– ಕಲಾವಿದರ ಸಂಘ ಸ್ಪಂದನೆ ಕೊಡುತ್ತಿಲ್ಲ; ಸಾರಾ ಗೋವಿಂದು ಬೇಸರ
ಬೆಂಗಳೂರು: ಕಮಲ್ ಹಾಸನ್ (Kamal Haasan) ಹೇಳಿಕೆ ನೋಡಿದರೆ ಕನ್ನಡಿಗರೆಲ್ಲಾ ತಮಿಳಿಗೆ ಹುಟ್ಟಿದ್ದಾರೆ ಎನ್ನುವ ರೀತಿಯಿದೆ ಎಂದು ಕನ್ನಡಪರ ಹೋರಾಟಗಾರ ಶಿವರಾಮೇಗೌಡ (Shivarame gowda) ಕಿಡಿಕಾರಿದ್ದಾರೆ.
ಫಿಲ್ಮ್ ಚೇಂಬರ್‌ಗೆ ಮುತ್ತಿಗೆ ಹಾಕಿ ಮಾತನಾಡಿದ ಅವರು, ಬೇಡಿಕೊಳ್ಳಬೇಡಿ. ಅವನ ಸಿನಿಮಾ ಪ್ರದರ್ಶನ ಮಾಡ್ಬೇಡಿ. ಕಮಲ್ ಹಾಸನ್ ಕ್ಷಮಾಪಣೆ ನಮಗೆ ಬೇಕಾಗಿಲ್ಲ. ಆದರೆ ನಾಯಕ, ನಟರು ಯಾಕೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಪ್ಯಾನ್ ಇಂಡಿಯಾ ನಟ ಎಂದು ಘೋಷಣೆ ಮಾಡಿಬಿಡಲಿ. ಕನ್ನಡ ನಾಡಿನಲ್ಲಿ ತಮಿಳು ಸಿನಿಮಾಗಳು ನೂರಕ್ಕಿಂತ ಹೆಚ್ಚು ದಿನ ಓಡುತ್ತವೆ. ಕನ್ನಡದಿಂದ ರಾಜಕುಮಾರ್, ರಾಜಕುಮಾರ್ ಅವರಿಂದ ಕನ್ನಡ ಅಲ್ಲ ಎಂದು ಅವರೇ ಹೇಳಿದ್ದಾರೆ. ಈ ವಿಚಾರವಾಗಿ ಮುಲಾಜೆ ಇಟ್ಟುಕೊಳ್ಳಬಾರದು. ಅವರ ಹತ್ತಿರ ಕ್ಷಮೆ ಕೇಳಿ ಎಂದು ಬೇಡಿಕೊಳ್ಳುವ ಅವಶ್ಯಕತೆ ಏನಿದೆ. ಅವರ ಚಿತ್ರ ಪದರ್ಶನ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ʻಥಗ್ ಲೈಫ್ʼ ಸಿನಿಮಾಗೆ ಬ್ಯಾನ್ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್
ಕ್ಷಮೆ ಕೇಳದಿದ್ರೆ ಸಿನಿಮಾ ಬ್ಯಾನ್:
ಇದೇ ವೇಳೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಕಮಲ್ ಹಾಸನ್ ಕಾನೂನು ಹೋರಾಟ ನಡೆಸಿದ್ದಾರೆ ಎನ್ನುವ ವಿಚಾರ ಇಲ್ಲಿಯವರೆಗೆ ನಮ್ಮ ಗಮನಕ್ಕೆ ಬಂದಿಲ್ಲ, ಬಂದ್ಮೇಲೆ ಪ್ರತಿಕ್ರಿಯೆ ನೀಡುತ್ತೇವೆ. ಇವತ್ತು ವಿತರಕರ ಜೊತೆ ಚರ್ಚೆ ಮಾಡಿದ್ದೀವಿ. ಪ್ರೊಡಕ್ಷನ್ ಹೌಸ್ ಅವರು ಸಂಪರ್ಕದಲ್ಲಿದ್ದಾರೆ. ಕಮಲ್ ಹಾಸನ್ ಊರಲ್ಲಿ ಇರಲಿಲ್ಲ. ದುಬೈನಲ್ಲಿ ಇದ್ದಾರೆ. ನಾಳೆ ಬರುತ್ತಾರೆ. ಬಂದ್ಮೇಲೆ ಚರ್ಚೆ ಮಾಡ್ತೀವಿ. ನಾಳೆ ಅವರು ಕ್ಷಮೆ ಕೇಳದಿದ್ದರೆ ಕನ್ನಡಪರ ಹೋರಾಟಗಾರರು ಹೋರಾಟ ಮುಂದುವರೆಸುತ್ತಾರೆ. ಕ್ಷಮೆಯಾಚನೆ ಮಾಡದಿದ್ರೆ ಸ್ವಯಂಘೋಷಿತವಾಗಿ ನಾವೇ ಸಿನಿಮಾ ಹಾಕುವುದಿಲ್ಲ ಎಂದು ಹೇಳುತ್ತೀವಿ. ಸರ್ಕಾರವೂ ಕೂಡಾ ನಮಗೆ ಸಪೋರ್ಟ್ ನೀಡುತ್ತಿದೆ ಎಂದು ಹೇಳಿದರು.
ಕಲಾವಿದರ ಸಂಘದ ವಿರುದ್ಧ ಅಸಮಾಧಾನ:
ಇದೇ ವೇಳೆ ಸಾರಾ ಗೋವಿಂದು ಮಾತನಾಡಿ, ಇಡೀ ಚಿತ್ರೋದ್ಯಮ ಕನ್ನಡಪರವಾಗಿ ನಿಂತಿದೆ. ವಾಣಿಜ್ಯ ಮಂಡಳಿ ಯಾವುದೇ ಕಾರಣಕ್ಕೆ ಹಿಂದೆ ಹೋಗುವುದಿಲ್ಲ. ಭಾಷಾ ಸಮಸ್ಯೆ, ರಾಜ್ಯದ ಸಮಸ್ಯೆ ಹಾಗಾಗಿ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ. ಹೆಜ್ಜೆ ಮುಂದೆ ಇಟ್ಟಿದ್ದೀವಿ ಹಿಂದಿಡುವ ಮಾತಿಲ್ಲ. ಆದರೆ ಕನ್ನಡ ಪರ ಹೋರಾಟಕ್ಕೆ ಕಲಾವಿದರ ಸಂಘ ಸ್ಪಂದನೆ ಕೊಡುತ್ತಿಲ್ಲ. ದೊಡ್ಡಣ್ಣಗೆ ಬೆಳಿಗ್ಗೆಯಿಂದ 5 ಬಾರಿ ಕರೆ ಮಾಡಿದ್ದೀನಿ. ಒಂದು ಬಾರಿಯೂ ಕರೆ ಸ್ವೀಕರಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ – ವಿಜಯೇಂದ್ರ ಸಿಡಿಮಿಡಿ
ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗದ ಸಮಗ್ರ ಕಾಯ್ದೆ ರೂಪಿಸಲು ಜುಲೈ 1ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದಾರೆ. ಈ ಪ್ರತಿಭಟನೆಗೆ ನಟಿ ಪೂಜಾ ಗಾಂಧಿ ಮತ್ತು ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಬೆಂಬಲಿಸಿದ್ದಾರೆ. ಇದನ್ನೂ ಓದಿ:ವಿಶ್ವಕಪ್ ಗೆದ್ದ ಭಾರತ- ಸಂಭ್ರಮಿಸಿದ ಸಿನಿತಾರೆಯರು
ಒಂದು ಭಾಷೆ ಉಳಿಯಬೇಕಾದರೆ ಎರಡು ಕಾರಣ ಇರುತ್ತದೆ. ಒಂದು ಭಾಷೆಯ ಮೇಲೆ ಪ್ರೀತಿ ಇರಬೇಕು. ಆ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. 2ನೇ ಕಾರಣ, ಕನ್ನಡ ಅನ್ನದ ಭಾಷೆಯಾಗಿರಬೇಕು ಎಂದು ‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸದಲ್ಲಿ ಶೇಕಡ 100ರಷ್ಟು ಮೀಸಲಾತಿ ಸಿಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆಧ್ಯತೆ ಸಿಗಬೇಕು. ಇದು ಕನ್ನಡ ಬೆಳವಣಿಗೆಗೆ ಮುಖ್ಯ ಕಾರಣವಾಗುತ್ತದೆ ಎಂದಿದ್ದಾರೆ.
ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಜುಲೈ 1ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಆಯೋಜನೆ ಆಗುತ್ತಿದೆ. ಈ ಹೋರಾಟಕ್ಕೆ ನಾನು ಇರುತ್ತೇನೆ. ನೀವು ಬನ್ನಿ ಎಂದು ಪೂಜಾ ಗಾಂಧಿ (Pooja Gandhi) ಬೆಂಬಲ ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸಿಗಬೇಕು. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಅಂತ ಬೃಹತ್ ಪ್ರತಿಭಟನೆ ಸತ್ಯಾಗ್ರಹವನ್ನು ಜುಲೈ 1ರಂದು ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದಾರೆ. ಒಬ್ಬ ಕನ್ನಡಿಗನಾಗಿ ಈ ಪ್ರತಿಭಟನೆಗೆ ನನ್ನ ಬೆಂಬಲವು ಇದೆ ಎಂದು ಲವ್ಲಿ ಸ್ಟಾರ್ ಪ್ರೇಮ್ ಕೂಡ ಮಾತನಾಡಿದ್ದಾರೆ.
ಬೆಂಗಳೂರು: ಕನ್ನಡ ನಾಮಫಲಕ (Kannada Nameplate) ಹೋರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (KaRaVe) ರಾಜ್ಯಾಧ್ಯಕ್ಷ ನಾರಾಯಣ ಗೌಡ (Narayana Gowda) ಮತ್ತೆ ಅರೆಸ್ಟ್ ಆಗಿದ್ದಾರೆ.
2017ರ ಸಾರ್ವಜನಿಕ ಆಸ್ತಿನಾಶ, ಅಧಿಕಾರಿಗಳಿಗೆ ಅಡ್ಡಿ ಪ್ರಕರಣದಲ್ಲಿ ಮತ್ತೆ ನಾರಾಯಣ ಗೌಡರನ್ನು ಬಂಧಿಸಲಾಗಿದೆ. ಪೊಲೀಸರು ನಾರಾಯಣಗೌಡರನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಕೋರ್ಟ್ ಆದೇಶದ ಮೇಲೆ ನಾರಾಯಣ ಗೌಡ ಇಂದೇ ಬಿಡುಗಡೆಯಾಗುತ್ತಾರೋ ಇಲ್ಲವೋ ಎನ್ನುವುದು ನಿರ್ಧಾರವಾಗಲಿದೆ.
ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣಗೌಡರಿಗೆ (Karave Narayana Gowda) ಮತ್ತೊಂದು ಸಂಕಷ್ಟ ಎದುರಾದಂತಿದೆ. ಕರವೇ ರಾಜ್ಯಾಧ್ಯಕ್ಷರನ್ನು ಮತ್ತೊಮ್ಮೆ ಬಂಧಿಸಲು ಬೆಂಗಳೂರು ಪೊಲೀಸರು ತಯಾರಿ ನಡೆಸಿದ್ದಾರೆ.
ಹಳೇ ಕೇಸ್‍ಗಳನ್ನು ಕೆದಕಿರೋ ಕುಮಾರಸ್ವಾಮಿ ಲೇಔಟ್ (Kumaraswamy Lay Out) ಮತ್ತು ಹಲಸೂರು ಗೇಟ್ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಹಲಸೂರು ಗೇಟ್‍ನಲ್ಲಿ 2017ರಲ್ಲಿ ದಾಖಲಾಗಿದ್ದ ಎನ್‍ಡಿಎಂಎ ಆಕ್ಟ್ ನಡಿ ದಾಖಲಾಗಿದ್ದ ಪ್ರಕರಣ ಹಾಗೂ ಕುಮಾರಸ್ವಾಮಿ ಲೇಔಟ್ ನಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಎನ್‍ಆರ್ ಡಬ್ಲೂ ಜಾರಿಯಾಗಿತ್ತು.
ಈ ಹಿನ್ನಲೆ ಈ ಎರಡು ಠಾಣೆಗಳಿಂದ ಕಸ್ಟಡಿ ಪಡೆಯಲು ಸಿದ್ಧತೆ ನಡೆದಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಾರಾಯಣಗೌಡ ವಿರುದ್ಧಧ ಹಳೇ ಕೇಸ್‍ಗಳನ್ನು ಪೊಲೀಸರು ಕೆದಕುತ್ತಿದ್ದಾರೆ. ಬೆಂಗಳೂರು ನಗರದ ಎಲ್ಲಾ ಠಾಣೆಗಳ ಕೇಸ್ ರೀ ಓಪನ್ ಮಾಡಿ ಕಸ್ಟಡಿಗೆ ಪಡೆಯಲು ಚಿಂತನೆ ನಡೆಸಿದ್ದಾರಂತೆ. ಇದನ್ನೂ ಓದಿ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ಜಾಮೀನು
ಅನ್ಯ ಭಾಷೆಯ ನಾಮಫಲಕಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ಮಾಡಿದ ಪ್ರಕರಣದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ ಅನೇಕರನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಜಾಮೀನು ಅರ್ಜಿ ವಿಚಾರಣೆ ಇಂದು (ಶನಿವಾರ) ದೇವನಹಳ್ಳಿಯ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯಾದಲ್ಲಿ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಬಿರಾದರ್ ದೇವೆಂದ್ರಪ್ಪ ಅವರು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.
ಬೆಂಗಳೂರು: ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (KaRaVe) 15 ಕಾರ್ಯಕರ್ತರು ಬಿಡುಗಡೆಯಾಗಿದ್ದಾರೆ.
ಬುಧವಾರ ಲ್ಯಾವೆಲ್ಲೆ ರಸ್ತೆಯಲ್ಲಿ ಇಂಗ್ಲಿಷ್ ಬೋರ್ಡ್ (English Board) ಒಡೆದು ಹಾಕಿದ ಹಿನ್ನೆಲೆ ಕಬ್ಬನ್ ಪಾರ್ಕ್ ಪೊಲೀಸರು ಅರೆಸ್ಟ್ ಮಾಡಿದ್ದರು. ಬುಧವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ 15 ಮಂದಿಗೆ ಎಂಟನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಹೊಸ ವರ್ಷಕ್ಕೂ ಮುನ್ನವೇ ಪೆಟ್ರೋಲ್, ಡೀಸೆಲ್ ದರದಲ್ಲಿ 10 ರೂ. ಇಳಿಕೆ?
ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪರಪ್ಪನ ಅಗ್ರಹಾರದಿಂದ ಕರವೇ ಕಾರ್ಯಕರ್ತರು ಬಿಡುಗಡೆಯಾಗಿದ್ದಾರೆ. ಕರವೇ ಕಾರ್ಯಕರ್ತರು ಜೈಲಿನಿಂದ ಬಿಡುಗಡೆಯಾಗುವ ಮೊದಲು ಜೈಲು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಪ್ಪನ ಅಗ್ರಹಾರ ಪೊಲೀಸರು ಭದ್ರತೆ ಕೈಗೊಂಡಿದ್ದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾರ್ಯಕರ್ತರು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದವರು ಬೇರೆಯವರಾಗಿದ್ದಾರೆ. ಅಮಾಯಕರನ್ನು ಬಂಧಿಸಿ ಬಂಧಿಸಿ ಕಳುಹಿಸಿದ್ದಾರೆ. ಮುಂದಿನ ತಿಂಗಳ 22 ರವರೆಗೆ ಸರ್ಕಾರಕ್ಕೆ ಗಡುವನ್ನು ನೀಡಿದ್ದು, ಈ ಡೆಡ್‌ಲೈನ್ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಅಂಗಡಿ, ಮಾಲ್‌ಗಳ ನಾಮಫಲಕಗಳು ಕನ್ನಡ ಭಾಷೆಯಲ್ಲೇ (Kannada Language) ಇರಲು ಸರ್ಕಾರ ಸುಗ್ರೀವಾಜ್ಞೆ (Ordinance) ಹೊರಡಿಸಲು ಮುಂದಾಗಿದೆ.
ಅಂಗಡಿ ಮುಗ್ಗಟ್ಟುಗಳ ಮುಂಭಾಗದಲ್ಲಿ ಕನ್ನಡ ನಾಮಫಲಕ ಅಳವಡಿಸುವ ಸಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಪರಮೇಶ್ವರ್, ಬಿಬಿಎಂಪಿ, ಗೃಹ ಇಲಾಖೆ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಧಿವೇಶನ ಇಲ್ಲದೆ ಇರುವುದರಿಂದ ಸುಗ್ರಿವಾಜ್ಞೆ ಹೊರಡಿಸುತ್ತಿದ್ದೇವೆ. ಫೆಬ್ರವರಿ 28ರ ಒಳಗೆ 60% ಕನ್ನಡ ಫಲಕ ಇರಬೇಕು. ಇದಲ್ಲದೆ ಸಾರ್ವಜನಿಕರಿಗೆ ನೀಡುವ ಮಾಹಿತಿ ಮತ್ತು ಜಾಹಿರಾತುಗಳನ್ನು ಕನ್ನಡದಲ್ಲಿ ಇರಬೇಕು. ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಸರ್ಕಾರ ನಿಗದಿ ಮಾಡಲಿದೆ. ಕನ್ನಡ ಆಡಳಿತ ಭಾಷೆ. ಇದರಲ್ಲಿ ನಾವು ಯಾವುದೇ ರಾಜಿ ಮಾಡುವುದಿಲ್ಲ ಎಂದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಮಾಡಲು ಇಲಾಖೆ ವತಿಯಿಂದ ವಿಶೇಷ ಶಿಬಿರ: ಪ್ರಿಯಾಂಕ್ ಖರ್ಗೆ
ಬಿಜೆಪಿ ಅವಧಿಯಲ್ಲಿ 2022 ರಲ್ಲಿ ಪಾಸ್ ಆಗಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಸೆಕ್ಷನ್ 17(6) ರಲ್ಲಿ ನಾಮಫಲಕಗಳು ಅರ್ಧದಷ್ಟು ಕನ್ನಡ ಭಾಷೆ ಕೆಳಭಾಗದ ಅರ್ಧ ಬೇರೆ ಭಾಷೆಯಲ್ಲಿ ಇರಬೇಕು ಅಂತ ಎರಡು ಸದನದಲ್ಲಿ ಕಾಯ್ದೆ ಪಾಸ್ ಆಗಿ ರಾಜ್ಯಪಾಲರ ಅಂಕಿತ ಕೂಡಾ ಆಗಿತ್ತು. ಆದರೆ ಅರ್ಧ ಭಾಗ ಮಾತ್ರ ಕನ್ನಡ ಇರಬೇಕು ಎಂಬ ನಿಯಮದ ಬದಲಾಗಿ,ಸಿದ್ದರಾಮಯ್ಯ ಸರ್ಕಾರ 2018 ರಲ್ಲಿ ಹೊರಡಿಸಿದ್ದ ಸುತ್ತೋಲೆ ಅನ್ವಯ 60%ಕನ್ನಡ ನಾಮ ಫಲಕ, 40% ಇತರೇ ಭಾಷೆ ಬಳಕೆ ನಿಯಮವನ್ನೇ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ಸಂಬಂಧ ತಿದ್ದುಪಡಿ ನಿಯಮಕ್ಕೆ ಸುಗ್ರಿವಾಜ್ಞೆ ಹೊರಡಿಸಲು ಸಿಎಂ ಸೂಚನೆ ನೀಡಿದ್ದಾರೆ.
ಎರಡು ಸದನದಲ್ಲಿ ಮಸೂದೆ ಪಾಸ್ ಆಗಿ ರಾಜ್ಯಪಾಲರ ಸಹಿ ಹಾಕಿದ್ದಾರೆ. ಆದರೆ ಇನ್ನೂ ನಿಯಮ ಮಾಡಿಲ್ಲ. ಹೀಗಾಗಿ ಕೂಡಲೇ ರೂಲ್ಸ್ ಫ್ರೇಮ್ ಮಾಡಲು ಸೂಚನೆ ನೀಡಿದ್ದೇನೆ. ನಿಯಮ ಸೇರಿಸಿದ ನಂತರ ಒಂದೆರಡು ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸುಗ್ರಿವಾಜ್ಞೆ ಜಾರಿ ಆಗಲಿದ್ದು, 60% ಕಡ್ಡಾಯ ನಾಮ ಫಲಕ ನಿಯಮ ಅಧಿಕೃತವಾಗಿ ಜಾರಿ ಆಗಲಿದೆ. ಇದೇ ಅಲ್ಲದೆ ಸಾರ್ವಜನಿಕರ ಮಾಹಿತಿಗೆ ನೀಡುವ ಜಾಹಿರಾತು ಮತ್ತು ಸೂಚನಾ ಫಲಕಗಳು ಕೂಡಾ ಕನ್ನಡದಲ್ಲಿ ಇರಬೇಕು ಎಂಬ ನಿಯಮ 2022ರ ಕಾಯ್ದೆಯಲ್ಲಿ ಇದೆ. ಎಷ್ಟು ಪ್ರಮಾಣದಲ್ಲಿ ಕನ್ನಡದಲ್ಲಿ ಮಾಹಿತಿ ಇರಬೇಕು ಅಂತ ಸರ್ಕಾರ ನಿರ್ಧಾರ ಮಾಡಲಿದೆ ಅಂತ ಸಿದ್ದರಾಮಯ್ಯ ತಿಳಿಸಿದರು.
ಕರವೇ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತಿಭಟನೆ ಮಾಡಲು ಅವಕಾಶ ಇದೆ. ಆದರೆ ಯಾರು ಕಾನೂನು ಕೈಗೆ ಎತ್ತಿಕೊಳ್ಳಬಾರದು. ಯಾರೇ ಕಾನೂನು ಕೈಗೆ ಎತ್ತುಕೊಂಡರೆ ಸರ್ಕಾರ ಸಹಿಸುವುದಿಲ್ಲ. ನಮ್ಮ ಸರ್ಕಾರ ಕನ್ನಡದ ಪರ ಇದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಇದರಲ್ಲಿ ಯಾವುದೇ ರಾಜೀ ಇಲ್ಲ ಅಂತ ಸ್ಪಷ್ಟನೆ ನೀಡಿದರು.
ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವುದರಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಮಾಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿದೆ. ರಾಜ್ಯ ಸರ್ಕಾರ ಇದರ ಪಾಲನೆಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಸೂಚನೆ ನೀಡಿದೆ. ಕೋರ್ಟ್ ಆದೇಶ ಇದ್ದರೂ ಸಾರ್ವಜನಿಕ ಹಿತ, ರಾಜ್ಯದ ಹಿತಕ್ಕೆ ಪ್ರತಿಭಟನೆ ಮಾಡಿದರೆ ವಿರೋಧ ಮಾಡುವುದಿಲ್ಲ. ಶಾಂತಿಯುತ ಪ್ರತಿಭಟನೆ ಮಾಡಬೇಕು. ಆದರೆ ಕಾನೂನು ಕೈಗೆ ಎತ್ತುಕೊಂಡರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಬೆಂಗಳೂರು: ಕನ್ನಡ ನಾಮಫಲಕ (Kannada Board) ಹಾಕದ ಅಂಗಡಿ ಮುಂಗಟ್ಟುಗಳ ಮುಂದೆ ಇಂಗ್ಲಿಷ್ ಬೋರ್ಡ್ (English Board) ಹರಿದು, ಕಲ್ಲು ತೂರಾಟ ನಡೆಸಿದ್ದ ಕರವೇ, ಆಕ್ರೋಶ ಹೊರಹಾಕಿತ್ತು. ಇದೀಗ ಕಾನೂನು ಉಲ್ಲಂಘನೆ ಆರೋಪದ ಮೇಲೆ ಕರವೇ ಕಾರ್ಯಕರ್ತರ ಮೇಲೆ ಎಫ್‍ಐಆರ್ ದಾಖಲಾಗಿದೆ.
ಕನ್ನಡ ಬಳಸಿ ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ, ಅಂಗಡಿ ಮುಂಗಟ್ಟುಗಳ ಬೋರ್ಡ್ ಕನ್ನಡದಲ್ಲಿರಬೇಕು. ಕನ್ನಡ ಭಾಷೆ (Kannada Language) ಬಳಕೆಗಾಗಿ ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಸ್ತೆಗೆ ಇಳಿದಿದ್ರು. ಬೆಂಗಳೂರಿನಲ್ಲಿ ಇರುವ ಇಂಗ್ಲಿಷ್ ನಾಮಫಲಕ ಹರಿದು ಆಕ್ರೋಶ ಹೊರಹಾಕಿದ್ರು. ಈ ಮಧ್ಯೆ ಉದ್ರಿಕ್ತಗೊಂಡ ಕಾರ್ಯಕರ್ತರು ಇಂಗ್ಲೀಷ್ ಬೋರ್ಡ್‍ಗಳ ಮೇಲೆ ಹಲವೆಡೆ ಕಲ್ಲು ತೂರಾಟ ಕೂಡ ಮಾಡಿದ್ರು. ಕರವೇ ಪ್ರತಿಭಟನೆ ಹತ್ತಿಕ್ಕಲು ಮಧ್ಯಾಹ್ನದಿಂದ ವಶಕ್ಕೆ ಪಡೆದ ಕಾರ್ಯಕರ್ತರನ್ನ ಸಂಜೆ ಆಗ್ತಿದ್ದಂತೆ ಬಿಡುಗಡೆ ಮಾಡಲಾಯ್ತು. ಅವರ ಜೊತೆಗೆ 250 ಕಾರ್ಯಕರ್ತರನ್ನ ಸಹ ಪೊಲೀಸ್ ವಾಹನ ತರಬೇತಿ ಶಾಲೆಯಲ್ಲೇ ಇರಿಸಲಾಗಿತ್ತು. ಹೀಗಾಗಿ ತಡ ಆಗಿದ್ರಿಂದ ದೂರದೂರುಗಳಿಗೆ ತೆರಳುವ ಕಾರ್ಯಕರ್ತರಿಗೆ ಕಷ್ಟ ಆಗತ್ತೆ ಅಂತಾ ಪೊಲೀಸ್ ವಾಹನ ಚಾಲನಾ ಕೇಂದ್ರದಲ್ಲಿಯೇ ರಾತ್ರಿ ಉಳಿದುಕೊಳ್ಳುವ ನಿರ್ಧಾರ ಮಾಡಿದರು.
ಲ್ಯಾವೆಲ್ಲೆ ರಸ್ತೆಯಲ್ಲಿ ಇಂಗ್ಲಿಷ್ ನಾಮಫಲಕ ಹರಿದಿದ್ದಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 15 ಜನ ಕರವೇ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಇನ್ನುಳಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಂಪೈರ್ ಹೋಟೆಲ್‍ಗೆ ಕಲ್ಲು ತೂರಾಟ ನಡೆಸಿದಕ್ಕೆ ಎಫ್‍ಐಆರ್ ದಾಖಲಾದ್ರೆ, ಅಶೋಕನಗರದಲ್ಲಿ ಲ್ಯಾವೆಲೆ ರಸ್ತೆ ಇಂಗ್ಲಿಷ್ ಬೋರ್ಡ್ ಧ್ವಂಸ ಮಾಡಿದಕ್ಕಾಗಿ ದೂರು ದಾಖಲಾಗಿದೆ. ಕಾಟನ್ ಪೇಟೆಯಲ್ಲಿ ಒಂದು ಎಫ್‍ಐಆರ್ ಆದ್ರೆ, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಬಸ್ ಗಾಜು ಒಡೆದಿದ್ದಕ್ಕೆ ಸೇರಿದಂತೆ, ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಉಗುಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮತ್ತು ರಸ್ತೆತಡೆ ನಡೆಸಿ ಗಲಾಟೆ ಮಾಡಿ ಅಡಚಣೆ ಮಾಡಿದ್ದಕ್ಕೆ ಮೂರು ಪ್ರತ್ಯೇಕ ಎಫ್‍ಐಆರ್ ದಾಖಲಿಸಲಾಗಿದೆ.
ಇನ್ಸ್ ಪೆಕ್ಟರ್ ಗಿರೀಶ್ ವಿರುದ್ಧ ಕರವೇ ಕಿಡಿ: ಪ್ರತಿಭಟನಾ ನಿರತ ಕರವೇ ಕಾರ್ಯಕರ್ತರ ಮೇಲೆ ಕಬ್ಬನ್ ಪಾರ್ಕ್ ಠಾಣೆ ಇನ್ಸ್ ಪೆಕ್ಟರ್ ಗಿರೀಶ್ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಲಾಠಿ ಚಾರ್ಜ್‍ನಲ್ಲಿ ಓರ್ವನ ಕೈ ಮೂಳೆ ಮುರಿದಿದ್ರೆ, ಮತ್ತೋರ್ವನ ಕಾಲಿಗೆ ಇನ್ಸ್ ಪೆಕ್ಟರ್ ಹೊಡೆದು ಗಾಯ ಮಾಡಿದ್ದಾರಂತೆ. ಅಲ್ಲದೇ 15 ಜನ ಅಮಾಯಕರ ವಿರುದ್ಧ ಎಫ್‍ಐಆರ್ ಮಾಡಿ ಬಂಧಿಸಿದ್ದಾರೆಂದು ಆರೋಪಿಸಿ ಠಾಣೆ ಎದುರು ಅರೆಬೆತ್ತಲೆಯಾಗಿಯೇ ಪ್ರತಿಭಟಿಸಿದ್ರು.
ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರ ಹೋರಾಟದ ಕಿಚ್ಚು ಜೋರಾಗಿದೆ. ಬುಧವಾರ ರಾತ್ರೋರಾತ್ರಿ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಬಂಧಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇಂದು ನಸುಕಿನ ಜಾವ ಕರವೇ (Karve) ಅಧ್ಯಕ್ಷ ನಾರಾಯಣಗೌಡ (Narayan Gowda) ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಬಳಿಕ ನಾರಾಯಣಗೌಡರು ಸೇರಿದಂತೆ 29 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಇತ್ತ ಕರವೇ ಅಧ್ಯಕ್ಷ ನಾರಾಯಣಗೌಡ ಬಂಧನ ಹಿನ್ನೆಲೆಯಲ್ಲಿ ಸಿಎಂ ಮನೆ ಮುಂದೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಅಲರ್ಟ್ ಆದ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಸಿಎಂ ಮನೆ, ಗೃಹ ಕಚೇರಿ ಮುಂದೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸದ ಬಳಿ ಹೆಚ್ಚು ಬ್ಯಾರಿಕೇಡ್ ಹಾಕಲಾಗಿದೆ. ಇಂದು 10 ಗಂಟೆ ನಂತರ ನಗರದ ಹಲವೆಡೆ ಕರವೇ ಪ್ರತಿಭಟನೆ ಸಾಧ್ಯತೆ ಇದೆ. ಇತ್ತ ಮುತ್ತಿಗೆಗೆ ಮುಂದಾದವರ ವಶಕ್ಕೆ ಪಡೆಯಲು ಬಿಎಂಟಿಸಿ (BMTC) ಬಸ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಇಂಗ್ಲಿಷ್ ಬೋರ್ಡ್‍ಗಳು ಉಡೀಸ್- ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಒತ್ತಾಯ
ಏನಿದು ಘಟನೆ..?: ಬುಧವಾರ ಇಂಗ್ಲಿಷ್ ನಾಮಫಲಕಗಳ (Englih Board) ವಿರುದ್ಧ ಹೋರಾಟ ಮಾಡಿದ ಕರವೇ ನಾರಾಯಣಗೌರನ್ನ ಅರೆಸ್ಟ್ ಮಾಡಿ ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ಡಿಸಿಪಿ ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ನಾರಾಯಣಗೌಡ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ನಾರಾಯಣಗೌಡರನ್ನ ಅರೆಸ್ಟ್ ಮಾಡೋ ಮೊದಲು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣಗೌಡರನ್ನ ಅರೆಸ್ಟ್ ಮಾಡಿದ್ರೆ ನಾವು ಸುಮ್ಮನೆ ಇರಲ್ಲ. ಅರೆಸ್ಟ್ ಮಾಡಿದ್ರೆ ಪರಿಸ್ಥಿತಿ ಬೇರೆ ತರ ಇರುತ್ತೆ. ನಾಡಲ್ಲಿ ಬೆಂಕಿ ಹತ್ಕೊಂಡು ಉರಿಯುತ್ತೆ ಎಂದಿದ್ದರು.
ಜೈಲಿಗೆ ಹಾಕಿದ್ರೆ ನಾವು ಸುಮ್ಮನಿರಲ್ಲ. ಒಬ್ಬ ಸಚಿವನೂ ಬಂದು ನಮ್ಮ ಕೂಗನ್ನು ಕೇಳಲಿಲ್ಲ. ಸಚಿವರು ಅಯೋಗ್ಯರು. ಸಚಿವರ ಮನೆಮುಂದೆ ಧಿಕ್ಕಾರ ಕೂಗಿ ಪ್ರಾಣತ್ಯಾಗ ಮಾಡ್ತೇವೆ ಎಂದು ಕಿಡಿಕಾರಿದರು. ಇದೇ ವೇಳೆ ಬಿಎಂಟಿಸಿ ಬಸ್‍ನಲ್ಲಿ ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗುವಾಗ ಕರವೇ ಕಾರ್ಯಕರ್ತರು ಬಸ್‍ನ ತಡೆದು ಗಾಜನ್ನು ಪುಡಿ ಪುಡಿ ಮಾಡಿದರು. ಇದೇ ವೇಳೆ ನಾರಾಯಣಗೌಡ ಅವರು ಇಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟಿದ್ದು, ಇಂದು ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಸಿಎಂ ಹಾಗೂ ಸಚಿವರ ಮನೆ ಮುಂದೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆಗಳಿವೆ.
ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಪೊಲೀಸರ ದೌರ್ಜನ್ಯದ ವಿರುದ್ಧ ನಾರಾಯಣಗೌಡ ಕಿಡಿಕಾರಿದ್ರು. ಮೊಬೈಲ್ ಕಿತ್ತುಕೊಂಡಿದ್ದಲ್ಲದೇ ಊಟ ಕೊಟ್ಟಿಲ್ಲ. ಸಿಎಂ ಸಾಹೇಬ್ರೇ ನಿಮಗೆ ನಾವು ಉತ್ತರ ಕೊಡ್ತೇವೆ. ಬುಧವಾರ ಬೆಳಗ್ಗೆ ಹೋರಾಟಕ್ಕೆ ಬಂದ ನಾವು ಯಾರೂ ಊಟ ಮಾಡಿಲ್ಲ. ನನಗೆ ಆರೋಗ್ಯ ಸರಿಯಿಲ್ಲ. ಮೆಡಿಸಿನ್ ತೆಗೆದುಕೊಳ್ಳಬೇಕು. ಇಂದು ಗುಂಡಿಟ್ಟು ಕೊಂದ್ರೂ ಹೋರಾಟ ಮಾಡೇ ಮಾಡ್ತೇವೆ ಎಂದು ಸರ್ಕಾರದ ವಿರುದ್ಧ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ 60% ಕನ್ನಡಕ್ಕೆ (Kannada Board) ಸರ್ಕಾರದ ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಿರುವವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (Karnataka Rakshana Vedike) ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರಾಣವನ್ನೂ ಲೆಕ್ಕಿಸದೇ ಬೃಹತ್ ಜಾಹೀರಾತು ಫಲಕ ಏರಿ ಇಂಗ್ಲಿಷ್‍ನಲ್ಲಿದ್ದ ಬೋರ್ಡ್ ಅನ್ನು ಹರಿದು ಹಾಕಿದ್ದಾರೆ.
ಕರವೇ ನಾರಾಯಣಗೌಡ (Karave Narayana Gowda) ಬಣದ ಕಾರ್ಯಕರ್ತರು ನಾಮಫಲಕ ಮಹಾ ಅಭಿಯಾನ ಆರಂಭಿಸಿದ್ದು, ರಾಜ್ಯದ ವಿವಿಧ ಭಾಗಗಳ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಅಂಗಡಿ ಹಾಗೂ ಮಾಲ್‍ಗಳ ನಾಮಫಲಕಗಳಲ್ಲಿ 60% ಆದ್ಯತೆ ಕೊಡಬೇಕು. ಇಂಗ್ಲಿಷ್ ಹಾಗೂ ಹಿಂದಿ ನಾಮಫಲಕಗಳನ್ನು ತೆರವು ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಆರೋಪ- ಐವರ ವಿರುದ್ಧ ದೂರು
ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಮಾಲ್ ಒಂದರ ಮುಂಭಾಗದ ಫ್ಲೈಓವರ್ ಮೇಲೆ ನಿಂತು ಮಾಲ್ ಕಡೆಗೆ ಚಪ್ಪಲಿ ತೂರಿದ್ದಾರೆ. ಮಾಲ್‍ಗಳಿಗೆ ರಕ್ಷಣೆ ಒದಗಿಸಲಾಗಿದ್ದು, 100ಕ್ಕೂ ಹೆಚ್ಚು ಪೊಲೀಸರು ಮಾಲ್ ಬಳಿ ಸುತ್ತುವರಿದಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರು ಕನ್ನಡ ಇಲ್ಲದ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ಅಲ್ಲದೇ ನಾಮಫಲಕಗಳನ್ನು ಒಡೆದು ಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿನೂ ತೋರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಲಕ್ಷ್ಮಿಪ್ರಸಾದ್, ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ 500 ಪೊಲೀಸರನ್ನು ನಿಯೋಜಿಸಲಾಗಿದೆ. 10 ಬಿಎಂಟಿಸಿ ಬಸ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದ ಆದೇಶ ಇರುವುದರಿಂದ ರ‍್ಯಾಲಿಗೆ ಅವಕಾಶ ಕೊಡುವುದಿಲ್ಲ. ಇದನ್ನೂ ಮೀರಿ ರ್ಯಾಲಿಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್ ಕೊಟ್ಟ ವೈದ್ಯ- ಮುಂದೇನಾಯ್ತು?
ನವದೆಹಲಿ: ಕಾವೇರಿ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಮಧ್ಯಪ್ರವೇಶ ಮಾಡಿ, ಮಳೆ ಕೊರತೆ ವರ್ಷದಲ್ಲಿ ನೀರು ಹಂಚಿಕೆಗೆ ಸಂಕಷ್ಟ ಸೂತ್ರ ರಚಿಸಬೇಕು. ಕಾವೇರಿ ಕಣಿವೆಯ 4 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (KARAVE) ಪ್ರತಿಭಟನೆ ನಡೆಸಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯದ ವಿವಿಧ ಭಾಗದಿಂದ ಸೇರಿದ ನೂರಾರು ಕಾರ್ಯಕರ್ತರು ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು.
ಪ್ರತಿಭಟನೆಗೂ ಮುನ್ನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸಭೆ ನಡೆಸಿದ ನಾರಾಯಣಗೌಡ ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಗ್ಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಾ ಭಾಗಿಯಾಗಿದ್ದರು. ಕರ್ನಾಟಕ ತಮಿಳುನಾಡು ಒಟ್ಟಾಗಿ ಬಂದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಭರವಸೆ ನೀಡಿದರು.
ಬಳಿಕ ಜಂತರ್ ಮಂತರ್‌ಗೆ ತೆರಳಿದ ನಾರಾಯಣಗೌಡ ಕಾರ್ಯಕರ್ತರೊಂದಿಗೆ ಕುಳಿತು ಸಭೆ ನಡೆಸಿದರು. ಕರ್ನಾಟಕದ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿಸಬೇಕು. ಭವಿಷ್ಯದ ದೃಷ್ಠಿಯಿಂದ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಮತ್ತು ಸಂಕಷ್ಟ ಸೂತ್ರ ರಚಿಸುವ ಮೂಲಕ ನೀರು ಹಂಚಿಕೆ ಸುಗಮಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇಂದು ಕಾವೇರಿಗಾಗಿ ಕರ್ನಾಟಕದಿಂದ ದೆಹಲಿಗೆ ಬಂದಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಯಿಂದ ನಮ್ಮ ಕಾರ್ಯಕರ್ತರು ಬಂದಿದ್ದಾರೆ. ನಾನು ಇವತ್ತಿನ ನೀರಿನ ಪರಿಸ್ಥಿತಿ, ಕಾವೇರಿ ಪರಿಸ್ಥಿತಿ ಮಾತಾಡೋಕೆ ಬಂದಿಲ್ಲ, ನಾನು ಪ್ರಧಾನ ಮಂತ್ರಿಗಳಿಗೆ, ಪ್ರಹ್ಲಾದ್ ಜೋಶಿ ಅವರಿಗೆ ಹಾಗೂ ನಮ್ಮ ನೀರಾವರಿ ಸಚಿವರ ಬಳಿ ಮಾತನಾಡಲು ಬಂದಿದ್ದೇನೆ ಎಂದು ತಿಳಿಸಿದರು.
ನಮಗೆ ಸಂಕಷ್ಟ ಸೂತ್ರ ಬೇಕು ಅನ್ನೋದರ ಬಗ್ಗೆ ಮಾತಾಡಲು ಬಂದಿದ್ದೇನೆ. ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಡುತ್ತೇವೆ. ಕರ್ನಾಟಕ-ತಮಿಳುನಾಡು ಅಣ್ಣ-ತಮ್ಮ ತರ ಬದುಕ್ತಾ ಇದೆ. ನಾವು ನೀರು ಕೊಡ್ತೇವೆ. ಆದರೆ ನಮ್ಮ ಬಳಿ ನೀರು ಇಲ್ಲ ಅಂದಾಗ ಏನು ಮಾಡಬೇಕು? ಮಾನ್ಯ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿ, 4 ರಾಜ್ಯದ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಬೇಕು ಎಂದರು.
ಹಿಂದೆ ಇಂತಹ ಸಂಕಷ್ಟ ಬಂದಾಗ ಇಂದಿರಾ ಗಾಂಧಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿದರು. 2003ರಲ್ಲಿ ಅನಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ವಾಜಪೇಯಿ ಅವರನ್ನು ನಾನು ಭೇಟಿ ಮಾಡಿದ್ದೆ. ಅವರು ಆವತ್ತು ಸಂಕಷ್ಟ ಸೂತ್ರಕ್ಕೆ ಒತ್ತಡ ಹಾಕಿದ್ದರು. ಇದಕ್ಕೆ ಒಂದು ಶಾಶ್ವತ ಪರಿಹಾರ ಹುಡುಕುವಂತಹ ಕೆಲಸವನ್ನು ಮಾನ್ಯ ಮೋದಿಯವರು ಮಾಡಲಿ. ಪ್ರಪಂಚದ ಅನೇಕ ರಾಷ್ಟ್ರಗಳನ್ನು ಒಗ್ಗೂಡಿಸುವ ಕೆಲಸ ಮಾಡುವ ಮೋದಿಯವರು ನಮ್ಮ ದೇಶದ ಒಳಗೆ ಇರುವ ಕರ್ನಾಟಕ-ತಮಿಳುನಾಡು ಮುಖ್ಯಮಂತ್ರಿಗಳನ್ನು ಕರೆದು ಶಾಶ್ವತ ಪರಿಹಾರ ನೀಡಬೇಕು ಎಂದು ಹೇಳಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದರೆ ಸುಮಾರು 60 ಟಿಎಂಸಿ ಬೆಂಗಳೂರು ಜನರಿಗೆ ಕುಡಿಯುವ ನೀರಿಗೆ ಬಳಸಿಕೊಳ್ಳಬಹುದು. ತಮಿಳುನಾಡಿಗೆ ನೀರು ಕೊಡಲು ಸಹ ಅನುಕೂಲ ಆಗುತ್ತದೆ. ಎರಡೂ ರಾಜ್ಯ ಒಂದಾಗಿ ಬರುವುದಾದರೆ ಮೇಕೆದಾಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖವತ್ ಸಹ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಡಿಕೆಶಿ ಲ್ಯಾಂಡ್ – ಸ್ವಾಗತಕ್ಕೆ ಬಾರದ ಶಾಸಕರು, ಸಚಿವರು
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ, ನಿಮ್ಮ ಇಂಡಿಯಾ ಒಕ್ಕೂಟದಲ್ಲಿರುವ ಸ್ಟಾಲಿನ್ ಜೊತೆಗೆ ಮಾತನಾಡಿದರೆ ಕಾವೇರಿ ವಿಚಾರವಾಗಿ ಶಾಶ್ವತ ಪರಿಹಾರ ಸಿಗಲಿದೆ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿಸುತ್ತೇನೆ ಅಂತ ಜೋಶಿ ಅವರು ಹೇಳಿದ್ದಾರೆ. ಹೀಗಾಗಿ ನಾನು ಇವತ್ತು ದೆಹಲಿಯಲ್ಲೇ ಉಳಿಯುತ್ತೇನೆ. ನಾಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾವೇರಿ ಜಲಸಂಕಷ್ಟ ಪರಿಹರಿಸುವಂತೆ ಕರವೇ ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟಗಾರರು ದೆಹಲಿಗೆ ಬಂದಿದ್ದಾರೆ. ಜಲಶಕ್ತಿ ಮಂತ್ರಿಗಳನ್ನು ಭೇಟಿಯಾಗಬೇಕು ಎಂದರು. ಆ ವ್ಯವಸ್ಥೆಯನ್ನು ನಮ್ಮ ನಿವಾಸದಲ್ಲಿ ಮಾಡಿದ್ದೇನೆ. ಸಂಕಷ್ಟ ಸೂತ್ರ ಹಾಗೂ ಮೇಕೆದಾಟು ವಿಚಾರ ಅವರು ಪ್ರಸ್ತಾಪಿಸಿದ್ದಾರೆ. ಸಂಕಷ್ಟ ಸೂತ್ರ ಕುರಿತು ಅಗತ್ಯ ಮಾಹಿತಿ ತೀರ ಇತ್ತೀಚೆಗಷ್ಟೆ ಕರ್ನಾಟಕ ಸರ್ಕಾರ ಮಾಹಿತಿ ಒದಗಿಸಿದೆ. ಈ ಮಾಹಿತಿ ಜಲಶಕ್ತಿ ಸಚಿವರು ನಮ್ಮ ಜೊತೆ ಈಗ ಹಂಚಿಕೊಂಡಿದ್ದಾರೆ. ಮೊದಲು ಸೌಹಾರ್ದ ಮಾತುಕತೆ ತಮಿಳುನಾಡು ಮತ್ತು ಕರ್ನಾಟಕ ಆರಂಭ ಮಾಡಬೇಕು. ಡಿಎಂಕೆ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಉತ್ತಮ ಸಂಬಂಧ ಇದೆ. ಅವರು ಮಾತುಕತೆ ಶುರು ಮಾಡಲಿ. ಈ ಹಿಂದೆ ಗಡ್ಕರಿಯವರು ಇದ್ದಾಗ ಒಮ್ಮೆ ವೇದಿಕೆ ಸೃಷ್ಟಿ ಮಾಡಲಾಗಿತ್ತು. ಆದರೆ ಅದು ಹಲವು ಕಾರಣಗಳಿಗೆ ಮುಂದುವರಿಯಲಿಲ್ಲ. ಈಗ ಆ ಪ್ರಯತ್ನ ಮತ್ತೆ ಮಾಡಬೇಕು ಎಂದರು. ಇದನ್ನೂ ಓದಿ: ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ: ದಿನೇಶ್ ಗುಂಡೂರಾವ್