Tag: Karnataka Assembly Election 2018

  • ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ: ವರ್ತೂರು ಪ್ರಕಾಶ್ ಭವಿಷ್ಯ

    ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ: ವರ್ತೂರು ಪ್ರಕಾಶ್ ಭವಿಷ್ಯ

    -ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ

    ಕೋಲಾರ: ನಮ್ಮಪ್ಪನಾಣೆಗೂ ಈ ಸರ್ಕಾರ 6 ತಿಂಗಳಿರಲ್ಲ, ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಆಡಳಿತ ಬರುತ್ತೆ. ಮುಂದಿನ ವರ್ಷ ನಾವೇ ಅಧಿಕಾರಕ್ಕೆ ಬರೋರು ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ಹೇಳಿದ್ದಾರೆ.

    ಇಲ್ಲಿನ ಬೈರೇಗೌಡನಗರದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ರಾಜ್ಯದಲ್ಲಿ ಅತಂತ್ರ ಸರ್ಕಾರವಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಮತ್ತೆ ಪ್ರಚಾರಕ್ಕೆ ಸಿದ್ಧರಾಗಬೇಕು. ಹಿಂದಿನ ಚುನಾವಣೆಯ ಅಹಿತಕರ ಘಟನೆ ಮರೆತು ಪಕ್ಷಕ್ಕಾಗಿ ಕೆಲಸ ಮಾಡಬೇಕು. ನಾನು ಇನ್ನು ಮುಂದೆ ಕ್ಷೇತ್ರದಲ್ಲಿದ್ದು ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ ಅಂತಾ ಅಂದ್ರು.

     

    ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ವರ್ತೂರ್ ಪ್ರಕಾಶ್ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಹೀಗಾಗಿ ಆತ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಆಗಮಿಸಿದ್ದ ಕಾರ್ಯಕರ್ತರಿಗೆ ಭರ್ಜರಿ ಬಿರಿಯಾನಿ ಬಾಡೂಟ ಸಿದ್ಧ ಪಡಿಸಲಾಗಿತ್ತು. 1,200ಕ್ಕೂ ಹೆಚ್ಚು ಕಾರ್ಯಕರ್ತರು ಬಾಡೂಟ ಸವಿದಿದ್ದಾರೆ.

    ಕಾಂಗ್ರೆಸ್‍ನಲ್ಲಿ 80 ಜನ ಹಿರಿಯ ಶಾಸಕರಿದ್ದಾರೆ. ಅವರಲ್ಲಿ 20 ಶಾಸಕರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತದೆ. 60 ಜನ ಶಾಸಕರು ಹಾಗೇ ಉಳಿಯುತ್ತಾರೆ. ಹುದ್ದೆಗಳ ಹಂಚಿಕೆ ಸಮಸ್ಯೆಯಿಂದಾಗಿ 2019ರಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ. ಬಿಜೆಪಿ ಮತ್ತೇ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

  • 37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

    37 ಜನರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತಾ: ಎಚ್‍ಡಿಡಿ ಪ್ರಶ್ನೆ

    ಬೆಂಗಳೂರು: 37 ಜನ ಶಾಸಕರನ್ನು ಇಟ್ಟುಕೊಂಡು ಸಾಲಮನ್ನಾ ಮಾಡಲು ಆಗುತ್ತದೆಯೇ ಎಂದು ಮಾಜಿ ಪ್ರದಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

    ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಸಾಲಮನ್ನಾ ನಿರ್ಧಾರ ಕೈಗೊಳ್ಳಲು ನಮಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗಾಗಿ ಈ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಯಬೇಕು ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಯಲ್ಲಿ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸಲಹೆ ನೀಡಿರುವೆ. ನಾವು ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

    ನಗರಕ್ಕೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರು ಬಂದಿದ್ದಾರೆ. ತೃತೀಯ ರಂಗದ ನಿರ್ಧಾರಗಳ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ನಾನು ಪಕ್ಷದ ಅಧ್ಯಕ್ಷ ಎನ್ನುವುದಕ್ಕಿಂತ ಹೆಚ್ಚಾಗಿ ತಂದೆಯಾಗಿ ಆರ್ಶೀವಾದ ಮಾಡಿರುವೆ. ಇದು ನಮ್ಮ ಕರ್ತವ್ಯ ಎಂದರು.

    ಅಮೋಘ ನಿವಾಸದಲ್ಲಿ ಸಂಭ್ರಮ:
    ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪದ್ಮನಾಭನಗರದ ಅಮೋಘ ನಿವಾಸದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಮನೆಯ ಮುಂಭಾಗವು ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದೆ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಸಹೋದರಿ ಮನೆಯ ಮುಂದಿನ ತುಳಸಿ ಪೂಜೆ ಮಾಡಿದ್ದು, ಬೆಳಗ್ಗೆಯಿಂದಲೇ ಕುಟುಂಬಸ್ಥರು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ.

    ನಿವಾಸದ ಸುತ್ತಮುತ್ತ ರಸ್ತೆಗಳಲ್ಲಿ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಮಂಗಳವಾರ ರಾತ್ರಿ ಬಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ತಡರಾತ್ರಿಯವರೆಗೆ ದೇವೇಗೌಡರು ಸಮಾಲೋಚನೆಯಲ್ಲಿ ತೊಡಗಿದ್ದರು. ಸದ್ಯ ಅವರ ನಿವಾಸಕ್ಕೆ  ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ.

  • ಬುಧವಾರ ಸಂಜೆ 4.30ಕ್ಕೆ ಎಚ್‍ಡಿಕೆ ಪ್ರಮಾಣವಚನ: ಈ ಸಮಯದಲ್ಲೇ ಯಾಕೆ?

    ಬುಧವಾರ ಸಂಜೆ 4.30ಕ್ಕೆ ಎಚ್‍ಡಿಕೆ ಪ್ರಮಾಣವಚನ: ಈ ಸಮಯದಲ್ಲೇ ಯಾಕೆ?

    ಬೆಂಗಳೂರು: ಕೈಯಲ್ಲಿ ನಿಂಬೆಹಣ್ಣು ಇಲ್ಲದೇ ಮನೆಯಿಂದ ಹೊರನಡೆಯದ ಹೆಚ್‍ಡಿ ರೇವಣ್ಣ, ಕೊಂಚ ಮೂಡ್ ಔಟ್ ಆದ್ರೂ ರಾಜ್ಯದ ಹೊರ ರಾಜ್ಯದ ಜ್ಯೋತಿಷಿಗಳ ಕೈಯಲ್ಲಿ ಜಾತಕ ಓದಿಸೋ ದೊಡ್ಡ ಗೌಡ್ರು. ಹೀಗಿರುವಾಗ ದೊಡ್ಡ ಗೌಡ್ರ ಮನೆ ಮಗ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಮುಹೂರ್ತ ಎಂತದ್ದು ಇರಬಹುದು ಅನ್ನೋ ಕುತೂಹಲ ಹಲವರಲ್ಲಿದೆ.

    ಹೆಚ್‍ಡಿಕೆ ಪ್ರಮಾಣ ವಚನ ಸಮಾರಂಭ ಬುಧವಾರ ಸಂಜೆ ನಾಲ್ಕು ಗಂಟೆಯ ಬಳಿಕ ನಡೆಯಲಿದ್ದು ಅದು ಅಮೃತ ಸಿದ್ಧಿ ಯೋಗದ ಮುಹೂರ್ತವಂತೆ. ಬುಧವಾರ ಬೆಳಗ್ಗೆ 9 ಗಂಟೆಯಿಂದ 10 ಗಂಟೆಗೆ ಸಮಯ ಚೆನ್ನಾಗಿದ್ದರೂ ಸಂಜೆಯ ವೇಳೆ ನವಮಿ ಪೂರ್ವ ಫಲ್ಗುಣಿ ಅಮೃತ ಸಿದ್ಧಿ ಯೋಗದಲ್ಲಿಯೇ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸಾಮಾನ್ಯವಾಗಿ ಅಮೃತ ಸಿದ್ಧಿ ಯೋಗ ಎಂದರೆ ಸ್ಥಿರ, ಚಂಚಲತೆ ಇರುವುದಿಲ್ಲ. ಇದಕ್ಕಾಗಿಯೇ ಈ ಸಮಯದಲ್ಲಿಯೇ ಋಷಿ ಮುನಿಗಳು ಯೋಗ ಸಿದ್ಧಿಗಾಗಿ ತಪಸ್ಸಿಗಾಗಿ ಕುಳಿತುಕೊಂಡ ಐತಿಹ್ಯ ಇದೆ. ಚಂಚಲತೆ ಇಲ್ಲದೇ, ಸ್ಥಿರತೆ ಇರಲಿ, ಮೈತ್ರಿ ಸರ್ಕಾರದಲ್ಲಿ ತೊಡಕಾಗದಿರಲಿ ಎಂದು ಈ ಸಮಯದಲ್ಲಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹಿರಿಯ ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ.

    ಆರಂಭದಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ಈಗ ಸ್ಥಳ ಬದಲಾಗಿದ್ದು, ಬುಧವಾರ ಸಂಜೆ 4.30ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: 11.30ಕ್ಕೆ ಸರಿಯಾಗಿ ಎಚ್‍ಡಿಕೆಯನ್ನು ಆಯ್ಕೆ ಮಾಡಿದ್ದು ಯಾಕೆ: ರೇವಣ್ಣ ಹೇಳ್ತಾರೆ ಓದಿ

    ಒಬ್ಬಂಟಿಯಾಗಿ ರೇವಣ್ಣ ಪ್ರಮಾಣವಚನ:
    ಗ್ರಹ, ಕಾಲ ನೋಡಿಯೇ ಮುಂದುವರಿಯುವ ಜೆಡಿಎಸ್‍ನ ಎಚ್.ಡಿ.ರೇವಣ್ಣ ಶನಿವಾರ ತಮಗೆ ಶುಭಕಾಲದಲ್ಲೇ ಪ್ರಮಾಣವಚನ ನೀಡಲು ಸ್ಪೀಕರ್ ಬೋಪಯ್ಯ ಅವರಿಗೆ ಚೀಟಿ ನೀಡಿದ್ದರು. ಈ ವೇಳೆ ಕುಳಿತುಕೊಳ್ಳಿ ಸಂಜೆ 4 ಗಂಟೆ ಯವರೆಗೆ ಸಮಯಾವಕಾಶವಿದೆ. ನಿಗದಿತ ಪಟ್ಟಿಯಂತೆ ಪ್ರಮಾಣವಚನ ನಡೆಯುತ್ತದೆ ಎಂದು ತಿಳಿಸಿದರು. ಈ ವೇಳೆ ರೇವಣ್ಣ ಪತ್ರಕರ್ತರ ಗ್ಯಾಲರಿಗೆ ಬಂದಾಗ ಮಾಧ್ಯಮದವರು ಉತ್ತಮ ಗಳಿಗೆಯನ್ನು ನೋಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರಾ ಎಂದು ಕೆಣಕಿದರು. ನನ್ನದು ಸ್ವಾತಿ ನಕ್ಷತ್ರ ಯಾವುದೇ ಗಳಿಗೆ ಇಲ್ಲ. ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದು ಹೇಳಿ ರೇವಣ್ಣ ಹೊರ ನಡೆದಿದ್ದರು. ಆರಂಭದಲ್ಲಿ 5 ಮಂದಿ ನಂತರ 10 ಮಂದಿ ಬಳಿಕ ಇಬ್ಬರಂತೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೇವಣ್ಣ ಒಬ್ಬಂಟಿಯಾಗಿ ಮಧ್ಯಾಹ್ನ 12.50ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

  • ನಾನು ಕೊಟ್ಟ ಹಣವನ್ನು ಮತದಾರರಿಗೆ ಹಂಚದೇ, ಬೆಟ್ಟಿಂಗ್ ಆಡಿ ಸೋತ್ರು: ಕೈ ನಾಯಕ ಎಚ್.ಪಿ.ಮಂಜುನಾಥ್

    ನಾನು ಕೊಟ್ಟ ಹಣವನ್ನು ಮತದಾರರಿಗೆ ಹಂಚದೇ, ಬೆಟ್ಟಿಂಗ್ ಆಡಿ ಸೋತ್ರು: ಕೈ ನಾಯಕ ಎಚ್.ಪಿ.ಮಂಜುನಾಥ್

    ಮೈಸೂರು: ನಾನು ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಟ್ಟಿದ್ದ ಹಣವನ್ನು ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ. ಹಣವನ್ನು ತಾವೇ ಉಳಿಸಿಕೊಂಡಿದ್ದರೆ ಸಂತೋಷವಿತ್ತು. ಆದರೆ ಅವರು ದುಡ್ಡು ಹಾಳು ಮಾಡಿಕೊಂಡಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಲು ಹೋಗಿ ಸೋತಿದ್ದಾರೆ. ನನ್ನ ಬಳಿ ಕೆಟ್ಟ ಹುಡುಗರಿದ್ದಾರೆ. ಯಾರಾದರು ಅವರ ಬೆನ್ನುತಟ್ಟಿ ನನ್ನ ವಿರುದ್ಧ ನಿಲ್ಲವಂತೆ ಹೇಳಿದರೂ ಅವರು ಹಾಗೇ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಹೈಕಮಾಂಡ್ ಹಾಗೂ ಪಕ್ಷದ ನಿಧಾರವನ್ನು ಪಾಲಿಸುತ್ತೇನೆ. ನಮ್ಮ ಪಕ್ಷ ಏನು ತೀರ್ಮಾನ ಕೈಗೊಂಡಿದೆಯೋ ಅದಕ್ಕೆ ನಮ್ಮ ಸಹಮತವಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ಸಿದ್ದರಾಮಯ್ಯ ಅವರ ಆಶೀರ್ವಾವಿದೆ ಎಂದು ಎಚ್.ಪಿ.ಮಂಜುನಾಥ್ ಮೂರು ಬಾರಿ ಹೇಳಿದರು.

  • ಡಿಕೆಶಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಣಿಗಲ್ ಶಾಸಕ

    ಡಿಕೆಶಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಣಿಗಲ್ ಶಾಸಕ

    ಬೆಂಗಳೂರು: ಶಾಸಕರೊಬ್ಬರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದು ಶನಿವಾರ ವಿಧಾನಸಭೆಯಲ್ಲಿ ನಡೆದಿದೆ.

    ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಡಿ.ಕೆ.ಶಿವಕುಮಾರ್ ಅವರ ನಾದಿನಿಯ ಪತಿ. ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿಸಿದ್ದಲ್ಲದೇ, ಅವರ ಗೆಲುವಿಗೆ ಶಿವಕುಮಾರ್ ಶ್ರಮಿಸಿದ್ದರು. ಹೀಗಾಗಿ ಅವರು ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಡಾ.ಎಚ್.ಡಿ.ರಂಗನಾಥ್ ಅವರು, ಒಟ್ಟು 58,697 ಮತ ಪಡೆದು ಜಯಸಾಧಿಸಿದ್ದರು. ಬಿಜೆಪಿಯ ಡಾ.ಕೃಷ್ಣಕುಮಾರ ಅವರು 53,097 ಮತ ಪಡೆದು 5,600 ಮತಗಳ ಅಂತರದಲ್ಲಿ ಸೋತಿದ್ದರು.

  • ಬಹುಮತ ಸಾಬೀತು ಕಷ್ಟವೆಂದು ನಮಗೆ ಬೆಳಗ್ಗೆಯೇ ಗೊತ್ತಾಗಿತ್ತು- ಕರಂದ್ಲಾಜೆ

    ಬಹುಮತ ಸಾಬೀತು ಕಷ್ಟವೆಂದು ನಮಗೆ ಬೆಳಗ್ಗೆಯೇ ಗೊತ್ತಾಗಿತ್ತು- ಕರಂದ್ಲಾಜೆ

    ಬೆಂಗಳೂರು: ಬಹುಮತ ಸಾಬೀತು ಪಡಿಸುವುದು ಕಷ್ಟ ಎಂದು ನಮಗೆ ಬೆಳಗ್ಗೆ ಗೊತ್ತಾಗಿತ್ತು. ಅಲ್ಲದೇ, ಬಿ.ಎಸ್.ಯಡಿಯೂಪ್ಪ ಅವರು ಇದಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಬಿಜೆಪಿಗೆ ಜನಾದೇಶವಿತ್ತು. ಆದರೆ, ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಲು ಕುತಂತ್ರ ನಡೆದಿದೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಕಾದುನೋಡಿ ಎಂದು ಹೇಳಿದ್ದಾರೆ.

    https://twitter.com/ShobhaBJP/status/997792897486340096

    https://twitter.com/ShobhaBJP/status/997815805961125889

    ನಾಯಿ-ನರಿಗಳಂತೆ ಕಚ್ಚಾಡುತ್ತಿದ್ದವರು ಈಗ ಒಂದಾಗಿದ್ದಾರೆ. ಈ ಅಪವಿತ್ರ ಮೈತ್ರಿ ಹೆಚ್ಚು ದಿನ ಉಳಿಯಲ್ಲ. ನಾಳೆಯಿಂದಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಕಚ್ಚಾಡುತ್ತಾರೆ ನೋಡಿ ಎಂದು ವ್ಯಂಗ್ಯವಾಡಿದ್ದಾರೆ.

    ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಿಟಿ ರವಿ ನಮ್ಮದು ರಾಜಮಾರ್ಗ, ಶಾರ್ಟ್ ಕರ್ಟ್ ಇಲ್ಲದೇ ಬಹುಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ಮುಂದುವರಿಸಿ 1996 ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿ ಬಹುಮತಗಳಿಸಲು ವಿಫಲವಾದಾಗ ರಾಜೀನಾಮೆ ನೀಡಿದ್ದರು ಎಂದಿದ್ದರು.

    ವಾಜಪೇಯಿ ಹೆಸರನ್ನು ಪ್ರಸ್ತಾಪ ಮಾಡಿದ ಕೂಡಲೇ ಮಾಧ್ಯಮಗಳು ಕರ್ನಾಟಕದಲ್ಲೂ ಇತಿಹಾಸ ಮರುಕಳಿಸುತ್ತಾ ಎಂದು ಕೇಳಿದ್ದಕ್ಕೆ, ಆಗಿನ ಪರಿಸ್ಥಿತಿ ಈಗ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದರು.

  • 5 ವರ್ಷ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡ್ತೀವಿ: ರೋಷನ್ ಬೇಗ್

    5 ವರ್ಷ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡ್ತೀವಿ: ರೋಷನ್ ಬೇಗ್

    ಬೆಂಗಳೂರು: ನಾವು ಐದು ವರ್ಷ ಸರ್ಕಾರ ನಡೆಸಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಶಿವಾಜಿ ನಗರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ತಿಳಿಸಿದ್ದಾರೆ.

    ಬಿಎಸ್‍ವೈ ರಾಜೀನಾಮೆ ನೀಡಿದ ಬಳಿಕ ಸಂಜೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಸಭೆ ನಗರದ ಎಂಬೆಸ್ಸಿ ಗಾಲ್ಫ್ ಲಿಂಕ್ಸ್ ಹೋಟೆಲ್ ನಲ್ಲಿ ನಡೆಯಿತು. ಸಭೆಯ ಬಳಿಕ ಮಾತನಾಡಿದ ರೋಷನ್ ಬೇಗ್, ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ನೀಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ನಮ್ಮ ಸರ್ಕಾರಕ್ಕೆ ಯಾವುದೇ ಭಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹೋಟೆಲ್ ನಲ್ಲಿ ಎರಡು ಪಕ್ಷಗಳ ಮುಖಂಡರು ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ.

    ಈ ಸಭೆಯಲ್ಲಿ ಗುಲಾಂ ನಬಿ ಅಜಾದ್, ಕೆ.ಸಿ.ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಾ ಜಿ.ಪರಮೇಶ್ವರ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಹಿರಿಯ ನಾಯಕರು ಹಾಜರಾಗಿದ್ದರು.

  • ಶಾಸಕರನ್ನು ಸೆಳೆಯಲು ಸ್ವಾಮೀಜಿಗಳ ಮೊರೆ ಹೋದ ಬಿಎಸ್‍ವೈ!

    ಶಾಸಕರನ್ನು ಸೆಳೆಯಲು ಸ್ವಾಮೀಜಿಗಳ ಮೊರೆ ಹೋದ ಬಿಎಸ್‍ವೈ!

    ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರನ್ನು ಸೆಳೆಯಲು ಬಿ.ಎಸ್.ಯಡಿಯೂರಪ್ಪ ಅವರು ಸ್ವಾಮೀಜಿಗಳ ಮೊರೆ ಹೋಗಿದ್ದಾರೆ.

    ರಾಜ್ಯದ ಕೆಲವು ಲಿಂಗಾಯಿತ ಮಠದ ಸ್ವಾಮೀಜಿಗಳ ಜೊತೆ ಬಿಎಸ್‍ವೈ ಮಾತುಕತೆ ನಡೆಸಿದ್ದು, ಅವರ ಮೂಲಕ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ. ಹಿಂದೂ ಧರ್ಮದ ಉಳಿವಿಗೆ ಬಿಎಸ್‍ವೈ ಗೆ ಬೆಂಬಲ ನೀಡಬೇಕು ಎಂದು ಸ್ವಾಮೀಜಿಗಳು ಶಾಸಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

    ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್‍ಗೆ ಕರೆ ಮಾಡಿ ಬಿ.ಎಸ್.ಯಡಿಯೂರಪ್ಪಗೆ ಬೆಂಬಲ ಸೂಚಿಸಬೇಕೆಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ವಾಮೀಜಿಗಳು ತಮ್ಮ ಶಾಸಕರಿಗೆ ಕರೆ ಮಾಡಿ ಶನಿವಾರ ನಡೆಯಲಿರುವ ವಿಶ್ವಾಸ ಮತಯಾಚನೆಯ ವೇಳೆ ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

  • ವಾಜಪೇಯಿ ಘಟನೆಯನ್ನು ಪ್ರಸ್ತಾಪಿಸಿ ಹಾರಿಕೆಯ ಉತ್ತರ ಕೊಟ್ಟ ಸಿಟಿ ರವಿ!

    ವಾಜಪೇಯಿ ಘಟನೆಯನ್ನು ಪ್ರಸ್ತಾಪಿಸಿ ಹಾರಿಕೆಯ ಉತ್ತರ ಕೊಟ್ಟ ಸಿಟಿ ರವಿ!

    ಬೆಂಗಳೂರು: ಸುಪ್ರೀಂ ತೀರ್ಪಿನಂತೆ ಬಿಜೆಪಿ ಶನಿವಾರ ಬಹುಮತ ಸಾಬೀತು ಪಡಿಸುವ ಒತ್ತಡಕ್ಕೆ ಸಿಲುಕಿದ್ದು, ಸದ್ಯ ಪಕ್ಷದ ಸದಸ್ಯರಲ್ಲಿ ಈ ವಿಶ್ವಾಸ ಕಡಿಮೆ ಆಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

    ಚಿಕ್ಕಮಗಳೂರು ಶಾಸಕ ಸಿಟಿ ರವಿ, 1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಹುಮತ ಸಾಬೀತು ಪಡಿಸುವ ವಿಚಾರವನ್ನು ಪ್ರಸ್ತಾಪ ಮಾಡಿದ ಕಾರಣ ಈಗ ಈ ಮೇಲಿನ ಪ್ರಶ್ನೆ ಎದ್ದಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ನಮ್ಮದು ರಾಜಮಾರ್ಗ, ಶಾರ್ಟ್ ಕರ್ಟ್ ಇಲ್ಲದೇ ಬಹುಮತ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು. ಮುಂದುವರಿಸಿ 1996 ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿ ಬಹುಮತಗಳಿಸಲು ವಿಫಲವಾದಾಗ ರಾಜೀನಾಮೆ ನೀಡಿದರು ಎಂದರು.

    ವಾಜಪೇಯಿ ಹೆಸರನ್ನು ಪ್ರಸ್ತಾಪ ಮಾಡಿದ ಕೂಡಲೇ ಮಾಧ್ಯಮಗಳು ಕರ್ನಾಟಕದಲ್ಲೂ ಇತಿಹಾಸ ಮರುಕಳಿಸುತ್ತಾ ಎಂದು ಕೇಳಿದ್ದಕ್ಕೆ, ಆಗಿನ ಪರಿಸ್ಥಿತಿ ಈಗ ಇಲ್ಲ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದರು.

    ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ ಎಂದು ಆರೋಪ ಮಾಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಯಾವ ಕಾಂಗ್ರೆಸ್ ಶಾಸಕರಿಗೆ ಜೀವ ಬೆದರಿಕೆ ಇದೆ. ಯಾವ ಶಾಸಕರ ಪತ್ನಿ, ಮಕ್ಕಳು ರಮ್ಯಾ ಬಳಿ ಬಂದು ಜೀವ ಬೆದರಿಕೆಯ ಅಳಲು ತೋಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಇದೇ ವೇಳೆ ಸವಾಲು ಎಸೆದರು.

    ಒಂದು ವೇಳೆ ಜೀವ ಬೆದರಿಕೆ ಇರುವುದು ಬಹಿರಂಗ ಪಡಿಸಿದರೆ ತಾವೇ ಸ್ವತಃ ಡಿಜಿ ಅವರ ಮೂಲಕ ಶಾಸಕರಿಗೆ ರಕ್ಷಣೆ ಕೊಡಿಸುತ್ತೇನೆ. ಅಲ್ಲದೇ ರಮ್ಯಾ ಅವರಿಗೂ ಜೀವ ಬೆದರಿಕೆ ಇದ್ದರೆ ಅವರಿಗೂ ರಕ್ಷಣೆ ಕೊಡುವಂತೆ ನಾನು ಡಿಜಿಗೆ ಮನವಿ ಮಾಡಲಿದ್ದೇನೆ ಎಂದು ವ್ಯಂಗ್ಯವಾಡಿದರು.

  • ನಾವೇನು ತಪ್ಪಿಸಿಕೊಂಡು ಹೋಗ್ತಿದ್ವಾ  ಕಾಂಗ್ರೆಸ್-ಜೆಡಿಎಸ್‍ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ

    ನಾವೇನು ತಪ್ಪಿಸಿಕೊಂಡು ಹೋಗ್ತಿದ್ವಾ ಕಾಂಗ್ರೆಸ್-ಜೆಡಿಎಸ್‍ ಶಾಸಕರಲ್ಲಿ ಭುಗಿಲೆದ್ದ ಅಸಮಾಧಾನ

    ಬೆಂಗಳೂರು: ಮಧ್ಯರಾತ್ರಿಯೇ ನಮ್ಮನ್ನ ಹೈದ್ರಾಬಾದ್‍ಗೆ ಕರೆತಂದಿದ್ದೀರಿ, ನಾವೇನು ತಪ್ಪಿಸಿಕೊಂಡು ಹೋಗಿತ್ತಿದ್ವಾ ಎಂದು ಪ್ರಶ್ನಿಸುವ ಮೂಲಕ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ.

    ಅಡ್ಡ ಮತದಾನ ಹಾಗೂ ಕುದುರೆ ವ್ಯಾಪಾರದ ಭೀತಿಯಿಂದ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಪಕ್ಷದ ಮುಖಂಡರು ಹೈದರಾಬಾದ್ ಹೊಟೇಲ್ ಗೆ ಕರೆ ತಂದಿದ್ದಾರೆ. ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಕೆಲ ಶಾಸಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಸುಪ್ರೀಂ ಕೋರ್ಟ್ ಆದೇಶದವರೆಗೂ ಕಾಯಬಹುದು ಅಂತಾ ನಾವು ನಿಮಗೆ ಹೇಳಿದ್ದೇವು. ಆದರೂ ನೀವು ಕೇಳಲೇ ಇಲ್ಲ. ರಸ್ತೆ ಮಾರ್ಗವಾಗಿ ನಮ್ಮನ್ನ ಕರೆ ತಂದಿದ್ದೀರಿ. ದೂರ ಪ್ರಯಾಣ ಮಾಡಿ ಬೇಸತ್ತಿದ್ದೇವೆ. ನಮಗೆ ನಮ್ಮ ಮೊಬೈಲ್ ನೀಡಿ ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕೆಲವು ಕಾಂಗ್ರೆಸ್ ನಾಯಕರು ಹೊಟೇಲ್ ಗೆ ಕರೆದುಕೊಂಡು ಹೋಗುವ ಏಕ ಪಕ್ಷೀಯ ನಿರ್ಧಾರ ಕೆಲ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ನಮಗೆ ಆತಂಕ ಇತ್ತು, ನೀವು ಏನು ಹೇಳಿದರೂ ನಾನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ನಿಮ್ಮನ್ನ ಕರೆದುಕೊಂಡು ಬಂದಿದ್ದೇವೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಕಲಾಪ ನಡೆಯಲಿದೆ. ಹೀಗಾಗಿ, ಇಂದು ಸಂಜೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಮರಳಿ, ತಡರಾತ್ರಿ ಹೊತ್ತಿಗೆ ಹೊಟೇಲ್‍ಗೆ ಹೋಗಿ ಅಲ್ಲಿಂದ ಬೆಳಿಗ್ಗೆ ನೇರವಾಗಿ ವಿಧಾನ ಸೌಧಕ್ಕೆ ಹೋಗೋಣ ಎಂದು ಡಿ.ಕೆ.ಶಿವಕುಮಾರ್ ಹೊಟೇಲ್‍ನಲ್ಲಿ ಸಭೆ ನಡೆಸಿ ಹೇಳಿದ್ದಾರೆ.

    ಕೊನೆಯ ಕ್ಷಣದವರೆಗೂ ನಿಮಗೆ ಬಿಜೆಪಿ ನಾಯಕರಿಂದ ಕರೆ ಬರಹುದು. ನೀವು ಎಚ್ಚರಿಕೆಯಿಂದ ಇರಬೇಕು. ಬಹುಮತ ಸಾಬೀತು ಪಡಿಸುವ ವೇಳೆ ಬಿಎಸ್‍ವೈ ಸರ್ಕಾರದ ವಿರುದ್ಧ ಇರುವಂತೆ ಶಾಸಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.