Tag: Karnataka BJP

  • ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

    ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

    ಬೆಂಗಳೂರು: ಶಾಸಕ ಬಿ ವೈ ವಿಜಯೇಂದ್ರ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಸೋಮವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ನಿಕಟಪೂರ್ವ ಮುಖ್ಯಮಂತ್ರಿ, ನಮ್ಮೆಲ್ಲರ ಹಿರಿಯರಾದ ಬಸವರಾಜ ಬೊಮ್ಮಾಯಿ ಅವರನ್ನು ದೀಪಾವಳಿ ಶುಭ ಸಂದರ್ಭದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ. ಅಲ್ಲದೆ ಮಾರ್ಗದರ್ಶನವನ್ನು ಕೋರಿದ್ದೇನೆ. ಅವರು ಬಹಳ ಸಂತೋಷ ಪಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ ನಿನ್ನ ನೇಮಕ ಮಾಡುವ ಮೂಲಕ ರಾಷ್ಟ್ರೀಯ ನಾಯಕರು ಅತ್ಯುತ್ತಮ ನಿರ್ಣಯ ಮಾಡಿದ್ದಾಗಿ ಬೊಮ್ಮಾಯಿಯವರು ಹೇಳಿದ್ದಾರೆಂದು ತಿಳಿಸಿದರು.

    ಈ ನೇಮಕದಿಂದ ರಾಜ್ಯಕ್ಕೆ, ರಾಜ್ಯ ಬಿಜೆಪಿಗೆ (Karnataka BJP) ದೊಡ್ಡ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದ್ದಾಗಿ ವಿವರಿಸಿದರು. ನಾನಷ್ಟೇ ಅಲ್ಲ, ಹಿರಿಯರೆಲ್ಲರೂ ನಿನ್ನ ಜೊತೆ ಇರಲಿದ್ದೇವೆ. ಸಹಕಾರ ನೀಡುವ ಮತ್ತು ಮಾರ್ಗದರ್ಶನ ನೀಡುವ ಮಾತನಾಡಿದ್ದಾರೆ ಎಂದರು.  ಇದನ್ನೂ ಓದಿ: ದೀಪಾವಳಿಗೆ ಭಾರತದ ಕಂಪನಿಗಳು ದೀರ್ಘ ರಜೆ ನೀಡಲ್ಲ ಯಾಕೆ – ಎಡೆಲ್ವೀಸ್ ಮ್ಯೂಚುವಲ್‌ ಫಂಡ್‌ ಸಿಇಒ ಪ್ರಶ್ನೆ

    ದೇಶದ ಭವಿಷ್ಯ ರೂಪಿಸುವ ಮುಂಬರುವ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ನಿನ್ನ ನೇತೃತ್ವದಲ್ಲಿ ಮಾಡೋಣ ಎಂದು ತಿಳಿಸಿದ್ದಾರೆ. ಇದೇ 15ರಂದು ಬುಧವಾರ ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ತಾವು ಬಂದು ಆಶೀರ್ವಾದ ಮಾಡಬೇಕೆಂದು ಕೋರಿದ್ದೇನೆ. ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

     

    ಈ ವೇಳೆ ಬಿ.ವೈ.ವಿಜಯೇಂದ್ರ ಅವರನ್ನು ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿ ಶುಭ ಹಾರೈಸಿದರು. ಶಾಸಕ ಕೃಷ್ಣಪ್ಪ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಪಂಚರಾಜ್ಯಗಳ ಚುನಾವಣೆ ಘೋಷಣೆ – ರಾಜ್ಯ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಜವಾಬ್ದಾರಿ ಹಂಚಿಕೆ

    ಪಂಚರಾಜ್ಯಗಳ ಚುನಾವಣೆ ಘೋಷಣೆ – ರಾಜ್ಯ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಜವಾಬ್ದಾರಿ ಹಂಚಿಕೆ

    ನವದೆಹಲಿ: ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣಾ (Five State Assembly Election) ದಿನಾಂಕ ಘೋಷಣೆಯಾಗಿದೆ. ಮುಂದಿನ ನವೆಂಬರ್ 7 ರಿಂದ 30ರ ವರೆಗೆ ಪಂಚ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ, ಬಿಜೆಪಿ ಹೈಕಮಾಂಡ್ (BJP High Command) ಪಕ್ಷದ ಶಾಸಕರಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಿಳೆಯರನ್ನ ರೇಪ್‌ ಮಾಡ್ತಿದ್ದಾರೆ, ಮಕ್ಕಳನ್ನ ಕೊಲ್ತಿದ್ದಾರೆ- ಹಮಾಸ್‌ ಉಗ್ರರ ಕರಾಳ ಮುಖ ಬಿಚ್ಚಿಟ್ಟ ಭಾರತದ ಇಸ್ರೇಲ್‌ ಮಹಿಳೆ

    ಪಕ್ಷದ 40-45 ಶಾಸಕರಿಗೆ ಚುನಾವಣಾ ಜವಾಬ್ದಾರಿ ವಹಿಸಿದ್ದು, ರಾಜ್ಯ ಬಿಜೆಪಿ ಶಾಸಕರು (Karnataka BJP MLAs) ಇಂದಿನಿಂದಲೇ ಪಂಚ ರಾಜ್ಯಗಳಲ್ಲಿ ಪಕ್ಷದ ಅಭ್ಯರ್ಥಿಗಳ ಚುನಾವಣಾ ಕೆಲಸಗಳನ್ನು ನಿರ್ವಹಿಸಲಿದ್ದಾರೆ. ಶಾಸಕ ಮುನಿರತ್ನಗೆ ತೆಲಂಗಾಣ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಹೊಣೆ ನೀಡಲಾಗಿದ್ದು, ಇಂದು (ಅ.12) ಬೆಳಗ್ಗೆ ತೆಲಂಗಾಣಕ್ಕೆ ತೆರಳಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಮೊದಲ ಹಂತದಲ್ಲಿ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಇದನ್ನೂ ಓದಿ: 10ನೇ ತರಗತಿ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಟೀಚರ್‌; ಮತಾಂತರಕ್ಕೂ ಒತ್ತಾಯ – ಕೇಸ್‌ ದಾಖಲು

    ನವೆಂಬರ್ 7 ರಂದು ಮಿಜೋರಾಂನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಛತ್ತೀಸಗಢದಲ್ಲಿ ನ.7 ಮತ್ತು ನ.17 ರಂದು ಎರಡು ಹಂತಗಳಲ್ಲಿ ಮತದಾನ ಇರುತ್ತದೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯು ನ.17 ರಂದು ಒಂದೇ ಹಂತದಲ್ಲಿ ನಡೆಯಲಿದೆ. ನಂತರ ನ.23 ರಂದು ರಾಜಸ್ಥಾನದಲ್ಲಿ ಮತ್ತು ನ.30 ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಇಸ್ರೇಲ್‍ನಿಂದ ಭಾರತೀಯರನ್ನು ಕರೆತರಲು ಅಪರೇಷನ್ ಅಜಯ್ ಆರಂಭಿಸಿದ ಕೇಂದ್ರ ಸರ್ಕಾರ

    ಮಿಜೋರಾಂನಲ್ಲಿ 8.52 ಲಕ್ಷ, ಛತ್ತೀಸ್‌ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಮತ್ತು ತೆಲಂಗಾಣದಲ್ಲಿ 3.17 ಕೋಟಿ ಮತದಾರರಿದ್ದಾರೆ. ಸುಮಾರು 60 ಲಕ್ಷ ಯುವಜನತೆ ಮೊದಲ ಬಾರಿಗೆ (18-19 ವರ್ಷ) 5 ರಾಜ್ಯಗಳ ಚುನಾವಣೆಗಳಲ್ಲಿ ಭಾಗವಹಿಸುತ್ತಾರೆ. ಅರ್ಹತಾ ದಿನಾಂಕಗಳ ತಿದ್ದುಪಡಿಯಿಂದಾಗಿ 15.39 ಲಕ್ಷ ಯುವ ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಾಗಿ ಒಟ್ಟು 679 ವಿಧಾನಸಭಾ ಕ್ಷೇತ್ರಗಳಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಇದನ್ನೂ ಓದಿ: ಆಮ್ ಆದ್ಮಿಯನ್ನು ಕೊನೆಗಾಣಿಸಲು ಬಿಜೆಪಿ ಅಭಿಯಾನ ಆರಂಭಿಸಿದೆ: ಕೇಜ್ರಿವಾಲ್ ಆರೋಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‌ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸಲು ಸಿದ್ದು, ಸಿಧು ಸಾಕು: ಬಿಜೆಪಿ ವ್ಯಂಗ್ಯ

    ಕಾಂಗ್ರೆಸ್‌ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸಲು ಸಿದ್ದು, ಸಿಧು ಸಾಕು: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಕರ್ನಾಟಕ ಹಾಗೂ ಪಂಜಾಬ್‌ನಲ್ಲಿ ಕಾಂಗ್ರೆಸ್‌ ನಾಯಕರು ಶೀತಲ ಸಮರ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಮತ್ತು ನವಜೋತ್‌ ಸಿಂಗ್‌ ಸಿಧು ವಿರುದ್ಧ ಹರಿಹಾಯ್ದಿದೆ.

    ಪಂಜಾಬ್‌ನಲ್ಲಿ ಚುಣಾವಣೆಗೆ ದಿನಗಣನೆ ಆರಂಭವಾದರೂ ಬಂಡಾಯ ಶಮನವಾಗಿಲ್ಲ. ಅಲ್ಲಿ ಸಿಧು, ಇಲ್ಲಿ ಸಿದ್ದು. ಕಾಂಗ್ರೆಸ್‌ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸುವುದಕ್ಕೆ ಇವರಿಬ್ಬರೇ ಸಾಕು ಎಂದು ಟ್ವೀಟ್‌ ಮಾಡಿ ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: Punjab Election: ಚನ್ನಿ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ – ರಾಹುಲ್‌ ಗಾಂಧಿ ಅಧಿಕೃತ ಘೋಷಣೆ

    ಬಿಜೆಪಿ ಟ್ವೀಟ್‌ನಲ್ಲೇನಿದೆ?
    ರಾಜ್ಯ ಕಾಂಗ್ರೆಸ್ ಶೀತಲ ಸಮರದ ಬಿಸಿ ಈಗ ದಿಲ್ಲಿ ನಾಯಕರಿಗೂ ತಟ್ಟಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ತೇಪೆ ಹಚ್ಚಲು ರಾಹುಲ್ ಗಾಂಧಿ ಅವರು ತಮ್ಮ ಆಪ್ತ ಸಲಹೆಗಾರರನ್ನೇ ಸಿದ್ದರಾಮಯ್ಯ ನಿವಾಸಕ್ಕೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ತೀವ್ರ “ನಿಗಾ” ಘಟಕ ಸೇರುವಂತಾಗಿದೆಯೇ?

    ಒಂದೆಡೆ ಅಧ್ಯಕ್ಷರು ಹಿಜಬ್ ಬಗ್ಗೆ ಪಕ್ಷದವರಿಗೆ ಎಲ್ಲಿಯೂ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಅಧ್ಯಕ್ಷರ ಮಾತನ್ನು ಧಿಕ್ಕರಿಸಿ ಹಿಜಬ್ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ಮಾನ್ಯ ಕೆಪಿಸಿಸಿ ಅಧ್ಯಕ್ಷರೇ, ಮುಂದಿನ ನೋಟಿಸ್ ಸಿದ್ದರಾಮಯ್ಯ ಹೆಸರಿಗೆ ಕಳುಹಿಸುತ್ತೀರಾ? ಇದನ್ನೂ ಓದಿ: ಸಿದ್ದರಾಮಯ್ಯರ ಮುತ್ಸದ್ಧಿತನ ಮಸುಕಾಗಿ ತಾಲಿಬಾನ್ ಭೂತ ಹೊಕ್ಕಿದೆ: ಸಿ.ಟಿ. ರವಿ

    ಕಾಂಗ್ರೆಸ್ ಪಕ್ಷಕ್ಕೆ ಪಂಚರಾಜ್ಯಗಳ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕೋ ಇಲ್ಲ ಸಿಧು, ಸಿದ್ದರಾಮಯ್ಯ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೋ ಎಂಬುದು ತಿಳಿಯದಾಗಿದೆ. ಇವರಿಬ್ಬರ ಜಗಳದಿಂದ ರಾಹುಲ್ ಗಾಂಧಿ ಅವರು ಬೇಸತ್ತು ಹೋಗಿದ್ದಾರೆ. ಪರಿಹಾರಕ್ಕಾಗಿ ಮತ್ತೊಂದು ವಿದೇಶ ಪ್ರವಾಸ ಮಾಡುವುದು ಖಚಿತವಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

  • 150 ಸ್ಥಾನಗಳ ಗುರಿ, ಸಂಘಟನೆಗೆ ಒತ್ತು‌ ನೀಡಲು‌ ಸೂಚನೆ: ಅರುಣ್ ಸಿಂಗ್

    150 ಸ್ಥಾನಗಳ ಗುರಿ, ಸಂಘಟನೆಗೆ ಒತ್ತು‌ ನೀಡಲು‌ ಸೂಚನೆ: ಅರುಣ್ ಸಿಂಗ್

    ಹುಬ್ಬಳ್ಳಿ: ಪಕ್ಷ ಸಂಘಟನೆಗೆ ಒತ್ತು‌ ಕೊಡಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಶಪಥ‌ ಮಾಡಬೇಕು ಎಂದು ಪಕ್ಷದ ಎಲ್ಲಾ ನಾಯಕರಿಗೆ ಸೂಚಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

    ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕಾರಿಣಿ ‌ಸಭೆ ಮುಗಿಸಿಕೊಂಡು ದೆಹಲಿಗೆ ತೆರಳುವ ಮೊದಲು ಮಾಧ್ಯಮದವರ ಜೊತೆ ಮಾತನಾಡಿ, ನಾವು ಎರಡು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪಕ್ಷದ ಸಾಧನೆಗಳನ್ನು ‌ಜನರ ಮುಂದಿಟ್ಟು ಚುನಾವಣೆ ಎದುರಿಸಲಿದ್ದೇವೆ ಎಂದರು. ಇದನ್ನೂ ಓದಿ: ಹೈಜಾಕ್ ಮಾಡೋದಕ್ಕೆ ಮೇಕೆದಾಟು ಯೋಜನೆಯನ್ನು ಹೆಚ್‌ಡಿಕೆ ಮಾಡಿದ್ರಾ: ಸಿದ್ದರಾಮಯ್ಯ ತಿರುಗೇಟು

    ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂಗಳ ಹತ್ಯೆಯಾಗುತ್ತಿತ್ತು. ದೊಡ್ಡ ದೊಡ್ಡ ಭ್ರಷ್ಟಾಚಾರಗಳು ನಡೆದಿದ್ದವು. ಹೀಗಾಗಿ ಕಾಂಗ್ರೆಸ್ ಮೇಲೆ ದೇಶದ ಜನರಿಗೆ ವಿಶ್ವಾಸವಿಲ್ಲ. ಕಾಂಗ್ರೆಸ್‌ನಲ್ಲಿ ಒಳಜಗಳ ನಡೆಯುತ್ತಿದೆ. ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು. ಮುಂದಿನ ಚುನಾವಣೆಯಲ್ಲಿ 150 ಕ್ಕೂ ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಚುನಾವಣೆಗೂ ನಾವೆಲ್ಲ ಸನ್ನದ್ಧರಾಗಿದ್ದೇವೆ ಎಂದರು.

    ಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಜನ ವಿರೋಧಿ ನೀತಿ ಬಗ್ಗೆಯೂ ಚರ್ಚೆ ಆಯಿತು. ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೆಲ್ಲವನ್ನೂ ಜನರೆದುರು ಇಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಎಚ್‌ಡಿಕೆ ಒಳ್ಳೆಯ ನಾಯಕ ಹಾಗೂ ಸಾಹಿತಿ: ಡಿಕೆಶಿ ವ್ಯಂಗ್ಯ

  • ಹುಬ್ಬಳ್ಳಿಯಲ್ಲಿ ನಾಳೆಯಿಂದ ಎರಡು ದಿನ ಕೇಸರಿ ಕಹಳೆ – ಕೆಲ ಸಚಿವರಿಗೆ ಢವಢವ, ಜೆ.ಪಿ.ನಡ್ಡಾ ಬರ್ತಾರಾ..?

    ಹುಬ್ಬಳ್ಳಿಯಲ್ಲಿ ನಾಳೆಯಿಂದ ಎರಡು ದಿನ ಕೇಸರಿ ಕಹಳೆ – ಕೆಲ ಸಚಿವರಿಗೆ ಢವಢವ, ಜೆ.ಪಿ.ನಡ್ಡಾ ಬರ್ತಾರಾ..?

    ಬೆಂಗಳೂರು: ಬಿಜೆಪಿಯಲ್ಲಿ ಕ್ಷಣಕ್ಕೊಂದು ಹೇಳಿಕೆ, ದಿನಕ್ಕೊಂದು ಕುತೂಹಲಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಪ್ಲಾನ್ ಮಾಡಿದ್ದು ಕೈ ಕಟ್ ಬಾಯಿ ಮುಚ್ಚಿ..! ಎಂಬ ಸಂದೇಶ ರವಾನೆ ಆಗಿದೆ. ನಾಳೆಯಿಂದ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಹೈಕಮಾಂಡ್‍ನ ಸಂದೇಶ ಎರಡನೇ, ಮೂರನೇ ಸಾಲಿನ ನಾಯಕರಿಗೆ ತಲುಪುವ ಸಾಧ್ಯತೆ ಇದೆ. ನಾಳೆ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಚಾಲನೆ ಸಿಗಲಿದ್ದು. ನಾಳೆಯೇ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೇಲುಸ್ತುವಾರಿಯಲ್ಲಿ ನಡೆಯಲಿದೆ.

    ಡಿಸೆಂಬರ್ 29ರ ಬುಧವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬಿಗ್ ಡೇ ಆಗಲಿದ್ದು, ಅವತ್ತೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ರಾಜ್ಯ ಬಿಜೆಪಿ ಘಟಕ ಆಹ್ವಾನ ನೀಡಿದೆ. ಡಿಸೆಂಬರ್ 29ರಂದೇ ಮಧ್ಯಾಹ್ನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಿಗದಿಯಾಗಿದೆ. ಅಂದುಕೊಂಡಂತೆ ಜೆ.ಪಿ.ನಡ್ಡಾ ಹುಬ್ಬಳಿಗೆ ಆಗಮಿಸಿದ್ರೆ ಕಾರ್ಯಕಾರಿಣಿ ಮಹತ್ವ ಪಡೆದುಕೊಳ್ಳಲಿದೆ. ಇದನ್ನೂ ಓದಿ: ಕಸ ಎಸೆದ ಯುವಕನಿಗೆ ರಸ್ತೆ ಮಧ್ಯೆ ಸಿಟಿ ರವಿ ಕ್ಲಾಸ್

    ಇನ್ನು ಸಂಪುಟ ಪುನಾರಚನೆ ಸುಳಿವು ಕಾರ್ಯಕಾರಿಣಿಯಲ್ಲೇ ಸಿಕ್ಕಿಬಿಡುತ್ತಾ.?, ಸಂಕ್ರಾಂತಿ ಬಳಿಕ ಸಂಪುಟ ಪುನಾರಚನೆ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಕ್ಯಾಬಿನೆಟ್‍ನಲ್ಲಿ ಇರುವ ಹಾಲಿ ಸಚಿವರಲ್ಲಿ ಕೆಲ ಹಿರಿತಲೆಗಳಿಗೆ, ಕೆಲ ವಲಸಿಗರಿಗೂ ಟೆನ್ಷನ್ ಶುರುವಾಗಿದೆ. ಹೈಕಮಾಂಡ್ ಏನ್ ಮಾಡುತ್ತೆ.. ನಮ್ಮನ್ನ ಉಳಿಸ್ತಾರಾ.. ತೆಗೆದುಬಿಡ್ತಾರಾ ಅಂತಾ ಆತಂಕದಲ್ಲಿದ್ದಾರೆ ಕೆಲ ಸಚಿವರು. ಆದ್ರೆ ಬಜೆಟ್ ಮುಂದಿಟ್ಟುಕೊಂಡು, ಉತ್ತರ ಪ್ರದೇಶ ಚುನಾವಣೆ ಮುಂದಿಟ್ಟುಕೊಂಡು ಕರ್ನಾಟಕಕ್ಕೆ ಕೈ ಹಾಕುತ್ತಾ ಬಿಜೆಪಿ ಹೈಕಮಾಂಡ್ ಅನ್ನೋ ಕುತೂಹಲ ಮನೆ ಮಾಡಿದೆ. ಈ ನಡುವೆ ಪದೇ ಪದೇ ಸಂಪುಟ ಪುನಾರಚನೆ ಬಗ್ಗೆ, ಬೇರೆ ಬೇರೆ ರಾಜಕೀಯ ಬದಲಾವಣೆಗಳ ಬಗ್ಗೆ ಮಾತಾಡುವ ನಾಯಕರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿ.ಟಿ.ರವಿ ಅಸಮಾಧಾನ

    ಇನ್ನೊಂದೆಡೆ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಸೋಲಿನ ಬಗ್ಗೆಯೂ ಬಿಸಿ ಬಿಸಿ ಚರ್ಚೆ ನಡೆದ್ರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಒಟ್ನಲ್ಲಿ ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ನಡೆಯುವ ರಾಜ್ಯ ಕಾರ್ಯಕಾರಿಣಿ ಆಯಾ ಬೆಳವಣಿಗೆಗೆ ಅನುಗುಣವಾಗಿ ಮಹತ್ವ ಪಡೆದುಕೊಳ್ಳಲಿದ್ದು, ರಾಜಕೀಯ ಬದಲಾವಣೆ ಗಾಳಿ ಸುದ್ದಿಯಿಂದಾಗಿ ಹುಬ್ಬಳ್ಳಿ ಸಭೆ ಕೂಡ ಎಲ್ಲರ ಗಮನ ಸೆಳೆದಿದೆ. ಅಂತಿಮವಾಗಿ ಯಾರಿಗೆ ಯಾವ ಉತ್ತರ ಸಿಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.  ಇದನ್ನೂ ಓದಿ: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬೊಮ್ಮಾಯಿ

  • ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ಎಂಟಿಬಿ ನಾಗರಾಜ್

    ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ಎಂಟಿಬಿ ನಾಗರಾಜ್

    ಬೆಂಗಳೂರು: ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಈ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ವಸತಿ ಸಚಿವನಾಗಿದ್ದವನು ರಾಜೀನಾಮೆ ನೀಡಿ ಬಿಜೆಪಿ ಸೇರಿದವನು. ಹಾಗಾಗಿ ಅದಕ್ಕಿಂತ ಉನ್ನತವಾದ ಖಾತೆಯನ್ನು ನೀಡ್ತಾರೆ ಅನ್ನೋ ನಿರೀಕ್ಷೆ ಇತ್ತು. ವಸತಿ ಖಾತೆಗಿಂತ ಒಳ್ಳೆಯ ಖಾತೆಗಳು ಯಾವುದು ಅನ್ನೋದು ಸಿಎಂಗೆ ಗೊತ್ತಿದೆ. ಲೋಕೋಪಯೋಗಿ, ಇಂಧನ, ಸಾರಿಗೆ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಇಲಾಖೆಗಳನ್ನು ನನಗೆ ನೀಡಬಹುದಿತ್ತು. ಆದ್ರೆ ಸಿಎಂ ಬೊಮ್ಮಾಯಿ ಅವರು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ನೀಡಿದ್ದಾರೆ ಎಂದು ಎಂಟಿಬಿ ನಾಗರಾಜ್ ಬೇಸರ ಹೊರ ಹಾಕಿದರು.

    ಖಾತೆ ಬದಲಿಸುತ್ತಾರಾ ಅನ್ನೋ ನಂಬಿಕೆ ನನಗಿಲ್ಲ. ಖಾತೆ ಹಂಚಿಕೆಯಿಂದಾಗಿ ಬೇಸರವಾಗಿದ್ರೆ ವರಿಷ್ಠರ ಜೊತೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಮಾತಾಡಿ ನಿರ್ಧಾರ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ನಾನು ಸಿಎಂ ಬೊಮ್ಮಾಯಿ ಅವರ ಮಾತನ್ನು ಒಪ್ಪಿದ್ದೇನೆ ಎಂದರು.

    ಎರಡ್ಮೂರು ದಿನಗಳಲ್ಲಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ನನ್ನ ಹೇಳಿಕೆಗೆ ಇವತ್ತು ಸಹ ಬದ್ಧನಾಗಿದ್ದೇನೆ. ಸುಮಾರು ಮೂವತ್ತಕ್ಕೂ ಹೆಚ್ಚು ನಿಮಿಷ ಸಿಎಂ ಜೊತೆ ಮಾತನಾಡಿದ್ದು, ಅವರು ಸಹ ಕೆಲ ಸಲಹೆಗಳನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ 17 ಜನರಲ್ಲಿ ಕೇವಲ ಮೂವರಿಗೆ ಮಾತ್ರ ಒಳ್ಳೆಯ ಖಾತೆ ನೀಡಿರುವುದು ಬೇಸರಕ್ಕೆ ಕಾರಣವಾಗಿದೆ ಎಂದರು. ಇದನ್ನೂ ಓದಿ: ಮಂತ್ರಿ ಆಗದೇ ಇರುವದಕ್ಕೆ ಬೇಜಾರಿಲ್ಲ: ಲಕ್ಷ್ಮಣ ಸವದಿ

    ಇದೇ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಆದ್ರೆ ಇಬ್ಬರು ನಡುವಿನ ಸಭೆ ವಿಫಲವಾಗಿದೆ ಎನ್ನಲಾಗಿದೆ. ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆನಂದ್ ಸಿಂಗ್ ಹಿಂದೇಟು ಹಾಕಿದರು. ಇದನ್ನೂ ಓದಿ: ನಾನು ಹಠವಾದಿ, ಅಂದುಕೊಂಡಿದ್ದನ್ನ ಸಾಧಿಸದೇ ಬಿಡಲ್ಲ: ಸಚಿವ ಆನಂದ್ ಸಿಂಗ್

  • ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ

    ನೂತನ ಸಚಿವರಿಗೆ ಖಾತೆ ಹಂಚಿಕೆ – ಪಟ್ಟಿ ಪ್ರಕಟ

    ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯಲ್ಲಿಯೇ ಇರಿಸಿಕೊಂಡಿದ್ದಾರೆ. ಸಂಘ ನಿಷ್ಠರಿಗೆ ಪ್ರಬಲ ಖಾತೆಗಳ ಹಂಚಿಕೆಯಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೊದಲ ಬಾರಿ ಸಂಪುಟ ಪ್ರವೇಶಿಸಿರುವ ಸುನಿಲ್ ಕುಮಾರ್ ಪವರ್ ಫುಲ್ ಖಾತೆ ಇಂಧನ ಇಲಾಖೆಯೇ ಸಿಕ್ಕಿದೆ.

    ಖಾತೆ ಹಂಚಿಕೆ ಪಟ್ಟಿ
    * ಸಿಎಂ ಬಸವರಾಜ ಬೊಮ್ಮಾಯಿ – ಆರ್ಥಿಕ ಇಲಾಖೆ, ಗುಪ್ತಚರ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ
    * ಆರ್ ಅಶೋಕ್ – ಕಂದಾಯ
    * ಗೋವಿಂದ ಕಾರಜೋಳ – ಬೃಹತ್ ನೀರಾವರಿ ಇಲಾಖೆ
    * ಅರಗ ಜ್ಞಾನೇಂದ್ರ – ಗೃಹ ಇಲಾಖೆ
    * ಸುನಿಲ್ ಕುಮಾರ್ – ಇಂಧನ ಇಲಾಖೆ, ಕನ್ನಡ ಮತ್ತು ಸಂಸ್ಕøತಿ
    * ಬಿ.ಸಿ.ಪಾಟೀಲ್ -ಕೃಷಿ ಇಲಾಖೆ
    * ಸುಧಾಕರ್- ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ
    * ಕೆ.ಎಸ್.ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ
    * ಗೋಪಾಲಯ್ಯ – ಅಬಕಾರಿ ಇಲಾಖೆ
    * ಅಶ್ವಥ ನಾರಾಯಣ – ಐಟಿಬಿಟಿ, ಉನ್ನತ ಶಿಕ್ಷಣ ಇಲಾಖೆ
    * ಕೋಟ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ ಇಲಾಖೆ
    * ಮುರುಗೇಶ್ ನಿರಾಣಿ – ಬೃಹತ್ ಮತ್ತುಮಧ್ಯಮ ಕೈಗಾರಿಕೆ
    * ಶ್ರೀರಾಮುಲು – ಸಾರಿಗೆ, ಹಿಂದುಳಿದ ವರ್ಗಗಳ ಕಲ್ಯಾಣ
    * ಸೋಮಣ್ಣ – ವಸತಿ ಮತ್ತು ಮೂಲಸೌಕರ್ಯ
    * ಉಮೇಶ್ ಕತ್ತಿ – ಅರಣ್ಯ ಇಲಾಖೆ, ಆಹಾರ ಇಲಾಖೆ
    * ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ಇಲಾಖೆ, ಸಣ್ಣ ನೀರಾವರಿ ಇಲಾಖೆ
    * ಸಿ.ಸಿ.ಪಾಟೀಲ್- ಲೋಕೋಪಯೋಗಿ ಇಲಾಖೆ
    * ಶಶಿಕಲಾ ಜೊಲ್ಲೆ – ಮುಜರಾಯಿ ಇಲಾಖೆ, ಹಜ್ ಮತ್ತು ವಕ್ಫ್
    * ಎಸ್.ಅಂಗಾರ – ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಇಲಾಖೆ
    * ಆನಂದ್ ಸಿಂಗ್ – ಪ್ರವಾಸೋದ್ಯಮ ಇಲಾಖೆ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
    * ಮುನಿರತ್ನ – ತೋಟಗಾರಿಕೆ ಇಲಾಖೆ
    * ಶಿವರಾಂ ಹೆಬ್ಬಾರ್- ಕಾರ್ಮಿಕ ಇಲಾಖೆ
    * ಎಂಟಿಬಿ ನಾಗರಾಜ್ – ಪೌರಾಡಳಿತ
    * ಬಿ.ಸಿ.ನಾಗೇಶ್ – ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ
    * ಪ್ರಭು ಚೌಹಾನ್- ಪಶುಶಂಗೋಪನೆ
    * ಎಸ್.ಟಿ.ಸೋಮಶೇಖರ್ – ಸಹಕಾರ
    * ಹಾಲಪ್ಪ ಆಚಾರ್ – ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆ
    * ಶಂಕರ್ ಪಾಟೀಲ್ ಮುನೇನಕೊಪ್ಪ – ಜವಳಿ ಮತ್ತು ಕೈಮಗ್ಗ ಇಲಾಖೆ, ಸಕ್ಕರೆ ಇಲಾಖೆ
    * ನಾರಾಯಣ್ ಗೌಡ – ರೇಷ್ಮೆ ಇಲಾಖೆ, ಯುವ ಜನ ಮತ್ತು ಕ್ರೀಡಾ ಇಲಾಖೆ
    * ಬೈರತಿ ಬಸವರಾಜ್ – ನಗರಾಭಿವೃದ್ದಿ ಇಲಾಖೆ

    ಪವರ್ ಫುಲ್ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಬೃಹತ್ ಕೈಗಾರಿಕಾ ಖಾತೆಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಏರ್ಪಟ್ಟಿತ್ತು. ಹೀಗಾಗಿ ಶುಕ್ರವಾರ ಸಂಜೆಯೇ ಪಟ್ಟಿ ಅಂತಿಮಗೊಂಡಿದ್ರೂ ಬಿಡುಗಡೆಗೆ ವಿಳಂಬವಾಗಿದೆ ಎನ್ನಲಾಗಿದೆ.

  • ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

    ಮೋಸ, ವಂಚನೆ, ವಸೂಲಿಯಿಂದ ಸಚಿವ ಸ್ಥಾನ ತಪ್ಪಿತು: ಸಿಎಂ ವಿರುದ್ಧವೇ ಗುಡುಗಿದ ಶಾಸಕ ಓಲೇಕಾರ್

    – ಎಲ್ಲ ಸ್ಥಾನ ಲಿಂಗಾಯತರಿಗೆ ಸಿಕ್ರೆ ನಾವ್ ಏನ್ ಮಾಡೋದು?
    – ಜಾತಿ ರಾಜಕಾರಣದಿಂದ ಮುಖ್ಯಮಂತ್ರಿಗಳಿಂದಲೇ ಮೋಸ ಆಯ್ತು
    – ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

    ಬೆಂಗಳೂರು: ಮೋಸ, ವಂಚನೆ ಮತ್ತು ವಸೂಲಿಯಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿದೆ. ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಮೋಸವಾಯ್ತು ಎಂದು ಶಾಸಕ ನೆಹರು ಓಲೇಕಾರ್ ಸಿಎಂ ಬೊಮ್ಮಾಯಿ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ನೆಹರು ಓಲೇಕಾರ್, ಪಟ್ಟಿಯಲ್ಲಿಯೂ ನನ್ನ ಹೆಸರಿಲ್ಲ ಮತ್ತು ಸಿಎಂ ಸಹ ನನಗೆ ಕರೆ ಮಾಡಿಲ್ಲ. ನಮ್ಮ ಪಕ್ಷದಲ್ಲಿಯೂ ಮೋಸ, ವಂಚನೆ ಮಾಡೋರು ಇರೋದರಿಂದ ಸಚಿವ ಸ್ಥಾನ ತಪ್ಪಿದೆ. ಹಿಂದುಳಿದ ವರ್ಗದ ನಾಯಕನಾದ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಸಚಿವ ಸ್ಥಾನಕ್ಕೆ ಅರ್ಹ ವ್ಯಕ್ತಿ. ಆದ್ರೂ ಯಾರ್ ಯಾರಿಗೂ ಸಚಿವ ಸ್ಥಾನ ನೀಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ಹೈಕಮಾಂಡ್‍ನಿಂದ ಅಗೌರವ:
    ನೂತನ ಸಚಿವರ ಪಟ್ಟಿ ನೋಡಿದ್ರೆ ಇದು ವಸೂಲಿ ಮೇಲೆ ಆಯ್ಕೆಯಾಗಿದೆ ಅನ್ನೋದು ಗೊತ್ತಾಗುತ್ತೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಬಲಗೈ ಸಮುದಾಯಕ್ಕೆ ಸೇರಿದ ನಾಯಕ ಮೂರು ಬಾರಿ ಆಯ್ಕೆಯಾದ್ರೂ ಹೈಕಮಾಂಡ್ ನಮಗೆ ಅಗೌರವ ತೋರಿಸಿದೆ. ಸದ್ಯ ಹೈಕಮಾಂಡ್ ಮಾಡಿದ ಪಟ್ಟಿಯ ಬಗ್ಗೆ ಅಸಮಾಧಾನವಿದ್ದು, ಇನ್ನುಳಿದ ಸ್ಥಾನಗಳಲ್ಲಿ ಅವಕಾಶ ಮಾಡಿಕೊಡಬೇಕು. ಇಲ್ಲವಾದ್ರೆ ಅನಿವಾರ್ಯವಾಗಿ ಪಕ್ಷದಲ್ಲಿ ಇರುತ್ತೇವೆ.

    ನಾವು ಏನು ಮಾಡಬೇಕು?
    ಪಕ್ಷದಲ್ಲಿ ಜಾತಿ ರಾಜಕಾರಣ ಮಾಡಲಾಗುತ್ತಿದ್ದು, ಪ.ಪಂಗಡದವರನ್ನ ಕಡೆಗಣನೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಮುಂದುವರಿದ ಕೋಮಿನವರೆಗೆ ಅವಕಾಶಗಳು ಸಿಗುತ್ತಿವೆ. ಎಲ್ಲ ಲಿಂಗಾಯತರಿಗೆ ನೀಡಿದ್ರೆ, ಪ.ಜಾತಿ ಮತ್ತು ಪ.ಪಂಗಡದವರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದರು. ಸಿಎಂ ಮತ್ತು ಬಿ.ಸಿ.ಪಾಟೀಲ್ ಮುಂದುವರಿದ ಕೋಮಿನವರು. ಅವರಿಗೆ ಸ್ಥಾನ ಕೊಟ್ರೆ, ಅವರೇನು ಹಿಂದುಳಿದ ವರ್ಗಕ್ಕೆ ಸಂಬಂಧಿಸಿದವರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾತ್ರಿಯಾಗ್ತಿದ್ದಂತೆ ನಾಪತ್ತೆಯಾಗುವ ಸಿಎಂ, ಹೋಗ್ತಿರುವುದು ಎಲ್ಲಿಗೆ? – ದೆಹಲಿಯಲ್ಲಿ ಬೊಮ್ಮಾಯಿ ನಿಗೂಢ ಹೆಜ್ಜೆ

    ಕಾದು ನೋಡಿ, ಎಚ್ಚರಿಕೆ ಕೊಟ್ರಾ?:
    ನಮ್ಮ ಜಿಲ್ಲೆಯವರಾದ ಮುಖ್ಯಮಂತ್ರಿಗಳಿಂದಲೇ ನನಗೆ ಸಚಿವ ಸ್ಥಾನ ತಪ್ಪಿದೆ. ಈ ಮೊದಲು ಮಾತನಾಡಿದಾಗ ದೆಹಲಿಗೆ ಹೋಗಿ ಬಂದು ಮಾತನಾಡುತ್ತೇನೆ ಎಂದು ಹೇಳಿದ್ದರು. ಇತ್ತ ಯಡಿಯೂರಪ್ಪ ಅವರ ಜೊತೆ ಸಹ ಚರ್ಚೆ ನಡೆಸಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚೆ ನಡೆಸುತ್ತೇನೆ. ಬಿಜೆಪಿಯಲ್ಲಿ ಹಿಂದಿನಿಂದಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ಆದ್ರೆ ಪಕ್ಷದಲ್ಲಿ ಸದ್ಯದ ವ್ಯವಸ್ಥೆ ಮುಂದಿನ ದಿನಗಳಲ್ಲಿ ದೊಡ್ಡ ಹೊಡೆತ ಬೀಳಲಿದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ:ಬುಧವಾರ ಮಧ್ಯಾಹ್ನ 2:15ಕ್ಕೆ ನೂತನ ಸಚಿವರ ಪ್ರಮಾಣ ವಚನ- ಯಾರಿಗೆ ಮಂತ್ರಿಗಿರಿ?

  • ಕಗ್ಗಂಟಾಗ್ತಿದೆ ಕ್ಯಾಬಿನೆಟ್ ಜೇನುಗೂಡು- ದೆಹಲಿ ಮಟ್ಟದಲ್ಲಿ ಹಿರಿಯ ನಾಯಕರ ಲಾಬಿ

    ಕಗ್ಗಂಟಾಗ್ತಿದೆ ಕ್ಯಾಬಿನೆಟ್ ಜೇನುಗೂಡು- ದೆಹಲಿ ಮಟ್ಟದಲ್ಲಿ ಹಿರಿಯ ನಾಯಕರ ಲಾಬಿ

    – ಸರ್ಕಾರ ತಂದ ವಲಸಿಗರ ಬೆನ್ನಿಗೆ ನಿಂತ ಬಿಎಸ್‍ವೈ?

    ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆಗೆ ಈಗ ಪೈಪೋಟಿ ಜೋರಾಗಿದೆ. ಈ ಹಿಂದೆ ಬಿಎಸ್‍ವೈ ಸಂಪುಟದಲ್ಲಿದ್ದ ಹಿರಿಯ ಸಚಿವರು ನಾ ಮುಂದು…ತಾ ಮುಂದು ಅಂತ ದೆಹಲಿಗೆ ದೌಡಾಯಿಸಿದ್ದಾರೆ. ಸಚಿವ ಸ್ಥಾನ ಕೈ ತಪ್ಪೋ ಆತಂಕದಲ್ಲಿ ಮಾಜಿ ಸಚಿವರಾದ ಆರ್. ಅಶೋಕ್ ಹಾಗೂ ಉಮೇಶ್ ಕತ್ತಿ ದೆಹಲಿಗೆ ಹಾರಿದ್ದಾರೆ. ಯಡಿಯೂರಪ್ಪ ವಿರುದ್ಧ ಬಂಡಾಯ ಸಾರಿದ್ದ ಮತ್ತೊಬ್ಬ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕೂಡ ಸಂಜೆ ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಯೋಗೇಶ್ವರ್‍ಗೆ ಸಚಿವ ಸ್ಥಾನ ಡೌಟ್ ಎನ್ನಲಾಗುತ್ತಿದ್ದು, ಲಾಬಿ ನಡೆಸಲು ಅರವಿಂದ್ ಬೆಲ್ಲದ್ ಕೂಡ ದೆಹಲಿಗೆ ತೆರಳಿದ್ದಾರೆ.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಧಿಕಾರದಿಂದ ಕೆಳಗಿಳಿದ್ರೂ, ಪವರ್ ಪಾಯಿಂಟ್ ಆಗೋ ಲಕ್ಷಣಗಳು ಕಾಣುತ್ತಿವೆ. ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಮೂಲಕ ಶಾಸಕರು ಒತ್ತಡಕ್ಕೆ ಮುಂದಾಗ್ತಿದ್ದಾರೆ. ಆದರೆ ಪರಿಸ್ಥಿತಿ ಯಾಕೋ ನನ್ನ ಸುತ್ತ ಗಿರಿಕಿ ಹಾಕೋ ರೀತಿ ಇದೆ ಅನ್ನೋದನ್ನ ಸೂಕ್ಷ್ಮವಾಗಿ ಮನಗಂಡ ಮಾಜಿ ಸಿಎಂ ಯಡಿಯೂರಪ್ಪ, ನನ್ನನ್ನ ಪವರ್ ಸೆಂಟರ್ ಅಂತ ಬಿಂಬಿಸಬೇಡಿ. ಯಾರೂ ನನ್ನ ಭೇಟಿಗೆ ಬರಬೇಡಿ. ನನ್ನ ಭೇಟಿಯಾದ ನಂತರ ಸಚಿವ ಸ್ಥಾನದ ಬಗ್ಗೆ ಮಾತಾಡಬೇಡಿ. ಸುಖಾಸುಮ್ನೆ ನನ್ನ ಹೆಸರು ಎಳೆದು ತರಬೇಡಿ ಅಂತ ಕಿವಿಮಾತು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

    ವಲಸಿಗರ ಪರವಾಗಿ ನಿಂತಿರುವ ಯಡಿಯೂರಪ್ಪ ಸಚಿವ ಸ್ಥಾನದ ಅಭಯ ನೀಡಿದ್ದಾರೆ. ಸರ್ಕಾರ ರಚನೆಗೆ ಕಾರಣವಾಗಿರುವ ವಲಸಿಗರಿಗೆ ಸೂಕ್ತ ಸ್ಥಾನಮಾನ ನೀಡಲು ಬೊಮ್ಮಾಯಿ ಜೊತೆ ಚರ್ಚಿಸೋದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಿರಿಯರಿಗೆ ಅವಕಾಶ ನೀಡಲು ಶೆಟ್ಟರ್ ಸಂಪುಟ ತ್ಯಾಗ: ಬಿಎಸ್‍ವೈ

    ಡಿಸಿಎಂ ಆಸೆ ಹೊರಹಾಕಿದ ಈಶ್ವರಪ್ಪ:
    ಯುವ & ಕ್ರಿಯಾಶೀಲ ಕ್ಯಾಬಿನೆಟ್‍ಗಾಗಿ ಹಿರಿಯರಿಗೆ ಕೊಕ್ ಕೊಡ್ತಾರಾ ಅನ್ನೋ ಚರ್ಚೆ ಹೊತ್ತಲ್ಲೇ ಹಿರಿಯ ನಾಯಕ ಈಶ್ವರಪ್ಪ ಅವರು ಡಿಸಿಎಂ ಸ್ಥಾನದ ಆಸೆ ಹೊರ ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ಅಚ್ಚರಿಯ ಬೆಳವಣಿಗೆಗಳಾಗಿವೆ. ಸರ್ಕಾರ ಮತ್ತು ಪಕ್ಷದಲ್ಲಿದ್ದ ಗೊಂದಲಗಳು ಪೂರ್ಣ ನಿವಾರಣೆ ಆಗಿದೆ. ನಾನು ಉಪಮುಖ್ಯಮಂತ್ರಿ ಆಗಬೇಕೆಂದು ಪ್ರಮುಖರು, ಸ್ವಾಮೀಜಿಗಳು ಒತ್ತಾಯಿಸಿದ್ದಾರೆ. ಶೆಟ್ಟರ್ ರೀತಿ ನಾನು ಸಚಿವ ಸ್ಥಾನ ಬೇಡ ಅನ್ನಲ್ಲ. ರಾಮನ ರಾಜಕಾರಣ, ಕೃಷ್ಣನ ತಂತ್ರಗಾರಿಕೆ ಗೊತ್ತಿದೆ. ಎಲ್ಲದಕ್ಕೂ ನಾನು ರೆಡಿ ಅಂತ ಈಶ್ವರಪ್ಪ ಹೇಳಿದ್ದಾರೆ. ಇದನ್ನೂ ಓದಿ: ನಾನು ಬಿಜೆಪಿ ಶಿಸ್ತಿನ ಸಿಪಾಯಿ, ಡಿಸಿಎಂ ಸ್ಥಾನಕ್ಕೆ ಲಾಬಿ ಮಾಡಲ್ಲ: ರಾಮುಲು

    ಈಶ್ವರಪ್ಪ ಪರ ಹಾಲುಮತ ಸಮುದಾಯದ ಸ್ವಾಮೀಜಿಗಳು ನಿಂತಿದ್ದಾರೆ. ಇನ್ನು ಸಚಿವ ಸ್ಥಾನ ಬೇಡ ಅಂದಿರೋ ಜಗದೀಶ್ ಶೆಟ್ಟರ್ ಗೆ ಮನವೊಲಿಕೆ ನಡೆದಿದೆ. ಆದರೆ ಸ್ವಾಭಿಮಾನ, ಗೌರವದಿಂದ ನಿರ್ಧಾರ ಮಾಡಿದ್ದೇನೆ. ಯಾರೇ ಸಿಎಂ ಆದರೂ ಸಚಿವ ಆಗಲಾರೆ ಅಂತ ಪಕ್ಷದ ನಾಯಕರಿಗೆ ಮೊದಲೇ ತಿಳಿಸಿದ್ದೆ ಅಂತ ಶೆಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಆರ್‍ಎಸ್‍ಎಸ್ ನಾಯಕರ ಭೇಟಿ ಬಳಿಕವೂ ಇದನ್ನೇ ಪುನರುಚ್ಚರಿಸಿದ್ದಾರೆ. ಶ್ರೀರಾಮುಲು ಮಾತಾಡಿ, ನನಗೆ ಯಾವುದೇ ಮುನಿಸಿಲ್ಲ. ಡಿಸಿಎಂ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಲ್ಲ ಅಂದಿದ್ದಾರೆ. ಇದನ್ನೂ ಓದಿ: RSS ಮುಖಂಡ ಮುಕುಂದ್ ಜೊತೆ ಬಿಎಸ್‍ವೈ ಚರ್ಚೆ

  • ರೈತರ ಮಕ್ಕಳಿಗೆ ಶಿಷ್ಯ ವೇತನ: ಸಿಎಂ ಬೊಮ್ಮಾಯಿ ಘೋಷಣೆ

    ರೈತರ ಮಕ್ಕಳಿಗೆ ಶಿಷ್ಯ ವೇತನ: ಸಿಎಂ ಬೊಮ್ಮಾಯಿ ಘೋಷಣೆ

    ಬೆಂಗಳೂರು: ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಶಿಷ್ಯ ವೇತನ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

    ಪ್ರಮಾಣವಚನ ಸ್ವೀಕರಿಸಿದ ನಂತರ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ನೂತನ ಮುಖ್ಯಮಂತ್ರಿಗಳು ತಮ್ಮ ಕೊಠಡಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸಿದರು. ನಂತರ ಅಧಿಕಾರಿಗಳ ಜೊತೆ ಕಡತ ಪರಿಶೀಲನೆ ನಡೆಸಿದರು. ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸರ್ಕಾರದ  ಹೊಸ ಯೋಜನೆಗಳನ್ನು ಘೋಷಣೆ ಮಾಡಿದರು.

    ಸಿಎಂ ಬೊಮ್ಮಾಯಿ ಘೋಷಣೆಗಳು:
    * ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಶಿಷ್ಯ ವೇತನ ಯೋಜನೆ.
    * ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಮಾಸಾಶನ 1,000 ದಿಂದ 1,200 ರೂ.ಗೆ ಹೆಚ್ಚಳ. ಈ ಯೋಜನೆಗೆ 863 ಕೋಟಿ ಹೆಚ್ಚುವರಿ ವೆಚ್ಚ ಆಗಲಿದೆ.
    * ಅಂಗವಿಕಲರ ವೇತನ 600 ರೂ. ಯಿಂದ 800 ರೂ.ಗೆ ಹೆಚ್ಚಳ
    * ವಿಧವಾ ವೇತನ 800 ರೂ.ಗೆ ಹೆಚ್ಚಳ. 17.25 ಲಕ್ಷ ಫಲಾನುಭವಿಗಳಿಗೆ ಲಾಭ ಸಿಗಲಿದೆ.

    ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೊಮ್ಮಾಯಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರತಿಜ್ಞಾವಿಧಿ ಸಮಾರಂಭಕ್ಕೂ ಮೊದಲು ಬಾಲಬ್ರೂಯಿ ಆಂಜನೇಯ ದೇವಾಲಯ ಮತ್ತು ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಬೊಮ್ಮಾಯಿ ಭೇಟಿ ನೀಡಿದ್ದರು. ಇನ್ನೊಂದು ವಾರದಲ್ಲಿ ನೂತನ ಸಂಪುಟ ಸಹ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.