Tag: Karnataka By Election 2018

  • ತೆರೆಮರೆಯಲ್ಲಿ ಶ್ರೀರಾಮುಲುಗೆ ಖೆಡ್ಡಾ ತೋಡಿದ್ರಾ ಕುಚುಕು ಗೆಳೆಯ?

    ತೆರೆಮರೆಯಲ್ಲಿ ಶ್ರೀರಾಮುಲುಗೆ ಖೆಡ್ಡಾ ತೋಡಿದ್ರಾ ಕುಚುಕು ಗೆಳೆಯ?

    ಬೆಂಗಳೂರು: ಬಳ್ಳಾರಿ ಉಪಚುನಾವಣೆಯಲ್ಲಿ ಶ್ರೀರಾಮುಲು ಸೋಲಿಗೆ ತೆರೆಮರೆಯಲ್ಲಿ ಕುಚುಕು ಗೆಳೆಯ ಜನಾರ್ದನ ರೆಡ್ಡಿ ಹೇಳಿಕೆಯೇ ಮುಳುವಾಯ್ತಾ ಎನ್ನುವ ಚರ್ಚೆಯೊಂದು ಈಗ ಬಳ್ಳಾರಿಯಲ್ಲಿ ಆರಂಭವಾಗಿದೆ.

    ಹೌದು, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 2.43 ಲಕ್ಷಕ್ಕೂ ಅಧಿಕ ಮತ ಪಡೆಯುವ ಮೂಲಕ ಜೆ.ಶಾಂತಾರನ್ನು ಸೋಲಿಸಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಶಾಸಕ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಹಾಗು ಸೋದರಿ ಜೆ.ಶಾಂತಾ ಪರವಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ತಮ್ಮ ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಹಠವು ಶ್ರೀರಾಮುಲು ಅವರಲ್ಲಿ ಕಂಡಿತ್ತು. ಫಲಿತಾಂಶಕ್ಕೂ ಮುನ್ನ ಶ್ರೀರಾಮುಲು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಡಿಮೆ ಅಂತರದಿಂದ ಗೆಲುವು ಕಾಣುತ್ತೇವೆ ಎಂದು ಸ್ಫರ್ಧೆ ಕಠಿಣವಾಗಿದೆ ಎಂದು ಸೂಚನೆಯನ್ನು ನೀಡಿದ್ದರು.

    ಬಳ್ಳಾರಿಯಲ್ಲಿ ಅಭ್ಯರ್ಥಿಗಳು ನೆಪಕ್ಕೆ ಮಾತ್ರ. ಇಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವರ್ಸಸ್ ಶ್ರೀರಾಮುಲು ನಡುವಿನ ಯುದ್ಧವೆಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಕೇಳಿಬಂದಿತ್ತು. ಚುನಾವಣೆಗೂ ಮುನ್ನ ಮಾಜಿ ಸಚಿವ ಜನಾರ್ದನ ರೆಡ್ಡಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನನ್ನ ಶಾಪದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ರಾಕೇಶ್ ನಿಧನರಾಗಿದ್ದು ಎಂದು ಹೇಳುವ ಮೂಲಕ ಸಾವಿನಲ್ಲೂ ರಾಜಕೀಯ ಮಾಡಿದ್ದರು. ಇದೇ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಬಳ್ಳಾರಿ ಜನತೆಯನ್ನು ಭಾವನಾತ್ಮಕವಾಗಿ ಸೆಳೆದುಕೊಂಡರು. ಅಷ್ಟೇ ಅಲ್ಲದೇ ಸಿದ್ದರಾಮಯ್ಯನವರು ಭಾವನಾತ್ಮಕ ಟ್ವೀಟ್ ಮಾಡಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

    ರೆಡ್ಡಿ ಹೇಳಿಕೆಗೆ ಸ್ವಪಕ್ಷಿಯರಿಂದಲೇ ಖಂಡನೆ ವ್ಯಕ್ತವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹ ಖಂಡಿಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಇದಾದ ನಂತರ ರೆಡ್ಡಿ ಕ್ಷಮೆ ಕೇಳಿ ವಿಚಾರವನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಾಣಬೇಕಾಯಿತು ಎಂದು ವಿಶ್ಲೇಷಣೆ ಕೇಳಿಬಂದಿದೆ. ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುವ ಜನಾರ್ದನ ರೆಡ್ಡಿ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಹೇಳಿದ್ರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ.

    ಚರ್ಚೆ ಹುಟ್ಟಿದ್ದು ಹೇಗೆ?
    ಶ್ರೀರಾಮುಲು ಬಳ್ಳಾರಿಯಲ್ಲಿ ಮೆರೆಯುತ್ತಿದ್ದಾರೆ. ಆದ್ರೆ ಈ ಅಧಿಕಾರಕ್ಕೆ ಮೂಲ ಕಾರಣವಾದ ಪತಿ ಬಳ್ಳಾರಿಗೆ ಬಾರದೇ ಸಂಕಷ್ಟದಲ್ಲಿದ್ದಾರೆ ಎಂದು ಜನಾರ್ದನ ರೆಡ್ಡಿ ಪತ್ನಿ ಅರುಣಾ ಅಸಮಾಧಾನಗೊಂಡಿದ್ದರಂತೆ. ಈಗ ಶಾಸಕರಾಗಿರುವ ಶ್ರೀರಾಮುಲು ಗೆಳೆಯನ ಸಂಕಷ್ಟದಲ್ಲಿಯೂ ಭಾಗಿ ಅಗುತ್ತಿಲ್ಲ. ಎಂದು ಅರುಣಾ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಹೀಗಾಗಿ ಮತದಾನಕ್ಕೂ ಮುನ್ನ ಜನಾರ್ದನ ರೆಡ್ಡಿ ಪಕ್ಷಕ್ಕೆ ಹಾನಿಯುಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಚರ್ಚೆಗಳು ಬಳ್ಳಾರಿಯ ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ.

    ಸೋಲು ಅನಾಥ:
    ಫಲಿತಾಂಶ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮುಲು, ಸೋಲು ಅನಾಥ, ಸಹೋದರಿ ಶಾಂತ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರಕ್ಕೆ ಬಂದಿದ್ದರು. ಶಾಸಕರಾದ ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ಜಿಲ್ಲೆಯ ಜನರು ನಮ್ಮನ್ನು ತಿರಸ್ಕಾರ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಗೆಲುವಿಗಾಗಿ ಹರಸಾಹಸ ಪಟ್ಟಿದ್ದರು. ಆದರೆ ಭಗವಂತ ನಮಗೆ ಫಲ ಕೊಟ್ಟಿಲ್ಲ. ಆದರೆ ಸರ್ಕಾರವನ್ನು ದುರುಪಯೋಗ ಪಡೆಸಿಕೊಂಡು ವಿ.ಎಸ್.ಉಗ್ರಪ್ಪ ಅವರನ್ನು ಗೆಲ್ಲಿಸಲಾಗಿದೆ. ಜಿಲ್ಲೆಯ ಜನರು ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈಗ ಕೈ ಬಿಟ್ಟರು ಅಂತಾ ನಾನು ಅವರನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇವಿಎಂ ದೂಷಿಸಲ್ಲ, ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುವ ಜಾಯಮಾನ ನಮ್ಮದಲ್ಲ: ಸಿ.ಟಿ.ರವಿ

    ಇವಿಎಂ ದೂಷಿಸಲ್ಲ, ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುವ ಜಾಯಮಾನ ನಮ್ಮದಲ್ಲ: ಸಿ.ಟಿ.ರವಿ

    ಬೆಂಗಳೂರು: ಇಂದು ಕರ್ನಾಟಕದ ಐದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಸರ್ಕಾರ ಕಿಲ ಕಿಲ ಅಂತಾ ನಗಲು ಆರಂಭಿಸಿದೆ. ಶಿವಮೊಗ್ಗ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೊಟದ ಅಭ್ಯರ್ಥಿಗಳು ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

    ಕರ್ನಾಟಕ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಈ ಕುರಿತು ಟ್ವಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುವ ಜಾಯಮಾನ ನಮ್ಮದಲ್ಲ. ಮುಂದೆ ದೊಡ್ಡ ಗುರಿ ಇದೆ ಎಂದು ಬರೆದು ಕಾರ್ಯಕರ್ತರನ್ನು ತಮ್ಮ ಟ್ವೀಟ್ ಮೂಲಕ ಹುರಿದುಂಬಿಸಿದ್ದಾರೆ.

    ಟ್ವೀಟ್ ನಲ್ಲಿ ಏನಿದೆ?
    ಚುನಾವಣಾ ಸೋಲನ್ನು ಕತ್ತಲಿಗೆ ಹೋಲಿಸಿ ಕಣ್ಣೀರಿಡುತ್ತಾ ಕೂರುವ ಜಾಯಮಾನ ನಮ್ಮ ಬಿಜೆಪಿ ಕಾರ್ಯಕರ್ತರದ್ದಲ್ಲ. ಕಾರ್ಯಕರ್ತರೇ ನಮ್ಮ ಶಕ್ತಿ ಮತ್ತು ಸ್ಪೂರ್ತಿ. ಸ್ನೇಹಿತರೇ ನಮ್ಮ ಮುಂದೆ ಬಹು ದೊಡ್ಡ ಗುರಿಯಿದೆ. ಅದರ ಕಡೆ ಸಾಗೋಣ. ಕರ್ನಾಟಕವನ್ನು ಬೆಳಕಿನತ್ತ ಕೊಂಡೊಯ್ಯೋಣ. ಜನಾದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದ್ರೆ ಅಪವಿತ್ರ ಮೃತ್ರಿ ಮಾಡಿಕೊಂಡವರ ಹಾಗೆ ನಾವು ಇವಿಎಂ ಯಂತ್ರಗಳನ್ನು ದೂಷಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ಇತ್ತ ಬಳ್ಳಾರಿ ಗೆಲುವಿನ ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ.ಶಿವಕುಮಾರ್, ಬಳ್ಳಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನನಗೆ ಜವಾಬ್ದಾರಿ ವಹಿಸಿತ್ತು. ಈ ಸಂದರ್ಭದಲ್ಲಿ ಕೆಲವರು ಅಭಿನಂದಿಸಿದ್ರು, ಇನ್ನು ಕೆಲವರು ಟೀಕೆ ಟಿಪ್ಪಣಿಗಳನ್ನು ಮಾಡಿದ್ರು. ಇವುಗಳನ್ನೆಲ್ಲಾ ನಾನು ಬಹಳ ಸಂತೋಷದಿಂದಲೇ ಸ್ವೀಕರಿಸಿದ್ದೆ. ನಾನು ಈ ಚುನಾವಣೆಯಲ್ಲಿ 3 ಜನಕ್ಕೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಲಿತಾಂಶಕ್ಕೂ ಮೊದಲೇ ಗೆದ್ದ ಅನಿತಾ ಕುಮಾರಸ್ವಾಮಿ..!

    ಫಲಿತಾಂಶಕ್ಕೂ ಮೊದಲೇ ಗೆದ್ದ ಅನಿತಾ ಕುಮಾರಸ್ವಾಮಿ..!

    ರಾಮನಗರ: ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಅನಿವಾರ್ಯವಾಗಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇನ್ನಷ್ಟೇ ಹೊರಬೀಳಲಿದ್ದು, ಈ ಮೊದಲೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆದ್ದಿದ್ದಾರೆ.

    ಹೌದು. ನಗರದಲ್ಲಿ ಅನಿತಾ ಕುಮಾರಸ್ವಾಮಿ ನೂತನ ಶಾಸಕಿ ಅಂತಾ ಬ್ಯಾನರ್ ಗಳು ರಾರಾಜಿಸ್ತಿವೆ. ಕಾರ್ಯಕರ್ತರು ಮತ ಎಣಿಕೆಗೂ ಮುನ್ನವೇ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ನೂತನ ಶಾಸಕಿ ಅಂತಾ ಬ್ಯಾನರ್ ಹಾಕಿದ್ದಾರೆ.

    ಬೆಂಗಳೂರು ಟು ರಾಮನಗರ ರಸ್ತೆಯಲ್ಲಿ ಈ ಬ್ಯಾನರ್ ಗಳು ರಾರಾಜಿಸ್ತಿವೆ. ರಾಮನಗರ ನೂತನ ಶಾಸಕಿಯಾಗಿ ಆಯ್ಕೆಯಾಗಿರುವ ಅನಿತಾ ಕುಮಾರಸ್ವಾಮಿಗೆ ಅಭಿನಂದನೆಗಳು ಅಂತ ಬ್ಯಾನರ್ ನಲ್ಲಿ ಶುಭಾಶಯ ಕೋರಿದ್ದಾರೆ. ಈ ಮೂಲಕ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಯೇ ಗೆಲ್ಲೋದು ಅನ್ನೋ ವಿಶ್ವಾಸದಲ್ಲಿ ಕಾಯಕರ್ತರು ಈ ಬ್ಯಾನರ್ ಹಾಕಿದ್ದಾರೆ ಎನ್ನಲಾಗುತ್ತಿದೆ.

    ರಾಮನಗರದಲ್ಲಿ ಉಪ ಸಮರ ರಂಗೇರುವ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದ್ರೆ, ಕಾಂಗ್ರೆಸ್‍ನಿಂದ ವಲಸೆ ಬಂದ ಮುಖಂಡನನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿ ಟಾಂಗ್ ಕೊಟ್ಟಿದ್ದೇವೆ ಅಂತ ಬೀಗುತ್ತಿದ್ದ ಯಡಿಯೂರಪ್ಪ-ಯೋಗೇಶ್ವರ್ ದಂಡಿಗೆ ಮತದಾನಕ್ಕೆ ಎರಡು ದಿನಗಳ ಹಿಂದೆ ಗರ್ವಭಂಗ ಆಯ್ತು. ಡಿಕೆಶಿ ಬ್ರದರ್ಸ್ ಆಡಿದ ಕಡೇ ಕ್ಷಣದ ಆಟದಲ್ಲಿ ಎದುರಾಳಿಯೇ ಇಲ್ಲದೇ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿಯವ್ರದ್ದೇ ಆಟವಾಗಿ ಮಾರ್ಪಟ್ಟಿತ್ತು. ಪತಿ ಖಾಲಿ ಮಾಡಿದ್ದ ಕ್ಷೇತ್ರಕ್ಕೆ ಪತ್ನಿಯೇ ಅಧಿಪತಿ ಆಗ್ತಾರಾ ಅನ್ನೋದಕ್ಕೆ ಕೆಲವೇ ಹೊತ್ತಲ್ಲಿ ಉತ್ತರ ಸಿಗಲಿದೆ.

    ರಾಮಗರದಲ್ಲಿ ಜೆಡಿಎಸ್ ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಎಲ್ ಚಂದ್ರಶೇಖರ್ ಅವರು ಅಭ್ಯರ್ಥಿಯಾಗಿದ್ದರು. ಆದ್ರೆ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಜಮಖಂಡಿ ಬಂಡಿ ಯಾರ ಕೈಗೆ..?

    ಜಮಖಂಡಿ ಬಂಡಿ ಯಾರ ಕೈಗೆ..?

    ಬಾಗಲಕೋಟೆ: ಕಾಂಗ್ರೆಸ್ ಶಾಸಕರಾಗಿದ್ದ ಸಿದ್ದುನ್ಯಾಮೇಗೌಡರ ನಿಧನದಿಂದ ಅನಿವಾರ್ಯವಾಗಿ ನಡೆಯುತ್ತಿರುವ ಉಪಚುನಾವಣೆ ಇದಾಗಿದೆ. ಕಳೆದ ಚುನಾವಣೆಯಲ್ಲಿ ಕಷ್ಟಪಟ್ಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ದೋಸ್ತಿಯೋ ಅಥವಾ ಬಿಜೆಪಿಯೋ ಎಂಬುದು ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಜಮಖಂಡಿಯಲ್ಲಿ ಬಂಡಿ ಎಳೆಯೋರು ಯಾರು ಅನ್ನೋದು ಕುತೂಹಲ ಕೆರಳಿಸಿದೆ.

    ಬಾಗಲಕೋಟೆಯ ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮೇಗೌಡ ಹಾಗೂ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಮಧ್ಯೆ ಹಣಾಹಣಿ ನಡೆದಿದೆ. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 2,03,681 ಒಟ್ಟು ಮತದಾರರಿದ್ದಾರೆ. ಇದರಲ್ಲಿ ಪುರುಷರು- 1,02,216 ಹಾಗೂ 1,01,460 ಮಹಿಳಾ ಮತದಾರರಿದ್ದಾರೆ.  ಇದನ್ನೂ ಓದಿ: ಪ್ರತಿಷ್ಠೆಯ ಕಣ ಶಿವಮೊಗ್ಗದಲ್ಲಿ ಯಾರಿಗೆ ವಿಜಯಮಾಲೆ..?

    ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡೋದಾದ್ರೆ ಲಿಂಗಾಯತ (ಪಂಚಮಸಾಲಿ ಬಣಜಿಗ)- 28,000, ಹಾಲುಮತ- 22,000, ಗಾಣಿಗ ಲಿಂಗಾಯತ-20,000, ಮುಸ್ಲಿಂ- 20,000, ಜೈನ್- 10,000, ಎಸ್ಸಿ, ಎಸ್ಟಿ- 28,000, ಮರಾಠ/ಕ್ಷತ್ರೀಯ- 15,000, ರೆಡ್ಡಿ ಲಿಂಗಾಯತ್-8,500, ಇತರೆ ಸಮುದಾಯದಲ್ಲಿ 28,000 ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇದನ್ನೂ ಓದಿ: ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಹವಾ-ಮತದಾರರ ಒಲವು ಯಾರ ಅತ್ತ?

    2018ರ ಫಲಿತಾಂಶ ಹೀಗಿತ್ತು:
    ಕಾಂಗ್ರೆಸ್ ನಿಂದ ಸಿದ್ದು ನ್ಯಾಮೇಗೌಡ ಸ್ಪರ್ಧಿಸಿ 49,245 ಮತಗಳನ್ನು ಗಳಿಸಿದ್ದರು. ಇನ್ನು ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಸ್ಪರ್ಧಿಸಿ 46,450 ಮತಗಳನ್ನು ತಮ್ಮದಾಗಿಸಿಕೊಂಡಿದ್ದು, ಗೆಲುವಿನ ಅಂತರ- 2,795 ಆಗಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಮತದಾರನ ಒಲವು ದೋಸ್ತಿಗೋ, ಬಿಜೆಪಿಗೋ?


    ಕಾಂಗ್ರೆಸ್ ಸೋತರೆ ಏನಾಗುತ್ತೆ…?
    ಜಮಖಂಡಿಯಲ್ಲಿ ಈ ಬಾರಿ ಕಾಂಗ್ರೆಸ್ ಸೋತರೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್‍ಗೆ ಮುಖಭಂಗವಾಗುತ್ತದೆ. ಈ ಮೂಲಕ ಬಿಎಸ್‍ವೈ ವೀರಶೈವ-ಲಿಂಗಾಯತ ಸಮುದಾಯದ ನಾಯಕ ಅನ್ನೋದು ಮತ್ತೊಮ್ಮೆ ಸಾಬೀತಾಗುತ್ತದೆ. ಇಷ್ಟು ಮಾತ್ರವಲ್ಲದೇ ಉತ್ತರ ಕರ್ನಾಟಕದಲ್ಲಿ ಬಿಎಸ್‍ವೈ ಬಲಿಷ್ಠ ಅನ್ನೋದು ಪ್ರೂವ್ ಆಗುತ್ತದೆ. ಕಾಂಗ್ರೆಸ್‍ನಲ್ಲಿ ಡಿಸಿಎಂ ಪರಮೇಶ್ವರ್ ಪ್ರಭಾವ ಕುಗ್ಗಲಿದೆ. ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 104ರಿಂದ 105ಕ್ಕೆ ಹೆಚ್ಚಳವಾಗುತ್ತದೆ. ಬಿಎಸ್‍ವೈ ಮತ್ತೆ ಸಿಎಂ ಆಗುವ ಆಸೆ ಚಿಗುರಲಿದೆ. ಇದನ್ನೂ ಓದಿ: ಗಣಿ ನಾಡಿಗೆ ಯಾರು ಧಣಿ? ಬಳ್ಳಾರಿ ಮಹಾಭಾರತದಲ್ಲಿ ಪಾಂಡವರು ಯಾರು..?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗ, ಬಳ್ಳಾರಿ, ಮಂಡ್ಯ ಉಪಚುನಾವಣೆಯ ವಿವರ

    ಶಿವಮೊಗ್ಗ, ಬಳ್ಳಾರಿ, ಮಂಡ್ಯ ಉಪಚುನಾವಣೆಯ ವಿವರ

    ಬೆಂಗಳೂರು: ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಇಂದು ಮಿನಿ ಫೈಟ್ ನಡೆಯುತ್ತಿದ್ದು, ಮತದಾರರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಹುರುಪಿನಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಈ ಮೂರು ಜಿಲ್ಲೆಗಳ ಉಪಚುನಾವಣೆಯ ಕುರಿತು ವಿವರವಾಗಿ ನೋಡೋದಾದ್ರೆ…

    ಶಿವಮೊಗ್ಗ ಲೋಕಸಭಾ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಸಿಎಂ ಪುತ್ರರು ಕಣದಲ್ಲಿದ್ದಾರೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆದರೆ ಈ ಚುನಾವಣೆ ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಡುವಿನ ನೇರ ಹೋರಾಟವೆಂದೆ ಕರೆಯಲಾಗುತ್ತಿದೆ.

    ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ, 16,45,511 ಇದರಲ್ಲಿ ಪುರುಷರು 8,27,111 ಹಾಗೂ ಮಹಿಳೆಯರು 8,17,948 ಇದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಲಿಂಗಾಯಿತರು 2.7 ಲಕ್ಷ, ದಲಿತರು 2 ಲಕ್ಷ, ಈಡಿಗರು 2 ಲಕ್ಷ, ಬ್ರಾಹ್ಮಣರು 1.5 ಲಕ್ಷ, ಮುಸ್ಲಿಮರು 1.3 ಲಕ್ಷ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯಿತ, ದಲಿತರು ಹಾಗೂ ಈಡಿಗ ಸಮುದಾಯದ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಸದ್ಯದ ಶಿವಮೊಗ್ಗದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು 7ರಲ್ಲಿದ್ದರೆ, ಕಾಂಗ್ರೆಸ್ ಕೇವಲ 1 ಕ್ಷೇತ್ರವನ್ನು ವಶದಲ್ಲಿಟ್ಟುಕೊಂಡಿದೆ.

    2014ರ ಲೋಕಸಭಾ ಚುನಾವಣಾ ಫಲಿತಾಂಶ ಏನಾಗಿತ್ತು?
    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ತೊರೆದು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ತರಲು ಪುನಃ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 6,06,216 ಮತಗಳನ್ನು ಪಡೆದು 3,63,305 ಮತಗಳ ಅಂತರದಿಂದ ಭಾರೀ ಜಯಭೇರಿಯನ್ನು ಬಾರಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,42,611 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್ ನ ಗೀತಾ ಶಿವರಾಜ್ ಕುಮಾರ್ 2,40,636 ಮತಗಳನ್ನು ಗಳಿಸಿದ್ದರು.

    ಬಳ್ಳಾರಿ:
    ಬಳ್ಳಾರಿ ಲೋಕಸಭಾ ಉಪ ಚುನಾವಣಾ ಕಣ ರಂಗೇರಿದ್ದು, ಶ್ರೀರಾಮುಲು ಹಾಗೂ ಡಿಕೆ ಶಿವಕುಮಾರ್ ಅಭ್ಯರ್ಥಿಗಳ ನಡುವಿನ ನೇರ ಹೋರಾಟಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅಕ್ಕ ಜೆ.ಶಾಂತ ಅಖಾಡದಲ್ಲಿದ್ದರೆ, ಕಾಂಗ್ರೆಸ್ಸಿನಿಂದ ಕೊನೆಯ ಕ್ಷಣದಲ್ಲಿ ವಿ.ಎಸ್.ಉಗ್ರಪ್ಪ ಬಳ್ಳಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಪ್ರಮುಖವಾಗಿ ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ ಹಾಗೂ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದರು. ಬಳ್ಳಾರಿ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ತನ್ನ ಸಮ್ಮಿಶ್ರ ಸರ್ಕಾರದ ಇಡೀ ಮಂತ್ರಿಮಂಡಲವನ್ನೇ ಪ್ರಚಾರಕ್ಕೆ ಬಳಸಿಕೊಂಡಿತ್ತು.

    ಈ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,13,354 ಮತದಾರರಿದ್ದು, ಇದರಲ್ಲಿ ಪುರುಷರು 8,55,194 ಹಾಗೂ ಮಹಿಳೆಯರು 8,57,944 ಆಗಿದೆ. ಜಾತಿವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ವಾಲ್ಮೀಕಿ (ನಾಯಕ) 3 ಲಕ್ಷ, ಲಿಂಗಾಯತ 3 ಲಕ್ಷ, ಎಸ್‍ಸಿ (ಲಂಬಾಣಿ) 2.5 ಲಕ್ಷ, ಕುರುಬ 2.5 ಲಕ್ಷ, ಮುಸ್ಲಿಂ 2 ಲಕ್ಷ, ಗೊಲ್ಲ 1 ಲಕ್ಷ, ಗಂಗಾಮತ 70 ಸಾವಿರ, ಬಲಿಜ 70 ಸಾವಿರ, ರೆಡ್ಡಿ-ಕಮ್ಮ 40 ಸಾವಿರ ಹಾಗೂ ಉಪ್ಪಾರ ಸಮುದಾಯದ 35 ಸಾವಿರ ಮತದಾರರಿದ್ದಾರೆ. ಇದರಲ್ಲಿ ವಾಲ್ಮೀಕಿ, ಲಿಂಗಾಯಿತ, ಲಂಬಾಣಿ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕ ಮತಗಳು

    ಸದ್ಯದ ಬಳ್ಳಾರಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ರಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ರೆಡ್ಡಿ, ಶ್ರೀರಾಮುಲು ಹಾಗೂ ಡಿಕೆಶಿವಕುಮಾರ್, ಸಿಎಂ ಕುಮಾರಸ್ವಾಮಿ ನಡುವೆ ನೇರ ಹಣಾಹಣಿಯಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗಿತ್ತು?
    ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು 5,34,406 ಮತಗಳನ್ನು ಪಡೆದು, 85,144 ಮತಗಳ ಅಂತರದಿಂದ ವಿಜಯ ಸಾಧಿಸಿದ್ದರು. ಕಾಂಗ್ರೆಸ್ಸಿನ ಎನ್.ವೈ.ಹನುಮಂತಪ್ಪ 4,49,262 ಮತಗಳನ್ನು ಪಡೆದುಕೊಂಡಿದ್ದರು.

    ಮಂಡ್ಯ:
    ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಶಿವರಾಮೇಗೌಡರು ಕಣಕ್ಕೆ ಇಳಿದಿದ್ದಾರೆ. ಇತ್ತ ಬಿಜೆಪಿ ಡಾ.ಸಿದ್ದರಾಮಯ್ಯರನ್ನ ಕಣಕ್ಕೆ ಇಳಿಸಿದೆ. ಮಂಡ್ಯದಲ್ಲಿಯ ಜಾತಿ ಲೆಕ್ಕಾಚಾರ ಹೀಗಿದೆ. ಒಕ್ಕಲಿಗರು 8,10,000, ಪರಿಶಿಷ್ಟ ಜಾತಿ ಮತ್ತು ಪಂಗಡ 3,50,000, ಲಿಂಗಾಯತ 1,00,000, ಕುರುಬರು 1,00,000, ಮುಸ್ಲಿಮರು 80,000, ಬೆಸ್ತರು 40,000, ಬ್ರಾಹ್ಮಣರು 30,000, ಕ್ರೈಸ್ತರು 30,000, ಇತರರು 1,40,000 ಮತದಾರರಿದ್ದಾರೆ. ಇವುಗಳಲ್ಲಿ ಒಕ್ಕಲಿಗರು ಮತಗಳು ನಿರ್ಣಾಯಕವಾಗಲಿದೆ.

    ಮಂಡ್ಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಪತಾಕೆಯನ್ನು ಹಾರಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಸ್.ಪುಟ್ಟರಾಜು 5,24,370 ಮತಗಳನ್ನು ಪಡೆದು ಗೆಲುವು ಕಂಡಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿದ್ದ ರಮ್ಯಾ ಅವರು 5,18,852 ಮತ ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಬಿ.ಶಿವಲಿಂಗಯ್ಯ 86,993 ಮತ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

    ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

    – ಬಿಜೆಪಿ ಸೇರಿದ್ದು ಮೊದಲ ತಪ್ಪು, ಚುನಾವಣೆ ವಿಥ್ ಡ್ರಾ ಮಾಡಿದ್ದು ಎರಡನೇ ತಪ್ಪು
    – ಮಗನ ನಿರ್ಧಾರದ ಬಗ್ಗೆ ಮಾತನಾಡಲು ಅಸಹ್ಯ ಆಗ್ತಿದೆ
    – ರಾಜಕೀಯದಲ್ಲಿ ಆತ ಬಲಿಪಶು

    ಬೆಂಗಳೂರು: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಚಂದ್ರಶೇಖರ್ ಅವರ ತಂದೆ ಹಾಗು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಲಿಂಗಪ್ಪ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮಗನ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಮಗ ಬಿಜೆಪಿ ಸೇರಿದ್ದಾಗಿನಿಂದ ನಾನು ಅವನ ಜೊತೆ ಮಾತನಾಡಿಲ್ಲ. ಅವನು ಚುನಾವಣೆಯಿಂದ ಹಿಂದೆ ಸರಿದಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ಈ ರೀತಿ ಪಲಾಯನ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರನ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

    ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೆಳವಣಿಗೆಯನ್ನು ನಾನು ನೋಡಿಲ್ಲ. ಮತದಾನಕ್ಕೆ ಎರಡು ದಿನ ಮಾತ್ರ ಇದೆ. ನನ್ನ ಮಗ ಆಗಲಿ ಅಥವಾ ಯಾವುದೇ ಅಭ್ಯರ್ಥಿ ಈ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆ ನಂತರ ತಮ್ಮ ಅಭಿಪ್ರಾಯವನ್ನು ಪಕ್ಷದ ಮುಖಂಡರ ಮುಂದೆ ಹೇಳಬಹುದಿತ್ತು. ಚುನಾವಣೆಯ ಮೊದಲೇ ಹಿಂದೆ ಬಂದಿರೋದು ಆತ ಸೋಲನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದು ಮಗನ ನಿರ್ಣಯದ ಬಗ್ಗೆ ಸಿಎಂ ಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

    ಇದೊಂದು ರಾಜಕೀಯ ಆತ್ಮಹತ್ಯೆ:
    ನನ್ನ ರಾಜಕೀಯ ಜೀವನದಲ್ಲಿ ರಾಮನಗರಕ್ಕೆ ದೇವೇಗೌಡರು, ಕುಮಾರಸ್ವಾಮಿ ಬಂದರೂ ಅಂತಾ ನಾನು ಎಲ್ಲಿ ಓಡಿ ಹೋಗಲಿಲ್ಲ. ಅಂಬರೀಶ್ ವಿರುದ್ಧ ನಿಂತಾಗಲೂ ಕೊನೆಯವರೆಗೂ ಹೋರಾಡಿದ್ದೇನೆ. ಚುನಾವಣೆಯಲ್ಲಿ ಫಲಿತಾಂಶ ಬರೋವರೆಗೂ ಹೋರಾಡುವುದು ಶೂರನ ಕರ್ತವ್ಯ. ಹೇಡಿಗಳು ಫಲಿತಾಂಶ ಮೊದಲೇ ಪಲಾಯನ ಮಾಡುತ್ತಾರೆ. ಇಂದು ನನ್ನ ಮಗ ತೆಗೆದುಕೊಂಡಿರುವ ನಿರ್ಧಾರ ಆತ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಸಮಾಧಾನ ಹೊರಹಾಕಿದರು.

    ಕಾಂಗ್ರೆಸ್ ಸೇರುವ ನಿರ್ಧಾರದ ಬಗ್ಗೆ ಚಂದ್ರಶೇಖರ್ ನನ್ನ ಜೊತೆ ಚರ್ಚಿಸಿಲ್ಲ. ಒಂದು ವೇಳೆ ಆತ ನನ್ನ ಸಲಹೆ ಪಡೆದಿದ್ದರೆ ಚುನಾವಣೆಯಿಂದ ಹಿಂದೆ ಸರಿಯಲು ಬಿಡುತ್ತಿರಲಿಲ್ಲ. ಬಿಜೆಪಿಗೆ ಹೋಗಬೇಡ ಅಂತಾ ಮನೆಗೆ ಕರೆಸಿ ಹೇಳಿದ್ರೂ ನನ್ನ ಮತು ಕೇಳಲಿಲ್ಲ. ಕಾಂಗ್ರೆಸ್ ನಮಗೆ ರಕ್ತಗತವಾಗಿದ್ದು, ಬೇರೆ ಪಕ್ಷಗಳು ನಮಗೆ ಇಷ್ಟವಾಗಲ್ಲ. ಎರಡು ದಿನದಲ್ಲಿ ಚುನಾವಣೆಯನ್ನು ಮುಂದಿಟ್ಟು ಪಲಾಯನ ಮಾಡುವುದು ಯಾವ ಸಿದ್ಧಾಂತ? ಅವನ ರಾಜಕೀಯ ಸಿದ್ಧಾಂತಗಳು ಏನೆಂಬುವುದು ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಮಗನನ್ನು ಕರೆಸಿಕೊಂಡು ಆತ ಅನುಸರಿಸುವ ಸಿದ್ಧಾಂತಗಳು ಏನು ಅಂತಾ ಮಾಹಿತಿ ಪಡೆದುಕೊಳ್ಳುತ್ತೇನೆ. ಚುನಾವಣೆಯಿಂದ ಪಲಾಯನ ಆಗುವರರನ್ನು ಶೂರರು ಅಂತಾ ಯಾರು ಕರೆಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಮಗ ಬಲಿಪಶು:
    ಬಿಜೆಪಿಯವರು ಮಗನನ್ನು ಬಲಿಪಶು ಮಾಡಿದರೋ ಏನೋ ಗೊತ್ತಿಲ್ಲ. ರಾಜಕೀಯ ರಂಗದಲ್ಲಿ ನನ್ನ ಮಗ ಬಲಿಪಶು ಆಗಿದ್ದಾನೆ. ಕಳೆದ 25 ವರ್ಷಗಳಿಂದ ಆತ ರಾಜಕೀಯದಲ್ಲಿ ಇದ್ದಾನೆ. ನನ್ನ ನಡೆಯನ್ನು ಆತ ಗಮನಿಸುತ್ತಾ ಬಂದಿದ್ದಾನೆ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ. ಯಾವತ್ತು ಆತ ರಾಜಕೀಯದ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಈ ಬಾರಿ ಟಿಕೆಟ್ ನಿನಗೆ ಕೊಡೋದು, ಎಲೆಕ್ಷನ್ ಗೆ ಸಿದ್ಧವಾಗು ಅಂತಾ ಹೇಳಿದ್ರು. ಆದ್ರೆ ಮಗ ಒಪ್ಪಿಕೊಳ್ಳಲಿಲ್ಲ. ಅನಿವಾರ್ಯವಾಗಿ ರಾಮನಗರ ಟಿಕೆಟ್ ಇಕ್ಬಾಲ್ ಹುಸೇನ್ ಅವರಿಗೆ ಸಿಕ್ಕಿತ್ತು. ಮಗನ ಈ ನಡವಳಿಕೆ ನೋಡಿ ನನಗೆ ಅಸಹ್ಯ ಆಗುತ್ತಿದೆ. ಈ ಕುರಿತು ಹೆಚ್ಚು ಮಾತನಾಡಲು ನನಗೆ ಮುಜುಗರ ಆಗ್ತಿದೆ. ಇಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಹಸ್ತಕ್ಷೇಪವಿಲ್ಲ. ಮಗ ಬಿಜೆಪಿಗೆ ಹೋಗಿದ್ದು ಮೊದಲನೇ ತಪ್ಪು, ಇವತ್ತು ಚುನಾವಣೆಯಿಂದ ಹಿಂದೆ ಬಂದಿದ್ದು ಎರಡನೇ ತಪ್ಪು. ಬೇರೆ ಯಾವ ಪಕ್ಷದ ನಾಯಕರ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡಲ್ಲ. ಮನೆಯಲ್ಲಿಯೂ ಆತ ನನ್ನ ಜೊತೆ ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.

    ನಾಮಪತ್ರ ಸಲ್ಲಿಸಲು ಹೋಗುವಾಗ ಆತನ ಆಪ್ತರು ನಿಮ್ಮ ತಂದೆಯ ಆಶೀರ್ವಾದ ಪಡೆದುಕೊಂಡು ಬಾ ಅಂತಾ ಸಲಹೆ ನೀಡಿದ್ದರಂತೆ. ಚಂದ್ರಶೇಖರ್ ನನ್ನ ಬಳಿಯೂ ಬರಲಿಲ್ಲ. ಒಂದು ವೇಳೆ ಆತ ಬಂದಿದ್ದರೂ ನನ್ನ ಕಾಲುಗಳನ್ನು ಮುಟ್ಟಲು ಸಹ ನಾನು ಬಿಡುತ್ತಿರಲಿಲ್ಲ ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ವಿರೋಧ

    ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ವಿರೋಧ

    ಬೆಂಗಳೂರು: ಶನಿವಾರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭಾ ಮತ್ತು ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರ ಹಾಗು ಎರಡು ವಿಧಾನಸಭಾ ಉಪಚುನಾವಣೆಗ ದಿನಾಂಕವನ್ನು ನಿಗದಿ ಮಾಡಿದೆ. ಇತ್ತ ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

    ಶಿಕಾರಿಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಉಪ ಚುನಾವಣೆ ಅನಗತ್ಯವಾಗಿತ್ತು. ಕೊನೆ ಕ್ಷಣದವರೆಗೂ ಲೋಕಸಭಾ ಉಪಚುನಾವಣೆ ಇರುವುದಿಲ್ಲ ಎಂದೇ ಭಾವಿಸಿದ್ದೆವು. ಈಗ ಆಯ್ಕೆ ಆಗುವವರು ಕೇವಲ ಐದು ತಿಂಗಳು ಮಾತ್ರ ಸಂಸತ್ ಸದಸ್ಯರಾಗಿರುತ್ತಾರೆ. ಈ ಕಾರಣದಿಂದ ಯಾವುದೇ ಪಕ್ಷದವರಿಗೂ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಚುನಾವಣಾ ಆಯೋಗದ ತೀರ್ಮಾನವನ್ನು ಅನಿವಾರ್ಯವಾಗಿ ಸ್ವಾಗತಿಸುತ್ತೇವೆ ಎಂದರು.

    ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ. ಶಿವಮೊಗ್ಗದ ಅಭ್ಯರ್ಥಿ ಇಂದು ಹಾಗೂ ಮಂಡ್ಯ ಅಭ್ಯರ್ಥಿಯನ್ನು ಸೋಮವಾರ ಅಂತಿಮಗೊಳಿಸಲಿದ್ದೇವೆ. ಪ್ರಧಾನಿ ಮೋದಿಯವರ ಸಾಧನೆಯನ್ನು ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಇದನ್ನು ಇಟ್ಟುಕೊಂಡು ಮುಂಬರುವ ಚುನಾವಣೆ ಎದುರಿಸುತ್ತೆವೆ. ಈ ಉಪ ಚುನಾವಣೆ ಮುಂದಿನ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇತ್ತ ಬಿಜೆಪಿ ಶಾಸಕ ಸುರೇಶ್ ಕುಮಾರ್, ಈಗ ಸಂಸತ್‍ಗೆ ಆಯ್ಕೆಯಾಗುವ ಅಭ್ಯರ್ಥಿಗಳ ಅಧಿಕಾರ ಅವಧಿ ಗರಿಷ್ಠ ನಾಲ್ಕು ತಿಂಗಳ ಮಾತ್ರ. ಉಪ ಚುನಾವಣೆ ಬೇಕಿತ್ತಾ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv