ಅರೆಸೇನ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 297 ಗ್ರಾಮಗಳಿದ್ದು, 286 ಮತಗಟ್ಟೆಗಳಿವೆ. ಅದರಲ್ಲಿ 85 ಸೂಕ್ಷ್ಮ ಮತಗಟ್ಟೆಯಾಗಿದ್ದು, 201 ಸಾಮಾನ್ಯ ಮತಗಟ್ಟೆ, 25 ಮೊಬೈಲ್ ಸೆಕ್ಟರ್, 12 ಸೂಪರ್ವೈಸಿ ಮೊಬೈಲ್ ಸೆಕ್ಟರ್ ಗಳನ್ನು ಒಳಗೊಂಡಿದೆ.

    ಬೆಂಗಳೂರು ಜಿಲ್ಲೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌, 1000 ಹೋಮ್ ಗಾರ್ಡ್ ಗಳ ನಿಯೋಜನೆಯನ್ನು ಮಾಡಿಕೊಂಡಿದ್ದು, 5 ಜನ ಡಿವೈಎಸ್‍ಪಿ, 4 ಕೆಎಸ್‌ಆರ್‌ಪಿ, 4 ಪ್ಯಾರ ಮಿಲಿಟರಿ ಪಡೆಯನ್ನು ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ.

    ಈಗಾಗಲೇ ಹೊಸಕೋಟೆ ಕ್ಷೇತ್ರಕ್ಕೆ ಆಗಮಿಸಿರುವ ಕರ್ನಾಟಕ ರಾಜ್ಯ ಪೋಲಿಸ್ ಪಡೆ ಹಾಗೂ ಪ್ಯಾರ ಮಿಲಿಟರಿ, ಹೋಮ್ ಗಾರ್ಡ್ ಸಿಬ್ಬಂದಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಮಾಹಿತಿ ಜೊತೆಗೆ ಈ ಹಿಂದೆ ಚುನಾವಣೆಗಳಲ್ಲಿ ನಡೆದಿದ್ದ ಘಟನೆಗಳನ್ನು ಆಧರಿಸಿ ಇಂದು ಹೊಸಕೋಟೆ ಪಟ್ಟಣದಲ್ಲಿ ಪಥಸಂಚಲನ ಮಾಡುವ ಮೂಲಕ ಉಪಚುನಾವಣೆ ಶಾಂತಿಯುತವಾಗಿ ನಡೆಯಬೇಕು, ಕಾನೂನು ಸುವ್ಯವಸ್ಥೆಗೆ ಕಾಪಾಡಬೇಕು ಎಂದು ಜಾಗೃತಿ ಮೂಡಿಸಲಿದ್ದಾರೆ.

    ಕ್ಷೇತ್ರದಲ್ಲಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ 11 ಪ್ರಕರಣಗಳು ದಾಖಲಾಗಿದ್ದು, 13 ಲಕ್ಷದ 5 ಸಾವಿರ ನಗದು, 105 ಕುಕ್ಕರ್, 105 ಹಾಟ್ ಬಾಕ್ಸ್ ಸೇರಿದಂತೆ 45 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಬಳಸಿದ್ದ ವಾಹನಗಳನ್ನು ಕೂಡ ಜಪ್ತಿ ಮಾಡಿದ ಪೋಲಿಸರು ತನಿಖೆ ನಡೆಸುತ್ತಿದ್ದು, ದೋಷರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ.

    ಕ್ಷೇತ್ರದ ಅಭ್ಯರ್ಥಿಗಳ ಅಬ್ಬರದ ಪ್ರಚಾರ ಅಂತ್ಯವಾಗಿದೆ. ಹೀಗಾಗಿ ಮನೆ ಮನೆ ಪ್ರಚಾರ ನಡೆಸಿ ಮತದಾರರನ್ನು ತನ್ನತ್ತ ಸೆಳೆಯಲು ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.

  • ವಿಪಕ್ಷ ನಾಯಕರಿಗೆ ಕನಸಿನಲ್ಲೂ ಯಡಿಯೂರಪ್ಪ ಬರ್ತಾರೆ: ಬೊಮ್ಮಾಯಿ ಟಾಂಗ್

    ವಿಪಕ್ಷ ನಾಯಕರಿಗೆ ಕನಸಿನಲ್ಲೂ ಯಡಿಯೂರಪ್ಪ ಬರ್ತಾರೆ: ಬೊಮ್ಮಾಯಿ ಟಾಂಗ್

    ದಾವಣಗೆರೆ: ವಿರೋಧ ಪಕ್ಷಗಳ ನಾಯಕರಿಗೆ ಕನಸಿನಲ್ಲೂ ಯಡಿಯೂರಪ್ಪ ಬರ್ತಾರೆ, ಅದಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಯಿ ವ್ಯಂಗ್ಯವಾಡಿದ್ದಾರೆ.

    ರಾಣಿಬೆನ್ನೂರು ಉಪ ಚುನಾವಣೆಯ ಪ್ರಚಾರಕ್ಕೆ ಹೊರಡುವ ಮುನ್ನ ಜಿಎಂಐಟಿ ಗೆಸ್ಟ್ ಹೌಸ್‍ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಉಪಚುನಾವಣೆಯಲ್ಲಿ ಹಣದ ಹೊಳೆಯನ್ನು ಹರಿಸುತ್ತಾರೆ ಎಂದು ವಿರೋಧ ಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವ ಎರಡು ಪಕ್ಷಗಳು ಈ ರೀತಿ ಮಾಡುವಂತಹ ಸಾಧ್ಯತೆ ಇರಬಹುದು ಎಂದು ನನಗೆ ಅನಿಸುತ್ತೆ, ಆದ್ದರಿಂದ ಅವರು ಈ ರೀತಿ ಹೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಚುನಾವಣೆ ನಡೆಯಬೇಕು ಹಾಗೂ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ತಿರುಗೇಟು ಕೊಟ್ಟರು.

    ವಿರೋಧ ಪಕ್ಷಗಳಿಗೆ ಗೊತ್ತಾಗಿದೆ 15 ಕ್ಕೆ 15 ಕ್ಷೇತ್ರಗಳಲ್ಲಿ ಸೋಲು ಖಚಿತ ಎಂದು. ಅದಕ್ಕೆ ನಾವು ಹೊಸ ಸರ್ಕಾರ ಮಾಡುತ್ತೇವೆ ಎಂದು ಹೊಸ ರಾಗ ಪ್ರಾರಂಭಿಸಿದ್ದಾರೆ. ಒಂದು ವಾರದಿಂದ ಸರ್ಕಾರ ಮಾಡಲ್ಲ ಎಂದವರು ಈಗ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ. ಸೋಲುವ ಭೀತಿಯಿಂದ ನಮ್ಮ ಮತದಾರರಾದರೂ ನಮ್ಮ ಪಕ್ಷಕ್ಕೆ ಮತಹಾಕಲಿ ಎಂದು ಈ ರೀತಿ ಮಾತನಾಡುತ್ತಿದ್ದಾರೆ. ಇದಕ್ಕಾಗಿ ಸಂಬಂಧ ಇದ್ದವರು, ಇಲ್ಲದವರು ದಿನಕ್ಕೆ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

    ಇಷ್ಟೇ ಅಲ್ಲದೆ ಕಾಂಗ್ರೆಸ್ಸಿನ ಹರಿಪ್ರಸಾದ್ ಹಾಗೂ ಮೊಯ್ಲಿ ಅವರ ಇತ್ತೀಚಿನ ಮಾತುಗಳನ್ನು ಕೇಳಿದರೆ ಸೋಲುತ್ತೇವೆ ಎನ್ನುವುದು ಅವರಿಗೆ ಗೊತ್ತಾಗಿದೆ ಅನಿಸುತ್ತೆ. ಕಾಂಗ್ರೆಸ್ಸಿನಲ್ಲಿ ಅಂತರಿಕ ಹೊಂದಾಣಿಕೆ ಇಲ್ಲ ಎನ್ನುವುದು ಈಗ ಹೊರ ಬಿದ್ದಿದೆ. ಸಿದ್ದರಾಮಯ್ಯ ಎಲ್ಲಾ ಕಡೆ ಒಬ್ಬರೇ ಓಡಾಡುತ್ತಿದ್ದಾರೆ. ಉಳಿದವರು ಪತ್ರಿಕಾಗೋಷ್ಠಿಗಷ್ಟೇ ಸೀಮಿತರಾಗಿದ್ದಾರೆ. ಇದು ಕಾಂಗ್ರೆಸ್ಸಿನವರಿಗೆ ಸೋಲಿನ ಬಗ್ಗೆ ಸ್ಪಷ್ಟವಾಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಸಚಿವರು ಟಾಂಗ್ ಕೊಟ್ಟರು.

    ಕಾಂಗ್ರೆಸ್ ಶಾಸಕರು ಅಸಮಧಾನಗೊಂಡಿದ್ದು, ಅವರಲ್ಲಿ ನಂಬಿಕೆ ಮೂಡಿಸಲು ಅವರ ನಾಯಕರು ಸರ್ಕಾರ ರಚನೆ ಮಾಡುತ್ತೇವೆ ಎನ್ನುತ್ತಾರೆ. ಈ ಮಧ್ಯೆ ಖರ್ಗೆಯವರ ದಿಢೀರ್ ಪ್ರವೇಶ ಸರ್ಕಾರ ರಚನೆಗಾಗಿ ಅಲ್ಲ ಎನ್ನುವುದು ಗೊತ್ತಿದೆ. ಖರ್ಗೆಯವರು ಒಳ್ಳೆ ಸುದ್ದಿ ನೀಡುತ್ತೇವೆ ಎನ್ನುತ್ತಾರೆ. ಯಾರಿಗೆ ಒಳ್ಳೆ ಸುದ್ದಿ? ರಾಜ್ಯದ ಜನತೆಗಿರಬೇಕು ಅಷ್ಟೇ ಎಂದರು. ಹಾಗೆಯೇ ಇದೇ ಸಂದರ್ಭದಲ್ಲಿ ಜೆಡಿಎಸ್ ನ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ಗೃಹ ಸಚಿವರು ಹಿಂದೇಟು ಹಾಕಿದರು.

  • ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ- ಕೈ, ದಳಕ್ಕೆ ಬಿಜೆಪಿ ಟಕ್ಕರ್

    ಕೆ.ಆರ್ ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ- ಕೈ, ದಳಕ್ಕೆ ಬಿಜೆಪಿ ಟಕ್ಕರ್

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ಇತಿಹಾಸದಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಮಾತ್ರ ನೇರ ಹಣಾಹಣಿ ನಡೆಯುತ್ತಿತ್ತು. ಆದರೆ ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಈ ಎರಡು ಪಕ್ಷಗಳಿಗೆ ಬಿಜೆಪಿ ಸಾಕಷ್ಟು ಪೈಪೋಟಿ ನೀಡುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

    ಕೆ.ಆರ್.ಪೇಟೆ ಉಪಚುನಾವಣೆ ಅಖಾಡ ರಂಗೇರಿದೆ. ಗೆಲುವಿಗಾಗಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದುವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ನೇರ ಹಣಾಹಣಿ ಇತ್ತು. 1994ರಲ್ಲಿ ಬಿಜೆಪಿ ಅಭ್ಯರ್ಥಿ ಕೆಂಗೇಗೌಡ ಮಾತ್ರ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಅದನ್ನು ಹೊರತು ಪಡಿಸಿದರೆ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿ ಸದ್ದೇ ಮಾಡಿರಲಿಲ್ಲ. ಆದರೆ ಈ ಬಾರಿ ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಕಣದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಟಕ್ಕರ್ ನೀಡಲು ಸಜ್ಜಾಗಿದೆ.

    ಸಿಎಂ ಯಡಿಯೂರಪ್ಪ ಅವರ ಹುಟ್ಟುರೂ ಕ್ಷೇತ್ರವಾದ ಕೆ.ಆರ್ ಪೇಟೆಯಲ್ಲಿ ಕಮಲವನ್ನು ಅರಳಿಸಲು ಚತುರೋಪಾಯಗಳನ್ನೇ ನಡೆಸಿದ್ದಾರೆ. ಕಳೆದ ಒಂದು ವಾರದಿಂದ ಸಿಎಂ ಪುತ್ರ ವಿಜಯೇಂದ್ರ ಕೆ.ಆರ್ ಪೇಟೆ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ನಾರಾಯಣಗೌಡ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದಲ್ಲದೆ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯ ಇರುವುದರಿಂದ ಬಿಜೆಪಿಯ ಒಕ್ಕಲಿಗ ಮುಖಂಡರನ್ನೇ ಹಾಕಿಕೊಂಡು ಪ್ರಚಾರ ನಡೆಸುತ್ತಿದೆ.

    ಕೆ.ಆರ್ ಪೇಟೆ ಇತಿಹಾಸದಲ್ಲಿ ನಡೆದ ಚುನಾವಣೆಗಳಲ್ಲಿ ಅಬ್ಬರ ಮಾಡದ ಬಿಜೆಪಿ, ಇದೀಗ ಉಪ ಕದನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೂರು ಪಕ್ಷದ ಅಭ್ಯರ್ಥಿಗಳ ಪೈಕಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನ ಕಾದುನೋಡಬೇಕಿದೆ.

  • ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಅಬ್ಬರದ ಪ್ರಚಾರ- ಸೇಬು, ತುಳಸಿ ಹಾರ ಹಾಕಿ ಸ್ವಾಗತ

    ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಅಬ್ಬರದ ಪ್ರಚಾರ- ಸೇಬು, ತುಳಸಿ ಹಾರ ಹಾಕಿ ಸ್ವಾಗತ

    ಬೆಂಗಳೂರು: ಉಪಚುನಾವಣೆ ಕಣ ರಂಗೇರಿದ್ದು, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮತದಾರರು ಶರತ್ ಅವರಿಗೆ ಸೇಬಿನ ಹಾರ ಮತ್ತು ತುಳಸಿ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಚಿಕ್ಕನಲ್ಲೂರಹಳ್ಳಿಯಲ್ಲಿ 30 ಅಡಿ ಎತ್ತರದ ತುಳಸಿ ಹಾರ ಹಾಕಿ ಶರತ್ ಅವರನ್ನು ಸ್ವಾಗತಿಸಿದರೆ, ಮಲೆಮಾಕಿನಪುರದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು, ಜನರು ಅಭಿಮಾನ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರಿಗೆ ಬೃಹತ್ ಸೇಬಿನ ಹಾರಗಳನ್ನು ಹಾಕುವುದು ಟ್ರೆಂಡ್ ಆಗಿ ಹೋಗಿದ್ದು, ದೊಡ್ಡ ದೊಡ್ಡ ಪಕ್ಷಗಳಿಗೆ ಸೀಮಿತವಾಗಿದ್ದ ಬೃಹತ್ ಹಾರಗಳು ಇದೀಗ ಪಕ್ಷೇತರ ಅಭ್ಯರ್ಥಿಗಳಿಗೂ ಹಾಕಲಾಗುತ್ತಿದೆ. ವಿಶೇಷವಾಗಿ ಬೃಹತ್ ತುಳಸಿ ಹಾರ ಹಾಕಿ ಶರತ್ ಬಚ್ಚೇಗೌಡರನ್ನು ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಮಾಜಿ ಸಿಎಂಗೆ 500 ಕೆಜಿ ತೂಕದ ಸೇಬು ಹಾರ ಹಾಕಿದ ಅಭಿಮಾನಿಗಳು

    ಶರತ್ ಬಚ್ಚೇಗೌಡರು ತಾಲೂಕಿನಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅವರು ಮತದಾರರಿಗೆ ಕಮಲದ ಗುರುತು ಉಂಗುರ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನೀವೆಲ್ಲಾ ಉಂಗುರವನ್ನು ಹಾಕಿಕೊಳ್ಳುವಾಗ ಹುಷಾರಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಿ. ಅದು ತಾಮ್ರದ ಉಂಗುರ, ಏನಾದರೂ ಆಗಿದೇಯಾ ಅಂತ ಪರಿಶೀಲಿಸಿ. ಹಾಗೆಯೇ ಬೆರಳಿಗೆ ಹಾಕಿಕೊಂಡರೆ ಚರ್ಮರೋಗ ಬರುತ್ತದೆ ಎಂದು ಉಂಗುರ ಹಂಚಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಶರತ್ ಬಚ್ಚೇಗೌಡರು ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದು ಸಾವಿರಾರು ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದ್ದಾರೆ.

  • ಸುಳ್ಳು ಹೇಳಿ ಕಣ್ಣಿರು ಹಾಕಬೇಡಿ- ಎಚ್‍ಡಿಕೆಗೆ ಕೈಮುಗಿದ ನಾರಾಯಣಗೌಡ

    ಸುಳ್ಳು ಹೇಳಿ ಕಣ್ಣಿರು ಹಾಕಬೇಡಿ- ಎಚ್‍ಡಿಕೆಗೆ ಕೈಮುಗಿದ ನಾರಾಯಣಗೌಡ

    ಮಂಡ್ಯ: ಕಣ್ಣೀರು ಹಾಕುತ್ತಾ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಿರುಗೇಟು ನೀಡಿದ್ದಾರೆ. ಭಗವಂತನ ಆಣೆಗೂ ನಾನು ಯಾವುದೇ ಪತ್ರ ಬರೆದಿಲ್ಲ. ಕುಮಾರಣ್ಣ ಮೊದಲು ಸುಳ್ಳು ಹೇಳುವುದನ್ನು ಬಿಡಿ ಎಂದು ಎಚ್‍ಡಿಕೆ ವಿರುದ್ಧ ಕಿಡಿಕಾರಿದ್ದಾರೆ.

    ಜಿಲ್ಲೆಯ ಕಿಕ್ಕೇರಿಯಲ್ಲಿ ಎಚ್‍ಡಿಕೆ ಕಣ್ಣೀರು ಹಾಕಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಣ್ಣ ಕಣ್ಣೀರು ಹಾಕಿದ್ದಾರೆ. ಯಾಕೆಂದರೆ ಅವರಿಗೆ ಅವರ ಕುಟುಂಬ ಬಿಟ್ಟರೆ ಬೇರೆ ಒಕ್ಕಲಿಗರು ಯಾರು ಬೆಳೆಯಬಾರದು. ಅವರು ನನ್ನ ಕತ್ತು ಹಿಸುಕಲು ಹೊರಟಿದ್ದಾರೆ. ಕತ್ತು ಹಿಸುಕೋದಾದರೆ ಅವರ ಮನೆಗೆ ಕರೆಸಿಕೊಂಡು ಹಿಸುಕಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ:ನಾನೇನು ತಪ್ಪು ಮಾಡಿದೆ, ನನ್ನನ್ನು ಯಾಕೆ ಕೈ ಬಿಟ್ಟಿರಿ – ಮಂಡ್ಯದಲ್ಲಿ ಎಚ್‍ಡಿಕೆ ಮತ್ತೆ ಕಣ್ಣೀರು

    ಎಚ್‍ಡಿಕೆ ಅವರು ನಾನು ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ಭಗವಂತನ ಆಣೆಗೂ ನಾನು ಅವರಿಗೆ ಪತ್ರ ಬರೆದಿಲ್ಲ. ಯಾರು ಬರೆದಿದ್ದಾರೆ? ಯಾಕೆ ಬರೆದಿದ್ದಾರೆ ಎಂದು ಅವರೇ ಸೃಷ್ಟಿಸುತ್ತಿರುವ ಕಥೆಯಿದು. ಅವರು ಮತ ಕೇಳಲಿ ಪಕ್ಷ ಬೆಳೆಸಲಿ. ಆದರೆ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ದಯಮಾಡಿ ಕುಮಾರಣ್ಣ ಸುಳ್ಳು ಹೇಳುವುದನ್ನು ಬಿಡಿ ಎಂದು ಕೈ ಮುಗಿದಿದ್ದಾರೆ.

    ಸುಳ್ಳು ಹೇಳಿ ಹೇಳಿ ನಮ್ಮ ಸ್ಥಿತಿ ಈ ರೀತಿ ಆಯ್ತು. ನಿಮ್ಮನ್ನು ನಾವು ದೂರ ಮಾಡಿಕೊಂಡು ಬರೋದಕ್ಕೆ ನೀವು ಸುಳ್ಳು ಹೇಳಿದ್ದೇ ಕಾರಣ. ದಯವಿಟ್ಟು ಸತ್ಯ ಹೇಳಿ, ಸುಳ್ಳು ಹೇಳಿ ನಮ್ಮ ಕತ್ತು ಯಾಕೆ ಹಿಸುಕಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

  • ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆ ತಲೆ ಡಾಕ್ಟರ್‌ಗೆ ತೋರಿಸಿ: ರಮೇಶ್ ಕುಮಾರ್

    ಬೆಳಗಾವಿ: ಅನರ್ಹರ ಆರೋಗ್ಯ ಸರಿಯಿಲ್ಲ, ಅವರನ್ನು ತಲೆಗೆ ಸಂಬಂಧಿಸಿದ ವೈದ್ಯರ ಬಳಿ ತೋರಿಸೋದು ಒಳ್ಳೆದು ಎಂದು ಅಥಣಿಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹರಿಗೆ ಟಾಂಗ್ ಕೊಟ್ಟಿದ್ದಾರೆ.

    ಅಥಣಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹಗೊಂಡ ನಂತರವೂ ಶಾಸಕರು ತಾವು ಅರ್ಹರು ಎಂದು ಹೇಳಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟಿನಲ್ಲೂ ಅನರ್ಹಗೊಂಡ ನಂತರ ಅರ್ಹರು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನರ್ಹರ ಆರೋಗ್ಯ ಸರಿಯಿಲ್ಲ, ಒಳ್ಳೆಯ ತಲೆ ಸಂಬಂಧಿಸಿದ ವೈದ್ಯರಿಗೆ ತೋರಿಸಿ ಎಂದು ಕಾಲೆಳೆದಿದ್ದಾರೆ.

    ನಾನು ಯಾರನ್ನೂ ವ್ಯಕ್ತಿಗತವಾಗಿ ಅನರ್ಹಗೊಳಿಸಿಲ್ಲ. ಸಂವಿಧಾನಾತ್ಮಕವಾಗಿ ಅವರನ್ನು ಅನರ್ಹರು ಅಂತ ಘೋಷಣೆ ಮಾಡಿದ್ದೆ. ಸುಪ್ರೀಂ ಕೋರ್ಟ್ ಸಹ ನನ್ನ ಆದೇಶ ಎತ್ತಿ ಹಿಡಿದಿದೆ. ನಾನು ಕೊಟ್ಟ ತೀರ್ಪು ಸರಿಯೇ ಎಂದು ಪರಿಶೀಲಿಸಿದ್ದೇನೆ. ಜನರು ಕೂಡ ನೀವು ಮಾಡಿದ್ದು ಸರಿಯಾಗಿದೆ ಎಂದಿದ್ದಾರೆ. ಆದರೆ ಕೋರ್ಟ್ ಅನರ್ಹರಿಗೆ ಉಪಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಕೋರ್ಟಿನ ತೀರ್ಪನ್ನು ನಾನು ಗೌರವಿಸುತ್ತೇನೆ. ಉಪಚುನಾವಣೆಯಲ್ಲಿ ಜನರು ಅನರ್ಹರಿಗೆ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.

    ನಾನು ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಒಂದು ವೇಳೆ ಪಕ್ಷದಲ್ಲಿ ನೀನು ಕಸ ಗುಡಿಸಬೇಕು ಎಂದರೆ ನಾನು ಗುಡಿಸಬೇಕು, ಅದು ಪಕ್ಷದ ಶಿಸ್ತು. ಹಿಂದೆ ಸಮ್ಮಿಶ್ರ ಸರ್ಕಾರವಿದ್ದಾಗ ಯಾರೂ ಹೆಚ್ಚು ಉತ್ಸಾಹ ತೋರಲಿಲ್ಲ. ಪಕ್ಷದ ನಾಯಕ ವೇಣುಗೋಪಾಲ್ ಅವರು ನೀವು ಸ್ಪೀಕರ್ ಆಗಬೇಕು ಎಂದು ಹೇಳಿದಾಗ, ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಜನರ ಮನಸ್ಸಲ್ಲಿ ಗೌರವಾನ್ವಿತ ಸ್ಥಾನ ಸಿಕ್ಕಾಗ ಅದಕ್ಕೆ ಮಿಗಿಲಾದದ್ದು ಯಾವ ಸ್ಥಾನವೂ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

  • ಹುಣಸೂರಲ್ಲಿ ದಾಖಲೆಯಿಲ್ಲದೆ ಸಾಗಿಸ್ತಿದ್ದ 2 ಕೋಟಿ ರೂ. ಜಪ್ತಿ

    ಹುಣಸೂರಲ್ಲಿ ದಾಖಲೆಯಿಲ್ಲದೆ ಸಾಗಿಸ್ತಿದ್ದ 2 ಕೋಟಿ ರೂ. ಜಪ್ತಿ

    ಮೈಸೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಚುನಾವಣಾಧಿಕಾರಿಗಳು ಅಕ್ರಮ ಹಣ, ಮದ್ಯ, ವಸ್ತುಗಳು ಸಾಗಿಸಬಾರದೆಂದು ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ನಡುವೆ ಹುಣಸೂರು ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಬೊಲೆರೋ ವಾಹನದಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ 3 ಚೀಲಗಳಲ್ಲಿ ಹಣವನ್ನು ಇಟ್ಟುಕೊಂಡು ಕೊಂಡೊಯ್ಯಲಾಗುತ್ತಿತ್ತು. ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರು ಹಣದ ಜೊತೆ ಪ್ರಯಾಣ ಮಾಡುತ್ತಿದ್ದರು. ಪಿರಿಯಾಪಟ್ಟಣ ಬ್ಯಾಂಕಿಗೆ ಇದನ್ನು ಸಾಗಿಸುತ್ತಿರುವುದಾಗಿ ಬ್ಯಾಂಕ್ ನೌಕಕರು ಪೊಲೀಸರಿಗೆ ಹೇಳಿದ್ದಾರೆ.

    ಬ್ಯಾಂಕಿಗೆ ಹಣ ಸಾಗಿಸುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಯಾಕೆ ಪಡೆಯಲಿಲ್ಲ? ಅದರಲ್ಲೂ ಗನ್ ಮ್ಯಾನ್ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಾಟ ಮಾಡುತ್ತಿರುವುದು ತಪ್ಪು. ಬ್ಯಾಂಕಿಗೆ ಸೇರಿದ ಹಣವನ್ನು ಚೀಲಗಳಲ್ಲಿ ಸಾಗಿಸುವ ಅವಶ್ಯಕತೆ ಏನು, ಸೂಕ್ತ ದಾಖಲೆ ಇಲ್ಲದೆ ಯಾಕೆ ಹಣ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಣ ಬಹುಶಃ ಉಪಚುನಾವಣೆಗೆ ಹಂಚಲು ಸಾಗಿಸುತ್ತಿದ್ದಾರಾ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

    ಈ ಸಂಬಂಧ ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.