Tag: Karawara

  • ಕಾರವಾರ, ದಾವಣಗೆರೆ, ಚಿಕ್ಕಬಳ್ಳಾಪುರದಲ್ಲಿ ಎಸಿಬಿ ದಾಳಿ

    ಕಾರವಾರ, ದಾವಣಗೆರೆ, ಚಿಕ್ಕಬಳ್ಳಾಪುರದಲ್ಲಿ ಎಸಿಬಿ ದಾಳಿ

    – ರಾಜ್ಯದ 28 ಕಡೆ ರೈಡ್

    ಬೆಂಗಳೂರು: ಇಂದು ಬೆಳಂಬೆಳ್ಳಗೆ ಎಸಿಬಿ ಅಧಿಕಾರಿಗಳು ಕಾರವಾರ, ದಾವಣಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಕಾರವಾರ, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದ ರಾಜ್ಯ 28 ಕಡೆ 9 ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.

    ಕಾರವಾರ: ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ವಡ್ಡರ್ ಅವರ ಕಾರವಾರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ನಗರದ ಕೋಡಿಬಾಗ ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಟಾಕೀಸ್ ಹಿಂಭಾಗ ಇರುವ ಅವರ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ಮನೆಯಲ್ಲಿ ಅವರ ಸಹೋದರ ವಾಸವಿದ್ದು, ಮನೆಯು ತಾಯಿ ಚನ್ನಮ್ಮ ವಡ್ಡರ್‍ರವರ ಹೆಸರಿನಲ್ಲಿದೆ. ಎ.ಸಿ.ಬಿ ಡಿವೈಎಸ್ಪಿ ಮಂಜುನಾಥ್ ಕೌರಿ ನೇತೃತ್ವದ ತಂಡದಿಂದ ತನಿಖೆ ಮುಂದುವರಿಸಿ ಮನೆಯ ದಾಖಲೆ ಪತ್ರಗಳ, ಆಸ್ತಿ ವಿವರದ ದಾಖಲೆಗಳ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಚಿಕ್ಕಬಳ್ಳಾಪುರ: ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಪಿಡಿ. ಕೃಷ್ಣೇಗೌಡ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿರುವ ಯೋಜನಾ ನಿರ್ದೇಶಕ ಕಚೇರಿ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಯೋಜನಾ ನಿರ್ದೇಶಕ ಕೃಷ್ಣೇಗೌಡ ವಾಸವಿರುವ ಚಿಕ್ಕಬಳ್ಳಾಪುರ ನಗರದ ಮುಷ್ಟೂರು ರಸ್ತೆಯ ಬಾಡಿಗೆ ನಿವಾಸದ ಮೇಲೆ ಹಾಗೂ ಕೋಲಾರದ ಸ್ವಗ್ರಾಮ ವೆಲಗಲಬುರ್ರೆ ಗ್ರಾಮದ ನಿವಾಸದ ಮೇಲೂ ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಲಾಗಿತ್ತು. ಈಗ ಕಚೇರಿ ಮೇಲೂ ದಾಳಿ ಮಾಡಿರುವ ಅಧಿಕಾರಿಗಳು ಕಚೇರಿ ಮುಂಭಾಗ ನಿಂತಿದ್ದ ಕಾರಿನಲ್ಲೂ ಸಹ ತಪಾಸಣಾ ಕಾರ್ಯ ನಡೆಸಿದ್ದಾರೆ.

    ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದರು. ಬೆಳಗ್ಗೆಯಿಂದಲೇ ಎಸಿಬಿ ದಾಳಿ ಆರಂಭಿಸಿ ಫ್ಯಾಕ್ಟರಿ ಮತ್ತು ಬೈಲರ್ ಇಲಾಖೆಯ ಉಪ ನಿರ್ದೇಶಕ ಕೆ.ಎಂ. ಪ್ರಥಮ ಅವರ ಕಚೇರಿ ಮೇಲೆ ದಾಳಿ ನಡೆಸಿದರು. ದಾವಣಗೆರೆ ಕಚೇರಿ ಹಾಗೂ ಬೆಂಗಳೂರಿನ ಸಂಜಯ ನಗರದ ಅವರ ಮನೆ, ಅವರ ತಾಯಿ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿ ಅಧಿಕಾರಿಗಳು ಕಚೇರಿಯಲ್ಲಿ ಕಡತ ಪರಿಶೀಲನೆ ಮಾಡಿದರು. ದಾವಣಗೆರೆ ನಗರದ ಪಿಬಿ ರಸ್ತೆಯ ಹಳೇ ಅಪೂರ್ವ ಹೋಟೆಲ್ ಹಿಂಭಾಗ ಇರುವ ಫ್ಯಾಕ್ಟರಿ ಮತ್ತು ಬೈಲರ್ ಇಲಾಖೆಯ ಮೇಲೂ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದರು.

  • ಶೀಘ್ರದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಲಕ್ಷ್ಮಣ ಸವದಿ

    ಶೀಘ್ರದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಲಕ್ಷ್ಮಣ ಸವದಿ

    ಕಾರವಾರ: ಸಾರಿಗೆ ನೌಕರರು ಸರ್ಕಾರದ ಮುಂದೆ ಹತ್ತು ಬೇಡಿಕೆಯನ್ನು ಇಟ್ಟಿದ್ದರು. ಈ ಹತ್ತು ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ನಾಲ್ಕು ಬೇಡಿಕೆ ಈಡೇರಿಸಲು ಸಮಯಾವಕಾಶ ಕೇಳಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಡ್ತಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೌಕರರ ಸಂಘಟನೆಗಳು ಮೂರ್ನಾಲ್ಕು ಇದೆ. ಪ್ರತಿಯೊಬ್ಬರೂ ಒಂದೊಂದು ಬಾರಿ ಒಂದೊಂದು ಬೇಡಿಕೆ ಇಡುತ್ತಿದ್ದಾರೆ. ನೌಕರರೊಂದಿಗೆ ಇನ್ನೆರೆಡು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ, ನಾವು ಒಪ್ಪಿಕೊಂಡಂತೆ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದರು.

    ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾನು ಸ್ಪರ್ದಿಸುವುದಿಲ್ಲ, ಇದು ಗಾಳಿ ಸುದ್ದಿ, ಕೇವಲ ಉಸ್ತುವಾರಿ ಮಾತ್ರ ತೆಗೆದುಕೊಂಡಿದ್ದೇನೆ. ನಾವು ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಂಚಮಸಾಲಿಗಳು ಹೋರಾಟ ಮಾಡುತ್ತಿರುವುದು ತಪ್ಪಿಲ್ಲ, ಮಿಸಲಾತಿ ಸೂಕ್ಷ್ಮ ವಿಚಾರವಾಗಿದ್ದು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಅಲ್ಲಿನ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರದ್ದು ಮನೆಯೊಂದು ಮೂರು ಬಾಗಿಲು, ಅವರಲ್ಲೇ ಒಮ್ಮತವಿಲ್ಲ ಎಂದು ಕಿಡಿಕಾರಿದರು.

    ಗಡಿ ಕನ್ನಡ ಶಾಲೆ ಅಭಿವೃದ್ಧಿ:
    ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಕನ್ನಡ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಲು ಸಿದ್ಧವಾಗಿದೆ. ಹಲವು ಶಾಲೆಗಳು ಹಿಂದೆ ಬಿದ್ದಿವೆ, ಅವುಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಳಿಸಿದರು.

    ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದ ಸಿದ್ದರಾಮಯ್ಯ ಹೇಳಿಕೆ ಕುರಿತು ತಿರುಗೇಟು ಕೊಟ್ಟ ಸಚಿವರು ಕೊರೊನಾ ಬಂದ ನಂತರ ಹಣಕಾಸಿನ ವ್ಯವಹಾರದಲ್ಲಿ ಏರುಪೇರಾಗಿರುವುದು ನಿಜ. ಸಿದ್ದರಾಮಯ್ಯ ನಮ್ಮನ್ನು ಟೀಕೆ ಮಾಡ್ತಾನೆ ಇರ್ತಾರೆ. ಅವರು ಇರುವುದೆ ಟೀಕೆ ಮಾಡೋದಕ್ಕೆ ಹೊರತು ಮತ್ತೇನೂ ನಮ್ಮನ್ನು ಹೊಗಳ್ತಾರಾ ಎಂದು ಪ್ರಶ್ನಿಸಿ ಟಾಂಗ್ ನೀಡಿದರು.

  • ಯಾವುದೇ ಕಾರಣಕ್ಕೂ ಪಂಚಮಸಾಲಿಗಳಿಗೆ ಮೀಸಲಾತಿ ನೀಡಬಾರದು – ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    ಯಾವುದೇ ಕಾರಣಕ್ಕೂ ಪಂಚಮಸಾಲಿಗಳಿಗೆ ಮೀಸಲಾತಿ ನೀಡಬಾರದು – ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

    – ಭಟ್ಕಳದಲ್ಲಿ ಫೆ. 22 ರಂದು ಬೃಹತ್ ಪ್ರತಿಭಟನೆ
    – ಪಂಚಮಸಾಲಿಗಳನ್ನು 2ಎಗೆ ಸೇರಿಸಿದರೆ ನಮ್ಮನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಿ

    ಕಾರವಾರ : ಹಿಂದುಳಿದ 2ಎ ನಲ್ಲಿ ಬರುವ ಜನಾಂಗಕ್ಕೆ ಈಗಿರುವ ಸ್ಥಿತಿಯನ್ನೇ ಮುಂದುವರಿಸಬೇಕು. ಇಲ್ಲವೇ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಲಿಂಗಾಯಿತ ಪಂಚಮಸಾಲಿ ಜನಾಂಗವನ್ನು ಹಿಂದುಳಿದ ವರ್ಗದ 2ಎಗೆ ಸೇರಿಸಬಾರದೆಂದು ಉಜಿರೆಯ ಶ್ರೀರಾಮಕ್ಷೇತ್ರ ಪೀಠ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಇಂದು ಭಟ್ಕಳದ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಸಭಾ ಭವನದಲ್ಲಿ ಭಟ್ಕಳ ತಾಲೂಕು ಹಿಂದುಳಿದ ವರ್ಗಗಳ ಹಿತರಕ್ಷಣಾ ವೇದಿಕೆ ಸಭೆ ನಡೆಸಿ ಮಾತನಾಡಿದ ಅವರು ಪಂಚಮಸಾಲಿ ಜನಾಂಗವನ್ನು ಹಿಂದುಳಿದ ಜನಾಂಗದ 2ಎ ಗೆ ಸೇರ್ಪಡಿಸುವುದನ್ನು ಖಂಡಿಸಿ ಇದೇ ತಿಂಗಳು 22 ರಂದು ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ ಜನಾಂಗದ ಮುಖಂಡರು ಹಾಗೂ ಶಾಸಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

    ಇದೇ ಸಂದರ್ಭದಲ್ಲಿ ನಾಯಕ ಜನಾಂಗದ ಮುಂಖಂಡ ಕೃಷ್ಣ ನಾಯ್ಕ ಮಾತನಾಡಿ, ಪಂಚಮಸಾಲಿಗಳನ್ನು 2ಎಗೆ ಸೇರಿಸುವುದಾದರೆ ನಮ್ಮ ಜನಾಂಗವನ್ನು ಎಸ್‌ಸಿ, ಎಸ್‌ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಭೆಯಲ್ಲಿ ನಾಮದಾರಿ, ಗಾಣಿಗ, ಮಹಾಲೆ, ವೈಶ್ಯ, ದೈವಜ್ಞ, ದೇವಾಡಿಗ, ವಿಶ್ವಕರ್ಮ ಜನಾಂಗ ಪ್ರಮುಖ ಮುಖಂಡರು ಭಾಗವಹಿಸಿದ್ದರು.

  • ಕಾರವಾರಕ್ಕೆ ಕಾಲಿಟ್ರೆ ‘ವೆಲ್ ಕಂ ಟು ಮಹಾರಾಷ್ಟ್ರ’ ಮೆಸೇಜ್

    ಕಾರವಾರಕ್ಕೆ ಕಾಲಿಟ್ರೆ ‘ವೆಲ್ ಕಂ ಟು ಮಹಾರಾಷ್ಟ್ರ’ ಮೆಸೇಜ್

    – ಬಿಎಸ್‍ಎನ್‍ಎಲ್‍ನಿಂದ ಮಹಾ ಪ್ರಮಾದ
    – ಕನ್ನಡ ಸಂಘಟನೆಗಳ ಆಕ್ರೋಶ

    ಕಾರವಾರ: ಬೆಳಗಾವಿ, ನಿಪ್ಪಾಣಿ, ಕಾರವಾರವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆ ನೀಡಿ ಇತ್ತೀಚೆಗೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಕಾರವಾರವನ್ನು ಈಗಾಗಲೇ ಮಹಾರಾಷ್ಟ್ರಕ್ಕೆ ಸೇರಿಸುವ ಮೂಲಕ ಕಾರವಾರದ ತನ್ನ ಗ್ರಾಹಕರಿಗೆ ‘ವೆಲ್ ಕಮ್ ಟು ಮಹಾರಾಷ್ಟ್ರ’ ಎಂಬ ಸಂದೇಶ ರವಾನಿಸಿ ಕೆಣಕಿದೆ.

    ಯಾವುದೇ ಕಂಪನಿಯ ನೆಟ್‍ವರ್ಕ್ ಇರಲಿ ಗ್ರಾಹಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಿದಾಗ ಆ ರಾಜ್ಯಕ್ಕೆ ಸ್ವಾಗತ ಎಂಬುದಾಗಿ ಸಂದೇಶ ಬರುವುದು ಸಾಮಾನ್ಯ. ಆದರೆ ಕರ್ನಾಟಕದ ಗಡಿ ಜಿಲ್ಲೆಯಾದ ಉತ್ತರಕನ್ನಡದ ಕಾರವಾರಕ್ಕೆ ಬಂದರೆ ಸಾಕು ನಿಮ್ಮ ಮೊಬೈಲಿಗೆ ʼವೆಲ್ ಕಮ್ ಟು ಮಹಾರಾಷ್ಟ್ರʼ ಎಂಬ ಸಂದೇಶ ಬರುತ್ತದೆ.

    ಕಾರವಾರ ನಗರ, ಸೇಜಾವಾಡ, ಶಿರವಾಡ, ಆಸ್ನೋಟಿ ಸೇರಿದಂತೆ ಹಲವು ಭಾಗದಲ್ಲಿ ಬಿಎಸ್‍ಎನ್‍ಎಲ್ ಗ್ರಾಹಕರು ತಮ್ಮ ಮೊಬೈಲ್ ತೆಗೆದುಕೊಂಡು ಹೋದರೆ ಇದೇ ಸಂದೇಶ ಬರುತ್ತಿದೆ. ಇದರಿಂದಾಗಿ ದೊಡ್ಡ ವಿವಾದ ಸೃಷ್ಟಿಯಾಗಿದ್ದು ಮೆಸೇಜ್ ಬರುತ್ತಿರುವುದಕ್ಕೆ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಬಿಎಸ್‍ಎನ್‍ಎಲ್ ಉಪ ಮಹಾ ಪ್ರಬಂಧಕರಾದ ರಾಜೇಶ್ವರಿ ಜಿಎಂ ಪ್ರತಿಕ್ರಿಯಿಸಿದ್ದು, ಈ ವಿಷಯ ನಮ್ಮ ಗಮನಕ್ಕೂ ಬಂದಿದೆ. ನೆಟ್‍ವರ್ಕ್ ಸಮಸ್ಯೆ ಇದ್ದ ಕಾರಣ ಅಪ್‍ಗ್ರೇಡ್ ಮಾಡುವ ಕೆಲಸವನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಲೋಪವಾಗಿದೆ. ಈ ಕುರಿತು ಬೆಂಗಳೂರಿನ ಕೇಂದ್ರ ಕಚೇರಿಗೆ ತಿಳಿಸಲಾಗಿದೆ. ಆ ಸಂದೇಶ ಬಾರದಂತೆ ಕ್ರಮ ವಹಿಸಲಾಗಿದೆ ಎಂದಿದ್ದಾರೆ.

    ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಹೋಯಿತು ಎಂಬಂತೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹೇಳಿಕೆಯ ಬೆನ್ನಲ್ಲೇ ಕಾರವಾರದಲ್ಲಿ ಮಹಾರಾಷ್ಟ್ರಕ್ಕೆ ಸ್ವಾಗತ ಎಂದು ಬಿಎಸ್‌ಎನ್‌ಎಲ್‌ ಕಳುಹಿಸುತ್ತಿರುವುದು ಕನ್ನಡಿಗರಿಗೆ ಸ್ವಾಭಿಮಾನ ಕೆರಳುವಂತೆ ಮಾಡಿದೆ.

  • 8 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ದಿಢೀರ್ ಪ್ರತ್ಯಕ್ಷ!

    8 ವರ್ಷದಿಂದ ಕರ್ತವ್ಯಕ್ಕೆ ಹಾಜರಾಗದ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ದಿಢೀರ್ ಪ್ರತ್ಯಕ್ಷ!

    ಕಾರವಾರ: ಸರ್ಕಾರಿ ನೌಕರರು ಎಂದರೆ ಹೀಗೂ ಇರುತ್ತಾರಾ ಎಂದು ಯಾರೂ ಎಣಿಸಿರಲೂ ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಣ್ಣ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ 8 ವರ್ಷದಿಂದ ಕೆಲಸಕ್ಕೆ ಬಾರದೇ ಸರ್ಕಾರಿ ಸಂಬಳ ಎಣಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಮುಂಡಗೋಡಿನ ಚಿಕ್ಕ ನೀರಾವರಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿನೋದ ಕಣ್ಣಿ ಕರ್ತವ್ಯ ಹಾಜರಾಗದೆ ಸಂಬಳ ಪಡೆದ ಅಧಿಕಾರಿ. ಅಧಿಕಾರಿಯ ಗೈರು ಹಾಜರಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ಬಂದು ಆತನಿಗೆ ನೋಟಿಸ್ ನೀಡಿ ಕೆಲಸಕ್ಕೆ ಹಾಜರಾಗುವಂತೆ ತಿಳಿಸಿದ್ದರು. ಆದ್ರೆ ಈತ ಮಾತ್ರ ಕೆಲಸಕ್ಕೆ ಚಕ್ಕರ್ ಹೊಡೆದು ಅಧಿಕಾರಿಗಳಿಗೆ 8 ವರ್ಷದಿಂದ ಯಾಮಾರಿಸಿದ್ದ. ಈ ವಿಷಯ ತಡವಾಗಿ ಬೆಳಕಿಗೆ ಬಂದು ಈತನನ್ನು ಬಂಧಿಸಲು ಸಹ ದೂರು ನೀಡಲಾಗಿತ್ತು.

    ಸಂಬಳ ಪಡೆದು ಕರ್ತವ್ಯಕ್ಕೆ ಬಾರದೇ ಇದ್ದ ಈತ ಬಂಧನದ ಭಯದಲ್ಲಿ ಯಾರಿಗೂ ತಿಳಿಯದಂತೆ ಕಚೇರಿಯಲ್ಲಿ ಪ್ರತ್ಯಕ್ಷವಾಗಿ ರಾಜೀನಾಮೆ ಸಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಕಳೆದ 8 ದಿನಗಳ ಹಿಂದೆ ಕಚೇರಿಗೆ ಆಗಮಿಸಿ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ಘಟನೆಯೂ ತಡವಾಗಿ ಬೆಳಕಿಗೆ ಬಂದಿದೆ.

    ಚಿಕ್ಕ ನೀರಾವರಿ ಉಪ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ವಿನೋದ ಕಣ್ಣಿ 8 ವರ್ಷದಿಂದ ಕೆಲಸಕ್ಕೆ ಹಾಜುರಾಗದೆ ಸಂಬಳ ಪಡೆದಿದ್ದ. 2009 ಸೆ.10 ರಿಂದ 2012 ಜ.25ರ ವರೆಗೂ ಕರ್ತವ್ಯ ನಿರ್ವಹಿಸಿದ್ದ ವಿನೋದ ಕನ್ಣಿ 2012 ಜ.26ರಿಂದ ಇದೂವರೆಗೂ ಕಚೇರಿಗೆ ಬಾರದೆ ಗೈರು ಹಾಜರಾಗಿದ್ದಾನೆ. ಈ ಕುರಿತು ಚಿಕ್ಕ ನೀರಾವರಿ ಇಲಾಖೆಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಹಲವಾರು ಭಾರಿ ಪತ್ರ ಬರೆದಿದ್ದರು. ಇದಕ್ಕೆ ಇಂಜಿನಿಯರ್ ವಿನೋದ ಕಣ್ಣಿ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ.

    ಈತನ ವಿರುದ್ಧ ಕರ್ತವ್ಯ ಲೋಪದ ದೂರು ದಾಖಲಾಗುತ್ತಿದ್ದಂತೆ ಕಳೆದ ಎಂಟು ದಿನಗಳ ಹಿಂದೆ ಕಚೇರಿಗೆ ಆಗಮಿಸಿ ರಾಜೀನಾಮೆ ನೀಡಿ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಹೆಚ್ಚು ಸ್ಪಷ್ಟನೆ ನೀಡಲು ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಹಿಂಜರಿದಿದ್ದು, 8 ವರ್ಷದಿಂದ ಕೆಲಸಕ್ಕೆ ಹಾಜರಾಗದೆ ಇರುವ ಕುರಿತು ಮಾಹಿತಿ ನೀಡಿ ಆತ ರಾಜೀನಾಮೆ ನೀಡಿ ಹೋಗಿರುವ ಕುರಿತು ಸ್ಪಷ್ಟಪಡಿಸಿದ್ದಾರೆ.

  • ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

    ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಬಾಲಕಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣದ ಪುಟ್ಟ ಬಾಲಕಿ ಆರತಿ ಶೇಟ್(9) ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ಮಕ್ಕಳ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.

    2019ರಲ್ಲಿ ಕೇಂದ್ರ ಮಕ್ಕಳ ಕಲ್ಯಾಣ ಇಲಾಖೆ ಕೊಡುವ ಶೌರ್ಯ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದಿಂದ ಇಬ್ಬರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಾಲಕಿಯ ಎದೆಗಾರಿಕೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತಿದೆ. ಬಾಲಕಿ ನವಿಲಗೋಣದ ಕಿರಣ್ ಪಾಂಡುರಂಗ ಶೇಟ್ ಪುತ್ರಿಯಾಗಿದ್ದು, ತನ್ನ ಧೈರ್ಯದಿಂದ ಇಡೀ ರಾಜ್ಯಕ್ಕೆ ಹೆಸರು ತರುವ ಜೊತೆ ಜಿಲ್ಲೆಗೂ ಹೆಸರು ತಂದಿರುವುದು ಹೆಮ್ಮೆಯ ವಿಷಯವಾಗಿದೆ.

    ನಡೆದಿದ್ದೇನು?
    2018ರ ಫೆ.13 ರಂದು ಬೆಳಗ್ಗೆ ಪುಟ್ಟ ತಮ್ಮನೊಂದಿಗೆ ಹೊನ್ನಾವರದ ನವಿಲಗೋಣದಲ್ಲಿರುವ ತನ್ನ ಮನೆಯ ಮುಂದೆ ಚಿಕ್ಕ ತಮ್ಮನನ್ನು ಸೈಕಲ್ ನಲ್ಲಿ ಕುಳ್ಳಿರಿಸಿ ಆರತಿ ಆಟವಾಡುತ್ತಿದ್ದಳು. ಈ ವೇಳೆ ಇವರ ಮನೆಯಲ್ಲೇ ಸಾಕಿದ್ದ ಹಸುವು ಏಕಾಏಕಿ ಬಾಲಕನ ಮೈಮೇಲೆ ಎಗರಿ ಬಂದಿತ್ತು.

    ಹಸು ಬರುವುದನ್ನು ಗಮನಿಸಿದ ಪುಟ್ಟ ಬಾಲಕಿ ಅಂಜದೇ ತಮ್ಮನನ್ನು ಹಸುವಿನಿಂದ ರಕ್ಷಿಸಿದ್ದಳು. ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಕಟಿಸಿತ್ತು. ಅಲ್ಲದೇ ಬಾಲಕಿಯ ಧೈರ್ಯ ಸಾಹಸದ ವಿಡಿಯೋ ವೈರಲ್ ಆಗಿತ್ತು. ರಾಜ್ಯದ ಜನರು ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    2019ರ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿಗೆ ಒಟ್ಟು 22 ಮಕ್ಕಳು ಆಯ್ಕೆಯಾಗಿದ್ದಾರೆ. ಜ.26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಮಕ್ಕಳು ಭಾಗವಹಿಸಲಿದ್ದಾರೆ. ಈ ಪ್ರಶಸ್ತಿ ಪದಕ, 1 ಲಕ್ಷ ರೂ. ನಗದು ಬಹುಮಾನ, 10 ಸಾವಿರ ಮೌಲ್ಯದ ಬುಕ್ ವೋಚರ್ ಹಾಗೂ ಪ್ರಮಾಣ ಪತ್ರವನ್ನು ಹೊಂದಿದೆ.

  • ಶಿರಸಿಯಲ್ಲಿ ಆಲೆಮನೆ ಹಬ್ಬ- ಬೆಲ್ಲಕ್ಕೆ ಬಂತು ಬರಪೂರ ಡಿಮ್ಯಾಂಡ್

    ಶಿರಸಿಯಲ್ಲಿ ಆಲೆಮನೆ ಹಬ್ಬ- ಬೆಲ್ಲಕ್ಕೆ ಬಂತು ಬರಪೂರ ಡಿಮ್ಯಾಂಡ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ, ಸಿದ್ದಾಪುರ ಭಾಗದಲ್ಲಿಗ ಆಲೆಮನೆ ಹಬ್ಬದ ಸುಗ್ಗಿ. ಪ್ರತಿ ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಶಿರಸಿ ಭಾಗದಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡಿ ಹಾಲು ಹಿಂಡಿ ಬೆಲ್ಲ ಮಾಡುವ ಸಂದರ್ಭವಿದು.

    ಈ ಸಂದರ್ಭದಲ್ಲಿ ಶಿರಸಿ, ಸಿದ್ದಾಪುರ ಭಾಗದ ಹಲವು ರೈತರು ಆಲೆಮನೆ ಹಬ್ಬ ಎಂದೇ ಸಂಭ್ರಮದಿಂದ ಆಚರಿಸುತ್ತಾರೆ. ಕಬ್ಬನ್ನು ಕಟಾವು ಮಾಡಿ ಆಲೆಮನೆಯಲ್ಲಿ ಕಬ್ಬಿನ ರಸ ಹಿಂಡುವ ಸಂದರ್ಭದಲ್ಲಿ ಊರಿನ ಜನರಿಗೆ ಹಾಗೂ ನೆಂಟರಿಷ್ಟರಿಗೆ ಕಬ್ಬಿನ ಹಾಲಿನ ಜೊತೆ ಬಿಸಿ ಬಿಸಿ ಬೆಲ್ಲ ಸವಿಯಲು ಆಮಂತ್ರಿಸುತ್ತಾರೆ.

    ಸಂಜೆಯಾಗುತ್ತಿದಂತೆ ಆಲೆಮನೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಎಷ್ಟೇ ಜನರು ಬಂದರೂ ಹಾಲು ಹಾಗೂ ಬೆಲ್ಲ ಸವಿಯಲು ಕೊಡುವುದು ಇಲ್ಲಿನ ರೈತರ ಸಾಂಪ್ರದಾಯವಾಗಿದೆ.

    ತರಹೇವಾರಿ ಕಬ್ಬಿನ ಹಾಲು, ಜೋನಿ ಬೆಲ್ಲ: ಕಬ್ಬನ್ನು ಅರೆದು ಕೇವಲ ಕಬ್ಬಿನ ಹಾಲು ಹಾಗೂ ಬಿಸಿ ಜೋನಿ ಬೆಲ್ಲ ಮಾತ್ರ ಸವಿಯುಲು ಮಾತ್ರ ಈ ಹಬ್ಬ ಸೀಮಿತವಾಗಿಲ್ಲ. ಇಲ್ಲಿ ತರ ತರದ ಕಬ್ಬಿನ ಹಾಲು ಸಹ ತುಂಬಾ ಸವಿಯಲು ಲಭ್ಯವಿರುತ್ತದೆ. ಸಾಂಪ್ರದಾಯಿಕ ಹಾಗೂ ಜೈವಿಕ ಗೊಬ್ಬರದಿಂದ ಕೃಷಿ ಮಾಡಿದ ಕಬ್ಬುಗಳು ಬಲು ರುಚಿಯಾಗಿರುತ್ತದೆ. ಹೀಗಾಗಿ ಕಬ್ಬಿನ ಹಾಲಿನ ಜೊತೆ ಸುಂಟಿ, ನಿಂಬೆ ಹಣ್ಣು ಬೆರತರೆ ಅದರ ಜೊತೆ ನೆಲ್ಲಿಕಾಯಿ ಮಿಶ್ರಿತ ಕಬ್ಬಿನ ಹಾಲು, ಪುದೀನ, ಸೊಗದೆ ಬೇರು, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಔಷಧೀಯ ಗುಣವಿರುವ ಕಬ್ಬಿನ ಹಾಲು ಸವಿಯಲು ಸಿಗುತ್ತದೆ. ಇದರ ಜೊತೆ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ, ಜೀರಿಗೆ ಮಿಡಿ ಮಾವಿನ ಉಪ್ಪಿನ ಕಾಯಿ ಸವಿಯುವ ಜೊತೆ ಮಂಡಕ್ಕಿ ರುಚಿ ಹೆಚ್ಚಿಸುತ್ತದೆ.

    ಶಿರಸಿಯಿಂದ ವಾನಳ್ಳಿ ಬಳಿ ಇರುವ ಭೂಸನಕೇರಿಯ ತವರುಮನೆ ಹೋಮ್ ಸ್ಟೇನಲ್ಲಿ ಆಲೆಮನೆ ಹಬ್ಬ ಆಚರಿಸಲಾಯಿತು. ನೂರಾರು ಜನರು ಈ ಹಬ್ಬದಲ್ಲಿ ಭಾಗಿಯಾಗಿ ವಿವಿಧ ರೀತಿಯ ಕಬ್ಬಿನ ಹಾಲನ್ನು ಸವಿದು ಬೆಲ್ಲದ ರುಚಿ ನೋಡಿದರು. ಇನ್ನೆರಡು ತಿಂಗಳು ಶಿರಸಿ, ಸಿದ್ದಾಪುರ ಭಾಗದಲ್ಲಿ ಆಲೆಮನೆ ಸುಗ್ಗಿ ಯ ಹಬ್ಬ ಇರಲಿದ್ದು ಇದಕ್ಕಾಗಿ ದೂರದೂರಿಂದಲೂ ಜನ ಬಂದು ಸವಿದು ಹೋಗುವ ಜೊತೆಗೆ ಬೆಲ್ಲವನ್ನೂ ಕೊಂಡು ಹೋಗುತ್ತಿರುವುದು ಈ ಆಲೆಮನೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.

    ಹೆಚ್ಚಿದ ಬೇಡಿಕೆ: ಶಿರಸಿಯಲ್ಲಿ ಸಾಂಪ್ರದಾಯಿಕವಾಗಿ ಬೆಳೆದ ಕಬ್ಬಿನ ಬೆಲ್ಲಕ್ಕೆ ಕಳೆದ ಎರಡು ವರ್ಷಗಳಿಂದ ಅತೀ ಹೆಚ್ಚು ಬೇಡಿಕೆ ಹಾಗೂ ಮಾರುಕಟ್ಟೆ ದೊರೆಯುತ್ತಿದೆ. ಸಾದ ಬೆಲ್ಲಕ್ಕೆ ಒಂದು ಕೆಜಿಗೆ 50 ರೂ. 25 ಕೆಜಿಗೆ 1,250 ಮಾತ್ರ ಇದೆ. ಆದರೆ ಈ ಬೆಲ್ಲಕ್ಕೆ 25 ಕೆಜಿಗೆ 2,500 ರೂ. ರಿಂದ 4 ಸಾವಿರದ ವರೆಗೂ ಈ ಬಾರಿ ಬೇಡಿಕೆ ಬಂದಿದ್ದು ಉತ್ತಮ ಮಾರುಕಟ್ಟೆ ದರ ದೊರೆಯುತ್ತಿದೆ.

    ಜೋನಿ ಬೆಲ್ಲ, ಗಟ್ಟಿ ಬೆಲ್ಲಗಳಿಗೆ ಬೆಂಗಳೂರು, ಮುಂಬೈ, ಗೋವಾದಂತ ಪ್ರದೇಶದಲ್ಲಿ ಬೇಡಿಕೆ ಬಂದರೆ ಈಗ ದೇಶವನ್ನೂ ದಾಟಿ ಬೇಡಿಕೆ ಬರುತಿದ್ದು ದುಬೈ, ಅಮೆರಿಕ ದೇಶಕ್ಕೂ ರಫ್ತಾಗುತ್ತಿದೆ. ಮಂಡ್ಯ, ಮೈಸೂರು ನಗರದಲ್ಲಿ ಕಬ್ಬು ಬೆಳೆದ ರೈತರು ಸಾಲದ ಶೂಲಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಆದರೆ ಮಲೆನಾಡು ಭಾಗದ ರೈತರು ಆರ್ಗಾನಿಕ್ ಹಾಗೂ ಸಾಂಪ್ರದಾಯಿಕ ಬೆಲ್ಲಗಳನ್ನು ತಯಾರಿಸಿ ಉತ್ತಮ ಲಾಭದ ಕಡೆ ಮುಖಮಾಡಿದ್ದು ಕಬ್ಬು ಬೆಳಗಾರರಿಗೆ ಮಾದರಿಯಾಗಿದೆ.

  • ಕಾಡಾನೆ ಓಡಿಸಲು ಹೋದ ರೈತನಿಗೆ ಆನೆ ತಿವಿತ

    ಕಾಡಾನೆ ಓಡಿಸಲು ಹೋದ ರೈತನಿಗೆ ಆನೆ ತಿವಿತ

    ಕಾರವಾರ: ಕಾಡಾನೆ ಓಡಿಸಲು ಹೋದ ರೈತ ಆನೆ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರ ವಲಯದ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ರೈತರಾದ ದಾವಲಸಾಬ ಜಮಾಲಸಾಬ ಮುಜಾವರ, ಚಂದ್ರು ಚೆನ್ನಪ್ಪನವರ್ ಅವರು ಗಾಯಗೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ದಾವಲಸಾಬ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಚಂದ್ರು ಚೆನ್ನಪ್ಪನವರ್ ಮುಂಡಗೋಡ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಾಗನೂರು ಗ್ರಾಮದ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ರೈತರು ಆನೆಗಳನ್ನು ಓಡಿಸಲು ಮುಂದಾದಾಗ ಘಟನೆ ನಡೆದಿದೆ. ಹಿಂಡಿನಿಂದ ತಪ್ಪಿಸಿಕೊಂಡ ಆನೆಯೊಂದು ಮುಂಭಾಗದಲ್ಲಿದ್ದ ದಾವಲಸಾಬ ಅವರ ಮೇಲೆ ದಾಳಿ ನಡೆಸಿ ದಂತದಿಂದ ತಿವಿದು ಗಾಯಗೊಳಿಸಿದೆ.

    ಈ ಘಟನೆಯಿಂದ ಗಾಬರಿಗೊಂಡ ಚಂದು ಚೆನ್ನಾಪುರ ಎಂಬವರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜಮೀನಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬ್ರಿಟಿಷ್ ಏರ್‌ವೇಸಿನಲ್ಲಿ ಕೆಲಸ ಕೊಡ್ಸೋದಾಗಿ 54 ಮಂದಿಗೆ ವಂಚಿಸಿದ ಜೋಡಿ

    ಬ್ರಿಟಿಷ್ ಏರ್‌ವೇಸಿನಲ್ಲಿ ಕೆಲಸ ಕೊಡ್ಸೋದಾಗಿ 54 ಮಂದಿಗೆ ವಂಚಿಸಿದ ಜೋಡಿ

    -ಏರ್‌ಪೋರ್ಟಿಗೆ ಸಮವಸ್ತ್ರ ಧರಿಸಿ ಹೋದ ಯುವಕರಿಗೆ ಶಾಕ್

    ಕಾರಾವಾರ: ಬ್ರಿಟಿಷ್ ಏರ್‌ವೇಸ್‌ನಲ್ಲಿ  ಕೆಲಸ ಕೊಡಿಸುವುದಾಗಿ ಹೇಳಿ ಯುವಕ 54 ಮಂದಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.

    ಶಿರವಾಡದ ಮಾರ್ವಿನ್ 54 ಮಂದಿಗೆ ವಂಚಿಸಿದ ಯುವಕನಾಗಿದ್ದು, ತರಬೇತಿಗೆ ಹಣ ಕಟ್ಟಿದರೆ ಸಾಕು ಯಾರಿಗೆ ಬೇಕಾದರು ಕೆಲಸ ಕೊಡಿಸುವುದಾಗಿ ಹೇಳಿದ್ದ. ಅಲ್ಲದೇ ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಕಚೇರಿ ತೆರೆದಿದ್ದನು. ಇದನ್ನು ನಂಬಿದ ನಿರುದ್ಯೋಗಿಗಳು ಮೋಸ ಹೋಗಿದ್ದಾರೆ. ಈತನಿಂದ ಮೋಸ ಹೋದವರು ಉತ್ತರ ಕನ್ನಡ ಜಿಲ್ಲೆಯವರಲ್ಲದೇ ಹಾಸನ, ಬೆಳಗಾವಿ, ಗೋವಾ, ಹುಬ್ಬಳ್ಳಿ, ಬೆಂಗಳೂರಿನವರೂ ಇದ್ದಾರೆ. ಪ್ರಕರಣ ಸಂಬಂಧ ಕಾರವಾರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಬ್ರಿಟಿಷ್ ಏರ್ ವೇಸ್ ನಲ್ಲಿ ತಾನೊಬ್ಬ ಹೆಚ್‍ಆರ್ ಅಸಿಸ್ಟೆಂಟ್ ಎಂದು ಹೇಳಿಕೊಂಡು ಮಾರ್ವಿನ್ ಮೋಸ ಮಾಡಲು ಆರಂಭಿಸಿದ್ದ. ತನ್ನ ಕ್ಲಾಸ್ ಮೇಟ್ ಬಳಿಯೇ ಸುಳ್ಳು ಹೇಳಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಮಾರ್ವಿನ್ ತರಬೇತಿಗೆ ಹಣ ನೀಡಿದರೆ ಸಾಕು. ಯಾರಿಗೆ ಬೇಕಾದರು ಕೆಲಸ ಕೊಡಿಸುತ್ತೇನೆ ಹೇಳಿದ್ದ. ಇದನ್ನು ನಂಬಿದ್ದ ಸ್ನೇಹಿತ ಇತರೇ ಸ್ನೇಹಿತರೊಂದಿಗೆ ಹೇಳಿದ್ದ. ಒಟ್ಟು 54 ಜನರ ಬಳಿ ತರಬೇತಿಗೆ ಎಂದು ಹೇಳಿ ಹಣ ಮಾರ್ವಿನ್ ಪಡೆದಿದ್ದ.

    ಈ ರೀತಿ ಪಡೆದ ಹಣದಿಂದ ಬೆಂಗಳೂರಿನ ಕುಡ್ಡೆ ಗೇಟ್ ಬಳಿ ಇರುವ ನಾಯಲ್ ಟೆಕ್ ಪಾರ್ಕ್ ನ 3ನೇ ಅಂತಸ್ತಿನಲ್ಲಿ ತನ್ನ ಕಚೇರಿಯನ್ನು ತೆರೆದಿದ್ದ. ಸುಮಾರು 2 ತಿಂಗಳ ಮಟ್ಟಿಗೆ ಕಚೇರಿ ಆರಂಭಿಸಿ ತನ್ನ ಗೆಳತಿ ಯಲ್ಲಾಪುರದ ಮಂಚಿಕೇರಿ ಮೂಲದ ಅಂಕಿತ ರಾಯ್ಕರ್ ಎಂಬಾಕೆಯನ್ನು ಉದ್ಯೋಗ ಬಯಸಿಬಂದ ಯುವಕರಿಗೆ ಪರಿಚಯ ಮಾಡಿಸಿದ್ದ. ಅಲ್ಲದೇ ಆಕೆಯನ್ನು ಏರ್ ವೇಸ್ ನ ಅಸಿಸ್ಟೆಂಟ್ ಹೆಚ್.ಆರ್ ಝಾರಾ ಖಾನ್ ಎಂದು ಹೇಳಿದ್ದ. ಆಕೆಯ ಮೂಲಕವೇ ಯುವಕರಿಗೆ ತರಬೇತಿ ಕೂಡ ಕೊಡಿಸಿದ್ದ.

    ತರಬೇತಿಯ ಬಳಿಕ ಯುವಕರಿಗೆ ಕಂಪನಿಯ ಐಡಿ ಕಾರ್ಡ್, ಸಮವಸ್ತ್ರ, ಆಫರ್ ಲೆಟರ್ ನೀಡಿ ನಾಳೆಯಿಂದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಬರುವಂತೆ ಹೇಳಿದ್ದ. ಇದನ್ನು ನಂಬಿದ ಯುವಕರು ಎರಡು ತಿಂಗಳ ತರಬೇತಿ ಪಡೆದು ಸಮವಸ್ತ್ರ ತೊಟ್ಟು ಕೈಯಲ್ಲಿ ಆಫರ್ ಲೆಟರ್ ಹಿಡಿದು ವಿಮಾಣ ನಿಲ್ದಾಣಕ್ಕೆ ಹೋಗಿದ್ದರು. ಈ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇಂತಹ ಯಾವುದೇ ಉದ್ಯೋಗ ಇಲ್ಲ ಎಂದು ಹೇಳಿದಾಗ ಮೋಸ ಹೋಗಿರುವುದು ತಿಳಿದು ಬಂದಿತ್ತು. ಪ್ರಕರಣದಲ್ಲಿ ಮೋಸ ಹೋದವರಲ್ಲಿ ವಿದ್ಯಾವಂತ ಯುವಕರೇ ಹೆಚ್ಚಿದ್ದಾರೆ. ಸುಮಾರು 70 ಲಕ್ಷ ರೂ. ಹಣವನ್ನು 54 ಮಂದಿಯಿಂದ ಪಡೆದಿರುವುದು ಮಾರ್ವಿನ್ ಪಡೆದಿರುವುದು ಬೆಳಕಿಗೆ ಬಂದಿದೆ.

    ಮೋಸ ಹೋಗಿರುವುದು ತಿಳಿದ ಕೂಡಲೇ ಯುವಕರು ಮಾರ್ವಿನ್ ನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಇದಕ್ಕಾಗಿ ಆತನಿರುವ ಪ್ಲಾಟ್ ಗೆ ಹೋದಾಗ ಆತ ಮಧ್ಯರಾತ್ರಿಯೇ ಮನೆ ಖಾಲಿ ಮಾಡಿ ಪರಾರಿಯಾಗಿದ್ದ. ಅಲ್ಲದೇ ಏರ್ ವೇಸ್ ನ ಅಸಿಸ್ಟೆಂಟ್ ಹೆಚ್‍ಆರ್ ಜರಾಖಾನ್ ಎಂಬಾಕೆ ಅಂಕಿತ ರಾಯ್ಕರ್ ಎಂಬುವುದು ಅರಿವಾಗಿತ್ತು. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಮಡಿವಾಳ ಠಾಣೆಗೆ ದೂರು ಕೊಡಲು ಯುವಕರು ಹೋಗಿದ್ದು, ಪೊಲೀಸರು ದೂರು ಸ್ವೀಕರಿಸದೆ ಕಾರವಾರದಲ್ಲೇ ದೂರು ನೀಡಲು ಹೇಳಿದ್ದರು. ಇದರಂತೆ ಮತ್ತೆ ತಮ್ಮ ಊರಿಗೆ ವಾಪಸ್ ಆದ ಯುವಕರು ಕಾರವಾರ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಸ್ವ-ಕ್ಷೇತ್ರಕ್ಕೆ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ವಾಪಸ್

    ಸ್ವ-ಕ್ಷೇತ್ರಕ್ಕೆ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ವಾಪಸ್

    ಕಾರವಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನು ಅನರ್ಹ ಮಾಡುತ್ತಿದ್ದಂತೆ ಮುಂಬೈನಲ್ಲಿದ್ದ ಶಾಸಕರು ಒಬ್ಬೊಬ್ಬರಂತೆ ತಮ್ಮ ತಮ್ಮ ಕ್ಷೇತ್ರಕ್ಕೆ ವಾಪಸ್ ಆಗುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಕ್ಷೇತ್ರಕ್ಕೆ ವಾಪಸ್ ಆಗಿದ್ದಾರೆ. ಶುಕ್ರವಾರ ಯಲ್ಲಾಪುರ ಕ್ಷೇತ್ರದ ವಿವಿಧ ಭಾಗದಲ್ಲಿ ಆಪ್ತ ವಲಯ ಹಾಗೂ ಕಾರ್ಯಕರ್ತರೊಂದಿಗೆ ತಮ್ಮ ಮುಂದಿನ ರಾಜಕೀಯ ನಿರ್ಧಾರ ಕುರಿತು ಸಭೆ ನಡೆಸಲಿದ್ದಾರೆ. ಜೊತೆಗೆ ತಮ್ಮ ನಿಲುವಿಗೆ ಬದ್ಧರಾಗಿರುವ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ಮಾಡಲಿದ್ದಾರೆ.

    ಶಿವರಾಮ್ ಹೆಬ್ಬಾರ್ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮುಂಬೈ ಹೋಟೆಲ್ ಹೋಗಿ ಸೇರಿದ್ದರು. ಸುಮಾರು ಮೂರು ವಾರಗಳ ಕಾಲ ಅತೃಪ್ತ ಶಾಸಕರು ತಮ್ಮ ಸ್ವ-ಕ್ಷೇತ್ರವನ್ನು ಮರೆತು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಈಗ ರಮೇಶ್ ಕುಮಾರ್ ಅವರು ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದಾರೆ.

    ಶಿವರಾಮ್ ಹೆಬ್ಬಾರ್ ಅವರು ಈಗಾಗಲೇ ಎರಡು ಬಾರಿ ಕ್ಷೇತ್ರಕ್ಕೆ ಬಂದು ವಾಪಸ್ ಹೋಗಿದ್ದರು. ಮಾಜಿ ಸ್ಪೀಕರ್ ಅತೃಪ್ತ ಶಾಸಕರನ್ನು ಅನರ್ಹ ಮಾಡಿದ ನಂತರ ಒಬ್ಬೊಬ್ಬರಂತೆ ಮುಂಬೈನಿಂದ ತಮ್ಮ ಕ್ಷೇತ್ರಕ್ಕೆ ವಾಪಸ್ ಬರುತ್ತಿದ್ದಾರೆ. ಮಂಗಳವಾರ ರಮೇಶ್ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಅವರು ಇಬ್ಬರು ಒಟ್ಟಿಗೆ ಆಗಮಿಸಿದ್ದರು.