Tag: Karawara

  • ಕಾರವಾರ ಬಿರುಗಾಳಿ ಆರ್ಭಟಕ್ಕೆ 5 ಸಾವಿರ ಕೋಳಿಗಳ ಸಾವು!

    ಕಾರವಾರ ಬಿರುಗಾಳಿ ಆರ್ಭಟಕ್ಕೆ 5 ಸಾವಿರ ಕೋಳಿಗಳ ಸಾವು!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಸಂಜೆ ವೇಳೆಗೆ ಸುರಿದ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಕೋಳಿ ಫಾರಂ ಮೇಲ್ಛಾವಣಿ ಕುಸಿದು ಸುಮಾರು 5 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಶಿಣಗೇರಿ ನಡೆದಿದೆ.

    ಅರಶಿಣಗೇರಿಯ ಹಜರತ್ ಅಲಿ ಎಂಬವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಕೋಳಿ ಫಾರಂ ನೆಲಸಮ ಆಗಿರುವುದಿಂದ ಸುಮಾರು 15 ಲಕ್ಷ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯ ಮುಂಡಗೋಡು, ಶಿರಸಿ, ಯಲ್ಲಾಪುರಗಳಲ್ಲಿ ಗುಡುಗು ಸಹಿತ ಬಿರುಗಾಳಿ ಬೀಸಿದ್ದು, ಅಲ್ಪ ತುಂತುರು ಮಳೆಯಾಗಿದ್ದು ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.

    ಇತ್ತ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಹಲವು ಭಾಗಗಳಲ್ಲಿಯೂ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಫಾನಿ ಚಂಡಮಾರುತದಿಂದ ಬಿರುಗಾಳಿ ಸಹಿತ ಮಳೆ ಆಗುವ ನಿರೀಕ್ಷೆ ಇರುವುದಿಂದ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.

  • ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ

    ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ

    ಕಾರವಾರ: ಬಸ್ ಚಾಲಕನ ಸಮಯಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಗಟ್ಟ ಪ್ರದೇಶದ ಇಳಿಜಾರಿನಲ್ಲಿ ನಡೆದಿದೆ.

    ಲಾರಿ ಚಾಲಕ ಈರಣ್ಣ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕ ಕತ್ತಿ ಕಾನಾಪುರ್ ತಮ್ಮ ಜೀವದ ಹಂಗು ತೊರೆದು ಬಸ್ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬ್ರೇಕ್ ಫೇಲ್ ಆಗಿದ್ದ ಬಸ್ಸನ್ನು ನಿರಂತರವಾಗಿ ಲಾರಿಗೆ ಡಿಕ್ಕಿ ಹೊಡೆಸಿಕೊಳ್ಳುವ ಮೂಲಕ ಬಸ್ ವೇಗ ತಗ್ಗಿಸಿ ಪ್ರಯಾಣಿಕರನ್ನು ಸಂಭವನೀಯ ಅಪಘಾತದಿಂದ ಪಾರು ಮಾಡಿದ್ದಾರೆ.

    ನಡೆದಿದ್ದೇನು?:
    ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ ಗದಗ ಡಿಪೋ ಗೆ ಸೇರಿದ ಕೆ.ಎ 26 ಎಫ್ 1025 ನಂಬರಿನ ಬಸ್ ಅರಬೈಲ್ ಇಳಿಜಾರಿನಲ್ಲಿ ಆಗಮಿಸುತ್ತಿದಂತೆ ಬ್ರೇಕ್ ಫೇಲ್ ಆಗಿತ್ತು. ಆದರೆ ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸು ಚಾಲಕನ ನಿಯಂತ್ರಣಕ್ಕೆ ಬರಲಿಲ್ಲ. ಈ ಹಂತದಲ್ಲಿ ಬಸ್ ಕಂದಕಕ್ಕೆ ಉರುಳುವ ಸಾಧ್ಯತೆ ಇತ್ತು.

    ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಜೀವಭಯದಿಂದ ಆತಂಕಗೊಂಡಿದ್ದರು. ಈ ವೇಳೆ ಮುಂದೆ ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ.  ಎರಡು ಬಾರಿ ಬಸ್ ಡಿಕ್ಕಿಯಾದ ನಂತರ ಬಸ್ಸಿನ ಬ್ರೇಕ್ ಫೇಲ್ ಆಗಿರುವುದನ್ನು ಅಂದಾಜಿಸಿದ ಗೊಬ್ಬರ ಸಾಗಿಸುತ್ತಿದ್ದ ಲಾರಿ ಚಾಲಕ ಈರಣ್ಣ,  ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು ಬಸ್ಸಿನ ವೇಗ ಕಡಿಮೆ ಮಾಡಿದ್ದಾರೆ.

    ಹೀಗೆ ವೇಗ ಕಡಿಮೆ ಮಾಡಿಕೊಂಡ ಬಸ್ ಸುಮಾರು 4 ಕಿಮೀ ದೂರ ಚಲಿಸಿ ಅರಬೈಲ್ ಘಟ್ಟದ ಇಳಿಜಾರು ಮುಗಿದ ನಂತರ ನಿಂತಿತು. ಬಸ್ ನಿಂತ ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಲಾರಿ ಚಾಲಕ ಈರಣ್ಣ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಅಪಘಾತದ ಪರಿಣಾಮ ಲಾರಿ ಹಿಂಭಾಗ ಹಾಗೂ ಬಸ್ ಮುಂಭಾಗಕ್ಕೆ ಹಾನಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾರವಾರದಲ್ಲಿ ಅಂತರಾಷ್ಟ್ರೀಯ ದ್ರಾಕ್ಷಾರಸ ಉತ್ಸವ – ವೈನ್ ರುಚಿ ನೋಡಲು ಮುಗಿಬಿದ್ದ ಜನತೆ

    ಕಾರವಾರದಲ್ಲಿ ಅಂತರಾಷ್ಟ್ರೀಯ ದ್ರಾಕ್ಷಾರಸ ಉತ್ಸವ – ವೈನ್ ರುಚಿ ನೋಡಲು ಮುಗಿಬಿದ್ದ ಜನತೆ

    ಕಾರವಾರ: ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕಾ ಇಲಾಖೆ ಹಾಗೂ ಸೆನ್ಸ್ ಕ್ರಿಯೇಷನ್ ಸಹಭಾಗಿತ್ವದಲ್ಲಿ ಮೂರು ದಿನಗಳ ವೈನ್ ಉತ್ಸವವನ್ನು ಕಾರವಾರದ ಕಾಳಿ ರಿವರ್ ಗಾರ್ಡನಿನಲ್ಲಿ ಆಯೋಜನೆ ಮಾಡಲಾಗಿತ್ತು.

    ವಾರಾಂತ್ಯವಾದ ಕಾರಣ ಕರಾವಳಿ ಭಾಗದ ಜನರು ಸೇರಿದಂತೆ ನೆರೆಯ ಗೋವಾ ಮುಂಬೈ ಮಂದಿಯೂ ಈ ಉತ್ಸವದಲ್ಲಿ ವೈನ್ ಸವಿಯಲು ಮುಗಿ ಬಿದ್ದಿದ್ದರು. ಮಹಿಳೆಯರು ಪುರುಷರೆನ್ನದೇ ಎಲ್ಲರೂ ಈ ಉತ್ಸವದಲ್ಲಿ ಭಾಗಿಯಾಗಿ ವೈನ್ ಸವಿದವರು. ಮೇಳದಲ್ಲಿ 10 ರಿಂದ 12 ವೈನರಿಗಳು ಭಾಗವಹಿಸಿದ್ದು, 150 ವಿವಿಧ ಬ್ರಾಂಡ್‍ಗಳ ಪ್ರದರ್ಶನ, ಮಾರಾಟ ಹಾಗೂ ವೈನ್ ನಿಂದ ಆರೋಗ್ಯದಲ್ಲಿ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು.

    ವೈನ್ ಮಿತ ಬಳಕೆ ಯಿಂದ ಪ್ರಯೋಜನ ಹೀಗಿವೆ:
    ವೈನ್ ಎನ್ನುವುದು ಬಹುತೇಕರಿಗೆ ಮದ್ಯವೆಂದಷ್ಟೇ ತಿಳಿದುಕೊಂಡಿದ್ದಾರೆ ಇದನ್ನು ಕುಡಿಯುವುದರಿಂದ ಹಲವರು ಕೆಟ್ಟದ್ದು ಎನ್ನುತ್ತಾರೆ. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಇದರ ಪಾತ್ರ ಮಹತ್ವದಿದೆ. ಕೆಂಪು ದ್ರಾಕ್ಷಿ ವೈನ್ ಗಳು ಟ್ಯಾನಿನ್ ಗಳಿಂದ ವಯಸ್ಸಾಗುವುದನ್ನು ತಡೆಯುತ್ತವೆ. ಬಿಳಿ ದ್ರಾಕ್ಷಿ ವೈನ್ ಗಳು ಶ್ವಾಸಕೋಶದ ಕಾರ್ಯವನ್ನು ವೃದ್ಧಿಸುತ್ತವೆ. ಹೃದಯದ ಸಂಬಂಧಿ ರೋಗಗಳನ್ನು ನಿಯಂತ್ರಣದಲ್ಲಿ ಇಡುವುದರ ಜೊತೆ ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತದೆ. ಅಲ್ಲದೇ ನಿಮ್ಮ ದೇಹದಲ್ಲಿ ಹುಣ್ಣುಗಳಾಗುತ್ತಿದ್ದರೇ ಅವುಗಳ ನಿಯಂತ್ರಣವನ್ನು ವೈನ್ ಗಳು ಮಾಡುತ್ತವೆ.

    ಕೆಂಪು ದ್ರಾಕ್ಷಿ ವೈನ್ ಗಳು ಚರ್ಮದಲ್ಲಿರುವ ಪ್ರೋಟೀನ್ ನಿಂದ ಕ್ಯಾನ್ಸರ್ ಗೆ ಕಾರಣವಾಗಿರುವ ಜೀವಕೋಶವನ್ನು ಸಾಯಿಸುವ ಶಕ್ತಿ ಹೊಂದಿದೆ. ಮಹಿಳೆಯರ ಎಲುಬುಗಳ ಬಲವರ್ಧನೆಗೆ ಸಹಕಾರಿಯಾಗಿದ್ದು, ಹೃದಯ ಸ್ತಂಭನ ನಿಯಂತ್ರಣವನ್ನು ಭರಿಸುವ ಶಕ್ತಿ ಈ ವೈನ್‍ಗಿದೆ. ನರರೋಗಗಳಾದ ಅಲ್ಜೀಮರ್ಸ್, ಪಾರ್ಕಿನ್‍ಸನ್‍ಗಳಿಂದ ರಕ್ಷಿಸುವುದರ ಜೊತೆ ಮಲಬದ್ಧತೆ ತಡೆಗಟ್ಟುತ್ತದೆ. ಊಟದ ಜೊತೆ ಸೇವಿಸಿದರೆ ಪಚನ ಕ್ರಿಯೆ ಉತ್ತಮವಾಗಿರುತ್ತದೆ. ವೈನನ್ನು ಹಿತ ಮಿತವಾಗಿ ಸೇವಿಸಿ ನಿಮ್ಮ ಆರೋಗ್ಯ ಕಾಪಾಡಿ ಕೊಳ್ಳಬಹುದು.

    ದೇಶ ದಿಂದಲ್ಲದೇ ವಿದೇಶದ ವೈನ್ ಗಳ ಪ್ರದರ್ಶನ:
    ನಮ್ಮ ಕರ್ನಾಟಕದ ವೈನ್ ಗಳಲ್ಲದೇ ವೈನ್ ಗೆ ಪ್ರಸಿದ್ಧಿ ಪಡೆದ ಯುರೋಪ್ ಖಂಡ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕಾ ಹಾಗೂ ಇತರ ದೇಶದ ವೈನ್ ಗಳ ಮಾರಾಟ ಕೂಡ ಈ ಮೇಳದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವೈನ್ ತಯಾರಕರು ಹಾಗೂ ವೈನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ತಯಾರಕರು ಹಾಗೂ ಸಾರ್ವಜನಿಕರ ನಡುವೆ ವಿಚಾರ ವಿನಿಮಯಕ್ಕೆ ಅವಕಾಶ ಸಹ ವೈನ್ ಬೋರ್ಡ್ ಕಲ್ಪಿಸಿಕೊಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮುದ್ರದ ಸುಳಿಯಲ್ಲಿ ಸಿಕ್ಕಿಬಿದ್ದ ಪ್ರವಾಸಿಗನ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

    ಸಮುದ್ರದ ಸುಳಿಯಲ್ಲಿ ಸಿಕ್ಕಿಬಿದ್ದ ಪ್ರವಾಸಿಗನ ರಕ್ಷಿಸಿದ ಲೈಫ್ ಗಾರ್ಡ್ ಸಿಬ್ಬಂದಿ

    ಕಾರವಾರ: ಸರ್ಫಿಂಗ್ ಮಾಡುವ ವೇಳೆ ಸಮುದ್ರ ಸುಳಿಗೆ ಸಿಕ್ಕಿ ಬಿದ್ದಿದ್ದ ಪ್ರವಾಸಿಗನನ್ನು ಪ್ರವಾಸೋದ್ಯಮ ಇಲಾಖೆಯ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಡ್ಲೆ ಬೀಚ್ ನಲ್ಲಿ ಈ ಘಟನೆ ನಡೆದಿದ್ದು, ಅಖಿಲೇಶ್ (30) ರನ್ನು ರಕ್ಷಣೆ ಮಾಡಲಾಗಿದೆ. ಅಖಿಲೇಶ್ ಸಮುದ್ರದಲ್ಲಿ ಸರ್ಫಿಂಗ್ ಮಾಡಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಲೈಫ್ ಗಾರ್ಡ್ ಗಳ ಕಾರ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಅವರ ಕಾರ್ಯವನ್ನು ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಖಿಲೇಶ್ ಡೆಹ್ರಾಡೂನ್ ಮೂಲದರಾಗಿದ್ದು, ಇಂದು ಕುಡ್ಲೆ ಬೀಚ್‍ನಲ್ಲಿ ಸರ್ಫಿಂಗ್ ಮಾಡಲು ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ನೀರಿನ ಸುಳಿ ನಿರ್ಮಾಣವಾಗಿದ್ದು, ಸರ್ಫಿಂಗ್ ಮಾಡುವ ವೇಳೆ ಆಯಾ ತಪ್ಪಿ ಅಖಿಲೇಶ್ ಸುಳಿಯಲ್ಲಿ ಸಿಲುಕಿದ್ದರು. ಅಪಾಯದಲ್ಲಿ ಸಿಲುಕಿದ ಅವರು ರಕ್ಷಣೆಗಾಗಿ ಮೊರೆ ಇಟ್ಟಿದ್ದು, ಇದನ್ನು ಗಮನಿಸಿದ ಪ್ರವಾಸೋದ್ಯಮ ಇಲಾಖೆಯ ಲೈಫ್ ಗಾರ್ಡ್ ಸಿಬ್ಬಂದಿ ಸಂಜೀವ್ ಹೋಸ್ಕಟ್ಟಾ, ನಿತ್ಯಾನಂದ ಹರಿಕಂತ್ರ ಸಮುದ್ರಕ್ಕೆ ಇಳಿದು ಅಖಿಲೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀನಿನ ಬಲೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ: ವಿಡಿಯೋ ನೋಡಿ

    ಮೀನಿನ ಬಲೆಯಲ್ಲಿ ಸಿಲುಕಿದ್ದ ನಾಗರಹಾವಿನ ರಕ್ಷಣೆ: ವಿಡಿಯೋ ನೋಡಿ

    ಕಾರವಾರ: ದನಗಳು ಹೂವುಗಳನ್ನು ತಿನ್ನಬಾರದೆಂದು ಗಿಡಗಳ ಮೇಲೆ ಹಾಕಿದ್ದ ಮೀನಿನ ಬಲೆಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

    ಆಹಾರ ಅರಸಿ ಮುಂಡಳ್ಳಿ ಗ್ರಾಮದ ತಿರಗನಮನೆ ಶನಿಯಾರ ನಾಯ್ಕ ಎಂಬುವವರ ಮನೆಗೆ ರಾತ್ರಿ ವೇಳೆಯಲ್ಲಿ ಬಂದಿದ್ದ ನಾಗರಹಾವು, ಗಿಡಗಳ ಮೇಲೆ ಹಾಕಲಾಗಿದ್ದ ಮೀನಿನ ಬಲೆಗೆ ಸಿಲುಕಿದೆ. ಇದು ಬೆಳಗ್ಗೆ ಮನೆಯ ಮಾಲೀಕರ ಗಮನಕ್ಕೆ ಬಂದಕೂಡಲೇ ಸ್ಥಳೀಯ ಉರಗ ತಜ್ಞ ಮಾದೇವ ನಾಯ್ಕರವರಿಗೆ ಮಾಹಿತಿ ನೀಡಿದ್ದಾರೆ.

    ಹಾವಿನ ರಕ್ಷಣಾ ಕಾರ್ಯವನ್ನ ನಡೆಸುವ ಕಾರ್ಯವನ್ನು ಮಾಡುತ್ತಿರುವ ಮಾದೇವ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ ಬಲೆಯಲ್ಲಿ ಸಿಲುಕಿದ್ದ ನಾಗರಹಾವನ್ನು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಬಲೆಯಲ್ಲಿ ಸಿಲುಕಿದ್ದ ನಾಗರಹಾವು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಗಾಯಗಳನ್ನು ಮಾಡಿಕೊಂಡಿದ್ದು ಉರಗ ತಜ್ಞ ಮಾದೇವನಾಯ್ಕ ಅದರ ದೇಹಕ್ಕೆ ಅರಿಶಿನ ಹಚ್ಚಿ ಉಪಚಾರ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=MXWKyYCwlco

     

  • ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಬೊಲೆರೋ

    ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಬೊಲೆರೋ

    ಕಾರವಾರ: ರಸ್ತೆ ದಾಟುತ್ತಿದ್ದ ವ್ಯಕ್ತಿಯೊರ್ವನಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

    ಅಮದಳ್ಳಿ ಗ್ರಾಮದ 35 ವರ್ಷದ ಸಂತೋಷ್ ಮೃತಪಟ್ಟ ದುರ್ದೈವಿ. ಕಾರವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅಮದಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ಈ ಅಪಘಾತ ನಡೆದಿದ್ದು, ಅಪಘಾತದ ದೃಶ್ಯಗಳೆಲ್ಲವೂ ಗ್ರಾಮದ ವೀರಗಣಪತಿ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಹೆದ್ದಾರಿ ದಾಟಿ ದೇವಸ್ಥಾನದ ಕಡೆಗೆ ಬರುತ್ತಿದ್ದ ವೇಳೆ ಕಾರವಾರದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆ ದಾಟುತ್ತಿದ್ದ ಸಂತೋಷ್ ಹಾರಿ ಬಿದ್ದಿದ್ದಾರೆ. ಕೂಡಲೇ ಕಾರವಾರದ ಜಿಲ್ಲಾಸ್ಪತ್ರೆಗೆ ಸಂತೋಷ್ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಂತೋಷ್ ಇಂದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಕ್ರಮವಾಗಿ ಸಾಗಿಸುತ್ತಿದ್ದ 4.50 ಲಕ್ಷ ಮೌಲ್ಯದ ಗೋವಾ ಪೆನ್ನಿ ವಶ!

    ಅಕ್ರಮವಾಗಿ ಸಾಗಿಸುತ್ತಿದ್ದ 4.50 ಲಕ್ಷ ಮೌಲ್ಯದ ಗೋವಾ ಪೆನ್ನಿ ವಶ!

    ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ(ಫೆನ್ನಿ)ವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದಾಂಡೇಭಾಗ್ ಗ್ರಾಮದಲ್ಲಿ ವಶಕ್ಕೆ ಪಡೆದು ಓರ್ವನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

    ಗಜಾನನ ಕೃಷ್ಣ ಕದಂಬ ಬಂಧಿತ ಆರೋಪಿಯಾಗಿದ್ದಾನೆ. ಈತ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಓಮ್ನಿ ಸಹಿತ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

    ಬಂಧಿತನಿಂದ ಸುಮಾರು 4,50,000 ರೂಪಾಯಿ ಮೌಲ್ಯದ ಗೋವಾದ ಮದ್ಯ(ಪೆನ್ನಿ)ವನ್ನು ವಶಪಡಿಸಕೊಂಡಿದ್ದಾರೆ. ಕಾರವಾರದ ಅಬಕಾರಿ ನಿರೀಕ್ಷಕರಾದ ರೇವಣ ಸಿದ್ದಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ಘಟನೆ ಸಂಬಂಧ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಗೋವಾ, ಬೆಳಗಾವಿ, ಧಾರವಾಡ, ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನ ಹಂಚಿಕೊಂಡಿದೆ ಉತ್ತರ ಕನ್ನಡ ಜಿಲ್ಲೆ. ಹಚ್ಚ ಹಸುರಿನ ಸೀರೆಯುಟ್ಟು ಸದಾ ಮದುವಣಗಿತ್ತಿಯಂತೆ ಕಂಗೊಳಿಸೋ ಈ ಜಿಲ್ಲೆಗೆ ಅರಬ್ಬೀ ಸಮುದ್ರ ಕಿರೀಟಕ್ಕೊಂದು ಗರಿ ಇಟ್ಟಂತೆ. ರವೀಂದ್ರ ನಾಥರಿಗೆ ಗೀತಾಂಜಲಿ ಬರೆಯೋದಕ್ಕೆ ಸ್ಪೂರ್ತಿ ನೀಡಿದ್ದು ಕಾರವಾರದ ಕಡಲ ತೀರವಂತೆ. ಆದ್ರೆ, ಅಭಿವೃದ್ಧಿ ಅನ್ನೋ ವಿಚಾರ ಬಂದಾಗ ಮಾತ್ರ ಉತ್ತರ ಕನ್ನಡ ಜಿಲ್ಲೆ ನಿರುತ್ತರವಾಗಿ ಬಿಡುತ್ತದೆ. ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲ ಜಿಲ್ಲೆಯ ಪ್ಲಸ್ ಪಾಯಿಂಟ್ ಆಗಿದ್ರೂ ಕೈಗೆಟುಕದೇ ಇರೋ ಅಭಿವೃದ್ಧಿಯೇ ಈ ಜಿಲ್ಲೆಗೆ ತಟ್ಟಿದ ಮಹಾನ್ ಶಾಪ. ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಚುನಾವಣೆ ರಂಗು ರಂಗೇರಿದೆ.

    ಹಸಿರ ಕಾನನದ ನಡುವೆ ರಮ್ಯ ತಾಣಗಳ ವೈಭವ
    ಉತ್ತರ ಕರ್ನಾಟಕಕ್ಕೆ ಹೋಗೋರು ಬನವಾಸಿಗೆ ಹೋಗಿಲ್ಲ ಅಂದ್ರೆ ನಿಮ್ಮ ಪ್ರವಾಸ ಪರಿಪೂರ್ಣವಾಗೋಕೆ ಸಾಧ್ಯಾನೇ ಇಲ್ಲ. ಮಹಾಕವಿ ಪಂಪನೇ ವರ್ಣಿಸಿರುವಂತೆ ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ ಅಂತಾ ಈ ಸ್ಥಳವನ್ನು ಮನಬಿಚ್ಚಿ ವರ್ಣಿಸಿದ್ದಾನೆ.

    ಇನ್ನು ಬೇಲೆಕೇರಿಯ ಅದಿರು ನಾಪತ್ತೆ ಪ್ರಕರಣವನ್ನು ಯಾರಾದ್ರೂ ಮರೆಯೋದುಂಟೇ..? ಬೇಲೆಕೇರಿ ಅತ್ಯಂತ ಹಳೆಯ ಹಾಗೂ ಸುಂದರ ಬಂದರು. ಉತ್ತರ ಕನ್ನಡದ ಭಟ್ಕಳ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೆಬ್ಬಾಗಿಲಾಗಿತ್ತಂತೆ. ಭಯೋತ್ಪಾದಕ ಚಟುವಟಿಕೆಗಳು ಈ ಊರಿಗೆ ಕಪ್ಪು ಮಸಿ ಬಳೀತಾದ್ರೂ ಇಂದಿಗೂ ಭಟ್ಕಳ ಶಾಂತ ಸಮುದ್ರದಂತೆ ಕಂಗೊಳಿಸುತ್ತದೆ.

    ಕಾರವಾರದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ ದಾಂಡೇಲಿ. ಸಿಂಥೇರಿ ರಾಕ್ಸ್, ನಾಗಝರಿ ವ್ಯಾಲಿ, ಕಾವಲಾ ಕೇವ್ಸ್ ಹಗೆ ದಾಂಡೇಲಿಯಲ್ಲಿ ನೋಡೋದಕ್ಕೆ ಅನೇಕ ಸ್ಥಳಗಳಿವೆ. ಅರಣ್ಯದಲ್ಲಿರೋ ವಸತಿ ಗೃಹದಲ್ಲಿ ಉಳಿದುಕೊಂಡು ಪ್ರವಾಸವನ್ನ ಕೂಲಾಗಿ ಅನುಭವಿಸಬಹುದು.

    ಕಾರವಾರದಿಂದ ಸರಿ ಸುಮಾರು 60 ಕಿಲೋಮೀಟರ್ ದೂರದಲ್ಲಿರೋ ಪುಣ್ಯ ಕ್ಷೇತ್ರವೇ ಗೋಕರ್ಣ. ಶಿವನ ಆತ್ಮಲಿಂಗದ ಒಂದು ತುಣುಕು ಇಲ್ಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರ ವಾರಣಾಸಿಯಷ್ಟೇ ಪವಿತ್ರ ಅನ್ನೋದು ಭಕ್ತರ ಅಂಬೋಣ. ಇನ್ನುಳಿದಂತೆ ಕಾರವಾರ ಸಮುದ್ರ ತೀರ, ಶಿರಸಿಯ ಮಾರಿಕಾಂಬ ದೇವಾಲಯ, ಶ್ಯಾಮಲೆಯ ತಟದಲ್ಲಿರೋ ಸೊಂದಾ ಮಠ, ಹಾಗೆಯೇ ಪ್ರಸಿದ್ಧ ಪ್ರವಾಸೀ ತಾಣವಾಗಿರೋ ಯಾಣ ಕೂಡಾ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತೆ.

    ದಕ್ಷಿಣ ಕನ್ನಡದಲ್ಲಿ ತೆಂಕು ತಿಟ್ಟು, ಉತ್ತರ ಕನ್ನಡದಲ್ಲಿ ಬಡಾ ಬಡಗುತಿಟ್ಟಿನ ತಾಳ ಮೇಳ..!
    ಯಕ್ಷಗಾನದಲ್ಲಿ ತೆಂಕು ತಿಟ್ಟು, ಬಡಗು ತಿಟ್ಟು ಹಾಗೂ ಬಡಾ ಬಡಗುತಿಟ್ಟು ಅನ್ನೋ ಪ್ರಬೇಧಗಳಿವೆ. ಇದ್ರಲ್ಲಿ ಉತ್ತರ ಕನ್ನಡದವರು ಬಡಾ ಬಡಗು ತಿಟ್ಟನ್ನಾಡುತ್ತಾರೆ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್ ಹೀಗೆ ಉತ್ತರಕನ್ನಡ ಘಟಾನುಘಟಿ ಯಕ್ಷಕರ್ಮಿಗಳ ತವರೂರು. ಇಂದಿಗೂ ಮನೋರಂಜನೆಗಾಗಿ ಸಿನಿಮಾ, ಟಿವಿ ಮಾಧ್ಯಮಗಳಿದ್ರೂನೂ ಉತ್ತರ ಕನ್ನಡದ ಮಂದಿ ಮಾತ್ರ ಯಕ್ಷಗಾನವನ್ನ ತಮ್ಮ ಉಸಿರಲ್ಲಿ ಉಸಿರಾಗಿಸ್ಕೊಂಡಿದ್ದಾರೆ.

    ಉತ್ತರ ಕನ್ನಡದಲ್ಲಿ ಉತ್ತರವೇ ಇಲ್ಲದ ಪ್ರಶ್ನೆಗಳು ಹಲವಾರು..!
    ಇಷ್ಟೆಲ್ಲಾ ವೈಶಿಷ್ಟ್ಯತೆಗಳ ನಡುವೆ ಉತ್ತರ ಕನ್ನಡದಲ್ಲಿ ಈ ಬಾರಿ ಅತೀ ಹೆಚ್ಚು ಸದ್ದು ಮಾಡಿದ್ದು ಪರೇಶ್ ಮೇಸ್ತಾ ಸಾವು. ಇದು ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಅಭಿವೃದ್ಧಿ ಹಾಗೂ ಉತ್ತರ ಕನ್ನಡ ಒಂದು ರೀತಿಯಲ್ಲಿ ಎಣ್ಣೆ ಸೀಗೆ ಇದ್ದಂತೆ. ಅಭಿವೃದ್ಧಿ ಅನ್ನೋದನ್ನ ನೋಡಿಯೇ ಕಾಲವಾಗಿದೆ. ಹಾಗಾದ್ರೆ, ಕ್ಷೇತ್ರವಾರು ಲೆಕ್ಕಾಚಾರಗಳು, ಕಳೆದ ಬಾರಿಯ ಫಲಿತಾಂಶ ಹಾಗೂ ಈ ಬಾರಿಯ ಕ್ಯಾಂಡಿಡೇಟ್ ಗಳ ವಿವರಗಳನ್ನು ನೋಡೋಣ ಬನ್ನಿ.

    ಕಾರವಾರ ಈ ಬಾರಿ ಯಾರ ಪಾಲಿನ ವರ..?

    ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾ ಕಾರವಾರದಲ್ಲಿದೆ. ಕರ್ನಾಟಕದ ಎರಡನೇ ಅತೀ ಪ್ರಮುಖ ಬಂದರೂ ಕೂಡಾ ಹೌದು. ಇಲ್ಲಿನ ಜನ ಪಕ್ಷ ನೋಡೋರೇ ಅಲ್ಲ. ಯಾವ ವ್ಯಕ್ತಿ ಸೂಕ್ತ, ಯಾರ ವರ್ಚಸ್ಸು ಇಲ್ಲಿ ವರ್ಕೌಟ್ ಆಗುತ್ತೋ ಅವರಿಗೇ ಇಲ್ಲಿನ ಮತದಾರ ಜೈ ಅಂತಾನೆ. 2013ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪ್ ಆಗಿದ್ದ ಆನಂದ್ ಅಸ್ನೋಟಿಕರ್ ಇಲ್ಲಿ ಮಕಾಡೆ ಮಲಗಿದ್ರು. ಈ ಬಾರಿ ಆಸ್ನೋಟಿಕರ್ ಜೆಡಿಎಸ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಇಲ್ಲಿ ಇದ್ದೂ ಇಲ್ಲದಂತಿದ್ರೂ ಆಸ್ನೋಟಿಕರ್ ಹೆಸರು ಸ್ವಲ್ಪ ಮಟ್ಟಿಗೆ ಪರಿಗಣಿತಗೊಳ್ಬೋದು. ಇನ್ನುಳಿದಂತೆ ಬಿಜೆಪಿಯಿಂದ ರೂಪಾಲಿ ನಾಯ್ಕ್, ಕಾಂಗ್ರೆಸ್ ನಿಂದ ಸತೀಶ್ ಸೈಲ್ ಕೃಷ್ಣ ಕಣದಲ್ಲಿದ್ದಾರೆ. ಸೋ ಇಲ್ಲಿ ಮತದಾರ ಯಾರಿಗೆ ಜೈ ಅಂತಾನೆ ಅನ್ನೋದೇ ಸದ್ಯದ ಕುತೂಹಲ.

    ಕುಮಟಾದಲ್ಲಿ ಗೆಲುವಿನ ತಮಟೆ ಹೊಡೆಯೋರು ಯಾರು..?
    ಕುಮಟಾ ಹೊನ್ನವರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ. ಈ ಬಾರಿಯೂ ಇವರೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ್ ನಾಯ್ಕ್ ಬಿರುಸಿನ ಪ್ರಚಾರ ನಡೆಸ್ತಾ ಇದ್ದಾರೆ. 2013ರಲ್ಲಿ ಜೆಡಿಎಸ್ ನಿಂದ ಕಂಟೆಸ್ಟ್ ಮಾಡಿ ಕೇವಲ 420 ಮತಗಳಿಂದ ಸೋಲು ಕಂಡಿದ್ದ ದಿನಕರ್ ಶೆಟ್ಟಿ ಈ ಬಾರಿ ಭಾಜಪಾದ ಹುರಿಯಾಳು. ಕಳೆದ ಬಾರಿ ಶಾರದ ಮೋಹನ್ ಶೆಟ್ಟಿ 36,756 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ರು. ಜೆಡಿಎಸ್ ನ ದಿನಕರ್ ಕೇಶವ್ ಶೆಟ್ಟಿ 36,336 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತರಾಗ್ಬೇಕಾಯ್ತು.

    ಭಟ್ಕಳದಲ್ಲಿ ಗೆಲುವಿನ ಅಟ್ಟಕ್ಕೇರೋರು ಯಾರು..?
    ಕಳೆದ ಬಾರಿ ಪಕ್ಷೇತರವಾಗಿ ನಿಂತು ಗೆದ್ದು ಬೀಗಿದ್ದ ಮಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್ ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುನಿಲ್ ನಾಯ್ಕ್ ಈ ಬಾರಿ ಬಿಜೆಪಿಯ ಕಟ್ಟಾಳು. ಜೆಡಿಎಸ್ ಇನಾಯಿತುಲ್ಲಾ ಷಾ ಬಂದ್ರಿಯವರಿಗೆ ಟಿಕೆಟ್ ಕೊಡೋದಕ್ಕೆ ಬಯಸಿದ್ರೂ ಕೊನೆಗೆ ಯಾರನ್ನೂ ಕಣಕ್ಕಿಳಿಸದೆ ಸೈಲೆಂಟಾಗಿದೆ.

    ಹಳಿಯಾಳದಲ್ಲಿ ಗೆಲುವಿನ ಹಳಿಯಲ್ಲಿ ಓಡೋರು ಯಾರು..?
    ಹಳಿಯಾಳ ಕ್ಷೇತ್ರ ಸಚಿವ ಆರ್.ವಿ ದೇಶಪಾಂಡೆಯವ್ರ ಸಾಮ್ರಾಜ್ಯ. 1983ರಿಂದ ಸತತ ಆರು ಎಲೆಕ್ಷನ್ ಗೆದ್ದಿರೋ ದೇಶಪಾಂಡೆಗೆ ಇಲ್ಲಿ ಸೋಲಿನ ರುಚಿ ತೋರಿಸೋರು ಯಾರು ಇಲ್ಲ ಅನ್ನೋ ಪರಿಸ್ಥಿತಿ ಇತ್ತು. ಆದ್ರೆ, 2008ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದ ಸುನಿಲ್ ಹೆಗಡೆ ದೇಶಪಾಂಡೆಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ರು. ಆದ್ರೆ, 2013ರಲ್ಲಿ ಮತ್ತೆ ದೇಶಪಾಂಡೆ ಗೆಲುವಿನ ನಗೆ ಬೀರಿದ್ರು. ಈಗ ಇಬ್ಬರೂ ಮತ್ತೆ ಮುಖಾಮುಖಿಯಾಗ್ತಿದ್ದಾರೆ. ಜೆಡಿಎಸ್ ನಿಂದ ಕೆ. ರಮೇಶ್ ಈ ಬಾರಿ ಕಣದಲ್ಲಿದ್ದಾರೆ.

    ಶಿರಸಿಯಲ್ಲಿ ಯಾರ ಶಿರಕ್ಕೆ ಗೆಲುವಿನ ಮುಕುಟ..?
    ಬಿಜೆಪಿಯಿಂದ ಶಿರಸಿಯನ್ನು ಹೇಗಾದ್ರೂ ಮಾಡಿ ಕಸಿಯಲೇಬೇಕು ಅನ್ನೋ ಪಣಕ್ಕೆ ಬಿದ್ದಿವೆ ಕಾಂಗ್ರೆಸ್ ಹಾಗೂ ಜೆಡಿಎಸ್. 1999ರಿಂದಲೂ ಇಲ್ಲಿ ಬಿಜೆಪಿಯದ್ದೇ ಅಬ್ಬರ. ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ. ದಿ.ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಕದನ ಕಣ ಕುತೂಹಲ ಮೂಡಿಸಿದೆ. ಹೀಗಾಗಿ, ಶಿರಸಿ ಹವ್ಯಕರ ಮತ ಬ್ಯಾಂಕ್ ಒಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ. ದಿ.ಎಸ್ ಬಂಗಾರಪ್ಪ ಅವ್ರ ದೂರದ ಸಂಬಂಧಿ ಭೀಮಣ್ಣ ನಾಯ್ಕ್ ಕೂಡಾ ಕಣದಲ್ಲಿದ್ದು ಈ ಬಾರಿ ಘಟಾನುಘಟಿ ನಾಯಕ್ರ ಸಂಬಂಧಿಕರದ್ದೇ ಚರ್ಚೆ ಶಿರಸಿಯಲ್ಲಿ ಜೋರಾಗಿದೆ.

    ಯಲ್ಲಾಪುರದ ಅರಸ ಯಾರಾಗ್ತಾರೆ..?
    ಯಲ್ಲಾಪುರದ ಜನರಿಗೆ ಬಿಜೆಪಿ ಫೆವರೇಟ್ ಅನ್ನೋದು ಸದ್ಯಕ್ಕಿರೋ ಟ್ರೆಂಡ್. ಯಾಕಂದ್ರೆ ಇಲ್ಲಿ ಜನಪ್ರತಿನಿಧಿಗಳು ಯಾರಾಗ್ಬೇಕು ಅನ್ನೋದನ್ನ ನಿರ್ಧರಿಸೋರೇ ಹವ್ಯಕ ಬ್ರಾಹ್ಮಣ, ಲಿಂಗಾಯತ ಹಾಗೂ ನಾಮಧಾರಿಗಳು. ಆದ್ರೆ, 2013ರಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಹೋಗಿತ್ತು. ಹಾಲಿ ಶಾಸ್ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ್ ಈ ಬಾರಿಯೂ ಕಣದಲ್ಲಿದ್ದಾರೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ತೆನೆ ಹೊತ್ತಿದ್ದ ರವೀಂದ್ರನಾಥ್ ಈ ಬಾರಿ ಜೆಡಿಎಸ್ ನಿಂದ ಪೈಪೋಟಿ ಕೊಡೋಕೆ ನಿಂತಿದ್ದಾರೆ. ಇನ್ನು ಬಿಜೆಪಿಯಿಂದ ವಿಎಸ್ ಪಾಟೀಲ್ ರಣಕಣಕ್ಕೆ ಧುಮುಕಿದ್ದಾರೆ. ಆದ್ರೆ, ಮತದಾರ ಈ ಬಾರಿ ಯಾರಿಗೆ ಕೃಪಾಕಟಾಕ್ಷ ತೋರ್ತಾನೆ ಅನ್ನೋದಕ್ಕೆ ಮೇ 15ರವರೆಗೆ ಕಾಯ್ಲೇಬೇಕು.

  • ಕಾರವಾರದಲ್ಲಿ ಗಮನ ಸೆಳೆದ ಡಾಗ್ ಶೋ – ದೇಶಿ, ವಿದೇಶಿ ತಳಿಯ 80 ಶ್ವಾನಗಳ ಪ್ರದರ್ಶನ

    ಕಾರವಾರದಲ್ಲಿ ಗಮನ ಸೆಳೆದ ಡಾಗ್ ಶೋ – ದೇಶಿ, ವಿದೇಶಿ ತಳಿಯ 80 ಶ್ವಾನಗಳ ಪ್ರದರ್ಶನ

    ಕಾರವಾರ: ನಾಯಿಗಳು ಅಂದರೆ ಬಹಳಷ್ಟು ಜನರಿಗೆ ಎಲ್ಲಿಲ್ಲದ ಪ್ರೀತಿ. ಎಲ್ಲರೂ ಶ್ವಾನ ಪ್ರಿಯರೇ. ಅಂತಹ ಶ್ವಾನ ಪ್ರಿಯರಿಗಾಗಿಯೇ ಕರಾವಳಿ ಜಿಲ್ಲೆಯ ಕಾರವಾರದಲ್ಲಿ ಡಿಫರೆಂಟ್ ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು.

    ಕಾರವಾರ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಕರಾವಳಿ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಆಕರ್ಷಕ ಶ್ವಾನ ಪ್ರದರ್ಶನವನ್ನ ಆಯೋಜನೆ ಮಾಡಲಾಗಿತ್ತು. ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ಬಗೆಯ ಶ್ವಾನಗಳು ಜನರನ್ನ ಆಕರ್ಷಿಸಿದವು.

    ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಈ ಪ್ರದರ್ಶನದಲ್ಲಿ ಲ್ಯಾಬ್ರಡಾಲ್, ಜರ್ಮನ್ ಶೆಫರ್ಡ್, ಡಾಬರ್ ಮನ್, ಮುಧೋಳ, ರಾಟ್ ವೀಲರ್, ಮಾಲ್ಟಿಸ್, ಡಾಲ್ಮೀಶನ್, ಗ್ರೇಟ್ ಡೇನ್, ಪಗ್, ಗೋಲ್ಡನ್ ರಿಟ್ರೀವಲ್ ಸೇರಿದಂತೆ ಬಗೆ ಬಗೆಯ ನಾಯಿಗಳು ಜನರನ್ನು ಆಕರ್ಷಿಸಿವೆ.

    ಸುಮಾರು 24 ದೇಶಿ ವಿದೇಶಿ ತಳಿಯ 80 ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿ, ಶ್ವಾನ ಪ್ರಿಯರಿಗೆ ವೀಕೆಂಡ್‍ನಲ್ಲಿ ಸಖತ್ ಎಂಜಾಯ್ ಮೆಂಟ್ ನೀಡಿದವು. ಇದಲ್ಲದೇ ಶ್ವಾನ ಮಾರಾಟವನ್ನ ಸಹ ಶೋನಲ್ಲಿ ಮಾಡಲಾಯಿತು. ಜನರು ವಿವಿಧ ಬಗೆಯ ಶ್ವಾನಗಳನ್ನ ನೋಡಲು ಮುಗಿಬಿದ್ದು, ಆಯಾ ತಳಿಯ ಶ್ವಾನಗಳನ್ನ ಆಯೋಜಕರು ಕರೆದಾಗ ಶ್ವಾನಗಳು ಬಂದು ಪ್ರದರ್ಶನ ಕೊಡುತ್ತಿದ್ದವು.

    ಇನ್ನು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ತಮ್ಮ ತಮ್ಮ ಪ್ರೀತಿಯ ನಾಯಿಗಳನ್ನು ಶೃಂಗಾರ ಮಾಡಿಕೊಂಡು ತಂದಿದ್ದರು. ಆಯೋಜಕರು ಕರೆಯುತ್ತಿದ್ದಂತೆ ಸಾಕು ಶ್ವಾನಗಳನ್ನ ವೇದಿಕೆಗೆ ತಂದು ಎಲ್ಲರಿಗೆ ತೋರಿಸಿ ಸಂತಸ ಪಟ್ಟರು. ಇನ್ನು ಕೆಲ ವಿದೇಶಿ ತಳಿಯ ಶ್ವಾನಗಳನ್ನ ಪ್ರದರ್ಶನದಲ್ಲಿ ಕೆಲವರು ಅವುಗಳ ಜೊತೆ ಫೋಟೋ ತೆಗೆಸಿಕೊಂಡು ಎಂಜಾಯ್ ಮಾಡಿದರು.

    ಶ್ವಾನಗಳಿಗೆ ಪ್ರತ್ಯೇಕ ಮಳಿಗೆಗಳ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಿದ್ದು, ಶ್ವಾನ ಪ್ರಿಯರು ಪ್ರದರ್ಶನವಾದ ನಂತರ ತಾವು ಇಷ್ಟ ಪಟ್ಟ ಶ್ವಾನಗಳನ್ನ ಮಳಿಗೆಗಳಲ್ಲಿ ನೋಡಿ ಎಂಜಾಯ್ ಮಾಡಿದ್ದಾರೆ.