Tag: Kargil War soldiers

  • 19ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    19ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    ಬೆಂಗಳೂರು: ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾರತೀಯರು ಗೌರವ ಸಲ್ಲಿಸುತ್ತಿದ್ದಾರೆ.

    ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ `ಕಾರ್ಗಿಲ್ ವಿಜಯ್ ದಿವಸ್’ ಆಚರಣೆಮಾಡಲಾಗುತ್ತಿದೆ.

    ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ, ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ.

    ಭಾರತ ಸರ್ಕಾರ ಕಾರ್ಗಿಲ್ ಯುದ್ಧದಲ್ಲಿ ಕೆಚ್ಚೆದೆಯ ಹೋರಾಟ, ಧೈರ್ಯ ಮತ್ತು ಸಾಹಸಗಳಿಂದ `ಆಪರೇಷನ್ ವಿಜಯ್’ಗೆ ಯಶಸ್ವಿಗೊಳಿಸಿದ, ರೈಫಲ್ ಮ್ಯಾನ್ ಸಂಜಯ್ ಕುಮಾರ್, ನಯಿಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮತ್ತು ವಿಕ್ರಮ್ ಬಾತ್ರಾರವರಿಗೆ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರ ಪುರಸ್ಕಾರವನ್ನು ನೀಡಿ ಗೌರವಿಸಿತ್ತು.

    ಏನಿದು ಕಾರ್ಗಿಲ್ ವಿಜಯ್ ದಿವಸ್?
    1999ರ ಮೇ ಮತ್ತು ಜುಲೈನ 2 ತಿಂಗಳುಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು.

    ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ `ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಸೈನಿಕರು ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡಿಕೊಳ್ಳುತ್ತಾ ಸೇನೆ ಬರುತ್ತಿದೆ.

    ಇಂದು ಜಮ್ಮು-ಕಾಶ್ಮೀರದ ದ್ರಾಸ್‍ನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ಸ್ಮರಣಾರ್ಥ ನಿರ್ಮಿಸಿರುವ ಸ್ಮಾರಕದಲ್ಲಿ ಅಂದು ಭಾರತೀಯ ಸೈನಿಕರು ಯುದ್ಧಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.