ಬೆಂಗಳೂರು: ಸರ್ಕಾರದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ(Socio Economic Survey) ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಭಾಗವಹಿಸಿದ್ದಾರೆ.
ಶನಿವಾರ ಅಶೋಕ್ ಅವರ ಜಾಲಹಳ್ಳಿಯ ನಿವಾಸಕ್ಕೆ ಗಣತಿದಾರರು ಆಗಮಿಸಿದ್ದಾರೆ. ಈ ವೇಳೆ ತಮ್ಮ ಹಾಗೂ ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಕೆಲ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಬಂಗಾಳ ಉಪಮಹಾಸಾಗರದಲ್ಲಿ ನೈರುತ್ಯ ಮಳೆಯ ಮಾರುತ ಬೀಸುತ್ತಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು ಸಹ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ ಸುತ್ತಮುತ್ತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 26-22
ಮಂಗಳೂರು: 31-25
ಶಿವಮೊಗ್ಗ: 30-21
ಬೆಳಗಾವಿ: 31-21
ಮೈಸೂರು: 30-22
ಬಂಗಾಳ ಉಪಮಹಾಸಾಗರದಲ್ಲಿ ನೈರುತ್ಯ ಮಳೆಯ ಮಾರುತ ಚುರುಕುಗೊಂಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-22
ಮಂಗಳೂರು: 31-25
ಶಿವಮೊಗ್ಗ: 30-21
ಬೆಳಗಾವಿ: 31-21
ಮೈಸೂರು: 30-22
ರಾಯಚೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚನದಲ್ಲಿ ಭಾಗಿಯಾದ ಆರೋಪದಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು (PDO) ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಮದ ಪಿಡಿಒ ಪ್ರವೀಣ್ ಕುಮಾರ್ ಅವರನ್ನು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಅವರು ಇಲಾಖಾ ತನಿಖೆ ಕಾಯ್ದಿರಿಸಿ ಅಮಾನತು ಮಾಡಿದ್ದಾರೆ.
ಇದೇ ಅಕ್ಟೋಬರ್12 ರಂದು ಲಿಂಗಸುಗೂರು ಪಟ್ಟಣದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪಂಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ಪಥಸಂಚಲನದಲ್ಲಿ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣವೇಷ ಧರಿಸಿ ಪ್ರವೀಣ್ ಭಾಗವಹಿಸಿದ್ದರು.
ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಉಲ್ಲಂಘನೆ ಹಾಗೂ ಸರ್ಕಾರಿ ನೌಕರನ ತರವಲ್ಲದ ರೀತಿ ನಡೆದುಕೊಂಡಿದ್ದರಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು: ಹಸಿವಿನ ಸಂಕಟ,ಅನ್ನದ ಮೌಲ್ಯ ನನಗೆ ಗೊತ್ತು ಅದಕ್ಕಾಗಿ ನಾನು ಅನ್ನಭಾಗ್ಯ ಜಾರಿಗೆ ತಂದೆ. ಕಾಳಸಂತೆಯಲ್ಲಿ ಯಾರೇ ಅನ್ನ ಭಾಗ್ಯ(Anna Bhgya) ಅಕ್ಕಿ ಮಾರಾಟ ಮಾಡಿದರೂ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹ್ಮನಿಗೆ ಮಾಡುವ ಅವಮಾನ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ “ವಿಶ್ವ ಆಹಾರ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ, ನಮ್ಮ ಬದುಕಿನಲ್ಲಿ ಆಹಾರದ ಮಹತ್ವವನ್ನು ಸ್ಮರಿಸಿದೆ.
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್.ಮುನಿಯಪ್ಪ, ವಸತಿ ಸಚಿವರಾದ ಜಮೀರ್ ಅಹ್ಮದ್… pic.twitter.com/cCjWTgvBuJ
ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್ ಆಹಾರ ವ್ಯರ್ಥ ಆಗುತ್ತಿದೆ. ಹೆಚ್ಚೂಕಡಿಮೆ 360 ಕೋಟಿ ರೂ. ಮೌಲ್ಯದ ಆಹಾರ ವೇಸ್ಟ್ ಮಾಡುತ್ತಿದ್ದೇವೆ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿದರು. ಗೊತ್ತಿದ್ದೂ ಗೊತ್ತಿದ್ದೂ ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ. ಅನ್ನ ವೇಸ್ಟ್ ಮಾಡುವುದು ಪಾಪದ ಕೆಲಸ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ ಅಂತ ತಿಳಿಸಿದರು.
ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪ್ರಧಾನಿ ಮನ ಮೋಹನ್ ಸಿಂಗ್. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು,ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್ ಬದ್ಧತೆ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳ ಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಮೂಗುದಾರ
ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ್ಮ ನಿಮ್ಮ ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಅಂತ ತಿಳಿಸಿದರು. ಡಿಸಿಎಂ ಡಿಕೆಶಿವಕುಮಾರ್, ಸಚಿವ ಮುನಿಯಪ್ಪ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರು: ನೂತನವಾಗಿ ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾಗಿ (Karnataka State Information Commissioners ) ನೇಮಕವಾಗಿರುವ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಬಿ. ವೆಂಕಟ್ ಸಿಂಗ್ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ರಾಜಭವನದ ಬ್ಯಾಂಕ್ವೇಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ನೂತನವಾಗಿ ನೇಮಕವಾಗಿರುವ ಗೌರವಾನ್ವಿತ ರಾಜ್ಯ ಮಾಹಿತಿ ಆಯುಕ್ತರುಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಮೂಗುದಾರ
ಬೆಂಗಳೂರು ಪೀಠಕ್ಕೆ ನೂತನವಾಗಿ ನೇಮಕವಾಗಿರುವ ರಾಜ್ಯ ಮಾಹಿತಿ ಅಯುಕ್ತರುಗಳಾದ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಡಾ. ಮಹೇಶ್ ವಾಳ್ವೇಕರ್ ಅವರು ದೇವರ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರೆ, ಕಲಬುರಗಿ ಪೀಠಕ್ಕೆ ನೇಮಕವಾಗಿರುವ ಬಿ. ವೆಂಕಟ್ ಸಿಂಗ್ ಅವರು ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಅಶಿತ್ ಮೋಹನ್ ಪ್ರಸಾದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್, ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರುಗಳು ಹಾಗೂ ಮಾಹಿತಿ ಆಯೋಗದ ನಿವೃತ್ತ ಮಾಹಿತಿ ಆಯುಕ್ತರು ಸೇರಿದಂತೆ ಇತರೆ ಗಣ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನವದೆಹಲಿ: ಬೇಲೆಕೇರಿ ಬಂದರಿನ ಮೂಲಕ ಅಕ್ರಮ (Belekeri Illegal Iron Ore Case) ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಕರ್ನಾಟಕ ಮತ್ತು ಹರಿಯಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದ ನಂತರ, ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಹಲವಾರು FIRಗಳು ಮತ್ತು ಚಾರ್ಜ್‌ಶೀಟ್‌ಗಳಿಂದ ಹಣ ವರ್ಗಾವಣೆ ತನಿಖೆ ಹುಟ್ಟಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡಿ ಶೋಧದಲ್ಲಿ ಒಳಗೊಂಡಿರುವ ಕಂಪನಿಗಳಲ್ಲಿ MSPL ಲಿಮಿಟೆಡ್ (ಬಾಲ್ಡೋಟಾ ಗ್ರೂಪ್), ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂ., ಅರ್ಷದ್ ಎಕ್ಸ್‌ಪೋರ್ಟ್ಸ್, SVM ನೆಟ್ ಪ್ರಾಜೆಕ್ಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಮತ್ತು ಆಲ್ಫೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗಳು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ಸೇರಿದ್ದಾರೆ.
ಆರೋಪಿಗಳು ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗೆದು, ಖರೀದಿಸಿ, ಮಾರಾಟ ಮಾಡಿ, ಸರಿಯಾದ ತೆರಿಗೆ ಮತ್ತು ರಾಯಧನವನ್ನು ಪಾವತಿಸದೆ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ರಾಜ್ಯದ ಖಜಾನೆಗೆ ಭಾರಿ ನಷ್ಟವನ್ನುಂಟು ಮಾಡಿತು. ಪರಿಸರಕ್ಕೆ ಅಪಾರ ಹಾನಿಯನ್ನುಂಟು ಮಾಡಿತು ಎಂದು ಇಡಿ ಮೂಲವೊಂದು ತಿಳಿಸಿದೆ. ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್
ಈ ಬಂದರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ, ಬಳ್ಳಾರಿಯಿಂದ ಬೇಲೆಕೇರಿಗೆ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸುವುದಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಸಂಸ್ಥೆಯು ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಬಂಧಿಸಿತ್ತು.
– ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆ ನಿಷೇಧ – ಚಟುವಟಿಕೆಗೆ ಪೂರ್ವಾನುಮತಿ ಕಡ್ಡಾಯ
ಬೆಂಗಳೂರು: ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್ (RSS) ಚಟುವಟಿಕೆಗಳಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ಮೂಗುದಾರ ಹಾಕಿದೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆ ನಿಷೇಧಿಸಲು ಕ್ಯಾಬಿನೆಟ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
2013 ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ಸರ್ಕಾರ ತಮಿಳುನಾಡು ಸರ್ಕಾರ (Government of Tamil Nadu) ಕೈಗೊಂಡಿರುವ ನಿರ್ಧಾರದಂತೆ ಖಾಸಗಿ ಸಂಸ್ಥೆಗಳು, ಸಂಘಟನೆಗಳು ಚಟುವಟಿಕೆಗಳನ್ನ ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ ನಿಯಮ ತರಲು ಮುಂದಾಗಿದೆ.
ತನ್ನ ತೀರ್ಮಾನದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್ ಪದ ಬಳಕೆ ಮಾಡದ ಸರ್ಕಾರ ಖಾಸಗಿ ಸಂಸ್ಥೆಗಳು ಎಂದು ಉಲ್ಲೇಖಿಸಿ ಜಾಣ್ಮೆ ನಡೆ ಇರಿಸಿದೆ.
ಈ ನಿಯಮ ಜಾರಿಯಾದರೆ ಆರ್‌ಎಸ್‌ಎಸ್ ಮಾತ್ರವಲ್ಲ ಖಾಸಗಿ ಸಂಘ ಸಂಸ್ಥೆಗಳು / ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಕಡಿವಾಣ ಬೀಳಲಿದೆ. ಯಾರೇ ಯಾವುದೇ ಕಾರ್ಯಕ್ರಮ ಮಾಡುವುದಾದರೂ ಅನುಮತಿ ಪಡೆಯಬೇಕಾಗುತ್ತದೆ.
ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ನಿಯಂತ್ರಣ ಮಾಡುವಂತೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.
ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಏನಿತ್ತು?
ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಸರಕಾರವನ್ನು ನೀಡುತ್ತದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ, ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ.
ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಗ ಮಕ್ಕಳು ಹಾಡಿ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
– ಆಂಧ್ರದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದಿದ್ದ ಪ್ರಿಯಾಂಕ್ – ಕಿರಿಯ ರಾಜ್ಯದಲ್ಲಿ ಅತಿ ಹೆಚ್ಚು ಹೂಡಿಕೆ ಎಂದ ನಾರಾ ಲೋಕೇಶ್
ಹೈದರಾಬಾದ್: ಆಂಧ್ರದ ಆಹಾರ ಖಾರವಾಗಿದೆ ಎಂದು ಅವರು ಹೇಳುತ್ತಾರೆ. ನಮ್ಮ ಕೆಲವು ಹೂಡಿಕೆಗಳು ಕೂಡ ಈಗ ಅವರಿಗೆ ಖಾರವಾಗಿವೆ ಎಂದು ತೋರುತ್ತದೆ. ನಮ್ಮ ನೆರೆಹೊರೆಯವರು ಈಗಾಗಲೇ ಅದರ ಘಾಟು ಅನುಭವಿಸುತ್ತಿದ್ದಾರೆ ಎಂದು ಮೆಣಸಿಕಾಯಿ ಇಮೋಜಿ ಹಾಕಿ ಕರ್ನಾಟಕಕ್ಕೆ ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara Lokesh) ಪ್ರಿಯಾಂಕ್ ಖರ್ಗೆ ಅವರಿಗೆ ಟಾಂಗ್ ನೀಡಿದ್ದಾರೆ.
ಗೂಗಲ್ (Google) ವಿಶಾಖಪಟ್ಟಣದಲ್ಲಿ 1.3 ಲಕ್ಷ ಕೋಟಿ ರೂ. ಹೂಡಿಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ (Karnataka) ಮತ್ತು ಆಂಧ್ರ ಮಧ್ಯೆ ಜಟಾಪಟಿ ನಡೆಯುತ್ತಿದೆ.
ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyanka Khrge) ಗೂಗಲ್ ಕಂಪನಿಗೆ ಆಂಧ್ರಪ್ರದೇಶ ನೀಡಿದ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಬಣ್ಣಿಸಿದ ಬೆನ್ನಲ್ಲೇ ನಾರಾ ಲೋಕೇಶ್ ಈಗ ಎಕ್ಸ್‌ನಲ್ಲಿ ಟಾಂಗ್ ನೀಡಿ ಆಂಧ್ರಪ್ರದೇಶ ಬೆಳವಣಿಗೆ ಆಗುತ್ತಿದೆ. ಕಿರಿಯ ರಾಜ್ಯದಲ್ಲಿ ಅತಿ ಹೆಚ್ಚು ಹೂಡಿಕೆಯಾಗುತ್ತಿದೆ ಎಂದು ಬರೆದು ಎಲ್ಲಿಯೂ ಕರ್ನಾಟಕದ ಹೆಸರನ್ನು ಉಲ್ಲೇಖಿಸದೇ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ಹೇಳಿದ್ದೇನು?
ಆಂಧ್ರಪ್ರದೇಶವು ಗೂಗಲ್ ಕಂಪನಿಗೆ ಬಹಳ ಪ್ರೋತ್ಸಾಹ ನೀಡುತ್ತಿದೆ. 22,000 ಕೋಟಿ ರೂ. ಪ್ರೋತ್ಸಾಹ ಧನ, ಭೂಮಿಗೆ 25% ಸಬ್ಸಿಡಿ, ನೀರಿನ ಶುಲ್ಕಕ್ಕೆ 25% ಸಬ್ಸಿಡಿ, ಉಚಿತ ವಿದ್ಯುತ್ ಮತ್ತು ರಾಜ್ಯ ಜಿಎಸ್‌ಟಿಯ 100% ಮರುಪಾವತಿಯನ್ನು ನೀಡುತ್ತಿದೆ. ಈ ಆರ್ಥಿಕ ವಿಪತ್ತನ್ನು ಭರಿಸಲು ಸಾಧ್ಯವೇ? ಕರ್ನಾಟಕ ಇದನ್ನು ಮಾಡಿದ್ದರೆ ರಾಜ್ಯವನ್ನು ದಿವಾಳಿಯತ್ತ ತಳ್ಳಿದ ಆರೋಪ ನಮ್ಮ ಮೇಲಿತ್ತು ಎಂದು ಪ್ರತಿಕ್ರಿಯಿಸಿದ್ದರು.
ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಸುವ ಗೂಗಲ್‌ನ 1.3 ಲಕ್ಷ ಕೋಟಿ ರೂ. ಹೂಡಿಕೆ ಕರ್ನಾಟಕದಿಂದ ಕೈ ತಪ್ಪಿ ಹೋಗಿದ್ದಕ್ಕೆ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿತ್ತು. ವಿಪಕ್ಷಗಳ ಟೀಕೆಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಆಂಧ್ರ ಸರ್ಕಾರದ ಗೂಗಲ್ ಪ್ರೋತ್ಸಾಹಕ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದು ಬಣ್ಣಿಸಿದ್ದರು. ಇದನ್ನೂ ಓದಿ: Vizag ನಲ್ಲಿರುವ ‘G’ ಅಂದರೆ ಅದು ಗೂಗಲ್- ಅತಿ ಕಿರಿಯ ರಾಜ್ಯದಲ್ಲಿ ಹೆಚ್ಚು ಹೂಡಿಕೆ: ನಾಯ್ಡು ಸಂಭ್ರಮ
“Andhra Pradesh Govt is giving huge subsidies to Google for its Visakhapatnam Data Centre, like 25% land, free water and electricity.
ನಾರಾ ಲೋಕೇಶ್ ಹೇಳಿದ್ದೇನು?
ಕರ್ನಾಟಕದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ವಿದ್ಯುತ್ ಕಡಿತವಿದೆ ಎಂದು ಹೇಳುತ್ತಾರೆ. ಕರ್ನಾಟಕ ಮೊದಲು ಆ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ನಾರಾ ಲೋಕೇಶ್ ಬುಧವಾರ ಹೇಳಿದ್ದರು.
ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಕೇಂದ್ರ ತೆರೆಯುವ ಸಂಬಂಧ ಮಾಡಿಕೊಂಡ ಒಪ್ಪಂದಕ್ಕೆ ಕರ್ನಾಟದ ನಾಯಕರು ಪ್ರಶ್ನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಅವರು ಉತ್ತರ ನೀಡಿದರು.
ಕಂಪನಿಗಳನ್ನು ಸೆಳೆಯಲು ಅವರು ಅಸಮರ್ಥರಾಗಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಗೂಗಲ್ ಜೊತೆ ಸಹಿ ಹಾಕುವ ಒಂದು ದಿನದ ಮೊದಲು ಹಲವು ರಾಜ್ಯಗಳು ತಮ್ಮ ರಾಜ್ಯಕ್ಕೆ ಬರುವಂತೆ ಪ್ರಯತ್ನ ಮಾಡಿದ್ದವು. ನಾವು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿಶಾಖಪಟ್ಟಣದಲ್ಲಿ ಗೂಗಲ್ ಕೇಂದ್ರ ತೆರೆಯಲು ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ. ಏನೇನು ಸಮಸ್ಯೆಯಾಗಿತ್ತು ಅವುಗಳನ್ನು ನಾವು ಪರಿಹರಿಸಿಕೊಟ್ಟಿದ್ದೇವೆ ಎಂದರು.
ರಾಜ್ಯ ರಾಜ್ಯಗಳ ಮಧ್ಯೆ ಈ ರೀತಿಯ ಸ್ಪರ್ಧೆ ಇರಬೇಕು. ಸ್ಪರ್ಧೆ ಇದ್ದರೆ ಅಂತಿಮವಾಗಿ ಲಾಭ ಭಾರತಕ್ಕೆ ಆಗಲಿದೆ. ಕಂಪ್ಯೂಟರ್ ಕ್ರಾಂತಿಯಾಗುವ ಸಂದರ್ಭದಲ್ಲಿ ಹಲವು ಮಂದಿ ಕಂಪ್ಯೂಟರ್ ಆಹಾರ ನೀಡುತ್ತಾ ಎಂದು ಪ್ರಶ್ನಿಸಿದ್ದರು. ಆದರೆ ನಮ್ಮ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಅಂದು ಕಂಪನಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಹೈದರಾಬಾದ್ ಇಂದು ಟೆಕ್ ಸಿಟಿಯಾಗಿದೆ. ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ ಎಂದು ತಿಳಿಸಿದರು.
ಬಂಗಾಳ ಉಪಮಹಾಸಾಗರದಲ್ಲಿ ನೈರುತ್ಯ ಮಳೆಯ ಮಾರುತ ಚುರುಕುಗೊಂಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅ.18ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಾಳಿಯು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಇರಲಿದ್ದು, ಈ ಅವಧಿಯಲ್ಲಿ ಸಿಡಿಲು ಉಂಟಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 27-22
ಮಂಗಳೂರು: 31-25
ಶಿವಮೊಗ್ಗ: 30-22
ಬೆಳಗಾವಿ: 29-22
ಮೈಸೂರು: 30-22