Tag: Karnaraka

  • ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆಯಾಗಿಲ್ಲ: ಬಜೆಟ್ ಭಾಷಣದಲ್ಲಿ ಕೇಂದ್ರಕ್ಕೆ ಸಿದ್ದು ಗುದ್ದು

    ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆಯಾಗಿಲ್ಲ: ಬಜೆಟ್ ಭಾಷಣದಲ್ಲಿ ಕೇಂದ್ರಕ್ಕೆ ಸಿದ್ದು ಗುದ್ದು

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ಬಜೆಟ್ ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಹೇಳಿದ್ದೇನು?
    15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ. 4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.23ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು 12 ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ಅಲ್ಲದೇ, 15ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5,495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಇದನ್ನೂ ಓದಿ: ಅಬಕಾರಿ ಇಲಾಖೆಗೆ 40,000 ಕೋಟಿ ತೆರಿಗೆ ಸಂಗ್ರಹ ಟಾರ್ಗೆಟ್‌

    ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯವು ಪ್ರಬಲವಾಗಿ ತನ್ನ ವಾದವನ್ನು ಪ್ರತಿಪಾದಿಸಿದೆ. ಆರೋಗ್ಯಕರ ಮತ್ತು ಸಾಮರಸ್ಯದ ಆರ್ಥಿಕ ಒಕ್ಕೂಟ ರೂಪಿಸಲು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಸಮಾನತೆ ಮತ್ತು ದಕ್ಷತೆಯನ್ನು ಆಧರಿಸಿ ಹಂಚಿಕೆ ಮಾಡುವಂತೆ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿದೆ. ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಗಳು ಬಡ ರಾಜ್ಯಗಳಿಗೆ ನೆರವಾಗಲು ಬದ್ಧರಾಗಿದ್ದರೂ, ಅದು ತನ್ನ ನಾಗರೀಕರ ಹಿತ ಕಾಯುವಲ್ಲಿ ಅಥವಾ ಆರ್ಥಿಕ ಪ್ರಗತಿಗೆ ಕುಂದುಂಟು ಮಾಡುವಂತಿರಬಾರದು. ಆದಾಯ-ಅಂತರ ಮತ್ತು ತಲಾ ಆದಾಯ ನಿರ್ಧರಿಸುವ ಮಾನದಂಡಗಳಲ್ಲಿಯೂ ಲೋಪಗಳಿರುವ ಹಿನ್ನೆಲೆಯಲ್ಲಿ, ಈ ಮಾನದಂಡಗಳಿಗೆ ಕಡಿಮೆ ಅಂಕ ನೀಡುವಂತೆ ಮನವಿ ಮಾಡಿದ್ದೇವೆ. ಇದನ್ನೂ ಓದಿ: ಬೆಂಗಳೂರು ನಗರ ವಿವಿ ಇನ್ಮುಂದೆ ಪ್ರಧಾನಿ ಮನಮೋಹನ್ ಸಿಂಗ್ ವಿವಿ

    ಕರ್ನಾಟಕ ರಾಜ್ಯವು, ಸುಸ್ಥಿರ ಋಣ ನಿರ್ವಹಣೆ ಮತ್ತು ವಿತ್ತೀಯ ಶಿಸ್ತು ಪಾಲಿಸುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಿದೆ. ನಮ್ಮ ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರುವ ಮುನ್ನವೇ ಜಾರಿಗೆ ತರಲಾಯಿತು. ಅಲ್ಲದೆ, ರಾಜ್ಯದ ಒಟ್ಟು ಹೊಣೆಗಾರಿಕೆಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದ ಮೊದಲ ರಾಜ್ಯ ಕರ್ನಾಟಕ. ಆದಾಗ್ಯೂ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌ಚಾರ್ಜ್ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು. ಇದನ್ನೂ ಓದಿ: ರಾಜ್ಯದಲ್ಲಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ

    ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯದ ಕೊಡುಗೆಯೂ ಪ್ರಮುಖವಾಗಿದ್ದು, ಒಟ್ಟು ಮೌಲ್ಯವರ್ಧನೆಯಲ್ಲಿ ಸೇವಾ ವಲಯಗಳ ಪಾಲು ಶೇ.66 ರಷ್ಟಿದೆ. 2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2ಕ್ಕಿಂತ ಹೆಚ್ಚಾಗಿದೆ.

    ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಸರ್ಕಾರವು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ ಸೇರಿದಂತೆ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸಲಿವೆ. ಸರ್ಕಾರವು ಜಾರಿಗೆ ತಂದಿರುವ ಈ ನೀತಿಗಳಿಂದ ರಾಜ್ಯದಲ್ಲಿ ಅಂದಾಜು 1 ಲಕ್ಷ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕೆ ಸರ್ಕಾರವು 13,500 ಕೋಟಿ ರೂ. ಸಹಾಯಧನ ಮತ್ತು ಆರ್ಥಿಕ ನೆರವು ನೀಡಲು ಸಹಮತಿಸಿದೆ. ಇದನ್ನೂ ಓದಿ: ಪ್ರಾಜೆಕ್ಟ್‌ ಮೆಜೆಸ್ಟಿಕ್‌ – ಹೈಟೆಕ್‌ ಆಗಲಿದೆ ಬಸ್‌ ನಿಲ್ದಾಣ

    ನಮ್ಮ ಸರ್ಕಾರವು ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, 2024-25ರ ಡಿಸೆಂಬರ್ ಅಂತ್ಯದವರೆಗೆ 4.4 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.

  • ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊಡೆತ – ಶೀಘ್ರದಲ್ಲೇ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು?

    ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊಡೆತ – ಶೀಘ್ರದಲ್ಲೇ ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದು?

    ಬೆಂಗಳೂರು: ಬಿಪಿಎಲ್ ಕಾರ್ಡ್‌ಗಳ (BPL Card) ವಿತರಣೆಯಲ್ಲಿ ಭಾರೀ ಎಡವಟ್ಟಾಗಿದೆ. ಬಡವರಿಗೆ ಹಂಚಬೇಕಾದ ಕಾರ್ಡ್‌ಗಳು ಉಳ್ಳವರಿಗೇ ಹೆಚ್ಚು ಹಂಚಿಕೆ ಆಗಿದೆ ಅನ್ನೋ ಸತ್ಯ ಬಯಲಾಗಿದೆ.

    ಬಡವರಿಗಿಂತಲೂ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣದ ಕಾರ್ಡ್‌ಗಳನ್ನು ಪಡೆದಿದ್ದಾರೆ. ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಹಂಚಿಕೆ ಆಗಿವೆ. ಜಿಲ್ಲಾವಾರು ಬಡವರ ಸಂಖ್ಯೆಗಿಂತಲೂ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿದೆ. ಯಾವ ಜಿಲ್ಲೆಗಳಲ್ಲಿ ಬಡತನ ಪ್ರಮಾಣ ಶೇ.1 ರಿಂದ 5 ಇದೆಯೋ ಅಲ್ಲೇ 80% ಗಿಂತಲೂ ಅಧಿಕ ಬಿಪಿಎಲ್ ಕಾರ್ಡ್ ಹಂಚಿಕೆ ಆಗಿದೆ. ಅನರ್ಹರ ಬಳಿ ಬಿಪಿಎಲ್ ಕಾರ್ಡ್‌ಗಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಹೀಗಾಗಿ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಅಭಿಯಾನಕ್ಕೆ ನಿರ್ಧಾರ ಕೈಗೊಂಡಿದೆ. ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನ ನಡೆಸಲಿದೆ ಎಂದು ಉನ್ನತ ಮೂಲಗಳು ʻಪಬ್ಲಿಕ್‌ ಟಿವಿʼಗೆ ತಿಳಿಸಿವೆ.

    ಅಂಕಿ ಅಂಶ
    ಮಂಡ್ಯ
    ಜನಸಂಖ್ಯೆ – 16.92 ಲಕ್ಷ
    ಬಿಪಿಎಲ್ ಕಾರ್ಡ್-15.33 ಲಕ್ಷ (90.6%)
    ಬಡತನ ಪ್ರಮಾಣ-2.47%

    ರಾಮನಗರ
    ಜನಸಂಖ್ಯೆ – 10.49 ಲಕ್ಷ
    ಬಿಪಿಎಲ್ ಕಾರ್ಡ್-9.29 ಲಕ್ಷ (88.6%)
    ಬಡತನ ಪ್ರಮಾಣ- 0.88%

    ಹಾಸನ
    ಜನಸಂಖ್ಯೆ – 16.82 ಲಕ್ಷ
    ಬಿಪಿಎಲ್ ಕಾರ್ಡ್- 14.61 ಲಕ್ಷ (86.9%)
    ಬಡತನ ಪ್ರಮಾಣ- 2.43%

    ಚಾಮರಾಜನಗರ
    ಜನಸಂಖ್ಯೆ – 9.97 ಲಕ್ಷ
    ಬಿಪಿಎಲ್ ಕಾರ್ಡ್- 8.66 ಲಕ್ಷ(86.8%)
    ಬಡತನ ಪ್ರಮಾಣ- 5.15%

    ತುಮಕೂರು
    ಜನಸಂಖ್ಯೆ – 25.51 ಲಕ್ಷ
    ಬಿಪಿಎಲ್ ಕಾರ್ಡ್- 21.88 ಲಕ್ಷ(85.6%)
    ಬಡತನ ಪ್ರಮಾಣ- 4.69%

    ಹಾವೇರಿ
    ಜನಸಂಖ್ಯೆ – 16.63 ಲಕ್ಷ
    ಬಿಪಿಎಲ್ ಕಾರ್ಡ್- 14.05 ಲಕ್ಷ(84.5%)
    ಬಡತನ ಪ್ರಮಾಣ- 11.38%

    ಚಿಕ್ಕಮಗಳೂರು
    ಜನಸಂಖ್ಯೆ – 10.31 ಲಕ್ಷ
    ಬಿಪಿಎಲ್ ಕಾರ್ಡ್- 8.41 ಲಕ್ಷ(81.6%)
    ಬಡತನ ಪ್ರಮಾಣ- 3.74%

    ಚಿತ್ರದುರ್ಗ
    ಜನಸಂಖ್ಯೆ – 16.94 ಲಕ್ಷ
    ಬಿಪಿಎಲ್ ಕಾರ್ಡ್- 13.77 ಲಕ್ಷ(81.3%)
    ಬಡತನ ಪ್ರಮಾಣ- 5.84

    ಚಿಕ್ಕಬಳ್ಳಾಪುರ
    ಜನಸಂಖ್ಯೆ – 12.79 ಲಕ್ಷ
    ಬಿಪಿಎಲ್ ಕಾರ್ಡ್- 10.17 ಲಕ್ಷ(79.5%)
    ಬಡತನ ಪ್ರಮಾಣ- 3.39%

    ದಾವಣಗೆರೆ
    ಜನಸಂಖ್ಯೆ – 16.50 ಲಕ್ಷ
    ಬಿಪಿಎಲ್ ಕಾರ್ಡ್- 13/03 ಲಕ್ಷ(79%)
    ಬಡತನ ಪ್ರಮಾಣ 5.95%

  • ಭಾರೀ ಮಳೆ, ಪ್ರವಾಹ ಪರಿಸ್ಥಿತಿ: ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಿ, ಪೂರ್ವ ಸಿದ್ಧತೆ ಮಾಡಿಕೊಳ್ಳಿ – ಸಿಎಂ ಖಡಕ್ ಸೂಚನೆ

    ಭಾರೀ ಮಳೆ, ಪ್ರವಾಹ ಪರಿಸ್ಥಿತಿ: ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಿ, ಪೂರ್ವ ಸಿದ್ಧತೆ ಮಾಡಿಕೊಳ್ಳಿ – ಸಿಎಂ ಖಡಕ್ ಸೂಚನೆ

    ಬೆಂಗಳೂರು: ರಾಜ್ಯದೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು ಪ್ರವಾಹ, ಭೂಕುಸಿತದಂತಹ ಪರಿಸ್ಥಿತಿ (Flood Situation) ಎದುರಿಸಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ವಹಿಸುವಂತೆ ಹಾಗೂ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಖಡಕ್‌ ಸೂಚನೆ ನೀಡಿದ್ದಾರೆ.

    ಜಲಾಶಯಗಳ ನೀರಿನ ಮಟ್ಟದ (Dam Water Level) ಕುರಿತು ನಿರಂತರ ಪರಿಶೀಲನೆ ನಡೆಸಿ ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ಧಾರವಾಡದ ಇಂದಿರಮ್ಮನ ಕೆರೆ ಭರ್ತಿ – 1,500 ಕ್ಯುಸೆಕ್ ನೀರು ಹೊರಕ್ಕೆ

    ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತದ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತು ಸಹ ಜಿಲ್ಲಾಧಿಕಾರಿಗಳು ಎಚ್ಚರವಹಿಸುವಂತೆ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರವಾಹ ಪರಿಸ್ಥಿತಿಯ ನಿರ್ವಹಣೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ:  4 ಮಕ್ಕಳ ತಾಯಿಯನ್ನ ಮದ್ವೆಯಾಗಿ ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರಹಿಂಸೆ; ಪತಿ ಅರೆಸ್ಟ್‌

    ಅಧಿಕಾರಿಗಳು ಪ್ರವಾಹ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುವಂತೆ, ರಕ್ಷಣೆ ಹಾಗೂ ಪರಿಹಾರ ಕಾರ್ಯಚರಣೆಗಳನ್ನು ಕೈಗೊಳ್ಳುವಂತೆ ಹಾಗೂ ಪ್ರವಾಹ ಪೀಡಿತರಿಗೆ ಅಗತ್ಯಕ್ಕನುಸಾರವಾಗಿ ಕಾಳಜಿ ಕೇಂದ್ರಗಳನ್ನು ತೆರೆದು ಎಲ್ಲ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಲಭ್ಯರಿದ್ದು ಎಚ್ಚರ ವಹಿಸುವಂತೆ ತಾಕೀತು ಮಾಡಿದ್ದಾರೆ.

    ಚಾಮರಾಜ ನಗರ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆಗಳು:
    08226-223163
    08226-223161
    08226-223160
    ವಾಟ್ಸಾಪ್‌ ಸಂಖ್ಯೆ: 9740942901

  • ಸರ್ಕಾರದ ಮಾರ್ಗಸೂಚಿಯಿಂದ ಸಾಧ್ಯವಿಲ್ಲ, ಜನರು ಎಚ್ಚೆತ್ತುಕೊಂಡಾಗ ಮಾತ್ರ ಕೊರೊನಾ ನಿಯಂತ್ರಣ: ಡಿವಿಎಸ್

    ಸರ್ಕಾರದ ಮಾರ್ಗಸೂಚಿಯಿಂದ ಸಾಧ್ಯವಿಲ್ಲ, ಜನರು ಎಚ್ಚೆತ್ತುಕೊಂಡಾಗ ಮಾತ್ರ ಕೊರೊನಾ ನಿಯಂತ್ರಣ: ಡಿವಿಎಸ್

    ಬೆಂಗಳೂರು: ಸರ್ಕಾರ ನಿಯಮಗಳನ್ನು ಜಾರಿ ಮಾಡಿದ ತಕ್ಷಣ ಸೋಂಕು ನಿಯಂತ್ರಣಕ್ಕೆ ಬಂದುಬಿಡುತ್ತದೆ ಎಂದುಕೊಳ್ಳಬೇಡಿ. ಪ್ರತಿಯೊಬ್ಬರು ಎಚ್ಚೆತ್ತುಕೊಂಡು ನಿಮ್ಮ ನಿಮ್ಮ ಮನೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಅನಗತ್ಯವಾಗಿ ಹೊರಗೆ ಹೋಗದಿರುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.

    ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬದಂತೆ ತಡೆಗಟ್ಟುವುದಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

    ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ನಿಯಂತ್ರಣವನ್ನು ಅತ್ಯಂತ ಸಮರ್ಪಕವಾಗಿ ನಿಯಂತ್ರಿಸಿದ್ದಾರೆ. ಅತ್ಯಂತ ಸೋಂಕು ಹೊಂದಿರುವ ಅಪಖ್ಯಾತಿಗೆ ಗುರಿಯಾಗಿದ್ದ ಭಾರತ ಇಂದು ವಿಶ್ವವೇ ನಿಬ್ಬೆರಗಾಗುವಂತೆ ಕೊರೊನಾ ನಿಯಂತ್ರಣ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಬಕಾರಿ ಇಲಾಖೆ ಸಚಿವ ಗೋಪಾಲಯ್ಯನವರು ಹಾಸನ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಆಹಾರದ ಕಿಟ್ ವಿತರಣೆ, ಸಾರ್ವಜನಿಕರಿಗೆ ಉಚಿತವಾಗಿ ಆಹಾರಧಾನ್ಯಗಳ ವಿತರಣೆ, ಮಾಸ್ಕ್ ಸ್ಯಾನಿಟೈಸರ್, ಲಸಿಕೆ, ಔಷಧಿಗಳನ್ನು ಕೊಡುವ ಮೂಲಕ ನೊಂದವರ ಕಣ್ಣೀರನ್ನು ಒರೆಸಿದ್ದಾರೆ ಎಂದು ಪ್ರಶಂಸಿಸಿದರು. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.1.09ಕ್ಕೆ ಇಳಿಕೆ- ರಾಜ್ಯದಲ್ಲಿಂದು 1,708 ಕೊರೊನಾ ಕೇಸ್

    ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ದೇಗುಲವಿದ್ದಂತೆ. ಇದು ನೊಂದವರ ಪಾಲಿಗೆ ಕಣ್ಣೀರು ಒರೆಸುವ ಆಲಯ. ಹಸಿದವರ ಪಾಲಿಗೆ ದೇಗುಲವಿದ್ದಂತೆ. ಇದನ್ನು ಮಾಡಿ ತೋರಿಸಿದ್ದು ಗೋಪಾಲಯ್ಯನವರ ಹೆಗ್ಗಳಿಕೆ ಎಂದು ಪ್ರಶಂಸಿದರು.

    ಲಾಕ್ ಡೌನ್ ಸಂದರ್ಭದಲ್ಲೂ ನಂಬಿದವರನ್ನು ಕೈಬಿಡದೆ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದಷ್ಟು ಶೀಘ್ರ ಎಲ್ಲರೂ ಕೊರೊನಾ ಮುಕ್ತರಾಗಿ ಎಲ್ಲರಿಗೂ ಉದ್ಯೋಗ ಸಿಗುವಂತಾಗಲಿ ಎಂದು ಸದಾನಂದಗೌಡ ಆಶಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ರೈತ ನಾಯಕ ಜಿ.ಮಾದೇಗೌಡ ಅವರು ಕಾವೇರಿ ನದಿನೀರಿಗಾಗಿ ನಡೆಸಿದ ಹೋರಾಟವನ್ನು ಅವರು ಸ್ಮರಿಸಿದರು.

    ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿ, ಕೊರೊನಾದಂತಹ ಕಷ್ಟದ ಸಂದರ್ಭದಲ್ಲೂ ನನ್ನ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಇಂದು ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ನಿಮ್ಮ ಆಶೀರ್ವಾದವೇ ಕಾರಣ. ನನಗೆ ಎಷ್ಟೇ, ಕಷ್ಟ ನೋವುಗಳಿದ್ದರೂ ಇಂತಹ ಸಂದರ್ಭದಲ್ಲಿ ನಿಮ್ಮನ್ನು ಕೈಬಿಡುವುದಿಲ್ಲ ಎಂದು ಹೇಳಿದರು.

    ಸಾರ್ವಜನಿಕರು ಕೊರೊನಾ ನಮ್ಮನ್ನು ಬಿಟ್ಟು ಹೋಗಿದೆ ಎಂದು ಭಾವಿಸಿಕೊಳ್ಳಬೇಡಿ. ಅದು ಈಗಲೂ ಇದೆ. ಮೂರನೇ ಅಲೆ ಬರಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚೆತ್ತುಕೊಂಡು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಕ್ಷೇತ್ರದ ಜನರಿಗೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ರಾಜ್ಯ ಒ ಬಿ ಸಿ ಅಧ್ಯಕ್ಷ ನೆ ಲ ನರೇಂದ್ರ ಬಾಬು ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ .ಮಾಜಿ ಉಪ ಮೇಯರ್ ಹರೀಶ್. ಮುಖಂಡರುಗಳಾದ ಜಯರಾಮಯ್ಯ ವೆಂಕಟೇಶ ಮೂರ್ತಿ ವೆಂಕಟೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.